Connect with us

ದಿನದ ಸುದ್ದಿ

ಸಂಭ್ರಮದಿಂದ ಪೊಲೀಸ್ ಧ್ವಜ ದಿನ ಆಚರಣೆ | ಪೊಲೀಸರಿಗೆ ಶಿಸ್ತು, ಸಂಯಮ ಬಹಳ ಅವಶ್ಯಕ : ನಿವೃತ್ತ ಪೊಲೀಸ್ ಇನ್ಸಪೆಕ್ಟರ್ ಅನಿಲ ಕುಲಕರ್ಣಿ

Published

on

ಸುದ್ದಿದಿನ,ಹುಬ್ಬಳ್ಳಿ : ಪೊಲೀಸರು ಸಮಾಜದ ಬಗ್ಗೆ ಕಳಕಳಿ ಭಾವನೆ ಹೊಂದಬೇಕು. ಸಾರ್ವಜನಿಕ ನೆಮ್ಮದಿಗೆ ಕಾರ್ಯ ಪ್ರವೃತ್ತರಾಗಬೇಕು. ಪೊಲೀಸ್ ಸಿಬ್ಬಂದಿಗೆ ಶಿಸ್ತು ಮತ್ತು ಸಂಯಮ ಬಹಳ ಅವಶ್ಯಕವಾಗಿರುತ್ತದೆ ಎಂದು ನಿವೃತ್ತ ಪೊಲೀಸ್ ಇನ್ಸಪೆಕ್ಟರ್ ಅನಿಲ ಕುಲಕರ್ಣಿ ಹೇಳಿದರು.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಸಿಎಆರ್ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸರು ಕಾನೂನುಗಳ ಬಗ್ಗೆ ಅರಿವು ಹೊಂದುವುದು ಬಹಳ ಮುಖ್ಯ. ಕಾನೂನುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಬೇರೆಯವರು ನಮ್ಮ ಮೇಲೆ ಅಧಿಕಾರ ಚಲಾಯಿಸುವುದು ತಪ್ಪುತ್ತದೆ. ಅತ್ಯಂತ ಚುರುಕುತನದಿಂದ ತನಿಖೆ ಮಾಡಬೇಕು. ದಿನನಿತ್ಯದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

ನಿವೃತ್ತ ಪೊಲೀಸ್ ಇನ್ಸಪೆಕ್ಟರ್
ಅರುಣಕುಮಾರ ಸಾಳುಂಕೆ ಮಾತನಾಡಿ, ಯಶಸ್ವಿಯಾಗಿ ನಿವೃತ್ತಿ ಹೊಂದಲು ಅಧಿಕಾರಿಗಳು ತೋರಿದ ಸಹಕಾರ ಅನನ್ಯವಾದುದು. ಕಳೆದ 34 ವರ್ಷದಿಂದ ಬಳ್ಳಾರಿ, ಹಾವೇರಿ, ಗದಗ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಸೇನಾ ಪಡೆಗಳು ಗಡಿಯನ್ನು ಕಾಯುವ ಹಾಗೆ, ಪೋಲಿಸರು ಆಂತರಿಕ ರಕ್ಷಣೆಯಲ್ಲಿ ತೊಡಗಿರುತ್ತಾರೆ.

ಪೊಲೀಸ್ ಸಿಬ್ಬಂದಿ ಕರೋನಾ ಅವಧಿಯಲ್ಲಿ ಇಡೀ ಸಮಾಜವನ್ನು ರಕ್ಷಣೆ ಮಾಡಲು ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಪೊಲೀಸರು ಒಂದು ದಿನವು ರಜೆ ತೆಗೆದುಕೊಳ್ಳದೇ ಹಗಲಿರುಳು ಸೇವೆಗೈದಿದ್ದಾರೆ. ದೈನಂದಿನ ಜೀವನದಲ್ಲಿ ಸವಾಲುಗಳು ಬರುವುದು ಸಹಜ. ಅವುಗಳನ್ನು ದಿಟ್ಟತನದಿಂದ ಎದುರಿಸಲು ಸನ್ನದ್ಧರಾಗಬೇಕು. ಸಾರ್ವಜನಿಕರು ನಮ್ಮ ಮೇಲೆ ಹೆಚ್ಚಿನ ಗೌರವ ಹೊಂದಿರುತ್ತಾರೆ. ಆ ಗೌರವವನ್ನು ಉಳಿಸಿಕೊಂಡು ಹೋಗಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದರು.

ಕರ್ನಾಟಕ ರಾಜ್ಯ ಏಕೀಕರಣವಾದ ನಂತರ ಕರ್ನಾಟಕ ಪೊಲೀಸ ಪಡೆಯನ್ನು 1965 ಏಪ್ರಿಲ್‌ 2 ರಂದು ಕರ್ನಾಟಕ ಪೊಲೀಸ ಕಾಯ್ದೆಗೆ ಒಳಪಡಿಸಲಾಯಿತು. ಅದರ ಸ್ಮರಣೆಗಾಗಿ ಪ್ರತಿ ವರ್ಷ ಏಪ್ರಿಲ್ 2 ರಂದು ಪೊಲೀಸ ಧ್ವಜ ದಿನಾಚರಣೆಯನ್ನಾಗಿ ರಾಜ್ಯದ ಎಲ್ಲ ಘಟಕಗಳಲ್ಲಿ ಆಚರಿಸಲಾಗುತ್ತದೆ. ಕಾನೂನು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳ ಸಂರಕ್ಷಣೆ ಮಾಡಲು ಈ ದಿನವನ್ನು ಮುಡಿಪಾಗಿಡಲಾಗುತ್ತದೆ.

ನಿತ್ಯ ಜೀವನದಲ್ಲಿ ಶಾಂತಿ ಸೌಹಾರ್ದತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಯವರು ತೋರಿದ ಶೌರ್ಯ, ಸಾಹಸ ಹಾಗೂ ನಿಸ್ವಾರ್ಥ ಸೇವೆಯನ್ನು ನೆನಪಿಸುವಂತಹ ದಿನವಿದು. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುವುದು. ಕಲ್ಯಾಣ ನಿಧಿಯಿಂದ ನಿವೃತ್ತಿ ಹೊಂದಿದ ಪೊಲೀಸ ಸಿಬ್ಬಂದಿ ಹಾಗೂ ಅಧಿಕಾರಿಗಳ ಕುಟಂಬದವರ ವೈದ್ಯಕೀಯ ವೆಚ್ಚ ಹಾಗೂ ಶವ ಸಂಸ್ಕಾರಕ್ಕಾಗಿ ಧನಸಹಾಯವನ್ನು ನೀಡಲಾಗುತ್ತದೆ.

ಇಂದು ಸಂಗ್ರಹವಾದ ಹಣದಲ್ಲಿ ಅರ್ಧದಷ್ಟು ಪೊಲೀಸ ಕಲ್ಯಾಣ ನಿಧಿಗೆ ಹಾಗೂ ಉಳಿದ ಅರ್ಧ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಉಪಯೋಗಿಸಲಾಗುತ್ತದೆ. ಕಲ್ಯಾಣ ನಿಧಿಯ ಮೊತ್ತದಿಂದ ಸಿಬ್ಬಂದಿಯವರ ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚ ಹಾಗೂ ಸಿಬ್ಬಂದಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಬಳಸಲಾಗುತ್ತದೆ. ನಿವೃತ್ತ ಅಧಿಕಾರಿಗಳ ಕ್ಷೇಮ ನಿಧಿಯಿಂದ ನಿವೃತ್ತಿ ಹೊಂದಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ವೈದ್ಯಕೀಯ ವೆಚ್ಚವನ್ನು ಭರಿಸಲಾಗುತ್ತದೆ. ಕಳೆದ ಬಾರಿ ಪೊಲೀಸ್ ಧ್ವಜ ಮಾರಾಟದಿಂದ ರೂ.16 ಲಕ್ಷ ಸಂಗ್ರಹವಾಗಿತ್ತು ಎಂದು ಪೊಲೀಸ್ ಆಯುಕ್ತ ಲಾಬುರಾಮ್ ಸ್ವಾಗತ ಭಾಷಣದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ 2022ನೇ ಸಾಲಿನ ಪೊಲೀಸ್ ಧ್ವಜ ಬಿಡುಗಡೆ ಮಾಡಲಾಯಿತು. ವಿ.ಎಸ್.ವಿ ಪ್ರಸಾದ್ ಅವರು ಪೊಲೀಸ್ ಕಲ್ಯಾಣ ನಿಧಿಗೆ ರೂ. 1 ಲಕ್ಷ ದೇಣಿಗೆಯ ಚೆಕ್ ನೀಡಿದರು. ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದ ಪೊಲೀಸ್ ಕಾನ್ಸಸ್ಟೇಬಲ್ ಗಳಾದ ನಾಗರಾಜ ಕೆಂಚಪ್ಪನವರ , ಶಿವಾನಂದ ತಿಮ್ಮಾಪುರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಸಂತೋಷ ಭೋಜಪ್ಪಗೋಳ ಅವರು ಪೊಲೀಸ್ ಪಡೆಗಳ ಪಥ ಸಂಚಲನದ ನೇತೃತ್ವ ವಹಿಸಿದ್ದರು. ಎಡ್ವೀನ್ ಡಿಸೋಜಾ ಅವರ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್ ಪಥ ಸಂಚಲನ ನಡೆಸಿತು. ಆರ್ ಎಸ್ ಐ ಭಾಗಣ್ಣ ವಾಲೀಕಾರ ಅವರು ರಾಷ್ಟ್ರ ಧ್ವಜದ ಬೆಂಗಾವಲು ವಹಿಸಿದ್ದರು.

ಉಪ ಪೊಲೀಸ್ ಆಯುಕ್ತ ಕಾನೂನು ಮತ್ತು ಸುವ್ಯವಸ್ಥೆ ಸಾಹೀಲ್ ಬಾಗ್ಲಾ, ಡಿಸಿಪಿಗಳಾದ ಎಸ್.ವಿ. ಯಾದವ್, ಗೋಪಾಲ ಬ್ಯಾಕೋಡ, ಎಸಿಪಿಗಳಾದ ಆರ್.ಕೆ.ಪಾಟೀಲ್, ತಾಯಪ್ಪ ದೊಡ್ಡಮನಿ, ಮಾಜಿ ಸಂಸದ ಐ.ಜಿ.ಸನದಿ,ಜಗದೀಶ್ ಹಂಚಿನಾಳ, ರವಿ.ಎಚ್. ನಾಯಕ ಸೇರಿದಂತೆ ಪೊಲೀಸ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ವಿಶ್ವವಿದ್ಯಾನಿಲಯಗಳಲ್ಲಿ ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ ಫೇಲೋಶಿಪ್ ಅಥವಾ ವಿದ್ಯಾರ್ಥಿವೇತನಕ್ಕೆ ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇದೇ ಜುಲೈ 13 ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅರ್ಹ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸಮುದಾಯದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಲು ಇಲಾಖೆ ವೆಬ್ ಸೈಟ್ dom.karkataka.gov.in ನಲ್ಲಿ ಪರಿಶೀಲಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು, ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಜಿಲ್ಲಾ ಮತ್ತು ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಅಥವಾ ದೂರವಾಣಿ ಸಂ: 08192-250022, 080192-250066 ಗೆ ಸಂಪರ್ಕಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್

Published

on

ಸುದ್ದಿದಿನ,ದಾವಣಗೆರೆ:ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಜುಲೈ 12 ರಂದು ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಡಿ.ಕೆ.ವೇಲಾ ತಿಳಿಸಿದರು.

ಅವರು ಬುಧವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಲೋಕ್ ಅದಾಲತ್ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜಿ, ಸಂಧಾನ ನಡೆಸಲು ನ್ಯಾಯಾಂಗ ಇಲಾಖೆ ಮತ್ತು ವಕೀಲರ ಕಡೆಯಿಂದಲೂ ಪ್ರತ್ಯೇಕವಾಗಿ ಮಧ್ಯಸ್ಥಗಾರರು ಇರುವರು. ರಾಜಿ, ಸಂಧಾನ ನಡೆಸುವ ಅಧಿಕಾರವನ್ನು ಕಾನ್ಸಿಲೇಟರ್‍ಗಳಿಗೆ ನೀಡಲಾಗಿರುತ್ತದೆ. ಅದಾಲತ್‍ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದಾಲತ್‍ನಲ್ಲಿ ಇತ್ಯರ್ಥವಾಗುವ ಪ್ರಕರಣಗಳು ನ್ಯಾಯಾಲಯದಲ್ಲಿನ ತೀರ್ಪುಗಳಂತೆ ಇರುತ್ತದೆ. ಅದಾಲತ್‍ನಲ್ಲಿ ಇತ್ಯರ್ಥ ಮಾಡಿಕೊಂಡಲ್ಲಿ ಮತ್ತೆ ಅಪೀಲು ಹೋಗಲು ಅವಕಾಶ ಇರುವುದಿಲ್ಲ ಎಂದರು.

ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ಕು ಅಮಾನ್ಯದ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ವೈವಾಹಿಕ, ಕೌಟುಂಬಿಕ ನ್ಯಾಯಾಲಯ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಕಂದಾಯ ಪ್ರಕರಣಗಳು ಲೋಕ ಅದಾಲತ್‍ನಲ್ಲಿ ಬಗೆಹರಿಸಲಾಗುವುದು. ಈ ದಿನಾಂಕಗಳ ಹೊರತಾಗಿಯೂ ಸತತವಾಗಿ ನಡೆಯುವ ಲೋಕ ಅದಾಲತ್ ಮುಖಾಂತರ ಕೂಡ ಕಕ್ಷಿದಾರರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.

ಜುಲೈ 12 ರ ಎರಡನೇ ಶನಿವಾರವಾರ ಬೇರೆ ಯಾವುದೇ ಕಲಾಪಗಳು ನಡೆಯದೇ ಸಂಪೂರ್ಣವಾಗಿ ಲೋಕ ಅದಾಲತ್ ಪ್ರಕರಣಗಳ ರಾಜೀ ಸಂಧಾನ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ನ್ಯಾಯಾಧೀಶರು ವಕೀಲರ ಸಹಕಾರದೊಂದಿಗೆ ಕಲಾಪ ನಡೆಸುವರು. ಇದೇ ರೀತಿ ತಾಲ್ಲೂಕು ಮಟ್ಟದಲ್ಲೂ ಅದಾಲತ್ ನಡೆಯಲಿದ್ದು ಸಾರ್ವಜನಿಕರು ಶೀಘ್ರ ನ್ಯಾಯ ಪಡೆದುಕೊಳ್ಳಲು ಈ ಲೋಕ ಅದಾಲತ್‍ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಹತ್ತು ಸಾವಿರ ಪ್ರಕರಣ ಇತ್ಯರ್ಥದ ಗುರಿ

ಜುಲೈ 12ರಂದು ನಡೆಯುವ ಲೋಕ ಅದಾಲತ್‍ನಲ್ಲಿ ರಾಜೀಯಾಗಬಲ್ಲ ಸುಮಾರು 10 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ಕಳೆದ ಮಾರ್ಚ್‍ನಲ್ಲಿ ನಡೆದ ಲೋಕ ಅದಾಲತ್‍ನಲ್ಲಿ 10186 ಬಾಕಿ ಪ್ರಕರಣಗಳು ಮತ್ತು ವ್ಯಾಜ್ಯಪೂರ್ವ 187026 ಸೇರಿ ಒಟ್ಟು 197215 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿತ್ತು.

ಈಗ ಪ್ರಸ್ತುತ ಎಲ್ಲಾ ನ್ಯಾಯಾಲಯಗಳಲ್ಲಿ 45508 ಪ್ರಕರಣಗಳು ಬಾಕಿ ಇದ್ದು ರಾಜಿ, ಸಂಧಾನಕ್ಕಾಗಿ 12853 ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥ ಮಾಡುವ ಗುರಿ ಹೊಂದಲಾಗಿದ್ದು ಇದರೊಂದಿಗೆ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತದೆ. ಇನ್ನೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಮಾಡಲಿದ್ದು ನಿಖರ ಅಂಕಿ ಅಂಶಗಳು ಶನಿವಾರ ಸಿಗಲಿವೆ ಎಂದರು.

ಲೋಕ್ ಅದಾಲತ್‍ನ್ನು ಜನತಾ ನ್ಯಾಯಾಲಯ ಎಂದು ಕರೆಯಲಾಗುತ್ತದೆ. ಜನತಾ ನ್ಯಾಯಾಲಯದಲ್ಲಿ ಸಮಯ, ಹಣ ಉಳಿತಾಯ, ಕಕ್ಷಿದಾರರು ಮತ್ತು ಎದುರುದಾರರಿಗೆ ಸಮಾಧಾನ ತರುವ ನ್ಯಾಯದಾನ ಸಿಗಲಿದೆ. ಮಾನವ ಸಂಬಂಧಗಳನ್ನು ಬೆಸೆಯಬೇಕು. ಸಣ್ಣ ವಿಷಯವನ್ನು ತೆಗೆದುಕೊಂಡು ಪ್ರತಿಷ್ಟೆಯಾಗಿ ಸ್ವೀಕರಿಸಿ ವರ್ಷಾನುಗಟ್ಟಲೆ ನ್ಯಾಯಾಲಯಕ್ಕೆ ಅಲೆದಾಡುವರು. ಇದಕ್ಕಾಗಿ ಹೆಚ್ಚು ಹೆಚ್ಚು ಜನರು ತಮ್ಮ ಪ್ರಕರಣಗಳ ಇತ್ಯರ್ಥಕ್ಕಾಗಿ ಲೋಕ್ ಅದಾಲತ್‍ನಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ಅದಾಲತ್‍ನಲ್ಲಿ ಭಾಗವಹಿಸಲು ದಾವಣಗೆರೆ ಹಳೆಯ ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದೂ.ಸಂ: 08192-296364, ತಾಲ್ಲೂಕು ಕಾನೂನು ಸೇವಾ ಸಮಿತಿ ಹರಿಹರ ದೂ.ಸಂ: 08192-296885, ಹೊನ್ನಾಳಿ ದೂ.ಸಂ:08188-251732, ಚನ್ನಗಿರಿ ದೂ.ಸ 08189-229195 ಮತ್ತು ಜಗಳೂರು ದೂ.ಸ:08196-227600 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ತಹಶೀಲ್ದಾರ್ ಕೋರ್ಟ್, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕೋರ್ಟ್‍ನಲ್ಲಿ ಇದ್ದ ಅನೇಕ ಆಸ್ತಿ ಪ್ರಕರಣಗಳನ್ನು ಕಕ್ಷಿದಾರರು ಮತ್ತು ಎದುರುದಾರರಿಗೆ ಕಾನೂನು ಅವಕಾಶ, ದಾಖಲಾತಿಗಳ ಕುರಿತು ಮನವರಿಕೆ ಮಾಡಿಕೊಟ್ಟು ಕಡಿಮೆ ಸಮಯದಲ್ಲಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ರಾಜಿ, ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಜನತೆಗೆ ಹಣ, ಸಮಯ ಮತ್ತು ಮಾನಸಿಕ ಸ್ಥಿಮಿತತೆಯನ್ನು ಕಾಪಾಡಲು ಸಹಾಯಕವಾಗಿಲಿದೆ. ಅಷ್ಟೇ ಅಲ್ಲದೇ ಜನತೆ, ರೈತರು ಆರ್ಥಿಕವಾಗಿ ಸದೃಢವಾಗಲು ಹೆಚ್ಚು ಸಹಾಯವಾಗಲಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಪ್ರತಿಯೊಬ್ಬ ನಾಗರೀಕನಿಗೂ ತ್ವರಿತವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಹಲವಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಲೋಕ ಅದಾಲತ್ ಮೂಲಕ ಸರಳ ಮತ್ತು ಬಾಕಿ ಪ್ರಕರಣಗಳಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಬಹುದಾಗಿದೆ ಎಂದರು.

ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಾಹಾವೀರ ಮ ಕರೆಣ್ಣವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್, ಕಾರ್ಯದರ್ಶಿ ಬಸವರಾಜ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ

Published

on

ಸುದ್ದಿದಿನ,ದಾವಣಗೆರೆ:ಇದೇ 12 ರಂದು ಮಧ್ಯಾಹ್ನ 3 ಗಂಟೆಗೆ ನಗರದ ದೊಡ್ಡಬೂದಿಹಾಳ್ ರಸ್ತೆಯಲ್ಲಿರುವ ತಾಜ್ ಪ್ಯಾಲೇಸ್‍ನಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಾವಣಗೆರೆ ಇವರ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಕಾರ್ಮಿಕ ಸಚಿವರಾದ ಸಂತೋಷ್.ಎಸ್.ಲಾಡ್ ಉದ್ಘಾಟಿಸುವರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಘನುಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ ಡಿ.ಜಿ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಹರಿಹರ ಶಾಸಕ ಬಿ.ಪಿ ಹರೀಶ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಚಿದಾನಂದ ಎಂ.ಗೌಡ, ಡಿ.ಎಸ್ ಅರುಣ್, ಕೆ.ಎಸ್.ನವೀನ್, ಕೆ.ಅಬ್ದುಲ್ ಜಬ್ಬಾರ್, ಡಾ.ಧನಂಜಯ್ ಸರ್ಜಿ, ಡಿ.ಟಿ.ಶ್ರೀನಿವಾಸ್, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ್, ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಧ ಶಾಮನೂರು.ಟಿ.ಬಸವರಾಜ್, ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending