Connect with us

ಅಂತರಂಗ

ಧರ್ಮ ಮರ್ಮ – 05 : ಕ್ರಿಸ್ತ ಮತ್ತು ಬಸವಣ್ಣ ಧಾರ್ಮಿಕ ಪುರಾಣ

Published

on

Art: Klaus fabry
  • ಯೋಗೇಶ್ ಮಾಸ್ಟರ್

ಬಾಗೇವಾಡಿಯ ಬಸವೇಶ್ವರನ (ನಂದಿ) ದೇವಸ್ಥಾನಕ್ಕೆ ಹೋದರೆ ಬಸವಣ್ಣನವರ ತಾಯಿ ಇದೇ ಬಸವನ ಪೂಜೆ ಮಾಡಿ ಶಿಶು ಭಾಗ್ಯ ಪಡೆದರೆಂದು ಹೇಳುತ್ತಾ ಕೋಡುಳ್ಳ ನಂದಿಯ ವಿಗ್ರಹವನ್ನು ತೋರುತ್ತಾರೆ. ಅದಕ್ಕೆ ಅಲ್ಲಿ ಬಹಳ ಮಾನ್ಯತೆಯೂ ಇದೆ.

ಶಿವಗಣದಲ್ಲಿ ಒಬ್ಬನಾದ ಸಾಕ್ಷಾತ್ ನಂದಿಯೇ ತಾಯಿ ಮಾದಲಾಂಬಿಕೆಯ ಗರ್ಭವನ್ನು ಸೇರಿ ಬಸವಣ್ಣನಾಗಿ ಜನ್ಮತಾಳಿದ ಎಂದು ಹೇಳುವಂತಹ ಮಿಥಿಕವನ್ನು ನಮ್ಮಲ್ಲಿ ಕಟ್ಟಿದ್ದಾರೆ. ಯಾವ ಅವೈಚಾರಿಕವಾದ ಡೋಂಗಿ ಪುರಾಣಗಳನ್ನು ಗುಡಿಸಿ ಹಾಕಿ ಜನತೆಯನ್ನು ಪ್ರಜ್ಞಾವಂತರನ್ನಾಗಿ ಮಾಡಲು ಜೀವನವೆಲ್ಲಾ ಹೆಣಗಿ ಮರಣಿಸಿದ ಬಸವಣ್ಣನಿಗೆ ಸಂದ ಗೌರವವಿದು.

ಅಂದು ಕಲ್ಯಾಣ ಕ್ರಾಂತಿಯಲ್ಲಿ ಶರಣರ ಕಗ್ಗೊಲೆಗಳು ನಡೆಯುವಾಗ ಸಂಪ್ರದಾಯವಾದಿಗಳ ಮಾರಣ ಘಾತಗಳಿಂದ ಶರಣರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಎತ್ತೆತ್ತಲೋ ವಲಸೆ ಹೋಗಬೇಕಾಯ್ತು. ತಲೆ ಮರೆಯಿಸಿಕೊಳ್ಳಬೇಕಾಯ್ತು. ನಂತರ ನಿಧಾನವಾಗಿ ತಮ್ಮ ಅಸ್ತಿತ್ವವನ್ನು ಮರುಸ್ಥಾಪಿಸಲು ಬಸವನ ಅನಾವರಣ ಮಾಡಲು, ಜನರ ನಡುವೆ ಬಸವನ ಬಗ್ಗೆ ಸದಭಿಮಾನವನ್ನು ಮೂಡಿಸಲು ಬಸವನ ಅಭಿಮಾನಿಗಳು ಪ್ರಯತ್ನಿಸುವಾಗ ಅದೇ ಹಳೆಯ ಪುರಾಣದ ತಂತ್ರಗಳನ್ನೂ ಬಳಸಲಾರಂಭಿಸಿದರು.

ಕ್ರಿಸ್ತ ಮತ್ತು ಬಸವರ ಕ್ರಾಂತಿ

ಕ್ರಿಸ್ತ ಮತ್ತು ಬಸವಣ್ಣ, ಇವರಿಬ್ಬರ ಸಾವು ಧರ್ಮ ಸ್ಥಾಪನೆಗೆ ನಾಂದಿಯಾಯ್ತು. ಇಬ್ಬರಲ್ಲೂ ಅನೇಕ ಸಾಮ್ಯತೆಗಳಿವೆ. ಕ್ರಿಸ್ತನ ಸಾವಿನ ನಂತರ ಅವನ ಅಭಿಮಾನಿ ಶಿಷ್ಯರು, ಅನುಯಾಯಿಗಳು ಹಾಗೂ ಬಸವನ ಸಾವಿನ ನಂತರ ಶರಣರು ಪಟ್ಟ ಪಾಡುಗಳಲ್ಲಿ ಸಾಮ್ಯತೆ ಇದೆ. ಅಷ್ಟೇ ಅಲ್ಲ.

ಯೆಹೂದಿಗಳ ಸಾಂಪ್ರದಾಯಕ ಅವೈಚಾರಿಕ ವಿಚಾರಗಳಿಗೆ ಮರುವ್ಯಾಖ್ಯಾನ ಮಾಡುತ್ತಾ, ಜನರಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಮತ್ತು ಸಾಮಾಜಿಕ ಜಾಗೃತಿ ಮೂಡಿಸಲು ಕ್ರಿಸ್ತ ಯತ್ನಿಸಿದರೆ, ಬಸವ ಇಲ್ಲಿ ವೈದಿಕರ ಜಡ್ಡುಗಟ್ಟಿದ ಸಾಂಪ್ರದಾಯಿಕತೆಯ ನಿರರ್ಥಕತೆಗಳನ್ನು ಬಯಲಿಗೆ ತಂದು ಸಮಸಮಾಜದ ನಿರ್ಮಾಣಕ್ಕೆ, ವ್ಯಕ್ತಿಗತ ಜಾಗೃತಿಯ ಬಗ್ಗೆ ಪ್ರಜಾಸತ್ತಾತ್ಮಕವಾದ ಆಧ್ಯಾತ್ಮಿಕತೆ, ಧಾರ್ಮಿಕತೆಯನ್ನು ಪ್ರತಿಷ್ಠಾಪಿಸಲು ಚಳವಳಿ ಹೂಡಿದ.

ಈ ಇಬ್ಬರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಉದ್ದೇಶ ಒಂದೇ ಆಗಿದ್ದರೂ ಕೆಲವು ಸಾಮಾಜಿಕ ಸ್ಥಾನಮಾನದ ವಿಷಯದಲ್ಲಿ, ಸಾಮಾಜಿಕ ಚಟುವಟಿಕೆಯಲ್ಲಿ ವ್ಯತ್ಯಾಸಗಳು ಕಾಣುತ್ತವೆ. ಬಸವಣ್ಣ ಕ್ರಿಸ್ತನಂತೆ ಬಡವರೇನಾಗಿರಲಿಲ್ಲ. ಕ್ರಿಸ್ತನಿಗೆ ಸಮಾಜದಲ್ಲಿ ಪ್ರಭುತ್ವದ ಆಶ್ರಯವಿರುವಂತಹ ಯಾವ ಅಧಿಕಾರ ಇರಲಿಲ್ಲ. ಬಸವಣ್ಣನಿಗೆ ರಾಜ ಬಿಜ್ಜಳನು ಗೆಳೆಯನಾಗಿದ್ದ. ಬಸವಣ್ಣನ ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳಿಗೆ ಬಿಜ್ಜಳನ ನೇರ ಕೊಡುಗೆ ಏನೂ ಇರದಿದ್ದರೂ, ಬಸವನಿಗಿದ್ದ ಅವನ ಗೆಳೆತನದ ಸಕಾರಾತ್ಮಕ ಪ್ರಭಾವವನ್ನು ಅಲ್ಲಗೆಳೆಯಲಾಗದು.

ನಿತ್ಯ ಅನ್ನದಾಸೋಹ ಮಾಡುತ್ತಿದ್ದ ಬಸವನ ಮಹಾಮನೆ ಕ್ರಿಸ್ತನಿಗಿರಲಿಲ್ಲ. ಆದರೆ ಕ್ರಿಸ್ತನೂ ಬಸವನಂತೆ ಅರಿವನ್ನೂ, ಆಹಾರವನ್ನೂ ಹಂಚಿಕೊಳ್ಳಲು ತನ್ನದೇ ರೀತಿಯಲ್ಲಿ ಕಾರ್ಯತತ್ಪರನಾಗಿದ್ದ. ಹಂಚಿಕೊಂಡು ಉಣ್ಣುವುದರಲ್ಲಿ ಬಸವನಂತೆಯೇ ಪ್ರಾಮುಖ್ಯತೆ ಕೊಟ್ಟಿದ್ದ. ಮುಂದೆ ಕ್ರಿಸ್ತನಿಗೂ ಮತ್ತು ಬಸವಣ್ಣನಿಗೂ ರಾಜದ್ರೋಹದ ಆಪಾದನೆಯನ್ನೇ ಮಾಡಿದರು. ಕ್ರಿಸ್ತನ ಶಿಲುಬೆಗೇರಿಸಿದರು. ಬಸವನ ಗಡಿಪಾರು ಮಾಡಿ ಕೊಂದರು. ಬಸವ ನೇರ ರಾಜಾಸ್ಥಾನದ ಸದಸ್ಯ ಮತ್ತು ಅಧಿಕಾರಿಯಾಗಿದ್ದರಿಂದ ರಾಜಕೀಯ ದ್ರೋಹದ ಆಪಾದನೆಗಳನ್ನೂ ಕೂಡ ಹೊರಿಸಿದರು, ರಾಜನನ್ನು ಕೊಂದರು, ಅದನ್ನು ಶರಣರ ತಲೆಗೆ ಕಟ್ಟಿದರು.

ಇನ್ನು ಶರಣರನ್ನು ಬೇಟೆಯಾಡ ತೊಡಗಿದಾಗ ಅವರು ನಿರ್ವಾಹವಿಲ್ಲದೇ ತಲೆ ಮರೆಸಿಕೊಂಡು ತಪ್ಪಿಸಿಕೊಳ್ಳಬೇಕಾಯ್ತು. ಅದೇ ರೀತಿ ಕ್ರಿಸ್ತನ ಅನುಯಾಯಿಗಳು ಕೂಡ ತಲೆ ಮರೆಯಿಸಿಕೊಂಡು ತಮ್ಮ ಕ್ರಿಸ್ತ ಧರ್ಮದ ಸಾರ ಸಿದ್ಧಾಂತಗಳನ್ನು ಗಟ್ಟಿಗೊಳಿಸಿಕೊಳ್ಳಲು ರಹಸ್ಯವಾಗಿ ಧರ್ಮಸಭೆಗಳನ್ನು ಸೇರಿಸಬೇಕಿತ್ತು.

ಪುನರುತ್ಥಾನಕ್ಕಾಗಿ ಮಿಥಿಕ

ಕ್ರಿಸ್ತಾನುಯಾಯಿಗಳೂ ಮತ್ತು ಬಸವಾನುಯಾಯಿಗಳೂ ಮಾಡಿದ ಎಡವಟ್ಟೆಂದರೆ ತಮ್ಮ ತಮ್ಮ ಅಭಿಮಾನದ ಆಧ್ಯಾತ್ಮಿಕ ನಾಯಕರಿಗೆ ಪವಾಡಗಳ ಮುಸುಕನ್ನು ಹಾಕಿ ಅವರವರ ಸತ್ಯತೆಗಳನ್ನು, ನಿಜ ಸ್ವರೂಪವನ್ನು ಮಂಕುಗೊಳಿಸಿದ್ದು. ಆದರೆ ಅವರನ್ನು ಮೂರ್ಖರೆಂದೋ, ಕುಯುಕ್ತಿಯ ತಂತ್ರಗಾರರೆಂದೋ ಕರೆಯಲಾರೆ.

ತಮ್ಮ ಅಸ್ತಿತ್ವವನ್ನು ಪುನರ್ಸ್ಥಾಪಿಸಲು ಆಗಿನ ಜನ ಸಾಮಾನ್ಯರ ನಡುವೆ ತಮ್ಮ ನಾಯಕರ ಬಗ್ಗೆ ಶ್ರದ್ಧೆ ಮತ್ತು ಭಕ್ತಿಯನ್ನು ಉಂಟುಮಾಡಲು, ಆಗ ವಾಡಿಕೆಯಲ್ಲಿದ್ದ ಮಿಥಿಕಗಳನ್ನು ಕಟ್ಟುವ ತಂತ್ರವನ್ನೇ ಉಪಯೋಗಿಸಿದರು. ಅದೇ ಕೈಲಾಸ ಒಡ್ಡೋಲಗ, ದೇವರ ಶಾಪ ಅಥವಾ ಅಣತಿಯಂತೆ ಭೂಲೋಕಕ್ಕಿಳಿಯುವುದು, ಸತ್ತವರನ್ನು ಬದುಕಿಸುವುದು, ಜನ ಸಾಮಾನ್ಯರು ಮಾಡಲಾಗದಂತಹ ಅದ್ಭುತಗಳನ್ನು ಸೃಷ್ಟಿಸುವುದು ಇತ್ಯಾದಿ. ಆದರೆ ನಂತರವೂ ಅದೇ ಉಳಿದುಕೊಂಡಿದ್ದು ಮಾತ್ರ ವಿಪರ್ಯಾಸ.

ಕ್ರಿಸ್ತನಾಗಲಿ, ಬಸವಣ್ಣನಾಗಲಿ ಎಂದಿಗೂ ಒಪ್ಪದಿರುವಂತಹ ತೀರಾ ಅವೈಚಾರಿಕ ಮತ್ತು ಪೆÇಳ್ಳು ಕಥೆಗಳ ಹೇರುವಿಕೆಗಳು ಈ ಪವಾಡಗಳು. ಬಸವಣ್ಣ ಅಥವಾ ಕ್ರಿಸ್ತ ಎಂದರೆ ಹೀಗೇ ಎಂದು ನೇರವಾಗಿ ಹೇಳಿದರೇನೇ ಬೆರಗುಗೊಳಿಸುವಂತಹ ಜೀವನದ ಅದ್ಭುತಗಳಿವೆ. ಸತ್ಯಾನ್ವೇಷಕರು ಶರಣಾಗುವಂತಹ ತತ್ವಗಳಿವೆ. ಆದರೆ ಅವುಗಳಿಗೆ ಪವಾಡಗಳ ಪೋಷಾಕನ್ನು ತೊಡಿಸಿ ಆ ಮಹಾಂತರ ಜೀವನಗಳನ್ನು ಮಂಕು ಮಾಡುತ್ತಿರುವ ಮಂದಿ ಈಗಲೂ ಇದ್ದಾರೆ.

ಪವಾಡ ಸದೃಶವಾದ ಭ್ರಾಮಕ ವ್ಯಕ್ತಿತ್ವಗಳನ್ನೇ ಮುಂದಿಡುತ್ತಾ ತಾವೂ ಅದೇ ಭ್ರಮಾಧೀನ ಸ್ಥಿತಿಯಲ್ಲಿದ್ದಾರೆ ಎಂಬುದೇ ವಿಷಾದನೀಯ. ಬಸವಣ್ಣ ತನ್ನ ವಚನಗಳ ಮೂಲಕವೇ, ಇತಿಹಾಸದಲ್ಲಿ ಸರಿದು ಸವೆದುಳಿಸಿದ ಕುರುಹುಗಳಿಂದಲೇ ಆಪ್ತ ಮತ್ತು ಆತ್ಮೀಯ ಹಿರಿಯಣ್ಣನಾಗಿಯೇ ಭಾವಪ್ರವೇಶ ಮಾಡುತ್ತಾನೆ. ಅಂತೆಯೇ ಯೇಸುವೂ ಕೂಡ ತನ್ನ ಪ್ರೇಮದ, ಕಾರುಣ್ಯದ, ಕ್ಷಮಾದಾನದ ನಿಲುವುಗಳಿಂದಲೇ ಇವ ನಮ್ಮವ ಇವ ನಮ್ಮವ ಎಂದೆನಿಸುತ್ತಾನೆ.

ಮನೆಯವರಂತೆ ಸಲುಗೆಯಿಂದಲೇ ಸ್ಪರ್ಶ ಕೊಡುವಂತೆ ಕಾಣುತ್ತಾರೆ. ಹಾಗಿರುವಾಗ ತಮ್ಮವರನ್ನು ಸಹಜದಲ್ಲಿ ಸ್ವೀಕರಿಸದೇ ಉತ್ಪ್ರೇಕ್ಷೆಯ ಪೌರಾಣಿಕ ಮೇಲಾಟಗಳು ಸಾಮಾನ್ಯ ಭ್ರಾಮಕ ಮನಸ್ಸುಗಳಿಗೆ ಬೆರಗುಗೊಳಿಸುತ್ತದೆ ಎಂಬುದೇನೋ ನಿಜ. ಆದರೆ ಅದೆಷ್ಟು ಮಟ್ಟಿಗೆ ಸರಿ? ಅರವಳಿಕೆಯಲ್ಲಿಯೇ ಜನರ ಮನಸ್ಸನ್ನು ನಿರ್ದೇಶಿಸುತ್ತಿರುವುದು ಅರಿವನ್ನು ಉಂಟುಮಾಡುವ, ಜಾಗೃತಿಗೊಳಿಸುವ ಕ್ರಿಸ್ತ ಮತ್ತು ಬಸವಣ್ಣರಿಬ್ಬರ ಉದ್ದೇಶವೇ ವಿಫಲ ಮಾಡಿದಂತೆ. ಅವರ ಉದ್ದೇಶವನ್ನು ವಿಫಲಗೊಳಿಸಿ ವ್ಯಕ್ತಿಯನ್ನು ವೈಭವೀಕರಿಸುವುದು ಅವರಿಬ್ಬರ ವ್ಯಕ್ತಿತ್ವಗಳೂ ಒಪ್ಪುವಂತದ್ದೇನಲ್ಲ.

ಶರಣ ಲೀಲಾಮೃತ

ಬಸವಣ್ಣನ ಜೀವನದಲ್ಲಿ 88 ಪವಾಡಗಳನ್ನು ಮಾಡಿದ, 360 ಜನರಿಗೆ ಪ್ರಾಣದಾನ ಮಾಡಿದ ಉಲ್ಲೇಖಗಳು ಸಿಗುತ್ತವೆ. ಶರಣ ಲೀಲಾಮೃತದ ಕವಿ ಚನ್ನಪ್ಪ, ಭೀಮಕವಿಯೇ ಮೊದಲಾಗಿ ಹಲವು ಕವಿಗಳು ಉತ್ಪ್ರೇಕ್ಷೆ ಮಾಡಿದ್ದಾರೆ ಎನ್ನುವುದೂ ಒಂದಾದರೆ, ಕೆಲವೊಂದನ್ನು ವಿಷಯಗಳನ್ನು ಸೂಚ್ಯವಾಗಿ ತಿಳಿಸಲು ಮಿಥಿಕಗಳನ್ನು ಬಳಸಿದ್ದಾರೆ ಎಂದು ತೋರುತ್ತದೆ.

ಹರಿಹರನ ಬಸವರಾಜ ದೇವರ ರಗಳೆಯೂ ಕೂಡ ಉತ್ಪ್ರೇಕ್ಷೆಗಳಿಂದ ಹೊರತಾಗಿಲ್ಲ. ಆದರೆ ಆ ಕಾವ್ಯವನ್ನು ಹೆಚ್ಚು ಗಂಭೀರವಾಗಿ ಗಮನಿಸಬೇಕಾದ ಅಗತ್ಯವಿದೆ. ಏಕೆಂದರೆ ಬಸವಣ್ಣನ ಅವಸಾನದ ನಂತರ ಸಮೀಪದ ಅವಧಿಯಲ್ಲಿ ಬರೆದಂತಹ ಕೃತಿ ಅದಾಗಿದೆ. ಆದರೆ ಅದೂ ಕೂಡ ತಿರುಚುವಿಕೆಗೆ ಒಳಗಾಗುವಂತಹ ಸಂದರ್ಭವೊದಗಿತು. ಅದನ್ನು ನಂತರ ವಿಚಾರಿಸುವ.

ಬಸವನ ಪವಾಡಗಳಲ್ಲಿ ಮುಖ್ಯವಾದುದು ಗೊಲ್ಲತಿಯ ಪವಾಡ, ಬದನೆಕಾಯಿ ಲಿಂಗವಾದದ್ದು, ಜೋಳದ ಕಾಳುಗಳನ್ನು ಮುತ್ತಿನ ಮಣಿಗಳನ್ನಾಗಿ ಮಾಡಿದ್ದು ಮತ್ತು ಇತರೆ. ತಮಿಳು ಶೈವ ಸಂತರ ಕಥನ ಪ್ರಭಾವಗಳು
ಶರಣ ಲೀಲಾಮೃತದಲ್ಲಂತೂ ಬಸವನನ್ನು ಸಣ್ಣವನಿಂದಲೇ ಮಹಾಮಹಿಮ, ಪವಾಡ ಪುರುಷನಂತೆ ಚಿತ್ರಿಸುತ್ತಾರೆ. ಬಾಲಕ ಬಸವ ಬಹಳ ಚುರುಕಿನ ವಿದ್ಯಾರ್ಥಿಯಾಗಿದ್ದು, ಅವನ ಸಹಪಾಠಿಗಳಿಗೆ ಅವನ ಕಂಡರೆ ಅಸೂಯೆ.

ಒಮ್ಮೆ ಬೆನಕನೆಂಬ ಅವರ ಸಹಪಾಠಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿಹೋಗುತ್ತಾನೆ. ಆಗ ಹೊಟ್ಟೆಕಿಚ್ಚಿನ ಬಸವನ ಓರಗೆಯವರು ಬಸವನೇ ಬೆನಕನನ್ನು ನೀರಿಗೆ ತಳ್ಳಿದ ಎಂದು ಆರೋಪವನ್ನು ಹೊರಿಸುತ್ತಾರೆ. ಆಗ ಹಿರಿಯರು ಕೋಪಗೊಂಡು ಬಸವನ ವಿಚಾರಣೆಗೆ ಒಳಪಡಿಸಿದಾಗ, “ಬೆನಕಾ, ನೀನೇ ಬಂದು ಹೇಳು, ನಾನು ನಿನ್ನನ್ನು ನೂಕಿದೆನೇ?” ಎಂದು ಜೋರಾಗಿ ಕೇಳಿದಾಗ ನೀರಿನಿಂದ ಜೀವ ತಳೆದು ಬಂದ ಬೆನಕ ಇಲ್ಲವೆಂದು ಸಾಕ್ಷಿ ಹೇಳುತ್ತಾನೆ. ಇಂತಹ ಪವಾಡಗಳಿಗೆ ತಮಿಳು ಶಿವಭಕ್ತರ ಕಥೆಗಳ ಪ್ರಭಾವವಿದೆ ಎಂದು ನೇರವಾಗಿ ಗೋಚರಿಸುತ್ತದೆ. ಕೊಡಗೂಸಿನ ಕಥೆಯಾಗಲಿ, ಸಿರಿಯಾಳ ಸೆಟ್ಟಿಯ ಕಥೆಯಾಗಲಿ ಇಂಥಾ ಪವಾಡ ಕಥನಗಳನ್ನೇ ಹೊಂದಿವೆ.

ಇನ್ನು ಗೊಲ್ಲತಿಯ ಕಥೆಯೆಂದರೆ, ಬಿಜ್ಜಳನ ಆಸ್ಥಾನದಲ್ಲಿ ಬಸವ ಕಾರ್ಯಕಲಾಪದಲ್ಲಿ ತೊಡಗಿದ್ದಾಗ ಕೆರೆಯ ಏರಿಯ ಮೇಲೆ ಗೊಲ್ಲತಿಯೊಬ್ಬಳು ಹೋಗುತ್ತಿದ್ದು, ಕಾಲು ಜಾರಿ ನೀರಿಗೆ ಬೀಳುವಾಗ “ಬಸವಾ ರಕ್ಷಿಸು” ಎಂದು ಕೂಗುವಳಂತೆ. ಆಗ ಬಸವ “ತಾಯೇ ನಿಲ್ಲು” ಎಂದು ತಡೆದರಂತೆ. ಬಿಜ್ಜಳ ಅಪಹಾಸ್ಯ ಮಾಡಲು, ಬಸವ ಪರೀಕ್ಷಿಸಲು ಹೇಳಿದರಂತೆ. ಅದರಂತೆ ರಾಜನು ತನ್ನ ಸೈನಿಕರನ್ನು ಕಳುಹಿಸಿ ವಿಚಾರಿಸಲಾಗಿ ಬಸವನ ಮಾತು ನಿಜವೆಂದು ತಿಳಿಯುವುದಂತೆ.

ಇದನ್ನು ನಾವು ತಿಳಿಯಬೇಕಾಗಿರುವುದು ಹೇಗೆಂದರೆ, ನಿಜಕ್ಕೂ ಬಸವಣ್ಣನವರು ತಮ್ಮ ಸಂಚಾರದ ಸಮಯದಲ್ಲಿ ಗೊಲ್ಲತಿಯೊಬ್ಬಳು ನೀರಿಗೆ ಬೀಳುವ ಅಥವಾ ಜಾರುವ ಸಮಯದಲ್ಲಿ ತಮ್ಮ ಸಾಮಾಜಿಕ ಸ್ಥಾನಮಾನದ ಗೊಡವೆಯೇ ಇಲ್ಲದೇ ಮುಂದಾಗಿ ಆಕೆಯನ್ನು ಪಾರು ಮಾಡಿದ್ದಿರಬಹುದು. ಅಂತಹ ಅವರ ಸಹಜ ಮತ್ತು ಉದಾತ್ತ ವರ್ತನೆಯನ್ನು ಹೀಗೆ ಮಿಥಿಕಕ್ಕೆ ಒಳಪಡಿಸಲಾಗಿದೆ ಎಂದು ತೋರುತ್ತದೆ.

ಮಹಾಮನೆಗೆ ಬದನೇಕಾಯಿಯ ತುಂಡುಗಳನ್ನು ಲಿಂಗವೆಂದು ತೋರುವಂತೆ ಬಟ್ಟೆಯಲ್ಲಿ ಕಟ್ಟಿಕೊಂಡು ಕಳ್ಳರು ಬರುತ್ತಾರೆ. ಆಗ ಬಸವನ ಲೀಲೆಯಿಂದ ಅವು ನಿಜವಾದ ಲಿಂಗಗಳೇ ಆದವೆಂದು ದಂತಕಥೆ. ಆದರೆ, ಬಸವಣ್ಣನು ವಸ್ತ್ರಗಳಲ್ಲಿ ಕಟ್ಟಿರುವ ಬದನೆಕಾಯಿಯ ತುಂಡುಗಳನ್ನು, ಲಿಂಗವೆಂದು ಹೆಸರಿಸಿದ್ದರಿಂದ, ಆ ವಸ್ತು ರಚಿತವಾದ ಸಾಮಗ್ರಿ ಅಥವಾ ಸ್ಥೂಲಕ್ಕೆ ಮಾನ್ಯತೆ ನೀಡದೇ, ಹೆಸರಿಸುವ ಮೂಲಕ ಭಾವಕ್ಕೇ ಪ್ರಾಮುಖ್ಯತೆಯನ್ನು ಕೊಟ್ಟು ಬದನೆಕಾಯಿಯ ತುಂಡುಗಳನ್ನು ನಿಜವಾದ ಲಿಂಗಗಳೆಂದೇ ಗೌರವಿಸಿರುತ್ತಾರೆ.

ಹೀಗಾಗಿ ಬದನೆಕಾಯಿಯ ತುಂಡುಗಳು ಲಿಂಗಗಳಾದ ಭಾವಾಂತರವೇ ಹೊರತು, ವಸ್ತುಗಳ ರೂಪಾಂತರವಲ್ಲ. ತೆಲುಗಿನಲ್ಲಿ ಪರಮಾನಂದಯ್ಯ ಶಿಷ್ಯಲು ಕಥಾ ಎಂಬ ಸಿನಿಮಾ ಕನ್ನಡಕ್ಕೆ ಗುರುಶಿಷ್ಯರು ಎಂಬ ಹೆಸರಿನಲ್ಲಿ ಮರು ಚಿತ್ರಿತವಾಯ್ತು. ಅದರಲ್ಲಿ ಭೋಗಾಭಿಲಾಷಿ ರಾಜ (ವಿಷ್ಣುವರ್ಧನ್) ರಾತ್ರಿಯಿಡೀ ವೇಶ್ಯೆಯ ಸಂಗದಲ್ಲಿರುತ್ತಾನೆ.

ಬೆಳಗಾಗುತ್ತಲೇ ಅವನ ಶಿವಾರ್ಚನೆಯ ವ್ರತಕ್ಕೆ ಭಂಗ ಬರುವಂತೆ ಅವನು ಅವಳ ಶಯ್ಯಾಗೃಹದಲ್ಲಿ ಬಂಧಿತನಾಗಿರುತ್ತಾನೆ. ಆದರೆ ಶಿವಪೂಜೆಯ ವ್ರತಕ್ಕೆ ಭಂಗಬರಬಾರದೆಂದು ಅವನು ಮಾಡುವುದೇನೆಂದರೆ, ಅಂಗಾತ ಮಲಗಿರುವ ಜಯಮಾಲಿಯ ಮೊಲೆಯ ಉಬ್ಬಿಗೆ ಶಿವಲಿಂಗವೆಂದು ಭಾವಿಸಿ ಪೂಜೆ ಮಾಡುತ್ತಾನೆ.

ಅಲ್ಲಿಗೆ ಅವನ ಶಿವಪೂಜೆಯ ವ್ರತಕ್ಕೆ ಭಂಗ ಬರುವುದಿಲ್ಲ. ಒಟ್ಟಾರೆ ಶಿವ ಎನ್ನುವುದು ಭಾವದಲ್ಲಿದೆಯೇ ಹೊರತು ವಸ್ತುವಿನಲ್ಲಿಲ್ಲ ಎಂಬುದರ ಸೂಚಕ ಇದು. ಭಕ್ತಿ ಮುಖ್ಯವಾಗುತ್ತದೆಯೇ ಹೊರತು, ವಸ್ತುವಲ್ಲ. ದೇವರೆಂಬುದು ಕಾಣುವುದರಲ್ಲಿ ಅಲ್ಲ, ಕಂಡುಕೊಳ್ಳುವುದರಲ್ಲಿ ಇರುವುದು ಎಂಬುದನ್ನು ಇದು ಸೂಚಿಸುತ್ತದೆ.

ಒಬ್ಬ ಸೆಟ್ಟಿಯು ಬಸವಣ್ಣನವರ ಭಕ್ತಿ ಔದಾರ್ಯಗಳನ್ನು ಪರೀಕ್ಷೆ ಮಾಡಲು ಹೇರು ಹೇರು ಮುತ್ತನ್ನು ಕೇಳುವನಂತೆ. ಆಗ ಬಸವ ಜೋಳವನ್ನೇ ಮುತ್ತುಗಳನ್ನಾಗಿ ಪರಿವರ್ತಿಸಿ ಕೊಟ್ಟರೆಂದು ಪುರಾಣಗಳು ಹೇಳುತ್ತವೆ. ಆದರೆ, ಸೆಟ್ಟಿಯ ದೃಷ್ಟಿಯಲ್ಲಿ ಬೆಲೆಬಾಳುವ ಮುತ್ತಿಗೆ ಬೆಲೆ ಎಂದಾದರೆ, ಬಸವಣ್ಣನವರ ದೃಷ್ಟಿಯಲ್ಲಿ ಆಹಾರಕ್ಕಾಗುವ, ಜೀವವನ್ನು ಪೋಷಿಸುವ ಜೋಳವನ್ನೇ ಮಹತ್ವದ್ದಾಗಿ ನೋಡುವಂತಹ ಅವರ ಧೋರಣೆಯನ್ನು ಪ್ರತಿನಿಧಿಸುವಂತಹ ಮಿಥಿಕ ಇದಾಗಿರುತ್ತದೆ.

ಇನ್ನೂ ಬಹಳ ಜನಪ್ರಿಯವಾದಂತಹ ಮಿಥಿಕವೆಂದರೆ, ಬಸವಣ್ಣನವರು ನಿದ್ರಿಸುವಾಗ ಶರಣರು ಬರುತ್ತಾರೆ. ಅಣ್ಣನವರು ವಿಶ್ರಾಂತಿ ಪಡೆಯುತ್ತಿದ್ದಾರೆಂಬ ಕಾರಣಕ್ಕೆ ಅವರನ್ನು ಹಿಂದಕ್ಕೆ ಕಳುಹಿಸಿದಾಗ ಬಸವಣ್ಣನ ಜೀವ (ಆತ್ಮ) ಶರಣರನ್ನೇ ಹಿಂಬಾಲಿಸಿಬಿಡುತ್ತದೆ. ಕಳೇವರವಾದ ಬಸವನ ಶರೀರವನ್ನು ಕಂಡು ಹೌಹಾರಿದ ಮಹಾಮನೆಯವರು ಮತ್ತೆ ಕಳುಹಿಸಿದ ಶರಣರ ಹುಡುಕಿಕೊಂಡು ಹೋಗಿ ಮತ್ತೆ ಕರೆದುಕೊಂಡು ಬಂದಮೇಲೆ ಬಸವಣ್ಣನವರ ದೇಹದೊಳಕ್ಕೆ ಜೀವ ಸೇರಿ ಸಜೀವವಾಗಿ ಎದ್ದು ಕೂತರು ಎಂಬುದು.
ಇದನ್ನು ಬಹಳ ನೇರವಾಗಿ ವಿಶ್ಲೇಷಿಸಬಹುದು.

ಶರಣರ ಬರವೆಮಗೆ ಜೀವಾಳ ಎನ್ನುವ ಅಣ್ಣನವರಿಗೆ ತನ್ನ ವಿಶ್ರಾಂತಿ, ಭೋಗ ಇತ್ಯಾದಿಗಳೆಲ್ಲಾ ಲೆಕ್ಕಕ್ಕಿಲ್ಲದ್ದು. ತೀರಾ ಗಂಭೀರವಾಗಿ ಗಣಿಸದೇ ಇರುವುದು. ತಮ್ಮ ಸಾಮಾಜಿಕ ಜೀವನವನ್ನೂ, ವೈಯಕ್ತಿಕ ಬದುಕನ್ನೂ ಒಂದಾಗಿಸಿಯೇ ಬಾಳಿದ ಬಸವಣ್ಣನವರಿಗೆ ತಾವು ಮಲಗಿದ್ದಾಗ ಬಂದು, ತೆರಳಿದ ಶರಣರ ಬಗ್ಗೆ ತಿಳಿಯುತ್ತಾರೆ. ಎಲ್ಲಿಂದಲೋ, ಎಷ್ಟೋ ದೂರವನ್ನು ಕ್ರಮಿಸಿ, ಕಷ್ಟಪಟ್ಟು ತಮ್ಮನ್ನು ಕಾಣಲು ಬಂದಿದ್ದ ಶರಣರನ್ನು ತನ್ನ ನಿದ್ದೆ ಅಥವಾ ವಿಶ್ರಾಂತಿಯಂತಹ ಕಾರಣಕ್ಕೆ ಹಿಂದಕ್ಕೆ ಕಳುಹಿಸಿರುವುದು ನಿಜಕ್ಕೂ ಬೇಸರವೂ, ದುಃಖವೂ ಆಗುತ್ತದೆ.

ಮಂಕಾಗಿರುವ ಬಸವಣ್ಣನವರನ್ನು ಕಂಡು ಚಿಂತೆಗೀಡಾದ ಶರಣರನ್ನು ಹಿಂದಕ್ಕೆ ಕಳುಹಿಸಿದವರು ಮತ್ತೆ ಅವರನ್ನು ಹುಡುಕಿ ಕರೆತಂದಾಗ ಅಣ್ಣನವರು ಉಲ್ಲಸಿತರಾಗುತ್ತಾರೆ. ಹೆಣದಂತೆ ಕಳಾಹೀನವಾಗಿದ್ದವರು, ಜೀವತಳೆದವರಂತೆ ಚೈತನ್ಯದಿಂದ ಕೂಡುತ್ತಾರೆ. ಇಂತಹ ಸಂಗತಿಗಳೆಲ್ಲವೂ ಕೂಡ ಪುರಾಣದ ರೂಪಕಗಳನ್ನು ಪಡೆದುಕೊಂಡಿರುತ್ತವೆ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವುದು ಏನೆಂದರೆ, ಕ್ರಿಸ್ತ ಮತ್ತು ಬಸವಣ್ಣರಿಬ್ಬರೂ ತಮ್ಮೊಟ್ಟಿನ ಜನರಿಗೆ ನಡೆದುಕೊಳ್ಳಲು ಕ್ರಮಗಳನ್ನು ರೂಪಿಸಿಕೊಟ್ಟರು. ತಾವೇ ಮಾದರಿಯಾಗಿ ಬಾಳಿದರು. ತಾವು ತಮ್ಮ ಮನಸ್ಸಿಗೆ, ತಮ್ಮ ಭಾವುಕತೆಗೆ, ತಮ್ಮ ಧೋರಣೆಗಳಿಗೆ, ತಮ್ಮ ಒಲವು ನಿಲುವುಗಳಿಗೆ ಇಂಥಾ ಬಗೆಯ ತರಬೇತಿಗಳನ್ನು ನೀಡಬೇಕೆಂದು ಕ್ರಮಗಳನ್ನು ರೂಪಿಸಿದರು.

ಆ ಕ್ರಮಗಳನ್ನು ಒಳಗೊಂಡ ಮಾದರಿ ಸಮಾಜವನ್ನು ರೂಪಿಸುವ ಉದ್ದೇಶ ಹೊಂದಿದ್ದರವರು. ಆದರೆ ಅವರ ಜೀವಿತಾವಧಿಯಲ್ಲಿ ಆ ಮಾದರಿ ಸಮಾಜ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬರಲಿಲ್ಲ. ವ್ಯಕ್ತಿಗತವಾಗಿ ರೂಪುಗೊಳ್ಳುತ್ತಿದ್ದವರು ಸಾಮಾಜಿಕವಾಗಿ ವ್ಯಾಪಕಗೊಳ್ಳುವ ಮೊದಲೇ ಅವರಿಬ್ಬರೂ ಮರಣಿಸಿದರು. ಹಾಗಾಗಿ ಅವರ ಕೆಲಸ ಪೂರ್ಣಗೊಳ್ಳಲಿಲ್ಲ.

ಆದರೆ ಅವರು ರೂಪಿಸಿದ ಕ್ರಮವು ಅಥವಾ ಧರ್ಮವು ಸಾಂಸ್ಥಿಕವಾಗಿ ಸ್ಥಾಪನೆಯಾಗಲು ಹಲವು ಬಗೆಯ ಕವಲುಗಳು ಮೂಡಿದವು. ಮುಂದೆ ನೋಡೋಣ. ಧರ್ಮ ಅಥವಾ ಧಾರ್ಮಿಕತೆಯ ತಾತ್ವಿಕ ಆಂತರ್ಯವನ್ನು ಅರಿಯಲು ಈಗ ನಾವೊಂದು ಮಾರ್ಗವನ್ನು ಹಿಡಿದಿದ್ದೇವೆ. ಇದೊಂದು ಬಗೆಯ ಅಧ್ಯಯನದ ರೀತಿ. ಇದು ಅಂತಿಮವಲ್ಲ. ಇದು ಸಂಪೂರ್ಣವೂ ಅಲ್ಲ. ಆದರೆ ಸಮಾಧಾನ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending