ಬಹಿರಂಗ
ಭಾರತ ಸಂವಿಧಾನಕ್ಕೆ ‘ಭೂತ’ಚೇಷ್ಟೆ
- ದೇವನೂರ ಮಹಾದೇವ
ನಮ್ಮ ಸಂವಿಧಾನಕ್ಕೆ 60 ವರ್ಷಗಳ ಇತಿಹಾಸ. ಆದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಇಂದೂ ಕೂಡ ಅಗೋಚರವಾಗಿ ಆಳ್ವಿಕೆ ನಡೆಸುತ್ತಿರುವ ಅಲಿಖಿತ ಸಂವಿಧಾನವೂ ಒಂದಿದೆ. ಇದು ಭಾರತದ ಮನೋಭೂಮಿಕೆಯಲ್ಲಿದೆ. ಇದು ಭೂತಕಾಲದ ಸಂವಿಧಾನ. ಇದು ಭಾರತದ ಸುಪ್ತಪ್ರಜ್ಞೆಯ ಆಳದಲ್ಲಿದೆ. ಈ ಎರಡರ ನಡುವೆ ಯುದ್ಧ ಜರುಗುತ್ತಿದೆ. ಭೂತಕಾಲದ ಸಂವಿಧಾನವೂ ಇಲ್ಲಿ ಬಲವಾಗಿದೆ. ಹಾಗಾಗಿ ನಮ್ಮ ವರ್ತಮಾನ ಸಂವಿಧಾನದ ಆಸೆಗಳು ತೆವಳುತ್ತಿವೆ.
ಈ ನನ್ನ ಮಾತುಗಳಲ್ಲಿ ಹೊಸತೇನೂ ಇಲ್ಲ. ನಿಮ್ಮ ನಡುವೆ ನಾನೇ ಸ್ಪಷ್ಟ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವೆ. ಈ ಚಿಂತೆ ಮತ್ತು ಚಿಂತನೆಗಳನ್ನು ಉದಾಹರಣೆಗಳ ಮೂಲಕ ಸ್ಪಷ್ಟ ಮಾಡಿಕೊಳ್ಳಲು ಪ್ರಯತ್ನಿಸುವೆ.
ಬಹಳ ಹಿಂದೆ, ಡಾ.ಯು.ಆರ್.ಅನಂತಮೂರ್ತಿಯವರು ಇಂಗ್ಲಿಷ್ ವಿಭಾಗದಲ್ಲಿದ್ದಾಗ, ಅವರನ್ನು ಭೇಟಿ ಮಾಡಲು ಹಿರಿಯರೊಬ್ಬರು ಬಂದಿದ್ದರು. ತುಂಬಾ ಶುಭ್ರವಾಗಿದ್ದರು. ಮೈತುಂಬಾ ಬಿಳಿ ಬಟ್ಟೆ. ಜುಟ್ಟು ನಾಮ ಇತ್ತು. ಅವರು ಮಾತಾಡಿ ಹೋದ ಮೇಲೆ ಅನಂತಮೂರ್ತಿಯವರು ‘ಈಗ ಬಂದಿದ್ದವರು ವೇದ ಉಪನಿಷತ್ ಪುರಾಣ ಪಾರಂಗತರು’ ಎಂದರು. ಜೊತೆಗೆ- ‘ಇವರು ತಾವೇ ತಮ್ಮ ಅಡಿಗೆ ಮಾಡಿಕೊಂಡು ಊಟ ಮಾಡುವುದು’ ಎಂದೂ ಹೇಳಿದರು.
ಇದು ಯಾಕೋ ನನ್ನ ಮನಸ್ಸಲ್ಲಿ ಉಳಿದುಬಿಟ್ಟಿತು. ತನ್ನ ಕೈಯಾರ ಮಾಡಿದ್ದನ್ನು ಮಾತ್ರ ಊಟ ಮಾಡುವ ಇವರಿಗೆ ವೇದ ಉಪನಿಷತ್‍ಗಳು ಹೇಳಿಕೊಟ್ಟಿದ್ದೇನು ಎಂಬ ಪ್ರಶ್ನೆ ನನ್ನೊಳಗೆ ಉಳಿದುಬಿಟ್ಟಿತು. ಈಗ ಅನ್ನಿಸುತ್ತ್ತಿದೆ- ಇವರ ಕಠೋರ ಮಡಿಯ ಅಸ್ತಿತ್ವದಲ್ಲೆ ಅಸ್ಪೃಶ್ಯತೆಯ ಪ್ರಚಾರ ಕಾರ್ಯವೂ ಅಂತರ್ಗತವಾಗಿದೆ ಅಂತ. ಇವರನ್ನು ಅರ್ಥ ಮಾಡಿಕೊಳ್ಳೋಣ. ಅಂದರೆ ಇವರನ್ನು ಪಳೆಯುಳಿಕೆ ಎಂದು ಭಾವಿಸಿದರೆ ಸಮಸ್ಯೆ ಇಲ್ಲ. ಆದರೆ ಅವರ ಮಡಿಯನ್ನು ಪಾರಂಪರಿಕ ಮೌಲ್ಯ ಎಂದು ಗೌರವಿಸಿದರೆ ಅಪಾಯ ಆರಂಭವಾಗುತ್ತದೆ.
ಇನ್ನೊಂದು ಭೀಕರ ಉದಾಹರಣೆ ಕೊಡುತ್ತೇನೆ. ಪುರಿ ಜಗದ್ಗುರು ಅಸೃಶ್ಯತೆಯನ್ನು ಎತ್ತಿ ಹಿಡಿದಾಗ ಭಾರತ ತಲ್ಲಣಿಸಲಿಲ್ಲ. ಭೀಕರ ಉದಾಹರಣೆ ಎಂದು ನನ್ನ ಸಮಾಧಾನಕ್ಕಾಗಿ ಹೇಳಿಕೊಂಡೆ ಅಷ್ಟೆ. ಆದರೆ ಅದು ಭೀಕರವಾಗಿ ಸಮಾಜಕ್ಕೆ ತಟ್ಟಲೇ ಇಲ್ಲ. ಪುರಿ ಜಗದ್ಗುರು ಅಸಹ್ಯವಾಗಿ ನಮಗೆ ಕಾಣಲೇ ಇಲ್ಲ.
ಯಾಕೆಂದರೆ ನಮ್ಮ ವರ್ತಮಾನದ ಪ್ರಜ್ಞೆಯ ಸಂವಿಧಾನವು ಸಮಾನತೆಯನ್ನು ಮೌಲ್ಯ ಮಾಡಿದರೆ, ಭೂತಕಾಲದ ಸುಪ್ತಪ್ರಜ್ಞೆಯ ಸಂವಿಧಾನಕ್ಕೆ ಶ್ರೇಣೀಕೃತ ಸಮಾಜದ ಅಸ್ಪೃಶ್ಯತೆ, ಜಾತಿತಾರತಮ್ಯಗಳೇ ಮೌಲ್ಯವಾಗಿದೆ. ಭೂತದ ಕಪ್ಪುಹಣ ಇಂದೂ ಚಲಾವಣೆಯಲ್ಲಿದೆ. ಹೀಗಿರುವಾಗ ಸಮಾಜ ಯಾಕಾಗಿ ತಲ್ಲಣಿಸಬೇಕು? ಹೀಗಿದ್ದಾಗ ವರ್ತಮಾನದ ಸಂವಿಧಾನದ ಆಸೆಗಳು ತೆವಳದೆ ಮತ್ತೇನು ಮಾಡಲು ಸಾಧ್ಯ?
ಹಾಗೆ ಇಂದು ಚರ್ಚಿತವಾಗುತ್ತಿರುವ ಮತಾಂತರ ನಿಷೇಧದ ಪ್ರಸ್ತಾಪಕ್ಕೆ ಬಂದರೂ ಇಲ್ಲೂ ಕಾಣುವುದು ಇದನ್ನೇ. ಹಾಲಿ ಬಿಜೆಪಿ ಕರ್ನಾಟಕ ಸರ್ಕಾರ ಹಾಗೂ ಪೇಜಾವರ ಮಠಾಧೀಶರಾದಿಗಳು ಈ ಮತಾಂತರ ನಿಷೇಧಕ್ಕಾಗಿ ಹಾತೊರೆಯುತ್ತಿದೆ. ಶೂದ್ರನೊಬ್ಬ ನಿಮ್ಮ ಬ್ರಾಹ್ಮಣ ಜಾತಿಗೆ ಸೇರುತ್ತೇನೆಂದರೆ ಆಕಾಶ ನೋಡುವ ಮಠಾಧಿಪತಿಗಳು ಹಾಗೆ ಬ್ರಾಹ್ಮಣ ಜಾತಿಗೆ ನನ್ನನು ವರ್ಗಾವಣೆ ಮಾಡಿ ಎಂದು ಶೂದ್ರ ಕೇಳಿದರೆ ಇದು ತನ್ನ ವ್ಯಾಪ್ತಿಗೆ ಬರುವುದಿಲ್ಲವೆನ್ನುವ ಸರ್ಕಾರ, ಮತಾಂತರ ನಿಷೇಧಕ್ಕೆ ಚಿಂತಿಸುತ್ತಿರುವ ಕ್ರೌರ್ಯವು ಗಾಬರಿ ಹುಟ್ಟಿಸುತ್ತದೆ.
ಇರಲಿ, ಮತಾಂತರದ ಚಲನೆಯು ಭಾರತದಲ್ಲಿ ಇದ್ದುದರಿಂದಲೇ ಇಲ್ಲಿ ಅನೇಕಾನೇಕ ಧರ್ಮಗಳಿರುವುದು. ಈಗ ಹಾಲಿ ಭಾರತದಲ್ಲಿ ಮತಾಂತರಕ್ಕೆ ಅವಕಾಶವಿರುವ ಜೈನ, ಬೌದ್ಧ, ಸಿಖ್ ಹಾಗೂ ಕೆಲವು ಲಿಂಗಾಯತ ಪರಂಪರೆಯ ಧರ್ಮಗಳಿವೆ. ಲಿಂಗಾಯತವು ತನ್ನ ಜಾತಿ ಬಿಟ್ಟರೆ, ಭಾರತದ ದುಡಿಯುವ ವರ್ಗದ ಅಂದರೆ ತಳಸಮುದಾಯಗಳ ಧರ್ಮವಾಗಬಹುದಾದ ಸತ್ವವು ಅದರೊಳಗೆ ಇನ್ನೂ ಕುಟುಕುಜೀವದಂತೆ ಹುದುಗಿದೆ. ಇವುಗಳಲ್ಲಿ ನಿಧಾನವಾಗಿಯಾದರೂ ಮತಾಂತರ ಜರಗುತ್ತಲೇ ಇದೆ.
ನಮ್ಮ ಕಣ್ಣೆದುರೇ ಉಪನಿಷದ್ ದ್ರವ್ಯದಿಂದ ಧರ್ಮವಾಗಿ ಹುಟ್ಟು ಪಡೆಯಬಹುದಾಗಿದ್ದ ‘ಪರಮಹಂಸಧರ್ಮ’ವೊಂದು ಗತಿಸಿ ಬಿಟ್ಟಿತು. ಆ ಎಳೆಧರ್ಮದ ಕುತ್ತಿಗೆಗೆ ಜನಿವಾರ ಬಿಗಿದುಬಿಟ್ಟರು. ಇಂದು ರಾಮಕೃಷ್ಣಾಶ್ರಮಗಳು ಭೋಜನಶಾಲೆ ಮತ್ತು ವೇದಾಂತ ಕಥಾಕಾಲಕ್ಷೇಪ ತಾಣಗಳಾಗಿಬಿಟ್ಟಿವೆ. ಇದು ಈ ಸ್ಥಿತಿಯಿಂದ ಜಿಗಿದು ಎದ್ದರೆ ಇಂದೂ ಧರ್ಮವಾಗಬಹುದು. ಇಂದು ಸಂಘ ಪರಿವಾರವು ಹೇಳುತ್ತಿರುವ ಹಿಂದೂ ಧರ್ಮವು ಇಸ್ಲಾಂಗೆ ಪ್ರತಿಸ್ಪರ್ಧಿಯಾಗಿದ್ದು ಕೇವಲ ಇಸ್ಲಾಮಿನ ಮೂಲಭೂತವಾದೀ ಗುಣ ಲಕ್ಷಣಗಳನ್ನು ಮಾತ್ರ ತಾನು ಪಡೆದುಕೊಂಡು ಒಂದು ರೀತಿಯಲ್ಲಿ ನಮ್ಮ ಕಣ್ಣ ಮುಂದೆ ಈಗ ಜರುಗುತ್ತಿರುವುದು ‘ಹಿಂದ್‍ಇಸ್ಲಾಮೀ’ ನವಧರ್ಮವೊಂದರ ಉದಯದಂತೆಯೂ ಇದು ಕಾಣುತ್ತದೆ.
ಇಂದು ನಮ್ಮ ನಡುವೆ, ಸ್ಥಗಿತಗೊಂಡ ಸಾಮಾಜಿಕ ಪದ್ಧತಿಯೇ ಹಿಂದು ಎಂಬ ಧರ್ಮವಾಗಿ ಈ ಪದ್ಧತಿಯು ಎಲ್ಲಾ ಧರ್ಮಗಳಿಗಿಂತಲೂ ಪ್ರಬಲವಾಗಿದೆ. ಶ್ರೇಣಿಯ ಸಮಾಜಕ್ಕಾಗಿ ಇರುವ ಕಾನೂನು ಕಟ್ಟಳೆಗಳೇ ‘ಹಿಂದು ಧರ್ಮ’ ಎಂದಾಗಿದೆ, ಈ ಶ್ರೇಣಿಯ ಕಾನೂನು ಕಟ್ಟಳೆಗಳೇ ಇಲ್ಲಿ ಧರ್ಮವಾಗಿದೆ. ಇದು ಸಾವಿರಾರು ವರ್ಷಗಳಿಂದಲೂ ಧರ್ಮದ ವೇಷ ಹಾಕಿಕೊಂಡು ವಂಚಿಸಿ ವಂಚಿಸಿ ತನ್ನನ್ನು ಧರ್ಮವೆಂದೇ ಭಾವಿಸುವಂತೆ ಮಾಡಿಬಿಟ್ಟಿದೆ.
ತನ್ನ ವಂಚನೆಗಳಿಗೆ ಭಾರತದ ಮಹೋನ್ನತ ಜ್ಞಾನಶಾಖೆಗಳಾದ ದರ್ಶನಗಳನ್ನೂ ಬೌದ್ಧ-ಜೈನ ಧರ್ಮಗಳನ್ನೂ ಮಾತಾಡುವ ವಸ್ತುವಾಗಿ ಬಳಸಿಕೊಂಡಿದೆ. ದೇವರನ್ನೂ ಅವತಾರ ಎತ್ತಿಸಿದೆ. ಇದೆಲ್ಲಾ ಯಾತಕ್ಕಾಗಿ ಅಂದರೆ- ಶ್ರೇಣೀಕೃತ ಜಾತಿ ವರ್ಣ ಕಟ್ಟುಪಾಡುಗಳನ್ನು ಸುಪ್ತಪ್ರಜ್ಞೆಯಲ್ಲಿ ಸ್ಥಾಪಿಸುವುದಕ್ಕಾಗಿ. ಅದಕ್ಕಾಗೇ ಯಾವ ರಾಜ ಬಂದರೂ ರಾಜಧರ್ಮ ಅಂದರೆ ವರ್ಣವ್ಯವಸ್ಥೆಯನ್ನು ಕಾಪಾಡುವುದೇ ಆಗಿತ್ತು.
ಹಿಂದು ಆಗಿರುವುದೆಂದರೆ-ಇದ್ದ ಕಡೆ ಇರುವ ಶ್ರೇಣಿಯಲ್ಲಿ ಬಿದ್ದಿರು-ಎಂದೇ ಅರ್ಥ. ಇಲ್ಲಿರಬೇಕೆ? ಇಲ್ಲಿ ಅಸಮಾನತೆ ಕಟ್ಟಳೆಗಳ ವ್ಯಾಘ್ರನು ಧರ್ಮದ ಗೋಮುಖ ವೇಷದಲ್ಲಿದ್ದಾನೆ. ಹಿಂದೂ ಗೋಮುಖ ವ್ಯಾಘ್ರನಲ್ಲಿ ವ್ಯಾಘ್ರನ ಸಾಯಿಸಿದರೆ-ಅಂದರೆ ಶ್ರೇಣೀಕೃತ ಜಾತಿ ಕಟ್ಟಳೆ, ಅಸ್ಪೃಶ್ಯತೆಗಳ ಸಾಯಿಸಿದರೆ-ಇದೂ ಒಂದು ಧರ್ಮವಾಗಬಹುದು. ಇದು ಸಾಧ್ಯವೆ?
ಆದರೆ ಇದು ಸಾಧ್ಯವೇ ಎಂದು ಶ್ರೀ ಪೇಜಾವರರನ್ನು ಪ್ರಾತಿನಿಧಿಕ ಮಾಡಿಕೊಂಡು ಕೇಳುತ್ತಿದ್ದೇನೆ. ಅವತಾರ ಎತ್ತಿಸಿಯಾದರೂ ಜಾತಿಯ ಶ್ರೇಣಿಯು ಇಲ್ಲದಂತೆ ಹಿಂದೂ ಸಮಾಜ ರೂಪಿಸಿ ಅದನ್ನು ಧರ್ಮ ಮಾಡಲು ಸಾಧ್ಯವಿದೆಯೆ? ಇದಾಗದಿದ್ದರೆ, ಹಿಂದೂ ಸಮಾಜದ ದೇವಸ್ಥಾನ, ಮಠ, ಇತ್ಯಾದಿಗಳಲ್ಲಿ ಮಠಾಧೀಶ ಸ್ಥಾನ ಪೂಜೆ ಕಾರ್ಯ ಇತ್ಯಾದಿ ನಿರ್ವಹಣೆಗಳಲ್ಲಿ ಸಕಲೆಂಟು ಜಾತಿಗೂ ಪರ್ಯಾಯ ವ್ಯವಸ್ಥೆ ತರಲಾದರೂ ಸಾಧ್ಯವಿದೆಯೆ? ಉಡುಪಿಯಲ್ಲಿ ಅಷ್ಟಮಠಗಳ ಬದಲು ನವಮಠಗಳ ಪರ್ಯಾಯಕ್ಕಾಗಿ, ಡಿಮ್ಯಾಂಡ್ ಇಟ್ಟು ಕಾಯುತ್ತಿರುವವನಂತೆ ಇರುವ ಕನಕ ಇನ್ನೆಷ್ಟು ದಿನ ಕಾಯಬೇಕು? ಅಥವಾ ಅವನು ಹೊರಗಿರುವುದೇ ಧರ್ಮವೆ?
ನೀವು ದಲಿತ ಕೇರಿಗೆ ಪಾದವಿಟ್ಟರೆ ಅದನ್ನೆ ಧನ್ಯ ಎಂದುಕೊಳ್ಳುವ ಆ ದಲಿತ ಕೇರಿಯ ಮಗುವೊಂದು ನಿಮ್ಮನ್ನು ಪ್ರೀತಿಸಿ `ನಾನೂ ನಿಮ್ಮೊಡನೆ ಬರುತ್ತೇನೆ, ನನಗೂ ನೀವಾಗುವ ಆಸೆ’ ಎಂದರೆ ನೀವೇನು ಮಾಡುತ್ತೀರಿ? ಇಲ್ಲಿ ನೀವು ಅಂದರೆ ನೀವೇ ಅಲ್ಲ. ನಿಮ್ಮಂತೆ ಇರುವ ಎಲ್ಲರಿಗೂ ಇದು ಎದುರಾಗುತ್ತಿಲ್ಲ ಯಾಕೆ? ನಿಮ್ಮದೂ ಪತನದ ಸ್ಥಿತಿಯಲ್ಲವೇ? ನಿಮ್ಮಂಥವರಿಗೆ ಇಂಥವುಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಯಾಕೆಂದರೆ ಇಂಥವರ ದೇಹದೊಳಗಿನ ಆತ್ಮಸಾಕ್ಷಿ ಅಥವಾ ಸಾಕ್ಷಿಪ್ರಜ್ಞೆಯು ನೇಣಿಗೆ ಹಾಕಲ್ಪಟ್ಟಿರುತ್ತದೆ.
ಏಕೆಂದರೆ ಭಾರತದ ಸಮಾಜದ ಸುಪ್ತ ಮನಸ್ಸು ಅಸ್ಪೃಶ್ಯತೆ, ಶ್ರೇಣೀಕೃತ ಜಾತಿ ಪದ್ಧತಿ, ತಾರತಮ್ಯಗಳ ಅಪಮೌಲ್ಯಗಳನ್ನೆ ಮೌಲ್ಯ ಮಾಡಿಬಿಟ್ಟಿದೆ. ಇದನ್ನು ಬಿತ್ತುವವರನ್ನು ಪೂಜ್ಯರು, ಶ್ರೀಶ್ರೀಶ್ರೀ, ಮಾತಾಡಿದರೆ ಆಶೀರ್ವಚನ, ಆಧ್ಯಾತ್ಮಿಕ ಚಿಂತಕರು, ಪರಮ ಪೂಜ್ಯರು ಇತ್ಯಾದಿ ಪಟ್ಟಕಟ್ಟಿದೆ.
ಈ ಪ್ರಭಾವಕ್ಕೆ ಒಳಗಾದವರೇ ಭಾರತದ ಸಂವಿಧಾನದ ಆಶಯಗಳನ್ನು ನಿರ್ಧರಿಸುವ ನಿರ್ವಹಿಸುವ ನಿರ್ಣಾಯಕ ಸ್ಥಾನಗಳಲ್ಲಿ ಹೆಚ್ಚಾಗಿ ಇರುವಾಗ, ಕಳೆದ ವರ್ಷದ ರಾಜ್ಯ ಬಜೆಟ್‍ನಲ್ಲಿ ದಲಿತರಿಗೆ ಮೀಸಲಿಟ್ಟ 4 ಸಾವಿರ ಕೋಟಿಗಳಲ್ಲಿ ಅರ್ಧದಷ್ಟನ್ನು ಕಾಟಾಚಾರಕ್ಕೆ ಖರ್ಚುಮಾಡಿ ಉಳಿಕೆ ಅರ್ಧವನ್ನು ಲ್ಯಾಪ್ಸ್ ಮಾಡಿರುವ ಕ್ರಿಯೆ ಇಲ್ಲಿ ಸಹಜವಲ್ಲವೆ? ದಲಿತರ ಮೀಸಲಾತಿ ಉದ್ಯೋಗದಲ್ಲಿ ದಲಿತೇತರರು ನುಸುಳಿ ಪಡೆಯುತ್ತಿರುವುದು ಇಲ್ಲಿ ಸಹಜ ಕ್ರಿಯೆ ತಾನೆ? ನಮಗೆ ಅನ್ಯಾಯಗಳು, ಅನ್ಯಾಯಗಳಾಗಿ ಬಂದು ಮುಟ್ಟುತ್ತಿಲ್ಲ.
ಕನ್ನಡದಲ್ಲಿ ಒಂದು ಪದ ಇದೆ- `ಪಾಪ’ ಅಂತ. ಇದನ್ನು ಪಾಪ (Sin)ಕ್ಕೂ ಬಳಸುತ್ತಾರೆ, ಹಾಗೇ ಕರುಣೆ (pity)ಗೂ ಬಳಸುತ್ತಾರೆ. ಪಾಪಕ್ಕೆ ಬಳಸಿದರೆ ಪಾಪಿಷ್ಟ ಆಗುತ್ತಾನೆ. ಕರುಣೆಗೆ ಬಳಸಿದರೆ ಪಾಪದವನು ಆಗುತ್ತಾನೆ. ಪಾಪದವನು ಒಂದು ಪಟ್ಟು ಪತನಗೊಂಡವನಾಗಿದ್ದರೆ, ಪಾಪಿಷ್ಟನು ನೂರು ಪಟ್ಟು ಪತನಗೊಂಡವನಾಗಿರುತ್ತಾನೆ. ಅಸ್ಪೃಶ್ಯತೆಗೆ ಅಥವಾ ತಾರತಮ್ಯಕ್ಕೆ ಒಳಗಾದವರು ಪಾಪದವರು ಆಗುತ್ತಾರೆ.
ಯಾಕೆಂದರೆ ಇವರ ಮನೋಭೂಮಿಕೆಯಲ್ಲಿ ಅಸ್ಪೃಶ್ಯತೆ ತಾರತಮ್ಯ ಇರುವುದಿಲ್ಲ. ಆದರೆ ಯಾರು ಅಸ್ಪೃಶ್ಯತೆ, ತಾರತಮ್ಯ ಆಚರಿಸುತ್ತಾರೋ ಅವರ ಮನೋಭೂಮಿಕೆಯಲ್ಲಿ ಅಸ್ಪೃಶ್ಯತೆ ತಾರತಮ್ಯಗಳೇ ತುಂಬಿರುತ್ತವೆ. ಈ ನಿಜದ ಎದುರು ಅಸ್ಪೃಶ್ಯತೆ ತಾರತಮ್ಯ ಆಚರಿಸುವವರು ಪಾಪಿಷ್ಟರಾಗುತ್ತಾರೆ. ‘ಗುಲಾಮನನ್ನು ಪಳಗಿಸಲು ಹೆಣಗುವ ಮಾಲೀಕನ ಮನಸ್ಸಿನ ತುಂಬಾ ಗುಲಾಮತನ ತುಂಬಿರುತ್ತದೆ’ -ಎಂಬ ಹೆಗಲ್‍ನ ನುಡಿಯ ನಿಜದಂತೆ.
ನಾವು ನಮ್ಮ ಸಮಾಜವನ್ನು ನೋಡುವ ನೋಟಕ್ಕೆ ಈ ನಿಜದ ದರ್ಶನವಾದರೆ ಇದು ಸಂವಿಧಾನದ ಆಶಯಗಳತ್ತ ನಾವಿಟ್ಟ ಮೊದಲ ಹೆಜ್ಜೆಯಾಗುತ್ತದೆ. ಇದು ಕಡು ಕಷ್ಟ. ಭಾರತೀಯ ಮನಸ್ಸಿನ ನಡೆ ಮತ್ತು ನುಡಿ ಸೀಳಿಹೋಗಿದೆ. ಅಸ್ಪೃಶ್ಯತೆ ಪಾಪ ಎಂದರೆ ಹೌದೆನ್ನುವ ಭಾರತೀಯ ಮನಸ್ಸು ಅದೇ ಅಸ್ಪೃಶ್ಯತೆ ಆಚರಿಸುವವರು ಪಾಪಿಷ್ಟರು ಎಂದರೆ ಬೆಚ್ಚಿ ಬೀಳುತ್ತದೆ. ವ್ಯವಹಾರಕ್ಕೆ ವೇದವನ್ನು ನಡೆದುಕೊಂಡು, ಆದರ್ಶಕ್ಕೆ ವೇದಾಂತ ಎಂದರೆ ಉಪನಿಷತ್ತನ್ನು ಮಾತಿನ ಕಾಲಕ್ಷೇಪ ಮಾಡಿದ್ದೇ ಕಾರಣವೂ ಇರಬಹುದು.
ಆದರೆ ಈ ಪಾಪದವರೂ ಎಚ್ಚರದ ಸ್ಥಿತಿಯಲ್ಲಿ ಇಲ್ಲ. ಮಧ್ಯಮ ಜಾತಿಗೆ ಸೇರಿದ ನನ್ನ ಗೆಳೆಯನೊಬ್ಬ- “ಒಂದು ಚೋಟುದ್ದ ಬ್ರಾಹ್ಮಣ ಹುಡುಗ ಅವನು. ನಮ್ಮ ವಯಸ್ಸಾದ ಅಪ್ಪನಿಗೇನೆ `ಏನಯ್ಯ ಗೌಡ, ಚೆನ್ನಾಗಿದ್ದೀಯಾ?’ ಅಂತ ಏಕವಚನದಲ್ಲಿ ಕೇಳ್ತಾನಲ್ಲಯ್ಯ!” ಎಂದು ಕುಪಿತನಾಗಿ ಹೇಳಿದ. ನಾನು ಅವನಿಗೆ ‘ಸರಿಯಪ್ಪ, ನೀನು ಚಿಕ್ಕವನಾಗಿದ್ದಾಗ ನಮ್ಮ ಜಾತಿಯ ವಯಸ್ಸಾದವರಿಗೆ ಯಾವ ವಚನದಲ್ಲಿ ಕರೆಯುತ್ತಿದ್ದೆ?’ ಎಂದು ಕೇಳಿದೆ. ಇಂಥವರಲ್ಲಿ ಸ್ವಾಭಿಮಾನದ ಎಚ್ಚರ ಅಂದರೆ ತನ್ನದು ಮಾತ್ರ ಆಗಿರುತ್ತದೆ, ಇನ್ನೊಂದರ ಪರಿವೆ ಇರುವುದಿಲ್ಲ.
ಹಾಗೇ ದಲಿತರ ಮನಸ್ಥಿತಿಗೆ ಬಂದರೂ ಸಣ್ಣ ಪುಟ್ಟದಾದರೂ ಇದನ್ನೇ ಕಾಣುತ್ತೇವೆ. ಭಾರತದ ಬಹುತೇಕ ಸಮುದಾಯಗಳು ಹೀಗೇ ಇವೆ. ರಸಾಯನಶಾಸ್ತ್ರದಲ್ಲಿ ಬರುವ ಪರ್ಯಾಪ್ತ ದ್ರಾವಣ (Saturated solution)ದಂತೆ ಎಲ್ಲಾ ಜಾತಿಗಳು ತಂತಮ್ಮ ಕೊನೆ ಸ್ಥಿತಿ ತಲುಪಿ, ಅಸ್ಪೃಶ್ಯತೆ ತಾರತಮ್ಯಗಳು ನಡೆದು ಬಂದ ಪದ್ಧತಿಗಳಾಗಿ ಎಚ್ಚರವಿಲ್ಲದೆ ತಮಗೆ ತಾವೇ ನಡೆದುಕೊಂಡು ಬರುತ್ತಿವೆ. ನಾವು ಅದರೊಳಗೇ ಸಂಪೂರ್ಣ ಮುಳುಗಿಹೋಗಿರುವುದರಿಂದ ಅದರ ಐಬನ್ನು ಅರಿವಿಗೆ ತಂದುಕೊಳ್ಳುವುದಕ್ಕೇ ಹರಸಾಹಸ ಪಡಬೇಕಿದೆ.
ಈಗ ಭಾರತದಲ್ಲಿ ವರ್ತಮಾನದ ಸಂವಿಧಾನವೇನೊ ಪಾಪದವರನ್ನು ಮೇಲೆತ್ತಲು ಕೈಚಾಚಿದೆ. ಆದರೆ ಭೂತಕಾಲದ ಸಂವಿಧಾನ ಕಾಲೆಳೆಯುತ್ತಿದೆ. ಈ ಪಾಪದವರೂ ಎಚ್ಚರದಲ್ಲಿಲ್ಲ. ಸಂವಿಧಾನದ ಆಶಯಗಳ ಕಾಲೆಳೆಯುವ ಪಾಪಿಷ್ಟರಾದರೋ ಸಮಾಜದಲ್ಲಿ ಗಣ್ಯರೆನ್ನಿಸಿಕೊಂಡಿದ್ದಾರೆ. ಇವರ ವಂಶಸ್ಥರೇ ಇವರ ಪ್ರಭಾವದಲ್ಲಿರುವವರೇ ನಿರ್ಧರಿಸುವವರು ನಿರ್ವಹಿಸುವವರು ಆಗಿದ್ದಾರೆ. ಸಂವಿಧಾನದ ಆಸೆಗಳು ಈಡೇರುವುದಾದರೂ ಹೇಗೆ?
ಬಸ್ಸು ರೈಲು ಕಾರಣಕ್ಕಾಗಿ ಅಕ್ಕಪಕ್ಕ ಕೂತಿದ್ದೇವೆ. ಹೊಟೇಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡಿದ್ದೇವೆ. ನೌಕರಿ ಕಾರಣಕ್ಕಾಗಿ ಒಟ್ಟಾಗಿ ಓಡಾಡಿದ್ದೇವೆ, ಅಲ್ಲಿ ಇಲ್ಲಿ ಮದುವೆಗಳೂ ಆಗಿವೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದವು. ಅಂತರಂಗ ಕತ್ತಲಲ್ಲೆ ಇದೆ.
ಏನೇನು ಮಾಡಬಹುದಿತ್ತು? ಮೊದಲ ಹೆಜ್ಜೆಯಾಗಿ, ವರ್ತಮಾನದ ಸಂವಿಧಾನದ ಆಶಯಗಳಿಗೆ ತಕ್ಕಂತೆ ಪ್ರಜೆಗಳನ್ನು ರೂಪಿಸಲು ಶಿಕ್ಷಣ ಕ್ಷೇತ್ರವನ್ನು ತೆಪ್ಪ ಮಾಡಿಕೊಳ್ಳಬಹುದಿತ್ತು. ಶಿಕ್ಷಣ ಪಡೆಯುವ ಎಳೆಯರು ಆ ವಿದ್ಯೆಯಲ್ಲೆ ನಾಗರಿಕರೂ ಆಗುವಂತೆ ಶಿಕ್ಷಣವನ್ನೂ ರೂಪಿಸಬಹುದಿತ್ತು. ಸಮಾಜದಲ್ಲಿ ಅಸ್ಪೃಶ್ಯತೆ ತಾರತಮ್ಯ ಆಚರಿಸುವವರ ಬಗ್ಗೆ ಆ ಪದ್ಧತಿಗಳ ಬಗ್ಗೆ ಇರುವ ಭಯ ಭಕ್ತಿಗಳಲ್ಲಿ- ಭಯ ಇರಲಿ, ಆದರೆ ಭಕ್ತಿಯನ್ನು ಇಲ್ಲದಂತೆ ಮಾಡಬೇಕಿತ್ತು. ಭಕ್ತಿಯು ಅಪಮೌಲ್ಯವನ್ನೇ ಮೌಲ್ಯವಾಗಿಸಿ ಬಿಡಲೂಬಹುದು.
ಈ ಅಪಾಯದ ಅರಿವು ನಮಗಿರಬೇಕಿತ್ತು. ಈ ಅರಿವು ನಮಗೆ ಇದ್ದಿದ್ದರೆ.. ನಮ್ಮ ಶಿಕ್ಷಣದ ಪಠ್ಯ, ನಾವು ನೋಡುವ ದೃಷ್ಟಿಕೋನ ಎಲ್ಲವೂ ಹೊಸತಾಗಿ ಬಿಡುತ್ತಿತ್ತು. ಆಗ ಕೇವಲ ಮನುಷ್ಯ ಪ್ರಜ್ಞೆ ಕೆಲಸ ಮಾಡುತ್ತದೆ. ಆಗ ತಾರತಮ್ಯ ಮೌಲ್ಯವಾಗಿಸುವವರು ಪಳೆಯುಳಿಕೆಗಳಂತೆ ನಮ್ಮ ಸಮಾಜಶಾಸ್ತ್ರಜ್ಞರಿಗೆ ಕಾಣಬಹುದು. ಆಗ ಇಂಥವು ಸಾಮಾಜಿಕ ಸಾಂಸ್ಕೃತಿಕ ಅನಿಷ್ಟ ಪದ್ಧತಿಗಳು ಎಂದೋ ಅಥವಾ ಸಾಮಾಜಿಕ ಸಮಸ್ಯೆಗಳು ಎಂದೋ ಅಧ್ಯಯನದ ವಸ್ತುವಾಗುತ್ತಿತ್ತು.
ರಾಜ್ಯಶಾಸ್ತ್ರದಲ್ಲಿ- ಸಂವಿಧಾನ ಅನುಷ್ಠಾನಕ್ಕೆ ಇರುವ ತೊಡಕುಗಳ ಪಟ್ಟಿಯಲ್ಲಿ ಇದೂ ಸೇರ್ಪಡೆಯಾಗುತ್ತಿತ್ತು. ಮನಃಶಾಸ್ತ್ರದ ಸಮ್ಮೋಹಿನಿ ತಜ್ಞರು ಈ ಸುಪ್ತಪ್ರಜ್ಞೆಯ ತಾರತಮ್ಯಗಳನ್ನು ತಮ್ಮ ಅಧ್ಯಯನ ವಿಷಯ ಎಂದು ಪರಿಗಣಿಸಿ ಭೂತೋಚ್ಛಾಟನೆಯ ವಿಧಿವಿಧಾನಗಳನ್ನು ಕಂಡು ಹಿಡಿಯುವ ಪ್ರಯತ್ನಗಳೂ ಆಗುತ್ತಿದ್ದವು. ಶಿಕ್ಷಣತಜ್ಞರಿಂದ ಸಂವಿಧಾನದ ಆಶಯಗಳಿಗೆ ಪಠ್ಯ ರಚನೆಯಾಗುತ್ತಿತ್ತು -ಹೀಗೆ.
ಆದರೆ ಭಾರತದ ಶಿಕ್ಷಣ ಕ್ಷೇತ್ರಕ್ಕೆ ಬಂದರೆ ಇಲ್ಲೂ ಏನಾಗಿದೆ? ಹಿಂದೆ ದ್ವಿಜರಲ್ಲದವರಿಗೆ ವಿದ್ಯೆ ವಂಚಿಸಲ್ಪಟ್ಟಿತ್ತು. ಈಗ ವರ್ತಮಾನದ ಸಂವಿಧಾನದಲ್ಲಿ ವಿದ್ಯೆ ಎಲ್ಲರಿಗೂ ಮುಕ್ತವಾಗಿದೆ, ನಿಜ. ಆದರೆ ಕೊಟ್ಟಂತೆ ಕಾಣಿಸುತ್ತ ಸಹಜವಾಗೇ ಹೊರಗಿಡುವ ಸಂಚೂ ಜೊತೆಗೇ ಜರುಗುತ್ತಿದೆ. ಏಕರೂಪದ ಶಿಕ್ಷಣ ಪದ್ಧತಿ ಇಲ್ಲದೆ, ಪ್ರಾಥಮಿಕ ಶಿಕ್ಷಣದಲ್ಲಾದರೂ ಮಾತೃಭಾಷೆ ಮಾಧ್ಯಮವಾಗದೆ, ಕಡ್ಡಾಯ ಶಿಕ್ಷಣದಲ್ಲಿ ಕಡ್ಡಾಯ ಇಲ್ಲದೆ, ಮುಖ್ಯವಾಗಿ ಗ್ರಾಮೀಣ ಭಾರತವು ಸಹಜವೊ ಎಂಬಂತೆ ಹೊರ ಹಾಕಲ್ಪಡುತ್ತಿದೆ.
ಎಲ್ಲರಿಗೂ ಶಿಕ್ಷಣ ನೀಡಬೇಕೆಂಬ ಆಧುನಿಕ ಪ್ರಜ್ಞೆಯನ್ನು, ಶಿಕ್ಷಣ ಕೊಡಬಾರದೆನ್ನುವ ಸನಾತನ ಸುಪ್ತಪ್ರಜ್ಞೆಯೂ ನಿಯಂತ್ರಿಸುತ್ತಿರುವುದರ ಪರಿಣಾಮದಿಂದ ಇದಾಗುತ್ತಿರಬಹುದೇನೊ. ಇಲ್ಲೂ ತಾರತಮ್ಯವೇ. ಇದಕ್ಕೆ ನಾವು ಬೆಚ್ಚುತ್ತಿಲ್ಲ, ಬೆದರುತ್ತಿಲ್ಲ. ಮೊದಲು ಶಿಕ್ಷಣ ಕ್ಷೇತ್ರದಲ್ಲಿ ನಾವು ಎಚ್ಚೆತ್ತುಕೊಂಡು ಮನುಷ್ಯರಾದರೆ ಉಳಿದುದೆಲ್ಲಾ ತಂತಾನೆ ಕಾಣಬಹುದೇನೋ.
ಭಾರತದ ಇಂದಿನ ಸ್ಥಿತಿಗೆ ಒಂದು ಚಿತ್ರಣ ಕೊಟ್ಟು ಮುಗಿಸುತ್ತೇನೆ. ತುಂಬಾ ಹಿಂದೆ, ಹಳ್ಳಿಯೊಂದರಲ್ಲಿ ದಲಿತರಿಗೆ ಪ್ರವೇಶವಿಲ್ಲದ ಕಾರಣಕ್ಕೆ ಗಲಾಟೆಯಾಗಿ ಅಲ್ಲಿಗೆ ಹೋಗಿದ್ದೆವು. ಹೋಗಿ ನೋಡಿದರೆ, ಆ ಹೊಟೇಲ್ ಅಂದರೆ ಅದು ಜಗುಲಿ ಮೇಲೆ ತೆಂಗಿನ ಗರಿ ಕಟ್ಟಿದ ಒಂದು ಕತ್ತಲು ತುಂಬಿದ ಜೋಪಡಿಯಾಗಿತ್ತು. ಅಲ್ಲಿ ನೊಣಗಳ ಸಾಮ್ರಾಜ್ಯವಿತ್ತು. ಬಚ್ಚಲು ಪಕ್ಕದಲ್ಲೆ ಹರಿಯುತ್ತ ಮೂಗು ಮುಚ್ಚಿಕೊಂಡು ಏನಾರು ತಿನ್ನಬೇಕಿತ್ತು.
ಈ ಹೊಟೇಲ್ ಪ್ರವೇಶಕ್ಕೆ ದಲಿತರು ಹಾತೊರೆಯುತ್ತಿದ್ದರು. ಆ ದೃಶ್ಯ ನೋಡಿದ ನನ್ನ ಜೊತೆಗಿದ್ದ ಶ್ರೀಕೃಷ್ಣಆಲನಹಳ್ಳಿ ‘ಅಯ್ಯೋ ಮಾದೇವ, ಇಲ್ಲಿ ದಲಿತರು ಏನನ್ನೂ ತಿನ್ನದಿದ್ದರೇನೇ ಆರೋಗ್ಯವಲ್ಲವೆ?’ ಎಂದಿದ್ದರು. ಅದಕ್ಕೆ ನಾನು ‘ಪ್ರವೇಶ ಕೇಳುತ್ತಿರುವುದು ಮನಸ್ಸಿನ ಒಳಕ್ಕೆ’ ಎಂದಿದ್ದೆ.
ಭಾರತದ ಸ್ಥಿತಿಯೂ ಹೆಚ್ಚುಕಮ್ಮಿ ಆ ಹೊಟೇಲ್‍ನ ಕತೆಯಂತೆಯೇ ಇದೆ. ಇಲ್ಲಿ ಕೊಳಕುತನವಿದೆ, ಅನಾರೋಗ್ಯವಿದೆ, ಬಡತನವಿದೆ, ಅಜ್ಞಾನವು ತುಂಬಿದೆ. ಇಷ್ಟಿದ್ದೂ ಹೀಗಿದ್ದೂ ಭಾರತವು ಸ್ವಾತಂತ್ರ್ಯ ಪಡೆದ ನಂತರ ರಾಜರ ಆಳ್ವಿಕೆ ಕೊನೆಗೊಳಿಸಿದ್ದೂ, ವಯಸ್ಕರ ಮತದಾನ ಪದ್ಧತಿ ತಂದಿದ್ದೂ, ತನ್ನ ಮಿತಿಗಳೊಡನೆ ಶಿಕ್ಷಣವನ್ನು ಸರ್ವರಿಗೂ ಮುಕ್ತಗೊಳಿಸಿದ್ದೂ, ಭೂಸುಧಾರಣೆ, ಮೀಸಲಾತಿ ಇತ್ಯಾದಿ ಈ ನೆಲದಲ್ಲಿ ಸಂಭವಿಸಿರುವುದು ಸಾಮಾನ್ಯ ಸಂಗತಿಗಳೇನೂ ಅಲ್ಲ.
ಇದಕ್ಕೆ ಕಾರಣ- ಭಾರತದಲ್ಲಿ ಬುದ್ಧ, ವಚನಕಾರರಂಥವರ ಮಹೋನ್ನತ ಪರಂಪರೆಯ ಬೆಳಕು ಇರುವುದೂ ಅವರು ಉಸಿರಾಡಿದ ಗಾಳಿ ಅವರಿಟ್ಟ ಹೆಜ್ಜೆ ಗುರುತುಗಳು ಇರುವುದೂ ಈ ಮಹೋನ್ನತ ಪರಂಪರೆಯೂ ಭಾರತದ ಉನ್ನತ ಮನಸ್ಸುಗಳನ್ನು ಒಂದಿಷ್ಟು ಸೆಳೆದು ಕೈಹಿಡಿದು ನಡೆಸುತ್ತಿರುವುದೂ ಕಾರಣವಾಗಿರಬಹುದು. ಈ ಉನ್ನತ ಪರಂಪರೆಯ ಹೆಜ್ಜೆಗಳನ್ನು ಗುರುತಿಸಿ ನಾವು ಹೆಜ್ಜೆ ಇಟ್ಟರೆ ಆಗ ಸಂವಿಧಾನದ ಆಸೆಗಳು ಕೈಗೂಡಲೂಬಹುದು.
(‘ಎದೆಗೆ ಬಿದ್ದ ಅಕ್ಷರ’ ಸಂಕಲನದಿಂದ ಆಯ್ದ ಒಂದು ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್‌ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



