Connect with us

ದಿನದ ಸುದ್ದಿ

ಮಹಾ ನವಮಿ ; ‘ಶರಣರ ಹುತಾತ್ಮ ದಿನ..!’

Published

on

  • ಡಾ.ವಡ್ಡಗೆರೆ ನಾಗರಾಜಯ್ಯ

ಶರಣ ಬಸವಣ್ಣ ಜಾತಿವಿನಾಶ ಚಳವಳಿ ರೂಪಿಸಿದ ಮಹಾ ಬಂಡಾಯಗಾರ. ಸಮಗಾರ ಹರಳಯ್ಯ ಮತ್ತು ಬಸವಣ್ಣನವರ ಬಾಂಧವ್ಯ ಅತ್ಯಂತ ನಿಕಟವಾಗಿತ್ತು. ಇವರಿಬ್ಬರ ಬಾಂಧವ್ಯ ಎಷ್ಟೊಂದು ನಿಕಟವಾಗಿತ್ತೆಂದರೆ ಬಸವಣ್ಣನು ಸಮಗಾರ ಹರಳಯ್ಯನ ಮಗನಾದ ಶೀಲವಂತನಿಗೂ ಮತ್ತು ಬ್ರಾಹ್ಮಣ ಮಂತ್ರಿ ಮಧುವರಸನ ಮಗಳಾದ ಲಾವಣ್ಯವತಿಗೂ ಅಂತರ್ಜಾತಿ ವಿವಾಹ ನಡೆಸುವ, ಆ ಮೂಲಕ ಜಾತಿ ವಿನಾಶ ಮಾಡುವ ಕ್ರಾಂತಿಕಾರಿ ಹಂತ ತಲುಪಿತ್ತು.

ಮಾದಿಗ ಮತ್ತು ಬ್ರಾಹ್ಮಣರ ನಡುವೆ ಅಂತರ್ಜಾತಿ ವಿವಾಹ ನಡೆದುಹೋಯಿತು. ಬಸವಣ್ಣನ ಕ್ರಾಂತಿಕಾರಿ ನಡಿಗೆಯನ್ನು ನೋಡಿದ ಸಂಪ್ರದಾಯವಾದಿ ಪುರೋಹಿತಶಾಹಿಗಳು ಸಹಿಸದಾದರು. ಜಾತಿ ಜಾತಿಗಳ ನಡುವೆ ಮೇಲು-ಕೀಳಿನ ಜಾತಿ ವಿಧ್ವೇಷದ ಕಿಚ್ಚು ಹಚ್ಚಿದರು. ‘ಸಮಾಜಬಾಹಿರವೂ, ನೀತಿಬಾಹಿರವೂ, ಧರ್ಮಬಾಹಿರವೂ ಆದ ಕೆಲಸಗಳಲ್ಲಿ ತೊಡಗಿರುವ ಶರಣರನ್ನು ಕೊಚ್ಚಿಕೊಲ್ಲದ ಹೊರತು ಸನಾತನ ಧಾರ್ಮಿಕ ವ್ಯವಸ್ಥೆಗೆ ಉಳಿಗಾಲವಿಲ್ಲ’ ಎಂದು ರೊಚ್ಚಿಗೆದ್ದ ಪಟ್ಟಭದ್ರ ಜನ ಸಾವಿರಾರು ಶರಣರ ತಲೆಗಳನ್ನು ಕಡಿದು ಚೆಂಡಾಡಿದರು.

ಸಾವಿರಾರು ಶರಣರನ್ನು ಆನೆಗಳ ಕಾಲುಗಳಿಗೆ ಸರಪಳಿ ಬಿಗಿದು ಎಳೆಯಿಸಿ ಕೊಲ್ಲುವ ‘ಎಳೆಹೂಟೆ’ ಶಿಕ್ಷೆ ನೀಡಿ ಕೊಂದುಹಾಕಿದರು. ಪ್ರಭುತ್ವ ವಿರೋಧಿಯೆಂದು ಭಾವಿಸಲಾದ ಸಾವಿರಾರು ಅಮೂಲ್ಯ ವಚನ ಕಟ್ಟುಗಳನ್ನು ಬಿಡದೆ ಹುಡುಕಿಸಿ ಬೆಂಕಿಗೆಸೆದು ಸುಡಲಾಯಿತು. ಕಲ್ಯಾಣದಲ್ಲಿ ರಕ್ತದ ಹೊಳೆಯೇ ಹರಿಯಿತು.

ಈ ಘಟನೆ ನಡೆದದ್ದು ಮಹಾನವಮಿಯ ದಿವಸ. ಇಂತಹ ಕರಾಳ ನವಮಿಯ ದಿನ ಶರಣರು, ತಮಗೊದಗಿದ ಮರಣಕ್ಕೆ ಅಂಜದೆ ‘ಮರಣವೇ ಮಹಾನವಮಿ’ ಎಂದು ದೇಹತ್ಯಾಗ ಮಾಡಿದರು. ಲಭ್ಯವಿರುವ ಉಲ್ಲೇಖಿತ ದಾಖಲೆಗಳ ಪ್ರಕಾರ ಲಕ್ಷದ ಮೇಲೆ ತೊಂಭತ್ತಾರು ಸಾವಿರ ವಚನಕಾರರು ಹನ್ನೆರಡನೇ ಶತಮಾನದಲ್ಲಿದ್ದರು.

ಸಾವಿರ ಸಾವಿರ ಸಂಖ್ಯೆಯ ಶರಣರ ದೇಹಗಳು ಛಿದ್ರಛಿದ್ರವಾಗುತ್ತಿರುವ, ವಚನ ಕಟ್ಟುಗಳು ಉರಿದು ಬೂದಿಯಾಗಿಹೋಗುವ ಇಂತಹ ಸಾಮಾಜಿಕ ಸಂಕ್ಷೋಭಿತ ಪರಿಸ್ಥಿತಿಗೆ ಸಿಲುಕಿದ ಅನೇಕ ವಚನಕಾರರು, ಕೆಲವಾದರೂ ಅಮೂಲ್ಯ ವಚನಕಟ್ಟುಗಳನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಜೀವರಕ್ಷಿಸಿಕೊಳ್ಳಲು, ಆ ಮೂಲಕ ವಚನ ಚಳವಳಿಯ ಆಶಯಗಳನ್ನು ಜೀವಂತವಾಗಿರಿಸಲು ಕಲ್ಯಾಣ ತೊರೆದು ದಿಕ್ಕಾಪಾಲಾಗಿ ಓಡಿಹೋದರು. ಇದೆಲ್ಲವೂ ನಡೆದದ್ದು ಮಹಾನವಮಿಯ ದಿವಸ. ಇಂತಹ ಮಹಾನವಮಿ ದಿವಸವನ್ನು ನಾವು ನಾಡಹಬ್ಬವನ್ನಾಗಿ ಆಚರಿಸಲು ಸಾಧ್ಯವೇ?!

ಜಾತಿವಿನಾಶ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಹುದೊಡ್ಡ ಆಶಯ ಮತ್ತು ಗುರಿ. ಇದು ಮೂಲದಲ್ಲಿ ಬುದ್ಧಗುರು ಮತ್ತು ಬಸವಣ್ಣನವರ ಆಶಯ ಮತ್ತು ಗುರಿಯೂ ಆಗಿತ್ತು ಎಂಬುದನ್ನು ನಾವು ಮರೆಯದಿರೋಣ. ಸಾವಿರಾರು ಜನರ ಹತ್ಯೆಗೆ ಕಾರಣವಾದ ‘ಕಲ್ಯಾಣ ಕ್ರಾಂತಿ’ ಎಂಬುದು ಎರಡು ರಾಜ್ಯಗಳ ನಡುವೆ ರಾಜ್ಯ ವಿಸ್ತರಣೆ ಮತ್ತು ಅಧಿಕಾರಕ್ಕಾಗಿ ನಡೆದ ಯುದ್ಧವಲ್ಲ. ರಾಜ್ಯಕ್ಕಾಗಿ ಅಥವಾ ಆಸ್ತಿಪಾಸ್ತಿಗಳ ಪಾಲುಪಾರಿಕತ್ತಿಗಾಗಿ ಅಣ್ಣತಮ್ಮಂದಿರ ನಡುವೆ ನಡೆದ ಸೋದರ ವ್ಯಾಜ್ಯವೂ ಅಥವಾ ದಾಯಾದಿ ಕಲಹವೂ ಅಲ್ಲ.
ಇದು ಮಹಾಭಾರತ ಕಥೆಯಲ್ಲ.ಕೋಮುದೊಂಬಿಯೂ (Communal riot) ಅಲ್ಲ. ಮತೀಯ ಧ್ವೇಷದ ಸ್ಫೋಟವೂ ಅಲ್ಲ. ಒಬ್ಬನ ಹೆಂಡತಿಯನ್ನು ಮತ್ತೊಬ್ಬನು ಹೊತ್ತೊಯ್ದುದಕ್ಕೆ ನಡೆದ ಯುದ್ಧವೂ ಇದಲ್ಲ.

ಇದು ರಾಮಾಯಣ ಕಥೆಯಲ್ಲ. ಬದಲಾಗಿ ‘ಕಲ್ಯಾಣ ಕ್ರಾಂತಿ’ ಎಂಬುದು ವರ್ಣಸಂಕರ ಆಗದಂತೆ, ಅಂತರ್ಜಾತಿ ಮದುವೆಗಳು ನಡೆಯದಂತೆ ತಡೆಯಲು, ಜಾತಿ ಪದ್ಧತಿಯನ್ನು ಪೋಷಿಸಲು ವೈದಿಕಶಾಹಿ ಬ್ರಾಹ್ಮಣರು ನಡೆಸಿದ ಸಂಚಿನ ಪ್ರತಿಫಲ. ಬ್ರಾಹ್ಮಣರ ಆಜ್ಞಾನುಪಾಲಕನಾದ ಅಲ್ಲಿನ ಒಬ್ಬ ರಾಜ ತನ್ನದೇ ಪ್ರಜೆಗಳ ವಿರುದ್ಧ ತನ್ನ ಸೇನೆಯನ್ನೇ ಬಿಟ್ಟು ತನ್ನ ಪ್ರಜೆಗಳನ್ನೇ ಕೊಲ್ಲಿಸಿದ ವಾಸ್ತವ ಗತ ಚರಿತ್ರೆ.

ಸರ್ಕಾರದ ಯಂತ್ರಾಂಗವೇ ಪ್ರಜೆಗಳನ್ನು ಕೊಂದು ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸಿದ್ದರ ವಿರುದ್ಧ ಕೃದ್ಧರಾದ ಜನಸಾಮಾನ್ಯರು ರಾಜನ ರುಂಡ ಕಡಿದರು. ಜಾತ್ಯತೀತ ಕಲ್ಯಾಣ ರಾಜ್ಯವನ್ನು ರೂಪಿಸಬೇಕೆಂದು ಹೋರಾಟ ಮಾಡುತ್ತಿದ್ದ ಬಸವಣ್ಣನ ಕಣ್ಣೆದುರಿನಲ್ಲಿಯೇ ಈ ಕರಾಳ ಘಟನೆಗಳು ನಡೆದುಹೋದವು. ಇಂತಹ ಘಟನಾವಳಿಗಳಿಂದ ಬ್ರಮನಿರಸನಗೊಂಡ ಬಸವಣ್ಣ ಆತ್ಮಹತ್ಯೆ ಮಾಡಿಕೊಂಡ ಅಥವಾ ಬಸವಣ್ಣನನ್ನು ಆ ರಾಜನ ಸೇನೆ ಕೂಡಲ ಸಂಗಮದವರೆಗೂ ಬೆನ್ನಟ್ಟಿಹೋಗಿ ಕೊಂದು ಹಾಕಿತು. ಇದನ್ನು ಬಸವಣ್ಣ ಕೂಡಲಸಂಗಮದೇವನಲ್ಲಿ ಐಕ್ಯನಾದನೆಂದು ಚರಿತ್ರೆ ತಿಳಿಸುತ್ತದೆ.

ಬಸವಣ್ಣ ಮತ್ತಿತರ ಶರಣರ ಹತ್ಯೆಯ ನಂತರ ಅಕ್ಕನಾಗಮ್ಮ ಮತ್ತು ಚೆನ್ನಬಸವಣ್ಣ ಈಗಿನ ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ದುರ್ಗಮವಾದ ಜೋಯಿಡಾ ತಾಲ್ಲೂಕಿನ ಉಳುವಿಗೆ ಬಂದು ಜೀವ ಉಳಿಸಿಕೊಳ್ಳುತ್ತಾರೆ. ಅಲ್ಲಿ ಚೆನ್ನಬಸವಣ್ಣನ ದೇಹ ಜರ್ಜರಿತವಾಗಿ ಅವನು ಚಿಕ್ಕ ವಯಸ್ಸಿನಲ್ಲಿಯೇ ದೇಹ ವಿಸರ್ಜಿಸುತ್ತಾನೆ. ಅಕ್ಕನಾಗಮ್ಮ ಉಳುವಿ ತೊರೆದು ಕಾಡು ಕಣಿವೆ ಇಳಿದು ಗಾವುದ ಗಾವುದ ನಡೆದು ತರೀಕೆರೆಗೆ ಬಂದು, ತರೀಕೆರೆ ಹತ್ತಿರ ದೇಹತ್ಯಾಗ ಮಾಡುತ್ತಾಳೆ.

ಕಲ್ಯಾಣದಿಂದ ಉಳುವಿಗೆ ಧಾವಿಸಿ ಬರುವಾಗ ಶರಣರ ಹಿಂದೆಯೇ ಬಿಜ್ಜಳನ ದಂಡು ಬೆನ್ನಾಡಿ ಹೋದದ್ದರಿಂದ ಈತನಕದ ದಾರಿಯನ್ನು ‘ದಂಡಿನ ದಾರಿ’ ಎಂದು ಕರೆಯುತ್ತಾರೆಂದು ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರು ಐತಿಹಾಸಿಕ ಸಾಕ್ಷ್ಯ ಒದಗಿಸಿದ್ದಾರೆ. ಒಂದು ಗುಂಪು ಸೊನ್ನಲಿಗೆ ಸಿದ್ಧರಾಮನೊಂದಿಗೆ ಮಹಾರಾಷ್ಟ್ರದ ಸೊಲ್ಲಾಪೂರದ ಕಡೆಗೂ, ಇನ್ನೊಂದು ಗುಂಪು ಶ್ರೀಶೈಲಕ್ಕೂ, ಅರುಹಂತಪುರ- ಗೋಸಲ – ಗುಮ್ಮಳಾಪುರಕ್ಕೂ, ಎಡೆಯೂರು-ಸಿದ್ಧಗಂಗೆ-ಸಿದ್ಧರಬೆಟ್ಟಗಳಿಗೂ ಶರಣರು ಹೋದರೆಂದು ನಂಬಲಾಗುತ್ತದೆ.

ಹೀಗೆ ಕಲ್ಯಾಣದ ಶರಣರು ನಡೆದುಹೋದ ದಾರಿ ಇರುವ ಕಡೆಗಳಲ್ಲೆಲ್ಲಾ ಲಿಂಗಾಯತರ ಪ್ರಾಬಲ್ಯವಿರುವುದನ್ನು ನೋಡಬಹುದು. ಕಲ್ಯಾಣ ಕ್ರಾಂತಿಯ ಮೇರು ಶರಣರಾದ ಮಾದಾರ ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿಗಳು ದಕ್ಷಿಣದ ತುದಿಯ ಚಾಮರಾಜನಗರದ ಅರುಹಂತಪುರಕ್ಕೆ ಬಂದರೆಂದು ನಂಬಲಾಗುತ್ತದೆ.

ಅಂತರ್ಜಾತಿ ಮದುವೆಗಳು ನಡೆಯದಂತೆ ತಡೆಯಲು ಮತ್ತು ಜಾತಿ ಪದ್ಧತಿಯನ್ನು ಪೋಷಿಸಲು ಯುವಜೋಡಿಯಾದ ಶೀಲವಂತ ಮತ್ತು ಲಾವಣ್ಯವತಿಯರನ್ನು ಹನ್ನೆರಡನೇ ಶತಮಾನದಲ್ಲಿ ಹತ್ಯೆ ಮಾಡಿದಂತೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಇವತ್ತಿನ ದಿನಗಳಲ್ಲಿಯೂ ಯಥಾಸ್ಥಿತಿ ಜಾತಿವಾದಿಗಳು ಅಂತರ್ಜಾತಿ ಮದುವೆಗಳನ್ನು ವಿರೋಧಿಸುವುದು ಈ ಜಾತಿಗ್ರಸ್ತ ಸಮಾಜದಲ್ಲಿ ಮಾಮೂಲು ವಿದ್ಯಮಾನವಾಗಿದೆ. ನಾಗರಿಕ ಸಮಾಜದ ನಾವು ಮನುಧರ್ಮಶಾಸ್ತ್ರ ಪ್ರಣೀತ ಜಾತಿಕಟ್ಟುಗಳನ್ನು ಪಾಲಿಸುವ ಕಡೆಗೆ ಚರಿತ್ರೆಯ ಹಿಂದಕ್ಕೆ ಚಲಿಸಬಾರದು. ಹಾಗೆ ಹಿಂದಕ್ಕೆ ಚಲಿಸುವ ಮತಾಂಧ ಮನಸ್ಸುಗಳ ವರ್ತನೆಯಿಂದಾಗಿಯೇ ‘ಮರ್ಯಾದಾ ಹತ್ಯೆ’ ಹೆಸರಿನಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ.

ಶರಣರು ‘ಮರಣವೇ ಮಹಾನವಮಿ’ ಎಂದು ಇದೇ ಮಹಾನವಮಿಯ ದಿವಸ ಆತ್ಮಾರ್ಪಣೆ ಮಾಡಿಕೊಂಡಿದ್ದಾರೆ. ಇಂತಹ ಮಹಾನವಮಿ – ದಸರಾ ಆಚರಣೆ ನಮಗೆ ಬೇಕೆ? ಸನಾತನ ಧರ್ಮವು ವಿಧಿಸಿರುವ ಜಾತಿ ಪದ್ದತಿಯನ್ನು ನಾಶಮಾಡಬೇಕೆಂಬುದು ಬುದ್ಧಗುರು – ಬಸವಣ್ಣ – ಅಂಬೇಡ್ಕರ್ – ಕುವೆಂಪು ಅವರ ಆಶಯ ಮತ್ತು ಗುರಿಗಳಾಗಿದ್ದವು ಎಂಬುದನ್ನು ಮಹಾನವಮಿಯ ಈ ದಿವಸ ನಾವು ಮರೆಯದಿರೋಣ. ಅವರ ಆಶಯಗಳಿಗೆ ಜೀವವಿದೆ. ಮಹಾ ನವಮಿ : ಶರಣರ ಹುತಾತ್ಮ ದಿನ!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.

‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ

ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ  ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್‌ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್‌ ಕುಣಿಗಲ್‌ ಅವರ ́ಸಂಸʼ ಕತೆಗೆ ಪ್ರಥಮ ಬಹುಮಾನ,. ರವಿ ಮಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ದ್ವಿತೀಯ ಬಹುಮಾನ ಹಾಗೂ ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕರಾದ ಗೋವರ್ಧನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಜೇಯ ಸಿಂಹ ಕೆ.ವಿ. ಅವರ ʼಮಾರ್ಜಕದ ಶ್ರೀಮುಡಿʼ, ಟಿ.ಆರ್.‌ ಪ್ರಕಾಶ ಭಾಗವತ ಅವರ ʼಸಮಾಧಿʼ , ರಘುನಂದನ್‌ ಅವರ ʼಹೀಗೊಂದು ಕಛೇರಿʼ , ಡಾ||. ಮಿರ್ಜಾ ಬಷೀರ್‌ ಅವರ ʼ ಒಂದು ಸದ್ದಿಲ್ಲದ ಕ್ರಾಂತಿʼ, ಸುಜಾತ ಎಸ್.‌ ಎನ್‌ ರೆಡ್ಡಿ ಅವರ ʼ ಸತ್ಯ ದರ್ಶನʼ, ಚಂದ್ರಿಕಾ ನಾಗರಾಜ್‌ ಹಿರಿಯಡಕ  ಅವರ ʼ ವೆಂಕಟನ ಸ್ವೆಟರ್, ರೈಹಾನ ಅವರ  ʼಬಾವಿಗೆ ಬಿದ್ದರೂʼ, ಒಟ್ಟು ಈ  ಏಳುಕತೆಗಳು ತೀರ್ಪುಗಾರ ಮೆಚ್ಚುಗೆ ಪಡೆದಿವೆ.

ಕತಾ ಸ್ಪರ್ಧೆಯ ತೀರ್ಪುಗಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕತೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ, ಹೊಸಪೇಟೆ, ಕವಿ ಕತೆಗಾರ , ಜಿ. ಮುದ್ದುವೀರಸ್ವಾಮಿ, ದಾವಣಗೆರೆ, ಕತೆಗಾರ್ತಿ ಹಾಗೂ ಕನ್ನಡ ಪ್ರಾಧ್ಯಾಪಕಿ, ಸುಜಾತ ಚಲಾವಾದಿ, ತಾಳಿಕೋಟೆ, ಕತೆಗಾರ ಹಾಗೂ ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ. ಟಿ ಎಸ್‌. ಗೊರವರ, ಗಜೇಂದ್ರಘಡ ಇವರು ಕಾರ್ಯನಿವಹಿದ್ದರು ಎಂದು ಮಾಹಿತಿ ನೀಡಿದ್ಧಾರೆ.

ಪ್ರಥಮ ಬಹುಮಾನ ಹತ್ತು ಸಾವಿರ ರೂ (10000 ರೂ ) ನಗದು, ದ್ವೀತೀಯ ಬಹುಮಾನ ಐದು ಸಾವಿರ ನಗದು, (5000 ರೂ), ತೃತೀಯ ಬಹುಮಾನ ಮೂರು ಸಾವಿರ (3000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ನೀಡಲಾಗುವುದು.

ಕವಿತೆ ಸ್ಪರ್ಧೆ ಫಲಿತಾಂಶ

ಕವಿತೆ ಸ್ಪರ್ಧೆಯಲ್ಲಿ ಆನಂದ ಕುಂಚನೂರ ಅವರ ʼ ಬೆತ್ತಲೆ ಶಿಖರʼ ಕವಿತೆಗೆ ಪ್ರಥಮ ಬಹುಮಾನ, ಅಜಯ್‌ ಅಂಗಡಿ ಅವರ ʼಒಂದು ಶ್ರಾವಣ ಸಂಜೆಗೆʼ ದ್ವಿತೀಯ ಬಹುಮಾನ, ಭಾಗ್ಯ ಜ್ಯೋತಿ ಹಿರೇಮಠ ಅವರ ʼ ಗೋಡೆ ಕವಿತೆಗೆ ತೃತೀಯ ಬಹುಮಾನ ದೊರೆತಿದೆ.

ಫೈಜ್ನಟ್ರಾಜ್‌ ಅವರ ʼಅವ್ವ ತಟ್ಟಿದ ರೊಟ್ಟಿಯಲ್ಲಿ ಬೆರಳಿನ ಗುರುತುʼ, ಹೊನ್ನಪ್ಪ. ನೀ. ಕರೆಕನ್ನಮ್ಮನವರ ಅವರ ʼಒಂಟಿಯಾನದ ಸರಕುʼ, ಕವಿತ ಎ.ವಿ ಅವರ ʼಬಂದಿದ್ದಾರೆ ಸಿಕ್ಕಿಲ್ಲʼ, ರಮ್ಯ ಕೆ.ಜಿ. ಅವರ ʼಬಿಡಿಸಿಕೊಳ್ಳುತ್ತದೊಂದು ಚಿತ್ರ,ʼ, ಮುರ್ತುಜಾ ಬೇಗಂ ಕೊಡಗಲಿ ಅವರ ʼಒಂದು ಕನ್ನಡಿ ಮೂರು ಬಿಂಬಗಳುʼ, ಮನಸ್ವಿ ಎಂ ಸ್ವಾಮಿ ಅವರ ʼ ರಾಜಧಾನಿಯಲ್ಲಿ ರಾಜʼ, ವೀಣಾ ರಾವ್ ಅವರ  ʼಬಣ್ಣಗಳ ಆಚೆಗೆʼ ಒಟ್ಟು ಏಳು ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಕವಿತೆ ಸ್ಪರ್ಧೆಯ ತೀರ್ಪುಗಾರರಾಗಿ ಕವಿ ಚಂದ್ರಶೇಖರ ತಾಳ್ಯ, ಹೊಳಲ್ಕೆರೆ, ಕವಯಿತ್ರಿ ಸವಿತಾ ನಾಗಭೂಷಣ, ಶಿವಮೊಗ್ಗ, ಕವಿ ವಿಲ್ಸನ್‌ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.

ಪ್ರಥಮ ಬಹುಮಾನ ಐದು ಸಾವಿರ ರೂ (5000 ರೂ ) ನಗದು, ದ್ವೀತೀಯ ಬಹುಮಾನ ಮೂರು ಸಾವಿರ ನಗದು, (3000 ರೂ), ತೃತೀಯ ಬಹುಮಾನ ಎರಡು ಸಾವಿರ (2000) ರೂ ನಗದು ಹಾಗೂ ಪ್ರಮಾಣ ಪತ್ರವನ್ನು ಬಹುಮಾನಿತರಿಗೆ ಇದೇ ಅಕ್ಟೋಬರ್‌ 24 ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ʼ ನಡೆಯುವ ದೀಪಾವಳಿ ವಿಶೇಷಾಂಕ-2026 ರ ಬಿಡುಗಡೆ ಕಾರ್ಯಕ್ರಮದಲ್ಲಿ  ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9980346243 ಸಂಪರ್ಕಿಸಲು ಈ ಮೂಲಕ ತಿಳಿಸಲಾಗಿದೆ.

Continue Reading

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending