ದಿನದ ಸುದ್ದಿ
ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು : ಈಶ್ವರಾನಂದಪುರಿ ಸ್ವಾಮೀಜಿ

ಸುದ್ದಿದಿನ,ದಾವಣಗೆರೆ: ನಮಗೆ ಇಂದು ಭಕ್ತಿ ಮತ್ತು ಜ್ಞಾನ ಎರಡೂ ಮುಖ್ಯ. ಭಕ್ತಿ ಹೆಚ್ಚಿಸುವ ದೇವಾಲಯಗಳ ಜತೆಯಲ್ಲೇ ಜ್ಞಾನ ವಿಸ್ತರಿಸುವ ವಿದ್ಯಾಲಯಗಳೂ ಹೆಚ್ಚಬೇಕು ಎಂದು ಹೊಸದುರ್ಗ ಕನಕ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಹಳೆಕುಂದುವಾಡ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ದೇವಸ್ಥಾನದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂದಿನ ಮಕ್ಕಳನ್ನು ಐಎಎಎಸ್, ಕೆಎಎಸ್‌ನಂತಹ ಉನ್ನತ ಶಿಕ್ಷಣ ಹಾಗೂ ಸಂಸ್ಕಾರ ನೀಡಲು ಪಾಲಕರು ಮುಂದಾಗಬೇಕು. ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು. ದುಂದುವೆಚ್ಚ ಕಡಿಮೆ ಮಾಡಬೇಕು ಎಂದೂ ಸಲಹೆ ನೀಡಿದರು.
ಶ್ರೀಕೃಷ್ಣನು ಕನಕನಿಗೆ, ಶ್ರೀರಾಮನು ಶಬರಿಗೆ ಒಲಿದಿದ್ದು ಜಾತಿಯಿಂದಲ್ಲ; ಅವರಲ್ಲಿದ್ದ ಭಕ್ತಿಯಿಂದಾಗಿ. ಭಕ್ತಿ ಮತ್ತು ಭಕ್ತನಿಗೆ ಜಾತಿ ಇಲ್ಲ. ಎಲ್ಲ ಸ್ವಾಮೀಜಿಗಳನ್ನು, ವರ್ಗದವರನ್ನು ಒಗ್ಗೂಡಿಸಿದ ಕುಂದುವಾಡ, ಸಾಮರಸ್ಯದ ಗ್ರಾಮವಾಗಿದೆ. ಪ್ರತಿ ಗ್ರಾಮದಲ್ಲೂ ಇಂತಹ ವಾತಾವರಣ ಇರಬೇಕು ಎಂದು ಆಶಿಸಿದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ಆಂಜನೇಯನಿಗೆ ಸೀಮಿತ ಜಾತಿಯ ಭಕ್ತರಿಲ್ಲ. ಆತ ಜಾತ್ಯತೀತ ವ್ಯಕ್ತಿ. ಭಕ್ತಿಗೆ ಹೆಸರಾದ ಆಂಜನೇಯ ಹಾಗೂ ಸಮಾನತೆಗೆ ಹೆಸರಾದ ಬಸವೇಶ್ವರರ ದೇಗುಲ ಪ್ರತಿಷ್ಠಾಪನೆಯನ್ನು ಕುಂದುವಾಡ ಗ್ರಾಮಸ್ಥರು ಭಾವೈಕ್ಯ, ಸೌಹಾರ್ದ ಹಾಗೂ ಸಹಬಾಳ್ವೆಯಿಂದ ಮಾಡುತ್ತಿದ್ದಾರೆ. ಈ ಕುಂದುವಾಡ ಗ್ರಾಮ ಸೌಹಾರ್ದ ಗ್ರಾಮವಾಗಿ ಬದಲಾಗಲಿ ಎಂದು ಹೇಳಿದರು.
ಹದಡಿಯ ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ ಮಾತನಾಡಿ ಎಲ್ಲವನ್ನು ಕೊಟ್ಟ ದೇವರನ್ನು ಮರೆಯುತ್ತಿದ್ದೇವೆ. ನಿಸರ್ಗವನ್ನು ಹಾಳು ಮಾಡುತ್ತ, ಮಾಲಿನ್ಯ ಹೆಚ್ಚಿಸುತ್ತಿದ್ದೇವೆ. ನಮ್ಮಲ್ಲಿ ಭಯ ಮೂಡಿಸಲು ಹಿರಿಯರು ಊರಿಗೊಂದು ದೇವಸ್ಥಾನ ನಿರ್ಮಿಸಿದ್ದಾರೆ. ಆದರೆ ನಮ್ಮೊಳಗಿರುವ ದೇವರನ್ನು ನಾವು ಕಾಣಬೇಕು. ಮದಗಳನ್ನು ಕೈಬಿಡಬೇಕು. ಧರ್ಮ ಕಾರ್ಯ, ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ ಬಸವತತ್ವ ಎಲ್ಲರೂ ಕೂಡಿ ಬಾಳುವುದನ್ನು ಹೇಳಿದೆ. ಎಲ್ಲ ವರ್ಗಗಳಿಗೂ ಬಸವಣ್ಣನವರು ಸಾಮಾಜಿಕ ನ್ಯಾಯ ನೀಡಿದರು. ನಾವಿಂದು ಅವರ ದಾರಿಯಲ್ಲಿ ಸಾಗಬೇಕಿದೆ. ಬಸವಣ್ಣ ಕಂಡು ಕನಸು ಕುಂದುವಾಡ ಗ್ರಾಮದಲ್ಲಿ ಅನಾವರಣವಾಗಿದ್ದು, ಇಲ್ಲಿ ಸದಾ ಶಾಂತಿ ನೆಲೆಸಲಿ ಎಂದು ಆಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಗ್ರಾಮದವರು ತುಂಬಾ ಒಗ್ಗಟ್ಟಿನಿಂದ ದೇವಾಲಯ ನಿರ್ಮಾಣ ಮಾಡಿರೋದು ಮೆಚ್ಚುವಂತಾಗಿದೆ,
ತಡವಾಗಿಯಾದರೂ ಗ್ರಾಮದಲ್ಲಿ ದೇಗುಲಗಳು ಉತ್ತಮವಾಗಿ ನಿರ್ಮಿತವಾಗಿವೆ. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.
ದಾವಣಗೆರೆ- ಹಳೇ ಕುಂದುವಾಡ ಮುಖ್ಯ ರಸ್ತೆಗೆ ಹೊಂದಿಕೊಂಡ ರಸ್ತೆ ವ್ಯಾಜ್ಯ ನ್ಯಾಯಾಲಯದಲ್ಲಿದ್ದು ಇದನ್ನು ತೆರವುಗೊಳಿಸಿದಲ್ಲಿ ಗ್ರಾಮಸ್ಥರು ಬಯಸಿದಂತೆ 80 ಅಡಿ ರಸ್ತೆ ನಿರ್ಮಾಣ ಮಾಡಲು ಬದ್ಧನಿದ್ದೇನೆ. ಈ ಸಂಬಂಧ ದೂಡಾ ಅಧಿಕಾರಿಗಳು, ಜಮೀನಿನ ಮಾಲೀಕರು, ಗುತ್ತಿಗೆದಾರರನ್ನು ಸೇರಿಸಿ ಸಭೆ ನಡೆಸೋಣ ಎಂದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಈ ಭಾಗದಲ್ಲಿ ದೇಗುಲಗಳ ಸಂಖ್ಯೆ ಹೆಚ್ಚಿದೆ. ಹಿಂದುಳಿದ ವರ್ಗದ ಮಕ್ಕಳು ವಿದ್ಯಾವಂತರಾದರೆ ಇಂತಹ ಹತ್ತು ದೇವಸ್ಥಾನ ಕಟ್ಟುತ್ತಾರೆ, ಹೀಗಾಗಿ ಶಾಲೆಗಳ ನಿರ್ಮಾಣಕ್ಕೂ ಮಹತ್ವ ನೀಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮೈಲಾರ ಕ್ಷೇತ್ರದ ಕಾರ್ಣಿಕ ನುಡಿಯುವ ರಾಮಪ್ಪಜ್ಜ, ಹಳೆಕುಂದುವಾಡದ ಸ್ವಾಮಿಜಿ ರಾಜಣ್ಣ, ಮುಖಂಡರಾದ ಬಿ.ಜಿ. ಅಜಯಕುಮಾರ್, ಲೋಕಿಕೆರೆ ನಾಗರಾಜ್, ಶ್ರೀನಿವಾಸ ದಾಸಕರಿಯಪ್ಪ, ಎಚ್. ವೆಂಕಟೇಶ್, ಜೆ.ಎನ್. ಶ್ರೀನಿವಾಸ್. ಶ್ವೇತಾ ಶ್ರೀನಿವಾಸ್, ಮುದೇಗೌಡ್ರ ಗಿರೀಶ್, ತಹಸೀಲ್ದಾರ್ ಬಿ.ಎನ್.ಅಶ್ವಥ್, ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮದ ಮುಖಂಡರು, ಯುವಕರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪ್ರವಾಸೋದ್ಯಮ ಇಲಾಖೆ | ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಆಹಾರ ಕರಕುಶಲ ಸಂಸ್ಥೆ ಮೈಸೂರು ( Food Craft Institute ) ಮತ್ತು ಹೋಟೆಲ್ ನಿರ್ವಹಣಾ ಸಂಸ್ಥೆ ಬೆಂಗಳೂರು (Institute Of Hotel Management ) ಇವರ ಸಹಯೋಗದಲ್ಲಿ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಲ್ಟಿ ಕ್ಯೂಸಿನ್ ಕುಕ್ ( Multi Cusine Cook ) ಮತ್ತು ಫುಡ್ ಅಂಡ್ ಬೇವರೇಜ್ ಸರ್ವಿಸ್ ಸ್ಟೇವಾರ್ಡ್ ( Food And Beverage Service Steward ) ನಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಜಿಲ್ಲೆಯ ಅಭ್ಯರ್ಥಿಗಳು ಮಾ.25 ರಿಂದ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿನ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ದ್ವಿ-ಪ್ರತಿಯಲ್ಲಿ ಏಪ್ರಿಲ್ 3 ರೊಳಗೆ ನೇರವಾಗಿ ಇಲಾಖೆಗೆ ಸಲ್ಲಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಕಾವ್ಯ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜಯಲಕ್ಷ್ಮಿ ಕಾರಂತ್ ಅವರಿಗೆ ‘ಯಕ್ಷ ಧ್ರುವ’ ರಾಜ್ಯ ಪ್ರಶಸ್ತಿ ಪ್ರದಾನ

ಸುದ್ದಿದಿನ,ದಾವಣಗೆರೆ:ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆಯ ಅಧ್ಯಕ್ಷರೂ, ಹಿರಿಯ ಸಾಹಿತಿ, ಯಕ್ಷಗಾನ ವಿದ್ವಾಂಸರು, ತಾಳಮದ್ದಳೆಯ ಅರ್ಥಧಾರಿಗಳಾದ ಜಯಲಕ್ಷ್ಮಿ ಕಾರಂತ್‌ರವರಿಗೆ ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಭಂಟರ ಭವನದಲ್ಲಿ ಮಂಗಳೂರಿನ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಟ್ರಸ್ಟ್ ಹಮ್ಮಿಕೊಳ್ಳಲಾದ ಮಹಿಳಾ ಘಟಕದ 8ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ “ಯಕ್ಷ ಧ್ರುವ” ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು ಎಂದು ಕಲಾಕುಂಚ ಯಕ್ಷರಂಗದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಹಿರಿಯ, ಕಿರಿಯ ಮಹಿಳೆಯರಿಗೆ, ಮಕ್ಕಳಿಗೆ ಯಕ್ಷಗಾನ ಮದ್ದಳೆ ತರಬೇತಿ, ಮಹಾಭಾರತ, ರಾಮಾಯಣ ಪರಂಪರೆಯ ಪೌರಾಣಿಕ ಪ್ರಸಂಗಗಳ ರಚನೆ, ನಿವೃತ್ತಿ ಶಿಕ್ಷಕಿಯಾದರೂ ಶೈಕ್ಷಣಿಕ ಕಾಳಜಿಯ ಸ್ವಯಂ ಸೇವೆಯೊಂದಿಗೆ, ಕಲೆ, ಸಾಹಿತ್ಯ, ಸಂಗೀತ, ಭಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಗುರುತಿಸಿ ಶ್ರೀಮತಿ ಜಯಲಕ್ಷ್ಮಿ ಕಾರಂತ್‌ರನ್ನು ಮಹತ್ವಪೂರ್ಣ ಈ ಪ್ರಶಸ್ತಿಗೆ ಭಾಜನಾಗಿದ್ದು ಕಲಾಕುಂಚ ಯಕ್ಷರಂಗ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅಲರ್ಟ್..!

- ಸುನೀತ ಕುಶಾಲನಗರ
ನದಿಯ ನೇವರಿಸಿದ ಗಾಳಿ
ಮುದಗೊಳಿಸಿ ಸರಿಯಿತು.
ಜಡಿ ಮಳೆ ಧೋ ಎಂದು
ಸಕಾಲಿಕವಾಗಿ ಸುರಿದು
ಹೊಸ ಹುಟ್ಟು.
ಆದರೇನು?
ಹಿಂಗಾರು, ಮುಂಗಾರು
ಆಗೊಮ್ಮೆ ಈಗೊಮ್ಮೆ
ಪದೇ ಪದೇ ಅದೇ ರಾಗ .
ಸುರಿದು ತುಂತುರು
ಕಾಣಿಸಿ ನಿಂತಿತೆನ್ನುವಾಗ
ಮತ್ತೆ ನಿಲ್ಲದ ಹಠ.
ಮಳೆಗೆ ಈಗ ಮುಟ್ಟು
ನಿಲ್ಲುವ ಸಮಯವೋ?
ಗುಡುಗು,ಮಿಂಚಿನಿಂದ
ಮುಟ್ಟಿನಲ್ಲಿ ಏರುಪೇರೋ ?
ಒಟ್ಟಿನಲ್ಲಿ
ನದಿಯ ಸೋಕಿದ ಗಾಳಿ
ಸಮುದ್ರದೊಳಗೆ ವಿಲೀನ.
ಅಕಾಲಿಕ ಮಳೆ…
ಇಳೆಗೆ ಸೊಂಟ ಬೇನೆ
ನದಿಯ ತಾಕಿದ ಬೆಳದಿಂಗಳು
ಕಿವಿಯಲ್ಲಿ ಉಸುರಿತು
ಹರಿಯುತ್ತಿರುವ ನದಿಯು
ಬೀಸುವ ಗಾಳಿಯು
ತಲೆಯೆತ್ತಿ ನಿಂತ ಬೆಟ್ಟವೂ
ಸ್ಥಾನ ಬದಲಿಸಲು
ಹೊತ್ತು ಬೇಕೆ?
ನಿಲ್ಲದ ಮಳೆಯ ಮುಟ್ಟಿಗೆ
ಸಲ್ಲುವ ಘೋಷಣೆ
ಹೈ ಅಲರ್ಟ್!
ಬದುಕಿನ ಧ್ಯಾನ
ಯೆಲ್ಲೋ, ಆರೆಂಜ್, ರೆಡ್
ಬಣ್ಣಗಳ ಅಲರ್ಟ್ ನಲ್ಲೇ
ಕಳೆದು ಹೋಗುತ್ತಿದೆ.
ಕಾಮನ ಬಿಲ್ಲ ತೋರಿಸಿ
ಸರಿದು ಬಿಡು ಮಳೆಯೇ
ಇಳೆಯ ಉಸಿರು
ಹಸಿರಾಗಲಿ. (ಕವಯಿತ್ರಿ: ಸುನೀತ ಕುಶಾಲನಗರ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ರಾಜ್ಯದ ಶಿಲಾ ಶಾಸನಗಳು ಸೇರ್ಪಡೆ
-
ದಿನದ ಸುದ್ದಿ7 days ago
ಕೆರೆಬಿಳಚಿ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ; 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಮಾಸಾಶನ ಪಡೆಯುತ್ತಿರುವ ಕಲಾವಿದರು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ
-
ದಿನದ ಸುದ್ದಿ7 days ago
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ : ಹೊಸ ಸದಸ್ಯರ ನೊಂದಣಿ, ನೊಂದಣಿಯಾದ ಸದಸ್ಯರನ್ನು ನವೀಕರಿಸಲು ಸೂಚನೆ
-
ದಿನದ ಸುದ್ದಿ6 days ago
ಕ್ಯೂ-ಸ್ಪೈಡರ್ಸ್ ವತಿಯಿಂದ ಉಚಿತ ಉದ್ಯೋಗದರಿತ ಕೌಶಲ್ಯ ತರಬೇತಿ ಆಯ್ಕೆ ಪ್ರಕ್ರಿಯೆ
-
ದಿನದ ಸುದ್ದಿ6 days ago
ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ
-
ಅಂಕಣ5 days ago
ಸಿದ್ಧಾಂತ ಮತ್ತು ಪತ್ರಿಕೋದ್ಯಮ
-
ದಿನದ ಸುದ್ದಿ5 days ago
ದಾವಣಗೆರೆ | ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ, 81 ಕೇಂದ್ರಗಳಲ್ಲಿ 22579 ವಿದ್ಯಾರ್ಥಿಗಳು