Connect with us

ಅಂತರಂಗ

ಅರಿಮೆಯ ಅರಿವಿರಲಿ-13 : ಸಹವಾಸಿ ಉಪವಾಸಿ

Published

on

  • ಯೋಗೇಶ್ ಮಾಸ್ಟರ್

ತಂದೆ ಮಗಳನ್ನು ಒಬ್ಬಳೇ ಎಲ್ಲಿಗೂ ಹೋಗಲು ಬಿಡರು. ಎಲ್ಲಿಂದಾದರೂ ಇನ್ನೂ ಬಂದಿಲ್ಲವೆಂದರೆ ಫೋನಿನ ಮೇಲೆ ಫೋನ್ ಮಾಡುತ್ತಲೇ ಕೇಳುವರು. ಎಲ್ಲಿದ್ದೀಯಾ? ಏನು ಮಾಡ್ತಿದ್ದೀಯಾ? ಹುಷಾರಾಗಿದ್ದೀಯಾ ತಾನೇ? ನಾನೇನಾದರೂ ಅಲ್ಲಿಗೆ ಬರಬೇಕಾ? ಅಲ್ಲಿಯೇ ಯಾರಿಗಾದರೂ ಫೋನ್ ಮಾಡ್ಲಾ?; ಇತ್ಯಾದಿ. “ಇಲ್ಲಪ್ಪಾ ಬರ್ತಿದ್ದೀನಿ. ಇನ್ನು ಒಂದರ್ಧ ಗಂಟೆ” ಎಂದು ಮಗಳು ಹೇಳಿದರೆ, ಸರಿಯಾಗಿ ಅರ್ಧಗಂಟೆಗೆ ಫೋನ್ ಮಾಡುತ್ತಾರೆ “ಎಲ್ಲಿದ್ದೀಯಾ?” ಅಂತ.

“ಇತ್ತೀಚೆಗೆ ನೀನು ಸೊರಗ್ತಾ ಇದ್ದೀಯಾ. ಕಣ್ತುಂಬ ನಿದ್ರೆ ಮಾಡಲ್ಲ. ಹೊಟ್ಟೆ ತುಂಬಾ ಊಟ ಮಾಡಲ್ಲ” ಎಂದು ರಾತ್ರಿ ಎಚ್ಚರವಿರುವ ಮಗಳನ್ನು ಪದೇ ಪದೇ ಮಲಗಿಸಲು ಯತ್ನಿಸುವ, ಊಟದ ಸಮಯಕ್ಕೆ ಸರಿಯಾಗಿ ಮತ್ತೆ ಮತ್ತೆ ಊಟ ಮಾಡೆಂದು ನೆನಪಿಸುವ, ಇಷ್ಟು ಸಾಲದು ಮತ್ತಷ್ಟು ತಿನ್ನು ಎಂದು ಬಲವಂತ ಮಾಡುವ ತಂದೆ ತಾಯಿ ಅಥವಾ ಇನ್ನಿತರು ಯಾರೇ ಆಗಲಿ, ಅವರು ಕಾಳಜಿ ವಹಿಸುತ್ತಿದ್ದೇವೆ ಎಂದುಕೊಂಡಿದ್ದರೂ ಆ ಬಗೆಯ ಪೋಷಣೆ ಪಡೆಯುತ್ತಿರುವವರಿಗೆ ತಾವು ಶೋಷಣೆಗೆ ಒಳಗಾಗಿದ್ದೇವೆ ಎಂಬಂತೆ ಕಷ್ಟಪಡುತ್ತಿರುತ್ತಾರೆ. ತಾವು ಅವರ ಅತಿಕಾಳಜಿಯ ಬಂಧನದಲ್ಲಿ ಇದ್ದೇವೆ ಎಂದು ಭಾಸವಾಗುತ್ತಿರುತ್ತದೆ.

ಪ್ರತಿಯೊಂದಕ್ಕೆ ಕಾಳಜಿ ವಹಿಸುತ್ತಿರುವ ಭಾವ ಅವರಲ್ಲಿ. ಪ್ರತಿಯೊಂದಕ್ಕೂ ಮೂಗು ತೂರಿಸುತ್ತಾರೆ ಎಂಬ ಭಾವ ಇವರಲ್ಲಿ. ನನ್ನ ಪಾಡಿಗೆ ನನ್ನ ಬಿಡು. ನಾನು ಮಾಡಿಕೊಳ್ಳುತ್ತೇನೆ ಎಂದರೂ ಬಿಡದೇ ನಿನಗೆ ಗೊತ್ತಾಗಲ್ಲ ಎನ್ನುವ ಅವರಿಂದ ತಮ್ಮ ಸ್ವಾತಂತ್ರ್ಯದ ಹರಣವಾಗುತ್ತಿದೆ, ಮುಕ್ತವಾಗಿ ಉಸಿರಾಡಲೂ ಆಗದು ಎಂದು ಇವರು ಚಡಪಡಿಸುತ್ತಿರುತ್ತಾರೆ. ಬಹಳ ಮುಖ್ಯವಾಗಿ ಅವರ ಸಂಬಂಧವು ಕಿರಿಕಿರಿಯನ್ನುಂಟು ಮಾಡುತ್ತಿರುತ್ತದೆ. ಸಾಲದಕ್ಕೆ ಇದನ್ನು ದೂರಲೂ ಆಗದು. ಏಕೆಂದರೆ ನೋಡುಗರ ಕಣ್ಣಿಗೆ ಇತು ಕಾಳಜಿ ಮತ್ತು ತಮ್ಮವರ ಸುರಕ್ಷತೆಯ ಬಗ್ಗೆ ಇರುವ ಆತಂಕವಾಗಿಯಷ್ಟೇ ಕಾಣುತ್ತದೆ. ಮಕ್ಕಳಿದ್ದಾಗಲೇ ಕೆಲವು ಪೋಷಕರು ಇದನ್ನು ರೂಢಿಸಿಕೊಂಡುಬಿಟ್ಟಿರುತ್ತಾರೆ. ಅದರಲ್ಲೂ ಕೆಲವು ಒಂಟಿ ಪೋಷಕರಲ್ಲಿ ಈ ಮನಸ್ಥಿತಿ ಹೆಚ್ಚು.

“ನನಗಿರುವುದು ನೀನಷ್ಟೇ. ನಿನಗೇನಾದರೂ ಹೆಚ್ಚೂ ಕಡಿಮೆಯಾದರೆ ಆದರೆ ನಾನು ಎಲ್ಲಿಗೆ ಹೋಗಲಿ?” ಎನ್ನುತ್ತಾರೆ. ಇಲ್ಲಿಗೆ ಬಂತು ವಿಷಯ. ಅಂದರೆ ನಿನ್ನ ಮೇಲಿನ ಅತಿಕಾಳಜಿಯು ತನ್ನಾತ್ಮದ ಭಯಕ್ಕೆ. ತಾನೆಲ್ಲಿ ಒಂಟಿಯಾಗುವೆನೋ ಎಂಬ ಆತಂಕಕ್ಕೆ. ಇದಕ್ಕೆ      Codependency ಎನ್ನುತ್ತಾರೆ. ಸಹಾವಲಂಬನ ಎಂದು ಪದವನ್ನೊಂದನ್ನು ಬಳಸಿಕೊಳ್ಳಬಹುದು.

ಸಹಾವಲಂಬನಕ್ಕೆ ಸಮಾಜದ ಸಹಮತ

ಸಹಾವಲಂಬನವೂ ಕೂಡಾ ಆತ್ಮರತಿಯ ಮತ್ತೊಂದು ಮಗ್ಗುಲೇ. ತಮ್ಮ ಮಿತಿಮೀರುವ ಅಥವಾ ಅತಿ ಎನಿಸುವ ಕಾಳಜಿಯಿಂದ ಅವರಿಗೆ ಕಿರಿಕಿರಿಯಾಗುತ್ತಿದೆ ಅಥವಾ ಒತ್ತಡವುಂಟಾಗುತ್ತಿದೆ ಅಥವಾ ಸ್ವಾತಂತ್ರ್ಯಹರಣವಾಗುತ್ತಿದೆ ಎಂದೇನೂ ಆಲೋಚಿಸುವುದೇ ಇಲ್ಲ. ಸಮಾಜವೂ ಕೂಡಾ ಇದಕ್ಕೆ ವಿರೋಧಿಸದು. ಒಂಟಿ ತಾಯೊಬ್ಬಳು ತನ್ನ ಮಗನ ಮೇಲೆ ಅತೀವ ಕಾಳಜಿ ತೋರುವಾಗ, ಅದು ಸಹಜ ಎನ್ನುತ್ತದೆ ಸಮಾಜ. ಮಗನು ತನ್ನ ಸ್ವಾತಂತ್ರ್ಯಕ್ಕೆ, ನನ್ನ ಆಸಕ್ತಿಯ ಚಟುವಟಿಕೆಗಳಿಗೆ ನಮ್ಮಮ್ಮನ ಈ ಸಹಾವಲಂಬನ ತೊಂದರೆಯಾಗುತ್ತಿದೆ ಎಂದರೆ, “ಪಾಪ ನಿನ್ನ ತಾಯಿ ನಿನಗಾಗಿ ಎಷ್ಟು ಕಷ್ಟಪಡುತ್ತಿದ್ದಾಳೆ. ಅವಳಿಗೆ ನೀನಲ್ಲದೇ ಇನ್ನಾರು? ನಿನಗಾಗಿ ಅವಳು ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾಳೆ. ನಿನಗಾಗಿ ಬೇರೆ ಮದುವೆಯಾಗದೇ ತನ್ನ ಸುಖವನ್ನು ತ್ಯಾಗ ಮಾಡಿದ್ದಾಳೆ. ನೀನು ಅವಳ ತ್ಯಾಗಕ್ಕೆ ಬೆಲೆ ಕೊಡಬೇಕು. ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವಳು ಒಂದು ವೇಳೆ ನಿನಗೆ ತೊಂದರೆ ಕೊಟ್ಟರೂ ಸಹಿಸಿಕೊಳ್ಳಬೇಕು. ಅಂತದ್ದರಲ್ಲಿ, ಅವಳು ಕಾಳಜಿ ತೋರಿಸುವುದು ನಿನಗೆ ಹಿಂಸೆ ಎನ್ನುತ್ತೀಯಲ್ಲಾ? ಮಗು ಹುಟ್ಟಿದಾಗಲೇ ತೊಟ್ಟಿಗೆ ಬಿಟ್ಟು ಓಡಿಹೋಗಿ ಅನಾಥರಾಗಿರುವ ಜನರಿದ್ದಾರೆ ಈ ಲೋಕದಲ್ಲಿ….” ಹೀಗೆ, ಒಂದೆರಡಲ್ಲ,

ಸಾಲುಸಾಲಾಗಿ ತಾಯಿ ದೇವರ ಸ್ತುತಿಗೀತೆಗಳನ್ನು ಸಮಾಜವು ಸಮೂಹಗಾನದಲ್ಲಿ ಹಾಡುತ್ತಿರುತ್ತದೆ.
ತ್ಯಾಗ! ಯಾರು ಕೇಳಿದರು ಅವಳು ಮಾಡುವುದಕ್ಕೆ? ಇದು ಅವನ ಮನಸ್ಸಿನಲ್ಲಿ ಬರುವ ಪ್ರಶ್ನೆ. ಅವನಿಗೆ ಅನ್ನಿಸುವುದೇನೆಂದರೆ, ಒಂದು ವೇಳೆ ತಾನು ಅನಾಥನಾಗಿದ್ದರೇನೇ ಚೆನ್ನಾಗಿರುತ್ತಿತ್ತು. ಅದೊಂದು ಮುಕ್ತ ಮತ್ತು ಸ್ವಚ್ಛಂದ ಜೀವನ. ದಿನದಿನಕ್ಕೂ ಥ್ರಿಲ್ ಕೊಡುವ ಸಾಹಸದ ಬದುಕು. ಸ್ವತಂತ್ರವಾಗಿ ಯಾರ ಬಂಧನವೂ ಇಲ್ಲದೇ ಇರಬಹುದಾಗಿತ್ತು ಎಂದು ಈ ಸಂದರ್ಭಕ್ಕೆ ಅನ್ನಿಸುತ್ತದೆ.

ಒಂದು ವೇಳೆ ಅನಾಥನಾಗಿದ್ದರೆ ತಂದೆ ತಾಯಿ ಇರುವ ಮಗುವನ್ನು ನೋಡಿ ತನಗೆ ಹಾಗಿರಬೇಕಿತ್ತು, ಕನಿಷ್ಟಪಕ್ಷ ಒಂಟಿ ಪೋಷಕರಾದರೂ ಇರಬೇಕಿತ್ತು ಎಂದು ಅನಿಸಬಹುದು. ಅದು ಬೇರೆ. ಆದರೆ, ಸಹಾವಲಂಬನದ ಪೋಷಕರು ಮಕ್ಕಳಿಗೆ ತಾವು ಅನಾಥರಾಗಿದ್ದರೇನೇ ಚೆನ್ನಾಗಿರುತ್ತಿತ್ತು ಎಂಬ ಭಾವ ಮೂಡಿಸುವಷ್ಟು ಅತೀವ ಕಾಳಜಿ ತೋರುವುದಂತೂ ಸುಳ್ಳಲ್ಲ.

ಬಾಯಿ ನುಡಿವುದು ಕೈ ನಡೆಯದು

ಸಹಾವಲಂಬನದ ಆತ್ಮರತಿ ಆತ್ಮೀಯ ಸಂಬಂಧಗಳಲ್ಲಿ, ಆಪ್ತವಲಯಗಳಲ್ಲಿ, ಕುಟುಂಬಗಳಲ್ಲಿ ಈ ಬಗೆ ನೋಡಿದರೆ, ಹುಸಿ ಕಾಳಜಿಯ ಸ್ವಾರ್ಥಪರರು ಕೂಡಾ ಇರುತ್ತಾರೆ. ಅವರದೇನಪ್ಪಾ ಲಕ್ಷಣ ಅಂದರೆ, ನಿಮಗೇನೋ ಒಂದು ಸಮಸ್ಯೆಯಾಗಿದೆ. ಕೂಡಲೇ ಪ್ರತಿಕ್ರಿಯಿಸುತ್ತಾರೆ. ಏನೂ ಕೊಡುವುದಿಲ್ಲ. ಆದರೆ ಅತೀವ ಕಾಳಜಿ ತೋರುತ್ತಾರೆ. ಜ್ವರ ಬಂದಿದೆ ಎಂದರೆ, ಹಾಗೆ ಎಚ್ಚರವಹಿಸು, ಹೀಗೆ ಡಾಕ್ಟರ್ ಬಳಿಗೆ ಹೋಗು, ಇಂಥಾ ಆಹಾರವನ್ನು ತಿನ್ನು ಎಂದೆಲ್ಲಾ ಒತ್ತಾಯ ಮಾಡುತ್ತಾರೆ. ಆದರೆ ತಮ್ಮ ಬಳಿ ಇರುವ ಕಿಂಚಿತ್ತೂ ಹಂಚಿಕೊಳ್ಳುವುದಿಲ್ಲ. ಅವರ ಬಾಯಿಯ ತುಂಬಾ ಕಾರುಣ್ಯ ಕಟ್ಟೆಯೊಡೆದು ಬರುತ್ತಿರುತ್ತದೆ. ಕೊಡುವುದಕ್ಕೆ ಮಾತ್ರ ಕೈ ಮುಂದಾಗದು.

ನಿನ್ನ ಕಷ್ಟಕ್ಕೆ ಮರುಗುತ್ತಾರೆ. ನಿನ್ನ ಸಾಹಸ ಮತ್ತು ಹೋರಾಟಕ್ಕೆ ನೈತಿಕ ಬೆಂಬಲ ನೀಡುತ್ತಾರೆ. ಆದರೆ ಒಂದು ಪೈಸೆ ಕೊಟ್ಟುಬಿಡಲಿ ನೋಡೋಣ! ಅವರ ಹತ್ತಿರ ಇರುವುದಿಲ್ಲ ಎಂದಲ್ಲ. ಇರುವಷ್ಟರಲ್ಲಿ ಹಂಚಿಕೊಳ್ಳುವುದಿಲ್ಲ.ನಿನ್ನನ್ನು ವಿರೋಧಿಸುವುದಿಲ್ಲ. ನಿನ್ನ ಬಗ್ಗೆ ಕಾಳಜಿ ಇದೆ. ನಿನ್ನ ಬಗ್ಗೆ ಅತೀವ ಪ್ರೀತಿ ಇದೆ; ಎಂದೆಲ್ಲಾ ತೋರ್ಪಡಿಸುತ್ತಾ ತನ್ನ ಆತ್ಮರತಿಯ ಅರಿಮೆಯ ಹಸಿವನ್ನು ನೀನೊದಗಿಸುವ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಉಣಬಡಿಸಿಕೊಂಡು ತೃಪ್ತರಾಗುತ್ತಾರೆ. ಹುಸಿಕಾಳಜಿಯ ಪ್ರದರ್ಶನದ ಸಮಸ್ಯೆ.

ಬಸವಣ್ಣನವರು ಇಂತಹ ಕಾಂಪ್ಲೆಕ್ಸ್ ಇರುವವರ ಬಗ್ಗೆ ಬಲೇ ಸೊಗಸಾಗಿ ಹೇಳಿದ್ದಾರೆ. “ಹಸಿದು ಬಂದ ಗಂಡಂಗೆ ಉಣಲಿಕ್ಕದೆ, ಬಡವಾದನೆಂದು ಮರುಗುವ ಸತಿಯ ಸ್ನೇಹದಂತೆ ಬಂದುದನರಿಯಳು, ಇದ್ದುದ ಸವಸಳು.” ಬಸವಣ್ಣನವರೂ ಕೂಡಾ ಹುಸಿಕಾಳಜಿಯ ಪ್ರದರ್ಶನದ ಸಮಸ್ಯೆ ಇರುವ ಸತಿಗೆ ವಿಷಯವನರಿಯಳು ಎಂದು ಒಪ್ಪುತ್ತಾರೆ.

ಹೌದು, ಅವರು ಬೇಕೆಂದೇ ಜಿಪುಣತನವನ್ನು ಮಾಡುವುದಲ್ಲ. ಅವರಿಗೆ ಇರುವ ಈ ಅರಿಮೆಯಿಂದ ಅವರಿಗೆ ತಮ್ಮ ವರ್ತನೆಯ ರೀತಿಯೇ ಅರ್ಥವಾಗುವುದಿಲ್ಲ. ಅಲ್ಲಿದೆ ಸಮಸ್ಯೆ. ಈ ಸಮಸ್ಯೆಯನ್ನು ಕಂಡುಕೊಂಡರೆ ಅದರ ಪರಿಹಾರಕ್ಕೆ ಖಲೀಲ್ ಗಿಬ್ರಾನ್ ತಮ್ಮ ಪ್ರಾಫೆಟ್ ಪುಸ್ತಕದ ದುಡಿಮೆಯ ಅಧ್ಯಾಯದಲ್ಲಿ ಒಂದು ಸೂತ್ರ ಹೇಳಿಕೊಡುತ್ತಾರೆ. “ಕೆಲಸ ಪ್ರೇಮದ ಸಾಕಾರ ಮೂರ್ತಿ” ಹೌದು, ನೀವು ಯಾರ ಬಗ್ಗೆಯಾದರೂ, ಯಾವುದರ ಕುರಿತಾದರೂ ಪ್ರೇಮವನ್ನು ಹೊಂದಿದ್ದರೆ, ಅದನ್ನು ಕೆಲಸ ಮಾಡುವ ಮೂಲಕ ಪ್ರಕಟಿಸಬೇಕು.

ಪ್ರೇಮವು ಅಮೂರ್ತವಾದದ್ದು. ಕಣ್ಣಿಗೆ ಕಾಣದ್ದು. ಬರಿಯ ಬಾಯಿ ಮಾತಲ್ಲಿ ನಾನು ನಿನ್ನೊಂದಿಗಿದ್ದೇನೆ, ನಾನು ನಿನ್ನ ಪ್ರೀತಿಸುತ್ತೇನೆ ಇತ್ಯಾದಿಗಳನ್ನೆಲ್ಲಾ ಹೇಳಿದರೆ ವಾಸ್ತವದಲ್ಲಿ ಏನೂ ಪ್ರಯೋಜನವಿಲ್ಲ. ತತ್ಕಾಲಕ್ಕೆ ಧೈರ್ಯವುಂಟಾದರೂ ಪ್ರಾಯೋಗಿಕವಾಗಿ ಏನೂ ಪ್ರಯೋಜನವಾಗದೇ, ಈ ಮಾತುಗಳು, ನೈತಿಕ ಧೈರ್ಯಗಳೆಲ್ಲಾ ಪೊಳ್ಳು ಸುಳ್ಳು ಎನಿಸುತ್ತದೆ. ಹಾಗಾಗಿ, ತಮ್ಮ ಸಹವಾಸದಲ್ಲಿರುವವರಿಗೆ ತಮ್ಮ ಅಮೂರ್ತವಾಗಿರುವ ಪ್ರೇಮವನ್ನು ನಮ್ಮ ಕೆಲಸದ ಮೂಲಕ, ಕಷ್ಟ ಎಂದರೆ ಕೊಡುವುದರ ಮೂಲಕ, ಒಂಟಿಯಾಗಿ ಎದುರಿಸುವವರ ಜೊತೆಗೆ ಸೇರಿಕೊಳ್ಳುವುದರ ಮೂಲಕ ಪ್ರಕಟಿಸಬೇಕು.

ಇಲ್ಲವೆಂದರೆ ಅನುಕಂಪದ ಮಾತುಗಳು, ನೈತಿಕ ಬೆಂಬಲ, ನಾವು ನಿಮ್ಮ ಜೊತೆಗೆ ಇದ್ದೇವೆ ಎಂಬಂತಹ ಮಾತುಗಳೆಲ್ಲಾ ಅರ್ಥ ಕಳೆದುಕೊಂಡು ಹುಸಿಕಾಳಜಿ ಪ್ರದರ್ಶನದ ವಿಭಾಗಕ್ಕೆ ಬಂದು ಬೀಳುತ್ತವೆ.
ನಮ್ಮ ಸಹವಾಸದಲ್ಲಿ ಇಲ್ಲದೇ ಬೇರೆಲ್ಲೋ ಇದ್ದಾರೆ, ಅವರನ್ನು ನಾವು ಭೌತಿಕವಾಗಿ ಸಂಧಿಸಲು ಸಾಧ್ಯವಿಲ್ಲವೆಂದರೆ ಅದು ಬೇರೆ ಮಾತು. ಆದರೆ ಅಷ್ಟು ದೂರದಲ್ಲಿರುವರು ಎಂಬಂತೆ ಸಹವಾಸಿಗಳನ್ನು ಉಪವಾಸಿಗಳನ್ನಾಗಿಸುವುದು ಬಸವಣ್ಣನವರು ಗುರುತಿಸಿರುವ ಸತಿಯ ಸ್ನೇಹದಂತೆ.

ಬಹಳ ಮುಖ್ಯವಾಗಿ ಮಕ್ಕಳಿಗೆ ಪ್ರಾರಂಭದಿಂದಲೇ ಇದನ್ನು ರೂಢಿ ಮಾಡಿಸಬೇಕು. ಅವರು ತಾವು ಯಾವುದರಲ್ಲಿ ಆಸಕ್ತಿಯನ್ನು ತೋರುತ್ತಾರೋ, ಒಲವನ್ನು ತೋರುತ್ತಾರೋ ಅದಕ್ಕೆ ಅವರು ಕೆಲಸ ಮಾಡಬೇಕು. ಈ ರೂಢಿ ಬಾಲ್ಯದಿಂದಲೇ ಆದರೆ ಈ ಅರಿಮೆಯನ್ನೇ ಹೊಂದುವುದಿಲ್ಲ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending