ರಾಜಕೀಯ
ಸಮಾಜಶಕ್ತಿಗೆ ಭ್ರಮನಿರಸನ
ತುರ್ತು ಪರಿಸ್ಥಿತಿಯ ನಂತರದ ಚುನಾವಣೆಯಷ್ಟೇ ಮಹತ್ವದ ಚುನಾವಣೆ ಇದು ಕೆಲವರು ವಿಶ್ಲೇಷಿಸಿದ್ದರು. 2014 ರಿಂದ ಇಂದಿನವರೆಗೂ ದೇಶದಲ್ಲಿ ನಡೆದ ವಿದ್ಯಮಾನಗಳು ಮತ್ತು ಅವು ಎತ್ತಿದ ಪ್ರಶ್ನೆಗಳನ್ನು ತಿರುವಿ ಹಾಕಿದಾಗ ಅದು ನಿಜ ಎಂದೇ ಅನಿಸಿತ್ತು. ಹಾಗಿದ್ದ ಮೇಲೆ ಎಲ್ಲ ಪಕ್ಷಗಳೂ ಆ ಮಟ್ಟದ ಒಗ್ಗಟ್ಟಿನ ಹೋರಾಟಕ್ಕೆ ತಯಾರಾಗಿರಬೇಕಿತ್ತು.
ದೇಶದ ಬಿಜೆಪಿಯೇತರ ಎಲ್ಲ ನಾಯಕರುಗಳ ಹುಮ್ಮಸ್ಸು ಮೇಳೈಸಿ ದೇಶದ ಸಂಘಟಿತ ಪರ್ಯಾಯ ಶಕ್ತಿಗೆ ನಾಂದಿ ಆಯಿತು ಎನ್ನುವಂತೆ ಕುಮಾರಸ್ವಾಮಿಯವರ ಅಧಿಕಾರ ಸ್ವೀಕಾರ ವೇದಿಕೆಯಲ್ಲಿ ಸಂಭ್ರಮಿಸಲಾಯಿತು. ಆದರೆ ಆನಂತರ ಆದದ್ದು ನಾಯಿ ಬಾಲದ ಕಥೆಯೇ. ಬಿಜೆಪಿಯ ಬೆಂಬಲಿಗರು ಈಗ ಮೂರು ವರ್ಷಗಳಿಂದ ಒಂದು ಪ್ರಶ್ನೆಯನ್ನು ಕೇಳುತ್ತಲೇ ಇದ್ದರು: ‘ಮೋದಿಗೆ ಪರ್ಯಾಯ ಯಾರು? ಯಾರೂ ಇಲ್ಲವಲ್ಲಾ!’ ಎಂದು.
ಅದನ್ನು ಇಂದು ಸ್ಪಷ್ಟ ಗುರಿಯೇ ಇಲ್ಲದ, ಇದ್ದರೂ ಅದಕ್ಕೊಂದು ಅಜೆಂಡಾನೇ ಇಲ್ಲದ ಜಢತ್ವಕ್ಕೆ ಶರಣಗಿದ್ದ ಈ ಪಕ್ಷಗಳು ಒಪ್ಪಿಕೊಂಡಾಯಿತು. ಅದರ ನೈತಿಕ ಹೊಣೆಯನ್ನು ಈ ಪಕ್ಷಗಳು ಹೊರುವುದಿರಲಿ, ಅವು ದೇಶವನ್ನು ಎತ್ತ ತಳ್ಳಿದವು ಎನ್ನುವುದು ಅಕ್ಷಮ್ಯ. ಹಾಗೊಮ್ಮೆ ಬಿಜೆಪಿಯೇತರ ಸರ್ಕಾರ ರಚನೆಗೆ ಅವಕಾಶವಾಗುವಂತೆ ಫಲಿತಾಂಶ ಬಂದಿದ್ದರೂ ಅಂತಹ ಸರ್ಕಾರವನ್ನು ಈ ಪಕ್ಷಗಳು ಎಷ್ಟರ ಮಟ್ಟಿಗೆ ಸಧೃಢವಾಗಿ ನಡೆಸುತ್ತಿದ್ದವು ಎನ್ನುವ ಪ್ರಶ್ನೆ ದೊಡ್ಡದಾಗಿಯೇ ಇರುತ್ತಿತ್ತು. ಅದು ಇನ್ನೂ ಭಯಾನಕ. ಸಂಘ ಪರಿವಾರದ ಗುರಿ ಮಾತ್ರ ಸ್ವಾತಂತ್ರಪೂರ್ವದಿಂದಲೂ ಸ್ಪಷ್ಠವಾಗಿಯೇ ಇದೆ. ಹಂತಹಂತವಾಗಿ ಆ ಕಡೆಗೆ ಅದು ಸಾಗುತ್ತಲೇ ಇದೆ. ಇದು ಈ ದೇಶ-ಕಾಲದ ನಿಜ ಸ್ಥಿತಿ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಕಪಾಳಕ್ಕೆ ಹೊಡೆದಂತಾ ಈ ಫಲಿತಾಂಶಕ್ಕೆ ಇಲ್ಲಿ ನಡೆದ ಅಪ್ರಬುದ್ಧ ಅಥವಾ ಸ್ವಾರ್ಥ ತುಂಬಿದ ನಡೆಗಳೇ ಕಾರಣ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿಕೊಂಡಿದ್ದೇ ಈ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು. ಯಾವುದೇ ಕಾರಣಕ್ಕೂ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬಾರದು, ಬಿಜೆಪಿಯ ಅತ್ಯಂತ ಕಡಿಮೆ ಲೋಕಸಭಾ ಸದಸ್ಯರನ್ನು ಕರ್ನಾಟಕದಿಂದ ದೆಹಲಿಗೆ ಕಳಿಸುವಂತಾಗಬೇಕು ಎನ್ನುವ ದೃಷ್ಟಿ.
ಅದಕ್ಕಾಗಿ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನವನ್ನೂ ಜೆಡಿಎಸ್ಸಿಗೆ ಕೊಟ್ಟುಬಿಟ್ಟಿತ್ತು. ರಾಷ್ಟ್ರಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳು ಒಂದೇ ವೇದಿಕೆಯಲ್ಲಿ ಹೇಗೆ ಬರಲು ಸಾಧ್ಯವಾಗಲಿಲ್ಲವೋ ಹಾಗೆಯೇ ಕರ್ನಾಟಕದಲ್ಲೂ ಕೂಡ ಸೀಟು ಹಂಚಿಕೆ ವಿಚಾರದಲ್ಲಿ ಮಿತ್ರಪಕ್ಷಗಳು ಒಮ್ಮತಕ್ಕೆ ಬರಲು ಸಾಧ್ಯವೇ ಆಗಲಿಲ್ಲ. ಈ ರಾಜಕೀಯ ಆಟಗಳಿಂದ ಪ್ರಜಾಪ್ರಭುತ್ವಕ್ಕಾದ ಧಕ್ಕೆ ಅಷ್ಟಿಷ್ಟಲ್ಲ.
ದೇವೇಗೌಡರ ಎದೆಯಲ್ಲಿ ಬಿಜೆಪಿಯೇತರ ಸರ್ಕಾರದ ಉದ್ದೇಶ ಇದ್ದರೂ ಅವರು ತಮ್ಮ ಕುಟುಂಬಕ್ಕೆ ತಮ್ಮನ್ನು ಕಟ್ಟಿಹಾಕಿಕೊಳ್ಳುತ್ತಾರೆ. ಆ ಕುಟುಂಬದ ಮೂರನೇ ತಲೆಮಾರಿನ ನಿನ್ನೆಯ ಹುಡುಗರು ಇಂದು ಸ್ವಂತ ಕಾಲ ಮೇಲೆ ನಿಲ್ಲಬೇಕಾದ ಅನಿವಾರ್ಯಕ್ಕೆ ಸಿಕ್ಕಿರುವ ಯುವಕರಾಗಿಬಿಟ್ಟಿದ್ದಾರೆ. ಆ ಒಬ್ಬೊಬ್ಬರಿಗೂ ಒಂದೊಂದು ನೆಲೆ ದೊರಕಿಸುವುದು ಆ ಕುಟುಂಬದ ಜವಾಬ್ದಾರಿ. ಆ ಕುಟುಂಬಕ್ಕೆ ಗೊತ್ತಿರುವುದು, ಆಸರೆಯಾಗಿರುವುದು ರಾಜಕೀಯವೇ. ಹಾಗಾಗಿ ತನ್ನ ಹಾಸನ ಕ್ಷೇತ್ರವನ್ನೇ ಒಬ್ಬ ಮೊಮ್ಮಗನಿಗೆ ದಾನ ಮಾಡಿದ ದೇವೇಗೌಡರು ತುಮಕೂರಿಗೆ ನಡೆದರು. ಅಥವಾ ಮೊಮ್ಮಗನೇ ಕಿತ್ತುಕೊಂಡು ಕಳಿಸಿದ್ದ!
ಮತ್ತೊಬ್ಬ ಮೊಮ್ಮಗನಿಗೆ ತಾವು ಕೆಲವು ವರ್ಷಗಳಿಂದ ಅನುಕೂಲಕರ ವಾತಾವರಣ ನಿರ್ಮಿಸಿಕೊಂಡ ಹಾಗೂ ಸಧ್ಯಕ್ಕೆ ಪ್ರಬಲ ಸ್ಪರ್ಧೆಯೊಡ್ಡಬಹುದಾದ ಯಾವ ಆಕಾಂಕ್ಷಿ ಇಲ್ಲವೆಂದೇ ತಿಳಿದಿದ್ದ ಮಂಡ್ಯ ಕ್ಷೇತ್ರವನ್ನು ಆಯ್ದುಕೊಂಡರು. ಯಾವ ಮೂಲ ಉದ್ದೇಶಕ್ಕಾಗಿ ಮೈತ್ರಿ ರಾಜಕೀಯಕ್ಕೆ ಅವಕಾಶ ಮಾಡಿಕೊಂಡಿದ್ದರೋ ಆ ಉದ್ದೇಶವನ್ನು ಪಕ್ಕಕ್ಕೆ ಸರಿಸಲಾಯಿತು. ಅಥವಾ, ನಿಜಕ್ಕೂ ಮೂಲ ಉದ್ದೇಶ ಇದು ಅಲ್ಲವೇ ಅಲ್ಲ, ಅದು ಚುನಾವಣೆಯಿಂದ ಚುನಾವಣೆಗೆ ಜಹಗೀರು ವಿಸ್ತರಣೆಯೇ. ಮುಂದೊಂದು ದಿನ ಭಾರತದಲ್ಲಿ ಪ್ರಜಾಪ್ರಭುತ್ವ ಕಳಚಿಹೋಗಿ ಮತ್ತೆ ರಾಜಾಡಳಿತ ಬರುತ್ತದೇನೋ, ಹಾಗಾಗುವುದಾದರೆ ತಮ್ಮ ಕುಟುಂಬವೇ ಅರಸಾಗಲಿ ಎನ್ನುವ ಮುಂಗಾಣ್ಕೆಯೋ ಎನ್ನುವ ಹಾಗೆ! ಪರಿಣಾಮ ಎದುರಿಗೇ ಇದೆ.
ದೇವೇಗೌಡರ ಉದ್ದೇಶ ನಿಜಕ್ಕೂ ಜಾತ್ಯತೀತ ಮನಸ್ಸಿನ, ಸಂವಿಧಾನಬದ್ಧ ಪರ್ಯಾಯ ಶಕ್ತಿಯನ್ನು ಹುಟ್ಟಿಹಾಕುವುದೇ ಆಗಿದ್ದಿದ್ದರೆ, ಅವರು ಈಗ ನಡೆದುಕೊಂಡಂತೆ ನಡೆದುಕೊಳ್ಳುತ್ತಿರಲಿಲ್ಲ. ಅವರು ತಮ್ಮ ಮೊಮ್ಮಕ್ಕಳನ್ನು ಮುಂದೆ ತರುವ ಕೆಲಸವನ್ನು ಮುಂದಕ್ಕೆ ಹಾಕುತ್ತಿದ್ದರು. ಅದರಿಂದ ಅವರ ಕುಟುಂಬಕ್ಕೆ ತುಂಬಾ ದೊಡ್ಡ ನಷ್ಟವೇನೂ ಆಗುತ್ತಿರಲಿಲ್ಲ. ಬದಲಿಗೆ ದಕ್ಷ ಅಭ್ಯರ್ಥಿಗಳನ್ನು ಹುಡುಕಿ ಅವಕಾಶ ಕೊಟ್ಟಿದ್ದರೆ ತಮ್ಮ ಪಕ್ಷದ ವರ್ಚಸ್ಸು ಇನ್ನಷ್ಟು ಬೆಳೆಯುತ್ತಿತ್ತು.
ಮೂರೂ ಕ್ಷೇತ್ರಗಳಲ್ಲಿ ಮೈತ್ರಿಯ ಅಭ್ಯರ್ಥಿಗಳೇ ಗೆಲ್ಲುತ್ತಿದ್ದರೇನೋ! ಇದನ್ನು ಬರೆಯುತ್ತಿರುವಾಗ ನನ್ನ ಬಗ್ಗೆ ನನಗೇ ನಗು ಬರುತ್ತದೆ. ಯಾವ ಆದರ್ಶವನ್ನು ಯಾರಿಂದ ನಿರೀಕ್ಷಿಸುತ್ತಿದ್ದೇವೆ ಎಂದು! ಬಿಜೆಪಿಯ ಸುಳಿವೇ ಇರದ ಮಂಡ್ಯವನ್ನು ಆ ಪಕ್ಷಕ್ಕೆ ಧಾರೆಯೆರೆದು ಕೊಟ್ಟಾಯಿತು. ಈ ರೀತಿಯ ಅಪ್ರಬುದ್ಧ, ಸ್ವಾರ್ಥ ರಾಜಕಾರಣದ ಚಾರಿತ್ರಿಕ ಪ್ರಮಾದಗಳೇ ಕರ್ನಾಟಕದಲ್ಲಿ ಬಿಜೆಪಿ ತಳವೂರಲು ಕಾರಣವಾಯ್ತು.
ಇನ್ನು ಕಾಂಗ್ರೆಸ್ಸಿಗೆ ಮತ್ತೆ ಬಿಜೆಪಿಗೆ ಅಧಿಕಾರ ಕೊಡಬಾರದು ಎನ್ನುವ ಛಲ ಮಾತಿನಲ್ಲಿ ಮಾತ್ರ ಕಂಡಿತು. ಕೃತಿಯಲ್ಲಿ ನಿರ್ಧಿಷ್ಠ ಗುರಿಯೇ ಇರಲಿಲ್ಲ ಎಂಬಂತೆ ತೋರಿತು. ಇಡೀ ದೇಶದಲ್ಲಿದ್ದ ಕಾಂಗ್ರೆಸ್ಸಿನ ಬಲಹೀನ ಸ್ಥಿತಿ ಕರ್ನಾಟಕ ಕಾಂಗ್ರೆಸ್ಸಿನ ಮೇಲೆ ಅಡ್ಡ ಪರಿಣಾಮ ಬೀರಿಯೇ ಇದ್ದಿತು. ಹೇಗಾದರೂ ಮಾಡಿ ಹಿಂದಿನ ಬಾರಿ ಗೆದ್ದ ಕ್ಷೇತ್ರಗಳನ್ನು ಉಳಿಸಿಕೊಂಡು ಲೋಕಸಭಾ ಚುನಾವಣೆಯೆಂಬ ದೈಯ್ಯವನ್ನು ಸಾಗಹಾಕುವ ಒಳಮನಸ್ಸೇ ಇಲ್ಲಿನ ಕಾಂಗ್ರೆಸ್ ನಾಯಕರಲ್ಲಿ ಕಂಡಿತು.ಈ ಮೈತ್ರಿ ಪಕ್ಷಗಳು ಮಾಡಿಕೊಂಡ ಗೊಂದಲ, ಅರಾಜಕತೆ ಮತ್ತು ಸ್ವಾರ್ಥಚಿಂತನೆಗಳಿಂದ ದೊಡ್ಡ ಲಾಭವಾಗಿದ್ದು, ಆಗುತ್ತಿರುವುದು ಬಿಜೆಪಿಗೆ. ದೊಡ್ಡ ನೈತಿಕ ನಷ್ಟವಾಗಿದ್ದು, ಆಗುವುದು ಈ ಮೈತ್ರಿ ಪಕ್ಷಗಳಿಗೆ.
ಎಲ್ಲಕ್ಕಿಂತ ಹೆಚ್ಚಾಗಿ ಈ ಮೈತ್ರಿ ಪಕ್ಷಗಳಿಂದ ದೊಡ್ಡ ಭ್ರಮನಿರಸನವಾಗಿದ್ದು ಕರ್ನಾಟಕದ ಪ್ರಗತಿಪರ ಯುವಶಕ್ತಿಗೆ ಮತ್ತು ಸಮಾಜಶಕ್ತಿಗೆ. ಕೋಮುವಾದೀ, ವಿಭಜಕ ಶಕ್ತಿಗಳು ಕರ್ನಾಟಕದಲ್ಲಿ ಬೆಳೆಯುವುದನ್ನು, ನೆಲೆಕಾಣುವುದನ್ನು ತಡೆಯಲು ಎಲ್ಲ ಪ್ರಜಾಪ್ರಭುತ್ವವಾದೀ ದಾರಿಗಳನ್ನೂ ಬಳಸಿಕೊಂಡು ಸ್ವಯಂಪ್ರೇರಿತವಾಗಿ ಸತತ ಹೋರಾಡುತ್ತಿವೆ ಈ ಶಕ್ತಿಗಳು. ಬಹುಶಃ ಈ ಮಟ್ಟಕ್ಕೆ ಟೊಂಕ ಕಟ್ಟಿ ಜನಪರವಾಗಿ, ಸಂವಿಧಾನದ ಪರವಾಗಿ ನಿಂತು ಪ್ರತಿರೋಧ ಒಡ್ಡುತ್ತಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
ಆ ಕಾರಣದಿಂದಲೇ ಇಲ್ಲಿ ಇಂದಿನ ಮೈತ್ರಿ ಸರ್ಕಾರಕ್ಕೂ ಅವಕಾಶವಾಯಿತು. ಇದನ್ನು ಈ ಮೈತ್ರಿಪಕ್ಷಗಳು ಮರೆಯಬಾರದು. ಆದರೆ ಇಂದು ತಮ್ಮ ನಡೆಗಳಿಂದ ಅವು ಈ ಶಕ್ತಿಗಳ ವಿಶ್ವಾಸವನ್ನು ಸಾಕಷ್ಟು ಕಳಕೊಂಡಿವೆ. ಈಗ ಈ ಮೈತ್ರಿ ಸರ್ಕಾರ ನಿಜಕ್ಕೂ ಉಳಿದುಕೊಂಡರೆ ತಾನು ಕಳಕೊಂಡ ಈ ಶಕ್ತಿಗಳ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳುವ ಪ್ರಯತ್ನ ಪಡಬೇಕು. ಮತ್ತು ಆ ಪ್ರಯತ್ನ ಪ್ರಾಮಾಣಿಕವಾಗಿರಬೇಕು, ಅಷ್ಟೇ.
– ಕೇಸರಿ ಹರವೂ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರೈತರಿಗೆ ಉಚಿತ ವಿದ್ಯುತ್ ನೀಡಲು ರಾಜ್ಯಾದ್ಯಂತ ಸೋಲಾರ್ ಘಟಕಗಳ ಸ್ಥಾಪನೆ : ಸಚಿವ ಕೆ.ಜೆ.ಜಾರ್ಜ್
ಸುದ್ದಿದಿನ,ಚಿತ್ರದುರ್ಗ:ರೈತರಿಗೆ ಹಗಲು ಹೊತ್ತು ಏಳು ಘಂಟೆ ಉಚಿತ ಕರೆಂಟ್ ನೀಡಲು ರಾಜ್ಯಾದ್ಯಂತ ಸೋಲಾರ್ ಘಟಕಗಳಿಗೆ ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನೀರಗುಂದ ಗ್ರಾಮದ ಬಳಿ ನೂತನವಾಗಿ ನಿರ್ಮಾಣವಾಗಿರುವ ಸೋಲಾರ್ ಘಟಕದ ಕಾಮಗಾರಿ ಪರಿಶೀಲಿಸಿದ ಅವರು, ಜಿಲ್ಲೆಯ ಆರೂ ತಾಲೂಕುಗಳಲ್ಲಿ ಒಂಬತ್ತು ಸೋಲಾರ್ ಘಟಕಗಳು ಸ್ಥಾಪನೆಯಾಗಲಿದ್ದು ಇದರಿಂದ ಅರವತ್ತೆರಡು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಹೇಳಿದರು.
ಇಂಧನ ಇಲಾಖೆಯು ರಾಜ್ಯಾದ್ಯಂತ 154 ಸೋಲಾರ್ ಘಟಕಗಳನ್ನು ಸ್ಥಾಪಿಸಿ 1 ಸಾವಿರದ 81 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಸ್ವಾವಲಂಬನೆ ಸಾಧಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಇನ್ನೊಂದೆಡೆ ತುಮಕೂರಿನ ಸಿರಾ ತಾಲ್ಲೂಕಿನ ಚೆಂಗಾವರದಲ್ಲಿ ಪಿ.ಎಂ.ಕುಸುಮ್ ಯೋಜನೆಯಡಿ ನಿರ್ಮಿಸಿರುವ ಸೋಲಾರ್ ಪಾರ್ಕ್ ವೀಕ್ಷಿಸಿ ಮಾತನಾಡಿದ ಅವರು, ರಾಜ್ಯದಾದ್ಯಂತ ಸೋಲಾರ್ ಘಟಕಗಳನ್ನು ನಿರ್ಮಿಸಿ 3 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನ ; ನಾಳೆ ಸರ್ಕಾರಿ ರಜೆ ಘೋಷಣೆ
ಸುದ್ದಿದಿನಡೆಸ್ಕ್:ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ. ನಾಳೆ ಅವರ ಹುಟ್ಟೂರಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಒಂದು ದಿನ ಸರ್ಕಾರಿ ರಜೆಯನ್ನು ಘೋಷಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.
ಕರ್ನಾಟಕ ರಾಜಕಾರಣದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು ನಸುಕಿನ ಜಾವ 2:30ರ ಸುಮಾರಿಗೆ ನಿಧನರಾಗಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ನಾಳೆ ಬೆಳಗಾವಿ ಸೌಧದಲ್ಲಿ ನಡೆಯ ಬೇಕಾಗಿದ್ದ ಕಲಾಪಗಳನ್ನು ಗುರುವಾರಕ್ಕೆ ಮುಂದೂಡಲಾಗಿದೆ.
ವಯೋಸಹಜ ಅನಾರೋಗ್ಯದ ಕಾರಣ ಅವರು ಇತ್ತೀಚೆಗಷ್ಟೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದರು. ಆದಾಗ್ಯೂ ನಂತರ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು.
ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಮೃತರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2009 ರಿಂದ 2012ರ ಅಕ್ಟೋಬರ್ 28ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಸ್. ಎಂ. ಕೃಷ್ಣ ಅವರು, 2004ರಿಂದ 2008ರವರೆಗೆ ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
1999ರ ಅಕ್ಟೋಬರ್ 11ರಿಂದ 2004ರ ಮೇ 28ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಎಸ್. ಕೃಷ್ಣ ಅವರು, ಉಪಮುಖ್ಯಮಂತ್ರಿಯಾಗಿ, ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಹಿರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ರಾಜಕೀಯ ನಿವೃತ್ತಿಯ ಅಂಚಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243