Connect with us

ದಿನದ ಸುದ್ದಿ

ಹಿಂದುತ್ವದ ಹಿತಾಸಕ್ತಿಯೂ ಜಾತಿಯ ಅನಿವಾರ್ಯತೆಯೂ

Published

on

  • ನಾ ದಿವಾಕರ

ಜಾತಿ ರಾಜಕಾರಣ ಈ ದೇಶಕ್ಕೆ ಅಂಟಿರುವ ಒಂದು ಶಾಪವಾದರೆ, ಹಿಂದುತ್ವ ರಾಜಕಾರಣ ಒಂದು ಭೀಕರ ಸ್ವಪ್ನ. ಕರ್ನಾಟಕದ ಜನತೆಗೆ ಈಗ ಶಾಪಗ್ರಸ್ತರಾಗಿ ಈ ಭೀಕರ ಸ್ವಪ್ನ ಲೋಕದಲ್ಲಿ ವಿಹರಿಸುವ ಒಂದು ಅವಕಾಶ.

ಜಾತಿ ಸಮೀಕರಣದಿಂದಾಚೆಗೆ ಸರ್ಕಾರಗಳನ್ನು ರಚಿಸಲು ಸಾಧ್ಯವೇ ಆಗದ ಒಂದು ದುಸ್ಥಿತಿಗೆ ರಾಜ್ಯ ತಲುಪಿರುವುದು, ಮೌಲ್ಯಾಧಾರಿತ ರಾಜಕಾರಣದ ಹರಿಕಾರರಿಗೆ ಮಾಡುವ ಅಪಮಾನ ಹೌದಾದರೂ, ಈ ಮೌಲ್ಯಗಳ ನಿಷ್ಕರ್ಷೆಯಾದದ್ದೇ ಮಾರುಕಟ್ಟೆ ರಾಜಕಾರಣದ ಆವರಣದಲ್ಲಿ ಎನ್ನುವ ವಾಸ್ತವವನ್ನು ಅರಿತರೆ, ಅಷ್ಟೇನೂ ನಿರಾಶರಾಗಬೇಕಿಲ್ಲ.

ಏಕೆಂದರೆ ಕರ್ನಾಟಕದಲ್ಲಿ ಮೌಲ್ಯಾಧಾರಿತ ರಾಜಕಾರಣದ ಛಾಯೆ ಮೂಡುವ ವೇಳೆಗೇ ರಾಜಕೀಯ ವಲಯದಲ್ಲಿ ಅಧಿಕಾರ ಪೀಠದ ಮಾರುಕಟ್ಟೆ ಮೌಲ್ಯ ನಿರ್ಧಾರವಾಗುವ ಪರಂಪರೆಗೆ ನಾಂದಿ ಹಾಡಲಾಗಿತ್ತು. ನವ ಉದಾರವಾದ ಜಾತಿ ಧರ್ಮಗಳನ್ನೂ ಸಂತೆಯಲ್ಲಿಟ್ಟು ಮಾರುವ ಸಾಮಥ್ರ್ಯ ಹೊಂದಿರುವುದನ್ನು ಇಲ್ಲಿ ಗಮನಿಸಲೇಬೇಕು.

ಬಿಜೆಪಿ ಹೈಕಮಾಂಡ್ ತನ್ನ ಪಗಡೆಯಾಟದಲ್ಲಿ ದಾಳ ಉರುಳಿಸುವ ಮುನ್ನ ಯಾವ ಚೌಕಗಳಲ್ಲಿ ಯಾರನ್ನು ಕೂಡಿಸಬೇಕು ಎಂದು ನಿರ್ಧರಿಸಿಯೇ ಮುಂದೆ ಹೆಜ್ಜೆಯಿಟ್ಟಿದೆ. ಹಣಕಾಸು ಬಂಡವಾಳ ಮತ್ತು ನವ ಉದಾರವಾದದ ಮಾರುಕಟ್ಟೆ ಆರ್ಥಿಕತೆಯಲ್ಲಿ ಕರ್ನಾಟಕ ಪ್ರಶಸ್ತ ಸ್ಥಾನ ಗಳಿಸಿರುವುದರಿಂದಲೇ ಉಳಿದೆಲ್ಲಾ ರಾಜ್ಯಗಳಿಗಿಂತಲೂ ಇಲ್ಲಿನ ರಾಜಕಾರಣಕ್ಕೆ ಹೆಚ್ಚಿನ ಮಾರುಕಟ್ಟೆ ಮೌಲ್ಯವಿದೆ.

ನಮ್ಮ ರಾಜ್ಯದಲ್ಲಿರುವ ಜಲಮೂಲಗಳು ಮತ್ತು ಅರಣ್ಯ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳು ಕಾರ್ಪೋರೇಟ್ ರಾಜಕಾರಣದ ಸಾಮ್ರಾಜ್ಯ ವಿಸ್ತರಣೆಗೆ ಹೆದ್ದಾರಿಗಳನ್ನು ನಿರ್ಮಿಸಲು ಹೆಚ್ಚು ನೆರವಾಗುತ್ತವೆ. ಹಾಗಾಗಿಯೇ ಇಲ್ಲಿನ ರಾಜಕಾರಣದಲ್ಲಿ ನಾವು ಕಾಣುತ್ತಿರುವ ಪ್ರಬಲ ಜಾತಿಗಳ ವೈರುಧ್ಯಗಳು ಮತ್ತು ಪೈಪೋಟಿಗಳು ಹೆಚ್ಚು ಗಮನಾರ್ಹವಾಗುತ್ತವೆ.

ಯಡಿಯೂರಪ್ಪನವರ ಪದಚ್ಯುತಿ ಮತ್ತು ಬೊಮ್ಮಾಯಿಯವರ ಅಧಿಕಾರ ಸ್ವೀಕಾರವನ್ನು ಕೇವಲ ಜಾತಿ ರಾಜಕಾರಣದ ಕೋನದಿಂದಲೇ ನೋಡಲಾಗುವುದಿಲ್ಲ. ಇಲ್ಲಿ ಜಾತಿ ಒಂದು ನಿಮಿತ್ತಮಾತ್ರ.

ಲಿಂಗಾಯತ ರಾಜಕಾರಣದ ಹಿಂದಿರುವ ಔದ್ಯಮಿಕ ಸಾಮ್ರಾಜ್ಯದ ಹಿತಾಸಕ್ತಿಗಳನ್ನು, ಬಂಡವಾಳಶಾಹಿ ಕಾರ್ಪೋರೇಟ್ ಅಭಿವೃದ್ಧಿ ಮಾರ್ಗಗಳೊಡನೆ ಮುಖಾಮುಖಿಯಾಗಿಸಿ ನೋಡಿದಾಗ, ಇಲ್ಲಿನ ಮಠೋದ್ಯಮಿಗಳ ಒತ್ತಾಸೆ, ವೀರಶೈವ-ಲಿಂಗಾಯತ ಅನುಯಾಯಿಗಳ ಸಾಂಸ್ಕೃತಿಕ ಮತ್ತು ರಾಜಕೀಯ ಹಿತಾಸಕ್ತಿ ಮತ್ತು ಹಿಂದುತ್ವ ರಾಜಕಾರಣದ ಭವಿಷ್ಯದ ಕಾರ್ಯಸೂಚಿಗಳೂ ಸ್ಪಷ್ಟವಾಗುತ್ತವೆ.

ಕರ್ನಾಟಕವನ್ನು ಕೋಮು ರಾಜಕಾರಣದ ಪ್ರಯೋಗಶಾಲೆಯನ್ನಾಗಿ ಕೆಲವು ಪ್ರಾತ್ಯಕ್ಷಿಕೆಗಳನ್ನು ಒದಗಿಸಿ ಈಗಾಗಲೇ ಎಂಟು ಹತ್ತು ವರ್ಷಗಳೇ ಕಳೆದಿವೆ. ಚರ್ಚ್ ಮೇಲಿನ ಧಾಳಿ, ಕರಾವಳಿ ಜಿಲ್ಲೆಗಳ ಕೋಮು ಧೃವೀಕರಣ ಮತ್ತು ಮತ್ತು ಇಸ್ಲಾಂ ಭೀತಿಯನ್ನು ಸೃಷ್ಟಿಸುವ ಪ್ರಯೋಗಗಳಿಗೆ ಬಿಜೆಪಿಯ ಪ್ರಥಮ ಸೋಪಾನದಲ್ಲೇ ಚಾಲನೆ ನೀಡಲಾಗಿದ್ದು, ಈಗ ಧೃವೀಕರಣ ಘನೀಕೃತವಾಗಿರುವುದನ್ನೂ ಅಲ್ಲಗಳೆಯಲಾಗುವುದಿಲ್ಲ.

ಇಂದಿನ ಬೆಳವಣಿಗೆಗಳು ಮೇಲ್ನೋಟಕ್ಕೆ ಯಡಿಯೂರಪ್ಪನವರ ಮೇಲುಗೈ ಎಂದೋ ಅಥವಾ ನೂತನ ಮುಖ್ಯಮಂತ್ರಿ ಬೊಮ್ಮಾಯಿಯ ಮೂಲಕ ಯಡಿಯೂರಪ್ಪ ಯುಗಕ್ಕೆ ಇನ್ನೂ ಉಸಿರಾಡಲು ಅವಕಾಶ ನೀಡಲಾಗಿದೆ ಎಂದೋ ಭಾವಿಸಲು ಸಾಧ್ಯ. ಕಾರ್ಪೋರೇಟ್ ರಾಜಕಾರಣಕ್ಕೆ ಲಿಂಗಾಯತ ಎನ್ನುವ ಒಂದು ನಿಮಿತ್ತ ಇರುವಂತೆಯೇ ಅಧಿಕಾರ ರಾಜಕಾರಣಕ್ಕೆ ಯಡಿಯೂರಪ್ಪ ಒಂದು ನಿಮಿತ್ತ ಮಾತ್ರವಾಗಿರುತ್ತಾರೆ.

ಹಾಗಾಗಿಯೇ ಬಿಜೆಪಿ ಹೈಕಮಾಂಡ್ ಮೇಲ್ನೋಟಕ್ಕೆ ಸೌಮ್ಯವಾದಿಯಂತೆ ಕಾಣುವ ಒಬ್ಬ ಪರಿವರ್ತಿತ ಹಿಂದುತ್ವವಾದಿಯನ್ನು ಗದ್ದುಗೆಯಲ್ಲಿ ಕೂರಿಸಿದೆ. ಕರಾವಳಿಯಲ್ಲಿ ಕೋಮು ದ್ವೇಷದ ಬೀಜಗಳನ್ನು ವ್ಯವಸ್ಥಿತವಾಗಿ ಬಿತ್ತಿದ ಸಂದರ್ಭದಲ್ಲೂ ರಾಜ್ಯದಲ್ಲಿ ಪರಿಭಾವಿತ ಸೌಮ್ಯವಾದಿಗಳೇ ಅಧಿಕಾರದಲ್ಲಿದ್ದುದನ್ನು ಸ್ಮರಿಸುವುದು ಅಗತ್ಯ.

ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಕೌಟುಂಬಿಕ ಹಿತಾಸಕ್ತಿಗಳಿಗೂ ಕಡಿವಾಣ ಹಾಕಿರುವುದು ಸ್ಪಷ್ಟ . ಹಿಂದಿನ ಸರ್ಕಾರದಲ್ಲಿ ಕಾರ್ಯತಃ ಅಧಿಕಾರ ಚಲಾಯಿಸುತ್ತಿದ್ದ ವಿಜಯೇಂದ್ರನಿಗೆ ನೂತನ ಸಚಿವ ಸಂಪುಟದಲ್ಲೂ ಅವಕಾಶ ನೀಡದಿರುವುದನ್ನು ಗಮನಿಸಿದರೆ ಬಹುಶಃ ಯಡಿಯೂರಪ್ಪ ಕ್ರಮೇಣ ಮೂಲೆಗುಂಪಾಗುವ ಸಾಧ್ಯತೆಗಳು ಕಾಣುತ್ತವೆ.

ಇಲ್ಲಿ ವೀರಶೈವ ಲಿಂಗಾಯತ ಮಠೋದ್ಯಮಿಗಳ ವಾಣಿಜ್ಯ ಹಿತಾಸಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಇವರಿಗೆ ಯಡಿಯೂರಪ್ಪ ನಿಮಿತ್ತ ಮಾತ್ರವಾಗಿದ್ದರು. ಹಣಕಾಸು ಬಂಡವಾಳ ಮಾರುಕಟ್ಟೆಯಲ್ಲಿ ಈ ಬೃಹತ್ ಜಾತಿ ಸಮುದಾಯ ಹೊಂದಿರುವ ಬೃಹತ್ ಬಂಡವಾಳದ ಮರು ಕ್ರೋಢೀಕರಣ ಮತ್ತು ಸಂರಕ್ಷಣೆಗೆ ಲಿಂಗಾಯತ ಮುಖ್ಯಮಂತ್ರಿ ಅವಶ್ಯ, ಯಡಿಯೂರಪ್ಪ ಅಲ್ಲ ಎನ್ನುವುದು ಸಾಬೀತಾಗಿದೆ.

ಆದರೆ ಮತಬ್ಯಾಂಕ್ ರಾಜಕಾರಣದಲ್ಲಿ ತಮ್ಮದೇ ಪ್ರಭಾವಿ ವಲಯ ಹೊಂದಿರುವ ರಾಜಕೀಯ ಉದ್ಯಮಿ ಯಡಿಯೂರಪ್ಪನವರನ್ನು ಸುಲಭವಾಗಿ ಕೈಬಿಡುವುದೂ ಚುನಾವಣೆಗಳ ದೃಷ್ಟಿಯಿಂದ ಪ್ರಮಾದವಾಗುತ್ತದೆ. ಹಾಗಾಗಿಯೇ ಬಿಜೆಪಿ ಹೈಕಮಾಂಡ್ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದು, ದಾಳ ಬೀಸಿದೆ.

ಈಗ ಮಾಜಿ ಮುಖ್ಯಮಂತ್ರಿಗೆ ಉಳಿದ ಅವಧಿಗೆ ಸಂಪುಟ ದರ್ಜೆಯ ಸ್ಥಾನಮಾನಗಳನ್ನು ನೀಡಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ಯಡಿಯೂರಪ್ಪ ಅವರ ಕೃತ್ರಿಮ ರಾಜಕಾರಣದ ಮೂಲಕವೇ ಬಿಜೆಪಿಯಿಂದ ಖರೀದಿಸಲ್ಪಟ್ಟ ವಲಸಿಗರೂ ಸಹ ತಮ್ಮ ಸ್ವಾಮಿನಿಷ್ಠೆಯನ್ನು ಬದಲಿಸಿ ಇದೀಗ ವಾಣಿಜ್ಯ ಹಿತಾಸಕ್ತಿಗಳಿಗೆ ಶರಣಾಗಿದ್ದಾರೆ. ಆದ್ದರಿಂದಲೇ ಬಂಡಾಯದ ಸ್ವರ ಕ್ಷೀಣವಾಗಿದೆ. ಕಾರ್ಪೋರೇಟ್ ರಾಜಕಾರಣದಲ್ಲಿ ಮಾರುಕಟ್ಟೆಯೇ ನಿರ್ಣಾಯಕ ಎನ್ನುವುದಕ್ಕೆ ಇದಕ್ಕಿಂತಲೂ ಸಾಕ್ಷಿ ಬೇಕೇ ?

ನೂತನ ಸಂಪುಟ ರಚನೆಯಲ್ಲೂ ಬಿಜೆಪಿ ಹೈಕಮಾಂಡ್ ಇದೇ ರಣತಂತ್ರವನ್ನು ಅನುಸರಿಸಿದೆ. ಯಡಿಯೂರಪ್ಪ ಅವಧಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಬಹುತೇಕ ಅನಿವಾರ್ಯ ಎಂಬಂತೆ ಮೂವರನ್ನು ನೇಮಿಸಿದ್ದ ಹೈಕಮಾಂಡ್ ಇದೀಗ ಆ ಹುದ್ದೆಯನ್ನೇ ಕೈಬಿಟ್ಟಿದೆ. ಇಲ್ಲಿ ಆಕಾಂಕ್ಷಿಗಳ ಕೊರತೆ ಇಲ್ಲದಿದ್ದರೂ ಬಂಡಾಯದ ಧ್ವನಿಯಂತೂ ಕೇಳಿಬರುವುದಿಲ್ಲ. ಏಕೆಂದರೆ ಯಡಿಯೂರಪ್ಪನವರಿಗೆ ಕತ್ತರಿಸಬೇಕಾದ ರೆಕ್ಕೆಗಳಿದ್ದವು, ಬೊಮ್ಮಾಯಿ ಈಗಾಗಲೇ ರೆಕ್ಕೆ ಕತ್ತರಿಸಿಕೊಂಡೇ ಪದಗ್ರಹಣ ಮಾಡಿದ್ದಾರೆ.

ವೀರಶೈವ ಲಿಂಗಾಯತ ಮಠೋದ್ಯಮಿಗಳ ಹಿತಾಸಕ್ತಿಯ ಸಂರಕ್ಷಣೆಗೆ ಕಾವಲುಗಾರರಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಜೋಡಿ ಕಾರ್ಯನಿರ್ವಹಿಸುವುದಂತೂ ಖಚಿತ. ಇದು ಮುಂದಿನ ಚುನಾವಣೆಗಳ ದೃಷ್ಟಿಯಿಂದ ಮುಖ್ಯವಾಗುತ್ತದೆ. ಉಳಿದಂತೆ ಸರ್ಕಾರ ಹೈಕಮಾಂಡ್ ಅಣತಿಯಂತೆಯೇ ನಡೆಯಲಿದೆ. ನೂತನ ಸಂಪುಟದಲ್ಲಿ ಯಡಿಯೂರಪ್ಪನವರಿಗೆ ಕಂಟಕವಾಗಿದ್ದ ಬಂಡಾಯ ಶಾಸಕರನ್ನು ದೂರ ಇಟ್ಟಿರುವಂತೆಯೇ ಅವರ ಆಪ್ತರನ್ನೂ ದೂರ ಇಡುವ ಮೂಲಕ ಸಂತೃಪ್ತಿಗೊಳಿಸಿರುವುದನ್ನು ಸುರೇಶ್ ಕುಮಾರ್ ಮತ್ತು ಲಕ್ಷ್ಮಣ ಸವದಿಯವರ ಪದಚ್ಯುತಿಯಲ್ಲಿ ಗಮನಿಸಬಹುದು.

ಹಿಂದುತ್ವವಾದದ ಸೌಮ್ಯವಾದಿ ಮುಖವಾಡ ಹೊತ್ತವರಲ್ಲಿ ಸುರೇಶ್ ಕುಮಾರ್ ಸಹ ಒಬ್ಬರು. ವಿರೋಧ ಪಕ್ಷಗಳಷ್ಟೇ ಅಲ್ಲದೆ ಸಾರ್ವಜನಿಕ ವಲಯದಲ್ಲಿ ಪ್ರಗತಿಪರರ ನಡುವೆಯೇ “ಅಜಾತಶತ್ರು” ಎಂದೇ ಪರಿಭಾವಿಸಲಾಗುವ ವಾಜಪೇಯಿ ಸಂತತಿಯ ರಾಜಕಾರಣಿಗಳಲ್ಲಿ ದಿವಂಗತ ಅನಂತಕುಮಾರ್ ಮತ್ತು ಸುರೇಶ್ ಕುಮಾರ್ ಪ್ರಮುಖರು. ಪ್ರಾಥಮಿಕ ಶಿಕ್ಷಣ ಸಚಿವರಾಗಿ ಸುರೇಶ್ ಕುಮಾರ್ ಕಾರ್ಪೋರೇಟ್ ಅರ್ಥವ್ಯವಸ್ಥೆಯ ಕಾರ್ಯಸೂಚಿಯನ್ನು ಬಹುಪಾಲು ಪೂರೈಸಿದ್ದಾಗಿದೆ. ಕೋವಿದ್ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಂದ ಹೊರಗುಳಿಯಲ್ಪಟ್ಟ ಲಕ್ಷಾಂತರ ಮಕ್ಕಳ ಸಂಖ್ಯೆ ಇವರನ್ನು ಬಾಧಿಸಿಯೇ ಇಲ್ಲ ಎನ್ನುವುದು ಗಮನಿಸತಕ್ಕ ಅಂಶ ಅಲ್ಲವೇ ?

ಕಾರ್ಪೋರೇಟ್ ಅರ್ಥವ್ಯವಸ್ಥೆಯಲ್ಲಿ ಸಾರ್ವಜನಿಕ ಉದ್ದಿಮೆಗಳ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣ ಮತ್ತು ವಾಣಿಜ್ಯೀಕರಣ ಪ್ರಕ್ರಿಯೆಗೆ ಇನ್ನು ಮುಂದೆ ಚಾಲನೆ ದೊರೆಯಲಿದೆ. ಹಿಂದಿನ ಸಾರಿಗೆ ಸಚಿವ ಲಕ್ಷ್ಮಣಸವದಿ ಈ ಬಾರಿ ಅವಕಾಶವಂಚಿತರಾಗಿದ್ದರೂ, ರಾಜ್ಯ ಸಾರಿಗೆ ಸಂಸ್ಥೆಯ ಖಾಸಗೀಕರಣಕ್ಕೆ ಅವಶ್ಯವಾದ ಭೂಮಿಕೆಯನ್ನು ಸಿದ್ಧಪಡಿಸಿಯೇ ನಿರ್ಗಮಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರದ ನೆಪದಲ್ಲಿ ಸಂಘಟಿತ ಕಾರ್ಮಿಕರ ಐಕ್ಯತೆಯನ್ನು ಭಂಗಗೊಳಿಸುವ ಮೂಲಕ ಸಾರಿಗೆ ನಿಗಮಗಳ ಖಾಸಗೀಕರಣದ ಹಾದಿ ಸುಗಮವಾಗಿದೆ. ನೂತನ ಸಾರಿಗೆ ಸಚಿವ ಶ್ರೀರಾಮುಲು ಬಹುಶಃ ಈ ನಿಟ್ಟಿನಲ್ಲಿ ಇನ್ನೂ ಕ್ಷಿಪ್ರಗತಿಯಲ್ಲಿ ಮುನ್ನಡೆಯಬಹುದು.

ಆರೆಸ್ಸೆಸ್ ಹಿನ್ನೆಲೆಯಿಂದಲೇ ಬಂದ ಇಬ್ಬರು ಶಾಸಕರಿಗೆ ನೂತನ ಸಂಪುಟದಲ್ಲಿ ಪ್ರಮುಖ, ಪ್ರಭಾವಿ ಇಲಾಖೆಗಳನ್ನು ನೀಡಿರುವುದು, ಬೊಮ್ಮಾಯಿ ಸರ್ಕಾರದ ಹಿಂದುತ್ವ ಕಾರ್ಯಸೂಚಿಯ ಲಕ್ಷಣವೇ ಆಗಿದೆ. ಸಂಘಪರಿವಾರದ ನೆರಳಲ್ಲೇ ಬೆಳೆದ ಅರಗ ಜ್ಞಾನೇಂದ್ರ ಗೃಹ ಸಚಿವರಾಗಿ, “ ಸಚಿವ ಹುದ್ದೆಗಿಂತಲೂ ಹಿಂದುತ್ವವೇ ಮುಖ್ಯ ” ಎಂದು ಈಗಾಗಲೇ ಘೋಷಿಸಿರುವ ಸುನೀಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ, ಮತ್ತಿಬ್ಬರು ಸಂಘನಿಷ್ಠರಾದ ಕೋಟಾ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಇಲಾಖೆ ಮತ್ತು ಬಿ ಸಿ ನಾಗೇಶ್ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯನ್ನು ವಹಿಸಿಕೊಳ್ಳುವ ಮೂಲಕ ಹಿಂದುತ್ವದ ಕಾರ್ಯಸೂಚಿಯನ್ನು ಜಾರಿಗೊಳಿಸುವ ಮುಂಚೂಣಿ ತಂಡವಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸೌಮ್ಯ ಹಿಂದುತ್ವವಾದಿ ಹಣೆಪಟ್ಟಿ ಹೊತ್ತ ಬೊಮ್ಮಾಯಿ ಅವರ ಸಂಪುಟದಲ್ಲಿ ಗೃಹ, ಕನ್ನಡ ಮತ್ತು ಸಂಸ್ಕೃತಿ, ಸಮಾಜ ಕಲ್ಯಾಣ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಈ ಪ್ರಮುಖ-ಪ್ರಭಾವಿ ವಲಯಗಳು ಸಂಘಪರಿವಾರದ ಪಾಲಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಮತಬ್ಯಾಂಕ್ ಧೃವೀಕರಣದ ದೃಷ್ಟಿಯಿಂದ ವೀರಶೈವ-ಲಿಂಗಾಯತರನ್ನು ಓಲೈಸಲು ಬೊಮ್ಮಾಯಿ ಒಂದು ಮುಖವಾಡವಾಗುತ್ತಾರೆ.

ಈ ಮಠೋದ್ಯಮಿಗಳ ಕಾರ್ಪೋರೇಟ್ ಹಿತಾಸಕ್ತಿಯನ್ನು ಸಂರಕ್ಷಿಸಲು ಸರ್ಕಾರವೇ ಬದ್ಧವಾಗಿದೆ. ಹಿಂದುತ್ವ ಕಾರ್ಯಸೂಚಿಯನ್ನು ಜಾರಿಗೊಳಿಸಲು ನಾಲ್ಕು ಪ್ರಮುಖ ಸಚಿವ ಹುದ್ದೆಗಳು ಸನ್ನದ್ಧವಾಗಿವೆ. ಕ್ರಮೇಣ ನಿಮಿತ್ತ ಮಾತ್ರವಾಗಿರುವ ಯಡಿಯೂರಪ್ಪ ಅಪ್ರಸ್ತುತವಾದರೂ ಅಚ್ಚರಿಯೇನಿಲ್ಲ. ಏಕೆಂದರೆ ಜಾತಿ ರಾಜಕಾರಣ ಮೂಲತಃ ಔದ್ಯಮಿಕ ಸಾಮ್ರಾಜ್ಯದ ಒಂದು ಅಂಶಿಕ ಭಾಗವಾಗಿಯೇ ರೂಪುಗೊಂಡಿದೆ.

ಎಂಟು ಲಿಂಗಾಯತ, ಏಳು ಒಕ್ಕಲಿಗ, ಏಳು ಒಬಿಸಿ ಸಚಿವರನ್ನೊಳಗೊಂಡ ಬೊಮ್ಮಾಯಿ ಸಂಪುಟವನ್ನು ಜಾತಿಯ ದೃಷ್ಟಿಕೋನದಿಂದ ನೋಡದೆ, ಈ ಸಚಿವರುಗಳ ಹಿಂದಿರುವ ಔದ್ಯಮಿಕ ಪ್ರಭಾವವನ್ನು ಗಮನಿಸಿದರೆ ಬಹುಶಃ ಈ ಸಮೀಕರಣವನ್ನು ಗ್ರಹಿಸುವುದು ಸುಲಭವಾಗುತ್ತದೆ. ಬೊಮ್ಮಾಯಿಯವರ ಅಲ್ಪಾಯುಷಿ ಸರ್ಕಾರದ ಮುಂದೆ ಬೃಹತ್ ಸವಾಲುಗಳೂ ಇವೆ.

ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ರಸ್ತೆ, ನೀರಾವರಿ, ವಿದ್ಯುತ್ ಮತ್ತಿತರ ಮೂಲ ಸೌಕರ್ಯಗಳಲ್ಲಿ ಕಾರ್ಪೋರೇಟ್ ವಲಯಕ್ಕೆ ಮುಕ್ತ ಪ್ರವೇಶ, ಭೂ ಸುಧಾರಣೆ ಕಾಯ್ದೆಯ ತ್ವರಿತ ಅನುಷ್ಟಾನ ಮತ್ತು ನೂತನ ಕಾರ್ಮಿಕ ಸಂಹಿತೆಗಳ ಪ್ರಾಮಾಣಿಕ ಜಾರಿ ಇವೆಲ್ಲವೂ ಬೊಮ್ಮಾಯಿ ಸರ್ಕಾರದ ಮುಂದಿರುವ ಹೆಜ್ಜೆಗಳು. ಹಾಗಾಗಿಯೇ ಈ ಸರ್ಕಾರದ ಪ್ರತಿಯೊಂದು ಹೆಜ್ಜೆಯ ಮೇಲೂ ಬಿಜೆಪಿ ಹೈಕಮಾಂಡಿನ ಕಣ್ಗಾವಲು ಶತಃಸಿದ್ಧ.

ಸೌಮ್ಯವಾದಿ ಮುಖವಾಡದ ಯಡಿಯೂರಪ್ಪ-ಸುರೇಶ್ ಕುಮಾರ್ ಕರ್ನಾಟಕದ ಹಿಂದುತ್ವ ರಾಜಕಾರಣದ ಭದ್ರಕೋಟೆಗೆ ಬುನಾದಿಯನ್ನು ನಿರ್ಮಿಸಿಯೇ ನಿರ್ಗಮಿಸಿದ್ದಾರೆ. ವೀರಶೈವ ಲಿಂಗಾಯತ ಮಠೋದ್ಯಮಿಗಳು. ಒಕ್ಕಲಿಗ ಔದ್ಯಮಿಕ ಹಿತಾಸಕ್ತಿಗಳು ಮತ್ತು ಒಬಿಸಿ ಕಾರ್ಪೋರೇಟ್ ಶಕ್ತಿಗಳು ಈ ರಾಜಕೀಯ ಮುನ್ನಡೆಗೆ ಒತ್ತಾಸೆಯಾಗಿ ನಿಂತಿವೆ. ಅಂಬೇಡ್ಕರರನ್ನು ಸಾಂವಿಧಾನಿಕ ಬಳಕೆಯ ವಸ್ತುವನ್ನಾಗಿ ಮಾಡಿಕೊಂಡಿರುವ ದಲಿತ ಶಾಸಕರು ಸಚಿವ ಹುದ್ದೆಗಳಿಂದ ವಂಚಿತರಾದರೂ, ಹಿಂದುತ್ವದ ಕಾಲಾಳುಗಳಾಗಿ ಮುಂದುವರೆಯಲು ಸಜ್ಜಾಗಿದ್ದಾರೆ. ಎನ್ ಮಹೇಶ್ ಇತ್ತೀಚಿನ ಸೇರ್ಪಡೆಯಷ್ಟೆ.

2024ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಭಾರತದ ಅರ್ಥವ್ಯವಸ್ಥೆಯನ್ನು ಕಾರ್ಪೋರೇಟ್ ವಲಯಕ್ಕೆ ಒಪ್ಪಿಸಿ, ಸಾಂಸ್ಕೃತಿಕ ವಲಯವನ್ನು ಸಂಘಪರಿವಾರಕ್ಕೆ ಅರ್ಪಿಸಿ, ಸಾಂವಿಧಾನಿಕ ಸಂಸ್ಥೆಗಳನ್ನು ಶಿಥಿಲಗೊಳಿಸುವ ಮೂಲಕ ನವ #ಆತ್ಮನಿರ್ಭರ ಭಾರತವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ.

ಹಿಂದುತ್ವ ರಾಜಕಾರಣವನ್ನು ಬಲಪಡಿಸಲು ದಕ್ಷಿಣ ಭಾರತದಲ್ಲಿ ಪ್ರಶಸ್ತ ಭೂಮಿಕೆಯನ್ನು ಕರ್ನಾಟಕದಲ್ಲಿ ನಿರ್ಮಿಸಲಾಗಿದ್ದು, ಈ ಸೌಧವನ್ನು ಪೂರ್ಣಗೊಳಿಸುವ ಜವಾಬ್ದಾರಿ ಬೊಮ್ಮಾಯಿ ಸರ್ಕಾರದ ಮೇಲಿದೆ. ನೂತನ ಸಚಿವ ಸಂಪುಟ ಈ ಬೆಳವಣಿಗೆಯ ದಿಕ್ಸೂಚಿಯಾಗಿದೆ.

ಕರ್ನಾಟಕದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಈ ಸೂಕ್ಷ್ಮಗಳನ್ನು ಸಮರ್ಪಕವಾಗಿ ಗ್ರಹಿಸಲು ವಿಫಲವಾಗಿದೆ. ಮಣ್ಣಿನ ಮಕ್ಕಳ ಪಕ್ಷ ಜೆಡಿಎಸ್ ಅಧಿಕಾರ ರಾಜಕಾರಣದ ಚೌಕಟ್ಟಿನಿಂದ ಹೊರಗೆ ಇಣುಕಿ ನೋಡಲೂ ಸಾಧ್ಯವಾಗದೆ ತನ್ನ ಸಾಮ್ರಾಜ್ಯವನ್ನು ಸಂರಕ್ಷಿಸುವಲ್ಲಿ ನಿರತವಾಗಿದೆ.

ಈ ಸಂದರ್ಭದಲ್ಲಿ ರಾಜ್ಯದ ಪ್ರಜಾಪ್ರಭುತ್ವದ ನೆಲೆಗಳನ್ನು, ಸಾಮಾಜಿಕ ನ್ಯಾಯದ ನೆಲೆಗಳನ್ನು ಮತ್ತು ಸಾಂವಿಧಾನಿಕ ಪ್ರಜಾತಂತ್ರದ ನಿಕ್ಷೇಪಗಳನ್ನು ಸಂರಕ್ಷಿಸುವ ಹೊಣೆ ಕರ್ನಾಟಕದ ದುಡಿಯುವ ಜನತೆಯ ಮೇಲಿದೆ, ಶೋಷಿತ-ದಮನಿತ ಸಮುದಾಯಗಳ ಮೇಲಿದೆ. ಈ ವರ್ಗದ ಮುಂದಿರುವ ಬೃಹತ್ ಸವಾಲನ್ನು ಎದುರಿಸಲು ಇರುವ ಏಕೈಕ ಮಾರ್ಗ ಸೈದ್ದಾಂತಿಕ ಸ್ಪಷ್ಟತೆಯೊಂದಿಗೆ ಸಂಘಟನಾತ್ಮಕ ವಿಘಟನೆಯನ್ನು ತಡೆಗಟ್ಟಿ ಐಕ್ಯತೆಯತ್ತ ಸಾಗುವುದೇ ಆಗಿದೆ. ಪ್ರಜಾತಂತ್ರ ಮತ್ತು ಸಂವಿಧಾನದ ರಕ್ಷಣೆ ನಮ್ಮ ಆದ್ಯತೆಯೂ ಆಗಬೇಕಿದೆ. ಈ ಸಂಕಲ್ಪದೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

Published

on

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

Published

on

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.

ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.

ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ ವಸತಿ ಯೋಜನೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು 15 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending