ಅಂತರಂಗ
ಅರಿಮೆಯ ಅರಿವಿರಲಿ-12 : ಶವಮುಖದ ಶೃಂಗಾರ

- ಯೋಗೇಶ್ ಮಾಸ್ಟರ್
ಆತ್ಮರತಿಯು ಪ್ರೇಮವನ್ನು ಕೊಲ್ಲುತ್ತದೆ.ಆತ್ಮರತಿಯ ಆಳವಾದ ಅರಿಮೆಯ ಪ್ರಬಲವಾದ ಪ್ರಕಟಣೆಯೇ ಅಹಂಕಾರ. ನಮಗೆ ಸವಾಲೊಡ್ಡುವ ಒಬ್ಬನ ಅಹಂಕಾರವನ್ನು ಗುರುತಿಸುವ ಭರಾಟೆಯಲ್ಲಿ ನಮ್ಮ ಆತ್ಮರತಿಯ ಅರಿಮೆಯು ಹೊಂದಿರುವ ಉತ್ಕಟವಾದ ಇಚ್ಛೆಯು ನಮ್ಮ ಅಹಂಕಾರವನ್ನು ಝಳಪಿಸುತ್ತದೆ. ಎರಡು ಅಹಂಕಾರಗಳ ಖಡ್ಗಗಳ ಕಾಳಗದಲ್ಲಿ ಪ್ರೇಮ ಸಾಯುತ್ತದೆ. ವಾತ್ಸಲ್ಯ ಸಾಯುತ್ತದೆ. ಸೌಹಾರ್ಧ ಧೂಳೀಪಟವಾಗುತ್ತದೆ.
ನನಗೆ ಅವನ ಅಹಂಕಾರ ಕಾಣುತ್ತದೆ ಎಂದರೆ, ಅವನ ಅಹಂಕಾರವನ್ನು ಖಂಡಿಸುತ್ತಿದ್ದೇನೆಂದರೆ, ಅವನ ಅಹಂಕಾರಕ್ಕೆ ಮಣಿಯಲು ನಾನು ಒಪ್ಪದೇ ನಾನೂ ಸವಾಲೆಸೆಯುತ್ತಿದ್ದೇನೆಂದರೆ, ಹೌದು, ನನ್ನಲ್ಲಿರುವ ಆತ್ಮರತಿಯ ಅರಿಮೆಯು ತನ್ನ ಪ್ರಕಟಣೆಯಾದ ಅಹಂಕಾರವನ್ನು ವಿಜೃಂಭಿಸುತ್ತಿದೆ.
ಒಬ್ಬ ಕಳ್ಳನ ಲಕ್ಷಣಗಳನ್ನು ಮತ್ತೊಬ್ಬ ಕಳ್ಳ ಬಲ್ಲ. ಇಲ್ಲೂ ಚೌಕಾಸಿ ಮಾಡಿಕೊಳ್ಳಬಹುದು. ನನ್ನದನ್ನು ಅಹಂಕಾರ ಎಂದು ಒಪ್ಪಿಕೊಂಡರೂ ಅವನದನ್ನು ದುರಹಂಕಾರ ಎನ್ನುತ್ತೇನೆ. ಇದು ಆತ್ಮರತಿ ಅರಿಮೆಯ ಪಟ್ಟುಗಳು.
ಪ್ರಬಲವಾದ ಅಥವಾ ಉತ್ಕಟವಾದ ವಾಂಛೆ, ಒಳಗಿರುವ ಬಯಕೆಯೊಂದಿಗೆ ಆತ್ಮರತಿಯ ನಂಟು. ಆತ್ಮರತಿಗೆ ಎರಡು ಅಲುಗಿನ ಕತ್ತಿಯನ್ನು ಬಳಸಲು ಗೊತ್ತುಂಟು.
ಒಳಗಿರುವ ಕಾಮುಕನ ತಣಿಸಲು ಪ್ರೇಮವನ್ನು ತೋರಬಹುದು ಅಥವಾ ಅತ್ಯಾಚಾರವನ್ನೂ ಮಾಡಬಹುದು. ಆತ್ಮರತಿಯೂ ಹಾಗೆ. ತನ್ನೊಳಗಿನ ಆಸೆಯನ್ನು ತಣಿಸಿಕೊಳ್ಳಲು ವಿನಯವಾಗಿ ಪರೋಪಕಾರಿಯೂ ಆಗಬಹುದು, ಅಹಂಕಾರಿಯೂ ಆಗಬಹುದು. ಆತ್ಮಕ್ಕೆ ರತಿಯೇ ಮುಖ್ಯ. ಈ ಅರಿಮೆಗೆ ತಾನು ಯಾರನ್ನು ಹೊಕ್ಕಿದೆಯೋ ಅವನ ಮೂಲಕ ತಾನು ತೃಪ್ತವಾಗಬೇಕಷ್ಟೇ.
ಯಾರೋ ಒಬ್ಬರ ತಾಳಕ್ಕೆ ಕುಣಿಯುವ ಮೂಲಕವೂ ಆತ್ಮರತಿಯು ತಾನು ಸುಖವನ್ನು ಪಡುತ್ತದೆ. ಅದಕ್ಕೆ ತಾನು ತೃಪ್ತವಾಗಬೇಕು. ಆತ್ಮರತಿಯರಿಮೆಯು ಪ್ರೇಮದ ಮುಖವಾಡವನ್ನು ತೊಟ್ಟಿರುವ ಅತ್ಯಾಚಾರಿಯೂ ಆಗಿರಬಹುದು. ಆದರೆ ಅತ್ಯಾಚಾರಿಯನ್ನು ನೀವು ಎನ್ಕೌಂಟರ್ ಮಾಡುವಿರಿ. ಪ್ರೇಮಿಯನ್ನು ಅಲ್ಲ. ಅಷ್ಟೇಕೆ, ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿ ಸಂತ್ರಸ್ತೆಗೆ ನ್ಯಾಯವೊದಗಿಸುವ ಗನ್ನುಗಳನ್ನು ಹಿಡಿದಿರುವ ಕೈಗಳೂ ಆತ್ಮರತಿಯ ಕೈಗೊಂಬೆಗಳೇ. ಆತ್ಮರತಿಗೆ ಇಲ್ಲಿ ನ್ಯಾಯವೊದಗಿಸುವ ನೆಪ ಬೇಕಿತ್ತು.
ಹೊನ್ನಶೂಲದ ಅರಿವಾದೊಡೆ
ಅರಿಮೆಯು ಪ್ರಲೋಭನೆಗೆ ಒಡ್ಡುತ್ತಿರುವ ಪ್ರದರ್ಶನದ ಯಾವುದೇ ಇಚ್ಛೆಯನ್ನು ನಮ್ಮ ಅರಿವು ನಿರಾಕರಿಸಲು ಪ್ರಾರಂಭಿಸಿದ ಗಳಿಗೆಯಿಂದಲೇ ಆತ್ಮರತಿಯ ಅವನತಿ ಆರಂಭವಾಗುತ್ತದೆ. ಬಸವಣ್ಣನವರು ಫ್ರಾಯ್ಡ್‍ನ ನಾರ್ಸಿಸಂನ ಹೆಸರೆತ್ತದೇ ಆತ್ಮರತಿಯರಿಮೆಗೆ ಆಹಾರವೊದಗಿಸದಿರಲು ಅರಿವನ್ನು ಹೊಂದಿದ್ದರು. “ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ, ಹೊಗಳಿ” ಎಂದು ನೋಯುವ ಅವರು “ಅಯ್ಯೋ ನೊಂದೆನು, ಸೈರಿಸಲಾರೆನು” ಎಂದು ಅವರ ಅರಿವು ಅರಿಮೆಯೊಂದಿಗೆ ಸಂಘರ್ಷಕ್ಕಿಳಿಯುತ್ತದೆ. ಕೂಡಲ ಸಂಗನ ಎಚ್ಚರಿಸುತ್ತಾರೆ “ನೀನೆನಗೆ ಒಳ್ಳಿದನಾದಡೆ ಎನ್ನ ಹೊಗಳತೆಗಡ್ಡ ಬಾರ, ಧರ್ಮೀ” ಎಂದು. ನಮ್ಮನ್ನು ಅರಿಮೆಯಿಂದ ಕಾಪಾಡಿಕೊಳ್ಳಲು ನಾವು ಮೊರೆಹೋಗಬೇಕಾಗಿರುವುದು ಅರಿವಿಗೇ.
ಬಸವಣ್ಣನವರ ಅರಿವು ಮತ್ತು ಅರಿಮೆಯ ಸಂಘರ್ಷದಲ್ಲಿ ಪ್ರಾಮಾಣಿಕವಾಗಿ ಅವರ ಪ್ರಕಟಣೆಯಲ್ಲಿ ಏನೆನ್ನುವರು ನೋಡಿ. “ಎನ್ನವರೆನಗೊಲಿದು ಹೊನ್ನಸೂಲವನಿಕ್ಕಿದರಯ್ಯಾ, ಅಹಂಕಾರಪೂರಾಯ ಘಾಯದಲ್ಲಿ ಆನೆಂತು ಬದುಕುವೆನೆಂತು ಜೀವಿಸುವೆ?”
ನಿಜ, ಆತ್ಮರತಿಯರಿಮೆಯ ತೃಪ್ತಿಗೆ ತನ್ನನ್ನು ಒಪ್ಪಿಸಿಕೊಂಡುಬಿಟ್ಟರೆ, ಅಹಂಕಾರವು ವಿಜೃಂಭಿಸುತ್ತಾ ತನ್ನತನದ ಜೀವತ್ವವನ್ನು ಕಳೆದುಕೊಂಡು ಸಾಯಬೇಕಾಗುತ್ತದೆ. ಇನ್ನುಳಿದಂತೆ ಪಡೆವ ಗೌರವ ಮತ್ತು ವೈಭವಗಳೆಲ್ಲಾ ಶವಕ್ಕೆ ಮಾಡಿರುವ ಶೃಂಗಾರ.
ಶೂಲಕ್ಕಿರುವ ಅಲುಗುಗಳು.
ಮನಶಾಸ್ತ್ರಜ್ಞರು ಈ ಆತ್ಮರತಿಯರಿಮೆಯನ್ನು ಚಿಕಿತ್ಸೆ ನೀಡುವ ಸಲುವಾಗಿ ಗುರುತಿಸಲು ವಿಧಾನವೊಂದನ್ನು ಕೈಗೆತ್ತಿಕೊಳ್ಳುತ್ತಾರೆ. ಅದಕ್ಕೆ
The Narcissistic Personality Inventory (NPI) ಎಂದು ಹೆಸರಿಸುತ್ತಾರೆ. ಈ ಆತ್ಮರತಿಯರಿಮೆಗೆ ಯಾಕಿಷ್ಟು ತಲೆಕೆಡಿಸಿಕೊಳ್ಳಬೇಕೆಂದರೆ, ಇನ್ನು ನೀವು ಮುಂದೆ ಓದಲಿರುವ ಅನೇಕಾನೇಕ ಅರಿಮೆಗಳಿಗೆ ಇದು ತಾಯಿಯಂತೆ ಕಾಣುತ್ತದೆ. ಅನೇಕಾನೇಕ ಮಾನಸಿಕ ಸಮಸ್ಯೆಗಳಿಗೆ, ಗೀಳುಗಳಿಗೆ, ವ್ಯಸನಗಳಿಗೆ ಜನ್ಮ ಕೊಡುತ್ತದೆ. ಹಾಗಾಗಿಯೇ ಬುಡಮೂಲ ಚಿಕಿತ್ಸೆಯನ್ನು ಕೊಡಬೇಕೆಂದೋ ಅಥವಾ ಪಡೆಯಬೇಕೆಂದೋ ಬಯಸುವವರು ಈ ಆತ್ಮರತಿಯ ಅರಿಮೆಯನ್ನು ಅರಿತುಕೊಳ್ಳಲೇ ಬೇಕು.
ಇದು ಯಾವ್ಯಾವ ಆಯಾಮಗಳಲ್ಲಿ ಪ್ರಕಟಗೊಳ್ಳುತ್ತದೆ ಎಂದರೆ ಎಣಿಸಲಸದಳ. ಸಮಾಜಘಾತುಕನಾಗಿ, ಶೋಷಕನಾಗಿ, ಮೋಸಗಾರನಾಗಿ, ವಂಚಕನಾಗಿ ವ್ಯಕ್ತಿಯು ವರ್ತಿಸಬಹುದು. ಕಿಲಾಡಿಯಾಗಿ, ಕಾಮುಕತೆಯಿಂದ ಸಂಮೋಹಿಸುವವನಾಗಿ ಸೆಳೆಯಬಹುದು. ತಾನೊಬ್ಬ ಮಹಾ ಪ್ರಶಂಸನೀಯ ವ್ಯಕ್ತಿಯಾಗಿ, ಗಮನಾರ್ಹ ನಾಯಕನೆಂಬ ಭ್ರಮೆ ಹುಟ್ಟಿಸಿ, ಜನರನ್ನು ಸದಾ ಮೂರ್ಖರನ್ನಾಗಿಸುತ್ತಾ ನಯವಂಚಕ ಅಥವಾ ಕ್ರೂರಿ ಸರ್ವಾಧಿಕಾರಿಯನ್ನು ಇದು ಹುಟ್ಟಿಸಬಹುದು. ಆತ್ಮರತಿಯ ಅರಿಮೆಯು ತನ್ನ ಉತ್ಕಟ ಬಯಕೆಯನ್ನು ತೃಪ್ತಗೊಳಿಸಿಕೊಳ್ಳಲು ಯಾವ ಹಂತಕ್ಕೆ ಪ್ರಯಾಣಿಸುತ್ತದೆ ಎಂದು ಅದಕ್ಕೇ ತಿಳಿದಿರುವುದಿಲ್ಲ. ಆತ್ಮರತಿಯ ಶೂಲಕ್ಕೆ ಅದೆಷ್ಟು ಅಲುಗುಗಳಿರುವವೋ ಬಲ್ಲವರಾರು!
ಅಭಿಷಕ್ತ ಆತ್ಮರತಿ
ಇನ್ನೊಂದು ಬಗೆಯ ಆತ್ಮರತಿಯ ಅರಿಮೆ ಇದೆ. ಅದು ಜನಪ್ರಿಯತೆಯಿಂದ, ಗಳಿಸಿರುವ ಅಧಿಕಾರ ಅಥವಾ ಹಣದಿಂದ ಉಂಟಾಗುವುದು ಅಥವಾ ಇರುವುದು ಉಲ್ಬಣಗೊಳ್ಳುವುದು. ಸಾಧಾರಣವಾಗಿ ಇದ್ದೇ ಇರುವಂತಹ ಆತ್ಮರತಿಯು ದೊರಕಿದ ಖ್ಯಾತಿಯಿಂದಲೋ, ಹಣದಿಂದಲೋ, ಅಧಿಕಾರದಿಂದಲೋ ಮತ್ತಷ್ಟು ರೆಕ್ಕೆಪುಕ್ಕಗಳನ್ನು ಹೊಂದುವುದು.ಅದಕ್ಕೆ Acquired situational narcissism (ASN) ಎನ್ನುವರು. ನೀವು ನಿಮ್ಮ ಗೆಳೆಯರು ಬರಗೆಟ್ಟಾಗ ಒಟ್ಟೊಟ್ಟಾಗಿ ದೊರಕಿದ್ದನ್ನು ಗೋರಿಕೊಂಡು ಹಂಚಿ ಉಂಡಿರುತ್ತೀರಿ. ನಿಮ್ಮಲ್ಲೊಬ್ಬ ಹೇಗೋ ಏನೋ ಆರೋಪಿತ ಅದೃಷ್ಟದಿಂದ ಸೆಲೆಬ್ರಿಟಿಯಾಗಿಬಿಟ್ಟಿದ್ದಾನೆ. ಈಗ ಅವನು ನಿಮ್ಮ ಜೊತೆ ವ್ಯವಹರಿಸುವ ರೀತಿ ನೀತಿಗಳನ್ನು ನೋಡಿ. ನೀವು ಅವನ ಭುಜದ ಮೇಲೆ ಕೈ ಹಾಕಿ, ಬೆನ್ನಿಗೆ ಬಾರಿಸಿ ಮಾತಾಡಿಸಲು ಆಗುವುದಿಲ್ಲ. ಅದೇ ಹಿಂದಿನ ಸ್ಥಿತಿಯಲ್ಲಿರುವ ನೀವು ಅದೇ ಹಿಂದಿನ ರೀತಿಯಲ್ಲಿ ಮುಟ್ಟಿದರೆ ಅವನಿಗೆ ಇಕ್ಕಟ್ಟಿನಲ್ಲಿ ಸಿಲುಕಿದಂತಾಗುತ್ತದೆ. ಸಹಿಸಲಾಗುವುದಿಲ್ಲ. “ಯಾವಾಗ್ಲೂ ಒಂದೇನಾ?” ಅನ್ನುತ್ತಾನೆ.
ನಿಮಗೆ ಹಣದ ವಿಷಯದಲ್ಲಿ ಮತ್ತು ಖ್ಯಾತಿಯ ವ್ಯಾಪ್ತಿಯಲ್ಲಿ ಅವನು ಎಷ್ಟು ಎತ್ತರಕ್ಕೆ ಹೋದರೂ ನಿಮಗವನು ಸ್ನೇಹಿತನೇ ಎಂದು ನೀವು ಭಾವಿಸಲು ಯತ್ನಿಸುತ್ತೀರಿ. ಆದರೆ, ಅವನು ನಿಮ್ಮನ್ನು ನಿವಾರಿಸಿಕೊಳ್ಳಲು ಯತ್ನಿಸುವನು. ಏಕೆಂದರೆ ಅವನು ತಾನೆಂದರೆ ಒಂದು ಚಿತ್ರಣವೊಂದನ್ನು ಜನರಿಗೆ ಕಟ್ಟಿಕೊಟ್ಟಿರುತ್ತಾರೆ. ಆ ಗೌರವ, ಮಾನ್ಯತೆಗಳನ್ನು ನೀವು ನೀಡದೇ ಅವನ ಘನತೆಗೆ ಧಕ್ಕೆ ತರುತ್ತೀರೆಂದು ಅವನು ನಿಮ್ಮನ್ನು ಅವಾಯ್ಡ್ ಮಾಡುತ್ತಾನೆ.
ಸರಿ, ಅವನ ಆತ್ಮರತಿಯರಿಮೆಯು ಅವನನ್ನು ನಿಮ್ಮಿಂದ ದೂರಾಗಿಸಿದಂತೆ, ನಿಮ್ಮ ಆತ್ಮದರಿಮೆಯೂ ಕಡಿಮೆಯಿರುವುದಿಲ್ಲ. ತನ್ನ ವ್ಯಾಪ್ತಿ ಪ್ರದೇಶದಲ್ಲಿ, ತನಗೆ ಶ್ರೋತೃಗಳಾಗಿ, ಪ್ರೇಕ್ಷಕರಾಗಿ ದೊರಕಿರುವವರ ಮುಂದೆ ಆ ಸೆಲೆಬ್ರಿಟಿಯು ನಿಮ್ಮೊಡನಿದ್ದಾಗ ಅದೆಷ್ಟು ದೀನನಾಗಿದ್ದನು, ಎಷ್ಟು ನಿಮ್ಮಿಂದ ಪಡೆದಿದ್ದನೆಂದು ವಿವರ ಒಪ್ಪಿಸುವ ಮೂಲಕ ತನ್ನ ಉತ್ಕಟ ಬಯಕೆಯನ್ನು ತೃಪ್ತಿಗೊಳಿಸಿಕೊಳ್ಳಲು ಯತ್ನಿಸುತ್ತದೆ.
ಅವನ ಅಹಂಕಾರವನ್ನು ಖಂಡಿಸಲು ನಿಮ್ಮ ಅಹಂಕಾರ ವಿಜೃಂಭಿಸುತ್ತದೆ. ಇದೇ ಆತ್ಮರತಿಯ ಲೀಲೆ. ನಿಮಗೆ ಆಗ ಅವನು ಜೀವಂತವಿದ್ದ. ಈಗ ಅವನೆಷ್ಟೇ ವೈಭವದಲ್ಲಿ ಮೆರೆಯುತ್ತಿದ್ದರೂ ಸಾಗುತ್ತಿರುವ ಅಲಂಕರಿಸಲ್ಪಟ್ಟಿರುವ ಶವ! ಅವನಿಗೆ ನೀವು ಹಳೆಯ ಕೊಳೆ!
ನಾನೇನು ಖಾಲಿಪೀಲಿಯಲ್ಲ
ಆತ್ಮರತಿಯ ಸೆಲೆಬ್ರಿಟಿಯ ಶೋಕೇಸಿನಲ್ಲಿರುವ ಪ್ರದರ್ಶನಗಳ ಲೀಲೆ ಅಪಾರ. ಅವರು ಕಲಾವಿದರೇ. ಆದರೆ ಇತರ ಸ್ಟಾರ್ ಕಲಾವಿದರಿಗೆ ದೊರಕುವಷ್ಟು ಅವಕಾಶಗಳು ದೊರಕುವುದಿಲ್ಲ. ಅವರನ್ನು ಕರೆಯುವಷ್ಟು ಇವರನ್ನು ಸಮಾರಂಭಗಳಿಗೆ ಕರೆಯುವುದಿಲ್ಲ. ಆದರೂ ನೀವೇನಾದರೂ ಕಾರ್ಯಕ್ರಮಕ್ಕೋ ಅಥವಾ ನಿಮ್ಮದ್ಯಾವುದಾದರೂ ಯೋಜನೆಗೋ ಅವರಿಗೆ ಕರೆ ಮಾಡಿದರೆ, ತಕ್ಷಣ ಒಪ್ಪಿಕೊಳ್ಳುವುದಿಲ್ಲ. ಖಾಲಿ ಕುಳಿತಿದ್ದೇನೆ ಎಂದು ಹೇಳಲು ಅವರಿಗೆ ಆಗುವುದಿಲ್ಲ. ಡೈರಿ ನೋಡುತ್ತೇನೆ. ನಂತರ ಹೇಳುತ್ತೇನೆ. ನನಗೆ ಯಾವುದೋ ಕಾರ್ಯಕ್ರಮವಿದೆ ಅನಿಸುತ್ತದೆ. ಆಗುವುದಿಲ್ಲ ಅನಿಸುತ್ತದೆ. ಯಾವುದಕ್ಕೂ ಆ ಕಾರ್ಯಕ್ರಮದ ಆಯೋಜಕರಿಗೆ ಕರೆ ಮಾಡಿ ತಿಳಿದು ನಂತರ ತಿಳಿಸುವೆ. ಇದೆಲ್ಲಾ ಅವರ ಕೆಟ್ಟ ಬುದ್ಧಿಯ, ಹೀನ ಮನಸ್ಥಿತಿಯ ವರ್ತನೆಗಳು ಎಂದು ಖಂಡಿತ ಅಂದುಕೊಂಡು ಅವರನ್ನು ಖಂಡಿಸಬೇಡಿ ಅಥವಾ ನಿರಾಕರಿಸಬೇಡಿ. ಪಾಪ, ಅವರ ಅರಿವಿಗೇ ಎಟುಕದಂತೆ ವರ್ತಿಸಲು ಪ್ರಚೋದಿಸುವ ಅರಿಮೆಯ ಪ್ರಭಾವಗಳು.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.
ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.
ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.
ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.
ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.
ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.
ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಹೊಸತನದ ಹೊಸ್ತಿಲಲ್ಲಿ..!

- ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ
ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.
ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.
ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.
ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.
ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.
ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕಾಮರೂಪದ ಪ್ರಭಾಕರ

- ಪ್ರೊ.ರಹಮತ್ ತರೀಕೆರೆ
ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.
`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.
ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.
ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.
ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.
ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.
ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.
ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.
ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’
ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.
ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.
ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.
ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.
ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ6 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ2 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ1 day ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ