ಅಂತರಂಗ
ಅರಿಮೆಯ ಅರಿವಿರಲಿ-36 : ಸಮಾಜಘಾತುಕತನದ ಮೊಳಕೆ
- ಯೋಗೇಶ್ ಮಾಸ್ಟರ್
ಸಾಮಾನ್ಯವಾಗಿ ಮಗುವು ತನ್ನ ಓರಗೆಯವರ ಸಹವಾಸದ ಸೆಳೆತದಿಂದ ತಾನೇ ಕೆಲವು ಕೆಲಸಗಳಲ್ಲಿ ತೊಡಗಿಕೊಳ್ಳುವ ಉತ್ಸಾಹ ತೋರಿಸುತ್ತದೆ. ಶಾಲೆಯಲ್ಲಿ ತನ್ನ ಪಕ್ಕದಲ್ಲಿ ಯಾವಾಗಲೂ ಕುಳಿತುಕೊಳ್ಳುವ ಹುಡುಗನ ಜೊತೆಗಿನ ಸಂಬಂಧ ಆ ಮಗುವಿಗೆ ಆಪ್ತವೂ, ಆತ್ಮೀಯವೂ ಆಗಿರುತ್ತದೆ. ಮೈದಾನದಲ್ಲಿ ಆಡುವ ಗೆಳೆಯನ ಅಥವಾ ಗೆಳತಿಯ ಜೊತೆಗಾರಿಕೆ ಮಗುವಿಗೆ ಖುಷಿ ಕೊಡುತ್ತದೆ. ಒಟ್ಟಿಗೆ ಕುಳಿತುಕೊಂಡು ತರಗತಿಯಲ್ಲಿ ಕಲಿಯುವ, ಮೈದಾನದಲ್ಲಿ ಕಲೆಯುವ ಆಚೆಗೂ ಅವರಿಗೆ ಹಂಚಿಕೊಳ್ಳಲು ವಿಷಯಗಳಿರುತ್ತವೆ, ವಸ್ತುಗಳಿರುತ್ತವೆ, ಸ್ಥಳಗಳಿರುತ್ತವೆ. ಆದರೆ ಪೋಷಕರಿಗೆ ಮಗುವು ಶಾಲೆಗೆ ಹೋಗುವುದು ಎಂದರೆ ಓದುವುದಕ್ಕಷ್ಟೇ ಎಂಬ ಧೋರಣೆ.
ಹೆಚ್ಚೆಂದರೆ ಶಾಲೆಯವರು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ, ಕ್ರೀಡೆಗಳಲ್ಲಿ ಭಾಗವಹಿಸುವುದು. ಅದನ್ನು ಬಿಟ್ಟರೆ ಹೆಚ್ಚಿಗೇನೂ ಮಾಡುವ ಅಗತ್ಯವಿಲ್ಲ! ಆದರೆ ಮಕ್ಕಳಿಗೆ ಕೆಲವರ ಬಗ್ಗೆ ಆತ್ಮೀಯತೆ, ಸಲುಗೆ ಇರುತ್ತದೆ. ಅದನ್ನು ಪೋಷಕರ ಬಳಿ ಹೇಳಿಕೊಳ್ಳುವುದಕ್ಕೆ ಅವರಿಗೆ ಅಷ್ಟೇನೂ ಅವಕಾಶಗಳಿರುವುದಿಲ್ಲ. ಹೇಳುವವರು ಬಹಳ ಕಡಿಮೆ. ಹಾಗಾಗಿ ಕೆಲವರ ಮನೆಯಲ್ಲಿ ಕೆಲವೊಂದು ಮಾತುಗಳು ಧ್ವನಿಸುತ್ತಿರುತ್ತವೆ.
- ಅವನ / ಅವಳ ಜೊತೆ ನೀನ್ಯಾಕೆ ಹೋಗಿದ್ದೆ. ಅದರಿಂದ ನಿನಗೇನು ಲಾಭ?
- ಅವನಿಗೆ / ಅವಳಿಗೆ ಬೇಕಾದರೆ ಅವನೇ / ಅವಳೇ ಮಾಡಿಕೊಳ್ಳಲಿ. ನಿನ್ನ ಕೆಲಸ ನೀನು ನೋಡಿಕೋ.
- ಅವರದು ಇವರದು ಕತೆಗಳನ್ನೆಲ್ಲಾ ನನಗೆ ಹೇಳಬೇಡ. ನಿಂದೆಷ್ಟೋ ಅಷ್ಟು ನೋಡಿಕೋ.
- ನಿನಗ್ಯಾಕೆ ಊರವರ ಉಸಾಬರಿ?
- ನೀನು ಸ್ಕೂಲಿಗೆ ಹೋಗೋದು ಯಾಕೆ? ನೆಟ್ಟಗೆ ಸ್ಕೂಲಿಗೆ ಹೋಗಿ ಮನೆಗೆ ಬಾ.
- ಯಾರ್ಯಾರು ಹ್ಯಾಗ್ಯಾಗೆ ಇರ್ತಾರೋ ಏನೋ. ಸುಮ್ಮನೆ ಅವರಿವರ ಸಹವಾಸದಲ್ಲಿ ಬಿದ್ದು ಹಾಳಾಗಬೇಡ.
- ಎಷ್ಟುಬೇಕೋ ಅಷ್ಟು ಇಟ್ಟಿಕೊ. ಅತಿಯಾಗಿ ಹೋಗಬೇಡ.
ಇತ್ಯಾದಿ ಅತಿ ಮತ್ತು ಮಿತಿಗಳನ್ನು ಪೋಷಕರು ನಿರ್ಧರಿಸುತ್ತಿರುತ್ತಾರೆ. ವಾಸ್ತವವಾಗಿ ಅವರು ತಮ್ಮ ಬಾಲ್ಯವನ್ನು ಮರೆತಿರುತ್ತಾರೆ. ಅವರಿಗೂ ಇಂತಹ ಆತ್ಮೀಯತೆಯ ಸೆಳೆತಗಳಿದ್ದವು. ಆಪ್ತತೆಯ ಸ್ಪರ್ಶಕ್ಕೆ ಹಾತೊರೆಯುತ್ತಿದ್ದರು. ಅವರ ಮನೆಯಲ್ಲೂ ಅವರ ಅಪ್ಪ ಅಥವಾ ಅಮ್ಮ ಹೀಗೆ ಹೇಳುತ್ತಿದ್ದರು. ಅವರಿಗಾಗ ಬೇಸರವಾಗುತ್ತಿತ್ತು. ಆದರೆ ಮನೆಯವರ ಒತ್ತಡಕ್ಕೆ ಸಿಕ್ಕಿ ಅವರು ಹೇಳಿದಂತೆ ಕೇಳುವ ಅನಿವಾರ್ಯತೆ ಉಂಟಾಗಿರುತ್ತಿತ್ತು. ಅದೇ ಅವರ ಮಕ್ಕಳಿಗೂ ಮುಂದುವರಿಯುತ್ತದೆ. ಇದನ್ನೇ ಪದೇ ಪದೇ ಕೇಳುತ್ತಾ, ಅನಿವಾರ್ಯವಾಗಿ ರೂಢಿಸಿಕೊಳ್ಳುವ ಮಕ್ಕಳು ಊರಿನ ಉಸಾಬರಿ ಏಕೆ ಹೊರುತ್ತಾರೆ? ಸಮಾಜ ಮತ್ತು ಪರಿಸರದ ಬಗ್ಗೆ ಹೇಗೆ ಕಾಳಜಿ ಹೊಂದುತ್ತಾರೆ?
ಮನೆಯಿಂದ ಸಮಾಜಕ್ಕೆ
- ಒಂದು ದೇಶದ ಅಪರಾಧದ ಚಟುವಟಿಕೆಗಳು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಆದರೆ ಸಾಮಾನ್ಯವಾಗಿ ದೇಶದ ಕಾನೂನು ಮತ್ತು ಪೋಲಿಸ್ ವ್ಯವಸ್ಥೆಯು ಸದೃಢವಾಗಿಲ್ಲ ಅಥವಾ ಸಮರ್ಪಕವಾಗಿಲ್ಲ ಎಂಬುದನ್ನು ಮೊದಲನೆಯದಾಗಿ ಕಾಣಿಸುತ್ತಾರೆ. ಆದರೆ ನಮ್ಮ ದೇಶದ ಕಾನೂನು ಮತ್ತು ರಕ್ಷಣಾವ್ಯವಸ್ಥೆಯಲ್ಲಿ ನಾವ್ಯಾರೂ ಸಮಗ್ರವಾಗಿ ಮೌಲ್ಯ ಮಾಪನ ಮಾಡಿ ಇದು ಹೀಗೆ ಎಂದು ನಿರ್ಧರಿತವಾಗಿ ಫಲಿತಾಂಶವನ್ನು ಹೇಳಲಾಗುವುದೇ ಇಲ್ಲ.
- ಏಕೆಂದರೆ ಇಡೀ ದೇಶದಲ್ಲಿ ವ್ಯವಸ್ಥೆಯ ಹೊರಗೂ ಮತ್ತು ಒಳಗೂ ಎಲ್ಲಾ ತರಹದ ಜನರಿದ್ದಾರೆ. ಕಾನೂನು ಪಾಲಕರೇ ಅಥವಾ ಕಾನೂನು ರಕ್ಷಕರೇ ಶಿಕ್ಷೆಗೆ ಒಳಪಡದಂತಹ ಅಪರಾಧಿಗಳಾಗಿರುತ್ತಾರೆ. ಅದೇ ರೀತಿ ವ್ಯವಸ್ಥೆಯ ಹೊರಗಿರುವ ಸಾಮಾನ್ಯ ನಾಗರಿಕ ವ್ಯಾಪ್ತಿಗೆ ಬರುವ ಜನರಲ್ಲೂ ಕೂಡಾ ಅಪರಾಧಿಗಳು ಇದ್ದಾರೆ.
- ಗುಂಪು ಗಲಭೆಗಳಾದಾಗ ಬಸ್ಸಿಗೆ ಬೆಂಕಿ ಹಚ್ಚುವವರು, ಅಂಗಡಿಗಳಿಗೆ ಕಲ್ಲು ಹೊಡೆಯುವವರು, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳುಗೆಡವುವವರು ಜವಾಬ್ದಾರಿಯುತ ಹುದ್ದೆಗಳಲ್ಲಿ, ಕೆಲಸಗಳಲ್ಲಿ ಇರುವವರಲ್ಲ. ತಮ್ಮ ಸಂಪಾದನೆಯಲ್ಲಿ ತೆರಿಗೆ ಕಟ್ಟುವವರಂತೂ ಅಲ್ಲವೇ ಅಲ್ಲ. ಅದೊಂದು ವರ್ಗ. ಅದರಲ್ಲಿ ಜಾತಿ, ಧರ್ಮ, ಸಂಸ್ಕೃತಿಯ ಬೇಧವಿಲ್ಲ. ಕೆಲವೊಮ್ಮೆ ವಯಸ್ಸಿನ ಬೇಧವೂ ಇರುವುದಿಲ್ಲ. ಅದೊಂದು ವೈಯಕ್ತಿಕ ಮನಸ್ಥಿತಿ ಮತ್ತು ಸಾಮಾಜಿಕ ಪರಿಸ್ಥಿತಿಯಲ್ಲಿರುವವರೇ ಹಾಗೆ ಮಾಡುವವರು. ಅಂತಹ ಕೆಲಸಗಳಿಗೆ ತಮ್ಮ ಸಮಯ, ಶ್ರಮವನ್ನು ವ್ಯಯಿಸುವವರು. ಇದು ಹೇಗೆ ಮತ್ತು ಏಕೆ? ಹೇಗೆ ಎಂಬುದರ ಕಾರಣ ತಿಳಿದರೆ ಏಕೆ ಎಂಬುದೂ ಕೂಡಾ ತಿಳಿಯುತ್ತದೆ.
- ಸಾಮಾನ್ಯವಾದ ನೈತಿಕತೆ ಎಲ್ಲಾ ಜನಸಾಮಾನ್ಯರಲ್ಲಿ ಸಾಮಾನ್ಯವಾಗಿಲ್ಲ.
- ಇತರರ ಕಂಡು ಅಸೂಯೆ, ಅಸಹನೆ ಉಂಟಾಗದೇ ತನ್ನ ಬದುಕಿನ ಆನಂದ, ಅನುಭವ, ಸುಖವನ್ನು ಪಡುವಷ್ಟು ಆರ್ಥಿಕ ಸಬಲತೆ ಮತ್ತು ಅರಿವಿನ ಹಿನ್ನೆಲೆ ಎಲ್ಲರಲ್ಲೂ ಇಲ್ಲ.
- ತನ್ನ ಸಾಧಿಸಬೇಕಾದ ಗುರಿ ಮತ್ತು ತನ್ನದೇ ಕುಟುಂಬದ ಜವಾಬ್ದಾರಿಯೂ ಇಲ್ಲ.
- ಕಾನೂನಾತ್ಮಕವಾಗಿ ಕಳಂಕಿತವಾದರೆ ಕಳೆದುಕೊಳ್ಳುವಂತಹುದೇನಿರುವುದಿಲ್ಲ. (ಉದ್ಯೋಗ, ಹುದ್ದೆ, ಸ್ಥಾನ, ಧನ ಇತ್ಯಾದಿ)
- ತಮ್ಮ ಸೀಮಿತ ಪರಿಧಿಯಾಚೆಗಿನ ವಿಷಯಗಳ ಅರಿವೂ ಇರುವುದಿಲ್ಲ ಮತ್ತು ಅವರಿಗೆ ಜಾಗತಿಕ ಮಟ್ಟಕ್ಕೆ ಹೋಗುವುದಿರಲಿ ಹಾಗೊಂದು ಇದೆ ಎಂಬ ಅರಿವೂ ಇರುವುದಿಲ್ಲ.
- ತಮ್ಮಂತದ್ದೇ ಮನಸ್ಥಿತಿಯ ಕಾನೂನು ಪಾಲಕರು ಅಥವಾ ರಕ್ಷಕರ ಅಪವಿತ್ರ ಮೈತ್ರಿಗಳಿರುತ್ತವೆ. ಉದಾಹರಣೆಗೆ ಕಳ್ಳ ದಂಧೆಗಳಲ್ಲಿ ಇವರ ಭಾಗವಹಿಸುವಿಕೆ ವ್ಯವಸ್ಥೆಯಲ್ಲಿರುವವರಿಗೆ ಬೇಕಾಗಿರುತ್ತದೆ. ಅವರು ಮಾಡಲಾಗದ ರಹಸ್ಯ ಕಾರ್ಯಾಚರಣೆಗಳಲ್ಲಿ ಇವರು ಕೆಲಸ ಮಾಡಬೇಕಾಗುತ್ತದೆ. ಅಂದರೆ ಅವರ ಕೈಗಳಿಗೆ ಕಳಂಕ ಹತ್ತದಿರಲು ಇವರ ಕೈಗಳನ್ನು ಅವರು ಬಳಸಿಕೊಳ್ಳುತ್ತಾರೆ. ಹಾಗೆಯೇ ಇವರನ್ನು ರಕ್ಷಿಸುವ ಒಡಂಬಡಿಕೆಯೂ ಕೂಡ ಅವರ ನಡುವೆ ಆಗಿರುತ್ತದೆ. ಈ ಹಿಂದೆ ನಡೆದ ಸಣ್ಣಪುಟ್ಟ ಅಪರಾಧಗಳಲ್ಲಿ, ಗಲಾಟೆಗಳಲ್ಲಿ ಯಶಸ್ವಿಯಾಗಿರುತ್ತಾರೆ. ಇವರೇ ಯಾವಾಗಲೂ ಸಮಸ್ಯೆಗಳಲ್ಲಿ ಇರುವ ಕಾರಣದಿಂದ ಇತರರಿಗೆ ಸಮಸ್ಯೆಗಳಾಗುವುದರ ಬಗ್ಗೆ ಕಾಳಜಿ ಇರುವುದಿಲ್ಲ. ಇವರಿಗೆ ಕೊರತೆಗಳಿರುವುದರಿಂದ ಇತರರ ಬಗ್ಗೆ ಯಾವ ವಿಷಯದಲ್ಲಿಯೂ ಔದಾರ್ಯವಿರುವುದಿಲ್ಲ.
- ಕೆಲವು ಅಧ್ಯಯನಗಳು ಹೊರಗೆಡವಿದಂತೆ ತಂದೆಯಿಂದ ತಿರಸ್ಕೃತರಾದಂತಹ ಮಗುವು ಅಥವಾ ಸಣ್ಣ ಕುಟುಂಬವು ಅದರ ಇತರ ಪೋಷಕ ಕುಟುಂಬಗಳಿಂದ ತಿರಸ್ಕೃತರಾಗಿದ್ದರೆ, ಘೋಷಿತವಾಗಿ ಅಥವಾ ಅಘೋಷಿತವಾಗಿ ಸಾಮಾಜಿಕವಾಗಿ ಅಥವಾ ಕೌಟುಂಬಿಕವಾಗಿ ಬಹಿಷ್ಕೃತರಾಗಿದ್ದರೆ, ಆ ಕುಟುಂಬದ ಮಗುವು ಒಂದೋ ಕ್ರೌರ್ಯ ಮತ್ತು ಹಿಂಸೆಯ ಮನೋಭಾವವನ್ನು ರೂಢಿಸಿಕೊಂಡು ಸಮಾಜಘಾತುಕ ಶಕ್ತಿಯಾಗಿ ಬೆಳೆಯುತ್ತದೆ, ಇಲ್ಲವೇ ಖಿನ್ನತೆಯಿಂದ ತನ್ನದೇ ವ್ಯಸನದ ಪ್ರಪಂಚದಲ್ಲಿ ತಲ್ಲೀನವಾಗಿರುತ್ತದೆ. ಇದು ತಕ್ಷಣಕ್ಕೆ ಕಾಣಲು ಪ್ಯಾಸಿವ್ ಅಥವಾ ಜಡವಾಗಿದೆ ಎನಿಸಿದರೂ ಅದು ಯಾವುದೇ ಸಮಯಕ್ಕೆ ಘಾತುಕ ಶಕ್ತಿಯಾಗಿ ಸ್ಫೋಟಗೊಳ್ಳುತ್ತದೆ.
- ಪುನರಾವರ್ತಿತವಾಗುವಂತಹ ಒಂದೇ ಬಗೆಯ ಪರಿಸ್ಥಿತಿ, ಸನ್ನಿವೇಶ ಮತ್ತು ಪರಿಸರಗಳನ್ನು ನೋಡುತ್ತಿರುವುದರಿಂದ ಮನಸ್ಥಿತಿಯೇ ಆ ರೀತಿ ನಿರ್ಮಿತವಾಗಿರುತ್ತದೆ. ಹಾಗೆ ಇರುವುದು ತಮಗೆ ಸಹಜವೇನೋ ಎಂಬಂತೆ ಯೋಚನೆ ಕೂಡಾ ಮಾಡದಿರುವಷ್ಟು ರೂಢಿಯಾಗಿಬಿಟ್ಟಿರುತ್ತದೆ.
ಇಷ್ಟೇ ಅಲ್ಲ. ಪರಿಸರ ಮತ್ತು ಕುಟುಂಬಗಳು ಯಾವುದೇ ಇರಲಿ ಕೆಲವೊಂದು ಬಗೆಯ ಬೇರೆಯೇ ಕಾರಣಗಳು ಕೂಡಾ ಇರುತ್ತವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಶ್ರೇಣಿಯಲ್ಲಿ ಕೆಳಗಿರುವವರೇ ಸಮಾಜಘಾತುಕರಾಗುವರು ಎಂಬ ಆತುರದ ನಿರ್ಧಾರ ಬೇಡ. ಈ ಸಂಕೀರ್ಣ ಸಮಾಜಕ್ಕೆ ಇನ್ನೂ ಬೇರೆ ಬೇರೆ ಮೂಲದ ತಲೆನೋವುಗಳಿವೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು
-
ದಿನದ ಸುದ್ದಿ2 days agoಮಾಹಿತಿ ಹಕ್ಕು ಅರ್ಜಿ ಸಲ್ಲಿಕೆ ಇನ್ಮುಂದೆ ಮತ್ತಷ್ಟು ಸುಲಭ: ‘ಸಕಾಲ’ ಸೇವೆಗೆ ಭೌತಿಕ ಆರ್ಟಿಐ ಅರ್ಜಿಗಳ ಸೇರ್ಪಡೆ, ಗ್ರಾಮ ಒನ್ನಲ್ಲೂ ಲಭ್ಯ

