Connect with us

ದಿನದ ಸುದ್ದಿ

ಕೋವಿದ್ 19 | ಆಶಯ ಮತ್ತು ಪ್ರಾರ್ಥನೆಗಳ ನಡುವೆ

Published

on

  • ಮೂಲ : ಅನುರಾಧ ರಮಣ್, ಅನುವಾದ : ನಾ ದಿವಾಕರ

ಆಶಾ ಕಾರ್ಯಕರ್ತೆ ‘ಅನಿತಾ ಶರ್ಮ’ ತಮ್ಮ ಟ್ವಿಟರ್ ಖಾತೆಯನ್ನು ಹೊಂದಿದ್ದರು. ಆಕೆ ಮನಸ್ಸು ಮಾಡಿದ್ದಲ್ಲಿ ತಮ್ಮ ಟ್ವಿಟರ್ ಖಾತೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರನ್ನು ಟ್ಯಾಗ್ ಮಾಡಿ ತಮ್ಮನ್ನು ಹೀಗೆ ಪರಿಚಯಿಸಿಕೊಳ್ಳಬಹುದಿತ್ತು : “ನನ್ನ ಹೆಸರು ಅನಿತಾ, ಕೊರೋನಾ ವೈರಾಣು ವ್ಯಾಪಿಸಿದ ದಿನದಿಂದ ನನ್ನ ನೌಕರಿಯ ಚಿತ್ರಣವೇ ಬದಲಾಗಿಹೋಗಿದೆ. ಇತ್ತೀಚೆಗೆ ನಾನು ದಿನಕ್ಕೆ 12 ಗಂಟೆಗಳ ಕಾಲ ದುಡಿಯುತ್ತೇನೆ. ನನ್ನ ಅಲ್ಪ ವೇತನ ಮಾಸಿಕ 2000 ರೂಗಳು ಮಾತ್ರ. ಕಳೆದ ವರ್ಷ ಇದನ್ನು 4000 ರೂಗಳಿಗೆ ಹೆಚ್ಚಿಸಲಾದರೂ ಇದುವರೆಗೂ ಹೆಚ್ಚುವರಿ ವೇತನ ನೀಡಿಲ್ಲ. ನಿಜ ಹೇಳಬೇಕೆಂದರೆ ಈ ವರ್ಷದ ಫೆಬ್ರವರಿಯಿಂದ ನನಗೆ ವೇತನವನ್ನೇ ನೀಡಲಾಗಿಲ್ಲ .”

ಈ ಟ್ವಿಟರ್ ಸಂದೇಶವೇನಾದರೂ ಕಂಡಿದ್ದಲ್ಲಿ ಸಾಮಾಜಿಕ ಮಾಧ್ಯಮಗಳು ಆಕೆಯ ದನಿಗೆ ಮತ್ತಷ್ಟು ದನಿ ಸೇರಿಸಿ ಆಡಳಿತ ವ್ಯವಸ್ಥೆಯ ಗಮನ ಸೆಳೆಯುತ್ತಿದ್ದವು. ಹಾಗಾಗಿದ್ದಲ್ಲಿ ಕೂಡಲೇ ಅನುಕಂಪ, ಕರುಣೆ, ಮರುಕದ ಸಂದೇಶಗಳ ಮಹಾಪೂರವೇ ಹರಿದುಬರುತ್ತಿತ್ತು. ಈ ಸಂದೇಶದಿಂದ ನಾಗರಿಕ ಸಮಾಜದಲ್ಲಿ ಸೃಷ್ಟಿಯಾಗುತ್ತಿದ್ದ ಆಕ್ರೋಶ ಮತ್ತು ಸಿಗುತ್ತಿದ್ದ ಪ್ರಚಾರದಿಂದ ಆಕೆಯ ವೇತನ ಬಾಕಿಯನ್ನು ಒಂದೇ ಕಂತಿನಲ್ಲಿ ಪಾವತಿ ಮಾಡುವ ಪ್ರಕ್ರಿಯೆಯನ್ನೂ ನಿರೀಕ್ಷಿಸಬಹುದಿತ್ತು.

ಆದರೆ ಹಾಗಾಗಲಿಲ್ಲ. ಅನಿತಾ ಈಗಲೂ ತಲೆ ತಗ್ಗಿಸಿ ಕೆಲಸ ಮಾಡುತ್ತಲೇ ಇದ್ದಾರೆ. ತಮ್ಮದೇ ಹಳೆಯ ಬಟ್ಟೆಯಿಂದ ಹೊಲಿದ ಮುಖಗವುಸನ್ನು ಧರಿಸಿ ದುಡಿಯುತ್ತಿದ್ದಾರೆ. ಸಾಧ್ಯವಾದಷ್ಟು ಬಾರಿ ತಮ್ಮ ಕೈ ತೊಳೆಯುತ್ತಲೇ ಇರುತ್ತಾರೆ. (ಆಕೆಗೆ ಸರ್ಕಾರ ನೀಡಿರುವ 500 ಮಿಲಿ ಲೀಟರಿನ ಸ್ಯಾನಿಟೈಸರ್ ಖಾಲಿಯಾಗದಂತೆ ಎಚ್ಚರ ವಹಿಸುತ್ತಾರೆ). ಹೀಗೆಯೇ ಹರಿಯಾಣದಲ್ಲಿ ತಮ್ಮ ನಿತ್ಯ ಕಾಯಕದಲ್ಲಿ ತೊಡಗುತ್ತಾರೆ. ಸದಾ ಪ್ರಾರ್ಥನೆ ಮಾಡುತ್ತಲೇ ದುಡಿಮೆಯಲ್ಲಿ ನಿರತರಾಗುತ್ತಾರೆ. “ ನಾವು ಎಲ್ಲ ರೀತಿಯ ಕೆಲಸಗಳನ್ನೂ ನಿರ್ವಹಿಸಬೇಕು ಎಂದು ಅವರು ಅಪೇಕ್ಷಿಸುತ್ತಾರೆ ಆದರೆ ಆದರೆ ನಮಗೆ ಕನಿಷ್ಟ ರಕ್ಷಣೆಯನ್ನೂ ನೀಡುವುದಿಲ್ಲ ” ಎಂದು ಬೇಸರದಿಂದ ಹೇಳುತ್ತಲೇ ತಮ್ಮ ಕೆಲಸದಲ್ಲಿ ನಿರತರಾಗುತ್ತಾರೆ.

ಅನಿತ ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಹೊರಡುತ್ತಾರೆ. ಪ್ರತಿನಿತ್ಯ ಮಕ್ಕಳು, ವೃದ್ಧರು, ಮಹಿಳೆಯರು, ವಿಶೇಷವಾಗಿ ಗರ್ಭಿಣಿಯರನ್ನು ತಪಾಸಣೆಗೊಳಪಡಿಸುವುದು ಅವರ ಕಾಯಕ. ಪ್ರತಿನಿತ್ಯ ಸರಾಸರಿ 25 ಮನೆಗಳಿಗೆ ಭೇಟಿ ನೀಡುವ ಅನಿತ ಪ್ರತಿನಿತ್ಯ ಭೇಟಿ ಮಾಡುವವರ ಪಟ್ಟಿಯನ್ನು ಸಿದ್ಧಪಡಿಸಿ ಕಚೇರಿಗೆ ಸಲ್ಲಿಸುತ್ತಾರೆ. ಅನೇಕರಿಗೆ ಸಾವು ಬದುಕಿನ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಸುವಲ್ಲಿ ಅನಿತ ಯಶಸ್ವಿಯಾಗುತ್ತಾರೆ.

ತಳಮಟ್ಟದ ಕಾಯಕ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರೂಪಿಸುವ ಪ್ರತಿಯೊಂದು ಆರೋಗ್ಯ ಯೋಜನೆಯ ಯಶಸ್ಸಿನ ಹಿಂದೆ ಅನಿತ ಅವರಂತಹ ತಳಮಟ್ಟದ ಕಾರ್ಯಕರ್ತೆಯರ ಪರಿಶ್ರಮ ಮತ್ತು ದುಡಿಮೆ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಕಬ್ಬಿಣಾಂಶ ಇರುವ ಮಾತ್ರೆ ಕೊಡುವುದರಿಂದ, ಎಳೆ ಮಕ್ಕಳಿಗೆ ಲಸಿಕೆ ಹಾಕುವ ವೇಳಾಪಟ್ಟಿಯನ್ನು ಗಮನಿಸುವುದು, ಗರ್ಭಿಣಿಯರಿಗೆ ಲಸಿಕೆ ನೀಡುವುದು, ಕ್ಷಯರೋಗಿಗಳಿಗೆ ತಪಾಸಣೆ ನಡೆಸುವುದು ಈ ಕೆಲಸಗಳ ಜೊತೆಗೇ ಈಗ ಅನಿತ ಕೋವಿದ್ 19 ಸೋಂಕಿನ ಲಕ್ಷಣಗಳನ್ನು ಗುರುತಿಸಿ ಜನರಿಗೆ ಸಲಹೆ ನೀಡುವ ಕೆಲಸವನ್ನೂ ನಿರ್ವಹಿಸಬೇಕಿದೆ.

ತಮ್ಮ ಬದುಕಿನ ನೆಲೆಯನ್ನೇ ಕಳೆದುಕೊಂಡು ಸ್ವಗ್ರಾಮಗಳಿಗೆ ಹಿಂದಿರುಗಿರುವ ವಲಸೆ ಕಾರ್ಮಿಕರ ಬಗ್ಗೆಯೂ ಅನಿತ ಕಾಳಜಿ ವಹಿಸಬೇಕಾಗುತ್ತದೆ. ಈ ವಲಸೆ ಕಾರ್ಮಿಕರು ತಮಗೆ ನಿಗದಿಪಡಿಸಲಾದ ಕೇಂದ್ರಗಳಲ್ಲಿ ಕ್ವಾರಂಟೈನ್ ಅವಧಿಯನ್ನು ಸರಿಯಾಗಿ ಪೂರೈಸುವರೋ ಇಲ್ಲವೋ ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಇವೆಲ್ಲ ಕೆಲಸಗಳೊಟ್ಟಿಗೆ ಅನಿತ ತಮ್ಮ ಕುಟುಂಬ ಮತ್ತು ನೆರೆಹೊರೆಯವರಿಗೆ ಕೊರೋನಾ ಸೋಂಕಿನ ಕುರಿತು ಮಾಹಿತಿಯನ್ನು ನೀಡುತ್ತಿರಬೇಕು.

ಕೊರೋನಾ ನಂತರದಲ್ಲಿ ಹೆಚ್ಚಿನ ಒತ್ತಡ ಮತ್ತು ಜವಾಬ್ದಾರಿಯನ್ನು ಎದುರಿಸುತ್ತಿರುವ ಭಾರತದ ಆರೋಗ್ಯ ಸೇವೆಯ ಕ್ಷೇತ್ರದ ಮುಂಚೂಣಿಯಲ್ಲಿರುವ ಆಶಾ ಕಾರ್ಯಕರ್ತೆಯರ ಸಂಖ್ಯೆ 9 ಲಕ್ಷದಷ್ಟಿದೆ. ಅನಿತಾ ಅವರಂತಹ ಸೇನಾನಿಗಳು, ಯಾವುದೇ ರಕ್ಷಣಾ ಕವಚ ಇಲ್ಲದೆ, ಸಮರ್ಪಕ ವೇತನ ಇಲ್ಲದೆ, ಯಾವುದೇ ಸಂರಕ್ಷಕ ಅಸ್ತ್ರಗಳಿಲ್ಲದೆ, ಸೂಕ್ತ ಮಾನ್ಯತೆಯೂ ಇಲ್ಲದೆ ದುಡಿಯುತ್ತಿದ್ದಾರೆ.

ಅನೇಕ ಆಶಾ ಕಾರ್ಯಕರ್ತೆಯರು ಜನರ ಆಕ್ರೋಶವನ್ನೂ ಎದುರಿಸಬೇಕಾಗಿದೆ. “ಕಲ್ಲಿಕೋಟೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ರಸ್ತೆಯಲ್ಲಿ ನೆರೆದಿದ್ದ ಜನರ ಗುಂಪನ್ನು ಚದುರಿಸಲು ಮುಂದಾದಾಗ ಓರ್ವ ಕಾರ್ಯಕರ್ತೆಯ ದ್ವಿಚಕ್ರ ವಾಹನವನ್ನು ಜಖಂಗೊಳಿಸಲಾಗಿದೆ. ಕೆಲವರು, ನಾವೇಕೆ ಒಬ್ಬ ಮಹಿಳೆ ಹೇಳಿದಂತೆ ಕೇಳಬೇಕು ಎನ್ನುತ್ತಾರೆ ” ಎಂದು ವಿಷಾದದಿಂದ ಹೇಳುತ್ತಾರೆ ಕೇರಳದ ಆಶಾ ಕಾರ್ಯಕರ್ತೆ ಪಿ ಪಿ ಪ್ರೇಮ.

ಇನ್ನೂ ಅಘಾತಕಾರಿ ವಿಚಾರ ಎಂದರೆ ಈವರೆಗೂ ದೇಶಾದ್ಯಂತ 20ಕ್ಕೂ ಹೆಚ್ಚು ಆಶಾಕಾರ್ಯಕರ್ತೆಯರು ಕೊರೋನಾಗೆ ಬಲಿಯಾಗಿದ್ದಾರೆ. ಮೇ 13ರಂದು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಬದನಕಟ್ಟೆ ಗ್ರಾಮದಲ್ಲಿ 51 ವರ್ಷದ ಆಶಾ ಕಾರ್ಯಕರ್ತೆ ಭೀಮಕ್ಕ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಮೃತಪಟ್ಟಿದ್ದರು. ಇಡೀ ದಿನ ಆಕೆಯ ಶವವನ್ನು , ಅವರ ಸಂಬಂಧಿಕರು ಆಸ್ಪತ್ರೆಯಲ್ಲೇ ಇಟ್ಟಿದ್ದರು. ಈ ಕೊರೋನಾ ಸೇನಾನಿಗೆ ವಿಮೆ ಸೌಲಭ್ಯ ಒದಗಿಸಬೇಕು ಎನ್ನುವುದು ಅವರ ಆಗ್ರಹವಾಗಿತ್ತು.

ಆದರೆ ವೈದ್ಯರು, ಆಕೆಗೆ ಕೊರೋನಾ ನೆಗಟೀವ್ ಎಂದು ಗುರುತಿಸಲಾಗಿದ್ದು, ಹೃದಯಾಘಾತದಿಂದ ಸತ್ತಿರುವುದರಿಂದ ವಿಮೆ ನೀಡಲಾಗುವುದಿಲ್ಲ ಎಂದು ವಾದಿಸಿದ್ದರು. ಸ್ಥಳೀಯ ಶಾಸಕರು ಮತ್ತು ಇತರ ನಾಯಕರು ಆಕೆಯ ವಿಚಾರವನ್ನು ಮುಖ್ಯಮಂತ್ರಿಯೊಡನೆ ಚರ್ಚಿಸಿ ನ್ಯಾಯ ಒದಗಿಸುವುದಾಗಿ ಆಶ್ವಾಸನೆ ನೀಡಿದ್ದರೂ, ಈವರೆಗೂ ಈಡೇರಿಸಿಲ್ಲ. ಈ ಲೇಖನ ಬರೆಯುವ ವೇಳೆಗೆ ಇಬ್ಬರು ಆಶಾ ಕಾರ್ಯಕರ್ತೆಯರು, ಓರ್ವ ಅಂಗನವಾಡಿ ಕಾರ್ಯಕರ್ತೆ, ಓರ್ವ ಆರೋಗ್ಯ ಸಹಾಯಕಿ ಕೊರೋನಾ ಸೋಂಕಿತರಾಗಿ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯ ನಂತರ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ.

ಕರ್ನಾಟಕದ ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯ ಅಂಗನವಾಡಿ ಕಾರ್ಯಕರ್ತೆ ರೇಣುಕಾ ರೇಣುಕೇಗೌಡರ್ ಇತ್ತೀಚೆಗೆ ತಾನೇ ಕೋವಿದ್ 19 ನಿಂದ ಚೇತರಿಸಿಕೊಂಡಿದ್ದಾರೆ. ಕಂಟೈನ್‍ಮೆಂಟ್ ವಲಯಗಳಲ್ಲಿ ಸಂಬಂಧಪಟ್ಟ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯೂ ಸಹ ಪ್ರತಿನಿತ್ಯ ಸೋಂಕಿತರ ಮತ್ತಿತರರ ಮನೆಗಳಿಗೆ ಭೇಟಿ ನೀಡಬೇಕು ಎಂಬ ನಿಯಮ ಇದ್ದರೂ ಸಹ ಯಾರೊಬ್ಬರೂ ತಿರುಗಿ ನೋಡುವುದಿಲ್ಲ.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ಪ್ರತಿನಿತ್ಯ ಮನೆ ಮನೆ ಸಮೀಕ್ಷೆ ನಡೆಸುವುದು, ಪಾಸಿಟಿವ್ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚುವುದು, ಪ್ರಾಥಮಿಕ ಮತ್ತು ತರುವಾಯದ ಸೋಂಕು ತಗುಲಿದವರನ್ನು ಪತ್ತೆ ಹಚ್ಚುವುದು, ಕಂಟೈನ್‍ಮೆಂಟ್ ವಲಯಗಳಲ್ಲಿ ಗಸ್ತು ತಿರುಗುವುದು, ಆಹಾರ ಮತ್ತು ಔಷಧ ಪದಾರ್ಥಗಳನ್ನು ವಿತರಿಸುವುದು ಈ ಎಲ್ಲ ಕೆಲಸಗಳನ್ನೂ ನಿರ್ವಹಿಸಬೇಕಾಗುತ್ತದೆ. ಕೆಲವು ಗ್ರಾಮಗಳಲ್ಲಿ ನೆರೆಹೊರೆಯವರು, ಗುಣಮುಖರಾದ ಕೊರೋನಾ ಸೋಂಕಿತರಿಗೆ ಹಾಲು ಮತ್ತಿತರ ಪದಾರ್ಥಗಳನ್ನು ಒದಗಿಸಲು ನಿರಾಕರಿಸಿದಾಗ ಪಕ್ಕದ ಹಳ್ಳಿಯಿಂದ ತಂದು ನೀಡಬೇಕಾಗುತ್ತದೆ ” ಎನ್ನುತ್ತಾರೆ ರೇಣುಕಾ ರೇಣುಕೇಗೌಡರ್.

ಬಹಿಷ್ಕೃತರಾದಾಗ

ರೇಣುಕಾ ಅವರಿಗೆ ಕೊರೋನಾ ಸೋಂಕು ತಗುಲಿದ ಸಂದರ್ಭದಲ್ಲಿ ಆಕೆ 20 ಪಾಸಿಟೀವ್ ಪ್ರಕರಣಗಳಿದ್ದ, ಹೆಚ್ಚಿನ ಅಪಾಯ ಇದ್ದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗುಣಮುಖರಾದ ನಂತರ ಮನೆಗೆ ಹಿಂದಿರುಗಿದಾಗ ಗ್ರಾಮಸ್ಥರು ಆಕೆಯನ್ನು ಬಹಿಷ್ಕರಿಸಿದ್ದರು. “ ನನ್ನ ನೆರೆಹೊರೆಯವರು ನನ್ನಿಂದ ಮತ್ತು ನನ್ನ ಮಗಳಿಂದ ದೂರ ಉಳಿದರು, ನಾನು ಕೆಲಸ ಮಾಡುವಲ್ಲಿಯೂ ಸಹ ಕಳಂಕ ಹೊತ್ತುಕೊಂಡೇ ಇರಬೇಕಾಯಿತು, ಈ ರೋಗದ ಬಗ್ಗೆ ಬಹಳಷ್ಟು ಜನರಿಗೆ ಅನಗತ್ಯವಾದ ಭೀತಿ ಆವರಿಸಿದೆ ಹಾಗಾಗಿ ನೀವು ಗುಣಮುಖರಾಗಿದ್ದರೂ ಬಹಳಷ್ಟು ಜನರು ನಿಮ್ಮಿಂದ ದೂರವೇ ಇರುತ್ತಾರೆ ” ಎಂದು ವಿಷಾದದಿಂದ ಹೇಳುತ್ತಾರೆ ರೇಣುಕ.

ರೇಣುಕಾ ಅಂಗನವಾಡಿ ಕಾರ್ಯಕರ್ತೆಯಾಗಿ 19 ವರ್ಷ ಸೇವೆ ಸಲ್ಲಿಸಿದ್ದಾರೆ. ತಿಂಗಳಿಗೆ 500 ರೂ ಸಂಬಳದಿಂದ ಆರಂಭವಾದ ಅವರ ನೌಕರಿಯಲ್ಲಿ ಈಗ ತಿಂಗಳಿಗೆ 10 ಸಾವಿರ ರೂ ವೇತನ ಪಡೆಯುತ್ತಿದ್ದಾರೆ. ಮುಂಚೂಣಿಯಲ್ಲಿ ನಿಂತು ಆರೋಗ್ಯ ಸೇವೆ ಸಲ್ಲಿಸುವ ಸೇನಾನಿಗಳನ್ನು ರಾಜ್ಯ ಸರ್ಕಾರ ಸಂವೇದನೆಯೇ ಇಲ್ಲದೆ ನಿರ್ವಹಿಸುತ್ತಿರುವ ರೀತಿಗೆ ರಾಜ್ಯದ ಕಾರ್ಮಿಕ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿವೆ.

ಈ ಕುರಿತು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಹೀಗೆ ಹೇಳುತ್ತಾರೆ ; “ ಭೀಮಕ್ಕ ತಮ್ಮ ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಸಾಯಲಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ ಆಕೆ ಕುಸಿದು ಬಿದ್ದ ಸಂದರ್ಭದಲ್ಲಿ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದರು. ಇದನ್ನು ಕರ್ತವ್ಯದ ವೇಳೆಯ ಸಾವು ಅಲ್ಲ ಎಂದು ಹೇಗೆ ನಿರ್ಧರಿಸಲು ಸಾಧ್ಯ ? ಎಲ್ಲ ಆಶಾ ಕಾರ್ಯಕರ್ತೆಯರನ್ನು, ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಆರೋಗ್ಯ ಸಹಾಯಕರನ್ನು ಕೂಡಲೇ ಖಾಯಂ ನೌಕರರು ಎಂದು ಘೋಷಿಸಿ ಇತರ ಸರ್ಕಾರಿ ನೌಕರರಿಗೆ ಒದಗಿಸುವ ವೇತನ ಮತ್ತು ವಿಮೆ ಮುಂತಾದ ಸೌಲಭ್ಯಗಳನ್ನು ಒದಗಿಸಲು ನಾವು ಆಗ್ರಹಿಸುತ್ತೇವೆ. ”

ಆಶಾ ಕಾರ್ಯಕರ್ತೆಯರನ್ನು ಪ್ರತಿನಿಧಿಸುವ ಪ್ರಬಲ ಕಾರ್ಮಿಕ ಸಂಘಟನೆಗಳು ಇರುವೆಡೆಯೆಲ್ಲಾ ಅವರ ಆಗ್ರಹಗಳಿಗೆ ಕಿವಿಗೊಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ಕಳೆದ ಸೆಪ್ಟಂಬರ್ ತಿಂಗಳಿಂದ ಆಶಾ ಕಾರ್ಯಕರ್ತೆಯರಿಗೆ ವೇತನ ಪಾವತಿ ಮಾಡಿರಲಿಲ್ಲ. ಆಶಾ ಕಾರ್ಯಕರ್ತೆಯರ ಸಂಘಟನೆ ಮುಷ್ಕರಕ್ಕೆ ಕರೆ ನೀಡಿತ್ತು. ಕೂಡಲೇ ಸ್ಪಂದಿಸಿದ ಸರ್ಕಾರ ವೇತನ ಪಾವತಿಸಲು ಒಪ್ಪಿಕೊಂಡಿತ್ತು. ಆದರೆ ತೆಲಂಗಾಣ ಮತ್ತು ಕೇರಳ ಸರ್ಕಾರದಂತೆ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುವುದು ಇನ್ನೂ ಸ್ಪಷ್ಟವಾಗಿಲ್ಲ.

ಕೊರೋನಾ ವ್ಯಾಪಿಸುತ್ತಿರುವುದರಿಂದ ಕಾರ್ಯಕರ್ತೆಯರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿರುವುದನ್ನು ಕಂಡು ಕೇರಳ ಮತ್ತು ತೆಲಂಗಾಣ ಸರ್ಕಾರಗಳು ಆಶಾ ಕಾರ್ಯಕರ್ತೆಯರ ಮಾಸಿಕ ವೇತನವನ್ನು 7000 ರೂಗಳಿಗೆ ಹೆಚ್ಚಿಸಿವೆ. ಕರ್ನಾಟಕದಲ್ಲಿ 10 ಸಾವಿರ ವೇತನ ನೀಡಲಾಗುತ್ತಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಲ್ಲೂ ವೇತನ ಪಾವತಿಯಲ್ಲಿ ವಿಳಂಬ ಮಾಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ 2000 ರೂ ಮತ್ತು ರಾಜ್ಯ ಸರ್ಕಾರಗಳು 2000 ರೂ ವೇತನ ನಿಗದಿಪಡಿಸಿವೆ.

ಘನತೆಯ ಹಕ್ಕು

ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆಯ ವರದಿಯೊಂದರ ಪ್ರಕಾರ ಏಪ್ರಿಲ್ 28ರ ವೇಳೆಗೇ ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲ ದೇಶಗಳಿಗೂ ಸಂದೇಶವನ್ನು ರವಾನಿಸಿದ್ದು, ಎಲ್ಲ ಸರ್ಕಾರಗಳು, ಉದ್ಯೋಗದಾತರು, ಕಾರ್ಮಿಕ ಸಂಘಟನೆಗಳು ಮತ್ತು ಜಾಗತಿಕ ಸಮುದಾಯದ ಸಂಘ ಸಂಸ್ಥೆಗಳು, ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರ ವೃತ್ತಿಪರ ಆರೋಗ್ಯ ರಕ್ಷಣೆ ಮತ್ತು ಸುಭದ್ರತೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ, ಅವರಿಗೆ ಗೌರವಯುತವಾದ ಕಾರ್ಯಕ್ಷೇತ್ರದ ಪರಿಸರವನ್ನು ಒದಗಿಸುವಂತೆಯೂ, ಅವರ ರಕ್ಷಣೆಗಾಗಿ ರಾಷ್ಟ್ರೀಯ ಯೋಜನೆಗಳನ್ನು ರೂಪಿಸುವಂತೆಯೂ ಆಗ್ರಹಿಸಿತ್ತು.

ಈಗ ಕೋವಿದ್ 19 ನಿಯಂತ್ರಣ ತಪ್ಪಿ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ನಿರೀಕ್ಷೆಯನ್ನೂ ಮೀರಿ ಹೆಚ್ಚಾಗಿದೆ. ಕೋವಿದ್ 19 ಸ್ಥಳೀಯ ಮಟ್ಟದಲ್ಲಿ ಪ್ರಸರಣವಾಗದಂತೆ ತಡೆಗಟ್ಟಲು ರೂಪಿಸಲಾದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾದರಿ ಯೋಜನೆಯ ಅನುಸಾರ, ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡುವುದೇ ಅಲ್ಲದೆ ದಿನನಿತ್ಯ ಸೊಂಕು ಲಕ್ಷಣಗಳಿರುವ ಮತ್ತು ಲಕ್ಷಣಗಳಿಲ್ಲದಿರುವವರ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಬೇಕಾಗುತ್ತದೆ.

ಜನವರಿಯಲ್ಲಿ ದೇಶದ ಪ್ರಪ್ರಥಮ ಕೋವಿದ್ ಪ್ರಕರಣ ದಾಖಲಾದ ಕೇರಳದ ತ್ರಿಸೂರ್ ಜಿಲ್ಲೆಯಲ್ಲಿ ಫೆಬ್ರವರಿಯಿಂದಲೇ ಹೊರ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಬರುವ ಪ್ರಯಾಣಿಕರ ಆರೋಗ್ಯದ ಮೇಲೆ ನಿಗಾ ವಹಿಸುವಂತೆ ಎಚ್ಚರವಹಿಸಲು ಅಜಿತಾ ರಾಜನ್ ಅವರಂತಹ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು.

ಕಲ್ಲಿಕೋಟೆಯಲ್ಲಿ ಸಿಐಟಿಯು ಸಂಯೋಜಿತ ಆಶಾ ಕಾರ್ಯಕರ್ತೆಯರ ಸಂಘದ ಕೇರಳ ರಾಜ್ಯಾಧ್ಯಕ್ಷೆಯಾದ ಪ್ರೇಮ “ ನಾವು ದಿನವಿಡೀ ಕೆಲಸ ಹೊಂದಿರುತ್ತೇವೆ, ಹೊರ ರಾಜ್ಯಗಳಿಂದ ಬರುವವರು ಮಧ್ಯರಾತ್ರಿ ಬಂದರೂ,, ನೆರೆಹೊರೆಯವರು ನಮಗೆ ದೂರವಾಣಿ ಮೂಲಕ ರಾತ್ರಿ ವೇಳೆಯೇ ಮಾಹಿತಿ ನೀಡುತ್ತಾರೆ, ಇದರೊಂದಿಗೆ ಕ್ವಾರಂಟೈನ್‍ನಲ್ಲಿರುವವರಿಗೆ ನಾವು ಸಾಂತ್ವನ ನೀಡುವುದೂ ಅಷ್ಟೇ ಮುಖ್ಯವಾಗಿರುತ್ತದೆ ” ಎಂದು ಹೇಳುತ್ತಾರೆ.

ಕೊಚಿ ನಗರದಲ್ಲಿ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆ ಲತಾ ರಾಜು ಮನೆಯಲ್ಲೇ ಕ್ವಾರಂಟೈನ್ ಆಗಿರುವ ಸೋಂಕಿತರ ಎಲ್ಲ ವಿವರಗಳನ್ನೂ ನೋಟ್ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಇವರು ಎಲ್ಲಿ ನೆಲೆಸಿದ್ದಾರೆ, ಎಲ್ಲಿಗೆ ಅಥವಾ ಎಲ್ಲಿಂದ ಪ್ರಯಾಣ ಮಾಡಿದ್ದಾರೆ, ಅವರ ಸಂಪರ್ಕ ಸಂಖ್ಯೆ ಹೀಗೆ ಎಲ್ಲವನ್ನೂ ದಾಖಲಿಸಿ ಹಲವು ಪುಸ್ತಕಗಳನ್ನು ತುಂಬಿಸಿದ್ದಾರೆ.

ಇದರೊಟ್ಟಿಗೆ ಒಂಟಿಯಾಗಿ ಜೀವನ ನಡೆಸುತ್ತಿರುವ ವೃದ್ಧರು, ಈಗಾಗಲೇ ಇತರ ಅನಾರೋಗ್ಯ ಸಮಸ್ಯೆ ಹೊಂದಿರುವವರು, ಗರ್ಭಿಣಿ ಮಹಿಳೆಯರು ಎಲ್ಲರ ಮಾಹಿತಿಯನ್ನು ಸಂಗ್ರಹಿಸಿ ದಾಖಲಿಸಿದ್ದಾರೆ. ಸಂಜೆ ವೇಳೆ ಈ ಅಂಕಿಅಂಶಗಳನ್ನು ಸಾರ್ವಜನಿಕ ಆರೋಗ್ಯ ಶುಶ್ರೂಷಕಿಯರಿಗೆ ಮತ್ತು ಆರೋಗ್ಯ ಪರೀಕ್ಷಕರಿಗೆ ಕಳುಹಿಸುವ ಮೂಲಕ ರಾಜ್ಯ ಮಟ್ಟದ ಮಾಹಿತಿ ಕೋಶಕ್ಕೆ ಲತಾರಾಜು ತಮ್ಮ ಕೊಡುಗೆ ಸಲ್ಲಿಸುತ್ತಾರೆ.

ಕೇರಳದ ಆಶಾ ಕಾರ್ಯಕರ್ತೆಯರು ಅನೇಕರ ಮನೆಗಳಿಗೆ ಆಹಾರ ಪದಾರ್ಥಗಳು, ದವಸ ಧಾನ್ಯಗಳು, ಔಷಧಿಗಳನ್ನು ಮತ್ತು ಸಮುದಾಯ ಅಡುಗೆ ಮನೆಯಿಂದ ಊಟ ತಿಂಡಿಯನ್ನೂ ತಲುಪಿಸುತ್ತಿದ್ದಾರೆ. ಲಕ್ಷಾಂತರ ಜನರು ತಮ್ಮ ಸ್ವಗ್ರಾಮಗಳಿಗೆ , ಮನೆಗಳಿಗೆ ಹಿಂದಿರುಗಲು ಆರಂಭಿಸಿದಾಗ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಾಗಿತ್ತು. ಮನೆಯಲ್ಲೇ ಕ್ವಾರಂಟೈನ್ ಆಗಿದ್ದವರ ಬಗ್ಗೆ ನಿಗಾವಹಿಸಲು ರೂಪಿಸಲಾಗಿದ್ದ ವಾರ್ಡ್‍ಮಟ್ಟದ ಸಮಿತಿಗಳಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿತ್ತು.

ಸಮಿತಿಯ ಸದಸ್ಯರೊಡನೆ ಕ್ವಾರಂಟೈನ್‍ಗೆ ಒಳಗಾದವರನ್ನು ಭೇಟಿಯಾಗುವುದೇ ಅಲ್ಲದೆ ಅಲ್ಲಿ ಕ್ವಾರಂಟೈನ್ ಮಾಡಲು ಅನುಕೂಲಕರ ಪರಿಸ್ಥಿತಿ ಇದೆಯೇ, ಮನೆಯೊಳಗೆ ಬಚ್ಚಲು ಮತ್ತು ಶೌಚಾಲಯ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಂಡು ವರದಿ ಮಾಡುವುದು ಇವರ ಜವಾಬ್ದಾರಿಯಾಗಿತ್ತು. ನಂತರ ಕುಟುಂಬದ ಇತರ ಸದಸ್ಯರಿಗೆ ಸುರಕ್ಷತಾ ವಿಧಾನಗಳ ಬಗ್ಗೆ ತಿಳುವಳಿಕೆ ನೀಡುವುದೂ ಇವರ ಹೊಣೆಯಾಗಿತ್ತು.

ದುರದೃಷ್ಟಕರ ಸಂಗತಿ ಎಂದರೆ ಅನೇಕ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಖಾಸಗಿ ಸುರಕ್ಷತಾ ಉಪಕರಣಗಳಾದ ಮಾಸ್ಕ್, ಕೈಗವುಸು ಮತ್ತು ಮುಖ ರಕ್ಷಕಗಳನ್ನು ಒದಗಿಸಿಲ್ಲ. ಅನೇಕರು ಮನೆಯಲ್ಲಿ ತಾವೇ ಹೊಲಿದ ಬಟ್ಟೆಯ ಮಾಸ್ಕ್ ಗಳನ್ನು ಧರಿಸುತ್ತಿದ್ದು, ಕೆಲವರು ತಮ್ಮ ದುಪ್ಪಟ್ಟ ಬಳಸುತ್ತಿದ್ದಾರೆ. ಕೇರಳದ ತಿರುವನಂತಪುರಂ, ಪಥನಮತಿಟ್ಟ, ಮಾಲಪ್ಪುರಂ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರೇ ಸೋಂಕಿಗೆ ಒಳಗಾದಾಗ ಇವರಲ್ಲೂ ಆತಂಕ ಹೆಚ್ಚಾಗಿದೆ.

ನಮ್ಮಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿ ಪಾಸಿಟೀವ್ ಕಂಡುಬಂದರೆ ನಮ್ಮ ಸಂಪರ್ಕದಲ್ಲಿರುವವರನ್ನು ಗುರುತಿಸುವ ಪ್ರಕ್ರಿಯೆ ಭೀಕರವಾಗಿರುತ್ತದೆ ” ಎನ್ನುತ್ತಾರೆ ಲತಾ ರಾಜು. ಆಶಾ ಕಾರ್ಯಕರ್ತೆಯರ ಕಾರ್ಯಕ್ಷಮತೆ ಮತ್ತು ಅವರ ವರದಿಗಾರಿಕೆಯೇ ದೇಶದ ಕೋವಿದ್ 19 ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ನೋಡಿದಾಗ, ಈ ಕಾರ್ಯಕರ್ತೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ಆಡಳಿತ ವ್ಯವಸ್ಥೆ ಅಸಡ್ಡೆ ತೋರುತ್ತಿರುವುದು ನಿಜಕ್ಕೂ ದುರದೃಷ್ಟಕರ.

ಇತ್ತೀಚಿನ ತಮ್ಮ ಲೇಖನವೊಂದರಲ್ಲಿ ಡಾ ಎಮ್ ಎಸ್ ಶೇಷಾದ್ರಿ ಮತ್ತು ಟಿ ಜಾಕಬ್ ಹೇಳುವಂತೆ “ಮುಂಬರುವ ದಿನಗಳಲ್ಲಿ ಆಡಳಿತ ವ್ಯವಸ್ಥೆ ಕೈಗೊಳ್ಳಬೇಕಾದ ಅತ್ಯಂತ ಮುಖ್ಯ ಕ್ರಮ ಎಂದರೆ ನಮ್ಮ ಬಳಿ ಇರುವ ಎಲ್ಲ ಸಾಧನಗಳನ್ನೂ ಬಳಸಿ ಗ್ರಾಮೀಣ ಜನತೆಯಲ್ಲಿ ಜಾಗೃತಿ , ತಿಳುವಳಿಕೆ ಮೂಡಿಸುವುದು. ನಾವು ಅವರಿಗೆ ಸೂಕ್ತವಾದ ಮಾಹಿತಿಯನ್ನು ಒದಗಿಸಬೇಕು ”(ದ ಹಿಂದೂ ಪತ್ರಿಕೆ). ಈ ಮಹತ್ಕಾರ್ಯವನ್ನು ನಿರ್ವಹಿಸಲು ಬಹುಶಃ ದೇಶದ ಯಾವುದೇ ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರನ್ನು ಹೊರತುಪಡಿಸಿ ಮತ್ತಾರೂ ನೆನಪಾಗುವುದಿಲ್ಲ.

ಏತನ್ಮಧ್ಯೆ ಕೊರೋನಾ ಸೋಂಕು ಪ್ರಕರಣಗಳು ನಿಯಂತ್ರಣವಿಲ್ಲದೆ ಹೆಚ್ಚಾಗುತ್ತಲೇ ಹೋಗುತ್ತಿರುವುದರಿಂದ ಅತಿಯಾದ ಎಚ್ಚರಿಕೆ ವಹಿಸಬೇಕಾದ ಸಂದರ್ಭವನ್ನೂ ಈ ಸೇನಾನಿಗಳು ಎದುರಿಸುತ್ತಿದ್ದಾರೆ. ಆದರೆ ಆಶಾ ಕಾರ್ಯಕರ್ತೆ ಪ್ರೇಮಾ ಹೇಳುವಂತೆ “ ಒಂದು ಸಣ್ಣ ಪ್ರಮಾದ ತಿಂಗಳಗಟ್ಟಳೆ ಮಾಡಿದ ಉತ್ತಮ ಕೆಲಸವನ್ನು ಮಣ್ಣುಪಾಲು ಮಾಡಿಬಿಡುತ್ತದೆ ”. ಹೀಗೆಯೇ ಈ ಸೇನಾನಿ ಪಡೆಗಳು ಶ್ರಮವಹಿಸುತ್ತಲೇ ಇರುತ್ತವೆ.

( ಕೆಲವು ಹೆಸರುಗಳನ್ನು ಗೋಪ್ಯತೆಯ ದೃಷ್ಟಿಯಿಂದ ಬದಲಿಸಲಾಗಿದೆ. ರಿಷಿಕೇಷ್ ಬಹದ್ದೂರ್ ದೇಸಾಯಿ ಮತ್ತು ಅಭಿನಯ ಹರಿಗೋವಿಂದ್ ಅವರಿಂದ ಮಾಹಿತಿ ಸಂಗ್ರಹಿಸಲಾಗಿದೆ)

ಕೃಪೆ: ಜುಲೈ 7 ತಾರೀಖು ‘ದಿ ಹಿಂದೂ’ ಇಂಗ್ಲಿಷ್ ದೈನಿಕ ದಲ್ಲಿ ಪ್ರಖಟವಾದ ಲೇಖನದ ಕನ್ನಡ ಅನುವಾದ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending