ಲೈಫ್ ಸ್ಟೈಲ್
ಕ್ಯಾನ್ಸರ್ ಕಾಯಿಲೆ ಬಗ್ಗೆ ನೀವು ತಿಳಿಯಲೇ ಬೇಕಾದದ್ದು…!
ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಕುರಿತು ಈ ಹಿಂದೆಯೇ ಒಂದು ಅಂಕಣದ ಮೂಲಕ ಪರಿಚಯವಾಗಿದೆ ಅಂದುಕೊಳ್ಳುತ್ತೇನೆ. ಆ ಅಸಾಂಕ್ರಾಮಿಕ ಪ್ರಮುಖ ರೋಗಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಆದರೆ ವಿಪರ್ಯಾಸದ ಸಂಗತಿಯೆಂದರೆ, ಕ್ಯಾನ್ಸರ್, ಒಬ್ಬರಿಂದೊಬ್ಬರಿಗೆ ಹರಡದ ರೋಗವಾದರೂ ಪೀಡಿತ ವ್ಯಕ್ತಿಯ ದೇಹದೊಳಗೆಯೇ ಒಂದು ಅಂಗದಿಂದ ಇನ್ನೊಂದು ಅಂಗಕ್ಕೆ ಹರಡಬಹುದಾದ ರೋಗವಾಗಿದೆ. ಎಲ್ಲಾ ವಯಸ್ಸಿನವರನ್ನೂ ಆಕ್ರಮಣ ಮಾಡಬಲ್ಲದ ಈ ಖಾಯಿಲೆ, ಹೆಚ್ಚಾಗಿ ವಯೋವೃದ್ಧರಲ್ಲಿ ಕಾಣಸಿಗುವುದುಂಟು. ಇದರಲ್ಲಿ ಯಾವುದಾದರೂ ಒಂದು ಜೀವಕೋಶದ ಅನಿಯಂತ್ರಿತ ಬೆಳವಣಿಗೆ ಉಂಟಾಗಿ ಆ ನಿರ್ಧಿಷ್ಟ ಅಂಗದ ಕಾರ್ಯಕ್ಷಮತೆ ಕ್ಷೀಣಿಸುತ್ತದೆ.
ಕ್ಯಾನ್ಸರ್ ಗೆ ಕಾರಣಗಳು
- ಶೇ.90-95 ರಷ್ಟು ಕ್ಯಾನ್ಸರ್‍ಗಳು ಸ್ವಾಭಾವಿಕವಾಗಿ ಅಂದರೆ ನಮ್ಮ ಜೀವನಶೈಲಿಯಿಂದ ಉಂಟಾಗುತ್ತವೆ. ಅದರಲ್ಲಿ ಧೂಮಪಾನ, ಮದ್ಯಪಾನ, ಮಾನಸಿಕ ಒತ್ತಡ, ಸ್ಥಾವರತೆ, ವಿಕಿರಣಗಳು, ಬೊಜ್ಜು ಮತ್ತು ಮಾಲಿನ್ಯಗಳು ಪ್ರಮುಖವಾದವು.
- ಉಳಿದ ಶೇ.5-10 ರಷ್ಟು ಜೀವಕೋಶಗಳೊಳಗಿನ ಕ್ರೋಮೋಸೋಮುಗಳ ವ್ಯತ್ಯಾಸದಿಂದ ಅನುವಂಶಿಕವಾಗಿ ಉಂಟಾಗುತ್ತವೆ.
- ಕ್ರೋಮೋಸೋಮುಗಳ ವ್ಯತ್ಯಾಸಗಳು ನಮ್ಮ ಜೀವನದ ಯಾವ ಒಂದು ಸಮಯದಲ್ಲಾದರೂ ಉಂಟಾಗಬಹುದು. ಮುಂದೆ ಅದೇ ಮುಂದಿನ ಪೀಳಿಗೆಗಳಿಗೂ ವರ್ಗಾಯಿಸಲ್ಪಡುತ್ತದೆ. ಆ ನಿರ್ಧಿಷ್ಟ ಕ್ರೋಮೋಸೋಮು ಯಾವ ಪೀಳಿಗೆಯವರೆಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುತ್ತದೋ ಅಲ್ಲಿಯವರೆಗೆ ಆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.
ರೋಗದ ಲಕ್ಷಣಗಳು
- ಯಾವ ಅಂಗ ಕ್ಯಾನ್ಸರ್‍ಪೀಡಿತವಾಗಿರುತ್ತದೋ ಆಯಾ ಅಂಗದ ಕಾರ್ಯಕ್ಷಮತೆಗಳು ವ್ಯತ್ಯಾಸಗೊಂಡು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
- ಸ್ಥಳೀಯ ಲಕ್ಷಣಗಳು: ಅಸಹಜ ಗೆಡ್ಡೆ, ಬಾವು, ಆ ನಿರ್ಧಿಷ್ಟ ಭಾಗದ ನೋವು ಮತ್ತು ರಕ್ತಸ್ರಾವ ಉಂಟಾಗುತ್ತದೆ.
- ಪಸರಿಸುವಿಕೆಯ ಲಕ್ಷಣಗಳು: ಪಸರಿಸುವಿಕೆ ಅಂದರೆ, ಪೀಡಿತವಾದ ಒಂದು ಅಂಗದಿಂದ ಇನ್ನೊಂದು ಅಂಗಕ್ಕೆ ರಕ್ತ ಅಥವಾ ದುಗ್ಧರಸ( Lymphatic fluid) ದ ಮೂಲಕ ಕ್ಯಾನ್ಸರ್ ಹರಡುವುದು. ಇದರಲ್ಲೂ ಕೂಡ ಯಾವ ಅಂಗಕ್ಕೆ ರೋಗ ಹರಡಲ್ಪಡುತ್ತದೋ ಆ ಅಂಗದ ಕಾರ್ಯದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಆದರೆ ಈ ಲಕ್ಷಣಗಳು ತುಂಬಾ ತಡವಾಗಿ ಕಾಣಿಸಿಕೊಳ್ಳುತ್ತವೆ.
ಕ್ರಮಬದ್ಧ ಲಕ್ಷಣಗಳು
ತೂಕ ಕಡಿಮೆಯಾಗುವುದು, ರಕ್ತಹೀನತೆ, ನಿಶ್ಯಕ್ತಿ, ರಕ್ತಹೆಪ್ಪುಗಟ್ಟುವುದು, ಅತಿಯಾದ ಬೆವರುವಿಕೆ, ಹಸಿವು ಕಡಿಮೆಯಾಗುವುದು ಮುಂತಾದವು.
ರೋಗನಿರ್ಣಯ
- ರಕ್ತದ ಕ್ಯಾನ್ಸರ್‍ಗಳಿಗೆ ರಕ್ತದ ಮಾದರಿಯಿಂದಲೇ ರೋಗಲಕ್ಷಣಶಾಸ್ತ್ರ ವಿಭಾಗದ ವೈದ್ಯರೇ ರೋಗನಿರ್ಣಯ ಮಾಡುತ್ತಾರೆ
- ಹೊಟ್ಟೆಯ ಯಾವುದೇ ಭಾಗದ ಕ್ಯಾನ್ಸರ್‍ಗೆ ಅಲ್ಟ್ರಾಸೌಂಡ್, ಸಿ.ಟಿ.ಸ್ಕ್ಯಾನ್, ಎಮ್.ಆರ್.ಐ.ನಂತಹ ಸ್ಕ್ಯಾನಿಂಗ್ ಗಳು ಅವಶ್ಯಕವಾಗುತ್ತವೆ
- ತಲೆ ಮತ್ತು ಮಿದುಳುನೊಳಗಿನ ಕ್ಯಾನ್ಸರ್‍ಗಳಿಗೆ ಸಿ.ಟಿ. ಅಥವಾ ಎಮ್.ಆರ್.ಐ. ಸ್ಕ್ಯಾನಿಂಗ್ ಗಳು ಬೇಕಾಗುತ್ತವೆ
- ಇನ್ನು ಎಲುಬು ಕ್ಯಾನ್ಸರ್‍ಗೆ ಎಕ್ಸ್ ರೇ, ಎಲಬಿನ ಮಾದರಿ( Bone biopsy ), ಎಮ್.ಆರ್.ಐ. ಬೇಕಾಗುತ್ತವೆ
- ಚರ್ಮ , ಮಾಂಸಖಂಡಗಳು, ಥೈರಾಯ್ಡ್, ಸ್ತನ ಹಾಗೂ ಉಳಿದೆಲ್ಲಾ ಕ್ಯಾನ್ಸರ್ ಗಳಿಗೆ ಬಯಾಪ್ಸಿ, ಅಲ್ಟ್ರಾಸೌಂಡ್, ಡಾಪ್ಲರ್, ಎಮ್.ಆರ್.ಐ.ನಂತಹ ಸ್ಕ್ಯಾನಿಂಗಳು ಬೇಕಾಗುತ್ತವೆ
ಚಿಕಿತ್ಸೆ
- ಚಿಕಿತ್ಸೆಯ ಉದ್ದೇಶದಿಂದ ಕ್ಯಾನ್ಸರ್ ರೋಗವನ್ನು ವಿವಿಧ ಹಂತಗಳಾಗಿ ವಿಂಗಡಿಸಲಾಗುತ್ತದೆ. ಹಂತ 1(ಆರಂಭಿಕ ಹಂತ) ರಿಂದ ಶುರುವಾಗಿ ವಿವಿಧ ಕ್ಯಾನ್ಸರ್‍ಗಳು ಹಂತ 4 ಮತ್ತು 5(ಅಚಿತಿಮ ಹಂತ) ರವರೆಗೆ ವಿಂಗಡಿಸಲಾಗುತ್ತದೆ.
- ಹಂತ 1 ಮತ್ತು 2 ರ ಕ್ಯಾನ್ಸರ್‍ಗಳನ್ನು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಲಾಗುತ್ತದೆ. ಆದರೆ ಕೆಲವೊಮ್ಮೆ ಕೀಮೊಥೆರಪಿ ಕೂಡ ಬೇಕಾಗುತ್ತದೆ.
- ಹಂತ 3, 4 ಮತ್ತು 5 ರ ಕ್ಯಾನ್ಸರ್‍ಗಳು ಕೀಮೊಥೆರಪಿ ಅಥವಾ ರೇಡಿಯೊಥೆರಪಿ ಅಥವಾ ಈ ಎರಡೂ ಚಿಕಿತ್ಸೆಗಳೂ ಬೇಕಾಗುತ್ತವೆ. ಆದರೆ 3 ರ ಹಂತವು 4 ಮತ್ತು 5 ಕ್ಕಿಂತ ಉತ್ತಮ ರೋಗಚಿಕಿತ್ಸಾ ಫಲಗಳನ್ನು ಹೊಂದಿದೆ.
- ಕೀಮೊಥೆರಪಿಯಲ್ಲಿ ವಿವಿಧ ಧಾತುಗಳಿಂದ, ಅಥವಾ ಆಂಟಿಬಾಡೀಸ್‍ಗಳಿಂದ ತಯಾರಿಸಲ್ಪಟ್ಟ ಮಾತ್ರೆಗಳಿಂದ ಚಿಕಿತ್ಸೆ ನೀಡಲಾಗುತ್ತದೆ.
- ರೇಡಿಯೊಥೆರಪಿಯಲ್ಲಿ ವಿವಿಧ ಚಿಕಿತ್ಸಾ ವಿಕಿರಣಗಳನ್ನು ಬಳಸಿ, ಆ ನಿರ್ಧಿಷ್ಟ ಕ್ಯಾನ್ಸರ್‍ಗೊಳಪಟ್ಟ ಅಂಗಕ್ಕೆ ಗುರಿಯಾಗಿಸಿ ಚಿಕಿತ್ಸೆ ನೀಡಲಾಗುತ್ತದೆ.
ರೋಗನಿಯಂತ್ರಣ
- ಧೂಮಪಾನ, ಮದ್ಯಪಾನದಿಂದ ದೂರವಿರುವುದು.
- ಸರಿಯಾದ ಸಮತೋಲನ ಆಹಾರ ಕ್ರಮ
- ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು
- ದಿನನಿತ್ಯ ದೈಹಿಕ ವ್ಯಾಯಾಮ
- ವಾಯುಮಾಲಿನ್ಯ, ಲೈಂಗಿಕ ಸೋಂಕುಗಳಿಂದ ದೂರವಿರುವುದು
- ಈಗಾಗಲೇ ಕ್ಯಾನ್ಸರ್‍ನ ಅಪಾಯದಲ್ಲಿರುವವರು ಕಾಲಕ್ಕೆ ಸರಿಯಾಗಿ ವೈದ್ಯರ ಸಮಾಲೋಚನೆ ಪಡೆಯುವುದು
- ಆಧುನಿಕವಾಗಿ ಕೀಮೊನಿರ್ಮೂಲನಾ ನಿಯಂತ್ರಣವು ಅನೇಕ ಮುನ್ಸೂಚನೆಯಲ್ಲಿರುವವರನ್ನು ಆನಿರ್ಧಿಷ್ಟ ಕ್ಯಾನ್ಸರ್ ತಗಲದಂತೆ ಮಾಡುತ್ತದೆ
- ಹೆಪಟಿಟಿಸ್ ಬಿ, ಹೆಚ್‍ಪಿವಿ, ನಂತಹ ಕೆಲವು ಲಸಿಕೆಗಳಿಂದ ಆ ನಿರ್ಧಿಷ್ಟ ಸೋಂಕಿನಿಂದ ಉಂಟಾಗುವ ಕ್ಯಾನ್ಸರ್‍ಗಳನ್ನು ತಡೆಯಬಹುದು.
(ಲೇಖಕರು – ಡಾ. ಕೆ. ಬಿ. ಸಂತೋಷ್
santhosh.achar15892@gmail.com)

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ದಿನದ ಸುದ್ದಿ
ಗೃಹಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್‌ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಗೃಹ ಬಳಕೆ ಎಲ್‌ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.
ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243




