Connect with us

ಅಂತರಂಗ

ಅರಿಮೆಯ ಅರಿವಿರಲಿ-30 : ಬಯಕೆ ಮತ್ತು ಭಯಗಳ ಬಂಧನದಲ್ಲಿ

Published

on

  • ಯೋಗೇಶ್ ಮಾಸ್ಟರ್

ವ್ಯಕ್ತಿಯ ಬಯಕೆ ಮತ್ತು ಭಯಗಳೆರಡೂ ನೈಸರ್ಗಿಕ ಪ್ರವೃತ್ತಿಗಳಂತೆ. ಈ ಎರಡೂ ಅತಿಯಾಗಿ ಹೆಚ್ಚಾಗಿದ್ದರೆ, ಅತಿಯಾಗಿ ಕಡಿಮೆಯಿದ್ದರೆ ಅಲ್ಲಿ ಸಮಸ್ಯೆ ಇದೆ ಎಂದು ಅರ್ಥ. ಹಾಗೆಯೇ ಅವು ವ್ಯಕ್ತಪಡಿಸಲಾಗದಂತೆ ಒತ್ತಡಕ್ಕೊಳಗಾದರೂ ಮಾನಸಿಕ ಸಮಸ್ಯೆಗಳಾಗುತ್ತವೆ. ಸಾಮಾನ್ಯವಾಗಿ ಮನುಷ್ಯನ ಎಲ್ಲಾ ಮಾನಸಿಕ ಸಮಸ್ಯೆಗಳ ಮೂಲ ಈ ಎರಡು ಪ್ರವೃತ್ತಿಗಳಲ್ಲಿಯೇ.ಬಯಕೆ ಅಥವಾ ಆಸೆಯನ್ನು ಹಾಗೂ ಭಯವನ್ನು ಬೇರೆ ಬೇರೆ ಒಳ್ಳೊಳ್ಳೆಯ ಶಬ್ಧಗಳಲ್ಲಿಯೂ ಕೂಡಾ ವ್ಯಕ್ತಪಡಿಸುತ್ತೇವೆ.

ಆಸೆಪಡುವವನನ್ನು ಕ್ಷುಲ್ಲಕವಾಗಿ ಅಥವಾ ಕನಿಷ್ಟವಾಗಿ ನೋಡುವ ಒಂದು ರೀತಿಯ ಧಾರ್ಮಿಕ ಅಥವಾ ಆಧ್ಯಾತ್ಮಿಕ ಅಥವಾ ನೈತಿಕ ಸಂಪ್ರದಾಯ ನಮ್ಮ ದೇಶದ ಬಹುಜನರಲ್ಲಿ ಗುಪ್ತಗಾಮಿನಿಯಾಗಿ ಇದೆ. ಹಾಗಾಗಿ ಅದಕ್ಕೆ ಬೇರೊಂದು ರೀತಿಯಲ್ಲಿ ವ್ಯಕ್ತಪಡಿಸುವ ಬಗೆಗಳನ್ನು ಅನ್ವೇಷಣೆ ಮಾಡುತ್ತಿರುತ್ತಾರೆ. ನನಗೆ ಅದು ಇಷ್ಟ ಎನ್ನುವ ಮನಸ್ಥಿತಿಯಲ್ಲಿರುವಷ್ಟು ಮುಕ್ತವಾದ ಭಾವದಲ್ಲಿ ನನಗೆ ಅದನ್ನು ಕಂಡರೆ ಆಸೆ ಎಂದು ಹೇಳರು.ಧಾರ್ಮಿಕತೆಯು ಆಸೆ ಅಥವಾ ಕಾಮವನ್ನು ಖಂಡಿಸುತ್ತಾ ಬಂದಿರುವ ಪರಿಣಾಮವಿದು.

ಅದೆಷ್ಟು ಜನಕ್ಕೆ ಬೇರೆಯವರ ಮುಂದೆ ಕನ್ನಡಿಯ ಮುಂದೆ ತಮ್ಮ ತಲೆಗೂದಲನ್ನು ಸರಿಮಾಡಿಕೊಂಡು, ತಮ್ಮ ಸೌಂದರ್ಯ ನೋಡಿಕೊಂಡು ಪ್ರಶಂಸಿಸಿಕೊಂಡು ಹೋಗಲು ಸಾಧ್ಯ? ಬೇರೆಯವರ ಉಪಸ್ಥಿತಿಯಲ್ಲಿ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಲು ಬಹಳ ಜನ ನಾಚಿಕೊಳ್ಳುತ್ತಾರೆ. ಯಾರೂ ನೋಡದಿದ್ದ ಕಡೆ ವಾಹನಗಳಲ್ಲಿರುವ ಕನ್ನಡಿಗಳಲ್ಲಿ ನೋಡಿಕೊಂಡು ತಲೆ ಸರಿಮಾಡಿಕೊಳ್ಳುತ್ತಾರೆ. ಫೇಸ್ಬುಕ್ ಎಂಬ ವೇದಿಕೆ ರೂಪುಗೊಂಡ ಮೇಲೆ ಜನರ ಅರಿಮೆಯು ಅನಾವರಣಗೊಳ್ಳಲು ಸಾಧ್ಯವಾಗಿದೆ. ಏಕೆಂದರೆ, ನಾನೊಬ್ಬನೇ ಅಲ್ಲ ನನ್ನ ಮುಖವನ್ನು ನಾನಾ ಭಂಗಿಗಳಲ್ಲಿ ಹಾಕಿಕೊಂಡು ನೋಡಿಕೊಳ್ಳುವುದು. ಇನ್ನೂ ಬೇಕಾದಷ್ಟು ಜನ ಇದ್ದಾರೆ ಎಂಬ ಧೈರ್ಯ ಮತ್ತು ಸಾಮಾನ್ಯೀಕರಿಸಿಕೊಂಡ ಭಾವದಲ್ಲಿ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಯತ್ನಿಸುತ್ತಾರೆ.

ಸಾಮಾನ್ಯೀಕರಿಸಿಕೊಳ್ಳುವ ಕೀಳರಿಮೆ

ತಮ್ಮ ಯಾವುದಾದರೂ ಆಸೆ, ಭಯ ಅಥವಾ ಸಾಮಾಜಿಕವಾಗಿ ಅಷ್ಟು ಮನ್ನಣೆಗೆ ಒಳಗಾಗದ ಗುಣವನ್ನು ಸಾಮಾನ್ಯೀಕರಿಸಿಕೊಳ್ಳುವುದು, ತಮ್ಮ ಆತ್ಮರತಿಯ ಅಥವಾ ಆತ್ಮಕೇಂದ್ರಿತ ವಿಷಯವನ್ನು ಎಲ್ಲರಿಗೂ ಎಂದು ಆರೋಪಿಸುವುದು ಒಂದು ಕೀಳರಿಮೆಯ ಗುಣವೇ. ತಾವು ದೊಡ್ಡ ಮನೆಗಾಗಿ, ಸುಂದರ ಸಂಗಾತಿಗಾಗಿ, ಆಡಂಬರದ ಜೀವನಕ್ಕಾಗಿ ಹಂಬಲಿಸುವುದಿದ್ದರೆ, ಅಂತಹ ಆಸೆಯನ್ನು ಹೊಂದಿರುವ ಕೀಳರಿಮೆಯನ್ನು ಮೆಟ್ಟಲು ಅವರು ಹೇಳುವುದೇನೆಂದರೆ, “ಯಾರಿಗೆ ತಾನೇ ಆಸೆ ಇರುವುದಿಲ್ಲ?”

ತಮಗೆ ನೋವು ಅಥವಾ ಸಾವಿನಂತಹ ಯಾವುದಾದರೊಂದು ವಿಷಯದಲ್ಲಿ ಭಯವಾದರೆ, “ಯಾರಿಗೆ ತಾನೇ ಭಯವಾಗುವುದಿಲ್ಲ?” ಎನ್ನುತ್ತಾರೆ. ಅದೇ ರೀತಿಯಲ್ಲಿ ತಾವು ಕೋಪಗೊಂಡು ಜಗಳವಾಡಿದಾಗ ಅದಕ್ಕೂ, “ಹೀಗೆ ಮಾಡಿದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ? ನನ್ನ ಜಾಗದಲ್ಲಿ ನೀವೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?” ಎನ್ನುತ್ತಾರೆ. ಗಂಡ ಹೆಂಡತಿಗೆ ಹೊಡೆದಾದ ಮೇಲೆ “ಒಂದು ಹೆಂಗಸು ಹೀಗೆ ಮಾಡಿದರೆ, ಯಾವ ಗಂಡಸಿಗಾಗಲಿ ಕೋಪ ಬರಲ್ಲ?” ಎಂದು ಪ್ರಶ್ನಿಸುತ್ತಾ ಕೋಪಿಸಿಕೊಂಡು ವರ್ತಿಸಿರುವ ಕೀಳರಿಮೆಯನ್ನು ಅಡಗಿಸಲು ಯತ್ನಿಸುತ್ತಾರೆ.

ಇದೇ ಸಮಸ್ಯೆ ಇರುವುದು. ಬಯಕೆ, ಭಯ, ಕೋಪಗಳೇ ಇತ್ಯಾದಿ ಹಲವು ಗುಣಗಳು ಸಹಜವಾಗಿದ್ದರೂ ಅವುಗಳ ಬಗ್ಗೆ ಹುಟ್ಟಿಹಾಕಿರುವ ಪರಿಕಲ್ಪನೆಗಳ ದೆಸೆಯಿಂದಾಗಿ ಅವುಗಳ ಹುಟ್ಟುವಿಕೆಯಲ್ಲಿಯೂ,ಪ್ರದರ್ಶಿಸುವಿಕೆಯಲ್ಲಿಯೂ ಜಗ್ಗಾಟಗಳು ನಡೆಯುತ್ತಾ ಮಾನಸಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ. ವ್ಯಕ್ತಿಯೊಬ್ಬನ ಸಾಧನೆಯ ಮೇಲಿನ ಅಸೂಯೆ ಮತ್ತು ಆಸೆಗಳು ಅದನ್ನು ಆದರ್ಶವೆಂದೂ ನಾಜೂಕಾಗಿ ಹೇಳುವುದುಂಟು. ಗಮನಿಸಿ, ನಾವು ಹೊಂದಲು ಆಸೆ ಪಡುವುದನ್ನೇ ಆದರ್ಶ ಎನ್ನುತ್ತೇವೆ. ಹಾಗಾಗಿ ನಮ್ಮ ಮನದ ಆಸೆಯ ಬಗ್ಗೆ ಕನಿಷ್ಟಪಕ್ಷ ನಾವಾದರೂ ಬಹಳ ಮುಕ್ತವಾದ ಧೋರಣೆಗಳನ್ನು ಹೊಂದಿರಬೇಕು.

ಭಯದ ಬಂಧನದಲ್ಲಿ

ತಮ್ಮ ಆಲೋಚನೆಗಳನ್ನು ತಾವು ಯಾವ ಗುಣವಾಚಕಗಳಿಲ್ಲದೇ ನೋಡಿಕೊಳ್ಳಲು ಸಾಧ್ಯವಾದರೆ ಅವನು ಬಹಳಷ್ಟು ಅರಿಮೆಗಳಿಂದ ಮುಕ್ತಿ ಹೊಂದಬಹುದು. ಕೆಲವರಿಗೆ ತಾವು ಕೆಟ್ಟ ಕೆಲಸ ಮಾಡದೇ ಇದ್ದರೂ ಎಲ್ಲಿ ಮಾಡಿಬಿಡುತ್ತೇವೆಯೋ ಎಂದು ಹೆದರುತ್ತಿರುತ್ತಾರೆ.ಕೆಟ್ಟ ಕೆಲಸವನ್ನು ಮಾಡಿಬಿಡುತ್ತೇವೆ ಎಂಬ ಫೋಬಿಯಾ. ಒಂದು ಒಳ್ಳೆಯ ಸಮಾರಂಭ ನಡೆಯುತ್ತಿರುತ್ತದೆ.ಸಭ್ಯಸ್ಥರು ಮತ್ತು ಗೌರವಾನ್ವಿತ ವ್ಯಕ್ತಿಗಳೆಲ್ಲಾ ಸೇರಿದ್ದಾರೆ ಎಂದಿಟ್ಟುಕೊಳ್ಳಿ. ಅವನಿಗೆ ಒಂದು ಭಯವಾಗುತ್ತಿರುತ್ತದೆ. ಎಲ್ಲಿ ತಾನು ಇದ್ದಕ್ಕಿದ್ದಂತೇ ಕೆಟ್ಟ ಮಾತುಗಳನ್ನು ಆಡಿಬಿಡುತ್ತೇನೆಯೋ, ಕೆಟ್ಟದಾಗಿ ವರ್ತಿಸಿಬಿಡುತ್ತೇನೆಯೋ ಎಂದು ತಮ್ಮನ್ನು ತಾವೇ ಸಂದೇಹಿಸಿಕೊಳ್ಳುತ್ತಿರುತ್ತಾರೆ. ಅಥವಾ ಲೈಂಗಿಕವಾಗಿ ತನ್ನ ಕಾಮುಕತೆಯನ್ನು ಪ್ರದರ್ಶಿಸಿಬಿಡುತ್ತೇನೆಯೋ ಎಂಬ ಭಯವಾಗುತ್ತಿರುತ್ತದೆ.

ಅವರಿಗೆ ಹಾಗೆ ಕೆಟ್ಟದಾಗಿ ವರ್ತಿಸಲು ಇಷ್ಟವಿಲ್ಲ. ಆದರೆ ಅದನ್ನು ತಾವು ಮಾಡಿಬಿಡುತ್ತೇವೆ ಎಂಬ ಭಯ. ಹಾಗೆ ವರ್ತಿಸಿದಾಗ ತಮ್ಮನ್ನು ಕಡೆಗಣಿಸುತ್ತಾರೆ, ತಮ್ಮ ವ್ಯಕ್ತಿತ್ವಕ್ಕೆ, ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಭಯವಾಗುತ್ತಿರುತ್ತದೆ. ಅದರಿಂದ ತಮಗೆ ದೊರಕುವ ಪ್ರತಿಕ್ರಿಯೆ ಬಹಳ ನಕಾರಾತ್ಮಕವಾಗಿರುತ್ತದೆ ಎಂಬ ಭಯ. ಇನ್ನೂ ಕೆಲವರಲ್ಲಿ ತಮ್ಮಲ್ಲಿ ನಕಾರಾತ್ಮಕವಾದ ಆಲೋಚನೆಗಳು ಇವೆಯೆಂದೇ ಕೀಳರಿಮೆಯಲ್ಲಿ ಬಳಲುತ್ತಾರೆ. ಅವರಲ್ಲಿ ಇದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಆದರೂ ಹೆದರುತ್ತಿರುತ್ತಾರೆ. ಭಯ ಮತ್ತು ಕೀಳರಿಮೆ; ಈ ಎರಡೂ ಸಾಮಾನ್ಯವಾಗಿ ಸ್ನೇಹಿತರು. ಆದರೆ ತಮಾಷೆ ಏನೆಂದರೆ ತಾವೇನೋ ಮಾಡಿಬಿಡುತ್ತೇವೆ, ಮಾಡಿಬಿಡುತ್ತೇವೆ ಎಂದು ತಮ್ಮಿಂದ ನಕಾರಾತ್ಮಕವಾದುದು ಸಂಭವಿಸಿಬಿಡುತ್ತದೆ ಎಂದು ಹೆದರುತ್ತಿರುತ್ತಾರಲ್ಲಾ, ಸಾಮಾನ್ಯವಾಗಿ ಅವರು ಅಂತವನ್ನೇನೂ ಮಾಡುವುದೇ ಇಲ್ಲ. ಬರೀ ಹೆದರಿಕೊಳ್ಳುತ್ತಿರುತ್ತಾರೆ ಅಷ್ಟೇ.

ವಿತರ್ಕಕ್ಕೆ ಪ್ರತಿಪಕ್ಷ

ಇದರಿಂದ ಹೊರಗೆ ಬರುವುದು ಹೇಗೆ? ಪತಂಜಲಿ ಯೋಗಸೂತ್ರದಲ್ಲಿ ಒಂದು ಸುಂದರವಾದ ಸೂತ್ರವಿದೆ. “ವಿತರ್ಕ ಭಾವನೇ ಪ್ರತಿಪಕ್ಷ ಭಾವನಾಂ” ಎಂದು. ಅಂದರೆ, ಬೇಡದ, ಕೆಟ್ಟದಾದ ಭಾವನೆ ಉಂಟಾದಾಗ, ಅದಕ್ಕೆ ವಿರುದ್ಧವಾದ ಭಾವನೆಯನ್ನು ತಂದುಕೊಳ್ಳುವುದು. ಮೊದಲು ತಮ್ಮಲ್ಲಿ ಬಂದಿರುವ ಭಾವನೆ ಅಥವಾ ವಿಚಾರವನ್ನು ಗಮನಿಸಬೇಕು. ಅದು ಬಂದಿರುವುದನ್ನು ಒಪ್ಪಿಕೊಳ್ಳಬೇಕು. ನಂತರ ಅದಕ್ಕೆ ವಿರುದ್ಧವಾದ ಸಕಾರಾತ್ಮಕವಾದ ಆಲೋಚನೆಯನ್ನು ಮಾಡಬೇಕು. ಇಷ್ಟು ಗಮನಿಸಿಕೊಳ್ಳೋಣ. ನಮಗೆ ಯಾವುದು ಆಗಬಾರದು ಎಂಬುದಿರುತ್ತದೆಯೋ ಆ ಆಲೋಚನೆ ಬಂದಾಗ ತಿರಸ್ಕರಿಸೋಣ. ಅದರ ಬದಲಾಗಿ ಯಾವುದು ಆಗಬೇಕು ಎಂದು ಆಸೆ ಪಡುತ್ತೇವೆಯೋ ಅದನ್ನು ಅದರ ಬದಲಾಗಿ ನೆನೆಸಿಕೊಳ್ಳೋಣ. ಉದ್ದೇಶ ಪೂರ್ವಕವಾಗಿ ನೆನೆಸಿಕೊಳ್ಳೋಣ.

ಆಸೆ ಅಗತ್ಯವೇ? ಭಯಕ್ಕೆ ಕಾರಣವಿದೆಯೇ?

ಬಯಕೆ ಮತ್ತು ಭಯ; ಈವೆರಡೂ ನಮಗೆ ಯಾವಾಗಲೇ ಆಗಲಿ ಮಾನಸಿಕ ಸಮಸ್ಯೆಗಳಾಗಿ ಕಾಡತೊಡಗಿದಾಗ ಮಾಡಬೇಕಾಗಿರುವುದೇ ಇಷ್ಟು. ಮೊದಲು ಬಯಕೆಯು ಅಗತ್ಯವೇ ಅಥವಾ ಅನಗತ್ಯವೇ ಎಂಬ ಆಲೋಚನೆ. ಅದೇ ರೀತಿಯಲ್ಲಿ ತಾನು ಭಯಪಡುವುದಕ್ಕೆ ಕಾರಣವಿದೆಯೇ? ನೋಡಿ, ಅನಗತ್ಯವಾದ ಆಸೆಯನ್ನು ಗುರುತಿಸಿದರೆ, ಅಕಾರಣವಾದ ಭಯವನ್ನು ಕಂಡುಕೊಂಡರೆ ಅರ್ಧ ಮನೋರೋಗ ಕಡಿಮೆಯಾಯಿತೆಂದೇ ಅರ್ಥ.ಅರಿವಿನ ಮೂಲಕ ಅರಿಮೆಗಳನ್ನು ತೊಡೆದು ಹಾಕುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆಂದೇ ಅರ್ಥ.

ಬಹಳಷ್ಟು ಜನ ತಮ್ಮಲ್ಲಿ ಸಮಸ್ಯೆಯು ಇಲ್ಲವೇ ಇಲ್ಲ ಎಂಬಂತೆ ತಮ್ಮ ಮಾನಸಿಕ ಸಮಸ್ಯೆಗಳನ್ನು, ಅರಿಮೆಗಳನ್ನು ಒಪ್ಪಿಕೊಳ್ಳದೇ ನಿರಾಕರಿಸುತ್ತಿರುತ್ತಾರೆ. ಈ ಬಗೆಯ ಸಮಸ್ಯೆಗಳ ಬಗ್ಗೆ, ಅರಿಮೆಗಳ ಬಗ್ಗೆ ತಿಳುವಳಿಕೆ ಬಂದಾಗ ತಮ್ಮಲ್ಲಿ ಅದನ್ನು ಗುರುತಿಸಿಕೊಳ್ಳುವ ಬದಲು ತಾವು ವ್ಯವಹರಿಸುವ ಸಂಬಂಧಗಳಲ್ಲಿ ಅವುಗಳನ್ನು ಗುರುತಿಸುತ್ತಿರುತ್ತಾರೆ. ಅಲ್ಲೂ ಒಂದು ಸಮಸ್ಯೆ ಇರುತ್ತದೆ. ಯಾವ ಸಂಬಂಧಗಳಿಂದ ತಮಗೆ ಹಿತ ಸಿಗುತ್ತಿರುತ್ತದೆಯೋ ಅವರಲ್ಲಿ ತೊಂದರೆ ಇದ್ದರೂ ಅದನ್ನು ಒಳ್ಳೆಯ ರೀತಿಯಲ್ಲಿ ನೋಡುವುದೋ ಅಥವಾ ಅನುಕಂಪದಿಂದ ನೋಡುವುದೋ ಮಾಡುತ್ತಾರೆ. ಒಂದು ವೇಳೆ ಅವರ ಸಂಬಂಧದಿಂದ ಹಿತವಿಲ್ಲದಿದ್ದ ಪಕ್ಷದಲ್ಲಿ ವ್ಯಕ್ತಿಯೇ ಒಂದು ಪೀಡೆಯಾಗಿ ಪರಿಗಣಿಸುತ್ತಾರೆ.

ಇದು ಬಹಳ ಸಾಮಾನ್ಯ. ಮಗುವಾಗಿದ್ದಾಗಿನಿಂದ ರೂಢಿಯಲ್ಲಿರುವುದು. ನಮ್ಮಲ್ಲಿ ಗಾದೆಯೊಂದಿದೆ “ಮಕ್ಕಳು ಇಕ್ಕಿದವ್ರ ಕಡೆ” ಅಂತ. ಅದು ನಿಜ.ಯಾರೋ ಹೆಂಗಸು, ಅತ್ತೆಯೋ, ಅಜ್ಜಿಯೋ, ಪಕ್ಕದ ಮನೆಯಾಕೆಯೋ ನಿಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರೆಂದರೆ ತಾಯಿಗಿಂತ ಮಿಗಿಲಾಗಿ ನೋಡಿಕೊಂಡರು ಎನ್ನುತ್ತೀರಿ. ಜಡ್ಡು ಬಿದ್ದಾಗ ನೋಡಿಕೊಳ್ಳುವುದು, ಹಸಿವಾದಾಗ ಉಣಿಸುವುದು, ಗಲೀಜಾದಾಗ ತೊಳೆಯುವುದು; ಹೀಗೆ ಹಲವು ಕೆಲಸಗಳನ್ನು ದೂರು ದುಮ್ಮಾನಗಳಿಲ್ಲದೇ ಮಾಡಿದವರಾರೇ ಆಗಲಿ ತಾಯಿ ಎಂದು ಪರಿಗಣಿಸುವ ಪ್ರಯತ್ನ ಮಾಡುತ್ತಾರೆ. ಒಟ್ಟಾರೆ ಹಿತ ಮತ್ತು ಸುಖವಿರುವ ಸಂಬಂಧಗಳೇ ಮಾನ್ಯ. ತಾಯಿ ಹಾಗಿರಲಿ ಇಲ್ಲದಿರಲಿ, ತಾಯಿ ಎಂದರೆ ಈ ಬಗೆಯ ವ್ಯಕ್ತಿತ್ವ ಮತ್ತು ಅವಳ ಕೆಲಸಗಳು ಇಂತವು ಅಂತ.

ದುಃಖಿರಾಮಿ

ಇನ್ನೂ ಕೆಲವರಲ್ಲಿ ಹುಸಿ ಕೀಳರಿಮೆ ಇರುತ್ತದೆ. ಇವರ ಕತೆ ಏನೆಂದರೆ, ತಮ್ಮ ಬಗ್ಗೆ, ಇತರರ ಬಗ್ಗೆ, ಇಡೀ ಮನುಷ್ಯ ಕುಲದ ಬಗ್ಗೆ ‘ಸರಿ ಇಲ್ಲ’ ಎಂಬ ಆಲೋಚನೆಯೇ ಮೂಲಭೂತವಾಗಿರುತ್ತದೆ. ಇದಕ್ಕೇನೂ ಕಾರಣಬೇಡ. ಯಾರಿಗೆ ಯಾರೂ ಆಗಲ್ಲ ಎನ್ನುವುದು ಇವರ ಸಾಮಾನ್ಯ ಘೋಷವಾಕ್ಯ. ಒಳ್ಳೆಯ ಗಂಡ, ಹೆಂಡತಿ, ಮಕ್ಕಳು, ತಂದೆ ತಾಯಿಯೇ ಇರಲಿ, ಇವರ ಮಾತು ಏನೆಂದರೆ, “ಎಲ್ರೂ ಅವರವರ ಕೆಲಸ ಆಗಬೇಕೂಂದ್ರೇ ಚೆನ್ನಾಗಿರುತ್ತಾರೆ. ಯಾರಿಗೆ ಯಾರೂ ಆಗಲ್ಲ” ಎಂದು ಅಸಂತೋಷದಲ್ಲಿಯೇ ಇರುತ್ತಾರೆ. ದುಃಖಿರಾಮಿಗಳಿವರು. ತಮ್ಮಿಂದಾಗಲಿ, ತಮ್ಮೊಡನೆ ಇರುವ ಇತರರಿಂದಾಗಲಿ ಏನೂ ತೊಂದರೆಯಾಗಿರುವುದಿಲ್ಲ ಆದರೂ ಸಂತೋಷದ ಗೀತೆ ಹಾಡುವುದೇ ಇಲ್ಲ. ಸದಾ ಶೋಕಗೀತೆಯೇ. ಏನಾದರೂ ಕೇಳಿ, ಅವರು ಎತ್ತುವುದು ಅಪಸ್ವರವೇ.

ಅಲ್ಲೊಂದು ಅಜ್ಜಿ ಇತ್ತು. ಅವರ ಮುಂದೆ ಅವರ ಎರಡು ಮೊಮ್ಮಕ್ಕಳು ಆಡುತ್ತಿದ್ದರು. ಆದರೆ ಅಜ್ಜಿಯ ಮುಖದಲ್ಲಿ ಕಾರ್ಮೋಡ. “ಯಾಕಜ್ಜೀ ಬೇಜಾರಲ್ಲಿದ್ದೀರಾ? ಮೊಮ್ಮಕ್ಕಳನ್ನು ನೋಡಿ. ಎಷ್ಟು ಚೆನ್ನಾಗಿ ಆಡ್ತಿದ್ದಾರೆ. ಖುಷಿ ಪಡಿ” ಎಂದರೆ, “ಏನು ಮೊಮ್ಮಕ್ಕಳೋ ಏನೋ. ಏನು ಖುಷಿನೋ ಏನೋ. ಇವತ್ತು ಎಲ್ಲಾ ಖುಷಿಯಾಗೇ ಇದ್ದಾರೆ. ರೆಕ್ಕೆಪುಕ್ಕ ಬಂದ ಮೇಲೆ ಅವರವರ ಪಾಡು ಅವರವರು ನೋಡಿಕೊಂಡು ಹೋಗುತ್ತಾರೆ” ಇದು ಅವರ ಮಾತು. ಬೂಂದಿ ತಿನ್ನುವಾಗ ಭೇದಿಯಾಗುವ ಭಯ.

ಸಹೋದ್ಯೋಗಿಗಳೊಂದಿಗೆ ಯಾವ ತಂಟೇ ತಕರಾರು ಇಲ್ಲದಿದ್ದರೂ, ಇಬ್ಬರೂ ಕಿತ್ತಾಡಿಕೊಂಡು ಬೇರಾಗುವ ಅಥವಾ ಕೆಲಸ ಕಳೆದುಕೊಳ್ಳುವ ಭಯ. ಅದರಲ್ಲೂ ತನ್ನ ಕಾರಣದಿಂದ ಅಂತ. ಇನ್ನೂ ವಿಪರೀತಕ್ಕೆ ಹೋಗುವ ಇವರ ಮನೋಭಾವವೆಂದರೆ, ತಾವಿರುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ, ಅಥವಾ ಯಾರಿಂದಾದರೂ ಏನಾದರೂ ಘಟಿಸಿದರೆ, ಇದೆಲ್ಲಾ ತನ್ನಿಂದಲೇ ಆಗಿದ್ದು ಎಂದು ದುಃಖಿಸುವುದು. ಕೆಲವೊಮ್ಮೆ ನೇರವಾಗಿ ಹೇಳುತ್ತಾರೆ. ಕೆಲವೊಮ್ಮೆ ಹೇಳದೆಯೇ ಒಳಗೊಳಗೇ ನರಳುತ್ತಿರುತ್ತಾರೆ. ಆದರೆ ವಾಸ್ತವದಲ್ಲಿ ಅವರಿಗೂ ಅಲ್ಲಿ ಘಟಿಸಿರುವ ಅಹಿತಕರ ಸಂಗತಿಗೂ ಏನೂ ಸಂಬಂಧವೇ ಇರುವುದಿಲ್ಲ.

ಈ ಮನೋಭಾವವನ್ನು ಕನ್ನಡ ಸಿನಿಮಾವೊಂದರಲ್ಲಿ ಹಾಸ್ಯನಟ ಉಮೇಶ್ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. “ಅಯ್ಯೋ, ನಾನು ಅವರ ಮನಸ್ಸಿಗೆ ನೋವು ಮಾಡಿಬಿಟ್ಟೆನೇ? ಅಯ್ಯೋ, ನನ್ನಿಂದಾಗಿ ಅವರಿಗೆ ಹೀಗೆ ತೊಂದರೆಯಾಗಿಬಿಟ್ಟಿತೇ” ಎಂದು ಎಲ್ಲರಿಗೂ ಕಿರಿಕಿರಿ ಮಾಡುತ್ತಿರುತ್ತಾರೆ. “ನಿನ್ನಿಂದ ನಮಗೇನೂ ತೊಂದರೆ ಆಗಲಿಲ್ಲ. ನೀನು ಹೀಗೆ ಪದೇ ಪದೇ ಅನ್ನುವುದರಿಂದ ತೊಂದರೆ, ಕಿರಿಕಿರಿಯಾಗುತ್ತಿದೆ” ಎಂದು ಅವರ ಸಹ ಕಲಾವಿದರು ಹೇಳುತ್ತಿರುತ್ತಾರೆ. ಅದು ನಿಜ. “ಅಯ್ಯೋ, ನಾನು ಹೀಗೆ ಮಾಡಿಬಿಟ್ಟೆನೇ? ನಿಮಗೆ ತೊಂದರೆ ಕೊಟ್ಟುಬಿಟ್ಟೆನೇ!” ಎನ್ನುವ ಅರಿಮೆಯಿಂದಾಗಿ ಇಲ್ಲದಿರುವ ಕಿರಿಕಿರಿ ಇತರರಲ್ಲಿ ಹುಟ್ಟುತ್ತಿರುತ್ತದೆ. ಇದರಿಂದ ಹೊರಗೆ ಬರುವುದಕ್ಕೆ ಒಂದು ಸೂಕ್ತವಾದ ಉಪಾಯವೆಂದರೆ, ತಾವು ಮಾಡಿರುವಂತಹ ತಪ್ಪುಗಳನ್ನು ಪದೇಪದೇ ಸ್ಮರಣೆಗೆ ತಂದುಕೊಳ್ಳದೇ ಇರುವುದು. ಮುಖ್ಯವಾಗಿ ಮುಕ್ತವಾಗಿ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ ಮೇಲೆ, ತಮ್ಮನ್ನು ತಾವು ಕ್ಷಮಿಸಿಕೊಳ್ಳುವುದು. ತಮ್ಮನ್ನು ತಾವು ಕ್ಷಮಿಸಿಕೊಳ್ಳದಿದ್ದರೆ, ಇತರರು ಕ್ಷಮಿಸಿದರೂ ಅಪರಾಧದ ಅರಿಮೆ ಉಳಿದೇ ಉಳಿದಿರುತ್ತದೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending