ನೆಲದನಿ
ಹಂಪಿಯ ಚಕ್ರತೀರ್ಥದ ಕಡೆಗೆ ಕಂಪಿಲ ಸ್ವಾಮಿಯ ನಡಿಗೆ
- ಡಾ.ಸಿ.ಬಿ.ಅನ್ನಪೂರ್ಣಜೋಗೇಶ್,ಪ್ರಾಂಶುಪಾಲರು, ನ್ಯಾಷನಲ್ ಕಾಲೇಜು, ಬಸವನಗುಡಿ,ಬೆಂಗಳೂರು
ಜಗತ್ತಿನ ಬೇರೆ ಬೇರೆ ಭಾಗಗಳ ನಡುವೆ ಇರುವ ಎಲ್ಲಾ ಅಡೆತಡೆಗಳನ್ನು ದಾಟಿ ಇಡೀ ಭೂಗೋಳ ಒಂದೇ ಎಂದು ಸಾರುತ್ತಾ ‘ಜಾಗತೀಕರಣ’ದ ಹೆಸರಿನಲ್ಲಿ ಆಧುನಿಕ ಅವಿಷ್ಕಾರಗಳಿಗೆ ಇಡೀ ವಿಶ್ವವನ್ನೇ ಅಣಿ ಮಾಡುವ ಧಾವಂತದ ನಡುವೆ ಇಂದು ನಾವಿದ್ದೇವೆ. ಇಂತಹ ವರ್ತಮಾನದಲ್ಲಿ ನಮ್ಮ ನಮ್ಮ ದೇಸೀ ನೆಲೆಗಳ ಕಡೆ, ಅದರ ವಿಶೇಷವಾದ ಸಾಂಸ್ಕೃತಿಕ ವಿನ್ಯಾಸಗಳ ಕಡೆ ನಾವು ತಿರುಗಿನೋಡುವಂತೆ ಮಾಡುವ ಅನೇಕ ಆಚರಣೆಗಳೂ ನಮ್ಮಲ್ಲಿವೆ.
ಈ ಮೂಲಕ ಇತಿಹಾಸದ ಜಾಡನ್ನು ಮತ್ತೆ ಶೋಧಿಸುವಂತೆ, ಗುರುತಿಸುವಂತೆ ಮಾಡುವ, ಈ ಕುರಿತು ಆಸಕ್ತಿ ತಳೆಯುವಂತೆ ಹಾಗೂ ಸಾಂಸ್ಕೃತಿಕ ಎಚ್ಚರವನ್ನು ಉಂಟುಮಾಡುವ ಈ ಆಚರಣೆಗಳು ನಮ್ಮ ನಡುವೆ ಸದ್ದಿಲ್ಲದಂತೆ ಜರುಗಿ ಹೋಗುತ್ತಿರುತ್ತವೆ. ಹಾಗೆಯೇ ಮತ್ತೆ ಮತ್ತೆ ಇವುಗಳ ಆವರ್ತನವೂ ಆಗುತ್ತಿರುತ್ತದೆ. ಇಂತಹ ಅನೇಕ ದೇಸೀ ಆವರ್ತನಗಳು ಬಹಳ ಮುಖ್ಯವಾಗಿ ಬುಡಕಟ್ಟಿನ ಬದುಕಿನ ಸಾಂಸ್ಕೃತಿಕ ವಿನ್ಯಾಸಗಳಾದ ಆಚರಣೆಗಳು, ನಂಬಿಕೆಗಳನ್ನು ಸ್ಪಷ್ಟಪಡಿಸುತ್ತವೆ. ಸರಿಸುಮಾರು ಜಗತ್ತಿನ ಎಲ್ಲಾ ಆದಿಮ ಸಂಸ್ಕೃತಿಗಳಲ್ಲಿ ಇಂತಹ ಚಹರೆಗಳನ್ನು ಗುರುತಿಸಬಹುದಾಗಿದೆ.
ಕನ್ನಡ ನೆಲದಲ್ಲಿ ಮಿಳಿತಗೊಂಡ ತೆಲುಗು ಭಾಷಿಕರಾಗಿರುವ ಮಧ್ಯಕರ್ನಾಟಕದಲ್ಲಿ ವ್ಯಾಪಕವಾಗಿ ನೆಲೆಸಿರುವ ಮ್ಯಾಸಬೇಡ/ಮ್ಯಾಸನಾಯಕ ಬುಡಕಟ್ಟು ಇದರಿಂದ ಹೊರತಾಗಿಲ್ಲ. ಇದು ದ್ರಾವಿಡ ಮೂಲದ ಬುಡಕಟ್ಟು ಎಂಬುದನ್ನು ಇವರಲ್ಲಿರುವ ಚಹರೆಗಳ ಮೂಲಕ ಗುರುತಿಸಬಹುದಾಗಿದೆ.
ಮ್ಯಾಸ ನಾಯಕ ಬುಡಕಟ್ಟು ಸಮುದಾಯವನ್ನು ದ್ರಾವಿಡ ಮೂಲದಿಂದ ಗುರುತಿಸುವುದಾದರೆ, ಈ ದ್ರಾವಿಡ ಪರಂಪರೆಯಲ್ಲಿ ಮುಖ್ಯವಾಗಿರುವ ನಿಸರ್ಗಾರಾಧನೆ ತದನಂತರದಲ್ಲಿ ಪಶುಪತಿ ಅರ್ಥಾತ್ ಶಿವನ ಆರಾಧನೆಯನ್ನು ಮಾಡುತ್ತಿದ್ದ ಸಮುದಾಯವಿದು ಎಂಬುದನ್ನು ಇಂದಿಗೂ ಇವರಲ್ಲಿರುವ ಆರಾಧನೆಗಳು ಸ್ಪಷ್ಟಪಡಿಸುತ್ತವೆ. ಒಂಟಿಕೊAಬಿನ ಬಲ್ಲಾವಿನ ಗೊರಸಿನಲ್ಲಿ ಹುಟ್ಟಿದವನೇ, ನಮ್ಮ ಕುಲದ ಮೂಲಪುರುಷ ಎಂದು ಹೇಳಿಕೊಳ್ಳುವಲ್ಲಿ ಬುಡಕಟ್ಟು ಸಮುದಾಯದ ಶೈವಾರಾಧನೆ ಅರ್ಥಾತ್ ಪಶುಪತಿಯ ಆರಾಧಕರಿವರು ಎಂದು ಸ್ಪಷ್ಟವಾಗುತ್ತದೆ. ಬೇಟೆಯ ಮೂಲದಿಂದ ಬಂದವರಿವರು ಎಂಬುದಕ್ಕೂ ಅನೇಕ ನಿದರ್ಶನಗಳಿವೆ.
ಬಿಲ್ಲು-ಬಾಣ, ಈಟಿ-ಬರ್ಜಿಗಳನ್ನೇ ತಮ್ಮ ದೇವರು ಎಂದು ಪೂಜಿಸುವ ಗುಂಪುಗಳೂ ಸಮುದಾಯದಲ್ಲಿವೆ. ಬೇಟೆ ಮೂಲದಿಂದ ಕ್ರಮೇಣ ಪಶುಪಾಲನೆಯ ಕಡೆ ಈ ಬುಡಕಟ್ಟು ಸಮುದಾಯ ಸ್ಥಿತ್ಯಂತರಗೊಂಡಿದೆ. ಮೂಲತ: ಉತ್ತರ ಭಾರತದಲ್ಲಿದ್ದು ಕ್ರಮೇಣ ದಕ್ಷಿಣಕ್ಕೆ ಚಲಿಸಿ, ಗೋದಾವರಿ ಪ್ರಾಂತ್ಯದಲ್ಲಿ ತಮ್ಮ ದನಕರುಗಳೊಂದಿಗೆ ತಮ್ಮ ಪೆಟ್ಟಿಗೆ ದೇವರುಗಳೊಂದಿಗೆ (ಬೆತ್ತದ ಬುಟ್ಟಿಯಲ್ಲಿ ಸಾಲಿಗ್ರಾಮವನ್ನೋ, ಅಥವಾ ತಮ್ಮ ಪೂರ್ವಿಕರು ಬಳಸುತ್ತಿದ್ದ ಅಮೂಲ್ಯ ವಸ್ತುವನ್ನೋ ಇಟ್ಟು ಅವರ ಹೆಸರಿನಲ್ಲೇ ಪೂಜಿಸುವ ಕ್ರಮವಿದು) ಅಲೆಯುತ್ತಾ ನಲಮಲೈ ಅರಣ್ಯ ಪ್ರದೇಶದಲ್ಲಿ ಅಲೆದಾಡಿ ನಂತರ ಆಂಧ್ರದ ಕಾಟಮರಾಜನ ಅನುಯಾಯಿಗಳಾಗಿದ್ದಿರಬಹುದು ಎಂದು ಊಹಿಸಲು ಪೂರಕ ಆಧಾರಗಳು ದೊರೆಯುತ್ತವೆ.
ಬಹುದೊಡ್ಡ ದನಗಾಹಿ ಕಾಟಮರಾಜನ ಪತನಾನಂತರ ಇವರು ಶ್ರೀ ಶೈಲದ ನಲಮಲೈ ಗುಡ್ಡಗಾಡುಗಳಲ್ಲಿ, ತಿರುಪತಿ ಪ್ರಾಂತ್ಯದಲ್ಲಿ ಅಲೆದು ನಂತರ ಆನೆಗೊಂದಿಯ ಕಿರುಕಿಂಡಿಯ ಮೂಲಕ ಕರ್ನಾಟಕವನ್ನೇ ಪ್ರವೇಶಿಸಿದರು ಎಂದು ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ಬಖೈರುಗಳು, ಹೆಳವ ಸಮುದಾಯದವರು ಮತ್ತು ಮ್ಯಾಸಬೇಡ ಸಮುದಾಯದ ಹಿರಿಯರು ಹೇಳುವ ಮೌಖಿಕ ಕಥನಗಳು ಮತ್ತು ಆಚರಣೆಗಳು ಸ್ಪಷ್ಟಪಡಿಸುತ್ತವೆ.
ಶಿವನನ್ನು ಮತ್ತು ತಾವು ಸಾಕುತ್ತಿದ್ದ, ಈ ಮೂಲಕ ತಮಗೆ ಬದುಕನ್ನು ಕಟ್ಟಿ ಕೊಟ್ಟ ದನಕರುಗಳನ್ನು ಇವರು ದೈವವೆಂದೇ ಇಂದಿಗೂ ಪೂಜಿಸುತ್ತಾರೆ. ಮತ್ತು ತಮ್ಮ ಪೂರ್ವಿಕರನ್ನು ಅಂದರೆ ಹಿರಿಯರನ್ನು ‘ಮುತ್ತಯ್ಯಗಳು’’ ಎಂದು ಕರೆದು ತಮ್ಮ ದನಗಳ ಗುಂಪಿನೊಂದಿಗೆ ಸಮೀಕರಿಸಿ ದೈವವೆಂದೇ ನಂಬಿ ಪೂಜಿಸುವ ಪರಿಪಾಠ ಇಂದಿಗೂ ಇದೆ. ದಕ್ಷಿಣ ಕರ್ನಾಟಕದಲ್ಲಿ ರಾಮಾನುಜಾಚಾರ್ಯರು ಅನೇಕ ತಳ ಸಮುದಾಯಗಳಿಗೆ ವೈಷ್ಣವ ದೀಕ್ಷೆಯನ್ನು ಕೊಟ್ಟು, ಕಾವೇರಿ ನದಿಯ ಜಾಡಿನಲ್ಲಿ ಅಲ್ಲಲ್ಲಿ ರಂಗನಾಥಸ್ವಾಮಿಯ ದೇವಾಲಯಗಳನ್ನು ಸ್ಥಾಪಿಸಿದರು.
ಈ ಎಲ್ಲಾ ದೇವಾಲಯಗಳಿಗೆ ಪ್ರವೇಶ ಪಡೆಯುವ ಅವಕಾಶವನ್ನು ವೈಷ್ಣವ ದೀಕ್ಷೆ ಅಂದರೆ ದಾಸ ದೀಕ್ಷೆ ಪಡೆದವರಿಗೆ ಒದಗಿಸಿಕೊಟ್ಟರು. ತದನಂತರ ಮತ್ತೆ ಜಾತಿ ವ್ಯವಸ್ಥೆಯೇ ಮೇಲುಗೈ ಸಾಧಿಸಿ ಈಗ ವರ್ಷದಲ್ಲಿ ಒಂದು ದಿನ ಮಾತ್ರ ಈ ದೇವಾಲಯಗಳಿಗೆ ಎಲ್ಲರಿಗೂ ಪ್ರವೇಶಕೊಟ್ಟು ಉಳಿದಂತೆ ದೂರವಿಡುವ ಸಂಪ್ರದಾಯ ಮುಂದುವರಿಯುತ್ತಿರುವುದು ಜಗತ್ ಜಾಹೀರಾಗಿರುವ ಸಂಗತಿಯಾಗಿದೆ. ಇಲ್ಲಿ ರಾಮಾನುಜಾಚಾರ್ಯರು ದೀಕ್ಷೆ ಕೊಟ್ಟಂತೆ ತಿರುಪತಿ, ಶ್ರೀ ಶೈಲಂನಲ್ಲಿ ಅಹೋಬಿಲಂ ಪ್ರಾಂತ್ಯದಲ್ಲಿ ಅಲೆಯುತ್ತಿದ್ದ ಈ ಮ್ಯಾಸ ಬೇಡರಲ್ಲಿ ಹಲವರಿಗೆ ಮುಖ್ಯವಾಗಿ ಮಂದಲ ಗೋತ್ರದವರಿಗೆ ರಾಮಾನುಜಾಚಾರ್ಯರ ಸಮಕಾಲೀನ ಮತ್ತು ಶಿಷ್ಯರಾಗಿದ್ದ ತಾತಾಚಾರ್ಯರು ದಾಸದೀಕ್ಷೆ ನೀಡುತ್ತಾರೆ.
ಹೀಗೆ ದೀಕ್ಷೆ ಪಡೆದವರು ವೈಷ್ಣವರಂತೆಯೇ ನಾಮಧಾರಣೆ ಮಾಡಿಕೊಂಡು ಶಂಖ-ಜಾಗಟೆ, ಜೋಪಾಳ ಬುಟ್ಟಿ (ಚಾನಾಸಿ), ಗರುಡಗಂಭ ಇವುಗಳನ್ನು ಪೂಜಿಸುವ ಕ್ರಮವನ್ನು ಅಳವಡಿಸಿಕೊಳ್ಳುತ್ತಾರೆ. ತಮ್ಮ ಪೆಟ್ಟಿಯಲ್ಲಿ ನರಸಿಂಹ ಸಾಲಿಗ್ರಾಮಗಳನ್ನು ಇರಿಸಿ ತಮ್ಮ ಈ ದೇವರನ್ನು ಪೆದೋಬಲಯ್ಯ ಎಂದು ಕರೆದುಕೊಳ್ಳುತ್ತಾರೆ. ನಂತರ ಅಹೋಬಿಲಂನಲ್ಲಿ ಪ್ರಚಲಿತವಿರುವ ನರಸಿಂಹಸ್ವಾಮಿ ಮತ್ತು ಚಂಚಲಕ್ಷ್ಮಿಗೆ ಸಂಬಂಧಿಸಿದ ಪ್ರೇಮ ಪುರಾಣವೇ ಪೆದೋಬಳೇಶನ ಪುರಾಣವಾಗಿ ಬಳಕೆಗೊಳ್ಳುತ್ತದೆ. ನರಸಿಂಹಸ್ವಾಮಿ ಸಾಲಿಗ್ರಾಮವನ್ನು ತಾವು ಹೊತ್ತು ಕೊಂಡೊಂಯ್ಯೊತ್ತಿದ್ದ ಬಿದಿರಿನ ಬುಟ್ಟಿಯಲ್ಲಿಟ್ಟು, ಆ ಬುಟ್ಟಿಗೊಂದು ರೇಷ್ಮೆ ವಸ್ತುವನ್ನು ಸುತ್ತಿ ಅದನ್ನು ಬೆಳ್ಳಿಯ ಡಾಬು ಮತ್ತಿತರ ಆಭರಣಗಳಿಂದ ಅಲಂಕರಿಸಿ ತಾವು ವಸತಿಗೆ ನಿಂತ ಕಡೆ ಗುಡಿಸಲು ಹಾಕಿ (ಪದಿ) ಮಂದಾಸನದ ಮೇಲೆ ಇರಿಸಿ ಪೂಜಿಸುತ್ತಾ ಬಂದರು.
ಇದನ್ನು ಅಹೋಬಿಲಂ ದೇವರು ಎಂದೇ ಕರೆದರು. ಇದೇ ಕ್ರಮೇಣ ಉಚ್ಛಾರಣಾ ಸೌಕರ್ಯಕ್ಕನುಗುಣವಾಗಿ ಸರಳೀಕರಣಗೊಂಡು ಓಬಳದೇವರಾಯಿತು. ಮೊದಲು ದಾಸದೀಕ್ಷೆ ಪಡೆದು ಸ್ಥಿತ್ಯಂತರಕ್ಕೊಳಗಾದ ಕಾರಣಕ್ಕಾಗಿ ಪೆದೋಬಳಯ್ಯ ಎಂದೇ ಕರೆದರು. ಈ ಗುಂಪಿನಿAದ ಒಡೆದು ಹೋದ ಗುಂಪುಗಳು ಆಹಾರವನ್ನರಸುತ್ತಾ, ಕೆಲವೊಮ್ಮೆ ವೈಮನಸ್ಯ ಕಾರಣವಾಗಿ, ತಾವು ನೆಲೆಯನ್ನು ಕಂಡುಕೊAಡ ಸ್ಥಳಕ್ಕನುಗುಣವಾಗಿ ತಮ್ಮ ಈ ದೇವರನ್ನು ನೆಲಜರುವೋಬಳದೇವರು, ಗೆದ್ದಲಕಟ್ಟಿ ಓಬಳದೇವರು ಎಂದು ಇತ್ಯಾದಿಯಾಗಿ ಕರೆದು ಇಂದಿಗೂ ಪೂಜಿಸುತ್ತಾರೆ. ಮಧ್ಯಕರ್ನಾಟಕದಾದ್ಯಂತ ಅನೇಕ ಮ್ಯಾಸರ ಹಟ್ಟಿಗಳಲ್ಲಿ ಓಬಳದೇವರ ಗುಡಿಗಳಿವೆ. ಪೆದೋಬಳೇಶನ ಈ ಮೂಲ ಮಂದಲ ಗುಂಪು ತಮ್ಮ ದನಕರುಗಳನ್ನು ಸಾಕುವ ನಿಮಿತ್ತ ಹುಲ್ಲುಗಾವಲುಗಳನ್ನು ಅರಸುತ್ತಾ, ಅಲೆಯುತ್ತಿದ್ದು, ತಮ್ಮೊಂದಿಗೆ ತಮ್ಮ ಈ ಪೆಟ್ಟಿಗೆ ದೇವರನ್ನು ಅಂದರೆ ಈ ಪೆದೋಬಳ ಸ್ವಾಮಿಯನ್ನು ಹೊತ್ತು ತಿರುಗುತ್ತಿದ್ದರು.
ಅಹೋಬಿಲಂ ಪ್ರಾಂತ್ಯ ಅಂದರೆ ನಲಮಲೈ ಬೆಟ್ಟಕಾಡುಗಳಲ್ಲಿ ಚಲಿಸುತ್ತಾ ಬಂದು ಕುಮ್ಮಟದುರ್ಗದ ವೀರ ಕಂಪಿಲ ರಾಯನ ಪ್ರಾಂತ್ಯ ಪ್ರವೇಶಿಸುತ್ತಾರೆ. ಕುಮ್ಮಟದುರ್ಗದ ಅರಸರೂ ಕೂಡ ಬೇಡರೇ ಎಂಬುದನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ. ಈತನ ಮಗನೇ ಕುಮಾರರಾಮ. ಕುಮ್ಮಟದುರ್ಗವೇ ಇವರ ರಾಜಧಾನಿಯಾಗಿತ್ತು. ಕುಮ್ಮಟದುರ್ಗದ ಅರಣ್ಯ ಪ್ರದೇಶಗಳಲ್ಲಿ ನದೀ ಬಯಲುಗಳಲ್ಲಿ ಈ ಪೆದೋಬಳೇಶನ ಕಂಪಳ ಅನೇಕ ವರ್ಷಗಳ ಕಾಲ ನೆಲೆಯೂರುತ್ತದೆ. ಕೇವಲ ದನಗಾಹಿಗಳಷ್ಟೇ ಅಲ್ಲದೆ ಮ್ಯಾಸಬೇಡರು ವೀರ ಯೋಧರೂ ಆಗಿದ್ದರು. ಅರಣ್ಯಗಳಲ್ಲಿ ಅರಸನ ಕಾಯ್ದಿಟ್ಟ ಬೇಡ ಪಡೆಯಾಗಿ ಅವಶ್ಯಕ ಸಂದರ್ಭಗಳಲ್ಲಿ ಇವರು ಯುದ್ಧಭೂಮಿಗೂ ಪ್ರವೇಶಿಸುತ್ತಿದ್ದರು. ಕಂಪಿಲರಾಯನಿಗೆ, ತದ ನಂತರ ಕುಮಾರರಾಮನಿಗೆ ನಿಷ್ಠೆಯಿಂದ ತಮ್ಮ ಸಹಕಾರ ನೀಡುತ್ತಾರೆ. ಈ ಸನ್ನ್ನದ್ಧ ಬೇಡಪಡೆಯನ್ನು ‘ಕಾಪುಕಂಪಳ’ ವೆಂದೇ (ಕಾಪು-ಕಂಪಳ ಎಂದರೆ ಸನ್ನದ್ಧ ರಕ್ಷಣಾ ಪಡೆ ಎಂದು ಅರ್ಥ) ಕರೆಯುತ್ತಿದ್ದರು.
ದೆಹಲಿ ಸುಲ್ತಾನರ ಆಕ್ರಮಣಕ್ಕೆ ತುತ್ತಾಗುತ್ತಿದ್ದು ಕುಮ್ಮಟದುರ್ಗವನ್ನು ಕಾಪಾಡುವುದಕ್ಕೆ ಇವರು ನೀಡಿದ ¸ಹಕಾರ ಅಪರಿಮಿತ.
“ಡೆಂಲ್ಲೇನ ಗಡ್ಡಕಿೆ ದಡ್ಡಿ ಪೆಟ್ಟಿನ ಸ್ವಾಮಿ. ಡೆಲ್ಲಿ ಸುಲ್ತಾನತ ವಂಗಲೇಪಿನ ಸ್ವಾಮಿ, ಉಂಡವನೆ ಲೇಮುರಯ್ಯ” ಎಂದು ಇಂದಿಗೂ ಪೆದೋಬಳೇಶನ ಸುತ್ತಿ ಪದ್ಯವನ್ನು ಹಾಡುತ್ತಾರೆ.
ದೆಹಲಿಯ ಸುಲ್ತಾನರ ಧಾಳಿಗೆ ಸಿಲುಕಿ ಕಂಪಿಲರಾಯ ಯುದ್ದದಲ್ಲಿ ಮಡಿಯುತ್ತಾನೆ. ತದನಂತರ ಕುಮಾರರಾಮನ ಅಂತ್ಯವೂ ಆಗುತ್ತದೆ. ಆಗ ಕಂಪಿಲರಾಜರ ಆಶ್ರಯದಲ್ಲಿದ್ದ ಈ ಮ್ಯಾಸರೂ ಅತಂತ್ರಗೊಳ್ಳುತ್ತಾರೆ. ಬದುಕಿ ಉಳಿಯಲು ತಮ್ಮ ದನಕರುಗಳೊಂದಿಗೆ ಚಲಿಸುತ್ತಾ ಬಂದು ಚಿನ್ನಹಗರಿ ನದಿಯ ದಡದ ಮೇಲೆ ನೆಲೆಯೂರುತ್ತಾರೆ. ಕುಮ್ಮಟ ದುರ್ಗದಿಂದ ಬಂದ ಇವರು ತಾವು ಉಳಿದುಕೊಂಡ ಪ್ರದೇಶವನ್ನೇ ಚಿಕ್ಕ ಕುಮ್ಮಟ ಎಂದು ಕರೆದುಕೊಳ್ಳುತ್ತಾರೆ. ಕುಮ್ಮಟವೇ, ಕುಮ್ಮತಿ, ಕುಂತಿ ಎಂದು ಸಂಕ್ಷಿಪ್ತಗೊಂಡಿದೆ.
ಕಂಪಿಲನ ರಾಜ್ಯದಲ್ಲಿದ್ದ ಕಾರಣಕ್ಕಾಗಿಯೂ ಈ ಸ್ಥಳನಾಮ ಸೇರ್ಪೆಡೆಗೊಂಡು ಮೂಲತಹ ಇದ್ದ ಪೆದೋಬಳೇಶ ಕಂಪಿಲಿಸ್ವಾಮಿ, ಕಂಪಿಲೋಬಯ್ಯ ಎಂಬ ಸಿತ್ಯಂತರಕ್ಕೆ ಒಳಗಾಯಿತು. ಇದರೊಂದಿಗೆ ಬುಡಕಟ್ಟು ಸಮುದಾಯದಲ್ಲಿರುವ ಐತಿಹ್ಯಗಳೂ, ಮೌಖಿಕ ಕಥನಗಳೂ ಹೇಳುವಂತೆ ವೀರ ಕಂಪಿಲರಾಯನ ಸೇವೆಯಲ್ಲಿ ಈ ಬುಡಕಟ್ಟು ಸಮುದಾಯದಿಂದ ಒಬ್ಬ ಮಹನೀಯ ಅಹೋಬಲ-ಅಂದರೆ ಓಬಲಯ್ಯ (ಅಹೋಬಲಿನ ಭಕ್ತರಲ್ಲಿ ಓಬಲಯ್ಯ ಹೆಸರು ಸಾಮಾನ್ಯ) ಬಹಳ ದಿಟ್ಟತನದಿಂದ ಕಾದಾಡಿದ ನೆನಪಿಗಾಗಿ ಅರಸನಿಂದ ಬಿರುದು ಬಾವಲಿಗಳನ್ನು ಪಡೆಯುತ್ತಾನೆ. ಇಂತಹ ಒಂದು ವಿಶೇಷ ಬಹುಮಾನಿತ ಆಭರಣವೇ ‘ಮುತ್ತಿನ ಕಾಲುಪೆಂಡೆಯ‘.
ಅರಸನೇ ತಮಗಾಗಿ ಹೋರಾಡಿದ ವೀರನ ಕಾಲಿಗೆ ತೊಡಿಸಿದ ಚಿನ್ನ ಮತ್ತು ಮುತ್ತುಗಳಿಂದ ಮಾಡಿದ ಪೆಂಡೆಯವಿದು. ಇದನ್ನು ವಿಶೆಷವಾಗಿ ಆಚರಿಸುವ ಹೆಡೆಕಟ್ಟಿದ ಹಬ್ಬ- ಪೆಡಗಟ್ಟು ಪಂಡುಗ-ದಲ್ಲಿ ಸಾರ್ವಜನಿಕರಿಗೆ ಪ್ರರ್ದಶಿಸಲಾಗುತ್ತದೆ. ತಮ್ಮ ಈ ಸನ್ಮಾನಿತ ಹಿರಿಯ ವೀರನನ್ನು ಈ ಕಂಪಿಲಿಸ್ವಾಮಿ ಅಂದರೆ ಪೆದೋಬಳೇಶನೊಂದಿಗೆ ಸಮೀಕರಿಸಿ ಆರಾಧಿಸಲಾಗುತ್ತದೆ. ಈ ವೀರನಿಗೆ ಇದ್ದ ಬಿರುದೇ ‘ಕಾಪುಕಂಪಳದಯ್ಯ‘ ಎಂದು. ಅಂದರೆ ಮೀಸಲಿಟ್ಟ ಪಡೆಗೆ ನಾಯಕ ಎಂದರ್ಥ.
ಮಂದಲ ಗೋತ್ರದ ಈ ಮ್ಯಾಸರು ಮೂಲತಃ ತಮ್ಮ ದೇವರನ್ನು ತೆಲುಗಿನ ಪೆದೋಬಲಯ್ಯ ಎಂದು ಕರೆದು ಸ್ಥಳ ಸ್ಥಿತ್ಯಂತರ ಕಾರಣವಾಗಿ ಕಂಪಿಲಿಸ್ವಾಮಿ, ಕಂಪಲೋಬಯ್ಯ ಎಂದು ಕರೆಯತೊಡಗಿದರು, ಇದನ್ನು ‘ಪೆದ್ದತಿರುಮಲಿ ದ್ಯಾವರಿ’ ಎಂದೂ ಕರೆಯುತ್ತಾರೆ.ಅಂದರೆ ಹಿರಿಯ ತಿರುಪತಿ ದೇವರು ಇದು ಎಂದು ಹೆಮ್ಮಯಿಂದ ಹೇಳಕೊಳ್ಳುತ್ತಾರೆ. ತಿರುಪತಿ ಪ್ರಾಂತ್ಯದಲ್ಲಿ ಅಲೆಯುತ್ತಿದ್ದ ಮ್ಯಾಸಬೇಡ ದನಗಾಹಿಗಳ ಗುಂಪು ವೆಂಕಟರಮಣನ ಭಕ್ತರಾಗಿದ್ದರು. ಎಂದು ಥರ್ಸ್ಟನ್ರವರ ಬರಹಗಳಲ್ಲಿ ನಮೂದಿತವಾಗಿದೆ.
ತಿರುಪತಿಯ ವೆಂಕಟರಮಣ ಮತ್ತು ಪೆದೋಬಳೇಶನ ಸಮೀಕರಣವಿದು. ತಿರುಪತಿಯಿಂದ ಶಂಖ, ಜಾಗಟೆ, ಬಲಮುರಿ ಶಂಖ, ಎಡಮುರಿ ಶಂಖ ಇವುಗಳನ್ನು ತಂದ ಕಾರಣಕ್ಕಾಗಿಯೂ ಈ ಹೆಸರು ಬಂದಿರುವ ಸಾದ್ಯತೆಯಿದೆ.
ಮೂಲತಃ ಪೆದೋಬಲಯ್ಯನಾಗಿದ್ದು ನಂತರ ಸ್ಥಳೀಕರಣಕ್ಕಾನುಗುಣವಾಗಿ ತೆಲುಗಿನ ಕಂಪಲಿಸ್ವಾಮಿ, ಕಂಪಿಲೋಬಯ್ಯನಾದ. ವಿಷ್ಣು, ರಂಗನಾಥ, ನರಸಿಂಹ, ವೆಂಕಟೇಶ ಇವೆಲ್ಲವುಗಳ ಅರ್ಥ ಒಟ್ಟಾರೆ ವಿಷ್ಣು, ರಂಗನಾಥ ಒಂದೇ. ಕನ್ನಡ ನೆಲದಲ್ಲಿ ಕ್ರಮೇಣ ಕಂಪಿಲಿದೇವರು ಕಂಪಳದೇವರಾಯಿತು. ಶಿಷ್ಟೀಕರಣಗೊಳ್ಳುತ್ತಾ ಕಂಪಳ ರಂಗಸ್ವಾಮಿಯಾಯಿತು. ಅಹೋಬಲ ನರಸಿಂಹನ ಪತ್ನಿ ಚಂಚುಲಕ್ಷ್ಮಿಯ ಹೆಸರೂ ಶಿಷ್ಟೀಕರಣಗೊಂಡು ಭಾಗ್ಯದ ಲಕ್ಷ್ಮಮ್ಮ ಎಂದಾಯಿತು.
ತಾವಿರುವ ನೆಲೆಗಳಲ್ಲಿ ತಮ್ಮೊಂದಿಗೆ ತಮ್ಮ ಅಪ್ತ ಸಮುದಾಯವನ್ನು ಮುನ್ನಡೆಸಿಕೊಂಡು ಬರುವಾಗ ಅವರ ದೇವರುಗಳಾದ ಜಗಲೂರು ಪಾಪನಾಯಕ ಗಾದ್ರಿಪಾಲನಾಯಕ, ಜೋಗಿದೇವರು ಇವರನ್ನು ಜೊತೆಗೆ ಕರೆತಂದ ಕಾರಣವಾಗಿ ಇಂದಿಗೂ ಕಂಪಳದೇವರ ಹಟ್ಟಿಯಲ್ಲಿ ಈ ಎಲ್ಲಾ ದೇವರುಗಳೂ ಇದೆ. ಆದ್ದರಿಂದಲೇ ಎಲ್ಲರನ್ನು ಒಳಗೊಂಡ ಬದುಕುತ್ತಿದ್ದ ಕಂಪಳವಿದು ಎಂದು ಗುಣ ನಿರ್ದೇಶಿತ ಕಾರಣವಾಗಿಯೂ ಕಂಪಳದೇವರು ಎಂಬ ಹೆಸರೇ ಇಂದು ಬುಡಕಟ್ಟು ಸಮುದಾಯದಿಂದ ಒಪ್ಪಿತಗೊಂಡಿದೆ. ಹೀಗೆ ಅನೇಕ ಸ್ಥಿತ್ಯಂತರಗಳಿಗೆ ಒಳಗಾಗುತ್ತಾ ಕಾಲದ ಅನಿವಾರ್ಯಕ್ಕೆ ತನ್ನನ್ನು ಒಪ್ಪಿಸಿಕೊಳ್ಳುತ್ತಿರುವ ಬುಡಕಟ್ಟು ಸಮುದಾಯವಿದು.
ಕಾಲ ಪ್ರವಾಹದಲ್ಲಿ ಎಷ್ಟೇ ಮುಂದೆ ಸಾಗಿ ಬಂದರೂ ಸಮುದಾಯದ ನಂಬಿಕೆಯೆ ಆದರೆ ತಮಗೆ ಹಿಂದೆ ಬದುಕನ್ನು ಕಟ್ಟಿಕೊಟ್ಟಿದ್ದ ಪರಿಸರಕ್ಕೆ ಮತ್ತೆ ಭೇಟಿಕೊಡುವುದು. ಇಡೀ ಮ್ಯಾಸಮಂಡಲದಲ್ಲಿ ಇಂತಹ ಯಾನಗಳು ನಡೆಯುತ್ತಿರುತ್ತವೆ. ಗಾದ್ರಿಪಾಲನಾಯಕ ಹಿಂದೆ ಮಿಂಚೇರಿ ಕಾವಲಿನಲ್ಲಿ ವಾಸಿಸಿದ್ದ ಎಂಬ ಕಾರಣಕ್ಕಾಗಿ ಈತನ ಪರಂಪರೆಯವರು ದೇವರೊಂದಿಗೆ ಮಿಂಚೇರಿ ಗುಡ್ಡಕ್ಕೆ ಹೋಗಿ ಬರುತ್ತಾರೆ.
ದಡ್ಡಿಸೂರನಾಯಕನ ಪರಂಪರೆಯವರು ಗುಡೇಕೋಟೆಯ ಶರಣರ ಗುಡ್ಡಕ್ಕೆ ಹೋಗಿಬರುತ್ತಾರೆ. ತಮ್ಮ ನಾಯಕ / ನಾಯಕಿಯರೆ ಈಗ ದೈವೀಕ ಸ್ಥಾನದಲ್ಲಿರುವಾಗ ಅವರು ಹಿಂದೆ ವಾಸಿಸಿದ್ದ ಸ್ಥಳಗಳಗೆ ಹೋಗಿ ಪೂಜೆಸಲ್ಲಿಸಿ ಬರುವುದು ತಮ್ಮ ದೈವಕ್ಕೆ ಸಲ್ಲಿಸುವ ಬಾವನಾತ್ಮಕ ಭಕ್ತಿಯಾಗಿರುತ್ತದೆ.
ಇದೇ ರೀತಿ ಹಿಂದೆ ಕುಮ್ಮಟ ದುರ್ಗದ ಪ್ರಾಂತ್ಯದಲ್ಲಿ ಹಂಪಿಯ ಪರಿಸರದಲ್ಲಿ ತಮ್ಮ ಪೂರ್ವಿಕರು ಇದ್ದ ಕಾರಣ ತಮ್ಮ ದೇವರೊಂದಿಗೆ ತಾವೆಲ್ಲರೂ ಹೋಗಿ ತುಂಗಭದ್ರೆಯ ಗಂಗೆಯಲ್ಲಿ ದೇವರಿಗೆ ಅಭಿಷೇಕ ಮತ್ತು ನದಿಗೂ ಗಂಗೆ ಪೂಜೆ ಸಲ್ಲಿಸುವ ಕ್ರಮವನ್ನು ಅಪರೂಪಕ್ಕಾದರೂ ನಡೆಸಿಕೊಂಡು ಬರಲಾಗುತ್ತದೆ.
ಇಂದಿನ ಚಿಕ್ಕ ಕುಮತಿಯ ಹೊರವಲಯದಲ್ಲಿರುವ ಕಂಪಳದೇವರ ಹಟ್ಟಿಯಿಂದ ತಮ್ಮ ದೇವರನ್ನು ದನಗಂಪಳವನ್ನು ಛತ್ರಿ, ಛಾಮರಗಳ ಗೌರವದೊಂದಿಗೆ, ಶಂಖ, ಜಾಗಟೆಗಳ ಭೋರ್ಗರೆತದೊಂದಿಗೆ ಉರುಮೆ, ಕಹಳೆ, ತಮ್ಮಟೆಗಳ ವಾದ್ಯಗಳೊಂದಿಗೆ ಒಪ್ಪತ್ತಿನ ಉಪವಾಸ ವ್ರತ ಹಿಡಿದು ನೇಮನಿಷ್ಠೆಗಳಿಂದ ಬರಿಗಾಲಲ್ಲಿ ಸುಮಾರು ಎಪ್ಪತ್ತು ಕಿಲೋಮೀಟರ್ ದೂರದ ಹಂಪಿಗೆ ಕಾಲ್ನಡಿಗೆಯಿಂದ ಪಯಣಿಸುತ್ತಾರೆ. ಹೀಗೆ ನಡೆಯುವುದು ಸಾಮಾನ್ಯ ಸಂಗತಿಯಲ್ಲ. ಪಯಣದ ಉಸ್ತುವಾರಿಯನ್ನು ಸಮಸಹೋದರರು ಮತ್ತು ನೆಂಟರಿಷ್ಠರೂ ವಹಿಸಿಕೊಂಡಿರುತ್ತಾರೆ.
ತಮ್ಮ ಈ ಭಕ್ತಿ ಮತ್ತು ಶಕ್ತಿಗೆ ಇಡೀ ಸಮುದಾಯವನ್ನೇ ಒಂದು ಕಡೆ ಬೆಸೆಯುವಂತಹ ಸಾಮರ್ಥ್ಯವಿದ್ದು ಈ ಆರಾಧನೆ ಬುಡಕಟ್ಟಿನ ಸಾಮುದಾಯಿಕ ಬದುಕಿಗೆ ಬಹುದೊಡ್ಡ ನಿದರ್ಶನವಾಗುತ್ತದೆ. ಕಂಪಿಲದೇವರೊಂದಿಗೆ ಇದೇ ಹಟ್ಟಿಯಲ್ಲಿಯೇ ನೆಲೆಗೊಂಡಿರುವ ಜಗಲೂರು ಪಾಪನಾಯಕ, ಗಾದ್ರಿಪಾಲನಾಯಕ, ಜೋಗಿದೇವರುಗಳನ್ನು ಹಂಪಿಗೆ ಕರೆದೊಯ್ಯಲಾಗುತ್ತಿದೆ. ಪ್ರಯಾಣದ ದಾರಿಯಲ್ಲಿ ಹಿಂದೆ ಮ್ಯಾಸರ ಹಟ್ಟಿಗಳಾಗಿದ್ದು ಇಂದು ಊರುಗಳ ಸ್ವರೂಪ ಪಡೆದಿರುವ ಸ್ಥಳಗಳಲ್ಲಿ ನೆಲೆಸಿರುವ ಈ ಸ್ವಾಮಿಯನ್ನು ಪೂಜಿಸುವ ಮಂದಲ ಗುಂಪಿನವರು ಮತ್ತು ಇವರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿರುವ ‘ಎನುಮಲ’ ಗುಂಪಿನವರು ಭೇದವಿಲ್ಲದೆ ಒಟ್ಟಾಗಿ ಸೇರಿ ಸಂಭ್ರಮದಿಂದ ಈ ಪೆದೋಬಳೇಶ ಮತ್ತು ಇತರ ದೈವಗಳನ್ನು ಸ್ವಾಗತಿಸಿ ವಸತಿ ನೀಡಿ, ಜೊತೆಗೆ ನಡೆದು ಬಂದವರಿಗೆ ಊಟೋಪಚಾರ ನೀಡಿ ಸಂಭ್ರಮಿಸುವಲ್ಲಿ ಇವರಲ್ಲಿರುವ ಬಾಂಧವ್ಯದ ಬೆಸುಗೆಯನ್ನು ಗುರುತಿಸಬಹುದಾಗಿದೆ.
ಹಿಂದೆ ವಾಹನ ಸೌಕರ್ಯವಿಲ್ಲದಿದ್ದಾಗ ಹೀಗೆ ಅಪರೂಪಕ್ಕೆ ಬಂದು ಮಿತ್ರರು ಭೇಟಿಯಾಗುವುದೇ ಒಂದು ದೊಡ್ಡ ಸಂಭ್ರಮವಾಗಿತ್ತು. ಅದರೆ ಇಂದು ನಾನಾ ಬಗೆಯ ಸಂಪರ್ಕ ಸಾಧನಗಳು ಅಭ್ಯವಿದೆ. ಅದರೂ ಹೀಗೆ ತಮ್ಮ ದೇವರೊಂದಿಗೆ ಬರುವವರನ್ನು ಸಹೋದರದೆಂದೋ, ನೆಂಟರೆAದೋ ಸಂಭ್ರಮಿಸಿ ಒಟ್ಟಾಗಿ ಸೇರಿ ದೈವಾರಾಧನೆಯಲ್ಲಿ ಭಾಗಿಯಾಗುವುದು ಆದಿಮ ಸಂಸ್ಕೃತಿಯ ಸಾಮುದಾಯಿಕ ಬದುಕಿನ ಸಾಮರಸ್ಯಕ್ಕೆ ಸಂಕೇತವಾಗುತ್ತದೆ.
ಸಮಯ, ದೈಹಿಕಶ್ರಮ ಮತ್ತು ಹಣಕಾಸಿನ ಕೊರತೆ ಕಾರಣವಾಗಿ ಈ ಆಚರಣೆಯನ್ನು ಪದೇ ಪದೇ ಮಾಡಲು ಸಾಧ್ಯವಾಗುವುದಿಲ್ಲ. ನಲವತ್ತು ವರ್ಷಗಳ ಹಿಂದೆ ಶ್ರೀಯುತ ಪಟೀಲ್ ಪಾಪನಾಯಕರು ಮೊಳಕಾಲ್ಮುರು ಕ್ಷೇತ್ರದ ಶಾಸಕರಾಗಿದ್ದಾಗ ಈ ಕಾರ್ಯಕ್ರಮವನ್ನು ಮಾಡಿಸಿದ್ದರು. ಈಗ ಮತ್ತೆ ಈ ವಿಶೇಷ ಘಟಿಸುತ್ತಿದೆ. ಒಟ್ಟು ಸಮುದಾಯ ಇದರ ಹೊಣೆಯನ್ನು ಹೊತ್ತು ನಿರ್ವಹಿಸುತ್ತಿರುವುದು ಬುಡಕಟ್ಟಿನ ಸ್ವಾಭಿಮಾನ, ಸ್ವಂತಿಕೆ, ಭಕ್ತಿಗೆ ಸಾಕ್ಷೀಭೂತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ದಿನಾಂಕ ೨-೩-೨೦೨೨ರ ಬುಧವಾರ ಬೆಳಿಗ್ಗೆ ಆರಂಭಗೊಂಡ ಈ ಪಯಣ ಹಂಪಿಯ ತುಂಗ ಭದ್ರೆಯ ಚಕ್ರತೀರ್ಥದ ತೀರಕ್ಕೆ ದಿನಾಂಕ ೫-೩-೨೦೨೨ರ ಶನಿವಾರ ತಲುಪುತ್ತದೆ. ಅಲ್ಲಿ ಪೂಜೆಯ ಕೈಂಕರ್ಯವನ್ನು ನೆರವೇರಿಸಿಕೊಂಡು ವಿರೂಪಾಕ್ಷ ಗುಡಿಯ ಮುಂದೆ ದೇವರುಗಳು ಮತ್ತು ದೇವರೆತ್ತುಗಳನ್ನು ಹರಿಯಿಸಿ ಒಂದು ದಿನ ಈ ಹಂಪಿಯಲ್ಲಿಯೇ ತಂಗಿ ಮತ್ತೆ ಮರಳಿ ನಡೆದು ಹಟ್ಟಿಯನ್ನು ಸೇರುವ ಕಾರ್ಯಕ್ರಮ ನಡೆಯುತ್ತಿದೆ. ಅಪರೂಪಕ್ಕೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಲು, ಭಕ್ತಿ ಸಮರ್ಪಣೆ ಮಾಡಲು ಹರಿದು ಬರುತ್ತಿರುವ ಮ್ಯಾಸ ನಾಯಕ ಬುಡಕಟ್ಟು ಸಮುದಾಯದ ಭಾವನಾತ್ಮಕತೆ ಇಲ್ಲಿ ಗಮನಿಸುವಂತಹುದು.
ಅದಿಮ ಸಂಸ್ಕೃತಿ ತನ್ನ ವಿಶಿಷ್ಟತೆಯನ್ನು ಸಂರಕ್ಷಿಸಿಕೊಳ್ಳಲು ಹಿಂಜರಿಯದೆ ತನ್ನ ಸಾಂಸ್ಕೃತಿಕ ಜಗತ್ತನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇರುತ್ತದೆ ಎಂಬುದಕ್ಕೆ ಈ ಬಗೆಯ ಆಚರಣೆಗಳು ಬಹು ದೊಡ್ಡ ಉದಾಹರಣೆಗಳಾಗುತ್ತವೆ. ಪುರಾಣ ಮತ್ತು ಇತಿಹಾಸ ಇವೆರಡನ್ನು ಈ ದೈವಾರಾಧನೆಗಳಲ್ಲಿ ಗುರುತಿಸುವುದು ಮತ್ತು ವರ್ತಮಾನದಲ್ಲಿ ಸಂಘಟಿತರಾಗುವುದು ಇದೆಲ್ಲವೂ ಈ ಮೂಲಕ ಸಾಧ್ಯವಾಗುವುದಾದರೆ ನಾಡಿನಲ್ಲಿ ಸಮುದಾಯಕ್ಕೆ ಇದು ಬಹಳ ಗೌರವವನ್ನು ತಂದು ಕೊಡುವುದರಲ್ಲಿ ಸಂಶಯವಿಲ್ಲ.
ಮ್ಯಾಸಬೇಡರ ಜಗತ್ತಿನಲ್ಲಿ ದೇವರು / ಸಾಂಸ್ಕೃತಿಕ ನಾಯಕ, ನಾಯಕಿಯರು ಮತ್ತು ದೇವರ ಎತ್ತುಗಳು ಬಹುದೊಡ್ಡ ಸಂಘಟಕ ಶಕ್ತಿಗಳು ಎಂಬುದನ್ನು ಮರೆಯುವಂತಿಲ್ಲ. ಈ ಮೂಲಕವಾಗಿ ಬುಡಕಟ್ಟು ಸಮುದಾಯದ ಐತಿಹಾಸ, ಸಾಂಸ್ಕೃತಿಕ, ಸಾಮಾಜಿಕ ಹೀಗೆ ಹಲವು ಮುಖಗಳನ್ನು ಕುರಿತು ಅರ್ಥಮಾಡಿಕೊಳ್ಳುವ ಅವಕಾಶವನ್ನು ಪಡೆಯಬಹುದಾಗಿದೆ.
ಜೈ ಮ್ಯಾಸ ಮಂಡಲ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ಅಂತರಂಗ
ದಿಮಾಗಿ ನಕ್ಸಲ್-ನಗರ ನಕ್ಸಲ್
~ರಹಮತ್ ತರೀಕೆರೆ, ಚಿಂತಕರು
ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.
ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.
ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.
ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.
ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.
ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.
ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.
ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.
ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

-
ದಿನದ ಸುದ್ದಿ7 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ7 days agoಡಾಲಿಯ ಕನಸು ಒಂದೇ ಹೀರೋ ಆಗೋದು
-
ದಿನದ ಸುದ್ದಿ6 days agoಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ: ಪ್ರತಿ ತಿಂಗಳು ಎರಡು ದಿನ ಪ್ರವಾಸ
-
ದಿನದ ಸುದ್ದಿ6 days agoಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್ಕಟ್ ಹೇಳಿದ ಡಿಕೆಶಿ
-
ದಿನದ ಸುದ್ದಿ3 days agoಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
-
ದಿನದ ಸುದ್ದಿ3 days agoಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
-
ದಿನದ ಸುದ್ದಿ3 days agoವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್‌ಗೆ ರಾಜೀನಾಮೆ ಸವಾಲು!


