ರಾಜಕೀಯ
99% ಭಾರತೀಯರು V/S 1% ಕೋಮುವಾದಿಗಳು

- 8.1.2020ರಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಬೆಂಗಳೂರಿನಲ್ಲಿ ಕೇಂದ್ರದ ಜನವಿರೋಧಿ ಪೌರತ್ವ ಕಾಯ್ದೆ[CAA, NRC, NPR] ಕುರಿತು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ ಇಲ್ಲಿದೆ.
–ದೇವನೂರ ಮಹಾದೇವ
ಭಾರತ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ, ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ಬಂದಾಗಲೆಲ್ಲ, ಭಾರತ ತನ್ನ ಅಂತಃಸತ್ವದ ಭವ್ಯತೆಯನ್ನು ಬೆಳಗುತ್ತದೆ ಎಂದು ಕಾಣುತ್ತದೆ. ಆ ಬೆಳಗುವಿಕೆ ಇಂದು ನಿಚ್ಚಳವಾಗಿ ಕಾಣುತ್ತಿದೆ. ಹೃದಯ, ಮಿದುಳು, ಹೊಟ್ಟೆ ತುಂಬ ಗಣಿ ಲೂಟಿ ದುಡ್ಡನ್ನೆ ತುಂಬಿಕೊಂಡ ಮದದ ಸೋಮಶೇಖರರೆಡ್ಡಿ ಎಂಬ ಬಿಜೆಪಿ ಶಾಸಕ ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿಸುವವರಿಗೆ ‘ನೀವು 20% ಇದ್ದೀರಿ, ನಾವು 80% ಇದ್ದೇವೆ.
ಜೋಕೆ’ ಎಂದು ಹೇಳಿದ್ದಕ್ಕೆ ಭವ್ಯ ಎಂಬ ತರುಣಿ ಹೇಳುವುದು ಹೀಗೆ- “ರೆಡ್ಡಿ, ನೆನಪಿರಲಿ, ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿಸುವ ನಾವು ಭಾರತೀಯರು 99% ಇದ್ದೇವೆ. ನೀವು ಕೋಮುವಾದಿಗಳು 1% ಇದ್ದಿರಿ” ಈ ಮಾತಲ್ಲಿ ಭಾರತದ ಭವ್ಯತೆ ಪ್ರಕಾಶಗೊಳ್ಳುತ್ತದೆ. ಇಂದು ಸಂಘರ್ಷ ನಡೆಯುತ್ತಿರುವುದು 99% We the people of India V/s 1% ಕೋಮುವಾದಿ ಗ್ಯಾಂಗ್ ನಡುವೆ.
ಹೀಗೆ ಭವ್ಯ ಥರಾನೇ ಉನ್ನತ ಅಧಿಕಾರಿಗಳಾಗಿದ್ದ ಸಸಿಕಾಂತ್ ಸೆಂಥಿಲ್ ಹಾಗೂ ಕಣ್ಣನ್ ಗೋಪಿನಾಥ್ ನಡೆನುಡಿ ನೋಡಿದಾಗಲೂ ಭಾರತಕ್ಕೆ ಭವಿಷ್ಯವಿದೆ ಅನ್ನಿಸುತ್ತದೆ. ಎಲ್ಲಕ್ಕಿಂತ ಸಂವಿಧಾನದ ಮೌಲ್ಯಕ್ಕೆ ಬಿಲ ತೋಡಿ ತಿಂದು ಹಾಕುತ್ತಿದ್ದ ಇಲಿ ಹೆಗ್ಗಣಗಳ ವಿರುದ್ಧವಾಗಿ ವಿದ್ಯಾರ್ಥಿ ಯುವಜನರ ಸ್ಫೋಟ ಕಂಡಾಗ ಈ ವಿದ್ಯಾರ್ಥಿ ಯುವಜನರ ನಾಯಕತ್ವಕ್ಕೆ ಭಾರತವನ್ನು ಕಾಪಾಡುವ ಶಕ್ತಿ ಇದೆ ಎಂದು ಅನ್ನಿಸುತ್ತದೆ.
ಇಂದು ದೇಶದ ತುಂಬಾ ಸಿಎಎ, ಎನ್‍ಆರ್‍ಸಿ ಎನ್‍ಪಿಆರ್ ಬಗ್ಗೆ ಭೀತಿ ತುಂಬಿದೆ. ಎಷ್ಟೆಂದರೆ ಇತ್ತೀಚೆಗೆ ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ಮಾಹಿತಿಗಳನ್ನು ಸಂಗ್ರಹಿಸಲು ಬಂದಾಗ ಅಲ್ಲಿನ ಜನರು ಆ ಗಣತಿಯು ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಬಲೆ ಇರಬೇಕೆಂದು ಭಾವಿಸಿ ಆ ಗಣತಿ ಫಾರಂಗಳನ್ನು ಹರಿದೆಸೆದು ಹಿಂದಕ್ಕೆ ಕಳಿಸಿದ್ದಾರೆ. ಅಷ್ಟೊಂದು ಭೀತಿ ಹರಡಿದೆ.
ಈಗ, ನನ್ನ ಹುಟ್ಟಿದ ದಿನಾಂಕ ಕೇಳಿದರೆ ನನ್ನ ಅವ್ವ ಹೇಳಿದಂತೆ-ಅದು ಸೋಮವಾರ ಸಂಜೆ ರೈಲು ಕವಲಂದೆ ಸ್ಟೇಷನ್‍ನಲ್ಲಿ ನಿಂತು ಹೊರಡುವ ಸಮಯವಂತೆ. ಹೀಗಿರುವಾಗ ದಿನಾಂಕ ಹೇಗೆ ಹೇಳಲಿ? ನನ್ನ ಮೊಮ್ಮಗಳಿಗೆ ನನಗೆ ಬರ್ತ್‍ಡೇ ಇಲ್ಲ ಎಂದು ತಿಳಿದು ಅವಳು ಬೇಜಾರು ಮಾಡಿಕೊಂಡು ‘ನನ್ನ ಹುಟ್ಟಿದ ದಿನವೇ ನಿನ್ನ ಹುಟ್ಟಿದ ದಿನ’ ಎಂದು ನನಗೆ ಸಮಾಧಾನ ಮಾಡಿದ್ದಾಳೆ! ನನಗೇ ಹೀಗಿರುವಾಗ, ಇನ್ನು ನಮ್ಮ ಅಪ್ಪನ ಹುಟ್ಟಿದ ದಿನಾಂಕ ಕೇಳಿದರೆ ಏನು ಹೇಳಲಿ? ಇರುವುದನ್ನು ಹೇಳಿದರೆ ನಾನು ಅನುಮಾನಾಸ್ಪದ [Doughtful] ವ್ಯಕ್ತಿಯಾಗುತ್ತೇನೆ.
ಏನು ಹೇಳಲಿ? ಮೋದಿಯವರ ಅಪ್ಪ ಹುಟ್ಟುವ ಐದು ವರ್ಷಕ್ಕೆ ಮೊದಲು ಎನ್ನಲೆ? ಅಥವಾ ಅಮಿತ್‍ಷಾರ ಅಪ್ಪ ಹುಟ್ಟುವ 20 ವರ್ಷಕ್ಕೆ ಮೊದಲು ಎನ್ನಲೆ? ಬಹುಶಃ ನನ್ನ ಮೂಲ ಇರುವುದು ಹರಪ್ಪ-ಮಹೆಂಜೋದಾರೋದಲ್ಲಿ. ಅದು ಇಂದು ಪಾಕಿಸ್ತಾನದಲ್ಲಿದೆ ಏನು ಮಾಡಲಿ? ಈಗ ಮೊದಲು ಎನ್‍ಪಿಆರ್ ಬಲೆ ಹಾಕುತ್ತಾರೆ. ಇದರ ಆಧಾರದ ಮೇಲೆ ಎನ್‍ಆರ್‍ಸಿ ಆವರಿಸಿ ಅನುಮಾನಾಸ್ಪದ [Doughtful] ಮಾಡುತ್ತಾರೆ. ಆಮೇಲೆ ಈ ಅನುಮಾನಾಸ್ಪದ ‘ಡಿ’ ಗೆ ಸಿಎಎ[ಕಾ] ಯಮಪಾಶ ಹಾಕುತ್ತಾರೆ. ಇದನ್ನೇ ಐತಿಹಾಸಿಕ ಎನ್ನುತ್ತಿದ್ದಾರೆ.
ಇಂತಹವುಗಳನ್ನೆಲ್ಲಾ ಮಾಡಲು ಹೊರಟವರು ಹೇಗೆ ಮಣ್ಣು ಮುಕ್ಕಿದರು ಎಂದು ನಾವು ಅಕ್ಕಪಕ್ಕ ನೋಡಿಯಾದರೂ ಕಲಿಯಬೇಕಾಗಿದೆ. ಪತ್ರಕರ್ತ ಕೆ.ಎಸ್.ದಕ್ಷಿಣಾಮೂರ್ತಿಯವರು ತಮ್ಮ ಲೇಖನವೊಂದರಲ್ಲಿ ಹೇಗೆ ಕೆಲವು ದೇಶಗಳು ತಂತಮ್ಮ ದೇಶದ ರಾಜಧರ್ಮ ಹಾಗೂ ಸಂವಿಧಾನದಲ್ಲಿ ಹಸ್ತಕ್ಷೇಪ ಮಾಡಲು ಹೋಗಿ ಏನೆಲ್ಲಾ ದುರಂತಕ್ಕೆ ತುತ್ತಾದವು ಎಂಬುದನ್ನು ವಿವರಿಸುತ್ತಾರೆ.
1956ರಲ್ಲಿ ಶ್ರೀಲಂಕಾ ‘ಸಿಂಹಳದವರಿಗೆ ಮಾತ್ರ’ ಎಂದು ಮಾಡಲು ಹೋಗಿ ಎಲ್‍ಟಿಟಿಇ ಹುಟ್ಟಿಗೆ ಕಾರಣವಾಯ್ತು. ಧ್ವಂಸ, ಹಿಂಸೆ, ಸಾವು, ನೋವು ರಾಜೀವ್‍ಗಾಂಧಿಯವರನ್ನು ಬಲಿ ತೆಗೆದುಕೊಂಡಿತು. ರುವಾಂಡಾದಲ್ಲಿ ಅಲ್ಪಸಂಖ್ಯಾತ ಟುಟ್ಸಿ ಮತ್ತು ಬಹುಸಂಖ್ಯಾತ ಹುಟುಗಳ ಮಧ್ಯೆ ಸರ್ಕಾರವೇ ಬತ್ತಿ ಇಟ್ಟಿತು. ಐ.ಡಿ ಕಾರ್ಡ್ ಕಡ್ಡಾಯ ಮಾಡುತ್ತದೆ. ಕೇವಲ ನೂರು ದಿನಗಳಲ್ಲಿ 8 ಲಕ್ಷ ಜನ ಹತರಾಗುತ್ತಾರೆ.
ಸಾಯುವಾಗ ಒಂದೇ ಗುಂಪಿನವರು ಸಾಯುವುದಿಲ್ಲ. ಅಮಾಯಕರು ಹೆಚ್ಚು ಸಾಯುತ್ತಾರೆ. ಇದನ್ನೀಗ ಭಾರತ ಸರ್ಕಾರ ಮಾಡಲು ಹೊರಟಿದೆ. ಪಾಕಿಸ್ಥಾನದಲ್ಲಿ ಕೂಡ ಉರ್ದು ಭಾಷೆ ಮತ್ತು ಲಿಪಿಯನ್ನು ಬೆಂಗಾಲಿ ಮುಸ್ಲಿಮರ ಮೇಲೆ ಹೇರಲು ಹೋಗಿ ಇಡೀ ರಾಷ್ಟ್ರವೇ ಹೋಳಾಯ್ತು.
ಯುಗೊಸ್ಲಾವಿಯದಲ್ಲಿ ಎಂದೋ ಮುಚ್ಚಿಹೋಗಿದ್ದ ಜನಾಂಗೀಯ/ ಧಾರ್ಮಿಕ ಬಿರುಕನ್ನು ಮತ್ತೆ ಕೆದಕಲು ಹೋಗಿ ಕ್ರಿಶ್ಚಿಯನ್‍ರ ವಿರುದ್ಧ ಮುಸ್ಲಿಮರು, ಸರ್ಬರ ವಿರುದ್ಧ ಬೊಸ್ನಿಯನ್ನರು, ಕ್ರೊವೇಷಿಯನ್ನರ ವಿರುದ್ಧ ಸರ್ಬರು ಪರಸ್ಪರ ಶತ್ರುಗಳಾಗಿ ಈಗಲೂ ಅಲ್ಲಿ ಹಿಂಸೆ ತಾಂಡವವಾಡುತ್ತಿದೆ.
ಈ ರೀತಿಯಾಗುವುದು ಭಾರತಕ್ಕೆ ಬೇಕಾಗಿದೆಯೆ? ಸರ್ಕಾರಕ್ಕೇ ತನ್ನ ವಿಫಲತೆ ಮುಚ್ಚಿಕೊಳ್ಳಲು ಬೇಕಾಗಿರಬಹುದು. ಜನರು ಪೌರತ್ವ ರುಜುವಾತು ಪಡಿಸಲು ಅಲೆಯುತ್ತಿರಲಿ. ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಕುಸಿತಕ್ಕೆ ತಲೆ ಕೆಡಿಸಿಕೊಳ್ಳದಿರಲಿ ಎಂದು ಸರ್ಕಾರವೇ ಪೌರತ್ವದ ಬೆಂಕಿ ಹಚ್ಚಿದೆ ಎಂದು ಕಾಣುತ್ತದೆ.
ನನ್ನ ಪೌರತ್ವದ ಬಗ್ಗೆ ಅನುಮಾನವಿರಬಹುದು ಆದರೆ ಸರ್ಕಾರವೇ ಪೌರತ್ವದ ಬೆಂಕಿ ಹಚ್ಚಿರುವುದರಲ್ಲಿ ಅನುಮಾನವೇ ಇಲ್ಲ. ಇದೆಲ್ಲಾ ಜನಸಮುದಾಯಕ್ಕೆ ಬೇಕಾಗಿದೆಯೆ? ಇದನ್ನೆಲ್ಲಾ ಪ್ರಶ್ನಿಸಬೇಕಾದ ಸಂಸತ್‍ನಲ್ಲಿ ಅಪರಾಧಿಗಳು, ಕೋಟ್ಯಾಧಿಪತಿಗಳು ಹೆಚ್ಚಾಗಿದ್ದು ಸಂಸತ್‍ನಿಂದ ಏನನ್ನೂ ನಿರೀಕ್ಷಿಸಲಾಗದು ಎನ್ನುವಂತಾಗಿದೆ. ಹಾಗೂ ರಾಜಕೀಯ ಪಕ್ಷಗಳ ಸ್ಥಿತಿಗತಿಯೂ ದಯನೀಯವಾಗಿದೆ.
ಕಮ್ಯುನಿಸ್ಟರು ಸ್ಥಗಿತವಾಗಿದ್ದಾರೆ. ಆಮ್‍ಆದ್ಮಿ, ಸ್ವರಾಜ್‍ಇಂಡಿಯಾದಂತಹ ಪ್ರಯೋಗಶೀಲ ಪಕ್ಷಗಳು ವ್ಯಾಪಕವಾಗುತ್ತಿಲ್ಲ. ಮೋದಿಶಾ ಆಡಳಿತವು ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳನ್ನು ತೆವಳುವಂತೆ ಮಾಡಿಬಿಟ್ಟಿದೆ. ವಿಪರ್ಯಾಸವೆಂದರೆ ಈ ಮೋದಿಶಾ ಆಡಳಿತವು ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳನ್ನು ತೆವಳುವಂತೆ ಮಾಡಿಬಿಟ್ಟಿವೆ.
ವಿಪರ್ಯಾಸವೆಂದರೆ ಈ ಮೊದಿಶಾ ಆಡಳಿತವು ಸ್ವತಃ ತನ್ನ ಪಕ್ಷ ಬಿಜೆಪಿಯನ್ನೇ ಧ್ವಂಸ ಮಾಡಿಬಿಟ್ಟಿದೆ. ಅತಿ ದೊಡ್ಡ ಪಕ್ಷ ಎನಿಸಿಕೊಂಡಿರುವ ಬಿಜೆಪಿಗೆ ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಯಾವ ಚಹರೆಯೂ ಇಂದು ಉಳಿದಿಲ್ಲ. ಜೀವ ಇಲ್ಲದ ಸತ್ತ ದೇಹದಂತೆ ಇದೆ. ಬಿಜೆಪಿ ಪಕ್ಷದ ಹೆಸರಿನಲ್ಲಿ ಮೋದಿ-ಶಾ ಗ್ಯಾಂಗ್ ಆಡಳಿತ ನಡೆಸುತ್ತಿದೆ.
ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ಸಂವಿಧಾನದ ಸಭೆಯಲ್ಲಿ, ಜಾತಿ ಮತ ಭೇದದ ಕಾರಣವಾಗಿ ಭಾರತವು ಹೇಗೆ ಗುಲಾಮಗಿರಿಗೆ ತುತ್ತಾಯಿತು ಎಂಬ ಸಂಗತಿಗಳನ್ನು ವಿವರಿಸಿ ಹೇಳುತ್ತ ನೀಡುವ ಎಚ್ಚರಿಕೆಯನ್ನು ನಾವಿಂದು ಕೇಳಿಸಿಕೊಳ್ಳಬೇಕಾಗಿದೆ- “ಚರಿತ್ರೆ ಮತ್ತೆ ಮರುಕಳಿಸುತ್ತದೆಯೇ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತದೆ.
ನಮಗೆ ಈಗಾಗಲೇ ಇದ್ದ ಹಳೆಯ ಶತ್ರುಗಳಾದ ಜಾತಿ, ಧರ್ಮಗಳ ಜೊತೆಗೆ ವಿಭಿನ್ನ ಮತ್ತು ವಿರೋಧೀ ರಾಜಕೀಯ ಸಿದ್ಧಾಂತಗಳ ಹಲವು ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತವೆ. ಈ ವಾಸ್ತವ ಅರಿವಾದ ಕೂಡಲೆ ನನ್ನ ಆತಂಕ ಇನ್ನೂ ತೀವ್ರವಾಗುತ್ತದೆ. ಭಾರತೀಯರು ದೇಶವನ್ನು ತಮ್ಮ ಮತಧರ್ಮಗಳಿಗಿಂತ ಮುಖ್ಯವೆಂದು ಭಾವಿಸುತ್ತಾರೆಯೋ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಮತಧರ್ಮಗಳೇ ಹೆಚ್ಚು ಮುಖ್ಯವಾಗುತ್ತದೋ? ನನಗೆ ಗೊತ್ತಾಗುತ್ತಿಲ್ಲ. ಆದರೆ ಇಷ್ಟಂತೂ ಖಚಿತ.
ರಾಜಕೀಯ ಪಕ್ಷಗಳು ಜಾತಿಧರ್ಮವನ್ನೇ ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ. ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಂಡುಬಿಡುತ್ತೇವೆ. ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೆ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪ ಮಾಡಬೇಕು.”
ಈ ಕಾಲ ಈಗ ಬಂದಿದೆ. ಭಾರತದ ಪೌರತ್ವ ನಿರ್ಧಾರಕ್ಕೆ ಮತಧರ್ಮಗಳನ್ನೂ ಪರಿಗಣಿಸಿ ಸಂವಿಧಾನದ ಮೌಲ್ಯಕ್ಕೆ ಬಿಲ ತೋಡಿ ತಂತಾನೇ ಸಂವಿಧಾನದ ಆಸೆಗಳು ಕುಸಿಯುವಂತೆ ಮಾಡಲಾಗುತ್ತಿದೆ. ಹೌದು, ಇಂದು ಭಾರತ ಎರಡನೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಯಾಚಿಸುತ್ತಿದೆ.
ಕೊನೆಯದಾಗಿ, ಇಷ್ಟಿದ್ದೂ ಹೀಗಿದ್ದೂ ಆದರೂ ಮೋದಿಯವರಿಗೆ ಒಂದು ಪ್ರಾರ್ಥನೆ ಮಾಡುವೆ. ನಿಮ್ಮ ಕಣ್ಗಳ ಕೆಳಗೆ ನಡೆದ ಜೆಎನ್‍ಯು ಘಟನೆಯನ್ನು ನೋಡಿ ತತ್ತರಿಸಿ ಹೋದೆ. ಗುಂಪು ಥಳಿತ ನೋಡಿದಾಗಲು ಈ ದೇಶದಲ್ಲಿ ರಾಜನಿಲ್ಲ (ರೂಲರ್ ಇಲ್ಲ), ಅರಾಜಕತೆ ಇದೆ ಅನ್ನಿಸುತ್ತದೆ. ಪೊಲೀಸ್ ವ್ಯವಸ್ಥೆ ಕಳಂಕಿತವಾಗಿ ಬಿಟ್ಟಿತು.
ಇನ್ನು ಮಿಲ್ಟ್ರಿಕತೆ ಏನೋ ಗೊತ್ತಿಲ್ಲ. ಇದು ಪ್ರಧಾನಿಯ ಬುಡವನ್ನೆ ಬುಡಮೇಲು ಮಾಡುತ್ತದೆ. ಮಾಂತ್ರಿಕರು ಭೂತ ಪಿಶಾಚಿಗಳನ್ನು ವಶಪಡಿಸಿಕೊಂಡು ಒಂದು ಬಾಟಲ್‍ನಲ್ಲಿ ಕೂಡಿ ಭದ್ರವಾಗಿ ಮುಚ್ಚಳ ಹಾಕಿ ಇಟ್ಟುಕೊಂಡಿರುತ್ತಾರಂತೆ. ಅವರೇನಾರು ರಾಗದ್ವೇಷಕ್ಕೆ ಒಳಗಾಗಿ ಮುಚ್ಚಳ ತೆಗೆದು ಪಿಶಾಚಿಗಳನ್ನು ತನ್ನ ಹಗೆ ಮೇಲೆ ಛೂ ಬಿಟ್ಟರೆ ಅವು ಎಲ್ಲವನ್ನೂ ತಿಂದು ಹಾಕಿ ಕೊನೆಗೆ ವಶಪಡಿಸಿಕೊಂಡಿರುವ ಮಾಂತ್ರಿಕನ ಬಳಿಗೆ ಬಂದು ಮಾಂತ್ರಿಕನನ್ನೇ ತಿಂದು ಹಾಕುತ್ತವಂತೆ.
ಒಬ್ಬ ರೂಲರ್ Negative ಆದಾಗ ಇದು ಆಗುತ್ತಾ ಬಂದಿದೆ. ಇಂಥವರಿಗೆ ಅವರ ಪಕ್ಕದಲ್ಲಿ ಇರುವವರೇ ಮೃತ್ಯು ಆಗುತ್ತಾರೆ. ತಾವು ಗುಹೆಯಲ್ಲಿ ಧ್ಯಾನ ಮಾಡುತ್ತಿರುವುದನ್ನು ಟಿವಿಯಲ್ಲಿ ನೋಡಿದ್ದರಿಂದ ಇದನ್ನು ಹೇಳಬೇಕಾಯ್ತು, ಕ್ಷಮೆ ಇರಲಿ. ತಮ್ಮ ಧ್ಯಾನವು ರಾಗದ್ವೇಷ ಇಲ್ಲದ ಮನಸ್ಸನ್ನು ಪಡೆಯುವಂತಾಗುವುದಕ್ಕೆ ಕಾರಣವಾಗಿ ಅದರಿಂದ ಆರ್ಥಿಕ ಚೇತರಿಕೆ, ಬೆಲೆ ಏರಿಕೆಯ ನಿಯಂತ್ರಣ, ಉದ್ಯೋಗ ಹೆಚ್ಚಳಕ್ಕೆ ಕಾರಣವಾದರೆ ದೇಶಕ್ಕೆ ಒಳ್ಳೆಯದು, ತಮಗೂ ಕೂಡ. ನಮಸ್ಕಾರ.
ಕೃಪೆ : ನಮ್ಮ ಬನವಾಸಿ.ಕಾಂ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪತ್ರಕರ್ತರ ಮೇಲೆ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಹಲ್ಲೆ, ಕೊಲೆ ಬೆದರಿಕೆ

- ವರದಿ : ಗಿರೀಶ್ ಕುಮಾರ್ ಗೌಡ, ಬಳ್ಳಾರಿ
ಸುದ್ದಿದಿನ,ಹೊಸಪೇಟೆ:ಕಾರಿನ ಗ್ಲಾಸ್ ಮುಂದೆ ಎಂ.ಎಲ್.ಎ ಕಾರು ಪಾಸು ಇಟ್ಟುಕೊಂಡು ತನ್ನ ಬೆಂಬಲಿಗರು, ಗನ್ ಮ್ಯಾನ್ ನೊಂದಿಗೆ ತಹಶಿಲ್ದಾರರ ಹಾಗೂ ಕೋರ್ಟ್ ಗೆ ಹಾಜರಾಗದ್ದಾಗ ಪ್ರಶ್ನೆ ಕೇಳಲು ಮುಂದಾದ ಪತ್ರಕರ್ತರಿಗೆ .ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ಕೊಲೆ ಬೆದರಿಕೆ ಹಾಕಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ವಿಡಿಯೋ ಮಾಡಿದಕ್ಕೆ ವಾರ್ತಾ ಭಾರತಿಯ ಪತ್ರಿಕೆಯ ಜಿಲ್ಲಾ ವರದಿಗಾರ ಮಹಮ್ಮದ್ ಗೌಸ್ ಮೇಲೆ ಕೆ.ಎಂ.ಎಫ್ ನ ಅಧ್ಯಕ್ಷ ಭೀಮಾ ನಾಯ್ಕ ಹಲ್ಲೆ ಮಾಡಿ, ಕೊಲೆ
ಬೆದರಿಕೆ ಹಾಕಿದ ದುರ್ಘಟನೆ ವಿಜಯನಗರ ಜಿಲ್ಲೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಕರ್ನಾಟಕ ರಾಜ್ಯ ಸರ್ಕಾರದ ಕೆ.ಎಂ.ಎಫ್ ಹಾಲಿ ಅಧ್ಯಕ್ಷ ಭೀಮಾನಾಯ್ಕ್, ತನ್ನ ಕಾರಿಗೆ ಭೀಮಾನಾಯ್ಕ್ , ಹಗರಿಬೊಮ್ಮನಹಳ್ಳಿ ತಾಲೂಕಿನ ಎಂ.ಎಲ್.ಎ ಶಾಸಕರು ಎನ್ನುವ ಪಾಸು ಅಂಟಿಸಿಕೊಂಡು ಹಗರಿಬೊಮ್ಮನಹಳ್ಳಿಯಿಂದ ವಿಜಯ ನಗರ ಜಿಲ್ಲೆಯ ಹೊಸಪೇಟೆ ನಗರದ ತಹಶಿಲ್ದಾರರ ಕಂದಾಯ ಇಲಾಖೆಗೆ ಹಾಗೂ ಕೋರ್ಟ್ ಗೆ ಆಗಮಿಸಿದ್ದರು.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಹಶಿಲ್ದಾರರ ಕಚೇರಿಗೆ ರಿಜಿಸ್ಟರ್ ಹಾಗೂ ಆಸ್ತಿ ವಿಚಾರವಾಗಿ ಹೊಸಪೇಟೆ ಕೋರ್ಟ್ ಹಾಜರಾದಾಗ ಎರಡು ದಿನಗಳಿಂದ ಭೀಮಾನಾಯ್ಕ್ ಅವರು ಕಾರಿಗೆ ಕೆ.ಎ 41 ಎಂ.ಎಫ್ 4599 ಈ ವಾಹನಕ್ಕೆ ಪಾಸ್ ಸಂಖ್ಯೆ 89, ಕರ್ನಾಟಕ ವಿಧಾನಸಭಾ ಕ್ಷೇತ್ರ, ಭೀಮಮಾಯ್ಕ್ ಎಸ್,ಹಗರಿಬೊಮ್ಮನಹಳ್ಳಿ ಶಾಸಕರು, MLA ಎನ್ನುವ ಹಸಿರಿನ ಪಾಸು ಇಟ್ಟುಕೊಂಡು ಎರಡು ದಿನಗಳಿಂದ ಜಿಲ್ಲೆಯಲ್ಲಿ ಓಡಾಡುತ್ತಿದ್ದೆವೆ ಎನ್ನುವ ಕಾರು ಚಾಲಕ, ಈ ರೀತಿ ಸಂಚಾರ ಮಾಡಿದ್ದು ದುರ್ಘಟನೆ ನಡೆದಿದೆ.
ಇನ್ನು ಈ ವಿಚಾರವಾಗಿ ಏಕೆ ? ತಹಶಿಲ್ದಾರರ ಕಚೇರಿ ಬಂದಿರಾ, ಪತ್ರಕರ್ತರ ವಿಡಿಯೋ ಮಾಡಿ, ಪ್ರಶ್ನೆ ಕೇಳಿದಕ್ಕೆ , ಏಕೆ ? ರೀ ವಿಡಿಯೋ ಮಾಡ್ತಿರಾ ಕಂದಾಯ ಇಲಾಖೆಗೆ ಬರಬಾರದ ಎಂದು ಏರು ಧ್ವನಿಯಲ್ಲಿ ಮಾತನಾಡಿದರು.
ಹೊಸಪೇಟೆ ಈಟಿವಿ ಭಾರತ್ ವರದಿಗಾರ ಗಿರೀಶ್ ಕುಮಾರ್ ಗೌಡ ಹಾಗೂ ವಾರ್ತಾ ಭಾರತೀ ಪತ್ರಿಕೆಯ ವರದಿಗಾರರಾದ ಮಹಮ್ಮದ್ ಗೌಸ್ ಅವರು ಭೀಮಾನಾಯ್ಕ್ ಅವರು ಹೊಸಪೇಟೆ ಬಂದ ವಿಚಾರ ಬಗ್ಗೆ ಹಾಗೂ ಇನ್ನಿತರ ಕಾಂಗ್ರೆಸ್ ಪಕ್ಷದ ಬೆಳವಣಿಗೆ ವಿಚಾರವಾಗಿ ಕೇಳಬೇಕೆಂದು ಇದ್ದರೆ ಭೀಮಾನಾಯ್ಕ್ “ನೋ ಕಾಮೆಂಟ್ಸ್’ ಎನ್ನುವ ಉತ್ತರ ನೀಡಿದ್ದರು. ನಂತರ ಕಾರು ಮುಂದಕ್ಕೆ ಹೋಗಿ ನಂತರ ವಾಪಾಸ್ಸು ಬಂದು, ಪತ್ರಕರ್ತರಾದ ವಿಜಯನಗರ ಜಿಲ್ಲೆ ವಾರ್ತಾ ಭಾರತಿ ಜಿಲ್ಲಾ ವರದಿಗಾರ ಮಹಮ್ಮದ್ ಗೌಸ್ ವಿಡಿಯೋ ಮಾಡಿದಕ್ಕೆ ಅವರಿಗೆ ಅವಾಚ್ಯ ಶಬ್ಧಗಳಿಂದ ಬೈದು, ಅವರ ಮೊಬೈಲ್ ಕಳಿಸಿಕೊಂಡು, ಕೈ ಮುರಿದು ಹಲ್ಲೆ ಮಾಡಿದ್ದಾರೆ. ಅವರ ಬೆಂಬಲಿಗರು ನಿಮ್ಮನ್ನ ನೋಡಿ ಕೊಳ್ಳುತ್ತೇವೆ, ಕೊಲೆ ಮಾಡುವ ಬೆದರಿಕೆ ಹಾಗೂ ದಬ್ಬಾಳಿಕೆ ಮಾಡಿದರು. ನಂತರ ಕೋರ್ಟ್ ನಲ್ಲಿ ಇದ್ದ ವಕೀಲರು ಇನ್ನಿತರರು ಆಗಮಿಸಿದ ನಂತರ ಅಲ್ಲಿಂದ ಕಾಲು ಕಿತ್ತಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಭೀಮಾನಾಯ್ಕ್ ರಿಂದ ನಾಚಿಕೆಗೇಡು
ಇನ್ನು ನಾಚಿಕೆಗೆಡಿನ ಸಂಗತಿಯಾಗಿ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರು ಹಗರಿಬೊಮ್ಮನಹಳ್ಳಿ ಶಾಸಕ ಎಂದು ಪಾಸು ಇಟ್ಟುಕೊಂಡು ಊರೆಲ್ಲಾ ಸುತ್ತಿದ್ದು ಕಾಂಗ್ರೆಸ್ ಪಕ್ಷದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಗೆಡಿನ ಸಂಗತಿ ಆಗಿದೆ.
ಇನ್ನು ಈ ವಿಚಾರವಾಗಿ ಕೋರ್ಟ್ ನಲ್ಲಿ ಇದ್ದ ಕಾರಿನ ಮೇಲೆ ಪಾಸು ಇರುವ ಬಗ್ಗೆ ವಿಡಿಯೋ ಮಾಡಿದ ನಂತರ ಕಾರು ಚಾಲಕ ಇಲ್ಲ ಸರ್, ಎರಡು ದಿನಗಳಿಂದ ಅದೇ ಪಾಸು ಇಟ್ಟುಕೊಂಡು ಓಡಾಡಿದ್ದೆವೆ. ಈಗ ತೆಗೆದಿದ್ದೆವೆ ವಿಡಿಯೋ ಡಿಲಿಟ್ ಮಾಡಿ ಎಂದರು. ಇನ್ನು ಭೀಮಾನಾಯ್ಕ್ ಗನ್ ಮ್ಯಾನ್ ಹಾಗೂ ಅವರ ಬೆಂಬಲಿಗರು ನಿಮ್ಮನ್ನ ನೋಡಿಕೊಳ್ಳುತ್ತೇವೆ ಎಂದು ದೌರ್ಜನ್ಯ ಮಾಡಿ, ದಬ್ಬಾಳಿಕೆಯನ್ನು ಮಾಡಿದ್ದಾರೆ. ಅವರದ್ದೆ ತಪ್ಪು ಹಿಡಿದುಕೊಂಡು ಪತ್ರಕರ್ತರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಸಂಗತಿ ಇದು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಗೆಡಿನ ಸಂಗತಿಯಾಗಿದೆ.
ಭೀಮಾನಾಯ್ಕ್ ಕಾರಿನ, ಕಾರು ಚಾಲಕನ ಮುಂಭಾಗದ ಗ್ಲಾಸ್ ನಲ್ಲಿ ಪಾಸ್ ಸಂಖ್ಯೆ 89, ಕರ್ನಾಟಕ ವಿಧಾನಸಭಾ ಕ್ಷೇತ್ರ, ಭೀಮಮಾಯ್ಕ್ ಎಸ್,ಹಗರಿಬೊಮ್ಮನಹಳ್ಳಿ ಶಾಸಕರು, MLA ಎನ್ನುವ ಹಸಿರಿನ ಪಾಸು ಇಟ್ಟುಕೊಂಡು ಎರಡು ದಿನಗಳಿಂದ ಜಿಲ್ಲೆಯಲ್ಲಿ ಓಡಾಡುತ್ತಿದ್ದರು. ಭೀಮಾನಾಯ್ಕ್ ಹಾಗೂ ಗನ್ ಮ್ಯಾನ್ ಹಾಗೂ ಬೆಂಬಲಿಗರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಮಾಧ್ಯಮದ ಮಿತ್ರರ ಮೇಲೆ ಹಲ್ಲೆ ಮಾಡೋ ಅಧಿಕಾರ ಇಲ್ಲ, ಮಾಧ್ಯಮದವರು ಪ್ರಶ್ನೆ ಕೇಳಿದರೆ ಉತ್ತರ ಕೊಡಬೇಕು ಇಲ್ಲದಿದ್ದರೆ ಆಮೇಲೆ ಮಾತನಾಡುವೆ ಎಂದು ಹೇಳಬೇಕು. ಅವರ ಮೇಲೆ ಹಲ್ಲೆ ಮಾಡೋದ್ ಒಳ್ಳೆಯದಲ್ಲ. ಭೀಮಾನಾಯ್ಕ್ ಎಸ್, ಶಾಸಕರು, ಎಂ.ಎಲ್.ಎ ಅಂತ ಇಟ್ಟುಕೊಂಡು ಓಡಾಡೋದ್ ಸರಿಯಲ್ಲ ಎಂದರು.
|ನೇಮರಾಜ್ ನಾಯ್ಕ್, ಹಾಲಿ ಶಾಸಕರು ಕ್ಷೇತ್ರ,ವಿಜಯನಗರ ಜಿಲ್ಲೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಿ, ಅನುದಾನಿತ, ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಇರುವ 25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಬಜೆಟ್‍ನಲ್ಲಿ ಅನುಮೋದನೆಗೆ ಪ್ರಸ್ತಾವನೆ : ಸಚಿವ ಎಸ್.ಮಧು ಬಂಗಾರಪ್ಪ

ಸುದ್ದಿದಿನ,ದಾವಣಗೆರೆ:ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಹುದ್ದೆಗಳ ಕೊರತೆ ಇದ್ದು 2025-26 ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ 25 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಬಜೆಟ್‍ನಲ್ಲಿ ಅನುಮೋದನೆ ನೀಡಲು ಪ್ರಸ್ತಾವನೆ ಸಿದ್ದಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಅವರು ಶುಕ್ರವಾರ ಜಗಳೂರು ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಹಾಗೂ ಸರ್ಕಾರದ ಅನುದಾನ ಸೇರಿ ರೂ.3.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಟೆಕ್ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 13500 ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿದೆ. ಆದರೂ 50 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿಗೆ ಕ್ರಮ ವಹಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿ 76 ಸಾವಿರದಷ್ಟು ಶಾಲೆಗಳಿದ್ದು 1.08 ಕೋಟಿ ವಿದ್ಯಾರ್ಥಿಗಳು 1 ರಿಂದ 12 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದು ಒಟ್ಟು ನೌಕರರಲ್ಲಿ ಶೇ 37 ರಷ್ಟು ಸಿಬ್ಬಂದಿ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ 57 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆಯೂ ಇದ್ದು ಹಂತ ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ದಾನಿಗಳಿಂದ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನಮ್ಮ ಶಾಲೆ, ನಮ್ಮ ಜವಾಬ್ದಾರಿ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ ಎಂದರು.
ಪೌಷ್ಟಿಕತೆ ಹೆಚ್ಚಿಸಲು ಪ್ರತಿನಿತ್ಯ ಮೊಟ್ಟೆ
ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪ್ರತಿನಿತ್ಯ ಮೊಟ್ಟೆ ನೀಡಲಾಗುತ್ತಿದೆ. ಇದರಲ್ಲಿ ಆಜೀಂ ಪ್ರೇಂಜೀ ಪೌಂಢೇಷನ್‍ನಿಂದ ನಾಲ್ಕು ದಿನ, ಸರ್ಕಾರದಿಂದ 2 ದಿನ ಮೊಟ್ಟೆ ನೀಡಲಾಗುತ್ತಿದ್ದು ಸ್ಥಳೀಯವಾಗಿ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ಎಲ್ಲ ದಿನವೂ ಮೊಟ್ಟೆ ನೀಡಿದರೆ ಉತ್ತಮ ಎಂದು ಅಭಿಪ್ರಾಯ ಪಟ್ಟ ಅವರು ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಮತ್ತು ಪೋಷಕರೊಂದಿಗೆ ಮಕ್ಕಳನ್ನು ಕರೆದುಕೊಂಡು ಹೋಗದೆ ಶಾಲೆಗೆ ಕಳುಹಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಪ್ರತಿ ದಿನದ ಹಾಜರಾತಿಗೆ ರೂ.1 ರಂತೆ ಮಕ್ಕಳಿಗೆ ನೀಡಲಾಗುತ್ತಿತ್ತು, ನಂತರ ಮಧ್ಯಾಹ್ನ ಊಟ ನೀಡುತ್ತಾ ಬಂದು ಈಗ ಹಾಲು, ಮೊಟ್ಟೆಯನ್ನು ನೀಡಲಾಗುತ್ತಿದೆ. ಭವಿಷ್ಯದ ಪ್ರಜೆಗಳಾಗುವ ಮಕ್ಕಳು ಆರೋಗ್ಯವಂತರಾಗಿ ಉತ್ತಮ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು ಮತ್ತು ಸಂವಿಧಾನ ಉಳಿಯಲು ಎಲ್ಲರೂ ಶಿಕ್ಷಣವಂತರಾಗಬೇಕೆಂದರು.
ಗ್ರಂಥಾಲಯಗಳಿಗೆ ಮಹತ್ವ
ಶಾಲೆಗಳಿಗೆ ನೀಡುವ ಮಹತ್ವವನ್ನು ಗ್ರಂಥಾಲಯಗಳಿಗೆ ನೀಡುವ ಅವಶ್ಯಕತೆ ಇದೆ. ಜಗಳೂರು ಪಟ್ಟಣದಲ್ಲಿ ಮುಖ್ಯಗ್ರಂಥಾಲಯವನ್ನು ಬಹಳ ಸುಸಜ್ಜಿತವಾಗಿ ನಿರ್ಮಾಣ ಮಾಡಿ ನಡೆಸಲಾಗುತ್ತಿದೆ. ಗ್ರಂಥಾಲಯಗಳು ಶಿಕ್ಷಕ ರಹಿತವಾದ ವಿಶ್ವವಿದ್ಯಾನಿಲಯಗಳಿದ್ದಂತೆ, ಗ್ರಂಥಾಲಯಗಳಲ್ಲಿ ಅಧ್ಯಯನ ಮಾಡಿದ ಅನೇಕರು ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಓದುಗರನ್ನು ಸಂದರ್ಶಿಸಿದಾಗ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದು ಕೆಎಎಸ್ ಅಧಿಕಾರಿಯಾಗುವ ಆಸೆ ಇದ್ದು ಮುಂದಿನ ದಿನಗಳಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಈಗಿನಿಂದಲೇ ತಯಾರಿ ನಡೆಸುತ್ತಿದ್ದೇನೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಗ್ರಂಥಾಲಯಗಳನ್ನು ಅಭಿವೃದ್ದಿ ಮಾಡುವ ಗುರು ಹೊಂದಲಾಗಿದೆ ಎಂದರು.
8 ನೇ ತರಗತಿವರೆಗೆ ವಿಸ್ತರಣೆ
ಹುಚ್ಚಂಗಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಮಾತ್ರ ಇದ್ದು ಇದನ್ನು 8 ನೇ ತರಗತಿಯವರೆಗೆ 2025-26 ಶೈಕ್ಷಣಿಕ ವರ್ಷದಿಂದಲೇ ವಿಸ್ತರಣೆ ಮಾಡಲು ಆದೇಶಿಸಲಾಗಿದೆ. 9-10 ನೇ ತರಗತಿಯನ್ನು ಇಲ್ಲಿಯೇ ಮುಂದುವರೆಗೆಸಲು ಮಕ್ಕಳ ಸಂಖ್ಯೆಯನ್ನಾಧರಿಸಿ ಮುಂದಿನ ನಿರ್ಧಾರವನ್ನು ಇಲಾಖೆ ಕೈಗೊಳ್ಳಲಿದೆ, ಶಾಲೆಯ ಅಭಿವೃದ್ದಿಗೆ ರೂ.25 ಲಕ್ಷಗಳನ್ನು ಕೇಳಿದ್ದು ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಜಗಳೂರು ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ.ದೇವೆಂದ್ರಪ್ಪ ಮಾತನಾಡಿ ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್ ಅವರು ತಮ್ಮ ಅನುದಾನದಲ್ಲಿ ಹುಟ್ಟೂರಿನ ಶಾಲೆ ನಿರ್ಮಾಣಕ್ಕೆ ಶ್ರಮಿಸಿದ್ದಾರೆ, ಇದೇ ಮಾದರಿಯಲ್ಲಿ ಚಿಮ್ಮನಕಟ್ಟೆಯಲ್ಲಿಯು ಹೈಟೆಕ್ ಶಾಲೆ ನಿರ್ಮಾಣ ಮಾಡಲಾಗುತ್ತದೆ.
ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಸರಬರಾಜು ಮಾಡಲು ಉದ್ದೇಶಿಸಿದ್ದು ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿದೆ. ಜಗಳೂರಿಗೆ ಬಾಲಕಿಯರ ಪದವಿ ಪೂರ್ವ ಕಾಲೇಜು ಬಹು ದಿನಗಳ ಬೇಡಿಕೆಯಾಗಿದ್ದು ಆರಂಭಿಸಲು ಶಿಕ್ಷಣ ಸಚಿವರಿಗೆ ಮನವಿ ಮಾಡಿದರು.
ವಿಧಾನಪರಿಷತ್ತಿನ ಸದಸ್ಯರಾದ ರವಿಕುಮಾರ್ ಎನ್ ಪ್ರಾಸ್ತಾವಿಕವಾಗಿ ಮಾತನಾಡಿ ಈ ಶಾಲೆಯಲ್ಲಿ ನಾನು ಓದಿದ್ದು ನಮ್ಮ ತಾಯಿಯ ಆಸೆಯಂತೆ ನಮ್ಮೂರಿಗೆ ಶಾಲಾ ಕಟ್ಟಡ ನಿರ್ಮಿಸಲು ಶ್ರಮಿಸಿದ್ದೇನೆ. ಈ ಹಿಂದೆ ನಾಲ್ಕನೇ ತರಗತಿವರೆಗೆ ಮಾತ್ರ ಇದ್ದು ಈಗ 7 ನೇ ತರಗತಿವರಗೆ ಇದೆ. ಇಲ್ಲಿನ ಜನರು ಶ್ರಮ ಜೀವಿಗಳಾಗಿದ್ದು ಕೆಲಸಕ್ಕಾಗಿ ವಲಸ ಹೋಗುತ್ತಾರೆ. ಆದ್ದರಿಂದ ಇಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸ್ಮಾರ್ಟ್ ಕ್ಲಾಸ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯವನ್ನು ಶಾಲೆಯಲ್ಲಿ ಕಲ್ಪಿಸಿದ್ದು ಇದಕ್ಕೆ ರಾಜ್ಯಸಭಾ ಸದಸ್ಯರ ಅನುದಾನ ಮತ್ತು ವಿಧಾನ ಪರಿಷತ್‍ರ ನಿಧಿಯಲ್ಲಿ 2.5 ಕೋಟಿ ನೀಡಲಾಗಿದೆ, ಒಟ್ಟು ರೂ.3.5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಶಾಲೆ ನಿರ್ಮಿಸಿದ್ದು ಕಂಪ್ಯೂಟರ್ ಸೇರಿದಂತೆ ಇತರೆ ಉದ್ದೇಶಗಳಿಗಾಗಿ ಇಲಾಖೆಯಿಂದ ರೂ.25 ಲಕ್ಷ ಅನುದಾನ ಬಿಡುಗಡೆ ಮಾಡಬೇಕೆಂದರು.
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಮಾತನಾಡಿ ಗ್ರಾಮದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಕಬಾರದು ಎಂದರು.
ವಿಧಾನ ಪರಿಷತ್ ಸದಸ್ಯರಾದ ಪ್ರೊ;ಎಸ್.ವಿ. ಸಂಕನೂರು, ಕೆ.ಎಸ್. ನವೀನ್, ಚಿದಾನಂದಗೌಡ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಮಾಜಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ದಿದ್ದಿಗಿ ಗ್ರಾ.ಪಂ ಅಧ್ಯಕ್ಷರಾದ ಗುತ್ಯಮ್ಮ ಸಿದ್ದಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಪಿ.ಟಿ.ರಮೇಶ, ದಾನಿಗಳಾದ ಸ್ಪೇಸ್ ಮ್ಯಾನೇಜ್‍ಮೆಂಟ್ ಸಲ್ಯೂಷನ್ ಲಿಮಿಟೆಡ್ ಡಾ.ದಿನೇಶ್, ವೋಲ್ಲೋ ಗ್ರೂಪ್ ಜಿ.ವಿ.ರಾವ್, ಜಿ.ಪಂ.ಉಪಕಾರ್ಯದರ್ಶಿ ಕೃಷ್ಣನಾಯ್ಕ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9989346243

ದಿನದ ಸುದ್ದಿ
ಹಿಂದುಳಿದ ಸಮಾಜಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡೆದು ಸಂಘಟಿತರಾಗಲಿ: ಶಾಸಕ ಕೆ.ಎಸ್.ಬಸವಂತಪ್ಪ

ಸುದ್ದಿದಿನ,ದಾವಣಗೆರೆ:ಸವಿತಾ ಸಮಾಜ ಹಿಂದುಳಿದ ಸಮಾಜವಾಗಿದ್ದು, ಸಮಾಜವು ಸಂಘಟನೆಯಿಂದ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಎಂದು ಶಾಸಕರಾದ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಬುಧವಾರ(ಫೆ.5) ರಂದು ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತಾನಾಡಿದರು. ಸವಿತಾ ಸಮಾಜದ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು, ಆಗ ಮಾತ್ರ ಶ್ರೀಮಂತ, ಬಡವ, ಮೇಲು ಕೀಳು ಎಂಬ ಮನೋಭಾವನೆ ಬರಲು ಸಾಧ್ಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು ಸಮಾಜದಲ್ಲಿ ಇರುವಂತಹ ತೊಡಕುಗಳನ್ನು ತೊರೆದು ನಡೆದರೆ ಮಾತ್ರ ಅಭಿವೃದ್ದಿ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ. ವೃತ್ತಿ ಬದುಕಿಗೆ ಅನುಕೂಲವಾಗಲು ಪರಿಕರಗಳ ಕಿಟ್ ನೀಡಲು ಮತ್ತು ಪಾಲಿಕೆಯಲ್ಲಿರುವ ಮಳಿಗೆಗಳನ್ನು ಇವರಿಗೆ ಕಡಿಮೆ ಬಾಡಿಕೆ ನೀಡಬೇಕು ಎಂದರು. ಹೊಂಡದ ಸರ್ಕಲ್‌ನಲ್ಲಿರುವ ಸಮುದಾಯದ ಭವನದ ಕಟ್ಟಡವನ್ನು ಪೂರ್ಣಗೊಳಿಸಲು ಸಚಿವರೊಂದಿಗೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿಗಳನ್ನು ಆಚರಿಸುವ ಮೂಲಕ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ಮಾರ್ಗದರ್ಶಿಯಾಗಿದೆ. ಸವಿತಾ ಸಮಾಜದ ಬಂಧುಗಳು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಸವಿತಾ ಮಹರ್ಷಿ ಜಯಂತಿ ಆಚರಣೆಯಿಂದ ಸಮುದಾಯದ ಜನರನ್ನು ಸಂಘಟಿಸಲು ಸಹಾಯವಾಗುತ್ತದೆ. ಕಡಿಮೆ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದವರು ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ದೂಢಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಪಾಲಿಕೆ ಮಹಾಪೌರರಾದ ಚಮನ್ ಸಾಬ್ ಕೆ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ತಹಶೀಲ್ದಾರ್ ಅಶ್ವಥ್, ಸಂಘದ ಜಿಲ್ಲಾಧ್ಯಕ್ಷರಾದ ಬಾಲರಾಜ್, ವಕೀಲರಾದ ರಂಗಸ್ವಾಮಿ ಹಾಗೂ ಸಮಾಜದ ಎಲ್ಲಾ ಮುಖಂಡರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ದಿನದ ಸುದ್ದಿ2 days ago
ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್-2025
-
ದಿನದ ಸುದ್ದಿ2 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
-
ದಿನದ ಸುದ್ದಿ3 days ago
ಪತ್ರಕರ್ತರ ಮೇಲೆ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಹಲ್ಲೆ, ಕೊಲೆ ಬೆದರಿಕೆ
-
ದಿನದ ಸುದ್ದಿ5 days ago
ಸರ್ಕಾರಿ, ಅನುದಾನಿತ, ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಇರುವ 25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಬಜೆಟ್‍ನಲ್ಲಿ ಅನುಮೋದನೆಗೆ ಪ್ರಸ್ತಾವನೆ : ಸಚಿವ ಎಸ್.ಮಧು ಬಂಗಾರಪ್ಪ
-
ದಿನದ ಸುದ್ದಿ5 hours ago
ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ