Connect with us

ದಿನದ ಸುದ್ದಿ

ನಗರ ದೇವತೆ ದುಗ್ಗಮ್ಮ ಹಾಗೂ ಚೌಡೇಶ್ವರಿ ಜಾತ್ರೆಗಳ ನಾಗರೀಕ ಸೌಹಾರ್ದ ಸಭೆ : ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

Published

on

ಸುದ್ದಿದಿನ,ದಾವಣಗೆರೆ : ನಗರ ದೇವತೆ ದುಗ್ಗಮ್ಮ ಜಾತ್ರೆ, ವಿನೋಬ ನಗರದ ಚೌಡೇಶ್ವರಿ ಜಾತ್ರೆ ಹಾಗೂ ಹೋಳಿ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸುವ ಮೂಲಕ ಹಬ್ಬಗಳ ಹೆಸರಿನಲ್ಲಿ ನಡೆಯುವ ಕೆಲ ಮೂಢನಂಬಿಕೆಗಳನ್ನ ಧಿಕ್ಕರಿಸುವ ಮೂಲಕ ಹೊಸತನಕ್ಕೆ ಹೊಂದಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರ ಹಾಗೂ ಉಚ್ಚ ನ್ಯಾಯಾಲಯದ ಆದೇಶದಂತೆ ಪ್ರಾಣಿಬಲಿ ನಿಷೇಧವಿದ್ದು ದೇವಸ್ಥಾನದ ಆವರಣ ಹಾಗೂ ಸುತ್ತಲಿನ ಐದು ನೂರು ಮೀಟರ್ ಆವರಣದಲ್ಲಿ ಯಾವುದೇ ಪ್ರಾಣಿಬಲಿ ಮಾಡುವುದು ಬೇಡ, ಸಂಪ್ರದಾಯದಂತೆ ಕೋಣನ ರಕ್ತವನ್ನು ಸಿರಂಜ್ ಮೂಲಕ ತೆಗೆದು ದೇವರಿಗೆ ಅರ್ಪಿಸೋಣವೆಂದರು. ಇದರೊಂದಿಗೆ ಬೇವಿನುಡಿಗೆಯ ಸೇವೆ ಕೂಡ ನಿಷೇಧವಿದ್ದು ಬೇವಿನ ಎಸಳನ್ನು ದೇವಿಗೆ ಅರ್ಪಿಸುವ ಮೂಲಕ ಹರಕೆ ತೀರಿಸಿ ಎಂದರು.

Read also: Happy Diwali images

ಪ್ರಾಣಿಬಲಿ ನಿಷೇಧ ಕಾಯಿದೆಯು ಅತ್ಯಂತ ಕಠಿಣವಾಗಿದ್ದು, ಯಾರಾದರು ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ, ಕೆಲ ಸಂದರ್ಭಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ, ಅಂತಹದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು ಇದರಿಂದ ದೇವಸ್ಥಾನದ ಆಡಳಿತ ಮಂಡಳಿಗೂ ತೊಂದರೆಯಾಗುತ್ತದೆ. ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಜಾತ್ರಾ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದರು.

ಮಹಾನಗರ ಪಾಲಿಕೆ ಮಹಾಪೌರರಾದ ಜಯಮ್ಮ ಗೋಪಿನಾಯ್ಕ ಮಾತನಾಡಿ ಜಾತ್ರೆಗಳು ಸುಗಮವಾಗಿ ನಡೆಯಲು ಪಾಲಿಕೆ ವತಿಯಿಂದ ಎಲ್ಲಾ ನೆರವು ನೀಡಲಾಗುವುದು, ಎಲ್ಲರೂ ಪರಸ್ಪರ ಸಹಕರಿಸಿ ಜಾತ್ರೆಗಳು ಅದ್ದೂರಿಯಾಗಿ ನಡೆಯುವಂತೆ ನೋಡಿಕೊಳ್ಳೋಣವೆಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ ಎರಡೂ ಜಾತ್ರಾ ಮಹೋತ್ಸವಗಳು ಯಶಸ್ವಿಯಾಗಿ ಜರುಗಲಿ, ಟ್ರಾಪಿಕ್ ಸಮಸ್ಯೆಯಾಗದಂತೆ ಹಾಗೂ ಪಾರ್ಕಿಂಗ್ ಸಂಭಂಧಿಸಿದಂತೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗುವುದು. ಎಲ್ಲಾ ಕಡೆ ಮಾರ್ಗ ಫಲಕಗಳನ್ನು ಹಾಕಲಾಗುವುದು, ಸಾಕಷ್ಟು ಕಸದ ರಾಶಿ ಬೀಳುವುದರಿಂದ ದೇವಸ್ಥಾನದ ಆಡಳಿತ ಮಂಡಳಿಯವರು ಎಲ್ಲಾ ಕಡೆ ಕಸದ ಬುಟ್ಟಿಗಳನ್ನಿಡಲಿ, ರಸ್ತೆಗಳು ಕಿರಿದಾಗಿದ್ದು ವ್ಯಾಪಾರಿಗಳು ಹೆಚ್ಚು ರಸ್ಥೆ ಮೇಲೆ ಅಂಗಡಿಗಳನ್ನು ಇಡುವುದನ್ನು ತಡೆಯಬೇಕು ಹಾಗೂ 280 ಸಿಸಿಟಿವಿ ಕ್ಯಾಮರಾಗಳನ್ನು ಹಾಕಲಾಗುವುದು ಮತ್ತು ಡ್ರೋಣ್ ಕ್ಯಾಮರಾಗಳು ಕಣ್ಗಾವಲುಇರಲಿವೆ, ದೇವಸ್ಥಾನದ ವತಿಯಿಂದ ಹೆಚ್ಚು ಸ್ವಯಂ ಸೇವಕರನ್ನು ನೀಡಿ ಹಾಗು ಅವರಿಗೆ ಐ.ಡಿ ಕಾರ್ಡ್‍ಗಳನ್ನು ನೀಡಿ ಎಂದರು.

ಸಭೆಯಲ್ಲಿ

ಮುಖಂಡರಾದ ಚನ್ನಬಸಪ್ಪ ಗೌಡ್ರು ಮಾತನಾಡಿ ಜಾತ್ರೆಗೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಹಕಾರ ನೀಡಿದ್ದು, ಕೊರೋನಾ ಮಾರ್ಗಸೂಚಿಗಳಂತೆ ಜಾತ್ರೆ ಆಚರಿಸೋಣ, ಹೊರ ಜಿಲ್ಲೆ, ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು ಅವರಿಗೆ ಎಲ್ಲಾ ವ್ಯವಸ್ಥಗಳನ್ನು ಮಾಡಿಕೊಡಬೇಕೆಂದರು, ಮಹಾನಗರ ಪಾಲಿಕೆ ಕಟ್ಟಡಗಳಿಗೆ ಸುಣ್ಣ ಬಣ್ಣ, ಉತ್ತಮ ರಸ್ಥೆ, ನೀರಿನ ವ್ಯವಸ್ಥೆ ಮಾಡಲಿ ಎಂದರು.

ಮುಖಂಡರಾದ ಶ್ರೀನಿವಾಸ್ ದಾಸ ಕರಿಯಪ್ಪ ಮಾತನಾಡಿ ಜಿಲ್ಲಾಡಳಿತದ ಆದೇಶದಂತೆ ಜಾತ್ರೆ ಮಾಡಲು ನಮ್ಮ ಸಮ್ಮತಿ ಇದೆ, ಜಾತ್ರೆ ಯಶಸ್ಸಿನಲ್ಲಿ ಪಾಲಿಕೆಯ ಪಾತ್ರ ಬಹಳಷ್ಟಿದೆ ಎಂದರು.

ಮುಖಂಡರಾದ ಸಾದಿಕ್ ಪೈಲ್ವಾನ್ ಮಾತನಾಡಿ ದಾವಣಗೆರೆಯಲ್ಲಿ ಯಾವುದೇ ಹಬ್ಬ ಜಾತ್ರೆಗಳು ಸೌಹಾರ್ದತೆಯಿಂದ ನಡೆಯುತ್ತವೆ,ನಮ್ಮಸಂಪೂರ್ಣ ಸಹಕಾರ ಇರಲಿದೆ ಎಂದರು.

ದೂಡ ಮಾಜಿ ಅಧ್ಯಕ್ಷರಾದ ಯಶವಂತ ರಾವ್ ಜಾಧವ್ ಮಾತನಾಡಿ,ಎಲ್ಲಾ ಕೋಮಿನವರೂ ಅತ್ಯಂತ ಅನ್ಯೋನ್ಯವಾಗಿ ಜಾತ್ರೆ ಆಚರಿಸುತ್ತೇವೆ, ಆದರೂ ಎಲ್ಲಾ ಕೋಮಿನಲ್ಲೂ ಕಿಡಿಗೇಡಿಗಳಿರುತ್ತಾರೆ ಅಂತಹವರಿಗೆ ಎಚ್ಚರಿಕೆ ನೀಡಿ ಎಂದರು.
ಮುಖಂಡರಾದ ಸೈಯದ್ ಚಾರ್ಲಿ ಮಾತನಾಡಿ ಎಲ್ಲಾ ಧರ್ಮದ ಹಬ್ಬಗಳೂ ಸೌಹಾರ್ದತೆಯಿಂದ ನಡೆಯಲಿ ಎಂದರು.ದೂಡ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಮಾತನಾಡಿ,ಕುರಿ ಕಾಳಗವನ್ನು ನಿಗದಿತ ದೇವರಾಜ ಅರಸು ಬಡಾವಣೆಯಲ್ಲಿಯೇ ನಡೆಸಲು ಅವಕಾಶ ನೀಡಿ ಎಂದರು.

ಮುಖಂಡರುಗಳಾದ, ಅವರಗೆರೆ ಉಮೇಶ್, ಹೆಚ್. ಮಲ್ಲೇಶ್,ಅಮಾನಲ್ಲಾ ಕಾನ್, ಹೆಗ್ಗೆರೆ ರಂಗಪ್ಪ ಮಾತನಾಡಿದರು.

ಸಭೆಯಲ್ಲಿ ಉಪ ಮಹಾಪೌರರಾದ ಗಾಯತ್ರಿ ಬಾಯಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಒ ನಾಗರಾಜು, ಡಾ. ಚಂದ್ರಶೇಖರ್ ಸುಂಕದ್, ಪೊಲೀಸ್ ಅಧಿಕಾರಿಗಳು ವಿವಿಧ ಸಮಾಜದ ಮುಖಂಡರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.

ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.

4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ ; ವಿಶ್ವನಾಥ.ಡಿ. ಅರ್

Published

on

ಸುದ್ದಿದಿನ,ಬನ್ನಿಕೋಡು:ಮಾ.ಸ.ಬ. ಕಾಲೇಜ್, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್‌.ಎಸ್‌.ಎಸ್‌. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರಂಗಸ್ವಾಮಿ ಟಿ.ಆರ್. ವಹಿಸಿ, ವಿದ್ಯಾರ್ಥಿಗಳಿಗೆ ಲಭ್ಯವಾಗಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಶೇಷ ಉಪನ್ಯಾಸದಲ್ಲಿ ಶ್ರೀ ವಿಶ್ವನಾಥ್ ಡಿ.ಆರ್., ಉಪನ್ಯಾಸಕರು ಹಾಗೂ ಪತ್ರಿಕಾ ವರದಿಗಾರರು, ಕೆ. ಬೇವಿನಹಳ್ಳಿ ಅವರು “ಸ್ವಾಮಿ ವಿವೇಕಾನಂದ ಮತ್ತು ಯುವಜನತೆ” ವಿಷಯದ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಸ್ವಾಮಿ ವಿವೇಕಾನಂದರ ಜೀವನ ಸಾಧನೆ, ವ್ಯಕ್ತಿತ್ವ ಹಾಗೂ ದೇಶಭಕ್ತಿ ಕುರಿತು ವಿವರಿಸಿ, ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಅನುಸರಿಸಿ ಉತ್ತಮ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಯುವಜನತೆ ತಮ್ಮ ಶಕ್ತಿಯನ್ನು ಸಮಾಜಸೇವೆ ಹಾಗೂ ದೇಶದ ಅಭಿವೃದ್ಧಿಗೆ ಬಳಸಬೇಕು ಎಂದು ಕರೆ ನೀಡಿದರು.

“ಎದ್ದು ನಿಲ್ಲಿ, ಜಾಗ್ರತವಾಗಿರಿ, ಗುರಿ ಸಾಧಿಸುವ ತನಕ ನಿಲ್ಲಬೇಡಿ” ಎಂಬ ಸ್ವಾಮಿ ವಿವೇಕಾನಂದರ ಅಮೂಲ್ಯ ವಾಕ್ಯವನ್ನು ಉಲ್ಲೇಖಿಸಿ, ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಗುರಿನಿಷ್ಠೆ ಬೆಳೆಸುವಂತೆ ಪ್ರೇರೇಪಿಸಿದರು.

ಶ್ರೀ ಎ. ಜಯಪ್ಪ ಅವರು ಎನ್‌.ಎಸ್‌.ಎಸ್‌. ಕಾರ್ಯಚಟುವಟಿಕೆಗಳು ಸಮಾಜಸೇವೆ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಶ್ರೀ ಪಿ.ವಿ. ಸತೀಶ್ ಅವರು ಹಳ್ಳಿ ಜೀವನದ ಮಹತ್ವ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.

ಉಪನ್ಯಾಸಕಿ ಕಾವ್ಯ ಶ್ರೀ ಅವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ಮಹಿಳೆಯರು ಶಿಕ್ಷಣ ಹಾಗೂ ಆತ್ಮವಿಶ್ವಾಸದಿಂದ ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಪಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರಾದ ವಾಗೀಶ್ ಸುದರ್ಶನ ಎಸ್.ಸಿ., ವಿಜಯ, ಹನುಮಂತಪ್ಪ ಯು., ಕೆ.ಎಸ್‌. ಬಸವರಾಜು, ಕೆ. ರೇವಣಸಿದ್ಧಪ್ಪ ಮುಂತಾದವರು ಭಾಗವಹಿಸಿದ್ದರು.

ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಹಾಗೂ ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್ ಹಾಗೂ ಉಪನ್ಯಾಸಕರಾದ ಶ್ರೀ ಶಾಂತಕುಮಾರ್ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಎರಡನೇ ದಿನದ ಶಿಬಿರವು ಮುಕ್ತಾಯಗೊಂಡಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಲೋಕಾಯುಕ್ತ ಪೋಲಿಸ್ ಇನ್ಸ್‌ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು

Published

on

ಸುದ್ದಿದಿನ,ಬನ್ನಿಕೋಡು: ಮಾ.ಸ.ಬ. ಕಾಲೇಜು, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್‌.ಎಸ್‌.ಎಸ್‌. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಅಧ್ಯಕ್ಷತೆಯನ್ನು ಮಾ.ಸ.ಬ. ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಎ.ಬಿ. ವಹಿಸಿದ್ದರು.

ಮುಖ್ಯ ಉಪನ್ಯಾಸಕರಾಗಿ ಕರ್ನಾಟಕ ಲೋಕಾಯುಕ್ತ, ದಾವಣಗೆರೆ ಇವರ ಪೋಲಿಸ್ ಇನ್ಸ್‌ಪೆಕ್ಟರ್ ಶ್ರೀ ಪ್ರಭು ಬಿ. ಸೂರಿನ ಭಾಗವಹಿಸಿ “ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ” ಕುರಿತು ಸಮಗ್ರ ಮಾಹಿತಿ ನೀಡಿದರು. ಕರ್ನಾಟಕ ಲೋಕಾಯುಕ್ತದ ಸ್ಥಾಪನೆ ಮತ್ತು ಹಿನ್ನೆಲೆ, ಸಂಸ್ಥೆಯ ವ್ಯಾಪ್ತಿ, ದೂರು ಸಲ್ಲಿಸುವ ವಿಧಾನ, ವಿಚಾರಣೆ ಕ್ರಮ, ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಮುಖ ಅಂಶಗಳು, ಲೋಕಾಯುಕ್ತ ಸಂಸ್ಥೆಯ ವೈಶಿಷ್ಟ್ಯತೆಗಳು, ಹಗರಣಗಳ ತನಿಖಾ ವಿಧಾನ ಹಾಗೂ ಸರ್ಕಾರಿ ಹಣದ ದುರುಪಯೋಗ ತಡೆ ಕ್ರಮಗಳ ಬಗ್ಗೆ ವಿವರಿಸಿದರು. ಉಪನ್ಯಾಸದ ಅಂತ್ಯದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ಹೆಚ್.ಆರ್. ತಿಪ್ಪೇಸ್ವಾಮಿ ಅವರು ಯುವಜನತೆ ಹಾಗೂ ಸಾಮಾಜಿಕ ಸಾಮರಸ್ಯ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.

ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಮತ್ತು ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್, ಗ್ರಾಮದವರಾದ ಬಸವರಾಜ್, ಹಾಲಪ್ಪ, ಮಹದೇವಪ್ಪ, ಕುರಿಯರ್ ದುರುಗಪ್ಪ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕಾನೂನು ಜಾಗೃತಿ ಹಾಗೂ ಭ್ರಷ್ಟಾಚಾರ ವಿರೋಧಿ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending