ಅಂತರಂಗ
ಧರ್ಮ ಮರ್ಮ – 07 : ಕ್ರಿಸ್ತನೆಂಬ ಮೀನು ಬಸವಣ್ಣನೆಂಬ ಎತ್ತು
- ಯೋಗೇಶ್ ಮಾಸ್ಟರ್
ಇಕ್ತ್ಯುಸ್ ಎಂದರೆ ಪ್ರಾಚೀನ ಗ್ರೀಕ್ ಪದ. ಅದರ ಅರ್ಥ ಮೀನು. ಎರಡು ವಕ್ರರೇಖೆಗಳ ತುಂಡುಗಳು ಒಂದನ್ನೊಂದು ಹಾದು (ಇಂಗ್ಲೀಷಿನ ಎಕ್ಸ್ ಅಕ್ಷರದಂತೆ) ಎರಡರ ತುದಿಗಳು ಮಾತ್ರ ಒಂದು ಬಿಂದುವಲ್ಲಿ ಸೇರಿದರೆ ಅದು ಮೀನಿನ ಆಕೃತಿಯಲ್ಲಿ ಕಾಣುತ್ತದೆ. ಇದು ಹಿಂದೊಮ್ಮೆ ಕ್ರೈಸ್ತರ ರಹಸ್ಯ ಚಿಹ್ನೆಯಾಗಿತ್ತು.
ಕ್ರಿಸ್ತನ ಜೀವನದಲ್ಲಿ ಮತ್ತು ಬೋಧನೆಗಳಲ್ಲಿ ಮೀನು ಲೌಕಿಕವಾಗಿ, ತಾತ್ವಿಕವಾಗಿ ಮತ್ತು ಸಾಂಕೇತಿಕವಾಗಿ ತನ್ನ ಕುರುಹುಗಳನ್ನು ತೋರಿಸುತ್ತದೆ. ಕ್ರಿಸ್ತನೇ ಮೀನು ಹಿಡಿಯುತ್ತಾನೆ, ಮೀನು ಹಿಡಿಯುವವರ ಜೊತೆಗಾರನಾಗಿರುತ್ತಾರೆ, ಹೆಚ್ಚು ಮೀನುಗಳನ್ನು ಹಿಡಿಯುವ ಎಡೆ ತೋರುತ್ತಾನೆ, ಅಷ್ಟೇಕೆ ಯೇಸುವನ್ನು ಮಾನವರ ಕ್ರಿಸ್ತನೆಂದೂ (ಮಾರ್ಕ್ 1:17) ಕರೆಯುತ್ತಾರೆ.
ಮ್ಯಾಥ್ಯೂ, ಮಾರ್ಕ್, ಲೂಕ್, ಜಾನ್; ಈ ಎಲ್ಲರ ಬರಹಗಳಲ್ಲೂ ಸಾವಿರಾರು ಜನರಿಗೆ ಮೀನನ್ನು ಮತ್ತು ರೊಟ್ಟಿಯನ್ನು ಪವಾಡ ಸದೃಶವಾಗಿ ಉಣಬಡಿಸಿದ ಪ್ರಸಂಗವಿದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಗ್ರೀಕ್ ವರ್ಣಮಾಲೆಯ ಅನುಸಾರವಾಗಿ ಇಕ್ತ್ಯುಸ್ ಎನ್ನುವ ಪದದಲ್ಲಿ ಒಂದೊಂದು ಅಕ್ಷರಗಳು ‘ಯೇಸುವು ಅಭಿಷಕ್ತ ದೇವರ ಮಗ – ರಕ್ಷಕ’ ಎಂದು ಹೇಳುತ್ತದೆ.
ಕ್ರೈಸ್ತರ ಮತ್ತು ಶರಣರ ಕ್ರಾಂತಿಯ ದಿನಗಳು
ಯೇಸುವನ್ನು ಶಿಲುಬೆಗೆ ಏರಿಸಿ ಕೊಂದ ನಂತರದ ದಿನಗಳು ಕರ್ನಾಟಕದ ಶರಣರ ಕ್ರಾಂತಿಯ ದಿನಗಳನ್ನು ಹೋಲುತ್ತವೆ. ಯೇಸುವಿನ ಅನುಯಾಯಿಗಳು ರೋಮನ್ನರ ದಾಳಿ ಮತ್ತು ಹಿಂಸೆಯಿಂದ ತಪ್ಪಿಸಿಕೊಳ್ಳಬೇಕಾಗಿತ್ತು. ತಾವು ಯೇಸುವಿನ ಅನುಯಾಯಿಗಳು ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಿರಲಿಲ್ಲ. ಅದೇ ರೀತಿ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಧಾರ್ಮಿಕ ಚಳವಳಿಯು ಪ್ರಬಲವಾಗುತ್ತಿತ್ತು.
ವೈದಿಕ ಮತ್ತು ಇನ್ನಿತರ ವರ್ಣಾಶ್ರಮಧರ್ಮವನ್ನು ಪ್ರತಿಪಾದಿಸುತ್ತಿದ್ದ ಸಂಪ್ರದಾಯವಾದಿಗಳು ಬಸವಣ್ಣ ಕಟ್ಟಿದ ಸಮಾಜೋಧಾರ್ಮಿಕ ಚಳವಳಿಯು ಗಟ್ಟಿಯಾಗಿ ತಳವೂರುವ ಲಕ್ಷಣಗಳನ್ನು ತೋರುತ್ತಿದ್ದ ಸಮಯದಲ್ಲಿಯೇ ಬಿಜ್ಜಳರಾಜನು ತನ್ನ ಎರಡನೆಯ ಮಗನಾದ ಸೋವೀದೇವನಿಗೆ ಪಟ್ಟ ಕಟ್ಟಿದ್ದನು.
ಹಾಗಾಗಿ ಅವನ ಇತರ ಮಕ್ಕಳಲ್ಲಿ ಮತ್ತು ಬಂಧುಗಳಲ್ಲಿ ತಿಕ್ಕಾಟ ಪ್ರಾರಂಭವಾಗಿತ್ತು. ಆಗಲೇ ಬಸವಣ್ಣನವರ ನೇತೃತ್ವದಲ್ಲಿ ಪ್ರೇಮವಿವಾಹ ಮಾತ್ರವಲ್ಲದೇ, ವರ್ಗಾಂತರವಿರುವ ಮತ್ತು ವರ್ಣಾಂತರವಾದ ವಿವಾಹವೂ ಇದಾಗಿತ್ತು. ಬಸವಣ್ಣನ ಚಳವಳಿಯನ್ನು ದಮನಿಸಲು ಯತ್ನಿಸುತ್ತಿದ್ದ ಆಸ್ಥಾನದ ಸಂಪ್ರದಾಯವಾದಿಗಳು ಆಗ ಹುಟ್ಟಿದ ರಾಜಕೀಯ ಆತಂಕವನ್ನು ಬಳಸಿಕೊಂಡರು.
ಇದರಿಂದ ಬಸವಣ್ಣ ತಮ್ಮ ಮಂತ್ರಿಪದವಿಯನ್ನು ತ್ಯಜಿಸಿ ಕಲ್ಯಾಣವನ್ನು ತೊರೆಯಬೇಕಾಯ್ತು. ಈ ಸಮಯವನ್ನು ಬಳಸಿಕೊಂಡು ವೈದಿಕರು ಮತ್ತು ವರ್ಣಾಶ್ರಮ ಸಂಪ್ರದಾಯಸ್ಥರು ವರ್ಣಾಂತರ ವಿವಾಹವಾದ ಮತ್ತು ಅದಕ್ಕೆ ಕಾರಣರಾದ ಹರಳಯ್ಯ, ಮಧುವರಸ ಮತ್ತು ಅವರ ಮಕ್ಕಳಿಗೆಲ್ಲಾ ಕಣ್ಣುಗಳನ್ನು ಕೀಳಿಸಿ ಆನೆಯ ಕಾಲಿಗೆ ಕಟ್ಟಿ ಎಳೆಸಿ ಕೊಲ್ಲುವಂತ ಶಿಕ್ಷೆ ಕೊಟ್ಟರು. ಕಂಡಕಂಡಲ್ಲಿ ಶರಣರ ಕಗ್ಗೊಲೆಗಳಾಗ ತೊಡಗಿದವು.
ಈ ಸಮಯದಲ್ಲಿ ವಚನ ಸಾಹಿತ್ಯವನ್ನು ರಕ್ಷಿಸುವ, ಶರಣರನ್ನು ರಕ್ಷಿಸುವ ಮಹತ್ತರ ಕೆಲಸದಲ್ಲಿ ಅನೇಕ ತ್ಯಾಗ ಬಲಿದಾನಗಳಾದವು. ಆಗಲೇ ಬಿಜ್ಜಳನ ಕೊಲೆಯಾಯಿತು. ರಾಜಕೀಯ ಸಂಘರ್ಷದಲ್ಲಿ ಬಲವುಳ್ಳವರ ಪರವಹಿಸುವ ಆಸ್ಥಾನಿಕರು ಕೊಲೆಗೆ ಕಾರಣ ಯಾರೇ ಆಗಿದ್ದರೂ ಅದನ್ನು ಶರಣರ ತಲೆಗೆ ಕಟ್ಟಲಾಯಿತು. ಪಾಲ್ಕುರಿಕೆ ಸೋಮನಾಥನು ರಚಿಸಿರುವ ಪುರಾಣದಲ್ಲಿ ಮಲ್ಲೆಬೊಮ್ಮ ಮತ್ತು ಜಗದೇವ ಎಂಬ ವೀರರು ಬಿಜ್ಜಳನ ಕೊಂದರೆಂದು ಹೇಳಿದರೆ, ಶಾಸನಗಳನ್ನು ಅನುಸರಿಸಿದರೆ ಸಿಗುವ ಮಾಹಿತಿಗಳಲ್ಲಿ ವ್ಯತ್ಯಾಸಗಳಿವೆ.
ಶಾಸನಗಳು ಮತ್ತು ಪುರಾಣಗಳನ್ನು ಆಧರಿಸಿಯೇ ಅಂದಿನ ಇತಿಹಾಸ ರಚಿಸಬೇಕಾಗಿರುವುದರಿಂದ ಅನೇಕ ವ್ಯತ್ಯಾಸಗಳಿವೆ. ಆದರೆ ಅಲ್ಲೊಂದು ಸಮಾಜೋಧಾರ್ಮಿಕ ಸಂಘರ್ಷ, ರಾಜಕೀಯ ಕೋಲಾಹಲಗಳು ನಡೆದು ವಚನ ಚಳವಳಿ ಮತ್ತು ಶರಣ ಸಂಸ್ಕೃತಿಗಳು ರೂಪುಗೊಂಡವು.
ಅದೆಲ್ಲಾ ಏನಾದರಾಗಲಿ ಬಸವಣ್ಣನ ಗಡಿಪಾರಿನ ನಂತರ, ಶರಣರ ತಲೆದಂಡದ ತರುವಾಯ ಮತ್ತು ಬಿಜ್ಜಳನ ಕೊಲೆಯ ಬೆನ್ನಲ್ಲೇ ಶರಣರು ಚದುರಲೇ ಬೇಕಾದ ಅನಿವಾರ್ಯ ಒದಗಿತ್ತು. ಅವರ ಕಗ್ಗೊಲೆಗಳಾಗತೊಡಗಿತ್ತು. ಬಸವಣ್ಣನ ಅನುಯಾಯಿಗಳು ಅಂದು ರೋಮನ್ನರಿಂದ ತಲೆಮರೆಸಿಕೊಳ್ಳಬೇಕಾದ ಅನಿವಾರ್ಯತೆಯುಳ್ಳ ಯೇಸುವಿನ ಅನುಯಾಯಿಗಳ ಸ್ಥಿತಿಯನ್ನೇ ಅನುಭವಿಸಿದ್ದರು.
ಅಂದಿನ ದಿನಗಳಲ್ಲಿ ರಸ್ತೆಯಲ್ಲೋ ಅಥವಾ ಇನ್ನೆಲ್ಲಾದರೂ ಅಪರಿಚಿತ ಕ್ರೈಸ್ತರು ಭೇಟಿಯಾದರೆ, ‘ತಾನು ಕ್ರಿಸ್ತನ ಅನುಯಾಯಿ, ನೀನು?’ ಎಂದು ಕೇಳಬೇಕಾದರೆ ಧೂಳಿನ ಮೇಲೋ, ಮಣ್ಣಿನ ಮೇಲೋ ಒಂದು ವಕ್ರರೇಖೆಯನ್ನು ಒಬ್ಬ ಎಳೆಯುತ್ತಿದ್ದ. ಮತ್ತೊಬ್ಬನು ಅದೇ ವಕ್ರರೇಖೆಗೆ ತನ್ನ ವಕ್ರರೇಖೆಯನ್ನು ಎಳೆದು ಮೀನಿನ ಆಕೃತಿ ಮೂಡಿಸಿದರೆ ಅವರು ಕ್ರಿಸ್ತಾನುಯಾಯಿಗಳು ಎಂದು ತಮ್ಮ ಸಂಗಾತಿತನವನ್ನು ದೃಢಪಡಿಸಿಕೊಳ್ಳುತ್ತಿದ್ದರು.
ತಾವು ಕ್ರಿಸ್ತನಲ್ಲಿ ಶ್ರದ್ಧೆ ಮತ್ತು ವಿಶ್ವಾಸವುಳ್ಳವರು ಎಂಬುದನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದರು. ಇದನ್ನು ತಾವು ರಹಸ್ಯ ಸಭೆ ನಡೆಸುವ ಜಾಗಗಳಿಗೂ ಗುರುತಿಗೆ ಉಪಯೋಗಿಸುತ್ತಿದ್ದರು. ಮುಂದೆ ರೋಮನ್ನರ ಚಕ್ರಾಧಿಪತ್ಯವನ್ನು ವಿರೋಧಿಸುವ ಸಂಕೇತವಾಗಿಯೂ ಕೂಡಾ ಅಲೆಕ್ಸಾಂಡ್ರಿಯಾದ ನಾಣ್ಯಗಳಲ್ಲಿ ಮೂಡಿರುವ ದಾಖಲೆಗಳಿವೆ.
ಆರಂಭದಲ್ಲಿ ಕ್ರೈಸ್ತರಾದವರೂ ಯಹೂದ್ಯರೇ. ಅವರಿಗೆ ಸಮಸ್ಯೆಗಳು ತಪ್ಪಿರಲಿಲ್ಲ. ಹನ್ನೆರಡು ಮಂದಿ ಪ್ರೇಷಿತರು ಎಂದು ಕರೆಯಿಸಿಕೊಳ್ಳುವ ಶಿಷ್ಯರು ಯೇಸುವಿನ ಬೋಧನೆಗಳನ್ನು ಧರ್ಮಸಭೆಯ ಸ್ಥಾಪನೆಯ ಉದ್ದೇಶದಿಂದ ಪ್ರಚಾರ ಮಾಡತೊಡಗಿದರು.
ಬಹಿರಂಗವಾಗಿ ಪೇತ್ರ ಮತ್ತು ಯೊವಾನ್ನರು ಪ್ರವಚನಗಳನ್ನು ಮಾಡುವಾಗಲೇ ಯಹೂದ್ಯರ ಕೆಂಗಣ್ಣಿಗೆ ಗುರಿಯಾದರು. ಪ್ರೇಷಿತರಿಗೆ ಚಾಟಿಗಳಿಂದ ಹೊಡೆಯುವುದು, ವಿವಿಧ ಬಗೆಯ ಅವಮಾನಗಳನ್ನು ಮಾಡುವುದು ಮುಂದುವರೆದಿತ್ತು. ಆದರೂ ಇವರು ಆಡುತ್ತಿರುವ ಮಾತುಗಳಲ್ಲಿ ವಿಶ್ವಾಸವನ್ನು ಕಂಡವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಏಳು ಜನ ಸಹಾಯಕರನ್ನು ಆಯ್ದುಕೊಂಡರು. ಅವರಲ್ಲಿ ಸ್ತೇಫನ ತುಂಬಾ ಶಕ್ತಿಭರಿತವಾಗಿ ಮಾತಾಡುತ್ತಿದ್ದ. ಅವನು ಮಾಡುತ್ತಿದ್ದ ಪ್ರವಚನ ಮತ್ತು ಬೋಧನೆ ಬಹಳ ಪರಿಣಾಮಕಾರಿಯಾಗಿದ್ದು, ನ್ಯಾಯಸಭೆಗಳು ಥರಗುಟ್ಟಿದವು.
ವಿಚಾರಣೆ ಮಾಡುವಾಗಲೂ ಸ್ತೇಫನ ಹಿಂಜರಿಯಲಿಲ್ಲ, ಧೃತಿಗೆಡಲಿಲ್ಲ. ತನ್ನ ಸತ್ಯವಿಶ್ವಾಸದ ಮಾತುಗಳನ್ನು ಆಡಿಯೇ ತೀರಿದನು. “ನೀವು ನಿಮ್ಮ ಹಳೆಯ ಸಂಪ್ರದಾಯಸ್ಥ ಪೂರ್ವಜರಂತೆಯೇ ಹಟಕ್ಕೆ ಬಿದ್ದು ಕಠಿಣ ಹೃದಯದವರಾಗಿದ್ದೀರಿ ಮತ್ತು ಹಿಂದಿನ ಎಲ್ಲಾ ಪ್ರವಾದಿಗಳನ್ನೂ ನೀವು ಹಿಂಸೆ ಕೊಟ್ಟಿರುವರೇ ಆಗಿದ್ದೀರಿ” ಎಂದು ಧೈರ್ಯವಾಗಿ ಹೇಳುತ್ತಿದ್ದನು. ನ್ಯಾಯಸಭೆಯ ಸದಸ್ಯರು ಸ್ತೇಫನಿಗೆ ಕಲ್ಲು ಹೊಡೆದು ಕೊಂದರು.
ಆಗ ಸ್ತೇಫನ, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ” ಎಂದು ಪ್ರಾರ್ಥಿಸಿದ್ದಲ್ಲದೇ, “ಪ್ರಭೂ, ಈ ಪಾಪವನ್ನು ಇವರ ಮೇಲೆ (ತನ್ನ ಮೇಲೆ ಕಲ್ಲು ಹೊಡೆಯುತ್ತಿರುವವರ ಮೇಲೆ) ಹೊರಿಸಬೇಡಿ” ಎಂದು ಪ್ರಾಣಬಿಟ್ಟನು.
ಧರ್ಮ ಎನ್ನುವುದು ಸ್ಥಾಪಕರೊಬ್ಬರ ಕ್ರಮವನ್ನು ಅನುಸರಿಸುವುದೆಂದರೆ ಹೀಗೆಯೇ. ಕ್ರಿಸ್ತನು ತನ್ನ ಸಾವಿನಲ್ಲೂ ಸೇಡನ್ನು ಹೊಂದದೇ ಕ್ಷಮಿಸಿದಂತೆ ಸ್ತೇಫನೂ ಕೂಡಾ ಹಾಗೇ ಮಾಡಿದನು. ಅವನು ಸತ್ತ ದಿನ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆ ಪ್ರಾರಂಭವಾಯಿತು. ಪ್ರೇಷಿತರ ಹೊರತು ಇತರ ವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾಂತ್ಯಗಳಲ್ಲೆಲ್ಲಾ ಚದುರಿಹೋದರು. ಆಗ ಮನೆಮನೆಗೂ ನುಗ್ಗಿ ಹೆಂಗಸರು ಗಂಡಸರು ಎಂದು ನೋಡದೇ ಯೇಸುವಿನ ವಿಶ್ವಾಸಿಗಳನ್ನು ಎಳೆದು ತಂದು ಸೆರೆಮನೆಗೆ ತಳ್ಳುತ್ತಿದ್ದರು.
ಅಂತಹ ಸನ್ನಿವೇಶಗಳನ್ನು ಎದುರಿಸುತ್ತಿದ್ದ ಯೇಸುವಿನ ವಿಶ್ವಾಸಿಗಳು ತಮ್ಮ ಧರ್ಮಸಭೆಗಳನ್ನು ರಹಸ್ಯವಾಗಿಯೇ ಮಾಡಬೇಕಿತ್ತು. ಆಗ ಇಕ್ತ್ಯುಸ್ ಎಂಬ ಮೀನಿನ ಗುರುತನ್ನು ತಮ್ಮ ರಹಸ್ಯ ಚಿಹ್ನೆಯಾಗಿಸಿಕೊಂಡಿದ್ದರು.
ಚದುರಿದ ಶರಣರು
ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿಯೂ ಕೂಡಾ ಆಗಿನ ಜೆರೂಸಲೇಮಿನ ಪರಿಸ್ಥಿತಿ ಉಂಟಾಗಿತ್ತು. ಚದುರಿದ ಶರಣರು ಉಳವಿ, ಶ್ರೀಶೈಲವೇ ಮೊದಲಾದ ಸ್ಥಳಗಳಿಗೆ ಹೊರಟು ಹೋದರು. ಅಲ್ಲಿ ಯೇಸು ಎದುರಿಸಿದ್ದ ಸಂಪ್ರದಾಯವಾದಿಗಳ ಆರೋಪ ಮತ್ತು ರಾಜಾಡಳಿತದ ತಲೆದಂಡವನ್ನು ಇಲ್ಲಿ ಬಸವಣ್ಣ ಎದುರಿಸಬೇಕಾಗಿತ್ತು. ಏಕೆಂದರೆ ಅಲ್ಲಿ ಯೇಸು ಸಮಾಜದ ತಳವರ್ಗದವರನ್ನು ತನ್ನ ಸಾಂಗತ್ಯದಲ್ಲಿ ಆಪ್ತಗೊಳಿಸಿಕೊಂಡಂತೆ ಇಲ್ಲಿ ಬಸವಣ್ಣನ ಮಹಾಮನೆಯಲ್ಲಿ ಮೇಲ್ವರ್ಗ ಮತ್ತು ಸವರ್ಣೀಯರು ಕೀಳಾಗಿ ಕಂಡವರೆಲ್ಲಾ ಮೌಲ್ಯವನ್ನು ಕಂಡುಕೊಂಡಿದ್ದರು. ಎರಡೂ ಕಡೆಯೂ ಸಮಾಜೋಧಾರ್ಮಿಕ ಆಂದೋಲನವು ಸಂಪ್ರದಾಯವಾದಿಗಳ, ಯಥಾಸ್ಥಿತಿವಾದಿಗಳನ್ನು ಕೆರಳಿಸಿತ್ತು. ರಾಜಕೀಯವನ್ನು ಬಳಸಿಕೊಂಡರು. ಅತ್ತ ಪ್ರೇಷಿತರು ಮತ್ತು ಯೇಸುವಿನ ವಿಶ್ವಾಸಿಗಳು ಕಿರುಕುಳ ಮತ್ತು ಹಿಂಸೆ ಅನುಭವಿಸುತ್ತಾ ಚದುರಿದರು. ಇತ್ತ ಶರಣರು ಹಾಗೂ ಇತರ ಬಸವಾನುಯಾಯಿಗಳು ಅದೇ ರೀತಿ ಚದುರಿದರು.
ಕುಂಬಾರಣ್ಣನ ಮಡದಿ ಕಡಗಾದ ಕೈಯಿಕ್ಕಿ
ಕೊಡದ ಮ್ಯಾಲೇನ ಬರೆದಾಳ ಕಲ್ಯಾಣದ
ಶರಣಬಸವಣ್ಣನ ನಿಲಿಸ್ಯಾಳ.
ಕ್ರಿಸ್ತನ ಅನುಯಾಯಿಗಳು ರೇಖೆಗಳಿಂದ ಇಕ್ತ್ಯುಸ್ ರಚಿಸಿ ತಾವು ಕ್ರಿಸ್ತನ ವಿಶ್ವಾಸಿಗಳು ಎಂದು ಗುಪ್ತಸಂದೇಶವನ್ನು ರವಾನೆ ಮಾಡುತ್ತಿದ್ದಂತೆ ಚದುರಿದ ಶರಣರು ಮತ್ತೆ ತಮ್ಮ ಶರಣ ಪರಂಪರೆಯನ್ನು ಮತ್ತು ಲಿಂಗಾಯತ ಧರ್ಮವನ್ನು ಪುನರುತ್ಥಾನ ಮಾಡುವ ಸಲುವಾಗಿ ಒಂದಾಗಲು ಶ್ರಮಿಕ ವರ್ಗದ ಕಾಯಕ ಯೋಗಿಗಳು ಹಾತೊರೆಯುತ್ತಿದ್ದರದು ಆಶ್ಚರ್ಯವೇನಿರಲಿಲ್ಲ.
ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ ಎನ್ನುತ್ತಿದ್ದ ಶರಣರು ಮತ್ತೊಬ್ಬ ಶರಣರನ್ನು ಗುರುತಿಸಲು ವಿವಾದಕ್ಕೆ ಒಳಗಾಗಿದ್ದ ಬಸವಣ್ಣನ ಹೆಸರೆತ್ತುವ ಬದಲು ಹೊಲದಲ್ಲಿನ ದುಡಿಮೆಯ ಬಸವನನ್ನು ಸಂಕೇತಿಸುತ್ತಿದ್ದರೂ ಆಶ್ಚರ್ಯವೇನಿಲ್ಲ. ಈ ದಿಕ್ಕಿನಲ್ಲಿ ಒಂದಷ್ಟು ಅಧ್ಯಯನ ಮತ್ತು ಆಲೋಚನೆಗಳನ್ನು ಮಾಡಬೇಕಿದೆ.
ನಾನು ಸಣ್ಣವನಿದ್ದಾಗಿನಿಂದಲೂ ಲಿಂಗಾಯತರ ರುದ್ರಭೂಮಿಯಲ್ಲಿ ಬಹುಪಾಲು ಸಮಾಧಿಗಳ ಮೇಲೆ ಲಿಂಗಕ್ಕಿಂತಲೂ ಹೆಚ್ಚಿನ ಕೋಡಿನ ಬಸವಣ್ಣನ ವಿಗ್ರಹಗಳನ್ನು ನೋಡುತ್ತಿದ್ದೆ. ಹಿರಿಯರೊಬ್ಬರಲ್ಲಿ ವಿಚಾರಿಸಿದಾಗ ಅದು ಶಿವನ ಮುಂದಿನ ನಂದಿ ಎಂದರು. ಅದು ತಾರ್ಕಿಕವಾಗಿ ಖಂಡಿತವಾಗಿ ಸಮ್ಮತವಾಗಿರಲಿಲ್ಲ. ಏಕೆಂದರೆ ಕೈಲಾಸದ ಶಿವನನ್ನೇ ಪರಿಗಣಿಸಿ, ಆತನ ವಾಹನವಾದ ನಂದಿಯೆಂದೇ ಗುರುತಿಸಿದರೂ, ಶಿವನ ಗುರುತೇ ಸುಲಭವೂ ಮತ್ತು ಉನ್ನತವೂ ಆಗಿರುವಾಗ ಬಿಡಿಸುವಲ್ಲಿ ಅಥವಾ ಕೆತ್ತುವಲ್ಲಿ ಲಿಂಗಕ್ಕಿಂತ ಕ್ಲಿಷ್ಟವಾಗಿರುವ ನಂದಿಯೇಕೇ ಎಂದು ವಿಚಾರಿಸುತ್ತಿದ್ದೆ.
ಆದರೆ, ನನಗೆ ಕ್ರಮೇಣ ತೋರತೊಡಗಿದ್ದು, ಅದು ಶಿವನ ವಾಹನ ನಂದಿಯಲ್ಲ, ಉಳುವ ಎತ್ತಿನ ಬಸವ ಎಂದು. ಹಾಗಾದರೆ, ಕೃಷಿಕರಲ್ಲದ, ಅಂತಹ ಎತ್ತಿನ ಜೊತೆಗೆ ಕಾಯಕದಲ್ಲಿ ಏನೂ ಸಂಬಂಧ ಹೊಂದಿಲ್ಲದ ನನ್ನ ಸಂಬಂಧಿಕರು ಬರೀ ಲಿಂಗಾಯತರು ಎಂಬ ಕಾರಣದಿಂದ ಬಸವನನ್ನು ಹೊಂದುವ ಕಾರಣವೇನು ಎಂಬುದು ದೀರ್ಘಕಾಲದ ಜಿಜ್ಞಾಸೆಯಾಗಿತ್ತು.
ಮುಂಜಾನೆದ್ದು ಕುಂಬಾರಣ್ಣದಂತಹ ಕೆಲವು ಜಾನಪದ ಗೀತೆಗಳಲ್ಲಿ ಕಲ್ಯಾಣದ ಶರಣಬಸವಣ್ಣನ ನಿಲ್ಲಿಸುವುದು ಅಥವಾ ಮೂಡಿಸುವುದರ ಉಲ್ಲೇಖವಿದೆ. ರಹಸ್ಯವಾಗಿ ಇಕ್ತ್ಯುಸ್ ಮೂಲಕ ಯೇಸುವನ್ನು ಸಂಕೇತಿಸುವ ಕ್ರಿಸ್ತಾನುಯಾಯಿಗಳಂತೆ ಕೋಡಿನ ಬಸವನ ಮೂಲಕ ಬಸವಣ್ಣನ ಅನುಯಾಯಿ ನಾನು ಎಂದು ಸಂಕೇತಿಸುವ ಚಿಹ್ನೆ ಇದಾಗಿದ್ದಿರಬಹುದೆಂದು ತೋರಿತು.
ಹಲವಾರು ಜಾನಪದ ಕಲಾಕೃತಿಗಳಲ್ಲಿ, ವಾದ್ಯಗಳ ಮೇಲಿನ ಕುಸುರಿ ಕೆಲಸಗಳಲ್ಲಿ, ಬಟ್ಟೆಗಳಲ್ಲಿ ವಿಭೂತಿ ಧರಿಸಿರುವ ಕೋಡಿನ ಬಸವ ಮತ್ತು ಅದರ ಡುಬ್ಬದ ಮೇಲೆ ಲಿಂಗ, ಕೆಲವೊಮ್ಮೆ ಡುಬ್ಬವನ್ನೇ ಲಿಂಗದಂತೆ ರೂಪಿಸುವ ಚಿತ್ರಗಳನ್ನು ಗುರುತಿಸಬಹುದು. ಕುಂಬಾರ, ನೇಯ್ಕಾರರಂತಹ ಶ್ರಮಿಕ ವರ್ಗಗಳು ಬಸವಣ್ಣನನ್ನು ತಮ್ಮ ಸಂಕೇತಗಳಲ್ಲಿ ಬಸವನ ರೂಪಿಸಿರಲು ಸಾಧ್ಯ.
ಆ ಸಾಂಕೇತಿಕತೆಯ ಮುಂದುವರಿಕೆಯ ಭಾಗವಾಗಿ ಅರಿವಿಲ್ಲದೆಯೇ ಇಂದಿಗೂ ಬಸವ ಜಯಂತಿಯ ದಿನ ಕೋಡಿನ ಬಸವನ ಪೂಜೆ ಮಾಡುವ ಸಂಪ್ರದಾಯವನ್ನು ಕೆಲವರು ಇಟ್ಟುಕೊಂಡಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ನಮ್ಮಲ್ಲಿ ವಾಸ್ತವವನ್ನು ಬಿಟ್ಟು ಸಂಕೇತಕ್ಕೇ ಅಂಟಿಕೊಳ್ಳುವುದು ಒಂದು ಹಳೆಯ ರೂಢಿ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ3 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ6 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ3 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ದಿನದ ಸುದ್ದಿ7 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ಅಂಕಣ2 days agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ಕ್ರೀಡೆ6 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ದಿನದ ಸುದ್ದಿ2 days agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ



