ದಿನದ ಸುದ್ದಿ
ಗೋ ಹತ್ಯೆ ಅಲ್ಲ, ಪ್ರಜಾತಂತ್ರದ ಹತ್ಯೆ ನಿಷೇಧಿಸಬೇಕಿದೆ
- ನಾ ದಿವಾಕರ
2020 ಪ್ರಜಾಸತ್ತಾತ್ಮಕ ಭಾರತದ ಪಾಲಿಗೆ ಕರಾಳ ವರ್ಷ. ಕೋವಿದ್ 19ರ ಭೀಕರ ಪರಿಣಾಮಗಳು ನೈಸರ್ಗಿಕ. ಇದರಿಂದ ಉಂಟಾದ ಲಕ್ಷಾಂತರ ಸಾವುಗಳು, ಅಸಂಖ್ಯಾತ ಜನರ ಸಂಕಷ್ಟಗಳು ಮತ್ತು ಶೋಷಿತ ಜನಸಮುದಾಯಗಳ ಬವಣೆ ಆಡಳಿತ ವ್ಯವಸ್ಥೆಯ ಕೊಡುಗೆ. 130 ಕೋಟಿ ಜನಸಂಖ್ಯೆ ಇರುವ ಬೃಹತ್ ದೇಶದಲ್ಲಿ ಒಂದು ಸಾಂಕ್ರಾಮಿಕ ಪಿಡುಗಿಗೆ 1 ಲಕ್ಷ 41 ಜನರ ಸಾವು ಆಡಳಿತ ವ್ಯವಸ್ಥೆಯನ್ನು ಅಷ್ಟಾಗಿ ಭಾವಿಸುವುದಿಲ್ಲ.
ಆ ಮಟ್ಟಿಗೆ ಭಾರತೀಯ ಪ್ರಭುತ್ವದ ಸಂವೇದನೆ ಜಡ್ಡುಗಟ್ಟಿದೆ. ಏಕೆಂದರೆ 1995ರ ನಂತರದ 25 ವರ್ಷಗಳಲ್ಲಿ 3 ಲಕ್ಷ 50 ಸಾವಿರ ರೈತರು ಸಾಲದ ಹೊರೆಯಿಂದ, ಬೆಳೆ ವೈಫಲ್ಯದಿಂದ, ಇತರ ಕೃಷಿ ಸಂಬಂಧಿತ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾರತದ ಪ್ರಭುತ್ವದ ದೃಷ್ಟಿಯಲ್ಲಿ ಕೋವಿದ್‍ನಿಂದ ಉಂಟಾಗುವ ಸಾವುಗಳಿಗೂ, ರೈತರ ಆತ್ಮಹತ್ಯೆಗಳಿಗೂ ವ್ಯತ್ಯಾಸವೇನೂ ಇರುವುದಿಲ್ಲ. ಆ ಮಟ್ಟಿಗೆ ಭಾರತದ ಆಡಳಿತ ವ್ಯವಸ್ಥೆ ಮಾನವೀಯ ಸ್ಪರ್ಶವನ್ನು ಕಳೆದುಕೊಂಡಿದೆ.
ನೈಸರ್ಗಿಕ ಕೋವಿದ್ ಮತ್ತು ಸಾಂದರ್ಭಿಕ ಕೃಷಿ ಬಿಕ್ಕಟ್ಟು-ರೈತರ ಆತ್ಮಹತ್ಯೆಗಳನ್ನು ಬದಿಗಿಟ್ಟು ನೋಡಿದರೂ 2020 ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಡಳಿತ ವ್ಯವಸ್ಥೆಗೆ ಕರಾಳ ವರ್ಷವೇ ಆಗಿದೆ. ಕಾಶ್ಮೀರದ ದಿಗ್ಬಂಧನ ಮತ್ತು ಕಾಶ್ಮೀರದ ಜನತೆಯ ಗೃಹಬಂಧನದ ಉನ್ಮಾದದ ನಡುವೆಯೇ ಕೇಂದ್ರ ಸರ್ಕಾರ ಭಾರತೀಯ ಪ್ರಜೆಗಳ ಪೌರತ್ವವನ್ನೇ ಪ್ರಶ್ನಿಸುವ ಕಾಯ್ದೆಯೊಂದನ್ನು ಜಾರಿಗೊಳಿಸಿದ್ದು ಕಳೆದ ವರ್ಷ ಡಿಸೆಂಬರ್ 11ರಂದು. ದೇಶದಲ್ಲಿ ಲಕ್ಷಾಂತರ ಸಂಖ್ಯೆಯ ಅಕ್ರಮ ವಲಸಿಗರು ಬಾಂಗ್ಲಾದೇಶ, ಪಾಕಿಸ್ತಾನದಿಂದ ಬಂದು ನೆಲೆಸಿದ್ದಾರೆ ಇವರೆಲ್ಲರನ್ನೂ ಉಚ್ಚಾಟಿಸುವ “ ಸ್ವಚ್ಚ ಭಾರತ ಅಭಿಯಾನಕ್ಕೆ ” ಚಾಲನೆ ದೊರೆತಿದ್ದು ಈ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ.
ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಬಹಳ ವರ್ಷಗಳಿಂದ ನೆಲೆಸಿರುವ ಹಿಂದೂಗಳಿಗೆ ಭಾರತದ ಪೌರತ್ವವನ್ನು ನೀಡುವುದು ಮತ್ತು ಭಾರತದಲ್ಲಿ ಬಹಳ ವರ್ಷಗಳಿಂದ ಅಕ್ರಮವಾಗಿ ನೆಲೆಸಿರುವ ಈ ದೇಶದ ಮುಸ್ಲಿಮರನ್ನು ಅವರ ದೇಶಗಳಿಗೆ ರವಾನಿಸುವುದು ಎನ್‍ಆರ್‍ಸಿ, ಎನ್‍ಪಿಆರ್ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲ ಉದ್ದೇಶವಾಗಿತ್ತು. ಈ ಮಸೂದೆಗಳನ್ನು ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೆ ಅನುಮೋದಿಸಿದ ಮಾದರಿಯೇ ಪ್ರಜಾತಂತ್ರದ ಕಗ್ಗೊಲೆಯ ಸೂಚನೆಗಳಾಗಿದ್ದವು.
ದೇಶಾದ್ಯಂತ ಭುಗಿಲೆದ್ದ ಸಿಎಎ ವಿರೋಧಿ ಆಂದೋಲನ ಕೇಂದ್ರ ಸರ್ಕಾರದ ದುಸ್ಸಾಹಸಕ್ಕೆ ತಕ್ಕ ಪ್ರತಿರೋಧವಾಗಿ ರೂಪುಗೊಂಡಿತ್ತು. ಈ ಆಂದೋಲನವನ್ನು ವಿಫಲಗೊಳಿಸಲು ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಪಕ್ಷ ಬಳಸಿದ ವಾಮ ಮಾರ್ಗಗಳು ದೆಹಲಿಯ ಕೋಮು ಗಲಭೆಗಳಲ್ಲಿ ವ್ಯಕ್ತವಾಗಿದ್ದವು. ಜನರನ್ನು ಗುಂಡಿಟ್ಟು ಕೊಲ್ಲಿ ಎಂದು ಮುಕ್ತವಾಗಿ ರಸ್ತೆಯಲ್ಲೇ ಕೂಗಿ ಹೇಳುವ ವ್ಯಕ್ತಿಯನ್ನು ಬಂಧಿಸಲೂ ಸಾಧ್ಯವಾಗದ ಸರ್ಕಾರಕ್ಕೆ ಬಿಲ್ಕಿಸ್ ಬಾನು ಎನ್ನುವ 80ರ ವೃದ್ಧೆಯಲ್ಲಿ ಭಯೋತ್ಪಾದಕತೆಯ ಛಾಯೆ ಕಂಡುಬಂದಿದ್ದು ಆಡಳಿತ ವ್ಯವಸ್ಥೆಯ ಕ್ರೌರ್ಯದ ಸಂಕೇತವಾಗಿತ್ತು.
ಇದು ಭಾರತದಲ್ಲಿ ಪ್ರಜಾತಂತ್ರದ ಕಗ್ಗೊಲೆಯ ಆರಂಭದ ಹೆಜ್ಜೆಗಳು ಎಂದು ಅರ್ಥವಾಗುವ ಹೊತ್ತಿಗೆ ಕೋವಿದ್ 19 ಅಪ್ಪಳಿಸಿತ್ತು. ಕೋವಿದ್ ಒಂದು ಮಾರಣಾಂತಿಕ ಪಿಡುಗು, ಲಕ್ಷಾಂತರ ಜನರ ಬದುಕನ್ನೇ ಕಸಿದುಕೊಳ್ಳುವ ಒಂದು ಸಾಂಕ್ರಾಮಿಕ. ವಿಶ್ವದಾದ್ಯಂತ ಈ ಪಿಡುಗಿನಿಂದ ಉಂಟಾಗಿರುವ ಸಾಮಾಜಿಕ ಮತ್ತು ಆರ್ಥಿಕ ವ್ಯತ್ಯಯಗಳು ದುಡಿಯುವ ವರ್ಗಗಳನ್ನು ಮಾತ್ರವೇ ಅಲ್ಲದೆ ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗಗಳನ್ನೂ ಕಂಗಾಲಾಗಿಸಿವೆ.
ಕೋವಿದ್ ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ ಒಂದು ನಿರ್ದಿಷ್ಟ ಕಾನೂನನ್ನು ರೂಪಿಸದೆ ಲಕ್ಷಾಂತರ ಮಂದಿಯ ಸಂಕಷ್ಟಕ್ಕೆ ಕಾರಣವಾಗಿರುವುದು ಭಾರತ ಸರ್ಕಾರದ ಪ್ರಜಾತಂತ್ರ ವಿರೋಧಿ ಧೋರಣೆಗೆ ಮತ್ತೊಂದು ನಿದರ್ಶನ. ಬಹುಪಾಲು ರಾಷ್ಟ್ರಗಳಲ್ಲಿ ಕೋವಿದ್ ನಿಯಂತ್ರಿಸುವ ಉದ್ದೇಶದಿಂದಲೇ ಹೊಸ ಕಾಯ್ದೆಗಳನ್ನು ಜಾರಿ ಮಾಡಲಾಗಿದ್ದು ಭಾರತ ಇದಕ್ಕೆ ಹೊರತಾಗಿದೆ.
ಆದರೆ ಭಾರತದಲ್ಲಿ ಕೇಂದ್ರ ಸರ್ಕಾರ ಹಠಾತ್ತನೆ ವಿಧಿಸಿದ ಲಾಕ್ ಡೌನ್ ನಿಂದ ಉಂಟಾದ ದುಷ್ಪರಿಣಾಮಗಳನ್ನು ಮತ್ತಾವ ದೇಶದಲ್ಲೂ ಕಾಣಲಾಗುವುದಿಲ್ಲ. ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಪಟ್ಟ ಬವಣೆ, ಅನುಭವಿಸಿದ ಸಾವು ನೋವು ಮತ್ತು ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ತಮ್ಮ ಸ್ವಂತ ಊರುಗಳನ್ನು ಸೇರಿಕೊಳ್ಳಲು ಯತ್ನಿಸಿದ ದಾರುಣ ಸನ್ನಿವೇಶ ಈ ದೇಶದ ಆಡಳಿತ ವ್ಯವಸ್ಥೆಯ ಕ್ರೌರ್ಯದ ಮತ್ತೊಂದು ಮುಖವನ್ನು ಪರಿಚಯಿಸಿತ್ತು. ಬಿಸಿಲಿನ ಝಳ, ಕೊರೋನಾ ವೈರಾಣುವಿನ ಸೊಂಕು, ಆರೋಗ್ಯ ಸೇವೆಯ ಕೊರತೆ, ಸಾರಿಗೆ ವ್ಯವಸ್ಥೆಯ ಕೊರತೆ, ಹಸಿವಿನ ಬಳಲಿಕೆ ಮತ್ತು ಕೇಂದ್ರ ಹಾಗೂ ಸರ್ಕಾರಗಳ ನಿರ್ಲಕ್ಷ್ಯ ಸಾವಿರಾರು ವಲಸೆ ಕಾರ್ಮಿಕರನ್ನು ಬೀದಿಪಾಲು ಮಾಡಿತ್ತು.
ಈ ದುರವಸ್ಥೆಯ ನಡುವೆಯೇ ನೂರಾರು ವಲಸೆ ಕಾರ್ಮಿಕರು ರಸ್ತೆಗಳಲ್ಲಿ, ಚಲಿಸುವ ರೈಲುಗಳಲ್ಲಿ ಮೃತಪಟ್ಟಿದ್ದರು. ದುರಂತ ಎಂದರೆ ದೇಶದಲ್ಲಿ ಲಕ್ಷಾಂತರ ಅಕ್ರಮ ವಲಸಿಗರು ಇರುವ ಮಾಹಿತಿ ಇದೆ ಎಂದು ಹೇಳುತ್ತಿದ್ದ ಕೇಂದ್ರ ಸರ್ಕಾರಕ್ಕೆ ಯಾವ ರಾಜ್ಯದಲ್ಲಿ ಎಷ್ಟು ವಲಸೆ ಕಾರ್ಮಿಕರಿದ್ದಾರೆ ಎನ್ನುವ ಕನಿಷ್ಟ ಮಾಹಿತಿಯನ್ನೂ ಒದಗಿಸಲಾಗಲಿಲ್ಲ. ಲಾಕ್‍ಡೌನ್ ವಿಧಿಸಿದ 15 ದಿನಗಳ ನಂತರ ಒಮ್ಮೆಲೆ ಹರಿದುಬಂದ ಲಕ್ಷಾಂತರ ವಲಸೆ ಕಾರ್ಮಿಕರ ದಂಡು ಎಲ್ಲ ರಾಜ್ಯಗಳ ಆಡಳಿತ ವ್ಯವಸ್ಥೆಯನ್ನು ಕಂಗೆಡಿಸಿದ್ದನ್ನು ಕಂಡಿದ್ದೇವೆ.
ಈ ಪರಿಸ್ಥಿತಿಯನ್ನು ನಿವಾರಿಸುವಲ್ಲಿ ಸರ್ಕಾರಗಳು ಯಶಸ್ವಿಯಾದರೂ ಆ ವೇಳೆಗಾಗಲೇ ನೂರಾರು ಕಾರ್ಮಿಕರು ಅಸು ನೀಗಿದ್ದರು. ಸಾವಿರಾರು ಕುಟುಂಬಗಳು ತಮ್ಮ ನೆಲೆ ಕಳೆದುಕೊಂಡಿದ್ದವು. ದುರಂತ ಎಂದರೆ ಈ ಅವ್ಯವಸ್ಥೆಯಲ್ಲಿ ಮಡಿದ ವಲಸೆ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಯಾವುದೇ ಪರಿಹಾರವನ್ನೂ ಘೋಷಿಸಲಾಗಿಲ್ಲ. ಇದು ಪ್ರಭುತ್ವದ ಕ್ರೌರ್ಯದ ಮತ್ತೊಂದು ನಿದರ್ಶನ.
ಈ ದುರಂತಗಳ ನಡುವೆಯೇ, ದೇಶದ ಅಸಂಖ್ಯಾತ ಜನತೆ ತಮ್ಮ ನಾಳಿನ ಚಿಂತೆಯಲ್ಲಿ ಕಾಲ ಕಳೆಯುತ್ತಿರುವ ಸಂದರ್ಭದಲ್ಲೇ, ದುಡಿಯುವ ವರ್ಗಗಳ, ಶ್ರಮಜೀವಿಗಳ ಬದುಕಿಗೆ ಭರವಸೆ ನೀಡುವ ಕ್ರಮಗಳನ್ನು ಕೈಗೊಳ್ಳುವ ಬದಲು ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಕಾನೂನುಗಳನ್ನು ರೂಪಿಸಲು ಮುಂದಾಗಿತ್ತು.
ಒಂದು ವರ್ಷದ ಕಾಲ ತುಟ್ಟಿ ಭತ್ಯೆಯನ್ನು ತಡೆಹಿಡಿಯುವುದು, ಕಾರ್ಖಾನೆಗಳಲ್ಲಿ ದುಡಿಯುವ ಅವಧಿಯನ್ನು ಹೆಚ್ಚಿಸುವುದು, ಕಾರ್ಮಿಕರ ಸಂಘಟನೆಯ ಹಕ್ಕುಗಳನ್ನು ಕಸಿದುಕೊಳ್ಳುವುದು ಮತ್ತು ಕಾರ್ಖಾನೆಗಳ ಮಾಲಿಕರಿಗೆ ಕಡಿಮೆ ವೇತನ ನೀಡಲು ಅಧಿಕಾರ ನೀಡುವುದು ಹೀಗೆ ಹಲವು ಕಾರ್ಮಿಕ ವಿರೋಧಿ ನಿಯಮಗಳನ್ನು ಕೋವಿದ್ 19 ಉಲ್ಬಣಿಸುತ್ತಿದ್ದ ಸಂದರ್ಭದಲ್ಲೇ ಜಾರಿಗೊಳಿಸಿದ ಕೇಂದ್ರ ಸರ್ಕಾರ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲೆಂದೇ ದಶಕಗಳ ಹೋರಾಟದ ಪರಿಣಾಮವಾಗಿ ರೂಪಿಸಲಾಗಿದ್ದ 44 ಕಾರ್ಮಿಕ ಕಾಯ್ದೆಗಳನ್ನು ಕೇವಲ ನಾಲ್ಕು ಸಂಹಿತೆಗಳಲ್ಲಿ ಅಡಕಿಸುವ ಮೂಲಕ ಕಾರ್ಮಿಕರ ಎಲ್ಲ ಹಕ್ಕುಗಳನ್ನೂ ಕಸಿದುಕೊಳ್ಳುವ ಹೊಸ ಮಸೂದೆಯನ್ನು ಜಾರಿಗೊಳಿಸಿತ್ತು.
ಉಪವಾಸ, ಹಸಿವು, ಬಡತನ, ದಾರಿದ್ರ್ಯ, ಅನಾರೋಗ್ಯ ಮತ್ತೊ ಕೋವಿದ್‍ನಂತಹ ಮಾರಣಾಂತಿಕ ಪಿಡುಗು ಇಷ್ಟೆಲ್ಲಾ ಗಂಭೀರ ಸಮಸ್ಯೆಗಳ ನಡುವೆ ದೇಶದ ಶ್ರಮಜೀವಿಗಳ ಕತ್ತುಹಿಸುಕುವ ಈ ಕಾಯ್ದೆಗಳನ್ನು ಜಾರಿಗೊಳಿಸಲು ಯತ್ನಿಸುವುದು ಕ್ರೌರ್ಯದ ಪರಮಾವಧಿಯಲ್ಲವೇ ?
ಕೋವಿದ್ 19 ಸಂದರ್ಭದಲ್ಲಿ ಜನಸಂದಣಿಯಾಗದಂತೆ ನಿರ್ಬಂಧಗಳನ್ನು ವಿಧಿಸಿ, ಸಾರ್ವಜನಿಕ ಪ್ರತಿಭಟನೆಗಳಲ್ಲಿ ಸೇರಬಹುದಾದ ಜನರ ಸಂಖ್ಯೆಗೆ ನಿರ್ಬಂಧ ವಿಧಿಸಿ, ಜನವಿರೋಧಿ ಕಾನೂನುಗಳನ್ನು, ತಿದ್ದುಪಡಿ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚಿಸದೆಯೇ , ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸುವುದು ಪ್ರಜಾತಂತ್ರದ ಕಗ್ಗೊಲೆ ಅಲ್ಲವೇ ? ಈ ಸಂದರ್ಭದಲ್ಲೇ ಕೇಂದ್ರ ಸರ್ಕಾರ ದೇಶದ ಕೃಷಿ ವ್ಯವಸ್ಥೆಯ ಮೂಲ ಸ್ವರೂಪವನ್ನೇ ವಿರೂಪಗೊಳಿಸುವ ಮೂರು ಕೃಷಿ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ.
ಶಾಸನ ಸಭೆಗಳಲ್ಲಿ ಸ್ಪಷ್ಟ ಬಹುಮತ ಇರುವ ಒಂದು ಸರ್ಕಾರ ತನ್ನ ಸಂಖ್ಯಾಬಲವನ್ನೇ ಅಸ್ತ್ರದಂತೆ ಬಳಸಿ ರೈತರ ಪಾಲಿಗೆ ಮಾರಣಾಂತಿಕ ಎನ್ನಬಹುದಾದ ಮೂರು ಮಸೂದೆಗಳನ್ನು ಜಾರಿಗೊಳಿಸಿದೆ. ಇಂದು ದೆಹಲಿಯಲ್ಲಿ ಮುಷ್ಕರ ಹೂಡಿರುವ ಲಕ್ಷಾಂತರ ರೈತರ ಒಕ್ಕೊರಲ ದನಿ ಈ ಕ್ರೌರ್ಯದ ವಿರುದ್ಧ ಪ್ರತಿಧ್ವನಿಸುತ್ತಿದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಮಸ್ತ ದೇಶದ ಜನತೆ ಸರ್ಕಾರದ ಆಡಳಿತ ನೀತಿಯನ್ನು, ಕಾರ್ಯನೀತಿಗಳನ್ನು ಮತ್ತು ಶಾಸನಗಳನ್ನು ವಿರೋಧಿಸುವಾಗ ಆಡಳಿತಾರೂಢ ಪಕ್ಷಕ್ಕೆ, ಜನರ ಬಳಿ ಕುಳಿತು ಮಾತನಾಡುವ ಕನಿಷ್ಟ ಮಾನವೀಯ ಪ್ರಜ್ಞೆ ಇರಬೇಕಾಗುತ್ತದೆ. ನರೇಂದ್ರ ಮೋದಿ ಸರ್ಕಾರ ದೆಹಲಿಯ ಗಡಿಯಲ್ಲಿ, ತೀವ್ರವಾದ ಚಳಿಯಲ್ಲಿ ನೆರೆದ ಲಕ್ಷಾಂತರ ರೈತರೊಡನೆ ಮಾತನಾಡುವ ಬದಲು ಜಲಫಿರಂಗಿಗಳ ಮೂಲಕ, ಅಶ್ರುವಾಯು ಮೂಲಕ, ಪೊಲೀಸರ ಲಾಠಿಯ ಮೂಲಕ ಸ್ಪಂದಿಸಿರುವುದು ಪ್ರಭುತ್ವದ ಕ್ರೌರ್ಯದ ಮತ್ತೊಂದು ನಿದರ್ಶನ.
ಹೋರಾಟಗಾರರ ಸಮಸ್ಯೆಗಳನ್ನು ಆಲಿಸುವ ವಿವೇಚನೆ, ವಿವೇಕ ಮತ್ತು ವ್ಯವಧಾನವನ್ನು ಸಂಪೂರ್ಣ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆ ಮುಷ್ಕರ ನಿರತ ರೈತರಲ್ಲಿ ದಲ್ಲಾಳಿಗಳನ್ನು, ಖಲಿಸ್ತಾನಿಗಳನ್ನು, ಪಾಕಿಸ್ತಾನಿಯರನ್ನು, ನಗರ ನಕ್ಸಲರನ್ನು, ಭಯೋತ್ಪಾದಕರನ್ನು ಗುರುತಿಸಲು ಯತ್ನಿಸುವುದು ಪ್ರಜಾತಂತ್ರ ವ್ಯವಸ್ಥೆಗೆ ಅವಮಾನ ಮಾಡಿದಂತಾಗುತ್ತದೆ.
ಇಂದು ದೆಹಲಿಯಲ್ಲಿ ಈ ಕ್ರೌರ್ಯವನ್ನು ಕಾಣುತ್ತಿದ್ದೇವೆ. ತಮ್ಮ ಸಮಸ್ಯೆಗಳ ನಿವಾರಣೆಗಾಗಿ ದೇಶದ ರಾಜಧಾನಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರನ್ನು ದೇಶದ್ರೋಹಿಗಳಂತೆ ಕಾಣುವ ಒಂದು ನಿರ್ದಯಿ ಸರ್ಕಾರವನ್ನು ನಾವೇ ಆಯ್ಕೆ ಮಾಡಿರುವುದು ಶತಮಾನದ ದುರಂತ. ಲಾಕ್ ಡೌನ್ ಸಂದರ್ಭದಲ್ಲಿ ಮಡಿದ ವಲಸೆ ಕಾರ್ಮಿಕರು, ಇಂದು ದೆಹಲಿಯಲ್ಲಿ ಸಾವು ಬದುಕಿನ ಹೋರಾಟ ನಡೆಸುತ್ತಿರುವ ರೈತರು, ಹಸಿವಿನಿಂದ ಸಾಯುತ್ತಿರುವ ಅಸಂಖ್ಯಾತ ಬಡಜನತೆ ಇವರೆಲ್ಲರೂ ಆಳುವ ವರ್ಗಗಳ ದೃಷ್ಟಿಯಲ್ಲಿ ನಿಕೃಷ್ಟರಾಗಿ ಕಾಣುತ್ತಿದ್ದಾರೆ.
ದೆಹಲಿಯ ನೀತಿಗಳನ್ನೇ ಯಥಾವತ್ತಾಗಿ ಅನುಸರಿಸುವ ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಸ್ವಂತ ವಿವೇಚನೆಯನ್ನೂ ಕಳೆದುಕೊಂಡು, ವಿಧಾನಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಭೂ ಸ್ವಾಧೀನ ಮಸೂದೆಯನ್ನು ಅಂಗೀಕರಿಸುತ್ತದೆ.
ರಾಜ್ಯ ರಾಜಧಾನಿಯಲ್ಲಿ ಭೂ ಸ್ವಾಧೀನ ಕಾಯ್ದೆಯ ವಿರುದ್ಧ, ನೂತನ ಕೃಷಿ ನೀತಿಯ ವಿರುದ್ಧ ಹೋರಾಡುತ್ತಿರುವ ರೈತಾಪಿ ಮತ್ತು ಕಾರ್ಮಿಕರೊಡನೆ ಮಾತುಕತೆ ನಡೆಸುವ ಸೌಜನ್ಯವನ್ನೂ ಕಳೆದುಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರ ಈ ಗೊಂದಲದ ನಡುವೆಯೇ ಗೋ ಹತ್ಯೆ ನಿಷೇಧ ಕಾಯ್ದೆಯನ್ನೂ ಅಂಗೀಕರಿಸುತ್ತದೆ.
ಸರ್ಕಾರದ ಆಡಳಿತ ನೀತಿಗಳ ವಿರುದ್ಧ ಮತ್ತು ಜನವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ಪ್ರತಿಯೊಂದು ದನಿಯನ್ನೂ “ ಭೌಗೋಳಿಕ ದೇಶ ಮತ್ತು ಕಾಲ್ಪನಿಕ ಪ್ರೇಮ ”ದ ಚೌಕಟ್ಟಿನಲ್ಲಿರಿಸಿ ದೇಶದ್ರೋಹದ ಪಟ್ಟ ಕಟ್ಟುವ ಒಂದು ಪರಂಪರೆಯನ್ನು ನರೇಂದ್ರ ಮೋದಿ ಸರ್ಕಾರ ಅನುಸರಿಸುತ್ತಿದೆ. ಯುಎಪಿಎ ಎನ್ನುವ ಕರಾಳ ಶಾಸನ, ಎನ್‍ಐಎ ಎನ್ನುವ ಒಂದು ದಮನಕಾರಿ ಸಂಸ್ಥೆಯ ಮೂಲಕ ಪ್ರಜಾತಂತ್ರದ ದನಿಗಳನ್ನು ವ್ಯವಸ್ಥಿತವಾಗಿ ದಮನಿಸುವ ಒಂದು ಪರಂಪರೆಗೂ ಸುಭದ್ರ ಬುನಾದಿ ಹಾಕಲಾಗಿದೆ.
ದೆಹಲಿಯಲ್ಲಿ ನೂತನ ಸಂಸತ್ ಭವನದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ, ಇದು ಭವಿಷ್ಯ ಭಾರತದ, ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಸಾಕ್ಷೀಭೂತವಾಗುವ ಒಂದು ಸ್ಥಾವರ ಎಂದು ಹೇಳಿರುವುದು ಆಕರ್ಷಣೀಯವಾಗಿ ಕಾಣುತ್ತದೆ.
ಆದರೆ ಈ ಆತ್ಮನಿರ್ಭರ ಭಾರತದಲ್ಲಿ ಈ ದೇಶದ ಬಹುಮುಖಿ ಸಂಸ್ಕøತಿ, ಬಹುತ್ವದ ನೆಲೆಗಳು, ಪ್ರಜಾತಂತ್ರದ ಮೌಲ್ಯಗಳು ಮತ್ತು ಸಾಂವಿಧಾನಿಕ ತತ್ವಗಳು ಸಮಾಧಿಯಾಗುತ್ತಿರುವುದನ್ನು ಗಮನಿಸಿದಾಗ, ನೂತನ ಸಂಸತ್ ಭವನದಲ್ಲಿ ಪ್ರಜಾತಂತ್ರದ ಛಾಯೆ ಸುಳಿಯಲು ಸಾಧ್ಯವೇ ಎಂದು ಅನುಮಾನವಾಗುತ್ತದೆ. ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ , ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ ಸಹ, ಭಾರತದ ಆಳುವ ವರ್ಗ ಈ ಮಟ್ಟಿಗೆ ಕ್ರೌರ್ಯ ಪ್ರದರ್ಶಿಸಿರಲಿಲ್ಲ.
ಈ ಕ್ರೌರ್ಯಕ್ಕೆ ಬಲಿಯಾಗುತ್ತಿರುವುದು ಕೇವಲ ಸಾಂವಿಧಾನಿಕ ಪ್ರಜಾತಂತ್ರ ಮೌಲ್ಯಗಳನ್ನು ಎತ್ತಿಹಿಡಿಯುವ ವಿವೇಕಯುತ ದನಿಗಳು ಮಾತ್ರವೇ ಅಲ್ಲ. ಭಾರತದ ನ್ಯಾಯಿಕ ವ್ಯವಸ್ಥೆಯೇ ಬಲಿಯಾಗುತ್ತಿದೆ. ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವ ಸಾರ್ವಭೌಮ ಪ್ರಜೆಗಳ ದನಿಗಳು ಆಡಳಿತ ವ್ಯವಸ್ಥೆಯ ಕ್ರೌರ್ಯದ ನಡುವೆ ಕಳೆದುಹೋಗುತ್ತಿವೆ.
ಬಹುತ್ವ ಮತ್ತು ಪ್ರಜಾತಂತ್ರ ಈ ದೇಶದ ಅಂತರಾತ್ಮ. ಈ ಅಂತರಾತ್ಮವನ್ನೇ ಹೊಸಕಿಹಾಕುತ್ತಿರುವ ಸಂದರ್ಭದಲ್ಲಿ ಭಾರತದ ಪ್ರಜೆಗಳು ತಮ್ಮ ಆತ್ಮನಿರ್ಭರತೆಯನ್ನು ಗುರುತಿಸಲು ಹೆಣಗಾಡುತ್ತಿದ್ದಾರೆ. ಇದರ ಒಂದು ಪ್ರಾತ್ಯಕ್ಷಿಕೆಯನ್ನು ರೈತ ಕಾರ್ಮಿಕರ ಹೋರಾಟದ ದನಿಗಳಲ್ಲಿ ಗುರುತಿಸಬಹುದು.
ಸರ್ಕಾರಗಳು ಗೋ ಹತ್ಯೆಯನ್ನು, ಅಂತರ್ಧರ್ಮೀಯ ವಿವಾಹಗಳನ್ನು ನಿಷೇಧಿಸಲು ಸಜ್ಜಾಗುತ್ತಿವೆ. ಸಂವಿಧಾನದ ತತ್ವಗಳಲ್ಲಿ, ಮೌಲ್ಯಗಳಲ್ಲಿ ವಿಶ್ವಾಸ ಇರುವ ಸ್ವತಂತ್ರ ಭಾರತದ ಸಾರ್ವಭೌಮ ಪ್ರಜೆಗಳು ಪ್ರಜಾತಂತ್ರ ಮೌಲ್ಯಗಳ ಹತ್ಯೆಯನ್ನು ನಿಷೇಧಿಸಲು ಸಜ್ಜಾಗಬೇಕಿದೆ. ಇಂದು ಎದ್ದು ನಿಲ್ಲದಿದ್ದರೆ ಬಹುಶಃ ಎಂದಿಗೂ ಎದ್ದು ನಿಲ್ಲಲಾಗುವುದಿಲ್ಲ ಈ ಪ್ರಜ್ಞೆ ಭಾರತದ ನಾಗರಿಕ ಪ್ರಜೆಗಳಲ್ಲಿದ್ದರೆ ಬಹುಶಃ ಪ್ರಜಾತಂತ್ರ ಉಳಿಯುತ್ತದೆ. ನೂತನ ಸಂಸತ್ ಭವನದಲ್ಲಿ ಪ್ರಜಾತಂತ್ರದ ಸುಳಿವು ಕಾಣಲು ಸಾಧ್ಯವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ
ಸುದ್ದಿದಿನ,ಬೆಂಗಳೂರು: ಜಗತ್ತಿನ ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. AI ಕಲಿಯದಿದ್ದರೆ ಉದ್ಯೋಗ ತೊರೆಯುವಂತೆ ಸೂಚಿಸಿದ್ದು, ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಘೋಷಿಸಿದೆ.
‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP)
AI ಕಲಿಯುವುದು ಅನಿವಾರ್ಯ: ಗೂಗಲ್ ಈಗ ಸಂಪೂರ್ಣವಾಗಿ ‘AI ಫಸ್ಟ್’ ಕಂಪನಿಯಾಗಿ ರೂಪಾಂತರಗೊಳ್ಳುತ್ತಿದೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದ ಅಥವಾ AI ಕಲಿಯಲು ಆಸಕ್ತಿ ಇಲ್ಲದ ಉದ್ಯೋಗಿಗಳಿಗೆ ಗೌರವಯುತವಾಗಿ ಉದ್ಯೋಗ ತೊರೆಯಲು ‘ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್’ (VEP) ಯನ್ನು ಜಾರಿಗೊಳಿಸಿದೆ.
ಯಾರಿಗೆ ಅನ್ವಯಿಸುತ್ತದೆ?: ಇದು ಮುಖ್ಯವಾಗಿ ಗೂಗಲ್‌ನ ಗ್ಲೋಬಲ್ ಬಿಸಿನೆಸ್ ಆರ್ಗನೈಸೇಷನ್ (GBO) ವಿಭಾಗದ ಉದ್ಯೋಗಿಗಳಿಗೆ (ಸೇಲ್ಸ್, ಕಾರ್ಪೊರೇಟ್ ಡೆವಲಪ್ಮೆಂಟ್ ಮತ್ತು ಸೊಲ್ಯೂಷನ್ಸ್ ಟೀಮ್) ಗೆ ಅನ್ವಯಿಸುತ್ತದೆ. ಆದರೆ, ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಿರುವ ತಂಡಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಇದು ಲೇ-ಆಫ್ ಅಲ್ಲ: ಇದು ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಲ್ಲ. ಬದಲಾಗಿ, ಸ್ವತಃ ಹೊರಹೋಗಲು ಬಯಸುವ ಉದ್ಯೋಗಿಗಳಿಗೆ ಉತ್ತಮ ಪರಿಹಾರ ಧನ (Severance Package) ಮತ್ತು ಇತರ ಸೌಲಭ್ಯಗಳನ್ನು ನೀಡಿ ಕಳುಹಿಸಿಕೊಡುವ ಯೋಜನೆಯಾಗಿದೆ.
ಕಾರಣವೇನು?: ತಂತ್ರಜ್ಞಾನ ಅತ್ಯಂತ ವೇಗವಾಗಿ ಬದಲಾಗುತ್ತಿದ್ದು, ಕಂಪನಿಗೆ AI ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಮತ್ತು ಕ್ರಿಯಾತ್ಮಕವಾಗಿ ಕೆಲಸ ಮಾಡುವ ಕಾರ್ಯಪಡೆಯ ಅಗತ್ಯವಿದೆ ಎಂದು ಗೂಗಲ್‌ನ ಚೀಫ್ ಬಿಸಿನೆಸ್ ಆಫೀಸರ್ ಫಿಲಿಪ್ ಶೆಡ್ಲರ್ ತಿಳಿಸಿದ್ದಾರೆ.
ಭವಿಷ್ಯದ ಮುನ್ಸೂಚನೆ: ಅಮೆಜಾನ್, ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ಇತರ ಟೆಕ್ ದೈತ್ಯ ಕಂಪನಿಗಳು ಕೂಡ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. 2026ರಲ್ಲಿ ಈ ನಾಲ್ಕು ಕಂಪನಿಗಳು AI ತಂತ್ರಜ್ಞಾನಕ್ಕಾಗಿ ಸುಮಾರು 58.92 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಂದಾಜಿದೆ.
ಒಟ್ಟಾರೆಯಾಗಿ, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ AI ಕೌಶಲ್ಯ ಅತ್ಯಂತ ಅನಿವಾರ್ಯ ಎಂಬ ಎಚ್ಚರಿಕೆಯ ಸಂದೇಶವನ್ನು ಗೂಗಲ್ ಈ ಮೂಲಕ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
ಸುದ್ದಿದಿನ,ದಾವಣಗೆರೆ:ಮಾರ್ಚ್ 18 ರಿಂದ ಪ್ರಾರಂಭವಾಗುವ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಉಪ ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಎಸ್.ಎಸ್.ಎಲ್.ಸಿ ಎರಡು ಪೂರ್ವಭಾವಿ ಪರೀಕ್ಷೆಗಳು ನಡೆದಿದ್ದು ಶೇ. 18 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್ ನೀಡಿ ವಿವರಣೆಯನ್ನು ಪಡೆಯಬೇಕು, ಎಸ್.ಎಸ್.ಎಲ್.ಸಿ ಗೆ ಪ್ರವೇಶ ಪಡೆದು ಪರೀಕ್ಷೆಗೆ ಗೈರಾಗಿರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮನೆಮನೆ ಭೇಟಿ, ಅವರನ್ನು ಮತ್ತೇ ಶಾಲೆಗೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಡಿಡಿಪಿಐ ಕೊಟ್ರೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21,863 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪ್ರವೇಶ ಪಡೆದಿದ್ದಾರೆ, ವಿವಿಧ ಕಾರಣಗಳಿಂದ 378 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಅಂತಿಮವಾಗಿ 21,400 ವಿದ್ಯಾರ್ಥಿಗಳು ಪರೀಕ್ಷೆಗೆ ದಾಖಲಾಗಿದ್ದಾರೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಗೆ 20,129 ವಿದ್ಯಾರ್ಥಿಗಳು ಹಾಜರಾಗಿದ್ದು, 1,353 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.
ಕಡಿಮೆ ಹಾಜರಾತಿ (75% ಕ್ಕಿಂತ ಕಡಿಮೆ) ಮತ್ತು ಪರೀಕ್ಷೆಯ ಬಗ್ಗೆ ಆಸಕ್ತಿ ಇಲ್ಲದಿರುವುದು ಗೈರುಹಾಜರಿಗೆ ಮುಖ್ಯ ಕಾರಣಗಳಾಗಿವೆ. ಮೊದಲ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ 49% ಬಂದಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಫಲಿತಾಂಶ 68% ಕ್ಕೆ ಏರಿಕೆಯಾಗಿದೆ, ಆದರೆ 1,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಗೈರುಹಾಜರಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪೋಷಕರ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವಂತೆ ಕ್ರಮವಹಿಸಲಾಗಿದೆ, ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸುವುದು ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ತಿಳಿಸಿಕೊಡುವುದು.
ಮಂಡಳಿಯಿAದ ನೀಡಲಾದ 4 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು 2 ಪೂರ್ವಸಿದ್ಧತಾ ಪರೀಕ್ಷಾ ಪತ್ರಿಕೆಗಳು ಸೇರಿದಂತೆ ಒಟ್ಟು 6 ಪ್ರಶ್ನೆ ಪತ್ರಿಕೆಗಳನ್ನು ಪದೇ ಪದೇ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಸುಮಾರು 1,400 ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರು ತೇರ್ಗಡೆಯಾಗುವಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಶಿಕ್ಷಕರು ಅತಿ ಮುಖ್ಯವಾಗಿ ಗೈರುಹಾಜರಾಗಿರೋ ಮಕ್ಕಳನ್ನ ಶಾಲೆಗೆ ಕರೆತರಬೇಕು, ಮನೆ ಮನೆ ಭೇಟಿ ಮಾಡಿ ಪಾಲಕ ಪೋಷಕರಿಗೆ ಮನವೊಲಿಸಿ, ಶಿಕ್ಷಣ ಇಲಾಖೆ ನೀಡಿರುವ ಬ್ಲೂಪ್ರಿಂಟ್ ಪ್ರಕಾರ ಮಕ್ಕಳನ್ನು ಸಿದ್ದಗೊಳಿಸಿ, ಪ್ರಶ್ನೆ ಪತ್ರಿಕೆಗಳನ್ನ ಪದೇ ಪದೇ ಬಿಡಿಸೋದರ ಮೂಲಕ ಮಕ್ಕಳಲ್ಲಿ ಒಂದು ಆತ್ಮವಿಶ್ವಾಸ ತುಂಬಬೇಕು , ಗೈರಾಗಿರುವ ವಿದ್ಯಾರ್ಥಿಗಳ ಸಂಖ್ಯೆ 1,400 ಇದೆ, ಆ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಒಂದು ಉತ್ತಮ ಫಲಿತಾಂಶವನ್ನ ನಿರೀಕ್ಷೆ ಮಾಡಬಹುದು, ಮಕ್ಕಳಿಗೆ ಪಾಠದ ಜೊತೆಗೆ ಆಟಕ್ಕೂ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.
ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.
ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ2 days agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ2 days agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ

