Connect with us

ದಿನದ ಸುದ್ದಿ

ಅಂಬೇಡ್ಕರ್‌ : ಅಂತಿಮ ಯಾತ್ರೆಯ ಆರ್ದ್ರ ಚಿತ್ರಗಳು

Published

on

  • ಎನ್‌.ಆರ್‌. ಶಿವರಾಂ

ಡಿಸೆಂಬರ್‌ 4, 1956ನೇ ಇಸವಿ. ಡಾ. ಅಂಬೇಡ್ಕರ್‌ ಅವರು ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿದ್ದರು. ಮರುದಿನ ಮನೆಯಲ್ಲೇ ಉಳಿದುಕೊಂಡು ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಅಂದು ರಾತ್ರಿ 8ಕ್ಕೆ, ಜೈನ ಮುನಿಗಳೊಬ್ಬರು ಅಂಬೇಡ್ಕರ್‌ರವರನ್ನು ಭೇಟಿ ಮಾಡಿ ನಾಳಿನ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ರಾತ್ರಿ 11.15ಕ್ಕೆ ಲೇಖನಿ ಕೆಳಗಿಡುವ ವೇಳೆಗೆ ಬಾಬಾ ಸಾಹೇಬರು ಸಾಕಷ್ಟು ಬಳಲಿದ್ದರು. ನಂತರ ಕೊಂಚ ಊಟ ಮಾಡಿದರು.

ತಮ್ಮ ಆಪ್ತ ಕಾರ್ಯದರ್ಶಿ ನಾನಕ್‌ಚಂದುರತ್ತು ಜೊತೆ ‘ಬುದ್ಧ ಅಂಡ್‌ ಹಿಸ್‌ ಧಮ್ಮ’ ಗ್ರಂಥದ ಬಗ್ಗೆ ಮಾತನಾಡಿದರು ಹಾಗೂ ಈ ಪುಸ್ತಕದ ಅರ್ಪಣೆಯ ಟೈಪ್‌ ಮಾಡಿದ ಪುಟಗಳನ್ನು ಜೊತೆಗೆ ಬರ್ಮಾ ಸರ್ಕಾರಕ್ಕೆ ತಾವು ಬರೆದಿರುವ ಪತ್ರಗಳನ್ನು ತೆಗೆದು ತಮ್ಮ ಟೇಬಲ್‌ ಮೇಲಿಡುವಂತೆ ಸೂಚಿಸಿದರು. ರಾತ್ರಿ ಮತ್ತೊಮ್ಮೆ ಅವುಗಳನ್ನು ಪರಿಶೀಲಿಸುವುದು ಅವರ ಉದ್ದೇಶವಾಗಿತ್ತು. ‘ಬೆಳಿಗ್ಗೆ ಬೇಗನೇ ಬಂದುಬಿಡು. ಅವುಗಳೆಲ್ಲವನ್ನು ನಾಳೆಯೇ ತುರ್ತಾಗಿ ಕಳುಹಿಸಬೇಕು’ ಎಂದು ಹೇಳಿದರು.

ಎಲ್ಲ ಕೆಲಸ ಮುಗಿಸಿ, ‘ಬೆಳಿಗ್ಗೆ ಬೇಗ ಬರುವೆ’ ಎಂದು ಹೇಳಿದ ರತ್ತು ತಮ್ಮ ಸೈಕಲ್‌ ಹತ್ತಿ ಮನೆಗೆ ತೆರಳಿದರು. ನಂತರ ಬಾಬಾ ಸಾಹೇಬರು ಟೇಬಲ್‌ ಮೇಲಿಟ್ಟಿದ್ದ ಎಲ್ಲಾ ಕಾಗದ ಪತ್ರಗಳನ್ನು ಓದಿ ಮುಗಿಸಿ, ತಡರಾತ್ರಿ ಮಲಗಿಕೊಂಡರು. ಡಿಸೆಂಬರ್‌ 6ರ ಮುಂಜಾವು. ಬೆಳಿಗ್ಗೆ 6.30ಕ್ಕೆ ಬಾಬಾ ಸಾಹೇಬರ ಪತ್ನಿ ಸವಿತಾ ಅಂಬೇಡ್ಕರ್‌ ಅವರು ಚಹಾದೊಂದಿಗೆ ಕೊಠಡಿಗೆ ಬಂದರು. ಬಾಬಾ ಸಾಹೇಬರು ನಿದ್ದೆಯಲ್ಲಿದ್ದರು. ಅದು ಚಿರನಿದ್ರೆ.

ತಕ್ಷಣವೇ ರತ್ತು ಅವರಿಗೆ ಕರೆ ಹೋಯಿತು. ಅಂಬೇಡ್ಕರ್‌ ನಿಧನರಾದ ಸುದ್ದಿಯನ್ನು ನಂತರ ಆಕಾಶವಾಣಿಗೆ ತಿಳಿಸಲಾಯಿತು. ಈ ವಾರ್ತೆ ರೇಡಿಯೊದಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಇಡೀ ದೇಶದ ಸೂತಕದ ಸಂಚಲನೆ. ಬಾಬಾ ಸಾಹೇಬರ ಕೋಟಿ ಕೋಟಿ ಅನುಯಾಯಿಗಳು ದಿಗ್ಭ್ರಾಂತರಾದರು. ಲಕ್ಷ ಲಕ್ಷ ಜನರು ಅಂಬೇಡ್ಕರ್‌ರವರು ಕೊನೆಯುಸಿರೆಳೆದ ನವದೆಹಲಿಯ ಅಲಿಪುರ ರಸ್ತೆಯಲ್ಲಿರುವ 26ನೇ ನಂಬರಿನ ಬಂಗಲೆಯತ್ತ ಧಾವಿಸಲಾರಂಭಿಸಿದರು. ಅಂಬೇಡ್ಕರ್‌ರವರ ಪಾರ್ಥಿವ ಶರೀರವನ್ನು ಅವರ ಕರ್ಮಭೂಮಿ ಮುಂಬೈಗೆ ತರುವುದಾಗಿಯೂ, ಮುಂಬೈನಲ್ಲೇ ಅಂತಿಮ ಶವಸಂಸ್ಕಾರ ಮಾಡುವುದಾಗಿಯೂ ಪ್ರಕಟಿಸಲಾಯಿತು.

ದುಡ್ಡಿನ ಕೊರತೆ

1947ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ಅಖಂಡ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳೆಂದು ಎರಡು ಪ್ರತ್ಯೇಕ ರಾಷ್ಟ್ರಗಳನ್ನಾಗಿ ವಿಭಜಿಸಿದರು. ಆ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು ದಲಿತರಿಗಾಗಿಯೂ ಒಂದು ಪ್ರತ್ಯೇಕ ರಾಷ್ಟ್ರ ಕೇಳಿದ್ದರೆ, ಭಾರತ ಮೂರು ಪ್ರತ್ಯೇಕ ದೇಶಗಳನ್ನಾಗಿ ವಿಭಜನೆ ಹೊಂದುತ್ತಿತ್ತೇನೋ? ಆಗ ದಲಿತರಿಗಾಗಿ ರೂಪುಗೊಳ್ಳುವ ದೇಶಕ್ಕೆ ಅಂಬೇಡ್ಕರ್‌ ಅವರು ತಾವು ಬದುಕಿರುವವರೆಗೂ ಪ್ರಧಾನಮಂತ್ರಿ ಆಗಿರಬಹುದಿತ್ತು. ಆದರೆ ಬುದ್ಧನ ತತ್ವಗಳಿಂದ ಪ್ರಭಾವಿತರಾಗಿದ್ದ ಅವರು ಪ್ರಧಾನಿಯಾಗುವ ಆಸೆಯಿಂದ ಅಖಂಡ ಭಾರತವನ್ನು ಹೋಳು ಮಾಡಲು ಇಷ್ಟಪಡಲೂ ಇಲ್ಲ ಮತ್ತು ಅಂತಹ ಪ್ರಯತ್ನಕ್ಕೆ ಕೈ ಹಾಕಲೂ ಇಲ್ಲ.

ಅಧಿಕಾರದ ಮಾತಿರಲಿ, ಅಂಬೇಡ್ಕರ್‌ ತಮ್ಮ ವಿದ್ಯೆ–ತಿಳಿವಳಿಕೆಯನ್ನು ವಾಣಿಜ್ಯೋದ್ಯಮಕ್ಕೆ ಬಳಸಿಕೊಂಡಿದ್ದರೆ ಬಹುದೊಡ್ಡ ವಾಣಿಜ್ಯೋದ್ಯಮಿಯಾಗಿ ರೂಪುಗೊಳ್ಳಲು ಸಾಧ್ಯವಿತ್ತು. ಅವರಿಗಿದ್ದ ಜ್ಞಾನ ಮತ್ತು ಪ್ರತಿಭೆಗೆ ಅವರು ವಿದೇಶದಲ್ಲಿ ಉನ್ನತ ಹುದ್ದೆ ಪಡೆದು ಅಲ್ಲಿಯೇ ನೆಲೆಸಬಹುದಿತ್ತು.

ಆದರೆ, ಅವರದು ಭಾರತದಲ್ಲಿಯೇ ಉಳಿದು ಪ್ರವಾಹದ ವಿರುದ್ಧ ಈಜುವ ಮನೋಭಾವವಾಗಿತ್ತು. ಜ್ಞಾನ–ಶೀಲ–ಸ್ವಾಭಿಮಾನ ಮತ್ತು ಪ್ರಾಮಾಣಿಕತೆಗಳನ್ನೇ ಉಸಿರಾಡುವಂತೆ ಕಾಣಿಸುತ್ತಿದ್ದ ಅವರು ತಮ್ಮ ಬದುಕಿನ ಕೊನೆಯವರೆಗೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರು. ಆ ಮುಗ್ಗಟ್ಟು ಅವರ ಸಾವಿನ ಸಂದರ್ಭದಲ್ಲೂ ಎದುರಾಯಿತು.

ಅಂಬೇಡ್ಕರ್‌ ಅವರ ದೇಹವನ್ನು ದೆಹಲಿಯಿಂದ ಮುಂಬೈಗೆ ಸಾಗಿಸಲು ಇಂಡಿಯನ್‌ ಏರ್‌ಲೈನ್ಸ್‌ನ ಲಘು ವಿಶೇಷ ವಿಮಾನವನ್ನು ಬಾಡಿಗೆಗೆ ಕೇಳಿದಾಗ, 5,000 ರೂಪಾಯಿ ಬಾಡಿಗೆಯಾಗುತ್ತದೆಂದು ತಿಳಿಸಲಾಯಿತು. ‘ಭಾರತದ ಸಂವಿಧಾನ ಶಿಲ್ಪಿ’ ಎನ್ನುವ ಖ್ಯಾತಿಯ ಹಾಗೂ ಕೇಂದ್ರ ಸರ್ಕಾರದ ಮಾಜಿ ಕಾನೂನು ಮಂತ್ರಿಗಳೂ ಆದ ಅಂಬೇಡ್ಕರ್‌ ಅವರ ಅಲ್ಮೇರಾ ತೆರೆದು ನೋಡಿದರೆ ಅಲ್ಲಿದ್ದುದು ಕೇವಲ 300 ರೂಪಾಯಿ! ರತ್ತುರವರು ಶ್ರೀಮತಿ ಸವಿತಾ ಅಂಬೇಡ್ಕರ್‌ರವರಲ್ಲಿ ವಿಚಾರಿಸಿದರೆ, ಅವರು ನನ್ನ ಹತ್ತಿರ ಸ್ವಲ್ಪವೂ ಹಣವಿಲ್ಲವೆಂದರು. 5,000 ರೂಪಾಯಿ ಹಣ ಹೊಂದಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಯಿತು. ಆಗ ಟಿ.ಬಿ. ಬೋನ್‌ಸ್ಲೆ ಎನ್ನುವವರು ತಮ್ಮ ಅಂಬಾಸಿಡರ್‌ ಕಾರನ್ನು ಮಾರಾಟ ಮಾಡಿ ಹಣ ನೀಡಲು ಮುಂದಾದರು.

ಆದರೆ ಆ ಕಾರನ್ನು ತಕ್ಷಣಕ್ಕೆ ಕೊಳ್ಳಲು ಯಾರೂ ಮುಂದಾಗಲಿಲ್ಲ. ಕೊನೆಗೆ ಅಂದಿನ ಸಂಪರ್ಕ ಖಾತೆ (ವಿಮಾನಯಾನವೂ ಸೇರಿದಂತೆ) ಸಚಿವರಾದ ಬಾಬು ಜಗಜೀವನರಾಂ ಅವರನ್ನು ಸಂಪರ್ಕಿಸಲಾಯಿತು. ಅವರು, ‘ವಿಮಾನವನ್ನು ಉಚಿತವಾಗಿ ಬಯಸುತ್ತೀರೋ ಅಥವಾ ಅರ್ಧ ಬೆಲೆಯ (ರೂ. 2,500) ಬಾಡಿಗೆಗೆ ಬಯಸುತ್ತೀರೋ’ ಎಂದು ಅಂಬೇಡ್ಕರ್‌ರವರ ಮತ್ತೊಬ್ಬ ಸಹಾಯಕರಾದ ಡಾ. ಶಂಕರಾನಂದ ಶಾಸ್ತ್ರಿಯವರನ್ನು ಕೇಳಿದರು. ಅಂಬೇಡ್ಕರ್‌ರವರು ತಾವು ಬದುಕಿರುವಷ್ಟು ದಿನ ತನಗಾಗಿ ಯಾರಲ್ಲೂ ಏನನ್ನೂ ಬೇಡಿಕೊಂಡಿರಲಿಲ್ಲ.

ಹಾಗಾಗಿ ಉಚಿತವಾಗಿ ಬೇಡ, ಅರ್ಧ ಬಾಡಿಗೆಯನ್ನು ತಾನು ನೀಡುತ್ತೇನೆ. ಆದರೆ ಈಗ ಹಣ ಇಲ್ಲ. ಬಾಂಬೆಗೆ ಹೋದ ನಂತರ ಅಲ್ಲಿ ಈ ಹಣವನ್ನು ನೀಡುತ್ತೇನೆ, ಸಹಾಯ ಮಾಡಿ’ ಎಂದು ಶಂಕರಾನಂದ ಶಾಸ್ತ್ರಿಯವರು ಕೇಳಿಕೊಂಡರು. ತಕ್ಷಣ ಸ್ಪಂದಿಸಿದ ಜಗಜೀವನರಾಂರವರು– ‘ಸದ್ಯಕ್ಕೆ ನಿಮ್ಮಲ್ಲಿರುವ ಹಣವನ್ನು ಪಾವತಿಸಿ, ಉಳಿಕೆ ಹಣವನ್ನು ನಂತರ ಪಾವತಿಸಿ’ ಎಂದು ಹೇಳಿ ಇಂಡಿಯನ್‌ ಏರ್‌ಲೈನ್ಸನ ಲಘು ವಿಶೇಷ ವಿಮಾನಕ್ಕೆ ವ್ಯವಸ್ಥೆ ಮಾಡಿದರು. ನಂತರ ಈ ಉಳಿಕೆ ಹಣವನ್ನು ಬಾಂಬೆಯಲ್ಲಿ ಅಂಬೇಡ್ಕರ್‌ರವರ ನಿಕಟವರ್ತಿಗಳಾದ ‘ಗಾಯಕ್‌ವಾಡ್‌’ ಅವರು ಪಾವತಿಸಿದರು.

ಅಭಿಮಾನಿಗಳ ಅಶ್ರುತರ್ಪಣ

ದೆಹಲಿಯಲ್ಲಿ ಸಾರ್ವಜನಿಕರ ದರ್ಶನಕ್ಕಿಟ್ಟಿದ್ದ ಬಾಬಾ ಸಾಹೇಬರ ಪಾರ್ಥಿವ ಶರೀರವನ್ನು ಹೂವಿನಿಂದ ಅಲಂಕೃತವಾದ ಟ್ರಕ್‌ ಮೇಲಿಟ್ಟು ನಂ. 26, ಅಲಿಪುರ ರಸ್ತೆಯಲ್ಲಿನ ಮನೆಯಿಂದ ದೆಹಲಿಯ ಸಪ್ಧರ್‌ಜಂಗ್‌ ವಿಮಾನ ನಿಲ್ದಾಣಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಮಧ್ಯಾಹ್ನ 3ಕ್ಕೆ ಹೊರಟ ಮೆರವಣಿಗೆ, ಸುಮಾರು 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ದುಃಖತಪ್ತ ಜನರು ಬಾಬಾಸಾಹೇಬರ ಪಾರ್ಥಿವ ಶರೀರದ ಜೊತೆ ಸಾಗಿದ್ದರಿಂದ ವಿಮಾನ ನಿಲ್ದಾಣವನ್ನು ಸೇರಬೇಕಾದರೆ ರಾತ್ರಿ 9 ಗಂಟೆಯಾಗಿತ್ತು.

ರಾತ್ರಿ 9.45ಕ್ಕೆ ಸರಿಯಾಗಿ ಬಾಬಾ ಸಾಹೇಬರ ದೇಹವನ್ನು ಹೊತ್ತ ವಿಶೇಷ ವಿಮಾನವು ಮುಂಬೈನತ್ತ ಪ್ರಯಾಣ ಬೆಳೆಸಿತು. ಈ ವಿಮಾನದಲ್ಲಿ ಸವಿತಾ ಅಂಬೇಡ್ಕರ್‌, ರತ್ತು, ಬಿಕ್ಕು ಆನಂದ ಕೌಸಲಾಯನ್‌, ಡಾ. ಶಂಕರಾನಂದ ಶಾಸ್ತ್ರಿ ಸೇರಿದಂತೆ 11 ಜನರಿದ್ದರು. ವಿಮಾನವು ನಿಲ್ದಾಣ ಬಿಟ್ಟು ಆಕಾಶಕ್ಕೇರಿದ ತಕ್ಷಣ ಆ ಪರಿಸರದಲ್ಲಿ ಜಮಾಯಿಸಿದ್ದ 7 ಲಕ್ಷಕ್ಕೂ ಅಧಿಕ ಜನರು ದುಃಖಪೂರಿತರಾಗಿ ‘ಬಾಬಾ ಸಾಹೇಬ್‌ ಅಂಬೇಡ್ಕರ್‌ ಅಮರ್‌ ರಹೇ’ ಎಂದು ಘೋಷಣೆ ಕೂಗಿದರು.

ಮುಂಬೈನ ಸಾಂತಾಕ್ರೂಜ್‌ ವಿಮಾನ ನಿಲ್ದಾಣಕ್ಕೆ ಬಾಬಾ ಸಾಹೇಬರ ಪಾರ್ಥಿವ ಶರೀರ ತಲುಪಿದಾಗ, ಅಲ್ಲಿ ಸುಮಾರು 5 ಲಕ್ಷ ಮಂದಿ ಡಿಸೆಂಬರ್‌ ಚಳಿಯನ್ನು ಲೆಕ್ಕಿಸದೆ ನೆರೆದಿದ್ದರು. ಸುಮಾರು 25–30 ಮೈಲಿಗಳಿಂದ ಅಂಬೇಡ್ಕರ್‌ರವರ ಅಭಿಮಾನಿಗಳು ನಡೆದುಕೊಂಡೇ ವಿಮಾನ ನಿಲ್ದಾಣ ಬಂದಿದ್ದರು. ವಿಮಾನ ನಿಲ್ದಾಣದಿಂದ ಅಂಬೇಡ್ಕರರ ಪಾರ್ಥಿವ ದೇಹ ಅವರ ಸ್ವಗೃಹ ‘ರಾಜಗೃಹ’ಕ್ಕೆ ಬಂದು ಸೇರುವಷ್ಟೊತ್ತಿಗೆ ಬೆಳಗಿನ ಜಾವ 5.30. ಡಿಸೆಂಬರ್‌ 7ರ ಬೆಳಿಗ್ಗೆ 11 ಗಂಟೆಯ ತನಕ ಬಾಬಾ ಸಾಹೇಬರ ಪಾರ್ಥಿವ ಶರೀರವನ್ನು ‘ರಾಜಗೃಹ’ದ ಪೋರ್ಟಿಕೋದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಬಾಬಾ ಸಾಹೇಬರ ಅಂತಿಮ ದರ್ಶನ ಪಡೆಯಲು ಸುಮಾರು 20 ಕಿ.ಮೀ.ಗಳಷ್ಟು ಉದ್ದದ ಕ್ಯೂ ಇತ್ತು.

ಹೂವಿನಿಂದ ಅಲಂಕೃತಗೊಂಡ ಟ್ರಕ್‌ನ ಮೇಲೆ ಹಾಸಿಗೆಯನ್ನಿಟ್ಟು, ಹಾಸಿಗೆಯ ಮೇಲೆ ಶೋಷಿತರ ವಿಮೋಚಕ ಬಾಬಾಸಾಹೇಬರ ಶವವನ್ನು ಮಲಗಿಸಲಾಯಿತು. ತಲೆಯ ಪಕ್ಕ ಭಗವಾನ್‌ ಬುದ್ಧನ ಪ್ರತಿಮೆ ಇಡಲಾಯಿತು. ನಂತರ ‘ದಾದರ್‌’ ಕಡೆಗೆ ಅಂತಿಮ ಯಾತ್ರೆ ಹೊರಟಿತು. ಬಾಬಾ ಸಾಹೇಬರ ಅಂತಿಮ ಯಾತ್ರೆಯಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇಷ್ಟೊಂದು ಬೃಹತ್‌ ಸಂಖ್ಯೆಯ ಜನರು ಭಾಗವಹಿಸಿದ್ದು ಮುಂಬೈನ ಇತಿಹಾಸದಲ್ಲೇ ಇರಲಿಲ್ಲ.

ಅಂಬೇಡ್ಕರ್‌ರವರು ಪ್ರಶಾಂತವಾಗಿ ಚಿರನಿದ್ರೆಯಲ್ಲಿ ಮಲಗಿರುವುದನ್ನು ನೋಡಲಾಗದೆ ಹೆಂಗಸರು ಸೇರಿದಂತೆ ಲಕ್ಷಾಂತರ ಜನ ಎದೆ ಬಡಿದುಕೊಂಡು ರೋಧಿಸುತ್ತಿದ್ದರು. ಅಂದು ಸಂಜೆ 6 ಗಂಟೆಗೆ ಅಂತಿಮಯಾತ್ರೆಯ ಶವ ಸಂಸ್ಕಾರ ಸ್ಥಳಕ್ಕೆ (ಚೈತ್ಯ ಭೂಮಿ) ಮೆರವಣಿಗೆ ತಲುಪಿತು. ಪಾರ್ಥಿವ ಶರೀರದ ಮುಂದೆ 2 ಲಕ್ಷ ಜನ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಿದರು. (ಅದೇ ತಿಂಗಳ 16ರಂದು ಮುಂಬೈನಲ್ಲಿ 10 ಲಕ್ಷ ಜನರು ಅಂಬೇಡ್ಕರ್‌ ನೇತೃತ್ವದಲ್ಲಿ ಬೌದ್ಧ ಧರ್ಮ ಸ್ವೀಕರಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಅಂಬೇಡ್ಕರ್‌ರವರು ಎಲ್ಲಾ ತಯಾರಿ ನಡೆಸಿದ್ದರು).

ಸಾಗರ- ಜನಸಾಗರ:

ಸಮುದ್ರದ ದಡದಲ್ಲಿ ಶವ ಸಂಸ್ಕಾರದ ಸ್ಥಳವಿತ್ತು. ಸಮುದ್ರದ ಒಳಗೆ ಸೊಂಟ ಮಟ್ಟದ ನೀರಿನಲ್ಲೇ ಜನರು ಗಂಟೆಗಟ್ಟಲೆ ನಿಂತಿದ್ದರು. ಜನರಿಗೆ ಬಾಬಾ ಸಾಹೇಬರ ಕಳೆಬರಹ ಕಾಣಲೆಂದು 6 ಅಡಿ ಎತ್ತರದ ಮಣ್ಣಿನ ದಿಬ್ಬ ನಿರ್ಮಿಸಿ, ಆ ದಿಬ್ಬದ ಮೇಲೆ ಗಂಧದ ಕಟ್ಟಿಗೆಗಳನ್ನಿಟ್ಟು ಅದರ ಮೇಲೆ ಬಾಬಾ ಸಾಹೇಬರನ್ನು ಮಲಗಿಸಲಾಗಿತ್ತು. ರಾತ್ರಿ 7.30ಕ್ಕೆ ಸರಿಯಾಗಿ ಅಂಬೇಡ್ಕರ್‌ ಪುತ್ರ ಯಶವಂತರಾವ್‌ ಅಂಬೇಡ್ಕರ್‌ರವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಶವಸಂಸ್ಕಾರವು ಬೌದ್ಧಧರ್ಮದ ವಿಧಿವಿಧಾನಗಳಂತೆ ನೆರವೇರಿತು. ವಿಶೇಷವೆಂದರೆ ಆ ಇಡೀ ರಾತ್ರಿ ಲಕ್ಷಾಂತರ ಜನರು ಅಲ್ಲೇ ಉಳಿದುಕೊಂಡಿದ್ದರು. ಬೆಳಿಗ್ಗೆ 6.30ಕ್ಕೆ ಅಲ್ಲಿಂದ ‘ಚಿತಾಭಸ್ಮ’ವನ್ನು ತೆಗೆದ ನಂತರ ಜನರು ಅಲ್ಲಿಂದ ತೆರಳಿದರು. ಚಿತಾಭಸ್ಮವನ್ನು ಒಂದು ಮಣ್ಣಿನ ಕುಡಿಕೆಯಲ್ಲಿಟ್ಟು ತೆರೆದ ವಾಹನದ ಮೂಲಕ ಅವರ ನಿವಾಸ ‘ರಾಜಗೃಹ’ಕ್ಕೆ ತರಲಾಯಿತು. ಚಿತಾಭಸ್ಮವನ್ನು ತರುವಾಗ ಮೆರವಣಿಗೆಯಲ್ಲಿ 5 ಲಕ್ಷ ಜನರು ಸೇರಿದ್ದರು. ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ಚಿತಾಭಸ್ಮವನ್ನು ಈಗ ಮುಂಬೈನಲ್ಲಿರುವ ಅವರ ಸಮಾಧಿ ಸ್ಥಳದಲ್ಲಿ ಮತ್ತು ನಾಗಪುರದಲ್ಲಿ ಸಂರಕ್ಷಿಸಿಡಲಾಗಿದೆ.

ಈಗಲೂ ಅಂಬೇಡ್ಕರ್‌ ಅವರ ಪರಿನಿರ್ವಾಣದ ದಿನ ಡಿಸೆಂಬರ್‌ 6ರಂದು, ಮುಂಬೈನ ಚೈತ್ಯಭೂಮಿಯಲ್ಲಿರುವ ಅವರ ಸಮಾಧಿಗೆ ದೇಶದ ಮೂಲೆ ಮೂಲೆಗಳಿಂದ ಜನರು ಬಂದು ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಡಿಸೆಂಬರ್‌ 6 ಅಂಬೇಡ್ಕರ್‌ ಸ್ಮೃತಿ ದಿನ ಮಾತ್ರವಲ್ಲದೆ, ಅದು ಮನುಷ್ಯತ್ವದ ಹೊಳಪನ್ನು ನವೀಕರಿಸುವ ದಿನವೂ ಆಗಿದೆ. ಎಲ್ಲ ಮಹಾತ್ಮರ ನೆನಪುಗಳಿಗೂ ಮಾನಸಿಕ ಕೊಳಕನ್ನು ತೊಳೆದು ಹೊಳಪು ನೀಡುವ ಜೀವಂತಿಕೆಯ ಮಾಂತ್ರಿಕ ಶಕ್ತಿ ಇರುತ್ತದಲ್ಲವೇ?

ಕೃಪೆ:ಪ್ರಜಾವಾಣಿ (0/12/2013)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಹೆಚ್. ಕೇಶವ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಶಿವಮೊಗ್ಗ:ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾದ ಹುದ್ದೆಗಳನ್ನು ಇಲಾಖಾ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇಲ್ಲಿಯ ಜಂಟಿ ನಿರ್ದೇಶಕರಾದ ಶ್ರೀ ಕೇಶವ ಹೆಚ್. ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ 2022ನೇ ಸಾಲಿನಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ಅರ್ಥಶಾಸ್ತç (ಎಸ್.ಟಿ), ರಾಜ್ಯಶಾಸ್ತç (ಎಸ್.ಸಿ), ಗ್ರಂಥಪಾಲಕರು (ಎಸ್.ಟಿ) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇಲ್ಲಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾದ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರಿಗೆ ದಿನಾಂಕ: 24-11-2025 ರಂದು ಅರ್ಜಿ ಸಲ್ಲಿಸಿ, ಬ್ಯಾಕ್ ಲಾಗ್ ನೇಮಕಾತಿಯ ಬಗ್ಗೆ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ಕೋರಲಾಗಿತ್ತು.

ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಯಾವುದೇ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ಜ್ಞಾಪನ ನೀಡಿ 7 ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡುವಂತೆ ವಿನಂತಿಸಲಾಗಿತ್ತು. ಆದರೆ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರು ಅರ್ಜಿ ಸಲ್ಲಿಸಿ 2 ತಿಂಗಳಾದರೂ ಕನಿಷ್ಠ ಹಿಂಬರಹವನ್ನಾದರೂ ನೀಡದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ  ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Continue Reading

Trending