Connect with us

ಅಂತರಂಗ

ಧರ್ಮ ಮರ್ಮ-05 : ಸಂಪ್ರದಾಯ ಮತ್ತು ಪರಂಪರೆ

Published

on

Art : Michèle Brown
  • ಯೋಗೇಶ್ ಮಾಸ್ಟರ್

ಗ್ರೀಸ್ ಮತ್ತು ಭಾರತದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಪೌರಾಣಿಕ ವಿಚಾರಗಳಿಗೆ ಬಹಳ ಸಾಮ್ಯತೆ ಇದೆ. ಹೋಮರನ ಇಲಿಯಡ್ ಮತ್ತು ಒಡೆಸ್ಸಿ, ರಾಮಾಯಣ ಮತ್ತು ಮಹಾಭಾರತಗಳ ಮಹಾಕಾವ್ಯಗಳಲ್ಲೂ ಕೂಡ ಇಂತಹ ಸಾದೃಶ್ಯವನ್ನು ಗುರುತಿಸಬಹುದು.

ಗ್ರೀಸ್ ಮತ್ತು ಭಾರತ ದೇಶಗಳೆರಡೂ ಪ್ರಾಚೀನದಲ್ಲಿ ಮಾತೃಪ್ರಧಾನ ಸಂಸ್ಕೃತಿಯನ್ನೇ ಹೊಂದಿದ್ದು, ನಂತರ ಈ ಎರಡೂ ದೇಶಗಳೊಳಗೆ ಪಿತೃ ಪ್ರಧಾನ ಸಂಸ್ಕೃತಿಯನ್ನು ಹೊತ್ತು ತಂದವರು ಆರ್ಯರು. ಭೌಗೋಳಿಕ ಹಕ್ಕುದಾರಿಕೆಯೊಳಗೆ ಪ್ರವೇಶ ಮಾಡಿದರು. ಸಾಂಸ್ಕೃತಿಕವಾಗಿ ಮಿಲನಗೊಂಡರು. ಒಟ್ಟಾರೆ ಸಾಂಸ್ಕೃತಿಕ ಕ್ಷೇತ್ರವನ್ನು ವೈಭವದಿಂದ ವಿಜೃಂಭಿಸಿದರು.

ಆದರೆ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮೂಲನಿವಾಸಿಗಳನ್ನು ವಂಚಿಸುತ್ತಾ, ಒತ್ತರಿಸಿರುತ್ತಾ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಸಾಕಷ್ಟು ಹುನ್ನಾರಗಳನ್ನು ನಡೆಸಿದರು. ಪ್ರಭಾವ ಯಾವುದೇ ಆದರೂ ಸಾಂಸ್ಕೃತಿಕವಾಗಿ, ಕಲೆ ಮತ್ತು ಕರಕುಶಲತೆಗಳಲ್ಲಿ ಮಾನ್ಯತೆ ದೊರಕಿಬಿಡುತ್ತದೆ. ಏಕೆಂದರೆ ಸಂಗೀತ, ನೃತ್ಯಾದಿ ಲಲಿತಕಲೆ, ಕರಕುಶಲತೆ ಮತ್ತು ಚಿತ್ರ ಹಾಗೂ ವರ್ಣಕಲೆಗಳಲ್ಲಿ ಚುಂಬಕ ಶಕ್ತಿಯಿರುತ್ತದೆ. ಅದು ಸಹಜವಾಗಿ ಎಲ್ಲರನ್ನೂ ಸೆಳೆಯುತ್ತದೆ.

ಅಷ್ಟೇ ಅಲ್ಲದೇ ಅದನ್ನು ಅನುಕರಿಸುವ ಮತ್ತು ಅನುಸರಿಸುವ ಮೂಲಕ ತಮ್ಮ ಸಾಂಸ್ಕೃತಿಕ ಸಂಪದವನ್ನು ಹೆಚ್ಚಿಸಿಕೊಳ್ಳಲು ಅಥವಾ ವೈಭವೀಕರಿಸಿಕೊಳ್ಳಲು ಹಾತೊರೆಯುತ್ತಾರೆ. ಇದು ಗ್ರೀಸ್ ಮತ್ತು ಭಾರತ ಎರಡೂ ದೇಶಗಳಲ್ಲಾಯಿತು.

ಲಲಿತಕಲೆಗಳ ಪ್ರಭಾವ

ನಮ್ಮ ದೇಶದಲ್ಲೂ ಸಂಗೀತ, ನೃತ್ಯ, ಚಿತ್ರಕಲೆಗಳು, ಮೆಲೋಡ್ರಾಮ ಸಾಹಿತ್ಯಗಳು ಹಾಗೂ ರಂಗಭೂಮಿಯೂ ನೇರವಾಗಿ ಆರ್ಯರ ಅಥವಾ ಬ್ರಾಹ್ಮಣ್ಯದ ಮನಸ್ಥಿತಿಗಳನ್ನು ಗಟ್ಟಿಗೊಳಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ತನ್ನ ಕಾಣಿಕೆಗಳನ್ನು ನೀಡಿತು.

ಭಕ್ತಿಗೀತೆಗಳು, ಭಜನೆಗಳು, ದೇವ ದೇವಿಯರ ಚಿತ್ರ ಮತ್ತು ಶಿಲ್ಪಗಳು, ಕರಕೌಶಲ್ಯದ ಕಲಾಕೃತಿಗಳು ಕೂಡ ಜನರ ಮನಸ್ಸಿನೊಳಗೆ ಪ್ರವೇಶಿಸಿದವು. ಅದೂ ಭಾವನಾತ್ಮಕವಾಗಿ ಪ್ರವೇಶಿಸಿಬಿಟ್ಟವು. ನಮಗೆ ನೆನಪಿರಬೇಕು, ಲಲಿತಕಲೆಗಳು ತಲೆಗೆ ಸಂಬಂಧಪಟ್ಟದ್ದಲ್ಲ. ಅದರ ಗುರಿ ಹೃದಯ. ಅದು ಸಮಾಜದೊಳಗೆ ಪ್ರವೇಶಿಸುವುದೇ ಸಾಂಸ್ಕೃತಿಕ ಪ್ರಭಾವಗಳ ಮೂಲಕ. ಯಾವ ಸಂಸ್ಕೃತಿಯು ನಮ್ಮ ನಿತ್ಯ ಬದುಕಿಗೆ, ಜೀವನಾಧಾರಕ್ಕೆ ಸೊಬಗನ್ನು ಮತ್ತು ಹಿತವನ್ನು ಕೊಡುವುದೋ ಅದನ್ನು ಆಪ್ತಗೊಳಿಸಿಕೊಳ್ಳುತ್ತಾ ಪೀಳಿಗೆ ಪೀಳಿಗೆಗಳೇ ಮುಂದುವರಿಯುತ್ತವೆ.

ಯಾವುದು ಸನಾತನ? ಯಾವುದು ಪುರಾತನ?

ಭಾರತೀಯ ಸಂಸ್ಕೃತಿಯ ಪ್ರತೀಕವೆಂದೇ ಬಿಂಬಿಸಲಾಗುತ್ತಿರುವ ಸೀರೆ ಮೂಲತಃ ಭಾರತದ್ದೇ ಅಲ್ಲ. ಅದು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಚಂದ್ರಗುಪ್ತನ ಗ್ರೀಸಿನ ಹೆಂಡತಿಯೊಡನೆ ಭಾರತವನ್ನು ಪ್ರವೇಶಿಸಿತು. ನಮ್ಮ ಸನಾತನ ಸಂಸ್ಕೃತಿ ಎಂದು ಗಂಟಲು ಹರಿದುಕೊಳ್ಳುವ ಸಂಸ್ಕೃತಿ ರಕ್ಷಕರು ಇದನ್ನು ತಿಳಿದುಕೊಳ್ಳುವುದಿರಲಿ, ಜುಬ್ಬ ಮತ್ತು ಪೈಜಾಮಗಳೂ ಭಾರತದ್ದಲ್ಲ ಪರ್ಶಿಯಾವೇ ಮೊದಲಾದ ಈಗಿನ ಇಸ್ಲಾಂ ನಾಡುಗಳ ಮೂಲದ್ದು ಎಂದೂ ಗೊತ್ತಿಲ್ಲ.

ಮಾರು ಮಾರು ಉದ್ದದ ಬಟ್ಟೆಗಳನ್ನು ತೊಟ್ಟುಕೊಳ್ಳುವುದು ಭಾರತದ ಪ್ರಾಚೀನ ಸಂಸ್ಕೃತಿಯದ್ದಾಗಿರದೇ ಬರಿಯ ಮುಂಡ ಮತ್ತು ತುಂಡು ವಸ್ತ್ರಗಳನ್ನು ಧರಿಸುತ್ತಿದ್ದರು. ಪ್ರೇಮದ ಸಂಕೇತವೆಂದು ಗುರುತಿಸುವ ಗುಲಾಬಿಯನ್ನು ಭಾರತಕ್ಕೆ ಮೊದಲ ಬಾರಿ ಪರ್ಶಿಯಾದಿಂದ ತಂದವನು ಬಾಬರ್. ಅವನೇ ದೇಶದಲ್ಲಿ ಮೊಟ್ಟಮೊದಲ ಗುಲಾಬಿ ತೋಟವನ್ನು ಮಾಡಿಸಿದ್ದು. ಪೋರ್ಜುಗೀಸ್ ಮೂಲದ ಇಡ್ಲಿ ನಮ್ಮ ದೇಶದ್ದಲ್ಲ. ಪರಂಗಿ ಹಣ್ಣು ಮತ್ತು ಟೊಮ್ಯಾಟೋ ಮೊದಲಾದ ಹಣ್ಣು ತರಕಾರಿಗಳು ನಮ್ಮ ಪ್ರಾಚೀನ ಭಾರತದಲ್ಲಿರಲಿಲ್ಲ.

ಭಾರತದ ಮೂಲೆ ಮೂಲೆಗಳಲ್ಲಿ ಬೇಲಿಗಿಡಗಳಾಗಿ ಬೆಳೆದು ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳ ಎಷ್ಟೆಷ್ಟೋ ಸಂಸಾರಗಳಿಗೆ ಆಶ್ರಯತಾಣವಾಗಿದ್ದು, ನಮ್ಮ ನಾಯಿ ನರಿಗಳಿಗೆ ಔಷಧಿಯಾಗಿ ಅಗತ್ಯವಾಗಿ ಬೇಕಾಗಿರುವ ಲಾಂಟಾನದ ಗಿಡಗಳು ನಮ್ಮ ದೇಶದ್ದು ಸುತಾರಾಂ ಅಲ್ಲ. ಪೋರ್ಚುಗೀಸರ ನಾಡಿನಿಂದ ಸಸಿಯಾಗಿ ಬಂದಿದ್ದು. ಆದರೆ ಆ ಗಿಡಗಳಿಲ್ಲದ ಯಾವುದೇ ಹಳ್ಳಿಯನ್ನೂ ನೋಡಲು ಸಾಧ್ಯವಿಲ್ಲ! ಭಾರತದ ಸನಾತನ ಸಂಸ್ಕೃತಿಯೆಂದು ತೊಡುವ ಕಚ್ಚೆ, ಸೀರೆಗಳು ಗ್ರೀಸ್ ದೇಶದ್ದು.

ಅದೇನೇ ಇರಲಿ, ಹೇಳಲು ಹೊರಟಿದ್ದೇನೆಂದರೆ, ಯಾವುದೇ ಸಂಸ್ಕೃತಿಯ ಪ್ರಭಾವ ಮತ್ತು ಕೊಡುಗೆ ಹಿತವೆನಿಸಿದ್ದಲ್ಲಿ ಅವನ್ನು ಆಪ್ತವಾಗಿಸಿಕೊಳ್ಳುವ ಸಮಾಜವು ಅದನ್ನು ತನ್ನದಾಗಿಸಿಕೊಂಡು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿಕೊಂಡು, ಅದನ್ನು ಅನುಕೂಲಕ್ಕೆ ತಕ್ಕಂತೆ ರೂಪಾಂತರಿಸಿಕೊಂಡು ನಡೆಯುತ್ತದೆ. ಮನುಷ್ಯನಿಗೆ ಕೊನೆಗೆ ಬೇಕಾಗಿರುವುದು ಅನುಕೂಲಕರವಾದ ಜೀವನ ಮತ್ತು ಅದರಿಂದ ದೊರಕುವ ನೆಮ್ಮದಿ.

ಹಾಗಾಗಿಯೇ ಸಮಾಜದಲ್ಲಿ ಅನೇಕಾನೇಕ ಹೊರಗಿನ ಪ್ರಭಾವಗಳನ್ನು ಪ್ರತಿರೋಧಿಸದೇ ತನ್ನ ವರ್ತುಲದೊಳಕ್ಕೆ ಬರಲುಬಿಡುವುದು ಮತ್ತು ಅಳವಡಿಸಿಕೊಳ್ಳುವುದು. ಇಲ್ಲಿ ಸರಿ ತಪ್ಪು ಎಂಬುವ ಚರ್ಚೆಯೇ ಬರುವುದಿಲ್ಲ. ಆದರೆ, ಸಾಹಿತ್ಯ, ಲಲಿತಕಲೆಗಳು ಪರೋಕ್ಷವಾಗಿ ಸಮೂಹಗಳಲ್ಲಿ ಪ್ರವೇಶಿಸುತ್ತಾ ವ್ಯಕ್ತಿಗತವಾಗಿ ಮನಸ್ಸುಗಳ ಮೇಲೆ ತಮ್ಮ ಶಾಶ್ವತ ಪ್ರಭಾವಗಳನ್ನು ಬೀರುವುದರ ಬಗ್ಗೆ ಪ್ರಶ್ನೆ ಎತ್ತಬೇಕಿದೆ.

ಏಕೆಂದರೆ ಇಂಥಾ ಲಲಿತಕಲೆಗಳನ್ನು ಬಲ್ಲವರು ತಮ್ಮ ಸಿದ್ಧಾಂತಗಳನ್ನು, ಧೋರಣೆಗಳನ್ನು ಹೇರುವುದಕ್ಕಷ್ಟೇ ಅಲ್ಲ, ಮರುಳು ಮಾಡಲು ಮತ್ತು ಅಧೀನದಲ್ಲಿಟ್ಟುಕೊಳ್ಳಲೂ ಬಳಸಿಬಿಟ್ಟರು. ಅದೇ ಈ ಲಲಿತಕಲಾಕ್ಷೇತ್ರದಲ್ಲಿ ಆದ ಬಹು ದೊಡ್ಡ ಎಡವಟ್ಟು. ಲಲಿತ ಕಲೆಗಳು ಧಾರ್ಮಿಕತೆಯ ಪ್ರಭಾವವನ್ನು ದಟ್ಟವಾಗಿ ಬೀರಿದವು.

ರಾಮ ಭಜನೆ, ಕೃಷ್ಣ ಗೀತೆ

ವ್ಯಕ್ತಿಗತವಾಗಿ ನಾನು ಪ್ರತಿಶತ ನಾಸ್ತಿಕನೇ (ಕಟ್ಟರ್ ಅಲ್ಲ) ಆದರೂ ದೇವರುಗಳಿಗೆ ಸಂಬಂಧಿಸಿದ ಕಲಾಕೃತಿಗಳನ್ನು ಉಡುಗೊರೆಗಳಾಗಿ ಪಡೆದಾಗ ಅವನ್ನು ನಿರಾಕರಿಸಲು ಮನಸ್ಸಾಗುವುದಿಲ್ಲ. ದೇವರನ್ನು ನಂಬದಿದ್ದರೇನಂತೆ ನಾನೊಬ್ಬ ಕಲೋಪಾಸಕ ಎಂಬ ವ್ಯಕ್ತಿಗತ ಒಲವು ಮತ್ತು ನಿಲುವುಗಳು ಗಟ್ಟಿಯಾಗಿರುವುದರಿಂದ ಯಾವ ದೇವರ ಕಲಾಕೃತಿಯನ್ನು ಮತ್ತು ಗೀತೆ ಹಾಗೂ ನೃತ್ಯಗಳನ್ನು ಅಲ್ಲಗಳೆದಿರುವುದು ಅಥವಾ ಖಂಡಿಸಿರುವುದು ನೆನಪೇ ಇಲ್ಲ.

ರಾಮಾಯಣದ ವಿಮರ್ಶೆ ಮಾಡಿದರೂ ಕೂಡ ತುಳಸೀದಾಸರ, ಕಬೀರರ ರಾಮನ ಭಜನೆಗಳನ್ನು ಹಾಡದೇ ಇರಲಾಗುವುದಿಲ್ಲ. ಕೃಷ್ಣನನ್ನು ಓರ್ವ ಬಿಂದಾಸ್ ಕೌಬಾಯ್ ಎಂಬಂತೆ ತಮಾಷೆ ಮಾಡಿದರೂ ಸೂರದಾಸ್, ಮೀರಾಬಾಯಿಯ ಕೃಷ್ಣನ ಭಜನೆಗಳನ್ನು ಹಾಡದೇ ಬಿಡುವುದಿಲ್ಲ. “ಪ್ರೇಮಮುದಿತ ಮನಸೆ ಕಹೋ, ರಾಮ ರಾಮ ರಾಮ್” ಎಂದು ಹಾಡುವಾಗ ಹೆಂಡತಿಯನ್ನು ಕಾಡಿಗಟ್ಟಿದ, ಶಂಭೂಕನನ್ನು ವಧಿಸಿದ, ಸುಗ್ರೀವನಿಗೆ ಶರಸಂಧಾನ ಮಾಡಿದ ರಾಮ ನೆನಪಿಗೇ ಬರುವುದಿಲ್ಲ. ರಾಮ ಎಂದು ವಿರಾಮ ನೀಡುವಂತಹ ಶಬ್ಧ ಅದಾಗಿರುತ್ತದೆ.

ನಾದಮಯವಾಗಿ, ಸ್ವರಸಂಚಾರ ಮಾಡುತ್ತಾ ಸುಲಲಿತವಾಗಿ ನಮ್ಮ ಹೃದಯವನ್ನು ಪ್ರವೇಶಿಸುವ ಸಂಗೀತ ಅದಾಗಿರುತ್ತದೆ. “ಮೇರೆ ತೋ ಗಿರಿಧರ ಗೋಪಾಲ, ದೂಸರೋನ ಕೋಯಿ” ಎಂದು ಮೀರಾಳೊಂದಿಗೆ ಜೊತೆಯಾಗಿ ನಾವೂ ನನಗೆ ಗಿರಿಧರ ಗೋಪಾಲ ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ದನಿಗೂಡಿಸಿಬಿಡುತ್ತೇವೆ. ಆದರೆ ಇದರರ್ಥ ನಾವು ರಾಮನಾರಾಧಕರೋ ಅಥವಾ ಕೃಷ್ಣನಾರಾಧಕರೋ ಆದೆವೆಂದಲ್ಲ.

ಕಬೀರ ಮತ್ತು ತುಳಸೀದಾಸರೇ ಮೊದಲಾದ ಸಂತರು ರಾಮನನ್ನು ತಮ್ಮ ಶ್ರದ್ಧೆಯ ಕುರುಹನ್ನಾಗಿಸಿಕೊಂಡಿದ್ದು, ಸೂರದಾಸ್, ಮೀರಾಬಾಯಿ ಕೃಷ್ಣನಿಗೆ ಶರಣು ಹೋಗಿದ್ದು, ನಾಮದೇವ್, ಚೋಕಾಮೇಲಾ, ತುಕಾರಾಂ, ಜ್ಞಾನದೇವ, ಸಕ್ಕೂಬಾಯಿ, ಸಾವರಿಯೇ ಮೊದಲಾದ ಸಂತರು ಅಚಲವಾದ ಭಕ್ತಿಯನ್ನು ವಿಠಲನಲ್ಲಿ ನೆಲೆಗೊಳಿಸಿದ್ದು, ಸೂಫಿಗಳು ಅಲ್ಲಾಹನಿಗೆ, ಕ್ರೈಸ್ತ ಸಂತರು ಟ್ರಿನಿಟಿ ಪರಿಕಲ್ಪನೆಗೆ ಶರಣಾಗುವುದು ಯಾವುದೂ ತಪ್ಪೆಂದೋ, ಸರಿಯೆಂದೋ ಚರ್ಚಿಸುವ ಅಗತ್ಯವೇ ಇಲ್ಲ. ಏಕೆಂದರೆ ಶರಣರ ಪರಿಕಲ್ಪನೆಯಂತೆ ದೇವರನ್ನು ಕಾಣುವುದಲ್ಲ, ಕಂಡುಕೊಳ್ಳುವುದು.

ಇಷ್ಟದೈವವೆಂಬುದು ಬಸವಣ್ಣನಿಗೆ ಕೂಡಲ ಸಂಗಮನಾಗಿದ್ದರೆ, ಅಕ್ಕನಿಗೆ ಚನ್ನಮಲ್ಲಿಕಾರ್ಜುನ, ಸೂಳೆ ಸಂಕವ್ವಳಿಗೆ ನಿರ್ಲಜ್ಜೇಶ್ವರನಾಗಿರುತಿತ್ತು. ಆದರೆ ಅವರೆಲ್ಲರ ಒಲವು, ನಿಲುವು ಮತ್ತು ಧೋರಣೆಗಳು ಪ್ರಾಮಾಣಿಕವಾಗಿದ್ದವು, ಮುಕ್ತವಾಗಿದ್ದವು, ಮುಗ್ಧವಾಗಿದ್ದವು ಎಂಬುದಷ್ಟೇ ಅಲ್ಲಿ ತೋರುವುದು. ಅವಕ್ಕಷ್ಟೇ ಅಲ್ಲಿ ಮಾನ್ಯತೆ. ಹಾಗಾಗಿಯೇ ಗಿರಿಧರ ಗೋಪಾಲ, ರಾಮ, ಕೂಡಲಸಂಗಮದೇವ, ವಿಠಲರು ಮುಖ್ಯವಾಗದೇ ಮೀರಾ, ಕಬೀರ, ಬಸವ, ತುಕಾರಾಂ ಮುಖ್ಯವಾಗಿರುತ್ತಾರೆ.

ಅವರು ಪ್ರಾಮಾಣಿಕವಾಗಿ ಕಂಡುಕೊಂಡ ಶ್ರದ್ಧೆ ಮತ್ತು ಬದ್ಧತೆಗಳ ಪರಿಕಲ್ಪನೆಯೋ ಅಥವಾ ಕುರುಹುಗಳೋ ಅಥವಾ ಪ್ರೇಮವೋ ಆದಂತಹ ಅವರ ದೈವಗಳೂ ಅವರ ಮೂಲಕ ನಮ್ಮ ಗೌರವಕ್ಕೆ, ಆದರಕ್ಕೆ ಪ್ರಾಪ್ತರಾಗುತ್ತಾರೆ. ಧಾರ್ಮಿಕತೆಯು ಮುಗ್ಗರಿಸಿದ್ದೇ ಸಂಕೇತಗಳನ್ನು ಆರಾಧಿಸುವಲ್ಲಿ ಮತ್ತು ಆ ಸಂಕೇತಗಳನ್ನು ದಾಟದೇ ಹೋದಲ್ಲಿ.

ಪೂಜಾರಿಗಳು ಸಂತರಲ್ಲ

ಹತ್ತಾರು ವರ್ಷಗಳಿಂದ ಸಂಪ್ರದಾಯಬದ್ಧವಾಗಿ ಪೂಜಿಸುತ್ತಾ, ನೇಮ ನಿಷ್ಟೆಗಳಿಂದ ನೈವೇದ್ಯ ಇಡುತ್ತಿದ್ದ ಪೂಜಾರಿಯಿಂದ ಒಂದಗುಳನ್ನೂ ಸೇವಿಸದ ಶಿವ ಲಿಂಗವೊಡೆದು ಬಂದು ಕೋಳೂರಿನ ಕೊಡಗೂಸು ತರುವ ಅನ್ನಕ್ಕೆ ಕೈ ಚಾಚುತ್ತಾನೆ. ಅವಳಿಂದ ಪ್ರಸಾದ ಸೇವಿಸುವ ಕಥೆ ರೂಪಕವೇ ಆದರೂ ಒಂದು ಬಹುದೊಡ್ಡ ಧ್ವನಿಯನ್ನು ಎತ್ತುತ್ತದೆ, ಸಂಪ್ರದಾಯದ ಚೌಕಟ್ಟುಗಳನ್ನು ಒಡೆದು ಬನ್ನಿ ಎಂದು.

ವಿಶೇಷವೆಂದರೆ ಆ ಸಾಂಪ್ರದಾಯಿಕವಾದಂತಹ ಸರಪಳಿಗಳನ್ನು ಕಡಿದುಕೊಳ್ಳುವುದೂ ವೈಚಾರಿಕತೆಯಿಂದ ಅಲ್ಲ, ಮುಗ್ಧತೆಯಿಂದ. ಭಾವುಕತೆಯಿಂದ. ಆಮೇಲೆ ಯಾವಾಗ ಸಂಪ್ರದಾಯದ ನೇಮಮುರಿದ ಸಂಗತಿ ಜನಪ್ರಿಯತೆಯನ್ನೂ ಪಡೆಯುವುದೋ ನಂತರ ಅದೂ ಕೂಡ ಸಂಪ್ರದಾಯದ ಮುಂದುವರಿಕೆಯ ಮತ್ತೊಂದು ಭಾಗವಾಗುತ್ತದೆ. ಅದೊಂದು ದುರಂತ.

ಸಂಪ್ರದಾಯವು ಧರ್ಮವನ್ನು ಕೊಲ್ಲುತ್ತದೆ. ಪರಂಪರೆಯು ಧರ್ಮವನ್ನು ಬೆಳೆಸುತ್ತದೆ. ಬಹಳಷ್ಟು ಜನರಿಗೆ ಸಂಪ್ರದಾಯ ಮತ್ತು ಪರಂಪರೆಯ ವ್ಯತ್ಯಾಸಗಳು ತಿಳಿದಿರುವುದಿಲ್ಲ. ಪರಂಪರೆ ಎಂದು ಮಾತಾಡುತ್ತಾರೆ. ಆದರೆ ಅದರ ಕುರಿತಾದ ಸ್ಪಷ್ಟತೆಗಳು ಇರುವುದಿಲ್ಲ. ಸಂಪ್ರದಾಯಗಳು ಚೌಕಟ್ಟುಗಳನ್ನು ನಿರ್ಮಿಸುತ್ತವೆ. ಅದನ್ನು ಮೀರಿ ಹೋಗದಿರಲು ನಿರ್ಬಂಧವಿಧಿಸುತ್ತದೆ. ಆದರೆ ಪರಂಪರೆಗಳು ಇಂತಹ ಚೌಕಟ್ಟುಗಳಲ್ಲ. ಅವು ಮಾರ್ಗ.

ಮಾರ್ಗದಲ್ಲಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವ ಘನವೆತ್ತ ನಡಿಗೆ ಪರಂಪರೆಯದ್ದಾಗಿರುತ್ತದೆ. ತುಂಬಾ ಸರಳವಾದ ಉದಾಹರಣೆ ನೀಡಬೇಕೆಂದರೆ, ಒಂದು ದೇವರನ್ನು ಹೀಗೇ ಪೂಜಿಸಬೇಕು, ಹೀಗೇ ನಡೆದುಕೊಳ್ಳಬೇಕು, ಇದನ್ನು ಹೊರತಾಗಿ ಬೇರೊಂದು ಹೊಸತನ್ನು ಮಾಡಬಾರದು ಎಂದು ಚೌಕಟ್ಟಿನಲ್ಲಿರುವುದು ಸಂಪ್ರದಾಯವಾದರೆ. ದೇವರನ್ನು ಕಂಡುಕೊಳ್ಳಲು, ಅವನನ್ನು ಆರಾಧಿಸಲು ಸಂತರು, ಸಾಧುಗಳು, ಶರಣರು, ಭಕ್ತರು, ಸೂಫಿಗಳು ತಮ್ಮದೇ ಆದಂತಹ ಮಾರ್ಗವನ್ನು ಹುಡುಕಿಕೊಂಡರು.

ಅವರು ದೈವ ಸಾಕ್ಷಾತ್ಕಾರದ, ಜೀವ ಪ್ರೇಮದ ವಿಷಯಗಳನ್ನು ತಮ್ಮ ನಡೆ ನುಡಿಗಳಲ್ಲಿ, ಆಚಾರ ವಿಚಾರಗಳಲ್ಲಿ ತಮ್ಮದೇ ನೆಲೆಗಟ್ಟಿನ ಪ್ರಭಾವದಲ್ಲಿಯೇ ಪ್ರಾಮಾಣಿಕವಾಗಿ ಅನುಷ್ಟಾನಕ್ಕೆ ತರುತ್ತಿದ್ದರು. ಯಾವುದೇ ಹಿನ್ನೆಲೆಯವರಾದರೂ ಅವರೆಲ್ಲರೂ ದೈವೀ ಸಾಕ್ಷಾತ್ಕಾರದ, ಜೀವಪ್ರೇಮದ ವಿಷಯವನ್ನು ಎತ್ತಿ ಹಿಡಿವ ಪರಂಪರೆಗೆ ಸೇರಿದವರಾಗುತ್ತಾರೆ.

ಯಾವುದೋ ಒಬ್ಬ ಸಂಪ್ರದಾಯಸ್ಥ ಪೂಜಾರಿ, ದೇವಸ್ಥಾನ ಪುರೋಹಿತ ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರದ ಪರಂಪರೆಯಲ್ಲಿ ತನ್ನ ಗುರುತನ್ನು ಮೂಡಿಸಲಾರ. ಆದರೆ ಸಂಪ್ರದಾಯವನ್ನು ಮುರಿದ, ತಮ್ಮ ಶ್ರದ್ಧಾ ಭಕ್ತಿಗಳಿಗೆ, ಒಲವು ನಿಲುವುಗಳಿಗೆ ಬದ್ಧವಾಗಿದ್ದ ಕ್ರಾಂತಿಕಾರರೆಲ್ಲಾ ಪರಂಪರೆಯಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸಿರುತ್ತಾರೆ.

ಆದರೆ ಅವರು ತಮ್ಮ ಜೀವಿತಾವಧಿಯಲ್ಲಿ ನೆಮ್ಮದಿಯಾಗೇನೂ ಇರುವುದಿಲ್ಲ. ಅವರು ಪಡುವ ಪಡಿಪಾಟಲುಗಳಿಗೆ ಅವರು ಸೊರಗಿರುತ್ತಾರೆ. ಹೆಚ್ಚಿನ ಪಾಲು ಅದರಲ್ಲೇ ಭೌತಿಕವಾಗಿ ನಾಶವೂ ಆಗುತ್ತಾರೆ. ಆದರೆ ಅವರ ಚೈತನ್ಯ ಮತ್ತು ಪರಂಪರೆಯಲ್ಲಿ ಉಳಿಸಿದ ಹೆಜ್ಜೆಗುರುತು ಮಾತ್ರ ಸರ್ವಕಾಲಿಕ ಗೌರವಕ್ಕೆ ಪಾತ್ರವಾಗಿಬಿಡುತ್ತದೆ. ಆದರೆ, ಇಲ್ಲೊಂದು ದೊಡ್ಡ ವಿಷಯವಿದೆ. ಇವರನ್ನೆಲ್ಲಾ ತಮ್ಮ ಪ್ರಭಾವದೊಳಕ್ಕೆ ಜನರನ್ನು ಮೂಢರನ್ನಾಗಿಸಿ ಸೆಳೆದುಕೊಳ್ಳುವುದಕ್ಕೆ ಬಳಸಿಕೊಳ್ಳುವುದೂ ಕೂಡ ಮೂಲಭೂತವಾದಿಗಳೇ.

ಸಂಸ್ಕೃತಿ ರಕ್ಷಕರೆಂದು ಬಿಂಬಿಸಿಕೊಳ್ಳುವ ರೋಗಗ್ರಸ್ಥ, ಸಂಕುಚಿತ ಮನಸ್ಥಿತಿಯವರೇ. ಅವರು ಸಂಸ್ಕೃತಿ ಮತ್ತು ಪರಂಪರೆಯ ಹೆಸರಿನಲ್ಲಿ ಬಳಸಿಕೊಳ್ಳುವ ವಿಷಯಗಳನ್ನು ಪ್ರಗತಿಪರರೆಸಿಕೊಳ್ಳುವವರು, ಜಾತ್ಯಾತೀತ ಮನೋಭಾವದವರು ಹಿಂದೊಮ್ಮೆ ತಮ್ಮಂತೆಯೇ ಕ್ರಾಂತಿಯನ್ನು ಬೆಂಬಲಿಸುತ್ತಿದ್ದ ಚೈತ್ಯನ್ಯಗಳನ್ನು ನಿರಾಕರಿಸಿಬಿಡುತ್ತಾರೆ. ಇದರಿಂದ ಅವರೇ ಒಂದು ಕ್ರಾಂತಿಮುಖವಾದ ಪರಂಪರೆಯನ್ನು ಧಿಕ್ಕರಿಸಿ, ‘ನಿರಾಕರಿಸುವಂತಹ’ ಒಂದು ಸಂಪ್ರದಾಯಕ್ಕೆ ಬದ್ಧವಾಗಿಬಿಡುತ್ತಾರೆ.

ಬಹಳಷ್ಟು ಜಾತ್ಯಾತೀತ ಮತ್ತು ಮೌಢ್ಯವಿರೋಧಿಗಳ ಮನಸ್ಥಿತಿ ಇದು. ಸಂಪ್ರದಾಯಸ್ಥರ ಆಕ್ರಮಣ, ಅತಿಕ್ರಮಣ ಮತ್ತು ಬಂಧನಗಳನ್ನು ನಿರಾಕರಿಸುವ ಭರದಲ್ಲಿ ಪ್ರಾಮಾಣಿಕವಾಗಿ ಕ್ರಾಂತಿಯ ಪರಂಪರೆಯಲ್ಲಿ ಮೂಡಿರುವ ಚೈತನ್ಯದ ಹೆಜ್ಜೆಗಳನ್ನೂ ತಳ್ಳಿಹಾಕಿಬಿಡುತ್ತಾರೆ. ಇದರಿಂದ ಪ್ರಗತಿಪರ ಶಕ್ತಿಗಳು ಮತ್ತು ಜಾತ್ಯಾತೀತ ಧೋರಣೆಗಳು ಬೃಹತ್ ಸಮಾಜದ ಯಾವುದೋ ಮೂಲೆಯೊಂದರಲ್ಲಿ ಗೊಣಗುವ ದುರ್ಬಲ ದನಿಗಳಾಗುವವೇ ಹೊರತು ಭಾವನಾತ್ಮಕವಾಗಿ ಜನರನ್ನು ಒಳಗೊಳ್ಳುವುದಿಲ್ಲ. ಸಾಮಾಜಿಕ ಕ್ರಾಂತಿಯ ಹೋರಾಟಕ್ಕೆ ಇದೊಂದು ಪೆಟ್ಟು.

ಏನೇ ಆಗಲಿ, ಪ್ರಾಚೀನ ಗ್ರೀಸ್ ಮತ್ತು ಭಾರತದಲ್ಲಿ ಮಿಥಿಕಗಳು ಮೂಡಿದ ವಿಷಯಗಳಾಗಲಿ, ಮಹಾಕಾವ್ಯಗಳು ಅರಳಿದ ವಿಷಯಗಳಾಗಲಿ, ಮಾತೃಪ್ರಾಧಾನ್ಯತೆ ನಶಿಸುತ್ತಾ ಪಿತೃ ಪ್ರಾಧಾನ್ಯತೆಯು ನುಸುಳುತ್ತಾ ಬಂದಂತಹ ವಿಷಯಗಳಾಗಲಿ ಸಾಧಾರಣವಲ್ಲ. ಅಲಕ್ಷಿಸುವಂತಿಲ್ಲ. ಅವು ನಮ್ಮ ಇಂದಿನ ಸಾಂಸ್ಕೃತಿಕ ರಾಜಕಾರಣವನ್ನು ತಿಳಿದುಕೊಳ್ಳಲು ಅತ್ಯಂತ ಅಗತ್ಯವಾಗಿವೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending