ನೆಲದನಿ
ನುಡಿಯ ಒಡಲು – 08 | ನೋಮ್ ಚಾಮ್ಸ್ಕಿಯ ಭಾಷಿಕ ಚಿಂತನೆಗಳು
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/07/noam-Chomsky_suddidina_linguistic.jpg&description=ನುಡಿಯ ಒಡಲು – 08 | ನೋಮ್ ಚಾಮ್ಸ್ಕಿಯ ಭಾಷಿಕ ಚಿಂತನೆಗಳು', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/07/noam-Chomsky_suddidina_linguistic.jpg&description=ನುಡಿಯ ಒಡಲು – 08 | ನೋಮ್ ಚಾಮ್ಸ್ಕಿಯ ಭಾಷಿಕ ಚಿಂತನೆಗಳು', 'pinterestShare', 'width=750,height=350'); return false;" title="Pin This Post">
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
When we study human language, we are approaching what some might call the “human essence,” the distinctive qualities of mind that are, so far as we know, unique to man. – NOAM CHOMSKY, Language and Mind, 1968
ನುಡಿಯೆಂಬುದು ಮನುಷ್ಯರಲ್ಲಿ ಅಂತಸ್ಥಗೊಂಡಿರುತ್ತದೆ. ಅದೊಂದು ಸಾಮರ್ಥ್ಯ ಎಂಬೆಲ್ಲ ಸಂಗತಿಗಳಿಗೆ ಪೂರಕವಾದ ಕೆಲವು ಸುಳಿವುಗಳು ಫರ್ಡಿನಾಂಡ್ ಡಿ. ಸಸ್ಯೂರ್ನ ಚಿಂತನೆಗಳಿಂದ ಸಿಕ್ಕಿವೆ. ಇಂತಹ ಸಾಮರ್ಥ್ಯ ಎಲ್ಲಿ? ಹೇಗೆ? ಮತ್ತು ಯಾವ? ಸ್ವರೂಪದಲ್ಲಿ ಮಾನವರಲ್ಲಿ ಅಂತಸ್ಥವಾಗಿರುತ್ತದೆ ಎಂಬ ತಿಳಿವನ್ನು ಅರಿಯಲು ಈಗ ಚಾಮ್ಸ್ಕಿಯ ಚಿಂತನೆಗಳನ್ನು ಚರ್ಚಿಸೋಣ.
ಹೊರನೋಟಕ್ಕೆ ನುಡಿಯ ಸಾಮರ್ಥ್ಯ ದೇಹದ ಬೇರೆ ಬೇರೆ ಅಂಗಾಂಗಳಲ್ಲಿ ನೆಲೆಗೊಂಡಂತೆ ಕಾಣುತ್ತದೆ. ನುಡಿಯ ಆಚರಣೆಯ (ಲಿಂಗ್ವಿಸ್ಟಿಕ್ ಪರ್ಫಾರ್ಮನ್ಸ್) ನೆಲೆಯಿಂದ ನೋಡಿದಾಗ, ಈ ಮಾತು ದಿಟವಾಗಿ ಕಾಣುತ್ತದೆ. ಅಂದರೆ ನುಡಿಯ ವಾಸ್ತವದ ಪರಿಚಯ ನಮಗಾಗುವುದೇ ದೇಹದ ಬೇರೆ ಬೇರೆ ಅಂಗಗಳಿಂದ ಮಾತ್ರ.
ಎತ್ತುಗೆಗಾಗಿ ಬಾಯಿ, ತುಟಿ, ಹಲ್ಲು, ಗಂಟಲು, ಕಿರುನಾಲಿಗೆ, ಮೂಗು, ಶ್ವಾಸಕೋಶ, ಎದೆ, ಪಿತ್ತಾಶಯ [ಲೀವರ್] ಮುಂತಾದವುಗಳನ್ನು ಇಲ್ಲಿ ಹೆಸರಿಸಬಹುದು. ದಿಟ, ನುಡಿಯ ಬಳಕೆ ಹಾಗೂ ಉಪಯೋಗ ಸಮುದಾಯಗಳಲ್ಲಿ ನೆಲೆಗೊಳ್ಳುವುದೇ ಇಂತಹ ಅಂಗಗಳನ್ನು ಬಳಸಿಕೊಳ್ಳುವುದರಿಂದ ಮಾತ್ರ ಸಾಧ್ಯ. ಈ ಕಾರಣಗಳಿಂದಲೇ ಇರಬೇಕು ಜನರು ತಮ್ಮ ಸಾಂಸ್ಕೃತಿಕ ಸನ್ನಿವೇಶದಲ್ಲಿ ನುಡಿಗೆ ಬದಲಾಗಿ ನಾಲಿಗೆ, ಬಾಯಿಬಿಡು, ಮಾತುಕೊಡು, ತುಟಿಬಿಚ್ಚು, ಪಿಟಕ್ಕನ್ನು, ಎಂಬೆಲ್ಲ ಪರಿಭಾಷೆಗಳನ್ನು ಬಳಸುತ್ತಾರೆ.
ಈ ಎಲ್ಲ ವಿವರಗಳು ನುಡಿಯೊಂದು ವಾಸ್ತವಗೊಳ್ಳುವ ಬಗೆಗಳು ಯಾವವು ಹಾಗೂ ಯಾವುದೇ ಒಂದು ನುಡಿಸಮುದಾಯ ತನ್ನ ನುಡಿಯನ್ನು ಹೇಗೆಲ್ಲ ಸಾಂಸ್ಕೃತಿಕವಾಗಿ ಕಲ್ಪಿಸಿಕೊಂಡಿರುತ್ತದೆ ಎಂಬ ತಿಳಿವು ಮಾತ್ರ ಈ ಚರ್ಚೆಗಳಿಂದ ತಿಳಿಯುತ್ತದೆ. ಚಾಮ್ಸ್ಕಿಗೆ ಈ ಯಾವ ವಿವರಗಳು ಮುಖ್ಯವಲ್ಲ. ಅಂದರೆ ನುಡಿ ಕುರಿತ ಅವನ ತಾತ್ವಿಕ ಚೌಕಟ್ಟುಗಳಿಗೆ ಇಂತಹ ಚರ್ಚೆಗಳಿಂದ ಯಾವ ಪ್ರಯೋಜನವು ಆಗುವುದಿಲ್ಲ.
ಬದಲಾಗಿ ಅರಿವಿನ ನುಡಿಯರಿಮೆ (ಕಾಗ್ನಿಟಿವ್ ಲಿಂಗ್ವಿಸ್ಟಿಕ್ಸ್)ಯ ಕಣ್ನೋಟದಿಂದ ಚಾಮ್ಸ್ಕಿಯ ನುಡಿ ಬಗೆಗಿ ಚಿಂತನೆಗಳನ್ನು ತಿಳಿಯುವ ಜರೂರಿದೆ. ನುಡಿಯನ್ನು ಅರಿಯುವ, ನಿರ್ವಚಿಸುವ ಕ್ರಮಗಳು ಮೆದಳು, ಮನಸ್ಸು ಹಾಗೂ ಚಿಂತನೆಯ ಸ್ವರೂಪವನ್ನು ಅರಿಯುವ ಬಗೆಗಳಾಗಿವೆ. ಇಪ್ಪತ್ತನೇ ಶತಮಾನದ ಇಂತಹ ‘ಅರಿವಿನ ಕ್ರಾಂತಿ’ (ಕಾಗ್ನಿಟಿವ್ ರೆವಲ್ಯೂಶನ್)ಗೆ ಚಾಮ್ಸ್ಕಿಯ ಈ ಆಲೋಚನಾಕ್ರಮವೇ ಕಾರಣ. ನುಡಿಯರಿಮೆಯ ಓದಿನಲ್ಲಿಯೇ ಇಂತಹವೊಂದು ಆಲೋಚನಾ ಪಲ್ಲಟಕ್ಕೆ ಚಾಮ್ಸ್ಕಿ ಕಾರಣವೆಂಬುದು ಗಮನಾರ್ಹ ಸಂಗತಿ.
ಹಾಗಾದರೆ, ಚಾಮ್ಸ್ಕಿಗೆ ನುಡಿ ಬಗೆಗಿನ ಚಿಂತನೆಗಳನ್ನು ಬೆಳೆಸಲು ಬೇಕಾಗಿರುವ ಸಂಗತಿಗಳಾವವು? ಇವನು ನುಡಿ ಕುರಿತ ತನ್ನ ಚಿಂತನೆಗಳನ್ನು ಮುಂದೊಡ್ಡಲು ಮೆದಳು, ಮನಸ್ಸು, ಜೈವಿಕ ನೆಲೆಗಳು ಹಾಗೂ ಅವುಗಳಲ್ಲಿ ಅಡಕವಾಗಿರುವ ಸಾಮರ್ಥ್ಯದಂತಹ ಸಂಗತಿಗಳನ್ನು ಬಳಸಿಕೊಳ್ಳುತ್ತಾನೆ.
ಅದಕ್ಕಾಗಿ ಚಾಮ್ಸ್ಕಿ “ನುಡಿಯೆಂಬುದು ಕಲಿಯುವುದಲ್ಲ ಬದಲಾಗಿ ಅದನ್ನು ಕಲಿಯುವುದಕ್ಕೆ ಬೇಕಾಗುವ ಸಾಮರ್ಥ್ಯ ಮಾನವರ ಮೆದುಳಿನಲ್ಲಿ ಅಡಕವಾಗಿರುತ್ತದೆ” ಎಂದು ಹೇಳುತ್ತಾನೆ. ಈ ತಿಳಿವನ್ನು ಮೂರು ಬೇರೆ ಬೇರೆ ಬಗೆಯಲ್ಲಿ ವಿಂಗಡಿಸಿ ನೋಡುವುದರಿಂದ ಈ ಚಿಂತನೆಯ ಬೇರೆ ಬೇರೆ ಆಯಾಮಗಳನ್ನು ಕಾಣಬಹುದು;
- ಸಾಮಥ್ರ್ಯ ಮಾದರಿ (ಕಾಂಪಿಟನ್ಸ್ ಮಾಡಲ್)
- ಆಚರಣೆ ಮಾದರಿ (ಪರ್ಫಾರ್ಮೆನ್ಸ್ ಮಾಡಲ್)
- ನುಡಿ ಗಳಿಕೆಯ ಮಾದರಿ (ಆಕ್ವಿಜೇಶನ್ ಮಾಡಲ್)
ಈ ಮೂರು ನೆಲೆಗಳು ಪರಸ್ಪರ ನಂಟುಳ್ಳವುಗಳಾಗಿವೆ. ಇವುಗಳ ಗುಣವೆಂತಹದು ಎಂಬುದನ್ನು ಬಿಡಿಸಿ ನೋಡಿದರೆ, ಚಾಮ್ಸ್ಕಿಯ ನುಡಿ ಬಗೆಗಿನ ತಿಳಿವಳಿಕೆಗಳು ನಮ್ಮರಿವಿಗೆ ಬರುತ್ತವೆ. ಇವುಗಳಲ್ಲಿ ಯಾವುದೇ ಒಂದನ್ನು ಹೊರತುಪಡಿಸಿ, ಚಾಮ್ಸ್ಕಿಯ ನುಡಿ ಬಗೆಗಿನ ಚಿಂತನೆಗಳನ್ನು ಅರಿಯುವುದು ಕೊಂಚ ದುಸ್ತರವೇ ಸರಿ.
ನುಡಿಯಿಗರು (ಜನರು) ನುಡಿಯನ್ನು ಹೇಗೆ ಗಳಿಸಿಕೊಳ್ಳುತ್ತಾರೆ. ಹಾಗೇ ಗಳಿಸಿಕೊಳ್ಳಲು ಯಾವ ಬಗೆಯ ಜೈವಿಕ ನೆರವು ಅವರಿಗೆ ಸಿಗುತ್ತದೆ. ಹಾಗೂ ಅದೆಲ್ಲವೂ ಹೇಗೆ ಒಂದು ಮಾನಸಿಕ ಸಾಮರ್ಥ್ಯವಾಗಿ ಅವರಿಗೆ ದಕ್ಕುತ್ತದೆ? ನುಡಿಯಿಗರ ಸೃಜನಶೀಲ ಕಸುವು ಎಂತಹದು? ಹಾಗೂ ಆಡುಗನು ತಾನು ಈ ಹಿಂದೆ ಯಾವತ್ತು ಉತ್ಪಾದಿಸದ ಹೊಸ ಹೊಸ ವಾಕ್ಯಗಳನ್ನು ಹೇಗೆ ಕಟ್ಟುತ್ತಾನೆ.
ಹಾಗೇನೆ ಕೇಳುವ ಯಾವತ್ತು ಈ ಹಿಂದೆ ಕೇಳದೇ ಇರುವ ಆ ಹೊಸ ಹೊಸ ವಾಕ್ಯಗಳನ್ನು ಹೇಗೆ ಅರಿತುಕೊಳ್ಳುತ್ತಾನೆ. ಇಂತಹ ಸೊಲ್ಲುಗಳ ಉತ್ಪಾದನೆ ಹಾಗೂ ಗ್ರಹಿಕೆಗೆ ಯಾವುದೇ ಮಿತಿಯಿರುವುದಿಲ್ಲ. ಅಪರಿಮಿತವಾಗಿ ಈ ಕೆಲಸ ನುಡಿಯಲ್ಲಿ ನಡೆಯುತ್ತದೆ. ಇದರಿಂದ ಮಾನವರಿಗೆ ಅಂತಸ್ಥ ಸಾಮರ್ಥ್ಯವಿದೆ ಎಂದಾಯ್ತು. ಇದನ್ನೇ ಚಾಮ್ಸ್ಕಿ ಅನಂತತ್ವ (ಇನ್ಫಿನಿಟಿ) ಎಂದು ಹೇಳುತ್ತಾನೆ. ಇಂತಹ ಎಲ್ಲ ನಿಲುವುಗಳನ್ನು ಕುರಿತು ಚರ್ಚಿಸುವುದೇ ಸಾಮರ್ಥ್ಯದ ಮಾದರಿ.
ಸಾಮರ್ಥ್ಯ ಮಾದರಿ
(ಸೊಲ್ಲರಿಮೆ/ವ್ಯಾಕರಣ)
ಉಲಿಗಳು (ಸೌಂಡ್ಸ್)
ಭಾಷಿಕ ಅರ್ಥ (ಲಿಂಗ್ವಿಸ್ಟಿಕ್ಸ್ ಮೀನಿಂಗ್)
ಚಿತ್ರ 1.ಅ ಸಾಮರ್ಥ್ಯ ಮಾದರಿ
ನುಡಿಯಿಗರ ಮೆದುಳಿನಲ್ಲಿ ಅಂತಸ್ಥವಾಗಿರುವ ನುಡಿಯ ತಿಳಿವು (ನಾಲೇಜ್ ಆಫ್ ಲಾಂಗ್ವೇಜ್) ಹೇಗೆ ಒಂದು ಉತ್ಪಾದಕ – ರೂಪಾಂತರ ನೆಲೆಯಾಗಿ ಬರ್ಹಿರೂಪವನ್ನು ಪಡೆಯುತ್ತದೆ. ನುಡಿಯ ಸೊಲ್ಲುಗಳನ್ನು ಕಟ್ಟುವ, ಸೊಲ್ಲುಗಳ ನಡುವಣ ನಂಟಸ್ತಿಕೆ ಹಾಗೂ ಭಿನ್ನತೆಗಳನ್ನು ಗುರುತಿಸುವ, ಹಾಗೂ ನುಡಿಯ ಮೂಲ ದತ್ತದಿಂದ (ಪ್ರೈಮರಿ ಲಿಂಗ್ವಿಸ್ಟಿಕ್ಸ್ ಡೇಟ) ಅಂತಸ್ಥ ಸಾಮರ್ಥ್ಯದ ಲಕ್ಷಣಗಳು ಆಚರಣೆಯ ನೆಲೆಯನ್ನು ಹೇಗೆ ಪಡೆಯುತ್ತವೆ.
ಅವುಗಳ ಮೂಲಕ ಆಯಾ ನುಡಿಯ ಅಂತರ್ನಿಹಿತ ನಿಯಮಗಳನ್ನು ಹೇಗೆ ಗುರುತಿಸುತ್ತೇವೆ, ಹಾಗೂ ಒಳಪದರ (ಡೀಪ್ ಸ್ಟ್ರಕ್ಚರ್) ರಚನೆ ಮತ್ತು ಹೊರಪದರ (ಸರ್ಫೇಸ್ ಸ್ಟ್ರಕ್ಚರ್) ರಚನೆಗಳು ಪರಸ್ಪರವಾಗಿ ಹೇಗೆ ವ್ಯವರಿಸುತ್ತವೆ ಎಂಬಿತ್ಯಾದಿ ಸಂಗತಿಗಳನ್ನು ಈ ಆಚರಣೆಯ ಮಾದರಿಯಿಂದ ತಿಳಿಯುತ್ತೇವೆ. ಇನ್ನೊಂದು ಸಂಗತಿಯನ್ನು ಈ ಆಚರಣೆಯ ನೆಲೆಯಿಂದ ಅರಿತುಕೊಳ್ಳಲು ಅನಕೂಲವಾಗುತ್ತದೆ.
ಅದೇನೆಂದರೆ, ಮಾನವರ ವರ್ತನೆ ಮತ್ತು ಇತರ ಪ್ರಾಣಿಗಳ ವರ್ತನೆಗಳ ನಡುವೆ ಯಾವ ಬಗೆಯ ಗುಣಾತ್ಮಕ, ಭಾಷಿಕ, ವೈಚಾರಿಕ ವ್ಯತ್ಯಾಸಗಳಿರುತ್ತವೆ ಎಂಬು ದಿಟ ಸಂಗತಿಗಳನ್ನು ಅರಿಯುಲೂ ಈ ಆಚರಣೆಯ ಮಾದರಿ ನೆರವಾಗುತ್ತದೆ.
ಸಂವಹನ ಆಶಯ (ಕಮ್ಯುನಿಕೇಟಿವ್ ಇನ್ಟೆನ್ಶನ್)
ಉಲಿಗಳು (ಸೌಂಡ್ಸ್)
ಚಿತ್ರ 1.ಆ ಆಚರಣೆಯ ಮಾದರಿ
ನುಡಿಯನ್ನು ಗಳಿಸುವ, ಆ ಮೂಲಕ ನುಡಿ ಬಗೆಗಿನ ತಿಳಿವು ಸಂಚಯಗೊಳ್ಳುವ, ಹೀಗೆ ಸಂಚಯಗೊಂಡ ತಿಳಿವು ಒಂದು ಅನುಭವವಾಗಿ ರೂಪುಗೊಳ್ಳುವ ನೆಲೆಗಳು ಈ ಗ್ರಹಿಕೆಯ ಮಾದರಿಯಿಂದ ತಿಳಿದುಬರುತ್ತವೆ.
ಹಿಂದೆಂದೂ ಕೇಳಿರದ, ಓದಿರದ ಸೊಲ್ಲುಗಳನ್ನು (ವಾಕ್ಯ) ಕಟ್ಟುವುದಕ್ಕೆ ಹೇಗೆ ಸಾಧ್ಯ? ಯಾವುದೇ ಔಪಚಾರಿಕ ತರಬೇತಿಯಿಲ್ಲದೇನೆ ಮಗುವೊಂದು ಸರಳವಾಗಿ ನುಡಿಯ ಎಲ್ಲ ರಾಚನಿಕ ನೆಲೆಗಳನ್ನು ಹೇಗೆ ಪಡೆದುಕೊಳ್ಳುತ್ತೆ? ಸೊಲ್ಲರಿಮೆಗೆ ಒಪ್ಪಿತವಾಗದ (ಉದಾ.ಗೆಗಾಗಿ. ಕಮಲ ಇವತ್ತು ಕ್ಲಾಸಿಗೆ ಬಂದಿದ್ದಾನೆಯೇ?) ಸೊಲ್ಲುಗಳಿಗೂ ಹಾಗೂ ಸೊಲ್ಲರಿಮೆಗೆ ಒಪ್ಪಿತವಾಗುವ (ಉದಾ.ಗೆಗಾಗಿ. ಕಮಲ ಇವತ್ತು ಕ್ಲಾಸಿಗೆ ಬಂದಿದ್ದಾಳೆಯೇ) ಸೊಲ್ಲುಗಳಿಗೂ ಇರುವ ಅಂತರವನ್ನು ಹೇಗೆ ಗುರುತಿಸಲಾಗುತ್ತೆ?
ಅತ್ಯಂತ ಕಡಿಮೆ ಹೂಡುವಳಿಗಳ (ಇನ್ಪುಟ್ಸ್) ಮೂಲಕ ಅತ್ಯಂತ ಗರಿಷ್ಠಮಟ್ಟದ ತಿಳಿವನ್ನು ನುಡಿಯಿಗರು (ಭಾಷಿಕರು) ಹೇಗೆ ಪಡೆಯುತ್ತಾರೆ? ಈ ಬಗೆಯ ಗ್ರಹಿಕೆಯ ನೆಲೆಯನ್ನು ಚಾಮ್ಸ್ಕಿ ಪ್ಲೇಟೋನ ಸಮಸ್ಯೆ ಎಂದು ಹೆಸರಿಸುತ್ತಾನೆ. ಮತ್ತು ಹೆಚ್ಚು ಹೂಡುವಳಿಗಳಿದ್ದು (ಇನ್ಪುಟ್ಸ್) ಅತ್ಯಂತ ಕಡಿಮೆ ತಿಳಿವನ್ನು ನುಡಿಯಿಗರು ಪಡೆಯುತ್ತಾರೆ. ಇದನನ್ನು ಚಾಮ್ಸ್ಕಿ ಆರ್ವೆಲ್ ಸಮಸ್ಯೆ ಎಂದು ಕರೆಯುತ್ತಾನೆ. ವರ್ತನಾವಾದಿಗಳು ವಾದಿಸುವಂತೆ ನುಡಿ ಕೇವಲ ಕಲಿಕೆಯಿಂದ ಪಡೆಯುವ ಸಾಮರ್ಥ್ಯವಲ್ಲ, ಬದಲಾಗಿ ಅದು ಮನುಷ್ಯರ ಮನಸ್ಸಿಗೆ ಸಂಬಂಧಿಸಿದ ಸಂಗತಿ ಎಂಬ ದಟ ಸಂಗತಿ ಈ ಗ್ರಹಿಕೆಯ ಮಾದರಿಂದ ತಿಳಿಯುತ್ತದೆ.
ನುಡಿ ಅನುಭವ (ಲಾಂಗ್ವೇಜ್ ಎಕ್ಸಪೀರಿಯನ್ಸ್)
ಚಿತ್ರ 1.ಇ. ನುಡಿ ಗಳಿಕೆಯ ಮಾದರಿ
ಚಾಮ್ಸ್ಕಿಯ ಎರಡು ಮುಖ್ಯ ಅರಿಮೆಯ ನೆಲೆಗಳನ್ನು ಚರ್ಚಿಸುವುದರ ಮೂಲಕ ಅವರ ನುಡಿ ಬಗೆಗಿನ ತಿಳುವಳಿಕೆಗಳನ್ನು ಇನ್ನಷ್ಟು ಆಳವಾಗಿ ತಿಳಿಯಲು ಸಾಧ್ಯವಿದೆ. ನುಡಿಯೆಂಬುದು ಮನುಷ್ಯರಿಗೆ ಒದಗುವಂತಹದೇ (ಲಾಂಗ್ವೇಜ್, ಇಟ್ ಹ್ಯಾಪನ್ಸ್ ಟು ಹ್ಯೂಮನ್ ಬೀಯಿಂಗ್ಸ್) ಹೊರತು ಕಲಿಯುವಂತಹದಲ್ಲ.
ಕಾರಣ ಮನುಷ್ಯರ ಮೆದುಳಿನಲ್ಲಿ ಜನ್ಮಜಾತವಾಗಿ ನುಡಿ ಸಾಮರ್ಥ್ಯವೊಂದು ನೆಲೆಗೊಂಡಿರುತ್ತದೆ. ಇದನ್ನು ವೈಶ್ವಿಕ ವ್ಯಾಕರಣ (ಯೂನಿವರ್ಸಲ್ ಗ್ರಾಮರ್) ಅಥವಾ (ಯುಜಿ) ಎಂದು ಕರೆಯುತ್ತಾರೆ. ಅಂದರೆ ಲೋಕದಲ್ಲಿರುವ ಯಾವುದೇ ನುಡಿಯನ್ನಾದರೂ ಮನುಷ್ಯರು ಗಳಿಸಿಕೊಳ್ಳಲು ಬೇಕಾಗುವ ಕೆಲವು ನಿಯಮಗಳ ಗುಚ್ಚವೇ ಈ ಯುಜಿಯಲ್ಲಿ ಅಂತಸ್ಥವಾಗಿರುತ್ತವೆ.
ಇದು ಇಂತಹದೇ ನುಡಿಗೆ ಮಾತ್ರ ಅನ್ವಯವಾಗುವಂತಹದು ಎಂದು ಹೇಳುವಂತಿಲ್ಲ. ಲೋಕದಲ್ಲಿರುವ ಎಲ್ಲ ನುಡಿಗಳಿಗೂ ಆನ್ವಯಿಸುವ ಸಾಮನ್ಯ ತತ್ವಗಳು ಈ ಯುಜಿಯಲ್ಲಿ ಅಂತರ್ಗತವಾಗಿರುತ್ತವೆ. ಹಾಗಾಗಿ ನುಡಿ ಅನ್ನುವಂತಹದು ಕಲಿಯುವಂತಹದಲ್ಲ, ಬದಲಾಗಿ ಅದನ್ನು ಪಡೆಯುವುದಕ್ಕೆ ಬೇಕಾದ ಸಾಮರ್ಥ್ಯ ಮನುಷ್ಯರ ಮೆದುಳಿನಲ್ಲಿ ಅಡಕವಾಗಿರುತ್ತದೆ.
ನಿಯಮಗಳು ಮತ್ತು ವಿಕಲ್ಪಗಳು (ಪ್ರಿನ್ಸಿಪಲ್ಸ್ ಆಂಡ್ ಪ್ಯಾರಮಿಟರ್ಸ್) ಎಂಬ ತನ್ನ ಮತ್ತೊಂದು ಪ್ರಭಾವಿ ತಾತ್ವಿಕ ಚೌಕಟ್ಟಿನಿಂದ ಚಾಮ್ಸ್ಕಿ ಯುಜಿ ಕುರಿತ ತಿಳಿವಳಿಕೆಗಳನ್ನು ಮತ್ತಷ್ಟು ನಿಚ್ಚಳಗೊಳಿಸುತ್ತಾನೆ. ಈ ಥಿಯರಿಯನ್ನು ಇವನು ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ರೂಪಿಸಿದ್ದಾನೆ.
ಹಾಗಾದರೆ, ನಿಯಮಗಳು ಮತ್ತು ವಿಕಲ್ಪಗಳು ಎಂಬ ಈ ತಾತ್ವಿಕ ಚೌಕಟ್ಟು ಏನನ್ನು ಹೇಳುತ್ತದೆಂದರೆ, ಲೋಕದಲ್ಲಿರುವ ಎಲ್ಲ ನುಡಿಗಳು ಕೆಲವು ಸಮಾನ ತತ್ವಗಳನ್ನು ಹಂಚಿಕೊಂಡಿರುತ್ತವೆ. ಇದನ್ನು ಚಾಮ್ಸ್ಕಿ ಪ್ರಿನ್ಸಿಪಲ್ಸ್ಯೆಂದು ಕರೆದನು. ಅಂದರೆ ಕ್ರಿಯಾಪದ, ನಾಮಪದ, ಕಾಲ, ವಿಭಕ್ತಿ, ಪುರುಷ ಹಾಗೂ ವಚನಗಳು ಲೋಕದ ಎಲ್ಲ ನುಡಿಗಳಲ್ಲಿ ಇರುತ್ತವೆ.
ಇವುಗಳನ್ನು ರೂಪಿಸುವ ರಾಚನಿಕ ಮೂಲ ತತ್ವಗಳು ಕೂಡ ಆಯಾ ನುಡಿಗಳಲ್ಲಿ ಇರುತ್ತವೆ. ಇವಗಳು ರಾಚನಿಕವಾಗಿ ಕೆಲವು ಸಮಾನ ತತ್ವಗಳನ್ನೂ ಅನುಸರಿಸುತ್ತವೆ. ಆದರೆ ಲೋಕದಲ್ಲಿರುವ ಈ ನುಡಿಗಳ ರಾಚನಿಕ ನೆಲೆಗಳು ವ್ಯವರಿಸುವ ಕ್ರಮಗಳಲ್ಲಿ ಮಾತ್ರ ಸಮಾನತೆ ಇರುವುದಿಲ್ಲ. ಅವುಗಳ ನಡುವೆ ಕೆಲವು ವ್ಯತ್ಯಾಸಗಳೂ ಇರುತ್ತವೆ. ಈ ವ್ಯತ್ಯಾಸಗಳನ್ನು ಚಾಮ್ಸ್ಕಿ ವಿಕಲ್ಪ ಇಲ್ಲವೇ ಪ್ಯಾರಮಿಟರ್ಸ್ಯೆಂದು ಕರೆಯುತ್ತಾನೆ.
ವಿಕಲ್ಪಗಳೇ ಬೇರೆ ಬೇರೆ ನುಡಿಗಳ ಸ್ವಾಯತ್ತತೆಗೆ ಕಾರಣವಾಗುತ್ತವೆ ಎಂಬುದು ಗಮನಾರ್ಹ. ಎತ್ತುಗೆಗಾಗಿ, ಇಂಗ್ಲಿಶಿನಲ್ಲಿರುವ ಪ್ರಿಪಸಿಶನ್ ಎಂಬ ರಾಚನಿಕ ವ್ಯವಸ್ಥೆ ಕನ್ನಡದಲ್ಲಿಲ್ಲ. ಹಾಗೂ ಕನ್ನಡದಲ್ಲಿರುವ ಪೋಸ್ಟ್ಪೊಸಿಶನ್ (ವಿಭಕ್ತಿ ಪ್ರತ್ಯಯಗಳು) ಎಂಬ ರಾಚನಿಕ ವ್ಯವಸ್ಥೆ ಇಂಗ್ಲಿಶಿನಲ್ಲಿಲ್ಲ. ಇವುಗಳು ವಿಭಕ್ತಿಯನ್ನು ಸೂಚಿಸುವ ಕೆಲಸದಲ್ಲಿ ಪಾಲ್ಗೊಳ್ಳುತ್ತವೆ.
ಅಂದರೆ ಇಂಗ್ಲಿಶಿನಲ್ಲಿ ವಿಭಕ್ತಿ ಸೂಚಿಸುವ ರೂಪಗಳು ನಾಮಪದದ ಮೊದಲು ಬರುತ್ತವೆ, ಆದರೆ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳು ನಾಮಪದದ ನಂತರ ಬರುತ್ತವೆ. ಹಾಗೂ ಸಂಸ್ಕೃತದ ಸಂಧಿ, ಸಮಾಸ ಹಾಗೂ ವಿಭಕ್ತಿ ರಚನೆಗೂ ಕನ್ನಡದ ಸಂಧಿ, ಸಮಾಸ ಹಾಗೂ ವಿಭಕ್ತಿ ರಚನೆಗೂ ಸಾಕಷ್ಟು ಅಂತರಗಳಿವೆ. ಇಂತಹ ಅಂತರಗಳಿಂದಲೇ ಅವುಗಳು ಬೇರೆ ಬೇರೆ ನುಡಿಗಳಾಗಿ ಅಸ್ತಿತ್ವದಲ್ಲಿವೆ.
ಸೊಲ್ಲುಗಳ/ವಾಕ್ಯಗಳ ಕಟ್ಟಿನ ಮಾದರಿಯನ್ನು ಬಿಡಿಸಿ ನೋಡುವುದರ ಮೂಲಕ ಈ ತಿಳಿವನ್ನು ಇನ್ನಷ್ಟೂ ನಿಚ್ಚಳಗೊಳಿಸಬಹುದು. ಲೋಕದ ನುಡಿಗಳ ಸೊಲ್ಲುಗಳನ್ನು ರೂಪಿಸುವ ಕಟ್ಟುಗಳ ನಡುವೆ ಮೂಲತತ್ವಗಳ ಒಂದು ಕ್ರಮವಿರುತ್ತದೆ. ಇದನ್ನು ವಿಷಯ (ಸಬ್ಜೆಕ್ಟ್), ಅನುಭೋಗಿ (ಆಬ್ಜೆಕ್ಟ್) ಹಾಗೂ ಕೆಲಸಪದ (ವರ್ಬ್) ಎಂಬ ನೆಲೆಗಳನ್ನಾಗಿ ಗುರುತಿಸುತ್ತಾರೆ.
ಆದರೆ ಇವುಗಳನ್ನು ಜೋಡಿಸುವ ಕ್ರಮಗಳು ಮಾತ್ರ ಎಲ್ಲ ನುಡಿಗಳಲ್ಲಿ ಒಂದೇ ಬಗೆಯಲ್ಲಿ ಇರುವುದಿಲ್ಲ. ಎತ್ತುಗೆಗಾಗಿ ಇಂಗ್ಲಿಶಿನಲ್ಲಿ ಕೆಲಸಪದಗಳು ಸೊಲ್ಲಿನ ನಡುವೆ ಬರುತ್ತವೆ, ಆದರೆ ಕನ್ನಡದಲ್ಲಿ ಅವು ಕೊನೆಗೆ ಬರುತ್ತವೆ. ಸೊಲ್ಲುಗಳನ್ನು ಕಟ್ಟಲು ವಿಷಯ, ಅನುಭೋಗಿ ಹಾಗೂ ಕೆಲಸಪದಗಳು ಎಲ್ಲ ನುಡಿಗಳಲ್ಲೂ ಇರುತ್ತವೆಯಾದರೂ, ಅವುಗಳನ್ನು ಹೊಂದಿಸುವ ರಾಚನಿಕ ಮೂಲತತ್ವಗಳಲ್ಲಿ ವಿಕಲ್ಪಗಳು ಏರ್ಪಡುತ್ತವೆ. ಒಂದು ನುಡಿ ಇನ್ನೊಂದು ನುಡಿಯಿಂದ ಹೇಗೆ ಬೇರೆಯಾಗಿರುತ್ತದೆ ಎಂಬುದನ್ನು ಇಂತಹ ವಿಕಲ್ಪಗಳೇ ತಿಳಿಸುತ್ತವೆ. ಇವುಗಳನ್ನು ಈ ಕೆಳಗಿನಂತೆ ವಿಂಗಡಿಸಿರುತ್ತಾರೆ;
- ವಿಷಯ, ಅನುಭೋಗಿ ಹಾಗೂ ಕೆಲಸಪದ
- ವಿಷಯ, ಕೆಲಸಪದ ಹಾಗೂ ಅನುಭೋಗಿ
- ಅನುಭೋಗಿ, ಕೆಲಸಪದ ಹಾಗೂ ವಿಷಯ
- ಅನುಭೋಗಿ, ವಿಷಯ ಹಾಗೂ ಕೆಲಸಪದ
- ಕೆಲಸಪದ, ವಿಷಯ ಹಾಗೂ ಅನುಭೋಗಿ
- ಕೆಲಸಪದ, ಅನುಭೋಗಿ ಹಾಗೂ ವಿಷಯ
ಈ ಆರು ಬಗೆಯಲ್ಲಿ ಲೋಕದ ನುಡಿಗಳ ಸೊಲ್ಲುಗಳು ರೂಪುಗೊಳ್ಳತ್ತವೆ. ನುಡಿಗಳ ನಡುವಣ ಮೂಲತತ್ವಗಳಲ್ಲಿ ಉಂಟಾಗುವ ಈ ವಿಕಲ್ಪಗಳು ಅತ್ಯಂತ ಮಹತ್ವದ ಸಂಗತಿಗಳು. ಏಕೆಂದರೆ ಇಂತಹ ವಿಕಲ್ಪಗಳೇ ಆಯಾ ನುಡಿಗಳ ಸ್ವಾಯತ್ತತೆಯನ್ನು ಸಾಬೀತುಪಡಿಸುತ್ತವೆ.
ಚಾಮ್ಸ್ಕಿಗೆ ನುಡಿ ಒಂದು ಸಾಮಾಜಿಕ ನಿಯತಿಯಾಗಿರಲ್ಲ (ಫಿನಾಮಿನಾ). ಹೊರತಾಗಿ ಅದು ಯಾವಾಗಲೂ ಮಾನಸಿಕ ನಿಯತಿಯಾಗಿತ್ತು (ಮೆಂಟಲ್ ಫಿನಾಮಿನಾ). ಹಾಗಾಗಿ ನುಡಿ ಬಗೆಗಿನ ತನ್ನ ಚಿಂತನೆಗಳನ್ನು ಮನಸ್ಸು ಮತ್ತು ಆಲೋಚನೆಯ ರಚನೆಗಳನ್ನು ಅರಿಯುವ ಮಾನದಂಡವನ್ನಾಗಿ ಬಳಸಿಕೊಂಡಿದ್ದಾನೆ. ಚಾಮ್ಸ್ಕಿಯ ಪ್ರಕಾರ ನುಡಿ ಕೇವಲ ಒಂದು ಸಂವಹನ ಮಾಧ್ಯಮವಲ್ಲ.
ಅದೊಂದು ಸೃಜನಶೀಲ ಹಾಗೂ ವೈಚಾರಿಕ ಕ್ರಿಯೆ. ಅದಕ್ಕಾಗಿ ಬಿ.ಎಫ್.ಸ್ಕಿನ್ನರ್, ಪಿಯಾಜೆ, ವ್ಯಾಗ್ಟಸ್ಕಿ, ವ್ಯಾಟ್ಸನ್ ಹಾಗೂ ಕ್ವೈನ್ ಅವರು ಮಂಡಿಸುವ ನುಡಿ ಬಗೆಗಿನ ಚಿಂತನೆಗಳನ್ನು ಚಾಮ್ಸ್ಕಿ ಒಪ್ಪುವುದಿಲ್ಲ. ಕಾರಣ ವರ್ತನಾವಾದಿಗಳಿಗೆ ಪ್ರಾಣಿ ಹಾಗೂ ಮನುಷ್ಯರು ತಮ್ಮ ಚಳಕಗಳನ್ನು (ಸ್ಕಿಲ್ಸ್) ಸಾಮನ್ಯ ನಿಯಮ ವಿಧಾನದ ನೆಲೆಯಿಂದಲೇ ಪಡೆಯುತ್ತವೆ ಎಂಬ ನಂಬಿಕೆಯೇ ಚಾಮ್ಸ್ಕಿಯ ಈ ನಿರಾಕರಣೆಗೆ ಕಾರಣ.
ಚಾಮ್ಸ್ಕಿಗೆ ನುಡಿಯರಿಮೆ ಎನ್ನುವುದೇ ನುಡಿ ಆಚರಣೆ ಹಾಗೂ ನುಡಿ ಸಾಮರ್ಥ್ಯಗಳ ನಡುವಣ ವೈಶಿಷ್ಟ್ಯವನ್ನು ಗುರುತಿಸುವುದಾಗಿದೆ. ನುಡಿಯರಿಮೆಯ ದಿಟವಾದ ಗುರಿಯೇ ನುಡಿ ಸಾಮರ್ಥ್ಯವನ್ನು ಬಗೆದು/ಬಿಡಿಸಿ ನೋಡುವ ನೆಲೆಯೇ ಹೊರತು ನುಡಿ ಆಚರಣೆಯ ಬಗೆಗಳನ್ನು ವಿವರಿಸುವುದು ಮಾತ್ರವಲ್ಲ. ನುಡಿಯರಿಮೆ ಕಾಗ್ನಿಟಿವ್ ಸೈಕಾಲಜಿಯ ಒಂದು ಟಿಸಿಲುಯೆಂಬುದೇ ಚಾಮ್ಸ್ಕಿಯ ನಿಲುವು.
ಮಾನಸಿಕವಾಗಿ ಪ್ರತಿನಿಧಿತ ತಿಳಿವಿನ ಮಾದರಿಗಳನ್ನು ರೂಪಿಸುವ ಕ್ರಮವೇ ಈ ತಿಳಿವಿನ ವಲಯದ ಗುರಿಯಾಗಿದೆ. ಹೌದು, ನುಡಿ ಆಚರಣೆಯ ನೆಲೆಗಳನ್ನೂ ಇದು ಗಮನಿಸುತ್ತದೆ. ಗಮನಿಸಿದರೂ, ಇದೊಂದು ಬೇರೆ ಬಗೆಯ ಅಧ್ಯಯನಾಗಿರುತ್ತದೆ. ಏಕೆಂದರೆ, ಇಂತಹ ಆಚರಣೆಯು ನುಡಿ ಸಾಮರ್ಥ್ಯದ ಹಲವು ಬಗೆಯ ಕ್ರಿಯೆಗಳನ್ನು ಒಳಗೊಂಡಿರುತ್ತದೆ.
ಈ ಕ್ರಿಯೆಗಳು ಆಚರಣೆಯ ರೂಪದಲ್ಲಿದ್ದರೂ, ಅವು ಹೇಗೆ ನುಡಿಯ ಅಂತಸ್ಥ ತಿಳಿವನ್ನು ಅರಿಯಲು ಅನಕೂಲಕಾರಿ ಆಗುತ್ತವೆ ಎಂಬುದನ್ನು ಬಿಡಿಸಿ ನೋಡಬೇಕು. ಇಂತಹ ನಿಲುವುಗಳನ್ನು ಕುರಿತ ವಿಶ್ಲೇಷಣೆ ಮಾನಸಿಕ ಹಾಗೂ ಸಾಮಾಜಿಕ ಪರಿಣಾಮಗಳನ್ನು ಕಂಡುಕೊಳ್ಳುವ ನೆಲೆಯಾಗುತ್ತದೆ ಅನ್ನುವುದು ಚಾಮ್ಸ್ಕಿಯ ಚಿಂತನೆಯ ಮಹತ್ವವನ್ನು ತಿಳಿಸುತ್ತದೆ.
ಸಾಮಾನ್ಯ ಸೂತ್ರಗಳ ವಿಧಾನದ ಮೂಲಕ ರಾಚನಿಕ ನುಡಿಯರಿಮೆ ಕೆಲವು ಆಯ್ದ ಮಾತಿನ ಮೂಲಕ ಸಿಗುವ ದತ್ತವನ್ನು ಅನುಸರಿಸಿ, ಆಯಾ ನುಡಿಗಳ ರಾಚನಿಕ ಸ್ವರೂಪವನ್ನು ತೀರ್ಮಾನಿಸುತ್ತಿತ್ತು. ಇದು ಕೆವಲ ಆಚರಣೆಯ ನೆಲೆಯನ್ನು ಅರಿಯುವ ಬಗೆಯಾಗಿತ್ತು. ಅಂದರೆ ಹೊರಸ್ತರದ ರಚನೆಯನ್ನು ಮಾತ್ರ ಸೂತ್ರೀಕರಿಸಿ ಆ ಮೂಲಕ ಆಯಾ ನುಡಿಗಳ ಲಕ್ಷಣಗಳನ್ನು ಗುರುತಿಸುತ್ತಿದ್ದರು.
ನುಡಿಯ ರಚನೆಯನ್ನು ವರ್ಗೀಕರಿಸಿ ಅದುವೇ ಆ ನುಡಿಯ ಇಡೀ ಸ್ವರೂಪವೆಂದು ನಂಬಿಸಲಾಗುತ್ತಿತ್ತು. ಈ ವಿಶ್ಲೇಷಣೆಯ ಮೂಲಕ ಒಳಸ್ತರದ ಯಾವ ರಾಚನಿಕ ಸ್ವರೂಪವನ್ನು ಅರಿಯಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಚಾಮ್ಸ್ಕಿ ಇಂತಹ ವಿಶ್ಲೇಷಣಾ ಮಾದರಿಗಳಿಗೆ ಪ್ರತಿಯಾಗಿ ನುಡಿಯ ಸಾಮರ್ಥ್ಯವನ್ನು ಅರಿಯುವ ನೆಲೆಯ ನುಡಿಯರಿಮೆಯನ್ನು ಹುಟ್ಟು ಹಾಕಿದನು.
ಏಕೆಂದರೆ ಚಾಮ್ಸ್ಕಿಗೆ ನುಡಿಯ ಬಗೆಗೆ ತೀವ್ರ ಕುತೂಹಲ ಉಂಟಾಗುವುದಕ್ಕೆ ಮುಖ್ಯ ಕಾರಣವೇ ನುಡಿಯೆಂಬುದು ಮನಸ್ಸಿನ ಕನ್ನಡಿಯಾಗಿರುವುದು. ಮನಸ್ಸು ಹೇಗೆ ನುಡಿಯನ್ನು ಉತ್ಪಾದಿಸುತ್ತದೆ ಹಾಗೂ ಅದನ್ನು ಸಂಯೋಜಿಸುತ್ತದೆ ಎನ್ನುವ ಚಿಂತನೆಯೇ ಅವನ ಕುತೂಹಲಕ್ಕೆ ಕಾರಣವಾಗಿತ್ತು. ನುಡಿ ಕುರಿತ ಈ ಬಗೆಯ ಅಧ್ಯಯನಗಳು ಕೇವಲ ನುಡಿ ಸ್ವರೂಪವನ್ನು ಮಾತ್ರ ವಿವರಿಸುತ್ತಿಲ್ಲ.
ಬದಲಾಗಿ ಮನುಷ್ಯರ ಮನಸ್ಸಿನಲ್ಲಿ ಜನ್ಮಜಾತವಾಗಿ ನೆಲೆನಿಂತಿರುವ ನುಡಿಯ ಗುಣಲಕ್ಷಣಗಳೆಂತಹವು ಎಂಬುದನ್ನೂ ಅರಿಯುವುದಾಗಿತ್ತು. ಅಂದರೆ, ಸೊಲ್ಲರಿಮೆ/ವ್ಯಾಕರಣ ಕೇವಲ ನುಡಿ ಆಚರಣೆಯ ದತ್ತವನ್ನು ರುಜುಪಡಿಸುವ ನೆಲೆಮಾತ್ರವಾಗದೇ, ಅಪರಿಮಿತ ಸೊಲ್ಲುಗಳ/ವಾಕ್ಯಗಳ ಉತ್ಪಾದಕತೆಗೆ ಕಾರಣವಾಗಿರುವ ಪರಿಮಿತ ನಿಯಮಗಳ ಉತ್ಪಾದಕ ಸಾಮರ್ಥ್ಯ ನುಡಿಯಿಗರ ಮನಸ್ಸಿನಲ್ಲಿ ಹೇಗೆ ಅಂತಸ್ಥವಾಗಿರುತ್ತವೆ ಎಂಬುದನ್ನು ಅರಿಯುವ ಬಗೆಯಾಗಬೇಕು ಅನ್ನುವುದೇ ಚಾಮ್ಸ್ಕಿಯ ನಿಲುವು. ಇವನ ನುಡಿಯರಿಮೆಯ ಗುರಿಗಳನ್ನು ಮೂರು ಬೇರೆ ಬೇರೆ ನೆಲೆಗಳನ್ನಾಗಿ ವಿಂಗಡಿಸಬಹುದು;
- ನುಡಿ ರಚನೆಯ ತತ್ವ
- ನುಡಿ ಗಳಿಕೆಯ ತತ್ವ
- ನುಡಿ ಬಳಕೆಯ ತತ್ವ
ಸೊಲ್ಲರಿಮೆಯೆಂಬುದು ಚಾಮ್ಸ್ಕಿಗೆ ನುಡಿಯಿಗರ ಮಾತಿನ ಕಸುವು ಹಾಗೂ ಚಳಕಗಳನ್ನು (ಸ್ಕಿಲ್ಸ್) ಬಿಡಿಸಿ ನೋಡುವ ಮಾದರಿಯಾಗಿದೆ. ಅಂದರೆ ನುಡಿಯಿಗರ ಮನಸ್ಸಿನಲ್ಲಿ ಅಂತಸ್ಥವಾಗಿರುವ ಸಾಮರ್ಥ್ಯವನ್ನು ಅರಿಯುವ ಬಗೆಯೆಂದೇ ಹೇಳಬಹುದು. ನುಡಿಯಿಗರಿಗೆ ನುಡಿಯನ್ನು ಬಳಸಲು, ಮಾತುನಾಡಲು, ನಿರ್ವಚಿಸಲು ಈ ನುಡಿ ಸಾಮರ್ಥ್ಯ ಹೇಗೆ ಒತ್ತಾಸೆಯಾಗಿರುತ್ತದೆ ಎಂಬ ತಿಳಿವು ಇಲ್ಲಿ ಹೊರ ಬೀಳುತ್ತದೆ.
ಒಟ್ಟಾರೆಯಾಗಿ ಚಾಮ್ಸ್ಕಿ ಪ್ರಕಾರ ಆಡುಗ –ಕೇಳುಗ ತನ್ನ ನುಡಿ ಬಗೆಗೆ ಹೊಂದಿರುವ ತಿಳಿವನ್ನೇ ನುಡಿ ಸಾಮರ್ಥ್ಯವೆಂದು ಹೇಳಲಾಗುತ್ತದೆ. ನುಡಿ ಬಳಕೆಯ ವಾಸ್ತವ ರೂಪಗಳನ್ನು ಹೊರಡಿಸುವ ಸನ್ನಿವೇಶವನ್ನು ಆಚರಣೆಯೆಂದು ಹೇಳಲಾಗಿದೆ. ಆಚರಣೆ ಯಾವತ್ತೂ ಕೂಡ ಸಾಮರ್ಥ್ಯದ ತದ್ರೂಪಿಯಾಗಿರಲಾದು. ಇದೊಂದು ಅಪೂರ್ಣತೆಯ ಕ್ರಿಯೆಯಾಗಿರುತ್ತದೆ.
ಕೆಲವಾರು ಕುಂದುಗಳಾದರೂ ನುಡಿ ಆಚರಣೆಯ ಸನ್ನಿವೇಶದಲ್ಲಿ ಉಂಟಾಗುತ್ತವೆ. ಉದಾ.ಗೆಗಾಗಿ, ಬಾಯ್ತಪ್ಪಿನ ಮಾತುಗಳು, ಉಲಿಗಳ ಉಚ್ಚಾರಣೆಯಲ್ಲಿ ಉಂಟಾಗುವ ಏರುಪೇರುಗಳು, ಕುಡಿತದ ಪರಿಣಾಮದಿಂದ ಆಗುವ ಏರುಪೇರು, ಆಲಸ್ಯ, ತ್ರಾಸು ಮುಂತಾದವುಗಳನ್ನು ಇಲ್ಲಿ ಹೇಳಬಹುದು. ಚಾಮ್ಸ್ಕಿ ಇವುಗಳನ್ನು ‘ಆಚರಣೆಯ ತಪ್ಪು’ [ಪರ್ಫಾರಮೆನ್ಸ್ ಎರರ್ಸ್]ಗಳೆಂದು ಬಣ್ಣಿಸಿದ್ದಾನೆ.
ಸೊಲ್ಲರಿಮೆಯ ಸಾಮರ್ಥ್ಯ (ಗ್ರಾಮ್ಯಾಟಿಕಲ್ ಕಾಂಪಿಟೆನ್ಸ್) ಹಾಗೂ ಬಳಕೆಯ ಸಾಮರ್ಥ್ಯ (ಪ್ರ್ಯಾಗ್ಮ್ಯಾಟಿಕ್ ಕಾಂಪಿಟನ್ಸ್) ಎಂದು ಮತ್ತೆರಡು ಬಗೆಯಾಗಿ ಚಾಮ್ಸ್ಕಿ ನುಡಿ ಸಾಮರ್ಥ್ಯವನ್ನು ವಿಂಗಡಿಸುತ್ತಾನೆ. ಮೊದಲನೆಯದು ನುಡಿ ರಚನೆಯ ಅಂತರ್ನಿಹಿತ ನಿಯಮಗಳನ್ನು ಕುರಿತು ವ್ಯವಹರಿಸಿದರೆ, ಎರಡನೆಯದು ನುಡಿ ಬಳಕೆಯ ಹೊರಮೈ ರಚನೆಯನ್ನು ಕುರಿತು ವ್ಯವಹರಿಸುತ್ತದೆ.
ನುಡಿ ಬಳಕೆಯ ನೆಲೆಗಳು ಕೇವಲ ನುಡಿಯರಿಮೆಯ ನಿಯಮಗಳಿಗೆ ಮಾತ್ರ ಬದ್ಧವಾಗಿರದೇ, ಅವುಗಳೊಟ್ಟಿಗೆ ನುಡಿಯರಿಮೆಗೆ ಹೊರತಾದ ಸಂಗತಿಗಳು ಸೇರಿರುತ್ತವೆ ಎಂಬುದು ವಿಶೇಷ ಸಂಗತಿ. ಅಂದರೆ, ಸೊಲ್ಲುಗಳನ್ನು ನಿರ್ವಚಿಸುವ ಬಗೆಗಳು ಕೇವಲ ನುಡಿಯರಿಮೆಯ ಸಂಗತಿಗಳು ಮಾತ್ರವಾಗಿರದೇ, ಅವು ಸಾಮಾಜಿಕ ಸಂಗತಿಗಳೊಂದಿಗೂ ತಳಕು ಹಾಕಿಕೊಂಡಿರುತ್ತವೆ.
ಯಾವುದೇ ಬಗೆಯ ಹೊಂದಾಣಿಕೆ ಇಲ್ಲದ, ಕೇವಲ ಆಚರಣೆ ಇಲ್ಲವೇ ಹೊರಗಿನ ವರ್ತನೆಗಳನ್ನೇ ನಂಬಿಕೊಂಡು ನುಡಿ ಕುರಿತ ಚಿಂತನೆಗಳೇ ಮನಶಾಸ್ತ್ರದ ಮುಖ್ಯ ವಾಹಿನಿಯಲ್ಲಿ ನಡೆಯುತ್ತಿದ್ದವು. ಈ ಬಗೆಯ ತಿಳಿವಿನ ಅಧ್ಯಯನಗಳು ಮಾನಸಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಿರಾಕರಿಸದೆಯೂ, ಅದನ್ನೇ ಆಳವಾಗಿ ಒಪ್ಪಿಕೊಳ್ಳದೆಯೂ ಒಂದು ವಿಸಂಗತ ನೆಲೆಯಿಂದ ನುಡಿ ಬಗೆಗಿನ ಸಂಶೋಧನೆಗಳು ನಡೆಯುತಿದ್ದವು.
ಮಾನಸಿಕ ಸಾಮರ್ಥ್ಯವನ್ನರಿಯುವ ಇರಾದೆಯಿಂದ ಇರುವ/ಇದ್ದಂತಹ ನುಡಿಯರಿಮೆಗೆ ಕೇವಲ ವರ್ತನೆಗಳನ್ನೇ ಅನುಸರಿಸುತ್ತಿದ್ದ ತಿಳಿವಿನ ವಲಯಗಳೊಂದಿಗೆ ಹೊಂದಿಕೊಳ್ಳುವುದು ಹೇಗೆ ಸಾಧ್ಯ. ಅದಕ್ಕಾಗಿಯೇ ಚಾಮ್ಸ್ಕಿ ಅರಿವಿನ ಮನಶಾಸ್ತ್ರದ ನೆರವಿನಿಂದ ನುಡಿ ಬಗೆಗಿನ ತಿಳುವಳಿಕೆಯನ್ನು ಕಂಡುಕೊಂಡನು ಎಂದು ಹೇಳಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ
-
ದಿನದ ಸುದ್ದಿ5 days agoಏ 25 ರಂದು ಅಗ್ರಿಕಲ್ಚರ್ ಪ್ರಾಕ್ಟಿಕಲ್ ಪರೀಕ್ಷೆಗೆ ಉಚಿತ ತರಬೇತಿ
-
ದಿನದ ಸುದ್ದಿ5 days agoಚನ್ನಗಿರಿ | ಎಸ್ ಎಸ್ ಎಲ್ ಸಿ ಫಲಿತಾಂಶ ; ಕಬ್ಬಳ ಶಾಲೆಯ ವಿದ್ಯಾರ್ಥಿ ಭರತ್ ಜಿ ರಾಜ್ಯಕ್ಕೆ ಟಾಪರ್
-
ದಿನದ ಸುದ್ದಿ6 days agoಬಾಳೆ ಸಸಿಗಳ ಮಾರಾಟ : ಸಂಪರ್ಕಿಸಿ
-
ದಿನದ ಸುದ್ದಿ2 days agoಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ
-
ದಿನದ ಸುದ್ದಿ6 days agoನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ
-
ದಿನದ ಸುದ್ದಿ2 days agoಎಸ್ಎಸ್ಎಲ್ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ

