Connect with us

ದಿನದ ಸುದ್ದಿ

ಸಾಮಾಜಿಕ ಜಾಲತಾಣಗಳು ಮತ್ತು ಸುಳ್ಳು ಸುದ್ದಿಗಳು..!

Published

on

  • ವಿವೇಕಾನಂದ. ಹೆಚ್.ಕೆ.

ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗಳಲ್ಲಿ ಬಿತ್ತರವಾಗುವ ಸಂದೇಶಗಳನ್ನು ಮಾನಿಟರ್ ಮಾಡಬೇಕು ಮತ್ತು ಶಿಕ್ಷೆ ವಿಧಿಸಬೇಕು ಎಂಬ ಕೂಗಿನ ಜೊತೆ ಕೆಲವು Watsapp ಗುಂಪುಗಳಲ್ಲಿ Forward ಮಾಡುವ ಸಂದೇಶಗಳಿಂದ ನಿರ್ವಾಹಕರು ತೊಂದರೆಗೆ ಆಗುವ ಭಯ ಕಾಡುತ್ತಿದೆ.

ಹಾಗಾದರೆ ವಾಸ್ತವ ಏನು ?

ಸುಳ್ಳು ವಂಚನೆ ಮೋಸ ವಿಷ ಕಾರುವ ಪ್ರಚೋದನಕಾರಿ ವಿಷಯಗಳು ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭಗಳಿಗೂ ಯಾವಾಗಲೂ ಕಾನೂನು ಬಾಹಿರವೇ,ಅನೈತಿಕವೇ ಮತ್ತು ನಿಷಿದ್ಧವೇ. ಅದು ಸೋಷಿಯಲ್‌ ಮೀಡಿಯಾ ‌ಆಗಲಿ ಅಥವಾ ಎಲ್ಲೇ ಆಗಿರಲಿ ಅದನ್ನು ಒಪ್ಪುವ ಪ್ರಶ್ನೆಯೇ ಇಲ್ಲ.

ಒಂದು ವೇಳೆ ಅದು ಸಾಮಾಜಿಕ ಜಾಲತಾಣಗಳ ಕಾರಣದಿಂದ ಅತ್ಯಂತ ಅಪಾಯಕಾರಿ ಹಂತ ತಲುಪಿದೆ ಎಂದು ಹೇಳಿದರೆ ಇಡೀ ಸಮಾಜದ ಮಾನಸಿಕ ವರ್ತನೆಯ ಬಗ್ಗೆಯೇ ಅನುಮಾನಿಸಬೇಕಾಗುತ್ತದೆ. ಹಾಗಾದರೆ ನಾವೆಲ್ಲರೂ ಸುಳ್ಳು ವಂಚನೆಯ ಸಮಾಜದಲ್ಲಿ ಬದುಕುತ್ತಿದ್ದೇವೆಯೇ ಅಥವಾ ಅದನ್ನು ಅರ್ಥಮಾಡಿಕೊಳ್ಳುವ ಬುದ್ದಿ ಶಕ್ತಿ ನಮಗಿಲ್ಲವೇ.

ಇದನ್ನೂ ಓದಿ | ದಿ ಗ್ರೇಟೆಸ್ಟ್‌ ಇಂಡಿಯನ್ ಡಾ.ಅಂಬೇಡ್ಕರ್..!

ಸ್ವಲ್ಪ ಯೋಚಿಸಿ ನೋಡಿದರೆ ಸಾಮಾಜಿಕ ಜಾಲತಾಣಗಳನ್ನು ಅತಿಹೆಚ್ಚು ಸದುಪಯೋಗ ಮತ್ತು ದುರುಪಯೋಗ ಪಡಿಸಿಕೊಂಡ ಕುಖ್ಯಾತಿ ರಾಜಕೀಯ ಪಕ್ಷಗಳು ಮತ್ತು ಸಂಘಟನಾತ್ಮಕ ಪಂಥಗಳಿಗೆ ಸಲ್ಲುತ್ತದೆ.

ಇವು ಈ ಜಾಲತಾಣಗಳ ನಿರ್ವಹಣೆಗೆ ಏಜೆಂಟರುಗಳನ್ನು ನೇಮಿಸಿಕೊಂಡರು. ಕೆಲವು ಅಧೀಕೃತ ಮತ್ತೆ ಕೆಲವು ಅನಧಿಕೃತ. ಇವುಗಳ ಕೆಲಸ ಇತಿಹಾಸವನ್ನು ತಿರುಚುವುದು, ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವುದು, ಮಹಾಪುರುಷರ ಸಂದೇಶಗಳನ್ನು ತಪ್ಪಾಗಿ ಬರೆದು ತಮ್ಮ ಪರವಾಗಿ ತಿದ್ದುವುದು, ವಿರೋಧಿಗಳನ್ನು ದೇಶದ್ರೋಹಿಗಳಂತೆ ಚಿತ್ರಿಸುವುದು, ಇಲ್ಲಸಲ್ಲದ ಆರೋಪಗಳನ್ನು ಜಾಣ್ಮೆಯಿಂದ ಇತರರ ತಲೆಗೆ ಕಟ್ಟುವುದು.

ಪೋಟೋ ಶಾಪ್ ಸಂಕಲನ ತಂತ್ರದಿಂದ ಯಾರದೋ ತಲೆಗೆ ಇನ್ಯಾರನ್ನೋ ಜೋಡಿಸುವುದು, ಸುಳ್ಳು ಧ್ವನಿ ಸುರಳಿಗಳನ್ನು ಪ್ರಸಾರ ಮಾಡುವುದು, ಇತ್ತೀಚೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಸ್ಲಿಂಮನೊಬ್ಬ ಹಿಂದೂ ವೇಷ ಧರಿಸಿ, ಹಿಂದೂ ಒಬ್ಬ ಮುಸ್ಲಿಂ ವೇಷ ಧರಿಸಿ ಅನಾಹುತಕಾರಿಯಾಗಿ ಮಾತನಾಡುವುದು ಮುಂತಾದ ಅನೇಕ ಕುತಂತ್ರಗಳನ್ನು ಹರಿಯ ಬಿಡುತ್ತಾರೆ. ಇದು ಕೊನೆಗೆ ನಿಜ ಮತ್ತು ಸುಳ್ಳುಗಳ ನಡುವಿನ ವ್ಯತ್ಯಾಸಗಳನ್ನೇ ಗೊಂದಲಗೊಳಿಸಿದೆ. ಅದರ ಲಾಭವನ್ನು ಅವು ಪಡೆದರೆ ನಷ್ಟ ಮಾತ್ರ ಜನರ ಪಾಲಿಗೆ.

ಹಾಗಾದರೆ ಸುದ್ದಿಗಳ ನಿಖರತೆಯನ್ನು ಗುರುತಿಸುವುದು ಹೇಗೆ ?

ನೋಡಿ ಈಗಿನ ವ್ಯವಸ್ಥೆಯಲ್ಲಿ ಇದಕ್ಕೆ ದಿಡೀರನೇ ಒಂದು ಸ್ಪಷ್ಟ ಪರಿಹಾರ ಸಿಗುವುದಿಲ್ಲ. ಸತ್ಯ ಹರಿಶ್ಚಂದ್ರರ ಉಗಮವೂ ಆಗುವುದಿಲ್ಲ. ಇರುವುದರಲ್ಲಿ ನಾವು ಒಪ್ಪಬಹುದಾದ ಒಂದು ಸರಳ ಪರಿಹಾರವೆಂದರೆ..

ಏನೇ ಆಪಾದನೆಗಳು, ಪಕ್ಷಪಾತಗಳು, ವಿವೇಚನಾರಹಿತ ವಿಮರ್ಶೆಗಳು, ಸ್ಪರ್ಧಾತ್ಮಕ ತಂತ್ರಗಳು ಇದ್ದರೂ ಈಗಲೂ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಹೆಚ್ಚು ಕಡಿಮೆ ‌ನಂಬಲರ್ಹ ಸುದ್ದಿಗಳು ಪ್ರಸಾರವಾಗುತ್ತವೆ. ಅಧೀಕೃತ ಸುದ್ದಿ ಸಂಸ್ಥೆಗಳು, ಸರ್ಕಾರದ ಆಡಳಿತ ವ್ಯವಸ್ಥೆ, ಪೋಲೀಸ್, ಮುಂತಾದ ಎಲ್ಲವೂ ಮೊದಲು ಸುದ್ದಿಗಳನ್ನು ಇವುಗಳಿಗೆ ಕಳುಹಿಸುತ್ತವೆ‌.

ಈ ಮಾಧ್ಯಮಗಳಿಗೆ ಗೊತ್ತಿಲ್ಲದ ವಿಶ್ವದ ಯಾವುದೇ ದೊಡ್ಡ ಘಟನೆಗಳು ಇರುವುದೇ ಇಲ್ಲ. ಏನೇ ಅಪರಾಧ, ಅಪಘಾತ, ಅವಘಡ, ಸಾಧನೆ, ಪತನ, ಕ್ರಾಂತಿ, ಬದಲಾವಣೆ ಎಲ್ಲವೂ ಬಹುತೇಕ ಮಾಧ್ಯಮಗಳಿಗೆ ತಿಳಿಸಲಾಗುತ್ತದೆ. ಹಾಗೆಂದು ಸಂಪೂರ್ಣ ಎಲ್ಲವೂ ಎಂದು ಅಲ್ಲ.

ಕೆಲವು ಅಪರೂಪದ, ಕುತಂತ್ರದ, ಜನರಿಗೆ ಮರೆಮಾಚಿದ ಸುದ್ದಿಗಳು ಇರುತ್ತವೆ. ಆದರೆ ಅದು ಬಯಲಾಗುವುದು ಸಹ ಮಾಧ್ಯಮಗಳಿಂದಲೇ. ಯಾರೋ ಒಬ್ಬ ಜನಪ್ರಿಯ ವ್ಯಕ್ತಿಯ ಸಾವು ಮೊದಲು ಅಲ್ಲಿನ ಸ್ಥಳೀಯ ಜನರಿಗೆ ತಲುಪಿ, ಸಾಮಾಜಿಕ ಜಾಲತಾಣಗಳಲ್ಲಿ ಬಂದರೂ ಕೆಲವೇ ಕ್ಷಣಗಳಲ್ಲಿ ಮಾಧ್ಯಮಗಳಲ್ಲಿ ಬಂದೇ ಬರುತ್ತದೆ.

ಹಾಗೆಯೇ ಈ ಮಾಧ್ಯಮಗಳಲ್ಲಿ ಒಂದಷ್ಟು ಊಹೆ, ಆತುರ, ಕೆಟ್ಟ ವಿಮರ್ಶೆ, ವ್ಯಕ್ತಿ ನಿಂದನೆ ಇರುತ್ತದೆ. ಆದರೆ ತಲೆಬುಡವಿಲ್ಲದ ಅತ್ಯಂತ ಅಪಾಯಕಾರಿ ಸುದ್ದಿಗಳನ್ನು ಪ್ರಸಾರ ಮಾಡಲು ಭಯಪಡುತ್ತಾರೆ. ಏಕೆಂದರೆ ಅವರು ಸುದ್ದಿಗಳನ್ನು ಖಚಿತ ಪಡಿಸಿಕೊಳ್ಳುವ ವ್ಯವಸ್ಥೆ ಹೊಂದಿದ್ದಾರೆ ಮತ್ತು Accountability ಇದೆ. ಅವರ ಮೇಲೆಯೂ ಮಾನಹಾನಿ ಮೊಕದ್ದಮೆ ಹೂಡಬಹುದು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ರೀತಿಯ ವ್ಯವಸ್ಥೆ ಇಲ್ಲ. ಯಾರೋ ಒಬ್ಬ ವ್ಯಕ್ತಿ ವೈಯಕ್ತಿಕ ಸಂದೇಶವನ್ನು ಅಥವಾ ದೃಶ್ಯಗಳನ್ನು ಬೇಕಂತಲೇ ಹರಿಯ ಬಿಡಬಹುದು. ಅದು ಹೊಸದೋ ಹಳೆಯದೋ ನಿಜವೋ ಸುಳ್ಳೋ ಯಾರಿಗೂ ತಿಳಿಯುವುದಿಲ್ಲ ಮತ್ತು ಅದಕ್ಕೆ ಯಾರೂ ಜವಾಬ್ದಾರರಿರುವುದಿಲ್ಲ. ನೀವು ಯಾರನ್ನು ಪ್ರಶ್ನಿಸಲು ಸಿಗುವುದಿಲ್ಲ.

ಈಗ ಕೊರೋನಾ ವೈರಸ್ ದಾಳಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೆಲವು ನಿಭಂದನೆಗಳನ್ನು ವಿಧಿಸಿದೆ ಎಂಬ ಮಾಹಿತಿ ಇದೆ. ಇದು ಹೊಸದೇನು ಅಲ್ಲ. ಎಂದಿನಂತೆ ಸುಳ್ಳು ಪ್ರಚೋದನಕಾರಿ ವಿಷಯಗಳಿಗೆ ಮಾತ್ರ ಸಂಬಂಧಿಸಿದೆ. ಸತ್ಯವನ್ನು, ಸ್ವತಂತ್ರ ಅಭಿಪ್ರಾಯವನ್ನು,
ಅಧೀಕೃತ ಮಾಹಿತಿಯನ್ನು ಕಾನೂನು ಮತ್ತು ನೈತಿಕತೆಯ ಮಿತಿಯೊಳಗೆ ವ್ಯಕ್ತಪಡಿಸಲು ಯಾವುದೇ ಅಂಜಿಕೆ ಬೇಡ.

Forward ಮಾಡುವ ವಿಷಯದಲ್ಲಿ ಮಾತ್ರ ಜಾಗೃತವಾಗಿರಿ. ಒಂದು ವೇಳೆ ಸುದ್ದಿಯೊಂದು ಮಾಧ್ಯಮಗಳಲ್ಲಿ ಪ್ರಸಾರವಾಗದೆ ಕೇವಲ ಜಾಲತಾಣಗಳಲ್ಲಿ ಮಾತ್ರ ಹರಿದಾಡುತ್ತಿದ್ದರೆ ಅದನ್ನು ಅಷ್ಟಾಗಿ ನಂಬಬಾರದು ಮತ್ತು Forward ಮಾಡಬಾರದು. ಯಾರೋ ‌ದೇಶಭಕ್ತಿಯ ಹೆಸರಿನಲ್ಲಿ, ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಏನನ್ನೋ ಹೇಳಿದರೆ ಅದನ್ನು ಓದಬಹುದೇ ಹೊರತು Forward ಮಾಡಬಾರದು.

ಬೇಕಾದರೆ ಅದರ ಸಾರಾಂಶವನ್ನು ಸ್ವತಂತ್ರ ಅಭಿಪ್ರಾಯದೊಂದಿಗೆ ಮತ್ತು ಒಂದು ಅನುಮಾನದೊಂದಿಗೆ ಸ್ವತಃ ಬರೆಯಬಹುದು. ಕರೋನ ಔಷಧಿ, ಸಾವಿನ ಅಂಕಿ ಸಂಖ್ಯೆಗಳು ಮುಂತಾದ ವಿಷಯಗಳ ಬಗ್ಗೆ ಯಾವುದೇ ಸಂದೇಶ ಕಳಿಸಬಾರದು. ಹೊಸ ಸಂಶೋಧನಾ ವರದಿ ಸರ್ಕಾರಕ್ಕೆ ಮಾತ್ರ ಕಳುಹಿಸಿ.

ಸುಳ್ಳುಗಳನ್ನೇ ಧೈರ್ಯವಾಗಿ ರಾಜಾರೋಷವಾಗಿ ಪ್ರಸಾರ ಮತ್ತು ಪ್ರಚಾರ ಮಾಡುವ ಸಂದರ್ಭದಲ್ಲಿ, ಅದರ ಮುಖಾಂತರವೇ ಸಮಾಜವನ್ನು ನಿಯಂತ್ರಣ ಪಡೆಯುವ ಸಮಯದಲ್ಲಿ ಸತ್ಯ ಹೇಳುವವರು ಹೆದರಿಕೊಳ್ಳಬಾರದು. ಸುಳ್ಳು ಸತ್ಯವನ್ನು ಸೋಲಿಸಲು ಬಿಡಬಾರದು.

ಖಂಡಿತವಾಗಿಯೂ ಸತ್ಯ ಸುಳ್ಳಿಗಿಂತ ಹೆಚ್ಚು ಬಲಶಾಲಿ ಮತ್ತು ಪರಿಣಾಮಕಾರಿ. ಆದರೆ ನಾವು ನಿಜಕ್ಕೂ ಪ್ರಾಮಾಣಿಕರಾಗಿರಬೇಕು ಮತ್ತು ಗಟ್ಟಿ ವ್ಯಕ್ತಿತ್ವ ಹೊಂದಿರಬೇಕು. ನಮಗೆ ಅನುಕೂಲಕರ ಮುಖವಾಡ ತೊಟ್ಟು ಸತ್ಯವನ್ನು ‌ಸಮರ್ಥಿಸಲು ಸಾಧ್ಯವಿಲ್ಲ. ನಮ್ಮ ನಡೆ ನುಡಿ ನೇರವಾಗಿದ್ದರೆ ಸುಳ್ಳನ್ನು ಗೆಲ್ಲುಬಹುದು.

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ ‘ಅಲ್ಲಮಪ್ರಭು’

ಆದ್ದರಿಂದ ವ್ಯವಸ್ಥೆ ಯಾವುದೇ ಇರಲಿ, ಮಾಧ್ಯಮ ಯಾವುದೇ ಇರಲಿ, ಕಾನೂನು ಏನೇ ಹೇಳಲಿ, ಸುಳ್ಳು ಪ್ರಚೋದನೆ ಅನೈತಿಕತೆ ಖಂಡಿತ ಶಿಕ್ಷಾರ್ಹ ಅಪರಾಧ ಮತ್ತು ಅಮಾನವೀಯ ಹಾಗೂ ದೇಶದ್ರೋಹ. ಆದರೆ ಸತ್ಯಕ್ಕೆ, ಸಮಾಜ ಒಪ್ಪಿತ, ಕಾನೂನಿನ ವ್ಯಾಪ್ತಿಯ ನೈತಿಕತೆಗೆ ಯಾವುದೇ ತಡೆ ಇಲ್ಲ.

ಸಾಮಾನ್ಯ ಜ್ಞಾನ ಇಲ್ಲಿ ಮುಖ್ಯ

ಸಾಮಾಜಿಕ ಜಾಲತಾಣಗಳು ಸಾಮಾನ್ಯ ಜನರ ಪ್ರಜಾಪ್ರಭುತ್ವದ ಒಂದು ಅತ್ಯುತ್ತಮ ವೇದಿಕೆ. ಅದರ ಧ್ವನಿ ಅಡಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು. ಕೆಟ್ಟದ್ದರ ನೆಪದಲ್ಲಿ ಒಳ್ಳೆಯದನ್ನು ನಾಶ ಮಾಡುವುದು ಬೇಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿಶ್ವ ಮೊಸಳೆಗಳ ದಿನ ; ಮೊಸಳೆ ಬಗ್ಗೆ ನಿಮಗಿಷ್ಟು ತಿಳಿದಿರಲಿ

Published

on

  • ಸಂಜಯ್ ಹೊಯ್ಸಳ

ಪ್ರತಿ ವರ್ಷದ ಜೂನ್ 17 ನ್ನು ವಿಶ್ವ ಮೊಸಳೆ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಲ್ಲಿ ಪ್ರಮುಖವಾಗಿ 24 ಜಾತಿಯ ಮೊಸಳೆಗಳಿದ್ದು, ಭಾರತದಲ್ಲಿ ಸದ್ಯಕ್ಕೆ 3 ಪ್ರಬೇಧದ ಮೊಸಳೆ ಸಂತತಿಗಳಿವೆ. ಅವುಗಳೆಂದರೆ..

ಉಪ್ಪು ನೀರಿನ ಮೊಸಳೆ (Saltwater crocodile) 
ಮಗ್ಗರ್/ಮಾರ್ಷ್ (Mugger)
ಘಾರಿಯಲ್ (Gharial)

ಇವುಗಳಲ್ಲಿ ಕರ್ನಾಟಕದಲ್ಲಿನ ನದಿಗಳಲ್ಲಿ, ಕೆಲವು ದೊಡ್ಡ ಕೆರೆಗಳಲ್ಲಿ ಕಂಡುಬರುವ ಮೊಸಳೆಗಳು ಮಗ್ಗರ್/ಮಾರ್ಷ್ ಮೊಸಳೆಗಳಾಗಿವೆ. ಕರ್ನಾಟಕದಲ್ಲಿ ಮೊಸಳೆಗಳು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಪಾತ್ರದಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಮೊಸಳೆಯ ದವಣೆಗೆ ಸಿಲುಕಿ‌ ಕೆಲವು ಸಾವು ನೋವಿನ ಪ್ರಕರಣಗಳು ಆ ಭಾಗದಲ್ಲಿ ವರದಿಯಾಗಿವೆ‌.

ಇನ್ನು ಉತ್ತರ ಕರ್ನಾಟಕದ ಭಾಗದ ಕೆಲವು ಪ್ರಮುಖ ನದಿಗಳ ಪಾತ್ರದಲ್ಲೂ ಮೊಸಳೆಗಳು ಆಗಾಗ್ಗೆ ಕಂಡುಬರುತ್ತವೆ. ನಾನು ನೋಡಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಮೊಸಳೆಗಳ ದಾಳಿ ಪ್ರಕರಣಗಳು ತುಂಬಾ ಕಡಿಮೆ ಎನ್ನಬಹುದು. ಈ‌ ಭಾಗದ ನದಿಗಳಲ್ಲಿ ಮೊಸಳೆಗಳ ಸಂಖ್ಯೆ ಕಡಿಮೆ ಇರುವುದು ಇದಕ್ಕೆ ಕಾರ ಇರಬಹುದು.

ಕಾವೇರಿ ನದಿಯಲ್ಲಿ ಅತಿಹೆಚ್ಚು ಮೊಸಳೆಗಳು‌ ಕಂಡು ಬರುವುದು ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ವಿಶ್ವವಿಖ್ಯಾತ ಪಕ್ಷಿ ಧಾಮವಾದ ರಂಗನತಿಟ್ಟು ಪಕ್ಷಿಧಾಮದಲ್ಲಿ. ಹಿಂದೆ ಪಂಚತಂತ್ರದಲ್ಲಿ ಮೊಸಳೆ ಮತ್ತು ಕೋತಿ‌ಕತೆಯಲ್ಲಿ ಮೊಸಳೆಯ ಹೆಂಡತಿಗೆ ಕೋತಿ‌ ನೇರಳೆ ಹಣ್ಣುಗಳನ್ನು ಹೊತ್ತೊಯ್ಯುವ ಕತೆಯಲ್ಲಿ ಗಂಡ ಮತ್ತು‌ ಹೆಂಡತಿ‌ ಮೊಸಳೆಯನ್ನು ಕಲ್ಪಿಸಿಕೊಂಡು ಮಾತ್ರ ನಾನು ಮೊದಲು ಅವುಗಳ ಸಹಜ ಆವಾಸಸ್ಥಾನದಲ್ಲಿ ಮೊಸಳೆಯನ್ನು ನೋಡಿದ್ದು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ. ನಂತರ ಬಂಡೀಪುರ ದಟ್ಟಡವಿಯಲ್ಲಿ ಹರಿಯುವ ಮೂಲೆಹೊಳೆ/ ನುಗು ನದಿಯಲ್ಲಿ…‌ ನಂತರದ ದಿನಗಳಲ್ಲಿ ಕಬಿನಿ, ಪಾಲರ್ ಸೇರಿ ಬಹಳಷ್ಟು ಕಡೆ ಬಹಳಷ್ಟು ಮೊಸಳೆಗಳನ್ನು ನೋಡುವ ಅವಕಾಶ ಸಿಕ್ಕಿತು.

ಘಾರಿಯಲ್ ಗಳು ತುಂಬಾ ಅಪರೂಪದ ಮೊಸಳೆ ಸಂತತಿಗಳಾಗಿದ್ದು, ಸದ್ಯ ಉತ್ತರ ಭಾರತದ ಕೆಲವು ನದಿಗಳು ಹಾಗೂ ನೇಪಾಳದಲ್ಲಿ ಮಾತ್ರ ಇವು ಕಾಣಸಿಗುತ್ತಿವೆ. ಇವುಳನ್ನು IUCN red list ಗೆ ಸೇರಿಸಿದ್ದು, ಇವುಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಲಾಗಿದೆ.

ನಮಗೆಲ್ಲಾ ಗೊತ್ತಿರುವಂತೆ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಎಲ್ಲಾ ಜೀವಿಗಳ‌ ಇರುವಿಕೆ ಬಹಳ ಮುಖ್ಯ. ಜಲಚರಗಳಲ್ಲಿ ಅಗ್ರ ಪರಪಕ್ಷಕಗಳಲ್ಲಿ ಒಂದೆನಿಸಿದ ಮೊಸಳೆ ಜಲಚರ ಜೀವಿಗಳ ಸಮತೋಲನ ಸಾಧಿಸಿ ಅಲ್ಲಿನ ಜೀವವೈವಿಧ್ಯ ಕಾಪಾಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ನಾವು ಮೊಸಳೆಗಳನ್ನು ಕೂಡ ಇತರ ಪ್ರಾಣಿಗಳಂತೆ ರಕ್ಷಿಸಬೇಕು.

ಮುಖ್ಯವಾಗಿ ಅವುಗಳ ಆವಾಸಸ್ಥಾನವಾದ ನದಿ, ಸರೋವರದಂತಹ ಜಲಮೂಲಗಳನ್ನು ಸಂರಕ್ಷಿಸಬೇಕು. ಅಲ್ಲಿ ಅಕ್ರಮ ಮರಳುಗಾರಿಗೆ ತಡೆದು, ಜಲಮಾಲಿನ್ಯ ನಿಯಂತ್ರಣ ಮಾಡಬೇಕು. ಹಾಗೆ ಪ್ಲಾಸ್ಟಿಕ್ ತ್ಯಾಜ್ಯಗಳು ನದಿ, ಸರೋವರಗಳನ್ನು ಸೇರದಂತೆ ಕ್ರಮವಹಿಸಬೇಕು. ಹಾಗೆಯೇ ಎಲ್ಲಾದರೂ ಮೊಸಳೆಗಳು ಕಂಡುಬಂದರೆ ಗಾಬರಿಯಾಗದೆ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು. (ಬರಹ:ಸಂಜಯ್ ಹೊಯ್ಸಳ,ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

Published

on

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

“ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”

ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”

ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

Published

on

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಮೊನ್ನೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 8 ಸಾವಿರದ 500 ರೂಪಾಯಿಗಳನ್ನು ವರ್ಗಾವಣೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು, ರಾಜ್ಯದ ಜನರಿಗೆ ಹೊರೆಯಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ಇಂತಹ ನಿರ್ಧಾರ ಹಣದುಬ್ಬರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಬೂಟಾಟಿಕೆ ಬಹಿರಂಗಪಡಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಿಂದ 12 ರೂಪಾಯಿಗಳಷ್ಟು ಹೆಚ್ಚುವರಿ ವ್ಯಾಟ್ ಅನ್ನು ವಿಧಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಹಾಲಿನ ದರ, ಅಗತ್ಯ ವಸ್ತುಗಳ ದರ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದ ವ್ಯವಸ್ಥೆ ಕುಸಿದುಹೋಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ದರ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ಹಾಗೂ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೆ ವ್ಯಾಟ್ ಹೆಚ್ಚಳ ಮಾಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದ ತೆರಿಗೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending