ರಾಜಕೀಯ
ಚುನಾವಣಾ ರಾಜಕಾರಣ : ಆಶಾದಾಯಕ ಅವಕಾಶಗಳು
ದೇಶ ಮತ್ತೊಂದು ಮಹಾಚುನಾವಣೆಯ ಹೊಸಿಲಲ್ಲಿದೆ. ಯಾರು ಅಧಿಕಾರ ಅಲಂಕರಿಸಬಹುದು ಎಂಬ ಸಹಜ ಕುತೂಹಲ ಎಲ್ಲೆಡೆಯಲ್ಲಿಯೂ ಇದೆ. ಇದಕ್ಕೆ ಪ್ರತಿಯಾಗಿ ರಾಜಕೀಯ ಅಖಾಡ ಸನ್ನದ್ಧವಾಗಿದೆ. ಲೋಕಸಭೆ ಚುನಾವಣೆ ಎಂದಾಕ್ಷಣ ಮುಂದಿನ ನಾಯಕ ಯಾರು ಎಂಬ ನಿರೀಕ್ಷೆ ಸಹಜವಾಗಿಯೇ ಗರಿಗೆದರುತ್ತದೆ. ಈ ಕುತೂಹಲಕ್ಕನುಗುಣವಾದ ನಿರೀಕ್ಷೆಯನ್ನು ಭಾರತದ ರಾಜಕಾರಣ ಹೇಗೆ ಈಡೇರಿಸುತ್ತದೆ ಎನ್ನುವುದರ ಮೇಲೆ ಭವಿಷ್ಯದ ಹೆಜ್ಜೆಗಳು ನಿರ್ಣಯಿಸಲ್ಪಡುತ್ತವೆ. ಜನಮನ್ನಣೆಯ ಗೆಲುವು ದಕ್ಕಿಸಿಕೊಳ್ಳಲು ರಾಜಕಾರಣಕ್ಕೆ ಎರಡು ಬಗೆಯ ಅವಕಾಶಗಳಿರುತ್ತವೆ. ಸಕಾರಾತ್ಮಕ ಆಲೋಚನೆಗಳ ಬಲದಲ್ಲಿ ದಾರ್ಶನಿಕ ನಾಯಕತ್ವ ಸಾಬೀತುಪಡಿಸುವ ಬದ್ಧತೆಯ ನಡೆಯೊಂದಿಗೆ ಮೊದಲ ಅವಕಾಶದ ಸಾಧ್ಯತೆ ಇರುತ್ತದೆ. ಇಡೀ ದೇಶವನ್ನು ಹಿಂದಕ್ಕೆಳೆಸುವ ಸಂಕುಚಿತ ಕಾರ್ಯಸೂಚಿಯೊಂದಿಗೆ ಜನರ ಜಡತೆಯನ್ನು ಮತ್ತಷ್ಟು ಸ್ಥಾಯಿಗೊಳಿಸುವ ಪ್ರಯತ್ನಗಳೊಂದಿಗಿನ ಅವಕಾಶ ಮತ್ತೊಂದು. ಭಾರತದ ರಾಜಕಾರಣವು ಇಂಥ ಸೀಮಿತ ದೃಷ್ಟಿಕೋನದ ಅವಕಾಶವಾದಿ ತಂತ್ರಗಾರಿಕೆಯನ್ನೇ ನೆಚ್ಚಿಕೊಂಡು ಸಾಗುತ್ತಿದೆ ಎಂಬುದಕ್ಕೆ ಹಲವು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ಲಭ್ಯವಾಗುತ್ತವೆ. ಸ್ವಾತಂತ್ರ್ಯೋತ್ತರ ಅವಧಿ, ಜಾಗತೀಕರಣದ ತದನಂತರದ ಕಾಲಘಟ್ಟ ಮತ್ತು ಹೊಸ ಶತಮಾನದ ಸ್ಥಿತ್ಯಂತರಗಳ ಅವಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಚರ್ಚೆಯನ್ನು ವಿಸ್ತರಿಸಬಹುದು.
ಜಡತೆಯಿಂದ ಗೆಲುವಿನ ಲಾಭ!
ಅಧಿಕಾರಕ್ಕ ಬಂದ ಕ್ಷಣದಿಂದಲೇ ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪ್ರದರ್ಶಿತವಾಗುವ ಎಚ್ಚರದ ರಾಜಕೀಯ ನಡೆ ಇಲ್ಲಿಯ ಸಾಮಾನ್ಯ ಗುಣಲಕ್ಷಣ. ಇದಕ್ಕೆ ಹೊಸ ಬಗೆಯ ತೀವ್ರತೆ ಸಿಕ್ಕಿದ್ದು ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ. ಆಗಿನ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಭಾರತೀಯ ರಾಜಕಾರಣ ಚಾಣಾಕ್ಷ ತಂತ್ರಗಾರಿಕೆಯ ತೀವ್ರತರ ತಿರುವಿನ ಘಟ್ಟ ತಲುಪಿದ್ದು ಸ್ಪಷ್ಟವಾಗುತ್ತದೆ. ಅಧಿಕಾರ ಪಡೆಯುವ ಏಕೈಕ ಕಾರ್ಯಸೂಚಿಯನ್ನಷ್ಟೇ ನೆಚ್ಚಿಕೊಂಡು ರಾಜಕೀಯ ಪಕ್ಷಗಳು ಕಾರ್ಯೋನ್ಮುಖವಾಗುವುದು, ಅದಕ್ಕಾಗಿ ಚಾಣಾಕ್ಷ ತಂತ್ರಗಾರಿಕೆಯ ನೆರವು ಪಡೆಯುವುದು, ಆ ಮೂಲಕ ಗೆಲುವು ಸಾಧ್ಯವಾಗಿಸಿಕೊಳ್ಳುವುದು – ಇವೆಲ್ಲವೂ ಗೊತ್ತಿರುವ ಸಂಗತಿಗಳೇ. ಆದರೆ, 2014ರ ಚುನಾವಣೆಯು ಈ ದೇಶದಲ್ಲಿ ಸ್ಥಾವರವಾಗಿ ಉಳಿದುಕೊಂಡಿದ್ದ ಜಡತೆಯ ನಿರ್ಲಿಪ್ತ ಮನಸ್ಥಿತಿಯನ್ನು ಬೇರೊಂದು ರೀತಿಯಲ್ಲಿ ಬಳಸಿಕೊಂಡು ಗೆಲುವು ತಂದುಕೊಳ್ಳುವ ಅವಕಾಶವನ್ನು ದಯಪಾಲಿಸಿತು. ಇದನ್ನು ಅತ್ಯಂತ ಚಾಣಾಕ್ಷಯುತವಾಗಿ ಬಳಸಿಕೊಂಡವರು ಗೆಲುವಿನ ನಗೆ ಬೀರಿದರು.
ಹಳೆ ಆಲದ ಮರಕ್ಕೆ ಜೋತುಬೀಳುವಿಕೆ
ಹಿಂದೆ ಬಹಳ ವರ್ಷಗಳ ಕಾಲ ಆಡಳಿತ ಚುಕ್ಕಾಣಿ ಹಿಡಿದಿದ್ದವರು ಅನುಸರಿಸಿದ ಹಾದಿಯನ್ನೇ ಬೇರೊಂದು ಬಗೆಯಲ್ಲಿ ಮಾದರಿಯಾಗಿಸಿಕೊಂಡ ಕಾರಣಕ್ಕಾಗಿಯೇ ಆ ಗೆಲುವು ಸಾಧಿಸಲು ಸಾಧ್ಯವಾಯಿತು. ಹಿಂದಿನವರದ್ದು ಹಳೆಯ ಆಲದ ಮರಕ್ಕೆ ಜೋತುಬೀಳುವ ಪ್ರವೃತ್ತಿಯ ರಾಜಕಾರಣವೇ ಆಗಿತ್ತು. ಹಳೆಯ ಸಾಧನೆಯನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಅದರ ಜಪಗೈದು ಜನರನ್ನು ಸೆಳೆದುಕೊಳ್ಳುವ ತಂತ್ರಗಾರಿಕೆಯ ಕಡೆಗೇ ಅದರ ಆದ್ಯತೆ ಇತ್ತು. ಗೆಲುವು ಸಾಧಿಸುವ ಹುಮ್ಮಸ್ಸಿನೊಂದಿಗೆ ಚುನಾವಣಾ ಅಖಾಡಕ್ಕಿಳಿದಿದ್ದವರು ಹಳೆಯದ್ದರ ಆಧಾರದಲ್ಲಿ ಹೊಸದೊಂದು ರಾಜಕೀಯ ಸಂಸ್ಕøತಿಯನ್ನು ರೂಪಿಸುವ ಹೊಣೆಗಾರಿಕೆ ನಿರ್ವಹಿಸುವ ಅವಕಾಶವನ್ನು ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟರು. ಹೀಗಾಗಿ ‘ಹಳೆಯ ಬೇರು, ಹೊಸ ಚಿಗುರು’ ಎಂಬ ಪ್ರಯೋಗಶೀಲ ದೃಷ್ಟಿಕೋನ ಸೋಲನ್ನು ಅನುಭವಿಸಿತು. ಹಳೆಯ ಬೇರುಗಳೊಂದಿಗೆ ನಂಟು ಉಳಿಸಿಕೊಂಡು ಹೊಸದಾದ ಹೆಜ್ಜೆಗಳೊಂದಿಗೆ ಬದಲಾವಣೆಯ ಅಲೆಯನ್ನು ಮೂಡಿಸುವುದರ ಕಡೆಗಿನ ವ್ಯಾಪಕ ಸಾಧ್ಯತೆಗಳು ಮೊಟಕುಗೊಂಡವು.
ನಕಾರಾತ್ಮಕತೆಯ ಪುನರಾವರ್ತನೆ
ಪ್ರಶ್ನಿಸುವ ತಾರ್ಕಿಕತೆಯನ್ನು ಚಾಣಾಕ್ಷಯುತವಾಗಿ ಹತ್ತಿಕ್ಕುವ ಆಡಳಿತಾರೂಢ ಪ್ರಾಬಲ್ಯವು ಸ್ವಾತಂತ್ರ್ಯೋತ್ತರ ರಾಜಕೀಯ ವಲಯದ ಮೊದಲ ಆದ್ಯತೆಯಾಗಿ ಪ್ರಾಮುಖ್ಯತೆ ಪಡೆದುಕೊಂಡಿತು. ಇದನ್ನು ಹಿನ್ನೆಲೆಗೆ ಸರಿಸುವ ಪರ್ಯಾಯ ರಾಜಕಾರಣದ ತಾತ್ವಿಕ ಮಾದರಿಗಳು ವಿವಿಧ ದಶಕಗಳಲ್ಲಿ ಕಾಣಿಸಿಕೊಂಡರೂ ಜನಜನಿತವಾದ ರಾಜಕೀಯ ಪಕ್ಷಗಳ ಮುಂಚೂಣಿ ನಾಯಕರ ವ್ಯಕ್ತಿಗತ ಪ್ರತಿಷ್ಠೆ ಮತ್ತು ಆರಾಧನಾ ಮನೋಭಾವಕ್ಕೇ ಹೆಚ್ಚಿನ ಆದ್ಯತೆ ಸಿಕ್ಕಿತು. ಇದು ಐದು ವರ್ಷಗಳ ಅಧಿಕಾರಾವಧಿಯ ಪ್ರತಿ ಹಂತದಲ್ಲೂ ನುಸುಳಿಕೊಳ್ಳತೊಡಗಿತು. ಈಗ ಅದೇ ನಕಾರಾತ್ಮಕತೆ ಬೇರೆ ರೀತಿಯಲ್ಲಿ ಪುನರಾವರ್ತಿತವಾಗಿದೆ.
ವೈರುಧ್ಯದ ರಾಜಕೀಯ ನಡೆ
ಚುನಾವಣಾ ರಾಜಕಾರಣವು ಸಂಕುಚಿತ ಅಜೆಂಡಾ ಆಧಾರದಲ್ಲಿ ಅಭಿವ್ಯಕ್ತವಾದರೆ ಏನೇನಾಗುತ್ತದೆ ಎನ್ನುವುದನ್ನು ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಚರಿತ್ರೆಯ ಮೂಲಕ ತಿಳಿದುಕೊಳ್ಳಬಹುದು. ಇದರ ಅಧ್ಯಯನ ಮತ್ತು ಸೂಕ್ಷ್ಮ ಅವಲೋಕನದಿಂದ ಇಲ್ಲಿಯ ವೈರುಧ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಜೀವಪರ ಸಂವೇದನೆಯ ಮೌಲಿಕ ಆಲೋಚನೆ ಮತ್ತು ವಾದಗಳನ್ನು ಮುನ್ನೆಲೆಗೆ ತಂದು ಅದಕ್ಕನುಗುಣವಾದ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂಬ ಪ್ರತಿಪಾದನೆಯ ನೆರವಿನೊಂದಿಗೆ ಅಧಿಕಾರಕ್ಕೆ ಬಂದವರು ಮತ್ತು ಉದಾತ್ತವಾದ ಧಾರ್ಮಿಕ ಅಂಶಗಳನ್ನು ಸಂಕುಚಿತಗೊಳಿಸಿ ಸಂಘರ್ಷ ಮೂಡಿಸಿ ಅಧಿಕಾರಕ್ಕೆ ಹತ್ತಿರಾಗುವ ಜಾಯಮಾನದ ರಾಜಕೀಯ ವರ್ತನೆಗಳವರ ದಿಗ್ವಿಜಯದ ಜೊತೆಗೆ ಇಂಥ ವೈರುಧ್ಯಗಳಿವೆ. ಎರಡೂ ವಲಯಗಳು ಅಧಿಕಾರರೂಢ ಮತ್ತು ವಿರೋಧ ಪಕ್ಷ ಎಂಬ ನೆಲೆಗಳಲ್ಲಿ ವಿಂಗಡಣೆಯಾಗಿ ವಾದಗಳನ್ನು ಮುಂದಿಡುತ್ತಾ ಜನಬೆಂಬಲ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಕಂಡಿವೆ.
ಒಮ್ಮೆ ಅವರಿಗೆ, ಮತ್ತೊಮ್ಮೆ ಇವರಿಗೆ ಎನ್ನುವ ಹಾಗೆ ಅಧಿಕಾರದ ಅವಕಾಶ ಪ್ರಾಪ್ತವಾಗಿದೆ. ಆದರೆ, ಅಧಿಕಾರಕ್ಕೆ ಬಂದ ಮೇಲೆ ಈ ಎರಡೂ ವಲಯಗಳ ರಾಜಕೀಯ ನಡೆ ಯಾವ ಬಗೆಯ ಉದಾತ್ತತೆಯೊಂದಿಗಿತ್ತು ಎಂಬುದನ್ನು ಪರಿಶೀಲಿಸಿದರೆ ಇಡೀ ಭಾರತದ ರಾಜಕಾರಣದ ಬಹುದೊಡ್ಡ ಮಿತಿಗಳು ಎದ್ದುಕಾಣುತ್ತವೆ. ಅಧಿಕಾರಕ್ಕೆ ಬರುವವರೆಗೆ ಪ್ರತಿಪಾದಿಸಿದ ವಿಶಾಲವಾದ ಮೌಲಿಕ ಆಲೋಚನೆಗಳನ್ನೇ ಅಧಿಕಾರಕ್ಕೆ ಬಂದ ನಂತರ ಮರೆಯುವ ಜಾಣ್ಮೆಯನ್ನು ಸ್ಥಾಯಿಯಾಗಿಸಿಕೊಂಡ ಪಕ್ಷ ರಾಜಕಾರಣವೊಂದರ ವಿಕಲಾಂಗ ಲಕ್ಷಣವು ಪಕ್ಷಾತೀತ ನೆಲೆಯಲ್ಲಿ ಸರ್ವವ್ಯಾಪಿಯಾಯಿತು. ಇಂಥ ದ್ವಂದ್ವವನ್ನು ಪ್ರಶ್ನಿಸುತ್ತಲೇ ಧರ್ಮಕ್ಕೆ ಸಂಬಂಧಿಸಿದ ಸೂಕ್ಷ್ಮ ಸಂಗತಿಗಳನ್ನು ರಾಜಕೀಯ ಲಾಭದ ಆಕಾಂಕ್ಷೆಯಲ್ಲಿ ತಪ್ಪಾಗಿ ವಿಶ್ಲೇಷಿಸಿ ಅಧಿಕಾರಕ್ಕೇರಿದವರೂ ಮತ್ತದೇ ಹಾದಿ ಹಿಡಿದರು. ಹೀಗಾಗಿಯೇ ರಾಜಕೀಯ ಪಕ್ಷಗಳ ಕೆಳಹಂತದ ಯುವ ಕಾರ್ಯಕರ್ತರಿಗೆ ಉದಾತ್ತವಾದ ನಾಯಕತ್ವದ ಮಾದರಿಯೇ ಇಲ್ಲದಂತಾಯಿತು.
ಬಹುಮತ ಪ್ರಾಶಸ್ತ್ಯದ ಮತ್ತೊಂದು ಮುಖ
ಈ ಹಂತದಲ್ಲಿಯೇ ಪ್ರಶ್ನಿಸುವ ಧ್ವನಿಗಳೊಂದಿಗೆ ಇರುವವರನ್ನೇ ದ್ವಂದ್ವಕ್ಕೆ ಸಿಲುಕಿಸುವ ವಿತಂಡವಾದಿ ದೃಷ್ಟಿಕೋನಗಳು ಕಳೆದ 2014 ಚುನಾವಣೆಯ ಸಂದರ್ಭದಲ್ಲಿ ವೈಭವೀಕೃತವಾದವು. ಇವರನ್ನು ಪ್ರಶ್ನೆ ಮಾಡುತ್ತೀರಿ. ಮತ್ತಿನ್ಯಾರನ್ನು ಆಯ್ಕೆ ಮಾಡುತ್ತೀರಿ? ಇಷ್ಟು ವರ್ಷಗಳ ಕಾಲ ಆಳಿದವರು ಏನು ಸಾಧಿಸಿದರು? ಎಂಬ ಮರುಪ್ರಶ್ನೆ ಎಸೆದು ಚರ್ಚೆ ಒಳಗೊಳ್ಳಬಹುದಾದ ವಿಶಾಲ ಆವರಣವನ್ನೇ ಒಡೆದುಬಿಡುವ ಪ್ರವೃತ್ತಿ ಮುಂದುವರೆಯಿತು. ಇದೇ ಪ್ರವೃತ್ತಿಯನ್ನೇ ಮುಖ್ಯವಾಗಿಸಿಕೊಂಡು ಸಾಮಾಜಿಕ ಜಾಲತಾಣಗಳನ್ನು ಪಕ್ಷದ ಪರವಾದ ಅಲೆ ಮೂಡಿಸುವ ಉದ್ದೇಶಕ್ಕೆ ಬಳಸಿಕೊಳ್ಳುವ ರಹಸ್ಯ ಕಾರ್ಯಸೂಚಿ ಯಶಸ್ಸು ಕಂಡಿತು. ಹಿಂದಿನವರ ಮೌನಕ್ಕಿಂತ ಈಗಿನವರ ಮಾತು ಹೆಚ್ಚು ಆಪ್ತ ಎಂಬ ಕಾರಣಕ್ಕಾಗಿ ಮತನೀಡುವ ಅಪೇಕ್ಷೆ ಸಾಮೂಹಿಕವಾಗಿ ಅಭಿವ್ಯಕ್ತವಾಯಿತು. ಸಮಸ್ಯೆಗಳನ್ನು ಅಸಹಾಯಕ ಮೌನ ಮತ್ತು ದಿವ್ಯ ನಿರ್ಲಿಪ್ತತೆಯೊಂದಿಗೆ ನಿರ್ಲಕ್ಷಿಸಿದವರಿಗಿಂತಲೂ ಅವೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂಬುದನ್ನು ಭಾಷಿಕ ಪ್ರೌಢಿಮೆಯಲ್ಲಿ ಮನಗಾಣಿಸಿದವರು ಮುಖ್ಯ ಎಂಬ ಭಾವನೆಯೇ ಸಾರ್ವತ್ರಿಕವಾಗಿ ಹೊಸಬರಿಗೆ ಭಾರೀ ಬಹುಮತದ ಪ್ರಾಶಸ್ತ್ಯ ದೊರಕಿ ಅಧಿಕಾರದ ಅವಕಾಶ ಲಭ್ಯವಾಯಿತು.
ದಿಕ್ಕುತಪ್ಪಿಸುವ ಹುನ್ನಾರಗಳು
ಈಗ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದೇ ಬಗೆಯ ಇತಿಹಾಸ ಪುನರಾವರ್ತಿತಗೊಳ್ಳುವ ಎಲ್ಲ ವಿದ್ಯಮಾನಗಳಿಗೆ ನಾವೀಗ ಸಾಕ್ಷಿಯಾಗುತ್ತಲೇ ಇದ್ದೇವೆ. ಒಂದು ದೇಶದ ವಿರುದ್ಧ ಯುದ್ಧ ಆಗಬೇಕು ಎಂಬ ಅಗ್ರೆಸ್ಸಿವ್ ಪ್ರತಿಪಾದನೆಯು ಪೀಳಿಗೆಯೊಂದರ ರಾಜಕೀಯ ಆದ್ಯತೆಯನ್ನೇ ಸಂಕುಚಿತಗೊಳಿಸಿ ಬಹುಮತ ಗಿಟ್ಟಿಸಿಕೊಳ್ಳುವ ಮಟ್ಟಿಗೆ ಪ್ರಭಾವೀ ಎಂಬುದನ್ನು ಸಾಬೀತುಪಡಿಸುವ ನಿದರ್ಶನಗಳು ಕಣ್ಣಮುಂದೆಯೇ ಇವೆ. ಸುಳ್ಳುಗಳ ತರಹೇವಾರಿ ವಿವರಗಳು ಬಗೆಬಗೆಯ ಬಣ್ಣಗಳನ್ನು ಪಡೆದು ಜನರ ನಿರ್ಧಾರಾತ್ಮಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತಿರುವ ವಾಸ್ತವವನ್ನು ಅಷ್ಟು ಸುಲಭವಾಗಿ ನಿರಾಕರಿಸುವಂತಿಲ್ಲ. ರಾಜಕಾರಣಿಗಳ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗಲಂತೂ ಭಾರತೀಯ ಪ್ರಜಾಪ್ರಭುತ್ವದ ದಿಕ್ಕುತಪ್ಪಿಸುವ ಹುನ್ನಾರಗಳು ಯಾವ ಸ್ವರೂಪದ್ದವು ಎಂಬುದು ಸ್ಪಷ್ಟವಾಗುತ್ತದೆ. ಇಡೀ ದೇಶದಲ್ಲಿ ಆಗಬೇಕಿದ್ದ ಚರ್ಚೆಗಳ ಬದಲು ಅನಗತ್ಯ ವಿವರಗಳೇ ಪ್ರಾಮುಖ್ಯತೆ ಪಡೆದುಕೊಂಡು ಯಾರಿಗೆ ಲಾಭವಾಗುತ್ತದೆ ಎಂಬ ಸೂಕ್ಷ್ಮತೆ ಗೊತ್ತಾಗುತ್ತದೆ.
ಪ್ರಚೋದನಾತ್ಮಕ ಒಮ್ಮತದ ಉತ್ಪನ್ನ
ವಿಧವೆ ಎಂಬ ಕಾರಣಕ್ಕಾಗಿ ಮಹಿಳೆಯ ರಾಜಕೀಯ ಪ್ರವೇಶಕ್ಕೆ ವ್ಯಕ್ತವಾಗುವ ಪ್ರತಿರೋಧ, ರಾಜಕೀಯ ನಾಯಕಿಯ ತಂದೆ ಯಾರೆಂಬುದೇ ಗೊತ್ತಿಲ್ಲ ಎಂಬುದನ್ನೇ ಚಿತ್ರಿಸಿ ಇಂಥವರ ಆಯ್ಕೆ ಸಮರ್ಥನೀಯವಲ್ಲ ಎಂಬ ವಾದ, ಸಂಘರ್ಷವನ್ನು ಸಮರ್ಥಿಸುವ ನುಡಿಗಳನ್ನಾಡಿದಾಗಲೇ ಪರವಾದ ಅಲೆಯನ್ನು ಸೃಷ್ಟಿಸಿಕೊಳ್ಳಬಹುದೆಂಬ ತಪ್ಪುಕಲ್ಪನೆ, ಜನಪ್ರಿಯ ತಾರೆಯನ್ನು ರಾಜಕೀಯಕ್ಕೆ ಕರೆತಂದು ಜನರನ್ನು ಸೆಳೆದುಕೊಳ್ಳುವ ಪ್ರಯತ್ನ, ಸುದ್ದಿಮಾಧ್ಯಮಗಳನ್ನು ಕೊಂಡುಕೊಂಡು ತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಚಾಣಾಕ್ಷತೆ, ಹಿಂದೆಂದಿಗಿಂತಲೂ ಹೆಚ್ಚು ವಿಸ್ತಾರವಾದ ಸುದ್ದಿಮಾಧ್ಯಮ ಮುಖ್ಯಸ್ಥರು ಮತ್ತು ರಾಜಕೀಯ ಪಕ್ಷಗಳ ನಡುವಿನ ಅಸಂವಿಧಾನಿಕ ನಂಟು, ಅದರ ವಿಸ್ತರಣೆ ಎಂಬಂತೆ ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಬರೀ ವಿವಾದಕ್ಕೆಳೆಸುವ ಮಾತುಗಳ ಸುತ್ತಲೇ ಗಿರಕಿ ಹೊಡೆಯುತ್ತಿರುವ ಸುದ್ದಿಮಾಧ್ಯಮ ಪ್ರಜ್ಞೆ – ಇವೆಲ್ಲವೂ ಸದ್ಯದ ಚುನಾವಣಾ ರಾಜಕಾರಣದ ಒಳಸುಳಿಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಹಾಯಕವಾಗುತ್ತವೆ. ಭಾವನೆಗಳನ್ನು ಪ್ರಚೋದಿಸಿ ಒಮ್ಮತವನ್ನು ಉತ್ಪಾದಿಸಿಕೊಳ್ಳುವ ತಂತ್ರಗಾರಿಕೆಯು ಭಾರತದಲ್ಲಿ ಅತ್ಯಂತ ಜಾಗರೂಕತೆಯಿಂದ ಪ್ರಯೋಗಿಸಲ್ಪಡುತ್ತಿರುವುದಕ್ಕೆ ಸಾಕ್ಷ್ಯ ಒದಗಿಸುತ್ತವೆ.
ಭಾವನಾತ್ಮಕ ಪ್ರಚೋದನೆಯ ನೆರವಿನೊಂದಿಗೆ ಪೂರಕವಾದ ಒಮ್ಮತವನ್ನು ಸೃಷ್ಟಿಸಿಕೊಳ್ಳುವ ತಂತ್ರಗಾರಿಕೆಯು ಭಾರತೀಯ ರಾಜಕಾರಣಕ್ಕೆ ಹೊಸದೇನೂ ಅಲ್ಲ. ಅಸಮಾನತೆಯ ಕಾರಣಕ್ಕಾಗಿಯೇ ಭಾರತದಲ್ಲಿ ಬೇರೂರಿರುವ ತಾರತಮ್ಯದ ದೃಷ್ಟಿಕೋನಗಳನ್ನು ಒಡೆದುಹಾಕುವ ಅಪ್ಪಟ ವೈಚಾರಿಕ ಆಂದೋಲನಗಳು ನಡೆದರೂ ತಾರ್ಕಿಕ ಅಂತ್ಯ ಕಂಡುಕೊಳ್ಳುವವರೆಗೆ ಅವುಗಳ ಚಲನೆ ನಿರಂತರವಾಗುಳಿಯಲಿಲ್ಲ. ಇಂಥ ವೈಚಾರಿಕ ಆಂದೋಲನಗಳನ್ನು ರಾಜಕೀಯ ಅಸ್ಮಿತೆಯ ಸಶಕ್ತತೆಗೆ ಬಳಸಿಕೊಳ್ಳುವ ಜಾಣ್ಮೆಯ ರಾಜಕಾರಣದ ಬದಲು ಅವುಗಳನ್ನು ಭಾವುಕ ನೆಲೆಯಲ್ಲಿ ಗ್ರಹಿಸುವ ಒತ್ತಡ ಸೃಷ್ಟಿಸಿ ಪ್ರಬಲರು ಮತ್ತು ದುರ್ಬಲರ ನಡುವಿನ ಕಂದರ ಹೆಚ್ಚಿಸುವ ಪ್ರಯತ್ನಗಳಾದವು. ಈ ಹಂತದಲ್ಲಿ ಭಿನ್ನಾಭಿಪ್ರಾಯಗಳುಂಟಾದವು. ಗುಂಪುಗಳಾದವು.
ಹೀಗೆ ವೈಚಾರಿಕ ಆಂದೋಲನಗಳನ್ನು ಕಟ್ಟಬೇಕಾದ ವಲಯವೇ ಒಡೆದುಹೋಯಿತು.
ಸಮಸ್ಯೆಯ ಮೂಲಪತ್ತೆಯ ಅನಿವಾರ್ಯತೆ
ಅವುಗಳು ಎತ್ತಿದ ಪ್ರಶ್ನೆಗಳನ್ನೇ ಮುಂದಿಟ್ಟು ಚುನಾವಣೆಗಳನ್ನು ಎದುರಿಸಿದ ಪಕ್ಷ ರಾಜಕಾರಣವು ಅಧಿಕಾರ ಪಡೆಯುವಲ್ಲಿ ಯಶಸ್ಸು ಸಾಧಿಸಿತು. ಅಧಿಕಾರ ಪಡೆದ ನಂತರ ಈ ವೈಚಾರಿಕ ಆಂದೋಲನ ಎತ್ತಿದ್ದ ಪ್ರಶ್ನೆಗಳ ಹಿಂದಿದ್ದ ಸಂಕಟಗಳನ್ನು ಪರಿಹರಿಸುವುದರ ಕಡೆಗೆ ರಚನಾತ್ಮಕ ಪ್ರಯತ್ನವನ್ನು ನಡೆಸಲೇ ಇಲ್ಲ. ಅಷ್ಟೇ ಅಲ್ಲ, ಭಾವುಕ ವ್ಯಾಪ್ತಿಯಲ್ಲಿ ಅಗ್ರಸ್ಥಾನ ಪಡೆದು ಚರ್ಚೆಗೊಳಗಾಗುವ ದೇವರು, ಧರ್ಮಕ್ಕೆ ಸಂಬಂಧಿಸಿದ ಚರ್ಚೆಯನ್ನು ವಿವೇಚನೆ ಎತ್ತರಿಸುವ ಸಂವಾದ ರೂಪಿಸುವ ಆಡಳಿತಾತ್ಮಕ ಹೊಣೆಗಾರಿಕೆಗಳನ್ನೂ ನಿಭಾಯಿಸಲಿಲ್ಲ. ಈ ಸ್ಪೇಸ್‍ಅನ್ನು ಮೂಲಭೂತವಾದಿ ದೃಷ್ಟಿಕೋನದ ರಾಜಕಾರಣ ಸಕಾಲಿಕವಾಗಿ ಬಳಸಿಕೊಂಡು ಅಧಿಕಾರದ ನಿರ್ಣಾಯಕ ಆವರಣವನ್ನು ಪ್ರವೇಶಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿತು. ಸಮಸ್ಯೆಯ ಈ ಮೂಲವನ್ನು ಗೊತ್ತುಮಾಡಿಕೊಳ್ಳದೇ ನಾವು ಸದ್ಯದಲ್ಲಿ ಇದಕ್ಕಿಂದ ಭಿನ್ನವಾದ ಹೊಸದೊಂದು ಪರ್ಯಾಯ ರಾಜಕಾರಣದ ಆಕೃತಿಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
ಅಪೂರ್ವ ಅವಕಾಶ ಬಿಟ್ಟುಕೊಡುವ ಚಾಳಿ
ಈಗ ಸುದ್ದಿಮಾಧ್ಯಮಗಳು ಅತ್ಯುತ್ಸಾಹದಲ್ಲಿ ಇಂತಿಷ್ಟು ಹೊಸ ಮತದಾರರು ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧರಿಸಲಿದ್ದಾರೆ ಎಂದು ಬಿಂಬಿಸುತ್ತಿವೆ. ಹೀಗೆ ಬಿಂಬಿಸುತ್ತಲೇ ಯುವಶಕ್ತಿ ಯಾರ ಪರ ನಿಲ್ಲಬೇಕು ಎಂಬರ್ಥದ ವಿಶ್ಲೇಷಣೆಗಳನ್ನು ಪರೋಕ್ಷವಾಗಿ ಮುಂದಿಡುತ್ತಿವೆ. ಸೈನಿಕರ ಮೇಲೆ ದಾಳಿ ನಡೆದಾಗ ಯುದ್ಧದ ಮೂಲಕವೇ ಪರಿಹಾರ ಸಾಧ್ಯ ಎಂಬ ಬಿಂಬಗಳನ್ನು ಕಟ್ಟಿಕೊಟ್ಟು ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ನೆರೆಯ ರಾಷ್ಟ್ರಕ್ಕೆ ಬುದ್ಧಿ ಕಲಿಸಬಹುದು ಎಂಬ ಪರೋಕ್ಷ ಸಂದೇಶವನ್ನು ರವಾನಿಸುತ್ತಿವೆ. ಇನ್ನೂ ಕೆಲವು ಮಾಧ್ಯಮಗಳು ಮುಖ್ಯವಾಗಿ ಉಗ್ರರ ವಿರುದ್ಧದ ರಚನಾತ್ಮಕ ಕಾರ್ಯಾಚರಣೆ ಮತ್ತು ಪಾಕಿಸ್ತಾನದೊಂದಿಗಿನ ಸೌಹಾರ್ದಯುತ ಮಾತುಕತೆಯ ಹಾದಿ ಅನುಸರಣೆಯ ಅಗತ್ಯತೆಯನ್ನು ಪ್ರತಿಪಾದಿಸುತ್ತಿವೆ. ಈ ಚರ್ಚೆಯ ಲಾಭವನ್ನು ಪಡೆಯುವ ಹವಣಿಕೆಯನ್ನು ಪಕ್ಷಗಳು ತೋರುತ್ತಿವೆ. ಇವೆಲ್ಲದ್ದರ ಮಧ್ಯೆ ಚುನಾವಣಾ ಅಖಾಡದಲ್ಲಿ ಪ್ರಜಾಪ್ರಭುತ್ವವಾದಿ ರಾಷ್ಟ್ರವೊಂದು ಮುಂಚೂಣಿಗೆ ತಂದುಕೊಳ್ಳಲೇಬೇಕಾದ ಸಂಗತಿಗಳು ಪ್ರಾತಿನಿಧ್ಯವನ್ನೇ ಪಡೆಯುತ್ತಿಲ್ಲ. ಇಂಥ ಅಪೂರ್ವ ಅವಕಾಶವನ್ನು ರಾಜಕೀಯ ಪಕ್ಷಗಳು ಉದ್ದೇಶಪೂರ್ವಕವಾಗಿ ಬಿಟ್ಟುಕೊಡುತ್ತಿವೆ.
ಸವಾಲುಗಳ ನಿರ್ವಹಣೆಯ ಚಾಣಾಕ್ಷತೆಯ ಅಗತ್ಯತೆ
ಸಮಸ್ಯೆಗಳ ಪ್ರಮಾಣ ವ್ಯಾಪಕವಾಗಿದ್ದಾಗ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸವಾಲಿನ ನಿರ್ವಹಣೆಯ ಚಾಕಚಕ್ಯತೆ ಪ್ರದರ್ಶಿಸಬೇಕಾಗುತ್ತದೆ. ಇಂಥ ಚಾಕಚಕ್ಯತೆಯೊಂದಿಗಿನ ನಿರ್ವಹಣೆಯ ಸವಾಲನ್ನು ಅತ್ಯಂತ ಶ್ರದ್ಧೆಯಿಂದ ಭಾರತೀಯ ರಾಜಕಾರಣ ಸ್ವೀಕರಿಸಲಿಲ್ಲ. ಸ್ವೀಕರಿಸುವುದನ್ನು ಪ್ರಾಥಮಿಕ ಆದ್ಯತೆಯ ಭಾಗವನ್ನಾಗಿ ಪರಿಗಣಿಸಲಿಲ್ಲ. ಬದಲಾಗಿ ಅದು ಜನರ ದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡು ಅದರ ಮೇಲೆ ಮತದ ಫಸಲು ಪಡೆಯುವ ಆಸೆಗಳನ್ನು ಈಡೇರಿಸುವುದರ ಕಡೆಗೆ ಹುಮ್ಮಸ್ಸನ್ನು ಮೀಸಲಾಗಿರಿಸಿಕೊಂಡಿತು. ಸಮಾಜವಾದಿ, ಜಾತ್ಯಾತೀತತೆ, ಬಂಡಾಯ ಮನೋಧರ್ಮದ ಚಳುವಳಿಗಳಿಂದ ಹೊಸ ಅಲೆ ಸೃಷ್ಟಿಸುವ ಪ್ರಯತ್ನಗಳಾದವು. ಆದರೆ ಅವುಗಳ ಪ್ರಭಾವವನ್ನು ವಿಸ್ತರಿಸುವುದಕ್ಕೆ ಇಲ್ಲಿಯ ರಾಜಕಾರಣ ಅವಕಾಶ ನೀಡಲಿಲ್ಲ. ಅವುಗಳನ್ನು ಸದೆಬಡೆಯುವ ಪ್ರತಿತಂತ್ರಗಳನ್ನು ಹೆಣೆದು ಸಾಂಪ್ರದಾಯಿಕ ಜಡತೆಯೊಂದಿಗಿನ ಜನರ ಮನೋಧರ್ಮದ ಮಿತಿಗಳನ್ನೇ ತನ್ನ ಗೆಲುವಿನ ತಂತ್ರಗಳಿಗಾಗಿ ಬಳಸಿಕೊಂಡಿತು. ಇದರ ಕಾರಣಕ್ಕಾಗಿಯೇ ಈಗ ಹೊಸ ವಿತಂಡವಾದಿ ದೃಷ್ಟಿಕೋನಗಳು ಜನಪ್ರಿಯ ಎಂಬ ಭಾವ ಮೂಡಿಸಲಾಗುತ್ತಿದೆ.
ಉಜ್ವಲ ಭವಿಷ್ಯದ ಸಾಧ್ಯತೆಗಳು
ಬುದ್ಧಿ ಮತ್ತು ಜೀವ – ಇವೆರಡೂ ಅಸಂಗತ ಎಂಬ ವೈರುಧ್ಯದ ನಿಲುವುಗಳು ಪ್ರಾಮುಖ್ಯತೆ ಪಡೆಯುತ್ತಿವೆ. ಬುದ್ಧಿಜೀವದ ವಿವೇಚನಾಪೂರ್ಣ ಅಸ್ತಿತ್ವ ಅಪಾಯಕಾರಿ ಎಂದು ನಂಬಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಬುದ್ಧಿಜೀವವು ಧರ್ಮಾಧಾರಿತ ಭಾರತೀಯ ಸಾಮಾಜಿಕತೆಯನ್ನು ಭಿನ್ನವಾಗಿ ಮರುರೂಪಿಸುವುದಕ್ಕೆ ಅತ್ಯಾವಶಕ ಎಂಬ ತಾತ್ವಿಕತೆಯನ್ನು ರಾಜಕಾರಣ ಅರ್ಥೈಸಿಕೊಳ್ಳುತ್ತಿಲ್ಲ. ಧರ್ಮ, ದೇವರು, ಸಮಾಜ, ರಾಜಕಾರಣ, ಆರ್ಥಿಕತೆ – ಇವೆಲ್ಲವನ್ನೂ ಬುದ್ಧಿಜೀವದ ಜೀವಂತಿಕೆಯ ಬೆಂಬಲದೊಂದಿಗೆ ವಿವೇಕಪೂರ್ಣ ಪ್ರಜ್ಞೆಯೊಂದಿಗೆ ಅರ್ಥೈಸಿಕೊಳ್ಳಬೇಕು ಎಂಬ ಸ್ವಯಂಸಂವಿಧಾನವು ರೂಪುಗೊಳ್ಳಬೇಕಾಗಿದೆ. ಅದಕ್ಕಾಗಿ ರಾಜಕಾರಣವು ದಾರ್ಶನಿಕ ನಾಯಕತ್ವದ ಸತ್ವದೊಂದಿಗೆ ಗುರುತಿಸಿಕೊಳ್ಳಬೇಕು. ಇಂಥ ಸತ್ವವನ್ನು ಮುನ್ನೆಲೆಗೆ ತರುವುದಕ್ಕೆ ಚುನಾವಣೆಯ ಅಖಾಡವನ್ನು ಪೂರಕವಾಗಿಸಿಕೊಳ್ಳಬೇಕು. ಅಂಥ ಹೆಜ್ಜೆಗಳೊಂದಿಗೇ ಭಾರತದ ಉಜ್ವಲ ಭವಿಷ್ಯ ಅಡಗಿದೆ ಎಂಬುದನ್ನು ಬಹುಬೇಗ ಗೊತ್ತುಮಾಡಿಕೊಳ್ಳಬೇಕು.
-ಡಾ.ಎನ್.ಕೆ.ಪದ್ಮನಾಭ
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ | ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಹಾಗೂ ಶ್ರೇಷ್ಠ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ವಿಶ್ವಸಂಸ್ಥೆಯ ನಿರ್ಣಯದಂತೆ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದ್ದು ಈ ವರ್ಷ ಕೃತಕ ಬುದ್ದಿಮತ್ತೆ ಉತ್ತಮ ಸರ್ಕಾರದ ಉಪಕರಣ ಎಂಬ ಧ್ಯೇಯವಾಕ್ಯದಡಿ ಆಚರಿಸಲಾಗುತ್ತಿದ್ದು ಜಿಲ್ಲೆಯಲ್ಲಿ ಆಯೋಜಿಸಲಾದ ಬೃಹತ್ ಮಾನವ ಸರಪಳಿಯಲ್ಲಿ 85 ಸಾವಿರಕ್ಕಿಂತ ಹೆಚ್ಚು ಜನರು ಭಾಗಿಯಾಗುವ ಮೂಲಕ ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಮತ್ತು ಶ್ರೇಷ್ಠ ಎಂದು ಸಾಬೀತು ಮಾಡಿದ್ದಾರೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಭಾನುವಾರ ಹರಿಹರದ ಮಹಾತ್ಮ ಗಾಂಧೀ ಮೈದಾನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನ್ಯಾಮತಿ ಗಡಿಯಿಂದ 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 25 ಗ್ರಾಮಗಳು, 2 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಸೇರಿ ರಾಣೆಬೆನ್ನೂರು ಗಡಿವರೆಗೆ 80 ಕಿ.ಮೀ ಉದ್ದದ ಮಾನವ ಸರಪಳಿ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮ ಹಾಗೂ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಹಾತ್ಮ ಗಾಂಧಿ ಹಾಗೂ ಡಾ;ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ಅಂದರೆ ಸ್ವಾತಂತ್ರ್ಯ, ಸಮಾನತೆ, ನ್ಯಾಯಪರತೆ ಮತ್ತು ಎಲ್ಲಾ ಮಾನವನ ಘನತೆಯನ್ನು ಕಾಪಾಡುವುದಾಗಿದೆ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲ, ಸ್ವಾತಂತ್ರ್ಯ ಮತ್ತು ಅವಕಾಶಗಳ ಮೂರ್ತರೂಪ, ಇದು ಧ್ವನಿ ಇಲ್ಲದವರಿಗೆ ಧ್ವನಿಯಾಗುತ್ತದೆ. ಸಾಮಾಜಿಕ ನ್ಯಾಯ ಕಾಪಾಡುವ ಬಲಿಷ್ಠ ವ್ಯವಸ್ಥೆ ಇದಾಗಿದ್ದು ಶ್ರೇಷ್ಠವೆಂದು ನಂಬಿದ್ದೇವೆ. ಜಾಗತಿಕವಾಗಿ ವಿಶ್ಲೇಷಣೆ ಮಾಡಿದಾಗ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆಯೋ ಎನಿಸುತ್ತದೆ, ಈ ನಿಟ್ಟಿನಲ್ಲಿ ಜನರು ನಿರಂತರ ಜಾಗರೂಕತೆ, ಪೋಷಣೆ ಮತ್ತು ರಕ್ಷಣೆ ಮಾಡಬೇಕಾಗುತ್ತದೆ.ಸರ್ವಾಧಿಕಾರಿ ಆಡಳಿತಗಳು ಸ್ಥಿರತೆಯ ಭರವಸೆ ನೀಡುತ್ತವಾದರೂ ದಬ್ಬಾಳಿಕೆ, ಭಯವುಂಟು ಮಾಡುತ್ತವೆ, ಜನರು ಮತದಾನ ಮೂಲಕ ತಮ್ಮ ಪ್ರಭುತ್ವತೆಯನ್ನು ಮೆರೆಯಬೇಕಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ಸಂಸ್ಥೆಗಳ ಜವಾಬ್ದಾರಿಯ ಜೊತೆಗೆ ನಾಗರಿಕರ ಪಾತ್ರ ಬಹುಮುಖ್ಯವಾಗಿರುತ್ತದೆ. ಚುನಾವಣೆಯಲ್ಲಿ ಮತ ಹಾಕುವುದಷ್ಟೆ ಮತದಾರರ ಜವಾಬ್ದಾರಿ ಮತ್ತು ಪ್ರಕ್ರಿಯೆ ಎಂದುಕೊಳ್ಳದೆ, ಸರ್ಕಾರದ ಆಗುಹೋಗುಗಳಲ್ಲಿ ನಾಗರಿಕರಾಗಿ ತೊಡಗಿಸಿಕೊಂಡು, ಇತರರ ಹಕ್ಕುಗಳನ್ನು ಗೌರವಿಸಿ ಪಾರದರ್ಶಕ ಆಡಳಿತದ ಹೊಣೆಗಾರಿಕೆ ಅರಿತುಕೊಂಡು ಆಡಳಿತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗವುದು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಪ್ರಜಾಪ್ರಭುತ್ವದಲ್ಲಿ ನಾಗರಿಕರು ಕ್ರಿಯಾಶೀಲರಾಗಿ ಚುನಾವಣೆಗಳಲ್ಲಿ ಭಾಗಿಯಾಗಬೇಕು. 18 ವರ್ಷ ತುಂಬಿದವರಿಗೆ ಮತದಾನದ ಹಕ್ಕು ನೀಡಲಾಗಿದೆ, ಇಂದಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಮತದಾರರಾಗಲಿದ್ದು ಎಲ್ಲರೂ ಮತದಾರರಾಗಿ ಚುನಾವಣೆಗಳಲ್ಲಿ ಪ್ರಭುದ್ದ ಮತದಾರರಾಗಿ ಭಾಗಿಯಾಗಬೇಕೆಂದು ವಿದ್ಯಾರ್ಥಿಗಳ ಕುರಿತು ಮಾತನಾಡಿದರು.
ಹರಿಹರ ಶಾಸಕರಾದ ಬಿ.ಪಿ.ಹರೀಶ್ ರವರು ಸಂವಿಧಾನ ಪೀಠಿಕೆಯನ್ನು ಓದಿದರು. ಈ ವೇಳೆ ಮಾತನಾಡಿದ ಅವರು ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕøತಿ, ಪ್ರಾಂತ್ಯಗಳನ್ನು ಹೊಂದಿದ್ದರೂ ಪ್ರಜಾಪ್ರಭುತ್ವದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಸಂವಿಧಾನದಡಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಯಶಸ್ಸನ್ನು ಸಾಧಿಸಿ ಅಭಿವೃದ್ದಿಯಲ್ಲಿ ಶ್ರೀಮಂತ ದೇಶಗಳೊಂದಿಗೆ ಸ್ಪರ್ಧೆಯಲ್ಲಿದೆ ಎಂದರು.
ಶಿವಮೊಗ್ಗ ಗಡಿ ಗ್ರಾಮ ನ್ಯಾಮತಿ ತಾಲ್ಲೂಕಿನ ಟಿ.ಗೋಪಗೊಂಡನಹಳ್ಳಿಯಿಂದ ಹರಿಹರ ತಾಲ್ಲೂಕಿನ ಹಾವೇರಿ ಜಿಲ್ಲೆಯ ಗಡಿ ಗ್ರಾಮದವರೆಗೆ 80 ಕಿ.ಮೀ ಅಂತರದಲ್ಲಿ 85 ಸಾವಿರಕ್ಕಿಂತ ಹೆಚ್ಚಿನ ಜನರು ಭಾಗಿಯಾಗಿ, ಇದರಲ್ಲಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸಮವಸ್ತ್ರ ಹಾಗೂ ವಿವಿಧ ವೇಷಭೂಷಣಗಳಲ್ಲಿ ಭಾಗಿಯಾಗಿದ್ದರು. ಸ್ವಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಕಲಾವಿದರು, ಸಂಘ, ಸಂಸ್ಥೆಯವರು, ಸರ್ಕಾರಿ ನೌಕರರು, ಸಾರ್ವಜನಿಕರು, ಗ್ರಾಮ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳು ಸೇರಿದಂತೆ ಸಹಸ್ರಾರು ಮಂದಿ ರಸ್ತೆಯುದ್ದಕ್ಕೂ ಎಡಬದಿಯಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ಸಂವಿಧಾನ ಪೀಠಿಕೆ ವಾಚನ ಮಾಡಿದರು. ಹರಿಹರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ದಗಂಗಾ ಶಾಲೆ ವಿದ್ಯಾರ್ಥಿಗಳು ವಿನೂತನವಾಗಿ ಭಾರತ ಭೂಪಟ ರಚನೆ ಮಾಡಿದರು. ವೇದಿಕೆಯಲ್ಲಿ ಭಾಗವಹಿಸಿದ್ದ ಗಣ್ಯರು ಸಸಿಗಳನ್ನು ನೆಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಸಿದ್ದಗಂಗಾ ಶಾಲೆ ಜಯಂತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ
ಸುದ್ದಿದಿನ,ದಾವಣಗೆರೆ:ದಾವಣಗೆರೆ ಮಹಾನಗರಪಾಲಿಕೆ ಮಹಾಪೌರ, ಉಪಮಹಾಪೌರ ಸ್ಥಾನದ ಆಯ್ಕೆಗೆ ಸೆಪ್ಟೆಂಬರ್.27 ರಂದು ಮಹಾನಗರಪಾಲಿಕೆ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಲಿದೆ.
ಸೆ.27 ರ ಬೆಳಿಗ್ಗೆ 12 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ನಾಮಪತ್ರಗಳ ಸ್ವೀಕಾರ, ಮಧ್ಯಾಹ್ನ 3 ಗಂಟೆ ನಂತರ ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ, ಸದಸ್ಯರ ಸಹಿ ದಾಖಲಿಸುವುದು, ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ
ಸುದ್ದಿದಿನಡೆಸ್ಕ್:ಕೃತಕ ಬುದ್ಧಿಮತ್ತೆ ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ಥಾನ ಪಡೆದಿದ್ದಾರೆ.
ಅಶ್ವಿನಿ ವೈಷ್ಣವ್ ಅವರನ್ನು ಶಾರ್ಪರ್ ವರ್ಗದಲ್ಲಿ ಹೆಸರಿಸಲಾಗಿದ್ದು, ಅವರ ನಾಯಕತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದ ಮೊದಲ 5 ದೇಶಗಳಲ್ಲಿ ಭಾರತ ಸ್ಥಾನ ಪಡೆಯುವ ಆಶಯದಲ್ಲಿದೆ ಎಂದು ಟೈಮ್ ಮ್ಯಾಗ್‌ಜೀನ್ ಬರೆದಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿಸುವ ಪ್ರಯತ್ನದಲ್ಲಿ ಸಚಿವರು ನಿರ್ವಹಿಸಿದ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಅವರ ಹೆಸರು ನಮೂದಿತವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ ಇನ್ಫೋಸೀಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಸಿಇಓಗಳಾದ ಗೂಗಲ್‌ನ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ, ಓಪನ್‌ಎಐ ನ ಸ್ಯಾಮ್ ಅಲ್ಟ್‌ಮನ್, ಮೆಟಾದ ಮಾರ್ಕ್ ಝುಕೇರ್‌ಬರ್ಗ್ ಟೈಮ್ ಪ್ರಕಟಿಸಿದ ಪಟ್ಟಿಯಲ್ಲಿ ಸೇರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ
-
ದಿನದ ಸುದ್ದಿ3 days ago
ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
-
ದಿನದ ಸುದ್ದಿ4 days ago
ನಕಲಿ ವೈದ್ಯರಿಗೆ ದಂಡ ; ಮೆಡಿಕಲ್ ಸ್ಟೋರ್ ಮುಚ್ಚಲು ಆದೇಶ
-
ದಿನದ ಸುದ್ದಿ3 days ago
ಆರಗದಲ್ಲಿ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆ
-
ದಿನದ ಸುದ್ದಿ17 hours ago
ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ2 days ago
ದಾವಣಗೆರೆ | ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ
-
ದಿನದ ಸುದ್ದಿ2 days ago
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ ಅವಧಿ ವಿಸ್ತರಣೆ
-
ದಿನದ ಸುದ್ದಿ17 hours ago
HAL | ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನ