ಬಹಿರಂಗ
‘ಸ್ವಾಭಿಮಾನ’ ಕುರಿತು ಅಂಬೇಡ್ಕರರ ಆತ್ಮಕತೆಯ ಪುಟಗಳಿಂದ..!
– ರಘೋತ್ತಮ ಹೊ.ಬ
”ಎಲ್ಲಿ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆಯೋ ಅಲ್ಲಿ ನಿಮ್ಮ ಚಪ್ಪಲಿಯನ್ನು ಸಹ ಬಿಡಬೇಡಿ” Self respect ಅಥವಾ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಶ್ರೇಷ್ಠ ನುಡಿಗಳಿವು. ಬಹುಶಃ ವ್ಯಕ್ತಿಗೌರವ ಅಥವಾ ಸ್ವಾಭಿಮಾನದ ಬಗ್ಗೆ ಅಂಬೇಡ್ಕರರು ತಲೆಕೆಡಿಸಿಕೊಂಡಷ್ಟು ಈ ವಿಶ್ವದಲ್ಲಿ ಯಾರೂ ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಅದರಲ್ಲೂ ದಲಿತರ ಸ್ವಾಭಿಮಾನದ ಪ್ರಶ್ನೆ? ಹಾಗೆಯೇ ದಲಿತ ಮಹಿಳೆಯ ಸ್ವಾಭಿಮಾನದ ಪ್ರಶ್ನೆ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಲ್ಲಿಯೇ, ಶೋಷಿತರಿಗೆ ಸ್ವಾಭಿಮಾನದ ಪಾಠ ಕಲಿಸುವುದರಲ್ಲಿಯೇ, ಆತ್ಮಗೌರವ ತಂದುಕೊಡುವುದರಲ್ಲಿಯೇ ಅಂಬೇಡ್ಕರ್‍ರವರು ತಮ್ಮ ಜೀವನವಿಡೀ ಶ್ರಮಿಸಿದರು. ಒಂದರ್ಥದಲ್ಲಿ ಅವರು ಸ್ವಾಭಿಮಾನದ ಕಿಡಿ.
ಕಿಡಿ ಅಥವಾ ಕೋಪ, ಹಾಗೆಂದಾಕ್ಷಣ ಅಂಬೇಡ್ಕರರು ಇದ್ದಕ್ಕಿದ್ದ ಹಾಗೆಯೇ ದಲಿತರ ಸ್ವಾಭಿಮಾನದ ಬಗ್ಗೆ ಈ ಪರಿ ತಲೆಕೆಡಿಸಿಕೊಂಡರೆ ಅಥವಾ ಯಾರದೋ ಮೇಲಿನ ದ್ವೇಷಕ್ಕೆ ಹಾಗೆ ನಿರ್ಧಾರಕ್ಕೆ ಬಂದರೆ? ಖಂಡಿತ ಇಲ್ಲ. ಹಾಗಿದ್ದರೆ? 1935 ಅಕ್ಟೋಬರ್ 13ರಂದು ನಾಸಿಕ್‍ನ ಈಯೋಲಾ ಎಂಬಲ್ಲಿ ಅಂಬೇಡ್ಕರರು ಕೇಳುವ ಪ್ರಶ್ನೆಗಳನ್ನು ನೋಡಿ.
- ಈ ಭಾರತದಲ್ಲಿ ನೀವೊಬ್ಬರೇ(ದಲಿತರು) ಯಾಕೆ ಶೋಷಣೆಗೊಳಗಾಗುತ್ತಿದ್ದೀರಿ?
- ಹಿಂದೂ ಧರ್ಮ ನಿಮಗೆ ಕರುಣೆ ತೋರಿಸುತ್ತಿಲ್ಲವೇಕೆ?
- ಹಿಂದುತ್ವದಲ್ಲಿ ನಿಮಗೆ ಸಮಾನತೆ ಇದೆಯೇ?
- ಹಿಂದುತ್ವದಲ್ಲಿ ನಿಮಗೆ ಸ್ವಾತಂತ್ರ್ಯವಿದೆಯೇ?
ಬಹುಶಃ ಈ ಪ್ರಶ್ನೆಗಳು ಹಿಂದೂಗಳಿಗೆ ಎಲ್‍ಕೆಜಿ ಮಕ್ಕಳ ಪ್ರಶ್ನೆಗಳ ಹಾಗೆ ಕಾಣಬಹುದು. ಆದರೆ ಶೋಷಿತರಿಗೆ? ಅವು ಅಂಬೇಡ್ಕರರ ಸ್ವಾಭಿಮಾನದ ಕಿಡಿಯ ಸಣ್ಣ ಕಣಗಳಂತೆ ಕಂಡರೆ ಅತಿಶಯೋಕ್ತಿಯೇನಲ್ಲ. ಯಾಕೆಂದರೆ ಅಂಬೇಡ್ಕರರಿಂದ ಇಂತಹ ಪ್ರಶ್ನೆಗಳನ್ನು ಎದುರಿಸಿದ ಯಾವುದೇ ದಲಿತನಾದರೂ “ತನ್ನೊಬ್ಬನ ಮೇಲೆ ಯಾಕೆ ದೌರ್ಜನ್ಯ ನಡೆಯುತ್ತಿದೆ? ಯಾಕೆಂದರೆ ನಾನು ಕೀಳು ಜಾತಿಯವನು. ಹಿಂದೂಗಳೆಲ್ಲ ನಮಗೆ ಕರುಣೆ ತೋರಿಸುತ್ತಿಲ್ಲ, ಯಾಕೆಂದರೆ ನಾವು ಕರುಣೆಗೆ ಅರ್ಹರಲ್ಲ. ಹಿಂದೂಗಳೆಲ್ಲ ನಮಗೆ ಸಮಾನತೆ ನೀಡುತ್ತಿಲ್ಲ, ಯಾಕೆಂದರೆ ನಾವು ಸಮಾನತೆಗೆ ಅರ್ಹರಲ್ಲ. ಹಿಂದುತ್ವದಲ್ಲಿ ನಮಗೆ ಸ್ವಾತಂತ್ರ್ಯವಿಲ್ಲ, ಯಾಕೆಂದರೆ ನಾವು ಸ್ವಾತಂತ್ರ್ಯಕ್ಕೂ ಕೂಡ ಅರ್ಹರಲ್ಲ” ಎಂದುಕೊಳ್ಳುತ್ತಾನೆಯೇ? ಖಂಡಿತ ಇಲ್ಲ. ಬದಲಿಗೆ ಆತ ಅಂಬೇಡ್ಕರರ ಪ್ರಶ್ನೆಗಳ ಬಗ್ಗೆ ಗಹನವಾಗಿ ಚಿಂತಿಸುತ್ತಾನೆ. ನಾನು ಯಾರು? ನಾನೇಕೆ ಹೀಗಾದೆ? ನನ್ನ ಹೀನಾಯ ಸ್ಥಿತಿಗೆ ಕಾರಣರಾರು? ಎಂದು ತನ್ನನ್ನೆ ತಾನು ಪ್ರಶ್ನಿಸಿಕೊಳ್ಳುತ್ತಾನೆ. ಒಮ್ಮೆ ಆತ ಪ್ರಶ್ನಿಸಿಕೊಳ್ಳಲು ಪ್ರಾರಂಭಿಸಿದನೆಂದರೆ ಮುಗಿಯಿತು ಆತ ಸ್ವಾಭಿಮಾನಿಯಾದನೆಂದೇ ಅರ್ಥ. ಅಂದಹಾಗೆ ಅಂಬೇಡ್ಕರರು ಬಯಸಿದ್ದು ಇದನ್ನೆ!
ಹಾಗೆ ಹೇಳುವುದಾದರೆ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಪ್ರಶ್ನೆ ಇಲ್ಲಿಗೇ ಮುಗಿಯುವುದಿಲ್ಲ. ಅವರ ಆತ್ಮಕತೆಯ ಪುಟಗಳತ್ತ ಚಿತ್ತಹರಿಸುವುದಾದರೆ, ಅಂಬೇಡ್ಕರರು 1936 ಮೇ 17ರಂದು ಥಾಣೆ ಜಿಲ್ಲೆಯ ಕಲ್ಯಾಣ್ ಎಂಬಲ್ಲಿ ತನ್ನ ಸ್ವಾಭಿಮಾನವನ್ನು ಕೆಣಕಿದ ಬಾಲ್ಯದ ಕೆಟ್ಟ ಘಟನೆಯನ್ನು ಹೀಗೆ ವಿವರಿಸುತ್ತಾರೆ2 “ನಾನು ಇಂಧೋರ್ ಸಮೀಪದ ಮಹೌ ಎಂಬಲ್ಲಿ ಹುಟ್ಟಿದೆ. ನನ್ನ ತಂದೆ ಮಹೌನಲ್ಲಿ ಸೇನೆಯ ಸುಬೇದಾರ್ ಹುದ್ದೆಯಲ್ಲಿದ್ದರು. ನಾವು ಅಲ್ಲಿದ್ದಷ್ಟು ದಿನ ಅಂದರೆ ಸೇನೆಯ ಕ್ವಾರ್ಟರ್ಸ್‍ನ ಕಾರ್ಯಸ್ಥಾನದಲ್ಲಿಷ್ಟೂ ದಿನ ನಮಗೆ ಅಸ್ಪøಶ್ಯತೆಯ ಗಂಧ ಗಾಳಿಯು ತಿಳಿದಿರಲಿಲ್ಲ. ಆದರೆ ನನ್ನ ತಂದೆ ಸೇನೆಯಿಂದ ನಿವೃತ್ತರಾಗಿ ಸತಾರಕ್ಕೆ ಬಂದಾಗ ನನಗೆ ಅಸ್ಪøಶ್ಯತೆಯ ಪ್ರಥಮ ಅನುಭವವಾಯಿತು.
ಮುಖ್ಯವಾಗಿ ಅದು ಕ್ಷೌರಕ್ಕೆ ಸಂಬಂಧಪಟ್ಟಂತೆ. ಯಾಕೆಂದರೆ ಸತಾರದಲ್ಲಿ ಅಷ್ಟೊಂದು ಕ್ಷೌರಿಕರಿದ್ದರೂ ಯಾವುದೇ ಕ್ಷೌರಿಕನೂ ನಮ್ಮ ತಲೆಕೂದಲು ಕತ್ತರಿಸಲು ಮುಂದೆ ಬರುತ್ತಿರಲಿಲ್ಲ. ಈ ಕಾರಣಕ್ಕಾಗಿ ದುರಂತವೆಂದರೆ ನಮ್ಮ ಹಿರಿಯ ಅಕ್ಕನೇ ನಮ್ಮನ್ನು ಮನೆಯ ಹೊರಗಡೆ ಕೂರಿಸಿ ನಮ್ಮ ತಲೆಗೂದಲನ್ನು ಕತ್ತರಿಸಬೇಕಾಗುತ್ತಿತ್ತು! ಒಂದರ್ಥದಲಿ ಇದು ನನ್ನನ್ನು ವಿಚಲಿತಗೊಳಿಸಿತು. ಯಾಕೆ ಹೀಗೆ ಇಷ್ಟೊಂದು ಕ್ಷೌರಿಕರಿದ್ದರೂ ನಮ್ಮ ಕೂದಲನ್ನು ಕತ್ತರಿಸಲು ಅವರು ಮುಂದೆ ಬರುತ್ತಿಲ್ಲವೇಕೆ? ಎಂಬ ಪ್ರಶ್ನೆ ನನ್ನನ್ನು ಪದೇ ಪದೇ ಕಾಡತೊಡಗಿತು”.
ಮತ್ತೊಂದು ಘಟನೆ : “ನಮ್ಮ ತಂದೆ ಗೋರೆಗಾಂವ್‍ನಲ್ಲಿರಬೇಕಾದರೆ ಅವರು ಒಮ್ಮೆ ನಮ್ಮನ್ನು ಗೋರೆಗಾಂವ್‍ಗೆ ಬನ್ನಿ ಎಂದು ಕರೆದರು. ಹಾಗೆಯೇ ಪ್ರಯಾಣದ ಖರ್ಚಿಗೆ ಎಂದು ಅವರು ಸ್ವಲ್ಪ ಹಣವನ್ನೂ ಕಳುಹಿಸಿದ್ದರು. ಆ ಹಣದಿಂದ ಹೊಸಬಟ್ಟೆ ಖರೀದಿಸಿ, ರೈಲಿನಲ್ಲಿ ಪಯಣಿಸುವ ಕನಸು ಕಾಣುತ್ತಾ ಖುಷಿಯಿಂದ ನಾನು, ನನ್ನ ಸಹೋದರ ಮತ್ತು ನನ್ನ ಅಕ್ಕನ ಮಗಳು ಮೂವರು ಗೋರೆಗಾಂವ್‍ನತ್ತ ಹೊರಟೆವು. ಹಾಗೆಯೇ ನಾವು ಬರುವುದಾಗಿ ಅದಾಗಲೇ ನಮ್ಮ ತಂದೆಯವರಿಗೆ ಪತ್ರವೊಂದನ್ನು ಸಹ ಕಳುಹಿಸಿದ್ದೆವು. ಆದರೆ ಅದು ಅವರಿಗೆ ತಲುಪಿರಲಿಲ್ಲ.
ಆ ಕಾರಣಕ್ಕಾಗಿ ನಾವು ಗೋರೆಗಾಂವ್ ತಲುಪಿದಾಗ ನಮ್ಮ ತಂದೆಯವರು ಕಳುಹಿಸಿರಬಹುದೆನ್ನುವ ಸೇವಕನಿಗಾಗಿ ನಾವು ಹುಡುಕಿದರೂ ಆತ ನಮಗೆ ಕಾಣಲಿಲ್ಲ. ವಿಧಿಯಿಲ್ಲದೆ ಮುಕ್ಕಾಲು ಗಂಟೆ ನಾವು ಸ್ಟೇಷನ್‍ನಲ್ಲಿಯೇ ಕಳೆದೆವು. ಯಾರಾದರೂ ಬರಬಹುದು ನಮ್ಮನ್ನು ಕರೆದುಕೊಂಡು ಹೋಗಬಹುದು ಎಂದು ಕಾಯುತ್ತಾ ಕುಳಿತೆವು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಸ್ಟೇಷನ್ ಮಾಸ್ಟರ್ ’ನೀವು ಯಾರಿಗಾಗಿ ಕಾಯುತ್ತಿದ್ದೀರಿ? ಯಾವ ಜಾತಿ? ಎಲ್ಲಿಗೆ ಹೋಗಬೇಕು?’ ಎಂದೆಲ್ಲ ಕೇಳಿದ. ನಾನು ಅವನಿಗೆ ‘ನಾವು ಮಹಾರ್ ಜಾತಿಗೆ ಸೇರಿದವರು’ ಎಂದು ನೇರವಾಗಿಯೇ ಹೇಳಿದೆ. ನಾನು ಹಾಗೆನ್ನುತ್ತಲೇ ಆತ ಆಘಾತಕ್ಕೊಳಗಾದ! ತಕ್ಷಣ ನಮ್ಮಿಂದ ಐದು ಹೆಜ್ಜೆ ಹಿಂದೆ ಸರಿದ! ಆದರೆ ನಾವು ಉತ್ತಮವಾಗಿ ಡ್ರೆಸ್ ಮಾಡಿಕೊಂಡಿದ್ದನ್ನು ನೋಡಿ ಉತ್ತಮ ಕುಲಕ್ಕೆ ಸೇರಿದವರಿರಬಹುದೆಂದುಕೊಂಡು ಎತ್ತಿನಗಾಡಿಯೊಂದನ್ನು ವ್ಯವಸ್ಥೆ ಮಾಡುವುದಾಗಿ ಹೇಳಿದ.
ಆದರೆ ನಾವು ಮಹಾರ್ ಜಾತಿಯವರಾಗಿದ್ದರಿಂದ ಯಾವುದೇ ಎತ್ತಿನಗಾಡಿಯವನು ನಮ್ಮನ್ನು ಕೂರಿಸಿಕೊಂಡು ಹೋಗಲು ಮುಂದೆ ಬರಲಿಲ್ಲ. ಕಡೆಗೂ ಒಬ್ಬ ಒಪ್ಪಿಕೊಂಡನಾದರೂ ಆತನ ಕಂಡೀಷನ್ ಏನೆಂದರೆ ‘ನಾನು ಗಾಡಿ ಚಲಾಯಿಸುವುದಿಲ್ಲ. ನಿಮ್ಮಲ್ಲೆ ಯಾರಾದರೊಬ್ಬರು ಗಾಡಿ ಚಲಾಯಿಸಿ. ನಾನು ನಿಮ್ಮ ಜೊತೆ ಬರುತ್ತೇನೆ’ ಎಂಬುದಾಗಿತ್ತು! ಅಂದಹಾಗೆ ಆತ ಹಾಗೆ ಬರುತ್ತೇನೆ ಎಂದಾಗ ಸಮಯ ಸಂಜೆ ಏಳು ಗಂಟೆಯಾಗಿತ್ತು. ಹಾಗೆಯೇ ಮಿಲಿಟರಿ ಏರಿಯಾದವನಾದ್ದರಿಂದ ನನಗೆ ಗಾಡಿ ಚಲಾಯಿಸುವುದು ಕಷ್ಟವೇನಿರಲಿಲ್ಲ. ಅವನ ಕಂಡೀಷನ್‍ಗೆ ಒಪ್ಪಿಕೊಂಡು ನಾನು ಮತ್ತು ಉಳಿದ ಮಕ್ಕಳೆಲ್ಲ ಗಾಡಿಯಲ್ಲಿ ಗೋರೆಗಾಂವ್ ಕಡೆ ಹೊರಟೆವು”.
“ಸ್ವಲ್ಪ ದೂರ ಹೋದನಂತರ ಒಂದು ಊರಿನ ಹೊರಗಡೆ ಒಂದು ಕೊಳ ಕಂಡೆವು. ‘ಮುಂದೆ ಎಲ್ಲಿಯೂ ನಿಮಗೆ ನೀರು ಸಿಗುವ ಸಾಧ್ಯತೆ ಇಲ್ಲವಾದ್ದರಿಂದ ನೀವು ಇಲ್ಲಿಯೇ ನಿಮ್ಮ ಊಟವನ್ನು ಮಾಡಬಹುದು’ ಎಂದು ಗಾಡಿಯವನು ನಮಗೆ ಸೂಚಿಸಿದ. ಅವನು ಹೇಳಿದ ಹಾಗೆ ಗಾಡಿಯಿಂದ ಇಳಿದ ನಾವು, ಅಲ್ಲಿಯೇ ನಾವು ತಂದಿದ್ದ ಬುತ್ತಿಯನ್ನು ತಿಂದು ಕೆಸರು ಕೆಸರಾದ ಗಬ್ಬುನಾರುತ್ತಿದ್ದ ಆ ಕೊಳದ ನೀರನ್ನೆ ಕುಡಿದೆವು. ಗಾಡಿಯವ ಗ್ರಾಮದ ಒಳಕ್ಕೆ ಹೋಗಿ ಅಚ್ಚುಕಟ್ಟಾಗಿ ತನ್ನ ಊಟ ಮುಗಿಸಿ ಮತ್ತೆ ನಮ್ಮ ಬಳಿ ಬಂದ”!
“ಇತ್ತ ನಮ್ಮ ಪ್ರಯಾಣ ಮುಂದುವರಿದ ಹಾಗೇ ಕತ್ತಲು ಹೆಚ್ಚಾಗತೊಡಗಿತ್ತು. ಯಾವುದೇ ಬೀದಿ ದೀಪವಾಗಲೀ ಬೆಳಕಿನ ಸಣ್ಣ ತುಣುಕಾಗಲೀ ನಮಗೆ ಕಾಣಲಿಲ್ಲ. ಈ ಕಾರಣಕ್ಕಾಗಿ ಭಯಗೊಂಡ ನಾವು ಕತ್ತಲೆ ಮತ್ತು ಒಂಟಿತನದಿಂದಾಗಿ ಹೆದರಿ ಜೋರಾಗಿ ಅಳಲಾರಂಭಿಸಿದೆವು. ಅಷ್ಟೊತ್ತಿಗಾಗಲೇ ಅರ್ಧರಾತ್ರಿಯಾಗಿತ್ತು. ಆ ಸಂದರ್ಭದಲ್ಲಿ ನಾವು ಎಂತಹ ಸ್ಥಿತಿ ತಲುಪಿದ್ದೆವೆಂದರೆ ‘ನಾವು, ನಮ್ಮಪ್ಪರಾಣೆಗೂ ಗೋರೆಗಾಂವ್ ತಲುಪುವುದಿಲ್ಲ’ ಎಂದು ಹತಾಶೆಗೊಂಡೆವು. ಹಾಗೆ ಮುನ್ನಡೆಯುತ್ತಲೇ ನಾವು ಒಂದು ಚೆಕ್‍ಪೋಸ್ಟ್ ತಲುಪಿದೆವು. ಚೆಕ್‍ಪೋಸ್ಟ್‍ನ ಕಾವಲುಗಾರನನ್ನು ನಾನು ‘ಇಲ್ಲಿ ಎಲ್ಲಾದರೂ, ತಿನ್ನಲು ಏನಾದರೂ ಸಿಗುತ್ತದೆಯಾ?’ ಎಂದು ಕೇಳಿದೆ. ಕಾವಲುಗಾರ ಪರ್ಷಿಯನ್ ಭಾಷೆ ಮಾತನಾಡುತ್ತಿದ್ದನಾದ್ದರಿಂದ ಅವನ ಜೊತೆ ಪರ್ಷಿಯನ್ ಭಾಷೆಯಲ್ಲಿಯೇ ಮಾತನಾಡಿದೆ. ನಮ್ಮ ಹಿನ್ನೆಲೆ ತಿಳಿದ ಆತ ಕೂಡ ಅಷ್ಟೆ, ಅಷ್ಟೆ ಕ್ರೂರವಾಗಿ ಉತ್ತರಿಸಿದ ಹಾಗೂ ಸಮೀಪದಲ್ಲಿ ಬೆಟ್ಟವೊಂದಿದೆ ಅಲ್ಲಿ ನಿಮಗೆ ಏನಾದರೂ ಸಿಗುತ್ತದೆಂಬಂತೆ ಸಮೀಪದಲ್ಲೇ ಇದ್ದ ಬೆಟ್ಟದತ್ತ ಕೈತೋರಿಸಿದ.
ವಿಧಿಯಿಲ್ಲದೆ ಹೇಗೋ ಆ ರಾತ್ರಿಯನ್ನು ನಾವು ಅಲ್ಲೇ ಆ ಬೆಟ್ಟದ ಪಕ್ಕದಲ್ಲಿಯೇ ಇದ್ದ ಕೊರಕಲೊಂದರಲ್ಲಿ ಕಳೆದೆವು! ಹಾಗೆಯೇ ಬೆಳಿಗ್ಗೆಯಾದದ್ದೆ ತಡ ಗೋರೆಗಾಂವ್‍ನತ್ತ ಮತ್ತೆ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಹೀಗೆ ಸಾಗಿದ ನಮ್ಮ ಪ್ರಯಾಣ ಕೊನೆಗೊಂಡದ್ದು ಮಧ್ಯಾಹ್ನಕ್ಕೆ. ಏಕೆಂದರೆ ಆ ದಿನ ನಾವು ಗೋರೆಗಾಂವ್ ತಲುಪಿದಾಗ ಮಧ್ಯಾಹ್ನವಾಗಿತ್ತು. ಅದೂ ವಿಪರೀತ ಸುಸ್ತಾಗಿದ್ದೆವು. ಒಂದರ್ಥದಲ್ಲಿ ಅರ್ಧ ಸತ್ತಿದ್ದೆವು ಎಂದರೆ ಅತಿಶಯೋಕ್ತಿಯೆನಲ್ಲ”!”
ಮರದಡಿಯಲ್ಲಿ ಗಳಗಳನೆ ಅತ್ತದ್ದು4! “ಮೂರನೆಯ ಘಟನೆಯೊಂದನ್ನು ಇಲ್ಲಿ ಹೇಳಲೇ ಬೇಕು. ಅದು ನಾನು ಬರೋಡ ರಾಜ್ಯದಲ್ಲಿ ಹುದ್ದೆಯಲ್ಲಿದ್ದ ಸಂದರ್ಭ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳುವಾಗ ಬರೋಡ ರಾಜ್ಯದಿಂದ ನಾನು ವಿದ್ಯಾರ್ಥಿ ವೇತನ ಪಡೆದಿದ್ದೆ. ಆ ಸಂಧರ್ಭದಲ್ಲಿ ಆದ ಒಪ್ಪಂದದಂತೆ ಇಂಗ್ಲೆಂಡಿನಿಂದ ಹಿಂದಿರುಗಿ ಬಂದಾಗ ಒಪ್ಪಂದದಂತೆ ಬರೋಡ ಸಂಸ್ಥಾನದಲ್ಲಿ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿಕೊಂಡೆ. ದುರಂತವೆಂದರೆ ಆ ಸಂದರ್ಭದಲ್ಲಿ ಬರೋಡದಲ್ಲಿ ನನಗೆ ಉಳಿದುಕೊಳ್ಳಲು ಒಂದು ಮನೆ ಕೂಡ ಸಿಗಲಿಲ್ಲ. ಬರೋಡದಂಥ ಆ ಮಹಾನಗರದಲ್ಲಿ ಒಬ್ಬ ಹಿಂದೂವಿರಬಹುದು, ಮುಸಲ್ಮಾನನಿರಬಹುದು ಯಾರೊಬ್ಬರೂ ನನಗೆ ಬಾಡಿಗೆಗೆ ಮನೆ ಕೊಡಲು ಮುಂದೆಬರಲಿಲ್ಲ. ಕಡೆಗೆ ನಾನು ಪಾರ್ಸಿ ಧರ್ಮಛತ್ರವೊಂದರಲ್ಲಿ ಉಳಿದುಕೊಳ್ಳಲು ನಿರ್ಧರಿಸಿದೆ.ಅಮೆರಿಕಾ ಮತ್ತು ಇಂಗ್ಲೆಂಡಿನಿಂದ ಹಿಂದಿರುಗಿ ಬಂದಿದ್ದವನಾದ್ದರಿಂದ ನನ್ನ ಮೈ ಬಣ್ಣ ಸುಂದರವಾಗಿತ್ತು! ಹಾಗೆಯೇ ಆಕರ್ಷಕ ವ್ಯಕ್ತಿತ್ವ ಕೂಡ ನನ್ನದಾಗಿತ್ತು. ಆ ಕಾರಣಕ್ಕಾಗಿ ನನಗೆ ನಾನೇ ಒಂದು ಪಾರ್ಸಿ ಹೆಸರನ್ನು ಇಟ್ಟುಕೊಂಡು ಆ ಧರ್ಮಛತ್ರದಲ್ಲಿ ವಾಸಿಸಲು ಪ್ರಾರಂಭಿಸಿದೆ!
ಅಂದಹಾಗೆ ಆಗ ನಾನು ಇಟ್ಟುಕೊಂಡ ಹೆಸರು ‘ಅಡಲ್ಜಿ ಸೊರಾಬ್ಜಿ’ ಎಂಬುದಾಗಿತ್ತು! ನನ್ನನ್ನು ಪಾರ್ಸಿ ಎಂದು ನಂಬಿದ ಆ ಧರ್ಮಛತ್ರದ ಪಾರ್ಸಿ ಜನಾಂಗದ ಮ್ಯಾನೇಜರ್ ನನಗೆ ದಿನವೊಂದಕ್ಕೆ 2ರೂ ಬಾಡಿಗೆಯಂತೆ ಮನೆ ನೀಡಿದ. ಆದರೆ ಸತ್ಯ ಗೊತ್ತಾಗಲೇಬೇಕಲ್ಲವೆ? ಯಾಕೆಂದÀರೆ ಬರೋಡದ ರಾಜಶ್ರೇಷ್ಠ ಗಾಯಕವಾಡ ಮಹಾರಾಜರು ತನ್ನ ಆಸ್ಥಾನದಲ್ಲಿ ಮಹಾರ್ ಹುಡುಗನೊಬ್ಬನನ್ನು ಅಧಿಕಾರಿಯಾಗಿ ನೇಮಿಸಿಕೊಂಡಿರುವ ಸುದ್ದಿ ಅದಾಗಲೇ ಕಾಡ್ಗಿಚ್ಚಿನಂತೆ ಹರಡಿತ್ತು! ಮತ್ತು ನಾನು ಪಾರ್ಸಿ ಧರ್ಮಛತ್ರವೊಂದರಲ್ಲಿ ಸುಳ್ಳು ಹೆಸರಿನಲ್ಲಿ ಉಳಿದುಕೊಂಡಿದ್ದು ಕೂಡ ಅನುಮಾನಕ್ಕೆ ಕಾರಣವಾಗಿತ್ತು. ಕಡೆಗೂ ನನ್ನ ಗುಟ್ಟು ಹೊರಬಿತ್ತು”.
“ಏಕೆಂದರೆ ಅಲ್ಲಿ ನಾನು ಉಳಿದುಕೊಂಡಿದÀ್ದ ಎರಡನೇ ದಿನ ನಾನು ತಿಂಡಿ ತಿಂದು ಕಛೇರಿಗೆ ತೆರಳಲು ಪ್ರಾರಂಭಿಸುತ್ತಿದ್ದಂತೆ ದೊಣ್ಣೆಗಳನ್ನು ಹಿಡಿದಿದ್ದ ಹದಿನೈದರಿಂದ ಇಪ್ಪತ್ತು ಜನರಷ್ಟಿದ್ದ ಪಾರ್ಸಿ ಜನರ ಗುಂಪೊಂದು ನನ್ನ ಮೇಲೆ ಧಾಳಿ ಮಾಡಿತು. ನನ್ನನ್ನು ಕೊಲ್ಲುವುದಾಗಿ ಕೂಗಾಡಿದ ಆ ಗುಂಪು ನಾನು ಯಾರೆಂದು ಪ್ರಶ್ನಿಸಿತು. ನಾನು ಸಾವಧಾನವಾಗಿ ’ನಾನೊಬ್ಬ ಹಿಂದೂ’ ಎಂದು ಉತ್ತರಿಸಿದೆ. ಆದರೆ ನನ್ನ ಉತ್ತರದಿಂದ ತೃಪ್ತರಾಗದ ಉದ್ರಿಕ್ತ ಆ ಗುಂಪು ನನ್ನ ಮೇಲೆ ಬೈಗುಳಗಳ ಸುರಿಮಳೆಯನ್ನೇ ಸುರಿಸಿತು ಮತ್ತು ನನ್ನನ್ನು ತಕ್ಷಣವೇ ಕೊಠಡಿ ಖಾಲಿ ಮಾಡುವಂತೆ ಆ ಗುಂಪು ಕೂಗಿ ಹೇಳಿತು. ನಿಜಕ್ಕೂ ಹೇಳುವುದಾದರೆ ನನ್ನ ದೃಢಮನಸ್ಸು ಮತ್ತು ನಾನು ಗಳಿಸಿದ ಜ್ಞಾನ ಆ ಸಂದರ್ಭವನ್ನು ನಾನು ಧೈರ್ಯದಿಂದ ಎದುರಿಸಲು ನನಗೆ ಬಲ ನೀಡಿತು ಎನ್ನಬಹುದು.
ಏಕೆಂದರೆ ನಮ್ರತೆಯಿಂದ ಆ ಗುಂಪನ್ನು ನಾನು ನನಗೆ ಎಂಟು ಗಂಟೆಗಳ ಕಾಲಾವಕಾಶ ನೀಡಬೇಕೆಂದು ಕೇಳಿಕೊಂಡೆ. ಹಾಗೆಯೇ ಆ ದಿನ ಪೂರ್ತಿ ನಾನು ಉಳಿದುಕೊಳ್ಳಲು ಮನೆಯೊಂದನ್ನು ಹುಡುಕುವಲ್ಲಿಯೇ ಕಳೆದೆ. ಆದರೆ ‘ನನ್ನ ತಲೆಯನ್ನು ಅಡಗಿಸಿಕೊಳ್ಳಲು’’ಸ್ಥಳವೊಂದನ್ನು ಪಡೆಯುವಲ್ಲಿ ಕಡೆಗೂ ನಾನು ವಿಫಲನಾದೆ! ನನ್ನ ಬಹುತೇಕ ಸ್ನೇಹಿತರನ್ನು ಈ ಸಂದರ್ಭದಲ್ಲಿ ನಾನು ಸಂಪರ್ಕಿಸಿದೆ. ಆದರೆ ಅವರೆಲ್ಲರೂ ನನ್ನ ಬೇಡಿಕೆಗೆ ನಕಾರಾತ್ಮಕವಾಗಿ ಉತ್ತರ ನೀಡಿದರು. ನನಗೆ ವಸತಿ ಒದಗಿಸಿಕೊಡುವಲ್ಲಿ ತಮ್ಮ ಅಸಹಾಯಕತೆಯನ್ನು ಅವರು ಪ್ರದರ್ಶಿಸಿದರು. ನಾನು ತೀವ್ರವಾಗಿ ನಿರಾಶಗೊಂಡೆ ಮತ್ತು ಒಂದರ್ಥದಲಿ ಹತಾಶನಾದೆ.
ಮುಂದೇನು ಮಾಡಲಿ? ನನಗೆ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ. ನಿರಾಶ ಮತ್ತು ಹತಾಶ ಮನಸ್ಥಿತಿಯಲ್ಲಿ ಒಂದೆಡೆ ಮರದ ನೆರಳಲ್ಲಿ ಕುಳಿತೆ. ನನ್ನ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ದುಖಃ ತಡೆಯಲಾರದೆ ಗಳಗಳನೆ ಅತ್ತೆ. ಕಡೆಗೆ ಮನೆ ದೊರೆಯುವ ಯಾವ ಭರವಸೆಯೂ ಇಲ್ಲದೆ, ಪರ್ಯಾಯ ಮಾರ್ಗವಿಲ್ಲದೆ ಕೆಲಸ ಬಿಡಲು ನಿರ್ಧರಿಸಿದೆ ಮತ್ತು ನನ್ನ ಹುದ್ದೆಗೆ ರಾಜೀನಾಮೆ ಇತ್ತು ಆ ರಾತ್ರಿಯೇ ರೈಲಿನಲ್ಲಿ ವಾಪಸ್ ಮುಂಬೈಗೆ ಪ್ರಯಾಣ ಬೆಳೆಸಿದೆ”.
ಪರಮಶ್ರೇಷ್ಠ, ಅಪ್ಪಟ ಸ್ವಾಭಿಮಾನಿ ಎದುರಿಸಿದ ಘೋರ ಕ್ಷಣಗಳಿವು. ಯಾವ ಜ್ಞಾನಿ ವಿದೇಶಗಳಿಂದ ಸಾಲು ಸಾಲು ಪದವಿಗಳಿಸಿ ಜ್ಞಾನದ ಹೊರೆಯನ್ನೇ ಹೊತ್ತುತಂದನೋ ಅಂತಹ ವಿಶ್ವಜ್ಞಾನಿಗೆ ಭಾರತದಲ್ಲಿ ಸಂದ ಮರ್ಯಾದೆಯಿದು! ಹಾಗೆಯೇ ಜಾತಿಯ ಕೂಪಕ್ಕೆ ಸಿಕ್ಕು ಸಮಾಜ ತಲುಪಿರುವ ದಯನೀಯ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಇದು. ಅಂಬೇಡ್ಕರ್‍ರಂತಹ ಮಹಾನ್ ಜ್ಞಾನಿಗೇ ಈ ಸಮಾಜ ಮನೆ ಕೊಡಲು ನಿರಾಕರಿಸಿತೆಂದರೆ ಇನ್ನು ನಮ್ಮಂತಹ ಸಾಮಾನ್ಯ ಅಸ್ಪøಶ್ಯರ ಪಾಡೇನಾಗಬೇಡ! ಅದೂ ಅಂಬೇಡ್ಕರರು ಈ ಜಾತಿವಾದಿಗಳಿಗೋಸ್ಕರ ತಮ್ಮ ಹೆಸರನ್ನು ’ಅಡಲ್ಜಿ ಸೊರಾಬ್ಜಿ’ ಎಂದು ಸುಳ್ಳು ಕೂಡ ಹೇಳಬೇಕಾಯ್ತು!
ಅಂದಹಾಗೆ ಈಗ ಬೇರೆ ಏನು? ದಲಿತರಿಗೆ ಮೇಲ್ಜಾತಿಗಳವರು ಮನೆಕೊಡುತ್ತಾರೆಯೇ? ಖಂಡಿತ ಇಲ್ಲ. ಅದೂ ಕೊಟ್ಟರೂ ದಲಿತರು ಸುಳ್ಳು ಜಾತಿ ಹೇಳಬೇಕಷ್ಟೆ. ಮಹದೇವಯ್ಯ ಎಂಬ ತಮ್ಮ ಹೆಸರನ್ನು ಮಹದೇವೇಗೌಡ, ಮಹದೇವಪ್ಪ, ಮಹದೇವಾಚಾರ್, ಮಹದೇವ ಶೆಟ್ಟಿ ಹೀಗೆ ಬದಲಿಸಿಕೊಂಡು ಸುಳ್ಳು ಹೇಳಬೇಕಷ್ಟೆ! ಅಕಸ್ಮಾತ್ ಮೇಲ್ಜಾತಿ ಜನರಿಗೆ ಇವರ ಒರಿಜಿನಲ್ ಜಾತಿ ಗೊತ್ತಾದರೆ? ಇವರ ಪರಿಸ್ಥಿತಿ ಅಂಬೇಡ್ಕರರಿಗಿಂತೇನು ಭಿನ್ನವಾಗಿರಲಿಕ್ಕಿಲ್ಲ. ಒಂದಂತು ನಿಜ, ಸ್ವಾಭಿಮಾನದ ಜ್ಯೋತಿ ಎದುರಿಸಿದ ಕಷ್ಟದ ಕ್ಷಣಗಳವು.
ಗೋರೆಗಾಂವ್‍ಗೆ ಹೋಗುವಾಗ ಆ ಕಾಡುಗತ್ತಲಲ್ಲಿ ಬಾಬಾಸಾಹೇಬರ ಆ ಸುಂದರ ದೇಹ, ಮಗುವಿನ ಮನಸ್ಸು ಅದೆಷ್ಟು ನೊಂದಿರಬೇಡ? ನೀರು ಆಹಾರ ಇಲ್ಲದೆ ಅದೆಷ್ಟು ದಣಿದಿರಬೇಡ? ಹಿಂದೂ ಜಾತಿವ್ಯವಸ್ಥೆ ಕಂಡರೆ ಸಿಟ್ಟು ಬರುವುದು ಈ ಕಾರಣಕ್ಕೆ. ಮೇಲು-ಕೀಳು ವ್ಯವಸ್ಥೆ ಸೃಷ್ಟಿಸಿ, ಸ್ಪøಶ್ಯ-ಅಸ್ಪøಶ್ಯ ಎಂಬ ಅಂತರ ಸೃಷ್ಟಿಸಿ ತಮ್ಮೊಳಗೇ ಇರುವ ಕೆಲವರನ್ನು ಪ್ರಾಣಿಗಳಿಗಿಂತ ಹೀನಾಯವಾಗಿ ಕಂಡು ನಿರಂತರ ದೌರ್ಜನ್ಯ ಎಸಗುತ್ತಿರುವ ಅಮಾನವೀಯ ಸಂಸ್ಕøತಿಯದು. ಇಂತಹ ಅಮಾನವೀಯ ಸಂಸ್ಕøತಿಯು ಮಾನವೀಯತೆಯ ಸಾಕಾರದಂತಿರುವ ಅಂಬೇಡ್ಕರರ ವಿರುದ್ಧ ನಡೆಸಿರುವ ದೌರ್ಜನ್ಯವಿದೆಯಲ್ಲಾ ಅದು ಎಂದೂ ಕ್ಷಮಿಸಲಾರದಂಥದ್ದು. ಶೋಷಿತ ಸಮುದಾಯ, ತನ್ನ ನಾಯಕನಿಗೆ ಅಪಮಾನ ಎಸಗಿರುವ ಆ ಅನಾಗರೀಕ ಸಮಾಜವನ್ನು ಎಂದಿಗೂ ಕ್ಷಮಿಸುವುದಿಲ್ಲ. ಕ್ಷಮಿಸಲೂ ಬಾರದು.
ಹಾಗಿದ್ದರೆ ಆ ಅನಾಗರೀಕ ಸಮಾಜಕ್ಕೆ, ಅದು ಎಸಗಿರುವ ಪಾಪಕ್ಕೆ ಶಿಕ್ಷೆ? ಶೋಷಿತರು ಸ್ವಾಭಿಮಾನಿಗಳಾಗುವುದು. ಅಂಬೇಡ್ಕರರ ಮಾರ್ಗದಲ್ಲಿ ಉತ್ತಮ ಶಿಕ್ಷಣ ಪಡೆದು ಶೋಷಿತ ಸಮುದಾಯಗಳು ಸ್ವಾಭಿಮಾನದ ಮೇರು ಪರ್ವತಗಳಾಗುವುದು. ಯಾಕೆಂದರೆ ನಮ್ಮನ್ನು ಕಂಡರೆ ಆಗದವರ ಎದುರಲ್ಲಿ ನಾವು ಇನ್ನೂ ಉತ್ತಮ ಮಟ್ಟದಲ್ಲಿ ಬದುಕುವುದಿದೆಯಲ್ಲಾ, ಅವರಿಗಿಂತ ಎಲ್ಲದರಲ್ಲೂ ಒಂದು ಕೈ ಮೇಲೆನಿಸಿಕೊಳ್ಳುವುದಿದೆಯಲ್ಲಾ ದೌರ್ಜನ್ಯಕೋರರನ್ನು ಅದಕ್ಕಿಂತ ಮಾನಸಿಕವಾಗಿ ಕುಗ್ಗಿಸುವ ಅಂಶ ಬೇರೊಂದಿರಲಿಕ್ಕಿಲ್ಲ. ಅವರು ಕುಗ್ಗಿದರೆಂದರೆ ಅಂಬೇಡ್ಕರ್ ಗೆದ್ದರೆಂದೇ ಅರ್ಥ. ಈ ನಿಟ್ಟಿನಲಿ ಶೋಷಿತ ಸಮುದಾಯ ಎಚ್ಚೆತ್ತುಕೊಳ್ಳಲಿ. ತನ್ನ ಎದೆಯಲ್ಲಿ ಅಂಬೇಡ್ಕರರ ಸ್ವಾಭಿಮಾನದ ಕೆಚ್ಚನ್ನು ತುಂಬಿಕೊಳ್ಳಲಿ. ತನ್ಮೂಲಕ ದೌರ್ಜನ್ಯಕೋರರಿಗೆ ತಕ್ಕ ಉತ್ತರ ನೀಡಲಿ.
ಆಕರ ಗ್ರಂಥಗಳು
- Dr.Babasaheb Ambedkar writings and speeches (vol.17. part III, P.120,123,124,127)
- Ibid,P.108
- Ibid,P.108
- Ibid,P.109, 110
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

ದಿನದ ಸುದ್ದಿ
ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ
ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.
ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

-
ದಿನದ ಸುದ್ದಿ4 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ3 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ3 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ3 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ಅಂಕಣ2 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ2 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ


