ದಿನದ ಸುದ್ದಿ
ಹುಟ್ಟು ಹಬ್ಬ | “ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ಸಿಡಿದೆದ್ದರೆ ನೀನು ನನ್ನ ಸಂಗಾತಿ”..! : ಚೆ ಗುವೆರಾ
- ಶಿವಸ್ವಾಮಿ, ಯುವಚಿಂತಕರು
“ನಾನು ಎಂದಿಗೂ ಸೋತು ಮನೆಗೆ ಹಿಂತಿರುಗುವುದಿಲ್ಲ, ಸೋಲಿಗಿಂತ ಸಾವನ್ನೆ ಹೆಚ್ಚು ಇಷ್ಟಪಡುತ್ತೇನೆ”. ಎಂದು ನಿರಂತರವಾಗಿ ಹೋರಾಡುತ್ತಲೇ ತನ್ನ ವಿರೋಧಿಗಳಿಗೆ ಸಿಂಹಸ್ವಪ್ನವಾಗಿ ಎಂದಿಗೂ ಸೋಲನ್ನು ಒಪ್ಪಿಕೊಳ್ಳದೆ ತನ್ನನ್ನು ತಾನೇ ಸಾವಿಗೆ ಅರ್ಪಿಸಿಕೊಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಗೆರಿಲ್ಲಾ ಯುದ್ಧ ತಂತ್ರದ ನಿಪುಣ, ವೈದ್ಯ, ಬರಹಗಾರ, ಬುದ್ಧಿಜೀವಿ ಹಾಗೂ ಕ್ಯೂಬಾ ಕ್ರಾಂತಿಯ ಪ್ರಮುಖ ನೇತಾರ ಅರ್ನೆಸ್ಟೋ ಚೆಗುವಾರ.
ಚೆಗುವಾರ ಹುಟ್ಟಿದ್ದು ಜೂನ್ 14, 1928ರಂದು ಲಿಂಚ್ ಮತ್ತು ಸೀಲಿಯಾ ಡ ಲಾ ಸೆರ್ನ್ ಎಂಬ ಸ್ಪ್ಯಾನಿಷ್ ಮತ್ತು ಐರಿಷ್ ದಂಪತಿಗಳ ಮಗನಾಗಿ ಅರ್ಜೆಂಟೀನಾದ ರೊಸಾರಿಯೋ ಪಟ್ಟಣದಲ್ಲಿ ಜನಿಸಿದನು.ಚೆಗುವರ ಚಿಕ್ಕಂದಿನಿಂದಲೇ ಶೋಷಿತ ಬಡವರ, ಶ್ರಮಿಕರ ಬಗ್ಗೆ ಅಪಾರವಾದ ಕಾಳಜಿ ಮತ್ತು ಪ್ರೀತಿಯನ್ನು ಬೆಳೆಸಿಕೊಂಡು ಎಡಪಂಥೀಯವಾದದ ಬಗ್ಗೆ ಒಲವು ಹೊಂದಿದ್ದ ಕುಟುಂಬದಲ್ಲಿ ಹುಟ್ಟಿಬೆಳೆದ ಅವನಿಗೆ ಚಿಕ್ಕಂದಿನಿಂದಲೇ ರಾಜಕೀಯ ದೃಷ್ಟಿಕೋನಗಳ ಬಗೆಗೆ ಪರಿಚಯವಾಗಿ ಗಣತಂತ್ರವಾದಿಗಳ ಪ್ರಬಲ ಸಮರ್ಥಕರಾಗಿದ್ದ ತಂದೆಯ ಪ್ರಭಾವ ಚೆಗುವಾರನ ಮೇಲೆ ಸಹಜವಾಗಿಯೇ ಬೀರಿತು.
19 ನೇಯ ವಯಸ್ಸಿನಲ್ಲಿಯೇ ವೈದ್ಯಕೀಯ ವೃತ್ತಿ ಕಲಿಕೆಗಾಗಿ ವಿಶ್ವವಿದ್ಯಾನಿಲಯಕ್ಕೆ ಪ್ರವೇಶಾತಿ ಪಡೆದು ಮತ್ತೆ ಒಂದು ವರ್ಷ ರಜೆ ಪಡೆದು ತನ್ನ ಮಿತ್ರ ಅಲ್ಬಟ್ರೋ ಗ್ರೆನಾಡೇ ಜೊತೆ ಸೇರಿ ಮೋಟಾರ್ ಸೈಕಲ್ ಮೂಲಕ ದಕ್ಷಿಣ ಅಮೇರಿಕಾ ಪ್ರವಾಸ ಮಾಡುತ್ತಾನೆ ತಾನೊಬ್ಬ ಕ್ರಾಂತಿಕಾರಿಯಾಗಲು ಈ ಪ್ರವಾಸದ ಅನುಭವಗಳೇ ಕಾರಣವೆಂದು ಅವನೇ ಬರೆದುಕೊಂಡಿದ್ದಾನೆ.
ದಕ್ಷಿಣ ಅಮೆರಿಕಾದ ಆಂಡೀಸ್ ಪರ್ವತದ ಮಾಚು ಪಿಚುವಿಗೆ ಹೋಗುವ ದಾರಿಯಲ್ಲಿ ಶ್ರೀಮಂತ ಭೂ ಮಾಲೀಕರಿಂದ ತುಂಡು ತುಂಡು ಭೂಮಿಗಳನ್ನು ಪಡೆದು ಕೃಷಿ ಮಾಡುತಿದ್ದ ರೈತಾಪಿ ಜನರ ಕಡುಬಡತನದ ಹೀನಾಯ ಬದುಕಿನ ಸ್ಥಿತಿಯನ್ನು ಹತ್ತಿರದಿಂದ ಕಂಡು ನಾನು ಈ ಜನರಿಗೆ ಏನಾದರೂ ಸಹಾಯ ಮಾಡಬೇಕೆಂದರೆ ನನ್ನ ವೈದ್ಯಕೀಯ ಅಭ್ಯಾಸವನ್ನು ಬಿಟ್ಟು ಸಶಸ್ತ್ರ ಹೋರಾಟದ ಮೂಲಕ ರಾಜಕೀಯ ರಂಗವನ್ನು ಪ್ರವೇಶಿಸಬೇಕೆಂದು ಮನವರಿಕೆಯಾಯಿತು ಎಂದು ತನ್ನ ಮೋಟಾರ್ ಸೈಕಲ್ ಡೈರಿಯಲ್ಲಿ ಬರೆದುಕೊಳ್ಳುತ್ತಾನೆ.
ಮೋಟಾರ್ ಸೈಕಲ್ ಪ್ರವಾಸ ಚೆಗುವಾರನ ಕ್ರಾಂತಿಕಾರಿ ಬದುಕಿನ ಒಂದು ದೊಡ್ಡ ತಿರುವು ಪ್ರವಾಸದ ಜೊತೆಗಾರ ಅಲ್ಬಟ್ರೋ ಗ್ರಾನಡಾಸ್ ಚೆಗುವಾರನ ಕುರಿತು ಹೇಳುತ್ತಾ…ಟೆಟೆ (ಚೇ ನನ್ನನ್ನು ಪ್ರೀತಿಯಿಂದ ಕರೆಯುತಿದ್ದ ಹೆಸರು )ನನ್ನು ನಾನು ಮೊದಲು ಭೇಟಿಯಾಗಿದ್ದು 1941 ರಲ್ಲಿ ನನ್ನ ಸಹೋದರ ಥಾಮಸ್ ಮೂಲಕ ನನಗಾಗ 13 ವರ್ಷ ನಮ್ಮಿಬ್ಬರನ್ನು ಒಟ್ಟಿಗೆ ಕೂಡಿಸಿದ ವಿಷಯವೆಂದರೆ ‘ಓದುವ ಅಭಿರುಚಿ ಮತ್ತು ನಿಸರ್ಗ ಪ್ರೇಮ’ ಚೇ…ಮನೆಗೆ ಪ್ರತಿದಿನ ಭೇಟಿ ನೀಡಿದಾಗಲೂ ನನ್ನನ್ನು ಆಕರ್ಷಿಸಿದ್ದ ಅಲ್ಲಿನ ಅಪಾರವಾದ ಗ್ರಂಥಭಂಡಾರವನ್ನು ನನ್ನದೆಂಬಂತೆ ಬಳಸುಕೊಳ್ಳುತಿದ್ದೆ.
ನಾವು ಎಷ್ಟೋ ರಾತ್ರಿಗಳನ್ನ ಚೆರ್ಚೆಗಳಲ್ಲಿ ಕಳೆದಿದ್ದೇವೆ, ಒಮ್ಮೆ ವಿದ್ಯಾರ್ಥಿ ಚಳುವಳಿಯಲ್ಲಿ ನನ್ನ ಬಂಧನವಾಯಿತು ಆಗ ನನ್ನ ಸಹೋದರ ಥಾಮಸ್ ಜೊತೆ ಚೆಗುವಾರ ನನ್ನ ನೋಡಲು ಪೊಲೀಸ್ ಠಾಣೆಗೆ ಬಂದಿದ್ದ ನಾನು ಅವನ ಜೊತೆ ಮಾತನಾಡುತ್ತಾ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಕರೆತರುವಂತೆ ನಾನು ಅವನಿಗೆ ಹೇಳಿದೆ, ಅದಕ್ಕೆ ಅವನು ಹೇಳಿದ ಮಾತು ಬೀದಿಗಿಳಿಯಿರಿ ಎಂದು ಹೇಳುತಿದ್ದೀರಲ್ಲ!ಪೊಲೀಸರೆಲ್ಲ ನಮ್ಮ ಮೇಲೆ ದೊಣ್ಣೆಗಳಿಂದ ಸರಿಯಾಗಿ ಬಾರಿಸಲಿ ಅಂತಲೋ! ಅದೆಲ್ಲ ಆಗುವುದಿಲ್ಲ,ನನಗೆ ಪಿಸ್ತೂಲು ಕೊಟ್ಟರೆ ಮಾತ್ರ ನಾನು ಬೀದಿಗಿಳಿಯುತ್ತೇನೆ ಎಂದಿದ್ದ ಅದೆಷ್ಟೋ ! ನೆನಪುಗಳು ನನ್ನೊಂದಿಗಿವೆ.
ಚೆಗುವಾರ 1953 ರಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿ ಮತ್ತೆ ಪ್ರವಾಸ ಹೊರಟು ಗ್ವಾಟಮಾಲಕ್ಕೆ ಬರುತ್ತಾನೆ ಅಲ್ಲಿ ಯುದ್ಧದಲ್ಲಿ ಮುಳುಗಿದ ದೇಶವೊಂದರ ಅನುಭವ ದೊರೆಯುತ್ತದೆ, ನಂತರ 1954 ರಲ್ಲಿ ಅರ್ಬೆನ್ಜ್ ರ ಸಮಾಜವಾದಿ ಸರ್ಕಾರದ ವಿರುದ್ಧ CIA ಪ್ರೇರಿತ ಕ್ಷಿಪ್ರ ಕ್ರಾಂತಿಯನ್ನು ಕಣ್ಣಾರೆ ಕಂಡು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳನ್ನು ರೂಪಿಸಲು ಲ್ಯಾಟಿನ್ ಅಮೆರಿಕಾದಂತಹ ಯಾವುದೇ ಸರ್ಕಾರವನ್ನು ಅಮೆರಿಕಾದಂತ ಸಾಮ್ರಾಜ್ಯ ಷಾಹಿ ದೇಶ ವಿರೋಧಿಸುತ್ತದೆ ಮತ್ತು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಯಥಾಸ್ಥಿಯಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಚೆಗುವಾರ ಸೂಕ್ಷ್ಮವಾಗಿ ಗ್ರಹಿಸಿದರು.
ಇಂತಹ ಸ್ಥಿತಿಯನ್ನು ಸರಿಪಡಿಸಲು ‘ಸಶಸ್ತ್ರ ಹೋರಾಟದ ಬುಲೆಟ್ ಕ್ರಾಂತಿಯೊಂದೇ ಮದ್ದು‘ಚೆಗುವಾರ ಯೋಚಿಸುತ್ತಾನೆ ನಂತರ ಗ್ವಾಟೆಮಾಲಾದಿಂದ ಹೊರಬಂದು ಚೆಗುವಾರ ಫಿಡೆಲ್ ಕ್ಯಾಸ್ಟ್ರೋರೊಂದಿಗೆ ಜೊತೆಯಾಗಿ ಕ್ಯೂಬಾದ ಸರ್ವಾಧಿಕಾರಿ ಜನರಲ್ ಪುಲ್ಗೆನ್ಸಿಯೋ ಬಟಿಸ್ಟಾ ರ ವಿರುದ್ಧ ಸೇನಾ ದಂಡಾಯಾತ್ರೆ ಕೈಗೊಳ್ಳುವ ಯೋಜನೆ ರೂಪಿಸಿ, 1956 ರಲ್ಲಿ ಚೆಗುವಾರ ಮತ್ತು ಕ್ಯಾಸ್ಟ್ರೊ ಒಂದಾಗಿ ಹಲವು ಹೋರಾಟಗಾರರೊಂದಿಗೆ ಜನರಲ್ ಬಟಿಸ್ಟಾ ನ ಸರ್ಕಾರವನ್ನು ಕಿತ್ತೊಗೆಯಲು ಕ್ಯೂಬಾಕ್ಕೆ ಬಂದು ಸಿಯೆರಾ ಮತ್ತು ಮೈ ಸ್ಟ್ರಾ ಪರ್ವತಗಳಲ್ಲಿ ಅಡಗಿಕೊಳ್ಳುತ್ತಾರೆ.
ಇದರ ಅರಿವಾಗಿ ಎಚ್ಚೆತ್ತ ಬಟಿಸ್ಟಾ ಸರ್ಕಾರ ಹೆಚೆಚ್ಚು ಸೈನಿಕ ಪಡೆಗಳನ್ನು ಸಜ್ಜುಗೊಳಿಸಿ ಚೆಗುವಾರ ಮತ್ತು ಕ್ಯಾಸ್ಟ್ರೋ ನೇತೃತ್ವದ ಕ್ರಾಂತಿಕಾರಿಗಳನ್ನು ಸದೆಬಡಿಯಲು 10 ಸಾವಿರ ಸೈನಿಕ ಪಡೆಗಳನ್ನು ನಿಯೋಜಿಸುತ್ತಾನೆ ಕ್ರಾಂತಿಕಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲೇಂದೆ ಸರ್ಕಾರಿ ಸೈನಿಕರು ಸಾಮಾನ್ಯ ಜನರನ್ನು ವಿಚಾರಣೆಗೆಂದೇ ಎಳೆದೊಯ್ಯುತ್ತಿದ್ದರು. ಜೊತೆಗೆ ಅಮಾಯಕರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಮಕ್ಕಳನ್ನೂ ಒಳಗೊಂಡಂತೆ ಶಂಕಿತರನ್ನು ಸಾರ್ವಜನಿಕವಾಗಿ ಕೊಲೆಗೈದು ಅವರ ಶವಗಳನ್ನು ಬೀದಿಗಳಲ್ಲಿ ಸಾರ್ವಜನಿಕವಾಗಿ ನೇತು ಹಾಕುತ್ತಿದ್ದರು.
ಅಂದರೆ ಸಾಮಾನ್ಯ ಜನರು ಕ್ರಾಂತಿಕಾರಿಗಳ ಜೊತೆ ಸೇರದಂತೆ ಎಚ್ಚರಿಕೆ ನೀಡುವುದು ಮತ್ತು ಭಯ ಹುಟ್ಟಿಸುವುದು ಇದರ ಉದ್ದೇಶವಾಗಿತ್ತು. ಸರ್ವಾಧಿಕಾರಿ ಬಟಿಸ್ಟಾನ ಈ ವರ್ತನೆಗಳಿಂದ ಗೆರಿಲ್ಲಾ ಹೋರಾಟಗಾರರಿಗೆ ಬೆಂಬಲ ಇನ್ನಷ್ಟು ಹೆಚ್ಚಾಗುತ್ತಲೇ ಹೋಯಿತು. ಉದಾಹರಣೆ ವಕೀಲರು, ವಾಸ್ತುಶಿಲ್ಪಿಗಳು, ವೈದ್ಯರು, ಆಕೌಟೆಂಟ್‍ಗಳು ಸಾಮಾಜಿಕಕರ್ತರು ಮುಂತಾದ ಸುಮಾರು 45 ಸಂಘಟನೆಗಳು ಜುಲೈ 26ರ ಚಳುವಳಿಗೆ ಬೆಂಬಲ ಘೋಷಿಸಿದವು. ಅಮೇರಿಕಾ ಸರ್ವಾಧಿಕಾರಿ ಬಟಿಸ್ಟಾಗೆ, ವಿಮಾನ, ಹಡಗು, ಟ್ಯಾಂಕ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಒದಗಿಸಿತು.
‘ನಾಪಾಂಬಾಂಬಿ’ನಂತಹ ವಿನಾಶಕಾರಿ ಅಸ್ತ್ರಗಳು ಇದ್ದಾಗಲೂ ಬಟಿಸ್ಟಾನಿಂದ ಗೆರಿಲ್ಲಾ ಹೋರಾಟಗಾರರನ್ನು ಸೋಲಿಸಲು ಸಾಧ್ಯವಾಗಲಿಲ್ಲ. 1958 ಮಾರ್ಚ್ ಚುನಾವಣೆಗಳನ್ನು ಸರ್ವಾಧಿಕಾರಿ ಬಟಿಸ್ಟಾ ವಿರುದ್ಧ ಕ್ಯೂಬಾ ಜನತೆ ಬಹಿಷ್ಕರಿಸಿತು. ರಾಜಧಾನಿ ಹವಾನದಲ್ಲಿ 75% ಚುನಾವಣಾ ಬಹಿಷ್ಕಾರ ಇದ್ದರೆ ಸ್ಯಾಂಟಿಯಾಗೋ ನಗರದಲ್ಲಿ ಶೇ 98% ರಷ್ಟು ಬಹಿಷ್ಕಾರಗಳು ನಡೆದವು. ಇದೇ ಸಂದರ್ಭದಲ್ಲಿ ಕ್ರಾಂತಿಕಾರಿಗಳು ಬಟಿಷ್ಟಾನನನ್ನು ನೇರವಾಗಿ ಸೋಲಿಸಲು ಮುಖ್ಯ ನಗರಗಳಿಗೆ ಬಂದರು.
ಆದರೆ ಸರ್ವಾಧಿಕಾರಿ ಬಟಿಷ್ಟಾ ಅಮೆರಿಕಾದೊಂದಿಗೆ ಸಮಾಲೋಚಿಸಿ ದೇಶಬಿಟ್ಟು ಪಲಾಯನ ಮಾಡಿದ. 1958 ಡಿಸೆಂಬರ್ 31ರಂದು ಬಟಿಸ್ಟಾ ದುರಾಡಳಿತವನ್ನು ಪತನ ಮಾಡಲಾಯಿತು. 1959ರ ಜನವರಿಯಲ್ಲಿ ರಾಜಧಾನಿ ಹವಾನ ನಗರವನ್ನು ಪ್ರವೇಶಿಸಿ ಅಧಿಕಾರವನ್ನು ವಶಕ್ಕೆ ತೆಗೆದುಕೊಂಡ ಮೊಟ್ಟ ಮೊದಲ ಬಂಡಾಯಗಾರ ಪಿಡಲ್ ಕ್ಯಾಸ್ಟ್ರೋ ಜೊತೆ ಚೆಗುವಾರ ಕೂಡ ಇದ್ದರು. ಚೆಗುವಾರ ಮತ್ತು ಕ್ಯಾಸ್ಟ್ರೋ ಕ್ಯೂಬಾದ ಹೊಸ ನಾಯಕರಾದರು.
ಸರ್ಕಾರದ ನೇತೃತ್ವವನ್ನು ಕ್ಯಾಸ್ಟ್ರೋ ವಹಿಸಿಕೊಂಡರು. ಮುಂದೆ ಪಿಡಲ್ ಕ್ಯಾಸ್ಟ್ರೊ ಸರ್ಕಾರದಲ್ಲಿ ಚೆಗುವಾರ ಕೃಷಿ ಮಂತ್ರಿಯಾಗಿ ಕ್ರಾಂತಿಕಾರಿ ಸುಧಾರಣೆಗಳನ್ನು ತಂದರು. ಭೂಸುಧಾರಣೆಯೊಂದಿಗೆ ಚೆಗುವಾರ ಕೇಂದ್ರೀಕರಿಸಿದ ಮತ್ತೊಂದು ಪ್ರಧಾನ ಕ್ಷೇತ್ರವೆಂದರೆ ‘ಶಿಕ್ಷಣಕ್ಷೇತ್ರ’ ಅವರು ರಾಷ್ಟ್ರೀಯ ಸಾಕ್ಷರತೆಗಾಗಿ ಹೆಚ್ಚು ಹೊತ್ತುಕೊಟ್ಟರು. ಅವರ ಒತ್ತಾಸೆಯಂತೆ ಕ್ಯೂಬಾ ಸಕಾರವೂ 1961ನೇ ವರ್ಷವನ್ನು ಶಿಕ್ಷಣ ವರ್ಷವೆಂದು ಘೋಷಿಸಿತು.
ಇದರ ಸಲುವಾಗಿ ಹಳ್ಳಿಗಾಡುಗಳಲ್ಲಿ ಬಹುತೇಕ ಅಕ್ಷರಸ್ಥರಿಗೆ ಓದುಬರಹ ಕಲಿಸಲು ಸಾಕ್ಷರತ ಆಂದೋಲವನ್ನು ಕೈಗೊಳ್ಳಲಾಯಿತು. ಈ ಆಂದೋಲನ ಮುಗಿಯುವ ವೇಳೆಗೆ 7 ಲಕ್ಷಕ್ಕೂ ಹೆಚ್ಚು ಮಂದಿಗೆ ಓದು ಬರಹ ಕಲಿಸಲಾಯಿತು. ಇಂತಹ ಕ್ರಾಂತಿಕಾರ ಕೆಲಸದಿಂದ ದೇಶದ ಸಾಕ್ಷರತೆ ಶೇ 96 ಕ್ಕೆ ಏರಿಕೆಯಾಯಿತು. ಆನಂತರ ಅವರು 1965ರಲ್ಲಿ ಕ್ಯೂಬಾವನ್ನು ಬಿಟ್ಟು ಹೊರಟು ತೃತೀಯ ಜಗತ್ತಿನ ಕ್ರಾಂತಿಗಳಿಗೆ ಬೆಂಬಲವಾಗಿ ಅವರು ತನ್ನ ಸುತ್ತಾಟವನ್ನು ಮುಂದುವರಿಸಿದರು. ಅದರ ಭಾಗವಾಗಿಯೇ ಅವರು ಬೊಲಿವಿಯದಲ್ಲಿ ಗೆರಿಲ್ಲಾ ಯೋಧರನ್ನು ಸಂಘಟಿಸಲು ಯತ್ನಿಸಿದರು.
ಆದರೆ ಬೊವಿಲಿಯಾದಲ್ಲಿ ಚೆಗುವಾರಗೆ ಸಾಮಾನ್ಯ ಜನರ ನೆರವು ಸಿಗಲಿಲ್ಲಾ ಕ್ರಾಂತಿಕಾರಿಗಳ ಜೊತೆ ಸೇರಲು ಸಾಮಾನ್ಯಜನ ಎದುರುತ್ತಿದ್ದರು. ಆದರೂ ಎದೆಗುಂದದೆ ಚೆಗುವಾರ ತನ್ನ ಹೋರಾಟವನ್ನು ಮುಂದುವರಿಸಿದರು. ಆದರೆ ಅಮೆರಿಕಾದ CIA ನೆರವಿನಿಂದ ಬೊಲಿವಿಯಾ ಪಡೆಗಳು ಗೆರಿಲ್ಲಾ ಹೋರಾಟಗಾರರನ್ನು ಪತ್ತೆಹಚ್ಚಿ ಹಲವು ಗೆರಿಲ್ಲಾ ಯೋಧರನ್ನು ಕೊಂದು ಚೆಗುವಾರನನ್ನು 1967 ಅಕ್ಟೋಬರ್ 8ರಂದು ಸೆರೆಹಿಡಿದರು.
ನಂತರ ಹಿಗುಎರಾ ಎಂಬ ಗ್ರಾಮದ ಶಾಲೆಯಲ್ಲಿ ಕೂಡಿಹಾಕಿ ಮಾರನೆ ದಿನ ಅಕ್ಟೋಬರ್ 9 ರಂದು ಮಧ್ಯಾಹ್ನ 1.30ರ ಸುಮಾರಿಗೆ ಅಮೆರಿಕಾದ CIA ಅಧಿಕಾರಿಗಳ ಸಮ್ಮುಖದಲ್ಲಿ ಸಿಐಎ ರೇಂಜರ್ಗಳು ತೀರ ಸಮೀಪದಿಂದ ಗುಂಡಿಟ್ಟು ಚೆಗುವಾರನನ್ನು ಹತ್ಯೆಗೈಯುತ್ತಾರೆ. ನಂತರ ಅವನ ಮುಖವನ್ನು ಪಡಿಯಚ್ಚು ತೆಗೆದು ಅವನ ದೇಹವನ್ನು ಹತ್ತಿರದಿಂದ ಫೊಟೋ ತೆಗೆಯಲಾಯಿತು. ಮತ್ತು ಅವನ ಕೈಗಳನ್ನು ಮುಂಗೈಬಳಿ ಕತ್ತರಿಸಿ ಅವನ್ನು ಆಲ್ಕೊಹಾಲಿನಲ್ಲಿ ರಕ್ಷಿಸಿಟ್ಟರು. ಕಾರಣ ನಾವು ಕೊಂದ ವ್ಯಕ್ತಿ ಚೆಗೆವಾರ ಎಂಬುದರ ಋಜುವಾತುವಿಗಾಗಿ ಅವರ ಹಾಗೆ ಮಾಡಿದರು.
ಚೆ ಗುವೆರಾ ಸತ್ತ ಸುದ್ದಿ ತಿಳಿದು ಜಗತ್ತಿನಾದ್ಯಂತ ಅವನ ಸಂಗಾತಿಗಳು ಶೋಕತಪ್ತರಾದರು. ಈಗ ಚೆ ಕೈಗಳನ್ನು ಕ್ಯೂಬಾ ರಕ್ಷಿಸಿಟ್ಟಿದೆ. ಮತ್ತು ಇವು ವಿಮೋಚನೆಗಾಗಿ ಹೋರಾಟದಲ್ಲಿ ಅಸ್ತ್ರಗಳನ್ನು ಹಿಡಿದ ಕೈಗಳೂ, ತಮ್ಮ ಗಮನಾರ್ಹ ಚಿಂತನೆಗಳನ್ನು ಬರೆದು ಹಂಚಿದ ಕೈಗಳು, ಕಬ್ಬಿನ ಪ್ಲಾಂಟೇಷನ್‍ಗಳಲ್ಲಿ, ಬಂದರುಕಟ್ಟೆಗಳ ಮುಂತಾದ ನಿರ್ಮಾಣದ ಸ್ಥಳಗಳಲ್ಲಿ ಕೆಲಸ ಮಾಡಲು ಬಳಸಿದ ಕೈಗಳು ಎಂದು ಕ್ಯಾಸ್ಟ್ರೊ ಉದ್ಘರಿಸುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅಮೇರಿಕಾದಂತ ದುಷ್ಟಶಕ್ತಿಗಳು ಚೆ ನ ದೇಹವನ್ನು ಮಾತ್ರ ಹತ್ಯೆ ಮಾಡಿರಬಹುದು.
ಆದರೆ ಚೆಗುವಾರ ಹಂಚಿದ ಕ್ರಾಂತಿಕಾರಿ ಆಲೋಚನೆಗಳನ್ನು ನಿಯಂತ್ರಿಸಲು ಅಥವಾ ಹತ್ಯೆ ಮಾಡಲು ಸಾಧ್ಯವಿಲ್ಲಾ ! ಚೆಗೆವಾರ ಶೋಷಿತ ಜನತೆಗೆ ತಮ್ಮ ಬದುಕನ್ನು ಅರ್ಪಿಸಿಕೊಂಡವರು. ಆಗಾಗಿ ಅವಕಾಶವಂಚಿತ ಸಮುದಾಯಗಳಿಗೆ ಚೆಗುವಾರ ಎಂದೆಂದಿಗೂ ಸ್ಫೂರ್ತಿಯಾಗಿರುತ್ತಾರೆ ಅನ್ನುವುದರಲ್ಲಿ ಯಾವ ಅನುಮಾವೂ ಇಲ್ಲ.
ಐರಿಶ್ ಬಂಡಾಯಗಾರರ ರಕ್ತ ನನ್ನ ಮಗನ ಧಮನಿಗಳಲ್ಲಿ ಹರಿಯುತ್ತಿತ್ತು ಎಂಬುದನ್ನು ನಾವು ಮೊಟ್ಟ ಮೊದಲು ಗಮನಿಸೇಕಾದ ವಿಚಾರ’ ಎಂದು ಚೆಗುವಾರನ ಮರಣದ ನಂತರ ಅವರ ತಂದೆ ಪ್ರತಿಕ್ರಿಯಿಸಿದ ಹಾಗೆ, ಚೆ… ಇಲ್ಲವಾಗಿ ಹಲವು ವರ್ಷಗಳು ಕಳೆದಿದ್ದರೂ ಅವನು ತನ್ನ ವಿಚಾರ, ಆಲೋಚನೆಗಳ, ಮಾನವೀಯವಾದ ವ್ಯಕ್ತಿತ್ವಗಳ ಮೂಲಕ ದಬ್ಬಾಳಿಕೆ, ಶೋಷಣೆ ಅನ್ಯಾಯಗಳ ವಿರುದ್ಧಾ ಇಂದಿಗೂ ಸಿಡಿದೇಳುವ ಕ್ರಾಂತಿಯ ಕಿಡಿಯಾಗಿ ತನ್ನ ನಂತರದ ತಲೆಮಾರಿಗೆ ಸ್ಫೂರ್ತಿಯ ಚಿಲುಮೆಯಾಗಿ ಸದಾ ಜೊತೆಯಾಗುತ್ತಲೇ ಇರುತ್ತಾನೆ.
ನಮ್ಮ ನಡುವೆ ಇರುವ ವಿದ್ಯಾವಂತ ಬುದ್ಧಿವಂತ ರೆನಿಸಿಕೊಂಡವರು, ನಾವು ಶ್ರೇಷ್ಠ ಉಳಿದವರು ಕನಿಷ್ಠವೆಂದು ಜಾತಿ ಧರ್ಮ ದೇವರುಗಳ ಹೆಸರಿನಲ್ಲಿ ಭಯ ಹುಟ್ಟಿಸಿ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯವೆಸಗುತಿದ್ದರು ಇಲ್ಲಿನ ಸರ್ಕಾರಗಳು ಮತ್ತು ಜನಸಾಮಾನ್ಯರು ಅದರ ವಿರುದ್ಧ ಸಿಡಿದೇಳುವುದಿರಲಿ, ಕೊನೆ ಪಕ್ಷ ವಿರೋಧ ವ್ಯಕ್ತ ಪಡಿಸದೆ ಜಾಣ ಕುರುಡರಂತೆ ಮೌನವಹಿಸುತ್ತಿರುವುದು ದುರಂತವೇ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

