ದಿನದ ಸುದ್ದಿ
ನುಡಿಯ ಒಡಲು – 14 | ನುಡಿ ವರ್ಸಸ್ ಒಳನುಡಿ
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ನುಡಿ ಮತ್ತು ಒಳನುಡಿಗಳ ನಡುವಣ ಅಂತರಗಳನ್ನು ಗುರುತಿಸಲು ಎರಡು ಬಗೆಯ ಒರೆಗಲ್ಲುಗಳನ್ನು ಬಳಸುತ್ತಾರೆ. ಒಂದು ನುಡಿಯರಿಮೆಯ ನೆಲೆಗಟ್ಟನ್ನು ಪಡೆದಿದ್ದರೆ, ಮತ್ತೊಂದು ಸಾಮಾಜಿಕ ರಾಜಕೀಯ ನೆಲೆಗಳ ಮೇಲೆ ನಿರ್ಧಾರಗೊಳ್ಳುತ್ತದೆ. ಎತ್ತುಗೆಗಾಗಿ ನುಡಿಯರಿಮೆಯ ನೆಲೆಗಳನ್ನು ಇಲ್ಲೀಗ ನೋಡಬಹುದು;
1. ಪರಸ್ಪರ ಅರ್ಥಗ್ರಾಹ್ಯತೆಯ ಸಾಧ್ಯವೇ?
ಹೌದು? = ಒಳನುಡಿ
ಇಲ್ಲ? = ನುಡಿ
ಒಂದೇ ನುಡಿಯ ಬೇರೆ ಬೇರೆ ಬಗೆಗಳನ್ನು ಒಬ್ಬರಿಗೊಬ್ಬರು ಅರಿಯುವಂತಾದರೆ ಅದು ಒಳನುಡಿ. ಇಲ್ಲವಾದರೆ ಅವುಗಳನ್ನು ಬೇರೆ ಬೇರೆ ನುಡಿಗಳನ್ನಾಗಿ ಗುರುತಿಸಲಾಗುತ್ತದೆ. ಅಂದರೆ ಈ ಕೆಳಗಿನ ಸೂತ್ರದ ಮೂಲಕ ಇದನ್ನು ಇನ್ನೂ ನಿಚ್ಚಳವಾಗಿ ತಿಳಿಯಬಹುದು. ಉದಾ.ಗಳು;
1. ಧಾರವಾಡ ವರ್ಸಸ್ ಮೈಸೂರು ವರ್ಸಸ್ ಮಂಗಳೂರು ವರ್ಸಸ್ ಬೀದರ ವರ್ಸಸ್ ಚಾಮರಾಜ ನಗರ ವರ್ಸಸ್ ಬಳ್ಳಾರಿ = ಒಳನುಡಿಗಳು
2. ಬ್ರಿಟಿಶ್ ವರ್ಸಸ್ ಅಮೇರಿಕನ್ ವರ್ಸಸ್ ಐರಿಶ್ ವರ್ಸಸ್ ಆಸ್ಟ್ರೇಲಿಯಾ = ಒಳನುಡಿಗಳು
ಈ ಮೇಲಿನ ಎರಡೂ ಸನ್ನಿವೇಶದಲ್ಲಿ ಆಯಾ ಗುಂಪಿನ ಒಳನುಡಿಗಳಲ್ಲಿ ಪರಸ್ಪರ ಸಂವಹನ ಸಾಧ್ಯವಾಗುವುದರಿಂದ ಇವುಗಳ ನಡುವಣ ನಂಟಸ್ತಿಕೆಯನ್ನು ಅಖಂಡತೆಯ ತತ್ವದ ನೆಲೆಯಲ್ಲಿ ಕಾಣಬಹುದು. ಈ ಒಳನುಡಿಗಳ ರಾಚನಿಕ ಯಾವ ನಿಲುವುಗಳು ಒಂದನ್ನು ಇನ್ನೊಂದರಿಂದ ಹೇಗೆ ಬೇರ್ಪಡಿಸುತ್ತವೆ? ಈ ರಾಚನಿಕ ನೆಲೆಗಳು ಪ್ರಾದೇಶಿಕವಾಗಿ ಹೇಗೆ ಹರಡಿಕೊಂಡಿವೆ? ಹಾಗೂ ಪ್ರದೇಶ ಮತ್ತು ಒಳನುಡಿಗಳ ನಂಟಸ್ತಿಕೆಯ ಅಂತರ್ಸಂಬಂಧಗಳು ಯಾವ ಬಗೆಯವು? ಎಂಬೆಲ್ಲ ಸಂಗತಿಗಳನ್ನು ಲೆಕ್ಕಿಸದೆಯೂ, ಕೇವಲ ಪರಸ್ಪರ ಸಂವಹನ ಸಾಧ್ಯತೆಯ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಒಳನುಡಿಗಳು ರೂಪುಗೊಳ್ಳುವ ಬಗೆಯನ್ನು ಇಲ್ಲಿ ಕಾಣಬಹುದು.
2. ಸಾಮಾಜಿಕ ಮತ್ತು ರಾಜಕೀಯ ನಿಲುವುಗಳು ಕಾರಣವಾದರೇ?
1. ನಾರ್ವೇ ವರ್ಸಸ್ ಸ್ವೀಡನ್ ವರ್ಸಸ್ ಡೆನಿಶ್ = ನುಡಿಗಳು (ಇಲ್ಲಿ ಪರಸ್ಪರ ಗ್ರಾಹ್ಯತೆ ಸಾಧ್ಯವಿದೆ).
2. ತುಳು ವರ್ಸಸ್ ಕೊಡವ ವರ್ಸಸ್ ಬಡಗ ವರ್ಸಸ್ ಕನ್ನಡ = ನುಡಿಗಳು (ಇಲ್ಲಿ ಪರಸ್ಪರ ಸಂವಹನ ಸಾಧ್ಯವಿಲ್ಲ).
3. ಕಾಂಟೀಸ್ ವರ್ಸಸ್ ಮಂಡೋರಿಯನ್ ವರ್ಸಸ್ ಹಕ್ಕ ವರ್ಸಸ್ ಹೊಕ್ಕ್‍ಯಿನ್ = ಒಳನುಡಿ (ಇಲ್ಲಿ ಪರಸ್ಪರ ಸಂವಹನಸಾಧ್ಯವಿಲ್ಲ, ಆದರೂ ಇವುಗಳನ್ನು ಚೈನಿಸ್ ನುಡಿಯ ಒಳನುಡಿಗಳೆಂದು ಗುರುತಿಸಿದ್ದಾರೆ).
4. ಡೆನಿಶ್ ವರ್ಸಸ್ ಸ್ವೀಡಿಶ್ = ನುಡಿಗಳು (ಡೆನಿಶ್ ನುಡಿಯಿಗರು ಸ್ವೀಡಿಶ್‍ನ್ನು ಅರಿತುಕೊಳ್ಳುತ್ತಾರೆ, ಆದರೆ ಸ್ವೀಡಿಶ್ ನುಡಿಯಿಗರು ಡೆನಿಶ್‍ನ್ನು ಅರಿತುಕೊಳ್ಳಲಾರರು ಹಾಗಾದರೆ ಇಂತಹ ನೆಲೆಯನ್ನು ಹೇಗೆ ಗುರುತಿಸುವುದು).
5. ಮರಾಠಿ ವರ್ಸಸ್ ಕೊಂಕಣಿ = ಒಳನುಡಿಗಳು (ಪರಸ್ಪರ ಸಂವಹನ ನಿರೀಕ್ಷಿತ ಮಟ್ಟದಲ್ಲಿಲ್ಲ).
6. ಬಡಗ ವರ್ಸಸ್ ಸೋಲಿಗ = ಒಳನುಡಿ (ಇವುಗಳ ನಡುವೆ ಪರಸ್ಪರ ಸಂವಹನ ಸಾಧ್ಯವಿಲ್ಲ. ಆದಾಗ್ಯೂ ಅವುಗಳನ್ನು ಕನ್ನಡದ ಒಳನುಡಿಗಳೆಂದು ಕರೆಯುತ್ತಾರೆ).
ಈ ಎರಡನೇ ಸನ್ನಿವೇಶದಲ್ಲಿ ನುಡಿ ಹಾಗೂ ಒಳನುಡಿಗಳ ನಡುವಣ ವ್ಯತ್ಯಾಸಗಳನ್ನು ಗುರುತಿಸಲು ಪರಸ್ಪರ ಅರ್ಥಗ್ರಾಹ್ಯ ತತ್ವವನ್ನೇ ಮುಖ್ಯ ಮಾನದಂಡವನ್ನಾಗಿ ಇಟ್ಟುಕೊಂಡಿಲ್ಲ ಎಂಬುದು ಇಲ್ಲಿ ನಿಚ್ಚಳವಾಗಿ ಕಾಣುತ್ತದೆ. ಈ ಕೆಳಗಿನ ಚಿತ್ರದ ಮೂಲಕ ಈ ತೊಡಕನ್ನು ಇನ್ನಷ್ಟು ವಿವರವಾಗಿ ನೋಡಬಹುದು;
ಇವುಗಳ ಸಂವಹನದ ಗ್ರಹಿಕೆಯಲ್ಲಿ ಸಮಾನತೆಯಿಲ್ಲಿ. ಗ್ರಹಿಕೆಯಲ್ಲಿ ಇಂತಹ ಅಸಮಾನ ಮಟ್ಟವಿದ್ದರೂ, ಬೇರೆ ನುಡಿಯೆಂದು ಕರೆಯದೇ ಒಳನುಡಿಯೆಂದು ಗುರುತಿಸುವುದಕ್ಕೆ ಸಾಮಾಜಿಕ, ಚಾರಿತ್ರಿಕ, ಪ್ರಾದೇಶಿಕ ಮತ್ತು ರಾಜಕೀಯ ನಿಲುವುಗಳೇ ಕಾರಣ. ನುಡಿ ಮತ್ತು ಒಳನುಡಿಗಳ ನಡುವೆ ಯಾವುದೇ ಬಗೆಯ ಖಚಿತ ಭಿನ್ನತೆಗಳನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ ಎಂಬ ಸಂಗತಿ ಈ ಚರ್ಚೆಗಳಿಂದಲೇ ಮನವರಿಕೆಯಾಗುತ್ತದೆ.
ಸಾಂಸ್ಕೃತಿಕ ಅಸಮಾನ ತತ್ವಗಳು, ರಾಜಕೀಯ ಮತ್ತು ಆರ್ಥಿಕ ರಚನೆಗಳು ಹಾಗೂ ಚಾರಿತ್ರಿಕವಾಗಿ ನೆಲೆನಿಂತಿರುವ ಅಧಿಕಾರ ಸಂಬಂಧಗಳೇ ನುಡಿ ಮತ್ತು ಒಳನುಡಿ ಎಂಬಂತಹ ಡೈಕಾಟಮಿಯನ್ನು ಹುಟ್ಟು ಹಾಕುತ್ತವೆ. ನುಡಿಯೆಂದರೆ ಅತ್ಯಂತ ಮೇಲು (ಸೂಪರ್‍ಆರ್ಡಿನೇಟ್) ಎಂದೋ, ಒಳನುಡಿಯೆಂದರೆ ಅತ್ಯಂತ ಕೀಳು (ಸಬ್‍ಆರ್ಡಿನೇಟ್) ಎಂದೋ ನಿರ್ವಚಿಸಲಾಗಿದೆ. ಒಳನುಡಿಗಳಿಗೆ ಅಂಟಿರುವ ಕೀಳು, ಅಧೀನ, ವಿರೂಪ ಮುಂತಾದಂತಹ ಕಳಂಕಗಳನ್ನು ತಪ್ಪಿಸಲು ಉಪಭಾಷೆ ಇಲ್ಲವೇ ಒಳನುಡಿ ಎಂದು ಕರೆಯುವ ಬದಲಾಗಿ ನುಡಿಬಗೆ (ಲಿಂಗ್ವಿಸ್ಟಿಕ್ ವೆರೈಟಿ) ಎಂದು ಗುರುತಿಸಬೇಕು ಎಂಬುದು ಹೊಸಕಾಲದ ಬಹುತೇಕ ಸಾಮಾಜಿಕ ನುಡಿಯರಿಗರ ನಿಲುವಾಗಿದೆ.
ಸಾಮಾಜಿಕವಾಗಿ ನೆಲೆ ನಿಂತಿರುವ ಅಸಮಾನತೆಗಳು, ನುಡಿಯ ಮೂಲಕ ಹೇಗೆ ಪ್ರತಿನಿಧಿಸುತ್ತವೆ ಎಂಬುದಕ್ಕೆ ಉಪಭಾಷೆ ಮತ್ತು ಒಳನುಡಿಗಳೇ ಸಾಕ್ಷಿಯಾಗಿವೆ. ಅದಕ್ಕಾಗಿ ಮೇಲು ನುಡಿ (ಮೇಲು ಜಾತಿ) ಹಾಗೂ ಕೀಳು ನುಡಿ (ಕೀಳು ಜಾತಿ)ಗಳು ತಲೆಯೆತ್ತಿವೆ. ಇಂತಹ ತರತಮ ನಿಲುವುಗಳನ್ನು ಮೊದಲು ಕಿತ್ತು ಹಾಕಬೇಕು. ಅದಕ್ಕಾಗಿ ಹೊಸ ನುಡಿಗಟ್ಟುಗಳನ್ನು ಬಳಸುವ ಅಗತ್ಯವಿದೆ. ಇವು ಕೇವಲ ಟೆಕ್ನಿಕಲ್ ಪದಗಳಾಗಿರದೇ, ಲೋಕವನ್ನು ನೋಡುವ ಕ್ರಮವನ್ನೇ ಬದಲಿಸುತ್ತವೆ.
ನುಡಿಬಗೆ ಎಂಬುದು ಸಿದ್ಧಮಾದರಿಯ ತಿಳಿವನ್ನೇ ಪಲ್ಲಟಗೊಳಿಸುವ ಬಗೆಯೆಂದೇ ಹೇಳಬೇಕಾಗುತ್ತದೆ. ನುಡಿಬಗೆ ಕೇವಲ ವ್ಯತ್ಯಾಸವನ್ನು ಸೂಚಿಸುವ ಪದ. ಅಂದರೆ ಒಂದು [ಅ] ಇನ್ನೊಂದಕ್ಕಿಂತ [ಆ] ಹೇಗೆ ಬೇರೆ ಎಂಬುದನ್ನು ಮಾತ್ರ ತೋರಿಸುತ್ತದೆ, ಹೊರತಾಗಿ ತರತಮ ನೆಲೆಗಳನ್ನಲ್ಲ. ಬಗೆ/ವ್ಯತ್ಯಾಸಗಳು (ಡಿಫರೆನ್ಸ್) ಸ್ವಾಯತ್ತ ಅಸ್ತಿತ್ವವನ್ನು ಕಾಣಿಸುತ್ತವೆ.
ಆದರೆ ತರತಮ ನಿಲುವುಗಳು ಒಂದು ಮೇಲು ಮತ್ತೊಂದು ಕೀಳು ಎಂಬ ಅಸಮಾನ ಡೈಕಾಟಮಿಯನ್ನು ಹುಟ್ಟು ಹಾಕುತ್ತವೆ. ಒಂದು ಮೇಲು ಮತ್ತೊಂದು ಕೀಳು ಎಂದು ಹೀಗೆ ಹೇಳುವುದಕ್ಕೆ ಯಾವ ಆಧಾರವೂ ಇಲ್ಲ. ನುಡಿಗಳನ್ನು ಕೇವಲ ಉಲಿ ಮತ್ತು ಪದಕೋಶಿಕ (ಲೆಕ್ಷಿಕಲ್) ನೆಲೆಯಲ್ಲಿ ಮಾತ್ರ ಬೇರ್ಪಡಿಸಿ ಅವುಗಳ ನಡುವೆ ತರಮತಗಳನ್ನು ಹುಟ್ಟಹಾಕಲಾಗಿದೆ.
ಲೋಕವನ್ನು ನೋಡುವ ಬಗೆಯಲ್ಲಿಯೇ ಅನನ್ಯತೆ ಮತ್ತು ವಿಶಿಷ್ಟತೆ ಇರುತ್ತದೆ. ಪ್ರತೀ ನುಡಿಯು ಹಲವು ಬಗೆಗಳಲ್ಲಿ ತನ್ನದೆಯಾದ ಇಂತಹ ವಿಶಿಷ್ಟತೆ ಹಾಗೂ ಅನನ್ಯತೆಯ ಗುರುತುಗಳನ್ನು ಇಟ್ಟುಕೊಂಡಿರುತ್ತದೆ. ಅವುಗಳ ವೈವಿಧ್ಯತೆ ಬಹುತೇಕ ಪದಕೋಶಿಕ ನೆಲೆಯಿಂದ ಕೂಡಿರುತ್ತದೆ. ಇಂತಹ ವೈವಿಧ್ಯತೆಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನಸಿಕ ಕಾರಣಗಳಿರುತ್ತವೆ. ಆಯಾ ಪರಿಸರಕ್ಕೆ ಅನುಗುಣವಾಗಿ ನುಡಿ ಇಲ್ಲವೇ ಒಳನುಡಿಗಳ ಸ್ವರೂಪ ರೂಪುಗೊಂಡಿರುತ್ತವೆ.
ಹಾಗಾಗಿ ಮಾನವರ ಚಿಂತನೆಯ ಮಾದರಿ, ಗ್ರಹಿಕೆಯ ಬಗೆಗಳು ರೂಪುಗೊಳ್ಳುವುದು, ಅವರಲ್ಲಿ ಅಂತಸ್ಥವಾಗಿರುವ ನುಡಿ ಸಾಮಥ್ರ್ಯದಿಂದಲೇ ಎಂಬುದನ್ನು ಮರೆಯುವಂತಿಲ್ಲ. (ನುಡಿಯ) ಅಂತಸ್ಥ ಸಾಮಥ್ರ್ಯದಲ್ಲಿ ತರಮತಮ ಎಂಬದು ಇರುವುದಿಲ್ಲ. ಬದಲಾಗಿ ನುಡಿಗಳ ನಡುವಣ ಸಮಾನ ತತ್ವಗಳು ಹಾಗೂ ವಿಕಲ್ಪಗಳು ಮಾತ್ರವಿರುತ್ತವೆ. ಇವುಗಳ ಆಧಾರದ ಮೇಲೆ ನುಡಿಗಳನ್ನು ಬೇರ್ಪಡಿಸಿ ಬೇರೆ ಬೇರೆ ನುಡಿಗಳು ಹುಟಿಸಬಹುದು.
ಕೇವಲ ಹೊರಪದರ ರಚನೆಯನ್ನು ಮಾತ್ರ ಪರಿಗಣಿಸಿ, ನುಡಿಯ ಇಡೀ ರಾಚನಿಕ ಸ್ವರೂಪವನ್ನು ಅರಿಯಲು ಸಾಧ್ಯವಿಲ್ಲ. ಹಾಗಾಗಿ ಚಾಮ್‍ಸ್ಕಿ ಹೇಳುವ ನುಡಿಯ ಏಕರೂಪತೆ (ಲಿಂಗ್ವಿಸ್ಟಿಕ್ ಹೋಮಿಜಿನಿಟಿ) ಎನ್ನುವುದು ನುಡಿಯ ಹೊರಪದರ ರಾಚನಿಕ ವ್ಯವಸ್ಥೆಗೆ ಸಂಬಂಧಿಸಿದ್ದಲ್ಲ. ಅದು ಅಂತಸ್ಥ ಸಾಮರ್ಥ್ಯಕ್ಕೂ ಹಾಗೂ ಒಳಪದರ ರಚನೆಗೂ ಸಂಬಂಧಿಸಿದ್ದು. ಹಾಗಾಗಿ ಚಾಮ್‍ಸ್ಕಿ ಪ್ರಕಾರ ನುಡಿಯನ್ನು ಅರಿಯುವುದೆಂದರೆ, ಅದರ ಅಂತಸ್ಥ ಸಾಮಥ್ರ್ಯದ ರಾಚನಿಕ ಸ್ವರೂಪವನ್ನು ಅರಿಯುವುದಾಗಿದೆ.
ಅಂದರೆ ಈ ನುಡಿ ಮತ್ತು ಒಳನುಡಿ ಎಂಬ ನೆಲೆಗಳನ್ನು ಬೇರೆ ತಾತ್ವಿಕ ಚೌಕಟ್ಟಿನಿಂದ ಮರು ಕಟ್ಟಿಕೊಳ್ಳುವ ಅಗತ್ಯವಿದೆ. ಏಕೆಂದರೆ ನುಡಿಯ ರಚನೆ ಎಂಬುದು ಮಾನವರಲ್ಲಿ ಜನ್ಮಜಾತವಾಗಿ ಬಂದಿರುತ್ತದೆ. ಹೊರತು ಯಾವುದೇ ಸಾಮಾಜಿಕ ವಿಶಿಷ್ಟತೆ ಇಲ್ಲವೇ ರಾಜಕೀಯ ತೀರ್ಮಾನದಿಂದ ನಿರ್ಧಾರವಾಗುವಂತಹದಲ್ಲ. ಪ್ರತೀ ಮಾನವನ ಮೆದುಳಿನಲ್ಲಿ ಅವರು ರೂಢಿಸಿಕೊಳ್ಳುವ ನುಡಿಗೆ ಸಂಬಂಧಿಸಿದ ರಾಚನಿಕ ನಮೂನೆಗಳು ಮಾತ್ರವಿರುವುದಿಲ್ಲ. ಅವನು ಇಲ್ಲವೇ ಅವಳು ರೂಢಿಸಿಕೊಳ್ಳಬಹುದಾದ ಯಾವುದೇ ನುಡಿಗೆ ಹೊಂದಿಕೆಯಾಗುವ ರಾಚನಿಕ ನಮೂನೆಗಳು ಇರುತ್ತವೆ.
ನುಡಿ ಮತ್ತು ಒಳನುಡಿಗಳ ಕುರಿತ ನಿಲುವುಗಳು ಕೇವಲ ಸಾಮಾಜಿಕ ಇಲ್ಲವೇ ರಾಜಕೀಯ ಮಾನದಂಡಗಳಿಂದ ಮಾತ್ರ ರೂಪುಗೊಳ್ಳಲು ಸಾಧ್ಯವಿಲ್ಲ ಎಂಬುದು ಮಾತ್ರ ಖಚಿತವಾದರೂ, ಅವುಗಳು ಅಂತಹ ನೆಲೆಗಳಿಂದಲೇ ಹೆಚ್ಚು ಗಟ್ಟಿಗೊಂಡಿವೆ. ಪರಸ್ಪರ ಸಂವಹನ/ ಅರ್ಥಗ್ರಾಹ್ಯತೆಯ ಕುರಿತ ಕೇಳ್ವಿಯೇ ಇಲ್ಲಿ ಅಪ್ರಸ್ತುತವಾಗಿದೆ. ಏಕೆಂದರೆ ನುಡಿಗಳ ನಡುವಣ ವ್ಯತ್ಯಾಸಗಳು ವಿಕಲ್ಪಗಳ (ಪ್ಯಾರಮೀಟರ್ಸ್) ಮೂಲಕ ಕಾಣಿಸಿಕೊಂಡರೆ, ನುಡಿಗಳ ನಡುವಣ ಸಮಾನತೆಗಳು (ಪ್ರಿನ್ಸಿಪಲ್ಸ್) ತತ್ವಗಳ ಮೂಲಕ ನಿರ್ಧಾರವಾಗುತ್ತವೆ.
ಹಾಗಾಗಿ ನುಡಿ ಮತ್ತು ಒಳನುಡಿಗಳನ್ನು ಗುರುತಿಸುವುದೆಂದರೆ, ಅವುಗಳ ನುಡುವಣ ವಿಕಲ್ಪಗಳನ್ನು ಗುರುತಿಸುವುದೋ ಇಲ್ಲವೇ ಕೇವಲ ಹೊರಪದರ ರಚನೆಗಳಲ್ಲಿ ಕಾಣುವ ವ್ಯತ್ಯಾಸಗಳನ್ನು ಗುರುತಿಸುವುದೋ ಎಂಬ ಗೊಂದಲ ತಲೆಯೆತ್ತುತ್ತದೆ. ಹಾಗಾಗಿ ಪರಸ್ಪರ ಅರ್ಥಗ್ರಾಹ್ಯತೆಯ ತತ್ವ ಅಷ್ಟೊಂದು ಮಹತ್ವದ ಸಂಗತಿಯಾಗಿ ಕಾಣಲಾರದು.
ಜಾನ್ ಲಯನ್ಸ್ (1981) ಎಂಬ ನುಡಿಯರಿಗನ ಪ್ರಕಾರ ನುಡಿಗಳಲ್ಲಿ ಕೆಲವು ಮೇಲು, ಮತ್ತೆ ಕೆಲವು ಕೀಳು ಅನ್ನುವ ಮಾತು ಸೈದ್ಧಾಂತಿಕ ನುಡಿಯರಿಮೆಯಿಂದಾಗಲಿ ಇಲ್ಲವೇ ನುಡಿದತ್ತವನ್ನು ಕಲೆಹಾಕಿ ಆ ಮೂಲಕ ಸಂಶೋಧನೆಯನ್ನು ಮಾಡಿ ಸಾಬೀತುಗೊಳಿಸಿದ ಸಂಶೋಧನೆಯ ಫಲಿತವೆಂದಾಗಲಿ ಅಲ್ಲ. ಇದು ಇನ್ನೂ ಸಂಶೋಧನೆಗೆ ಒಳಪಟ್ಟು ಆ ಮೂಲಕ ನಿರ್ಧಾರಗೊಳ್ಳಬೇಕಾದ ಸಂಗತಿ ಇಲ್ಲವೇ ಇದನ್ನು ಒಂದು ಕಲ್ಪಿತ ಪ್ರಮೆಯೆಂದು ಗುರುತಿಸಬಹುದೇ ಹೊರತು ಬೇರೇನೂವಲ್ಲ.
ಹಾಗಾಗಿ ಹೊಸಕಾಲದ ವೈಚಾರಿಕ ನೆಲೆಯ ಮೇಲೆ ಹುಟ್ಟಿಕೊಂಡ ನಿಗಮನ ತರ್ಕ (ಡಿಡಕ್ಟಿವಿಜಮ್) ವಿಧಾನ ತತ್ವವನ್ನು ಚಾಮ್‍ಸ್ಕಿ ಪರಿಚಯಿಸಿದನು. ಇದರ ಪ್ರಕಾರವೂ ಕೂಡ ನುಡಿಗಳ ನಡುವಿನ ಯಾವುದೇ ಬಗೆಯ ತರತಮಗಳನ್ನು ಗುರುತಿಸುವುದು ಸಾಧ್ಯವಿಲ್ಲ. ಆದರೆ ಚಾಮ್‍ಸ್ಕಿಯ ಪ್ರಕಾರ ಮಾನವರ ನುಡಿಗಳಲ್ಲಿ ‘ಹೆಚ್ಚು ಸಜ್ಜಾದ, ಹೆಚ್ಚು ಅಣಿಯಾದ’ ನುಡಿಗಳು ಮತ್ತು ‘ಕಡಿಮೆ ಸಜ್ಜಾದ, ಕಡಿಮೆ ಅಣಿಯಾದ’ ನುಡಿಗಳೆಂದು ವಿಂಗಡಿಸಬಹುದು. ನುಡಿಗಳ ಬಗ್ಗೆ ಮತ್ಯಾವ ‘ಮೌಲ್ಯ ನಿರ್ಣಯ’ (ವ್ಯಾಲ್ಯೂ ಜೆಡ್ಜಮೆಂಟ್) ಮಾಡಲು ಸಾಧ್ಯ ಇಲ್ಲ. ಹಾಗೂ ಮತ್ಯಾವುದೆ ಮೌಲ್ಯ ನಿರ್ಣಯವೂ ಸಲ್ಲದು.
ಇಂಗ್ಲಿಶ್ ಇವತ್ತು ಲೋಕದಲ್ಲಿ ಪಡೆದಿರುವ ಜಾಗ ತನ್ನದೇ ಆದ ಅಭಿವ್ಯಕ್ತಿಯ ಬಲದಿಂದ ಅಲ್ಲ. ಇದೊಂದು ಚಾರಿತ್ರಿಕ ಬೆಳವಣಿಗೆಯ ಪರಿಣಾಮದಿಂದ ರೂಪುಗೊಂಡ ಆಟ ಎಂದು ಹೇಳಬಹುದು. ಚರಿತ್ರೆಯ ನಿಲುವುಗಳು ಇಂಗ್ಲಿಶ್‍ನ್ನು ಹೆಚ್ಚು ಹೆಚ್ಚು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಂಸ್ಕೃತ ಇಲ್ಲವೇ ಬೇರಾವುದೇ ನುಡಿಗಳು ಈ ಜಾಗದಲ್ಲಿ ಇದ್ದಿದ್ದರೆ, ಈ ಮಟ್ಟಿನ ಮಹತ್ವವನ್ನು ಪಡೆದುಕೊಳ್ಳುತ್ತಿದ್ದವು ಎಂದು ಹೇಳುವುದು ದುಸ್ತರ. ಒಂದು ವೇಳೆ ಬೇರೆ ನುಡಿಗಳು ಬೆಳೆಯಬಹುದಿತ್ತೆಂದು ಅನ್ನಿಸಿದರೂ, ಇಂಗ್ಲಿಶ್ ಹಾಗೂ ಸಂಸ್ಕೃತದಷ್ಟು ಬಲಶಾಲಿಗಳಾಗಿ ರೂಪುಗೊಳ್ಳುತ್ತಿರಲಿಲ್ಲ ಎಂಬುದು ಗಮನಾರ್ಹ.
ಪರಸ್ಪರ ಅರ್ಥಗ್ರಾಹ್ಯತೆಯ ತತ್ವ: ತೊಡಕುಗಳು ಎಂತಹವು?
ಪರಸ್ಪರ ಅರ್ಥಗ್ರಾಹ್ಯತೆಯ ತತ್ವವನ್ನು ನುಡಿ ಹಾಗೂ ಒಳನುಡಿಗಳ ನಡುವೆ ಗಡಿಗೆರೆಗಳನ್ನು ಗುರುತಿಸಲು ಮಾನದಂಡವನ್ನಾಗಿ ಬಳಸುವಲ್ಲಿ ಸಾಕಷ್ಟು ಸಿಕ್ಕಲುಗಳಿವೆ. ಈಗಾಗಲೇ ಕೆಲವು ಸಿಕ್ಕುಗಳು ಮೇಲಿನ ಚರ್ಚೆಯಿಂದ ನಮ್ಮ ಗಮನಕ್ಕೆ ಬಂದಿವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದ ತೊಡಕು ಏನೆಂದರೆ ಅರ್ಥದ ಮಟ್ಟ (ಪ್ರಮಾಣ)ದಲ್ಲಿ ವ್ಯತ್ಯಾಸಗಳಿವೆ. ಅಂದರೆ ಸ್ವೀಡಿಶ್ ನುಡಿಯಿಗರು ನಾರ್ವೇಯನ್ನು ಚನ್ನಾಗಿ ಅರಿಯಬಲ್ಲರು.
ಆದರೆ ನಾರ್ವೇ ನುಡಿಯಿಗರಿಗೆ ಸ್ವೀಡಿಶ್‍ನ್ನು ಅದೇ ಮಟ್ಟದಲ್ಲಿ ಅರಿಯಲು ಸಾಧ್ಯವಿಲ್ಲ. ಸ್ಕ್ಯಾಂಡಿನೆವಿಯನ್ನರಲ್ಲಿ ಪೂರ್ಣ ಪ್ರಮಾಣದ ಪರಸ್ಪರ ಸಂವಹನ ಸಾಧ್ಯವಿಲ್ಲದಿದ್ದರೂ, ಅವರಲ್ಲಿ ತಕ್ಕಮಟ್ಟಿಗಾದರೂ ಪರಸ್ಪರ ಸಂವಹನ ಇರುವುದನ್ನು ಕಾಣಬಹುದು. ಇಂತಹ ಸನ್ನಿವೇಶದಲ್ಲಿ ಕೆಲವು ರಿಯಾತಿಗಳು ಇದ್ದೇ ಇರುತ್ತವೆ. ಎತ್ತುಗೆಗಾಗಿ ನಿಧಾನವಾಗಿ ಮಾತನಾಡುವುದು, ಪದಗಳು ಇಲ್ಲವೇ ಉಲಿಗಳನ್ನು ಬಿಟ್ಟು ಉಚ್ಚರಿಸುವುದು, ಅರ್ಥ ಪಲ್ಲಟಗಳನ್ನು ಉಂಟುಮಾಡುವುದು ಮುಂತಾದವುಗಳನ್ನು ಕಾಣಬಹುದು.
ಆದರೆ ಜರ್ಮನ್ನಿನ ಒಳನುಡಿಗಳಲ್ಲಿ ಪರಸ್ಪರ ಸಂವಹನಕ್ಕೆ ಅವಕಾಶವೇ ಇಲ್ಲ. ಈ ಎರಡೂ ಸನ್ನಿವೇಶಗಳಲ್ಲಿ ಪರಸ್ಪರ ಅರ್ಥಗ್ರಾಹ್ಯತೆಯ ಮಟ್ಟದಲ್ಲಿ ಯಾವುದೇ ಸಮಾನತೆಯಿಲ್ಲ ಎಂಬುದು ಮಾತ್ರ ಎದ್ದು ಕಾಣುತ್ತದೆ. ನಮ್ಮ ಸಂದಂರ್ಭದಲ್ಲಿಯೂ ಇಂತಹ ತೊಡಕುಗಳಿವೆ. ಆದರೆ ಅವುಗಳನ್ನು ಬಿಡಿಸಿ ನೋಡುವ ಬಗೆಗಳು ಬೇರೆಯಾಗಿವೆ ಎಂದು ಕಾಣುತ್ತದೆ.
ಅಂದರೆ ಮಲೆಯಾಳಂ ನುಡಿಯಿಗರು ತಕ್ಕ ಮಟ್ಟಿಗೆ ತಮಿಳನ್ನು ಅರಿಯಬಲ್ಲವರಾದರೆ, ತಮಿಳು ನುಡಿಯಿಗರಿಗೆ ಮಲೆಯಾಳಂ ಅರಿತುಕೊಳ್ಳಲು ದುಸ್ತರವಾಗುತ್ತದೆ. ಹಾಗೂ ಬೀದರ ಕನ್ನಡದ ಆಡುಗರು ಕರ್ನಾಟಕದ ಎಲ್ಲ ವಲಯಗಳ ಕನ್ನಡವನ್ನು ಅರಿತುಕೊಳ್ಳಬಲ್ಲರು. ಆದರೆ ಅವರ ಕನ್ನಡವನ್ನು ಇತರ ಒಳನುಡಿಯಿಗರು ಅದೇ ಪ್ರಮಾಣದಲ್ಲಿ ಅರಿತುಕೊಳ್ಳಲಾರರು.
ಪರಸ್ಪರ ಅರ್ಥಗ್ರಾಹ್ಯತೆಯ ತತ್ವ ಬೇರೆಯೇ ಬಗೆಯ ಮಾನದಂಡಗಳನ್ನು ನೆಚ್ಚಿಕೊಂಡಿರುತ್ತೆಂದು ಕಾಣುತ್ತದೆ. ಅವುಗಳೆಂದರೆ ಬೇರೆ ಒಳನುಡಿಗಳಿಗೆ ಒಡ್ಡಿಕೊಳ್ಳುವ ಪ್ರಮಾಣ, ಶಿಕ್ಷಣದಲ್ಲಿ ಒಳನುಡಿಗಳಿಗೆ ಸಿಗುವ ಅವಕಾಶ ಇಲ್ಲವೇ ಬಳಕೆಯ ಪ್ರಮಾಣ ಹಾಗೂ ಬೇರೆ ಒಳನುಡಿ ಮತ್ತು ಆ ಒಳನುಡಿಯಿಗರನ್ನು ಒಪ್ಪುವ ಇಲ್ಲವೇ ತಾಳಿಕೊಳ್ಳುವ ಬಗೆಗಳನ್ನು ಕುರಿತಾಗಿರುತ್ತದೆ.
ಏಕೆಂದರೆ ಅಧಿಕಾರ ಸಂಬಂಧದ ಆವರಣದಲ್ಲಿರುವ ಒಳನುಡಿ ಮತ್ತು ಅವುಗಳ ಆಡುಗರು ಪ್ರಜ್ಞಾಪೂರಕವಾಗಿಯೇ ತಮ್ಮ ಒಳನುಡಿಗೆ ಹೊರತಾದ ಬೇರೊಂದು ಒಳನುಡಿಯನ್ನು ನಿರಾಕರಿಸುವ ಸಾಧ್ಯತೆಗಳಿರುತ್ತವೆ. ಕಾರಣ ‘ಎ’ ಒಳನುಡಿ ‘ಬಿ’ಕ್ಕಿಂತ ದೊಡ್ಡದು ಇಲ್ಲವೇ ಚಿಕ್ಕದು ಹಾಗೂ ‘ಎ’ ಒಳನುಡಿ ಮೇಲು ಇಲ್ಲವೇ ‘ಬಿ’ ಒಳನುಡಿ ಕೀಳು ಎಂಬ ನಿಲುವುಗಳು ಕೂಡ ಇಂತಹ ನಿರಾಕರಣೆಗೆ ಒತ್ತಾಸೆಯಾಗಿರುತ್ತವೆ.
ಹಾಗಾಗಿ ಈ ಪರಸ್ಪರ ಅರ್ಥಗ್ರಾಹ್ಯತೆಯ ತತ್ವಕ್ಕೆ ತಕ್ಕಮಟ್ಟಿನ ಪ್ರಾಮುಖ್ಯತೆ ಇದ್ದಂತೆ ಕಂಡರೂ, ಯಾವುದು ನುಡಿ, ಯಾವುದು ಒಳನುಡಿ ಹಾಗೂ ಯಾವುದು ಏನಲ್ಲ ಎಂಬುದನ್ನು ನಿರ್ಧರಿಸುವಲ್ಲಿ ಇದರಿಂದ ಯಾವುದೇ ಬಗೆಯ ಸಹಾಯ ಸಿಗುವುದಿಲ್ಲ. ಸ್ಕ್ಯಾಂಡಿನೆವಿಯನ್ ಹಾಗೂ ಜರ್ಮನ್ ನುಡಿಗಳ ಕುರಿತ ಚರ್ಚೆಗಳು ಇಂತಹ ಅಸಂಗತಗಳನ್ನು ಎತ್ತಿ ತೋರಿಸಿವೆ.
ನುಡಿ ತನ್ನನ್ನು ವಿವರಿಸಿಕೊಳ್ಳಲು ಬೇಕಾಗಿರುವ ಲಕ್ಷಣಗಳನ್ನು ತನ್ನ ಒಡಲಲ್ಲಿಯೇ ಇರಸಿಕೊಂಡಿದ್ದರೂ, ಅದು ಕೇವಲ ನುಡಿಯ (ಲಿಂಗ್ವಿಸ್ಟಿಕ್) ಕಲ್ಪನೆ ಮಾತ್ರವಾಗಿ ಉಳದಿಲ್ಲ. ಬದಲಾಗಿ ಸಾಂಸ್ಕೃತಿಕ, ರಾಜಕೀಯ ಕಲ್ಪನೆಯೂ ಆಗಿರುತ್ತದೆ ಎಂಬುದು ಗಮನಾರ್ಹ. ನಾರ್ವೇ, ಸ್ವೀಡಿಶ್, ಡೆನಿಶ್ ಹಾಗೂ ಜರ್ಮನ್ ನುಡಿಗಳ ಕುರಿತ ನಿಲುವುಗಳು ರಾಜಕೀಯ, ಪ್ರಾದೇಶಿಕ, ಸಾಮಾಜಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪ್ರಭಾವಕ್ಕೆ ಒಳಗಾಗಿರುವುದು ಇಲ್ಲಿ ನಿಚ್ಚಳವಾಗಿ ಕಾಣುತ್ತದೆ.
ನುಡಿಯರಿಮೆಗೆ ಹೊರತಾದ ಇಂತಹ ತೀರ್ಮಾನಗಳೇ, ನುಡಿ ಮತ್ತು ಒಳನುಡಿಗಳನ್ನು ಪ್ರತ್ಯೇಕಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಂದರೆ ನಾರ್ವೇ, ಸ್ವೀಡಿಶ್, ಡೆನಿಶ್ ನುಡಿಗಳಿಗೆ ತಮ್ಮದೇ ಆದ ಪ್ರಾದೇಶಿಕ ಸ್ವಾಯತ್ತತೆ, ರಾಷ್ಟ್ರ, ರಾಜಕೀಯ ಹಕ್ಕು, ವರ್ಣಮಾಲೆ, ಸೊಲ್ಲರಿಮೆ ಹಾಗೂ ಸಾಹಿತ್ಯಗಳು ಇರುವುದರಿಂದ, ಆಯಾ ನುಡಿಯಿಗರು ತಾವಾಡುವ ನುಡಿಗಳು ಬೇರೆ ಬೇರೆಯೆಂದು ನಂಬಿರುತ್ತಾರೆ.
ಆ ಕಾರಣಕ್ಕಾಗಿ ಇವು ಮೂರು ಬೇರೆ ನುಡಿಗಳಾಗಿ ನೆಲೆನಿಂತಿವೆ. ರಾಚನಿಕವಾಗಿ ಎಷ್ಟೇ ಹತ್ತಿರವಿದ್ದರೂ, ಹಿಂದಿ ಮತ್ತು ಉರ್ದು ಎರಡೂ ಬೇರೆ ಬೇರೆ ನುಡಿಗಳು. ಇಲ್ಲಿ ನುಡಿಯರಿಮೆಯ ಯಾವುದೇ ಸಮರ್ಥನೆಗಳಿಗೆ ಅವಕಾಶವಿಲ್ಲ. ಕರ್ನಾಟಕದಲ್ಲಿರುವ ತುಳು, ಕೊಂಕಣಿ, ಬ್ಯಾರಿ, ಉರ್ದು, ಕೊಡವ ಮುಂತಾದವುಗಳಿಗೆ ಇಂತಹ ಯಾವುದೇ ಸಾಂಸ್ಥಿಕ ಸ್ವಾಯತ್ತತೆ ಇಲ್ಲವೇ ಅಧಿಕಾರ ಇಲ್ಲದಿರುವುದರಿಂದ, ಇವುಗಳನ್ನು ಬಹುತೇಕ ಸನ್ನವೇಶದಲ್ಲಿ ಕೇವಲ ಒಳನುಡಿಗಳನ್ನಾಗಿ ಆರೋಪಿಸಲಾಗುತ್ತದೆ.
ಈ ಕಾರಣಗಳಿಂದಲೇ ‘ನುಡಿ’ ಎನ್ನುವುದು ನುಡಿಯರಿಮೆಯ ಪ್ರಕಾರವೂ ಒಂದು ನಾನ್‍ಟೆಕ್ನಿಕಲ್ ಪದವಾಗಿದೆ ಅಷ್ಟೇ. ನುಡಿ, ಒಳನುಡಿ, ಪರಸ್ಪರ ಅರ್ಥಗ್ರಾಹ್ಯತೆ ಮುಂತಾದ ವರ್ಣಾತ್ಮಕ ಅರಿಮೆ ಪದಗಳನ್ನು ಬಣ್ಣಿಸುವಾಗ ಅತ್ಯಂತ ನಿಗಾವಹಿಸಬೇಕಾಗುತ್ತದೆ.
ನುಡಿ ಹಾಗೂ ಒಳನುಡಿಗಳ ನುಡುವಣ ಅಂತರ್ಸಂಬಂಧಗಳು ಸಾಮಾಜಿಕ ಸ್ವರೂಪದ್ದಾಗಿರುತ್ತವೆ. ಹಾಗಾಗಿ ಇವುಗಳನ್ನು ಸ್ವಾಯತ್ತತೆ ವರ್ಸಸ್ ವೈವಿಧ್ಯತೆ ಎಂಬ ವಿರೋಧಾತ್ಮಕ ನೆಲೆಯಿಂದ ವ್ಯಾಖ್ಯಾನಿಸಬೇಕಾಗುತ್ತದೆ.
ಅಂದರೆ ಯಾವುದೇ ಒಂದು ಸ್ವಾಯತ್ತ ನುಡಿ ಇಲ್ಲವೇ ನುಡಿಬಗೆಯನ್ನು ವಿಶಿಷ್ಟವೆಂದೋ ಸ್ವತಂತ್ರವೆಂದೋ ಗ್ರಹಿಸಿದರೆ, ಎಷ್ಟೋ ನುಡಿಬಗೆಗಳು ವೈವಿಧ್ಯತೆಯನ್ನು, ಯಾವುದು ತನ್ನನ್ನು ಒಂದು ಸ್ವಾಯತ್ತ ನುಡಿಯೆಂದು ಗುರುತಿಸಿಕೊಂಡಿರುತ್ತದೆಯೋ, ಆ ನುಡಿಯಲ್ಲಿ ಸಮಾವೇಶಗೊಳಿಸಲಾಗುತ್ತದೆ.
ಅವುಗಳ ನಡುವಣ ಯಾವುದೇ ರಾಚನಿಕ ಸಾಮ್ಯ ಹಾಗೂ ವೈಸಮ್ಯಗಳನ್ನು ಲೆಕ್ಕಿಸದೇ ಇಂತಹ ನಿಲುವುಗಳನ್ನು ತಾಳುವ ಬಗೆ ಅದು ಹೇಗೆ ನುಡಿಯರಿಮೆಯ ನೆಲೆಯಾಗುತ್ತದೆ?. ಈ ವಿವರಗಳು ಪರಸ್ಪರ ಅರ್ಥಗ್ರಾಹ್ಯತೆ ತತ್ವದ ನೆಲೆಗಳನ್ನು ಇನ್ನಷ್ಟೂ ಜಟಿಲಗೊಳಿಸುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ
ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆಯ ಬಾಷಾನಗರ,ಆನೆಕೊಂಡ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿ ನಂತರ ಮಾತನಾಡಿದರು.
ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಅದನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದೆ ಎಂದ ಅವರು ಶಾಮನೂರು ಕುಟುಂಬವು ಸದಾ ಜನರ ಸಮಸ್ಯೆಗಳ ಪರಿಹಾರಕ್ಕೆ ನಿಂತುಕೊಳ್ಳುತ್ತದೆ ಎಂಬ ಭರವಸೆಯನ್ನೂ ನೀಡಿದರು.
ಪ್ರಚಾರದ ವೇಳೆ ಸ್ಥಳೀಯರು ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರ ಬಗ್ಗೆ ಜನರಿಗೆ ಭರವಸೆ ನೀಡಿದರು. ಜನರ ಹಕ್ಕುಪತ್ರದ ಸಮಸ್ಯೆಗಳು ಕುರಿತು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದರು.ಈಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜನರ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡುತ್ತಿದ್ದಾರೆ ಎಂದರು.
ಯುವ ನಾಯಕ ಸಮರ್ಥ್ ಶಾಮನೂರು ಕುರಿತು ಮಾತನಾಡಿದ ಅವರು ಸಮರ್ಥ್ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿ, ಏಪ್ರಿಲ್ 9 ರಂದು ಮತಗಟ್ಟೆಗೆ ಬಂದು ಕ್ರಮ ಸಂಖ್ಯೆ 3ರ ‘ಹಸ್ತ’ ಚಿಹ್ನೆಗೆ ಮತ ಹಾಕಿ ಸಮರ್ಥ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
ಸುದ್ದಿದಿನ,ದಾವಣಗೆರೆ:ಮುಖ್ಯಮಂತ್ರಿಗಳೇ, ಒಳ್ಳೆಯ ಕಾರಣಕ್ಕೆ ನಿಮ್ಮ ಸರಕಾರ ಯಾವಾಗ ಸುದ್ದಿಯಾಗಿದೆ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರಕಾರದ ದುರಾಡಳಿತ ಸಂಬಂಧ ಆರೋಪ ಪಟ್ಟಿ ಬಿಡುಗಡೆ ಮಾಡಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ 3 ವರ್ಷಗಳಲ್ಲಿ ಈ ಸರಕಾರ ಒಳ್ಳೆಯ ಕಾರಣಕ್ಕೆ ಯಾವಾಗ ಹೆಸರಾಗಿತ್ತು ಎಂದು ಹೇಳಲೂ ಸಿಗುವುದಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ, ದರೋಡೆ ಪ್ರಕರಣಗಳು ಸುದ್ದಿಯಾದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು 3 ವರ್ಷಗಳಾಗಿವೆ. ಈ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ ಕುರಿತ ಚಾರ್ಜ್ ಶೀಟನ್ನು ಇವತ್ತು ಬಿಡುಗಡೆ ಮಾಡಿದ್ದೇವೆ ಎಂದರು.
ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸುದ್ದಿಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಇದೆ. ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡರು. ಬಾಣಂತಿಯರು, ಹಸುಗೂಸುಗಳ ಸರಣಿ ಸಾವಿನ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆಗೆ ಈ ಸರಕಾರ ಸುದ್ದಿಯಲ್ಲಿತ್ತು. ಅಂಗನವಾಡಿ ಶಿಕ್ಷಕಿಯರ ಚಳವಳಿ, ಆಶಾ ಕಾರ್ಯಕರ್ತೆಯರ ಚಳವಳಿ, ಅತಿಥಿ ಉಪನ್ಯಾಸಕರಿಂದ ಸಂಬಳ ಸಿಗುತ್ತಿಲ್ಲವೆಂದು ಹೋರಾಟ, ಗುತ್ತಿಗೆ ನೌಕರರ ಹೋರಾಟ- ಹೀಗೆ ಚಳವಳಿಗಳ ಕಾಟಕ್ಕೆ ಈ ಸರಕಾರ ಸುದ್ದಿಯಲ್ಲಿದೆ ಎಂದು ವ್ಯಂಗ್ಯವಾಡಿದರು.
ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ…
ಕಳೆದ 3 ವರ್ಷದಲ್ಲಿ ಕೆಟ್ಟ ಕಾರಣಕ್ಕಾಗಿ ಈ ಸರಕಾರ ಸುದ್ದಿಯಲ್ಲಿದೆಯೇ ಹೊರತು ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ವಿಶ್ಲೇಷಿಸಿದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಲಿಯಾದವರು ನೂರಾರು ಜನ; ರಸ್ತೆ ಗುಂಡಿ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಹೀಗೆ ಪ್ರತಿನಿತ್ಯ ಸರಕಾರ ಸುದ್ದಿಯಲ್ಲಿ ಇರುವುದು ಕೇವಲ ಕೆಟ್ಟ ಕಾರಣಕ್ಕಾಗಿ ಎಂದು ಆರೋಪಿಸಿದರು. ಅಭಿವೃದ್ಧಿ ಕೆಲಸ ಮಾಡಿದ್ದಕ್ಕಾಗಿ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ಆಕ್ಷೇಪಿಸಿದರು.
ಮುಡಾ, ವಾಲ್ಮೀಕಿ ನಿಗಮದ ಹಗರಣ ಮಾನಗೆಟ್ಟ ಕೆಲಸವಲ್ಲವೇ?
ಮುಖ್ಯಮಂತ್ರಿಗಳು ಬಿಜೆಪಿಯವರು ಮಾನಗೆಟ್ಟವರು ಎಂದು ಭಾಷಣದಲ್ಲಿ ಹೇಳಿದ್ದಾರೆ. ಯಾರು ಮುಖ್ಯಮಂತ್ರಿಗಳೇ ಮಾನಗೆಟ್ಟವರು? ಮುಡಾ ಹಗರಣ ಯಾರ ಮೇಲೆ ಬಂತು? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ನಿಮ್ಮ ಸರಕಾರದ ಸಚಿವರೇ ರಾಜೀನಾಮೆ ಕೊಡಬೇಕಾಯಿತಲ್ಲವೇ? ಇದು ಮಾನಗೆಟ್ಟ ಕೆಲಸವಲ್ಲವೇ? ಎಂದು ಕೇಳಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆ ಆಗಬೇಕಾದ ಹಣವನ್ನು ನಿಮ್ಮ ಒಬ್ಬ ಸಚಿವರು ಹೆಂಡತಿಗೆ ಒಡವೆ ಕೊಡಿಸಲು, ಚುನಾವಣೆಗೆ ಬಾರ್ ನಿಂದ ಎಣ್ಣೆ ಸರಬರಾಜು ಮಾಡಲು ಹಣ ಬಳಸಿದ್ದು ಮರ್ಯಾದೆ ಇದ್ದವರು ಮಾಡುವ ಕೆಲಸವೇ ಎಂದು ಕೇಳಿದರು.
ಮರ್ಯಾದೆ ಇದ್ದವರು ಅಧಿಕಾರಕ್ಕೆ ಅಂಟಿಕೊಳ್ಳುವರೇ?
ನೀವು ಬಿಜೆಪಿ ಮೇಲೆ ಶೇ 40 ಆರೋಪ ಹೊರಿಸಿ ಅಧಿಕಾರಕ್ಕೆ ಬಂದಿದ್ದೀರಿ. ಗುತ್ತಿಗೆದಾರರು ಶೇ 60 ಕಮಿಷನ್‍ನ ಸರಕಾರ ಎಂದು ನಿಮ್ಮ ಸರಕಾರದ ಮೇಲೆ ಆರೋಪ ಮಾಡಿದ್ದಾರಲ್ಲವೇ? ಮರ್ಯಾದೆ ಇದ್ದವರು ಆ ಆರೋಪ ಕೇಳಿಯೂ ಅಧಿಕಾರಕ್ಕೆ ಅಂಟಿಕೊಳ್ಳುತ್ತಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮ್ಮ ಅಬಕಾರಿ ಸಚಿವರ ಮೇಲೆ ಬಾರ್ ಮಾಲೀಕರು ತಿಂಗಳ ಮಾಮೂಲಿ ಕೇಳುವ ಕುರಿತು ಆರೋಪ ಮಾಡಿದ್ದಾರಲ್ಲವೇ? ಇದು ಮರ್ಯಾದೆ ಇದ್ದವರು ಮಾಡುವ ಕೆಲಸವೇ? ಮಾನಗೆಟ್ಟವರು ಮಾಡುವ ಕೆಲಸವೇ ಎಂದು ಪ್ರಶ್ನೆ ಹಾಕಿದರು.
ಮುಖ್ಯಮಂತ್ರಿಗಳೇ, ಇಡೀ ಸಂಪುಟದಲ್ಲಿ ಮಾನಗೆಟ್ಟವರು ಇದ್ದಾರೆಯೇ ಹೊರತು ಮರ್ಯಾದೆ ಇದ್ದವರು ಯಾರಿದ್ದಾರೆ ಹೇಳಿ ಎಂದು ಕೇಳಿದರು. ಮಾನಗೆಟ್ಟ ಕೆಲಸ ಮಾಡುವವರನ್ನು ಸಚಿವರನ್ನಾಗಿ ಮಾಡಿಕೊಂಡು, ಶೇ 60ರ ಆರೋಪ ಹೊತ್ತುಕೊಂಡು ನೀವು ಬಿಜೆಪಿ ವಿರುದ್ಧ ಮಾನಗೆಟ್ಟ ಬಿಜೆಪಿ ಎಂದು ಆರೋಪ ಮಾಡುತ್ತೀರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಿಮ್ಮದು ದರೋಡೆಕೋರ ಸರಕಾರವಲ್ಲವೇ?
ರಾಜ್ಯದ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಬಿಜೆಪಿಯನ್ನು ಜೇಬುಗಳ್ಳರು ಎಂದಿದ್ದಾರೆ. ನೀವು ಬಿಜೆಪಿ ಸರಕಾರವನ್ನು ಜೇಬುಗಳ್ಳರು ಎಂದು ಕರೆಯುವುದಾದರೆ ಯುದ್ಧದ ಕಾರಣಕ್ಕೆ ಕೆಲವು ಬೆಲೆ ಏರಿಕೆಗಳಾಗಿವೆ. ನಿಮ್ಮ ಸರಕಾರವನ್ನು ದರೋಡೆಕೋರ ಸರಕಾರ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು. ನಿಮ್ಮ ಸರಕಾರ ಯಾವ್ಯಾವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂಬ ಪಟ್ಟಿ ಕೊಡಲೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ..
ನಂದಿನಿ ಹಾಲಿನ ದರ ಏರಿಕೆ ಮಾಡಿದ್ದೀರಿ. ಪೆಟ್ರೋಲ್ ಮೇಲೆ 3 ರೂ. ಸೆಸ್, ಡೀಸೆಲ್ ಮೇಲೆ 5.08 ರೂ. ಸೆಸ್ ಹಾಕಿದ್ದೀರಿ. ಕೇಂದ್ರ ಸರಕಾರ ದರ ಇಳಸಿದರೆ ನೀವು ಸೆಸ್ ಹಾಕಿ ಅವರ ಲಾಭ ಜನರಿಗೆ ಸಿಗದಂತೆ ಮಾಡಿದ್ದೀರಿ ಎಂದು ಟೀಕಿಸಿದರು. ಬಸ್ ಪ್ರಯಾಣ ದರ ಶೇ 15, ಮೆಟ್ರೋ ದರ ಶೇ 50ರಷ್ಟು ಹೆಚ್ಚಿಸಿದ್ದೀರಿ. ಪ್ರತಿ ಯೂನಿಟ್ 4.50 ರೂ. ವಿದ್ಯುತ್ ದರವನ್ನು ರೂ 5.90 ಮಾಡಿದ್ದೀರಿ. ವಾಣಿಜ್ಯ ದರವನ್ನು 7 ರೂ.ಗೂ ಹೆಚ್ಚಳ ಮಾಡಲಾಗಿದೆ. ಅಬಕಾರಿ ಸುಂಕವನ್ನು ಶೇ 20ರಷ್ಟು ಏರಿಸಿದ್ದೀರಿ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದೀರಿ. 20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ. ಅದರ ಜಾಗಕ್ಕೆ 100, 200 ರೂ.ಗಳ ಸ್ಟಾಂಪ್ ಪೇಪರ್ ಖರೀದಿಸಬೇಕಾಗಿದೆ. ನಮ್ಮ ಚಿನ್ನ ನಾವು ಒತ್ತೆ ಇಡಲು 0.5ರಷ್ಟು ಸ್ಟಾಂಪ್ ಡ್ಯೂಟಿ ಕಟ್ಟಬೇಕಾಗಿದೆ ಎಂದು ಆಕ್ಷೇಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ3 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ3 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ3 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ಅಂಕಣ2 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ2 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ


