ದಿನದ ಸುದ್ದಿ
ಕತೆ | ಹದ್ದುಗಳ ರಾಜ್ಯ
~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್, ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ
ಮಟಮಟ ಮಧ್ಯಾನ್ಹದೊಳಗ ಬರ ಬರನ ಕಾಲು ಬೀಸಿಗೋಂತ ಪಟ್ನದ ಕಡಿಗೆ ಹೋಗಿ ಬರುತಿದ್ದ ವೀರಭದ್ರಿ. ಆತ ಎಲ್ಯಾನ ಸೊಲುಪೊತ್ತು ನಿರುಮ್ಮಳವಾಗಲು ನೆಳ್ಳು ಕಂಡರೆ ಕುಂತಗಾ ಬೇಕು ಎಂದುಕೊಳ್ಳುತಿದ್ದಾನೆ.
ಅಸಲಿಗೆ ನೆಳ್ಳು ಎಲ್ಲೈತಿ?
ನೆಳ್ಳನ್ನು ನೀಡುವ ಹಚ್ಚನೆ ಮರಗಳ ಹಸುರು ಎಲ್ಲೈತಿ?
ಬರಗಾಲದ ಹೊಡೆತಕ್ಕೆ ಭೂಮಿತಾಯಿಯು ಬಿರುಕು ಬಿಟ್ಟು ನೆಲ ಸೀಳಿಕೊಂಡು ವಿಲ ವಿಲನೆ ವದ್ದಾಡುತ್ತಾ.. ಕೆಂಡದಂತಹ ಉಗಿಯನ್ನು ಉಗುಳುತ್ತಾ ಕೊತ ಕೊತನೆ ಕುದಿಯುತಿದ್ದಾಳೆ.
ನಡೆಯುವ ಕಾಲುಗಳು ಸೋತುಹೋಗುತ್ತಿವೆ.
ಕೆಂಪಗೆ ಕಾದ ಬಿಸಿಲ ಶೂಲವು ತಿವಿಯುತ್ತಿದೆ.
ಹಸನಾದ ನೆಲಕೆ ಬೀಜಗಳ ಚೆಲ್ಲಿ ಮಳೆ ಮೋಡಗಳ ಕನಸು ಕಾಣುವ ಕಣ್ಣುಗಳಿಗೆ ಒಂದು ಮಳೆ ಹನಿಯೂ ಕೂಡಾ ನಿಲುಕುತಿಲ್ಲ.
ರೋಹಿಣಿಯ ಮಳೆಗೆ ಓಣೆಲ್ಲಾ ಕಾಳು ಅನ್ನಂಗ, ಕಲ್ಲನಕೇರಿ ಕೆರೆ ಕೋಡಿ ಯೊಡೆದು ಹರಿಯುತ್ತಿದ್ದ ನೀರಿಂದ ಬರುತಿದ್ದ ಬಳ್ಳ ಬಳ್ಳದ ಜೋಳದ ಒಕ್ಕಲು ಊರಿಗೆ ತಾಗಿದ ನೆಲೆದ ಹಗೇವುಗಳಿಗೆ ಈಗ ನೆನಪುಗಳದೇ ಬದುಕಾಗಿದೆ.
ತಟುಗು ಕುಂದ್ರಾಕ ಎಲ್ಯಾನ ನೆರಳುಬೇಕು…ನೆರಳು…ನೆರಳು.
ಮ್ಯಾಲ ನೋಡಿದರೆ ಎಲ್ಡು ಮೂರು ಹದ್ದುಗಳು ಹರ‍್ಯಾಡುತ್ತಿವೆ.
ಕೆಳಗ ತನ್ನ ನೆಳ್ಳನ್ನ ತಾನೇ ನೋಡಿದರೆ, ತನಗೇ ತುಚ್ಚನಿಸುತ್ತಿದೆ.
ಥೂ…ಇವನೌವನಾ…ನರ ಜಲುಮ ನಾಯಿ ಜಲುಮ!
ಗಂಟಲು ಸಣ್ಣಕ ಒಣಗುತೈತಿ…
ಎಲೈತಪ್ಪೋ…ನೀರು…ನೀರು…
ಎದಿ ಒಡೆಯೋ ಹಂಗ ಕುಂತು ಅಬ್ಬರಿಸಿದರೂ ಕಣ್ಣೀರು ಕೂಡಾ ಸೆಟಗೊಂಡು ಕುಂತಾವು!
ತಾನು ಬದುಕುತ್ತಿರುವುದು ಒಂದು ಬದುಕೇನಾ?
ನೆಳ್ಳಿಲ್ಲದಿದ್ದರೆ ಪರಾವಾಗಿಲ್ಲ.
ನೀರಿಲ್ಲದಿದ್ದರೂ ಪರವಾಗಿಲ್ಲ.
ನಾಳೆ ವಿರುಪಾಪುರದೊಳಗ ನಡಿಯೋ ಪಂಚಾಯ್ತಿ ಏನಾದ್ರೂ ಪರವಾಗಿಲ್ಲ.
ನನಗೆ ಮೊದಲೇ ಗೊತ್ತು… ಪಂಚಾಯ್ತಿಯೊಳಗ ನನಗೆ ಅನ್ಯಾಯವೇ ಆಗುತ್ತದ.
ನಡೀಲಿ…ನಡೀಲಿ…ಮತ್ತೆ ಮತ್ತೆ ನಡೀಲಿ..!, ಹೊಸಾದು ನಡೆಯೋದು ಏನೈತಿ?
ಆ ಫಕ್ಕೀರ ಗೌಡನಿಗೆ ನಾಳೆಯಿಂದ ಏನಾರ ಒಂದಾಗುತ್ತದೆ.
ಅಂಗಾ ಅವನ ಸವಾಸಗಾರರಿಗೂ ಕೂಡಾ!
ಲಮ್ಡಿ ನನ ಮಕ್ಕಳು ಹೊಕ್ಕಾರ…ಹೊಕ್ಕಾರ.
ಊರಿಗೆ ಹಿಡಿದ ಶನಿ ಹೊಕ್ಕಾತಿ. ಅನಿಷ್ಟ ಹೊಕ್ಕತಿ…ಎಲ್ಲಾ ಸುಡಗಾಡಿಗೆ ಹೊಕ್ಕತಿ.
ಒಣಗುತ್ತಿರುವ ಗಂಟಲನ್ನ ಎಂಜಲು ನುಂಗಿ ವೀರಭದ್ರಿ ತಣ್ಣಗ ಮಾಡಿಕೊಂಡ.
ಕೈಗೆ ತಗುಲಿಸಿಕೊಂಡ ಹೊಲೆದ ಚೀಲದೊಳಗ ಆತನ ಹೊಸಾ ಬ್ಯಾಟಿಯ ಕೊಡ್ಲಿ ಬೆಚ್ಚಗೆ ನಿದ್ದಿ ಮಾಡುತ್ತಿತ್ತು …
ವೀರಭದ್ರಿಯ ಹೆಜ್ಜೆಗಳು ಬಡ ಬಡನೇ ಹಳ್ಳಿಯ ಕಡೆಗೆ ಹೊಂಟಿವೆ.
***
ಸುಮಾರು ಇಪ್ಪತೈದು ರ‍್ಷಕ್ಕೂ ಮೊದಲು…
ಪ್ರಶಾಂತವಾದ ಊರೊಳಗೆ ರಾಜಕೀಯ ಪರ‍್ಟಿಗಳ ನಡುವೆ ಕಿಚ್ಚು ಹೊತ್ತಿಕೊಂಡಿತ್ತು. ಮಲ್ಲನ ಗೌಡ, ಕೆಂಚನ ಗೌಡ ಇಬ್ಬರೂ ಒಂದೇ ಮನೆಯ ಅಣ್ಣ ತಮ್ಮಂದಿರು. ಅಣ್ಣ ಮಲ್ಲನ ಗೌಡ ಒಂದು ಪರ‍್ಟಿ ಸೇರಿದ್ದು ನೋಡಿ ಪೈಪೋಟಿಗೆ ಬಿದ್ದ ಇನ್ನೊಂದು ಪರ‍್ಟಿಯವರು ಬಣ್ಣದ ಮಾತಗಳನ್ನ ಹೇಳಿ, ಅಧಿಕಾರದ ಆಸೆ ತೋರಿಸಿ ಆತನ ತಮ್ಮ ಕೆಂಚನ ಗೌಡನನ್ನು ಆತನಿಗೆ ಎದುರು ನಿಲ್ಲಿಸಿದರು. ಊರು ಅವರಿಬ್ಬರ ರಾಜಕೀಯಗಳಿಗೆ ಒಡೆದು ಎರಡು ಹೋಳಾಯಿತು. ತಣ್ಣಗೆ ಸುಖವಾಗಿದ್ದ ಕುಟುಂಬವೂ ಛಿದ್ರವಾಯಿತು!
ಅಲ್ಲಿಯ ತನಕ ಮನೆಯ ಹಿರಿಯ ಯಜಮಾನ ರಾಜೇ ಗೌಡ ಈ ಇಬ್ಬರು ಮಕ್ಕಳ ಮೇಲೆ ಪ್ರಾಣ ಇಟ್ಟುಕೊಂಡು ಬದುಕುತಿದ್ದ. ಆತನ ಕಣ್ಣಿನೆದುರೇ ತನ್ನ ಕೂಡು ಕುಟುಂಬ ಚೂರಾಗುತಿದ್ದರೆ ತಡಕೊಳ್ಳಲಾರದೇ ರೋಷಿಗೊಂಡು ಮಕ್ಕಳಿಬ್ಬರಿಗೂ ಭೂಮಿ, ಆಸ್ತಿ, ಆದಾಯಗಳನ್ನು ಎರಡು ಸರಪಾಲುಗಳಾಗಿ ಮಾಡಿ ಹರಿದು ಹಂಚಿದನು. ಪತ್ನಿ ಜಾನಕವ್ವನನ್ನು ಕರಕೊಂಡು ಏಳು ಕೆರೆ ದಾಟಿ ಮಲ್ಲನ ಕೇರಿಗೆ ಹೋಗಿಬಿಟ್ಟನು.
ಹಿರೇ ಗೌಡರು ಊರು ಬಿಟ್ಟ ನಂತರ ಆತನ ಇಬ್ಬರು ಮಕ್ಕಳು ಹೊಟ್ಟೆ ತುಂಬಾ ಉಂಡದ್ದಿಲ್ಲ. ಕಣ್ ತುಂಬಾ ನಿದ್ರಿಸಿದ್ದಿಲ್ಲ. ಇವರ ಪರ‍್ಟಿಗಳ ಹೊಡೆತಕ್ಕೆ ಊರೂ ಕೂಡಾ ಎರಡು ಹೋಳಾಯಿತು. ಜನರಲ್ಲಿಯೂ ರ‍್ಧ ಮಂದಿ ಒಬ್ಬರ ಕಡಿಗೆ ಸರಿದರೆ, ಉಳಿದ ರ‍್ಧ ಮಂದಿ ಮತ್ತೊಬ್ಬರ ಕಡಿಗೆ ಸರಕೊಂಡು ನಿಂತು ಬಿಟ್ಟರು. ನೋಡು ನೋಡುತಿದ್ದಂಗೇನೆ ಅಧಿಕಾರಗಳ ಯುದ್ಧ ಶುರುವಾಯಿತು. ಊರೊಳಗೆ ಜೀಪುಗಳು ಬಂದವು. ನಾಡ ತುಪಾಕಿಗಳು ನುಗ್ಗಿದವು. ನಾಡ ಬಾಂಬುಗಳು ತಯಾರಾದವು. ಎರಡೂ ರ‍್ಗಗಳು ಬಲಿಷ್ಟವಾಗಿ ದರ‍್ಭಲವಾದ ಜನರನ್ನು ಬಲಿಪಶುಗಳನ್ನಾಗಿ ಮಾಡಲು ಪ್ರಾರಂಭಿಸಿದವು. ಒಮ್ಮಿಂದ ಒಮ್ಮೆಲೇ ಊರೊಳಗೆ ಹೊಡೆದಾಟಗಳು ಭುಗಿಲೆದ್ದವು.
ಪಟ್ನದಿಂದ ನಡುರಾತ್ರಿಯಲ್ಲಿ ಕಣಿವಿಹಳ್ಳಿ ಮೇಲೆ ಬರುತ್ತಿದ್ದ ಮಲ್ಲನ ಗೌಡನ ಜೀಪಿನ ಮೇಲೆ ಕೆಂಚನ ಗೌಡನ ಕಡೆಯವರು ನಾಡ ಬಾಂಬುಗಳಿಂದ ದಾಳಿ ಮಾಡಿದರು. ಎಗರಿದ ಜೀಪು ತುಂಡು ತುಂಡಾಗಿ ಸಿಡಿದಿತು.ಜನರ ಸುಳಿವರಿತು ಒಮ್ಮೆಲೇ ಜಿಗಿದು ಹಾರಿಕೊಂಡ ಮಲ್ಲನ ಗೌಡ ಪೆಳಿಯೊಳಗೆ ಎಗರಿ ಬಿದ್ದಿದ್ದ. ಸಣ್ಣಪುಟ್ಟ ಗಾಯಗಳಲ್ಲಿ ಪೆಳಿಯ ಹಿಂದೆ ಎದ್ದವನೇ ಅಲಮರಸಿಕೇರಿ ಕಾಲು ದಾರಿ ಕಡೆಗೆ ಓಡಿ ತಲೆ ಉಳಿಸಿಕೊಂಡಿದ್ದ. ಬೆಳಗಾ ಮುಂಜಾನೆ ಬಂದು ನೋಡಿದರೆ ಆ ನೆಲದೊಳಗೆ ಆರು ಹೆಣಗಳು ಬಕ್ಕಬಾರಲೇ ಬಿದ್ದಿದ್ದವು. ನಾಲ್ಕು ಜನ ಕುಂಬಾರ ಹುಡುಗರು ಇಬ್ಬರು ಮಾದರ ಹುಡುಗರು ಆ ರಾತ್ರಿಯ ಜೀಪು ದಾಳಿಯೊಳಗ ಸತ್ತಿದ್ದರು. ಹಗೆಯು ಅಲ್ಲಿಗೇ ಮುಗಿಯಲಿಲ್ಲ.
ಮರುದಿನವೇ ಕರೇಕಲ್ಲು ಗುಡ್ಡದ ಕರೆ ದಾರಿಯಿಂದ ಹಳ್ಳಿಗೆ ಬರುತ್ತಿರುವಾಗ ಕೆಂಚನ ಗೌಡನ ಕಡೆಯ ಎಂಟು ಜನರು ಹಾಳು ಬಿದ್ದ ಅಗಸಿ ಬಾವಿಯೊಳಗ ಶವಗಳಾಗಿ ತೇಲಿದರು! ನಾಲ್ವರು ಹೊಲೆಯರು, ನಾಕು ಜನ ತಳವಾರರು.
ಊರು ಊರೆಲ್ಲಾ ಉರಿಯಲ್ಲಿ ಹೊತ್ತಿಕೊಂಡು ಬೆಂದು ಹೋಯಿತು. ನಾಲ್ಕಂತಸ್ಥಿನ ಮಹಡಿ ಮನಿಯೊಳಗ ಕೆಂಚನ ಗೌಡ ಅರಾಮಾಗಿದ್ದ.ಎಕರೆ ಎಕರೆ ಕಲ್ಲಿನ ವಾಡೆಯೊಳಗ ಮಲ್ಲನ ಗೌಡ ಮಲ್ಲಿಗೆ ಹೂವಿನಂಗ ಕಳ ಕಳ ತುಂಬಿಕೊಂಡಿದ್ದ. ಊರೊಳಗೆ ಮಾತ್ರ ಎರಡು ದಿನದೊಳಗೆ ಹನ್ನೆರಡು ಜನರು ಶವಗಳಾದರು!
ರಾಜಕೀಯಗಳ ರಕ್ತಪಾತಗಳಾದವು. ದೊಡ್ಡಸ್ಥಿಕೆಗಾಗಿ ಕುಣಿವ ನಾಯಕರು ತಮ್ಮನ್ನು ನೆಚ್ಚಿಕೊಂಡ ಜನರ ಕುರಿತು ಎಳ್ಳಷ್ಟೂ ಆಲೋಚಿಸಲಿಲ್ಲ. ಕೊನೆ ಕೊನೆಗೆ ಈ ರಾಜಕೀಯದ ಗೊಡವೆಗಳು ಜಾತಿ ಗೊಡವೆಗಳಾದವು. ಮಾದರ, ಹೊಲೆಯ, ಕುಂಬಾರ, ತಳವಾರರ ಮದ್ಯ ಹಸಿರು ಹುಲ್ಲು ಹಾಕಿದರೂ ಭಗ್ಗನೆದ್ದು ಹೊತ್ತಿ ಕೊಳ್ಳುವಷ್ಟು ಉರಿ ಎದ್ದವು!
ಯಾರಾದರೂ ರಾತ್ರಿ ಹೊತ್ತು ಒಂಟಿಯಾಗಿ ತಿರುಗ ಬೇಕೆಂದರೂ ಕೂಡಾ ಜನ ಭಯ ಪಡುತಿದ್ದಾರೆ. ಪಟ್ನಕ್ಕೆ ಹೋಗ ಬೇಕೆಂದರೂ ಹೊಲಕ್ಕ ಹೋಗ ಬೇಕೆಂದರೂ..ಒಬ್ಬರ ಜೊತೆ ಇಲ್ಲಂದ್ರ ಹೊರಾಕೂ ಕೂಡಾ ಯಾರೂ ಇಣುಕಿ ನೋಡರು. ಊರು ಹಿಂಗೆ ಸುಡುಗಾಡಾಗಿ ಬದಲಾಗುತ್ತಿರುವ ಸುದ್ಧಿ ತಿಳಿದ ಹಿರಿಯ ಯಜಮಾನ ರಾಜುಗೌಡರು ಕುಂತಲ್ಲೇ….ಕಣ್ಣೀರು ಹಾಕಿದರು.
ಮಧ್ಯಾನ್ಹದ ಬಸ್ಸಿಳಿದು ಕಾಳವ್ವನ ಹೋಟಲ ಕಡೆಯಿಂದ ಬರುತಿದ್ದ ಅಲ್ಲಾ ಭಕ್ಷಿಯ ಮಗ ಗೌಸ್ ಮೊಯಿನುದ್ದೀನನನ್ನು ಕೆಂಚನ ಗೌಡನ ಕಡೆಯ ಜನ ಬೇಟೆಗಾರರಂತೆ ಬೆನ್ನಟ್ಟಿ ಬೆನ್ನಟ್ಟಿ, ಮಂಡಿ ದುರುಗಮ್ಮನ ಗುಡಿ ಹತ್ರ ಕತ್ತಿ ಬೀಸಿ ಒಂದು ಕೈ ತೋಳನ್ನೇ ಕಡಿದು ಬಿಟ್ಟರು! ಜಗ್ಗದ ಗೌಸ್ ಮೊಯಿನುದ್ದೀನ್ ಅಲ್ಲೇ ಸವಾಕಾರರ ಜೀನಿನ ಕಡೆಯ ಮುಳ್ಳ ಬೇಲಿ ಹಾರಿ ಮಲ್ಲನ ಗೌಡನ ಮನೆ ಸೇರಿಕೊಂಡು ಜೀವ ಉಳಿಸಿಕೊಂಡ.
“ ಬ್ಯಾಡಲೋ ಬ್ಯಾಡಲೋ … ಅಂತ ನಾಲಿಗಿ ಗಂಟಲು ಹರಿಯಂಗ ಬಡಕೊಂಡೆನಲ್ಲಲೋ… ಆ ರಾಜಕೀ ಪರ‍್ಟಿಗಳ ಜೊತಿಗೆ ತಿರುಗ್ಯಾಡ ಬೇಡ ಅಂದಿನಿ… ಬಂಗಾರದಂತಹ ನಿನ್ನ ಕೈ ಇಲ್ಲದಂಗಾತಲ್ಲೋ.. ಏನು ಮಾಡಿ ನಾ ಸಾಯಲೋ …ಅಲ್ಲಾ …ಅಲ್ಲಾ” ಎಂದು ಗೌಸ್ ಮೊಯಿನುದ್ದೀನನ ತಾಯಿ ಬಿದ್ದು ಬಿದ್ದೂ ಅತ್ತಳು.
“ ನಮಗ್ಯಾಕಲೇ ಒಣ ರಾಜಕೀ ಪರ‍್ಟಿಗಳು.. ಆ ಜೀಪುಗಳು? ಅವರ ಹಿಂದ ಹೋಗಬ್ಯಾಡ.. ಹೋಗಬ್ಯಾಡ …ಅಂದೆ… ಇದು ಎಂದೋ ಒಂದು ದಿನ ತಿರುಗು ಬಾಣ ಆಗಿ ಬಡಿತೈತಿ ಅಂದಿದ್ದನಲ್ಲಲೇ.. ನನ್ನ ಮಾತು ಕೇಳಲಿಲ್ಲೋ..ಸುವ್ವರ್ ” ಎಂದು ತಂದಿ ಅಲ್ಲಾ ಭಕ್ಷಿ ಎದಿ ಎದಿ ಹೊಡಕೊಂಡು ಅತ್ತನು.
ಅಗಸಿ ಬಾವಿಯೊಳಗ ಶವಗಳಾಗಿ ತೇಲಿದ ಎಂಟು ಜನರ ಕಥಿ ಹಿಂದ ಗೌಸ್ ಮೊಯಿನುದ್ದೀನನ ಕೈವಾಡ ಇತ್ತೆಂದು ತಿಳಿದುಕೊಂಡ ಕೆಂಚನ ಗೌಡನ ಜನರು ಕಾವಲು ಕಾದು ಹಿಂಗ ಒಳ ಏಟು ಕೊಟ್ಟಿದ್ದರು. ಗೌಸ್ ಮೊಯಿನುದ್ದೀನ್ ಮೇಲೆ ನಡೆದ ದಾಳಿಯೊಳಗೆ ಜಮಾಲ್ ಸಾಬ್ ಕೆಂಚನ ಗೌಡನ ಕಡೆಯವರೊಳಗ ಇದ್ದದ್ದರಿಂದಾಗಿ ಊರೊಳಗಿನ ಸಾಬರೂ ಎರಡು ರ‍್ಗಗಳಾಗಿ ಹೋಳಾಗಿ ಬಿಟ್ಟರು. ಪ್ರತಿ ರ‍್ಷ ಜಾಂಡಾ ಕಟ್ಟಿಯ ಹತ್ತಿರ ನಡೆಯೋ ಪರ‍್ಲ ದೇವರ ಹಬ್ಬ ಕೂಡಾ ಈ ರ‍್ತಿ ಯಾರೂ ಮಾಡದಂಗಾದರು.
ಊರೀಗ ಊರಂತಿಲ್ಲ.
ಹಬ್ಬಗಳಿಲ್ಲ. ಆಚರಣೆಗಳಿಲ್ಲ..
ಒಬ್ಬರಿಗೊಬ್ಬರ ಸಹಕಾರವಿಲ್ಲ. ಅವರೆಂದರೆ ಇವರಿಗೆ ಕೋಪ,ಇವರೆಂದರೆ ಅವರಿಗೆ ಉರಿ. ಊರು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತಿದೆ. ಎಲ್ಲರೂ ಕೂಡಿ ನಕ್ಕು ನಲಿದು ಇದ್ದ ಊರೊಳಗೆ ಕಲಹಗಳೇ ಕುಣಿದು ಕೊರಳ ಕಡಿಯುತ್ತಿವೆ. ಊರೀಗ ಹಾಳುಬಿದ್ದ ಸ್ಮಶಾನವಾಗಿದೆ.
ಊರೀಗ ಒಡೆದು ಸರಿಪಾಲಾಗಿದೆ. ದೊಡ್ಡ ಕೇರಿಗಳೆಲ್ಲಾ ಮಲ್ಲನ ಗೌಡನ ಪಾಲಿಗಾದರೆ ಕೆಳಗೇರಿಗಳೆಲ್ಲಾ ಕೆಂಚನ ಗೌಡನ ಸೊತ್ತಾಗಿವೆ. ಊರಿಗೆ ಎರಡು ದಾರಿಗಳಾಗಿವೆ. ಕಾಳವ್ವನ ಹೋಟಲ ತನಕಾ ಬಸ್ಸು ಬರುತ್ತದೆ. ಅಲ್ಲಿಂದ ಊರೊಳಕ್ಕೆ ಬರದು. ಊರಿಗೆ ಸಂಬಂಧಿಸಿದ ಪಂಚಾಯ್ತಿಗಳು ನಡದ್ರೆ ಮಾತ್ರ ಕಾಳವ್ವನ ಹೋಟಲ ಹತ್ರದ ಚಾವಡಿಯೊಳಗೇ ನಡಿತದೆ.
“ಊರಿಗೆ ಶಾಲೆಯೊಂದು ಮಂಜೂರಾಗಿದೆ” ಎಂಬ ಸುದ್ಧಿ ತಿಳಿದೊಡನೆಯೇ ಊರಿನ ಎರಡೂ ಗುಂಪುಗಳವರು ಪೈಪೋಟಿಗೆ ಬಿದ್ದರು. ದೊಡ್ಡ ಕೇರಿಯಲ್ಲಿಯೇ ಆಗಬೇಕೆಂದು ಮಲ್ಲನ ಗೌಡ. ಕೆಳಗೇರಿಯಲ್ಲೇ ಆಗಬೇಕೆಂದು ಕೆಂಚನ ಗೌಡ. ಇಬ್ಬರೂ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ಕಂಡು ಬಲು ಪ್ರಯತ್ನಗಳನ್ನು ನಡೆಸಿದರು. ಇದರ ಮೇಲಾಗಿ ಮಲ್ಲನ ಗೌಡ ಶಾಸಕರನ್ನು ಹಿಡಕೊಂಡು ರಾಜಕೀಯ ನಡೆಸಿದ. ಶಾಲೆ ಎಲ್ಲಿ ತೆಗೆಯಬೇಕೋ… ರ‍್ಥವಾಗದೇ ಶಿಕ್ಷಣ ಶಾಖೆಗೇ ತಿಕ್ಕಲೆದ್ದಿತು.
ಊರಿನೊಳಗೆ ಶಾಲೆ ತೆಗೆಯುವ ಸುದ್ಧಿಯನ್ನು ನಂತರ ಪರಿಶೀಲಿಸೋಣವೆಂದು ಹೇಳಿ ಪೆಂಡಿಗ್ ನಲ್ಲಿಟ್ಟು ಫೈಲ್ ಮುಚ್ಚಿಹಾಕಿ ಶಿಕ್ಷಣ ಶಾಖೆಯು ಕೈ ತೊಳೆದುಕೊಂಡಿತು.
ಶಾಲೆಯಿಲ್ಲದ ಊರಲ್ಲಿ ಮಕ್ಕಳಿಗೆ ಇನ್ನೇನು ಕೆಲಸವಿರುತ್ತದೆ? ಕೆಲವು ಜನ ಎತ್ತು,ಎಮ್ಮೆ,ಕುರಿ, ಅಡು ಮೇಯಿಸಲಿಕ್ಕೆ ಗುಡ್ಡದ ಕಡೆಗೆ ಹೊರಟರು. ಮತ್ತೆ ಕೆಲವರು ಪಟ್ನದ ಕಡೆಗೆ ಹೋಗಿ ಆಟೋ ರಿಕ್ಷಾಗಳನ್ನು ನಡೆಸಿ ಬದುಕ ತೊಡಗಿದರು. ಇನ್ನೂ ಕೆಲವರು ಮಲ್ಲನ ಗೌಡನ ಜೀಪಿಗೆ ಆತುಕೊಂಡು ಪರ‍್ಟಿಗಳ ಮಾಡತೊಡಗಿದರು. ಯಾವಕ್ಕೂ ಸೇರದವರು ಕೆಂಚನ ಗೌಡ ತಯಾರು ಮಾಡೋ ನಾಡ ಬಾಂಬಿನ ಕರ‍್ಖಾನೆಯೊಳಗೆ ಕೆಲಸಕ್ಕೆ ಹೋಗುತಿದ್ದಾರೆ.
ಕಥೆಯಲ್ಲಾ ಹೀಗೆ ನಡೀತಿರುವಾಗಲೇ ….
ಗ್ರಾಮ ಪಂಚಾಯ್ತಿ ಚುನಾವಣೆಗಳು ಬಂದು ಸತ್ತವು.
ಊರ ಪರಿಸ್ಥಿತಿಯು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು.
ಇದಕ್ಕೆ ಜೊತೆಯಾಗಿ ಮೀಸಲಾತಿ ಸೀಟು ಬಂದು ಖಾಯಂ ಆಗಿದೆ. ಊರೊಳಗೆ ಎಲ್ಲಿ ನೋಡಿದರೂ ಇದೇ ಸುದ್ದಿಯೇ… ದೊಡ್ಡದಾಗಿದೆ. ಲಿಂಗಾಯ್ತರು,ಬಿ.ಸಿ. ರ‍್ಗಗಳು, ಮೈನಾರಿಟಿ ರ‍್ಗಗಳು, ಒಳಗೊಳಗೇ ಬೈದುಕೊಂಡರು, ಆದ್ರೆ ಹೊರಗೆ ಯಾರಿಗೆ ಕೊಟ್ಟರೂ ಒಳ್ಳೆಯದೇ ಅಂತ ಹೇಳುತಿದ್ದರು.
ಊರೊಳಗೆ ಎರಡು ಗುಂಪಿನ ಮಧ್ಯೆ ಈ ಚುನಾವಣೆಯು ಮತ್ತಷ್ಟು ಬೆಂಕಿಯನ್ನು ಬೆಳಸಿತು.
ಒಂದು ಪರ‍್ಟಿಯ ಕಡೆಗೆ ಮಲ್ಲನ ಗೌಡ ತನ್ನ ವ್ಯಕ್ತಿ ಮಾದಿಗರ ಅಂಕಪ್ಪನನ್ನ ಅಭ್ರ‍್ಥಿಯಾಗಿ ನಿಲ್ಲಿಸಿದರೆ, ಕೆಂಚನಗೌಡ ತನ್ನ ಮತ್ತೊಂದು ಪರ‍್ಟಿಯ ಅಭ್ರ‍್ಥಿಯಾಗಿ ಹೊಲ್ಯಾರ ಹುಚ್ಚಪ್ಪನನ್ನ ಪ್ರತಿಸ್ರ‍್ಧಿಯಾಗಿಸಿದ. ಎರಡೂ ಅರ‍್ಥಿಗಳು ರ‍್ಥಿಕವಾಗಿ ಏನೂ ಇಲ್ಲದವರೇ. ಇಬ್ಬರದೂ ಗುಡಿಸಲ ಬಾಳು, ಆದರೆ ನಂಬಿಗಸ್ಥರು. ಮಾದಿಗರ ಅಂಕಪ್ಪ ಹೊಡೆದಾಟ ಜಗಳವೆಂದರೆ ಮಾರು ದೂರ ಇರುವ ಮನುಷ್ಯ.ಪ್ರತಿ ಗುರುವಾರದ ದಿನ ಸಂತೆಗೋಗಿ ತರಕಾರಿ ವ್ಯಾಪಾರ ಮಾಡುತಿದ್ದ. ಹೆಬ್ಬಟ್ಟಿನವನು.
ಇನ್ನ ಹುಚ್ಚಪ್ಪ ಕೆಂಚನ ಗೌಡ ಹಾಕಿದ ಗೆರೆ ದಾಟಲಾರ. ಬಾಳಾ ಕಾಲದಿಂದಲೂ ಜೀಪು ಡ್ರೈವರಾಗಿ ಅಲ್ಲೇ ಇದ್ದವ.ಹುಚ್ಚಪ್ಪ ಕಾಗದ ಬರೆಯೋವಷ್ಟು ಓದನ್ನೂ ಕಲಿತಿದ್ದಾನೆ. ನಾಕು ಜನ ಹೆಣ್ಣ ಮಕ್ಕಳ ತಂದೆ ಎಂಬ ಸಣ್ಣ ಸಹಾನುಭೂತಿಯೂ ಈತನ ಮೇಲಿದೆ.
ಊರೊಳಗೆ…
ಕುವೈತ್ ನಿಂದ ಅಕ್ಬರ್ ಭಾಷಾ ಮಗಳು ಬಂದಿದ್ದಾಳೆ.
ಅವರಿರೋದು ಕೆಳಗೇರಿಯಲ್ಲೇ…
ಆ ಹುಡುಗಿಯ ಮೇಲೆ ಕೆಂಚನ ಗೌಡನ ಕಣ್ಣು ಬಿದ್ದಿತು.
“ ಅಕ್ಬರ್ ಮಾವಾ… ನಿನಿಗೆ ತಿಳಿಯದೇನೈತಿ? ನೋಡು ನನಿಗೆ ಮದುವಿ ಆಗೇತಿ ಅದ್ರ ಹೊಟ್ಯಾಗ ಮಕ್ಕಳಿಲ್ಲ. ನೀನು ಒಪ್ಪಿಕೊಂಡ್ರೆ ನಿನ್ನ ಮಗಳನ್ನ ಮಾಡಿಕ್ಯಾಬೇಕಂತ ಅದಾನಿ” ಅಂತ ನಾಟಿ ಕೋಳಿ ರೆಡಿ ಮಾಡಿಸಿ, ರಾತ್ರಿ ತನ್ನ ನಾಲ್ಕಂತಸ್ಥಿನ ಮಹಡಿ ಮನೆಯೊಳಗ ಕೂಡಿಸಿ ಹೇಳಿದನು ಕೆಂಚನ ಗೌಡ.
ಅಕ್ಬರ್ ಭಾಷಾ ಗೌಡನ ಮಾತಿಗೆ ಎದರು ಮಾತಾಡಿದರೆ ಊರೊಳಗೆ ಇರಲಾಗದೆಂದು ಒಪ್ಪಿಕೊಂಡನೋ..
ಕುಡಿದ ಅಮಲಿನೊಳಗೆ ತಲೆಯಾಡಿಸಿದನೋ ತಿಳಿಯದು.
ಆದರೆ ಅಂದಿನಿಂದ ಇಬ್ಬರ ಮನೆ ನಡುವೆ ಹೋಗೋದು ಬರೋದು ನಡಿಯತೊಡಗಿದವು.
ಮಗಳ ನಿಖಾದೊಂದಿಗೆ ಅಕ್ಕ ಪಕ್ಕದ ಸಾಬರೆಲ್ಲಾ ಕೆಂಚನ ಗೌಡನ ಕಡಿಗೇ ಕಲೆತು ಸೇರೋ ಹಂಗಾಯಿತು.
ಸ್ರ‍್ಧೆಗೆ ನಿಂತ ಮಾದಿಗರ ಅಂಕಪ್ಪನಿಗೆ ಕರೆಕಲ್ಲು ಗುಡ್ಡದ ಹತ್ರ ಹೊಲವಿತ್ತು. ರಾತ್ರಿ ಹೊಲಕ್ಕ ನೀರು ಕಟ್ಟಲೆಂದು ಹೊಲಕ್ಕೆ ಹೋಗಿದ್ದ ಆತನನ್ನ ಯಾರೋ…ಹೊಲದಲ್ಲಿರುವ ಬೇವಿನ ಮರಕ್ಕೆ ಉರುಲು ಹಾಕಿ ಹೋಗಿ ಬಿಟ್ಟರು. ಕುಟುಂಬಕ್ಕೇ ದೊಡ್ಡ ಆಧಾರವಾಗಿದ್ದ ತನ್ನ ಗಂಡನ ಸಾವನ್ನ ಕಂಡ ಅಂಕಪ್ಪನ ಹೆಂಡತಿ ನಾಕು ರ‍್ಷದ ಮಗನನ್ನ ಹಿಡಕೊಂಡು ಬರ‍್ಯಾಡಿ ಅತ್ತಳು.
“ ಸಿಗತಾರ…ಸಿಗತಾರ…
ಯಾರನ್ನೂ ಬಿಡಲಾರೆವು. ಸೊಲುಪ ಉಸಿರಾಡಲಿ….” ಎಂದು ಅಂದು ಹೆಣ ತಂದ ಮನಿ ಮುಂದೆ ನಾಕು ಸಮಾಧಾನದ ಮಾತುಗಳೇಳಿ ಹೋದನು ಮಲ್ಲನ ಗೌಡ.
ಚುನಾವಣೆಯ ದಿನಾಂಕವು ಘೋಷಣೆಯಾಯಿತು.
“ ನಾನು ಹೇಳೋದು ಕೇಳಮ್ಮಾ…
ಆ.. ನನ ಮಕ್ಕಳು ನಮ್ಮ ಅಂಕಪ್ಪನನ್ನ ಯಂಗ ಉರುಲು ಹಾಕಿದರೋ…? ಅದನ್ನ ಮರೆತು ಬಿಟ್ಟೆಯಾ?…
ಏನು? ನೀನು ನಮ್ಮ ಕಡೆ ಮನುಷಾಳು ಭಯ ಪಡಬೇಡ… ಎಲ್ಲಾ ನಾನು ಹತ್ತಿರವಿದ್ದು ನೋಡಿಕೊಳ್ಳುತ್ತೇನೆ. ಇಂತಾ ಹೊತ್ನಾಗ ಧರ‍್ಯ ತೋರಿಸಬೇಕು…. ನೀನು ನನ್ನ ಮಾತು ಕೇಳಿ ನಾಮಿನೇಷನ್ ಮಾಡು ಬಾ… ಎಂದು ಮಲ್ಲನ ಗೌಡ ಅಂಕಪ್ಪನ ಹೆಂಡತಿ ಆದಿ ಲಕ್ಷ್ಮಿಯನ್ನ ಸ್ರ‍್ಧೆಗೆ ಇಳಿಯಲು ಹೇಳಿದ.
“ ಸೋಮಿ … ನನಗ್ಯಾಕ ರಾಜಕೀಯದ ಉಸಾಬರಿ? ಇರೋ ಒಬ್ಬ ಮಗನ ಮೇಲೆಯೇ ನನ್ನ ಜೀವ ಸಾಮಿ. ಅವನ್ನ ಇಟ್ಟಕೊಂಡು ಬದುಕು ಸವಸತಾ ಅದೀನಿ. ನನಗೂ ಏನಾನ ಅದೂ ಇದೂ ಆದ್ರೆ ಮಗ ಅನಾಥ ಅಕ್ಕಾನ” ಎಂದು ಆಕಿ ಹಲುಬ್ಯಾಡಿದಳು.
ಆದರೂ….
ಅದ್ಯಾವುದನ್ನೂ ಲೆಕ್ಕಿಸದದಂತೆ ಮಲ್ಲನ ಗೌಡ ನಿಂತು ಆದಿಲಕ್ಷ್ಮಿಯನ್ನು ನಾಮಿನೇಷನ್ ಮಾಡಿಸಿದ.
ಪಾಪ… ಗಂಡನನ್ನು ಕಳೆದುಕೊಂಡ ಹೆಂಗಸು.
ದಿಕ್ಕೆಟ್ಟ ಬಡ ಕುಟುಂಬವೆಂದು ಜನರೊಳಗೆ ಸಹಾನುಭೂತಿ ಹುಟ್ಟಿತು.
ಸ್ರ‍್ಧೆಯೊಳಗೆ ಆದಿಲಕ್ಷ್ಮಿ ಗೆದ್ದಳು.
ಮಲ್ಲನ ಗೌಡ ಮೀಸೆ ತಿರುವಿದನು.
ಹೊಲದ ಹತ್ರ ಅಂಕಪ್ಪನನ್ನು ನಿಜವಾಗಿಯೂ ಕೆಂಚನ ಗೌಡನ ಕಡೆಯವರು ಸಾಯಿಸಿದರಾ…? ತನ್ನ ರಾಜಕೀಯ ಆದಿಪತ್ಯವನ್ನು ಉಳಿಸಿಕೊಳ್ಳಲಿಕ್ಕೆ ಚುನಾವಣೆಯಲ್ಲಿ ತನ್ನ ಅಭ್ರ‍್ಥಿಯನ್ನು ಗೆಲ್ಲಿಸಲಿಕ್ಕೇ ಮಲ್ಲನ ಗೌಡ ಈ ಕೆಲಸ ಮಾಡಿಸಿದನೋ? ಎಂಬ ಅನುಮಾನಗಳ ಹಕ್ಕಿಗಳೂ ರೆಕ್ಕೆ ಬಿಚ್ಚಿ ಹರ‍್ಯಾಡಿದ್ದು ಗುಸು ಗುಸು ಸುದ್ಧಿಯಾಗಿಯೇ ಉಳಿದು ಹೋಯಿತು.
***
ಕೆಂಚನ ಗೌಡ ಮದುವೆ ಆಗುತ್ತೇನೆಂದು ಹೇಳಿದನೇ ವಿನಾ ಅದೇನೂ ನಡಿಯಲೇ ಇಲ್ಲ. ರಾಜಾ ರೋಷವಾಗಿ ಅಕ್ಬರ್ ಭಾಷಾ ನ ಮಗಳನ್ನ ಇಟ್ಟುಕೊಂಡು ಆಕೆಗೊಂದು ಚಿಕ್ಕ ಮನೆ ಮಾಡಿದನು. ಕೆಲವು ಕಾಲ ಇಬ್ಬರ ಸಂಸಾರವೂ ಸಾಗಿತು. ಆಕೆ ತಾಯಿಯೂ ಆದಳು. ಕೆಂಚನ ಗೌಡನ ಆನಂದಕ್ಕೆ ಎಣೆಯಿಲ್ಲದಂಗಾಯಿತು. ಅದು ಅಷ್ಟಿಷ್ಟಲ್ಲ. ಕೆಂಚನ ಗೌಡ ತನ್ನ ಕಾಲು ನೆಲಕ್ಕಿಡದಂತೆ ಹಕ್ಕಿಯಾಗಿ ಮುಗಿಲೊಳಗೇ ತೇಲಾಡ ಹತ್ತಿದ. ದೇವರ ಪೂಜೆಗಳ ಮಾಡಿಸಿದ.ದಾನ ರ‍್ಮಗಳ ಮಾಡಿಸಿದ.
ಕೆಂಚನ ಗೌಡನಿಗೆ ಮಗ ಹುಟ್ಟಿದನು.
ಮಗ ಬಲಹೀನವಾಗಿರುವನೆಂದು ಡಾಕ್ಟರ್ ಗಳು ಹೇಳಿದ್ದರಿಂದ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ತಿರುಗ್ಯಾಡಿ ಬಂದನು. ಗ್ರಹ ಬಲದೊಳಗೆ ದೋಷ ವಿದೆಯೆಂದು ಫಕ್ಕೀರ ಗೌಡ ಎಂದು ಹೆಸರಿಡಬೇಕೆಂದು ಕೆಲವು ಜೋತಿಷಿಗಳು ಹೇಳಿದಂಗೆಯೇ ಮಾಡಿದನು. ಅತ್ತ ಮಸೀದಿಯೊಳಗೆ ಇತ್ತ ದೇವಾಲಯಗಳೊಳಗೆ ಎರಡೂ ಕಡಿಗೆ ಆತ ಪೂಜೆಗಳ ಮಾಡಿಸಿದ..
“ಬಲಹೀನವಾದ ಮಗು ಆರೋಗ್ಯವಾಗುತ್ತದೆ. ಆಯಿತವಾರ ಅಮಾಸೆ ದಿನ ರ‍್ಧರಾತ್ರಿ ಹೊತ್ತು ಹುಟ್ಟಿದ ಮಗ ದೊಡ್ಡ ರ‍್ವಜ್ಞನಾಗುತ್ತಾನೆ. ಇಲ್ಲಾಂದ್ರ ಪಾಪರು ಪಟ್ಟಿ ಪಟಿಂಗ ಕಳ್ಳನಾಗುತ್ತಾನೆ” ಎಂದು ಕೂಡಾ ಪೂಜಾರಿಗಳು ಹೇಳಿದರು.
ಈ ಮಾತುಗಳನ್ನ ಕೇಳಿ ಕೆಂಚನಗೌಡ ಬಿದ್ದೂ ಬಿದ್ದೂ ನಕ್ಕನು.
ಮಗನು ಬಂದ ಗಳಿಗೆ ಚಲೋದೈತೇನೋ, ಆದರೆ ಮಲ್ಲನ ಕೇರಿಯಿಂದ ಕೆಟ್ಟ ಸುದ್ಧಿಯೊಂದು ಆಗಲೇ ಬಂದು ಬಡಿಯಿತು. ತಂದೆ ರಾಜೇ ಗೌಡ ಸತ್ತನೆಂಬ ಸುದ್ಧಿ ತಿಳಿಯುತ್ತಲೇ ಕೆಂಚನ ಗೌಡನ ಎದೆಗೆ ಸಿಡಿಲು ಬಿಡಿದಂಗಾತು. ಪಟ್ಟನೇ ಮನೆಯಿಂದ ಹೊರ ಬಿದ್ದನು.
ಅಷ್ಟೊತ್ತಿಗೆ ಅಣ್ಣ ಮಲ್ಲನ ಗೌಡ ಕೂಡಾ ಬಂದು ಅಳುತಿದ್ದನು.
ಕೆಂಚನ ಗೌಡ ಕೂಡಾ ಬಂದು ಶವದ ಮೇಲೆ ಬಿದ್ದೂ ಬಿದ್ದು ಅತ್ತನು.
ಆ ನಂತರ ಮಷಾಣದ ಕರ‍್ಯಗಳೆಲ್ಲಾ… ಒಂದರ ನಂತರ ಒಂದು ಆಗಿ ಹೋದವು.
ಶವವನ್ನು ಗುದ್ದಿನೊಳಗೆ ಹೂತ ನಂತರ ಇಬ್ಬರೂ ಕೂಡಿ ಮೂರು ದಿನಗಳ ಹಿಂಡೇ ಕೂಳು ಎಡಿ ಮಾಡಿದರು.
ಮನೆಗೆ ತಂದ ಹೊಸ ಗಡಿಗೆಯೊಳಗೆ ಐದು ಪಾವುಗಳ ಅನ್ನ ಕುದಿಯುತ್ತಿರುವಾಗಲೇ ಮನೆಯೊಳಗೆ ಅಣ್ಣ ತಮ್ಮರಿಬ್ಬರೂ ದೇವರಿಗೆ ಪೂಜೆ ಮಾಡಿದರು. ದೀಪ ವಿಟ್ಟು ಹೊರಗೆ ಬಂದರು. ಒಳಗೆ ಏನು ಮಾತಾಡಿಕೊಂಡರೋ ತಿಳಿಯದು. ಆದರೆ ರಾಜ್ಯ ಮಟ್ಟದಲ್ಲಿ ರಾಜಕೀಯಗಳು ನಡೆದವು. ಎಂ.ಎಲ್.ಎ. ಯೊಂದಿಗೆ ಮಾತಾಡಿ ಬಂದಮೇಲೆ ರಾಜ್ಯ ಮಟ್ಟದಲ್ಲಿ ರಚಿಸಲಾದ ಕೃಷಿ ಮಾರುಕಟ್ಟೆ ಸಮತಿಯ ಕರ‍್ಯಕಾರಿ ಸದಸ್ಯನನ್ನಾಗಿ ಮಲ್ಲನ ಗೌಡನನ್ನು ಆಯ್ಕೆ ಮಾಡಲಾಯಿತು. ಇದಕ್ಕೆ ತೆರಿ ಹಿಂದೆ ಕೆಲಸ ಮಾಡಿದ್ದೇ ಕೆಂಚನಗೌಡನೆಂದು ಒಳಗಿನ ಗುಸು ಗುಸು….
ರ‍್ಕಾರದ ಬಂಗ್ಲೆ,ಕಾರು, ಆಫೀಸು ಪಡೆದು ಬೆಂಗಳೂರೊಳಗೆ ಕುಂತ ಮೇಲೆ ಊರೊಳಗಿನ ತನ್ನ ಕುಟುಂಬವನ್ನೆಲ್ಲಾ ಮಲ್ಲನ ಗೌಡ ಸಿಟಿಗೆ ಕರೆಸಿಕೊಂಡು ಬಿಟ್ಟ.
ಮಲ್ಲನ ಗೌಡನನ್ನು ಇಷ್ಟು ಕಾಲದಿಂದ ಊರೊಳಗೆ ನಂಬಿಕೊಂಡು ಬಂದವರ ಕಥೆಯೇನು? ಹೇಳಿಕೊಳ್ಳಲಾರದಂಗಾಯಿತು.
“ ನಾನು ಎಲ್ಲಿದ್ದರೂ ನಿಮಗೆ ಒಳ್ಳೆಯದೇ ಆಗುತ್ತದೆ. ರಾಜಧಾನಿಯೊಳಗೆ ಕುಳಿತರೆ ಎಂತಾ ಕೆಲಸಗಳಾದರೂ ಆಗುತ್ತವೆ. ನಿಮಗಾಗಿಯೇ ನಾನು ಹೋಗುತ್ತಿರುವುದು ” ಎಂದು ಹೇಳಿ ಮೊಸಳೆ ಕಣ್ಣೀರು ವರೆಸಿಕೊಂಡನು ಮಲ್ಲನ ಗೌಡ.
ಅಣ್ಣ ತಮ್ಮಂದಿರಿಬ್ಬರೂ ಕೂಡಿಕೊಂಡ ಮೇಲೆ ಊರು ಉದ್ದಾರ ವಾಗುತ್ತದೆಂದು ಎಲ್ಲರೂ ಅಂದುಕೊಂಡರು.
ಆದರೆ ಅದೇನೂ ಆಗಲಿಲ್ಲ.
ಊರೊಳಗೆ ಕೆಂಚನ ಗೌಡನದೇ ಆಡಳಿತವಾಯಿತು.
ಆತ ಹೇಳಿದ್ದೇ ಶಾಸನವಾಯಿತು.
ಅಲ್ಲಿ ತನಕ ಮಲ್ಲನ ಗೌಡನ ಬಳಿ ಕೆಲಸ ಮಾಡಿದವರನ್ನೆಲ್ಲಾ ಪೀಡಿಸುವುದು, ಕತ್ತರಿಸುವುದು, ಹೆಚ್ಚಾಯಿತು. ಕಷ್ಟ ಬಿದ್ದು ಎರಡು ಮೂರು ಸಲ ಬೆಂಗಳೂರಿಗೆ ಹೋಗಿ ಊರಿನ ಸಂಗತಿಗಳನ್ನೆಲ್ಲಾ ಮಲ್ಲನ ಗೌಡನಿಗೆ ಹೇಳಿದರೂ… ಏನೂ ಪ್ರಯೋಜನ ವಿಲ್ಲದಂಗಾಯಿತು.
“ಊರೊಳಗೆ ವಡೆದಾಟಗಳ್ಯಾಕೆ? ಯಾರೋ ಒಬ್ಬರು ಅನುಸರಿಸಿಕೊಂಡು ಹೋಗಬೇಕಪ್ಪಾ…ಏಷ್ಟು ಕಾಲ ಬಡಿದಾಡತೀರಿ ಅವು ಎಷ್ಟು ದಿನ ನಡೀತಾವೆ? ಸುಮ್ಮಕ ಸಿಕ್ಕಿದ್ದು ಗಳಿಸಿಕೊಂಡು ಸುಖ ಪಡಾದನ್ನ ನೋಡ್ರಿ. ಸಾಕಿನ್ನ… ಇಂಥಾ ರಾಡಿಗಳನ್ನ ಹೊತ್ತಗೊಂಡು ಇಲ್ಲಿತಂಕಾ ಬರಬ್ಯಾಡ್ರಿ. ಬೆಂಗಳೂರು ತಂಕ ತರಬ್ಯಾಡ್ರಿ ಬೇಸಿರಕಿಲ್ಲ ನಡ್ರೀ… ಇದಾ ಕಡೇ ಮಾತು ಎಚ್ಚರ” ಎಂದು ಕಡ್ಡಿ ಮುರಿದ ಮಲ್ಲನ ಗೌಡ.
ಅದಾ…ಕೊನಿ…
ಆ ಮ್ಯಾಲ ಅತನಿಂದ ಯಾರೂ ಒಳ್ಳೇದು ಬಯಸಲೂ ಇಲ್ಲ.
ನಮ್ಮ ರಾಡಿ ಪಂಚಾಯ್ತಿ ತೀರಿಸ ಬಾರಪ್ಪ ಎಂದು ಕೇಳಿಕೊಳ್ಳಲೂ ಇಲ್ಲ.
ಊರೊಳಗೆ ಕೆಂಚನ ಗೌಡಪ್ಪನದೇ ರ‍್ಭಾರಿಕಿ ನಡೆಯತೊಡಗಿತು. ಊರೊಳಗೆ ಆತನಿಗೆ ಯಾರ ಅಡೆತಡೆಯೇ… ಇಲ್ಲದಂಗಾಗಿ ಹೋಯಿತು.
ರೈತರು ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದ ಬೆಳೆಯನ್ನ ತನಗೇ ಮಾರಬೇಕೆಂದು ಕೆಂಚನ ಗೌಡ ಠರಾವು ಹೊರಡಿಸಿದ. ರೈತರಿಗೆ ನ್ಯಾಯಯುತವಾದ ಬೆಲೆಯನ್ನು ಸಯಿತಾ ನೀಡಲಿಲ್ಲ.
ಊರೊಳಗೆ ರೈತರು ಕಷ್ಟ ಪಡುತ್ತಾರೆಯೇ ವಿನಾ, ಅವರು ಬೆಳೆದ ಬೆಳೆಗೆ ಬೆಲೆ ಕಟ್ಟುವುದು ಮಾತ್ರ ಕೆಂಚನ ಗೌಡನದೇ ಆಯಿತು. ʼಗೌಡನನ್ನು ಬಿಟ್ಟು ಮಾರಿದರೆ ಬೂದಿ ಪಾಲು ಗೌಡನಿಗೆ ತಂದು ಮಾರಿದರೆ ಕಾಡುಪಾಲುʼ ಅನ್ನಂಗಾತು. ಅವರ ಪಾಡು.
“ವ್ಯವಸಾಯವೆಂದರೆ ಜೂಜಾಟವಾ? ಕೊನೆಗಾಣದ ದುಃಖವಾ?”…
ಹೊಲಗಳ ಬಳಿಯೇ ಕೆಂಚನ ಗೌಡರ ನಾಲ್ಕು ಜನ ನಿಂತು, ಮುಖಕ್ಕೆ ಹೊಡೆದಂತೆ, ಟ್ರ‍್ಯಾಕ್ಟರ್ ಗಳೊಳಗೆ, ಲಾರಿಗಳೊಳಗೆ ರೈತರು ಬೆಳೆದ ಬೆಳೆಗಳನ್ನ ಹದ್ದುಗಳಂತೆ ಹಾರಿಸಿಕೊಂಡು ಹೋಗುತ್ತಿದ್ದಾರೆ…
ರೈತರು ತಿರುಗಿ ಬೀಳಲಾಗದೇ ಹೋದರು.
ಯಾರಿಗೆ ಹೇಳಿಕೊಳ್ಳುತ್ತಾರೆ?
ಇದಕ್ಕೆ ಜೊತೆಯಾಗಿ….
ಊರೊಳಗೆ ನಂಬರ್ ಗಳಾಟದ ಮಟ್ಕವೂ ಬಂದಿದೆ.
ಸುತ್ತು ಮುತ್ತಲ ಹಳ್ಳಿಗಳನ್ನೆಲ್ಲಾ ಸೆಳಕೊಂಡಿದೆ.
“ ರೂಪಾಯಿಗೆ ನೂರು ರೂಪಾಯಿಗಳು” ಎಂದು ಹೇಳಿದ್ದರಿಂದ ಆಸೆಪಟ್ಟ ಜನರು ತಮ್ಮ ಹತ್ತಿರ ಉಳಿಸಿದ ಹಣವನ್ನೆಲ್ಲಾ ತೆಗೆದು ತಮ್ಮ ಅದೃಷ್ಟವನ್ನ ಪರೀಕ್ಷಸಲು ನೋಡಿದರು. ಆ ಆಟ ಕೆಂಚನ ಗೌಡನ ಮನೆಗೆ ಹಣದ ಬೆಳೆಯಾಗಿ ಒದಗಿತು.
ರಾತ್ರೋ ರಾತ್ರಿಗೆ ಲಕ್ಷಾಧೀಶ್ವರರಾಗಬೇಕು,ಕೋಟ್ಯಾಧೀಶ್ವರರಾಗಬೇಕು ಎಂದು ಕನಸು ಕಾಣುವವರನ್ನು ಬೇಟೆಯಾಡುತ್ತಲೇ ಕೆಂಚನ ಗೌಡ ಬೆಳೆದುಬಿಟ್ಟನು. ಮಟ್ಕಾದ ಏಟಿಗೆ ಸುಖದ ಕುಟುಂಬಗಳು ಒಡೆದು ಛಿದ್ರ ಛಿದ್ರಗೊಂಡವು. ಹೆಣ್ಣು ಮಕ್ಕಳ ಕೊರಳೊಳಗಿನ ತಾಳಿ ಸರಗಳು ಕೂಡಾ ಮಟ್ಕಾದ ಮಹಾ ಮಾರಿಗೆ ಆಹುತಿ ಆದವು.
ನೋಡು ನೋಡುತ್ತಿದ್ದಂತೆಯೇ ಊರೊಳಗೆ ಮತ್ತೊಂದು ಅನಿಷ್ಟವು ಊರನ್ನು ಪ್ರವೇಶಿಸಿತು.
ರ‍್ಕರವು ಎರಡು ಬ್ರಾಂದಿ ಶಾಪುಗಳನ್ನು ತೆರೆಯಲು ಕೆಂಚನ ಗೌಡನಿಗೆ ರ‍್ಮಿಷನ್ ನೀಡಿತು.
ಇದರೊಂದಿಗೆ ಊರೆಲ್ಲಾ ಮತ್ತಾಗಿ ಮಲಗಿತು.
ಹೆಸರಿಗೆ ಅವು ಬ್ರಾಂದಿ ಶಾಪುಗಳಾದವೇ ವಿನಃ ಒಳಗೆಲ್ಲಾ ಅವು ಕಳ್ಳ ಬಟ್ಟಿ ಸರಾಯಿಯ ಸರಕೇ ಆಗಿದ್ದವು.
ಕಲ್ಲಪ್ಪನ ಗುಡಿ ಕೆಳಗಿನ ಕೆರೆ ಅಂಗಳದಲ್ಲಿ ಬಟ್ಟಿ ಸರಾಯಿ ತಯಾರು ಮಾಡುವುದು…
ಆ ಸರಕನ್ನು ಪ್ಲಾಸ್ಟಿಕ್ ಕ್ಯಾನ್ ಗಳೊಳಗೆ ಹಳ್ಳಿಗಳಿಗೆ ತರುವುದು…
ಆ ಸರಕಿನ ಯಾಪಾರವನ್ನು ಪುಲ್ ಬಾಟಲು.. ಆಫ್ ಬಾಟಲುಗಳಾಗಿ ಮರ‍್ಪಡಿಸುವ ವ್ಯಾಪಾರ ಸುರುವಾಯಿತು.
ಆ ನಂತರ ಕೆಂಚನ ಗೌಡ ಹಿಂದಕ್ಕೆ ತಿರುಗಿ ನೋಡಲೇ ಇಲ್ಲ…
ಮಲ್ಲನ ಗೌಡ ರಾಜಧಾನಿ ಲೆವೆಲ್ ನೊಳಗೆ ಸಂಪಾದಿಸಿಕೊಳ್ಳುತ್ತಾ ಊರಿನ ಕಡೆಗೆ ಬರಲೇ ಇಲ್ಲ.
ನೋಡಲೇ ಇಲ್ಲ.
***
ಕಾಲ ಕಳೆಯುತ್ತಲೇ ಇತ್ತು.
ಎಂ.ಎಲ್.ಎ ಈ ಸಲ ಚುನಾವಣೆಯೊಳಗೆ ತಾನು ನಿಲ್ಲಲಾರದೇ ತನ್ನ ಮಗ ವೀರನ ಗೌಡನನ್ನು ನಿಲ್ಲಿಸಿದನು. ಮಲ್ಲನ ಗೌಡನ ಪರ‍್ಟಿಯ ಗೆಲುವಿಗಾಗಿ ಕೆಂಚನ ಗೌಡ ಶ್ರಮಿಸಿದನು. ಎಂ.ಎಲ್.ಎ. ಮಗನನ್ನು ಗೆಲಿಸಿಕೊಳ್ಳಲಿಕ್ಕಾಗಿ ತಮಗೆ ಎದುರು ಬಿದ್ದ ಎರಡು ಮೂರು ಕಡೆಯ ಅಭ್ರ‍್ಥಿಗಳನ್ನು ಕಾವಲು ಕಾದು ಕಿಡ್ನಾಪ್ ಮಾಡಿಸಿದನು.
“ ಯಂಗಾದರೂ ಎಷ್ಟು ರ‍್ಚಾದರೂ ನನ್ನ ಮಗ ಗೆಲ್ಲಬೇಕು..” ಎಂದು ಎಂ.ಎಲ್.ಎ. ಶಪಥ ಮಾಡಿದ್ದ.
ಎರಡು ದಿನಗಳು ಹಳ್ಳಿ ಹಳ್ಳಿಗಳೊಳಗೆ ಬಿಳಿಯ ಸುಮೋ ಕಾರ್ ಗಳಲ್ಲಿ ಮಲ್ಲನ ಗೌಡ ತಿರುಗಾಡಿದ.
ಜನವ್ಯಾರೂ ಆತನನ್ನ ಗೌರವದಿಂದ ನೋಡಲಿಲ್ಲ.
ಅಭಿಮಾನಪಟ್ಟು ಆದರಿಸಲಿಲ್ಲ.
ಪ್ರಚಾರಗಳ ರ‍್ವವೂ ಮುಗಿಯಿತು.
ಓಟು ಹಾಕುವ ದಿನ ಬಂದೇ ಬಿಟ್ಟಿತು.
ಕಳ್ಳ ಬಟ್ಟಿ ಸರಾಯಿ ಹಳ್ಳಿಗಳನ್ನು ಹೊಕ್ಕು ಹಿಂಡಿ ಹಾಕಿತು. ನೋಟಿನ ಕಂತೆಗಳು ರೆಕ್ಕೆ ಬಿಚ್ಚಿಕೊಂಡು ಬಾಗಿಲುಗಳಿಗೆ ಮಾವಿನ ತೋರಣಗಳಾದವು. ಓಟಿಂಗ್ ಎಲ್ಲೂ ನಡೆಯಲಿಲ್ಲ. ಪೋಲಿಂಗ್ ಆಫೀಸರ್ ಗಳು ಮಾರಾಟವಾದರು. ಎಲ್ಲಾ ಓಟುಗಳನ್ನು ಕೆಂಚನ ಗೌಡನ ಕಡೆಯವರೇ ಗುದ್ದಿ ಬ್ಯಾಲೆಟ್ ಬಾಕ್ಸಗೆ ತುಂಬಿದರು. ಈ ಸಲದ ಚುನಾವಣೆಯ ನೇತೃತ್ವವನ್ನು ಕೆಂಚನ ಗೌಡನ ಮಗ ಫಕ್ಕೀರ ಗೌಡನೇ ವಹಿಸಿಕೊಂಡಿದ್ದ.
ಫಕೀರಗೌಡನ ಕಡೆಯವರು ಪೋಲಿಂಗ್ ದಿನ, ಕೋಡಿ ಹಳ್ಳಿಯ ವಿರೋಧ ಪಕ್ಷದ ಅಭ್ರ‍್ಥಿಯ ಏಜೆಂಟು ನಾಗಭೂಷಣನನ್ನು ತುಂಡು ತುಂಡಾಗಿ ಕತ್ತರಿಸಿದರು.
ಚುನಾವಣಾ ಅಧಿಕಾರಿಗಳು ಅಲ್ಲಿ ರೀಪೋಲಿಂಗ್ ʼಗೆ ಆದೇಶ ನೀಡಿದರು.
ಆ ನಂತರ ಅದನ್ನು ಕೂಡಾ ಮತ್ತೆ ಫಕ್ಕೀರಗೌಡ ರಾಜಕೀಯ ಮಾಡಿ ತಮ್ಮದನ್ನಾಗಿಸಿಕೊಂಡ.
ಎಂ.ಎಲ್.ಎ. ಮಗ ವೀರನ ಗೌಡ ಚುನಾವಣೆಯಲ್ಲಿ ಗೆದ್ದನು.
ಅವರಿಗಾದ ಸಂತೋಷ ಅಷ್ಟಿಷ್ಟಲ್ಲ.
“ಯುವಕರು ರಾಜಕೀಯದೊಳಗೆ ಕಾಲಿಡುವಂತಹ ಅಗತ್ಯವೇನೋ ಇದೆ. ಅದಕ್ಕೆ ಆತನಿಗೆ ಈ ಚುನಾವಣೆಯೇ ಶ್ರೀಕಾರವಾಯಿತು.” ಎಂದು ಶಾಸಕರು ಮೀಸೆ ತಿರುವಿಕೊಳ್ಳುತ್ತಾ ಹೇಳಿದರು.
ವೀರನ ಗೌಡ ತನ್ನ ಬೆಂಬಲಿಗರಾದ ಕೆಂಚನ ಗೌಡ, ಪಕ್ಕೀರ ಗೌಡರ ಜೊತೆಗೆ ಬಣ್ಣದಗಳಲ್ಲಿ ಮುಳುಗಿ ಕುಂಕುಮದ ತಿಲಕ ಇಟ್ಟುಕೊಂಡು ಸಂಭ್ರಮದಿಂದ ಪೇಪರ್ ಗಳಲ್ಲಿ ಕಾಣಿಸಿಕೊಂಡ.
ಫಕ್ಕೀರ ಗೌಡನೇ ಆ ಸಮಾರಂಭಕ್ಕೆ ರ‍್ಚು ಮಾಡಿದನೆಂದು ಸುದ್ಧಿಯಾಯಿತು..
ಈ ಚುನಾವಣೆಯೊಂದಿಗೆ ಕೆಂಚನ ಗೌಡನಿಗೆ ಒಂದು ನಂಬಿಕೆ ಕುದುರಿತು.
ಫಕ್ಕೀರ ಗೌಡ ತನ್ನಂತೆಯೇ ಬೆಳೆಯ ಬಲ್ಲ.
ಮಟ್ಕಾ ವ್ಯಾಪಾರಗಳು, ಭಟ್ಟಿ ಸರಾಯಿ, ರಸ್ತೆ ಕಾಮಗಾರಿಗಳ ಕಾಂಟ್ರಾಕ್ಟಗಳನ್ನೆಲ್ಲಾ ಆತನಿಗೇ ವಹಿಸಿದ.
ತಾನು ಎಲ್ಲಿಗೂ ಹೋಗಲಿಲ್ಲ.
ದಿನಗಳು ಹೀಗೇ ಕಳೆಯುತ್ತಲೇ ಇದ್ದವು…
ಇದ್ದಕ್ಕಿದ್ದ ಹಾಗೇ ಒಂದು ದಿನ ಎಂ.ಎಲ್.ಎ. ಮಲ್ಲನಗೌಡರು ಬಂದು ಹೊಸ ಸಂದೇಶವೊಂದನ್ನು ಬಿತ್ತರಿಸಿದರು.
“ ಅಮೇರಿಕಾಕ್ಕೆ ಹೋಗಿ ಎರಡು ರ‍್ಷ ಇದ್ದು ಬರೋಣಪ್ಪಾ ಬಾ” ಎಂದು ತಿಳಿಸಿದರು.
ಕೆಂಚನ ಗೌಡ ತುಟಿಗಳಲ್ಲಿ ನಗು ಅರಳಿಸುತ್ತಾ “ ಏನಣ್ಣಾ … ಆ ಕಡಿಕೆ ಗಾಳಿ ಬೀಸುಬುಟೈತೆ” ಎಂದ.
“ ಬುಡಾ ಇಷ್ಟು ರ‍್ಷಗಳೆಲ್ಲಾ ಮಾಡಿದವನ್ನೇ ಮಾಡಿ ಮಾಡಿ ಸಾಕಾತು. ಇನ್ನಾನ ಓಟು ಆ ದೂರದ ದೇಶಕ್ಕ ಹೋಗಿ ನಿರುಮ್ಮಳವಾಗಿ ಲೋಕ ಸುತ್ಯಗಂಡು ಬರೋನಾ ನಡಿ, ಇಲ್ಲಿ ಎಲ್ಲಾ ಸರಿ ಹೋಗೇತಿ ನಡಿ…” ಅಂತಾ ತೂಗ್ಯಾಡೋ ಕರ‍್ಚಿಯೊಳಗ ಕುಂತು ತೂಗುತ್ತಾ ಹೇಳಿದನು.
“ ಬಿಡು ನಡಿಯಣ್ಣಾ… ನನಗೂ ಅಂಗಾ ಅನಸಾಕತ್ತೇತಿ…. ನಮ್ಮ ಮ್ಯಾಲ ಯಾ ಜವಾಬ್ದಾರಿಗಳು ಗುಡಾ ಇಲ್ಲ. ಯಾಪಾರ..ಅಧಿಕಾರಗಳನ್ನೆಲ್ಲಾ ಮಕ್ಕಳೇ ನೋಡಿಕೊನಾಕತ್ಯಾವು. ಹ್ವಾದ ರ‍್ಷ ಅದೇನೋ ಪಾಸ್ ಪರ‍್ಟ ವಿಸಾ ಅದೆಲ್ಲಾ ಮಾಡಿಸಿದ್ದೆಲ್ಲಾ ಇದಕಾ ಏನು?, ಅಬಬಬೋ ಭಾರಿ ಬಿಡು ನೀನು. ಆತು ನಡಿಯಣ್ಣಾ ಹೋಗಾನ..ನಮಗೂ ಆ ಕಡಿ ಗಾಳಿ ಕುಡದಂಗಕ್ಕಾತಿ” ನಿರುಮ್ಮಳವಾಗಿ ಒಪ್ಪಿದನು ಕೆಂಚನ ಗೌಡ.
ಅಷ್ಟೇ….
ಬರೋ ವಾರಕ್ಕೇನೇ.. ಎಲ್ಲಾ ಹೊಂದಿಸಿಕೊಂಡರು.
ವಿಮಾನ ಗಾಳಿಯೊಳಗೆ ಹಾರಿತು.
***
ಕೆಂಚನ ಗೌಡ, ಮಲ್ಲನ ಗೌಡರು ಅತ್ತ ಅಮೇರಿಕಾಕ್ಕೆ ಹೋಗುತ್ತಲೇ…
ಇತ್ತ ಹೊಸ ಎಂ. ಎಲ್.ಎ. ವೀರನ ಗೌಡನ ಬೆಂಬಲಿಗರೊಂದಿಗೆ ಫಕ್ಕೀರ ಗೌಡ ಎದ್ದು ಕುಂತನು.
ಊರೊಳಗೆ ತನಗೆ ಎಡಗೈ ಬಲಗೈ ಆಗಿದ್ದ ಬಾರಕೀರ ಸಿದ್ಧಪ್ಪ, ತಳವಾರ ರೇವಣ ಸಿದ್ಧಪ್ಪನನ್ನ ಬೆನ್ನ ಹಿಂದೆ ಇಟ್ಟಕೊಂಡು ಹೊಲಗಳಿಗೆ ಕೆಲಸಕ್ಕೆಂದು ಬರುವ ಚಂದುಳ್ಳ ಹೆಣ್ಣುಮಕ್ಕಳನ್ನು ಬಿಡದೆ ಅನುಭವಿಸುವುದನ್ನು ಶುರುಮಾಡಿದನು.
ತನ್ನ ಹತ್ತಿರಕ್ಕೆ ನ್ಯಾಯ ಕೇಳಿಕೊಂಡು ಬರುವ ಬಡಜನರನ್ನು ಪೀಡಿಸಿ ಹಣ ವಸೂಲಿ ಮಾಡುವುದು…
ವಾರ ಬಡ್ಡಿಗೆ ರೊಕ್ಕ ಕೊಟ್ಟು ತನಗೆ ಬೇಕಾದಂಗೆ ಬಾಂಡು ಬರೆಸಿಕೊಂಡು… ಮನಿ ಮಠ ಎತ್ತಾಕಿಕೊಳ್ಳೋದು.
ಅಡ್ಡ ಬಂದವರನ್ನ…
ತಿರುಗಿ ಬಿದ್ದವರನ್ನ…
ಹಿಡಿ ಹಿಡಿದು ಊರ ಹೊರಗಿನ ತೋಟದ ಮನಿಗೆ ತಂದು ನಾದಿ ನಾದಿ.. ನರಗಳನ್ನ ಕತ್ತಿರಿಸೋದ ಮಾಡತೊಡಗಿದ.
ಫಕ್ಕೀರ ಗೌಡನ ಏಟಿಗೆ ಎದುರೇ ಇಲ್ಲದಂಗಾತು.
ಭೂಮಿ ಹುಚ್ಚು ಹಿಡಿಯಿತು.
ತನಗೆ ಹಿಡಿಸಿದ ಕಾಲುವೆ ಮ್ಯಾಗಳ ಭೂಮಿಗಳ ಮೇಲೆಲ್ಲಾ ಕಣ್ಣಾಕಿದ.
ರಾತ್ರೋ ರಾತ್ರಿ ನಂಬರ್ ಕಲ್ಲುಗಳನ್ನ ಬದಲಿಸಲು ಹೇಳಿದ…
ಹಳ್ಳಗಳನ್ನು ಮಾಯ ಮಾಡಿಸಿದ…
ಭೂಮಿಗಳನ್ನೆಲ್ಲಾ ಖಬ್ಜಾ ಮಾಡಿಕೊಳ್ಳ ತೊಡಗಿದ.
ಫಕ್ಕೀರ ಗೌಡನ ಕಡೆಯೋರಿಗೆಲ್ಲಾ ಇದೇ ಕಸಬಾಯಿತು.
ಅವರೆಲ್ಲಾ ಈ ಕಸಬಿನೊಳಗೇ ಮುಳುಗಿ ಹೋದರು.
ವೀರ ಭದ್ರಿಯ ಮನಸೆಲ್ಲಾ ಉರಿಯುತ್ತಿದೆ.
ರಕ್ತ ಕುದಿಯುತ್ತಿದೆ.
ಇದಕ್ಕೆ ನಾನು ಅಡ್ಡಲಾಗಬೇಕು.
ನನ್ನ ಭೂಮಿನ ನಾನು ಉಳಿಸಿಗ್ಯಾಬೇಕು.
***
ಅರಳೀ ಮರದ ರೆಂಬೆಗಳು ಗಾಳಿಗೆ ಸಣ್ಣಗೆ ತೂಗುತ್ತಿವೆ…
ಹೊತ್ತುಟ್ಟಿ ಎಳೆ ಬಿಸಿಲು ಬಿದ್ದು ಎಲೆಗಳೆಲ್ಲಾ ಥಳ ಥಳನೇ ಹೊಳೆಯುತ್ತಿವೆ…. ಪಕ್ಷಿಗಳ ಕೊರಳಿಂದ ನೂರಾ ಒಂದು ಸದ್ದು….
ಮರದ ರೆಂಬೆಗಳು ತೂಗುತ್ತಾ ತೂಗುತ್ತಾ ನೆಲದ ಬಳಿಗೆ ಹಾಯುತ್ತಿವೆ. ಅವು ಭೂಮಿ ತಾಯಿಯನ್ನ ಪ್ರೀತಿಯಿಂದ ಮುತ್ತಿಡಲು ಬಾಗಿದಂಗೆಯೇ ಕಾಣುತ್ತವೆ…
ಒಂದು ಕೈಯೊಳಗೆ ಖಡ್ಗವನ್ನು ಮತ್ತೊಂದು ಕೈಯೊಳಗೆ ಕುದುರೆಯ ಹಗ್ಗವನ್ನು ಹಿಡಕೊಂಡು ಹೋರಾಟ ಮಾಡುತ್ತಿರುವ ವೀರಗಲ್ಲೊಂದು ಆ ಮರದ ಪೊಟರೆಯೊಳಗೆ ಅತುಕೊಂಡು ನಿಂತಿದೆ.
ಅದೇ ಕಟ್ಟೆಯ ಮೇಲೆ ಊರ ಹಿರೀಕರು ಕುಳಿತಿದ್ದಾರೆ. ಉಳಿದವರೆಲ್ಲಾ ನೆಲದ ಮ್ಯಾಲೆಯೇ ಕುಳಿತಿದ್ದಾರೆ.
“ ಹಂಗಾದ್ರೆ… ಏನಂತಿಯಾ…ವೀರಭದ್ರೀ…? ಫಕ್ಕೀರ ಗೌಡ್ರು ನಿನ್ನ ಭೂಮಿನಾ ಒತ್ತಿಕ್ಯಂಡಾನ ಅಂತೀಯಾ? ಹಂಗದ್ರ ನೀನು ಆತನ್ನಾ… ಭೂಮಿ ಕಳ್ಳಾ ಅಂತೀಯಾ!?” ಅಂತಾ ಕೇಳಿದನು ರೇವಣಪ್ಪ.
ಅತ್ತ ಕಿವಿಗೊಡದೇ ಪಂಚಾಯ್ತಿ ಕಟ್ಟೆ ಕಡೆಗೆ ತಿರುಗಿದ ವೀರಭದ್ರಿ “ ಏನೇಳ್ತೀರಿ ಗೌಡ್ರೇ…ಎಕರಿಯಿಂದ ಈಗ ಎಲ್ಡೆಕ್ರೀ ಹಿಡದಾರ, ರಾತ್ರಿಗೆ ರಾತ್ರಿಯೇ ಮ್ಯಾರಿ ಕಲ್ಲು ಕಿತ್ತು ಈ ಕಡಿಗೆ ಹುಗುದಾರ. ಇದರ ಮ್ಯಾಲ ಪಂಚಾಯ್ತಿ ಇಟ್ಟರ ಅವರೇ ಹೇಳಿದ್ದ ಕೇಳಬೇಕು ಅಂತ ಅವತ್ತು ಕಳಿಸಿಬಿಟ್ಟಿರಿ. ಈಗ ಅವರೇ….ಸರಕಂತಾ ಸರಕಂತಾ.. ಹೊಲವೀಟೂ ಹಿಡದಾರ… ಈಗ ನಮಗ ಉಳಿದಿರೋದು ಹಳ್ಳದ ತುಂಡು ಹೊಲ ಒಂದಾ… ಅದು ಕೂಡಾ ಮೊನ್ನೆ ರಾತ್ರಿ ಫಕ್ಕೀರ ಗೌಡ್ರ ಭೂಮಿ ಒಳಗಾ ಬರತೈತಿ ಅನ್ನಂಗ ಮ್ಯಾರಿ ಕಲ್ಲು ಕಿತ್ತಕ್ಯಾರಪ್ಪೋ… ಇನ್ನ ನಾನೇನ್ ಮಾಡದು?” ಅಂತಾ ವೀರಭದ್ರ ದುಃಖಿಸಿದನು.
ಕಟ್ಟಿ ಮ್ಯಾಗ ಕುಂತ ದೊಡ್ಡ ಜನರೆಲ್ಲಾ ಆನಂದ ಪಡುತಿದ್ದರೆ ಕೆಳಗೆ ನೆಲದ ಮೇಲೆ ಕುಂತ ಹಳ್ಳಿ ಜನರು ಕಕ್ಕ ಬಿಕ್ಕಿಯಾಗಿ ನೋಡ್ತಾ ಇದ್ರು.
ಮರದ ಬುಡದಲ್ಲೇ ನಿಂತ ಫಕ್ಕೀರ ಗೌಡ ಮೀಸಿ ತಿರುವುತಿದ್ದಾನೆ.
ಮರದ ಕೊಂಬೆಗಳ ತೂಗಾಟವಿಲ್ಲ. ಶಬ್ದಗಳಿಲ್ಲ…. ಪಕ್ಷಿಗಳ ಕಲರವವಿಲ್ಲ…
ಕಣ್ಣಗಲಕ್ಕೂ….ವೀರಭದ್ರ ಅಳುತ್ತಿರುವ ನೋಟ.
“ ಅತ್ತು ಬಿಡಲೇ… ಗಂಡಸು ಅತ್ರೆ ಮುಂಡೆ ನೋಡಿದಂಗ ಅಕ್ಕಾತಿ…. ತಟಗನ್ನಾ ರೋಷವಿಲ್ಲದ ಕಳ್ಳ ಸೂಳೇ ಮಗನೇ…ನಮ್ಮ ಫಕ್ಕೀರ ಗೌಡ್ರನ್ನ ಪಂಚಾಯ್ತಿಗೆ ಕರಿತೀಯಾ ನೀನು!? ಅವ್ರ ಮೇಲೆನೇ… ಭೂಮಿ ಕಳುವು ಹೊರಸ್ತೀಯಾ?… ಅಂದ್ರ ಕಳ್ಳ ಅಂತೀಯೇನ್ಲೇ…
ಅಂತ ಪೊಗರು ಬಂದತೇನ್ಲೇ ನಿನಗೆ…” ಎಂದು ಎಗರಿ ಜಾಡಿಸಿ ಒದ್ದ ಬಾರಿಕೇರ ಸಿದ್ದಪ್ಪ.
ವೀರಭದ್ರಿ ಸಿಡಿದು ಅಷ್ಟು ದೂರ ಉರುಳಿದ.
ಏಳಲು ಹೋದವನಿಗೆ ಮತ್ತೊಂದು ಒದೆ ಬಿತ್ತು.
ಇದೇ ಅವಕಾಶ ನೋಡಿಕೊಂಡು ಫಕ್ಕೀರ ಗೌಡ ಕೂಡಾ ಒದೆಯಲು ಶುರುವಿಟ್ಟನು.
“ ಬೀಳ್ಲಿ ಸೊಕ್ಕು ಕರಗತಾವು. ಏಟು ತಿಮರು ಇರಬೇಕು ಈ ತಿರಬೋಕಿಗೆ ನಮ್ಮ ಗೌಡನ್ನ ಪಂಚಾಯ್ತಿಗೆ ಕರಸಾಕ. ಇನ್ನಾ ನಾಕು ಹಾಕ್ರಿ. ಬುದ್ಧಿ ರ‍್ತಾವು… ಲಮ್ಡಿ ನನ ಮಗನಿಗೆ” ….ಕುಂತು ಕಾರಿಕೊಂಡ ತಳವಾರ ರೇವಣಪ್ಪ.
ವೀರ ಭದ್ರನಿಗೆ ಎರಡೂ ಕಡೆಯಿಂದ ಏಟು ಬೀಳತೊಡಗಿದವು.
ಒಂದು ಕಡಿಗೆ ಸಿದ್ದಪ್ಪ, ಇನ್ನೊಂದು ಕಡಿಗೆ ಫಕ್ಕೀರ ಗೌಡ…. ಕೆಳಗೆ ಬೀಳಿಸಿಕೊಂಡು ರುಬ್ಬತೊಡಗಿದರು.
ಈ ರ‍್ತಿ ಫಕ್ಕೀರ ಗೌಡನು ಹಿಡಿದು ಎಳೆದು ಒದ್ದ ಏಟಿಗೆ ವೀರ ಭದ್ರ ಹಾರಿ ಮರದ ಪೊಟರಿ ಹತ್ರ ಬಿದ್ದ.
ಆತನ ಇನ್ನೊಂದು ಹೊಡ್ತ ಬೀಳೋ ಮುನ್ನವೇ ಬಗಲಾಗ ನೇತಾಡುತಿದ್ದ ಚೀಲದಿಂದ ಗಂಡು ಗೊಡಲಿ ತೆಗೆದು ಮಿಂಚಿನಂತೆ ಮೇಲಕ್ಕೆದ್ದ…
ಸುತ್ತು ಸೇರಿದ ಜನರು ಓಟ ಕಿತ್ತರು…
ವೀರಭದ್ರಿ ಬೀಸಿದ ಒಂದೇ ಒಂದು ಏಟಿಗೆ ಫಕ್ಕೀರ ಗೌಡನ ತಲೆ ಹಾರಿ ಕುಳ್ಳು ತುಂಬಿದ ಗೋಣೀ ಚೀಲದೊಳಕ್ಕೆ ಬಿತ್ತು!
ಇದನ್ನ ನೋಡಿ ಪ್ರಾಣವನ್ನ ಅಂಗೈಲೇ… ಹಿಡಕೊಂಡು ಓಡಲು ನೋಡಿದ ಬಾರಕೇರ ಸಿದ್ಧಪ್ಪ.
ಬೆನ್ನಟ್ಟಿ ಹಿಡಿಯಿತು ವೀರಭದ್ರನ ರುದ್ರಾವತಾರ!
ಹಾರಿ.. ಸಿದ್ಧಪ್ಪನು ಒದ್ದ ಬಲಗಾಲನ್ನು ಕಡಿದು ಬಿಟ್ಟ.
ಹಾ….ಎಂದು ಕುಸಿದ ಸಿದ್ಧಪ್ಪನ ಬಾಯನ್ನ ಹಂಗೇ ಗಂಡು ಗೊಡಲಿಯೊಳಗೆ ಕಡಿದು ಎರಡು ಹೋಳು ಮಾಡಿಬಿಟ್ಟ!
ತಲೆ ತುಂಬಾ ಮಾತಾಡಿದ ತಳವಾರ ರೇವಣಪ್ಪ ಓಡಲೆಂದು ನೋಡಿದನೇ ವಿನಃ. ಆತನ ಕೈ ಕಾಲೇ ಆಡುತಿಲ್ಲ. ನಿಂತಲ್ಲೇ ನಡುಗುತ್ತಾ… ರೇವಣಿ ಎದೆ ಒಡೆದು ಹಂಗೇ ಕುಸಿದು ಪ್ರಾಣ ಬಿಟ್ಟ!
ಅದರೂ…
ಬಿಡದ ವೀರಭದ್ರ ಎಳೆದು ಅವನ ರುಂಡವನ್ನ ಎಗರಿಸಿದ. ಅದು ಹಾರಿ ವೀರಗಲ್ಲಿನ ಪೊಟರೆಯ ಎದುರು ಕಾವಲು ಕಾಯುವಂತೆ ಕುಂತಿತು!
ಅವತ್ತೇ ಕೊನೆ….
ಊರೊಳಗೆ ಹದ್ದುಗಳು ಹಾರಿದ್ದು….
ಊರೊಳಗೆ ಪಾಪದ ಕೆಲಸ ನಿಂತವು.
ಊರ ಪಂಚಾಯ್ತಿಗಳು ನಿಂತವು.
ಊರೀಗ ಊರಿನಂತೆಯೇ ಇದೆ.
ಕಾಲ ಕಾಲಕ್ಕೆ ಮಳೆಯಾಗುತ್ತಿದೆ.
ಕಾಲುವೆಗಳು ತುಂಬಿ ಹರಿಯುತ್ತಿವೆ.
ಎಲ್ಲರ ಹೊಲಗಳೂ ಹಚ್ಚ ಹಸಿರಾಗಿವೆ.
ಎಲ್ಲರೂ ಸಮನಾಗಿ ಬಾಳುತಿದ್ದಾರೆ.
ಮರದ ಕೊಂಬೆಗಳು ಎಂದಿನ ಹಾಗೇ ನೆಲ ತಾಯಿಯ ಕೆನ್ನೆಗೆ ಬಾಗಿ ಮುದ್ದಿಡಲು ನೋಡುತ್ತಿವೆ.
ಸಣ್ಣಗೆ ಹನಿವ ಹನಿಗಳ ನಡುವೆ ಮೂಡಿದ ಕಾಮನ ಬಿಲ್ಲಿನ ಚಲುವಾದ ಬಣ್ಣಗಳು ಮುಗಿಲ ಸೆರಗನ್ನು ತುಂಬಿಕೊಂಡಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.
ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ ವಿಧಾನಗಳು, ಹೊಸ ಸಂಶೋಧನಾ ಕಲ್ಪನೆಗಳ ಸೃಷ್ಟಿ ಹಾಗೂ ಟೈಯರ್-1 ಸಂಶೋಧನಾ ಲೇಖನಗಳ ಬರಹದ ಪ್ರಮುಖ ಅಂಶಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ, ಗುಣಮಟ್ಟದ ಸಂಶೋಧನೆಯೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಮತ್ತು ಜಾಗತಿಕ ಮಾನ್ಯತೆಯ ಮೂಲಾಧಾರವಾಗಿದೆ ಎಂದು ಹೇಳಿದರು.
ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗಬಾರದು, ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಪ್ರಕಟಣೆಗಳು ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು ಕೆ ಮಾಂಚೆಸ್ಟರ್‌ನ ‘ಯೂನಿವರ್ಸಿಟಿ ಆಫ್ ಸ್ಯಾಲ್‌ಫೋರ್ಡ್’ನ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ. ಶಿವಕುಮಾರ ಪಿ. ಮಾತನಾಡಿ, ಸಂಶೋಧನಾ ಸಮಸ್ಯೆ ಗುರುತಿಸುವಿಕೆ, ಸಂಶೋಧನಾ ಅಂತರ (Research Gap) ಪತ್ತೆ, ಸಾಹಿತ್ಯ ಸಮೀಕ್ಷೆ, ಪ್ರಯೋಗಾತ್ಮಕ ವಿನ್ಯಾಸ (Experimental Design), ಟೈಯರ್-1 ಜರ್ನಲ್ ಲೇಖನ ಬರಹ, ಪ್ರಕಟಣಾ ನೈತಿಕತೆ ಹಾಗೂ ವಿಮರ್ಶಕರ ಅಭಿಪ್ರಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
“ಒಂದು ಉತ್ತಮ ಸಂಶೋಧನಾ ಲೇಖನದ ಯಶಸ್ಸು ಅದರ ಹೊಸತನ, ವೈಜ್ಞಾನಿಕ ವಿಧಾನ ಮತ್ತು ಸ್ಪಷ್ಟವಾದ ಪ್ರಸ್ತುತೀಕರಣದಲ್ಲಿ ಅಡಗಿದೆ. ಸಂಶೋಧಕರು ಗುಣಮಟ್ಟದ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಸಿದ್ಧರಾಗಬೇಕು,” ಎಂದು ಅವರು ಕರೆ ನೀಡಿದರು.
ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಭಾಗವಹಿಸಿದ್ದರು. ಪೋಸ್ಟರ್ ಪ್ರಸೆಂಟೇಷನ್‌ಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಸಂಶೋಧನಾ ಲೇಖನ ಬರಹದ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಭವಿಷ್ಯದಲ್ಲೂ ಇಂತಹ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಸಚಿವ ಶ್ರೀ ಎಸ್. ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಕೆ. ರಮೇಶ್, ಡಾ. ಬಸವಣ್ಣ ಎಮ್. ಅಧ್ಯಕ್ಷರು, ಎಮ್.ಸಿ.ಎ ವಿಭಾಗ, ಡಾ. ಚಂದ್ರಕಾಂತ ಎನ್. ಅಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ವಿಭಾಗ, ಹಣಕಾಸು ಅಧಿಕಾರಿ ಡಾ. ಆರ್. ಶಶಿಧರ್ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
ಸುದ್ದಿದಿನ,ದಾವಣಗೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರುವುದು ದಾವಣಗೆರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ಹಲವು ವರ್ಷಗಳಿಂದ ಪಕ್ಷದ ಸಂಘಟನೆಗೆ ಸಲ್ಲಿಸಿರುವ ಸೇವೆ, ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಆದ್ಯತೆ ಹಾಗೂ ಜನಸಾಮಾನ್ಯರೊಂದಿಗೆ ಹೊಂದಿರುವ ನಿಕಟ ಸಂಪರ್ಕವನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಚಿವರಾಗಿ ಆಯ್ಕೆಯಾದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮಾಯಕೊಂಡ ಕ್ಷೇತ್ರ ಸೇರಿದಂತೆ ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭ್ರಮ ಮನೆಮಾಡಿತು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಬಸವಂತಪ್ಪ ಅವರ ನಿವಾಸದ ಎದುರು ಬೆಳಗ್ಗಿನಿಂದಲೇ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಜಮಾಯಿಸಿ ಅಭಿನಂದನೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರೆ, ಯುವಕರು ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ನಡೆಸಿದರು.
ಕೆ.ಎಸ್. ಬಸವಂತಪ್ಪ ಅವರು ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ರೈತರ ಸಮಸ್ಯೆಗಳು, ಕುಡಿಯುವ ನೀರಿನ ಯೋಜನೆಗಳು, ಗ್ರಾಮೀಣ ರಸ್ತೆ ಅಭಿವೃದ್ಧಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಕಾರಣದಿಂದಲೇ ಅವರಿಗೆ ಸಚಿವ ಸ್ಥಾನ ದೊರೆತಿದೆ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಮಾಯಕೊಂಡ ಕ್ಷೇತ್ರವು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಇಲ್ಲಿ ನೀರಾವರಿ, ರಸ್ತೆ, ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯಂತಹ ಹಲವು ಸವಾಲುಗಳಿವೆ. ಸಚಿವ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ. ವಿಶೇಷವಾಗಿ ರೈತರು, ಯುವಕರು ಹಾಗೂ ಮಹಿಳಾ ಸಂಘಟನೆಗಳು ಹೊಸ ಸಚಿವರಿಂದ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ನಿರೀಕ್ಷಿಸುತ್ತಿವೆ.
ಸಚಿವ ಸ್ಥಾನ ಘೋಷಣೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ.ಎಸ್. ಬಸವಂತಪ್ಪ ಅವರು, “ಈ ಜವಾಬ್ದಾರಿ ನನಗೆ ದೊರೆತಿರುವುದು ವೈಯಕ್ತಿಕ ಗೌರವ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೂ ಸಂದ ಗೌರವವಾಗಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗಳನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ” ಎಂದು ಹೇಳಿದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ, ದಾವಣಗೆರೆ ಜಿಲ್ಲೆಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಶಾಲೆಗಳು ಮತ್ತು ಆಸ್ಪತ್ರೆಗಳ ಸೌಲಭ್ಯಗಳ ಸುಧಾರಣೆ, ಯುವಕರಿಗೆ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ವಿಶೇಷ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಮುಖಂಡರು ಮಾತನಾಡಿ, ಬಸವಂತಪ್ಪ ಅವರ ಸಚಿವ ಸ್ಥಾನದಿಂದ ಜಿಲ್ಲೆಗೆ ಹೆಚ್ಚಿನ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳು ಹರಿದು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಡಳಿತಾತ್ಮಕ ಮಟ್ಟದಲ್ಲಿ ಜಿಲ್ಲೆಯ ವಿವಿಧ ಯೋಜನೆಗಳಿಗೆ ವೇಗ ಸಿಗಲಿದ್ದು, ಬಾಕಿ ಉಳಿದಿರುವ ಹಲವು ಕಾಮಗಾರಿಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಹ ಸಚಿವರಿಗೆ ಅಭಿನಂದನೆ ಸಲ್ಲಿಸಿ, ಜಿಲ್ಲೆಯ ಬಹುಕಾಲದ ಬೇಡಿಕೆಗಳಾದ ನೀರಾವರಿ ಯೋಜನೆಗಳ ವಿಸ್ತರಣೆ, ಕೈಗಾರಿಕಾ ಹೂಡಿಕೆ, ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗ್ರಾಮೀಣ ರಸ್ತೆ ಸುಧಾರಣೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿಯೂ ಬಸವಂತಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಸಾರ್ವಜನಿಕರು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿ, ಸಚಿವರ ಹೊಸ ಜವಾಬ್ದಾರಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ರಾಜ್ಯ ಸಚಿವ ಸಂಪುಟದಲ್ಲಿ ಮಾಯಕೊಂಡ ಕ್ಷೇತ್ರಕ್ಕೆ ದೊರೆತಿರುವ ಈ ಪ್ರತಿನಿಧಿತ್ವವು ದಾವಣಗೆರೆ ಜಿಲ್ಲೆಯ ರಾಜಕೀಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಜೊತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಚಿವರ ಪಾತ್ರ ಮಹತ್ವದ್ದಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾಯಕೊಂಡ ಕ್ಷೇತ್ರದ ಜನರು ಸಚಿವ ಸ್ಥಾನವನ್ನು ಕೇವಲ ರಾಜಕೀಯ ಸಾಧನೆಯಾಗಿ ನೋಡದೇ, ಅಭಿವೃದ್ಧಿಯ ಹೊಸ ಅಧ್ಯಾಯದ ಆರಂಭವಾಗಿ ಪರಿಗಣಿಸುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿವೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.
ಕೆ.ಎಸ್. ಬಸವಂತಪ್ಪ ಅವರ ಸಚಿವ ಸ್ಥಾನವು ಮಾಯಕೊಂಡ ಕ್ಷೇತ್ರ ಹಾಗೂ ದಾವಣಗೆರೆ ಜಿಲ್ಲೆಗೆ ಹೊಸ ಅವಕಾಶಗಳನ್ನು ತೆರೆದಿದೆ. ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸರ್ಕಾರ ಮತ್ತು ಜನರ ನಡುವೆ ಪರಿಣಾಮಕಾರಿ ಸೇತುವೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಎಲ್ಲ ವಲಯಗಳಲ್ಲೂ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಅವರ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಜಿಲ್ಲೆಯ ಭವಿಷ್ಯದ ದಿಕ್ಕನ್ನು ನಿರ್ಧರಿಸಲಿವೆ ಎಂಬ ಅಭಿಪ್ರಾಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
-
ದಿನದ ಸುದ್ದಿ4 days agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ
-
ದಿನದ ಸುದ್ದಿ2 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ದಿನದ ಸುದ್ದಿ13 hours agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್

