Connect with us

ಬಹಿರಂಗ

ಬದಲಾಗುತ್ತಿರುವ ಭಾರತದಲ್ಲಿ ಮಾಧ್ಯಮವೆಂಬೋ ಮಾಂತ್ರಿಕ

Published

on

  • ನಾ ದಿವಾಕರ

ಭಾರತ ಬದಲಾಗುತ್ತಿದೆ. ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಮಾರುಕಟ್ಟೆ ಬಂಡವಾಳದ ಸುಳಿಯಲ್ಲಿ ಸಿಲುಕಿ ಉನ್ಮತ್ತ ಸ್ಥಿತಿ ತಲುಪಿರುವ ಭಾರತದ ಒಂದು ವರ್ಗ ಈ ಬದಲಾದ ಭಾರತದ ರಾಯಭಾರಿಯಂತೆ ಕಾಣುತ್ತಿದೆ. ಕೋವಿದ್ 19 ಸಂದರ್ಭದಲ್ಲಿ ಬದಲಾಗುತ್ತಿರುವ ಭಾರತದ ವಿಭಿನ್ನ ಮಜಲುಗಳು ಸಾರ್ವಜನಿಕ ಬದುಕಿನಲ್ಲಿ ಹಂತಹಂತವಾಗಿ ತೆರೆದುಕೊಳ್ಳುತ್ತಿವೆ. 2019ರ ಉತ್ತರಾರ್ಧದಲ್ಲಿ ದೇಶಾದ್ಯಂತ ಸೃಷ್ಟಿಯಾದ ಸಾಮಾಜಿಕ ಪ್ರಕ್ಷುಬ್ಧತೆ, ಸಾಂಸ್ಕೃತಿಕ ಉನ್ಮಾದ ಮತ್ತು ರಾಜಕೀಯ ಪಲ್ಲಟಗಳ ನಡುವೆಯೇ ಭಾರತ ಕೊರೋನಾ ದಾಳಿಗೆ ಸಿಲುಕಿ ದಿಕ್ಕುಗಾಣದ ದೆಸೆಯಲ್ಲಿ ನಿಂತಿದೆ.

ಭಾರತದ ಮಟ್ಟಿಗೆ ಹೇಳುವುದಾದರೆ ಕೊರೋನಾ ಸತ್ಯ ದರ್ಶನದ ಹೆಬ್ಬಾಗಿಲಿನಂತೆ ಕಾಣುತ್ತಿದೆ. ಆಳುವ ವರ್ಗಗಳ ದೃಷ್ಟಿಯಲ್ಲಿ ನಿಕೃಷ್ಟರಾಗಿದ್ದ ಬೃಹತ್ ಜನಸಮುದಾಯ ಇಂದು ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು, ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಎದ್ದು ನಿಂತಿದೆ.

ಈ ಜನಸಮುದಾಯಗಳ ಒಳಗಿನಿಂದಲೇ “ ಅನ್ಯರನ್ನು ” ಗುರುತಿಸಿ ಸ್ವಚ್ಚ ಭಾರತವನ್ನು ನಿರ್ಮಿಸುವ ಕನಸು ಕಾಣುತ್ತಿದ್ದ ಬೌದ್ಧಿಕ-ರಾಜಕೀಯ ವಲಯಕ್ಕೆ ತಮ್ಮ ಆಂತರ್ಯವನ್ನು ಸ್ವಚ್ಚಗೊಳಿಸಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ.

ಕೊರೋನಾ ಸಮಾಜದ ಎಲ್ಲ ವರ್ಗಗಳನ್ನೂ ಕಾಡುತ್ತಿದೆ ಆದರೆ ಕೊರೋನಾದಿಂದ ಉದ್ಭವಿಸಿರುವ ಸಾವು ಬದುಕಿನ ಸಂಘರ್ಷ ಕೆಲವೇ ವರ್ಗಗಳನ್ನು ಮುನ್ನೆಲೆಗೆ ತಂದಿದೆ. ಈ ಸಂಘರ್ಷದ ನೆಲೆಯಲ್ಲೇ ಭಾರತೀಯ ಸಮಾಜದ ಪ್ರಜ್ಞಾವಂತ ಮನಸುಗಳು ಪ್ರಬುದ್ಧ ಭಾರತದ ಕನಸು ಕಾಣಬೇಕಿದೆ.

ನಾವು ಕೊರೋನಾ ವಿರುದ್ಧ ಯುದ್ಧ ಮಾಡುತ್ತಿದ್ದೇವೆ ಎನ್ನುವ ಒಂದು ಚಿಂತನೆ ನಮ್ಮ ಸೂಕ್ಷ್ಮತೆಯನ್ನು ಮತ್ತಷ್ಟು ಹರಿತಗೊಳಿಸಬೇಕಿತ್ತು. ಆದರೆ ಈ ಯುದ್ಧ ಎನ್ನುವ ಪದ ಅಕ್ಷರಶಃ ರಣರಂಗದ ಪರಿಭಾಷೆಯಲ್ಲಿ ವ್ಯಕ್ತವಾಗುತ್ತಿದ್ದು ಶತ್ರು-ಮಿತ್ರರ ಶೋಧಕ್ಕೆ ಕಾರಣವಾಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ.

ಇದರ ಒಂದು ಅಕ್ಷರತುಣುಕು ಪ್ರಜಾವಾಣಿ ಪತ್ರಿಕೆಯ ಸಂದರ್ಶನವೊಂದರಲ್ಲಿ ಕಂಡುಬರುತ್ತದೆ. ಸಂಘಪರಿವಾರದ ವಕ್ತಾರ ದತ್ತಾತ್ರೇಯ ಹೊಸಬಾಳೆಯವರೊಡನೆ ಪತ್ರಿಕೆ ನಡೆಸಿದ ಸಂದರ್ಶನವನ್ನು ನೋಡಿದಾಗ ಭಾರತದ ಸಾಂಸ್ಕೃತಿಕ ರಾಜಕಾರಣ ಒಂದು ವೈರಾಣುವನ್ನೂ ಆವಾಹನೆ ಮಾಡುವಷ್ಟು ಬಲಿಷ್ಟವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಸಾಂಸ್ಕೃತಿಕ ರಾಜಕಾರಣದ ಪರಿಭಾಷೆಗೆ ನಾವು ಒಗ್ಗಿಹೋಗಿದ್ದೇವೆ. ಸದಾ ರಣರಂಗದ ಗುಂಗಿನಲ್ಲೇ ಇರುವ ಉನ್ಮತ್ತ ಮನಸುಗಳು ಇಲ್ಲದ ಶತ್ರುಗಳನ್ನು ಹುಡುಕುತ್ತಲೇ ತಮ್ಮೊಳಗಿನ ವೈರತ್ವದ ಭಾವನೆಯನ್ನು ಮತಧಾರ್ಮಿಕ ಕುಲುಮೆಗಳಲ್ಲಿ ಬೇಯಿಸುತ್ತಿರುತ್ತವೆ. ಕಳೆದ ಮೂರು ದಶಕಗಳಲ್ಲಿ ಭಾರತ ಕಂಡಿರುವ ದುರಂತ ಇದು.

ಈ ದುರಂತದ ಸೋದರ ಸಂಬಂಧಿಯಾಗಿ ಹಣಕಾಸು ಬಂಡವಾಳ ವ್ಯವಸ್ಥೆ ಅಗೋಚರ ಪ್ರಪಂಚವೊಂದನ್ನು ಸೃಷ್ಟಿಸಿಬಿಟ್ಟಿದೆ. ಕೊರೋನಾ ಕೃಪೆಯಿಂದ ಈ ಪ್ರಪಂಚ ಇಂದು ನಮ್ಮ ಕಣ್ಣೆದುರು ನಿಂತಿದೆ. ದೇಶದ ಬಹುಸಂಖ್ಯಾತ ಪ್ರಜೆಗಳನ್ನು ಪ್ರತಿನಿಧಿಸುವ ಈ ಪ್ರಪಂಚ ನಮ್ಮ ಮುಂದಿನ ದಿನಗಳಲ್ಲಿ ನಿರ್ಣಾಯಕ ನೆಲೆ ತಲುಪಲಿದೆ.

ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ ದತ್ತಾತ್ರೇಯ ಹೊಸಬಾಳೆಯವರ ಮೂರು ಅಭಿಪ್ರಾಯಗಳು ಪ್ರಜಾತಂತ್ರದ ಪ್ರಜ್ಞೆಗೆ ಘಾಸಿ ಉಂಟುಮಾಡುತ್ತವೆ. 9/11ರ ಸಂದರ್ಭದಲ್ಲಿ ಅಮೆರಿಕದ ವಿರೋಧ ಪಕ್ಷಗಳು ಸರ್ಕಾರದ ಬೆನ್ನಿಗೆ ನಿಂತಿದ್ದವು, 1971ರ ಯುದ್ಧದ ಸಂದರ್ಭದಲ್ಲಿ ವಾಜಪೇಯಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು.

ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಭಾರತದಲ್ಲಿ ಮಿಲಿಟರಿಯನ್ನು ಬಳಸುವ ಪರಿಸ್ಥಿತಿ ಎದುರಾಗಲಿಲ್ಲ ಎಂದು ಜನರನ್ನು ಅಭಿನಂದಿಸಿದ್ದಾರೆ. ಈ ಮೂರು ವಾಕ್ಯಗಳಲ್ಲೂ ಕೊರೋನಾ ರಣಕೇಕೆ(ಸುದ್ದಿಮನೆಯ ಪರಿಭಾಷೆಯಲ್ಲಿ) ಮತ್ತು ಸಾಂಸ್ಕೃತಿಕ ರಾಜಕಾರಣದ ರಣೋತ್ಸಾಹದ ಛಾಯೆ ಕಂಡುಬರುತ್ತದೆ.

ಸಂದರ್ಶನ ನೀಡಿದ ವ್ಯಕ್ತಿ ಯಾರು ಎನ್ನುವುದಕ್ಕಿಂತಲೂ, ಒಂದು ಸಂಘಟನೆಯ ಸದಸ್ಯರಿಗೆ ಸಮಸ್ತ ಭಾರತೀಯರ ರಾಯಭಾರಿಯಾಗಿ ಮಾತನಾಡುವ ಅವಕಾಶ ನೀಡಿದ ಮಾಧ್ಯಮದ ನಡೆ ಇಲ್ಲಿ ಪ್ರಶ್ನಾರ್ಹವಾಗುತ್ತದೆ. ದತ್ತಾತ್ರೇಯ ಅವರ ಅಭಿಪ್ರಾಯಗಳು ವೈಯಕ್ತಿಕ-ತಾತ್ವಿಕ ಮತ್ತು ಸಂಘಟನಾತ್ಮಕ ನೆಲೆಯಲ್ಲಿ ವ್ಯಕ್ತವಾಗುವಂತಹುದು.

ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸೋಣ. ಪತ್ರಿಕೆಯ ಸಂಪಾದಕ ಮಂಡಲಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಮನ್ನಿಸೋಣ. ಆದರೆ ರಾಜ್ಯದ ಪ್ರತಿಷ್ಠಿತ ಸುದ್ದಿ ಪತ್ರಿಕೆಯೊಂದರ ಮುಖಪುಟದಲ್ಲಿ ಇಂತಹ ಅಭಿಪ್ರಾಯಗಳು ವಿಜೃಂಭಿಸಿದಾಗ ಪ್ರಜ್ಞಾವಂತ ಮನಸುಗಳಿಗೆ ಆತಂಕ ಉಂಟಾಗುವುದು ಸಹಜ. ಇತರ ಯಾವುದೇ ಪತ್ರಿಕೆಯಲ್ಲಿ ಈ ಸಂದರ್ಶನ ಪ್ರಕಟವಾಗಿದ್ದರೂ ನಿರ್ಲಕ್ಷಿಸಬಹುದಿತ್ತೇನೋ.

ಇರಲಿ, ಇಲ್ಲಿ ಸಮಸ್ಯೆ ಇರುವುದು ಒಂದು ಪತ್ರಿಕೆ ಅಥವಾ ಒಬ್ಬ ವ್ಯಕ್ತಿಯಲ್ಲಿ ಅಲ್ಲ. ಭಾರತದ ಪ್ರಜಾತಂತ್ರ ವ್ಯವಸ್ಥೆ ಎದುರಿಸುತ್ತಿರುವ ಸವಾಲು ಇಂತಹ ಸೂಕ್ಷ್ಮ ಸಂಗತಿಗಳನ್ನೂ ನಿಷ್ಕರ್ಷೆಗೊಡ್ಡುವ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ನಾವು ಇಂದು ಮಾಧ್ಯಮ ಎಂದು ಭಾವಿಸುವ ವಿದ್ಯುನ್ಮಾನ ಸುದ್ದಿಮನೆಗಳು, ಮುದ್ರಣ ಲೋಕದ ಸುದ್ದಿ ಪತ್ರಿಕೆಗಳು ಮತ್ತು ಸಾಮಾಜಿಕ ತಾಣಗಳು ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳು ಎನ್ನುವ ಭ್ರಮೆ ನಮ್ಮಿಂದ ಇನ್ನೂ ದೂರವಾಗದೆ ಉಳಿದಿರುವುದೇ ಅಚ್ಚರಿಯ ಸಂಗತಿ. ಬಹುಶಃ ನಮ್ಮ ಸಮಾಜದಲ್ಲಿ ತಾಳ್ಮೆ, ಸಹನೆ ತುಸು ಹೆಚ್ಚಾಗಿಯೇ ಇದೆ ಎನ್ನುವುದನ್ನು ಇದು ನಿರೂಪಿಸುತ್ತದೆ.

1990ರ ಸಂದರ್ಭದ ಸಾಂಸ್ಕೃತಿಕ ರಾಜಕಾರಣ ಮತ್ತು ಜಾಗತಿಕ ಬಂಡವಾಳದ ಪ್ರಹಾರದಿಂದ ಚೇತರಿಸಿಕೊಳ್ಳುವ ಮುನ್ನವೇ ನಮಗೆ ಸತ್ಯದರ್ಶನವಾಗಿದ್ದರೆ ಅದಕ್ಕೆ ಕೊರೋನಾ ಕಾರಣವಾಗಿದೆ. ಒಂದು ವರ್ಷದ ಹಿಂದೆ ದೇಶವ್ಯಾಪಿ ರಾಜಕೀಯ ಸಂಕಥನದ ಕೇಂದ್ರ ಬಿಂದು ಆಗಿದ್ದ “ ವಲಸಿಗರು ” ಇಂದೂ ಸಹ ಸಮಾಜೋ ರಾಜಕೀಯ ಸಂಕಥನದ ಕೇಂದ್ರ ಬಿಂದು ಆಗಿದ್ದಾರೆ.

ಅಂದು ನಿಕೃಷ್ಟರಾಗಿ ನಿರ್ಲಕ್ಷ್ಯಕ್ಕೆ ಅರ್ಹರಾಗಿದ್ದ ಈ ಸಮುದಾಯ ಇಂದು ಕಾಳಜಿ, ಕಳಕಳಿಗೆ ಅರ್ಹತೆ ಪಡೆದಿದ್ದರೂ, ಒಂದು ನೆಲೆಯಲ್ಲಿ ನಿಕೃಷ್ಟರಾಗಿಯೇ ಕಾಣುತ್ತಿದ್ದಾರೆ. ಈ ಅಂಶವನ್ನು ಬದಿಗಿಟ್ಟು ನೋಡಿದಾಗ, ಕೊರೋನಾ ಸಂದರ್ಭದಲ್ಲಿ ನಮಗೆ ಈ ದೇಶದ ಮುದ್ರಣ ಲೋಕ ಮತ್ತು ಡಿಜಿಟಲ್ ಲೋಕದ ಸುದ್ದಿಮನೆಗಳು ದಿನನಿತ್ಯ ಕಾಡುತ್ತವೆ.

ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎನ್ನುವ ಪ್ರತಿಷ್ಠಿತ ಸ್ಥಾನ ಪಡೆದಿರುವ ಈ ಜಗತ್ತು ಇಂದು, ಈ ಆಶಯದ ಆಂತರ್ಯವನ್ನೇ ಮರೆತಂತೆ ಕಾಣುತ್ತಿರುವುದು ದುರಂತ. ಪ್ರಜಾವಾಣಿಯಲ್ಲಿನ ಒಂದು ಸಂದರ್ಶನ ಆಕ್ಷೇಪಾರ್ಹವಾಗಿ ಕಾಣುವುದು ಇಲ್ಲಿಯೇ.

ಮಾಧ್ಯಮ ಲೋಕದಲ್ಲಿ ಸ್ವತಂತ್ರ , ಸ್ವಾಯತ್ತ ಮತ್ತು ನಿಷ್ಪಕ್ಷಪಾತ ಧೋರಣೆಯನ್ನೇ ಮೂಲಮಂತ್ರವಾಗಿ ಭಾವಿಸುವ ಪರಂಪರೆಗೆ ಬಹುಶಃ ನಾವು ವಿದಾಯ ಹೇಳಿದ್ದೇವೆ ಎನಿಸುತ್ತದೆ. ವ್ಯವಸ್ಥೆ, ಪ್ರಭುತ್ವ ಮತ್ತು ಆಡಳಿತಾರೂಢ ಸರ್ಕಾರ ಈ ಮೂರರ ನಡುವಿನ ಅಂತರ, ವ್ಯತ್ಯಾಸ ಮತ್ತು ಕಂದರವನ್ನು ಮೂಲತಃ ಮಾಧ್ಯಮಗಳು ಬಿಂಬಿಸಬೇಕಾಗುತ್ತದೆ.

ಹಾಗಾದಲ್ಲಿ ಮಾತ್ರ ಸರ್ಕಾರದ ಕ್ರಮಗಳಿಂದ ಅಸಮಧಾನ ಹೊಂದಿರುವ, ಪ್ರಭುತ್ವದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ, ವ್ಯವಸ್ಥೆಯ ಲೋಪಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ಸೂಕ್ಷ್ಮ ಮನಸುಗಳಿಗೆ ಅಕ್ಷರಗಳ ಮೂಲಕ, ಮಾತುಗಳ ಮೂಲಕ ಸ್ಪಂದಿಸಲು ಸಾಧ್ಯ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಈ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು ಈ ಕಾಲಘಟ್ಟದ ದುರಂತ.

ತತ್ವ, ಸಿದ್ಧಾಂತ, ನೀತಿ ಮತ್ತು ಮೌಲ್ಯ ಈ ನಾಲ್ಕೂ ಸಹ ಒಂದು ದೇಶದ ಬೌದ್ಧಿಕ ವಲಯದ ಆಸ್ತಿ. ಹಾಗೆಯೇ ದೇಶದ ಮುನ್ನಡೆಗೆ ಪೂರಕವಾಗಬಹುದಾದ ಬೌದ್ಧಿಕ , ಭೌತಿಕ ಸರಕುಗಳು. ಈ ಸರಕುಗಳನ್ನು ನಾವು ಯಾವ ನೆಲೆಯಲ್ಲಿ ನಿಂತು ಬಳಸುತ್ತೇವೆ, ಹೇಗೆ ನಿಷ್ಕರ್ಷೆ ಮಾಡುತ್ತೇವೆ, ಯಾವ ದಿಕ್ಕಿನಲ್ಲಿ ಇವುಗಳನ್ನು ಕೊಂಡೊಯ್ಯುತ್ತೇವೆ ಮತ್ತು ಯಾರ ಪರವಾಗಿ ಈ ನಾಲ್ಕೂ ನೆಲೆಗಳು ನಿಲ್ಲುತ್ತವೆ ಈ ಪ್ರಶ್ನೆಗಳು ಒಂದು ಪ್ರಬುದ್ಧ ಸಮಾಜವನ್ನು ಕಾಡಲೇಬೇಕು.

ಇವುಗಳಿಂದಾಚೆಗೂ ಒಂದು ಪ್ರಪಂಚ ಇದೆ ಎಂದಾದರೆ ಅದು ಅರಾಜಕತೆಯ ನೆಲೆಯಲ್ಲೇ ಇರಬೇಕಾಗುತ್ತದೆ. ಭಾರತ ಈ ನಾಲ್ಕೂ ವಿದ್ಯಮಾನಗಳನ್ನು ಶತಮಾನಗಳಿಂದ ಪರಸ್ಪರ ವಿರುದ್ಧ ನೆಲೆಗಳಲ್ಲಿ, ವೈರುಧ್ಯಗಳ ನಡುವೆ, ವಿರೋಧಾಭಾಸಗಳೊಡನೆ ಮತ್ತು ಸಾಪೇಕ್ಷ ನೆಲೆಗಳಲ್ಲಿ ಎದುರಿಸುತ್ತಲೇ ಬಂದಿದೆ.

1990ರ ನಂತರದಲ್ಲಿ ಈ ನೆಲೆಗಳು ಹೆಚ್ಚು ಸಾಪೇಕ್ಷತೆಯನ್ನು ಪಡೆದುಕೊಳ್ಳುತ್ತಿದ್ದು, ತಮ್ಮ ಅಂತಃಸತ್ವವನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ್ದೇವೆ. ವಾದಗಳ ಅಥವಾ ಇಸಂಗಳ ಸಂಘರ್ಷದಲ್ಲಿ ಈ ನಾಲ್ಕೂ ವಿದ್ಯಮಾನಗಳು ಯಾವುದೇ ನೆಲೆಯಲ್ಲಿ ನಿಂತರೂ ಜನಸಮುದಾಯಗಳ ಮೂಲ ಆಶಯಗಳು ಮತ್ತು ಸಮಷ್ಟಿ ಪ್ರಜ್ಞೆಯ ಸಂರಕ್ಷಣೆಯ ಅನಿವಾರ್ಯತೆ ಎದುರಾದಾಗ ಮಾನವೀಯತೆ ಎನ್ನುವ ಒಂದು ವಿದ್ಯಮಾನ ಗೋಚರಿಸಲೇಬೇಕಲ್ಲವೇ ?

ವಸುದೈವ ಕುಟುಂಬಕಂ ಎನ್ನುವ ಅಸ್ಪಷ್ಟ ಘೋಷವಾಕ್ಯಕ್ಕಿಂತಲೂ ವಿಶ್ವಮಾನವತೆ ಎನ್ನುವ ವಿಶಾಲ ಹೃದಯದ ಒಂದು ಪದ ನಮ್ಮ ಮನಸುಗಳಿಗೆ ಹತ್ತಿರವಾಗುವುದು ಈ ಕಾರಣಕ್ಕಾಗಿಯೇ ಅಲ್ಲವೇ ? ಇದು ಮಾಧ್ಯಮ ಜಗತ್ತಿನಿಂದ ಕಣ್ಮರೆಯಾಗುತ್ತಿದೆ.

ಇಲ್ಲಿ ಮಾಧ್ಯಮ ಜಗತ್ತು ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಂಡುಕೊಳ್ಳಬೇಕಿತ್ತು. ತನ್ನ ಅಸ್ತಿತ್ವ ಮತ್ತು ಅಸ್ಮಿತೆಗೂ, ಈ ದೇಶದ ಬಹುಸಂಖ್ಯೆಯ ಜನಸಮುದಾಯಗಳ ಅಸ್ತಿತ್ವ ಮತ್ತು ಅಸ್ಮಿತೆಗೂ ಅವಿನಾಭಾವ ಸಂಬಂಧ ಇದೆ, ಈ ಸಂಬಂಧವನ್ನು ಹೊಸೆಯುವ ಸೂಕ್ಷ್ಮ ತಂತುಗಳನ್ನು ನಿಷ್ಕ್ರಿಯಗೊಳಿಸಲು ಸಮಾಜೋ ರಾಜಕೀಯ ನೆಲೆಯಲ್ಲಿ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಸದಾ ಸಕ್ರಿಯವಾಗಿರುತ್ತವೆ ಎನ್ನುವ ಪ್ರಜ್ಞೆ ಮಾಧ್ಯಮ ಜಗತ್ತಿನಲ್ಲಿ ಸದಾ ಜಾಗೃತವಾಗಿರಬೇಕಿತ್ತು.

ಪ್ರಭುತ್ವ ಮತ್ತು ಸರ್ಕಾರ ಅಥವಾ ವ್ಯವಸ್ಥೆ ಈ ಬಹುಸಂಖ್ಯೆಯ ಜನಸಮುದಾಯಗಳನ್ನು ಪ್ರತಿನಿಧಿಸುವುದಿಲ್ಲ, ನಿಯಂತ್ರಿಸುತ್ತವೆ. ಈ ಪ್ರಾತಿನಿಧಿಕ ಹೊಣೆಯನ್ನು ಹೊರಬೇಕಾದುದು ಮಾಧ್ಯಮ ಲೋಕದ ಆದ್ಯತೆಯಾಗಬೇಕಲ್ಲವೇ ?

ಈ ಕೊರತೆಯ ವಿರಾಟ್ ಸ್ವರೂಪವನ್ನು ನಾವು ಕೊರೋನಾ ಸಂದರ್ಭದಲ್ಲಿ ಕಾಣುತ್ತಿದ್ದೇವೆ. ಹಣಕಾಸು ಬಂಡವಾಳ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನೂ ಸೇರಿದಂತೆ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ನೆಲೆಗಳೂ ಬಿಕರಿಯಾಗುತ್ತಿದ್ದರೂ, ತಾನು ಹರಾಜು ಮಾರುಕಟ್ಟೆಯ ಬಲಿಪೀಠದಲ್ಲಿ ತಲೆತಗ್ಗಿಸಿ ನಿಲ್ಲುವುದಿಲ್ಲ ಎನ್ನುವ ದಿಟ್ಟತನ ಮಾಧ್ಯಮ ಜಗತ್ತಿಗೆ ಇರಬೇಕಿತ್ತು. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇದನ್ನು ಕಂಡಿದ್ದೇವೆ.

ಆದರೆ ಪರಿಸ್ಥಿತಿ ಏನೇ ಇದ್ದರೂ ಇಂದು ವಸ್ತುಸ್ಥಿತಿ ಬದಲಾಗಿದೆ. ಹಣಕಾಸು ಬಂಡವಾಳದ ಮಾರುಕಟ್ಟೆ ಅಧಿಪತ್ಯದೊಂದಿಗೆ, ಸಾಂಸ್ಕೃತಿಕ ರಾಜಕಾರಣ ಮತ್ತು ಜಾತಿ ರಾಜಕಾರಣದ ಕಬಂಧ ಬಾಹುಗಳು ಇಡೀ ವ್ಯವಸ್ಥೆಯನ್ನೇ ಆಕ್ರಮಿಸಿಕೊಂಡಿವೆ. ಪ್ರಭುತ್ವದ ನೆಲೆಗಳು ಈ ಅತಿಕ್ರಮಿತ ಕೋಟೆಯಲ್ಲಿ ಕಂಡುಬರುತ್ತಿವೆ. ಚುನಾಯಿತ ಸರ್ಕಾರಗಳು ತಮ್ಮ ಮೂಲ ನೆಲೆ ಮತ್ತು ಸೆಲೆ ಎರಡನ್ನು ಮರೆತು ಸ್ವಂತಿಕೆ ಕಳೆದುಕೊಂಡಿವೆ.

ಇಂತಹ ವಿಷಮ ಸ್ಥಿತಿಯಲ್ಲಿ 130 ಕೋಟಿ ಜನತೆಯ ಸೂಕ್ಷ್ಮ ಸಂವೇದನೆಗೆ ಸ್ಪಂದಿಸುವ ನೈತಿಕ ಹೊಣೆ ಮಾಧ್ಯಮ ಲೋಕದ ಮೇಲಿದೆ. ಕೆಂಪುಕೋಟೆಯ ಮೇಲಿನ ಛಾಯೆ ಮಾಧ್ಯಮ ಲೋಕದಲ್ಲಿ ಕತ್ತಲು ಆವರಿಸುವಂತೆ ಮಾಡುವ ಪರಂಪರೆ ಇಡೀ ಮಾಧ್ಯಮ ಜಗತ್ತನ್ನೇ ಬದಲಿಸಿಬಿಟ್ಟಿದೆ. ಬಿತ್ತರವಾಗಬೇಕಿದ್ದ ಸುದ್ದಿಗಳು ಉತ್ಪಾದನೆಯಾಗುತ್ತಿವೆ.

ಮಾಧ್ಯಮ ಲೋಕದ ಮಸೂರಗಳು ಸಿಕ್ಕುಗಳಿಗೆ ಸಿಲುಕಿ, ಸೂತ್ರ ಕಳೆದುಕೊಂಡಂತಾಗಿವೆ. ಪತ್ರಿಕೋದ್ಯಮದ ಕಣ್ಣೋಟ ಮತ್ತು ಮುನ್ನೋಟ ಮಸೂರದಲ್ಲೇ ಇರುತ್ತದೆ ಅಲ್ಲವೇ ? ಜನಸಾಮಾನ್ಯರ ನಾಡಿಮಿಡಿತವನ್ನು ಗ್ರಹಿಸಬೇಕಾದ ಮಾಧ್ಯಮ ಲೋಕ ಇಂದು ಉಸಿರುಗಟ್ಟಿರುವ ಸಮಾಜವನ್ನು ಅಕ್ಷರ ಸರಕು ಸಾಗಿಸುವ ಸಾಧನದಂತೆ ಬಳಸಿಕೊಳ್ಳುತ್ತಿದೆ. ಇದರ ನೇರ ಪರಿಣಾಮವನ್ನು ಕೊರೋನಾ ಸಂದರ್ಭದಲ್ಲೇ ಕಂಡಿದ್ದೇವೆ.

ಪ್ರಜಾತಂತ್ರ ಮೌಲ್ಯಗಳ ರಕ್ಷಣೆ ಮಾಧ್ಯಮ ಲೋಕದ ಮೌಖಿಕ ಅಭಿವ್ಯಕ್ತಿಯಿಂದ ಸಾಧ್ಯವಾಗುವಷ್ಟೇ ಅಕ್ಷರದಿಂದಲೂ ಸಾಧ್ಯವಾಗುತ್ತದೆ. ಸುದ್ದಿಮನೆಗಳ ಈ ಅಕ್ಷರಗಳು ಯಾವುದೇ ಚೌಕಟ್ಟಿನೊಳಗೆ ಬಂಧನಕ್ಕೊಳಗಾಗದೆ ಮುಕ್ತ ವಾತಾವರಣದಲ್ಲಿ ಹರಿದಾಡಿದಾಗ ಸಮಾಜದ ವಿಭಿನ್ನ ವರ್ಗಗಳು ಇವುಗಳ ನಡುವೆ ತಮ್ಮ ನೆಲೆ ಕಂಡುಕೊಳ್ಳುತ್ತವೆ.

ಶೋಷಿತ, ಅವಕಾಶವಂಚಿತ, ದಮನಿತ ಜನಸಮುದಾಯಗಳು ಈ ನೆಲೆಯಲ್ಲೇ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಗುರುತಿಸಿಕೊಳ್ಳುತ್ತವೆ. ಇದು ಪ್ರಜಾತಂತ್ರ ವ್ಯವಸ್ಥೆಯ ಬಲವರ್ಧನೆಗೆ ನೆರವಾಗುತ್ತದೆ. ಪತ್ರಿಕೋದ್ಯಮ ಎನ್ನುವ ಪದವನ್ನು ನಾವೆಷ್ಟೇ ಬಳಸಿದರೂ ಪತ್ರಿಕೆ ಉದ್ಯಮವಾಗುವುದನ್ನು ಸಹಿಸಲಾಗುವುದಿಲ್ಲ. ವಿದ್ಯುನ್ಮಾನ ಮಾಧ್ಯಮಗಳಿಗೂ ಇದು ಅನ್ವಯಿಸುತ್ತದೆ.

ಮಾಧ್ಯಮ ಲೋಕದಲ್ಲಿ ಮಾಂತ್ರಿಕ ಶಕ್ತಿ ಇದೆ. ಈ ಮಾಂತ್ರಿಕ ಶಕ್ತಿಯನ್ನು ಸಮಷ್ಟಿ ಪ್ರಜ್ಞೆಯ ನೆಲೆಯಲ್ಲಿ ಬಳಸಿದರೆ ಪ್ರಜಾತಂತ್ರದ ಮೌಲ್ಯಗಳ ರಕ್ಷಣೆಯಾಗುತ್ತವೆ. ವ್ಯಷ್ಟಿ ಪ್ರಜ್ಞೆಯ ನೆಲೆಯಲ್ಲಿ ಬಳಸಿದರೆ ಮಾದ್ಯಮ ವಸ್ತುನಿಷ್ಠೆಯನ್ನು ಮರೆತು ವ್ಯಕ್ತಿನಿಷ್ಠೆಗೆ ಬಲಿಯಾಗುತ್ತದೆ. ಬೌದ್ಧಿಕ ಸಮಾಜ ವಿನಾಶದತ್ತ ಸಾಗುತ್ತದೆ.

ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿ ಮತ್ತು ಮಾರುಕಟ್ಟೆಯ ಲೆಕ್ಕಾಚಾರಗಳು ಈ ಮಾಂತ್ರಿಕ ಶಕ್ತಿಯನ್ನು ನಿಯಂತ್ರಿಸುವಂತಾದರೆ ಮಾಧ್ಯಮ ಲೋಕ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಸುಲಭವಾಗಿ ಕಳೆದುಕೊಳ್ಳುತ್ತದೆ. ಇಂದು ಈ ಅಪಾಯವನ್ನು ನಾವು ಎದುರಿಸುತ್ತಿದ್ದೇವೆ.

ದುರದೃಷ್ಟವಶಾತ್ ಇಂದು ನಾವು ಔದ್ಯಮಿಕ ಸ್ವರೂಪದ ಮಾಧ್ಯಮಗಳ ನಡುವೆ ಬದುಕುತ್ತಿದ್ದೇವೆ. ಹಾಗಾಗಿಯೇ ಸುದ್ದಿಮನೆಗಳಲ್ಲಿ ಅಭಿಪ್ರಾಯಗಳ ಉತ್ಪಾದನೆಯಾದರೆ, ಮುದ್ರಣ ಮನೆಗಳಲ್ಲಿ ಅಕ್ಷರಗಳು ಉತ್ಪಾದನೆಯಾಗುತ್ತವೆ. ಎರಡೂ ಕಡೆ ಅಕ್ಷರ/ಅಭಿಪ್ರಾಯ ಮೂಡುವ ಪರಿಕಲ್ಪನೆ ಇಲ್ಲವಾಗಿದೆ.

ಪರ್ಯಾಯವೇನು ಎನ್ನುವ ಪ್ರಶ್ನೆಯೊಡನೆಯೇ ನಾವು ಮತ್ತೊಂದು ಮಾಧ್ಯಮ ಜಗತ್ತನ್ನು ಸೃಷ್ಟಿಸುವ ಹಂತಕ್ಕೆ ತಲುಪಿದ್ದೇವೆ. ಅಧಿಕಾರ ರಾಜಕಾರಣ ಮತ್ತು ವ್ಯವಸ್ಥೆಯ ಬಾಹುಗಳಿಂದ ದೂರ ಉಳಿದು ಈ ಹೊಸ ಜಗತ್ತನ್ನು ಸಂರಕ್ಷಿಸಿ, ಮಾನವೀಯ ನೆಲೆಯಲ್ಲಿ ಅಕ್ಷರಗಳನ್ನು ಬಿತ್ತುವ ನಿಟ್ಟಿನಲ್ಲಿ ನಾವು ಸಾಗಬೇಕಿದೆ. ಆಗ ಮಾತ್ರ ವಿಶ್ವಮಾನವ ಸಂದೇಶವನ್ನು ಸಾಕಾರಗೊಳಿಸಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೇಣುಕಾಸ್ವಾಮಿ ಕೊಲೆ ಮತ್ತು ಗಂಡುಹೆಣ್ಣಿನ ನಡುವಿನ ಸಂಬಂಧ

Published

on

  • ರಾಜೇಂದ್ರ ಬುರಡಿಕಟ್ಟಿ

ರೇಣುಕಾಸ್ವಾಮಿ ಕೊಲೆ ಕೇಸನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಅನೇಕ ಸ್ನೇಹಿತರು ಈ ಕೇಸಿನಲ್ಲಿ ಮೊದಲನೆಯ ಮತ್ತು ಎರಡನೆಯ ಆರೋಪಿಗಳೆಂದು ಹೆಸರಿಸಲ್ಪಟ್ಟ ದರ್ಶನ್ ಮತ್ತು ಪವಿತ್ರ ಗೌಡ ಅವರ ನಡುವಿನ ಸಂಬಂಧದ ಬಗ್ಗೆ ಅನಗತ್ಯವಾಗಿ ಚರ್ಚಿಸಿ ಪವಿತ್ರಗೌಡ ಅವರನ್ನು ‘ಇಟ್ಟುಕೊಂಡವಳು’ ಇತ್ಯದಿ ಪದಬಳಸಿ ಹಿಯ್ಯಾಳಿಸಿದ್ದಾರೆ.

ಒಂದು ಟಿವಿ ಚಾನೆಲ್ ನವರು ಅವರನ್ನು ‘ಸೆಕೆಂಡ್ ಹ್ಯಾಂಡ್ ಸುಂದರಿ’ ಎಂದೂ ಕರೆದದ್ದು ವರದಿಯಾಗಿದೆ. ಇದನ್ನು ಮಾಡುವ ಹಕ್ಕು ಯಾರಿಗೂ ಇಲ್ಲ. ನಮ್ಮ ವಿರೋಧ ಇರಬೇಕಾದದ್ದು ಅವರು ರೂಪಿಸಿದ್ದಾರೆ ಎನ್ನಲಾದ ಕೊಲೆಯ ಕೇಸಿನ ಬಗ್ಗೆಯೇ ಹೊರತು ಅವರಿಬ್ಬರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ.

ಗಂಡು ಹೆಣ್ಣಿನ ನಡುವಿನ ಸಂಬಂಧ ಎಂಬುದು ಅತ್ಯಂತ ಸಹಜವಾದದ್ದು. ಯಾರಿಗೆ ಯಾರ ಮೇಲೆ ಯಾವಾಗ ಆಕರ್ಷಣೆ ಉಂಟಾಗಿ ಸಂಬಂಧಗಳು ಬೆಸೆದುಕೊಳ್ಳುತ್ತವೆ ಎಂಬುದನ್ನು ಹೇಳಲಾಗದು. ಇದಕ್ಕೆ ‘ನೈತಿಕ’ ‘ಅನೈತಿಕ’ ಎಂಬ ಹಣೆಪಟ್ಟಿ ಹಚ್ಚಿ ಗೌರವಿಸುವ ಅಥವಾ ಅವಹೇಳನ ಮಾಡುವ ಕ್ರಮ ಸರಿಯಾದದ್ದಲ್ಲ. ಪ್ರತಿಯೊಬ್ಬರಿಗೂ ಆಯ್ಕೆಗಳಿರುತ್ತವೆ. ತಮಗೆ ಬೇಕಾದ ಗಂಡನ್ನು ಅಥವಾ ಹೆಣ್ಣನ್ನು ಆಯ್ದುಕೊಳ್ಳುವ ಅವರೊಡನೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವಿದೆ. ಎಲ್ಲರಿಗೂ ಇದೆ. ಅದನ್ನು ಪ್ರಶ್ನಿಸುವ ಹಕ್ಕು ಇತರರಿಗೆ ಇಲ್ಲ. ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧವು ದೇಶದ ಕಾನೂನಿನ ಪ್ರಕಾರವೂ ಅಪರಾಧವಲ್ಲ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಶಿವರಾಮ ಕಾರಂತರು ತಮ್ಮ ಅನೇಕ ಕಾದಂಬರಿಗಳ ಮೂಲಕ ಇದಕ್ಕೆ ಸಂಬಂಧಿಸಿದಂತೆ ಒಂದು ತಾತ್ವಿಕತೆಯನ್ನು ನಮಗೆ ರೂಪಿಸಿಕೊಡುತ್ತಾರೆ. ಅದೆಂದರೆ ‘ಲೈಂಗಿಕ ಸುಖ ಎನ್ನುವುದು ಮನುಷ್ಯನ ಬದುಕು ಮನುಷ್ಯನಿಗೆ ನೀಡುವ ಅತ್ಯಂತ ಸುಖದ ಸಂಗತಿಗಳಲ್ಲಿ ಒಂದು. ಅದರಿಂದ ಯಾರೂ ವಂಚಿತರಾಗಬಾರದು. ಪರಸ್ಪರ ಒಪ್ಪಿಕೊಂಡ ಗಂಡು ಹೆಣ್ಣುಗಳ ನಡುವಿನ ಲೈಂಗಿಕ ಸಂಬಂಧದಲ್ಲಿ ಒಂದು ಚೆಲುವು ಇರುತ್ತದೆ. ಇಂತಹ ಒಂದು ಒಳ್ಳೆಯ ಸಂಬಂಧಕ್ಕೆ ಮದುವೆ ಎಂಬುದು ಒಂದು ‘ಪೂರ್ವಾಗತ್ಯ’ವಾಗಬೇಕಿಲ್ಲ. ಗಂಡುಹೆಣ್ಣಿನ ನಡುವಿನ ಒಂದು ಒಳ್ಳೆಯ ಸಂಬಂಧವು ವಿವಾಹದ ಒಳಗೂ ಇರಬಹುದು; ಹೊರಗೂ ಇರಬಹುದು. ಅದೇ ರೀತಿ ಒಂದು ಕೆಟ್ಟ ಸಂಬಂಧವು ವಿವಾಹದ ಒಳಗೂ ಇರಬಹುದು ಹೊರಗೂ ಇರಬಹುದು. ವಿವಾಹದ ಚೌಕಟ್ಟಿನ ಒಳಗಿನ ಒಂದು ಕೆಟ್ಟ ಸಂಬಂಧಕ್ಕಿಂತ ವಿವಾಹದ ಚೌಕಟ್ಟಿನ ಹೊರಗಿನ ಒಳ್ಳೆಯ ಸಂಬಂಧ ಬೆಲೆಯುಳ್ಳದ್ದು.

ಹೀಗಾಗಿ ಯಾರೊಡನೆ ಎಂತಹ ಸಂಬಂಧ ಇಟ್ಟುಕೊಳ್ಳಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. ಅದರಲ್ಲಿ ಇತರರು ತಲೆಹಾಕುವುದು ಅವಿವೇಕತನ. ‘ಮದುವೆ ಎಂಬುದು ಏಳೇಳು ಜನ್ಮಗಳ ಸಂಬಂಧ’ ಏನೇ ಆದರೂ ಅದರ ಗೆರೆದಾಟಿ ಬೇರೆಯವರೊಡನೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಾರದು’ ಎನ್ನುವವರು ಹಾಗೆಯೇ ಇರಬಹುದು. ಅದಕ್ಕೂ ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಮದುವೆಯ ಚೌಕಟ್ಟಿನ ಹೊರಗಿನ ಸಂಬಂಧಗಳನ್ನು ಟೀಕಿಸುವ ಸ್ವಾತಂತ್ರ್ಯ ಹಕ್ಕು ಅವರಿಗಿಲ್ಲ. ಈ ವಿಷಯದಲ್ಲಿ ನಮ್ಮ ಆಲೋಚನಾ ಕ್ರಮ ಸಾಕಷ್ಟು ಬದಲಾಗಬೇಕಿದೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವಿನ ಸಂಬಂಧ ಎಂಥದ್ದೇ ಇರಲಿ ಅದು ಅವರಿಬ್ಬರಿಗೂ ಸಂತೋಷವನ್ನು ಕೊಡುತ್ತಿದ್ದರೆ ಅದನ್ನು ಕಂಡು ನಾವು ಸಂತೋಷ ಪಡಬೇಕೆ ಹೊರತು ಹೊಟ್ಟೆಕಿಚ್ಚು ಪಡಬಾರದು. ಅದನ್ನು ಗೌರವಿಸುವುದನ್ನು ನಾವು ಮೊದಲು ಕಲಿಯಬೇಕು. ಈ ಹಿನ್ನಲೆಯಲ್ಲಿ ನಮ್ಮ ವಿರೋಧವಿರಬೇಕಾದದ್ದು ಅವರಿಬ್ಬರು ಸೇರಿ ವ್ಯಕ್ತಿಯೊಬ್ಬರ ಕೊಲೆಮಾಡಿದ್ದಾರೆ ಎನ್ನಲಾದ ವಿಚಾರಕ್ಕೆ ಹೊರತು ಅವರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ. ಇಂತದ್ದೇ ವಿಚಾರವನ್ನು ಬೇರೆ ರೀತಿಯಲ್ಲಿ ಹೇಳಿರುವ ಸುಹಾಸಿನಿ ಶ್ರೀ Suhasini Shree ಅವರ ಒಂದು ಪೋಸ್ಟನ್ನೂ ಆಸಕ್ತಿ ಇರುವವರು ಗಮನಿಸಬಹುದು.(ರಾಬು (23-06-2024)
(ರಾಜೇಂದ್ರ ಬುರಡಿಕಟ್ಟಿ ಅವರ ಫೇಸ್ ಬುಕ್ ಬರೆಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇವರೇ ನೋಡಿ ಟ್ವೀಟ್ಟರ್, ಪೇಸ್ಬುಕ್ ಮೀಮ್ಸ್ ಸ್ಟಾರ್ ಕ್ಸೇವಿಯರ್ ಉರ್ಫ್ ಓಂಪ್ರಕಾಶ್

Published

on

  • ~ ಸಿದ್ದು ಸತ್ಯಣ್ಣನವರ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದವರಿಗೆ ನೋಡಿದ ಕೂಡಲೇ ನಗು ಉಕ್ಕಿಸಿ, ಉಲ್ಲಸಿತಗೊಳಿಸುವ ಕ್ಸೇವಿಯರ್ ಮೀಮ್ಸ್ ಗಳ ಪರಿಚಯ ಇದ್ದೇ ಇರುತ್ತದೆ. ಕ್ಸೇವಿಯರ್ ಎಂದರೆ ಯಾರು? ಎಂದು ಹೆಸರೇಳಿದರೆ ಗೊತ್ತಾಗದಿರುವವರು ಅವರ ಫೋಟೊ ನೋಡಿದರೆ ಕೂಡಲೇ ಮುಖದ ಮೇಲೆ ನಗು ಮೂಡಿರುತ್ತದೆ.

ತುಂಟ ಕಾಮೆಂಟ್ ಹಾಗೂ ಹಾಸ್ಯದ ತಿರುಳುಗಳ ಪೋಸ್ಟ್ ಮೂಲಕ ಗಮನ ಸೆಳೆಯುವ‌ ಕ್ಸೇವಿಯರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಸ್ಯಪ್ರಜ್ಞೆಯಿಂದ ಸಾಕಷ್ಟು ಪ್ರಸಿದ್ಧ. ಕ್ಸೇವಿಯರ್ ಹೆಸರಿನಿಂದ ಜನಪ್ರಿಯರಾದ ಇವರ ನಿಜವಾದ ಹೆಸರು ಓಂಪ್ರಕಾಶ್. ಅಸಂಖ್ಯ ಟ್ವೀಟರ್, ಫೇಸ್ಬುಕ್ ಪ್ರೋಫೈಲ್ ಗಳಲ್ಲಿ ಓಂಪ್ರಕಾಶ್ ಅವರ ಫೋಟೊ ಕ್ಸೇವಿಯರ್ ಎಂದೇ ಹಂಚಲ್ಪಟ್ಟಿದೆ.

ಮೀಮ್ಸ್ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ಇವರು ಮಧ್ಯವಯಸ್ಕ ಭಾರತೀಯರು ಹೆಚ್ಚಾಗಿ ಇಷ್ಟಪಡುವ ದಪ್ಪಮೀಸೆಯ ಫೋಟೊ ಹೊಂದಿರುವ ಪ್ರೋಫೈಲ್ ಮೂಲಕ ಟ್ವೀಟ್ಟರ್ ಮತ್ತು ಫೇಸ್ಬುಕ್ಕಿನ ಸಾಕಷ್ಟು ಟ್ರೋಲ್, ಮೀಮ್ ಪೇಜುಗಳಲ್ಲಿ ಕಾಣಸಿಗುತ್ತಾರೆ. ಕ್ಸೇವಿಯರ್ ಅಂಕಲ್, ಕ್ಸೇವಿಯರ್ ಮೀಮ್ಸ್, ಕ್ಸೇವಿಯರ್ ಪಾಂಡಾ, ಕ್ಸೇವಿಯರ್ ಮಿಮ್ ಬಾಯ್ ಹೀಗೆ ಇವರ ಹೆಸರಿನ ಮೂಲಕ ಸಾವಿರಾರು ಮೀಮ್ಸ್ ಮೇಕಿಂಗ್ ಪ್ರೋಫೈಲ್ ಗಳು ಲಕ್ಷಾಂತರ ಹಿಂಬಾಲಕರನ್ನು ಹೊಂದಿವೆ. ಮೀಮ್ಸ್ ಗಾಗಿಯೇ ವಿನ್ಯಾಸಗೊಳಿಸಲಾಗಿರುವ, ವಿದೇಶಗಳಲ್ಲೂ ಕೋಟ್ಯಂತರ ಜನರು ಹಿಂಬಾಲಿಸುವ 9gag ಎಂಬ ವೆಬ್ಸೈಟಿನಲ್ಲಿ ಇವರ ಸಾಕಷ್ಟು ಮೀಮ್ಸ್ ಗಳು ಜನಪ್ರಿಯವಾಗಿವೆ. ಫೇಸ್ಬುಕ್, ಟ್ವಿಟ್ಟರ್ ಬಳಸುವವರಿಗೆ ಕ್ಸೇವಿಯರ್ ಹಾಸ್ಯಪ್ರಜ್ಞೆ ಎಂಥದ್ದು ಎಂಬುದನ್ನ ಕೇಳಿದರೆ ನಗುವೇ ಅವರ ಉತ್ತರವಾಗಿರುತ್ತದೆ ಎಂಬುದಕ್ಕೆ ಸಹ ಚೆಂದದ ಮೀಮ್ ಒಂದಿದೆ.

ಕಾನ್ಪುರ ಐಐಟಿ ಸಿಬ್ಬಂದಿಯಾದ ಓಂಪ್ರಕಾಶ್ ಅವರು ಅಲ್ಲಿನ ಭೌತಶಾಸ್ತ್ರ ವಿಭಾಗದ ತಾಂತ್ರಿಕ ಮೇಲ್ವಿಚಾರಕ ಹುದ್ದೆಯಲ್ಲಿದ್ದಾರೆ. ಕ್ಸೇವಿಯರ್ ಎಂದು ಅವರು ಪ್ರಸಿದ್ಧರಾಗಲು ಕಾರಣ ಅವರ ಅಪರಿಮಿತ ಹಾಸ್ಯಪ್ರಜ್ಞೆಯ ‘ಪಕಾಲು ಪಾಪಿಟೋ’ ಎಂಬ ಕಾಲ್ಪನಿಕ ಗುಮಾಸ್ತನ ಪಾತ್ರವನ್ನು ಸೃಷ್ಟಿಸಿದ್ದಕ್ಕಾಗಿ. ಆ ಗುಮಾಸ್ತನ ಮೊದಲ ಟ್ವೀಟ್ ಟ್ವೀಟ್ಟರಿನಲ್ಲಿ ಹೆಚ್ಚುಕಡಿಮೆ 18 ಸಾವಿರ ರೀಟ್ವೀಟ್ ಆಗಿತ್ತು.

ಟ್ವೀಟ್ಟರ್ ನಿಯಮಗಳ ತಾಂತ್ರಿಕ ಕಾರಣಗಳಿಂದ ಸುಮಾರು ಲಕ್ಷ ಹಿಂಬಾಲಕರಿದ್ದ ಈ ಅಕೌಂಟ್ ಸ್ಥಗಿತಗೊಂಡಿತು. ನಂತರ ಕಾಮಿಕ್ ಮೀಮ್ ಗಳಿಂದ ಆರಂಭದಲ್ಲಿ ಪ್ರಸಿದ್ಧರಾಗಿದ್ದ ಓಂಪ್ರಕಾಶ್ ಅವರು ಕೊನೆಗೆ ಕ್ಸೇವಿಯರ್ ಹೆಸರಿನ ಮೂಲಕ ಮೀಮ್ ಪ್ರಿಯರಿಗೆ ಮನೆಮಾತಾದರು. ಓಂಪ್ರಕಾಶ್ ಅವರು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕ್ರಮವಾಗಿ 1.4 ಮಿಲಿಯನ್ ಹಾಗೂ 3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ‘ಪಕಾಲು ಪಾಪಿಟೋ’ ಅಕೌಂಟ್ ತಾಂತ್ರಿಕವಾಗಿ ಸ್ಥಗಿತಗೊಂಡ ಕಾರಣ ಕ್ಸೇವಿಯರ್ ಎಂಬ ಹೆಸರಿನ ತಮಾಷೆಯ ಮೀಮ್ಸ್ ಮೂಲಕ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್ ಎಲ್ಲ ಕಡೆಗಳಲ್ಲಿ ಕಾಣಿಸುತ್ತಾರೆ. ( ಸಿದ್ದು ಸತ್ಯಣ್ಣನವರ್ ಅವರ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending