Connect with us

ಬಹಿರಂಗ

ಆಷಾಢ ಪೂರ್ಣಿಮೆ ಮತ್ತು ಧಮ್ಮಚಕ್ಕಪವತ್ತನದಿನ

Published

on

ಜುಲೈ 05 ಆಷಾಢ ಪೂರ್ಣಿಮೆಯ ಪ್ರಯುಕ್ತ

  • ಶಿವಸ್ವಾಮಿ

ಗುರು ಎಂದರೆ ವ್ಯಕ್ತಿಯಲ್ಲ ಒಂದು ಶಕ್ತಿ ಕತ್ತಲೆಯ ಕಳೆದು ಸುಜ್ಞಾನದ ಬೆಳಕಿನಡೆಗೆ ಕರೆದುಕೊಂಡು ಹೋಗುವ ಶಬ್ದವೇ “ಗುರು

ಗೌತಮ ಬುದ್ಧ

ಭಾರತದ ಮೂಲನಿವಾಸಿಗಳ ಪಾಲಿಗೆ ಮಾತ್ರ ಆಷಾಢ ಮಾಸವು ಅನಿಷ್ಟ, ಅಶುಭ, ಈ ತಿಂಗಳಿನಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬಾರದು, ಜಾತಿ ಧರ್ಮ ಶಾಸ್ತ್ರ ಪುರಾಣ ದೇವರು, ಪೂಜೆ ಪುನಸ್ಕಾರಗಳ ಹೆಸರಿನಲ್ಲಿ ಭಯದ ಉತ್ಪಾಧಕರೆನಿಸಿಕೊಂಡವರು ಸುಳ್ಳುಗಳನ್ನೇ ಸತ್ಯವೆಂದು ನಂಬಿಸಿ ಮಾನಸಿಕ ಗುಲಾಮಗಿರಿಗೆ ತಳ್ಳಿ ಇಲ್ಲಿನ ಮೂಲನಿವಾಸಿಗಳ ಮೆದುಳಿಗೆ ಬ್ರಾಹ್ಮಣ್ಯವೆಂಬ ಬೇಡಿಯನ್ನು ತೊಡಿಸಿ ಅದರಿಂದ ಹೊರಬರದಂತೆ ವಿಲ ವಿಲ ಹೊದ್ದಾಡುವಂತೆ ಮಾಡಿ, ತಾವುಗಳು ಮಾತ್ರ ತಮ್ಮ ಮದುವೆ ಮುಂಜಿ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳುತ್ತಾರೆ.

ಆದರೆ, ಅವರಿಗೆ ಈ ಆಷಾಡ ಮಾಸದಿಂದ ಯಾವ ತೊಂದರೆಯು ಆಗುವುದಿಲ್ಲ, ಆಷಾಢ ಮಾಸ ಅಶುಭವೆಂದು ಇತಿಹಾಸದ ಕತ್ತಲ ಗರ್ಭದಲ್ಲಿ ಹೂತಿಟ್ಟು ನಮ್ಮ ಪೂರ್ವಿಕರ ಇತಿಹಾಸವು ನಮಗೆ ತಿಳಿಯದಂತೆ ಮಾಡಿದ್ದಾರೆ ಅದಕ್ಕೆ ಬಾಬಾಸಾಹೇಬರು ಹೇಳಿದ್ದು “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಅಂತ ಬಂಧುಗಳೇ ಸತ್ಯವನ್ನು ಸತ್ಯವೆಂದು ಸುಳ್ಳನ್ನು ಸುಳ್ಳೆಂದು ಸಾರಿದ ನಿಜವಾದ ಭಾರತೀಯಾರಾದ ನಾವು ಇತಿಹಾಸವನ್ನು ತಿಳಿದುಕೊಳ್ಳೋಣ.

ಎಲ್ಲಾ ತಿಂಗಳುಗಳಂತೆಯೇ ಆಷಾಡ ಮಾಸದಲ್ಲಿ ಸೂರ್ಯ ಚಂದ್ರರು ಬೆಳಗುತ್ತಾರೆ, ಮಳೆ ಸುರಿಯುತ್ತದೆ, ಗಿಡಮರಗಳು ಚಿಗುರುತ್ತವೆ, ಗಾಳಿ ಬೀಸುತ್ತದೆ, ಹೂವುಗಳು ಮೊಗ್ಗಾಗಿ ಅರಳಿ ಪರಿಮಳವನ್ನು ಬೀರುತ್ತ ಪ್ರಕೃತಿ ಎಂದಿನಂತೆ ತನ್ನ ಕೆಲಸದಲ್ಲಿ ನಿರತವಾಗಿರುತ್ತದೆ.

ಆದರೆ ಭಾರತದ ಮೂಲನಿವಾಸಿಗಳ ಪಾಲಿಗೆ ಮಾತ್ರ ಆಷಾಢ ಮಾಸವು ಅನಿಷ್ಟ, ಅಶುಭ ಈ ತಿಂಗಳಿನಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದೆಂದು ಜಾತಿ ಧರ್ಮ ಶಾಸ್ತ್ರ ಪುರಾಣ ದೇವರು ದಿಂಡರುಗಳ ಹೆಸರಲ್ಲಿ ಭಯದ ಉತ್ಪಾಧಕರೆನಿಸಿಕೊಂಡ ವೈದಿಕ ಮಹಾಶೆಯರು ಸುಳ್ಳುಗಳನ್ನೇ ಸತ್ಯವೆಂದು ನಂಬಿಸಿ ಮಾನಸಿಕ ಗುಲಾಮಗಿರಿಗೆ ತಳ್ಳಿ ಇಲ್ಲಿನ ಮುಗ್ಧ ಜನರ ಮೆದುಳಿಗೆ ಬ್ರಾಹ್ಮಣ್ಯವೆಂಬ ಬೇಡಿಯನ್ನು ತೊಡಿಸಿ ಅದರಿಂದ ಹೊರ ಬರಲಾಗದಂತೆ ವಿಲ ವಿಲ ಹೊದ್ದಾಡುವಂತೆ ಮಾಡಿ, ತಾವುಗಳು ಮಾತ್ರ ತಮ್ಮ ತಮ್ಮ ಮದುವೆ ಮುಂಜಿ ಇನ್ನಿತರ ಶುಭ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಹೊರೆಯಾಗದಂತೆ ಮಾಡಿಕೊಳ್ಳುತ್ತಾರೆ.ಆದರೆ, ಅವರಿಗೆ ಈ ಆಷಾಡ ಮಾಸದಿಂದ ಯಾವ ತೊಂದರೆಯು ಆಗುವುದಿಲ್ಲ.

ಆಷಾಢ ಮಾಸದಲ್ಲಿ ಧೋ..ಎಂದು ಸುರಿಯುವ ಜಿಟಿ ಜಿಟಿ ಮಳೆರಾಯನ ಹರ್ಷಕೆ ಇಳೆ ತಂಪಾಗಿ ಹಚ್ಚ ಹಸಿರಿನ ಸೀರೆಯನುಟ್ಟು ಭೂತಾಯಿ ಕಂಗೊಳಿಸುತ್ತಿರುವ ಆಷಾಡ ಮಾಸವನ್ನು ವಿಪ್ರರೆತಕೆ ಅನಿಷ್ಟ ಅಶುಭವೆಂದರು.. !?

ಬುದ್ಧ ಪೂರ್ವದಲ್ಲಿ ಶತಶತಮಾನಗಳಿಂದ ಇಡೀ ವ್ಯವಸ್ಥೆಯನ್ನೇ ತಮ್ಮ ಧಾರ್ಮಿಕ ಕಪಿಮುಸ್ಷ್ಠಿಯಲ್ಲಿ ಮೌಢ್ಯವನ್ನೇ ಬಿತ್ತುತ್ತಾ ಜಾತಿ ಧರ್ಮ, ಮರ್ಮ ಕರ್ಮ, ಸ್ವರ್ಗ ನರಕವೆಂಬ ಕಾಣದ ಕಲ್ಪನೆಯ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಮುಗ್ಧ ಜನರನ್ನು ಬಂಧಿಸಿ ತಾವು ಮಾತ್ರ ಶ್ರೇಷ್ಠ ಇತರರು ಕನಿಷ್ಠವೆಂದು ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತಿದ್ದ ವೈದಿಕರಿಗೆ ಸೆಡ್ಡು ಹೊಡೆದ ಸಿದ್ಧಾರ್ಥ ಗೌತಮರು ಈ ಆಷಾಢ ಪೂರ್ಣಿಮೆಯಂದೇ ಜ್ಞಾನೋದಯವಾಗಿ ಬೋಧಿಯನ್ನು ಪಡೆದು ಬುದ್ಧರಾಗುತ್ತಾರೆ.

ನಂತರ ತಾವು ಪಡೆದು ಅನುಭವಿಸಿದ ಅಂತಿಮ ಸತ್ಯದ ಧಮ್ಮಮಾರ್ಗವನ್ನು ಇತರರಿಗೂ ಹಂಚಬೇಕೆಂದು ನಿಶ್ಚಯಿಸಿ ಯಾರಿಗೆ ಮೊದಲು ಧಮ್ಮವನ್ನು ಬೋಧಿಸಬೇಕೆಂದು ಯೋಚಿಸುವಾಗ ತಾನು ಕಠಿಣ ತಪಸ್ಸನ್ನು ಮಾಡುವಾಗ ತನ್ನೊಂದಿಗಿದ್ದ ಐದು ಜನ ಸಮಣ ಭಿಕ್ಕುಗಳು ನೆನಪಿಗೆ ಬಂದು ಅವರನ್ನು ಹುಡುಕುತ್ತಾ ಸಾರಾನಾಥದ ಇಸಿಪತನದ ಜಿಂಕೆವನಕ್ಕೆ ಬಂದು ತಮ್ಮ ಪ್ರಥಮ ಧಮ್ಮೋಪದೇಶವನ್ನು ನೀಡುವುದರ ಮೂಲಕ ಧಮ್ಮ ಪ್ರಸಾರದ ಚಕ್ರವನ್ನು ಉರುಳಿ ಬಿಡುತ್ತಾರೆ ಇದನ್ನು ಧಮ್ಮ ಚಕ್ಕ ಪವತ್ತನ ಸುತ್ತ ಎಂದೂ…ಇದೇ ದಿನವನ್ನು ಧಮ್ಮ ಚಕ್ಕ ಪವತ್ತನ ದಿನವೆಂದು ಕರೆಯುತ್ತಾರೆ.

ಧಮ್ಮಚಕ್ಕಪವತ್ತನ(ಸುತ್ತ) ದಿನ

ಗೌತಮರು ಭೋಧಿ ಪಡೆದು ಬುದ್ಧರಾದ ಮೇಲೆ ತಮ್ಮ ಮೊದಲ ಧಮ್ಮೋಪದೇಶವನ್ನು (ಧಮ್ಮಚಕ್ಕ ಪವತ್ತನ ಸುತ್ತ )ತನ್ನ ಶಿಷ್ಯರಾದ ಕೊಂಡಣ್ಣ, ಭದ್ದಿಯಾ, ವಪ್ಪ, ಮಹಾನಾಮ, ಅಸ್ಸಜ್ಜಿ, ಎಂಬ ಐದು ಜನ ಭಿಕ್ಕುಗಳಿಗೆ ಬೋಧಿಸಿದರು ಇದು ಧಮ್ಮ ಚಕ್ಕ ಪವತ್ತನ ಸುತ್ತವೆಂದೇ ಪ್ರಸಿದ್ದಿ ಪಡೆದು ಇಲ್ಲಿಂದಲೇ ಬುದ್ಧರ ಧಮ್ಮ ಚಕ್ರವು ಉರುಳಲಾರಂಭಿಸಿತು, ಬುದ್ಧರ ಹೃದಯದಲ್ಲಿ ಮಿಂಚಿದ ಜ್ಞಾನದ ಧರ್ಶನವೇ ಈ ಸುತ್ತದ ಸಾರವಾಗಿದೆ ಇದನ್ನು ಚತುರಾರ್ಯ ಸತ್ಯಗಳು ಅಥವಾ ನಾಲ್ಕು ಆರ್ಯ ಸತ್ಯಗಳೆಂದು ಕರೆಯುತ್ತಾರೆ.

ಪಾಳಿಯಲ್ಲಿ “ಚರಿತ ಭಿಕ್ಖವೇ ಚಾರಿಕಂ ಬಹುಜನ ಹಿತಾಯ ಬಹುಜನ ಸುಖಾಯ ಲೋಕಾನು ಕಂಪಾಯ ಅತ್ತಾಯ ಹಿತಾಯ ಸುಖಾಯ ದೇವಾ ಮನಸ್ಸಂ” ಕನ್ನಡದಲ್ಲಿ ನಾನೊಂದು ಧಮ್ಮ ಚಕ್ರ, ಮಾನವ ಚಕ್ರ, ಸಂಸಾರವೆಂಬ ಚಕ್ರವನ್ನು ಉರುಳಿಬಿಟ್ಟಿದ್ದೇನೆ, ಅದು ಬಹುಜನರ ಹಿತಕ್ಕಾಗಿ ಬಹುಜನರ ಸುಖಕ್ಕಾಗಿ ಲೋಕದ ಮೇಲೆ ಕರುಣೆ ನೆಲೆಗೊಳಿಸುವುದಾಗಿದೆ.
ಅದು ತನ್ನ ಹಿತಸುಖಕ್ಕಾಗಿ ದೇವಾ ಮಾನವರ ಹಿತಸುಖಕ್ಕಾಗಿ ಉರುಳಿಬಿಡಲಾಗಿದೆ.

4 ಆರ್ಯ ಸತ್ಯಗಳು

01. ದುಃಖ್ಖ ಸತ್ಯ

ಲೋಕದಲ್ಲಿ ದುಃಖ್ಖವಿದೆ ಹುಟ್ಟು ದುಃಖ್ಖ, ರೋಗ ದುಃಖ್ಖ, ವಯಸ್ಸಾಗುವುದು ದುಃಖ್ಖ, ಸಾವು ದುಃಖ್ಖ.ದೈಹಿಕ ಮತ್ತು ಮಾನಸಿಕ ನೋವು ಯಾತನೆ ಕೊರಗು ಇದೆಲ್ಲವೂ ದುಖ್ಖವೇ.

02. ದುಃಖ್ಖಕ್ಕೆ ಕಾರಣ ಸತ್ಯ

ದುರಾಸೆ ಅಥವಾ ತೃಷ್ಣೆ
ಮೂರು ವಿಧವಾದ ತೃಷ್ಣೆಗಳಿವೆ

  • ಕಾಮ ತೃಷ್ಣೆ

ಪಂಚ ಇಂದ್ರಿಯಗಳ ವಿಷಯಗಳನ್ನು ಅನುಭವಿಸಬೇಕೆನ್ನುವ ಇಚ್ಛೆಯೇ ಕಾಮತೃಷ್ಣೆ

  • ಭಾವತೃಷ್ಣೆ

ನಾನು ಶಾಶ್ವತವಾಗಿ ಜೀವಿಸಬೇಕೆಂಬುದು ಮತ್ತು ನಾನು ಶ್ರೀಮಂತನಾಗಿ ಸದಾ ಭೋಗಜೀವನದಲ್ಲಿರಬೇಕೆಂಬುದೇ ಆಗಿದೆ

  • ವಿಭವ ತೃಷ್ಣೆ

ನಾನು ಈ ಪ್ರಪಂಚದಲ್ಲಿ ನಾನು ಇರಲೇಬಾರದೆಂಬ ಹತಾಶೆಯ ಮನಸ್ಥಿತಿ.

03. ದುಃಖ್ಖ ನಿರೋಧ ಸತ್ಯ

ಈ ಲೋಕದಲ್ಲಿ ದುಃಖ್ಖವಿದೆ, ದುಃಖ್ಖಕ್ಕೆ ಕಾರಣವು ಇದೆ, ಎಂದಮೇಲೆ ದುಃಖ್ಖ ನಿರೋಧದ ಮೂಲಗಳಾದ ಅಜ್ಞಾನ ಮತ್ತು ದುರಾಸೆಗಳಿಂದ ಹೊರ ಬಂದರೆ ದುಖ್ಖವೂ ದೂರವಾಗುತ್ತದೆ.

04. ದುಃಖ್ಖ ನಿರೋಧ ಗಾಮಿನಿ ಪಟಿಪದ
(ದುಃಖ್ಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗ)

ನಾಲ್ಕನೇ ಸತ್ಯವಾದ ದುಃಖ್ಖ ನಿರೋಧ ಮಾರ್ಗ ಅಥವಾ ಆರ್ಯ ಅಷ್ಟಾಂಗ ಮಾರ್ಗ ಅಥವಾ ಮಧ್ಯಮ ಮಾರ್ಗ,ಪಂಚ ಇಂದ್ರಿಯಗಳ ಸುಖಕ್ಕಾಗಿ ಭೋಗಜೀವನದಲ್ಲಿ ತೊಡಗಿರುವುದು ಮತ್ತು ನೋವಿನಿಂದ ಕೂಡಿದ ಕಠಿಣ ತಪಸ್ಸು ಅಥವಾ ದೇಹ ದಂಡನೆ ಎಂಬ ಎರಡು ಅತಿರೇಖಾ ಮಾರ್ಗಗಳನ್ನು ಬುದ್ಧ ಕೈ ಬಿಟ್ಟಿದ್ದೆ ಅಲ್ಲದೆ ಸುಖ ಶಾಂತಿ ಪ್ರಜ್ಞೆಯ ಮಾರ್ಗವಾದ ಮನುಷ್ಯರನ್ನು ನಿಬ್ಬಾಣದ ಸತ್ಯದ ಕಡೆಗೆ ಕರೆದೊಯ್ಯುವ ಮಾರ್ಗ ಕಂಡು ಹಿಡಿದರು ಅದುವೇ ಬುದ್ಧರ ಮಧ್ಯಮ ಮಾರ್ಗ ಅಥವಾ ಆರ್ಯ ಅಷ್ಟಾಂಗ ಮಾರ್ಗ.

ಅಷ್ಟಾಂಗ ಮಾರ್ಗ

ಬುದ್ಧರ ಧಮ್ಮ ಚಕ್ರದ 8 ಅಂಶಗಳು ದುಃಖ್ಖ ನಿವಾರಣೆಗಾಗಿ ಇರುವ ಮಧ್ಯಮ ಮಾರ್ಗವಾಗಿದೆ

1.ಸರಿಯಾದ ದೃಷ್ಟಿ

2.ಸರಿಯಾದ ಯೋಚನೆ

3.ಸರಿಯಾದ ಮಾತು

4.ಸರಿಯಾದ ಕೆಲಸ

5.ಸರಿಯಾದ ಜೀವನೋಪಾಯ

6.ಸರಿಯಾದ ಪ್ರಯತ್ನ

7.ಸರಿಯಾದ ಎಚ್ಚರಿಕೆ

8.ಸರಿಯಾದ ಏಕಾಗ್ರತೆ

ನಿಮಗೆ ನೀವೇ ಬೆಳಕಾಗಿ, ನಿಮಗೆ ನೀವೇ ಶ್ರಮಿಸಬೇಕು‌. ತಥಾಗತರು ಕೇವಲ ಮಾರ್ಗದಾತರಷ್ಟೇ, ಬುದ್ಧರ ಅಷ್ಟಾಂಗ ಮಾರ್ಗದ ಉಪದೇಶವು ಇಲ್ಲಿಯೇ ಈಗಲೇ ಪರಮಸುಖವನ್ನು ಪಡೆಯಲು ದಾರಿದೀಪವಾಗಿದೆ ಜಾತಿ ಮತ ಧರ್ಮಗಳ ಬೇಧವಿಲ್ಲದೆ ಸರ್ವರು ಈ ಮಾರ್ಗದಲ್ಲಿ ನಡೆದು ಬುದ್ಧರ ಬೋಧನೆಯಂತೆ ದುಃಖ್ಖದಿಂದ ಮುಕ್ತರಾಗಬಹುದು.

ನಾಲ್ಕು ಆರ್ಯ ಸತ್ಯಗಳನ್ನು ವಿಶ್ಲೇಷಿಸಿದಾಗ 24 ಅಂಶಗಳು ಕಂಡು ಬರುತ್ತವೆ ಆದ್ದರಿಂದ ಬುದ್ಧರು ಬೋಧಿಸಿದ ಈ ಸ್ಥಳದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿಯು ಸ್ಟಂಭವನ್ನು ಸ್ಥಾಪಿಸಿ ಅದರ ಮೇಲೆ 4 ದಿಕ್ಕುಗಳಲ್ಲಿ ಸತ್ಯದ ಧಮ್ಮದ ಸಂದೇಶಗಳು ಸಿಂಹಗರ್ಜನೆಯಂತೆ ಹರಡಲಿ ಎಂದು 4 ಸಿಂಹ ಮತ್ತು 24 ಅರೆಗಳುಳ್ಳ ಧಮ್ಮಚಕ್ರವನ್ನು ಕೆತ್ತಿಸಿದರು ಅವುಗಳೇ ನಮ್ಮ ರಾಷ್ಟ್ರ ಲಾಂಛನವಾಗಿ ಸ್ವತಂತ್ರ ಸಮಾನತೆ ನ್ಯಾಯ ಸಹೋದರತೆಯ ಸಂಕೇತವಾಗಿ ಸದಾ ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತವೆ.

ಹೀಗೆ ಭಗವಾನ್ ಬುದ್ಧರು ಧಮ್ಮಚಕ್ಕ ಪವತ್ತನ ಸುತ್ತವನ್ನು ಬೋಧಿಸುತ್ತಾರೆ, ಈ ದಿನವೂ ಜುಲೈ ತಿಂಗಳು ಆಷಾಡ ಮಾಸದ ಪೂರ್ಣಿಮೆಯಂದೇ ಬರುವುದರಿಂದ ಜಗತ್ತಿನಲ್ಲೆಡೆ ಇರುವ ಬೌದ್ಧರು ಧಮ್ಮ ಚಕ್ಕ ಪವತ್ತನಾ ದಿನವೆಂದು ತಮ್ಮ ತಮ್ಮ ಮನ ಮನೆಗಳಲ್ಲಿ ದೊಡ್ಡ ಹಬ್ಬದಂತೆ ಸಡಗರ ಸಂಭ್ರಮದಿಂದ ಆಚರಿಸಿ ಸರ್ವ ಜೀವಿಗಳಿಗೂ ಗುರುವಾಗಿ ಧಮ್ಮೋಪದೇಶ ನೀಡಿದ ಬುದ್ಧ ಗುರುವಿಗೆ ವಂದಿಸುತ್ತಾರೆ.

ಅದೇ ದಿನ ಮಹಾಮಾಯೆಯು ಗರ್ಭ ಧರಿಸಿದ ದಿನ, ಅದೇ ದಿನ ಸಿದ್ಧಾರ್ಥ ಗೌತಮರು ಗೃಹತ್ಯಾಗ ಮಾಡಿದ ದಿನ, ಅದೇ ದಿನ ಬೌದ್ಧ ಭಿಕ್ಕುಗಳಿಗೆ ವರ್ಷ ವಾಸ ಪ್ರಾರಂಭದ ದಿನ ಅಂದರೆ ಬೌದ್ಧ ಭಿಕ್ಕುಗಳು ಮಳೆಗಾಲದಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ಮೂರು ತಿಂಗಳುಗಳ ಕಾಲ ಒಂದೇ ಸ್ಥಳದಲ್ಲಿ ಉಳಿದುಕೊಂಡು ಧಮ್ಮ ಶಮಣ ಮಾಡುವರು.

ಭಾರತದಲ್ಲಿ ಮಾತ್ರ ವೈದಿಕ ಮನುವಾದಿಗಳು ಗುರುಪೂರ್ಣಿಮೆಯೆಂದು ಆಚರಿಕೊಂಡು ಬರುತ್ತಲೇ ಇದ್ದಾರೆ ವೈದಿಕ ಪುರೋಹಿತರೆನಿಸಿಕೊಂಡವರು ಮಾತ್ರ ಶುಭ ಕಾರ್ಯಗಳನ್ನು ಮಾಡಬಹುದು, ಇತರೇ ಸಮುದಾಯಗಳು ಶುಭಕಾರ್ಯಗಳನ್ನು ಮಾಡಿದರೆ ಅವರಿಗೆ ಅನಿಷ್ಟ ಅಶುಭವಾಗುತ್ತದೆ ಹೇಗಿದೆ ನೋಡಿ ಮನುವಾದಿಗಳ ಆಷಾಡ ಮಾಸದ ಆಷಾಡ ಭೂತಿತನದ ಒಳಮರ್ಮ!?

ಬೌದ್ಧರಿಗೆ ಪ್ರತಿ ಹುಣ್ಣಿಮೆಯು ಶುಭಸೂಚಕವಾದರೆ, ಇತರರಿಗೆ ಹೇಗೆ ಅಶುಭವಾಗುತ್ತದೆ? ಆಷಾಢವು ಅಶುಭ ಮಾಸವೆಂದು ಇತಿಹಾಸದ ಕತ್ತಲ ಗರ್ಭದಲ್ಲಿ ಹೂತಿಟ್ಟು ನಮ್ಮ ಪೂರ್ವಿಕರ ಇತಿಹಾಸವು ನಮಗೆ ತಿಳಿಯದಂತೆ ಮಾಡಿದ್ದಾರೆ ಅದಕ್ಕೆ ಬಾಬಾಸಾಹೇಬರು ಹೇಳಿದ್ದು “ಇತಿಹಾಸ ಮರೆತವರು ಇತಿಹಾಸ ಸೃಷ್ಷ್ಠಿಸಲಾರರು”ಅಂತ ಆದರೆ ಆಷಾಡ ಮಾಸವು ಸಮಸ್ತ ಭಾರತೀಯರಿಗೆ ಜ್ಞಾನದ ಭಾಗಿಲನ್ನು ತೆರೆದ ತಿಂಗಳು, ಸತ್ಯವನ್ನು ಸತ್ಯವೆಂದು ಸುಳ್ಳನ್ನು ಸುಳ್ಳೆಂದು ಸಾರಿದ ಭಾರತೀಯರಾದ ನಾವುಗಳು ಬಹುಜನರಿಗೆ ನಿಜವಾದ ಇತಿಹಾಸವನ್ನು ತಿಳಿಸೋಣ.

ವೈದಿಕರಿಂದ ಸೃಷ್ಟಿಯಾದ ಅಸಮಾನತೆಯ ಕತ್ತಲ ಕೂಪದ ಈ ನೆಲದಲ್ಲಿ ಮಹಾ ಕಾರುಣಿಕನ ಮಾನವೀಯ ಲೋಕದ ಧಮ್ಮಚಕ್ರವು ಉರುಳಿ ಸಾಮಾನ್ಯರಿಂದಿಡಿದು ಸಾಮ್ರಾಟ್ ಅಶೋಕರಂತಹ ಆಳರಸರ ಮನಕ್ಕೆ ಬುದ್ಧತ್ವವು ಹೊಕ್ಕಿ ಮಾನವೀಯ ಮನುಷ್ಯರಾಗುತ್ತಾರೆ, ಇದರಿಂದ ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತಿದ್ದ ವೈದಿಕರು ನಿರುದ್ಯೋಗಿಗಳಾಗುತ್ತಾರೆ ತಮ್ಮ ನಿರುದ್ಯೋಗಕ್ಕೆ ಕಾರಣವಾದ ಆಷಾಡ ಮಾಸವು ಅನಿಷ್ಟ ಅಶುಭವೆಂದು ಜನರು ತಿರಸ್ಕರಿಸುವಂತೆ ಮಾಡಿ ಯಶಸ್ವಿಯಾಗುತ್ತಾರೆ.

ಬುದ್ಧರೆಂಬ ಅರಿವಿನ ಹಣತೆಯಿಂದ ಆಷಾಢಮಾಸದ ತಿಂಗಳು ಸಕಲ ಜೀವರಾಶಿಗಳಿಗೂ ಶ್ರೇಶ್ಟವಾದರೆ ವೈದಿಕ ಪುರೋಹಿತರ ದೃಷ್ಟಿಯಲ್ಲಿ ಮಾತ್ರ ಕನಿಷ್ಠವಾಗುತ್ತದೆ ಕುಟಿಲತೆಯಿಂದ ಅಧಿಕಾರವನ್ನು ಕಸಿದುಕೊಂಡು ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿ ಬುದ್ಧ ಧಮ್ಮವನ್ನು ಈ ನೆಲದಿಂದಲೇ ಓಡಿಸಿದ ವೈದಿಕರು ತಾವು ಬರೆದುದೆಲ್ಲವನ್ನು ಕಾನೂನನ್ನಾಗಿಸಿ ಇದರ ವಿರುದ್ಧ ಯಾರು ಪ್ರಶ್ನಿಸಬಾರದೆಂದು ಇಲ್ಲಿನ ಮೂಲನಿವಾಸಿಗಳ ಮೇಲೆ ಧಾರ್ಮಿಕ ಗುಲಾಮಗಿರಿಯನ್ನೇರಿ ಅದನ್ನು ಒಪ್ಪಿಕೊಳ್ಳುವಂತೆ ಮಾಡಿರುವುದು ಈ ದೇಶದ ದುರಂತವೇ ಸರಿ.

ಸರ್ವರೂ ಕತ್ತಲೆಯಿಂದ ಬೆಳಕಿನ ಕಡೆ ಬರುವಂತಾಗಲಿ ಇಡೀ ವಿಶ್ವವು ಎಲ್ಲಾ ರೋಗ ರುಜಿನಗಳಿಂದ ಮುಕ್ತವಾಗಿ ಸುಖದಿಂದ ಜೀವಿಸುವಂತಾಗಲಿ

ಸರ್ವರಿಗೂ ಬುದ್ಧಗುರು ಮೊದಲ ಧಮ್ಮೋಪದೇಶ ನೀಡಿದ ದಿನವಾದ ಆಷಾಡ ಮಾಸದ ಹುಣ್ಣಿಮೆಯ ಧಮ್ಮ ಚಕ್ರ ಪರಿವರ್ತನಾ ದಿನದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ

Published

on

~ಗೋವರ್ಧನ ನವಿಲೇಹಾಳು

ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ  ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.

ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು  ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ  ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ;  ಎಚ್ಚರಿಕೆಯೂ ಹೌದು.

ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.

ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.

ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.

ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.

ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.

ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ

ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.

ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.

ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.

ಸುದ್ದಿದಿನ | ವಾಟ್ಸಾಪ್ | 9980346243

Continue Reading

ದಿನದ ಸುದ್ದಿ

ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ

Published

on

ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು  ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.

ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

Continue Reading

Trending