ಬಹಿರಂಗ
ಸಂವಿಧಾನ ‘ಜೈ ಶ್ರೀರಾಮ್’ ನಂತೆ ‘ಅಲ್ಲಾ ಹು ಅಕ್ಬರ್’ ಎಂದು ಹೇಳುವ ಹಕ್ಕನ್ನೂ ನೀಡಿದೆ..!
- ಹರ್ಷ ಕುಮಾರ್ ಕುಗ್ವೆ
ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು NRC ವಿರುದ್ಧ ದೇಶದೆಲ್ಲೆಡೆ ವಿದ್ಯಾರ್ಥಿಗಳು, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಪ್ರತಿಭಟನೆಗೆ ಇಳಿದ ಮುಸ್ಲಿಮರು ಸಾಮಾನ್ಯವಾಗಿ ಭಾರತದ ತ್ರಿವರ್ಣ ಬಾವುಟಗಳನ್ನು ಮತ್ತು ಪ್ರತಿಭಟನೆಯ ಮುಂದಾಳತ್ವ ವಹಿಸುವ ಸಂಘಟನೆಗಳ ಬಾವುಟಗಳನ್ನು ಹಿಡಿದು ಬರುತ್ತಿದ್ದಾರೆ. ಅದೇ ರೀತಿಯಲ್ಲಿ ಮುಸ್ಲಿಂ ಯುವಕರು ಈ ಪ್ರತಿಭಟನೆಗಳಲ್ಲಿ NRC, CAA ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಹುತಾತ್ಮ ಭಗತ್ ಸಿಂಗ್ ಪ್ರಚುರ ಪಡಿಸಿದ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಯಿಂದ ಹಿಡಿದು ಕನ್ಹಯ್ಯ ಕುಮಾರನ ಲೇಕೆ ರಹೇಂಗೇ ಆಜಾದೀ” ವರೆಗೆ ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ನೀತಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇವುಗಳ ನಡುವೆಯೇ ಆಗಾಗ “ಅಲ್ಲಾ ಹು ಅಕ್ಬರ್” “ಇನ್ಶಾ ಅಲ್ಲಾಹ್” ಎಂಬ ಘೋಷಣೆಗಳನ್ನು ಸಹ ಮುಸ್ಲಿಂ ಯುವಕರು ಹಾಕುತ್ತಿದ್ದಾರೆ. ಇಷ್ಟಕ್ಕೆ ಕೆಲವರು ಕ್ಯಾತೆ ತೆಗೆಯುತ್ತಿದ್ದಾರೆ. ‘ಈ ಪ್ರತಿಭಟನೆಗಳನ್ನು ಮುಸ್ಲಿಮರು ಇತರರೊಂದಿಗೆ ಸೇರಿ ನಡೆಸಬೇಕು, ಯಾವುದೇ ಧರ್ಮದ ಗುರುತುಗಳನ್ನು ತೋರಿಸಬಾರದು’ ಎಂದು, ಟೋಪಿ, ಬುರ್ಖಾಗಳನ್ನು ಸಹ ತೊಟ್ಟು ಬರಬಾರದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ. ಹೀಗೆ ಯೋಚಿಸುವವರ ಉದ್ದೇಶ ಒಳ್ಳೆಯದೋ ಕೆಟ್ಟದೋ ಗೊತ್ತಿಲ್ಲ ಆದರೆ ಇದೊಂದು ಅಸಂಬದ್ಧ ಆಲೋಚನೆ ಎಂದು ಹೇಳದೇ ವಿಧಿಯಿಲ್ಲ.
ನಾನೇನೂ ಮುಸ್ಲಿಮನಲ್ಲ, ಕುರಾನ್, ಬೈಬಲ್, ಭಗವದ್ಗೀತೆ ಸೇರಿದಂತೆ ಯಾವುದೇ ಧರ್ಮಗ್ರಂಥಗಳ ಪಾಲಕನೂ ಅಲ್ಲ ಆರಾಧಕನೂ ಅಲ್ಲ. ಈ ದೇಶದ ಸಂವಿಧಾನವೊಂದೇ ನಾನು ನಂಬಿರುವ, ನಡೆದುಕೊಳ್ಳುವ ಗ್ರಂಥ. ಆದರೆ ನಾನು ನಂಬುವ ಪಾಲಿಸುವ ನನ್ನ ದೇಶದ ಸಂವಿಧಾನ ವೈದಿಕ ಧರ್ಮ ಪಾಲಿಸುವ ವ್ಯಕ್ತಿಯೊಬ್ಬನಿಗೆಎ “ಜೈ ಶ್ರೀ ರಾಮ” ಎಂದು ಹೇಳುವ ಅವಕಾಶವನ್ನು ಹೇಗೆ ನೀಡಿದೆಯೋ ಹಾಗೆಯೇ “ಅಲ್ಲಾ ಹು ಅಕ್ಬರ್” ಎಂದು ಹೇಳುವ ಅವಕಾಶ ಮತ್ತು ಹಕ್ಕನ್ನು ನೀಡಿದೆ.
ಆಯಾ ಧರ್ಮೀಯರು ತಮ್ಮ ತಮ್ಮ ಧರ್ಮದ ಅಥವಾ ನಂಬಿಕೆಗಳ ಗುರುತುಗಳನ್ನು ಅನುಸರಿಸುವ ಅವಕಾಶವನ್ನೂ ಅದು ನೀಡಿದೆ.ಆದರೆ ಇಂದು ಚರ್ಚೆಯಲ್ಲಿರುವ NRC ಮತ್ತು CAAಗಳು ನೇರವಾಗಿ ದಾಳಿ ಮಾಡುತ್ತಿರುವುದು ಮುಸ್ಲಿಮರಾದವರ ಈ ಧಾರ್ಮಿಕ ಗುರುತುಗಳ ಮೇಲೆಯೇ ಅಲ್ಲವೇ? ಒಬ್ಬ ವ್ಯಕ್ತಿ “ಅಲ್ಲಾ ಹು ಅಕ್ಬರ್” ಎಂದು ಪ್ರಾರ್ಥಿಸುತ್ತಾ ಇಸ್ಲಾಂ ಧರ್ಮ ಪಾಲಿಸುತ್ತಿರುವ ಒಂದೇ ಕಾರಣದಿಂದ ಅವನ ಪೌರತ್ವವನ್ನೇ ನಾಶ ಮಾಡುವ ಮತ್ತು ಈ ದೇಶದಲ್ಲಿ ಅವನ ಸಕಲ ಪೌರ ಹಕ್ಕುಗಳನ್ನು ಬಲವಂತವಾಗಿ ಕಿತ್ತುಕೊಳ್ಳುವ ಪ್ರಯತ್ನ ಈ ಕಾನೂನುಗಳ ಮೂಲಕ ನಡೆಯುತ್ತಿದೆ.
ಇಂತಹ ಸಂದರ್ಭದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಯ ಸಹಜ ಪ್ರತಿಕ್ರಿಯೆ “ಮುಸ್ಲಿಂ” ಆಗಿಯೇ ಪ್ರತಿಕ್ರಿಯಿಸುವುದೇ ಆಗಿರುತ್ತದೆ. ಇದರಲ್ಲಿ ದೋಷವೆನೂ ಇಲ್ಲ. ಹಿಂದೂ, ಕ್ರೈಸ್ತ, ಬೌದ್ಧ, ಪಾರ್ಸಿ, ಸಿಖ್ಖರಿಗೆಲ್ಲರಿಗೂ ಭಾರತ ಹೇಗೆ ಅವರ ದೇಶವೋ ಒಬ್ಬ ಮುಸ್ಲಿಮನಿಗೂ ಭಾರತ ಅವನ ದೇಶವೇ. ಹೀಗಿರುವಾಗ ಕಾನೂನೊಂದನ್ನು ತಂದು ಇದು ನಿನ್ನ ದೇಶವೇ ಅಲ್ಲ ಎನ್ನುವ ಹಕ್ಕು ಯಾರಿಗೂ ಇಲ್ಲ. ಆದರೂ ಅಮಿತ್ ಶಾ, ಮೋದಿಗಳು ಹಾಗೆ ಹೇಳುತ್ತಾರೆ ಎಂದರೆ ಆಗ ಮುಸ್ಲಿಮನೊಬ್ಬ ಮುಸ್ಲಿಮನಾಗಿಯೇ ಪ್ರತಿಕ್ರಿಯಿಸುತ್ತಾನೆಯೇ ಹೊರತು “ಜಾತ್ಯತೀತರರಲ್ಲಿ ಲೀನವಾಗಿಯೇ ಪ್ರತಿಭಟಿಸಬೇಕು” ಎಂದು ಫತ್ವಾ ಹೊರಡಿಸುವ ದಾಟಿಯಲ್ಲಿ ಯಾರೂ ಮಾತಾಡಬಾರದು.
ಬಾಂಗ್ಲಾದಿಂದಲೋ, ಪಾಕಿಸ್ತಾನದೊಂದಲೋ ಯಾರೋ ಅಕ್ರಮವಾಗಿ ವಲಸೆ ಬಂದು ಭಾರತದಲ್ಲಿ ನೆಲೆಸಿದ್ದರೆ ಅವರನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಕೆಲಸ.ಅದನ್ನು ಮಾಡಲಾಗದ ಸರ್ಕರದ ಅಸಮರ್ಥತೆಗೆ ತಲೆತಲಾಂತರಿಂದ ಈ ಭಾರತ ನೆಲದಲ್ಲೇ ಹುಟ್ಟಿ ಬೆಳೆದ ಮುಸ್ಲಿಮರಾಗಲೀ, ಯಾರೇ ಆಗಲೀ ಯಾಕೆ ಬೆಲೆ ತೆರಬೇಕು? ಅವರು ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಅಗತ್ಯವಾದರೂ ಏನು? ಒಂದು ಮರ್ಯಾದೆಯಿಲ್ಲದ, ಹೀನಾತಿಹೀನ ಮನಸ್ಸುಗಳೇ ತುಂಬಿರುವ ನೀಚ ಸರ್ಕಾರವೊಂದು ಮಾತ್ರ ಇಂತಹ ಸ್ಥಿತಿಯನ್ನು ದೇಶದ ಪ್ರಜೆಗಳಿಗೆ ತಂದೊಡ್ಡಬಲ್ಲದು.
ಈ ನಡುವೆ CAA ಜಾರಿಗೆ ಬಂದರೆ ಭಾರತದ ಮುಸ್ಲಿಮರಿಗೆ ತೊಂದರೆಯೇನಿಲ್ಲ, ಬೇರೆ ದೇಶದ ಮುಸ್ಲಿಮರಿಗೆ ಮಾತ್ರ ತೊಂದರೆ ಎಂದು ಕೆಲವು ಮುಸ್ಲಿಮರೂ ನಂಬಿಕೊಂಡಿದ್ದರೆ, ಇದು ಮುಸ್ಲಿಮರ ಸಮಸ್ಯೆಯೇ ವಿನಃ ಹಿಂದೂಗಳಿಗೇನೂ ತೊಂದರೆಯಿಲ್ಲ ಎಂದು ಅನೇಕ ಮುಸ್ಲಿಮೇತರರು ನಂಬಿಕೊಂಡಿದ್ದಾರೆ. ಈ ಎರಡು ನಂಬಿಕೆಗಳೂ ತಪ್ಪು ಎಂಬುದನ್ನು ಅಸ್ಸಾಮಿನ ಮೂರು ಕೋಟಿ ಜನರ ಅನುಭವವೇ ಹೇಳುತ್ತಿದೆ.
ಇಂದು ಅಸ್ಸಾಮಿನಲ್ಲಿ ತಾವು ಭಾರತದ ನಾಗರಿಕರೇ ಅಲ್ಲ ಎಂದು ಘೋಷಿಸಲ್ಪಟ್ಟವರಲ್ಲಿ 6 ಲಕ್ಷ ಮುಸ್ಲಿಮರಿದ್ದರೆ 12 ಲಕ್ಷ ಜನರು ಹಿಂದೂಗಳೇ! ಹಾಗೆಂದ ಮಾತ್ರಕ್ಕೆ ಇವರೆಲ್ಲರೂ ಬಾಂಗ್ಲಾದಿಂದ ವಲಸೆ ಬಂದವರೂ ಅಲ್ಲ. 1971ಕ್ಕೂ ಮುಂಚೆ ಭಾರತದಲ್ಲಿ ವಾಸವಾಗಿದ್ದಕ್ಕೆ, ಇಲ್ಲಿ ಹುಟ್ಟಿದ್ದಕ್ಕೆ ದಾಖಲೆ ಪತ್ರಗಳು ಇಲ್ಲದ ಏಕೈಕ ಕಾರಣದಿಂದ ಈ ಲಕ್ಷಾಂತರ ನಾಗರಿಕರನ್ನು ರಾತ್ರೋ ರಾತ್ರಿ ಈ ದೇಶದವರೇ ಅಲ್ಲ ಎಂದು ಘೋಷಿಸಲಾಗಿದೆ. ಇಂದು CAA ಜಾರಿಯಾದ ದಿನದಿಂದ ಇಡೀ ಅಸ್ಸಾಂ ಹೊತ್ತಿ ಉರಿಯುತ್ತಿರುವುದು ಇದೇ ಕಾರಣಕ್ಕೆ.
ದೇಶದ ಗೃಹಮಂತ್ರಿ ಅಮಿತ್ ಶಾ ಅವರು NRCಯನ್ನು ಇಡೀ ದೇಶದಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿರುವ ಹಿನ್ನೆಲೆಯಲ್ಲಿ ನೋಡುವುದಾದರೆ ದೇಶದ 130 ಕೋಟಿ ಜನರಲ್ಲಿ ಕನಿಷ್ಠ 60 ಕೋಟಿ ಜನರು ರಾತ್ರೋ ರಾತ್ರಿ ದೇಶದ ‘ಅಕ್ರಮ ವಲಸಿಗ”ರಾಗಲಿದ್ದಾರೆ. (Illegal Immigrants). ಯಾಕೆಂದರೆ ಅಧಿಕೃತ ಅಂಕಿ ಅಂಶಗಳ ಮೂಲದ ದೇಶದ ಶೇಕಡಾ 40 ಜನರ (ಎಲ್ಲಾ ಧರ್ಮದವರು) ಬಳಿ 50 ವರ್ಷಗಳ ಹಿಂದೆ ತಾವು ಈ ದೇಶದಲ್ಲಿ ಹುಟ್ಟಿದ್ದಕ್ಕೆ, ಜೀವಿಸಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ. ಆದರೆ ಇವರಲ್ಲಿ ಮುಸ್ಲಿಮರಲ್ಲದವರಿಗೆ ಪೌರತ್ವವನ್ನು ಉಳಿಸಿಕೊಳ್ಳಲು ಸರ್ಕಾರವು CAA ಕಾಯ್ದೆ ಮೂಲಕ ನೀಡುವ ಅವಕಾಶವೇನೆಂದರೆ ಅವರು ತಾವು ಪಾಕಿಸ್ತಾನ, ಬಾಂಗ್ಲಾದೇಶ ಇಲ್ಲವೇ ಅಫಘಾನಿಸ್ತಾನದಿಂದ ವಲಸೆ ಬಂದಿರುವ ಅಲ್ಪಸಂಖ್ಯಾತ ಮುಸ್ಲಿಮೇತರರು ಎಂದು ದಾಖಲೆ ನೀಡಿ ಸಾಬೀತುಪಡಿಸಬೇಕು! ಇನ್ನು ಮುಸ್ಲಿಮರಿಗಂತೂ ಆ ಅವಕಾಶವೂ ಇಲ್ಲದೇ ಅವರು ತಮ್ಮ ಪೌರತ್ವವನ್ನು ಸಂಪೂರ್ಣ ಕಳೆದುಕೊಂಡು ಸರ್ಕಾರಗಳು ನಿರ್ಮಿಸುವ ಜೈಲುಗಳಲ್ಲಿ/detention ಶಿಬಿರಗಳಲ್ಲಿ ಜೀವನ ಕಳೆಯಬೇಕಾಗುತ್ತದೆ.
ಯಾವುದೋ ಒಂದೂರಿನ ‘ಕಮಲಮ್ಮ’ ಎಂಬ 60 ವರ್ಷದ ಅನಕ್ಷರಸ್ತ ಮಹಿಳೆ ತಾನು 1987ಕ್ಕೆ ಮೊದಲು ಹುಟ್ಟಿದ್ದಕ್ಕೆ ದಾಖಲೆಗಳನ್ನು ಇಟ್ಟುಕೊಂಡಿರದಿದ್ದರೆ, ಅಥವಾ ನೀಡುವ ಎರಡು ದಾಖಲೆಗಳಲ್ಲಿ ಹೆಸರುಗಳು ತಪ್ಪಾಗಿ ನಮೂದಾಗಿದ್ದರೆ ಅಥವಾ ಆಕೆ ತನ್ನನ್ನು ತಾನು ಬಾಂಗ್ಲಾ, ಪಾಕಿಸ್ತಾನ ಅಥವಾ ಅಫಘಾನಿಸ್ತಾನದಿಂದ ವಲಸೆ ಬಂದಿರುವ ಮುಸ್ಲಿಮೇತರಳು ಎಂದೂ ಸಾಬೀತು ಪಡಿಸಲು ದಾಖಲೆ ನೀಡದಿದ್ದರೆ ಆಕೆಯ ಪೌರತ್ವವೂ ಇಲ್ಲದಂತಾಗಿ ಅವಳೂ ಜೈಲು ಸೇರಬೇಕಾಗುತ್ತದೆ. ನೆರೆಯ ಪಾಕಿಸ್ತಾನ, ಬಾಂಗ್ಲಾ ಅಥವಾ ಅಫಘಾನಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾದ ಅಲ್ಪಸಂಖ್ಯಾತ ಮುಸ್ಲಿಮೇತರರು ಎಂದು ಕಮಲಮ್ಮನೇ ಸಾಬೀತುಪಡಿಸಬೇಕು.
ಅಯ್ಯೋ ಅದೆಂಗಾಯ್ತದೆ ಸ್ವಾಮಿ, ನಾನು ತಲೆತಲಾಂತರದಿಂದ ಬದ್ಕಿರದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಅಂದರೆ ಮೋದಿ-ಶಾರ ಕಾನೂನು ಅದನ್ನು ಕೇಳುವುದಿಲ್ಲ. ನಿಮ್ಮ ಅಜ್ಜಿಯ ಅಥವಾ ಅಜ್ಜನ ಬಳಿ ಈ ದೇಶದಲ್ಲಿ ಹುಟ್ಟಿದ ದಾಖಲೆ ಪತ್ರ ಇಲ್ಲ ಅಂದರೆ ಅವರು ಕಡ್ಡಾಯವಾಗಿ ಬಾಂಗ್ಲಾ, ಪಾಕಿಸ್ತಾನದಲ್ಲಿ ಇಲ್ಲವೇ ಅಫಘಾನಿಸ್ತಾನದಲ್ಲಿ ಬದುಕಿದ ದಾಖಲೆ ಕೊಡಬೇಕು, ಆಗ ಮಾತ್ರ ಈ ದೇಶದ ಪೌರರಾಗಬಹುದು. ಅಲ್ಲಿಯವರೆಗೆ ಆ ನಿಮ್ಮ ಅಜ್ಜ ಅಜ್ಜಿ ಅಕ್ರಮ ವಲಸಿಗರು ಎಂದೇ ಪರಿಗಣಿಸಲ್ಪಡುತ್ತಾರೆ.
ಇಂದು ಅಸ್ಸಾಮಿನಲ್ಲಿ ಇಂತಹ ಸಾವಿರಾರು ಕಮಲಮ್ಮ, ರೇಣುಕಮ್ಮಗಳು, ದ್ಯಾವಪ್ಪ, ಚೋಮಪ್ಪಗಳು ಜೈಲು ಸೇರುವಂತಾಗಿದೆ.
ಅಂದರೆ ಈಗ ಸಂಸತ್ತಿನಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೊಂಡು, ಅದರ ಬೆನ್ನಲ್ಲೇ ರಾಷ್ಟ್ರೀಯ ಪೌರತ್ವ ನೋಂದಣಿ (NRC)ಯೂ ಆರಂಭಗೊಂಡರೆ ಈ ದೇಶದ 130 ಕೋಟಿ ಜನರೂ ಮುಂದಿನ ಹಲವಾರು ವರ್ಷಗಳ ವರೆಗೆ ತಮ್ಮ ಕುಟುಂಬಗಳ ಪ್ರತಿಯೊಬ್ಬರ ದಾಖಲೆಗಳನ್ನು ಹಾಜರುಪಡಿಸಿ, ತಮ್ಮ ಪೌರತ್ವ ಉಳಿಸಿಕೊಳ್ಳುವ ತಲೆಬಿಸಿಯಲ್ಲಿ ಇಲ್ಲವೇ ಪೌರತ್ವ ಕಳೆದುಕೊಳ್ಳುವ ಆತಂಕದಲ್ಲೇ ಬದುಕುವ ದುಸ್ಥಿತಿ ಸೃಷ್ಟಿಯಾಗಲಿದೆ.
ಈ ಸಂದರ್ಭದಲ್ಲಿ ಈರುಳ್ಳಿ 500 ರೂಪಾಯಿ ಆಗಲಿ, ದೇಶದ ಜಿಡಿಪಿ 1%ಗೆ ಕುಸಿದು ಬೀಳಲಿ, ನಿರುದ್ಯೋಗ 200% ಹೆಚ್ಚಲಿ, ಏನೇ ಆಗಲಿ ಯಾವುದೂ ಮುಖ್ಯವಾಗುವುದಿಲ್ಲ.
ಬಿಜೆಪಿ ಹೇಳುವ ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿಸಿ ಬಹುಸಂಖ್ಯಾತ ಹಿಂದೂಗಳನ್ನು, ಮತ್ತು ಇತರರನ್ನು ಶಾಶ್ವತವಾಗಿ ಆತಂಕದಲ್ಲಿ ಬದುಕುವಂತೆ ಮಾಡಿ ಒಂದು ವರ್ಗ ಥೈ ಥೈ ಎಂದು ಕುಣಿಯುವುದೇ ಆಗಿದೆ. ಇವರ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳೂ ಸುಖವಾಗಿರುವುದಿಲ್ಲ, ಮುಸ್ಲಿಮರು ಪ್ರಜೆಗಳಾಗಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಮೊದಲಿನ ಪ್ರಶ್ನೆಗೆ ಮತ್ತೆ ಬರುವುದಾದರೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು NRC ವಿರುದ್ಧದ ಪ್ರತಿಭಟನೆಗಳಲ್ಲಿ “ಅಲ್ಲಾ ಹು ಅಕ್ಬರ್” ಎಂದು ಮುಸ್ಲಿಂ ಯುವಕರು ಹೇಳುವುದು ಒಂದು ಸಮಸ್ಯೆಯಲ್ಲ.
ಅವರೊಂದಿಗೆ “ಜೈ ಹನುಮಾನ್” “ಜೈ ಭೀಮ್” ಜೈ ಗಣೇಶ” “ಜೈ ಉಚ್ಚಂಗಮ್ಮ” “ಉಘೇ ಉಘೇ ಮಾದೆಶ್ವರ” ಎಂದು ಹೇಳುವ ಜನರೂ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸೇರಿಕೊಳ್ಳದಿರುವುದೇ ಸಮಸ್ಯೆ. ಈಗ ಆಗಬೇಕಿರುವುದು ಅದೇ. ಆದರೆ ಈ ಕರಾಳ ಕಾನೂನುಗಳ ಪರಿಣಾಮ ಸ್ವತಃ ಮುಸ್ಲಿಮರಿಗೇ ಇನ್ನೂ ತಿಳಿದಿಲ್ಲದಿರುವಾಗ ಮುಸ್ಲಿಮೇತರರು ಎಚ್ಚೆತ್ತುಕೊಳ್ಳುವ ಹೊತ್ತಿಗೆ ಎಲ್ಲಾ ಮುಗಿದೇ ಹೋಗಿರುತ್ತದೆ.
CAA ಮತ್ತು NRCಗಳನ್ನು ದಾಖಲೆಗಳಿಲ್ಲದ ಕಾರಣಕ್ಕೆ ಪೌರತ್ವ ಕಳೆದುಕೊಳ್ಳಲಿರುವ ಮುಸ್ಲಿಮರೂ, ಅಕ್ರಮ ವಲಸಿಗರಾಗಲಿರುವ ಕೋಟ್ಯಾನುಕೋಟು ಮುಸ್ಲಿಮೇತರರೂ ಸೇರಿಯೇ ಹಿಮ್ಮೆಟ್ಟಿಸಬೇಕಾಗಿದೆ. ಅಮಿತ್ ಶಾ ಬರಲಿ, ಅವನ ಅಪ್ಪನೇ ಬರಲಿ ಜಾಮಿಯಾ ಮಿಲಿಯಾ ಯೂನಿವರ್ಸಿಟಿಯ ವಿದ್ಯಾರ್ಥಿನಿಯರಾರ ಲಿದಾಯ ಮತ್ತು ಆಯೆಶಾ ಹೇಗೆ ಪೊಲೀಸರಿಗೆ ಮಾತಿನಿಂದಲೇ ಬೆದರಿಸಿ ಹಿಮ್ಮೆಟ್ಟಿಸಿದರೋ ಹಾಗೆಯೇ ಧೈರ್ಯದಿಂದ “Get lost” ಎಂದು ಹಿಮ್ಮೆಟ್ಟಿಸಬೇಕಾಗಿದೆ. ಈ ಹೋರಾಟ ಹೆಚ್ಚು ಹೆಚ್ಚು ಜನರನ್ನು ಒಳಗೊಳ್ಳುವ ಮೂಲಕ ಅಹಿಂಸಾತ್ಮಕವಾಗಿಯೇ ತೀವ್ರಗೊಳ್ಳಬೇಕೇ ವಿನಃ ಸಣ್ಣ ಹಿಂಸಾತ್ಮಕ ಘಟನೆಗಳಿಗೂ ಅವಕಾಶವಾಗದ ರೀತಿಯಲ್ಲಿ ಎಚ್ಚರ ವಹಿಸುವುದು ಸಹ ಮುಖ್ಯವಾಗಿದೆ.
ಇದೇ ಹೊತ್ತಿಗೆ ದೆಹಲಿಯಲ್ಲಿ ನಡೆದಂತೆ ‘ಅಗೋಚರ’ ಗುಂಪುಗಳು ತಾವೇ ಹಿಂಸೆಯನ್ನು ಆರಂಭಿಸಿ, ಬೆಂಕಿ ಹಚ್ಚಿ, ವಾಹನಗಳನ್ನು ಒಡೆದು ಹಾಕಿ ಹೋರಾಟಗಾರರ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು ಸಹ ನಡೆಯಲಿವೆ. ಇಂತಹ ಅಗೋಚರ ಗುಂಪುಗಳ ಬಗ್ಗೆ ಎಚ್ಚರ ವಹಿಸಿಕೊಕೊಂಡೇ ದೇಶವನ್ನು ವಿನಾಶಕ್ಕೆ ಕೊಂಡೊಯ್ಯುತ್ತಿರುವ ದುಷ್ಟ ಬಿಜೆಪಿ ಸರ್ಕಾರಕ್ಕೆ ಛೀಮಾರಿ ಹಾಕಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
~ಗೋವರ್ಧನ ನವಿಲೇಹಾಳು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಖಾಲಿಯಾದ ಈ ಕ್ಷೇತ್ರವು ಕುಟುಂಬದ ರಾಜಕೀಯ ಉತ್ತರಾಧಿಕಾರ, ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷಾಂತರದ ಆರೋಪಗಳ ನಡುವೆ ತೀವ್ರ ಸ್ಪರ್ಧೆಯನ್ನು ಕಂಡಿತು. ಸುಮಾರು 5,708 ಮತಗಳ ಅಂತರದಿಂದ ಗೆದ್ದ ಸಮರ್ಥ್ ಅವರು ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಗೆಲುವು ಕಾಂಗ್ರೆಸ್‌ಗೆ ಸಂತೋಷದ ಸುದ್ದಿಯಾದರೂ, ಎಸ್‌ಡಿಪಿಐ ಪಡೆದ ಗಣನೀಯ 18,975 ಮತಗಳು ಮತ್ತು ಬಿಜೆಪಿಯ ತೀವ್ರ ಪೈಪೋಟಿ ರಾಜಕೀಯ ಸಮೀಕರಣಗಳಲ್ಲಿ ಹೊಸ ತಿರುವುಗಳನ್ನು ಸೂಚಿಸುತ್ತವೆ.
ಈ ಉಪಚುನಾವಣೆಯು ಕೇವಲ ಕ್ಷೇತ್ರೀಯ ಘಟನೆಯಾಗಿರದೆ, ಕರ್ನಾಟಕ ರಾಜಕೀಯದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್, ಕುಟುಂಬ ರಾಜಕೀಯ ಮತ್ತು ಪ್ರತಿಪಕ್ಷದ ತಂತ್ರಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು. ಶಾಮನೂರು ಕುಟುಂಬದ ದೀರ್ಘಕಾಲದ ಸೇವೆಯನ್ನು ಜನರು ಮೆಚ್ಚಿದ್ದರೂ, ಕಾಂಗ್ರೆಸ್‌ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆಯಿಂದಾಗಿ ಉಂಟಾದ ಅಸಮಾಧಾನವು ಎಸ್‌ಡಿಪಿಐಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳು ಮತ್ತು ಐದು ಗ್ಯಾರಂಟಿಗಳ ಪ್ರಭಾವವು ಗೆಲುವಿಗೆ ನೆರವಾಯಿತು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ; ಅದು ಎಲ್ಲಾ ಪಕ್ಷಗಳಿಗೂ ಪಾಠವನ್ನು ಕಲಿಸುತ್ತದೆ.
ಸಮರ್ಥ್ ಶಾಮನೂರು ಅವರ ಮುಂದಿನ ನಡೆ
ಕಿರಿಯ ವಯಸ್ಸಿನಲ್ಲಿ (ದೇಶದ ಎರಡನೇ ಅತಿ ಕಿರಿಯ ಶಾಸಕರಾಗಿ) ಗೆದ್ದ ಸಮರ್ಥ್ ಅವರು ತಮ್ಮ ಅಜ್ಜರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯಲ್ಲಿದ್ದಾರೆ. ಮುಂದಿನ ನಡೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರೀಕರಣಗೊಳ್ಳಬೇಕು. ದಾವಣಗೆರೆಯಂತಹ ನಗರ-ಗ್ರಾಮೀಣ ಮಿಶ್ರ ಕ್ಷೇತ್ರದಲ್ಲಿ ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದು ಮುಖ್ಯ. ಶಾಮನೂರು ಕುಟುಂಬದ ಹೆಸರು ಅಭಿವೃದ್ಧಿಗೆ ಸಮಾನವಾಗಿದೆ; ಇದನ್ನು ಮುಂದುವರಿಸಿ, ಎಲ್ಲಾ ಸಮುದಾಯಗಳ ನಡುವೆ ಸೇತುವೆಯಾಗಬೇಕು.
ವಿಶೇಷವಾಗಿ ಅಲ್ಪಸಂಖ್ಯಾತರ ಅಸಮಾಧಾನವನ್ನು ನಿವಾರಿಸುವುದು ಅಗತ್ಯ. ಟಿಕೆಟ್ ವಿವಾದದ ನಂತರ ಉಂಟಾದ ಬಿರುಕುಗಳನ್ನು ತುಂಬುವ ಮೂಲಕ ಏಕತೆಯ ಸಂದೇಶ ನೀಡಬೇಕು. ಯುವಕರಾಗಿರುವುದರಿಂದ ಆಧುನಿಕ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪಾರದರ್ಶಕ ಆಡಳಿತದ ಮೂಲಕ ಹೊಸ ಚಿಂತನೆ ತರಬಹುದು. ರಾಜಕೀಯದಲ್ಲಿ ವೈಯಕ್ತಿಕ ದಾಳಿ ಬದಲು ನಿರ್ಮಾಣಾತ್ಮಕ ವಿಮರ್ಶೆಯನ್ನು ಪ್ರೋತ್ಸಾಹಿಸುವುದು ಅವರ ಯಶಸ್ಸಿಗೆ ಕಾರಣವಾಗುತ್ತದೆ. ಜನಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡು, ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸುವುದು ಅವರ ಮುಂದಿನ ಗುರಿಯಾಗಬೇಕು. ಗೆಲುವು ಕುಟುಂಬದ ಆಸ್ತಿಯಲ್ಲ, ಜನರ ವಿಶ್ವಾಸದ ಫಲ; ಇದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು.
ಬಿಜೆಪಿಯ ಮುಂದಿನ ಸವಾಲುಗಳು
ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಒಳಜಗಳಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಬಿಜೆಪಿಗೆ ಸವಾಲುಗಳು ಹಲವು: ಮೊದಲನೆಯದು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಶ್ವಾಸಾರ್ಹತೆಯನ್ನು ಕಟ್ಟುವುದು. ಧ್ರುವೀಕರಣದ ತಂತ್ರಗಳು ಸೀಮಿತ ಯಶಸ್ಸು ನೀಡುತ್ತವೆ ಎಂಬುದು ಈ ಫಲಿತಾಂಶ ಸೂಚಿಸುತ್ತದೆ.
ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಬಲಪಡಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ಹೆಚ್ಚಿಸುವುದು ಅಗತ್ಯ. ರಾಜ್ಯ ಮಟ್ಟದಲ್ಲಿ ಪ್ರತಿಪಕ್ಷದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ. ಈ ಗೆಲುವು ಕಾಂಗ್ರೆಸ್‌ಗೆ ಎಚ್ಚರಿಕೆಯಾಗಿದ್ದರೆ, ಬಿಜೆಪಿಗೆ ಕ್ರಿಯಾಶೀಲತೆಯ ಅಗತ್ಯವನ್ನು ತೋರಿಸುತ್ತದೆ.
ಎಸ್‌ಡಿಪಿಐ ಮುಂದಿನ ಸವಾಲು
ಎಸ್‌ಡಿಪಿಐ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದು ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ತನ್ನ ಮತಬ್ಯಾಂಕ್‌ನ್ನು ವಿಸ್ತರಿಸಿದೆ. ಆದರೆ ಇದು ಸವಾಲುಗಳನ್ನೂ ತಂದಿದೆ. ಮುಂದೆ ಎಸ್‌ಡಿಪಿಐಗೆ ಬ್ರಾಡ್ ಆಪೀಲ್ ಅಗತ್ಯ – ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆರ್ಥಿಕ-ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ಎಲ್ಲರಿಗೂ ಸ್ಪಂದಿಸುವ ಧೋರಣೆ ಬೆಳೆಸಬೇಕು.
ಚುನಾವಣಾ ಅನಿಯಮಗಳ ಆರೋಪಗಳು ಮತ್ತು ಮುಖ್ಯ ಪಕ್ಷಗಳ ನಡುವಿನ ತಂತ್ರಗಳ ನಡುವೆ ಸಿಲುಕದೆ, ಸ್ವತಂತ್ರ ರಾಜಕೀಯವನ್ನು ಬಲಪಡಿಸುವುದು ಮುಖ್ಯ. ದೀರ್ಘಕಾಲದ ಯಶಸ್ಸಿಗೆ ಸಮುದಾಯಗಳ ನಡುವಿನ ಸೇತುವೆಯಾಗುವುದು ಅಗತ್ಯ; ಇಲ್ಲದಿದ್ದರೆ ಮತ ವಿಭಜನೆಯ ಆರೋಪಗಳು ಮುಂದುವರಿಯುತ್ತವೆ.
ಈ ಫಲಿತಾಂಶವು ಭಾರತೀಯ ಜನತಂತ್ರದ ಜೀವಂತತೆಯನ್ನು ತೋರಿಸುತ್ತದೆ. ಗೆಲುವು ಸಂಭ್ರಮಿಸುವುದರ ಜೊತೆಗೆ, ಸೋಲಿನಿಂದ ಪಾಠ ಕಲಿಯುವುದು ಎಲ್ಲಾ ಪಕ್ಷಗಳ ಕರ್ತವ್ಯ. ಸಮರ್ಥ್ ಶಾಮನೂರು ಅವರು ತಮ್ಮ ಯುವಕರ ಉತ್ಸಾಹ ಮತ್ತು ಕುಟುಂಬ ಪರಂಪರೆಯನ್ನು ಸಂಯೋಜಿಸಿ, ಎಲ್ಲಾ ವರ್ಗಗಳ ಜನರ ಸೇವೆಗೆ ಮುಂದಾಗಬೇಕು. ಕಾಂಗ್ರೆಸ್ ಅಂತರ್ಗತ ಏಕತೆಯನ್ನು ಬಲಪಡಿಸಬೇಕು. ಬಿಜೆಪಿ ಮತ್ತು ಎಸ್‌ಡಿಪಿಐ ತಮ್ಮ ತಂತ್ರಗಳನ್ನು ಪುನರ್ ಪರಿಶೀಲಿಸಿ, ಜನಕೇಂದ್ರಿತ ರಾಜಕೀಯಕ್ಕೆ ಮರಳಬೇಕು.
ದಾವಣಗೆರೆ ದಕ್ಷಿಣದ ಜನರು ಅಭಿವೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಹೊಸ ಶಾಸಕರು ಈ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ರಾಜಕೀಯವು ಸೇವೆಯಾಗಬೇಕೇ ವಿನಾ ಕುಟುಂಬ ಅಥವಾ ಸಮುದಾಯ ದ್ವೇಷದ ಆಟವಾಗಬಾರದು. ಈ ಉಪಚುನಾವಣೆಯ ಪಾಠಗಳು ರಾಜ್ಯದ ಭವಿಷ್ಯದ ಚುನಾವಣೆಗಳಿಗೆ ದಾರಿ ತೋರಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ6 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ2 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ದಿನದ ಸುದ್ದಿ6 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ಕ್ರೀಡೆ6 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ಅಂಕಣ1 day agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ1 day agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

