ಭಾವ ಭೈರಾಗಿ
ಕವಿತೆ | ಯುಗಾದಿ

- ಡಾ.ಸತೀಶಕುಮಾರ ಹೊಸಮನಿ,ನಿರ್ದೇಶಕರು,ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು
ಬಾಳಿನಲಿ ಯುಗಾದಿ ಬೇಕು
ಕತ್ತಲೆಯನು ಕಳೆಯಬೇಕು
ಬೆಳದಿಂಗಳು ಮೂಡಬೇಕು
ರಾತ್ರಿ ಹಗಲು ಆಗಬೇಕು
ಎಲ್ಲೆಲ್ಲಿಯೂ ಬೆಳಕು ಚೆಲ್ಲಿ
ಸಂತೋಷದಿ ನಗೆಯ ಚೆಲ್ಲಿ
ಹಣತೆ ಹಚ್ಚಿ ಬೆಳಗೋಣ
ಬೆಳಕಿನಲಿ ಬಾಳೋಣ
ಕಷ್ಟವೆಂದು ಬಾರದಿರಲಿ
ನಮ್ಮ ಬಾಳ ಪಯಣದಿ
ಜಗವೆಲ್ಲವು ಬೆಳಗುತಿರಲಿ
ನಿತ್ಯ ನಮ್ಮ ನಯನದಿ
ಎಲ್ಲಿ ಬೆಳಕು ಅಲ್ಲಿ ಯುಗಾದಿ
ಅಲ್ಲಿ ಸುಖದ ಸಾಗರ
ಎಲ್ಲಿ ದೀಪ ಅಲ್ಲಿ ಬೆಳಕು
ಬದುಕು ಸುಖದ ಆಗರ
ಬೆಳಕ ಬಿತ್ತಿ ಬೆಳಕ ಬೆಳೆದು
ಬೆಳಕು ನಮ್ಮ ಚೇತನ
ಬೆಳಕಿಗೆ ಬದುಕು ಸವೆಸಿ
ಯುಗಾದಿ ನಿತ್ಯ ನೂತನ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಮೌನಾಮೃತ

~ ತಾರಾ ಸಂತೋಷ್ ಮೇರವಾಡೆ (ಕಾವ್ಯಾಗ್ನಿ), ಗಂಗಾವತಿ
ಅದೆಷ್ಟೋ ಬಗೆಹರಿಯದ
ಸಮಸ್ಯೆಗಳಿಗೆ
ಮೌನಾಮೃತವ
ಸಿಂಪಡಿಸಿ ಸುಮ್ಮನಾಗಿಬಿಡು.
ಅರ್ಥವಿರದ
ವ್ಯರ್ಥ ವಾಗ್ವಾದಗಳಿಗೆ
ಮೌನದ ಪೂರ್ಣವಿರಾಮವನಿಟ್ಟು
ಹೊರಟುಬಿಡು.
ಮಾತಾಡಿ
ಕಿರುಚಾಡಿ
ರಮಟರಾಡಿ ಮಾಡುವ ಬದಲು
ಒಂದರೆಗಳಿಗೆ
ಮೌನದ ಮೊರೆಹೋಗಿ ನೋಡು.
ಅದೆಷ್ಟೋ ಮುಗಿಯದ
ಮನದ ತೊಳಲಾಟಗಳಿಗೆ
ಮೌನವೆಂಬ ಉತ್ತರವುಂಟು
ಅದನ್ನಪ್ಪಿ ಮನಕ್ಕೊಂದಿಷ್ಟು
ಶಾಂತಿಯ ನೀಡಿ ನಕ್ಕುಬಿಡು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅವ ಸುಡುತ್ತಾನೆ

~ ಶೃತಿ ಮಧುಸೂದನ (ರುದ್ರಾಗ್ನಿ)
ಅವ ಸುಡುತ್ತಾನೆ…
ಅವ ಸಂಪ್ರದಾದಯವ
ಸೆರಗ ನನಗುಡಿಸಿ
ನಗುತ್ತಾನೆ…
ಅವ ಅತ್ತಿಂದತ್ತ
ಅಲೆದಾಡುವ
ಮುಂಗುರುಳ
ಮುದ್ದಿಸಿ ಮಡಿ
ಮಡಿಕೆಯ ನಿವಾಳಿಸಿ
ನಿಟ್ಟುಸಿರ ಬಿಟ್ಟ
ಬಸವನಂತೆ…
ನೆತ್ತಿ ಮೇಲಣ
ಮದ್ದೇರಿ ಮೆರೆವ
ಮುದ್ದಣನ
ಕರಿಯಂತೆ…
ಕಣ್ಣು ಕುಕ್ಕುವ
ಕೊರತೆಗಳ
ಬದಿಗಿಟ್ಟು
ಬೈತಲೆಯ
ಬಿಂದಿಯ
ಬೆವರೊಳಗಣ
ಕಾವ್ಯ ಕುಂಕುಮದಂತೆ…
ಅವ… ಅವ ಕವಿ
ಎಂಬುವ ಕಾಡಿಗೆಗೆ
ತನ್ನ ಕಪ್ಪೆಂದುಕೊಂಡು
ನನ್ನಿಂದ ದೂರ ಸರಿದವ…
ಹಾಲ್ಬೆಳಕ
ಹಠವಾದಿ
ಹೆಣ್ಣಿನ ಮುಂದೆ
ಹಮ್ಮು ಬಿಟ್ಟು
ಹಿಂದಿರುಗುವ
ಇರಾದೆ ಇಲ್ಲದೇ
ನಡೆದು ಹೋದವ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಅನ್ನಕ್ಕೆ ಯಾವ ಧರ್ಮ..? ಮತ್ತು ಇತರೆ ಕವಿತೆಗಳು

~ವಿಜಯ್ ನವಿಲೇಹಾಳು
ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ
ಮಾರಮ್ಮನ ಜಾತ್ರೆಯ ಪ್ರಸಾದ,
ಮೊಹರಮ್ ನ ಚೋಂಗಿ ಕೂಡಿ ಉಂಡು
ಅಡುಗೆ ರುಚಿಯೂ; ಮಾಯಾ ದೀವಿಗೆಯನು
ತಿಕ್ಕಿದಾಗ ಬರುವ ಜೀನಿಯಂತೆ ಅದ್ಭುತ ವಾಗಿತ್ತು
ಪಂಕ್ತಿಯಲ್ಲಿ ಹಿಂದುವೋ, ಮುಸಲ್ಮಾನನೋ, ಕ್ರಿಶ್ಚಿಯನ್ನನೋ, ಯಾರಾದರೇನು? ಅನ್ನಕ್ಕೆ ಯಾವ ಧರ್ಮ ?
ಈಗ ಅಲ್ಲೆಲ್ಲೊ ಯಾರೋ ಕೆಲವರು ಜಾತಿ ಧರ್ಮದ ವಿಷವನು ಹನಿ ಹನಿ ಉಣಬಡಿಸಿ ಊರಿಗೂರಿಗೆ ದ್ವೇಷದ ನಶೆಯೇರಿಸಿದ್ದಾರೆ
ಈಗೀಗ ಅವರ ಹಸಿವು ನೀಗುತ್ತಿರುವುದು ಕ್ರೌರ್ಯದ ಕತ್ತಿಯಿಂದ ಜಿನಿಗುತ್ತಿರುವ ರಕ್ತದಿಂದ
ನಾನೆಂದು ಕವಿತೆ ಬರೆದವನಲ್ಲ ಎದೆಯೊಳಗಿನ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ.
ಇತರೆ ಕವಿತೆಗಳು
೧..
ಅವಳ ಮಾತುಗಳು ಅಲ್ಪ ಪ್ರಾಣಗಳಂತೆ
ಕಿವಿಗಳಿಗೆ ನಾಟುತ್ತವೆ
ಅವಳ ಮೌನ ಮಹಾ ಪ್ರಾಣಗಳಂತೆ
ಸೀದ ಹೃದಯಕ್ಕೆ ಅಪ್ಪಳಿಸುತ್ತವೆ
ಅವಳ ಮಾತು ಮತ್ತು ಮೌನದ ಕೊನೆಯಲಿ
ನಾನು ಅನುನಾಸಿಕದಂತೆ.
೨..
ಮಡಿವಂತಿಕೆಯೇ ಶ್ರೇಷ್ಟ ಮೈಲಿಗೆಯು ಅನಿಷ್ಟ ಅಂದುಕೊಂಡಿದ್ದರೆ ಊರಾಚೆಗಿನ ಕಲ್ಲು ಬಂಡೆ ವಿಗ್ರಹವಾಗುತ್ತಿರಲಿಲ್ಲ.
೩..
ಅವಳು ಅಣು ಅಣುವಾಗಿ ಹೃದಯದ
ಆಳವನು ಸೇರಿಕೊಂಡು ಬೇರು ಬಿಟ್ಟಳು
ಅವಳ ಒಲವಿನ ಆಕ್ರಮಣಕೆ
ನಾ ಮರುಮಾತುಗಳಾಡದೆ ಹೆಪ್ಪುಗಟ್ಟಿದೆ. (ಕವಿ:ವಿಜಯ್ ನವಿಲೇಹಾಳು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಕ್ರೀಡಾ ಸಾಮಾಗ್ರಿಗಳ ಸರಬರಾಜಿಗೆ ಯುವ ಸಂಘಗಳಿಂದ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಅವಕಾಶ : ಅರ್ಜಿ ಆಹ್ವಾನ
-
ದಿನದ ಸುದ್ದಿ24 hours ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ24 hours ago
ಪಿಹೆಚ್ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ24 hours ago
ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್