ಅಂತರಂಗ
ಅರಿಮೆಯ ಅರಿವಿರಲಿ-57 : ಮಡಿವಂತಿಕೆ ಮತ್ತು ಮಾನಭಂಗ
- ಯೋಗೇಶ್ ಮಾಸ್ಟರ್
ಹಿಂದೆಂದಿನಿಂದಲೂ ಆಗುತ್ತಿರುವಂತೆ ಈಗಲೂ ಅಲ್ಲಲ್ಲಿ ಗುಂಪು ಅತ್ಯಾಚಾರ ಮತ್ತು ಹತ್ಯೆ ಮಾಡಿದ ಪ್ರಕರಣ ವರದಿಯಾಗುತ್ತಿರುತ್ತದೆ. ಅತ್ಯಾಚಾರ ಮಾಡಿದವನನ್ನು ಸಾರ್ವಜನಿಕವಾಗಿ ತುಂಡುತುಂಡಾಗಿ ಕತ್ತರಿಸಿ ಎಂಬ ಆಕ್ರೋಶ ದೇಶಾದ್ಯಂತ ಭುಗಿಲೇಳುತ್ತದೆ. ಆರೋಪಿಗಳ ಪೋಷಕರೂ ಕೂಡಾ ತಮ್ಮ ಮೋಹವನ್ನು ಮೀರಿ ತಪ್ಪಿಗೆ ಶಿಕ್ಷೆಯಾಗಲಿ ಎಂದು ನ್ಯಾಯದ ಪರವಾಗಿ ನಿಲ್ಲುತ್ತಾರೆ ಅಥವಾ ನನ್ನ ಮಗು ಅಂತವನಿರಲಿಲ್ಲ, ಸಹವಾಸದಿಂದ ಹಾಗಾದ ಎಂದು ಅವನ ಪರ ಗೋಳಿಡುತ್ತಾರೆ.
ಅತ್ಯಾಚಾರಕ್ಕೆ ಒಳಗಾದವರ ಕಂಡು ಮಮ್ಮಲ ಮರುಗುವಾಗಲೇ ಆರೋಪಿಗಳ ಕಡೆಗೂ ನೋಡಲೇ ಬೇಕಿದೆ. ಅವರಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿಯುವುದಿಲ್ಲವೇ? ಈ ಹಿಂದೆ ಅವರು ಯಾವ ಅತ್ಯಾಚಾರ ಪ್ರಕರಣಗಳನ್ನು ಕೇಳೇ ಇಲ್ಲವೇ? ಹಾಗೆಯೇ ಇಂತಹ ಅಪರಾಧಗಳಿಗೆ ವ್ಯಾಪಕ ಖಂಡನೆ, ತೀವ್ರವಾದ ವಿಚಾರಣೆ ಮತ್ತು ಕಠಿಣ ಶಿಕ್ಷೆಗಳೆಲ್ಲವೂ ಕಾದಿರುತ್ತವೆ ಎಂದೇನೂ ತಿಳಿಯದಷ್ಟು ಮುಗ್ಧರೇ ಅಥವಾ ಅಜ್ಞಾನಿಗಳೇ? ಇದನ್ನು ಪೂರೈಸಿದ ನಂತರ ತಾವು ಸಿಕ್ಕಿಬೀಳುವುದಿಲ್ಲ ಎಂದು ಅವರು ನಂಬಿದ್ದರೇ? ಅಥವಾ ಅದಕ್ಕೆ ತಕ್ಕ ವ್ಯವಸ್ಥೆಗಳನ್ನು ಮಾಡಿಕೊಂಡಿರುವ ಯೋಜನೆ ಇತ್ತೇ? ಈ ಅತ್ಯಾಚಾರ ಅವರಿಗೆ ಮೊದಲನೆಯದೇ? ಅಥವಾ ಹಲವು ರೀತಿಗಳಲ್ಲಿ ತಮ್ಮ ತೀವ್ರ ಕಾಮುಕತೆಯನ್ನು ಪೂರೈಸಿಕೊಳ್ಳುತ್ತಿದ್ದವರು ಈ ಪ್ರಕರಣದಲ್ಲಿ ಅದು ಅತಿಯಾಗಿ ದೊಡ್ಡ ತಪ್ಪಾಗಿಬಿಟ್ಟಿತೇ?
ಅವೆಲ್ಲಾ ನಮಗೆ ಗೊತ್ತಿಲ್ಲ.
ಅತ್ಯಾಚಾರವಾಗಿ ಹತ್ಯೆಯಾಗಿದೆ. ಇಂತಹ ಕ್ರೂರ ಕೃತ್ಯಕ್ಕೆ ಕ್ರೂರವಾಗಿ ಶಿಕ್ಷೆಯಾಗಬೇಕು ಎಂದುಬಿಟ್ಟರೆ, ಕ್ರೂರ ಕ್ರಿಯೆಗೆ ಕ್ರೂರ ಪ್ರತಿಕ್ರಿಯೆ ಕೊಟ್ಟಿದ್ದಷ್ಟೇ ಸಾಧನೆ. ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವುದು ಕೂಡಾ ಕ್ರೌರ್ಯದ ಮತ್ತೊಂದು ಮುಖವೇ ಹೊರತು ಅತ್ಯಾಚಾರವೆಂಬ ಕ್ರೌರ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಎಷ್ಟೂ ಕ್ರಮಿಸಿದಂತಾಗುವುದಿಲ್ಲ.
ಸಾವಿರಾರು ವರ್ಷಗಳಿಂದ ಅಪರಾಧಗಳಿಗೆ ಕಠಿಣ ಶಿಕ್ಷೆಗಳಾಗಿವೆ. ಅವುಗಳೆಲ್ಲದರ ಅಂದಿನ ಇತಿಹಾಸ ಮತ್ತು ಇಂದಿನ ಸುದ್ಧಿಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಆದರೂ ಇಂದಿಗೂ ಅಪರಾಧಗಳನ್ನು ಕಾಣುತ್ತಿದ್ದೇವೆ. ಈ ಅಪರಾಧಗಳ ಹಿಂದಿನ ಪ್ರೇರಣೆಗಳನ್ನು ಗುರುತಿಸಬೇಕಾಗಿದೆ. ಏಕೆಂದರೆ ಶಿಕ್ಷೆಗಳು ನೈತಿಕತೆಯನ್ನು ಕಾಪಾಡುವಲ್ಲಿ ವಿಫಲವಾಗಿವೆ. ಶಿಕ್ಷೆಯ ಭಯಕ್ಕೆ ಪಾಲಿಸುವಂತಹ ನೈತಿಕತೆಯ ಪ್ರಾಮಾಣಿಕತೆ ಎಷ್ಟರಮಟ್ಟಿಗಿರುತ್ತದೆ?
ಅಂತರಂಗದ ಸ್ಫೋಟ
ಅತ್ಯಾಚಾರ ಮತ್ತು ಭ್ರಷ್ಟಾಚಾರಗಳಂತಹ ಯಾವ ಅಪರಾಧಗಳೂ ಒಮ್ಮಿಂದೊಮ್ಮೆಲೆ ಆಕಸ್ಮಿಕವಾಗಿ ಘಟಿಸಿಬಿಡುವಂತಹ ತಪ್ಪೇನಲ್ಲ. ಗುಪ್ತಗಾಮಿನಿಯಾಗಿದ್ದು ಸಡಿಲ ಪದರವನ್ನು ಬೇಧಿಸಿ ಭುಗಿಲೇಳುವ ಸ್ಫೋಟ. ಈ ಸ್ಫೋಟವಾದಾಗ ಬಲಿಪಶು ಮತ್ತು ಆರೋಪಿಗಳಿಬ್ಬರಲ್ಲಿ ಬಲಿಪಶು ಆದವರಿಗೆ, ಹಾಗಾಗಲು ಬಹಳ ಸ್ಥೂಲವಾದ ಮತ್ತು ತಾಂತ್ರಿಕ ಕಾರಣಗಳಿರುತ್ತವೆ.
ಉದಾಹರಣೆಗೆ; ಅಲ್ಲಿಗೆ ಬಂದದ್ದು, ಗಾಡಿ ಕೆಟ್ಟಿದ್ದು, ಸಹಾಯ ಮಾಡುತ್ತೇವೆ ಎಂದವರನ್ನು ಸಾಂದರ್ಭಿಕವಾಗಿ ಅಥವಾ ಸಮಯಾನುಸಾರವಾಗಿ ನಂಬಿದ್ದು, ದಾಳಿ ಮಾಡುವವರಿಂದ ತಪ್ಪಿಸಿಕೊಳ್ಳಲಾಗದೇ ಹೋಗಿದ್ದು; ಇತ್ಯಾದಿ. ಆದರೆ, ಆರೋಪಿಗಳ ವಿಷಯದಲ್ಲಿ ಬಹಳ ಸೂಕ್ಷ್ಮವಾದ ಕಾರಣಗಳಿರುತ್ತವೆ. ಈ ಸೂಕ್ಷ್ಮವಾದ ಕಾರಣಗಳನ್ನು ತಿಳಿಯುವುದರಲ್ಲಿ ವಿಫಲವಾಗುತ್ತಿರುವ ಕುಟುಂಬ ಮತ್ತು ಸಾಮಾಜಿಕ ವ್ಯವಸ್ಥೆಗಳು ಇಂತಹ ಮತ್ತಷ್ಟು ಆರೋಪಿಗಳನ್ನು ಸಮಾಜಕ್ಕೆ ನೀಡುತ್ತಲೇ ಇರುತ್ತವೆ.
ಅತ್ಯಾಚಾರವೆಂದರೇನು?
ಅತ್ಯಾಚಾರ ಎನ್ನುವುದು ಹಲವು ವಿಷಯಗಳ ಮೊತ್ತ. ಅದರಲ್ಲಿ ಪ್ರಧಾನವಾಗಿ ಕಾಣುವುದು ಎರಡು. ಒಂದು ಕ್ರೌರ್ಯ ಮತ್ತೊಂದು ಲೈಂಗಿಕತೆ. ತೀವ್ರತರವಾದ ಲೈಂಗಿಕ ದೌರ್ಜನ್ಯವು ಅತ್ಯಾಚಾರವಾಗಿ ಪ್ರಕಟವಾಗುತ್ತದೆ. ಈ ಪ್ರಕಟಣೆ ಒಮ್ಮಿಂದೊಮ್ಮೆಲೆ ಕಾಣಿಸಿಕೊಂಡಿರುವ ಫಲವಲ್ಲ. ಈ ಅತ್ಯಾಚಾರವೆಂಬ ಫಲದ ಹಿಂದೆ ಸಾಕಷ್ಟು ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಭಾವಗಳ ಕೃಷಿ ಇರುತ್ತದೆ. ಈ ಪ್ರಭಾವಗಳು ಒಬ್ಬ ವ್ಯಕ್ತಿಯನ್ನು ಆರೋಪಿಯನ್ನಾಗಿ ರೂಪಿಸುವುದು.
ಬಾಲ್ಯ, ಸನಿಹದ ಸಂಬಂಧಗಳು, ಅವರ ಮೇಲಾಗಿರಬಹುದಾದ ದೌರ್ಜನ್ಯಗಳು, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು, ಮೆದುಳಿನ ಅಥವಾ ನರಗಳ ಕೆಲವು ಸಮಸ್ಯೆಗಳು, ಸ್ಯಾಡಿಸ್ಟಿಕ್ ಅಂದರೆ ಕ್ರೌರ್ಯದಿಂದ ಸಂತೋಷಪಡುವಂತಹ ಗುಣಗಳು, ನೈಸರ್ಗಿಕವಾಗಿರುವ ತೃಪ್ತಿಗಳನ್ನು ಅಸಹಜವಾಗಿ ಈಡೇರಿಸಿಕೊಳ್ಳುವಂತಹ ಗೀಳುಗಳು, ಮಾದಕ ವಸ್ತುಗಳ ವ್ಯಸನಗಳು, ಸಹಜ ಲೈಂಗಿಕತೆಯ ಬಗ್ಗೆ ಇರುವಂತಹ ಸಾಮಾಜಿಕ ಕಳಂಕ (ಸ್ಟಿಗ್ಮಾ), ಆರೋಗ್ಯಕರ ಲೈಂಗಿಕತೆಯ ಮತ್ತು ಸಾಮಾನ್ಯ ಲೈಂಗಿಕ ಶಿಕ್ಷಣದ ಕೊರತೆ, ಪುಂಡತನದ ಗುಂಪಿನ ಸದಸ್ಯರ ಸಮಾನ ಅಭಿರುಚಿಗಳ ತೀವ್ರತೆಗಳು; ಹೀಗೆ ಇನ್ನೂ ಹಲವು ವಿಷಯಗಳು ಪ್ರಭಾವಿಸಿರುತ್ತವೆ.
ಇವು ವ್ಯಕ್ತಿಯ ಮಾನಸಿಕ ಅಸ್ವಸ್ಥತೆ ಮತ್ತು ಅಸಹಜ ವರ್ತನೆಗಳಿಗೆ ಕಾರಣವಾಗಿರುತ್ತವೆ. ತನ್ನ ಭಾವನೆಗಳನ್ನು, ಬಯಕೆಗಳನ್ನು ಅಥವಾ ಹಾತೊರೆಯುವಿಕೆಗಳನ್ನು ಹತ್ತಿಕ್ಕಿಕೊಳ್ಳಲಾಗದಂತೆ ವರ್ತಿಸುವುದಾಗಲಿ, ವಿವೇಚನೆಗೆ ಆಸ್ಪದವನ್ನೇ ಕೊಡದೇ ಪ್ರಯತ್ನಿಸುವುದಾಗಲಿ; ಅನಿಯಂತ್ರಣದ ಸಮಸ್ಯೆಯೇ. ಕೋಪ, ಅಸೂಯೆ, ಲೋಭ ಇತ್ಯಾದಿಗಳನ್ನು ನಿಯಂತ್ರಿಸಿಕೊಳ್ಳದೇ ವರ್ತಿಸುವ ಅಥವಾ ಉತ್ಮತ್ತರಾಗುವ ಬಗೆಯೇ ಲೈಂಗಿಕವಾಂಛೆಯ ವಿಷಯದಲ್ಲೂ ಇಣುಕುತ್ತದೆ.
ಮೇಲೆ ಹೆಸರಿಸಿದ ಯಾವುದೇ ಭಾವಗಳನ್ನು ಅಥವಾ ಉತ್ಕಟ ವಾಂಛೆಗಳನ್ನು ಹತ್ತಿಕ್ಕಿಕೊಳ್ಳಲಾಗದೇ ಹೋದಾಗ, ನಿಯಂತ್ರಣವಿಲ್ಲದೇ ವರ್ತಿಸಿದಾಗ ಅಪರಾಧವಾಗುತ್ತದೆ. ಆಸೆಗಳು ಅಪರಾಧಗಳಾಗಿ ಪರಿವರ್ತಿತವಾಗುವುದು ನಿಯಂತ್ರಣದ ಕೊರತೆಯಿಂದಲೇ.
ಸಮಾನ ವ್ಯಸನಿಗಳ ಕೂಟ
ವ್ಯಸನಗಳು, ಮಾನಸಿಕ ಮತ್ತು ಮನೋದೈಹಿಕ ಸಮಸ್ಯೆಗಳು, ಉತ್ಕಟ ಬಯಕೆಗಳು ಇರುವವರು ತಮ್ಮಂತಹ ಮನಸ್ಥಿತಿ ಮತ್ತು ಸಮಸ್ಯೆಗಳಿರುವಂತಹ ವ್ಯಕ್ತಿಗಳ ಸಂಗವನ್ನು ಬಯಸುವುದು ಮತ್ತು ಅಸಾಂಸ್ಥಿಕ ಸಂಘವನ್ನು ಮಾಡಿಕೊಂಡು ತಮ್ಮ ವಾಂಛೆಗಳನ್ನು ತೀರಿಸಿಕೊಳ್ಳುವುದು ವಾಸ್ತವದ ಮತ್ತೊಂದು ಮಗ್ಗಲು. ಧೂಮಪಾನಿಗಳ ತಂಡ ಸಾಮೂಹಿಕ ಧೂಮಯಜ್ಞದಲ್ಲಿ ತೊಡಗುವಂತೆ ಅತಿಕಾಮಿಗಳೂ ಕೂಡಾ ಸಂಘಟಿತರಾಗುವರು. ಅವರಿಗೆ ಪರಿಣಾಮಗಳ ಬಗ್ಗೆ ಮಾಹಿತಿ ಇರುತ್ತದೆ. ಆದರೆ ಆ ಹೊತ್ತಿಗೆ ಅದನ್ನು ಮರೆಯುವಷ್ಟು ಉನ್ಮತ್ತರಾಗಿರುತ್ತಾರೆ. ಈ ಉನ್ಮತ್ತತೆಗೆ ಮದ್ಯವಾಗಲಿ ಅಥವಾ ಇನ್ನಾವುದೇ ಮಾದಕವಸ್ತುವಾಗಲಿ ಕಾರಣವಲ್ಲ. ಆದರೆ, ಅವು ಅವರನ್ನು ಹುರಿದುಂಬಿಸಲು ಸಹಕಾರಿಯಾಗಿರುತ್ತವೆ.
ಅತಿಕಾಮ ಸಮಸ್ಯೆ
ಅತ್ಯಾಚಾರ ಎಂಬ ಪದಕ್ಕೆ ಹಿಂದೆ ಸಮಾನಾರ್ಥಕವಾಗಿ ಮಾನಭಂಗ ಎಂಬ ಪದವನ್ನೂ ಬಳಸುತ್ತಿದ್ದರು. ಅತ್ಯಾಚಾರ ಎಂಬುದು ವ್ಯಕ್ತಿಯ ಕ್ರಿಯೆಗೆ ಸಂಬಂಧಿಸಿದ್ದಾಗಿದ್ದರೆ, ಈ ಮಾನಭಂಗ ಎನ್ನುವ ಪದವು ಸಮಾಜಕೇಂದ್ರಿತ ದೃಷ್ಟಿ. ಒಂದು ಹೆಣ್ಣು ಅತ್ಯಾಚಾರಕ್ಕೆ ಒಳಗಾದರೆ ಅವಳ ಮಾನ ಮರ್ಯಾದೆ ಹೋಯಿತು ಎನ್ನುವ ಧೋರಣೆ ಈಗ ಸುಧಾರಿಸಿದ್ದು, ಆಕೆಯ ಮೇಲೆ ಬಲತ್ಕಾರ ಮತ್ತು ದೌರ್ಜನ್ಯವಾಯಿತು, ಅವಳ ದೇಹ, ಮನಸ್ಸು ಮತ್ತು ಅಂಗಗಳ ಮೇಲೆ ಅತಿಕ್ರಮಣ ಮಾಡಿದ ಕ್ರೌರ್ಯವನ್ನು ಈಗ ಗುರುತಿಸುತ್ತಿದ್ದೇವೆ.
ಸಮಾಜವೂ ಕೂಡಾ ‘ಮಾನ’ ಎಂಬುವ ವಿಷಯಕ್ಕಿಂತ ಅತ್ಯಾಚಾರಿಯ ಕ್ರೌರ್ಯ ಮತ್ತು ಸಂತ್ರಸ್ತೆಯ ಸಂಕಟವನ್ನು ಗುರುತಿಸುತ್ತಿದೆ. ಬಲಿಪಶುವನ್ನು ಕರುಣೆಯಿಂದ ಕಾಣುವ, ಆರೋಪಿಯನ್ನು ಕೋಪದಿಂದ ಕಾಣುವ ಹಂತಕ್ಕೆ ಸಮಾಜವು ವಿಷಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಕಾಸವಾಗಿದೆ, ಒಂದಿಷ್ಟು ಪ್ರಗತಿ ಹೊಂದಿದೆ ಎನ್ನಬಹುದು. ಆದರೆ ಇಷ್ಟು ಸಾಲದು. ಏನೇನೂ ಸಾಲದು. ಅತ್ಯಾಚಾರವನ್ನು ಕೊನೆಗಾಣಿಸಬೇಕಾದರೆ ಲೈಂಗಿಕ ಶಿಕ್ಷಣವನ್ನು ಕಡೆಗಣಿಸಬಾರದು.
ಯಾವುದೋ ವ್ಯಕ್ತಿಯೊಳಗೆ ಧುತ್ತನೆ ಸೇರಿಕೊಂಡ ವೈರಸ್ಸು ಲೈಂಗಿಕ ದೌರ್ಜನ್ಯವನ್ನು ಮಾಡಿಸುವುದಲ್ಲ. ಲೈಂಗಿಕತೆಯ ಬಗ್ಗೆ ಇರುವ ಮಡಿವಂತಿಕೆಯೇ ಕಾಮುಕತೆಯ ರಹಸ್ಯ ಬೆಳವಣಿಗೆಗೆ ಕಾರಣ. ಈಗಲೂ ನಮ್ಮಲ್ಲಿ ಲೈಂಗಿಕತೆಯನ್ನು ಕಾಮುಕತೆ ಎಂದೇ ತಿಳಿಯುವ ಜನರಿದ್ದಾರೆ. ಕಾಮವು ಸಹಜ ತೃಷೆ.
ಆದರೆ ಅತಿಕಾಮವು ವ್ಯಕ್ತಿಗಳಲ್ಲಿ ಆಸಕ್ತಿಗಳಾಗಿರಬಹುದು, ಗೀಳು, ವ್ಯಸನ ಅಥವಾ ಸಮಸ್ಯೆಯಾಗಿರಬಹುದು. ಬರಿಯ ಆಸಕ್ತಿಯ ಹಂತದಲ್ಲಿರುವವರು ಅದನ್ನು ತಮ್ಮದೇ ಆದಂತಹ ರೀತಿಗಳಲ್ಲಿ ತೃಪ್ತರಾಗಲು ಯತ್ನಿಸುತ್ತಿರುತ್ತಾರೆ. ಅವರು ತಮ್ಮ ಖಾಸಗೀ ಬದುಕಿನ ಮೂಲೆಗಳೆಲ್ಲೋ ತಿಣುಕಾಡಿಕೊಳ್ಳುತ್ತಾರೆ. ಆದರೆ ಇದೇ ಅತಿಕಾಮುಕತೆಯು ಗೀಳಾಗಿ, ವ್ಯಸನವಾಗಿ ವ್ಯಕ್ತಿಯಲ್ಲಿ ಗೂಡುಗೊಂಡರೆ, ಸಮಸ್ಯೆ ಎಂದು ಗ್ರಹಿಸಿ ಸಮಾಲೋಚನೆಯನ್ನೂ ಮತ್ತು ತಕ್ಕಂತಹ ಚಿಕಿತ್ಸೆಗಳನ್ನೂ ನೀಡಬೇಕಾಗುತ್ತದೆ.
ಪ್ಯಾರಾಫಿಲಿಕ್ ಡಿಸಾರ್ಡರ್ ಅಂದರೆ ವ್ಯಕ್ತಿಯಲ್ಲಿನ ಅತಿಕಾಮುಕತೆಯ ಸಮಸ್ಯೆ ನಾನಾ ರೀತಿಗಳಲ್ಲಿ ಕಾಣಿಸಿಕೊಳ್ಳುವವು.
- ಇಣುಕು ಕಾಮ (Voyeuristic disorder) : ಬೇರೆಯವರ ಲೈಂಗಿಕ ಚಟುವಟಿಕೆಗಳನ್ನು ಕದ್ದು ನೋಡುವುದು. ಗುಪ್ತಾಂಗಗಳನ್ನು ಇಣುಕಿ ನೋಡುವುದು ಇತ್ಯಾದಿ.
- ಪ್ರದರ್ಶನ ಕಾಮ (Exhibitionistic disorder): ತಮ್ಮ ಗುಪ್ತಾಂಗಗಳನ್ನು ಅಥವಾ ತಮ್ಮ ಲೈಂಗಿಕತೆಯ ಆಸಕ್ತ ಅಂಗಗಳನ್ನು
ಸಾರ್ವಜನಿಕವಾಗಿ ಪ್ರದರ್ಶಿಸುವ ಗೀಳು. - ಪ್ರಚೋದನ ಕಾಮ (Frotteuristic disorder) : ತಮ್ಮ ಗುಪ್ತಾಂಗವನ್ನು ಮತ್ತೊಬ್ಬರ ದೇಹಕ್ಕೆ ಅಥವಾ ಅಂಗಕ್ಕೆ ಉದ್ದೇಶಪೂರ್ವಕವಾಗಿ ತಗುಲಿಸುತ್ತಾ ಅಥವಾ ಉಜ್ಜುತ್ತಾ ಅವರಲ್ಲಿ ಕಾಮುಕತೆಯನ್ನು ಪ್ರಚೋದಿಸುವುದು ಮತ್ತು ತಮ್ಮೊಂದಿಗೆ ಲೈಂಗಿಕ ಕ್ರಿಯೆಗೆ ಆಹ್ವಾನಿಸುವುದು.
- ಸೇಡಿನ ಕಾಮ (Sexual masochism disorder): ತಾವು ಕಡೆಗಣಿಸಲ್ಪಟ್ಟಿದ್ದೇವೆ, ದಮನಿಸಲ್ಪಟ್ಟಿದ್ದೇವೆ, ನಿಯಂತ್ರಿಸಲ್ಪಟ್ಟಿದ್ದೇವೆ, ಕೆಟ್ಟದಾಗಿ ನಡೆಸಿಕೊಳ್ಳಲ್ಪಟ್ಟಿದ್ದೇವೆಂದು ಭಾವಿಸಿ, ಅದಕ್ಕೆ ಸೇಡುತೀರಿಸಿಕೊಳ್ಳಲು ಲೈಂಗಿಕ ದೌರ್ಜನ್ಯವನ್ನು ಎಸಗವುದು.
- ಕ್ರೌರ್ಯಾಮುದ ಕಾಮ (Sexual sadism disorder): ಬೇರೆಯವರಿಗೆ ಹಿಂಸೆ ನೀಡಿ, ಅವರು ಪಡುವ ನೋವಿನಿಂದ, ದುಃಖದಿಂದ ಆನಂದವನ್ನು ಪಡೆಯುತ್ತಾ ತನ್ನ ಕಾಮವನ್ನು ತೃಪ್ತಿಗೊಳಿಸಿಕೊಳ್ಳುವುದು.
- ಶಿಶುಕಾಮ (Pedophilic disorder) : ಈ ಸಮಸ್ಯೆ ಇರುವವರು ತಮ್ಮ ಲೈಂಗಿಕತೃಷೆಗೆ ಬೇಟೆಯಾಡುವುದು ಮಕ್ಕಳನ್ನು.
- ಅಲೈಂಗಿಕಾಂಗ ಕಾಮ (Fetishistic disorder): ಗುಪ್ತಾಂಗವೇ ಅಲ್ಲದ ದೇಹದ ಇತರ ಭಾಗಗಳ ಮೇಲೆ ಮತ್ತು ಕಾಮಕ್ಕೆ ಸಂಬಂಧವೇ ಇಲ್ಲದಂತಹ ವಸ್ತುಗಳಿಂದ ತಮ್ಮ ಲೈಂಗಿಕ ತೃಷೆಯನ್ನು ಈಡೇರಿಸಿಕೊಳ್ಳುವ ಗೀಳು.
- ವಸ್ತ್ರಕಾಮ (Transvestic disorder) : ತನ್ನ ವಿರುದ್ಧ ಲಿಂಗಿಯ ವಸ್ತ್ರಗಳನ್ನು ತಾನು ತೊಟ್ಟುಕೊಂಡು ಲೈಂಗಿಕ ತೃಪ್ತಿಯನ್ನು ಪಡೆಯುವುದು.
- ಧ್ವನಿ ಕಾಮ (Telephone scatologia) : ಇದು ಕಾಮವಾಣಿ. ಬರಿಯ ದೂರವಾಣಿ ಕರೆಗಳನ್ನು ನೀಡುತ್ತಾ, ಪಡೆಯುತ್ತಾ ಕಾಮೋತ್ತೇಜಕ ಮಾತುಗಳನ್ನಾಡಿಕೊಂಡು ಕಾಮಾತುರವನ್ನು ನೀಗಿಕೊಳ್ಳುವುದು.
- ಶವಕಾಮ ((Necrophilia) : ಶವಗಳೊಂದಿಗೆ ಸಂಭೋಗವನ್ನು ಮಾಡುವುದು. ಅದು ಅವರಿಗೆ ಹೇಗೆ ಸಾಧ್ಯವಾಗುತ್ತದೆಯೋ ತಿಳಿಯದು. ಇತರ ಅಸಹಜ ಲೈಂಗಿಕಾಸಕ್ತರನ್ನು ಸಾಮಾನ್ಯವಾಗಿ ಸಮಾಜದಲ್ಲಿ ಗುರುತಿಸಬಹುದು. ಆದರೆ ಇಂತವರನ್ನು ನಾನಂತೂ ನೇರವಾಗಿ ಕಂಡಿಲ್ಲ. ಆದರೆ ಶವಸಂಭೋಗದ ಮತ್ತು ಶವದ ಮೇಲೆ ಸಂಭೋಗದ ಪ್ರಸ್ತಾಪಗಳು ತಂತ್ರಶಾಸ್ತ್ರಗಳಲ್ಲಿ ಉಲ್ಲೇಖವಿದೆ.
- ಅಂಗಕಾಮ ((Partialism) : ಜನನೇಂದ್ರಿಯಗಳಲ್ಲದೇ ಅಂಡು, ಕೂದಲು, ಮೊಲೆಗಳಂತಹ ದೇಹದ ಭಾಗಗಳನ್ನು ತಮ್ಮ ಲೈಂಗಿಕ ತೃಷೆಗೆ ಬಳಸಿಕೊಳ್ಳುವುದು.
- ಪಶುಕಾಮ ((Zoophilia): ಹಸು, ಕರು, ಎಮ್ಮೆ, ಮೇಕೆ, ಕುದುರೆ, ನಾಯಿಗಳಂತಹ ಪ್ರಾಣಿಗಳನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುವುದು.
- ಮಲಕಾಮ ((Coprophilia): ಮಲವನ್ನು ಮೂಸುವುದು, ಸೇವಿಸುವುದು, ರುಚಿನೋಡುವುದು, ಮಲವಿಸರ್ಜಿಸುವುದನ್ನು ನೋಡಿಕೊಂಡಿರುವುದು ಕೂಡಾ ಕಾಮತೃಪ್ತಿ.
- ಗುದಕಾಮ ((Klismaphilia): ಗುದದ್ವಾರದಿಂದ ದ್ರವವನ್ನು ಸೇರಿಸಿಕೊಳ್ಳುವುದು, ಮಾದಕವಸ್ತುಗಳನ್ನು ಸೇರಿಸಿಕೊಳ್ಳುವ ಮೂಲಕ ಲೈಂಗಿಕಾನಂದವನ್ನು ಪಡೆಯುವುದು.
- ಮೂತ್ರಕಾಮ ((Urophilia): ಮೂತ್ರವನ್ನು ಮೂಸುವ, ಸೇವಿಸುವ ಮತ್ತು ಅದರ ವಿಸರ್ಜನೆಯನ್ನು ಕೇಳುತ್ತಾ ಅಥವಾ ಮಾಡುವ ಮೂಲಕ ಆನಂದಿಸುವ ಕಾಮ.
- ಭಾವಕಾಮ ((Autogynephilia): ಪುರುಷರು ತಮ್ಮನ್ನು ಸ್ತ್ರೀಯೆಂದು ಭಾವಿಸಿಕೊಂಡು ಪಡುವ ಲೈಂಗಿಕ ತೃಪ್ತಿ.
- ನಿರ್ವಾತ ಕಾಮ ( (Asphyxiophilia ಅಥವಾ hypoxyphilia): ಮೆದುಳಿಗೆ ಆಮ್ಲಜನಕದ ಸರಬರಾಜಿನ ಕೊರತೆಯನ್ನು ತಂದುಕೊಂಡು, ನಿರ್ವಾತದ ಸ್ಥಿತಿಯಲ್ಲಿ ಲೈಂಗಿಕಾನಂದವನ್ನು ಪಡೆವುದು.
- ಚಿತ್ರೀಕೃತ ಕಾಮ (Video voyeurism) : ಇತರರ ಖಾಸಗೀ ಮೂಲೆಗಳಲ್ಲಿ ಇಣುಕಿ, ವಸ್ತ್ರಗಳನ್ನು ಬದಲಾಯಿಸುವ, ಸ್ನಾನ ಮಾಡುವ, ಪಾಯಖಾನೆಗಳಲ್ಲಿರುವ, ಬೆತ್ತಲಾಗಿರುವ, ಸಂಭೋಗಿಸುವ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಅದನ್ನು ನೋಡುವ ಮೂಲಕ ಅಥವಾ ಇತರರಿಗೆ ತೋರಿಸುವ ಮೂಲಕ ತಮ್ಮ ಕಾಮತೃಷೆಯನ್ನು ತಣಿಸಿಕೊಳ್ಳುವುದು.
- ಹಸುಗೂಸು ಕಾಮ ((Infantophilia): ತೀರಾ ಎಳೆಯ ಕಂದಮ್ಮಗಳನ್ನು, ತೊಟ್ಟಿಲಿನ ಹಸುಗೂಸುಗಳನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುವುದು.
ಹೀಗೆ ಲೈಂಗಿಕಾಸಕ್ತಿಗಳನ್ನು ತೃಪ್ತಿಪಡಿಸಿಕೊಳ್ಳಲು ನಾನಾ ವ್ಯಕ್ತಿಗಳು ನಾನಾ ದಾರಿಗಳನ್ನು ತಮ್ಮ ಇಚ್ಛೆ ಇಲ್ಲದೆಯೇ ಕಂಡುಕೊಂಡಿರುತ್ತಾರೆ. ನಾವು ನೆನಪಿನಲ್ಲಿಡಲೇಬೇಕಾದ ವಿಷಯವೆಂದರೆ, ಮೇಲೆ ತಿಳಿಸಿದ ಯಾವುವೂ ಅವರ ಪ್ರಜ್ಞಾಪೂರ್ವಕ ಇಚ್ಛೆಯ ಅಥವಾ ಉದ್ದೇಶಿತ ಆಯ್ಕೆಯ ಅನುಗುಣವಾಗಿ ಅಲ್ಲ. ಇವುಗಳು ಅವರ ಅನೈಚ್ಛಿಕ ಮನೋದೈಹಿಕ ಸಮಸ್ಯೆ. ಇದಕ್ಕೆ ಕಾರಣಗಳು ಮಾತ್ರ ನಿಜಕ್ಕೂ ನೇರವಾಗಿ ತಿಳಿಯದು.
ಆದರೆ ಕೌಟುಂಬಿಕ, ಶಾರೀರಿಕ, ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಪ್ರಭಾವಗಳೆಲ್ಲಾ ಕೆಲಸ ಮಾಡಿರುತ್ತವೆ ಎಂಬುದಂತೂ ಸತ್ಯ. ಈ ಲೈಂಗಿಕ ಅಸಹಜತೆಯ ವರ್ತನೆಗಳು ಹೆಂಗಸರಿಗಿಂತ ಗಂಡಸರಲ್ಲಿಯೇ ಇಪ್ಪತ್ತು ಪಟ್ಟು ಅಧಿಕ ಎಂದು ಅಧ್ಯಯನಗಳು ತಿಳಿಸುತ್ತವೆ.
ಈ ಸಮಸ್ಯೆಗಳು ಧುತ್ತೆಂದು ವಯಸ್ಕರಲ್ಲಿ ಕಾಣಿಸಿಕೊಳ್ಳುವಂತಹದ್ದೇನಲ್ಲ. ಬಾಲ್ಯದಲ್ಲಿ, ಕಿಶೋರಾವಸ್ಥೆಯಲ್ಲಿ ಕಂಡುಬಂದು ವಯಸ್ಕರಾದಾಗ ಫಲ ನೀಡುತ್ತದೆ. ಒಟ್ಟಾರೆ ಸ್ಥೂಲವಾಗಿ ಹೇಳುವುದಾದರೆ, ಲೈಂಗಿಕ ದೌರ್ಜನ್ಯಗಳ ತಡೆಗಟ್ಟುವುದಕ್ಕೆ ಶಿಕ್ಷೆಗಳ ತೀಕ್ಷ್ಣತೆಗಳಿಂದ ಸಾಧ್ಯವಿಲ್ಲ.
ಲೈಂಗಿಕ ಶಿಕ್ಷಣ ಒಂದು ಹಂತದಲ್ಲಿ ದೌರ್ಜನ್ಯಗಳನ್ನು ಕ್ಷೀಣಗೊಳಿಸುವ ಸಾಧ್ಯತೆಗಳಿವೆ. ಲೈಂಗಿಕತೆಯ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ತೊಡೆದುಹಾಕುವ, ಲೈಂಗಿಕ ಕಾರ್ಯಕರ್ತರನ್ನು ಆರೋಗ್ಯಕರವಾಗಿ ಬಳಸಿಕೊಳ್ಳುವ, ಲೈಂಗಿಕ ವಿಚಾರಗಳ ಬಗ್ಗೆ ಕೌಟುಂಬಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಕ್ತವಾಗಿ ಸಂವಾದಿಸುವ ವಾತಾವರಣಗಳನ್ನು ಸೃಷ್ಟಿಸುವಲ್ಲಿ ನಾವು ಸಫಲವೇ ಆದಲ್ಲಿ ಅತ್ಯಾಚಾರದ ಭೀಕರ ಮತ್ತು ಅಮಾನವೀಯ ಸಂಗತಿಗಳು ಘಟಿಸದಿರಬಹುದು.
ಅತ್ಯಾಚಾರಿಗಳನ್ನು ಸಮಾಜವೇ ಪರೋಕ್ಷವಾಗಿ ಮತ್ತು ಅಜ್ಞಾನದಿಂದ ರೂಪಿಸಿ, ಅಥವಾ ನಮ್ಮ ಸಹಜೀವಿಗಳಲ್ಲೇ ರೂಪುಗೊಂಡಿರುವ ಅತ್ಯಾಚಾರಿಗಳನ್ನು ಗುರುತಿಸಲು, ಚಿಕಿತ್ಸೆ ನೀಡಲು ನಾವೇ ವಿಫಲವಾಗಿ ಮತ್ತೆ ಅವರನ್ನೇ ಶಿಕ್ಷಿಸುವುದು ನನ್ನ ದೃಷ್ಟಿಯಲ್ಲಿ ಹೊಣೆಗೇಡಿತನ. ಅತ್ಯಾಚಾರ ಮತ್ತು ಅದರಷ್ಟೇ ಭೀಕರವಾಗಿರುವ ಅನೇಕಾನೇಕ ಸಂಗತಿಗಳಿಗೆ ನಾವು ಶಿಕ್ಷೆಯಿಂದ ನಿರ್ನಾಮ ಬಯಸಿದ್ದಲ್ಲಿ ಅದು ಅಪ್ರಾಯೋಗಿಕ ಮತ್ತು ವಿಫಲ ಯತ್ನ.
ನಮ್ಮದೇ ಮನೆಯ, ನಮ್ಮದೇ ಮಗುವಿನ ಲೈಂಗಿಕಾಸಕ್ತಿಗಳನ್ನು ನಾವು ತಿಳಿಯುವ ಗೋಜಿಗೆ ಹೋಗುವುದೇ ಇಲ್ಲ. ಏಕೆಂದರೆ ಜನನೇಂದ್ರಿಯ ಎನ್ನುವುದು ಬರಿಯ ವಿಸರ್ಜನಾಂಗವಾಗಿ ಮಾತ್ರ ಬಳಕೆಯಾಗುವುದನ್ನು ಮಾತ್ರ ಪೋಷಕರಾದವರು ಗಮನಿಸಬೇಕೆಂಬುವ ಒಂದು ಅಲಿಖಿತ ಶಾಸನವೊಂದನ್ನು ಅನುಸರಿಸುತ್ತಿದ್ದೇವೆ.
ಲೈಂಗಿಕಾಸಕ್ತಿಯ ಅಥವಾ ಲೈಂಗಿಕಾನುಭವದ ಬಗ್ಗೆ ಹಂಚಿಕೊಳ್ಳುವ ಆಪ್ತತೆ ಬೆಳೆದಾಕ್ಷಣ ಸಂಬಂಧದ ಪಾವಿತ್ರ್ಯತೆಗೆ ಧಕ್ಕೆ ಎಂಬಂತೆ ಅರಿಮೆಯುಂಟಾಗುವಂತಹ ಸಾಮಾಜಿಕ ವ್ಯವಸ್ಥೆಯಲ್ಲಿದ್ದೇವೆ. ಮುಖ್ಯವಾಗಿ ಲೈಂಗಿಕಾಸಕ್ತಿ ಎನ್ನುವುದು ಮಗುವಿನಲ್ಲಿಯೇ ಮೊಳೆಯುತ್ತಿರುತ್ತದೆ ಎನ್ನುವ ಸಾಮಾನ್ಯ ಪ್ರಜ್ಞೆ ನಮ್ಮಲ್ಲಿರಬೇಕು. ಲೈಂಗಿಕ ಶಿಕ್ಷಣ ಮತ್ತು ಲೈಂಗಿಕಾಸಕ್ತಿಯ ಗಮನ ಎಂದರೆ ಸಂಭೋಗದ ಪ್ರಾತ್ಯಕ್ಷಿಕೆ ಎಂಬ ಕಪೋಲಕಲ್ಪಿತ ಭ್ರಮೆಯನ್ನು ಬಿಡಬೇಕು.
ಮಕ್ಕಳ ಜೊತೆಗೆ ಮುಕ್ತವಾಗಿದ್ದಷ್ಟು ಅವರು ಬೆಳೆದಂತೆ ತಮ್ಮ ಲೈಂಗಿಕ ತುಮುಲಗಳನ್ನಾಗಲಿ ಅಥವಾ ತಳಮಳವನ್ನಾಗಲಿ ಒಂದು ವೇಳೆ ನೇರವಾಗಿ ಹೇಳದಿದ್ದರೂ, ನಮಗೆ ಗೊತ್ತಾಗುವ ರೀತಿಯಲ್ಲಿ ವ್ಯಕ್ತಪಡಿಸಬಲ್ಲರು. ಆಗ ನಾವು ಪ್ರತ್ಯಕ್ಷ ಅಥವಾ ಪರೋಕ್ಷ ಸಮಾಲೋಚನೆ ಮಾಡುವ ಸಾಧ್ಯತೆಗಳಿರುತ್ತವೆ. ಸಾಲದಕ್ಕೆ ಆ ಲೈಂಗಿಕಾಸಕ್ತಿ ಮತ್ತು ತಳಮಳಗಳು ನಮಗೂ ಏನೂ ಹೊಸತಲ್ಲವಲ್ಲ!
ಒಬ್ಬನ ನೈತಿಕ ಬದ್ಧತೆ, ಪ್ರಾಮಾಣಿಕ ಆತ್ಮಾವಲೋಕನ ಮತ್ತುದಿಟವಾದ ಜೀವಪರ ಕಾಳಜಿಯು ಅಪರಾಧಗಳು ಆಗದಂತೆ ನೋಡಿಕೊಳ್ಳುತ್ತವೆ. ಅಪರಾಧಿಗಳನ್ನು ಶಿಕ್ಷಿಸುವ ಆತುರಕ್ಕಿಂತ ಅಪರಾಧಿಗಳನ್ನಾಗಿ ರೂಪುಗೊಳಿಸದಿರುವಂತಹ ಕೌಟುಂಬಿಕ ಮತ್ತು ಸಾರ್ವತ್ರಿಕ ಶಿಕ್ಷಣ ನಮಗೆ ಬೇಕಿದೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ5 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ3 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್


