Connect with us

ದಿನದ ಸುದ್ದಿ

ಕೋವಿಡ್ ಸಂಕಷ್ಟದಲ್ಲಿ ಗ್ರಾಮೀಣರ ನೆರವಿಗೆ ಉದ್ಯೋಗಖಾತ್ರಿ ಯೋಜನೆ , ಜಿಲ್ಲೆಯಲ್ಲಿ 4.90 ಲಕ್ಷ ಮಾನವ ದಿನ ಸೃಜನೆ : 16.18 ಕೋಟಿ ರೂ. ಕೂಲಿ ಪಾವತಿ

Published

on

  • ವಿಶೇಷ ವರದಿ: ಪ್ರೀತಿ.ಟಿ.ಎಸ್ (ತರಬೇತಾರ್ಥಿ) ವಾರ್ತಾ ಇಲಾಖೆ ದಾವಣಗೆರೆ

ಸುದ್ದಿದಿನ,ದಾವಣಗೆರೆ : ಕೋವಿಡ್ ಮಹಾಮಾರಿಯಿಂದ ಸಂಕಷ್ಟದಲ್ಲಿರುವ ಗ್ರಾಮೀಣ ಜನರಿಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಉದ್ಯೋಗ ದೊರಕಿಸುವ ಮೂಲಕ ಕೂಲಿಕಾರರ ಕೈಹಿಡಿದಿದೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 4.90 ಲಕ್ಷ ಮಾನವ ದಿನಗಳ ಸೃಜನೆಯಾಗಿದ್ದು, 16.18 ಕೋಟಿ ರೂ. ಕೂಲಿ ಪಾವತಿಸಲಾಗಿದೆ. ಜಿಲ್ಲೆಯಲ್ಲಿ ಮಹಿಳೆಯರಿಂದಲೇ ಅಧಿಕ ಮಾನವ ದಿನ ಸೃಜನೆಯಾಗಿರುವುದು ವಿಶೇಷ.

ನರೇಗಾ ಯೋಜನೆಯಲ್ಲಿ ಫಲಾನುಭವಿಗಳಿಗೆ ಪ್ಯಾಕೇಜ್ ಮಾದರಿಯಲ್ಲಿ ಸೌಲಭ್ಯಗಳನ್ನು ದೊರಕಿಸಿಕೊಡಲಾಗುತ್ತಿದ್ದು, ಗ್ರಾಮೀಣ ಭಾಗದ ಜನರು ಈ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಹೆಚ್ಚು ಸದುಪಯೋಗಪಡಿಸಿಕೊಳ್ಳಬೇಕು. ಆದರೆ ಕೋವಿಡ್-19 ಎರಡನೇ ಅಲೆಯಲ್ಲಿ ಹೆಚ್ಚು ಗ್ರಾಮಗಳಲ್ಲಿ ಸೋಂಕು ಹರಡುತ್ತಿರುವುದರಿಂದ ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಮುಂದೆ ಬಾರದಿರುವುದೂ ಸಹ ಕಂಡುಬಂದಿದೆ. ಈ ವರ್ಷ ಜಿಲ್ಲೆಯಲ್ಲಿ 48686 ಗ್ರಾಮೀಣರಿಗೆ ಉದ್ಯೋಗಖಾತ್ರಿಯಡಿ ಕೆಲಸ ನೀಡುವ ಮೂಲಕ 4.90 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.

ನರೇಗಾ ಯೋಜನೆ ಅಡಿ ಹಳ್ಳಿಗಳಲ್ಲಿ ಕೆರೆ ಹೂಳೆತ್ತುವುದು, ಗೋಕಟ್ಟೆ ಹೂಳೆತ್ತುವುದು, ಕೊಳವೆ ಬಾವಿ ಮರುಪೂರಣ ಘಟಕ, ಮೈದಾನ, ಕಣ, ಚೆಕ್ ಡ್ಯಾಂ, ಹೊಲಗಳಿಗೆ ಹೋಗಲು ದಾರಿ, ಕೃಷಿ ಹೊಂಡ, ಅಂಗನವಾಡಿ ಕೇಂದ್ರ, ಗ್ರಾಮೀಣ ಗೋದಾಮು, ಸ್ಮಶಾನ ಅಭಿವೃದ್ಧಿ, ಉದ್ಯಾನ, ಕಾಂಕ್ರಿಟ್ ರಸ್ತೆ ನಿರ್ಮಾಣದಂತಹ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಬಹುದಾದ ಅನೇಕ ಉದ್ಯೋಗಗಳನ್ನು ನೀಡಲಾಗುತ್ತಿದ್ದು, ಗುಂಪುಗೂಡಿ ಮಾಡಬಹುದಾದ ಕಾಮಗಾರಿ ಸ್ಥಳಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಕೂಲಿ ಕಾರ್ಮಿಕರು

ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ಪ್ರಸ್ತುತ ಉದ್ಯೋಗ ಖಾತ್ರಿಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರ ಸಂಖ್ಯೆ ಕಡಿಮೆಯಿದ್ದು, ಚನ್ನಗಿರಿ ತಾಲ್ಲೂಕಿನಲ್ಲಿ 1,495 ಜನರು, ಹೊನ್ನಾಳಿ 792, ದಾವಣಗೆರೆ 337, ಹರಿಹರ 210, ಜಗಳೂರು 151, ನ್ಯಾಮತಿ 166 ಸೇರಿದಂತೆ ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 3,151 ಜನರು ಮಾತ್ರ ಉದ್ಯೋಗಕ್ಕೆ ಬರುತ್ತಿದ್ದಾರೆ.

15 ದಿನಗಳ ಹಿಂದೆ ಒಟ್ಟು 19,321 ಜನರು ಕೆಲಸಕ್ಕೆ ಬರುತ್ತಿದ್ದು, ಕೋವಿಡ್ ಸೋಂಕಿನ ಭೀತಿಯ ಕಾರಣದಿಂದ ಉದ್ಯೋಗ ಅರಸಿ ಬರುವವರ ಸಂಖ್ಯೆಯೂ ಸದ್ಯ ಕಡಿಮೆ ಇದೆ. ಬರುವ ದಿನಗಳಲ್ಲಿ ಕೆಲಸ ಬಯಸಿ ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ.

ಕೊರೊನಾ ಲಾಕ್‍ಡೌನ್ ಪರಿಣಾಮವಾಗಿ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪುರುಷರು ಮತ್ತು ಮಹಿಳೆಯರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ನರೇಗಾ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೋವಿಡ್ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಉದ್ಯೋಗ ಕಲ್ಪಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 2,11,851 ಜಾಬ್‍ಕಾರ್ಡ್ ಗಳನ್ನು ನೀಡಲಾಗಿದ್ದು, 2,26,985 ಮಹಿಳೆಯರು, 2,57,952 ಪುರುಷರು ಸೇರಿದಂತೆ ಒಟ್ಟು 4,84,937 ಜನರು ಜಾಬ್‍ಕಾರ್ಡ್ ಪಡೆದುಕೊಂಡಿದ್ದಾರೆ. ಅಲ್ಲದೇ ಏಪ್ರಿಲ್, ಮೇ ತಿಂಗಳಲ್ಲಿ 2280 ಹೊಸ ಜಾಬ್‍ಕಾರ್ಡ್‍ಗಳನ್ನು ವಿತರಿಸಲಾಗಿದೆ.

ಮಹಿಳೆಯರಿಂದ ಹೆಚ್ಚು ಮಾನವ ದಿನ ಸೃಜನೆ: ಪ್ರಸ್ತುತ ಶೇ.46.87ರಷ್ಟು ಮಹಿಳೆಯರು ನರೇಗಾ ಯೋಜನೆಯಡಿಯಲ್ಲಿ ಉದ್ಯೋಗವಕಾಶವನ್ನು ಪಡೆದುಕೊಂಡಿದ್ದು, ಮಹಿಳೆಯರಿಂದಲೇ ಹೆಚ್ಚು ಮಾನವ ದಿನಗಳು ಸೃಜನೆಯಾಗಿರುವುದು ವಿಶೇಷ. ಜಿಲ್ಲೆಯಲ್ಲಿ ಒಟ್ಟು 48686 ಜನರಿಗೆ ನರೇಗದಡಿ ಕೆಲಸ ದೊರೆತಿದ್ದು ಒಟ್ಟು 490614 ಮಾನವದಿನಗಳ ಸೃಜನೆಯಾಗಿದ್ದು, 16.18 ಕೋಟಿ ರೂ. ಮೊತ್ತ ಪಾವತಿಸಲಾಗಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ ಒಟ್ಟು 12362 ಜನ ಕೆಲಸ ಮಾಡಿದ್ದು, 138511 ಮಾನವದಿನಗಳ ಸೃಜನೆಯಾಗಿದೆ. ಇಲ್ಲಿ 4.73 ಕೋಟಿ ರೂ. ಕೂಲಿ ಮೊತ್ತ ಪಾವತಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 4495 ಜನ ಕೆಲಸ ನಿರ್ವಹಿಸಿದ್ದು, 36020 ಮಾನವದಿನಗಳ ಸೃಜನೆಯಾಗಿ, 1.06 ಕೋಟಿ ರೂ. ಕೂಲಿ ಪಾವತಿಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 2032 ಕೂಲಿಕಾರರು ಕೆಲಸ ಮಾಡಿ 22015 ಮಾನವದಿನಗಳ ಸೃಜನೆಯಾಗಿದ್ದು 66.79 ಲಕ್ಷ ರೂ. ಕೂಲಿ ಮೊತ್ತ ಪಾವತಿಸಲಾಗಿದೆ.

ಹೊನ್ನಾಳಿ ತಾಲ್ಲೂಕಿನಲ್ಲಿ 8898 ಜನ ಕೆಲಸ ಮಾಡಿ 121933 ಮಾನವದಿನಗಳ ಸೃಜನೆ ಮಾಡಿದ್ದು, 3.78 ಕೋಟಿ ರೂ. ಮೊತ್ತ ಪಾವತಿಯಾಗಿದೆ. ಜಗಳೂರು ತಾಲ್ಲೂಕಿನಲ್ಲಿ 16605 ಜನ ಕೆಲಸ ಮಾಡಿ 126285 ಮಾನವದಿನಗಳನ್ನು ಸೃಜಿಸಿದ್ದು, 4.56 ಕೋಟಿ ರೂ. ಪಾವತಿಯಾಗಿದೆ. ನ್ಯಾಮತಿ ತಾಲ್ಲೂಕಿನಲ್ಲಿ 4294 ಜನ ಕೂಲಿಕಾರರು 45850 ಮಾನವ ದಿನಗಳನ್ನು ಸೃಜಿಸಿದ್ದು, 1.36 ಕೋಟಿ ರೂ. ಪಾವತಿಯಾಗಿದೆ.

ಮಾನವ ದಿನಗಳ ಗುರಿ

ಕೋವಿಡ್ ಲಾಕ್‍ಡೌನ್ ಕಾರಣದಿಂದ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನರೇಗ ಯೋಜನೆ ಆರ್ಥಿಕವಾಗಿ ಶಕ್ತಿ ತುಂಬಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ನರೇಗಾ ಅಡಿಯಲ್ಲಿ 31 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ನೀಡಿದ್ದು, ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ 4,90,614 ಮಾನವ ದಿನಗಳನ್ನು ಸೃಷ್ಟಿ ಮಾಡಲಾಗಿದೆ. ಕಳೆದ ವರ್ಷ 40 ಲಕ್ಷ ಗುರಿ ನೀಡಿದ್ದು, ಒಟ್ಟು 34,10,305 ಮಾನವ ದಿನಗಳನ್ನು ಸೃಜಿಸಲಾಗಿತ್ತು.

ದಿನಗೂಲಿ ಹಾಗೂ ಆಕಸ್ಮಿಕ ಮರಣ ಹೊಂದಿದವರಿಗೆ ಪರಿಹಾರ

ನರೇಗಾದಡಿ ಕೆಲಸ ಮಾಡುವವರಿಗೆ ದಿನಗೂಲಿ ರೂ.299 ನೀಡಲಾಗುತ್ತಿದ್ದು, ಲಾಕ್‍ಡೌನ್ ಅವಧಿಯಲ್ಲಿ ಬಹುತೇಕರಿಗೆ ಉದ್ಯೋಗ ಸೃಷ್ಟಿ ಮಾಡಿ ಬದುಕು ರೂಪಿಸಿಕೊಡುವಲ್ಲಿ ಮುನ್ನಡೆದಿದೆ. ನರೇಗಾ ಯೋಜನೆಯ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯಾವುದೇ ಕಾರ್ಮಿಕರು ಕೆಲಸದ ಕಾರಣದಿಂದಾಗಿ ಮತ್ತು ಕೆಲಸದ ಸಮಯದಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಅಥವಾ ಶಾಶ್ವತವಾಗಿ ಅಂಗವಿಕಲರಾದಲ್ಲಿ ಅಂತಹ ಕಾರ್ಮಿಕರ ಅಧಿಕೃತ ವಾರಸುದಾರರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆಯಡಿ ರೂ.2 ಲಕ್ಷ ಪರಿಹಾರ ನೀಡಲಾಗುತ್ತಿದೆ.

ಕೋವಿಡ್ ಲಾಕ್‍ಡೌನ್ ಸಂಕಷ್ಟದ ಸಮಯದಲ್ಲಿ ಕೂಲಿಕಾರರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸುವ ಮೂಲಕ ನರೇಗಾ ಯೋಜನೆ ಆರ್ಥಿಕವಾಗಿ ಆಸರೆ ನೀಡಿದ್ದು, ಉದ್ಯೋಗಕ್ಕಾಗಿ ಗ್ರಾಮೀಣರು ಸಂಬಂಧಪಟ್ಟ ಗ್ರಾಮ ಪಂಚಾಯತ್‍ಗಳನ್ನು ಸಂಪರ್ಕಿಸಿ, ಹೆಚ್ಚು ಹೆಚ್ಚು ಕೆಲಸ ಪಡೆಯಲು ಮುಂದಾಗಬೇಕಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್ ಅವರು.

ಕೃಪೆ : DPIR Davanagere

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending