ಸಿನಿ ಸುದ್ದಿ
ಕಟ್ಟ ಕಡೆಯ ಬಿಂದು-ಇದ್ದೆಡೆಯೇ ಕಂಡಾಗ
- ನಾ ದಿವಾಕರ
ಬುಧವಾರ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿದ್ದು ತಿಳಿದಾಗ ಕೆಲವು ಕ್ಷಣ ಮಾತೇ ಹೊರಡಲಿಲ್ಲ. ಇತ್ತೀಚೆಗೆ ಕಂಬನಿ ಬತ್ತಿ ಹೋಗಿದೆ ಇಲ್ಲದಿದ್ದರೆ ಸುರಿದುಹೋಗುತ್ತಿತ್ತೇನೋ ! ಆದರೂ ಕಣ್ಣಾವೆಗಳು ವದ್ದೆಯಾದ ಅನುಭವ. ನೂರಾರು ಚಿತ್ರಗಳಲ್ಲಿ ನಟಿಸಿದವರಲ್ಲ, ಗಗನದೆತ್ತರದ ಕಟೌಟ್ ನೋಡಿರುವ ಆರಾಧ್ಯ ದೈವ ಎನಿಸಿಕೊಂಡವರಲ್ಲ. ಅಭಿಮಾನಿ ಸಂಘಗಳಿಗೆ ಪಾತ್ರರಾದವರಲ್ಲ. ಬಹುಶಃ 35 ವರ್ಷಗಳ ಪಯಣದಲ್ಲಿ ತಮಗೆ ಲಭಿಸಿದ ಅವಕಾಶವನ್ನು ಕೊಂಚವೂ ರಾಜಿ ಮಾಡಿಕೊಳ್ಳದೆ ನ್ಯಾಯಸಲ್ಲಿಸಿದ ಕೆಲವೇ ನಟರಲ್ಲಿ ಇರ್ಫಾನ್ ಒಬ್ಬರು.
ಅವರು ಇಷ್ಟವಾಗುವುದೂ ಈ ಕಾರಣಕ್ಕೇ. ಸಂಭಾಷಣೆಯ ವೈಖರಿ, ಕಂಗಳಲ್ಲೇ ಭಾವ ಸ್ಫುರಿಸುವ ಅದ್ಭುತ ಕಲಾಭಿವ್ಯಕ್ತಿ, ಪಾತ್ರದೊಳಗೆ ಪರಕಾಯ ಪ್ರವೇಶ, ಅಭಿನಯದಲ್ಲಿ ತಲ್ಲೀನತೆ ಮತ್ತು ತಾವು ನಿರ್ವಹಿಸುವ ಪಾತ್ರವನ್ನು ಪರದೆಯ ಹೊರ ತಂದು ನೋಡುವವರ ಮಧ್ಯೆ ನಿಲ್ಲಿಸುವಂತಹ ಕಲಾತ್ಮಕತೆ ಇವೆಲ್ಲವೂ ಇರ್ಫಾನ್ ಅವರನ್ನು ಅದ್ಭುತ ನಟನನ್ನಾಗಿ ಮಾಡಿತ್ತು.
ಅವರಲ್ಲಿ ಗಮನಿಸಬಹುದಾದ ಮತ್ತೊಂದು ಅಂಶ, ಯಾವುದೇ ಅನುಕರಣೆ ಇರಲಿಲ್ಲ. ಅವರಿಗೆ ಗಾಡ್ ಫಾದರ್ ಸಹ ಇರಲಿಲ್ಲವೆನ್ನಿ. ತಮ್ಮ ಕಲಾ ಸಾಮರ್ಥ್ಯದ ಮೇಲೆ ತಾವೇ ನಿರ್ಮಿಸಿಕೊಂಡ ಕಲಾ ಪ್ರಪಂಚದಲ್ಲಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದ ನಟ. ಕೆಲವೊಮ್ಮೆ ಸೈಯೀದ್ ಜಾಫ್ರಿ ನೆನಪಾಗುತ್ತಾರೆ. ಪಾತ್ರಗಳಲ್ಲಿ ಜೀವಂತಿಕೆಯನ್ನು ತುಂಬಲು ತಮ್ಮ ಕಣ್ಣುಗಳೇ ಸಾಕು ಎನ್ನುವ ಕೆಲವೇ ಸಮಕಾಲೀನ ನಟರು ನಮ್ಮ ನಡುವೆ ಇದ್ದಾರೆ/ಇದ್ದರು. ಸೈಯಿದ್ ಜಾಫ್ರಿ, ನಾಸಿರುದ್ದಿನ್ ಶಾ, ಕಮಲ ಹಾಸನ್, ಅನುಪಮ್ ಖೇರ್, ಫರೂಕ್ ಶೇಖ್, ನಾನಾ ಪಾಟೇಕರ್ ಮತ್ತು ಇರ್ಫಾನ್ ಖಾನ್.
ಇರ್ಫಾನ್ ಈಗ ಇದ್ದರು ಎನ್ನುವ ಸಾಲಿಗೆ ಸೇರಿದ್ದಾರೆ. ಒಬ್ಬ ನಟ ಪರದೆಯ ಮೇಲೆ ಬಿಂಬಿಸುವ ಮೌಲ್ಯಗಳೇ ಬೇರೆ, ನಿತ್ಯ ಜೀವನದಲ್ಲಿ ಅನುಸರಿಸುವ ಮೌಲ್ಯಗಳೇ ಬೇರೆ ಎನ್ನುವುದು ದಿಟ. ಆದರೆ ಜನಮಾನಸದಲ್ಲಿ ತಮ್ಮ ಅಭಿನಯ ಕಲೆಯಿಂದ ಮನೆ ಮಾಡಿದ ಕಲಾವಿದ ಜನಸಾಮಾನ್ಯರ ತುಡಿತಗಳಿಗೆ ಸ್ಪಂದಿಸಿದರೆ ಎಷ್ಟು ಆಪ್ತರಾಗಬಹುದು ? ಈ ಪ್ರಶ್ನೆಗೆ ಇರ್ಫಾನ್ ಅಂಥವರು ಮಾತ್ರ ಉತ್ತರ ನೀಡಲು ಸಾಧ್ಯ. ಅದಕ್ಕೇ ಇರ್ಫಾನ್ ಭಾಯಿ ಇಷ್ಟವಾಗುತ್ತಾರೆ.
53, ಸಾಯುವ ವಯಸ್ಸಲ್ಲ. ಆದರೆ ಅವರು ಎದುರಿಸಿದ ಖಾಯಿಲೆಗೆ ಒಂದರಿಂದ ನೂರು ಲೆಕ್ಕವೇ ಗೊತ್ತಿಲ್ಲ. ಕರೆದುಕೊಂಡು ಹೋಗಲೆಂದೇ ಬಂದ ಖಾಯಿಲೆಯೊಡನೆ ಎರಡು ವರ್ಷಗಳ ಕಾಲ ಸೆಣಸಿ ಇರ್ಫಾನ್ ವಿದಾಯ ಹೇಳಿದ್ದಾರೆ. 2018ರಲ್ಲಿ ಅವರು ಲಂಡನ್ನಿನ ಆಸ್ಪತ್ರೆಗೆ ದಾಖಲೆಯಾಗಿದ್ದಾಗ ಬರೆದ ಪುಟ್ಟ ಬರಹ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಅದರ ಕೆಲವು ಸಾಲುಗಳು ಹೀಗಿವೆ :- ನಾನು ವೇಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಕನಸುಗಳು, ಯೋಜನೆಗಳು, ಗುರಿಗಳು ಎಲ್ಲವುಗಳಲ್ಲಿ ಎಂಗೇಜ್ ಆಗಿದ್ದೆ. ಥಟ್ಟನೆ ಯಾರೋ ಭುಜ ತಟ್ಟಿದಂತಾಯಿತು, ತಿರುಗಿ ನೋಡಿದರೆ ಟಿ ಸಿ ನಿಂತಿದ್ದರು “ ನೀವು ತಲುಪಬೇಕಾದ ಸ್ಥಳ ಬಂದಿದೆ, ಪ್ಲೀಸ್ ಇಳಿದುಬಿಡಿ ಎಂದರು, ಇಲ್ಲ ಇಲ್ಲ ನಾನು ತಲುಪಬೇಕಾದ ಸ್ಥಳ ಇನ್ನೂ ಬಂದಿಲ್ಲ ಎಂದೆ, ಇಲ್ಲ ಇದೇ ಅದು ಕೆಲವೊಮ್ಮೆ ಹಾಗೆಯೇ ಆಗುತ್ತೆ ”. ಓಹ್ ಸಾವಿನ ನಿರೀಕ್ಷೆಯಲ್ಲಿರುವ ಒಬ್ಬ ವ್ಯಕ್ತಿ ಈ ರೀತಿಯ ರೂಪಕವನ್ನು ಬರೆಯುವುದೆಂದರೆ ಅಚ್ಚರಿಯಾಗುವುದಲ್ಲವೇ ?
ಇರ್ಫಾನ್ ಹೀಗೆ ಬರೆದಿದ್ದನ್ನು ಅನುವಾದಿಸಿದ ವೇಣುಗೋಪಾಲ್ ಶೆಟ್ಟಿಯವರಿಗೆ ಸಾವಿರ ವಂದನೆಗಳು. ಹಂಚಿಕೊಂಡ ವಿನುತಾ ವಿಶ್ವನಾಥ್ ಮತ್ತು ಪುರುಷೋತ್ತಮ್ ಬಿಳಿಮಲೆಯವರಿಗೂ. ಜೀವನ ದರ್ಶನ ಮಾಡಿಸುವ ಇಂತಹ ಮಾತುಗಳು ಕೆಲವೊಮ್ಮೆ ಐಡಿಯಲಿಸ್ಟಿಕ್ ಎನಿಸಬಹುದು ಅಥವಾ ಭಾವನಾತ್ಮಕವೋ, ಅಧ್ಯಾತ್ಮವೋ ಎನಿಸಬಹುದು. ಆದರೆ ಈ ರೀತಿ ಸಾವಿನ ನಿರೀಕ್ಷೆಯಲ್ಲಿರುವವರೊಡನೆ ಬದುಕಿದವರಿಗೆ ಇದು ಹೆಚ್ಚು ಆಪ್ತ ಎನಿಸುತ್ತದೆ. ಇರ್ಫಾನ್ ಎರಡು ವರ್ಷಗಳ ಕಾಲ ಹೀಗೆ ಅಂತ್ಯದ ನಿರೀಕ್ಷೆಯಲ್ಲೇ ಬದುಕಿ ಮರ್ತ್ಯ ಮೀರಿ ನಿಲ್ಲಲು ಯತ್ನಿಸಿದ್ದಾರೆ.
ಅವರೇ ತಮ್ಮ ಪತ್ರದಲ್ಲಿ ಹೇಳಿರುವಂತೆ “ ಸಾಗರದಲ್ಲಿ ತೇಲುತ್ತಿರುವ ಮರದ ತೊಗಟೆಯಂತಿರುವ ನಿಮಗೆ ಅಲ್ಲಿನ ಅಲೆಗಳು ಹೇಗಿರಬಹುದೆಂದು ಊಹಿಸಲೂ ಅಸಾಧ್ಯವಾಗುತ್ತದೆ, ಅವುಗಳನ್ನು ನಿಯಂತ್ರಿಸಲು ನೀರು ಹತಾಶರಾಗಿ ಪ್ರಯತ್ನಿಸುತ್ತೀರಿ ” ಮತ್ತೊಂದು ರೂಪಕ. ಬದುಕುವ ಛಲ ಮತ್ತು ಸಾವಿನ ನಿರೀಕ್ಷೆಯ ನಡುವೆ ಸಂಘರ್ಷ ಎಂದರೆ ಇದೇ ಅಲ್ಲವೇ ? ಎಂತಹ ಬರಹ ಬಿಟ್ಟುಹೋಗಿದ್ದೀರಿ ಇರ್ಫಾನ್. ಒಂದೇ ಪುಟ ಇದ್ದರೂ ಬೃಹತ್ ಕಾವ್ಯದಂತೆ ಭಾವ ಸ್ಫುರಿಸಿದೆ. ನೀವು ನಿಜಕ್ಕೂ ಧನ್ಯ ಇರ್ಫಾನ್ ಭಾಯ್.
ಇರ್ಫಾನ್‍ಖಾನ್ ಅವರ ಸಾವಿನ ಸುದ್ದಿ ಖಿನ್ನತೆ ಮೂಡಿಸಿತ್ತು
ಮಧ್ಯಾಹ್ನ ಕೊರೋನಾ ಇಲ್ಲದ ಸುದ್ದಿಯನ್ನು (ಕನ್ನಡ ಸುದ್ದಿಮನೆಯಲ್ಲ) ನೋಡಲು ಅವಕಾಶ ಸಿಕ್ಕಿತೆಂಬ ಸಣ್ಣ ಖುಷಿ ಒಂದೆಡೆಯಾದರೆ ಇರ್ಫಾನ್‍ಖಾನ್ ಅವರ ಸಾವಿನ ಸುದ್ದಿ ಖಿನ್ನತೆ ಮೂಡಿಸಿತ್ತು. ನೆನ್ನೆ ರಾತ್ರಿ ಏನೋ ನೆನಪಾಯಿತು. ರಾಜೇಶ್ ಖನ್ನಾ-ಅಮಿತಾಬ್ ನಟನೆಯ, ಹೃಷಿಕೇಶ್ ಮುಖರ್ಜಿಯ ಆನಂದ್ ಚಿತ್ರ ನೆನಪಾಯಿತು. ನೋಡಿದಾಗಲೆಲ್ಲಾ ಕಣ್ಣು ವದ್ದೆ ಮಾಡುವ ಚಿತ್ರ ಅದು. ಹಾಗೆಯೇ ಸಾವು ಬದುಕಿನ ಸಂಘರ್ಷವನ್ನು, ಸಾವಿನ ನಿರೀಕ್ಷೆಯಲ್ಲಿರುವ ಒಬ್ಬ ಸರಳ ವ್ಯಕ್ತಿಯ ಕಣ್ಣುಗಳ ಮೂಲಕ ತೋರಿಸುವ ಚಿತ್ರವೂ ಹೌದು. ರಾಜೇಶ್ ಖನ್ನನ ಬದುಕಿನ ಮೈಲಿಗಲ್ಲು ಈ ಚಿತ್ರ. ಈ ಚಿತ್ರದ ಕೆಲವು ಸಂಭಾಷಣೆಗಳು ಸಾರ್ವಕಾಲಿಕವಾದವು, ಸಾರ್ವತ್ರಿಕವಾದವೂ ಹೌದು. ಕ್ಯಾನ್ಸರ್ ಇರುವ ಒಬ್ಬ ಕವಿ ಹೃದಯದ ವ್ಯಕ್ತಿ ಇನ್ನು ಆರು ತಿಂಗಳಲ್ಲಿ ತಾನು ಈ ಲೋಕದಲ್ಲಿ ಇರುವುದಿಲ್ಲ ಎಂದು ತಿಳಿದಿದ್ದರೂ , ಜೀವನವನ್ನು ನೋಡುವ ಬಗೆ, ಅದ್ಭುತ. ಚಿತ್ರ ನೋಡಿಯೇ ಆಸ್ವಾದಿಸಬೇಕು.
ಈ ಚಿತ್ರದಲ್ಲಿ ಕಾಕಾನ (ರಾಜೇಶ್ ಖನ್ನನ ಅಡ್ಡಹೆಸರು) ಕೆಲವು ಸಂಭಾಷಣೆಗಳಿವೆ. ಆನಂದ್‍ಗೆ ಕ್ಯಾನ್ಸರ್ ಗಡ್ಡೆ ಇದೆ ಎಂದು ತಿಳಿದಾಗ “ ನಾನು ಇನ್ನು ಆರು ತಿಂಗಳಿಗಿಂತಲೂ ಹೆಚ್ಚು ಬದುಕುವುದಿಲ್ಲ. 70 ವರ್ಷಕ್ಕೂ ಆರು ತಿಂಗಳಿಗೂ ಏನು ವ್ಯತ್ಯಾಸವಿದೆ , ಮುಂದಿನ ಆರು ತಿಂಗಳಲ್ಲಿ ಲಕ್ಷಾಂತರ ಕ್ಷಣಗಳನ್ನು ಬದುಕುವವರ ಪಾಡೇನು ? ಬದುಕು ದೀರ್ಘವಾಗಿರಬೇಕಿಲ್ಲ ಉತ್ತಮವಾಗಿರಬೇಕು, ನಾನು ಬದುಕಿರುವವರೆಗೂ ಸತ್ತಿರುವುದಿಲ್ಲ ಸತ್ತ ನಂತರ ನಾನೇ ಇರುವುದಿಲ್ಲ ” ಇದು ಆನಂದ್ ಒಬ್ಬ ವೈದ್ಯನಿಗೆ, ಅಮಿತಾಬ್‍ಗೆ ಹೇಳುವ ಮಾತುಗಳು. ಮತ್ತೊಂದು ದೃಶ್ಯದಲ್ಲಿ “ ಪ್ರತಿಯೊಂದು ನಗುವಿನ ಹಿಂದೆಯೂ ಖುಷಿಯೇ ಇರಬೇಕೆಂದಿಲ್ಲ ಬಾಬುಮೊಷಾಯ್ ಕೆಲವೊಮ್ಮೆ ದುಃಖವೂ ಇರುತ್ತದೆ ” ಎನ್ನುತ್ತಾನೆ. ಒಮ್ಮೆ ಆನಂದನ ಗೆಳೆಯನ ಮಡದಿ ತನ್ನ ಹುಟ್ಟುಹಬ್ಬದ ದಿನ ಅವನ ಆಶೀರ್ವಾದ ಬಯಸುತ್ತಾಳೆ ಆಗ ಆನಂದ್ “ ನಿನಗೆ ಏನೆಂದು ಹಾರೈಸಲಿ ತಂಗಿ, ನನ್ನ ಆಯಸ್ಸನ್ನು ನಿನಗೆ ಕೊಡು ಎಂದು ದೇವರಲ್ಲಿ ಕೇಳಲೂ ಆಗುವುದಿಲ್ಲ ” ಎಂದು ಮನದಲ್ಲೇ ಪರಿತಪಿಸುತ್ತಾನೆ.
ಮತ್ತೊಂದು ಮನಮಿಡಿಯುದ ದೃಶ್ಯದಲ್ಲಿ ಅಮಿತಾಬ್ ಒಬ್ಬ ವೈದ್ಯನಾಗಿ ಆನಂದ್‍ಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಹೇಳುತ್ತಾನೆ . ಆಗ ಆನಂದ್ “ ಇನ್ನೆಷ್ಟು ದಿನ ನನಗೆ, ನಿನ್ನ ದಿನಗಳು ಮುಗಿಯುತ್ತಿವೆ ಎಂದು ನೆನಪುಮಾಡುತ್ತೀಯ ಬಾಬುಮೊಷಾಯ್, ಈವರೆಗೂ ಯಾರೂ ತನ್ನ ಸಾವನ್ನು ಕಂಡಿಲ್ಲ ಆದರೆ ನಾನು ದುರ್ಭಾಗ್ಯನು, ಪ್ರತಿಕ್ಷಣವೂ ನನ್ನ ಸಾವನ್ನು ಕಾಣುತ್ತಿದ್ದೇನೆ , ನಿನ್ನ ನೋವು ತುಂಬಿದ ಕಣ್ಣುಗಳಲ್ಲಿ ” ಎಂದು ಹೇಳುತ್ತಾನೆ. ಅಂತ್ಯದ ನಿರೀಕ್ಷೆಯಲ್ಲಿರುವ ಒಂದು ಜೀವ ಮತ್ತೊಂದು ಜೀವದ ಕಣ್ಣುಗಳಲ್ಲಿ ಜೀವಂತಿಕೆ ಬಯಸುತ್ತದೆ. ಇಂತಹ ದೃಶ್ಯ ರೂಪಕಗಳು ಬಹುಶಃ ಈಗಿನ ಚಿತ್ರಗಳಲ್ಲಿ ಕನಸಿನ ಮಾತೆನ್ನಿ.
ಇರ್ಫಾನ್ ಇದೇ ಪ್ರಯತ್ನ ಮಾಡಿ ಹೊರಟುಬಿಟ್ಟಿದ್ದಾರೆ
ಈ ಆನಂದ್ ಚಿತ್ರ ನನಗೆ ಬಹಳ ಆಪ್ತವಾದದ್ದು. ಇದಕ್ಕೆ ಕಾರಣವೂ ಇದೆ. ತನ್ನ ಬದುಕಿನ ಪಯಣ ಇನ್ನು ಕೆಲವೇ ದಿನಗಳಲ್ಲಿ, ವರ್ಷಗಳಲ್ಲಿ ಅಂತ್ಯವಾಗುತ್ತದೆ ಎಂದು ತಿಳಿದಿದ್ದೂ ಸದಾ ಹರ್ಷಚಿತ್ತನಾಗಿರುವ ಆನಂದ್ ಬಹಳ ಆಪ್ತ ಎನಿಸುತ್ತಾನೆ. ಏಕೆಂದರೆ ಅವನು ಬದುಕು ಮತ್ತು ಸಾವು ಎರಡನ್ನೂ ಗೆಲ್ಲಲು ಯತ್ನಿಸುತ್ತಾನೆ. ಬಹುಶಃ ಇರ್ಫಾನ್ ಇದೇ ಪ್ರಯತ್ನ ಮಾಡಿ ಹೊರಟುಬಿಟ್ಟಿದ್ದಾರೆ.
ನನ್ನೊಡನೆ ನಾಲ್ಕು ದಶಕಗಳ ಕಾಲ ಬದುಕಿ ತನ್ನ ಪಯಣ ಮುಗಿಸಿದ ನನ್ನ ಸೋದರ ನಾಗರಾಜ್ ಇದೇ ಸನ್ನಿವೇಶದಲ್ಲೇ ಬದುಕಿದ್ದನ್ನು ಕಂಡಿದ್ದೇನೆ. ಅವನಿಗೆ ವಿ ಎಸ್ ಡಿ (ventricular septal defect)ತೊಂದರೆ ಇತ್ತು. ಅಂದರೆ ಹೃದಯದ ಹೃತ್ಕುಕ್ಷಿಗಳನ್ನು ಬೇರ್ಪಡಿಸುವ ಗೋಡೆ (ಸೆಪ್ಟಮ್)ಯಲ್ಲಿ ಒಂದು ರಂಧ್ರ ಇತ್ತು. ರಕ್ತ ಎಡದಿಂದ ಬಲಕ್ಕೆ ಹರಿಯುತ್ತಿದ್ದುದರಿಂದ, ಆಮ್ಲಜನಕದ ಅಂಶ ಹೆಚ್ಚಾಗಿರುವ ರಕ್ತ ಶ್ವಾಸಕೋಶದೊಳಗೆ ಹೋಗುತ್ತಿತ್ತು. ಆಗ ಹೃದಯ ಬಡಿತದ ವೇಗ ಹೆಚ್ಚಾಗುತ್ತಿತ್ತು. ಶ್ರಮವಹಿಸುವ ಯಾವುದೇ ಕೆಲಸ ಮಾಡಲಾಗುತ್ತಿರಲಿಲ್ಲ. ಹುಟ್ಟಿನಿಂದಲೇ ಬಂದ ಸಮಸ್ಯೆ, ಚಿಕಿತ್ಸೆ ನೀಡಲಿಲ್ಲವೆನ್ನಿ.
ನಮಗಿಬ್ಬರಿಗೂ ಕೆನರಾ ಬ್ಯಾಂಕಿನಲ್ಲಿ ಒಮ್ಮೆಲೆ ನೌಕರಿ ದೊರೆತಾಗ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಇವನಿಗೆ ಇದ್ದ ಸಮಸ್ಯೆಯನ್ನು ನೋಡಿ ವೈದ್ಯರು ನಿರಾಕರಿಸಿಬಿಟ್ಟರು. ನೌಕರಿ ಇಲ್ಲದಿದ್ದರೆ ನಮ್ಮ ಬದುಕೂ ಇಲ್ಲ ಎನ್ನುವ ಪರಿಸ್ಥಿತಿ. ಹೇಗೋ ವೈದ್ಯರ ಕಾಲು ಹಿಡಿದು ಪ್ರಮಾಣಪತ್ರ ಗಿಟ್ಟಿಸಿಕೊಂಡೆವು. ಆಗ ನಮಗೆ ಮತ್ತು ಅವನಿಗೆ ತಿಳಿದ ವಿಷಯ, ಅವನ ಆಯಸ್ಸು 40 ವರ್ಷ ಮಾತ್ರ ಎನ್ನುವುದು. ನಮ್ಮ ಕಣ್ಣೀರು ಕೋಡಿ ಹರಿಯಿತು, ಅವನು ವಿಚಲಿತನಾಗಲಿಲ್ಲ. ಐದು ಮೆಟ್ಟಿಲುಗಳಿಗಿಂತಲೂ ಹೆಚ್ಚು ಹತ್ತಲಾಗುತ್ತಿರಲಿಲ್ಲ. ಓಡುವುದು ಸಾಧ್ಯವೇ ಇರಲಿಲ್ಲ. ಭಾರ ಎತ್ತುವುದು ಅಸಾಧ್ಯವಾಗಿತ್ತು. ಬ್ಯಾಂಕಿನಲ್ಲಿ (ಆಗ ಲೆಡ್ಜರ್ ಇದ್ದ ಕಾಲ 1984) ಲೆಡ್ಜರ್ ಎತ್ತಿಕೊಡಲು ಯಾರಾದರೂ ಬರಬೇಕಿತ್ತು. ಮೊದಲ ಅಂತಸ್ತಿನಲ್ಲಿದ್ದ ವಿಭಾಗ ಅವನಿಗೆ ನಿಷಿದ್ಧ ಏಕೆಂದರೆ ಮೆಟ್ಟಿಲು ಹತ್ತಲಾಗುತ್ತಿರಲಿಲ್ಲ. ಮನೆಯಲ್ಲಿ ನನ್ನ ರಕ್ಷಣೆ ಮತ್ತು ನೆರವು ಇತ್ತೆನ್ನಿ.
ಇರ್ಫಾನ್ ಖಾನ್ ಬದುಕು ಮತ್ತು ಆನಂದ್ ಚಿತ್ರವನ್ನು ನೋಡುವಾಗ ಅವನ ನೆನಪಾಗುತ್ತದೆ. “ ಈ ಆ್ಯಮ್ ಎ ಹೋಲ್ ಹಾರ್ಟೆಡ್ ಮ್ಯಾನ್ ” ಎನ್ನುತ್ತಿದ್ದ. ಯಾರಾದರೂ ಏಕೆ ಎಂದು ಕೇಳಿದರೆ ಹಾರ್ಟ್‍ನಲ್ಲಿ ಹೋಲ್ ಇದೆ ಅದಕ್ಕೇ ಎನ್ನುತ್ತಿದ್ದ. ಹೀಗೆ ಅವನ ಹಾಸ್ಯ ಮಿಶ್ರಿತ ಮಾತುಗಳು. ಹತ್ತು ನಿಮಿಷ ನಡೆದರೆ ಅವನ ಹೃದಯ ಬಡಿತ ಐದು ಆಡಿ ದೂರಕ್ಕೆ ಕೇಳುತ್ತಿತ್ತು. ಸುಸ್ತಾಗಿ ಕುಳಿತುಬಿಡುತ್ತಿದ್ದ. ಎಷ್ಟೋ ಬಾರಿ ಅವನ ಇಡೀ ಭಾರವನ್ನು ನನ್ನ ಹೆಗಲ ಮೇಲೆ ಹೊತ್ತು ನಡೆಸಿದ್ದೆ. ಹೈದರಾಬಾದ್ ನೋಡಲು ಹೋದಾಗ ಅವನಿಗೆ ಮೇಲೆ ಹತ್ತಲಾಗುವುದಿಲ್ಲ ಎಂದು ನಾನೂ ಸಹ ಗೋಲ್ಕೊಂಡಾ, ಚಾರ್ ಮಿನಾರ್ ಒಳಗೆ ಹೋಗದೆ ಬಂದಿದ್ದೆ. ಅವನ ಜೀವನ ಬೇಗನೆ ಕೊನೆಯಾಗುತ್ತದೆ ಎಂದು ತಿಳಿದಿದ್ದೂ ಸದಾ ಎಲ್ಲರನ್ನೂ ನಗಿಸುತ್ತಲೇ ಬದುಕು ಸವೆಸಿದ ಸೋದರ ಅಗಲಿ 19 ವರ್ಷ ಕಳೆದಿದೆ. ಈಗಲೂ ಅವನ ಕೆಲವು ಜೋಕ್ಸ್ ನೆನಪಾಗುತ್ತವೆ. ಒಂದೆರಡು ತುಣುಕುಗಳು :
1. “ ಮೇನೇಜರ್ : ನಾಗರಾಜ್ ಇಲ್ಲಿ ಬನ್ನಿ ದುಬೈನಿಂದ ಬೇಗ್ ಬಂದಿದ್ದಾರೆ
ಇವನು : ಯಾಕ್ಸಾರ್ ನಿಧಾನವಾಗೇ ಬರಬಹುದಿತ್ತಲ್ಲವೇ ? ”
2. “ ಗೆಳೆಯ (ಮುಸ್ಲಿಂ) : ನಾಗರಾಜ್ ಜೀ ನನಗೆ ಗಂಡು ಮಗು ಹುಟ್ಟಿದೆ
ಇವನು : ಈದ್ ಮುಬಾರಕ್ ಜೀ !!
ಗೆಳೆಯ : ಏನ್ ದಿವಾಕರ್ ಮಗು ಹುಟ್ಟಿದ್ರೆ ಇವ್ನು ಈದ್ ಮುಬಾರಕ್ ಅಂತಾನೆ
ಇವನು : ಸಾರಿ, ಈದಿದ್ದಕ್ಕೆ ಮುಬಾರಕ್ !!!! ”
3. “ ನನ್ನ ಮದುವೆಯ ಸಂದರ್ಭ. ನನ್ನ ಭಾವಿ ಮಾವನರು ಕುಟುಂಬದವರೊಡನೆ ಮನೆಗೆ ಬಂದಿದ್ದರು.
ನನ್ನ ಸೋದರಿ : ಸರ್ ನಿಮಗೆ ಎಷ್ಟು ಮಕ್ಕಳು ?
ಭಾವಿ ಮಾವನವರು : ಹನ್ನೆರಡು ಜನ ಆರು ಗಂಡು ಆರು ಹೆಣ್ಣು
ನನ್ನ ಸೋದರಿ : ನೀವು ಏನು ಕೆಲಸ ಮಾಡ್ತಿದ್ರೀ ?
ಇವನು : ಅದೇ ಕೆಲ್ಸ !!!!!! ”
ಹೀಗೆ ತನ್ನ ಸಾವು ನಿಶ್ಚಿತ ಎಂದು ತಿಳಿದಿದ್ದೂ ಮಾತು ಮಾತಿಗೂ ಎಲ್ಲರನ್ನೂ ನಗಿಸುತ್ತಲೇ 17 ವರ್ಷಗಳ ಕಾಲ ಬದುಕು ಸವೆಸಿದ. ಮದುವೆ ಬೇಡ ಎಂದು ಹೇಳಿದ್ದರೂ ಮದುವೆಯಾದ. ಕೆಲವು ವರ್ಷ ಸಂಸಾರವೂ ನಡೆಯಿತು. ಆದರೆ ವೈದ್ಯರ ಮಾತು ಸುಳ್ಳಾಗಲಿಲ್ಲ. ನಲವತ್ತು ತುಂಬಿದ ನಾಲ್ಕು ತಿಂಗಳಲ್ಲೇ ಇಲ್ಲವಾದ, 2001.
ಇದೇ ಜೀವನ ಇದುವೇ ಜೀವನ ಎನ್ನಬಹುದೇ ?
ಇರ್ಫಾನ್ ಖಾನ್ ಇಲ್ಲವಾದ ಸಂದರ್ಭದಲ್ಲಿ ಮತ್ತು ಅವರ ಅದ್ಭುತ ಬರಹ ಓದಿದ ನಂತರ ಏಕೋ ನೆನಪು ಜಾರಿತು. ಆನಂದ್ ನನಗೆ ಆಪ್ತವಾಗುವುದು ಈ ಕಾರಣಕ್ಕೆ. ಈಗ ಇರ್ಫಾನ್ ಹೆಚ್ಚು ಆಪ್ತವಾಗುವುದೂ ಇದೇ ಕಾರಣಕ್ಕೆ. ಸಾವು ಬದುಕಿನ ನಡುವೆ ಅಂತರ ಬಹಳ ಕಡಿಮೆ ಎನ್ನುವ ವಾಸ್ತವವನ್ನು ಅರಿಯಲು ಇಂತಹ ಕೆಲವು ದೃಷ್ಟಾಂತಗಳೂ ನೆರವಾಗುತ್ತವೆ. ಇರ್ಫಾನ್ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಪರದೆಯ ಮೇಲೆ ಮತ್ತು ನಮ್ಮ ನಡುವೆ ಅದ್ಭುತ ನೆನಪುಗಳನ್ನೂ ಬಿಟ್ಟುಹೋಗಿದ್ದಾರೆ. ಇಂತಹ ಜೀವಗಳ ಜೀವಂತಿಕೆ ಸಾವಿನಲ್ಲೂ ಕಾಣುತ್ತದೆಯಲ್ಲವೇ ? ಇದೇ ಜೀವನ ಇದುವೇ ಜೀವನ ಎನ್ನಬಹುದೇ ?
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಾಲ್ಕನೇ ಮದುವೆಗೆ ಸಜ್ಜಾದ್ರು ನಟಿ ವನಿತಾ ವಿಜಯಕುಮಾರ್
ಸುದ್ದಿದಿನಡೆಸ್ಕ್:ಹಿರಿಯ ನಟ ವಿಜಯಕುಮಾರ್ ಮತ್ತು ಅವರ ಎರಡನೇ ಪತ್ನಿ ನಟಿ ಮಂಜುಳಾ ಅವರ ಹಿರಿಯ ಪುತ್ರಿ ವನಿತಾ ವಿಜಯಕುಮಾರ್. ತಮ್ಮ 15 ನೇ ವಯಸ್ಸಿನಲ್ಲಿಯೇ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದರು.
ಆ ಸಾಲಿನಲ್ಲಿ ನಟ ವಿಜಯ್ ಜೊತೆಗೆ ವನಿತಾ ವಿಜಯಕುಮಾರ್ 1995 ರಲ್ಲಿ ನಟಿಸಿದ್ದ ‘ಚಂದ್ರಲೇಖಾ’ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದು ಸೋಲು ಕಂಡಿತು. ಇದಾದ ಬಳಿಕ ‘ಮಾಣಿಕ್ಯಂ’ ಚಿತ್ರದಲ್ಲಿ ನಟಿಸಿದ ವನಿತಾ ವಿಜಯಕುಮಾರ್, ತೆಲುಗು ಮತ್ತು ಮಲಯಾಳಂನಲ್ಲಿ ತಲಾ ಒಂದು ಚಿತ್ರದಲ್ಲಿ ಮಾತ್ರ ನಟಿಸಿದ್ದಾರೆ.
ಮೊದಲ ಪತಿಗೆ ವಿಚ್ಛೇದನ ನೀಡಿದ ಕೆಲವೇ ತಿಂಗಳಲ್ಲಿ ಆನಂದ್ ಜಯರಾಜನ್ ಎಂಬವರನ್ನು ಎರಡನೇ ಮದುವೆಯಾದರು ವನಿತಾ ವಿಜಯಕುಮಾರ್. ಎರಡನೇ ಪತಿಯ ಮೂಲಕ ಜಯನಿತಾ ಎಂಬ ಮಗಳು ವನಿತಾಗೆ ಜನಿಸಿದಳು. ಬಳಿಕ 2012 ರಲ್ಲಿ ಅವರಿಂದಲೂ ವಿಚ್ಛೇದನ ಪಡೆದರು. ಮತ್ತೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿ.. ಅವರೇ ನಿರ್ಮಾಪಕರಾಗಿ ಕಣಕ್ಕಿಳಿದು ಮತ್ತೆ ಕಮ್ ಬ್ಯಾಕ್ ಕೊಟ್ಟ ಚಿತ್ರ ‘ಎಂಜಿಆರ್, ಶಿವಾಜಿ, ರಜನಿ, ಕಮಲ್’. ಈ ಚಿತ್ರವನ್ನು ನೃತ್ಯ ನಿರ್ದೇಶಕ ರಾಬರ್ಟ್ ಮಾಸ್ಟರ್ ನಿರ್ಮಿಸಿ ನಾಯಕನಾಗಿಯೂ ನಟಿಸಿದ್ದರು. ರಾಬರ್ಟ್‌ಗೆ ಜೋಡಿಯಾಗಿ ವನಿತಾ ನಟಿಸಿದ್ದರು.
ಈ ಪ್ರೇಮ ವಿವಾದ ವನಿತಾ ಅವರ ಜೀವನದಲ್ಲಿ ಅಂತ್ಯಗೊಂಡ ನಂತರ, ನಿಜ ಜೀವನದಲ್ಲಿ.. ಅವರ ಕುಟುಂಬದಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆಸ್ತಿ ವಿಚಾರವಾಗಿ ನಡೆದ ಗಲಾಟೆ ವನಿತಾ ವಿಜಯಕುಮಾರ್ ಅವರನ್ನು ಕುಟುಂಬದಿಂದ ಸಂಪೂರ್ಣವಾಗಿ ದೂರ ಮಾಡಿತು. ಒಂದು ಹಂತದಲ್ಲಿ ಆರ್ಥಿಕವಾಗಿ ಹಲವು ಕಷ್ಟಗಳನ್ನು ಅನುಭವಿಸುತ್ತಿದ್ದ ವನಿತಾ ವಿಜಯಕುಮಾರ್ ಅವರಿಗೆ ಮತ್ತೆ ಬೆಳ್ಳಿತೆರೆಗೆ ಮರಳಲು ಅವಕಾಶ ಮಾಡಿಕೊಟ್ಟಿದ್ದು, ಬಿಗ್ ಬಾಸ್ ಕಾರ್ಯಕ್ರಮ.
ಈ ಚಾನೆಲ್ ಸಂಬಂಧ ಪೀಟರ್ ಪಾಲ್ ಎಂಬುವವರೊಂದಿಗೆ ಸ್ನೇಹ ಬೆಳೆಸಿದ್ದು, ಇಬ್ಬರ ನಡುವೆ ಮೂಡಿದ ಪ್ರೇಮ 2020 ರಲ್ಲಿ ಮದುವೆಯಲ್ಲಿ ಕೊನೆಗೊಂಡಿತು. ಕ್ರಿಶ್ಚಿಯನ್ ಸಂಪ್ರದಾಯದಂತೆ ಮನೆಯಲ್ಲೇ ನಡೆದ ಈ ಮದುವೆ ಸರಿಯಾಗಿ ನೋಂದಣಿಯಾಗಲಿಲ್ಲ. ಇನ್ನು ಪೀಟರ್ ಪಾಲ್ ಅವರ ಕುಡಿತದ ಚಟದಿಂದಾಗಿ ಮೂರೇ ತಿಂಗಳಲ್ಲಿ ವನಿತಾ ವಿಜಯಕುಮಾರ್ ಅವರಿಂದ ದೂರವಾದರು. ಇದಾದ ಬಳಿಕ ತಮ್ಮ ಸಿನಿಮಾ ಜೀವನದತ್ತಲೇ ಗಮನ ಹರಿಸಿರುವ ವನಿತಾ, ಸತತವಾಗಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಪ್ರಶಾಂತ್ ನಟನೆಯ ‘ಅಂಧಗನ್’ ಚಿತ್ರದಲ್ಲಿಯೂ ಅವರ ಅಭಿನಯ ಮೆಚ್ಚುಗೆ ಗಳಿಸಿತು.
ವಿವಾದಗಳಿಗೆ ಹೆಸರಾಗಿರುವ ವನಿತಾ ವಿಜಯಕುಮಾರ್, ಈಗ ನಾಲ್ಕನೇ ಮದುವೆಗೆ ಸಿದ್ಧರಾಗಿದ್ದಾರಾ ಎಂಬ ಅನುಮಾನ ಮೂಡಿದೆ. ಅದೇನೆಂದರೆ ‘ಎಂಜಿಆರ್ ಶಿವಾಜಿ ರಜನಿ ಕಮಲ್’ ಚಿತ್ರದಲ್ಲಿ ನಟಿಸುವಾಗ ತಮ್ಮೊಂದಿಗೆ ಪ್ರೇಮ ಸುದ್ದಿಯಲ್ಲಿ ಸಿಲುಕಿಕೊಂಡಿದ್ದ ಬಿಗ್ ಬಾಸ್ ಸೆಲೆಬ್ರಿಟಿ ರಾಬರ್ಟ್ ಮಾಸ್ಟರ್‌ಗೆ.. ಬೀಚ್‌ನಲ್ಲಿ, ಬಿಕಿನಿ ತೊಟ್ಟು ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಇದೇ ವೇಳೆ ಇದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 5 ರಂದು ಮಹತ್ವದ ಮಾಹಿತಿ ಹೊರಬೀಳಲಿದೆ ಎನ್ನಲಾಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗನ್ ಮಿಸ್ ಫೈರ್ | ಬಾಲಿವುಡ್ ನಟ ಗೋವಿಂದ ಆಸ್ಪತ್ರೆಗೆ ದಾಖಲು
ಸುದ್ದಿದಿನ,ಮುಂಬೈ:ಗನ್ ಮಿಸ್ ಫೈರ್ ಆದ ಕಾರಣ ಬಾಲಿವುಡ್ ನಟ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಆದರೆ ಗುಂಡು ಗೋವಿಂದ ಅವರ ಕಾಲಿಗೆ ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ವರದಿಯ ಪ್ರಕಾರ ತನ್ನದೇ ಗನ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಅವಘಡ ನಡೆದಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಗೋವಿಂದ ಅವರ ಬಳಿಯಿದ್ದ ಗನ್‌ಗೆ ಪರವಾನಗಿ ಪಡೆದುಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. ನಟ ಗೋವಿಂದ ಹಾಗೂ ಕುಟುಂಬಸ್ಥರು ಈ ಕುರಿತು ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಟ ದರ್ಶನ್‌ಗೆ ರಾಜಾತಿಥ್ಯ ; ಏಳು ಮಂದಿ ಜೈಲು ಅಧಿಕಾರಿ, ಸಿಬ್ಬಂದಿ ಅಮಾನತು
ಸುದ್ದಿದಿನಡೆಸ್ಕ್:ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಏಳುಮಂದಿ ಜೈಲು ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲರ್ ಶರಣಬಸವ ಅಮೀನಗಢ, ಸಹಾಯಕ ಜೈಲರ್ ಪುಟ್ಟಸ್ವಾಮಿ, ಜೈಲ್ ಹೆಡ್ ವಾರ್ಡರ್‌ಗಳಾದ ವೆಂಕಪ್ಪ, ಸಂಪತ್, ವಾರ್ಡರ್‌ಗಳಾದ ಬಸಪ್ಪ, ಪ್ರಭು, ಶ್ರೀಕಾಂತ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಘಟನೆ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧವೂ ಸಹ ತನಿಖೆ ನಡೆಯುತ್ತಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ಇನ್ನೊಂದೆಡೆ, ಜೈಲಿನಲ್ಲಿ ನಟ ದರ್ಶನ್ ಹಾಗೂ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ನಿರ್ದೇಶಿಸಿದ್ದಾರೆ. ಅಲ್ಲದೆ, ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಅಕ್ಟೋಬರ್ 2 ರಂದು ’ಗಾಂಧಿ ನಡಿಗೆ’ ಮತ್ತು ’ಸ್ವಚ್ಛತಾ ಪ್ರತಿಜ್ಞೆ’ ಆಯೋಜಿಸಲು ರಾಜ್ಯ ಸರ್ಕಾರ ನಿರ್ಧಾರ
-
ದಿನದ ಸುದ್ದಿ5 days ago
ಕೊರೋನಾ ಸಂದರ್ಭದಲ್ಲಿ ಬಡವರನ್ನು ಬದುಕಿಸಿದ್ದು ನರೇಗಾ ಮತ್ತು ಅನ್ನಭಾಗ್ಯ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ4 days ago
ವಿಜಯನಗರ | ಹೊಸಪೇಟೆಯಲ್ಲಿ ಶೇ.50ರಷ್ಟು ಏಡ್ಸ್ ರೋಗಿಗಳು ಪತ್ತೆ
-
ದಿನದ ಸುದ್ದಿ5 days ago
ದೇಶದ ಕೃಷಿ ವಿಜ್ಞಾನ ಕೇಂದ್ರಗಳಿಗೆ 50 ವರ್ಷ ; ದಾವಣಗೆರೆಯಲ್ಲಿ ಸಸ್ಯ ಸಂತೆ ಆಯೋಜನೆ
-
ದಿನದ ಸುದ್ದಿ3 days ago
ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಲೋಕಾಯುಕ್ತದಲ್ಲಿರುವ ಮೂಡಾ ಪ್ರಕರಣದ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ5 days ago
ಆತ್ಮಕತೆ | ಕೇಂದ್ರದಲ್ಲಿ ಮೂಡಿ ಮಡಿದವರು
-
ದಿನದ ಸುದ್ದಿ5 days ago
ಜೀವನಶೈಲಿಯಲ್ಲಾದ ಬದಲಾವಣೆಯೇ ಹೃದಯ ಸಂಬಂಧಿ ಖಾಯಿಲೆಗಳಿಗೆ ಕಾರಣ : ಸಂಸದ ಡಾ. ಸಿ.ಎನ್. ಮಂಜುನಾಥ್