ಅಂತರಂಗ
ಅರಿಮೆಯ ಅರಿವಿರಲಿ-58 : ಶಿಶುಪ್ರಧಾನ ಸಮಾಜ
- ಯೋಗೇಶ್ ಮಾಸ್ಟರ್
ಮಾನವ ಸಮಾಜವು ಪ್ರಾರಂಭವಾಗಿ ಬಹಳ ಕಾಲವಾಯಿತು. ಆಗಿನ ಸಮಸ್ಯೆಗಳಿಗೆ, ಸಂಘರ್ಷಗಳಿಗೆ ಮತ್ತು ವೈಫಲ್ಯಗಳಿಗೆ ಪ್ರಾರಂಭಿಕ ಹಂತಗಳಲ್ಲಿನ ಪ್ರಯೋಗಗಳು ಮತ್ತು ಅನುಭವಗಳಿಗೆ ಇದ್ದಂತಹ ಸಂಪನ್ಮೂಲಗಳ ಕೊರತೆ ಎಂದು ಮನ್ನಿಸಬಹುದು.
ಮಾನವ ಸಮಾಜ ಹೊಂದಿರುವ ಅನುಭವದ ಸುದೀರ್ಘ ಅವಧಿಯನ್ನು ಗಣನೆಗೆ ತೆಗೆದುಕೊಂಡರೆ ಈ ಹೊತ್ತಿಗೆ ಇಡೀ ಮಾನವ ಜಗತ್ತು ಆರೋಗ್ಯ, ಸೌಹಾರ್ದ ಮತ್ತು ಆನಂದದಿಂದ ಇರಬೇಕಿತ್ತು. ಕನಿಷ್ಟ ಪಕ್ಷ ಸಮಸ್ಯೆ, ಸಂಘರ್ಷ ಮತ್ತು ವೈಫಲ್ಯಗಳು ಕ್ಷೀಣಿಸಿಬೇಕಿತ್ತು. ಆದರೆ ಇಂದು ನಾವು ಬದುಕುತ್ತಿರುವ ಸಮಾಜದಲ್ಲಿ ಎಲ್ಲವೂ ಸರಿಯಾಗಿಲ್ಲ.
ಇನ್ನೂ ತನ್ನ ಒಟ್ಟಾರೆಯ ಬದುಕಿನಲ್ಲಿ ಸ್ಥಿರತೆ ಕಂಡಿಲ್ಲ. ಆರ್ಥಿಕ ಸಮಸ್ಯೆ, ಮೂಲಭೂತ ಸೌಕರ್ಯಗಳ ಕೊರತೆ, ನಾಗರಿಕ ದಂಗೆ, ಯುದ್ಧ, ಸಾಮಾಜಿಕ ಅಸಮಾನತೆ, ಧಾರ್ಮಿಕ ಸಂಘರ್ಷ, ಜನಾಂಗೀಯ ದ್ವೇಷ, ಸೈದ್ಧಾಂತಿಕ ಸಮರ, ಶ್ರೇಷ್ಟತೆಯ ಪೈಪೋಟಿ, ಮೌಢ್ಯಾಚರಣೆಗಳು, ಪರಿಸರ ನಾಶ, ಜೀವನಮಟ್ಟದ ವೈಫಲ್ಯ, ಸಂಬಂಧಗಳ ಗೊಂದಲ ಮತ್ತು ಇನ್ನೂ ಅನೇಕ ಮನುಷ್ಯ ಕೇಂದ್ರಿತ ಸಮಸ್ಯೆಗಳು ತಾಜಾ ಬೆಂಕಿಯಂತೆಯೇ ಉರಿಯುತ್ತಿವೆ.
ಹೌದು, ಬೆಂಕಿಯ ಜ್ವಾಲೆಗಳಲ್ಲಿ ಹೊಸತು ಹಳತುಗಳಿಲ್ಲ. ಸಮಸ್ಯೆ, ಸಂಘರ್ಷ ಮತ್ತು ವೈಫಲ್ಯಗಳ ಬೆಂಕಿಯಲ್ಲಿ ಬೇಯುತ್ತಿರುವ ಮನುಷ್ಯನು ಇಷ್ಟು ಸುಧೀರ್ಘಕಾಲ ಸಾಮಾಜಿಕ ಜೀವನ ನಡೆಸಿದರೂ ಎಡವಿರುವುದು ಎಲ್ಲಿ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಅವನಿಗಿರುವ ಸಾಮಾಜಿಕ ಅನುಭವ ಇನ್ನೂ ಸಾಲದೇ? ಒಬ್ಬ ವ್ಯಕ್ತಿ, ಒಂದು ಕುಟುಂಬ, ಒಂದು ಸಮಾಜ, ಒಂದು ರಾಷ್ಟ್ರ ಮತ್ತು ಇರುವುದೊಂದೇ ಭೂಮಿ; ಆರೋಗ್ಯವಾಗಿ ಆನಂದದಿಂದ ಇರಲು ಇನ್ನೂ ಸಂಪೂರ್ಣ ಸಾಧಿಸಲು ಸಾಧ್ಯವಿಲ್ಲದಿರುವುದು ಮನುಷ್ಯ ತನ್ನ ಆದ್ಯತೆಯನ್ನು ಗುರುತಿಸಿಕೊಂಡಿಲ್ಲದೇ ಇರುವುದು ಎಂದು ನನ್ನ ಅಭಿಪ್ರಾಯ.
ಮಾನವ ಸಮಾಜದ ಆದ್ಯತೆಯ ವಿಷಯಗಳ ಪಟ್ಟಿಯನ್ನು ಪುನರ್ಪರಿಶೀಲನೆ ಮಾಡಬೇಕಿದೆ. ಇದರಿಂದ ಈಗ ಮತ್ತು ನಾಳೆ, ನಾವು ಹಾಗೂ ಮುಂದಿನ ಪೀಳಿಗೆಗಳು, ಕನಿಷ್ಟ ಪಕ್ಷ ಮನುಷ್ಯ ಮಾಡುವ ದುರಂತಗಳಿಂದಾದರೂ ಬಿಡುಗಡೆಯನ್ನು ಪಡೆಯಬಹುದು.
ಮಕ್ಕಳ ಪೋಷಣೆ ಮತ್ತು ಶಿಕ್ಷಣವನ್ನು ಆದ್ಯತೆಯ ಪಟ್ಟಿಯಲ್ಲಿ ಯಾವ ಕ್ರಮದಲ್ಲಿ ಸೂಚಿತವಾಗಿವೆ ಎನ್ನುವುದರ ಮೇಲೆ ಮಾನವ ಸಮಾಜದ ವರ್ತಮಾನದ ಮತ್ತು ಭವಿಷ್ಯದ ಬದುಕು ನಿರ್ಧರಿತವಾಗಿದೆ. ನಿನ್ನೆಗಳ ಸಂಘರ್ಷಗಳು, ಸಮಸ್ಯೆಗಳು, ಸಂಕಷ್ಟಗಳು, ಸಂಕಟಗಳು ಪ್ರಮಾದಗಳಾಗಿ ಇಂದಿನ ಮಕ್ಕಳ ಮನಸ್ಸಿನ ಮೇಲೆ, ಭಾವನೆಗಳ ಮೇಲೆ, ಪೋಷಣೆಯ ಮೇಲೆ ಮತ್ತು ಶಿಕ್ಷಣದ ಮೇಲೆ ಪ್ರಭಾವ ಬೀರಿದರೆ ನಾಳಿನ ಸಮಾಜವು ಅಸ್ಥಿರತೆಯಲ್ಲಿಯೇ ಇರುತ್ತದೆ. ಹಳೆಯ ಎಲ್ಲಾ ಸಂಕಟಗಳು ಹೊಸ ರೂಪಗಳಲ್ಲಿ ಜೀವಂತವಾಗಿಯೇ ಇರುತ್ತದೆ.
ಮಕ್ಕಳ ಮನಸ್ಸನ್ನು ರಕ್ಷಿಸಿದರೆ ಸಾಕು
ಯಾರ ಮಗುತನವನ್ನು ಜತನ ಮಾಡುತ್ತೇವೆಯೋ ಆ ವ್ಯಕ್ತಿಯ ತನ್ನತನವು ನೈತಿಕವಾಗಿಯೂ ಮತ್ತು ಬೌದ್ಧಿಕವಾಗಿಯೂ ಬಲಿಷ್ಟವಾಗಿರಲು ಸಾಧ್ಯ. ಹಾಗಾಗಿ ಶಿಶುವನ್ನು ಉಪಚರಿಸುವ ರೀತಿಯಲ್ಲಿ, ಸಂಸ್ಕರಿಸುವ ವಿಧಾನದಲ್ಲಿ ಮತ್ತು ಶಿಕ್ಷಣ ಕೊಡುವ ವಿಧಾನಗಳಲ್ಲಿ ಶಿಸ್ತು, ಸಂಯಮ ಮತ್ತು ಕ್ರಮವಂತೂ ಅಗತ್ಯವಾಗಿ ಬೇಕು.
ಒಂದು ದೊಡ್ಡದಾದ ಮರವು ತನ್ನ ಭೂತ ಕಾಲದಲ್ಲಿ ಸಣ್ಣ ಬೀಜವೇ ಆಗಿರುತ್ತದೆ. ಪ್ರಕೃತಿಯ ತೆಕ್ಕೆಯಲ್ಲಿರುವ ಮರವಾದರೂ ಒಮ್ಮೊಮ್ಮೆ ಯಾವ ವಿಶೇಷ ಉಪಚಾರ ಮತ್ತು ಸಂಸ್ಕರಣಗಳಿಲ್ಲದೇ ತನ್ನ ನೈಸರ್ಗಿಕ ಪ್ರಭಾವಕ್ಕೇ ತೆರೆದುಕೊಂಡು ವೃಕ್ಷವಾಗುವ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳಬಹುದು. ಮನುಷ್ಯನ ಸಮಾಜದಲ್ಲಿ ಎಳೆಯ ಸದಸ್ಯನಾಗಿರುವ ಮಗುವಿನ ವಿಚಾರದಲ್ಲಿ ಹಾಗಾಗುವುದಿಲ್ಲ.
ಮಗುವನ್ನು ಅದರ ನೈಸರ್ಗಿಕ ಗುಣಗಳಿಂದ ಬಿಡಿಸಿ ಸಾಮಾಜಿಕ ಪ್ರಾಣಿಯನ್ನಾಗಿಸುವ ತರಬೇತಿಯನ್ನು ಸಮಾಜದ ಹಿರಿಯ ಸದಸ್ಯರು ಕೊಡುತ್ತಾರೆ. ಈ ಮಗುವನ್ನು ಸ್ವತಂತ್ರ ಜೀವನಕ್ಕೆ ಸಜ್ಜುಗೊಳಿಸುವ, ಸಾಮಾಜಿಕ ಜೀವನಕ್ಕೆ ಒಗ್ಗಿಸುವ ಪ್ರಕ್ರಿಯೆಯಲ್ಲಿ ಬಲವನ್ನೂ, ಒಲವನ್ನೂ ಮತ್ತು ನಲಿವನ್ನೂ ರೂಢಿಸಬೇಕು. ಅದು ಹೊಣೆಗಾರಿಕೆಯೂ ಹೌದು ಮತ್ತು ಸವಾಲಿನದೂ ಹೌದು.
ಮಗುತನದ ಬಹುಮುಖ್ಯ ಗುಣಗಳೆಂದರೆ ಅದು ಎಳೆಯದಾಗಿ ಮೆದುವಾಗಿರುವುದು, ಗ್ರಹಿಸುವ ಸಾಮರ್ಥ್ಯದಲ್ಲಿ ಶಕ್ತಿಯಾಗಿರುವುದು ಮತ್ತು ಸ್ವೀಕರಿಸಿದ್ದನ್ನು ಹೆಚ್ಚಿಸುವ, ವಿಕಸಿಸುವ ಹಾಗೂ ಮರುಸೃಷ್ಟಿಸುವ ಫಲವತ್ತಿಕೆಯನ್ನು ಹೊಂದಿರುವುದು. ಆದ್ದರಿಂದ ಈ ಮಗುತನವನ್ನು ಬಹಳ ನೇಮ ನಿಷ್ಟೆಯಿಂದ ಜತನ ಮಾಡಬೇಕಾಗಿರುವುದು.
ಇಂತಹ ಮೆದುತನದ ಮತ್ತು ಫಲವಂತಿಕೆಯ ಮಗುತನವು ಯಾವುದ್ಯಾವುದೋ ಆಕ್ರಮಣಗಳಿಗೆ ಸಿಕ್ಕು ನಾಶವಾಗದಿರಲು ಪ್ರತಿಯೊಬ್ಬ ಹಿರಿಯನೂ, ಅಂದರೆ ಸಮಾಜದ ಹಿರಿಯ ಸದಸ್ಯನು ಕಿರಿಯ ಸದಸ್ಯನಿಗೆ ಕವಚವಾಗಿ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಸಂರಕ್ಷಿಸಲ್ಪಟ್ಟ ಶಿಶುತನದ ಸಸಿಯು ನಾಳೆ ಸಶಕ್ತವಾದ ತನ್ನತನವನ್ನು ಹೊಂದಿರುವ ವ್ಯಕ್ತಿಯಾಗಿ ರೂಪುಗೊಳ್ಳುವ ಸಾಧ್ಯತೆ ಇರುವುದು.
ಹಾಗೆಯೇ ಭದ್ರತೆ ಅಥವಾ ರಕ್ಷಣೆಯ ನೆಪದಲ್ಲಿ ಮಗುವಿನ ಸ್ವಾತಂತ್ರ್ಯಹರಣ ಮಾಡುವುದಲ್ಲ. ಹಿರಿಯ ಸದಸ್ಯರ ಜೀವನಾನುಭವ, ಜೀವನ ಕೌಶಲ್ಯ ಮತ್ತು ಜೀವನ ಪಾಠಗಳು ತಮ್ಮ ಮುಂದಿರುವ ಮಗುವಿಗೆ ಒಂದು ಸರಿಯಾದ ಅನುಭವ ಕೊಡದಿದ್ದರೆ, ಕೌಶಲ್ಯವನ್ನು ಕಲಿಸದಿದ್ದರೆ, ತನ್ನ ಜೀವನವನ್ನು ತಾನು ಸಮರ್ಥವಾಗಿ ಪ್ರೀತಿಸಿಕೊಳ್ಳುತ್ತಾ ಎಲ್ಲರೊಡನೆ ಬದುಕಲು ಸಾಧ್ಯವಾಗದಿದ್ದರೆ; ಆ ಹಿರಿ ಬದುಕಿನ ಸಾರ್ಥಕತೆಯೇನು?
ಶಿಶುವೆಂಬ ಮಹಾಬಲ
ಮಗುವು ಆಕಾರದಲ್ಲಿ ಚಿಕ್ಕದೆಂದೂ, ಆಧಾರಕ್ಕೆ ನಮ್ಮನ್ನು ಅವಲಂಬಿಸಿದೆಯೆಂದೂ, ಆಹಾರವನ್ನು ನಾವೇ ನೀಡುತ್ತಾ, ಅಕ್ಷರವನ್ನೂ ಕಲಿಸುವುದರಿಂದ ನಾವೇ ಅದರ ಮಹಾಪೋಷಕರೂ, ಆಧಾರಸ್ತಂಭವೆಂದೂ ಹಿರಿಯರು ತಿಳಿದುಕೊಳ್ಳುವುದರಿಂದ ಎಷ್ಟೋ ಮಕ್ಕಳ ಸಾಮರ್ಥ್ಯ ಬೆಳೆಯುವುದಿಲ್ಲ, ಪ್ರತಿಭೆಗಳು ಅನಾವರಣಗೊಳ್ಳುವುದಿಲ್ಲ, ಮತ್ತು ಬದುಕಿನ ಸ್ಥಿರತೆ ಕಾಣುವುದಿಲ್ಲ. ಮಕ್ಕಳ ಎಳೆಯತನವನ್ನು ಬಲಗೊಳಿಸುತ್ತೇವೆ ಎಂಬ ಭ್ರಮೆಯಿಂದ ಅವರನ್ನು ದುರ್ಬಲಗೊಳಿಸುತ್ತೇವೆ.
ವಾಸ್ತವವಾಗಿ ನಮ್ಮ ಮಕ್ಕಳು ನಮಗಿಂತ ದೂರಗಾಮಿಗಳು, ಸಬಲರು ಮತ್ತು ವಿವೇಚನೆಯುಳ್ಳವರು. ಅವರ ಸಂವೇದನಾಶೀಲತೆಯನ್ನು ಕಂಡುಕೊಳ್ಳಲು ಬಿಡದೇ, ಸೃಜನಶೀಲತೆಯನ್ನು ಮತ್ತು ಕ್ರಿಯಾಶೀಲತೆಯನ್ನು ಪ್ರಯೋಗಕ್ಕೆ ಒಳಪಡಿಸಿಕೊಳ್ಳಲೂ ಬಿಡದೇ ನಮ್ಮ ಪ್ರಯೋಗಳ ಸಾಧನೆ ಮತ್ತು ವೈಫಲ್ಯಗಳನ್ನೇ ಅವರ ಪ್ರಯೋಗಳಿಗೂ ಮಾನದಂಡವಾಗಿಸುವುದರಿಂದ ಅವರ ನಿಜವಾದ ಬಲ ಸಂವರ್ಧನೆಯಾಗುವುದಿಲ್ಲ. ಎಷ್ಟೋ ಸಲ ಅನಾವರಣವೇ ಆಗುವುದಿಲ್ಲ.
ನಮ್ಮ ದೌರ್ಬಲ್ಯವನ್ನು ಅರಿಯುವಲ್ಲಿ ಅವರ ಸಾಮರ್ಥ್ಯವನ್ನು ಅರಿಯುವ ಸಾಧ್ಯತೆಯುಂಟು. ನಮ್ಮ ವೈಫಲ್ಯವನ್ನು ಗುರುತಿಸಿಕೊಳ್ಳುವುದರಲ್ಲಿ ಅವರ ಸಾಫಲ್ಯವಿರಬಹುದು. ನಮ್ಮ ಸಿದ್ಧ ಮಾದರಿಗಳನ್ನು ಮೀರುವುದರಲ್ಲಿ ಅವರ ಸಾಧನೆಯ ಹಾದಿಯು ವಿಸ್ತರಿಸುವ ಸಾಧ್ಯತೆಗಳಿರುತ್ತದೆ. ನಮ್ಮ ಹಿರಿಮೆ ಅವರ ಮುಂದೆ ವಿದೇಯವಾಗಬೇಕು. ನಮ್ಮ ಗುರಿ ಅವರ ಗುರಿಯಲ್ಲ. ಅವರ ದಾರಿಯಲ್ಲಿ ನಾವು ಅವರನ್ನು ಹೊತ್ತೊಯ್ಯಲಾಗದಿದ್ದರೂ ತೊಡಕಾದಿರುವಂತೆ ನಮ್ಮನ್ನು ನಾವು ನಿರ್ಬಂಧಿಸಿಕೊಂಡರೆ ಅವರು ತಮ್ಮ ಬಲವನ್ನು ತಾವು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮಗುವೆಂದರೆ ನಮ್ಮ ಅಧೀನದಲ್ಲಿರುವ ಅಧೀರನೆಂಬ ಭ್ರಮೆ ನಮ್ಮಿಂದ ತೊಲಗದ ತನಕ, ಮಗುವಿನ ಅಸಹಾಯಕತೆಗೆ ನಾನೇ ಔದಾರ್ಯದ ಮಹಾ ಸಹಾಯವೆಂಬ ಅಹಂಕಾರ ಕುಸಿಯುವ ತನಕ, ಮಗುವೆಂಬ ಮುಗ್ಧ ಜೀವಕ್ಕೆ ನಾವೇ ವಿಚಾರ ಮತ್ತು ಚಿಂತನೆಗಳನ್ನು ನೀಡಬೇಕು ಎಂಬ ಅವೈಜ್ಞಾನಿಕ ನಿಲುವನ್ನು ತೊರೆಯುವ ತನಕ ಮಗುವು ತನ್ನ ಬಲವನ್ನು ತಾನು ಸಾಕ್ಷಾತ್ಕರಿಸಿಕೊಳ್ಳಲು ನಮ್ಮ ಹಿರಿಯರು ಬಿಡುವುದಿಲ್ಲ.
ಶಿಶುವಿನ ಬಲವು ಹೊತ್ತಿಳಿಯುತ್ತಿರುವ ಹಿರಿಯರಿಗೆ ಬಲ ನೀಡುವುದು. ಈ ಸತ್ಯವನ್ನು ಅರಿಯುವ ಹಿರಿಯರು ಶಿಶುವಿನ ಪೋಷಣೆಯ ಮತ್ತು ಶಿಕ್ಷಣದ ವಿಷಯದಲ್ಲಿ ತಮ್ಮ ದಾರಿ ಮತ್ತು ಗುರಿಯನ್ನು ಸ್ಪಷ್ಟವಾಗಿಸಿಕೊಂಡಿರಲು ಸಾಧ್ಯ. ಶಿಶುಬಲವೇ ಸಮಾಜದ ಮಹಾಬಲ.
ಶಿಶುಮನ
ಮಕ್ಕಳ ಮನಸ್ಸು ಬಹಳ ವಿಶಿಷ್ಟ ಸಂಯೋಜನೆಯಿಂದ ಕೂಡಿರುತ್ತದೆ. ಮೊದಲನೆಯದಾಗಿ ಅದು ಬಹಳ ಸಶಕ್ತವಾಗಿರುತ್ತದೆ. ಎರಡನೆಯದಾಗಿ ಗ್ರಹಿಕೆಯಲ್ಲಿ ಚುರುಕಾಗಿರುತ್ತದೆ. ಮೂರನೆಯದಾಗಿ ಅಗಾಧ ಫಲವತ್ತಿನ ಕ್ಷೇತ್ರವಾಗಿರುತ್ತದೆ. ನಾಲ್ಕನೆಯದಾಗಿ ಸಲಿಲತೆಯಿಂದ ಕೂಡಿರುತ್ತದೆ. ಐದನೆಯದಾಗಿ ಮುಗ್ಧವಾಗಿರುತ್ತದೆ. ಆರನೆಯದಾಗಿ ಸಂವೇದನೆಯಿಂದ ಕೂಡಿರುತ್ತದೆ. ಏಳನೆಯದಾಗಿ ಸೂಕ್ಷ್ಮವಾಗಿರುತ್ತದೆ. ಈ ಏಳೂ ಗುಣಗಳ ಕಾರಣದಿಂದ ಅವರ ಜೊತೆಗೆ ಹಿರಿಯರಾದವರು ವ್ಯವಹರಿಸುವಾಗ ಬಹಳ ಎಚ್ಚರಿಕೆಯಿಂದಲೂ ಮತ್ತು ಜವಾಬ್ದಾರಿಯಿಂದಲೂ ವರ್ತಿಸಬೇಕು.
ಅವರ ಸಂಪರ್ಕದಲ್ಲಿರುವಾಗ ಮತ್ತು ಸಂವಹನ ನಡೆಸುವಾಗ ಹಿರಿಯರ ನಡವಳಿಕೆ ಬಹಳ ಸಂವೇದನೆಯಿಂದ ಕೂಡಿರಬೇಕು. ಸೂಕ್ಷ್ಮದೃಷ್ಟಿ ಮತ್ತುದೂರದೃಷ್ಟಿಯನ್ನು ಹೊಂದಿರದ ಹಿರಿಯರು ಮಕ್ಕಳ ಮನಸ್ಸನ್ನು ಘಾಸಿ ಮಾಡುವುದು ಮಾತ್ರವಲ್ಲದೇ, ತಪ್ಪಾಗಿ ತರಬೇತಿಗಳ ಮೂಲಕ ಪ್ರಮಾದಕರ ವ್ಯಕ್ತಿತ್ವಗಳನ್ನು ರೂಪಿಸುತ್ತಾರೆ.
ಶಕ್ತಿಶಾಲಿಯಾದ ಮನಸ್ಸಿರುವ ಕಾರಣದಿಂದ ಅವರಿಗೆ ಒಲ್ಲದ ಮತ್ತು ಒಗ್ಗದ ವಿಷಯಗಳಿಗೆ ಪ್ರತಿರೋಧವನ್ನು ಒಡ್ಡುತ್ತವೆ.
ಬಂಡಾಯವೇಳುತ್ತವೆ. ಗ್ರಹಣಶಕ್ತಿಯು ಚೆನ್ನಾಗಿರುವುದರಿಂದ ಬೋಧನೆಗಳನ್ನು ಮೀರಿದ ಮಾದರಿಗಳನ್ನು ಗ್ರಹಿಸಿ ತಮ್ಮದಾಗಿಸಿಕೊಳ್ಳುತ್ತವೆ. ಮನಸ್ಸು ಫಲವತ್ತಾದ ಕ್ಷೇತ್ರವಾದ್ದರಿಂದ ಒಳಿತನದೋ, ಕೆಡುಕಿನದೋ, ಬೇಕಾದ್ದೋ, ಬೇಡದ್ದೋ; ಯಾವುದೇ ರೀತಿಯ ಬಿತ್ತನೆಯಾದರೂ ಹುಲುಸಾಗಿ ಬೆಳೆದು ಫಲಕೊಡುತ್ತವೆ. ಸಲಿಲತೆಯು ಮಕ್ಕಳ ಮನಸ್ಸಿನ ಗುಣವಾದ್ದರಿಂದ ಯಾವುದೇ ವಾತಾವರಣದ ಗುಣಾವಗುಣಗಳಿಗೆ ಒಗ್ಗಿಕೊಂಡು ಆಯಾ ಪರಿಸರದ ಪ್ರಭಾವಗಳಿಂದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತವೆ.
ಮುಗ್ಧವಾಗಿರುವುದರಿಂದ ತಾರ್ಕಿಕವಾಗಿ ವಿಷಯಗಳನ್ನು ವಿಶ್ಲೇಷಿಸದೇ ಸುಳ್ಳು, ನಿಜ, ಅಗತ್ಯ, ಅನಗತ್ಯಗಳ ಪರಿವೇ ಇಲ್ಲದೇ, ಮನವೊಲಿಸುವ ಆಧಾರದ ಮೇಲೆ ಎಲ್ಲವನ್ನೂ ನಿಜವೆಂದೇ ಒಪ್ಪಿಕೊಳ್ಳುತ್ತವೆ. ಸಂವೇದನಾಶೀಲಗುಣವೂ ಮಕ್ಕಳ ಮನಸ್ಸಿನ ಸಹಜವಾದ ಗುಣವಾದ್ದರಿಂದ ಅವರಿಗೆ ನಿಲುಕದ, ತರಬೇತಿ ನೀಡಲಾಗದ, ಅರ್ಥ ಮಾಡಿಸಲಾಗದ ವಿಷಯಗಳೇನೂ ಇಲ್ಲ. ಆದರೆ ಅವುಗಳನ್ನು ಮುಟ್ಟಿಸುವ ಕ್ರಮದ ಬಗ್ಗೆ ಹಿರಿಯರಿಗೆ ಅರಿವಿರಬೇಕು. ಕೊನೆಯದಾಗಿ ಮಕ್ಕಳ ಮನಸ್ಸು ಸೂಕ್ಷ್ಮ. ತೆಳುವಾದ ಗಾಜಿನ ಪರೆಯಷ್ಟು ಸೂಕ್ಷ್ಮ. ಅದನ್ನು ಘಾಸಿಗೊಳಿಸಿದರೆ ಅದರ ಪರಿಣಾಮ ಎಷ್ಟು ದಾರುಣವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ.
ಮಕ್ಕಳ ಮನಸ್ಸಿನ ಸಮಸ್ಯೆ ಹಲವಾರು ಮೂಲಗಳು. ಕೆಲವು ಶಾರೀರಿಕ ಸಮಸ್ಯೆಯಾದರೆ, ಮತ್ತೆ ಕೆಲವಕ್ಕೆ ಕೌಟುಂಬಿಕ ಮತ್ತು ಸಾಮಾಜಿಕ ಕಾರಣಗಳು. ಆದರೆ ಅರಿತವರಿಗೆ ಪರಿಹಾರವಿದೆ.
ಶಿಶುತನ ವರ್ಸಸ್ ತನ್ನತನ
ಮಗುವೊಂದರ ಶಿಶುತನ ಮತ್ತು ವ್ಯಕ್ತಿಯೊಬ್ಬನ ತನ್ನತನಕ್ಕೆ ಒಂದು ಮುಖ್ಯವಾದ ವ್ಯತ್ಯಾಸವಿದೆ. ಶಿಶುತನವು ನೈಸರ್ಗಿಕವಾಗಿ ರೂಪುಗೊಂಡಿರುವುದು. ವ್ಯಕ್ತಿಯ ತನ್ನತನವು ತಾನೇ ರೂಪಿಸಿಕೊಳ್ಳುವುದು. ಮಗುವು ತನ್ನ ಶಿಶುತನದ ಸಹಜತೆಯಿಂದ ವರ್ತಿಸಿದರೆ, ವ್ಯಕ್ತಿಯು ತನ್ನತನವನ್ನು ತನ್ನ ವ್ಯಕ್ತಿತ್ವದ ಮೂಲಕ ಪ್ರಕಟಗೊಳಿಸಬೇಕಾಗುತ್ತದೆ. ಆದರೆ ಎರಡೂ ಸಂಸ್ಕಾರಕ್ಕೆ ಒಳಗಾಗುತ್ತಾ ತಮ್ಮ ಪ್ರಕಟಗೊಳ್ಳುವ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಹೊಂದುತ್ತಾ ಹೋಗುತ್ತದೆ. ಇದು ಅವುಗಳಿಗಿರುವ ಸಾಮ್ಯತೆ.
ಶಿಶುತನದ ಪ್ರಕಟಣೆ ಅನೈಚ್ಛಿಕವಾದ ಪ್ರಕ್ರಿಯೆಯಾದರೆ, ತನ್ನತನ ಐಚ್ಛಿಕ. ಶಿಶುತನದ ಪ್ರಕಟಣೆಯಲ್ಲಿ ಮುಗ್ಧತೆ ಇದ್ದರೆ, ತನ್ನತನದಲ್ಲಿ ಪ್ರಜ್ಞಾವಂತಿಕೆ ಇರುತ್ತದೆ. ಶಿಶುತನದ ಸೌಂದರ್ಯವು ಮುದ ತರುವ ಕಾರಣವೇ ಅದು ಸಹಜವಾಗಿ ಸೂಸುವ ಮುಗ್ಧತೆ. ತನ್ನತನದ ಪ್ರಕಟಣೆಯು ಮೂರ್ಖತೆಯಿಂದಲೂ ಕೂಡಿರಬಹುದು. ಏಕೆಂದರೆ ಅದು ತರ್ಕ, ಲೆಕ್ಕಾಚಾರ, ಉದ್ಧೇಶಿತ ಶ್ರದ್ಧೆ ಮತ್ತು ನಂಬಿಕೆಗಳಿಂದ ಕೂಡಿರುತ್ತದೆ. ಅದು ನಿರ್ಬಂಧಕ್ಕೆ ಒಳಗಾಗಿರುತ್ತದೆ.
ಆದರೆ ಶಿಶುತನಕ್ಕೆ ನಿರ್ಬಂಧವಿರುವುದಿಲ್ಲ. ಯಾವುದೇ ಬಗೆಯ ಪೂರ್ವಾಗ್ರಹಗಳಿರುವುದಿಲ್ಲ. ಸೈದ್ಧಾಂತಿಕ ಅಥವಾ ತಾತ್ವಿಕ ನೆಲೆಗಟ್ಟಿರುವುದಿಲ್ಲ. ಬರಿಯ ಹಿತ ಮತ್ತು ಆನಂದದ ಅಪೇಕ್ಷೆಯಿರುವ ಮಗುವಿಗೆ ಯಾವ ಗೊಂದಲಗಳು ಇರುವುದಿಲ್ಲ. ಅದೇ ಅವರಿಗೆ ವರ. ಹಾಗಾಗಿಯೇ ಯೇಸುಕ್ರಿಸ್ತ ಹೇಳುವುದು. “ನೀವು ಮಕ್ಕಳಂತಾಗದಿದ್ದರೆ ನಿಮಗೆ ಸ್ವರ್ಗಸಾಮ್ರಾಜ್ಯವು ಇರುವುದಿಲ್ಲ.”
ಶಿಶುತನವು ಪಶುತನದಂತೆಯೇ ಪ್ರಕೃತಿಯಲ್ಲಿ ನೈಸರ್ಗಿಕ. ಅವನನ್ನು ಸಾಮಾಜಿಕವಾಗಿ ಸಂಘ ಜೀವನಕ್ಕೆ ಒಳಪಡಿಸುವಾಗ ಆ ಶಿಶುತನದ ಲಾಲಿತ್ಯ ಮತ್ತು ಸೌಂದರ್ಯಕ್ಕೆ ಧಕ್ಕೆಯಾಗದ ಹಾಗೆ ಎಚ್ಚರಿಕೆ ವಹಿಸುವುದರಲ್ಲಿ ಹಿರಿಯರ ಕೌಶಲ್ಯವಿದೆ.
ಹಿರಿಯರ ಸಮಸ್ಯೆ ಎಂದರೆ ರೂಢಿಸಿಕೊಂಡ ಅಥವಾ ರೂಪಿಸಿಕೊಂಡ ತಮ್ಮತನದ ಪ್ರಭಾವದಲ್ಲಿ ತಾವು ದಾಟಿ ಬಂದ ಶಿಶುತನವನ್ನು ಮರೆತಿರುತ್ತಾರೆ. ಆ ವಿಸ್ಮೃತಿಯೇ ತಮ್ಮ ಜೊತೆಗಿರುವ ಮಕ್ಕಳ ಶಿಶುತನದ ನಾಶಕ್ಕೆ ಹಲವು ಕಾರಣಗಳಲ್ಲೊಂದು. ಶಿಶುತನವೆಂಬುದರ ಸೌಂದರ್ಯ, ಪ್ರಾಮಾಣಿಕತೆ, ಮುಗ್ಧತೆ ಮತ್ತು ಸೂಕ್ಷ್ಮತೆಯನ್ನು ತಮ್ಮತನದಲ್ಲಿ ಜೀವಂತವಾಗಿರಿಸಿಕೊಂಡಾಗಲೇ ನಿಜವಾದ ಆನಂದ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
~ಯೋಗೇಶ್ ಮಾಸ್ಟರ್, ಚಿಂತಕರು
ಆಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.
ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!
ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!
ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.
ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.
ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.
ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!
ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
-
ದಿನದ ಸುದ್ದಿ5 days agoಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
-
ದಿನದ ಸುದ್ದಿ5 days agoವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್ಗೆ ರಾಜೀನಾಮೆ ಸವಾಲು!
-
ದಿನದ ಸುದ್ದಿ2 days agoಬಿಜೆಪಿ ರೈತ ಮೋರ್ಚಾದಿಂದ ಬಂದ್ಗೆ ಕರೆ; ಹಲವು ವೃತ್ತಗಳಲ್ಲಿ ಟೈರ್ಗೆ ಬೆಂಕಿ, ಬೆಂಕಿ ನಂದಿಸಿದ ಪೊಲೀಸರು
-
ದಿನದ ಸುದ್ದಿ6 days agoವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್
-
ದಿನದ ಸುದ್ದಿ5 days agoTrump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್ನಾ?
-
ದಿನದ ಸುದ್ದಿ6 days agoಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
-
ದಿನದ ಸುದ್ದಿ3 days agoಕುಂದುಕೊರತೆಗಳಿಗೆ ತ್ವರಿತ ಪರಿಹಾರ ನೀಡಲು ಏಕೀಕೃತ ವ್ಯವಸ್ಥೆ; ಶನಿವಾರ ಜನಸಂಪರ್ಕ, ಬುಧವಾರ ಮೂರು ಹಂತದ ಪರಿಶೀಲನೆ

