Connect with us

ದಿನದ ಸುದ್ದಿ

ಆತ್ಮಕತೆ | ನಮ್ಮ ಬಿಆರ್‌ಪಿ ಸ್ನಾತಕೋತ್ತರ ಕೇಂದ್ರ

Published

on

  • ರುದ್ರಪ್ಪ ಹನಗವಾಡಿ

ದಟ್ಟ ಮಲೆನಾಡಲ್ಲದಿದ್ದರೂ ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದು ನಿಸರ್ಗ ಸೌಂದರ್ಯವನ್ನು ಹೆಚ್ಚಿಸುತ್ತಿತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಶಾಖೆಗಳಾಗಲೀ, ಒಂದು ಸ್ವತಂತ್ರ ವಿಶ್ವವಿದ್ಯಾಲಯವಾಗುವ ಯಾವ ತಯಾರಿಯೂ ಕಾಣುತ್ತಿರಲಿಲ್ಲ.

ಪ್ರಾರಂಭದಿಂದ ಇದ್ದ, ನಾಲ್ಕು ವಿಭಾಗಗಳು ಮತ್ತು 15-16ಜನ ಅಧ್ಯಾಪಕರುಗಳಾಗಿದ್ದನ್ನು ಬಿಟ್ಟರೆ ವಿಕಾಸದ ಯಾವ ಲಕ್ಷಣಗಳೂ ಇರಲಿಲ್ಲ. ನಾನು ಬಂದು ನಾಲ್ಕು ವರ್ಷಗಳಲ್ಲಿ ನನ್ನ ಜೀವನದಲ್ಲಿ ಮದುವೆ ಮತ್ತು ನಮಗೆ ಮಗುವಾದುದ್ದನ್ನು ಬಿಟ್ಟರೆ ಸ್ನಾತಕೋತ್ತರ ಕೇಂದ್ರದ ಬೆಳವಣಿಗೆಯಲ್ಲಿ ಮತ್ತೇನೂ ಬೆಳವಣಿಗೆಗಳು ನಡೆಯಲಿಲ್ಲ.

ಸ್ವಂತ ವಿಷಯದಲ್ಲಿ ನಾನು ಆರ್ಥಿಕ ಸಂಕಷ್ಟಕ್ಕೆ ಬಿದ್ದಿದ್ದೆ. ಮದುವೆಯಾಗುವ ಯಾವ ಪೂರ್ವಭಾವಿ ತಯಾರಿ ಇಲ್ಲದೆ ತಕ್ಷಣ ಆಗಬೇಕಾದ ಕಾರಣ ಸುಮಾರು 15 ಸಾವಿರದಷ್ಟು ವಿಶ್ವಾಸಿಕ ಸ್ನೇಹಿತರಿಂದ ಸಾಲ ಮಾಡಿದ್ದೆ. ಹೊಸ ಸಂಸಾರ ಹೂಡಿಕೆಗೆ ಬೇಕಾದ ಕನಿಷ್ಠ ಸೌಕರ್ಯಗಳೂ ಇಲ್ಲದೆ ಇದ್ದರೂ ಸದ್ಯ ಪಿಡಬ್ಲೂಡಿ ಕ್ವಾಟ್ರಸ್ ಒಂದನ್ನು ಅಲಾಟ್‌ಮೆಂಟ್ ಮಾಡಿಸಿಕೊಂಡಿದ್ದೆ. ಹಾಗಾಗಿ ಮದುವೆಯಾದಾಕ್ಷಣ ಉಳಿದುಕೊಳ್ಳಲು ಅದು ಅನುಕೂಲವಾಗಿತ್ತು. ಪ್ರಭು ಮತ್ತು ರೈತಸಂಘದ ಮಂಜಪ್ಪ, ಸ್ಟೀಲ್ ಅಂಗಡಿ ಶಾಂತು ಎಲ್ಲ ಶಿವಮೊಗ್ಗದಲ್ಲಿ ಪ್ರಭುವಿನ ಸ್ನೇಹಿತರಾಗಿದ್ದರು. ಬೇಕಾದ ಕನಿಷ್ಠ ಪಾತ್ರೆಗಳನ್ನು ಅವನ ಸ್ನೇಹಿತನಿಂದಲೇ ಸಾಲವಾಗಿ ತಂದಿದ್ದೆ. ಉಳಿದಂತೆ ಅವಶ್ಯ ಬಿದ್ದಾಗ ನನ್ನ ಸ್ನೇಹಿತರಾಗಿದ್ದ ಪ್ರಭು, ಜಿಎನ್‌ಕೆ ಜೊತೆ ಸಾಲ ಮಾಡಿ ತೀರಿಸೋ ವ್ಯವಸ್ಥೆಯಲ್ಲಿ ದಿನಗಳು ಕಳೆಯುತ್ತಿದ್ದವು.

ಆರ್ಥಿಕ ಸಂಕಷ್ಟ ಬಿಟ್ಟರೆ ನಮ್ಮಿಬ್ಬರ ಹೊಂದಾಣಿಕೆ ಅನನ್ಯವಾಗಿತ್ತು. ಬೇಂದ್ರೆಯವರ ಕವನದ ಸಾಲಿನಂತೆ
‘ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು’ ಎಂಬಂತೆ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೆವು.

ರಜಾ ದಿನಗಳಲ್ಲಿ ಬಿಆರ್‌ಪಿಯಲ್ಲಿ ಇದ್ದ ಟೆಂಟ್ ಸಿನಿಮಾಕ್ಕೆ ಇಲ್ಲವೇ ಶಿವಮೊಗ್ಗಕ್ಕೆ ರಾಜಕುಮಾರ್ ಅವರ ಹೊಸ ಸಿನಿಮಾಗಳಿಗೆ ಹೋಗಿ ಬರುತ್ತಿದ್ದೆವು. ಇಂದಿರಾ ಕೃಷ್ಣಪ್ಪನವರ ಭದ್ರಾವತಿ ಮನೆಗೆ ರಜಾ ದಿನಗಳಲ್ಲಿ ಹೋಗಿ ಬರುತ್ತಿದ್ದೆವು. ಮದುವೆಯಾದಾಕ್ಷಣ ಎಲ್ಲೂ ‘ಹನಿಮೂನ್’ಗೆಂದು ತಿರುಗಾಡಲು ಹೋಗಲಿಲ್ಲ. ಇದ್ದ ಸ್ನೇಹಿತರ ಮನೆ ಕಡೆಗೆ ಹೋಗಿ ಕಾಲ ಕಳೆದು ಬರುತ್ತಿದ್ದೆವು. ಕುಮ್ಮೂರ ಬಸವಣ್ಯಪ್ಪ, ಉಮಾ ಚಿತ್ರದುರ್ಗದಲ್ಲಿ ಇಬ್ಬರೂ ಜ್ಯೂನಿಯರ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಅವರ ಮನೆಯಲ್ಲಿ ಉಳಿದು ಚಿತ್ರದುರ್ಗದ ಕೋಟೆಯನ್ನು ಇಬ್ಬರೇ ಸುತ್ತಿಕೊಂಡು ಬಂದು ಮಾರನೆ ದಿನ ಚಳ್ಳಕೆರೆಗೆ ಹೋಗಿದ್ದೆವು.

ಚಳ್ಳಕೆರೆಯಲ್ಲಿ ಗಾಯತ್ರಿಯ ಸೀನಿಯರ್ ಮತ್ತು ನನ್ನ ಹಳೇ ವಿದ್ಯಾರ್ಥಿನಿ ಶಾರದಾ, ಡಾ. ಚಂದ್ರಶೇಖರ್ ಎಂಬ ಅವರ ಸೋದರ ಮಾವನನ್ನು ಮದುವೆಯಾಗಿ ಅಲ್ಲಿನ ಪಿಹೆಚ್‌ಸಿಯಲ್ಲಿ ಡಾಕ್ಟರ್ ಆಗಿ ಕೆಲಸದಲ್ಲಿದ್ದರು. ನಾವಿದ್ದ ಎರಡೂ ದಿನಗಳಲ್ಲ್ಲಿ ಅಕ್ಕರೆಯಿಂದ ವಿಶೇಷ ಅಡುಗೆ ಮಾಡಿ ತುಂಬ ವಾತ್ಸಲ್ಯದಿಂದ ನಮ್ಮನ್ನು ಸತ್ಕರಿಸಿದ್ದಳು. ಅವರಿಬ್ಬರ ಅಕ್ಕರೆಯ ಆತಿಥ್ಯ ನಾವಿಬ್ಬರೂ ಎಂದೂ ಮರೆಯಲಾಗದ ನೆನಪಾಗಿ ಉಳಿದಿದೆ. ಆ ನಂತರದ ದಿನಗಳಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಶಾರದ ಎಲ್ಲಿದ್ದಾರೆ ಎಂಬುದು ತಿಳಿಯದೆ 40 ವರ್ಷಗಳೇ ಕಳೆದು ಹೋಗಿದ್ದವು.

ಈಗ್ಗೆ ಎರಡು ವರ್ಷಗಳಲ್ಲಿ ಯರ‍್ಯಾರನ್ನೋ ಕೇಳಿ, ಅವರ ವಿಳಾಸ ಪಡೆದು ನಾವಿಬ್ಬರು ನೆನಪು ಮಾಡಿ ಮಾತಾಡಿದೆವು. ಮನೆಗೆ ಆಹ್ವಾನಿಸಿದ ಮೇರೆಗೆ ಇತ್ತೀಚೆಗಷ್ಟೆ ಬಂದು ಹೋಗಿದ್ದಳು. ಹೀಗೆ ಬಂದು ಹೋಗಿ 3 ತಿಂಗಳಲ್ಲಿ ಹೃದಯಾಘಾತದಿಂದ ಶಾರದಾ ತೀರಿಕೊಂಡಳು. ಇಷ್ಟು ದೀರ್ಘ ಕಾಲದ ಅಜ್ಞಾತವಾಸದ ಕಾರಣ ತಿಳಿದು ಬೇಸರವಾಗಿತ್ತು. ಶಾರದಾ-ಚಂದ್ರಶೇಖರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ಅಕಾಲಿಕ ಮರಣ ಹೊಂದಿದ್ದಳು.

ಇನ್ನೊಬ್ಬಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಳಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಗಂಡ ಡಾಕ್ಟರ್ ಆಗಿದ್ದರೂ ಮನೆಯಲ್ಲಿ ಒಂದು ಎಮ್ಮೆ ಸಾಕಿಕೊಂಡು ಮೇಯಿಸುತ್ತಾ ಗಂಡ ಮಕ್ಕಳಿಗೆ ಹಾಲು, ಮಜ್ಜಿಗೆ ಮಾಡಿ ಉಣಿಸುತ್ತಿದ್ದ ಶಾರದಾ ಅವರಿಗೆ ಬದುಕಿನಲ್ಲಿ ನೆಮ್ಮದಿಗಿಂತ ನೋವೇ ಜಾಸ್ತಿಯಾಗಿದ್ದೊಂದು ವಿಷಾದದ ಸಂಗತಿ. ಒಳ್ಳೆಯ ಮನಸ್ಸುಗಳಿಗೆ ನೋವುಗಳೇ ಹೆಚ್ಚೆಂಬುದು ಅವಳ ವಿಚಾರದಲ್ಲಿ ನಿಜವಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

Published

on

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಪ್ರೌಢಶಾಲೆಯ ಮಕ್ಕಳು ಭಾಗವಹಿಸಿದ್ದರು.

ತೀರ್ಪುಗಾರರ ಮೆಚ್ಚುಗೆ ಪಡೆದ ಸಿದ್ಧಗಂಗಾ ಸಂಸ್ಥೆಯ ನಯಾಸ ಡಿ.ಎಸ್.‌ ಪ್ರಥಮ ಬಹುಮಾನವಾಗಿ ಒಂದು ಸಾವಿರ, ದ್ವಿತೀಯ ಬಹುಮಾನ ಗಳಿಸಿದ ಜಾಹ್ನವಿ ರೂ. 750 ಮತ್ತು ತೃತೀಯ ಬಹುಮಾನ ಗಳಿಸಿದ ಚೈತನ್ಯ ವಿ. ಎಸ್‌. ರೂ. 500 ನಗದು ಬಹುಮಾನ ಪಡೆದರು. ಜೊತೆಗೆ ಈ ಮಕ್ಕಳಿಗೆ ಆಯೋಜಕರು ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಎಳೆಯರ ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹ ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯಪುಸ್ತಕಗಳ ಜೊತೆಗೆ ಉತ್ತಮ ಕಾದಂಬರಿಗಳು, ಕಥಾಸಂಕಲನಗಳು, ಸಾಧಕರ ಆತ್ಮಕಥೆ ಕುರಿತಾದ ಪುಸ್ತಕಗಳನ್ನು ಓದುವ ಹವ್ಯಾಸ ಅತ್ಯಂತ ಮಹತ್ವದ್ದು, ಓದಿನ ಮೂಲಕ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಚಿಂತನೆ, ವಿಶ್ಲೇಷಣೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆಯೂ ಇಂತಹ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹೆಚ್ಚಿನ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚಿತ್ರದುರ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಶಿವಸ್ವಾಮಿ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗಳಿಗೆ ಅಧಿಕೃತ ಟೆಂಡರುದಾರರಾದ ಶ್ರೀ ಶಿರಡಿ ಸಾಯಿ ಪ್ರಾವಿಜನ್ ಸ್ಟೋರ್, ಚಿಕ್ಕಬಳ್ಳಾಪುರ ಇವರು ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡದೆ ಇರುವ ಅಧಿಕೃತ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪ್ರಾಂಶುಪಾಲರುಗಳಿAದ ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದೃಢೀಕೃತ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಹಾರ ಸಾಮಾಗ್ರಿ ಸರಬರಾಜಿನಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿರುತ್ತವೆ.

ಆದ ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ನಾವು ದೂರು ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಯಾವುದೇ ಪ್ರತ್ಯುತ್ತರವನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ದಿನಾಂಕ: 21-04-2026 ರಂದು ಜ್ಞಾಪನವನ್ನು ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ ನಿಗಧಿತ ಅವಧಿ ಮುಕ್ತಾಯವಾದರೂ ಉಪ ನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ದೂರು ಅರ್ಜಿಗೆ ಸಂಬAಧಿಸಿದAತೆ ತನಿಖಾ ವರದಿಯನ್ನಾಗಲಿ ಅಥವಾ ಪ್ರತ್ಯುತ್ತರವನ್ನಾಗಲಿ ನೀಡಿರುವುದಿಲ್ಲ.

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರಿಗೆ ದೂರು ನೀಡಲಾಗಿತ್ತು. ಆದರೆ ಇವರು ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending