ದಿನದ ಸುದ್ದಿ
‘ಶರಾವತಿ ಉಳಿಸಿ’ ಸಮಾಲೋಚನಾ ಸಭೆಯ ಮುಖ್ಯಾಂಶಗಳು ಹಾಗೂ ನಿರ್ಣಯಗಳು
ಸುದ್ದಿದಿನ, ಸಾಗರ : ಜೂನ್ 22 ರಂದು ಸಾಗರದ ನೌಕರರ ಭವನದಲ್ಲಿ ನಡೆದ “ಶರಾವತಿ ಉಳಿಸಿ” ಸಮಾಲೋಚನಾ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ನಾ ಡಿಸೋಜಾ, ಹಿರಿಯ ಚಿಂತಕ ಪ್ರಸನ್ನ ಹೆಗ್ಗೋಡು, ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ, ಲೇಖಕ ವಿಲಿಂ, ಕಲಾವಿದ ಪರಿಸರವಾದಿ ಅರುಣ್ ಕುಮಾರ್ ಸಾರಾ, ಕೆ ಜಿ ಕೃಷ್ಣ ಮೂರ್ತಿ, ತುಮರಿ, ರಾಜಕೀಯ ಮುಖಂಡರಾದ ಬಿ ಆರ್ ಜಯಂತ್, ಕಲಗೋಡು ರತ್ನಾಕರ, ಮೇಘರಾಜ್ ಟಿಡಿ, ಮಲ್ಲಿಕಾರ್ಜುನ ಹಕ್ರೆ, ರವಿ ಕುಗ್ವೆ, ಪ್ರಭಾವತಿ ಚಂದ್ರಕಾಂತ್, ಸಾಮಾಜಿಕ ಕಾರ್ಯಕರ್ತರಾದ ಶಿವಾನಂದ ಕುಗ್ವೆ, ಬಿ ಎಚ್ ರಾಘವೇಂದ್ರ, ವಾಮದೇವ ಗೌಡ್ರು, ಹುಚ್ರಾಯಪ್ಪ ಶಿಕಾರಿಪುರ ಸೇರಿದಂತೆ ಸುಮಾರು 150 ಪ್ರತಿನಿಧಿಗಳು ಭಾಗವಹಿಸಿದ್ದರು.
ಕರೂರು ಗ್ರಾಮ ಪಂಚಾಯತಿ ಸತ್ಯನಾರಾಯಣ ಜಿ ಟಿ ಎಲ್ಲರನ್ನೂ ಸ್ವಾಗತಿಸಿದರು.ಪ್ರಾಸ್ತಸವಿಕವಾಗಿ ಮಾತನಾಡಿದ ಎಚ್ ಬಿ ರಾಘವೇಂದ್ರ ಸಭೆಯ ಉದ್ದೇಶವನ್ನು ಸಂಕ್ಷಿಪ್ತವಾಗಿ ತಿಳಿಸಿದರು.
ಶರಾವತಿ ನದಿಯಿಂದ ಬೆಂಗಳೂರಿಗೆ ನೀರೆತ್ತುವ ಯೋಜನೆಯ ಹಿನ್ನೆಲೆ, ಸಮಸ್ಯೆ ಗಳನ್ನು ಪತ್ರಕರ್ತ ಶಶಿ ಸಂಪಳ್ಳಿ ವಿವರಿಸಿದರು. ಈ ಯೋಜನೆಯ ಪರಿಸರದ ಆಯಾಮವನ್ನು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ ತಿಳಿಸಿದರು. ಕೈಗೊಳ್ಳಬೇಕಾದ ಹೋರಾಟದ ಸ್ವರೂಪ, ಎಲ್ಲರನ್ನೂ ಒಳಗೊಂಡು ಜನಾಂದೋಲನ ನಡೆಸಬೇಕಾಗಿರುವ ಕುರಿತು ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಹರ್ಷಕುಮಾರ್ ಕುಗ್ವೆ ವಿವರಿಸಿದರು.
ಸಾಹಿತಿ ನಾ ಡಿಸೋಜಾ ಅವರು ಮಾತನಾಡಿ, ಬೆಂಗಳೂರಿಗೆ ಲಿಂಗನಮಕ್ಕಿಯಿಂದ ನೀರನ್ನ ಸಾಗಿಸಲು ಏನೆಲ್ಲಾ ಕೆಲಸ ಆಗಬೇಕು, ಎಷ್ಟೊಂದು ಖರ್ಚು ತಗುಲುತ್ತೆ, ಆ ಹಣ ನಮ್ಮೆಲ್ಲರ ಮೇಲೂ ಹೊರೆ, ನೀರನ್ನ ಸಾಗಿಸಲು ಇಲ್ಲಿ ಎಷ್ಟು ನೀರಿದೆ ಎಂಬುದನ್ನು ನಾವು ಪರಿಶೀಲನೆ ಮಾಡಬೇಕು, ಲಿಂಗನಮಕ್ಕೆ ಜಲಾಶಯದಲ್ಲಿ ಶೇ.೪೦ರಷ್ಟು ಹೂಳೇ ತುಂಬಿದೆ, ಇದರ ಬಗ್ಗೆ ಸರ್ಕಾರಕ್ಕೆ ಆಲೋಚನೆಯೇ ಇಲ್ಲ, ಈ ಸಣ್ಣ ನದಿಗೆ ಚಿಕ್ಕಪುಟ್ಟ ಹತ್ತು ಅಣೆಕಟ್ಟುಗಳಿವೆ. ನ್ಯಾಯಾಲಯಗಳು ಕುಡಿಯುವ ನೀರಿನ ಪರವಾಗಿ ಇರುತ್ವೆ, ಇಲ್ಲಿಂದ ಬೆಂಗಳೂರಿಗೆ ನೀರು ಸರಬರಾಜಾಗಲು ಇರುವ ಆಘಾತಗಳ ಬಗ್ಗೆ ನಿಮ್ಮ ಕಳಕಳಿಗೆ ಧನ್ಯವಾದಗಳು. ಎಲ್ಲರೂ ಸೇರಿ ಈ ಯೋಜನೆ ತಡೆಯಲು ಮುಂದಾಗೋಣ ಎಂದರು.
ಚಿಂತಕ ಪ್ರಸನ್ನ ಅವರು ವಿಶ್ವದ ಎಲ್ಲಾ ರಾಷ್ಟ್ರ ಗಳು ನಗರವನ್ನ ಮಿತಿಗೊಳಿಸುವ ಕೆಲಸ ಮಾಡುತ್ತವೆ ಆದರೆ ನಮ್ಮಲ್ಲಿ ಇಲ್ಲ, ಬೆಂಗಳೂರಿನ ದಾಹಕ್ಕೆ ಕಾವೇರಿ ಹೇಮಾವತಿ ಆಯ್ತು ಈಗ ಶರಾವತಿ, ಐವತ್ತು ವರ್ಷ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದೇ ಆದರೆ ಬೆಂಗಳೂರನ್ನ ಮಿತಿಗೊಳಿಸಿ. ಉತ್ತರದ ಭಾರತದಲ್ಲಿ ತಿಂಗಳಿಗೊಮ್ಮೆ ನೀರು ಬಿಡಲಾಗುತ್ತಿದೆ, ಈ ಮಾತನ್ನ ನಾವು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಬೆಂಗಳೂರು ಎಷ್ಟು ಎತ್ತರವಿದೆ, ಗುಡ್ಡಕ್ಕೆ ನೀರು ಹೊಡೆಯುತ್ತೇವೆ ಎಂಬುದನ್ನ ಯಾವ ನ್ಯಾಯಾಲಯವೂ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಆರ್ ಜಯಂತ್ ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಅತ್ಯಂತ ಮೂರ್ಖ ಯೋಜನೆ. ಇದಕ್ಕೆ ನಮ್ಮೆಲ್ಲರ ವಿರೋಧವಿದೆ. ಇದನ್ನು ತಡೆಯಲೇಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್ ಅವರು ಮಾತನಾಡಿ, ಶರಾವತಿ ನದಿ ನೀರನ್ನ ತೆಗೆದುಕೊಂಡು ಹೋಗುವ ಹುನ್ನಾರ ಮೊದಲಿಂದಲೂ ಇತ್ತು..ಈಗ ಮುನ್ನೆಲೆಗೆ ಬಂದಿದೆ. ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ನಮ್ಮ ಭಾಗದ ಜನರಿಗೆ ಕುಡಿಯುವ ನೀರಿನ ಅವಶ್ಯಕತೆ ಇದೆ. ಮೊದಲು ಇಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಗಾಗಿ ಒತ್ತಾಯಿಸಬೇಕು ಎಂದರು. ಈ ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯಿತಿಗಳನ್ನ ಕರೆದು ಸಭೆ ಮಾಡೋಣ, ಇಡೀ ಶಿವಮೊಗ್ಗ ಬಂದ್ ಮಾಡಿಸೋಣ ಎಂದರು.
ಶಂಕರಶರ್ಮಾ ಅವರು ಮಾತನಾಡಿ, ತಾಂತ್ರಿಕವಾಗಿ ಯೋಜನೆಯ ಬಗ್ಗೆ ಚರ್ಚೆ ಮಾಡಿ, ಮೂರು ಸಾವಿರ ಮೆಗಾವ್ಯಾಟ್ ಅಂದರೆ ಈ ನೀರೆತ್ತಲು ಇಲ್ಲಿ ತಯಾರಾಗುವ ಅರ್ಧದಷ್ಟು ವಿದ್ಯುತ್ ಬೇಕು, ಈ ಕುರಿತು ನಾವು ವರದಿ ತಯಾರು ಮಾಡೋಣ, ಯಾವ ಭಾಗದಲ್ಲೂ ನಾಲ್ಕು ನೂರು ಕಿಲೋಮೀಟರ್ ಉದ್ದ ಸಾವಿರ ಅಡಿ ಎತ್ತರಕ್ಕೆ ನೀರು ತೆಗೆದುಕೊಂಡು ಹೋಗುವ ಯೋಜನೆ ಇಲ್ಲ. ನಾವು ಬರೀ ಬೆಂಗಳೂರಿನ ಬೆಳವಣಿಗೆ ನೋಡಿ ಕೂರಬೇಕಾ, ಕಾಳಿ ನದಿ ಪಾತ್ರದ ಜನರು ಹಾಗೂ ಹೊಸಪೇಟೆ ಭಾಗದ ಜನರನ್ನೂ ಹೋರಾಟಕ್ಕೆ ಸೇರಿಸಿಕೊಳ್ಳಬೇಕು. ಬೆಂಗಳೂರಿನಲ್ಲಿ ಶೇ ನಲವತ್ತರಷ್ಟು ನೀರು ಪೋಲಾಗುತ್ತೆ ಇದು ಅಧಿಕೃತ ಮಾಹಿತಿ. ಬೆಂಗಳೂರಿಗೆ ಹದಿನೆಂಟು ಟಿಎಂಸಿಯಷ್ಟೇ ಸಾಕು ಮೂವತ್ತು ಟಿಎಂಸಿ ಯಾಕೆ.. ಎಂದು ಕೇಳಿದರು.
ಪರಿಸರವಾದಿ ಅಜಯ್ ಶರ್ಮಾ ಮಾತನಾಡಿ, ಮಲೆನಾಡಿಗೆ ಮೊದಲು ನೀರು ಕೊಡಿ ನಮಗಾಗಿ ಉಳಿದರೆ ಅದನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಎಂಬುದನ್ನ ನಾವು ವಿವರಿಸುವ ಅಗತ್ಯ ಇದೆ ಎಂದರು.
ಬಿಜೆಪಿ ಮುಖಂಡ ಮೇಘರಾಜ್ ಟಿ ಡಿ ಅವರು ಮಾತನಾಡಿ, ಈ ವಿಷಯದಲ್ಲಿ ಸರ್ಕಾರ ಹೊಣೆಗೇಡಿಯಾಗಿ ವರ್ತಿಸುತ್ತಿದೆ, ಬೃಹತ್ ಹೋರಾಟವನ್ನು ಎಲ್ಲರೂ ಸೇರಿ ನಡೆಸೋಣ ಎಂದರು.
ಹುಚ್ರಾಯಪ್ಪ ಅವರು ಮಾತನಾಡಿ, ನಾವು ಶಿಕಾರಿಪುರದವರು ಸಾಗರದ ನೀರು ಬಳಸುತ್ತೇವೆ, ಉದಾಹರಣೆಗೆ ಡ್ಯಾಂ ಹೊಸೂರ್, ನಮಗೂ ಇಲ್ಲಿನ ಋಣ ಬಹಳಷ್ಟು ಇದೆ, ಈಗ ಕುಡಿಯಲೂ ನೀರಿಲ್ಲ. ನಾವೂ ಹೋರಾಟಕ್ಕೆ ಸಿದ್ದ ಎಂದರು.
ನಮ್ಮ ನಾಡನ್ನ ಪ್ರತ್ಯೇಕ ರಾಜ್ಯ ಮಾಡಿ ಎಂದಾಗ ಮಾತ್ರ ನಮಗೆ ನ್ಯಾಯ ಸಿಗುತ್ತೆ ಅಂತಹ ಹೋರಾಟ ಆಗಬೇಕು, ಎಚ್ಚರವಿಡಿ ನಾವು ಇಂತಹ ಹೋರಾಟವೇ ಸರ್ಕಾರಕ್ಕೆ ಚಾಟಿ
ನಿತಿನ್ ಹಿರಳೆ ಮಾತನಾಡಿ, ಶರಾವತಿಯನ್ನ ಉಳಿಸಲು, ನಾವು ವರದಿ ಸಿದ್ಧಪಡಿಸಬೇಕು, ಈ ಮೂಲಕ ಇಲ್ಲಿನ ಸಮಸ್ಯೆಗಳನ್ನ ಮನವರಿಕೆ ಮಾಡಿಕೊಡಬೇಕು
ದಂಡಾವತಿ ಹೋರಾಟದ ವಾಮದೇವ ಗೌಡ ಅವರು ಈ ಹೋರಾಟದಲ್ಲಿ ರಾಜಕೀಯ ಮುಖಂಡರ ನಾಯಕತ್ವ ಕೊಡದೇ ಅವರ ಬೆಂಬಲ ಮಾತ್ರ ಪಡೆದು ಎಲ್ಲರ ಹೋರಾಟವಾಗಿ ನಡೆಸಬೇಕು ಎಂದರು.
ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನೂ ಹಲವರು ಮಾತಾಡುವುದಿದ್ದರೂ ಸಮಯದ ಅಭಾವದಿಂದ ಅವಕಾಶ ಆಗಲಿಲ್ಲ.
ನಿರ್ಣಯಗಳು
- ‘ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ’ ವನ್ನು ಸಭೆ ಅಸ್ತಿತ್ವಕ್ಕೆ ತಂದಿತು.
- ಒಕ್ಕೂಟದ ಹೋರಾಟ ಗೌರವಾಧ್ಯಕ್ಷರಾಗಿ ಕನ್ನಡದ ನಾಡಿ ಎಂದೇ ಖ್ಯಾತರಾದ ಲೇಖಕರು ನಾ ಡಿಸೋಜ ಅವರನ್ನು ಆಯ್ಕೆ ಮಾಡಲಾಯಿತು.
- 30 ಜನರ ಸಂಘಟನಾ ಸಮಿತಿ ರಚಿಸಿಲಾಯಿತು.
– ಶಂಕರ್ ಶರ್ಮಾ ಅವರನ್ನೊಳಗೊಂಡ ತಜ್ಞರ ಸಮಿತಿಯಲ್ಲಿ ರಾಜ್ಯ ಮಟ್ಟದ ನೀರಾವರಿ ತಜ್ಞರು, ಪರಿಸರ ತಜ್ಞರನ್ನೊಳಗೊಂಡ ಈ ಸಮಿತಿ ಶೀಘ್ರದಲ್ಲೇ ಸರ್ಕಾರದ ಯೋಜನೆಯ ಅನಾಹುತಗಳ ಕುರಿತು ಒಂದು ವರದಿ ಸಲ್ಲಿಸಬೇಕು. - ಕಾನೂನು ಸಮಿತಿ- ಈ ವಿಷಯದಲ್ಲಿ ಕಾನೂನು ಹೋರಾಟ ನಡೆಸುವ ಕುರಿತು ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಲು ವಕೀಲ ಪ್ರವೀಣ್ ಕೆ ವಿ ನೇತೃತ್ವದಲ್ಲಿ ಕಾನೂನು ಸಮಿತಿ ರಚಿಸಲಾಯಿತು
- ಮಾಧ್ಯಮ/ ಸಾಮಾಜಿಕ ಮಾಧ್ಯಮ ಸಮಿತಿ
- ಶರಾವತಿ ಉಳಿಸುವ ಈ ಹೋರಾಟವನ್ನು ಮಾಧ್ಯಮಗಳ ಮೂಲ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಹರ್ಷಕುಮಾರ್ ಕುಗ್ವೆ ಉಸ್ತುವಾರಿಯ ತಂಡವೊಂದನ್ನು ರಚಿಸಲಾಯಿತು.
- ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆ ಕುರಿತು ವರದಿಯೊಂದನ್ನು ಸಿದ್ಧಪಡಿಸುವ ಅಗತ್ಯವಿದ್ದು ಈ ಹೊಣೆಯನ್ನು ಮಲ್ಲಿಕಾರ್ಜುನ ಹಕ್ರೆ ಅವರಿಗೆ ವಹಿಸಲಾಯಿತು.
- ವಾಮದೇವ ಗೌಡ ಅವರ ನೇತೃತ್ವದಲ್ಲಿ ಹಣಕಾಸು ಸಮಿತಿ ರಚಿಸಲಾಯಿತು. ಯಾವುದೇ ರಾಜಕೀಯ ಪಕ್ಷದಿಂದ ಹಣ ತೆಗೆದುಕೊಳ್ಳುವಂತಿಲ್ಲ ಹಾಗೂ 5000 ರೂಪಾಯಿಗಿಂತ ಹೆಚ್ಚಿನ ದೇಣಿಗೆ ಪಡೆಯುವಂತಿಲ್ಲ ಎಂಬ ತೀರ್ಮಾನ ತೆಗೆದುಕೊಳ್ಳಲಾಯಿತು. ಜನರಿಂದಲೇ ಹಣ ಸಂಗ್ರಹಿಸಿ ಹೋರಾಟ ರೂಪಿಸಲು ನಿರ್ಧರಿಸಲಾಯಿತು.
- ಜುಲೈ 10 ನೇ ತಾರೀಖಿನಂದು ಶಿವಮೊಗ್ಗ ಜಿಲ್ಲೆ ಬಂದ್ ಕರೆ ನೀಡುವುದು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
- ಕೂಡಲೇ ಶಿವಮೊಗ್ಗದಲ್ಲಿ ಒಂದು ಪತ್ರಿಕಾ ಗೋಷ್ಟಿ ನಡೆಸುವುದು,
ಹೊಸನಗರ, ನಗರ, ಶಿವಮೊಗ್ಗ, ತೀರ್ಥಹಳ್ಳಿ, ಸೊರಬಗಳಲ್ಲಿ ಪೂರಕ ಸಭೆಗಳನ್ನು ಶೀಘ್ರದಲ್ಲೇ ಆಯೋಜಿಸಲು ತೀರ್ಮಾನ ಮಾಡಲಾಯಿತು. - ಶರಾವತಿ ನದಿ ಉಳಿಸಿಕೊಳ್ಳುವ ಹೋರಾಟಕ್ಕೆ ನಾಡಿನಾದ್ಯಂತ ಬೆಂಬಲ ಕೋರಲು ನಿರ್ಧರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಕೆಆರ್.ಐ.ಡಿ.ಎಲ್ ವಿಭಾಗ-2ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಿಡುಗಡೆಯಾದ ರೂ. 20 ಕೋಟಿ ಮೊತ್ತದ 51 ಕಾಮಗಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ರೂ. 20 ಕೋಟಿ ಅನುದಾನದಲ್ಲಿ ನಡೆದಿರುವ 51 ಕಾಮಗಾರಿಗಳ ಬಗ್ಗೆ ಅನುಮಾನ ಕಂಡುಬಂದಿದ್ದು, ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಕೋರಿದಾಗ ಬಹುತೇಕ ಕಾಮಗಾರಿಗಳು ನಡೆದಿರುವುದಿಲ್ಲ ಎಂಬುದಾಗಿ ಹಿಂಬರಹ ನೀಡಿರುತ್ತಾರೆ. ಹೀಗಾಗಿ 51 ಕಾಮಗಾರಿಗೆ ಸಂಬಂಧಿಸಿದಂತೆ ನಿತೀನ್ ಎಸ್. ಜಾಧವ್, ಸಹಾಯಕ ಕಾರ್ಯಪಾಲಕ ಅಭಿಯಂತರು, ಕೆ.ಆರ್.ಐ.ಡಿ.ಎಲ್, ಮಾಯಕೊಂಡ ಇವರ ವಿರುದ್ಧ ಪ್ರಕರಣ ದಾಖಲಿಸಿ ರೂ. 20 ಕೋಟಿ ಮೊತ್ತದಲ್ಲಿ ನಡೆದಿರುವ 51 ಕಾಮಗಾರಿಗಳನ್ನು ನಿಯಮಾನುಸಾರ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್‍ಲೈನ್ ಕೌನ್ಸಿಲಿಂಗ್ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್‍ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.
ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.
ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


