Connect with us

ದಿನದ ಸುದ್ದಿ

ಮಹೇಂದ್ರ ಎಂಬ ಅಂಗುಲಿಮಾಲ

Published

on

  • ಯೋಗೇಶ್ ಮಾಸ್ಟರ್

ಯಾವ ಶಕ್ತಿಗಳು ರಾಷ್ಟ್ರ, ಸಂಸ್ಕೃತಿ, ಧರ್ಮ ಎಂದು ದೇಶದ ಏಕತೆ ಮತ್ತು ಸೌಹಾರ್ದತೆಯ ಮೇಲೆ ದಾಳಿ ಮಾಡುತ್ತಿದ್ದವೋ, ಅದೇ ಶಕ್ತಿಗಳ ಭಾಗವಾಗಿದ್ದ ತನ್ನ ಈ ಶಕ್ತಿ ವಿಧ್ವಂಸಕವಾಗಕೂಡದು ಮತ್ತು ರಚನಾತ್ಮಕವಾಗಬೇಕು ಎಂಬ ಜ್ಞಾನೋದಯ ಪಡೆದುಕೊಂಡ ವ್ಯಕ್ತಿ ಮಹೇಂದ್ರ ಕುಮಾರ್. ಆ ಜ್ಞಾನೋದಯವನ್ನು ಮತ್ತು ತನ್ನದಂತೆಯೇ ಇತರರದೂ ಜೀವ ಎಂದು ಪ್ರಜ್ಞೆ ಪಡೆದುಕೊಂಡ ವ್ಯಕ್ತಿ ಆ ಪ್ರಜ್ಞೆಯನ್ನು ತನ್ನ ಸಹಜೀವಿಗಳಿಗೆ ಹಂಚಿಕೊಳ್ಳುತ್ತಾ ಶಕ್ತಿಯು ನಕಾರಾತ್ಮಕವಾಗುವ ಬದಲು ರಚನಾತ್ಮಕವಾಗಿ ಸಮಾಜದಲ್ಲಿ ಬಳಕೆಯಾಗಬೇಕು ಎಂದು ಬಯಸುತ್ತಾ, ಕೆಲಸ ಮಾಡುತ್ತಿದ್ದರು. ಇಂತಹ ಪ್ರಜ್ಞಾವಂತ ಜೀವಿ ಇಷ್ಟುಬೇಗ ಬದುಕಿನಿಂದ ವಿಮುಖವಾಗಿದ್ದು ನಿಜಕ್ಕೂ ಜನಪರ ಹೋರಾಟಕ್ಕೆ ಆದ ಅನ್ಯಾಯವೇ.

ಬಜರಂಗದಳದ ತಂಡದಿಂದ ತನ್ನ ಅರಿವಿನಿಂದ ಹೊರಗೆ ಬಂದ ಈ ಅಂಗುಲಿಮಾಲ ಶರಣಾಗಿದ್ದು ಮನುಷ್ಯ ಪ್ರೀತಿಗೆ. ಇಂಥಾ ಸಮಯದಲ್ಲಿ ನಮಗೆ ಪೂರಕ ಶಕ್ತಿಯಾಗುವಂತೆ ಇದ್ದ ಮಹೇಂದ್ರ ಕುಮಾರ್ ಇನ್ನಿಲ್ಲ ಎಂಬುದನ್ನು ಅರಿಗಿಸಿಕೊಳ್ಳಲು ಕಷ್ಟವಾದರೂ ನಿಜ. ಮಹೇಂದ್ರ ಕುಮಾರ್ ಇನ್ನಿಲ್ಲ ಎಂಬ ಆಘಾತಕರ ಸುದ್ಧಿಯನ್ನು ನಾನು ನಂಬಲಾಗದೇ ಅವರಿವರಿಗೆ ಫೋನ್ ಮಾಡಿ ನಿಜವೆಂದು ಹೇಳಿದರು. ಆದರೆ ನಂಬಲು ಈಗಲೂ ಸಿದ್ಧನಿಲ್ಲ.

ಯುವಶಕ್ತಿಯನ್ನು ಜೀವಪರವಾದ ಮತ್ತು ಸಮಾಜಮುಖಿಯಾದ ದಾರಿಯಲ್ಲಿ ನಡೆಸುತ್ತಾ ಮನುಷ್ಯಪ್ರೇಮದ ಗುರಿಗೆ ಒಯ್ಯಲು ಸಾಂಘಿಕವಾಗಿ ಶ್ರಮಿಸುತ್ತಿದ್ದ ಮಹೆಂದ್ರಕುಮಾರ್ ಗೆ ಬಹಳ ಸಂಕಟದಿಂದ ಅಂತಿಮ ವಿದಾಯಗಳನ್ನು ಹೇಳುತ್ತಿದ್ದೇನೆ. ಮಹೇಂದ್ರ ಕುಮಾರ್ ನನಗೆ ಇತ್ತೀಚೆಗೆ ತಿಮ್ಮಿಯ ಬಗ್ಗೆ ಮಾಡಿದ್ದ ಕರೆ ಕೊನೆಯದಾಗಬಹುದೆಂದು ನಾನು ಹೇಗೆ ಕಲ್ಪಿಸಿಕೊಳ್ಳಲು ಸಾಧ್ಯ?

ತಿಮ್ಮಿಯ ಮೇಲಿನ ನಮ್ಮ ಪ್ರೀತಿಯನ್ನು ಮತ್ತು ನಮ್ಮ ಕುಟುಂಬದಲ್ಲಿ ಅದು ಪಡೆದುಕೊಂಡಿರುವ ಸ್ಥಾನವನ್ನು ಅದು ಬಂದ ಪ್ರಾರಂಭದ ದಿನಗಳಲ್ಲೇ ಗಮನಿಸಿದ್ದ ಮಹೇಂದ್ರ ಕುಮಾರ್ “ಒಬ್ಬರು ಒಂದು ಪ್ರಾಣಿಯನ್ನು ತಮ್ಮ ಪ್ರೀತಿಯ ಜೀವ ಎಂದು ಮನೆಯಲ್ಲಿ ಸಾಕುತ್ತಿರುವಾಗ, ಮುದ್ದಿಸುತ್ತಿರುವಾಗ ಅದನ್ನು ಕೊಯ್ಯುವ ತಿನ್ನುವ ಬಗ್ಗೆಯೇ ನಾವು ಪೋಸ್ಟ್ ಮಾಡುತ್ತಿದ್ದರೆ ಅದೆಷ್ಟು ಕ್ರೂರ.

ಯೋಗೇಶ್ ಮಾಸ್ಟರ್ ನೆಚ್ಚಿನ ಮನೆಯ ಸದಸ್ಯ ಕೋಳಿ ಬಗ್ಗೆ ಮಹೇಂದ್ರ ಕುಮಾರ್ ಕಾಮೆಂಟ್ ಇದು.

ಅದನ್ನು ಮುದ್ದಿನ ಪ್ರಾಣಿ ಮತ್ತು ಮನೆಯ ಸದಸ್ಯರನ್ನಾಗಿ ಮಾಡಿಕೊಂಡಿರುವ ಮನಸ್ಸಿಗೆ ಅದೆಷ್ಟು ನೋವಾಗುವುದಿಲ್ಲ! ಇದು ತಮಾಷೆ ಅಲ್ಲ ಮೇಷ್ಟೇ. ತಮಾಷೆಗೆ ನಿಮ್ಮ ಮನೆ ಸದಸ್ಯನ ಕುಯ್ದುಕೊಂಡು ತಿಂತೀನಿ ಅಂತ ಹೇಳ್ತಾರಾ? ಇವರಿಗೇನು ಇಷ್ಟು ಮಾತ್ರ ಗೊತ್ತಾಗುವುದಿಲ್ಲವಾ? ಅವರ ಪ್ರೀತಿಯ ಮತ್ತು ಮನೆಯ ಸದಸ್ಯರಲ್ಲಿ ಒಂದಾಗಿರುವ ಜೀವವನ್ನು ಕೊಲ್ಲುವ, ಮಸಾಲೆ ಅರೆಯುವ, ತಿನ್ನುವ ಮಾತಾಡಿದರೆ ನಿಮ್ಮ ಮನಸಿಗೆ ಅದೆಷ್ಟು ನೋವಾಗುವುದಿಲ್ಲ?” ಎಂದು ನನಗೆ ಫೋನ್ ಮಾಡಿಯೇ ಮಾತಾಡಿದ್ದರು. ಇದೇ ನನಗೆ ಅವರು ಮಾಡಿದ್ದ ಕೊನೆಯ ಕರೆ.

ಜೀವಕ್ಕೆ ಮತ್ತು ಜೀವನಕ್ಕೆ ಬೆಲೆಯಿಲ್ಲದಂತೆ ವರ್ತಿಸುವ, ಪ್ರೀತಿ ಪ್ರೇಮವನ್ನು ಲವ್ ಜಿಹಾದ್ ಎಂದು ದಾಳಿ ಮಾಡುವ ಮತೋನ್ಮತ್ತ ಸಂಘಗಳ ಹಿನ್ನೆಲೆಯಿಂದಲೇ ಬಂದ ವ್ಯಕ್ತಿ ಒಂದು ಕೋಳಿಯ ಜೀವಕ್ಕೂ ಮರುಗುವಷ್ಟು, ಅದರೊಂದಿಗೆ ಸಂಬಂಧಹೊಂದಿರುವವರ ಪ್ರೀತಿಯನ್ನು ಆದರಿಸುವಷ್ಟು ಕಾಳಜಿಯನ್ನು ತೋರುತ್ತಿದ್ದರೆಂದರೆ, ಅವರು ತಮ್ಮ ಜೊತೆಗೆ ಇದ್ದ ಯುವಕರಲ್ಲಿ ಇನ್ನೆಷ್ಟರ ಮಟ್ಟಿಗೆ ಜೀವಪರ ಸಂವೇದನೆಯನ್ನು ಪ್ರೇರೇಪಿಸುತ್ತಿದ್ದರು ಎಂದು ಆಲೋಚಿಸುತ್ತಿದ್ದೆ.

ನಮ್ಮ ಧ್ವನಿ ಎಂದು ತನ್ನ ಜೀವಪರ ದನಿಗೆ ಸಾಂಸ್ಥಿಕ ರೂಪಕೊಟ್ಟು ಯುವಕರಿಗೆ ಸಮಾಜಮುಖಿಯಾಗುವಂತಹ ತರಬೇತಿಗಳನ್ನು ಕೊಡುತ್ತಿದ್ದರು. ಈ ತರಬೇತಿ ಶಿಬಿರಗಳಲ್ಲಿ ಪರಿಣಿತರಿಂದ, ಪ್ರಸಿದ್ಧರಿಂದ ಹೋರಾಟಗಾರರಿಗೆ ನೈತಿಕತೆ, ತಾತ್ವಿಕತೆ ಮತ್ತು ತಾಂತ್ರಿಕತೆಗಳ ಶಿಕ್ಷಣ ಕೊಡಿಸುವ ಕೆಲಸವಾಗುತ್ತಿತ್ತು. ನಮ್ಮ ಧ್ವನಿಯಲ್ಲಿ ಅನುಯಾಯಿಗಳನ್ನು ಬೆನ್ನಿಗಿಟ್ಟುಕೊಳ್ಳುವ ಇರಾದೆ ಇಲ್ಲದೇ ನಾಯಕರನ್ನು ತಯಾರುಮಾಡುವ, ಜನರನ್ನು ಮುನ್ನಡೆಸಲು ಮುಂದಾಳುಗಳನ್ನು ರೂಪಿಸುವ ಆಶಯವನ್ನು ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಹತ್ತಿರದಿಂದ ಬಲ್ಲೆ.

ಮತ್ತೆ ಸಿಗೋಣ ಎಂದು ಕೊಟ್ಟ ಮಾತನ್ನು ಮುರಿದಿದ್ದು ಅಕ್ಷಮ್ಯ ಮತ್ತು ಸಂಕಟ. ವಿದಾಯ ಹೇಳುವ ಮನಸ್ಸಿಲ್ಲ ಮಹೇಂದ್ರ. ನೀವು ನನ್ನ ಭರವಸೆಗಳನ್ನು ಈಡೇರಿಸದೇ, ನೀವು ಕಂಡ ಸಮಸಮಾಜದ ಕನಸನ್ನು ಸಂಘಾಂತರವಾಗಿ ಬರುವ ಮನಸುಗಳಿಗೆ ಧಾರೆಯೆರೆಯದೇ ಮತ್ತು ಈ ಯುವಸಮಾಜಕ್ಕಾಗಿ ಕೊಟ್ಟ ಹಲವು ಮಾತುಗಳನ್ನು ಪೂರೈಸದೇ ಹೋಗುವುದನ್ನು ಹೇಗೆ ಭರಿಸಲಿ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಕಲಿ ವೈದ್ಯರಿಗೆ ದಂಡ ; ಮೆಡಿಕಲ್ ಸ್ಟೋರ್ ಮುಚ್ಚಲು ಆದೇಶ

Published

on

ಸುದ್ದಿದಿನ,ದಾವಣಗೆರೆ:ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ನಕಲಿ ವೈದ್ಯ ಹಾಗೂ ಲಿಂಗಾಪುರದಲ್ಲಿ ಫಾರ್ಮಾಸಿಸ್ಟ್ ನಡೆಸುತ್ತಿದ್ದ ಕ್ಲಿನಿಕ್ ಮುಚ್ಚಿಸಿ ತಲಾ ಲಕ್ಷ ರೂ.ಗಳ ದಂಡ ಪಾವತಿಸುವಂತೆ ಜಿಲ್ಲಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಪ್ರಾಧಿಕಾರ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಮಿತಿ ಅಧ್ಯಕ್ಷರಾದ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಭದ್ರಾವತಿ ತಾಲ್ಲೂಕಿನ ಸನ್ಯಾಸಿಕೊಡಮಗ್ಗಿ ಗ್ರಾಮದ 57 ವರ್ಷದ ಶ್ರೀನಿವಾಸ್ ತಂದೆ ತಿಮ್ಮಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಲಿಂಗಾಪುರದಲ್ಲಿ ಶೀನಪ್ಪಗೌಡ ಎಂಬುವರ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಶ್ರೀ ರಾಮಾಂಜನೇಯ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ ಎಂದು ಪರವಾನಗಿ ಪಡೆದು ಜೊತೆಗೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಾ ಜನರಿಗೆ ಚಿಕಿತ್ಸೆ ನೀಡುತ್ತಿದ್ದನು. ಇವರು ಪಡೆದ ಮೆಡಿಕಲ್ ಸ್ಟೋರ್ ಲೈಸೆನ್ಸ್ ರದ್ದುಪಡಿಸಿ ಒಂದು ಲಕ್ಷ ದಂಡ ವಿಧಿಸಲಾಗಿದೆ.

ಮತ್ತೊಬ್ಬ ನಕಲಿ ವೈದ್ಯ ಹಿರೇಕೇರೂರು ತಾಲ್ಲೂಕಿನ ಹಿರೇ ಮರಬ ಗ್ರಾಮದ 45 ವರ್ಷದ ಲಕ್ಷ್ಮಣ ಬಿನ್ ಫಕ್ಕೀರಪ್ಪ ಇವರು ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ದೇವಸ್ಥಾನದ ಹತ್ತಿರ ಬಸವನಗೌಡ ಎಂಬುವರಿಂದ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಅನಧಿಕೃತ ಕ್ಲಿನಿಕ್ ನಡೆಸುತ್ತಾ ಬಂದಿದ್ದರು. ತಪಾಸಣೆ ವೇಳೆ ಬಿಇಎಂಎಸ್ ಪ್ರಮಾಣ ಪತ್ರ ಹೊಂದಲಾಗಿದೆ ಎಂಬ ಮಾಹಿತಿ ನೀಡಿದ್ದು ಇದು ಅಮಾನ್ಯ ಪ್ರಮಾಣ ಪತ್ರವಾಗಿರುವುದರಿಂದ ನಕಲಿ ಎಂದು ಪರಿಗಣಿಸಿ ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.

ಈ ನಕಲಿ ಕ್ಲಿನಿಕ್ ಗಳ ಬಗ್ಗೆ ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಸ್ಥಳ ಮಹಾಜರು ಮಾಡಿ ಸಮಗ್ರ ವರದಿ ನೀಡಿದ್ದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಸದಸ್ಯ ಕಾರ್ಯದರ್ಶಿ ಡಾ.ಷಣ್ಮುಖಪ್ಪ ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿಯೊಂದಿಗೆ ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ

Published

on

ಸುದ್ದಿದಿನಡೆಸ್ಕ್:ಕೃತಕ ಬುದ್ಧಿಮತ್ತೆ ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ಥಾನ ಪಡೆದಿದ್ದಾರೆ.

ಅಶ್ವಿನಿ ವೈಷ್ಣವ್ ಅವರನ್ನು ಶಾರ್ಪರ್ ವರ್ಗದಲ್ಲಿ ಹೆಸರಿಸಲಾಗಿದ್ದು, ಅವರ ನಾಯಕತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದ ಮೊದಲ 5 ದೇಶಗಳಲ್ಲಿ ಭಾರತ ಸ್ಥಾನ ಪಡೆಯುವ ಆಶಯದಲ್ಲಿದೆ ಎಂದು ಟೈಮ್ ಮ್ಯಾಗ್‌ಜೀನ್ ಬರೆದಿದೆ.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿಸುವ ಪ್ರಯತ್ನದಲ್ಲಿ ಸಚಿವರು ನಿರ್ವಹಿಸಿದ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಅವರ ಹೆಸರು ನಮೂದಿತವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ ಇನ್ಫೋಸೀಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಸಿಇಓಗಳಾದ ಗೂಗಲ್‌ನ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ, ಓಪನ್‌ಎಐ ನ ಸ್ಯಾಮ್ ಅಲ್ಟ್‌ಮನ್, ಮೆಟಾದ ಮಾರ್ಕ್ ಝುಕೇರ್‌ಬರ್ಗ್ ಟೈಮ್ ಪ್ರಕಟಿಸಿದ ಪಟ್ಟಿಯಲ್ಲಿ ಸೇರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜಧಾನಿಯಲ್ಲಿ ಅಪಾಯಕಾರಿ ಮರಗಳನ್ನು ಕತ್ತರಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ರಾಜಧಾನಿ ಬೆಂಗಳೂರಿನಲ್ಲಿ 15 ದಿನದೊಳಗೆ ಗುಂಡಿ ಮುಚ್ಚುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.

ವಿದೇಶ ಪ್ರವಾಸಕ್ಕೂ ಮುನ್ನ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಂದು ಸಭೆ ನಡೆಸಿದ ಅವರು ಸರಿಯಾಗಿ ಕಾರ್ಯನಿವಹಿಸದ ಅಧಿಕಾರಿಗಳನ್ನು ಅಮಾನತುಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ತಿಳಿಸಿದ ಅವರು, ಅಪಾಯಕಾರಿ ಮರಗಳಿದ್ದರೆ, ಕತ್ತರಿಸುವಂತೆ ಸೂಚಿಸಿದ್ದಾರೆ.

ಯಾವುದೇ ದೂರು ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮೌನೀಶ್ ಮೌದ್ಗೀಲ್, ಬಿಎಂಆರ್ಡಿಎ ಆಯುಕ್ತ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending