Connect with us

ದಿನದ ಸುದ್ದಿ

ಭಾರತದ ಸಂವಿಧಾನ ದಿನದ ಮಹತ್ವ

Published

on

  • ಸಿದ್ದು.ಮಮದಾಪೂರ, ವಿಜಯಪುರ

ಭಾರತದ ಸಂವಿಧಾನ ಇಡೀ ಪ್ರಪಂಚದ ಗಮನವನ್ನೇ ಸೆಳೆದಿರುವುದು ನಮಗೆ ಹೆಮ್ಮೆ ತರುವ ವಿಷಯ. ಸಂವಿಧಾನ ಎಂಬುವುದು ಜೀವನದ ಪ್ರಮುಖ ಘಟ್ಟ, ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳುವುದು ಹಾಗೂ ಸಂವಿಧಾನಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ.

ಭಾರತದ ಆಡಳಿತ ವ್ಯವಸ್ಥೆ ಸಂವಿಧಾನದ ಮೇಲೆ ಅವಲಂಬಿತವಾಗಿದ್ದು, ದೇಶ ಅತೀ ವೇಗದಲ್ಲಿ ಆರ್ಥಿಕ, ಶೈಕ್ಷಣಿಕ, ಆರೋಗ್ಯ, ಸಾಮಾಜಿಕ, ಮುಂತಾದ ಎಲ್ಲಾ ರಂಗಗಳಲ್ಲಿಯೂ ಬೆಳೆಯುತ್ತಿರಲು ಸಂವಿಧಾನ ಬಹುಮುಖ್ಯ ಪಾತ್ರ ವಹಿಸುತ್ತಿದೆ.

ಸಂವಿಧಾನದ ಮಹತ್ವದ ತಿಳಿಯಬೇಕು

ಭಾರತ ಸಂವಿಧಾನವು ಜಗತ್ತಿನಲ್ಲಿನ ಅತಿ ದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇದು ಸದ್ಯ 448 ವಿಧಿಗಳು 12 ಪರಿಚ್ಛೇದಗಳು 101 ತಿದ್ದುಪಡಿಗಳನ್ನು ಹೊಂದಿದೆ. ಇಂತಹ ಬೃಹತ್ ಸಂವಿಧಾನವು ಜನೆವರಿ 26 1950 ರಂದು ಇದನ್ನು ಜಾರಿಗೆ ತರಲಾಯಿತು. ಆ ದಿನವನ್ನು ಗಣರಾಜ್ಯ ದಿನ ಎಂದು ಗೊಷಿಸಲಾಯಿತು.

ಆದರೆ ಇದಕ್ಕೂ ಮುಂಚೆ ನವಂಬರ್ 26 ರಂದು ಸಂಸತ್ತಿನ ಶಾಸನ ಸಭೆಯಲ್ಲಿ ಅಂಬೇಡ್ಕರರು ಸಂವಿಧಾನವನ್ನು ಮಂಡಿಸಿ ಮಾತನಾಡಿದ ದಿನವನ್ನೇ ಈಗ ಸಂವಿಧಾನದ ದಿನ ಎಂದು ಆಚರಿಸಲಾಗುತ್ತಿದೆ. ಅಂಬೇಡ್ಕರರವರು ಅಂದು ನವಂಬರ್ 26ರಂದು ಶಾಸನ ಸಭೆಯಲ್ಲಿ ಮಾತನಾಡುತ್ತಾ “ಜನವರಿ 26, 1950ರಂದು ನಾವು ವೈರುಧ್ಯಗಳ ಬದುಕಿಗೆ ಕಾಲಿಡಲಿದ್ದೇವೆ.‌

ರಾಜಕೀಯದಲ್ಲಿ, ನಮಗೆ ಸಮಾನತೆಯಿರುತ್ತದೆ ಆದರೆ ಸಾಮಾಜಿಕ ಹಾಗೂ ಆರ್ಥಿಕ ಸಂರಚನೆಗಳಲ್ಲಿ ಅಸಮಾನತೆಯಿರುತ್ತದೆ; ಒಬ್ಬ ಮನುಷ್ಯ ಒಂದು ಮೌಲ್ಯ ಎಂಬ ತತ್ವವನ್ನು ನಿರಾಕರಿಸುತ್ತಲೇ ಹೋಗುತ್ತಿರುತ್ತೇವೆ. ಈ ವೈರುಧ್ಯಗಳ ಬದುಕನ್ನು ಎಷ್ಟು ದಿನ ಹೀಗೇ ಮುಂದುವರೆಸಿಕೊಂಡು ಹೋಗುತ್ತೇವೆ? ನಮ್ಮ ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ಸಮಾನತೆಯ ನಿರಾಕರಣೆಯನ್ನು ಎಷ್ಟು ದಿನ ಹೀಗೇ ಮುಂದುವರೆಸುತ್ತೇವೆ?

ಬಹಳ ಕಾಲ ಹೀಗೇ ಇದು ಮುಂದುವರೆಯಿತೆಂದರೆ ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನೇ ತೊಂದರೆಗೆ ಸಿಲುಕಿಸುತ್ತಿದ್ದೇವೆ ಎಂದೇ ಅರ್ಥ. ನಾವು ಆದಷ್ಟು ಬೇಗನೇ ಈ ವೈರುಧ್ಯವನ್ನು ನಿವಾರಿಸಿಕೊಳ್ಳಬೇಕು. ಇಲ್ಲವಾದರೆ ಅಸಮಾನತೆಯಿಂದ ನರಳುತ್ತಿರುವವರು ಈ ಸಂವಿಧಾನ ರಚನಾ ಸಭೆಯು ಇಷ್ಟು ಶ್ರಮವಹಿಸಿ ಕಟ್ಟಿರುವ ಪ್ರಜಾಪ್ರಭುತ್ವದ ಸೌಧವನ್ನೇ ಪುಡಿಗಟ್ಟಿಬಿಡುತ್ತಾರಷ್ಟೆ” ಎನ್ನುವ ಎಚ್ಚರಿಕೆಯನ್ನು ಅಂಬೇಡ್ಕರ್ ರವರು ಶಾಸನ ಸಭೆಯ ಮುಂದೆ ಇಡುತ್ತಾರೆ.

ಆದ್ದರಿಂದ ಸರ್ಕಾರವು ಈ ದಿನವನ್ನು ಸ್ಮರಣಿಯ ಗೊಳಿಸುವ ಸಲುವಾಗಿ ಭಾರತ ಸರ್ಕಾರವು 2015 ರಲ್ಲಿ ಅಂಬೇಡ್ಕರರ 125ನೇ ಜನ್ಮೊತ್ಸವದ ಆಚರಣೆಯ ಸಂಧರ್ಭದಲ್ಲಿ ನವಂಬರ್ 19 ರಂದು ತನ್ನ ಗೆಜೆಟ್ನಲ್ಲಿ ನವಂಬರ್ 26 ನ್ನು ಸಂವಿಧಾನ ದಿವಸ್ ಎಂದು ಪ್ರಕಟಣೆಯನ್ನು ಹೊರಡಿಸಿತು.ಅಂದಿನಿಂದ ಇದನ್ನು ಸಂವಿಧಾನದ ಮಹತ್ವ ಮತ್ತು ಅಂಬೇಡ್ಕರರ ವಿಚಾರಧಾರೆಗಳನ್ನು ಜನರಲ್ಲಿ ಬಿತ್ತುವ ನಿಟ್ಟಿನಲ್ಲಿ ಈ ದಿನವನ್ನು ಸರ್ಕಾರ ಅಧಿಕೃತವಾಗಿ ಆಚರಿಸುತ್ತಾ ಬರುತ್ತಿದೆ.ಇದಕ್ಕೂ ಮೊದಲು ಈ ದಿನವನ್ನು ಕಾನೂನು ದಿನ ಎಂದು ಸಹ ಆಚರಿಸಲಾಗುತಿತ್ತು.

ಪ್ರಧಾನಿ ಮೋದಿಯವರು 2015 ರ ಅಂಬೇಡ್ಕರ್ ರವರ ವರ್ಷಪೂರ್ತಿ ಆಚರಣೆಗೆ ಚಾಲನೆಯನ್ನು ಮುಂಬೈನ ಅಂದು ಮಿಲ್ಸ್ ಕಂಪೌಂಡ್ ನಲ್ಲಿ ಅವರ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿಸುವದರ ಮೂಲಕ ಚಾಲನೆ ನೀಡಿದರು. ಈ ದಿನದಂದು ಸರ್ಕಾರವು ಪ್ರತಿ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ವಿಧ್ಯಾರ್ಥಿಗಳಿಗೆ ಓದಿಸಲಾಗುತ್ತದೆ. ಆದರೆ ಈ ವರ್ಷ ಕೋವಿಡ್ 19 ಕೊರೊನಾ ರೋಗದಿಂದ ಇರುವುದರಿಂದ ಸರ್ಕಾರಿ ಇಲಾಖೆಯಲ್ಲಿ ಆಚರಣೆ ಮಾಡಲು ಆದೇಶ ನೀಡಿದೆ…

ಭಾರತ ಸಂವಿಧಾನದ ಸ್ವಾರಸ್ಯಗಳಿವು..!

  • ಭಾರತದಲ್ಲಿ ಸಂವಿಧಾನವನ್ನು 1949ರ ನವೆಂಬರ್ 26ರಂದು ಸ್ವೀಕರಿಸಲಾಯಿತು. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ಬಂತು.
  • ಭಾರತದ ಸಂವಿಧಾನವು ಟೈಪ್ ಮಾಡಿರುವುದಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ.
  • ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿದೆ.
  • ಭಾರತ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ ಅಂಶಗಳ ಚೀಲ ಎಂದು ಕರೆಯಲಾಗುತ್ತಿದೆ.
  • ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ.
  • ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದೆ.
  • ರಾಜ್ಯ ನಿರ್ದೇಶನ ತತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆ
    ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್‍ನಿಂದ ಎರವಲು ಪಡೆಯಲಾಗಿದೆ.
  • ಇದು ವಿಶ್ವದ ಯಾವುದೇ ಸ್ವತಂತ್ರ್ಯ ದೇಶಗಳ ಅತಿ ಉದ್ದವಾದ ಸಂವಿಧಾನವಾಗಿದೆ.
  • ಭಾರತದ ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳಿವೆ.
  • ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರು.
  • ಇದರ ಕರಡನ್ನು 1949ರ ನವೆಂಬರ್‍ನಲ್ಲಿ ಸಲ್ಲಿಸಲಾಯಿತು. ಸಲ್ಲಿಕೆ ಬಳಿಕ ಅದನ್ನು ಪೂರ್ಣಗೊಳಿಸಲು ಮೂರು ವರ್ಷ ಬೇಕಾಯಿತು.
  • ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ ದಾಖಲೆಗೆ ಸಹಿ ಮಾಡಿದರು.
  • 1950ರ ಜನವರಿ 26ರಂದು ಇದು ಅಸ್ತಿತ್ವಕ್ಕೆ (ಜಾರಿಗೆ ) ಬಂತು.ಭಾರತದ ರಾಷ್ಟ್ರಲಾಂಛನವನ್ನೂ ಅದೇ ದಿನ (ಜ.26) ಅಳವಡಿಸಿಕೊಳ್ಳಲಾಯಿತು.
  • ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲೊಂದು ಎಂದು ಹೇಳಲಾಗಿದೆ. ಏಕೆಂದರೆ ಇದಕ್ಕೆ ಕಾಲಕಾಲಕ್ಕೆ ತಿದ್ದುಪಡಿ ತರಬಹುದು.

ನಮ್ಮ ದೇಶದಲ್ಲಿ ಅಭಿವೃದ್ಧಿ ಸಾಧಿಸಲು, ನಮ್ಮ ಸಂವಿಧಾನ ಭಾತೃತ್ವ, ಸಹೋದರತೆ, ಸಮಾನತೆಯ ನೆಲೆಯಿಂದ ಕೂಡಿದೆ. ಮಹಿಳೆಯರು, ದಲಿತರು, ಬುಡಕಟ್ಟು ಸಮುದಾಯ ಸೇರಿ ಎಲ್ಲ ವರ್ಗೀಯ ಜನರು ತಲೆ ಎತ್ತಿ ಬದುಕಲು ಸಂವಿಧಾನ ಅವಕಾಶ ಕಲ್ಪಸಿಕೊಟ್ಟಿದೆ.

ಸಂವಿಧಾನ ಧ್ವನಿ ಇರದವರಿಗೆ, ಧ್ವನಿಯಾಗುವ ಮೂಲಕ ಅವರ ಹಕ್ಕುಗಳನ್ನು ತಂದುಕೊಟ್ಟಿದೆ. ಇಂಥ ಸಂವಿಧಾನ ಕೊಡುಗೆಯಾಗಿ ನೀಡಿದ ಡಾ| ಅಂಬೇಡ್ಕರ ಅವರಿಗೆ ಭಾರತೀಯರಾದ ನಾವೆಲ್ಲ ಸದಾ ಋಣಿಯಾಗಿರಬೇಕು. ದೇಶದಲ್ಲಿ ಹಲವಾರು ಜಾತಿ, ಧರ್ಮ, ಮತ, ಪಂಗಡಗಳಿದ್ದರೂ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸ್ವತಂತ್ರವಾಗಿ ಸಂತಸದಿಂದ ಬದುಕಲು ಸಂವಿಧಾನವೇ ಕಾರಣವಾಗಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ದಿನದ ಸುದ್ದಿ

ವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ

Published

on

ಸುದ್ದಿದಿನ,ಬೆಂಗಳೂರು:ಕೋಡಿಪಾಳ್ಯದಲ್ಲಿರುವ ವಿಶ್ವ ವೆಂಕಟೇಶ್ವರ ವಿದ್ಯಾಧಾನ ಕೇಂದ್ರದ ವಿರುದ್ಧ ಪಕ್ಕದಲ್ಲಿರುವ ವಿಠಲ ರುಕ್ಮಿಣಿ ಮಠದಿಂದ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿ ಸಂಸ್ಥೆಯ ಹೆಸರಿಗೆ ಧಕ್ಕೆ ತರುವ ಹುನ್ನಾರ ಕಳೆದ 3 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಗಂಭೀರ ಆರೋಪ ಮಾಡಿದೆ.

ಕೇವಲ 20 ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆಯು ಇಂದು ವಿವಿಐಎಸ್ ಶಾಲೆ, ಕೆಬಿಸಿ ಪಿಯು ಕಾಲೇಜು ಮತ್ತು ವಿವಿ ಪದವಿ ಕಾಲೇಜುಗಳನ್ನು ಹೊಂದಿದೆ. ಬಡ ಕೂಲಿ ಕಾರ್ಮಿಕರು ಮತ್ತು ವಲಸೆ ಕುಟುಂಬಗಳ 600ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪದವಿ ಕಾಲೇಜು ಆರಂಭಿಸಲು ಪಕ್ಕದಲ್ಲಿರುವ ವಿಠಲ ರುಕ್ಮಿಣಿ ಮಠದ ಖಾಲಿ ಕಟ್ಟಡವನ್ನು 5 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆಯಲಾಗಿತ್ತು. ವಿಠಲಗಿರಿಧಾಮದ ಮಠಾಧೀಶರಾದ ಶ್ರೀ ನಿರ್ಮಲಾನಂದ ಪುರಿ ಅವರು ಪ್ರತಿ ವರ್ಷ 5% ಬಾಡಿಗೆ ಹೆಚ್ಚಳದ ಷರತ್ತಿನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.

ಸಂಸ್ಥೆಯ ಅಧ್ಯಕ್ಷರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ, ಖಾಲಿ ಇದ್ದ ದೊಡ್ಡ ಕೊಠಡಿಗಳಿಗೆ ವಿಭಜನೆ, ಬಾಗಿಲುಗಳನ್ನು ಅಳವಡಿಸಿ, ಫರ್ನಿಚರ್ ತುಂಬಿ ತರಗತಿಗಳನ್ನು ಆರಂಭಿಸಿದರು. ಕಳೆದ 7 ವರ್ಷಗಳಿಂದ ಈ ಕಟ್ಟಡದಲ್ಲಿಯೇ ತರಗತಿಗಳು ನಡೆಯುತ್ತಿದ್ದು, ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದೇ ಮಠದ ಮತ್ತೊಂದು ಭಾಗವನ್ನು “ಟಾಮ್ ಅಂಡ್ ಜೆರ್ರಿ” ವಿಶೇಷ ಮಕ್ಕಳ ಶಾಲೆಗೆ ಬಾಡಿಗೆಗೆ ನೀಡಲಾಗಿದೆ.

ಆದರೆ ಕಳೆದ 3 ವರ್ಷಗಳಿಂದ ಶ್ರೀ ನಿರ್ಮಲಾನಂದ ಪುರಿ ಮತ್ತು ಅವರ ಹಿಂಬಾಲಕರು ಶೈಕ್ಷಣಿಕ ವಾತಾವರಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕಾಲೇಜಿನ ಸಿಬ್ಬಂದಿಯ ಮೇಲೆ ಅವಾಚ್ಯ ಶಬ್ದಗಳ ಪ್ರಯೋಗ, ಪರೀಕ್ಷಾ ಸಮಯದಲ್ಲಿ ಸ್ವಾಮೀಜಿಯ ಹಿಂಬಾಲಕರು ಕಾಲೇಜಿನ ಒಳಗೆ ನುಗ್ಗಿ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಂಡು ತಪ್ಪು ಮಾಹಿತಿ ಹರಡುವ ಮೂಲಕ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆಡಳಿತ ಮಂಡಳಿ ದೂರಿದೆ.

ಇದರ ಜೊತೆಗೆ ಇನ್ನೊಂದು ಗಂಭೀರ ಆರೋಪ ಕೇಳಿಬಂದಿದೆ. ವಿಠಲ ರುಕ್ಮಿಣಿ ಮಠದ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನನ್ನು *”ಗೋಶಾಲೆ ಮತ್ತು ವೃದ್ಧಾಶ್ರಮ”*ಕ್ಕಾಗಿ ಮಂಜೂರು ಮಾಡಲಾಗಿದೆ. ಆದರೆ ಮಂಜೂರಾದ ಉದ್ದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ಜಮೀನನ್ನು ವಾಣಿಜ್ಯ ಉದ್ದೇಶಕ್ಕಾಗಿ ಹಂತಹಂತವಾಗಿ ಬಾಡಿಗೆಗೆ ನೀಡಲಾಗುತ್ತಿದೆ.

ಸಭಾಂಗಣದಲ್ಲಿದ್ದ ದೇವರ ಮೂರ್ತಿಯನ್ನು ಸಹ ಹಣಕ್ಕಾಗಿ ಬೇರೆ ಕಡೆಗೆ ವರ್ಗಾಯಿಸಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆ. ಸರ್ಕಾರವು ಈ ಜಾಗವನ್ನು ಗೋಶಾಲೆ ಮತ್ತು ವೃದ್ಧಾಶ್ರಮ ನಡೆಸುವುದಕ್ಕೆ ಮಂಜೂರು ಮಾಡಿದ್ದರೂ, ಇಲ್ಲಿ ಯಾವುದೇ ಗೋಶಾಲೆ ಅಥವಾ ವೃದ್ಧಾಶ್ರಮ ನಡೆಯುತ್ತಿಲ್ಲ. ಮಠದ ಆಸ್ತಿಯನ್ನು ಸ್ವಾಮೀಜಿ ಮತ್ತು ಅವರ ಹಿಂಬಾಲಕರು ಕಮರ್ಷಿಯಲ್ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಆಡಳಿತ ಮಂಡಳಿಯ ಆರೋಪ.

ಈ ಬೆಳವಣಿಗೆಯಿಂದಾಗಿ ಕಾಲೇಜಿನಲ್ಲಿ ಓದುತ್ತಿರುವ ನೂರಾರು ಬಡ ವಿದ್ಯಾರ್ಥಿಗಳ ಭವಿಷ್ಯ ಪ್ರಶ್ನಾರ್ಥಕವಾಗಿದೆ. ಕಂದಾಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ತನಿಖೆ ನಡೆಸಿ ಮಠದ ಸ್ವಾಮೀಜಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆಡಳಿತ ಮಂಡಳಿ ಮತ್ತಷ್ಟು ಆರೋಪಿಸಿರುವ ಪ್ರಕಾರ, ಮಠದ ಸ್ವಾಮೀಜಿ ಸಾರ್ವಜನಿಕವಾಗಿ “ಮಠದ ಆಸ್ತಿಯನ್ನು ಸರ್ಕಾರದಿಂದ 54 ಲಕ್ಷ ರೂ.ಗೆ ಖರೀದಿ ಮಾಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. ಅವರ ಮೇಲೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಒಬ್ಬ ವೃದ್ಧ ಮಹಿಳೆಯನ್ನು ಮೋಸ ಮಾಡಿ ಸೈಟ್ ಕಬಳಿಕೆ ಮಾಡಿ ಬೇರೊಬ್ಬರಿಗೆ ಮಾರಾಟ ಮಾಡಲಾಗಿದೆ. ಅಲ್ಲದೆ ಒಬ್ಬ ವೈದ್ಯರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ನೀಡುವುದಾಗಿ ಹೇಳಿ 10 ಲಕ್ಷ ರೂ. ಟೋಕನ್ ಹಣ ಪಡೆದು, ಹಣ ಹಿಂತಿರುಗಿಸದೆ ಸಮಸ್ಯೆ ಮಾಡಿದ ಪ್ರಕರಣವೂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. “ಹಣಕ್ಕಾಗಿ ಕಾವಿ ಧರಿಸಿ ಸಮಾಜಕ್ಕೆ ನಾಚಿಕೆ ತರುವ ಕೆಲಸ ಮಾಡುತ್ತಿದ್ದಾರೆ” ಎಂದು ಆಡಳಿತ ಮಂಡಳಿ ಆರೋಪಿಸಿದೆ.

~ವರದಿ: ಪವನ್ ಕಲ್ಯಾಣ್ ಡಿ.ಜಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

Published

on

ಸುದ್ದಿದಿನ,ದಾವಣಗೆರೆ: ಅಪರೂಪದ ಲಿವರ್ (ಯಕೃತ್ತಿನ) ಟ್ಯೂಮರ್ನಿಂದ ಬಳಲುತ್ತಿದ್ದ 56 ವರ್ಷದ ಮಹಿಳೆಗೆ ಇಲ್ಲಿನ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸುಮಾರು ಆರು ಗಂಟೆಗಳ ಕಾಲ ನಡೆದ ಈ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ, ವೈದ್ಯರು ಟ್ಯೂಮರ್ (ಗಡ್ಡೆ) ಯನ್ನುಸಂಪೂರ್ಣವಾಗಿ ತೆಗೆದುಹಾಕುವುದರ ಜೊತೆಗೆ ಲಿವರ್ನ ಆರೋಗ್ಯಕರ ಭಾಗಗಳಿಗೆ ಯಾವುದೇ ಹಾನಿಯಾಗದಂತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗ ಮೂಲದ ಈ ಮಹಿಳೆ, ಬೊಜ್ಜಿನ ಸಮಸ್ಯೆಯ ಜೊತೆಗೆ ಟೈಪ್-2 ಮಧುಮೇಹ ಮತ್ತು ಹೈಪೋಥೈರಾಯ್ಡಿಸಮ್ (ಥೈರಾಯ್ಡ್ ಸಮಸ್ಯೆ) ದಂತಹ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ನಿರಂತರ ಹೊಟ್ಟೆನೋವು ಹಾಗೂ ಹಸಿವಾಗದಿರುವ ಸಮಸ್ಯೆಯಿಂದ ಅವರು ಒದ್ದಾಡುತ್ತಿದ್ದರು. ಇದಕ್ಕಾಗಿ ಸ್ಥಳೀಯ ಕ್ಲಿನಿಕ್ಗಳು ಮತ್ತು ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿನ ತಪಾಸಣೆಯಲ್ಲಿ ಅವರಿಗೆ ಲಿವರ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು.

ಸರಿಯಾದ ಚಿಕಿತ್ಸೆ ಸಿಗದೆ ಕಾಯಿಲೆ ಉಲ್ಬಣಗೊಂಡಿದ್ದಾಗ, ಅವರ ಪರಿಚಿತರೊಬ್ಬರು ದಾವಣಗೆರೆಯ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ಗೆ ಭೇಟಿ ನೀಡಿ, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಆರ್.ಕೆ. ಹನುಮಂತ ನಾಯ್ಕ್ ಅವರನ್ನು ಸಂಪರ್ಕಿಸಲು ಸಲಹೆ ನೀಡಿದರು. ಮೊದಲ ತಪಾಸಣೆಯ ನಂತರ, ಮಹಿಳೆಯನ್ನು ಸ್ಕ್ಯಾನಿಂಗ್ ಮತ್ತು ಇತರ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಈ ವೇಳೆ ಅವರ ಲಿವರ್ನ ಎಡಭಾಗದ (ಲೆಫ್ಟ್ ಲೋಬ್) ಆಳದಲ್ಲಿ ಗಡ್ಡೆಯೊಂದು ಬೆಳೆದಿರುವುದು ಕಂಡುಬಂತು. ಹೆಚ್ಚಿನ ಪರೀಕ್ಷೆಗಳ ನಂತರ ಇದು ‘ಇಂಟ್ರಾಹೆಪಾಟಿಕ್ ಚೋಲಾಂಜಿಯೋಕಾರ್ಸಿನೋಮ’ (intrahepatic cholangiocarcinoma) ಎಂಬ ಕಾಯಿಲೆ ಎಂದು ದೃಢಪಟ್ಟಿತು. ಈ ಹಿಂದೆಯೇ ಅವರಿಗೆ ಈ ಕಾಯಿಲೆ ಇರುವುದು ಪತ್ತೆಯಾಗಿದ್ದರೂ, ಶಸ್ತ್ರಚಿಕಿತ್ಸೆಯಲ್ಲಿನ ಸಂಕೀರ್ಣತೆಯ ಕಾರಣದಿಂದಾಗಿ ಹಿಂದಿನ ವೈದ್ಯರು ಅದನ್ನು ತೆಗೆದುಹಾಕಲು ಹಿಂದೇಟು ಹಾಕಿದ್ದರು.

ಸುಮಾರು 95 ಕೆ.ಜಿ ತೂಕವಿದ್ದ ಆ ಮಹಿಳೆ ಬೊಜ್ಜು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರಿಂದ, ಇಂತಹ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಅತ್ಯಂತ ಅಪಾಯಕಾರಿಯಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ, ಈ ರೋಗಿಯು ಶಸ್ತ್ರಚಿಕಿತ್ಸೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಹೃದಯ ಮತ್ತು ಶ್ವಾಸಕೋಶದ ವಿವರವಾದ ಪರೀಕ್ಷೆಗಳನ್ನು ನಡೆಸಿದರು.

ಈ ಸವಾಲಿನ ಪ್ರಕರಣವನ್ನು ಕೈಗೆತ್ತಿಕೊಂಡ ಡಾ. ಹನುಮಂತ ನಾಯ್ಕ್ ಮತ್ತು ಅವರ ತಂಡ, ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲು ಸುಮಾರು ಆರು ಗಂಟೆಗಳ ಕಾಲ ಶ್ರಮಿಸಿತು. ಇದರ ಜೊತೆಗೆ ಸಾಕಷ್ಟು ಆರೋಗ್ಯಕರ ಲಿವರ್ ಸರಿಯಾಗಿ ಕಾರ್ಯನಿರ್ವಹಿಸುವಂತೆಯೂ ನೋಡಿಕೊಂಡಿತು. ಈ ಶಸ್ತ್ರಚಿಕಿತ್ಸೆಯು ಪಿತ್ತಕೋಶದ (ಗಾಲ್ ಬ್ಲಾಡರ್) ಜೊತೆಗೆ ಲಿವರ್ನ II, III, IVa ಮತ್ತು IVb ಭಾಗಗಳನ್ನು ತೆಗೆದುಹಾಕುವ ದೊಡ್ಡ ಶಸ್ತ್ರಚಿಕಿತ್ಸೆಯನ್ನು (ಮೇಜರ್ ಲೆಫ್ಟ್ ಹೆಪಟೆಕ್ಟಮಿ) ಒಳಗೊಂಡಿತ್ತು. ಈ ಪ್ರಕ್ರಿಯೆಯಲ್ಲಿ ಮಧ್ಯದ ಹೆಪಾಟಿಕ್ ರಕ್ತನಾಳವನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಿಸಲಾಯಿತು.

ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯು ಅತ್ಯಂತ ತ್ವರಿತವಾಗಿ ಚೇತರಿಸಿಕೊಂಡರು. ಶಸ್ತ್ರಚಿಕಿತ್ಸೆ ಮುಗಿದ ಆರು ಗಂಟೆಗಳಲ್ಲೇ ದ್ರವಾಹಾರ ಸೇವಿಸಲು ಆರಂಭಿಸಿದ ಅವರು, ಕ್ರಮೇಣ ಮೃದುವಾದ ಆಹಾರವನ್ನು ಸೇವಿಸುವ ಹಂತಕ್ಕೆ ತಲುಪಿದರು. ಅವರ ಆರೋಗ್ಯ ಸ್ಥಿರವಾಗಿದ್ದರಿಂದ ಕೇವಲ ಐದು ದಿನಗಳಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.

ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ಡಾ. ಆರ್. ಕೆ. ಹನುಮಂತ ನಾಯ್ಕ್, “ಟ್ಯೂಮರ್ನ ಗಾತ್ರ ಮತ್ತು ಅದು ಇದ್ದ ಜಾಗ, ಅದರ ಜೊತೆಗೆ ರೋಗಿಯ ಬೊಜ್ಜು ಮತ್ತು ಇತರ ವೈದ್ಯಕೀಯ ಸಮಸ್ಯೆಗಳಿಂದಾಗಿ ಇದು ತಾಂತ್ರಿಕವಾಗಿ ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆಯಾಗಿತ್ತು. ಆರೋಗ್ಯಕರ ಲಿವರ್ ಅನ್ನು ಉಳಿಸಿಕೊಂಡು ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ ಎಚ್ಚರಿಕೆಯ ಮೌಲ್ಯಮಾಪನ, ಶಸ್ತ್ರಚಿಕಿತ್ಸೆಯ ನಿಖರವಾದ ಯೋಜನೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ವ್ಯವಸ್ಥಿತ ಆರೈಕೆಯು ಈ ಯಶಸ್ಸಿಗೆ ಕಾರಣವಾಯಿತು” ಎಂದು ತಿಳಿಸಿದರು.

ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಕೇಂದ್ರದ ಫೆಸಿಲಿಟಿ ಡೈರೆಕ್ಟರ್ ಶ್ರೀ ಸುನಿಲ್ ಭಂಡಾರಿಗಲ್ ಮಾತನಾಡಿ, “ಹೆಚ್ಚಿನ ಅಪಾಯದಲ್ಲಿದ್ದ ರೋಗಿಗೆ ಇಂತಹ ಸಂಕೀರ್ಣವಾದ ಲಿವರ್ ಟ್ಯೂಮರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿಭಾಯಿಸಿರುವುದು ನಮ್ಮ ಶಸ್ತ್ರಚಿಕಿತ್ಸಾ ತಂಡದ ಪರಿಣತಿ ಮತ್ತು ವಿವಿಧ ವಿಭಾಗಗಳ ವೈದ್ಯರ ಸಂಯೊಜನೆ ಆರೈಕೆಯ (multidisciplinary care) ಮಹತ್ವವನ್ನು ತೋರಿಸುತ್ತದೆ. ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಸುಧಾರಿತ, ಸಕಾಲಿಕ ಮತ್ತು ರೋಗಿ-ಕೇಂದ್ರಿತ ಚಿಕಿತ್ಸೆಯನ್ನು ಒದಗಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ” ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending