ನೆಲದನಿ
ಕತ್ತಲಗೆರೆ ತಿಪ್ಪಣ್ಣನೆಂಬ ಗ್ರಾಮೀಣ ಪ್ರತಿಭೆಯ ಹೋರಾಟದ ಹಾದಿ
ಭಾರತದ ದಲಿತಪರ ಹೋರಾಟದ ಹಾದಿಯಲ್ಲಿ ಅಂಬೇಡ್ಕರರನ್ನು ಮಾದರಿಯಾಗಿಟ್ಟುಕೊಂಡು, ಅವರ ತತ್ವ-ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಹಲವಾರು ವ್ಯಕ್ತಿಗಳು ತಮ್ಮ ಹೋರಾಟದ ಹಾದಿಯನ್ನು ನಡೆಸಿಕೊಂಡು ಬಂದಿದ್ದಾರೆ. ಅಂಬೇಡ್ಕರ್‍ವಾದದಿಂದ ಪ್ರಭಾವಿತರಾಗಿ, ಅವರ ತತ್ವಾದರ್ಶಗಳನ್ನು ತಮ್ಮಲ್ಲಿ ರೂಡಿಸಿಕೊಂಡು ಕರ್ನಾಟಕದಲ್ಲಿಯೂ ಬಹುತೇಕ ವಿಚಾರವಾದಿಗಳು ತಮ್ಮ ಹೋರಾಟವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.
ಅಂತಹ ಹೋರಾಟಗಾರರನ್ನು ಗುರುತಿಸಿ, ಅವರ ಹೋರಾಟದ ಹಾದಿಯ ಅನುಭವಗಳನ್ನು ಪರಿಚಯಿಸುವ ಉದ್ಧೇಶದಿಂದ ಪ್ರಸ್ತುತ ಲೇಖನವನ್ನು ರಚಿಸಲಾಗಿದೆ. ದಲಿತರ ಜಾಗೃತಿ, ವಿಮೋಚನೆ ಹಾಗೂ ಪ್ರಗತಿಗಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿರುವ ದಲಿತ ಚಿಂತಕರನ್ನು ಶೋಧಿಸಲು ಮುಂದಾದಾಗ ಎಲೆಮರೆಯ ಕಾಯಿಯಂತಿರುವ ಬಹುತೇಕ ವಿಚಾರವಾದಿಗಳು ಕಂಡುಬಂದರು. ಇವರುಗಳಲ್ಲಿ ಬಹುತೇಕರು ದಲಿತರ ವಿಮೋಚನೆಗಾಗಿಯೇ ತಮ್ಮ ಬದುಕನ್ನು ಸಮರ್ಪಿಸಿಕೊಂಡವರಿದ್ದಾರೆ. ಅಂತಹ ಹೋರಾಟಗಾರರಲ್ಲಿ ಕತ್ತಲಗೆರೆ ತಿಪ್ಪಣ್ಣನವರು ಒಬ್ಬರಾಗಿದ್ದಾರೆ. ಇವರ ಹೋರಾಟದ ಕ್ರಮವು ಮುಂದಿನ ಯುವ ಹೋರಾಟಗಾರರಿಗೆ ಮಾದರಿಯಾಗಬಹುದೆಂದು ಭಾವಿಸಲಾಗಿದೆ. ಹೀಗಾಗಿ ತನ್ನ ವೈಯಕ್ತಿಕ ಬದುಕನ್ನು ಲೆಕ್ಕಿಸದೆ, ಸಮಾಜದ ಪ್ರಬಲ ವರ್ಗವನ್ನು ಎದುರುಹಾಕಿಕೊಂಡು, ದಲಿತರ ಉದ್ಧಾರಕ್ಕಾಗಿ ಶ್ರಮಿಸಿದ ಗ್ರಾಮೀಣ ಪ್ರತಿಭೆಯಾದ ಕತ್ತಲಗೆರೆ ತಿಪ್ಪಣ್ಣನೆಂಬ ದಲಿತ ಹೋರಾಟಗಾರನ ಹೋರಾಟದ ಹಾದಿಯನ್ನು ಪರಿಚಯಿಸುವುದು ಪ್ರಸ್ತುತ ಲೇಖನದ ಉದ್ಧೇಶವಾಗಿದೆ.
ಶ್ರೀಯುತ ಕತ್ತಲಗೆರೆ ತಿಪ್ಪಣ್ಣನವರು ದಾವಣಗೆರೆ ಜಿಲ್ಲೆಯ ಕತ್ತಲಗೆರೆ ಎಂಬ ಗ್ರಾಮದಲ್ಲಿ ದಿನಾಂಕ 16 ಜನವರಿ 1956ರಂದು ಶ್ರೀ ಉಳಿವಪ್ಪ ಶ್ರೀಮತಿ ನಾಗಮ್ಮ ಎಂಬ ದಂಪತಿಗಳ ಸುಪುತ್ರರಾಗಿ ದಲಿತ ಕುಟುಂಬದಲ್ಲಿ ಜನಿಸಿದರು. ಇವರು ಬಾಲ್ಯದಿಂದಲೂ ಬಡತನದ ಬವಣೆಯಲ್ಲಿಯೇ ತಮ್ಮ ಜೀವನವನ್ನು ಮುಂದುವರೆಸಿಕೊಂಡು ಬಂದವರಾಗಿದ್ದಾರೆ. ಇವರು ಎಂಟನೇ ತರಗತಿಯನ್ನು ಓದುವ ಸಮಯದಲ್ಲಿ ಇವರ ತಾಯಿ ಅನಾರೋಗ್ಯಕ್ಕೆ ತುತ್ತಾದರು. ಈ ಸಮಯದಲ್ಲಿ ಇವರ ತಾಯಿಗೆ ಚಿಕಿತ್ಸೆ ಕೊಡಿಸುವುದಕ್ಕೆ ಇವರ ತಂದೆಯ ಬಳಿ ಹಣವಿಲ್ಲದ ಕಾರಣ, ಬಾಲಕನಾಗಿದ್ದ ತಿಪ್ಪಣ್ಣನವರು ತನ್ನನ್ನು ಜೀತಕ್ಕೆ ನೇಮಿಸಿ ಹಣ ಪಡೆದು ತನ್ನ ತಾಯಿಗೆ ಚಿಕಿತ್ಸೆಯನ್ನು ಕೊಡಿಸುವಂತೆ ತಮ್ಮ ತಂದೆಗೆ ಸಲಹೆ ನೀಡಿದರು. ಅಸಹಾಯಕರಾದ ಇವರ ತಂದೆಯು ಮಗನ ಮಾತಿನಂತೆ ಇವರನ್ನು ಶಾಲೆಯಿಂದ ಬಿಡುಗಡೆಗೊಳಿಸಿ ವರ್ಷಕ್ಕೆ 25 ರೂಪಾಯಿಗೆ ಜೀತಕ್ಕೆ ಸೇರಿಸಿ, ಇವರ ತಾಯಿಗೆ ಚಿಕಿತ್ಸೆ ಕೊಡಿಸಿದರು. ಆದರೆ ಇವರ ತಾಯಿಯ ಕಾಯಿಲೆಯು ಮಾತ್ರ ಗುಣವಾಗದೆ ಕಲವೇ ದಿನಗಳಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡರು. ತಮ್ಮ ತಾಯಿಯ ಚಿಕಿತ್ಸೆಗೆಂದು ಪಡೆದ ಹಣವನ್ನು ತೀರಿಸಲು ಒಂದು ವರ್ಷಗಳ ಕಾಲ ಜೀತ ಮಾಡಿ ಹಣವನ್ನು ತೀರಿಸಬೇಕಾಯಿತು. ಈ ಕಾರಣದಿಂದಾಗಿ ತಿಪ್ಪಣ್ಣನವರ ಶಿಕ್ಷಣವು ಕುಂಟಿತವಾಯಿತು.
ತಿಪ್ಪಣ್ಣನವರು ತಮ್ಮ ತಾಯಿಯು ಮರಣ ಹೊಂದಿದ ತರುವಾಯದಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ಇವರ ತಂದೆಯು ಇವರ ತಮ್ಮನನ್ನು ಕರೆದುಕೊಂಡು ಬೇರೆಡೆಗೆ ಹೊರಟು ಹೋದರು. ಆಗ ಇವರು ದಾವಣಗೆರೆಯಲ್ಲಿ ತಮ್ಮ ಸಂಬಂಧಿಕರ ಮನೆಯೊಂದರಲ್ಲಿ ಆಶ್ರಯ ಪಡೆದರು. ನಂತರ ಇವರು ಬೆಳೆದು ದೊಡ್ಡವರಾದ ಮೇಲೆ ಮದುವೆ ಮಾಡಿಕೊಂಡು ತಮ್ಮ ಊರಾದ ಕತ್ತಲಗೆರೆಯಲ್ಲಿ ಬಂದು ನೆಲೆಸಿದರು. ತಮ್ಮ ಸ್ವಗ್ರಾಮಕ್ಕೆ ಮರಳಿದ ತರುವಾಯದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಮ್ಮಲ್ಲಿ ಕರಗತವಾಗಿದ್ದ ಕೆಲವು ವಿಚಾರಗಳಿಂದ ದಲಿತರ ಹಕ್ಕು ಹಾಗೂ ಸವಲತ್ತುಗಳಿಗಾಗಿ ಹೋರಾಟ ನಡೆಸಲು ಮುಂದಾದರು. ದಲಿತರ ಮೇಲೆ ನಡೆಯುವ ಶೋಷಣೆ ಹಾಗೂ ಹಲ್ಲೆಗಳನ್ನು ಖಂಡಿಸುವತ್ತ ತನ್ನ ಹೋರಾಟವನ್ನು ಮುಂದುವರೆಸಿದರು. 1987ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಜಯಶೀಲರಾದ ನಂತರದಲ್ಲಿ ಇಲ್ಲಿನ ಪಂಚಾಯಿತಿಯಲ್ಲಿ ಉನ್ನತ ವರ್ಗದವರು ತಮಗೆ ಬೇಕಾದಂತೆ ಸಿಬ್ಬಂದಿಗಳನ್ನು ನೇಮಿಸಿಕೊಂಡಿರುವುದನ್ನು ಖಂಡಿಸಿ ಸಂವಿಧಾನ ಬದ್ಧವಾಗಿ ಮೀಸಲಾತಿಯನ್ನು ಪಾಲಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಐದು ಜನ ಸಿಬ್ಬಂದಿಯನ್ನು ಇಲ್ಲಿ ನೌಕರರಾಗಿ ನೇಮಿಸಿದರು. ಆ ಐದು ಜನರಿಂದು ಸರ್ಕಾರದ ಖಾಯಂ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ದಲಿತರ ಪ್ರಗತಿಗಾಗಿ ಸಂವಿಧಾನದ ಆಶಯಗಳನ್ನು ಜಾರಿಗೆ ತರುವತ್ತ ತಮ್ಮ ಹೋರಾಟವನ್ನು ಮುಂದುವರೆಸಿದ ಇವರು ತಮ್ಮ ಗ್ರಾಮದ ಮಾಜಿ ಶಾಸಕರಾದ ಕುಂದೂರು ರುದ್ರಪ್ಪ ಹಾಗೂ ಅವರ ಮಗನನ್ನು ಎದುರು ಹಾಕಿಕೊಳ್ಳಬೇಕಾಯಿತು.
ರಾಜಕಿಯ ಪ್ರವೇಶಿಸಿದ ತರುವಾಯದಲ್ಲಿ ಮಾಜಿ ಶಾಸಕನ ಪುತ್ರನು ಗ್ರಾಮ ಪಂಚಾಯಿತಿಯ ಪ್ರಧಾನ (ಇಂದಿನ ಅಧ್ಯಕ್ಷ ಸ್ಥಾನ) ನಾಗಿದ್ದುಕೊಂಡು ನಡೆಸುತ್ತಾ ಬಂದಿರುವ ಅವ್ಯವಹಾರಗಳನ್ನು ಬಯಲಿಗೆಹಾಕುವತ್ತ ತಮ್ಮ ಹೋರಾಟವನ್ನು ಮುಂದುವರೆಸಿದರು. ತಿಪ್ಪಣ್ಣನವರು 1987ರಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಸಂದರ್ಭದಲ್ಲಿ ಈ ಪಂಚಾಯಿತಿಯ ಪ್ರಧಾನನು ಎಸ್.ಸಿ/ಎಸ್.ಟಿ ಕಾಲೋನಿಯಲ್ಲಿ ರಸ್ತೆ, ಬಾವಿ ದುರಸ್ತಿ ಮಾಡಿಸಿದ್ದೇನೆ ಎಂದು ಹೇಳಿ ಏನು ಕೆಲಸ ಮಾಡದೆ ಬಿಲ್ಲು ಮಾಡಿಸಿಕೊಂಡು ಹಣವನ್ನು ತಿಂದುಹಾಕಿದ್ದ. ಇದನ್ನು ತಿಳಿದ ತಿಪ್ಪಣ್ಣನವರು ಅಂದಿನ ಬಿ.ಡಿ.ಓ ಅಧಿಕಾರಿಗೆ (ಇಂದಿನ ಬಿ.ಓ) ದೂರು ಸಲ್ಲಿಸಿದ್ದರು. ಈ ತಾಲ್ಲೂಕು ಅಧಿಕಾರಿಯು ಪ್ರಧಾನರೊಂದಿಗೆ ಶಾಮೀಲಾಗಿ ವಿಚಾರಣೆಗೆ ಬಂದಾಗ, ಅವನ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳದೆ ಅವರೊಂದಿಗೆ ಸಹಕರಿಸುವಂತೆ ಸಲಹೆ ನೀಡಿದನು. ಇದರಿಂದ ಕೋಪಗೊಂಡ ತಿಪ್ಪಣ್ಣನವರು ಅಂದಿನ ಶಿವಮೊಗ್ಗದ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಭರತ್‍ಲಾಲ್ ಮೀನಾ ಅವರಿಗೆ ದೂರು ನೀಡಿದರು. ಇವರು ಆರ್.ಆರ್ ಕೂಸಗೂರ ಎಂಬ ಉಪ ಕಾರ್ಯದರ್ಶಿಯನ್ನು ಇದರ ವಿಚಾರಣೆಗೆ ನೇಮಿಸಿದರು. ಇವರು ಸಹ ಪ್ರಧಾನರೊಂದಿಗೆ ಭಾಗಿಯಾಗಿ ಅವರಿಗೆ ಸಹಕರಿಸುವಂತೆ ಸಲಹೆ ನೀಡಿದರು. ಇಲ್ಲಿಯೂ ತನಗೆ ನ್ಯಾಯ ಸಿಗದ ಕಾರಣದಿಂದಾಗಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯಿಂದ ಜಿಲ್ಲಾ ಪರಿಷತ್ತಿನ ಅಧಿಕಾರಿಗಳನ್ನು ಸೇರಿಸಿ ರಾಜ್ಯಪಾಲರಿಗೆ ದೂರು ನೀಡಿದರು. ರಾಜ್ಯಪಾಲರು ಈ ದೂರನ್ನು ಪರಿಶೀಲಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಮಂತ್ರಿಗಳಿಗೆ ಪತ್ರವನ್ನು ರವಾನಿಸಿದರು. ಆಗ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿದ್ದ ಬಿ. ಬಸವಲಿಂಗಪ್ಪನವರನ್ನು ಇವರು ಭೇಟಿಯಾಗಿ ವಾಸ್ತವವನ್ನು ವಿವರಿಸಿದಾಗ ಇವರಿಗೆ ಮಂತ್ರಿಗಳು ಕೆಲವು ದಿನಗಳ ಕಾಲ ತಮ್ಮ ಮನೆಯಲ್ಲಿ ಆಶ್ರಯ ನೀಡಿ, ನಂತರದಲ್ಲಿ ಈ ಕೇಸನ್ನು ಪರಿಶೀಲಿಸಿ ಕ್ರಮವನ್ನು ಕೈಗೊಳ್ಳವಂತೆ ಎಸ್.ಎಲ್. ಗಂಗಾಧರಪ್ಪ ಎಂಬ ಡಿವಿಜನ್ ಕಮೀಷನರನ್ನು ನೇಮಿಸಿ, ಇವರಿಗೆ ರಕ್ಷಣೆ ನೀಡುವಂತೆ ತಿಳಿಸಿ ಕಳುಹಿಸಿದರು. ಕತ್ತಲಗೆರೆ ಗ್ರಾಮಕ್ಕೆ ಬಂದು ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿಯನ್ನು ಪರಿಶೀಲಿಸಿದ ಡಿವಿಜನ್ ಕಮೀಷನರು ಇಲ್ಲಿನ ಅವ್ಯವಹಾರಕ್ಕೆ ಸಹಕರಿಸಿದ ಇಂಜಿನಿಯರ್ ಹಾಗೂ ಕಾರ್ಯದರ್ಶಿಯನ್ನು ಅಮಾನತುಗೊಳಿಸಿದರು.
ಹೀಗೆ ತಮ್ಮ ಹೋರಾಟವನ್ನು ಮುಂದುವರೆಸಿದ ತಿಪ್ಪಣ್ಣನವರು ದಲಿತರಿಗೆ ಆಗುತ್ತಿರುವಂತಹ ಅನ್ಯಾಯಗಳನ್ನು ಶೋಧಿಸತೊಡಗಿದರು. ಈ ಗ್ರಾಮದ ಮಾಜಿ ಶಾಸಕರಾದ ಕುಂದೂರು ರುದ್ರಪ್ಪನವರು ದಲಿತ ವರ್ಗದ ಮಾದಿಗ ಜನಾಂಗಕ್ಕೆ ಸರ್ಕಾರವು ನೀಡಿದ 25 ಎಕರೆ ಉಂಬಳಿ ಭೂಮಿಯನ್ನು ಆಕ್ರಮಣ ಮಾಡಿಕೊಂಡು ತನ್ನ ಸ್ವಾಧೀನಕ್ಕೆ ವಶಪಡಿಸಿಕೊಂಡಿದ್ದ. ಇದನ್ನು ತಿಳಿದ ತಿಪ್ಪಣ್ಣನವರು ಈ ಭೂಮಿಯನ್ನು ಅನುಭವಿಸುತ್ತಿದ್ದ ಮಾಜಿ ಶಾಸಕನ ಮಗನ ವಿರುದ್ಧ ಮಾದಿಗ ಜನಾಂಗಕ್ಕೆ ಅರಿವು ಮೂಡಿಸಿ ಕೇಸು ದಾಖಲಿಸಿದರು. ಈ ಕೇಸನ್ನು ಅಂದಿನ ಜಿಲ್ಲಾಧಿಕಾರಿಯಾದ ನಾರಾಯಣ ಸ್ವಾಮಿ ಎಂಬುವವರು ತಮ್ಮ ನ್ಯಾಯಾಲಯದ ಸಮ್ಮುಖದಲ್ಲಿ ಬಗೆಹರಿಸುವುದಾಗಿ ಕೆಲವು ದಿನಗಳ ಕಾಲ ವ್ಯಾಜ್ಯೆಯನ್ನು ಮುಂದುವರೆಸಿ, ಈ ಕೇಸಿನ ವಿಚಾರದಲ್ಲಿ ಪಾರದರ್ಶಕತೆಯನ್ನು ಮೆರೆಯದೆ ಕಾನೂನಿನ ವಿರುದ್ಧವಾಗಿ ಮಾಜಿ ಶಾಸಕನ ಕಡೆಯವರಿಗೆ ಈ ಭೂಮಿ ಸೇರಿದ್ದು ಎಂದು ತೀರ್ಪು ನೀಡಿದರು. ಇಲ್ಲಿನ ಮತ್ತೊಂದು ದುರಂತವೆಂದರೆ ಅಂದು ಜಿಲ್ಲಾಧಿಕಾರಿಯಾಗಿದ್ದ ನಾರಾಯಣ ಸ್ವಾಮಿಯವರು ಮಾದಿಗ ಜನಾಂಗದವರೆ ಆಗಿದ್ದರು. ಆದರೆ ಇಲ್ಲಿ ದಲಿತರೆ ದಲಿತರ ಹಕ್ಕುಗಳನ್ನು ಕಿತ್ತುತಿನ್ನುವಂತಹ ಪರಿಸ್ಥಿತಿಯು ನಿರ್ಮಾಣವಾಗಿತ್ತು. ಇದರಿಂದಾಗಿ ತಿಪ್ಪಣ್ಣನವರ ಹೋರಾಟಕ್ಕೆ ಬಹು ದೊಡ್ಡದಾದ ಪೆಟ್ಟುಬಿದ್ದಿತು. ಹಣ, ಅಧಿಕಾರದ ಎದುರು ತಿಪ್ಪಣ್ಣನವರ ಹೋರಾಟಕ್ಕೆ ತಕ್ಕ ಪ್ರತಿಫಲ ದೊರೆಯದಾಯಿತು. ಈ ವೇಳೆಗಾಗಲೇ ತಿಪ್ಪಣ್ಣನವರು ಮಾಜಿ ಶಾಸಕನ ಕುಟುಂಬವು ನಡೆಸುತ್ತಿರುವ ಹಲವಾರು ಅಕ್ರಮಣಗಳನ್ನು ಬಯಲಿಗೆ ಹಾಕಿ, ಕೆಲವೊಮ್ಮೆ ಅವರಿಂದ ಹಲ್ಲೆಗೂ ಒಳಗಾಗಿದ್ದರು. ಆದರೆ ಈ ಜಮೀನಿನ ಕೇಸು ಅವರ ಪರವಾಗಿದ್ದರಿಂದಾಗಿ ಅವರಿಗೆ ಮತ್ತಷ್ಟು ಬಲಬಂದಂತಾಗಿ ಇವರ ಮನೆಯ ಮೇಲೆ ಬಹು ಸಂಖ್ಯೆಯಲ್ಲಿ ಜನರನ್ನು ಕೂಡಿಸಿ ಹಲ್ಲೆ ನಡೆಸಿದರು. ಈ ಹಲ್ಲೆಯಲ್ಲಿ ಕೆಲವು ಕಿಡಿಗೇಡಿಗಳು ಇವರ ಮನೆಯ ಹಂಚುಗಳೆಲ್ಲ ಹೊಡೆಯುವ ಹಾಗೆ ಕಲ್ಲು ತೂರಾಟ ನಡೆಸಿ, ತಿಪ್ಪಣ್ಣನವರಿಗೆ ಹಿಂದಿನಿಂದ ತಲೆಗೆ ಹೊಡೆದು ಕೆಡವಿದರು. ಈ ಸಮಯದಲ್ಲಿ ತುಂಬು ಗರ್ಭಿಣ ಯಾದ ಇವರ ಹೆಂಡತಿಯನ್ನು ಕಿಡಿಗೇಡಿಗಳು ಸಮೀಪದಲ್ಲೆ ಇದ್ದ ಚರಂಡಿಗೆ ತಳ್ಳಿದ ಪರಿಣಾಮವಾಗಿ ಇವರ ಹೊಟ್ಟೆಗೆ ಬಲವಾದ ಪೆಟ್ಟುಬಿದ್ದು, ಹೊಟ್ಟೆಯಲ್ಲಿದ್ದ ಶಿಶುವು ಮರಣ ಹೊಂದಿ, ಮುಂದೆ ಮಕ್ಕಳಾಗುವ ಅವಕಾಶ ಕಳೆದುಕೊಂಡರು. ಈ ಹಲ್ಲೆಯಿಂದಾಗಿ ಇವರ ಬದುಕಿಗೆ ಬಲವಾದ ಪೆಟ್ಟುಬಿದ್ದಿತು. ಇದರ ತರುವಾಯ ತಮ್ಮ ಸ್ವಗ್ರಾಮವನ್ನು ಬಿಟ್ಟುಬಂದು ಪ್ರಾಣ ರಕ್ಷಣೆಗಾಗಿ ದಾವಣಗೆರೆಯಲ್ಲಿಯೇ ಇಂದಿಗೂ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.
ಶ್ರೀಯುತ ತಿಪ್ಪಣ್ಣನವರು ಇಷ್ಟೆಲ್ಲ ಹಲ್ಲೆಗೆ ಗುರಿಯಾಗಿ ಶೋಷಣೆಗೆ ಒಳಗಾದರು ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ಇವರು ದಾವಣಗೆರೆಯಲ್ಲಿ ವಾಸ್ತವ್ಯವನ್ನು ಹೊಡಿದ್ದರೂ 1987 ರಿಂದ ಪ್ರಸ್ತುತದವರೆಗೂ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ನಿರಂತರವಾಗಿ ಆಯ್ಕೆಯಾಗುತ್ತಿದ್ದಾರೆ. ದಲಿತರ ಪರವಾದ ಇವರ ನಿಸ್ವಾರ್ಥ ಹೋರಾಟದ ಫಲವಾಗಿ ಇವರನ್ನು ಆ ಗ್ರಾಮದ ಜನತೆಯು ಪ್ರತಿ ಚುನಾವಣೆಯಲ್ಲಿ ಆಯ್ಕೆ ಮಾಡುತ್ತಿದ್ದಾರೆ. ತನ್ನ ಗ್ರಾಮದ ದಲಿತರು ಹಾಗೂ ಹಿಂದುಳಿದ ಜನತೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಲುಪಿಸುವುದರ ಜೊತೆಗೆ, ಅವರಲ್ಲಿ ಜಾಗೃತಿಯನ್ನು ಮೂಡಿಸುವತ್ತ ತಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಇವರು ಔಪಚಾರಿಕವಾಗಿ ಓದಿದ್ದು ಕೇವಲ ಎಂಟನೇ ತರಗತಿಯಾದರೂ ಇವರಲ್ಲಿನ ಜ್ಞಾನದ ದಾಹದಿಂದಾಗಿ ಸಾಕಷ್ಟು ವೈಚಾರಿಕ ಕೃತಿಗಳನ್ನು ಓದಿ ಹಾಗೂ ಹಲವಾರು ಚಿಂತಕರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಪ್ರಗತಿಯ ಹಾದಿಯಲ್ಲಿ ನಡೆದುಕೊಂಡು ಬಂದಿದ್ದಾರೆ. ಬಿ. ಆರ್. ಅಂಬೇಡ್ಕರರ ವಿಚಾರಗಳನ್ನು ಹಾಗೂ ಅವರು ನೀಡಿದ ಸಂವಿಧಾನದ ಆಶಯದಂತೆ ನಡೆದುಕೊಂಡು ದಲಿತರ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇವರು ತಮ್ಮ ಸ್ವಗ್ರಾಮದಲ್ಲಿ ದಲಿತರಿಗಾಗಿ ‘ಅಂಬೇಡ್ಕರ್ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಸಮುದಾಯ ಭವನ’ವನ್ನು ನಿರ್ಮಿಸಿದ್ದಾರೆ. ಇಲ್ಲಿ ದಲಿತರಿಗೆ ಮಾತ್ರ ಉಚಿತವಾಗಿ ಅವಕಾಶವನ್ನು ಕಲ್ಪಿಸಲಾಗುತ್ತದೆ. ಉಳಿದಂತೆ ಇತರೆ ವರ್ಗದವರಿಂದ ಮಾತ್ರ ಹಣವನ್ನು ಪಡೆಯಲಾಗುತ್ತದೆ. ಈ ಹಣದಿಂದ ದಲಿತರ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಹಾಗೆಯೇ ಅಂಬೇಡ್ಕರ್ ಎಸ್.ಸಿ/ ಎಸ್.ಟಿ ಸಹಕಾರ ಸಂಘವನ್ನು ಹೋಬಳಿ ಮಟ್ಟದಲ್ಲಿ ಸ್ಥಾಪಿಸಿಕೊಂಡು ದಲಿತರ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ.
ತಿಪ್ಪಣ್ಣನವರು ಹಲವಾರು ವಿಚಾರವಾದಿಗಳಿಂದ ಪ್ರೇರಣೆ ಮತ್ತು ಪ್ರಭಾವಕ್ಕೆ ಒಳಗಾಗಿ ತಮ್ಮ ಹೋರಾಟವನ್ನು ಮುನ್ನಡೆಸಿಕೊಂಡು ಬಂದವರಾಗಿದ್ದಾರೆ. ಇವರ ವಿಚಾರಗಳಿಗೆ ಪ್ರಮುಖವಾಗಿ ಪ್ರೇರಕ ಶಕ್ತಿಯಾಗಿದ್ದವರಲ್ಲಿ ದಲಿತ ಹೋರಾಟಗಾರ ಹಾಗೂ ಅಂಬೇಡ್ಕರ್ ಅನುಯಾಯಿಗಳಾದ ಬಿ. ಬಸವಲಿಂಗಪ್ಪ ಹಾಗೂ ಎಲ್.ಜಿ ಹಾವನೂರರು. ಬಿ. ಬಸವಲಿಂಗಪ್ಪ ಅವರೊಂದಿಗೆ ತುಂಬ ಹತ್ತಿರದ ಒಡನಾಟವನ್ನು ಹೊಂದಿದ್ದ ಇವರು, ಅವರಿಂದ ತುಂಬ ಮೆಚ್ಚುಗೆಯನ್ನು ಗಳಿಸಿದ್ದರು. ಬಸವಲಿಂಗಪ್ಪನವರ ತಾಯಿಯ ಊರು ಕತ್ತಲಗೆರೆಯಾದ ಕಾರಣ ಇವರ ಮಧ್ಯೆ ಉತ್ತಮವಾದ ಸಂಬಂಧವು ಬೆಳೆದಿತ್ತು. ಇದಕ್ಕೆ ಪ್ರಮುಖ ಕಾರಣವೆಂದರೆ ತಿಪ್ಪಣನವರ ಹೋರಾಟದ ನೆಲೆಗಳು ನಿಸ್ವಾರ್ಥದಿಂದ ಕೂಡಿದ್ದು, ದಲಿತರ ಪರವಾಗಿದ್ದವು. ಬಸವಲಿಂಗಪ್ಪನವರ ಆಶಯಗಳು ಇದೇ ನೆಲೆಯಲ್ಲಿದ್ದ ಕಾರಣದಿಂದಾಗಿ ಇವರನ್ನು ಮತ್ತಷ್ಟು ಹತ್ತಿರಕ್ಕೆ ಕರೆತಂದಿತ್ತು. ಬಸವಲಿಂಗಪ್ಪನವರ ಅಂಬೇಡ್ಕರ್‍ವಾದಿ ಚಿಂತನೆಗಳು ಸಹ ತಿಪ್ಪಣನವರಲ್ಲಿ ಸಾಕಷ್ಟು ಆಸಕ್ತಿಯನ್ನು ಕೆರಳಿಸಿದ್ದವು. ಈ ಕಾರಣದಿಂದಾಗಿ ಇವರಿಬ್ಬರ ನಡುವೆ ಉತ್ತಮ ಒಡನಾಟವಿತ್ತು. ಹಾಗೆಯೇ ಬಸವಲಿಂಗಪ್ಪನವರು ಸರಳವಾದ ವ್ಯಕ್ತಿತ್ವವನ್ನು ಹೊಂದಿದ್ದು, ದಲಿತರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದರು. ಇವರಿಬ್ಬರು ಏಕಾಂತದಲ್ಲಿದ್ದ ಸಮಯದಲ್ಲಿ ಬಸವಲಿಂಗಪ್ಪ ಕೆಲವು ಮಾತುಗಳನ್ನು ಹೇಳುತ್ತಿದ್ದರು. “ಮನುಷ್ಯ ಹುಟ್ಟಿದಾನೆ, ಒಂದಿನ ಸಾಯ್ತನ್ಲೆ. ಸಾಯೋದಂತು ಖಚಿತ. ಆದರೆ ಕೈಲಾದಷ್ಟು ನಾವು ಅಂಬೇಡ್ಕರರ ವಿಚಾರ ಇಟ್ಕೋಂಡು ಸಹಾಯ ಮಾಡಿ ಸಾಯ್ಬೇಕು.” ಹಾಗೆಯೇ “ದುಡ್ಡು ಮಾಡೋದೊಂದೆ ಅಲ್ಲ, ನಮ್ಮವರು ಕೆಳಮಟ್ಟದಲ್ಲಿದ್ದಾರೆ. ತಿಳುವಳಿಕೆ ಇಲ್ಲ, ಅವರಿಗೆ ಜಾಗೃತಿ ಮೂಡಿಸ್ಬೇಕು” ಎಂದು ಹೇಳುತ್ತಿದ್ದರು. ಬಸವಲಿಂಗಪ್ಪನವರ ಈ ಎಲ್ಲ ಮಾತುಗಳು ತಿಪ್ಪಣ್ಣನವರಲ್ಲಿ ಹೊಸ ಸಂಚಲನವೊಂದನ್ನು ಮೂಡಿಸುತ್ತಿದ್ದವು. ಇವರ ಹೊರಾಟದ ಹಾದಿಯಲ್ಲಿಯೇ ನಡೆಯುವ ಪ್ರಯತ್ನವನ್ನು ರೂಡಿಸಿಕೊಂಡು ಮುನ್ನಡೆದರು.
ಹಾಗೆಯೇ ಇವರು ವಿಚಾರವಾದಿಗಳು ಹಾಗೂ ಕಾನೂನು ತಜ್ಞರಾದ ಎಲ್.ಜಿ ಹಾವನೂರರೊಂದಿಗೆ ಉತ್ತಮವಾದ ಒಡನಾಟವನ್ನು ಹೊಂದಿದ್ದರು. ಹಾವನೂರರು ತಮ್ಮ ಸ್ವಂತ ಊರಾದ ರಾಣೆಬೆನ್ನೂರಿಗೆ ದಾವಣಗೆರೆ ಮಾರ್ಗದಲ್ಲಿ ಹೋಗುವ ಸಮಯದಲ್ಲಿ ತಿಪ್ಪಣ್ಣನವರನ್ನು ಭೇಟಿಮಾಡಿ, ಇವರೊಂದಿಗೆ ಮಾತುಕತೆ ನಡೆಸಿ ಹೋಗುತ್ತಿದ್ದರು. ತಿಪ್ಪಣ್ಣನವರು ಓದಿದ್ದು ಕಡಿಮೆಯಾದರೂ ಇಂತಹ ಮಹಾನ್ ವಿಚಾರವಾದಿಗಳ ಸಂಘವನ್ನು ಬೆಳೆಸಿಕೊಳ್ಳುವ ಮೂಲಕವಾಗಿ ಸಾಕಷ್ಟು ವೈಚಾರಿಕ ಜ್ಞಾನವನ್ನು ಪಡೆದುಕೊಂಡಿದ್ದಾರೆ. ತಿಪ್ಪಣ್ಣನವರು ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲದಿಂದಾಗಿ ಇಂತಹ ಹಲವಾರು ವಿಚಾರವಾದಿಗಳ ಸಂಘವನ್ನು ಬೆಳೆಸಿಕೊಂಡು ಬಂದಿದ್ದಾರೆ. ಸಮಕಾಲಿನ ಸಂದರ್ಭದಲ್ಲಿ ದಲಿತರ ಪ್ರಗತಿ ಹಾಗೂ ಅವರಲ್ಲಿ ಜಾಗೃತಿಯನ್ನು ಮೂಡಿಸುವ ಹಂಬಲದಿಂದ ದಲಿತ ಚಿಂತಕರು ಹಾಗೂ ಪ್ರಗತಿಪರ ವಿಚಾರವಾದಿಗಳಾದ ದೇವನೂರು ಮಹಾದೇವ, ಸಿದ್ಧಲಿಂಗಯ್ಯ, ಜಿ.ಟಿ.ಗೋವಿಂದಪ್ಪ, ಸಿ.ಕೆ.ಮಹೇಶ್ ಅವರಂತಹ ಚಿಂತಕರೊಂದಿಗೆ ಉತ್ತಮ ಒಡನಾಟವನ್ನು ಬೆಳೆಸಿಕೊಂಡು ದಲಿತರ ಪ್ರಗತಿಯತ್ತ ಮುನ್ನೆಡೆಯುತ್ತಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ವಿಚಾರಧಾರೆಗಳಿಂದ ಪ್ರಭಾವಿತರಾದ ತಿಪ್ಪಣ್ಣನವರು ದಿನಾಂಕ 14 ಅಕ್ಟೋಬರ್ 2003ರಂದು ‘ಬೌದ್ಧಧಮ್ಮ ದೀಕ್ಷಾ ಸಮಾರಂಭ ಸಿದ್ಧತಾ ಸಮಿತಿ ಧಮ್ಮ ದೀಕ್ಷಾ ಸಮಾರಂಭ’, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಬೌದ್ಧಧಮ್ಮಕ್ಕೆ ಮತಾಂತರಗೊಂಡಿದ್ದಾರೆ. ಬುದ್ಧನ ವಿಚಾರಗಳನ್ನು ತಮ್ಮ ಬದುಕಲ್ಲಿ ಅಳವಡಿಸಿಕೊಂಡಿರು ಇವರು ದಲಿತ ಸಮೂಹಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ದಲಿತರ ಜಾಗೃತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಂದು ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯ ಅಡಿಯಲ್ಲಿ ಹುಟ್ಟಿಕೊಂಡಿರುವ ಕೆಲವು ಬಣಗಳ ಮುಖಂಡರು ಅಂಬೇಡ್ಕರ್ ಹೆಸರಿನಲ್ಲಿ ನಡೆಸುತ್ತಿರುವ ರೋಲ್ಕಾಲ್ ನೀತಿಯಿಂದ ಬೇಸರಗೊಂಡಿರುವ ಇವರು, ಅಂಬೇಡ್ಕರ್ ತತ್ವ-ಚಿಂತನೆಗಳಿಗೆ ವಿರುದ್ಧವಾಗಿ ನಡೆಸುತ್ತಿರುವ ಬಾಬಾಸಾಹೇಬರ ಜನ್ಮ ದಿನಾಚರಣೆಯ ಈ ಕ್ರಮದಿಂದ ದಲಿತರ ಪ್ರಗತಿಗಾಗಲಿ ಹಾಗೂ ಅವರಲ್ಲಿ ಜಾಗೃತಗೊಳಿಸುವುದಕ್ಕಾಲಿ ಯಾವುದೇ ಪ್ರಯೋಜನವಿಲ್ಲ ಎಂಬುದನ್ನರಿತ ಇವರು ಇಂತಹ ಮೂಲಭೂತವಾದಿ ಆಚರಣೆಗಳಿಂದ ದೂರಸರಿದು, ಪ್ರತಿವರ್ಷ ಅಂಬೇಡ್ಕರ್ ಜಯಂತಿಗೆ ಬದಲಾಗಿ ಬೌದ್ಧ ಪೂಣ ್ಮೆಯನ್ನು ಸರಳವಾಗಿ ಆಚರಿಸುತ್ತ ಬಂದಿದ್ದಾರೆ. ಈ ಕಾರ್ಯಕ್ರಮಕ್ಕೆ ಯಾರಿಂದಲೂ ಹಣವನ್ನು ವಸೂಲಿ ಮಾಡದೆ ಇವರು ಒಂದು ಸಾವಿರ ರೂಪಾಯಿ ಹಾಗೂ ಇವರ ಅಪ್ತರು, ಪ್ರಗತಿಪರ ಚಿಂತಕರಾದ ಮಹದೇವಪ್ಪನವರು ಒಂದು ಸಾವಿರ ರೂಪಾಯಿಗಳನ್ನು ಹಾಕಿಕೊಂಡು ಕೇವಲ ಎರಡು ಸಾವಿರ ರೂಪಾಯಿಯಲ್ಲಿ ಸರಳವಾಗಿ ಬೌದ್ಧ ಪೂಣ ್ಮೆ ಸಮಾರಂಭವನ್ನು ಆಯೋಜಿಸುತ್ತ ಬಂದಿದ್ದು, ಸಾಧ್ಯವಾದಷ್ಟು ದಲಿತರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತ ಬಂದಿದ್ದಾರೆ. ಪ್ರಸ್ತುತದಲ್ಲಿ ಬೌದ್ಧಧರ್ಮಕ್ಕೆ ಮತಾಂತರಗೊಳಿಸುವಲ್ಲಿ ಎದುರಾಗುವ ಸಮಸ್ಯೆಗಳನ್ನರಿತ ಇವರು, ತಮ್ಮ ಜನತೆಯನ್ನು ಬೌದ್ಧಧರ್ಮಕ್ಕೆ ಮತಾಂತರಗೊಳಿಸುವುದು ಸುಲಭದ ಮಾತಲ್ಲ. ಆದರೆ ಬುದ್ಧನ ವೈಚಾರಿಕ ಚಿಂತನೆಗಳ ಬಗ್ಗೆ ಅರಿವು ಮೂಡಿಸಿದರೆ ದಲಿತರಲ್ಲಿ ಪ್ರಗತಿಯಾಗಬಹುದು ಎಂಬ ಆಶಯವೊತ್ತ ಇವರು ಬೌದ್ಧ ಪೂಣ ್ಮೆಯಂತಹ ಹಲವಾರು ಕಾರ್ಯಕ್ರಮಗಳ ಮೂಲಕ ದಲಿತರಲ್ಲಿ ಅರಿವು ಮೂಡಿಸಲು ಶ್ರಮಿಸುತ್ತಿದ್ದಾರೆ. ತಿಪ್ಪಣ್ಣನವರು ತಮ್ಮ ವೈಚಾರಿಕ ದೃಷ್ಟಿಕೋನದಿಂದ ಬುದ್ಧನನ್ನು ಅಪ್ಪಿಕೊಂಡಿದ್ದಾರೆ. ಇವರ ಈ ವಿಚಾರಗಳ ಹಿಂದೆ ಬಾಬಾಸಾಹೇಬರ ಪ್ರಭಾವವು ಎದ್ದು ಕಾಣುತ್ತದೆ.
ಅಂಬೇಡ್ಕರ್ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡ ತಿಪ್ಪಣ್ಣನವರು ಅವರಂತೆಯೇ ದಲಿತರ ಪ್ರಗತಿಗಾಗಿ ತನ್ನ ಕೈಲಾದಷ್ಟು ಪ್ರಾಮಾಣ ಕವಾದ ಹೋರಾಟವನ್ನು ನಡೆಸುತ್ತಿದ್ದಾರೆ. ಇವರು ಸುಮಾರು ಇಪ್ಪತ್ತೈದು ವರ್ಷಗಳಿಂದಲೂ ರಾಜಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಮುನ್ನಡೆಯುತ್ತ ಬಂದರೂ ಇದರಿಂದ ತನ್ನ ವೈಯಕ್ತಿಕ ಬದುಕಿಗಾಗಿ ಯಾವುದೇ ಆಸ್ತಿಯನ್ನಾಗಲಿ, ಹಣವನ್ನಾಗಲೀ ಮಾಡಿಕೊಂಡಿಲ್ಲ. ಇಂದಿಗೂ ದಾವಣಗೆರೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಈ ದಂಪತಿಗಳು ಜೀವನ ಸಾಗಿಸುತ್ತಿದ್ದಾರೆ. ರಾಜಕೀಯ ಭ್ರಷ್ಟರ ಕೂಪ ಎಂಬುದಾಗಿ ಅರಿತಿದ್ದರೂ ಇದರಿಂದ ಸಾಧ್ಯವಾದಷ್ಟು ದಲಿರು ಹಾಗೂ ಹಿಂದುಳಿದವರ ಪ್ರಗತಿಗಾಗಿ ಕೈಲಾದಷ್ಟು ಸಹಾಯ ಮಾಡುವ ಉದ್ಧೇಶದಿಂದ ರಾಜಕೀಯದಲ್ಲಿ ಮುಂದುವರೆಯುವ ಮೂಲಕ ತನ್ನ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಉನ್ನತ ವರ್ಗದವರೇ ಹೆಚ್ಚಾಗಿರುವ ಮತ್ತು ಆರ್ಥಿಕವಾಗಿ ಪ್ರಬಲವಾಗಿರುವ ಇವರ ಗ್ರಾಮದಲ್ಲಿನ ಚುನಾವಣೆಯೊಂದರಲ್ಲಿ ಒಟ್ಟು ಪಂಚಾಯಿತಿಯ ಹದಿನೈದು ಸೀಟುಗಳಲ್ಲಿ ಇವರು ಹನ್ನೇರಡು ಸೀಟುಗಳನ್ನು ತಮ್ಮ ಪರವಾದವರನ್ನೇ ಜಯಶೀಲರಾಗಿ ಮಾಡಿಕೊಂಡಿರುತ್ತಾರೆ. ಈ ಸಾಧನೆಯು ಇವರ ಹೋರಾಟದಲ್ಲಿನ ಕ್ರಿಯಾಶೀಲತೆಯನ್ನು ಎತ್ತಿಹಿಡಿಯುತ್ತದೆ. ರಾಜಕೀಯದಲ್ಲಿ ಆಳವಾದ ಅನುಭವವುಳ್ಳ ಇವರು ಅಂಬೇಡ್ಕರ್ ಕಾಂಗ್ರೇಸ್ ಪಕ್ಷವನ್ನು ಕುರಿತು ಹೇಳುತ್ತಿದ್ದಂತಹ ‘ಕಾಂಗ್ರೇಸ್ ಉರಿಯುವ ಮನೆ’ ಎಂಬ ತತ್ವವನ್ನು ಸಂಪೂರ್ಣವಾಗಿ ಮನಗಂಡಿದ್ದಾರೆ. ಆದರೆ ಇಂದಿನ ಬಿಜೆಪಿಗೆ ಹೋಲಿಸಿದರೆ ಕಾಂಗ್ರೇಸ್ ಅದರಲ್ಲೆ ಉತ್ತಮವಾದುದು ಎಂಬ ಅನಿವಾರ್ಯತೆಯಿಂದ ಕಾಂಗ್ರೇಸ್ ಪಕ್ಷದಲ್ಲಿ ಮುನ್ನಡೆಯುತ್ತಿದ್ದಾರೆ. ಈ ದೇಶದ ದಲಿತರು ಹಾಗೂ ದಮನಿತರ ಪರವಾಗಿ ಜನ್ಮತಾಳಿದ ಸಮಾಜವಾದಿ ಪಕ್ಷದ ಮಹತ್ವವನ್ನರಿತ ಇವರು, ಮಾಯವತಿ ಮಾಡಿದ ತಪ್ಪಿನಿಂದ ಈ ಪಕ್ಷಕ್ಕಾದ ಅನ್ಯಾಯವನ್ನು ಸಂಪೂರ್ಣವಾಗಿ ಅರಿತ್ತಿದ್ದಾರೆ. ಮಾಯವತಿ ಮಾಡಿದ ತಪ್ಪಿನಿಂದಾಗಿ ದಲಿತರ ಬದುಕಿನ ಮೇಲಾದ ಪ್ರಭಾವವನ್ನು ಸಂಪೂರ್ಣವಾಗಿ ಅರಿತಿದ್ದಾರೆ.
ತಿಪ್ಪಣ್ಣನವರು ಕೇವಲ ರಾಜಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾದವರಲ್ಲ. ಹಲವಾರು ಪ್ರಗತಿಪರವಾದ ವಿಚಾರಗಳನ್ನು ಮೈಗೂಡಿಸಿಕೊಂಡು ಅದರಂತೆ ಬಾಳಿ ಬದುಕುತ್ತಿದ್ದಾರೆ. ಇಲ್ಲಿನ ಪುರೋಹಿತಶಾಹಿ ವ್ಯವಸ್ಥೆಯಿಂದ ಇಲ್ಲಿನ ತಳಸಮುದಾಯದ ಜನತೆಯ ಮೇಲಾದ ಆಕ್ರಮಣ ಮತು ದಬ್ಬಾಳಿಕೆಗಳನ್ನು ಸಂಪೂರ್ಣವಾಗಿ ಮನಗಂಡಿರುವ ಇವರು ಜಾತಿಗೊಂದು ಮಠಗಳನ್ನು ನಿರ್ಮಿಸುತ್ತಿರುವ ಚಿತ್ರದುರ್ಗದ ಮುರುಘ ಶರಣರ ಈ ಕ್ರಮದ ವಿರುದ್ಧ ಹೋರಾಟ ನಡೆಸಿದ್ದಾರೆ. ಹಾಗೆಯೇ ಈ ನಾಡಿನ ಮೂಲ ನಿವಾಸಿಯಾಗಿರುವ ಬಲಿಚಕ್ರವರ್ತಿಯನ್ನು ಸಂಹಾರ ಮಾಡಿದ ಸವಿನೆನಪಿಗಾಗಿ ಪುರೋಹಿತಶಾಹಿಯು ಆಚರಿಸುತ್ತಾ ಬಂದಿರುವ ಬಲಿ ಪಾಡ್ಯಮಿಯನ್ನು ನಮ್ಮವರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವ ಬಗ್ಗೆ ತೀವ್ರ ವೇದನೆಯನ್ನು ವ್ಯಕ್ತಪಡಿಸುವ ಇವರು, ಅಂದು ಉಪವಾಸ ಇರುವ ಮೂಲಕ ಆ ದಿನವನ್ನು ‘ಕರಾಳದಿನ’ವನ್ನಾಗಿ ಆಚರಿಸುತ್ತಾ ಬಂದಿದ್ದಾರೆ. ಇದೇ ರೀತಿಯಾಗಿ ಪುರೋಹಿತಶಾಹಿಯು ತನ್ನ ಅಸ್ತಿತ್ವಕ್ಕಾಗಿ ದಲಿತರು ಹಾಗೂ ಈ ನಾಡಿನ ದಮನಿತರನ್ನು ಹತ್ತಿಕ್ಕುತ್ತಾ ಬಂದಿರುವ ವಿಚಾರಗಳನ್ನು ಅರಿತುಕೊಂಡು ಅವುಗಳನ್ನು ವಿರೋಧಿಸುವ ನೆಲೆಯಲ್ಲಿ ತಮ್ಮ ಹೋರಾಟವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.
ಶ್ರೀಯುತರು ರಾಜ್ಯ ಮಟ್ಟದಲ್ಲಾಗಲಿ, ರಾಷ್ಟ್ರ ಮಟ್ಟದಲ್ಲಾಗಲಿ ಹೋರಾಟ ಮಾಡಿ ಗುರುತಿಸಿಕೊಂಡವರಲ್ಲ. ತಳಮಟ್ಟದ ಗ್ರಾಮೀಣ ಬದುಕಿನಲ್ಲಿಯೇ ಬೆಳೆದುಬಂದು, ತನ್ನ ತಿಳುವಳಿಕೆಯಿಂದಾಗಿ ತನ್ನ ಸಮುದಾಯದ ಜನತೆಯ ಮೇಲೆ ಶತಶತಮಾನಗಳಿಂದ ಆಗುತ್ತಿದ್ದಂತಹ ಅನ್ಯಾಯ ಅಕ್ರಮಗಳ ವಿರುದ್ಧ ಸಮರಸಾರಿ, ಅದರಿಂದ ತೀವ್ರವಾದ ಪಟ್ಟು ತಿಂದವರು. ಇವರ ಕುಟುಂಬದ ಮೇಲೆ ಉನ್ನತ ವರ್ಗದವರು ನಡೆಸಿದ ಹಲ್ಲೆಯಿಂದ ತಮ್ಮ ಹೆಂಡತಿಯ ಗರ್ಭಕ್ಕೆ ಪ್ರಬಲವಾದ ಪೆಟ್ಟುಬಿದ್ದು ತನ್ನ ಮುಂದಿನ ಬದುಕನ್ನು ಬೆಳಗಲು ಬೇಕಾದ ಸಂತಾನವನ್ನೆ ಕಳೆದುಕೊಂಡರು. ಇಷ್ಟಾದರೂ ಇವರು ಎದೆಗುಂದದೆ ತಮ್ಮ ಹೋರಾಟವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಇವರ ಹೋರಾಟಕ್ಕೆ ಯಾವುದೇ ಸಂಘಟನೆ ಹಾಗೂ ಚಳುವಳಿಗಳ ಬೆಂಬಲವಿಲ್ಲದೆ ಬಾಬಾಸಾಹೇಬರು ಈ ದೇಶಕ್ಕೆ ನೀಡಿರುವ ಸಂವಿಧಾನವನ್ನೆ ಪ್ರಬಲ ಅಸ್ತ್ರವಾಗಿಟ್ಟುಕೊಂಡು ಅಸಮಾನತೆ, ದೌರ್ಜನ್ಯ ಹಾಗೂ ಆಕ್ರಮಣಕಾರಿ ನೀತಿಯ ವಿರುದ್ದ ಹೋರಾಟ ನಡೆಸುತ್ತಾ ಬಂದಿದ್ದಾರೆ. ನಿಜವಾಗಿಯೂ ಈ ದೇಶದ ಪ್ರಗತಿಯಾಗಬೇಕಾಗಿರುವು ರಾಜಧಾನಿಗಳ ಮಟ್ಟದಲ್ಲಲ್ಲ. ಅದು ಗ್ರಾಮೀಣ ಮಟ್ಟದಲ್ಲಿ. ಈ ದೇಶದ ಪ್ರಗತಿಗಾಗಿ ಹೋರಾಟ ನಡೆಸಿದಂತಹ ಬುದ್ಧ, ಬಸವ, ಫುಲೆ, ವಿವೇಕಾನಂದ, ಅಂಬೇಡ್ಕರ್, ಭಗತ್‍ಸಿಂಗ್ ಅವರಂತಹ ಕ್ರಾಂತಿಕಾರಿ ಹೋರಾಟಗಾರರ ಹೋರಾಟ ಕ್ರಮವು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ಗ್ರಾಮೀಣ ಮಟ್ಟದಲ್ಲಿ ದಲಿತರು ಹಾಗೂ ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ನಿಸ್ವಾಥ್ವಾಗಿ ಹೋರಾಟ ನಡೆಸುತ್ತಿರುವಂತಹ ಇಂತವರು ಅಷ್ಟೇ ಮುಖ್ಯವಾಗಿದ್ದಾರೆ. ಬಾಬಾಸಾಹೇಬರು ಬೆಂಗಳೂರಿಗೆ ಬಂದ ಸಮಯದಲ್ಲಿ ಅತ್ಯಂತ ನೋವಿನಿಂದ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಅದೇನೆಂದರೆ, “ನಾನು ನನ್ನ ಹೋರಾಟದಲ್ಲಿ ವಿದ್ಯಾವಂತರಿಗಾಗಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದೇನೆ. ಆದರೆ ಅನಕ್ಷರಸ್ಥರಿಗಾಗಿ ಏನು ಮಾಡಲು ಆಗಲಿಲ್ಲ. ಈ ವಿದ್ಯಾವಂತರು ಅವಿದ್ಯಾವಂತರ ಪ್ರಗತಿಗೆ ಶ್ರಮಿಸುತ್ತಾರೆಂದು ನಾನು ಭಾವಿಸಿದ್ದೆ. ಅದು ನೆರವೇರಲಿಲ್ಲ” ಎಂಬುದಾಗಿ ಹೇಳುತ್ತಾರೆ. ಅಂಬೇಡ್ಕರರ ಈ ಕನಸು ನೆರವೇರಬೇಕಾದರೆ ಗ್ರಾಮೀಣ ಮಟ್ಟದಲ್ಲಿ ತಿಪ್ಪಣ್ಣನಂತಹ ನಿಸ್ವಾರ್ಥಿಗಳಿಂದ ಮಾತ್ರ ಸಾಧ್ಯವೇ ಹೊರತು, ಅಂಬೇಡ್ಕರ್ ಜಯಂತಿಯ ದಿನ ಮಾತ್ರ ಅವರ ಭಾವಚಿತ್ರದೆದುರು ಭಾಷಣ ಬಿಗಿದು, ಮರುದಿನ ದಲಿತರಿಗು ನನಗೂ ಯಾವುದೇ ಸಂಬಂಧವಿಲ್ಲ ಎಂಬ ಬಲಿತ ದಲಿತ ಮನಸ್ಥಿತಿಯವರಿಂದಾಗಲಿ, ಅಂಬೇಡ್ಕರ್ ಹೆಸರಿನಲ್ಲಿ ಹಣ ವಸೂಲಿ ಮಾಡಿ ಅವರ ಭಾವಚಿತ್ರವನ್ನು ಮೆರವಣ ಗೆ ಮಾಡುತ್ತಾ ಕುಡಿದು, ಕುಣ ದು ಕುಪ್ಪಳಿಸುವ ಮನಸ್ಥಿತಿಯವರಿಂದಲಾಗಲೀ ಸಾಧ್ಯವಿಲ್ಲ.
ನಿಜವಾಗಿಯೂ ಅಂಬೇಡ್ಕರ್ ಹೋರಾಟ ಸಾರ್ಥಕವಾಗುವು ತಳಸಮುದಾಯದ ನೆಲೆಯಲ್ಲಿ ನಿಂತು ಹೋರಾಟ ಮಾಡುವವರಿಂದ ಮಾತ್ರ. ಇನ್ನು ನಮ್ಮ ಗ್ರಾಮಗಳಲ್ಲಿ ದಲಿತರಲ್ಲಿ ಅಸಮಾನತೆ ನೆಲೆಯೂರಿರುವುದಕ್ಕೆ ಕಾರಣ ಇವರಲ್ಲಿನ ಜಾಗೃತಿಯ ಕೊರತೆಯಾಗಿದೆ. ಕತ್ತಲಗೆರೆ ತಿಪ್ಪಣ್ಣನಂತಹ ಗ್ರಾಮೀಣ ಪ್ರತಿಭೆಗಳು ನಮ್ಮ ರಾಷ್ಟ ಮಟ್ಟದ ಹಾಗೂ ರಾಜ್ಯ ಮಟ್ಟದ ಹೋರಾಟಗಾರರಿಗೆ ಆದರ್ಶನಿಯವಾಗಿದ್ದಾರೆ. ಇಂತವರ ಜೀವನ ಕ್ರಮ ಹಾಗೂ ಅವರ ಹೋರಾಟದ ಮಾದರಿಗಳನ್ನು ಅಳವಡಿಸಿಕೊಂಡು ಮುನ್ನಡೆದರೆ ಅಂಬೇಡ್ಕರ್ ಮತ್ತು ಬಿ. ಕೃಷ್ಣಪ್ಪನವರಂತಹÀ ಹೋರಾಟಗಾರರ ಶ್ರಮ ಸಾರ್ಥಕವಾಗುತ್ತದೆ. ಇದರಿಂದ ಅಂಬೇಡ್ಕರ್ ಎಳೆದುತಂದ ತೇರು ಮುನ್ನುಗ್ಗುತ್ತದೆ, ಕರ್ನಾಟಕದ ದಲಿತರ ಗುಡಿಸಲಿನಲ್ಲಿ ಬಿ. ಕೃಷ್ಣಪ್ಪನವರು ಹಚ್ಚಿದ ಹಣತೆ ಬೆಳಗುತ್ತದೆ ಮಾತ್ರವಲ್ಲ ಬೆಳಕು ನೀಡುತ್ತದೆ. ಇಲ್ಲದೇ ಹೋದರೆ ಅಂಬೇಡ್ಕರ್ ಎಳೆದು ತಂದ ತೇರು ನಿಂತಲೇ ನಿಂದು ಗೆದ್ದಲು ಹಿಡಿಯುತ್ತದೆ. ಬಿ. ಕೃಷ್ಣಪ್ಪನವರು ಹಚ್ಚಿದ ಹಣತೆ ಎಣ್ಣೆ ಇಲ್ಲದೆ ತನ್ನ ಬತ್ತಿಯನ್ನೆಲ್ಲ ತಿಂದು ನಂದಿ ಹೋಗುತ್ತದೆ.
(Author: ಕೆ.ಎ ಓಬಳೇಶ್, ಮೋ: 9538345639)

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು
-
ಅಂಕಣ2 days agoಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು
-
ದಿನದ ಸುದ್ದಿ5 days agoದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ
-
ದಿನದ ಸುದ್ದಿ10 hours agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ

