ರಾಜಕೀಯ
ದಾದಾಸಾಹೇಬ್ ಕಾನ್ಷೀರಾಮ್ : ಕೆಲವು ವಿಚಾರಗಳು | ಅಂಬೇಡ್ಕರ್ ಜಯಂತಿಗೆ ರಜೆ ಕ್ಯಾನ್ಸಲ್ ಮಾಡಿದ್ದಕ್ಕೆ ಬಿಎಸ್‍ಪಿ ಹುಟ್ಟಿಕೊಂಡಿತು..!
- ಆರ್ ಹೆಚ್ ಬಿ
ಅಂಬೇಡ್ಕರ್ ಜಯಂತಿ ದಲಿತರಿಗೆ ಅದೆಷ್ಟು ಮಹತ್ವದ್ದು? ಬಹುಶಃ ಅದು ವರ್ಣಿಸಲಸದಳ. ಅದಕ್ಕೆ ರಜೆ ನೀಡದ್ದಕ್ಕೆ, ನೀಡಿದ್ದ ರಜೆಯನ್ನು ರದ್ದುಮಾಡಿದ್ದಕ್ಕೆ ಒಂದು ಬೃಹತ್ ರಾಜಕೀಯ ಪಕ್ಷವೇ ಹುಟ್ಟಿಕೊಂಡಿತೆಂದರೆ…! ಹೌದು, ಇದು ಸತ್ಯ. ಇತಿಹಾಸಕಾರರು ಗುರುತಿಸಿರುವಂತೆ 1964ರಲ್ಲಿ ಕಾನ್ಷೀರಾಮ್ ರವರು ಅಧಿಕಾರಿಯಾಗಿದ್ದ DRDO ಕಚೇರಿಯಲ್ಲಿ ಆ ವರ್ಷ ಇದ್ದಕ್ಕಿದ್ದಂತೆ ಅಂಬೇಡ್ಕರ್ ಜಯಂತಿ, ಬುದ್ಧ ಜಯಂತಿ ಮತ್ತು ವಾಲ್ಮೀಕಿ ಜಯಂತಿಗಳಿಗೆ ರಜೆ ಕ್ಯಾನ್ಸಲ್ ಮಾಡಲಾಗಿತ್ತು. ಅದರ ಬದಲು ಬೇರೆ ಹಿಂದೂ ಹಬ್ಬಗಳಿಗೆ ರಜೆ ನೀಡಲಾಗಿತ್ತು. ಇದರ ವಿರುದ್ಧ ಸಿಡಿದು ನಿಂತ ಕಾನ್ಷೀರಾಮ್‍ರವರು ‘ತಮ್ಮ ಕಚೇರಿಯಲ್ಲೇ ಅಂಬೇಡ್ಕರ್ ಜಯಂತಿ ರಜೆ ರದ್ದು ಮಾಡಿದರೆ?’ ಎಂದು ನೌಕರರ ಮುಂದಾಳತ್ವ ವಹಿಸಿ ದೊಡ್ಡ ಹೋರಾಟ ರೂಪಿಸಿದರು. ಪರಿಣಾಮ BAMCEF ನಂತಹ ಬೃಹತ್ ನೌಕರರ ಸಂಘಟನೆ, DS4 ನಂತಹ ಬೃಹತ್ ಹೋರಾಟದ ಹಾದಿ, ಬಿಎಸ್‍ಪಿಯಂತಹ ರಾಜಕೀಯ ಪಕ್ಷ ಹುಟ್ಟಿಕೊಂಡಿತು. ಈ ನಿಟ್ಟಿನಲ್ಲಿ 1964ರಲ್ಲಿ ಅಂಬೇಡ್ಕರ್ ಜಯಂತಿಗೆ ರಜೆ ರದ್ದುಗೊಳಿಸಿಲ್ಲದಿದ್ದರೆ ಕಾನ್ಷೀರಾಮ್ ರವರು ಮದುವೆಯಾಗಿ, ಡಿಆರ್‍ಡಿಒದಲ್ಲಿ ಓರ್ವ ಸಾಮಾನ್ಯ ಸಂಶೋಧಕನಾಗಿ ಸಾಮಾನ್ಯ ಜೀವನ ನಡೆಸುತ್ತ ಇದ್ದುಬಿಡುತ್ತಿದ್ದರು! ಆದರೆ ಅಂಬೇಡ್ಕರ್ ಜಯಂತಿಗೆ ರಜೆ ರದ್ದುಮಾಡಿದ್ದರಿಂದ ಕಾನ್ಷೀರಾಮ್‍ರೊಳಗೊಬ್ಬ ಹೋರಾಟಗಾರ, ಅಪ್ರತಿಮ ನಾಯಕ ಎದ್ದು ನಿಂತಿದ್ದ. So, that is the power of Ambedkar Jayanthi and power of Kanshiram!
ಪ್ರವಾದಿ ಮಾದರಿಯ ಹುರುಪು
ಕಾನ್ಷೀರಾಮ್‍ರವರು BAMCEF ಹೆಸರಿನಲ್ಲಿ ನೌಕರರನ್ನು ಸಂಘಟಿಸಿದ್ದು ಎಲ್ಲರಿಗೂ ತಿಳಿದಿದೆ. ತಮ್ಮ ಕನಸನ್ನು ನನಸುಗೊಳಿಸಲು ಸರ್ಕಾರಿ ನೌಕರರನ್ನು ಬಳಸಿಕೊಳ್ಳಬೇಕು ಎಂಬ ಐಡಿಯಾ ಸಾಹೇಬರಿಗೆ ಬಂದದ್ದು 1973ರಲ್ಲಿ. ಆದರೆ ಅದು ಸಾಕಾರಗೊಳ್ಳಲು ಸುಮಾರು ಐದು ವರ್ಷಗಳು ಬೇಕಾಯಿತು. ಈ ಸಂದರ್ಭದಲ್ಲಿ ಸಾಹೇಬರು ನೌಕರರನ್ನು ಸಂಘಟಿಸುವ ಪರಿ ಹೇಗಿತ್ತು? ದಾದಾಸಾಹೇಬರೇ ನೆನೆಪಿಸಿಕೊಳ್ಳುವಂತೆ “ಆಗಾಗ ನಾನು ಸರ್ಕಾರಿ ಕಚೇರಿಗಳಿಗೆ ಭೇಟಿಕೊಡಲು ಹೋದಾಗ ಜನ ನನ್ನನ್ನು ನೋಡಿ ಓ! ಹುಚ್ಚ ಬಂದ ಎಂದು ಓಡಿಹೋಗುತ್ತಿದ್ದರು!” (Views and Interviews of Kanshiram by N.Manohara Prasad, Pp.126) ಆದರೆ ದಾದಾಸಾಹೇಬರ ಪ್ರವಾದಿ ಮಾದರಿಯ ಹುರುಪು ಅವರ ಅನುಯಾಯಿಗಳನ್ನು ಅವರತ್ತ ಸೆಳೆಯಲು ಪ್ರಾರಂಭಿಸಿತು!
ನೌಕರರು ಮೆದುಳಿನ ಬ್ಯಾಂಕುಗಳು!
ಕಾನ್ಷೀರಾಮ್ ರವರು ನೌಕರರಲ್ಲಿ ತಪ್ಪಿತಸ್ಥ ಭಾವನೆಯನ್ನು ತುಂಬಿದರು. ತಾನೆಲ್ಲ ಪಡೆದೆ ತಾನು ಸಮಾಜಕ್ಕೆ ಏನು ಕೊಟ್ಟೆ? ಎಂಬ ಭಾವವದು. ನೌಕರರು ಬರೇ ಹಣಕಾಸು ನೀಡುವುದಷ್ಟೆ ಅಲ್ಲ, ಮುಖ್ಯವಾಗಿ ಕಾನ್ಷೀರಾಮ್‍ರವರು ನೌಕರರ talent(ಪ್ರತಿಭೆ)ಗಳನ್ನು ಬಳಸಿದರು. ಈ ಬಗ್ಗೆ ಸ್ವತಃ ಕಾನ್ಷೀರಾಮ್‍ರವರು ಒಂದೆಡೆ “we use them as brain banks” ಎನ್ನುತ್ತಾರೆ. ಅಂದರೆ “ನಾನು ಅವರನ್ನು ಮೆದುಳಿನ ಬ್ಯಾಂಕ್ ಥರ ಬಳಸಿದೆ” ಎಂದರ್ಥ! ಇದಕ್ಕೆ ಅವರು ಕೊಡುವ ವಿವರಣೆ “ಅವರು (ನೌಕರರು) ದೇಶಾದ್ಯಂತ ಹರಡಿದ್ದಾರೆ. ಅವರ ಹಣಕಾಸು ಶಕ್ತಿ ಮತ್ತು ಬುಧ್ಧಿಶಕ್ತಿ ಎರಡೂ ಬೆಲೆಕಟ್ಟಲಾಗದ್ದು”. ಹೌದು, ಕಾನ್ಷೀರಾಮ್‍ರವರು ಹೇಳಿದ ಮೆದುಳಿನ ಬ್ಯಾಂಕ್; ಶೋಷಿತ ಸಮುದಾಯದ ನೌಕರರ ಬಳಿ ದುಡ್ಡಿದೆ, ಹಾಗೆ ಮೆದುಳಿನಲ್ಲಿ ಅಪಾರ ಬುದ್ಧಿಶಕ್ತಿ ಇದೆ. ಆ ಬುದ್ದಿಶಕ್ತಿಯ ಕಾರಣಕ್ಕೆ ಅವರು ಸರ್ಕಾರಿ ಕಚೇರಿಗಳಿಗೆ ನೌಕರರಾಗಿ ಬಂದಿರುವುದು. ಅಂದಹಾಗೆ ಬುದ್ಧಿಶಕ್ತಿ, ಅದು ಮಾತನಾಡುವ ಶಕ್ತಿ ಇರಬಹುದು, ಸಂಘಟನಾ ಶಕ್ತಿ ಇರಬಹುದು, ಬರೆಯುವ ಶಕ್ತಿ ಇರಬಹುದು, ಇದನ್ನೆಲ್ಲ ಸಮುದಾಯಕ್ಕೆ ವಾಪಸ್ ಕೊಡುವಂತೆ ಸಾಹೇಬರು ಹೇಳಿದರು. ಅದನ್ನೆ pay back to society ಎಂದರು.
ಶಿಕ್ಷಕನ ಕೈಕೆಳಗೆ ಐಎಎಸ್ ಅಧಿಕಾರಿಗಳು!
BAMCEF ಸಂಘಟನೆಯಲ್ಲಿದ್ದಾಗ ಅಲ್ಲಿ ನೌಕರರ ಕೇಡರ್ ಬಗ್ಗೆ ಅಂದರೆ ದರ್ಜೆಯ ಬಗ್ಗೆ ಯಾವುದೇ ತಾರತಮ್ಯವಿರಲಿಲ್ಲ. ಲಕ್ನೋದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹೇಳುವಂತೆ “ಕಾನ್ಷೀರಾಮ್ ರವರು ವಿವಿಧ ದರ್ಜೆಯ ನೌಕರರ ನಡುವೆ ಇದ್ದ ಸೇವಾ ಅಂದರೆ ನಾನು ಮೇಲ್ಮಟ್ಟದ ನೌಕರ ಅವನು ತಳಮಟ್ಟದ ನೌಕರ ಎಂಬ ಬೇಲಿಯನ್ನು ಮುರಿದರು. ಹೇಗೆಂದರೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹೇಳುವಂತೆ “BAMCEF ನ ಸ್ಥಳೀಯ ಸಂಯೋಜಕನಾದ ಓರ್ವ ಶಿಕ್ಷಕನ ಮನೆಯಲ್ಲಿ ಐಎಎಸ್ ಅಧಿಕಾರಿಗಳೂ ಸೇರಿದಂತೆ ಕಚೇರಿಯ ಹಿರಿಯ ಅಧಿಕಾರಿಗಳೆಲ್ಲ ಆತ್ಮೀಯತೆಯಿಂದ ಸಭೆ ಸೇರುತ್ತಿದ್ದೆವು”.
ಭಾಷಣ ಕೇಳಲೂ ಹಣ ಕೊಡಬೇಕು!
ಕಾನ್ಷೀರಾಮ್‍ವರಿಗೆ ಪಕ್ಷ ಕಟ್ಟಲು ಇಷ್ಟೊಂದು ದುಡ್ಡು ಎಲ್ಲಿ ಬರುತ್ತದೆ? ಎಂಬುದು ಅಂದಿನ ಪತ್ರಕರ್ತರ ಸಂದೇಹವಾಗಿತ್ತು. ಆಗ ಕೆಲವು ಪತ್ರಕರ್ತರು ಕಾನ್ಷೀರಾಮ್ ರವರು ಅಂದಿನ ಉತ್ತರಪ್ರದೇಶದ ದೊಡ್ಡ ಬಿಸಿನೆಸ್‍ಮನ್ ಹಾಜಿ ಮಸ್ತಾನ್ ಮಿರ್ಝಿಯವರ ಜೊತೆ ಸಂಪರ್ಕದಲ್ಲಿದ್ದಾರೆ. ಅವರೇ ಇವರಿಗೆ ಹಣ ಕೊಡುವುದು ಎಂದು ಗುಲ್ಲೆಬ್ಬಿಸಿದರು. (ಯಾಕೆಂದರೆ 90ರ ದಶಕದಲ್ಲೇ ಲಕ್ನೋದಲ್ಲಿ ನಡೆದ ರ್ಯಾಲಿಯೊಂದರಲ್ಲಿ ದಾದಾಸಾಹೇಬರು ಜನರನ್ನು ಕರೆತರಲು ಬರೇ ಬಸ್ಸುಗಳಿಗೆ ಖರ್ಚು ಮಾಡಿದ್ದ ಹಣವೇ 22 ಲಕ್ಷ!) ಆಗ ಈ ಹಾಜಿ ಮಸ್ತಾನ್ ಮಿರ್ಝಿಯ ಕಥೆಗೆ ಸಾಹೇಬರು ಹೇಳಿದ್ದು “ಹಾಜಿ ಮಸ್ತಾನ್ ಸಣ್ಣ ವ್ಯಾಪಾರಿ. ಆತ ನನಗೆ ಎಷ್ಟು ಅಂತ ಕೊಡಲಿಕ್ಕೆ ಸಾಧ್ಯ? ನಿಜ ಹೇಳಬೇಕೆಂದರೆ ಭಾರತದ ಯಾವುದೇ ರಾಜಕೀಯ ಪಕ್ಷವೂ ಇಷ್ಟು ಹಣ ಖರ್ಚು ಮಾಡಿಲ್ಲ. ಅಷ್ಟು ಹಣವನ್ನು ನಾನು ಖರ್ಚು ಮಾಡಿದ್ದೇನೆ”. ಹಾಗಿದ್ದರೆ ಇದಕ್ಕೆಲ್ಲ ಹಣ? ಅದಕ್ಕೆ ದಾದಾಸಾಹೇಬರು ಹೇಳುವುದು “ನನಗೆ ವಿವಿಧ ಮೂಲಗಳಿಂದ ಹಣ ಬರುತ್ತದೆ. ಅಂದಹಾಗೆ ಆ ಮೂಲಗಳು ಎಂದೂ ಬತ್ತುವುದೇ ಇಲ್ಲ. ಮುಖ್ಯವಾಗಿ ಸದಸ್ಯತ್ವ ಶುಲ್ಕ ಮತ್ತು ಕಾಲಕಾಲಕ್ಕೆ ಕಾರ್ಯಕರ್ತರು ನೀಡುವ ದೇಣಿಗೆಯಿಂದ ಹಣ ಬರುತ್ತದೆ”. ಇದಲ್ಲದೆ ತಮ್ಮ ಭಾಷಣಗಳಿಗೆ ಕಡೇ ಪಕ್ಷ 52000 ಜನ ಸೇರಲೇಬೇಕು ಎಂದು ತಾಕೀತು ಮಾಡುತ್ತಿದ್ದ ಕಾನ್ಷೀರಾಮ್‍ರವರು ಕಡ್ಡಾಯವಾಗಿ ತಲಾ ಒಬ್ಬೊಬ್ಬರಿಂದ 1 ರೂನಂತೆ 52000 ಶುಲ್ಕ ವಸೂಲಿ ಮಾಡಿಸುತ್ತಿದ್ದರು! ಇದರ ಬಗ್ಗೆ ಜೋಕ್ ಕಟ್ ಮಾಡುತ್ತಿದ್ದ ಅವರು “ಈ ಮೊತ್ತವನ್ನು ಶೀಘ್ರದಲ್ಲೇ 1 ಲಕ್ಷಕ್ಕೆ ಏರಿಸಬೇಕೆಂದಿದ್ದೇನೆ” ಎನ್ನುತ್ತಿದ್ದರು. ಅಂದರೆ ಅವರು ಏರಿಸುತ್ತಿದ್ದದ್ದು ಬರೇ ಹಣವನ್ನಷ್ಟೆ ಅಲ್ಲ, ಜನರನ್ನೂ ಕೂಡ ಎಂಬುದು ಅಲ್ಲಿ ತಿಳಿಯಬೇಕಾದ ಅಂಶ!
ದಾದಾಸಾಹೇಬರನ್ನು ಸಿಐಎ ಏಜೆಂಟ್ ಎಂದ ಅಂದಿನ ಸರ್ಕಾರ!
ಅಬ್ಬಾ, 1987ರಲ್ಲಿ ಕಾನ್ಷೀರಾಮ್‍ರವರು ಉತ್ತರಪ್ರದೇಶದ ಬಿಜ್ನೋರ್ ನಿಂದ ಲೋಕಸಭೆಗೆ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಬಿಜ್ನೋರ್ ಜಿಲ್ಲೆ ಪೂರ್ತಿ ಒಂದು ಕರಪತ್ರ ಹಂಚಲಾಗಿತ್ತು ಮತ್ತು ಆ ಕರಪತ್ರದಲ್ಲಿದ್ದದ್ದು ಏನು ಗೊತ್ತೆ? ಕಾನ್ಷೀರಾಮ್ ಸಿಐಎ ಏಜೆಂಟ್ ಎಂದು! ಸಿಐಎ(ಸೆಂಟ್ರಲ್ ಇಂಟೆಲ್ಲೆಜೆನ್ಸಿ ಆಫ್ ಅಮೆರಿಕಾ) ಅದು ಭಾರತದ ‘ರಾ’ ಮತ್ತು ಪಾಕಿಸ್ತಾನದ ಐಎಎಸ್‍ಐ ನಂತೆ ಅಮೆರಿಕಾದ ಗುಪ್ತಚರ ಇಲಾಖೆ. ಅಂದರೆ ಭಾರತವನ್ನು ದುರ್ಬಲಗೊಳಿಸಲು ಅಮೆರಿಕಾ ಕಳುಹಿಸಿರುವ ಗುಪ್ತಚರ ಇಲಾಖೆಯ ಏಜೆಂಟ್ ಕಾನ್ಷೀರಾಮ್ ಎಂದು ಆ ಕರಪತ್ರದಲ್ಲಿ ಮುದ್ರಿಸಲಾಗಿತ್ತು! ಮತ್ತು ಚುನಾವಣಾ ಆ ಸಮಯದಲ್ಲಿ ಅದನ್ನು ಹಂಚಲಾಗಿತ್ತು. ಈ ಬಗ್ಗೆ ಆಕ್ರೋಶಭರಿತರಾಗಿ ಕಾನ್ಷೀರಾಮ್‍ರವರು ಹೇಳಿದ್ದು “ನಾನು ಸಿಐಎ ಏಜೆಂಟ್ ಆಗಿದ್ದರೆ ಈ ಸರ್ಕಾರವೇಕೆ ನನ್ನ ವಿರುದ್ಧ ಕ್ರಮ ಜರುಗಿಸಿಲ್ಲ? ಇದು ತೋರಿಸುವುದೇನೆಂದರೆ ಇದು ಹಿಜಡಾಗಳ ಸರ್ಕಾರ!” ಎಂದು.
ಜಾತಿಗಳನ್ನು ಒಗ್ಗೂಡಿಸುವವರು ಜಾತಿವಾದಿಯಾಗಲು ಹೇಗೆ ಸಾಧ್ಯ?
ಒಮ್ಮೆ ಪತ್ರಕರ್ತರು ದಾದಾಸಾಹೇಬರನ್ನು ಕೇಳಿದ್ದು “ಜಾತಿವಾದಿ ಪಕ್ಷವೊಂದನ್ನು ಕಟ್ಟಿರುವ ನಿಮ್ಮಿಂದ ಜಾತಿ ನಿರ್ಮೂಲನೆ ಹೇಗೆ ಸಾಧ್ಯ?” ಎಂದು. ಅದಕ್ಕೆ ಸಾಹೇಬರು ಕೊಟ್ಟ ಉತ್ತರ “ಬಿಎಸ್‍ಪಿ ಜಾತಿವಾದಿ ಪಕ್ಷವಲ್ಲ. ನಾವು ಈ ದೇಶದ 6000 ಜಾತಿಗಳನ್ನು ಒಗ್ಗೂಡಿಸುತ್ತಿದ್ದೇವೆ ಮತ್ತು ಹೀಗಿರುವಾಗ ನಮ್ಮನ್ನು ನೀವು ಯಾವ ಅರ್ಥದಲ್ಲಿ ಜಾತಿವಾದಿ ಎನ್ನುವಿರಿ?”. ಹೌದು, ದಾದಾಸಾಹೇಬರ ಮಾತಿನಂತೆ ಈ ದೇಶದ ಎಲ್ಲ ಜಾತಿಗಳೂ ಒಗ್ಗೂಡದೆ ಭವ್ಯ ಭಾರತ ನಿರ್ಮಾಣ ಸಾಧ್ಯವಿಲ್ಲ.
ಯತಾಸ್ಥಿತಿವಾದಿ ಗಾಂಧಿ
ಒಮ್ಮೆ ಪತ್ರಕರ್ತರು ಸಾಹೇಬರಿಗೆ “ನಿಮ್ಮ ಕಾರ್ಯಕರ್ತರು ಗಾಂಧಿ ಬಗ್ಗೆ ಇಷ್ಟೊಂದು ಹಗೆತನ ಸಾಧಿಸಲು ಏನು ಕಾರಣ?” ಎಂದರು. ಅದಕ್ಕೆ ದಾದಾಸಾಹೇಬರು ಹೇಳುತ್ತಾರೆ “ಗಾಂಧಿ ಈ ದೇಶದ ಪ್ರತಿಯೊಂದರ ಮೂಲ! ನನಗೆ ಬದಲಾವಣೆ ಬೇಕು, ಡಾ.ಅಂಬೇಡ್ಕರ್‍ರವರು ಕೂಡ ಬದಲಾವಣೆ ಬಯಸಿದ್ದರು. ಆದರೆ ಗಾಂಧಿ ಯತಾಸ್ಥಿತಿವಾದದ ವಾರಸುದಾರರು. ಅವರಿಗೆ ಶೂದ್ರ ಶೂದ್ರನಾಗೇ ಉಳಿಯಬೇಕು. ಅಂದಹಾಗೆ ಗಾಂಧಿ ಈ ದೇಶವನ್ನು ಇಬ್ಬಾಗಗೊಳಿಸಲು ಏನೇನುಮಾಡಬೇಕೋ ಅದೆಲ್ಲವನ್ನೂ ಮಾಡಿದರು. ಈ ನಿಟ್ಟಿನಲ್ಲಿ ಹೇಳುವುದಾದರೆ ನಾವು ಈ ದೇಶವನ್ನು ಒಗ್ಗೂಡಿಸುವ ದಿಸೆಯಲ್ಲಿ ಕೆಲಸಮಾಡುತ್ತಿದ್ದೇವೆ ಮತ್ತು ಎಲ್ಲ ರೀತಿಯ ಮಾನವ ನಿರ್ಮಿತ ವಿಭಜನೆಗಳನ್ನು ತೊಲಗಿಸುತ್ತೇವೆ”!
ಬಹುಜನ ಸಮಾಜ ಪಕ್ಷವೇ ಯಾಕೆ?
ಈ ಪ್ರಶ್ನೆಗೆ ಕಾನ್ಷೀರಾಮ್ ರವರು ಬರೆಯುತ್ತಾರೆ “ಇಂದು ಭಾರತದಲ್ಲಿ ಏಳು ರಾಷ್ಟ್ರೀಯ ಪಕ್ಷಗಳಿವೆ. ಈ ಎಲ್ಲ ಏಳು ರಾಷ್ಟ್ರೀಯ ಪಕ್ಷಗಳು ಪ್ರಬಲ ಹಿಂದೂ ಜಾತಿಗಳ ಕೈಯಲ್ಲಿವೆ. ಆ ಪ್ರಬಲ ಜಾತಿಗಳವರು ತಮ್ಮ ಆಳ್ವಿಕೆ ಮುಂದುವರೆಸಲು ಮತ್ತು ಹಿತಾಸಕ್ತಿ ಕಾಪಾಡಿಕೊಳ್ಳಲು ಈ ಏಳೂ ಪಕ್ಷಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ದಲಿತ-ಶೋಷಿತ ಸಮಾಜ ತನ್ನ ಬಳಿ ಶೇ.85 ಮತ ಬ್ಯಾಂಕ್ ಇದ್ದರೂ ಕೂಡ ಅಸಹಾಯಕ ಪರಿಸ್ಥಿತಿಯಲ್ಲಿದೆ. ಇದಕ್ಕಾಗಿ ನನಗೆ ಅನಿಸಿದ್ದೆಂದರೆ ನಾವು ನಮ್ಮದೇ ಆದ ಸ್ವಂತ ರಾಜಕೀಯ ಪಕ್ಷ ಹೊಂದಬೇಕು” ಎಂಬುದು.
ತ್ಯಾಗಕ್ಕೆ ಮತ್ತೊಂದು ಹೆಸರೇ ಕಾನ್ಷೀರಾಮ್
ತ್ಯಾಗ; ಬಹುಶಃ ಈ ಪದ ಕಾನ್ಷೀರಾಮ್ ರವರಿಗೆ ಅನ್ವರ್ಥವಾಗುತ್ತದೆ. ಮಹಾಭಾರತದಲ್ಲಿ ಕರ್ಣ ತನ್ನ ಕಲಶ ಕುಂಡಲಿಗಳನ್ನು ಕೊಟ್ಟು ತನ್ನ ಪ್ರಾಣ ತ್ಯಾಗ ಮಾಡಿದ. ಆದರೆ ದಾದಾಸಾಹೇಬರು? ತಮ್ಮ ನೌಕರಿ, ತಮ್ಮ ಕುಟುಂಬ, ತಮ್ಮ ಬಳಿಯಿದ್ದ ನೌಕರಿಯಿಂದ ಸಂಪಾದಿಸಿದ್ದ ಆ ಹಣ ಮತ್ತು ಆ ನೌಕರಿಯಿಂದ ಮಜಾ ಮಾಡಬಹುದಾಗಿದ್ದ ಆ ಅಮೂಲ್ಯ ಸಮಯ ಎಲ್ಲವನ್ನೂ ತ್ಯಾಗಮಾಡಿದರು. ಸರ್ಕಾರಿ ನೌಕರರಾಗಲು ಎಲ್ಲರೂ ಹಪಹಪಿಸುವುದನ್ನು ನೋಡುತ್ತೇವೆ. ಅದೂ ದಾದಾಸಾಹೇಬರು ಆ ಕಾಲದಲ್ಲೇ ಬಿಎಸ್ಸಿ ಮಾಡಿ ಡಿಆರ್‍ಡಿಒದಂಥ ಉನ್ನತ ಸಂಸ್ಥೆ ಸೇರಿದ್ದರು. ನಿವೃತ್ತಿಯಾಗುವ ಹೊತ್ತಿಗೆ ಅವರು ಈ ದೇಶದ ದೊಡ್ಡ ವಿಜ್ಞಾನಿಯಾಗಿ ಲಕ್ಷ ಲಕ್ಷ ಗಳಿಸಿ ವೈಭವೋಪೇತ ಜೀವನ ನಡೆಸಬಹುದಿತ್ತು. ಆದರೆ ಶೋಷಿತ ಸಮುದಾಯಕ್ಕೋಸ್ಕರ ಅದನ್ನು ಬಿಟ್ಟದ್ದು, ಶೋಷಿತ ಬಹುಜನರ ಏಳಿಗೆಗಾಗಿ ತಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಶಪಥಗೈದದ್ದು, ಅಂತೆಯೇ ನುಡಿದಂತೆ ನಡೆದದ್ದು, ಅಗಾಧವನ್ನು ಸಾಧಿಸಿದ್ದು, ಬಹುಶಃ ಆ ತ್ಯಾಗಕ್ಕೆ ಎಣೆಯಿಲ್ಲ. ವರ್ಣಿಸಲು ಪದಗಳಿಲ್ಲ. ತನ್ನ ಪರಿಮಳವನ್ನು ಪ್ರಪಂಚಕ್ಕೆ ನೀಡಿ ತಾನು ಬಾಡುವ ಸುಂದರ ಹೂವು ಕಾನ್ಷೀರಾಮ್‍ರವರು. ನಿಂತುಹೋಗಿದ್ದ ಅಂಬೇಡ್ಕರ್ ರಥವನ್ನು 40 ವರ್ಷಗಳ ಕಾಲ ಮುನ್ನಡೆಸಿದರು. ಮರೆತುಹೋಗಬಹುದಾಗಿದ್ದ ಜೈಭೀಮ್ ಅನ್ನು ಬಾನೆತ್ತರಕೆ ಮೊಳಗಿಸಿದರು. ಅವರು ಇಂದು ನಮ್ಮ ನಡುವೆ ಇಲ್ಲದಿರಬಹುದು (ನಿಧನ; ಅಕ್ಟೋಬರ್ 9, 2006). ಆದರೆ ಅವರ ಅಮರ ತ್ಯಾಗ ನಮ್ಮ ನಡುವೆ ಉಳಿಯುತ್ತದೆ… ನಮ್ಮನ್ನು ಸದಾ ಕಾಡುತ್ತದೆ… ಅಶ್ರುತರ್ಪಣದೊಂದಿಗೆ…
ಜೈಭೀಮ್… ಜೈಭಾರತ್… ಜೈಕಾನ್ಷೀರಾಮ್…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.
ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.
ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.
ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.
ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.
ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

