ಲೈಫ್ ಸ್ಟೈಲ್
ಜಾನುವಾರುಗಳ ಗೆರಸಲು(ಕಾಲು-ಬಾಯಿ ಜ್ವರ) ರೋಗವೂ, ಕರುವುಗಲ್ಲಮ್ಮ ದೇವತೆಯೂ….
ನಮ್ಮದು ರೈತಾಪಿ ಕುಟುಂಬ. ಕೃಷಿ ಕೆಲಸ ಮತ್ತು ಕರಾವಿಗಾಗಿ ನಮ್ಮ ಮನೆಯಲ್ಲಿ ಸದಾ ಒಂದು ಜೊತೆ ನಾಟಿ ಹಸುಗಳು ಮತ್ತು ಕರುಗಳು ಇರುತ್ತಿದ್ದವು. ಅವುಗಳನ್ನು ನಾವು ಸಾಕುತ್ತಿದ್ದೆವು ಎಂಬುದಕ್ಕಿಂತಲೂ ಆ ‘ಜೀವಧನ’ಗಳು ನಮ್ಮನ್ನು ಸಾಕುತ್ತಿದ್ದವು ಎಂದು ಹೇಳಿದರೆ ಸರಿಯಾದೀತು. ಜಾನುವಾರುಗಳನ್ನು ನಮ್ಮ ಪೂರ್ವಿಕರು ‘ಜೀವಧನ’ ಎಂದು ಕರೆದಿರುವುದು ಅನ್ವರ್ಥಕವಾಗಿದೆ. ಜೀವಧನ ಎಂದರೆ ಜೀವಂತ ಹಣ! ಈ ಜೀವಧನಗಳು ಜೀವಂತ ಹಣ ಮಾತ್ರವಾಗಿರದೆ ಹಣಕ್ಕಿಂತಲೂ ಮಿಗಿಲಾಗಿ ನಮ್ಮ ಜೀವಭಾವದೊಂದಿಗೆ ನಂಟು ಬೆಸೆದುಕೊಂಡಿರುತ್ತಿದ್ದವು. ಜಾನುವಾರುಗಳನ್ನು ನೋಟುಗಳ ರೂಪದ ಆರ್ಥಿಕ ದೃಷ್ಟಿಯಿಂದ ನೋಡುವುದೇ ಅಮಾನವೀಯ ಅನ್ನಿಸುತ್ತದೆ. ಪುರಾತನ ಕಾಲದ ಚೇಗಿದ ಮರವೊಂದನ್ನು ನಾವು ಹಣದ ರೂಪದಲ್ಲಿ ಬೆಲೆಕಟ್ಟಲು ಹೋದರೆ, ಆ ಮರವು ಇಷ್ಟೂ ದೀರ್ಘ ವರ್ಷಗಳ ಕಾಲ ನೀಡಿದ ನೆರಳು, ಒದಗಿಸಿದ ಆಶ್ರಯ, ಕಣ್ಮನಗಳಿಗೆ ತಂಪು ತುಂಬಿದ ಸೌಂದರ್ಯ, ಪಸರಿಸಿದ ಗಾಳಿಗಮಲು, ಕರುಣಿಸಿದ ಹಣ್ಣುಹಂಪಲು ಮುಂತಾದವುಗಳಿಗೆ ಯಾವ ಬೆಲೆ ಕಟ್ಟಲು ಸಾಧ್ಯ?
ದನಕರು ಕುರಿಮೇಕೆ ಕೋಳಿಗಳನ್ನು ಸಾಕುತ್ತಾ ಅವುಗಳೊಂದಿಗೆ ನಾವು ಬದುಕು ಕಟ್ಟಿಕೊಂಡಿದ್ದೆವು. ಅವುಗಳು ಖಾಯಿಲೆ-ಕಸಾಲೆ ಮುಂತಾದ ಕಾರಣಗಳಿಂದ ಅಕಾಲ ಮರಣಕ್ಕೀಡಾದರೆ ನಮ್ಮದೇ ಕಳ್ಳುಬಳ್ಳಿಯನ್ನು ಕಳೆದುಕೊಂಡಂತೆ ತೀವ್ರ ದುಃಖ ನಮ್ಮನ್ನು ಆವರಿಸುತ್ತಿತ್ತು. ಜಾನುವಾರುಗಳಿಗೆ ಬಾಧಿಸುವ ಗೆರಸಲು ರೋಗ (ಕಾಲು – ಬಾಯಿ ಜ್ವರ), ಕುಂದು, ಚಪ್ಪೆರೋಗ ಮುಂತಾದವು ಕಾಣಿಸಿಕೊಂಡರಂತೂ ನಮ್ಮ ಕರುಳು ಬಾಯಿಗೆ ಬಂದಂತೆ ನಡುಗಿಹೋಗುತ್ತಿದ್ದೆವು. ಅವುಗಳ ನರಳಾಟ ನೋಡಿ ಕಣ್ಣೀರಾಕುತ್ತಿದ್ದ ನನ್ನ ಅಪ್ಪ, ಊಟ ನೀರು ನಿದ್ದೆ ಎಲ್ಲವನ್ನೂ ಬಿಟ್ಟು ಒದ್ದಾಡುತ್ತಿದ್ದ. ತನಗೆ ತೋಚಿದ ಗಿಡಮೂಲಿಕೆ ಮುಂತಾದ ಮುದ್ದುಗಳನ್ನು ಬಳಸುವುದರ ಜೊತೆಗೆ, ರೋಗಪೀಡಿತ ದನಗಳಿಗೆ ನಾಟಿ ಔಷಧ ನೀಡುವ ಪಂಡಿತರನ್ನು ಹುಡುಕಾಡಿಕೊಂಡು ಅಲೆದಾಡುತ್ತಿದ್ದ. ತಿಗಳರ ಬೈಲಪ್ಪ, ಬುಡ್ಡೆ ಈರಣ್ಣ, ಮಂತ್ರವಾದಿ ವೆಂಕಟಸ್ವಾಮಯ್ಯ, ಬಡಗಿ ಮುದ್ಧಣ್ಣ ಮುಂತಾದ ಪಂಡಿತರು ನಮ್ಮೂರ ದನಗಳಿಗೆ ನಾಟಿಮದ್ದು ನೀಡುತ್ತಿದ್ದರು. ನಾಟಿಮದ್ದು ಕೊಡಿಸುವುದರ ಜೊತೆಗೆ ಇಂಗ್ಲೀಷ್ ಔಷಧವನ್ನೂ ಕೊಡಿಸಬೇಕೆಂದು ಆಲೋಚಿಸುತ್ತಿದ್ದ ನಾನು, ನಮ್ಮೂರಿನಲ್ಲಿಯೇ ಇದ್ದ ಪಶುಸಂಗೋಪನೆ ಇಲಾಖೆಯ ಸರ್ಕಾರಿ ಪಶು ಚಿಕಿತ್ಸಾಲಯದ ‘ದನಿನ ಡಾಕ್ಟರ್’ ಡಾ.ಹುಲಿಯಪ್ಪನ ಬರುವಿಕೆಗಾಗಿ ದಾರಿ ಕಾಯುತ್ತಾ ಆಸ್ಪತ್ರೆಯ ಬಾಗಿಲಲ್ಲಿ ನಿಲ್ಲುತ್ತಿದ್ದೆ.
ಪುಟಗೋಸಿ ಬಿಗಿಮಾಡಿಕೊಂಡು ಲಾಡಿದಾರದಲ್ಲಿಯೋ ಉಡುದಾರದಲ್ಲಿಯೋ ಕಟ್ಟಿಕೊಂಡಿದ್ದ ಪುಡಿಕಾಸನ್ನು ಔಷಧ ಇಂಜೆಕ್ಷನ್ ಪೌಡರ್ ಮುಂತಾದವುಗಳಿಗಾಗಿ ಅಪ್ಪ ಸುರಿಯುತ್ತಿದ್ದ. ಅಮ್ಮನೂ ತನ್ನ ಕೂಲಿನಾಲಿಯ ದುಡ್ಡನ್ನು ಎಲೆಅಡಕೆಯ ಸಂಚಿಯಿಂದ ತೆಗೆದು ಕೊಡುತ್ತಿದ್ದಳು. ದಿಕ್ಕುದೇವರುಗಳಿಗೆಲ್ಲಾ ಕಾಸಿನ ಮುಡುಪು ಕಟ್ಟಿ ಹರಕೆ ಹೊರುತ್ತಿದ್ದಳು. ವಿಶೇಷವಾಗಿ ಮುದುಗೆರೆ ಸಪ್ಪಲಮ್ಮ ಹಾಗೂ ಮಚ್ಚೇನಹಳ್ಳಿ(ದನಿನ) ಮಾರಮ್ಮ ದೇವರ ಹೆಸರುಗಳಲ್ಲಿ ಹರಿಷಿಣದ ಬಟ್ಟೆಯಲ್ಲಿ ಮುಡುಪು ಕಟ್ಟಿದ ಕಾಸನ್ನು ದೇವರ ಪಟದ ಮುಂದಿನ ಮೊಳೆ ಅಥವಾ ನಿಲದ(ನೆಲುವು) ನೇಕೆಹುರಿಗಳಿಗೆ ಗಂಟು ಹೂಡುತ್ತಿದ್ದಳು.ಸ್ಥಳೀಯ ದೇವರ ಗುಡಿಗಳಿಗೆ ಹೋಗಿ ಪೂಜೆ ಮಾಡಿಸಿ ತೆಂಗಿನಕಾಯಿಯ ತೀರ್ಥವನ್ನು ದನಗಳ ಮೈಮೇಲೆ, ನಮಗೆ ಮತ್ತು ಕೊಟ್ಟಿಗೆಗೆ ಚುಮುಕಿಸಿ ಎಲ್ಲರ ಹಣೆಗಳಿಗೂ ಬೊಟ್ಟಿಕ್ಕುತ್ತಿದ್ದಳು.
ಗೆರಸಲು ರೋಗ ಅಥವಾ ಕಾಲು- ಬಾಯಿ ಜ್ವರ ಎಂಬ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಒಂದು ರೋಗಗ್ರಸ್ತ ರಾಸಿನಿಂದ ಇನ್ನೊಂದು ಆರೋಗ್ಯವಂತ ರಾಸಿಗೆ ನೇರ ಸಂಪರ್ಕದಿಂದಲೂ, ಮೂತ್ರ ಗಂಜಳದ ವಾಸನೆ ತುಂಬಿಕೊಂಡ ಗಾಳಿಯ ಮೂಲಕವೂ ಹರಡಿಕೊಂಡು ಇಡೀ ಊರಿನ ಜಾನುವಾರುಗಳಿಗೆ ಅತೀ ಶೀಘ್ರವಾಗಿ ಹಬ್ಬಿಬಿಡುತ್ತಿತ್ತು. ಕಲುಷಿತಗೊಂಡ ಮೇವು ಮತ್ತು ಮಲೆತ ನೀರನ್ನು ಸೇವಿಸುವುದರ ಮೂಲಕವೂ ಗೆರಸಲು ರೋಗಾಣುಗಳು ಹರಡುತ್ತವೆಂಬ ವೈಜ್ಞಾನಿಕ ತಿಳಿವಳಿಕೆ ಇರದಿದ್ದ ನಮ್ಮ ಪೂರ್ವಿಕರು, ಇವೆಲ್ಲವೂ ದೇವರುಗಳೇ ತಂದೊಡ್ಡುವ ದೊಡ್ಡ ರೋಗಗಳೆಂದು ನಂಬಿದ್ದರು.
ನಮ್ಮದು ಚಿಕ್ಕ ಮನೆ. ದನಗಳ ಗ್ವಾಂದಿಗೆ ಎದುರಿನಲ್ಲಿಯೇ ನಾವು ರಾತ್ರಿ ಹೊತ್ತು ಮಲಗಿರುತ್ತಿದ್ದೆವು. ದನಗಳು ಒಮ್ಮೊಮ್ಮೆ ಹಾಯ್ದಾಡುತ್ತಾ ಕೊಂಬುಗಳಿಂದ ಬಡಿದಾಡಿಕೊಂಡರೆ ಸಾಕು ಅಪ್ಪ ದಡಕ್ಕನೆ ಎದ್ದು ಕೂರುತ್ತಿದ್ದ. ಹಾಯ್ದಾಡುವ ದನಗಳನ್ನು ನಾವು ಸಾಕಿದ್ದೇ ಅಪರೂಪ. ನಮ್ಮ ಮನೆಯಲ್ಲಿದ್ದದ್ದು ಹಸುಮಕ್ಕಳಂತಹ ದನಗಳು. ನಾನು ಒಮ್ಮೊಮ್ಮೆ ನೇರವಾಗಿ ಹಸುವಿನ ಕೆಚ್ಚಲಿಗೆ ಬಾಯಿಹಾಕಿ ಹಾಲು ಕುಡಿಯುತ್ತಿದ್ದೆನು. ನಮ್ಮ ಮನೆಯಲ್ಲಿದ್ದ ದನಗಳು ಅಂತಹ ಸಾಧುಜೀವಿಗಳಾಗಿದ್ದವು. ಇಂಥಾ ಹಸುಗಳಿಗೆ ಗೆರಸಲು ರೋಗ ತಗುಲಿದಾಗ ರೋಗಗ್ರಸ್ತ ರಾಸಿನಲ್ಲಿ ಮೊದಲಿಗೆ ತೀವ್ರ ಜ್ವರ ಕಾಣಿಸುಕೊಂಡು ಮೇವು ತಿನ್ನುವುದನ್ನು ನಿಲ್ಲಿಸಿಬಿಡುತ್ತಿತ್ತು. ಬಾಯಲ್ಲಿ ನೊರೆ ಎಂಜಲು ಸುರಿಸಿಕೊಂಡು ಮೂಗಿನಲ್ಲಿ ಸಿಂಬಳ ಸುರಿಸಿಕೊಂಡು ನೀರನ್ನೂ ಕೂಡಾ ಮುಟ್ಟದೆ ಮೈಕೂದಲು ಮುಳ್ಳೆದ್ದು ನಿಂತುಬಿಡುತ್ತಿತ್ತು.
ನಾವು ಹಾಲಿಂಡುವ ಮಾತಿರಲಿ ಕರುವಿಗೂ ಹಾಲೂಡುವುದನ್ನು ನಿಲ್ಲಿಸುತ್ತಿದ್ದ ಹಸುವಿಗೆ ನೋಡನೋಡುತ್ತಲೇ ಕಾಲು ಕುಂಟು ಬೀಳುತ್ತಿತ್ತು. ಮುಸುಡಿಯ ಮೇಲೆ ಚಿಕ್ಕ ಚಿಕ್ಕ ಗುಳ್ಳೆಗಳೆದ್ದು ಆ ಗುಳ್ಳೆಗಳೊಡೆದು ಬಾಯಿಯ ಜೊಲ್ಲು ವಾಸನೆ ನಮ್ಮ ಮನೆ ತುಂಬಾ ಹರಡಿಕೊಳ್ಳುತ್ತಿತ್ತು. ನನ್ನ ಅಪ್ಪನು ಹಸುವಿನ ಬಾಯಿಯನ್ನು ಭದ್ರವಾಗಿ ಹಿಡಿದು ಕೈಗಳಿಂದ ಮುಸುಡಿಯನ್ನು ವಸಡುಗಳನ್ನೂ ಅಗಲವಾಗಿ ತೆಗೆದು ಬಾಯಿಯ ಮತ್ತು ನಾಲಗೆಯ ಹುಣ್ಣುಗಳನ್ನು ಗಮನಿಸುತ್ತಿದ್ದ. ವಸಡು ನಾಲಗೆ ಮುಸುಡಿಯ ಮೇಲೆಲ್ಲಾ ಅಲ್ಸರ್ ಬೊಬ್ಬೆಗಳೆದ್ದು ಈರುಳ್ಳಿ ಪೊರೆ ತೆಗೆದಂತೆ ಅಲ್ಸರ್ ಪೊರೆಯುದುರಿದ ಜಾಗಗಳೆಲ್ಲಾ ಕೆಂಪಗೆ ಕಾಣಿಸುತ್ತಿದ್ದವು. ಚಿಕ್ಕ ಮಕ್ಕಳಾಗಿದ್ದ ನಾವು, ನಮ್ಮ ಹಸುವಿಗೆ ಒದಗಿದ ಪಾಡನ್ನು ಕಂಡು ಮನೆ ತುಂಬಾ ಅಳುತ್ತಿದ್ದೆವು. ನಾವು ಎಷ್ಟೇ ಪ್ರಯತ್ನಸಿದರೂ ಆ ಹಸು ಮೇವು ತಿನ್ನಲು ನೀರು ಕುಡಿಯಲು ನಿರಾಕರಿಸುತ್ತಿತ್ತು. ಪಾದಗಳ ಗೊರಸಿನ ಸೀಳುಗಳಲ್ಲಿಯೂ ಹುಣ್ಣುಗಳಾಗಿ ನೊಣ ಸೊಳ್ಳೆ ಜೀರುಂಡೆಗಳು ಕುಳಿತು ಹುಣ್ಣುಗಳು ದೊಡ್ಡ ವ್ರಣಗಳಾಗಿ ಹುಳುಗಳು ಬೀಳುತ್ತಿದ್ದವು. ಕೆಲವೊಮ್ಮೆ ಮೊಲೆತೊಟ್ಟು ಮತ್ತು ಕೆಚ್ಚಲಿಗೂ ಗುಳ್ಳೆಗಳು ಹಬ್ಬುತ್ತಿದ್ದವು.
ಅಪ್ಪನು ಬೆಟ್ಟ ಗುಡ್ಡ ಬಯಲು ಅಲೆದಾಡಿ ಲೋಳೆಸರ (ಆಲೋವೆರಾ) ತಂದು ಬೆಂಬೂದಿಯಲ್ಲಿ ಸುಟ್ಟು, ಹಿಂಡಿ ತೆಗೆದ ರಸವನ್ನು ದನಗಳ ಬಾಯಿ ನಾಲಗೆ ವಸಡು ಗೊರಸುಗಳ ಮೇಲೆ ಸವರಿ ಬಿಳಿ ಪಾವುಡದಲ್ಲಿ ಒರೆಸುತ್ತಿದ್ದ. ಗೊರಸಿನ ಗಾಯಗಳನ್ನು ಬಿಸಿನೀರಿನಲ್ಲಿ ತೊಳೆದು, ಸೀಳುಗಳಿಗೆ ಹೊಂಗೆಣ್ಣೆ, ಹಿಪ್ಪೆ ಎಣ್ಣೆ ಅಥವಾ ಬೇವಿನೆಣ್ಣೆ ಸುರಿಯುತ್ತಿದ್ದೆವು ಕೋಳಿಪುಕ್ಕ ಅಥವಾ ಗರಿಕೆ ಎಸಳನ್ನು ಬೇವಿನೆಣ್ಣೆಯಲ್ಲಿ ಅದ್ದಿ ಸೀಳುಸೀಳಿಗೂ ಹಚ್ಚಿದರೆ ನೊಣ ಕೂರುತ್ತಿರಲಿಲ್ಲ. ಗುಡಾಣದಲ್ಲಿ ಬಿಸಿನೀರು ಕಾಯಿಸಿ ಮೈತೊಳೆಯುತ್ತಿದ್ದೆವು. ಬಲು ಎಚ್ಚರದಿಂದ ದನದ ಕೊಟ್ಟಿಗೆಯಲ್ಲಿ ತೆಂಗಿನ ಗರಿಗಳಿಗೆ ಬೆಂಕಿ ಹಚ್ಚಿ ಧಗಧಗಿಸುವ ಜ್ವಾಲೆಯ ಮೇಲೆ ಬೇವಿನಸೊಪ್ಪು ಲಕಲಿಸೊಪ್ಪು ತಂಗಡಿಸೊಪ್ಪು ಕಕ್ಕೆಸೊಪ್ಪು ಮುಂತಾದ ನಾಲ್ಕಾರು ಬಗೆಯ ಹಸಿರು ತೊಪ್ಪಲು ಹಾಕಿ ಉರಿಸಿ ಹೊಗೆ ತುಂಬಿಸಿ, ಹಸಿರೆಲೆ ಹೊಗೆಯ ಕಾವಿನಲ್ಲಿ ದನಗಳನ್ನು ನಿಲ್ಲಿಸುತ್ತಿದ್ದೆವು.
ಗೆರಸಲು ರೋಗದಿಂದ ನಮ್ಮ ಹಸುಗಳು ನರಳುವಾಗ ಅಮ್ಮನು ಮೂರ್ನಾಲ್ಕು ಸೇರಿನಷ್ಟು ಹುರುಳಿಕಾಳನ್ನು ನೀರಿನಲ್ಲಿ ನೆನೆಸಿ, ರುಬ್ಬು ಗುಂಡಿನಿಂದ ರುಬ್ಬಿ ಹುರುಳಿಕಾಳಿನ ಹಾಲನ್ನು ಸೋಸಿಕೊಡುತ್ತಿದ್ದಳು. ಕೆಲವೊಮ್ಮೆ ರಾಗಿ ಅಂಬಲಿಯನ್ನು ಕಾಯಿಸಿ ತಂದುಕೊಡುತ್ತಿದ್ದಳು. ಅಪ್ಪ ಅದೆಲ್ಲವನ್ನೂ ಬಿದಿರಿನ ಗೊಟ್ಟದಿಂದ ದನಗಳಿಗೆ ಕುಡಿಸುತ್ತಿದ್ದ. ಸ್ವಲ್ಪ ಚೇತರಿಕೆ ಕಾಣಿಸಿದಾಗ ಹಸಿ ಹುಲ್ಲು, ಹುರುಳಿ ಹೊಟ್ಟು, ತೊಗರಿ ಹೊಟ್ಟು, ಅವರೆ ಹೊಟ್ಟು, ಸಾವೆ ಹುಲ್ಲು, ಆರಕದ ಹುಲ್ಲು, ಕೊರಲೆ ಹುಲ್ಲು ಮುಂತಾದ ಮೆತ್ತನೆ ಮೇವನ್ನು ತಿನ್ನಿಸುತ್ತಿದ್ದ. ನಾನು ನನ್ನ ಅಕ್ಕ ಮತ್ತು ತಮ್ಮಂದಿರು ಹಸಿ ಹುಲ್ಲನ್ನು ಹೊಲಮಾಳದಲ್ಲಿ ಕಿತ್ತು ತರುತ್ತಿದ್ದೆವು. ಅಂತೂ ಇಂತೂ ನಾಟಿಮದ್ದು, ಇಂಗ್ಲೀಷ್ ಮದ್ದು, ದೇಶಿಜ್ಞಾನದ ಚಿಕಿತ್ಸೆ, ಮೆತ್ತನೆಯ ಮೇವು ಮುಂತಾದ ಆರೈಕೆಗಳು ಫಲಿಸಿ ನಮ್ಮ ದನಗಳು ಮತ್ತೆ ಹೊಸ ಜೀವಕಳೆ ತುಂಬಿಕೊಳ್ಳುತ್ತಿದ್ದವು.ನಮ್ಮ ಮುಖದಲ್ಲೂ ನಗು ತರಿಸಿ ಬದುಕಿಗೆ ಕಳೆ ತುಂಬುತ್ತಿದ್ದವು.
ಇಲ್ಲಿ ನನ್ನದೇ ಅನುಭವಗಳನ್ನು ದಾಖಲಿಸಲು ನನಗೆ ಪ್ರೇರಣೆ ನೀಡಿದ್ದು ನಾನು ಇತ್ತೀಚೆಗೆ ಸಂಶೋಧಿಸಿದ ಒಂದು ಜಾನಪದ ಸ್ಥಳಪುರಾಣ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ದೇವರತೋಪು ಎಂಬ ಗ್ರಾಮದಲ್ಲಿರುವ ಕರುವುಗಲ್ಲಮ್ಮ ಎಂಬ ಗೋಕಲ್ಲನ್ನು ಕುರಿತ ಈ ಸ್ಥಳಪುರಾಣವು ಹದಿಮೂರು ಶತಮಾನಗಳಷ್ಟು ಹಿಂದಕ್ಕೆ ಸರಿಯುತ್ತದೆ. ಜಯಮಂಗಲಿ ನದಿಯ ತಟದಲ್ಲಿರುವ ದೇವರತೋಪು ಗ್ರಾಮದ ಪುರಾತನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಅಂಗಳದಲ್ಲಿರುವ ಕರುವುಗಲ್ಲು ಆ ಊರಿನ ಹುಟ್ಟಿನ ಕಥೆಯನ್ನು ಹೇಳುತ್ತದೆ.
ಸೀಮಾಂಧ್ರದ ರಾಯಲಸೀಮಾ ಕರ್ನೂಲು ಜಿಲ್ಲೆಯ ಆಹೋಬಲಂ ಮೂಲದ ವೈಷ್ಣವ ಪಂಥೀಯ ಕಾಪುರೆಡ್ಡಿ ಸಮುದಾಯದ ಕೆಲವು ಕುಟುಂಬಗಳು ಆರು ಎತ್ತಿನ ಬಂಡಿಗಳನ್ನು ಕಟ್ಟಿಕೊಂಡು ದಕ್ಷಿಣ ಮಾರ್ಗವಾಗಿ ಮಧುಗಿರಿ ಸೀಮೆಗೆ ವಲಸೆ ಬಂದರು. ಕಡಪ – ಕದಿರಿ ಮಾರ್ಗವಾಗಿ ಪಿನಾಕಿನಿ ನದಿಯ ತೋಳುಗಳನ್ನಿಡಿದು ತಮ್ಮ ವಲಸೆ ದಾರಿಯನ್ನು ಮುಂದುವರೆಸಿ ನಡೆಯುತ್ತಿರುವಾಗ ಪಿನಾಕಿನಿಯು ಮೈದುಂಬಿದಳು.ಕುಲದೇವತೆಯಾದ ಆಹೋಬಲ ನರಸಿಂಹಸ್ವಾಮಿಯ ಹೆಸರೆತ್ತಿ ಪೂಜಿಸಿದ ಅವರು, ಪಿನಾಕಿನಿಯನ್ನು ಪ್ರಾರ್ಥಿಸಲು ಮೈದುಂಬಿ ಹರಿಯುತ್ತಿದ್ದ ಅವಳು ಬಂಡಿಜಾಡಿನಷ್ಟು ಓಣಿಯನ್ನು ಬಿಟ್ಟು ಹರಿದಳು. ಬಂಡಿಗಳು ಸಾಗಲು ಬಂಡಿಜಾಡಿನಷ್ಟು ಅಗಲ ಅವಕಾಶ ನೀಡಿದ ಪಿನಾಕಿನಿಗೆ ಕೈಮುಗಿದು ಪ್ರಯಾಣ ಮುಂದುವರೆಸಿದ ಕಾಪುರೆಡ್ಡಿಗಳು ದೊಡ್ಡದಾಳವಟ್ಟ ಎಂಬ ಊರಿನ ಸಮೀಪಕ್ಕೆ ಬಂದು ತಲುಪಿದಾಗ ಸಂಜೆಯಾಗಿತ್ತು. ಬಂಡಿಗೆ ಹೂಡಿದ್ದ ಬಿಳಿ ಎತ್ತೊಂದು ಸತ್ತ ಕಾರಣ ಬಿಳಿ ಎತ್ತುಗಳ ಬಂಡಿಗಳಲ್ಲಿದ್ದ ಕುಟುಂಬದವರೆಲ್ಲರೂ ಅಲ್ಲಿಯೇ ಹಳ್ಳದ ದಿಡ್ಡೆಯಲ್ಲಿ ನೆಲೆಸಬೇಕೆಂದು ಹಾಗೂ ಕರಿ ಎತ್ತಿನ ಬಂಡಿಗಳ ಕುಟುಂಬಗಳು ತಮ್ಮ ಪ್ರಯಾಣವನ್ನು ಮುಂದಕ್ಕೆ ಬೆಳೆಸಬೇಕೆಂದು ತೀರ್ಮಾನಿಸಲಾಯಿತು. ಬಿಳಿ ಎತ್ತಿನ ಬಂಡಿಯ ಕುಟುಂಬಗಳು ಅಲ್ಲಿಯೇ ನೆಲೆಸಿ ತಮ್ಮ ಕುಲದೇವತೆ ನರಸಿಂಹಸ್ವಾಮಿಯ ಗುಡಿಯನ್ನು ಕಟ್ಟಿಕೊಂಡರು.
ಕರಿ ಎತ್ತಿನ ಬಂಡಿಯಲ್ಲಿದ್ದ ಕಾಪುರೆಡ್ಡಿ ಕುಟುಂಬದವರು ಕೊಡಿಗೇನಹಳ್ಳಿ ಹತ್ತಿರದ ತೋಪಿಗೆ ಬಂದಾಗ ಜಯಮಂಗಲಿಯು ಮೈದುಂಬಿ ಹರಿಯುತ್ತಿದ್ದಳು. ಆ ರಾತ್ರಿ ಅಲ್ಲಿಯೇ ಒಲೆಗುಂಡು ಹೂಡಿ ಅಟ್ಟುಂಡು ಬೆಳಗಾದಾಗ ಪ್ರಯಾಣ ಮುಂದುವರಿಸಲೆಂದು ಬಂಡಿಹೂಡಲು ಹೋದಾಗ ಕರಿ ಎತ್ತೊಂದು ತಾನು ಕಳೆದುಕೊಂಡ ಬಿಳಿ ಎತ್ತನ್ನು ನೆನೆದು ದುಃಖಿಸುತ್ತಾ ಮೇವು ನೀರು ಸೇವಿಸುವುದನ್ನು ನಿರಾಕರಿಸಿತು. ಜ್ವರ ಬಂದು ಬಂಡಿಯ ನೊಗಕ್ಕೆ ಹೆಗಲು ಕೊಡಲೊಪ್ಪದೆ ಪಡಾವು ಮಲಗಿಬಿಟ್ಟಿತು. ಆಗ ಬಿಳಿ ಎತ್ತಿನ ನೆನಪಿಗಾಗಿ ಬೆಣಚುಕಲ್ಲಿನ ಬಿಳಿ ಗೋಕಲ್ಲನ್ನು ತಂದು ನಿಲ್ಲಿಸಲು ದುಃಖ ಮರೆತ ಆ ಎತ್ತು ಲವಲವಿಕೆಯಿಂದ ಮೇವುಕಚ್ಚಿ ನೊಮರು ಹಾಕಿತು. ಮೈದುಂಬಿ ಹರಿಯುತ್ತಿದ್ದ ಜಯಮಂಗಲಿ ನದಿಯ ದಂಡೆಯಲ್ಲಿ ತಮ್ಮ ಕುಲದೇವತೆಯಾದ ಲಕ್ಷ್ಮೀನರಸಿಂಹಸ್ವಾಮಿಯ ಹೆಸರೆತ್ತಿ ಪೂಜಿಸಿ ಅವನಿಗೊಂದು ಗುಡಿಯನ್ನು ಕಟ್ಟಿ ಅಲ್ಲಿಯೇ ನೆಲೆಸಿದರು.
ಮುಂದೆ ಕರಿ ಎತ್ತು ತೀರಿಕೊಂಡಾಗ ಅದನ್ನು ಅಲ್ಲಿಯೇ ಸಮಾಧಿ ಮಾಡಿದರು. ಅಂದು ಸಮಾಧಿಗುಡ್ಡೆಯ ಗುರುತಿಗೆ ನೆಟ್ಟ ಗೋಕಲ್ಲು ಅಂದಿನಿಂದಲೂ ಕರುವುಗಲ್ಲಮ್ಮ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಿದೆ. ಇಲ್ಲಿನ ಸುತ್ತೇಳು ಊರುಗಳ ರೈತಾಪಿಗಳು ತಮ್ಮ ಜಾನುವಾರುಗಳಿಗೆ ಶ್ರೇಯಸ್ಕರವಾಗಲೆಂದು ಹಾಗೂ ಜಾನುವಾರುಗಳಿಗೆ ರೋಗರುಜಿನಗಳು ಬಂದಾಗ ಈ ಗೋಕಲ್ಲಿಗೆ ಹರಕೆ ಹೊತ್ತು ಪೂಜಿಸುತ್ತಿದ್ದಾರೆ. ಕರಿ ಗೋಕಲ್ಲಿನ ಪಕ್ಕದಲ್ಲಿಯೇ ಬಿಳಿ ಗೋಕಲ್ಲು ಕೂಡಾ ಇದೆ. ಇದು ಸ್ಥಳಪುರಾಣ.
ದಕ್ಷಿಣ ಕರ್ನಾಟಕದ ಬಹುತೇಕ ಊರುಗಳಲ್ಲಿ ಕರುವುಗಲ್ಲಮ್ಮ ಹೆಸರಿನಿಂದ ಪೂಜಿಸುವ ಗೋಕಲ್ಲುಗಳಿವೆ. ಜಾನುವಾರುಗಳಿಗೆ ಗೆರಸು ರೋಗ (ಕಾಲು – ಬಾಯಿ ಜ್ವರ) ಬಂದಾಗ, ಪ್ರತಿ ಕುಟುಂಬದ ರೈತರು ಕರುವುಗಲ್ಲಮ್ಮನ ಮೇಲೆ ಕೊಡಗಟ್ಟಲೆ ನೀರು ಸುರಿದು ಪೂಜಿಸುತ್ತಾರೆ. ನೀರು ಹರಿದ ದಾರಿಗುಂಟ ಬುರುದೆಯಲ್ಲಿ ತಮ್ಮ ಜಾನುವಾರುಗಳನ್ನು ಮೂರು ಸುತ್ತು ಓಡಾಡಿಸುತ್ತಾರೆ. ಆಶ್ಚರ್ಯವೆಂಬಂತೆ ಗೊರಸಿನ ಸಂದಿಯಲ್ಲಿ ಹುಣ್ಣುಗಳಾಗಿ ಹುಳು ತುಂಬಿದ ಗೋಪಾದಗಳು ಬುರುದೆ ತುಂಬಿಕೊಂಡು ಹುಳು-ಹುಣ್ಣು ನೀಗಿಕೊಂಡು ಗೆಲುವಾಗುತ್ತಿದ್ದವು. ಮುಸುಡಿಮೂತಿ ನಾಲಗೆಯ ಹುಣ್ಣುಗಳೂ ವಾಸಿಯಾಗಿ ಮೇವು ತಿಂದು ಲವಲವಿಕೆಯಿಂದ ನೊಮರು ಹಾಕುತ್ತಿದ್ದವು.
ಈಗಿನ ಖಾಯಿಲೆ ಮತ್ತು ದೇವರ ಸ್ವರೂಪ ಬೇರೆ ಬೇರೆಯೇ ಆಗಿದೆ.
-ಡಾ.ವಡ್ಡಗೆರೆ ನಾಗರಾಜಯ್ಯ
8722724174
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಿಲೀಸ್‌ಗೂ ಮುನ್ನ ಧರ್ಮಸ್ಥಳದತ್ತ ರಾಕಿಂಗ್ ಸ್ಟಾರ್ ಯಶ್; ‘ಟಾಕ್ಸಿಕ್’ ಗೆಲುವಿಗಾಗಿ ವಿಶೇಷ ಪೂಜೆ
ಚೆನ್ನೈ ಪ್ರೀ-ರಿಲೀಸ್ ಕಾರ್ಯಕ್ರಮದ ಬಳಿಕ ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಯಶ್; ಕೆಜಿಎಫ್-2 ಬಳಿಕ ಮತ್ತೊಮ್ಮೆ ಹಳೆಯ ಸಂಪ್ರದಾಯ ಮುಂದುವರಿಕೆ
- ಟಾಕ್ಸಿಕ್ ರಿಲೀಸ್‌ಗೂ ಮುನ್ನ ಧರ್ಮಸ್ಥಳದಲ್ಲಿ ಯಶ್!
- ಮಂಜುನಾಥನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ
ಸುದ್ದಿದಿನ,ಮಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 26ರಂದು ಚಿತ್ರ ತೆರೆಗೆ ಬರಲಿದ್ದು, ಬಿಡುಗಡೆಗೂ ಮುನ್ನ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಿನ್ನೆ ಚೆನ್ನೈನಲ್ಲಿ ನಡೆದ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ಕಾರ್ಯಕ್ರಮ ಮುಗಿದ ಬಳಿಕ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ. ಇಂದು ಧರ್ಮಸ್ಥಳಕ್ಕೆ ಆಗಮಿಸಿದ ಅವರು, ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.
http://Visit : www.suddidina.com
ರಿಲೀಸ್‌ಗೂ ಮುನ್ನ ದೇವರ ದರ್ಶನದ ಸಂಪ್ರದಾಯ
ಸಿನಿಮಾ ಬಿಡುಗಡೆಗೂ ಮುನ್ನ ದೇವಸ್ಥಾನಗಳಿಗೆ ತೆರಳಿ ದೇವರ ಆಶೀರ್ವಾದ ಪಡೆಯುವುದು ಯಶ್ ಅವರಲ್ಲಿ ಹಿಂದಿನಿಂದಲೂ ಕಂಡುಬರುವ ಸಂಪ್ರದಾಯ. ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಯ ಮುನ್ನವೂ ಯಶ್ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಇದೀಗ ‘ಟಾಕ್ಸಿಕ್’ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡುವ ಮೂಲಕ ತಮ್ಮ ಆ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
ಯಶ್ ಸೂರ್ಯ ದೇವಸ್ಥಾನಕ್ಕೂ ಭೇಟಿ ನೀಡಿ ಹರಕೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಯಶ್ ಅವರ ದೇವಸ್ಥಾನ ಭೇಟಿ ಅಭಿಮಾನಿಗಳ ಗಮನ ಸೆಳೆದಿದೆ.
ಟಾಕ್ಸಿಕ್ ಮೇಲೆ ಭಾರಿ ನಿರೀಕ್ಷೆ
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಪ್ಯಾನ್ ಇಂಡಿಯಾ ಆಕ್ಷನ್ ಥ್ರಿಲ್ಲರ್ ಆಗಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿದೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೂ ಚಿತ್ರ ಡಬ್ ಆಗಿದೆ.
ಯಶ್ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ನಯನತಾರಾ ಸೇರಿದಂತೆ ಬಹುಭಾಷಾ ತಾರೆಯರ ದೊಡ್ಡ ಬಳಗವೇ ಇದೆ. ಹೀಗಾಗಿ ಕನ್ನಡ ಮಾತ್ರವಲ್ಲದೆ ದಕ್ಷಿಣ ಹಾಗೂ ಉತ್ತರ ಭಾರತದ ಮಾರುಕಟ್ಟೆಗಳಲ್ಲೂ ಚಿತ್ರದ ಮೇಲೆ ಭಾರಿ ನಿರೀಕ್ಷೆ ಮೂಡಿದೆ.
ಬೆಂಗಳೂರಿನಲ್ಲಿ ಟಿಕೆಟ್ ದರಕ್ಕೆ ಶಾಕ್!
‘ಟಾಕ್ಸಿಕ್’ ಅಡ್ವಾನ್ಸ್ ಬುಕ್ಕಿಂಗ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಕೆಲವು ಪ್ರೀಮಿಯಂ ಥಿಯೇಟರ್‌ಗಳಲ್ಲಿ ಟಿಕೆಟ್ ದರ ₹3,600ರ ಗಡಿ ತಲುಪಿರುವುದು ಗಮನ ಸೆಳೆದಿದೆ. ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ರೆಕ್ಲೈನರ್ ಟಿಕೆಟ್‌ಗಳು ₹700ರಿಂದ ₹1,600ರವರೆಗೆ ಲಭ್ಯವಿದ್ದರೆ, ಕೆಲವು ಪ್ರೀಮಿಯಂ ಸ್ಕ್ರೀನ್‌ಗಳಲ್ಲಿ ದರ ಇನ್ನಷ್ಟು ಹೆಚ್ಚಾಗಿದೆ.
ಸಾಕ್ನಿಲ್ಕ್ ವರದಿಯ ಪ್ರಕಾರ, ಅಡ್ವಾನ್ಸ್ ಬುಕ್ಕಿಂಗ್ ಆರಂಭವಾದ ಎರಡು ದಿನಗಳಲ್ಲಿ ‘ಟಾಕ್ಸಿಕ್’ ಸುಮಾರು ₹18.73 ಕೋಟಿ ಮುಂಗಡ ಬುಕ್ಕಿಂಗ್ ದಾಖಲಿಸಿದೆ ಎನ್ನಲಾಗಿದೆ. ಟಿಕೆಟ್ ದರ ಏರಿಕೆಯ ನಡುವೆಯೂ ಬುಕ್ಕಿಂಗ್ ವೇಗ ಕುಂದಿಲ್ಲ.
ರಿಲೀಸ್‌ಗೂ ಮುನ್ನ ಧರ್ಮಸ್ಥಳದತ್ತ ರಾಕಿಂಗ್ ಸ್ಟಾರ್ ಯಶ್; ‘ಟಾಕ್ಸಿಕ್’ ಗೆಲುವಿಗಾಗಿ ವಿಶೇಷ ಪೂಜೆ
ನಾಳೆ ತೆರೆಗೆ ‘ಟಾಕ್ಸಿಕ್’
ಯಶ್ ಮತ್ತು ಗೀತು ಮೋಹನ್‌ದಾಸ್ ಕಥೆ ಬರೆದಿರುವ ಈ ಚಿತ್ರವು ಭಿನ್ನ ಕಥಾಹಂದರ ಹಾಗೂ ಭರ್ಜರಿ ಆಕ್ಷನ್ ಮೂಲಕ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆ ಮೂಡಿಸಿದೆ. ಈಗ ಧರ್ಮಸ್ಥಳದ ಸನ್ನಿಧಿಯಲ್ಲಿ ಯಶ್ ಪಡೆದ ಆಶೀರ್ವಾದದ ಬೆನ್ನಲ್ಲೇ, ನಾಳೆ ‘ಟಾಕ್ಸಿಕ್’ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಸದ್ದು ಮಾಡಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ದಿನದ ಸುದ್ದಿ
₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
ರಾಜಾಜಿನಗರದಲ್ಲಿ ಬಿಡಿಎ ಭರ್ಜರಿ ಕಾರ್ಯಾಚರಣೆ: 13,000 ಚದರ ಅಡಿ ಜಾಗ ವಶಕ್ಕೆ
- 13,000 ಚದರ ಅಡಿ ಪ್ರದೇಶ ತೆರವು; ಪೊಲೀಸ್ ಭದ್ರತೆಯಲ್ಲಿ ಬಿಡಿಎ ಕಾರ್ಯಾಚರಣೆ
ನಿವೇಶನ 13 ಮತ್ತು 17ರಲ್ಲಿ ಅನಧಿಕೃತ ನಿರ್ಮಾಣ ತೆರವು; ಪೊಲೀಸ್ ಸಹಕಾರದಲ್ಲಿ ಕಾರ್ಯಾಚರಣೆ
ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ರಾಜಾಜಿನಗರ ಬಡಾವಣೆಯ ಇಂಡಸ್ಟ್ರೀಯಲ್ ಸಬರ್ಬ್ 2ನೇ ಹಂತದಲ್ಲಿ ಮಹತ್ವದ ತೆರವು ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಸುಮಾರು ₹25 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಾಧಿಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಗ್ರಾಮದ ಸರ್ವೆ ನಂಬರ್ 79 ಮತ್ತು 70ರಲ್ಲಿ ಬರುವ ಇಂಡಸ್ಟ್ರೀಯಲ್ ಸಬರ್ಬ್, 2ನೇ ಹಂತ, ರಾಜಾಜಿನಗರ ಬಡಾವಣೆಯ ನಿವೇಶನ ಸಂಖ್ಯೆ 13 ಮತ್ತು 17ರಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸುಮಾರು 13,000 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡ ಹಾಗೂ ನಿರ್ಮಾಣಗಳನ್ನು ತೆರವುಗೊಳಿಸಿ, ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.
http://Visit : www.suddidina.com
ಅನಧಿಕೃತ ನಿರ್ಮಾಣಕ್ಕೆ ಬಿಡಿಎ ಬ್ರೇಕ್:
ಬಿಡಿಎಗೆ ಸೇರಿದ ಅಥವಾ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಜಾಗಗಳಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ತೆರವು ಕಾರ್ಯಾಚರಣೆಯ ಬಳಿಕ ಆಸ್ತಿಯನ್ನು ಪ್ರಾಧಿಕಾರದ ನೇರ ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಬಿಡಿಎ ಕೈಗೊಳ್ಳುತ್ತಿರುವ ಕ್ರಮಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
ಸುಮಾರು ₹25 ಕೋಟಿ ಮೌಲ್ಯದ ಆಸ್ತಿ ಇರುವುದರಿಂದ, ಈ ಕಾರ್ಯಾಚರಣೆ ನಗರದ ಆಸ್ತಿ ಸಂರಕ್ಷಣೆ ಹಾಗೂ ಅನಧಿಕೃತ ನಿರ್ಮಾಣಗಳ ನಿಯಂತ್ರಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ದೊಡ್ಡ ಪ್ರಮಾಣದ ಭೂಮಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ನಡೆಸಿದರೆ ಯಾವುದೇ ಕಾರಣಕ್ಕೂ ಅದನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಕ್ರಮ ನೀಡಿದೆ.
https://x.com/BDAOfficialGok/status/2092121239175512436?s=20
ಬಹು ಇಲಾಖೆಗಳ ಸಮನ್ವಯದಲ್ಲಿ ಕಾರ್ಯಾಚರಣೆ:
ತೆರವು ಕಾರ್ಯಾಚರಣೆಯನ್ನು ಬಿಡಿಎಯ ವಲಯ ಆಯುಕ್ತರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1, ಕಾರ್ಯನಿರತ ಆರಕ್ಷಕ ಪಡೆ, ಪಶ್ಚಿಮ ವಿಭಾಗದ ಅಭಿಯಂತರರು ಹಾಗೂ ಸರ್ವೆಯರ್‌ಗಳು ಒಳಗೊಂಡ ತಂಡ ಕೈಗೊಂಡಿತು. ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳ ಪರಿಶೀಲನೆ, ನಿರ್ಮಾಣ ತೆರವು ಹಾಗೂ ಜಾಗದ ಸ್ವಾಧೀನ ಪ್ರಕ್ರಿಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಪೂರ್ಣಗೊಳಿಸಿದರು. ಕಾರ್ಯಾಚರಣೆ ಬಳಿಕ ತೆರವುಗೊಳಿಸಲಾದ ಪ್ರದೇಶವನ್ನು ಬಿಡಿಎ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ನಗರದ ಭೂ ಸಂಪತ್ತಿನ ರಕ್ಷಣೆಗೆ ಕಠಿಣ ಹೆಜ್ಜೆ
ಬೆಂಗಳೂರು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಹಾಗೂ ಪ್ರಾಧಿಕಾರಕ್ಕೆ ಸೇರಿದ ಜಾಗಗಳ ಮೇಲೆ ಅಕ್ರಮ ನಿರ್ಮಾಣಗಳು ನಡೆಯದಂತೆ ನಿಗಾ ವಹಿಸುವುದು ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೈಗೊಂಡಿರುವ ₹25 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ಕ್ರಮ, ಅನಧಿಕೃತ ನಿರ್ಮಾಣಗಳ ವಿರುದ್ಧದ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಿದೆ.
ಬೆಂಗಳೂರು ನಗರದ ಭೂ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಬಿಡಿಎಯ ಈ ತೆರವು ಕಾರ್ಯಾಚರಣೆ, ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯುವ ಸಾಧ್ಯತೆ ಇದೆ.

ದಿನದ ಸುದ್ದಿ
ಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
‘ನನ್ನ ಖಾತಾ ನನ್ನ ಹಕ್ಕು’ ಮುಗಿದರೂ ಸಂಕಷ್ಟ ಮುಗಿಯಲಿಲ್ಲ: 7.50 ಲಕ್ಷ ಆಸ್ತಿಗಳಲ್ಲಿ ಎ-ಖಾತೆ ಸಿಕ್ಕಿದ್ದು 20 ಸಾವಿರಕ್ಕೆ ಮಾತ್ರ!
- ಗಡುವು ಮುಕ್ತಾಯ, ಇನ್ನು ಬಿ-ಖಾತೆಯಿಂದ ಎ-ಖಾತೆಗೆ 100% ಶುಲ್ಕ?
- ಶೇ.2ಕ್ಕೆ ಇಳಿದ ಶುಲ್ಕದ ಬಳಿಕ ಅರ್ಜಿ ಹೆಚ್ಚಾದರೂ, ತಾಂತ್ರಿಕ ಸಮಸ್ಯೆಯಿಂದ ಜನರಿಗೆ ಸಂಕಷ್ಟ
- 7.50 ಲಕ್ಷ ಬಿ-ಖಾತೆ ಆಸ್ತಿಗಳ ಪೈಕಿ ಕೇವಲ 90 ಸಾವಿರ ಅರ್ಜಿಗಳು, 20 ಸಾವಿರಕ್ಕಷ್ಟೇ ಎ-ಖಾತೆ ಭಾಗ್ಯ
ಸುದ್ದಿದಿನ,ಬೆಂಗಳೂರು: ‘ಮನೆ ನಮ್ಮದು, ಖಾತೆಯೂ ನಮ್ಮ ಹಕ್ಕು’ ಎಂಬ ನಿರೀಕ್ಷೆಯೊಂದಿಗೆ ಎ-ಖಾತೆ ಪಡೆಯಲು ಮುಂದಾದ ಬೆಂಗಳೂರಿನ ಸಾವಿರಾರು ಆಸ್ತಿ ಮಾಲೀಕರಿಗೆ ಇದೀಗ ನಿರಾಸೆ ಎದುರಾಗಿದೆ. ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ ಯೋಜನೆಯ ಭಾಗವಾಗಿ ಆರಂಭಿಸಿದ್ದ ‘ನನ್ನ ಖಾತಾ ನನ್ನ ಹಕ್ಕು’ ಕಾರ್ಯಕ್ರಮದ ಗಡುವು ಮುಕ್ತಾಯಗೊಂಡಿದ್ದು, ಯೋಜನೆಯ ಅನುಷ್ಠಾನದಲ್ಲಿ ಎದುರಾದ ತಾಂತ್ರಿಕ ಸಮಸ್ಯೆ ಹಾಗೂ ಅಧಿಕಾರಿಗಳ ವಿಳಂಬದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು ನಗರದಲ್ಲಿ ಸುಮಾರು 7.50 ಲಕ್ಷ ಬಿ-ಖಾತೆ ಆಸ್ತಿಗಳಿವೆ ಎನ್ನಲಾಗಿದ್ದು, ಈ ಪೈಕಿ ಕೇವಲ 90 ಸಾವಿರ ಆಸ್ತಿ ಮಾಲೀಕರು ಮಾತ್ರ ಎ-ಖಾತೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿ ಸಲ್ಲಿಸಿದವರಿಗೂ ತಕ್ಷಣ ಪರಿಹಾರ ಸಿಗಲಿಲ್ಲ. ಅಧಿಕಾರಿಗಳ ಪ್ರಕ್ರಿಯೆ ವಿಳಂಬದಿಂದಾಗಿ ಇದುವರೆಗೆ ಕೇವಲ 20 ಸಾವಿರ ಆಸ್ತಿಗಳಿಗೆ ಮಾತ್ರ ಎ-ಖಾತೆ ಮಂಜೂರಾಗಿದೆ. ಇನ್ನೂ 60 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ.
ಶುಲ್ಕ ಕಡಿತದ ಬಳಿಕ ಹೆಚ್ಚಿದ ನಿರೀಕ್ಷೆ
ಆರಂಭದಲ್ಲಿ ಎ-ಖಾತೆ ಪಡೆಯಲು ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಶುಲ್ಕ ವಿಧಿಸಲು ಸರ್ಕಾರ ನಿರ್ಧರಿಸಿತ್ತು. ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶುಲ್ಕವನ್ನು ಶೇ.2ಕ್ಕೆ ಇಳಿಸಲಾಯಿತು. ಶುಲ್ಕ ಕಡಿಮೆಯಾದ ಬಳಿಕ ಎ-ಖಾತೆ ಪಡೆಯುವ ಆಸಕ್ತಿಯೂ ಹೆಚ್ಚಾಯಿತು. ಆದರೆ, ಇದೇ ಸಂದರ್ಭದಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು. ಅರ್ಜಿ ಸಲ್ಲಿಸಲು ಬಳಸುತ್ತಿದ್ದ ಜಿಬಿಎ ವೆಬ್‌ಸೈಟ್‌ನಲ್ಲಿ ಸರ್ವರ್ ಡೌನ್, ತಾಂತ್ರಿಕ ದೋಷ ಮತ್ತು ಮೂಲಸೌಕರ್ಯ ಕೊರತೆ ಕಾಣಿಸಿಕೊಂಡಿದ್ದರಿಂದ ಅನೇಕ ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಪರದಾಡಿದರು. ಅರ್ಜಿ ಸಲ್ಲಿಸಿದವರಲ್ಲೂ ಹಲವರ ಅರ್ಜಿಗಳು ಅಧಿಕಾರಿಗಳ ಪರಿಶೀಲನೆಗಾಗಿ ಬಾಕಿ ಉಳಿದಿವೆ.
ಗಡುವು ಮುಗಿದ ಬಳಿಕ ಶುಲ್ಕದ ಹೊರೆ?
ಈಗ ‘ನನ್ನ ಖಾತಾ ನನ್ನ ಹಕ್ಕು’ ಯೋಜನೆಯ ಗಡುವು ಮುಕ್ತಾಯಗೊಂಡಿರುವುದರಿಂದ, ಮುಂದಿನ ದಿನಗಳಲ್ಲಿ ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತಿಸಿಕೊಳ್ಳುವವರು ಪೂರ್ಣ ಪ್ರಮಾಣದ ಶೇ.100 ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ಈಗಾಗಲೇ ಅರ್ಜಿ ಸಲ್ಲಿಸಿ ಅಧಿಕಾರಿಗಳ ಅನುಮೋದನೆಗಾಗಿ ಕಾಯುತ್ತಿರುವ 60 ಸಾವಿರಕ್ಕೂ ಹೆಚ್ಚು ಆಸ್ತಿ ಮಾಲೀಕರಲ್ಲಿ ಆತಂಕ ಹೆಚ್ಚಾಗಿದೆ. “ಶುಲ್ಕ ವಸೂಲಿಗೆ ಸರ್ಕಾರ ತೋರಿದ ವೇಗವನ್ನು, ಜನರಿಗೆ ತಾಂತ್ರಿಕ ನೆರವು ನೀಡುವಲ್ಲಿ ತೋರಲಿಲ್ಲ” ಎಂಬ ಆಕ್ರೋಶವೂ ಕೇಳಿಬರುತ್ತಿದೆ.
ಈಗ ಎಲ್ಲರ ಕಣ್ಣು ಸರ್ಕಾರದತ್ತ ನೆಟ್ಟಿದೆ. ಗಡುವು ವಿಸ್ತರಣೆಯಾಗುತ್ತದೆಯೇ? ಬಾಕಿ ಅರ್ಜಿಗಳಿಗೆ ವಿಶೇಷ ಅವಕಾಶ ಸಿಗುತ್ತದೆಯೇ? ಅಥವಾ ಸಾವಿರಾರು ಜನರು ಶೇ.100 ಶುಲ್ಕದ ಹೊರೆ ಹೊರುವಂತಾಗುತ್ತದೆಯೇ? ಎಂಬ ಪ್ರಶ್ನೆಗಳಿಗೆ ಸರ್ಕಾರದ ಮುಂದಿನ ನಿರ್ಧಾರವೇ ಉತ್ತರ ನೀಡಬೇಕಿದೆ.

-
ಅಂತರಂಗ3 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ5 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ದಿನದ ಸುದ್ದಿ1 day agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ1 day agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ14 hours agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ1 day agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ1 day agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ







