Connect with us

ಅಂತರಂಗ

ಧರ್ಮ ಮರ್ಮ-04 : ಧರ್ಮಶಾಸ್ತ್ರದ ಉಗಮ

Published

on

Art: Kim knoll, Chicago
  • ಯೋಗೇಶ್ ಮಾಸ್ಟರ್

ರ್ಮವು ತಾತ್ವಿಕವೋ ಅಥವಾ ಆಧ್ಯಾತ್ಮಿಕವೋ? ಇವನ್ನೂ ಒಳಗೊಂಡು ಮತ್ತು ಇವನ್ನು ಮೀರಿರುವ ಸಂಗತಿಗಳೋ. ಜೈವಿಕ ಅಗತ್ಯ ಮತ್ತು ಸಾಮಾಜಿಕ ವಾಸ್ತವಕ್ಕೆ ಈ ಧರ್ಮವೆನ್ನುವುದು ಬೇಕಾಗಿದೆಯೇ? ಧರ್ಮವೆಂಬ ಅಮೂರ್ತವಾದ ಪರಿಕಲ್ಪನೆಯನ್ನು ಅಥವಾ ಆಂತರಿಕ ಮೌಲ್ಯವನ್ನು ಕಾಪಾಡಲು ಅದರ ಸ್ವರೂಪನ್ನು, ವಿವರಣೆಯನ್ನು, ಅದನ್ನು ಕಂಡುಕೊಳ್ಳಬೇಕಾಗಿರುವ ಅಗತ್ಯವನ್ನು, ಅದನ್ನು ಪಾಲಿಸಬೇಕಾಗಿರುವ ಅವಶ್ಯಕತೆ ಮತ್ತು ಪಾಲಿಸದಿದ್ದರೆ ಆಗುವ ತೊಂದರೆಗಳನ್ನು ಹೇಳಬೇಕು. ಅದಕ್ಕಾಗಿ ಅದನ್ನು ಪಠ್ಯದಲ್ಲಿ ಕಟ್ಟಿಕೊಡುವ ಒಂದು ಅನುಕ್ರಮಣೀಯ ಶಾಸ್ತ್ರಬೇಕು.

ಯಾವಾಗ ಧರ್ಮ ಎಂಬುದು ಶಾಸ್ತ್ರದ ಕಟ್ಟಿನಲ್ಲಿ ಬಂದು ಬಿತ್ತೋ ಅದಕ್ಕೆ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಅಧಿಕಾರಗಳನ್ನೆಲ್ಲಾ ಹೊರಿಸಲಾಯಿತು. ಅಂತೆಯೇ ಅವೆಲ್ಲದರ ಗುಣಗಳನ್ನೂ ಆರೋಪಿಸಲಾಯಿತು. ಧರ್ಮದ ಆಂತರಿಕ ಮೌಲ್ಯವನ್ನು ತಾತ್ವಿಕವಾಗಿ ಗ್ರಹಿಸುವ ತತ್ವಜ್ಞಾನಿಯದು ಆಯಾಮವಾದರೆ, ಧರ್ಮಶಾಸ್ತ್ರದ ಪಂಡಿತನದು ಮತ್ತೊಂದು ಆಯಾಮ.

ಒಟ್ಟಾರೆ, ತತ್ವಜ್ಞಾನಿಯು ಕತ್ತಲೆಯ ಕೋಣೆಯಲ್ಲಿ ಇಲ್ಲದ ಕರಿಯ ಬೆಕ್ಕಿಗಾಗಿ ಹುಡುಕುವ ಕುರುಡನಂತಿದ್ದಾನೆ. ಧರ್ಮಶಾಸ್ತ್ರದ ಪಂಡಿತನು ಕತ್ತಲೆಯ ಕೋಣೆಯಲ್ಲಿ ಇಲ್ಲದ ಕರಿಯ ಬೆಕ್ಕಿಗಾಗಿ ಹುಡುಕುತ್ತಿರುವ ಕುರುಡುನಂತಿದ್ದೂ, ಅದನ್ನು ತಾನು ಕಂಡಿರುವುದಾಗಿ ಆಣೆಯಿಟ್ಟು ಹೇಳುತ್ತಿದ್ದಾನೆ. ನಮ್ಮ ಜನ ಈ ಆಣೆಯನ್ನು ನಂಬಿ ಮ್ಯಾಜಿಕ್ ಬಟ್ಟೆಯನ್ನು ತೊಟ್ಟು ಬಂದಿರುವ ರಾಜನ ಪ್ರಜೆಗಳು ಬಟ್ಟೆಯನ್ನು, ಅದರ ಬಣ್ಣಗಳನ್ನು, ವಿನ್ಯಾಸಗಳನ್ನು ವರ್ಣಿಸುತ್ತಾರೆ.

ಗೊತ್ತಲ್ಲಾ, ಒಬ್ಬ ರಾಜನಿಗೆ ಬಟ್ಟೆಯ ಹುಚ್ಚು. ಆತನಿಗೆ ಅದನ್ನು ಬಿಡಿಸಲು ಒಮ್ಮೆ ಮಂತ್ರಿಗಳು ಯಾರೋ ನೇಕಾರರನ್ನು ಕರೆತಂದರು. ಅವರು ನೇಯುವ ಬಟ್ಟೆ ಬುದ್ಧಿವಂತರಿಗೆ ಮಾತ್ರ ಕಾಣುವಂತದ್ದು. ಯಾರಿಗೂ ತಾವು ದಡ್ಡರೆಂದು ಕರೆಯಿಸಿಕೊಳ್ಳಲು ಇಷ್ಟವಿಲ್ಲ. ಆ ನೇಕಾರರು ಖಾಲಿ ಮಗ್ಗ ನೇಯುತ್ತಿದ್ದರೆ ನೋಡುಗರೆಲ್ಲಾ ಅದರ ವಿನ್ಯಾಸ, ಬಣ್ಣ, ಹೊಳಪನ್ನು ಹೊಗಳುತ್ತಿದ್ದರು. ಈ ಬಟ್ಟೆಯನ್ನು ತೊಟ್ಟ ರಾಜ ಬೆತ್ತಲಾಗೇ ಇದ್ದ.

ಆದರೆ ತಾವು ರಾಜ ಬಟ್ಟೆ ತೊಟ್ಟಿಲ್ಲವೆಂದು ಹೇಳಿದರೆ ತಾನು ದಡ್ಡನೆಂದು ಇತರರಿಗೆ ಗೊತ್ತಾಗುವುದೆಂದು ಎಲ್ಲರೂ ತೊಟ್ಟಿರದ ಬಟ್ಟೆಯನ್ನು ಹೊಗಳುವವರೇ. ಯಾವುದೋ ಒಂದು ಮಗುವು ಮಾತ್ರ ರಾಜನು ಬೆತ್ತಲಾಗಿದ್ದಾನೆಂದು ನೇರವಾಗಿ ಹೇಳಿತು. ನಂತರ ಅದು ಎಲ್ಲರೂ ಒಪ್ಪತೊಡಗಿದರು. ನಂತರ ನಾಚಿಕೆಯಿಂದ ರಾಜ ಮನೆ ಓಡಿದ. ಇದೊಂದು ಅತ್ಯಂತ ಸುಂದರವಾದ ಕಥೆ.

ನಮ್ಮ ಪುರಾಣಿಕರೂ ಕೂಡ ಅದೇನನ್ನೋ ತೋರಿಸುತ್ತಾ ವರ್ಣಿಸುತ್ತಿರುತ್ತಾರೆ. ನಮ್ಮವರೆಲ್ಲಾ ಅದೆಲ್ಲಾ ಅರ್ಥವಾಗಿರುವ ಹಾಗೆ ತಲೆದೂಗುತ್ತಾ ಒಪ್ಪುತ್ತಿರುತ್ತಾರೆ. ಅತ್ಯಂತ ಜ್ಞಾನಿಯೆಂದು ಕಾಣುವ ಆತನ ಮಾತನ್ನು ನಿರಾಕರಿಸಿದರೆ ತಾನು ದಡ್ಡನೆಂದು ನಿರೂಪಿತವಾಗುತ್ತದೆ ಎಂಬ ಭಯ. ನನ್ನ ಗೆಳೆಯ ಇಂಗ್ಲೀಷ್ ಸಿನಿಮಾ ನೋಡುವಾಗ ಯಾವುದಾದರೂ ಸಂಭಾಷಣೆಗೆ ಅಕ್ಕಪಕ್ಕದವರು ನಕ್ಕರೆ ಅವನೂ ನಗುತ್ತಿದ್ದ. ಏಕೆಂದರೆ ಇವನಿಗೆ ಇಂಗ್ಲೀಷ್ ಬಾರದು ಎಂದು ತಿಳಿಯಬಾರದಲ್ಲಾ. ಯಾರಿಗಾದರೂ ತಿಳಿದರೂ ಅಲ್ಲಿರುವವರಲ್ಲಿ ‘ಯಾಕಯ್ಯಾ ನೀನು ನಗಲ್ಲಾ, ಯಾಕಯ್ಯಾ ಇಂಗ್ಲೀಷ್ ಕಲಿತಿಲ್ಲ’ ಎಂದು ಯಾರೂ ಕೇಳುವುದಿಲ್ಲ. ಆದರೂ ಇವನಿಗೇ ಕೀಳರಿಮೆ.

ತನಗೂ ಜ್ಞಾನವಿದೆ ಎಂದು ಪ್ರದರ್ಶಿಸುವ ಹುಸಿ ಪ್ರತಿಷ್ಟೆ. ಈ ಬಗೆಯಲ್ಲಿ ತಮಗೆ ತೋಚಿದಂತೆ ಹೇಳಿ ಇದೇ ಸತ್ಯ ಎಂದು ಸಾಧಿಸುವವರ ಸಾಧನೆ ಎಂದರೆ ಧರ್ಮದ ಅಪವ್ಯಾಖ್ಯಾನಗಳು. ಹಾಗಾದರೆ ತಮಗೆ ಏನು ತೋಚುತ್ತದೆಯೋ, ತಮ್ಮ ಗ್ರಹಿಕೆಗೆ ಎಟುಕುತ್ತದೆಯೋ, ತಮ್ಮ ಅಧ್ಯಯನದ ಅರಿವಿಗೆ ನಿಲುಕುತ್ತದೆಯೋ ಅದನ್ನು ಹೇಳಬಾರದೇ? ಹೇಳಬೇಕು. ಆದರೆ ಅದೇ ಸತ್ಯವೆಂದು ಮತ್ತು ಅಂತಿಮವೆಂದು ನಂಬಬಾರದು ಮತ್ತು ನಂಬಿಸಲು ಹೋಗಬಾರದು. ಸತ್ಯವೆಂದು ಮತ್ತು ಅಂತಿಮವೆಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ಯಾವುದನ್ನೂ ನಿರುಕಿಸಲಾಗದು. ಏಕೆಂದರೆ ಯಾವುದು ಸಜೀವವಾಗಿರುವುದೋ ಅದು ಬೆಳೆಯುತ್ತದೆ, ಅರಳುತ್ತದೆ, ವಿಕಾಸವಾಗುತ್ತಿರುತ್ತದೆ. ಬೆಳವಣಿಗೆ ಅಥವಾ ಪ್ರಗತಿ ಜೀವಂತಿಕೆಯ ಲಕ್ಷಣ.

ಧರ್ಮವಾಗಲಿ, ಸಂಸ್ಕೃತಿಯಾಗಲಿ, ಮೌಲ್ಯಗಳಾಗಲಿ; ಅವುಗಳನ್ನು ಜೀವಂತಿಕೆಯಿಂದಿರಿಸಿಕೊಳ್ಳಬೇಕೆಂದರೆ ಅವುಗಳು ವಿಕಾಸವಾಗಲು ಅವಕಾಶಕೊಡಬೇಕು. ಅವುಗಳ ಬೆಳವಣಿಗೆಯನ್ನು ಗೌರವಿಸುವ ಮನಸ್ಥಿತಿಯನ್ನು ನಮ್ಮದಾಗಿಸಿಕೊಳ್ಳಬೇಕು. ಅಂದೆಂದೋ ಕಾಲದ್ದು ಇಂದಿಗೂ ನಮಗೆ ಹಾಗೆಯೇ ಪ್ರಾಯೋಗಿಕವಾಗಿರಬೇಕೆಂದರೆ ಬದಲಾದ ಕಾಲಘಟ್ಟದಲ್ಲಿ ಅದು ಉಸಿರುಗಟ್ಟಿಸುತ್ತದೆ.
ನಾನು ಮೂರರ ಪ್ರಾಯದಲ್ಲಿದ್ದಾಗ ತೊಟ್ಟ ಬಟ್ಟೆಗಳು ಸುಸ್ಥಿತಿಯಲ್ಲಿವೆ ಎಂದಿಟ್ಟುಕೊಳ್ಳಿ. ಅದನ್ನು ನೋಡಿದಾಗ ನಾನೇ ಆಗ ತೊಡುತ್ತಿದ್ದ ಬಟ್ಟೆಗಳಿವು ಎಂಬ ಪ್ರಾಚ್ಯಗೌರವದಿಂದ ಅವನ್ನು ನೋಡುತ್ತೇನೆ.

ಹಾಗೆಯೇ ಅದನ್ನು ಮುಟ್ಟಿದಾಗ, ಸೋಕಿಸಿಕೊಂಡಾಗ ಮಧುರವಾದ ಭಾವನೆಗಳು ಉಂಟಾಗುತ್ತದೆ. ಒಟ್ಟಾರೆ ಅದರ ಮೇಲೆ ಏನೋ ವಿಶೇಷ ಅಭಿಮಾನವಿರುತ್ತದೆ. ಆದರೆ, ಅದನ್ನು ಈಗ ನಾನು ತೊಡಬೇಕೆಂದರೆ ಸಾಧ್ಯವೇ ಆಗದು. ಬಟ್ಟೆಯೆಂಬ ಭೌತಿಕ ವಸ್ತುವಿನಂತೆ ಆಯಾ ಕಾಲದ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆಯನ್ನು ರೂಪಿಸಿಕೊಂಡಿರುತ್ತೇವೆ. ತಾತ್ವಿಕವಾದ ಚಿಂತನೆಗಳು ಮೂಡಿರುತ್ತವೆ. ಆದರೆ, ಬದಲಾದ ಕಾಲಘಟ್ಟದ ವ್ಯವಸ್ಥೆಗೆ ತಕ್ಕಂತೆ ತಾತ್ವಿಕತೆಯೂ ಕೂಡಾ ರೂಪಾಂತರ ಹೊಂದದಿದ್ದರೆ ಹೇರಿಕೆಯಾಗಿ ಪರಿಣಮಿಸುತ್ತದೆ.

ಇದರ ಕಾಳಜಿ ಧರ್ಮವನ್ನು ಪ್ರತಿಪಾದನೆ ಮಾಡುವವರಿಗೆ ಖಂಡಿತ ಇರಬೇಕಾಗುತ್ತದೆ. ಇದನ್ನು ಪ್ರಾಯೋಗಿಕ ತತ್ವವಾಗಿ ಮನಗಂಡ ಡಿ ವಿ ಜಿ ಹೇಳುವುದು ಹೀಗೆ.

ಹೊಸ ಚಿಗುರು ಹಳೇಬೇರು ಕೂಡಿರಲು ಮರಸೊಬಗು, ಹೊಸ ಯುಕ್ತಿ ಹಳೇ ತತ್ವದೊಡಗೂಡೆ ಧರ್ಮ,
ಋಷಿವಾಕ್ಯದೊಡನೆ ವಿಜ್ಞಾನ ಕಲೆಮೇಳವಿಸೆ
ಜಸವು ಜನಜೀವನಕೆ ಮಂಕುತಿಮ್ಮ.

ಹಳತಿನ ಬೇರಿನ ಮೇಲೆ ವಿಕಾಸವಾಗುವ ಹೊಸ ಚಿಗುರನ್ನು ಕಾಣುವ ಕ್ರಮವನ್ನೇ ಧರ್ಮ ಎಂದು ಹೇಳುವರು.

ಆಂತರಿಕವಾಗಿ ನೋಡಿದಾಗ ಧರ್ಮವೆಂದರೆ ಸ್ವಭಾವವೇನೋ ಸರಿ. ಆದರೆ ಸಾಮಾಜಿಕ ವಾಸ್ತವದಲ್ಲಿ ಅದನ್ನು ಕ್ರಮವಾಗಿ ನೋಡುವ ಅಗತ್ಯವಿದೆ. ಆದರೆ ಕ್ರಮವೆಂದು ನಿರ್ಧರಿಸುವವರು ಯಾರು? ಸಮಾಜವೆಂಬುದು ವೈವಿದ್ಯಮಯವಾದ ಜನರ ಸಮೂಹವಾಗಿದೆ.

ವಿವಿಧ ಜನರಲ್ಲಿ ಯಾವ ಜನ ಸಮಾಜಕ್ಕೆ ಧರ್ಮವನ್ನು ಅಂದರೆ ಪರಮೋಚ್ಛ ಕ್ರಮವನ್ನು ವಿಧಿಸುವುದು? ವಸ್ತುವೊಂದರ ಸ್ವಭಾವವು ತನ್ನ ನಡವಳಿಕೆ ಮತ್ತು ವರ್ತನೆಗಳಲ್ಲಿ ಪ್ರಕಟವಾಗುವಂತೆ, ಜನರು ಎಂದು ಕರೆಯಿಸಿಕೊಳ್ಳುವ ಜೀವಿಗಳಿಗೂ ಅವರದೇ ಧರ್ಮವಿದೆ. ಅದಕ್ಕೆ ತಕ್ಕಂತೆ ಕ್ರಮವೂ ಕೂಡಾ ನೇಮವಾಗಬೇಕು.

ಅಂದರೆ ಧರ್ಮಕ್ಕೆ ಶಾಸ್ತ್ರವೊಂದು ಬೇಕು ಮತ್ತು ಅದನ್ನು ವಿಧಿಸಬೇಕು. ಅದನ್ನು ವಿಧಿಸುವವರು ಯಾರು? ಇಲ್ಲಿ ಧರ್ಮವನ್ನು ಶಾಸ್ತ್ರದ ರೂಪದಲ್ಲಿ ಪಠ್ಯ ಮಾಡುವವರೊಬ್ಬರು ಬೇಕಾಗಿದ್ದಾರೆ. ಆ ಅಧಿಕಾರವನ್ನು ಪಡೆಯುವವರು ಧರ್ಮದ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಧರ್ಮದ ಉಲ್ಲಂಘನೆಯಾಗಬಾರದು; ಇವೆಲ್ಲಾ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

ಧರ್ಮವನ್ನು ಶಾಸ್ತ್ರವಾಗಿ ಪಠ್ಯಕ್ಕೆ ಒಳಪಡಿಸುವವರ ಗಟ್ಟಿಗತನದ ಮೇಲೆ ಸಮಾಜದಲ್ಲಿ ಅವರ ವಿಕ್ರಮ ಕಹಳೆ ಮೊಳಗುತ್ತದೆ. ಅಲ್ಲಿಂದ ನಿರ್ಬಲರ ಮೇಲೆ ಸಬಲರ ಧರ್ಮಶಾಸ್ತ್ರದ ಕಟ್ಟಳೆಗಳು ಶೋಷಣೆ ಮಾಡಲಾರಂಭಿಸುತ್ತದೆ.

ಧರ್ಮಶಾಸ್ತ್ರಗಳನ್ನು ವಿಭಾಗಿಸುವುದಾದರೆ ಪುರಾಣ ಧರ್ಮಶಾಸ್ತ್ರ, ನಾಗರಿಕ ಧರ್ಮಶಾಸ್ತ್ರ ಎಂದು ಸ್ಪಷ್ಟವಾಗಿ ಗ್ರೀಕರು ಗುರುತಿಸಿದರೆ ಮತ್ತು ನಿಸರ್ಗ ಧರ್ಮಶಾಸ್ತ್ರವೆಂಬ ಒಂದು ಅಧ್ಯಯನ ಶಾಖೆಯನ್ನು ಪ್ಲೇಟೋ ಗುರುತಿಸಿದನು. ಪುರಾಣ ಧರ್ಮಶಾಸ್ತ್ರ ಎಂದರೆ ದೇವಾನುದೇವತೆಗಳ ಕಥೆಗಳು ಮತ್ತು ಕಾವ್ಯಗಳು.

ನಾಗರಿಕ ಧರ್ಮಶಾಸ್ತ್ರವೆಂದರೆ ಗ್ರೀಕರ ಪ್ರಕಾರ ಪ್ರಭುತ್ವದ ಸಮೃದ್ಧಿ – ಅರಕೆಗಳನ್ನು, ಕಾರ್ಯಕ್ರಮಗಳನ್ನು, ಅವಕ್ಕೆ ಸಂಬಂಧಿಸಿರುವಂತಹ ಆಚರಣೆಗಳನ್ನು ಒಳಗೊಂಡಿರುತ್ತದೆ. ಹಾಗೆಯೇ ನಿಸರ್ಗ ಧರ್ಮಶಾಸ್ತ್ರದಲ್ಲಿ ದೈವ ಮತ್ತು ದೈವಿಕತೆಯ ಬಗೆಗಿನ ತತ್ವಗಳಿದ್ದು ಅದು ನಿಸರ್ಗ ಸಿದ್ಧಾಂತದ ಅಭಿನ್ನ ಅಂಗವಾಗಿದೆ.ಅದು ಮುಂದಿಡುವ ಮೂರು ಸಿದ್ಧಾಂತಗಳೆಂದರೆ,

  1. ದೇವರಿದ್ದಾನೆ ಮತ್ತು ನಾವು ಯಾವುದನ್ನು ನಿಸರ್ಗ ಅಥವಾ ವಿಶ್ವವೆನ್ನುತ್ತೇವೆಯೋ ಅದಕ್ಕೆ ಅವನೇ ಕರ್ತೃವಾಗಿದ್ದಾನೆ.
  2. ದೇವರು ನಿಸರ್ಗ ಸಮಸ್ತವನ್ನೂ ನಿಯಂತ್ರಿಸುತ್ತಾನೆ.
  3. ಮಾನವ ಕೋಟಿಯ ಮೇಲೆ ದೇವರ ಪ್ರಭುತ್ವವಿದೆ. ಆತನ ನ್ಯಾಯ ನೀತಿಯೇ ಉತ್ತಮೋತ್ತಮವಾದದ್ದು.

ಇದಕ್ಕೆಲ್ಲಾ ಹೊರತಾಗಿ ಅಂತಃಪ್ರೇರಣೆಯನ್ನು ಅನುಸರಿಸುವ ಸ್ವಧರ್ಮಶಾಸ್ತ್ರವೂ ಇದೆಯೆಂಬುದನ್ನು ಧರ್ಮಗಳು ಮಾಡುವ ಶೋಷಣೆಯನ್ನು ವಿರೋಧಿಸುವ ಅಂಬೇಡ್ಕರ್ ಕೂಡ ತಾತ್ವಿಕವಾಗಿ ಒಪ್ಪುತ್ತಾರೆ.

ಆದರೆ ಧರ್ಮವೆಂಬುದನ್ನು ನೈತಿಕತೆ, ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ನಿರ್ಧಾರ, ವ್ಯಕ್ತಿಗತ ನಂಬಿಕೆ, ಆಧ್ಯಾತ್ಮಿಕತೆ; ಹೀಗೆ ಎಲ್ಲವನ್ನೂ ಕಲಸು ಮೇಲೋಗರ ಮಾಡಿ ಯಾವುದಕ್ಕೂ ಸ್ಪಷ್ಟತೆಯಿಲ್ಲದೇ ಹೋಗಿರುವ ಸಾರ್ಥಕತೆ ನಮ್ಮ ಹುಸಿಪ್ರತಿಷ್ಟೆಯ ವಿವರಣೆಕಾರರಿಗಿದೆ.

ಬ ಛತ್ರಿಯಡಿಯಲ್ಲಿ ತನ್ನೆಲ್ಲಾ ಪೀಳಿಗೆಗಳು ಹಿತವಾಗಿ ಬದುಕುವ ಅತ್ಯಾಸೆಯಿಂದ, ಶ್ರೇಷ್ಟತೆಯ ಗೀಳಿನಿಂದ ಏನೆಲ್ಲ ಆಗಬಹುದೆಂದು ಮನುಸ್ಮೃತಿ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತದೆ.

ಮನುಸ್ಮೃತಿಯಲ್ಲಿ ಹೇಳುವಂತೆ (8.374) ಉನ್ನತ ವರ್ಣದ ರಕ್ಷಿತ ಅಥವಾ ಅರಕ್ಷಿತ ಸ್ತ್ರೀಯೊಡನೆ ಸಂಭೋಗ ಮಾಡಿದ ಶೂದ್ರನಿಗೆ ಆತನ ಜನನಾಂಗವನ್ನು ಛೇದಿಸಬೇಕು ಅಥವಾ ಮರಣದಂಡನೆ ವಿಧಿಸಬೇಕು.

ಆದರೆ ಬ್ರಾಹ್ಮಣರು ತಮ್ಮನ್ನು ಭೂದೇವರೆಂದು, ಪೃಥ್ವಿಪತಿಗಳೆಂದು ಇದೇ ಮನುವಿನಿಂದ ಕರೆಸಿಕೊಂಡವರು ತಮಗೆ ಇತರ ವರ್ಗದ ಹೆಂಗಸರೊಡನೆ ಕೂಡುವ ಲೈಂಗಿಕ ಹಕ್ಕು ಇದೆಯೆಂದು ವಾದಿಸುತ್ತಿದ್ದರು. ಇದಕ್ಕೆ ರಾಣಿಯೂ ಕೂಡ ಹೊರತಾಗಿರಲಿಲ್ಲ. ಕ್ರಿ.ಶ. 1502 ರಲ್ಲಿ ಭಾರತಕ್ಕೆ ಪ್ರವಾಸಿಯಾಗಿ ಬಂದ ಲುಡೊವಿಕೋ ಡಿ ವರ್ತೆಮಾ ಕಲ್ಲಿಕೋಟೆ ಬ್ರಾಹ್ಮಣರ ಬಗ್ಗೆ ಈ ಸಂಗತಿಯನ್ನು ದಾಖಲು ಮಾಡಿದ್ದಾನೆ.

ಬ್ರಾಹ್ಮಣರು, ಅರ್ಚಕರು ಹಾಗೆಯೇ ಧರ್ಮದ ಪ್ರಮುಖ ವ್ಯಕ್ತಿಗಳ ಪೈಕಿ ಅತ್ಯಮೂಲ್ಯ ಹಾಗೂ ಅತ್ಯಂತ ಗೌರವಾನ್ವಿತರನ್ನು ಆರಿಸಿ ಆಕೆಯ ಕನ್ಯತ್ವ ಕಳೆಯಲೆಂದು ಆಕೆಯೊಡನೆ ಮೊದಲರಾತ್ರಿ ಮಲಗುವಂತೆ ಮಾಡುತ್ತಿದ್ದರು.

ಹ್ಯಾಮಿಲ್ಟನ್ ದಾಖಲು ಮಾಡಿರುವ ವಿಚಾರವನ್ನು ಗಮನಿಸಿ. ಸಾಮೋರಿನ್ ಮದುವೆಯಾದಾಗ ನಂಬೂರಿ (ನಂಬೂದರಿ ಬ್ರಾಹ್ಮಣ) ಅಥವಾ ಮುಖ್ಯ ಅರ್ಚಕರು ಭೋಗಿಸುವವರೆಗೆ ವರನು ತನ್ನ ವಧುವನ್ನು ಸೇರುವಂತಿರಲಿಲ್ಲ. ಏಕೆಂದರೆ ಆಕೆಯ ಮೊದಲ ಫಲಗಳು ಅವಳು ಪೂಜಿಸುವ ದೇವರಿಗೆ ಸಲ್ಲಬೇಕಿತ್ತು.

1869ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಕರೊಸವದಾಸ್ ಮೂಲ್ಜಿ ಎಂಬುವವರ ವಿರುದ್ಧ ಅರ್ಚಕರು ಮಾನಹಾನಿ ಮೊಕದ್ದಮೆ ಹೂಡಿದ್ದರು. ಏಕೆಂದರೆ ಮುಂಬೈ ಪ್ರಾಂತ್ಯದಲ್ಲಿ ವೈಷ್ಣವ ಕುಲದ ಅರ್ಚಕರ ಕುಲದ ಎಲ್ಲ ಹೆಂಗಸರ ಕನ್ಯತ್ವ ಕಳೆಯುವ ಹಕ್ಕು ಕೇಳಲಾಗಿತ್ತು. ಹೆಚ್ಚೂ ಕಡಿಮೆ 1869ರವರೆಗೂ ಮೊದಲರಾತ್ರಿಯ ಹಕ್ಕು ನಿರಂತರವಾಗಿ ರೂಢಿಯಲ್ಲಿತ್ತು. ಅದಾದ ನಂತರ ಬ್ರಾಹ್ಮಣರು ಯಾವುದೇ ಜಾತಿಯ ಹೆಣ್ಣನ್ನು ಲೈಂಗಿಕ ಕ್ರಿಯೆಗಾಗಿ ಬಳಸಿಕೊಳ್ಳುವ ಹಕ್ಕು ಕ್ಷೀಣಿಸುತ್ತಾ ಬಂದಿತು.

ದಾನ ದಕ್ಷಿಣೆಗಳನ್ನು ತಮ್ಮ ಅಧಿಕಾರದಂತೆ ನಿಗದಿತವಾಗಿ ಪಡೆಯುತ್ತಿದ್ದ ಬ್ರಾಹ್ಮಣರು ಶೂದ್ರರಿಗೆ ಆಸ್ತಿಯ ಹಕ್ಕನ್ನು ನಿರಾಕರಿಸಿದ್ದರು. ಆದರೆ ಅವರ ಪ್ರಕಾರ ವೈಶ್ಯರು ಕೇವಲ ತಮ್ಮ ದೈವೀದತ್ತವಾದ ಕರ್ತವ್ಯವನ್ನು ಮಾಡುತ್ತಿದ್ದಾರೆ. ಕ್ರಿಸ್ತಪೂರ್ವ 350ರ ಅರ್ಥಶಾಸ್ತ್ರದಲ್ಲಿಯೇ ಹೇಳಿದೆ, ಹೆಚ್ಚಿನ ಬಡ್ಡಿಗೆ ಸಾಲ ಕೊಡುವುದು ವೈಶ್ಯರ ಹಕ್ಕೆಂದು.

  • ಕ್ರಿಸ್ತಶಕ 150ಯ ಮನುಸ್ಮೃತಿಯು ಇನ್ನೂ ಮುಂದುವರಿದು ಹೇಳುತ್ತದೆ, ಬ್ರಾಹ್ಮಣರಿಗೆ ತಿಂಗಳಿಗೆ 2%, ಕ್ಷತ್ರಿಯರಿಗೆ 3%, ವೈಶ್ಯರಿಗೆ 4% ಮತ್ತು ಶೂದ್ರರಿಗೆ5% ಬಡ್ಡಿಯನ್ನು ವಿಧಿಸಬೇಕು ಎಂದು. ವಾರ್ಷಿಕವಾಗಿ ಲೆಕ್ಕಿಸಿದರೆ, ಬ್ರಾಹ್ಮಣರಿಗೆ ಶೇಕಡಾ 24 ಆದರೆ, ಶೂದ್ರ ಅಥವಾ ದಲಿತರಿಗೆ ಶೇಕಡಾ 60 ಬಡ್ಡಿಯಾಗುತ್ತದೆ.
  • ಮನುಸ್ಮೃತಿ (8.20) ಹುಟ್ಟು ಮಾತ್ರದಿಂದ ಬ್ರಾಹ್ಮಣನಾದವನೂ (ಅಂದರೆ ವಿದ್ಯೆ ಇಲ್ಲದಿರಲಿ, ಯಾವುದೇ ವೇದೋಕ್ತ ಕ್ರಿಯೆ ಮಾಡಿರದವನು) ರಾಜನಿಗೆ ಧರ್ಮ ಪ್ರವಚನ ಹೇಳಬಹುದು.
    (8.272) ಶೂದ್ರನು ದರ್ಪದಿಂದ ಬ್ರಾಹ್ಮಣನಿಗೆ ಧರ್ಮೋಪದೇಶ ಮಾಡಲು ಹೊರಟರೆ ರಾಜನು ಅವನ ಮುಖ, ಕಿವಿಗಳಿಗೆ ಕಾದ ಎಣ್ಣೆ ಸುರಿಯಬೇಕು.
  • (3.156) ವೇದವನ್ನು ಕದ್ದು ಕೇಳಿದ ಅಥವಾ ಉಚ್ಚರಿಸಿದ ಶೂದ್ರನ ನಾಲಿಗೆಯನ್ನು ಸೀಳಬೇಕು. ಕಿವಿಗೆ ಕಾದ ಸೀಸೆ ಸುರಿಯಬೇಕು ಎಂದು ರಾಜನಿಗೆ ಕಾತ್ಯಾಯನು ವಿಧಿಸುತ್ತಾನೆ.

ಇಂಥಾ ವ್ಯವಸ್ಥೆಯನ್ನು ಬ್ರಾಹ್ಮಣರು ಕಟ್ಟಿಕೊಳ್ಳುವಂತಹ ಶಾಸ್ತ್ರವನ್ನು ರಚಿಸುವ ಪ್ರಮೇಯಕ್ಕೂ ಕಾರಣಗಳು ಇಲ್ಲದಿಲ್ಲ. ತನ್ನ ಕೆಲಸದಿಂದ ವರ್ಣ ಅಥವಾ ಜಾತಿಯನ್ನು ಗುರುತಿಸುವ ರೂಢಿಯಿದ್ದ ಆಗಿನ ಸಮಾಜದಲ್ಲಿ, ಅದರಲ್ಲೂ ವೇದಗಳನ್ನು ಧಿಕ್ಕರಿಸಿ ಅಥವಾ ಪರ್ಯಾಯವಾಗಿ ಚಿಂತನೆಗಳನ್ನು ಮಾಡಿದ್ದ ಋಷಿಗಳಿಂದ ಉಪನಿಷತ್ತುಗಳು ರಚಿತವಾದವು. ಉಪನಿಷತ್ತುಗಳ ಕಾಲದಲ್ಲಿ ವರ್ಣವ್ಯವಸ್ಥೆಯ ವಿರುದ್ಧವಾದಂತಹ ಕ್ರಾಂತಿಕಾರಕ ನಡೆಗಳು ಉಂಟಾದವು.

ಕ್ರಾಂತಿಕಾರಕ ಉಪನಿಷತ್ತುಗಳು

ಛಾಂದೋಗ್ಯೋಪನಿಷತ್ತಿನ ಸತ್ಯಕಾಮ ಜಾಬಾಲಿಯ ಪ್ರಕರಣವನ್ನು ಗಮನಿಸಿದರೆ, ಸತ್ಯಕಾಮನೆಂಬ ಎದೆಯ ಮೇಲೆ ಯಜ್ಞೋಪವೀತವಿಲ್ಲದ ಬಾಲಕನು, ವಿದ್ಯಾಭ್ಯಾಸದ ಅಧಿಕಾರವನ್ನು ಹೊಂದಿರುವ ಬ್ರಾಹ್ಮಣ ಗುರುಕುಲದ ಮುಖ್ಯಸ್ಥನಾದ ಗೌತಮನ ಬಳಿಗೆ ಬರುತ್ತಾನೆ. ತನ್ನ ವಿದ್ಯಾಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾನೆ. ಆಗ ಗೌತಮನು ಆತನ ಗೋತ್ರವನ್ನೂ, ತಂದೆಯ ಹೆಸರನ್ನೂ ಕೇಳುತ್ತಾನೆ.

ಇದರ ಅರಿವಿರದಿದ್ದ ಸತ್ಯಕಾಮ ತನ್ನ ತಾಯಿ ಜಬಲಾಳ ಬಳಿಗೆ ಬಂದು ಇದರ ಕುರಿತು ವಿಚಾರಿಸಿದಾಗ, “ಮಗನೇ ನಾನು ದಾಸಿಯಾಗಿ ಹಲವು ಯಜಮಾನರಿಗೆ ಸೇವೆ ಮಾಡುತ್ತಿದ್ದೆ, ಹೀಗೆ ಯಾರಿಗೋ ಹುಟ್ಟಿದ ಮಗ ನೀನು.ನನಗೂ ಕೂಡ ನಿರ್ಧಿಷ್ಟವಾಗಿ ನಿನ್ನ ತಂದೆ ಯಾರೆಂದು ತಿಳಿಯದು” ಎಂದು ಹೇಳಿ “ನಾನು ನಿನ್ನ ತಾಯಿ. ಅದು ಸತ್ಯ. ನೀನು ಸತ್ಯಕಾಮ ಜಬಾಲ” ಎಂದು ಹೇಳಿ ಕಳುಹಿಸುತ್ತಾಳೆ. ಮಗನು ತಾಯಿಯ ಮಾತಿನಂತೆಯೇ ಬಂದು ಗುರು ಗೌತಮನ ಮುಂದೆ ಹೇಳಿದಾಗ ಗೌತಮನಿಗೆ ಅತ್ಯಾನಂದವಾಗುತ್ತದೆ.

ಅವನು ಹೇಳುವಂತೆ “ಯಾರು ಸತ್ಯವನ್ನು ಹೇಳುತ್ತಾರೋ ಅವರೇ ಬ್ರಾಹ್ಮಣ” ಎಂದು ಬಾಲಕ ಮತ್ತು ಅವನ ತಾಯಿಯ ಸತ್ಯವಂತಿಕೆಯ ಆಧಾರದ ಮೇಲೆ ಬ್ರಾಹ್ಮಣನೆಂದು ಗುರುತಿಸುತ್ತಾನೆ. ಮಹಾಭಾರತದ ವನಪರ್ವದಲ್ಲಿಯೂ ಕೂಡ ಸ್ಪಷ್ಟವಾಗಿ ಬ್ರಾಹ್ಮಣಿಕೆಯ ಆಧಾರವನ್ನು ಗುರುತಿಸುತ್ತಾರೆ.

ಯಾರೊಬ್ಬನೂ ತನ್ನ ಜನ್ಮದಿಂದಾಗಲಿ, ವೇದಾಧ್ಯಯದಿಂದಾಗಲಿ, ಉಪನಯನಾದಿ ಸಂಸ್ಕಾರದಿಂದಾಗಲಿ ಬ್ರಾಹ್ಮಣನಲ್ಲ. ಅವನ ಸದಾಚಾರದಿಂದ ಮಾತ್ರವೇ ಬ್ರಾಹ್ಮಣನಾಗುತ್ತಾನೆ ಎಂದು.

ಹೀಗೆ ತಮ್ಮ ಕಾಯಕ ಮತ್ತು ಆಚಾರ ವಿಚಾರಗಳಿಂದ ಎಲ್ಲರೂ ಬ್ರಾಹ್ಮಣರಾಗುತ್ತಾ ಹೋದರೆ ಹೇಗೆ? ಈ ಭಯ ಬ್ರಾಹ್ಮಣವಾದಿಗಳಿಗಿತ್ತು. ವೈದಿಕಾಚರಣೆಗಳಿಗೆ ವಿರುದ್ಧವಾಗಿಯೇ ಉಪನಿಷತ್ತುಗಳು ನಿಲುವನ್ನು ತಳೆದಿದ್ದವು. ವೇದವನ್ನು ಅನುಸರಿಸುವವರಿಗೆ ಮಾತ್ರವೇ ಯಜ್ಞ ಯಾಗಾದಿಗಳು ಇದ್ದಿದ್ದು. ಉಪನಿಷತ್ತಿನ ಋಷಿಗಳಿಗಲ್ಲ. ಈಶವಾಸ್ಯೋಪನಿಷತ್ತಿನ ದ್ರಷ್ಟಾರನಾದ ವಾಮದೇವನೆಂಬ ಋಷಿ ತನ್ನ ಜೀವಿತದಲ್ಲಿ ಯಾವ ಯಜ್ಞ ಯಾಗಾದಿಗಳಿಂದ ಸಮಯ ವ್ಯಯಿಸದೇ ಮರಗಳನ್ನು ನೆಡುತ್ತಲೇ ಬಂದಿದ್ದವನು.

ಬೃಹದಾರಣ್ಯಕೋಪನಿಷತ್ತಿನಲ್ಲಿ ಶ್ವೇತಕೇತು ದನಗಳನ್ನು ಮೇಯಿಸುತ್ತಿದ್ದ. ಬ್ರಾಹ್ಮಣರಲ್ಲಿ ನಿಷ್ಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದ ಮತ್ತು ಮಹಿಳೆಯರನ್ನು ಕಟ್ಟುಪಾಡುಗಳಿಂದ ಬಂಧಿಸಿರುವಾಗ ಗಾರ್ಗಿ ಮತ್ತು ಮೈತ್ರೇಯಿಗಳೆಂಬ ಹೆಂಗಸರು ಬ್ರಹ್ಮ ಜಿಜ್ಞಾಸುಗಳಾಗಿ ವಿಶ್ಲೇಷಣೆಗಳನ್ನು ಮಾಡುತ್ತಿದ್ದರು. ಕಠೋಪನಿಷತ್ತಿನಲ್ಲಿ ವಾಜಶ್ರವನೆಂಬ ಮುನಿ ವಿಶ್ವಜಿತ್ ಯಜ್ಞವನ್ನು ಮಾಡಿ ಅತ್ಯುನ್ನತವಾದ ಪದವಿಯನ್ನು ಪಡೆಯಲು ಸಿದ್ಧತೆಗಳನ್ನು ಮಾಡಿಕೊಳ್ಳುವಾಗ ಅವನ ಮಗನಾದ ನಚಿಕೇತ ಅದನ್ನು ಗಮನಿಸುತ್ತಾನೆ.

ಎಲ್ಲವನ್ನೂ ಯಜ್ಞಕಾರಣಕ್ಕಾಗಿ ದಾನ ಮಾಡಬೇಕೆಂದಿರುವಾಗ ಕೇವಲ ನಾಮಕಾವಸ್ಥೆಗಾಗಿ ಗೊಡ್ಡುದನಗಳನ್ನು, ಕೆಲಸಕ್ಕೆ ಬಾರದ ಪಶುಗಳನ್ನು ದಾನ ಮಾಡಲು ತತ್ಪರನಾಗಿದ್ದ ತನ್ನ ತಂದೆಗೆ “ಅಪ್ಪಾ ನನ್ನನ್ನು ಯಾರಿಗೆ ದಾನ ಕೊಡುತ್ತೀ?” ಎಂಬ ಕ್ರಾಂತಿಕಾರಕ ಪ್ರಶ್ನೆಯನ್ನು ಕೇಳುತ್ತಾನೆ. ಯಾಜ್ಞಿಕನಾಗಿದ್ದ ವಾಜಶ್ರವನ ಶ್ರದ್ಧೆಯನ್ನು ಸಂಶಯಿಸುವ ಮತ್ತು ನಿರಾಕರಿಸುವ ಈ ಪ್ರಶ್ನೆಯು ಪುನರಾವರ್ತನವಾದಾಗ “ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ” ಎಂದು ಆಗ್ರಹದಿಂದ ಹೇಳುವನು.

ಇದರಿಂದ ನಚಿಕೇತನಾದರೂ ಬಹುಜನರಲ್ಲಿ ಪ್ರಥಮನಾಗಿಯೂ, ಬಹುಜನರಲ್ಲಿ ಮಧ್ಯಮನಾಗಿಯೂ ಇರುವಂತಹ ನನ್ನಿಂದ ಯಾವ ಕೆಲಸ ಯಮನಿಗೆ ಆಗಬಹುದು ಎಂಬ ಆತ್ಮಗೌರವದಿಂದ ಮೃತ್ಯುವಿನ ಬಳಿಗೆ ನಡೆಯುತ್ತಾನೆ. ಮುಂದೆ ಮೃತ್ಯು ಮತ್ತು ಮರಣಾನಂತರ ಜೀವನದ ಬಗ್ಗೆ ಜಿಜ್ಞಾಸೆಗಳನ್ನು ಮಾಡುತ್ತಾನೆ.

ಛಾಂದೋಗ್ಯ ಉಪನಿಷತ್ತಿನಲ್ಲಿ ನಾರದನು ಸನತ್ಕುಮಾರನ ಬಳಿಗೆ ಬಂದು ಬೋಧನೆಗಾಗಿ ಕೋರಿಕೊಳ್ಳುತ್ತಾನೆ. ಸನತ್ಕುಮಾರ “ನಿನಗೆ ಏನು ಗೊತ್ತೋ ಅದನ್ನು ತಿಳಿಸು. ಅದನ್ನು ನೋಡಿಕೊಂಡು ನಾನು ಬೋಧಿಸುತ್ತೇನೆ” ಎಂದು ಹೇಳಿದಾಗ, ನಾರದನು ತನಗೆ ನಾಲ್ಕೂ ವೇದಗಳು, ಇತಿಹಾಸ, ಪುರಾಣ, ಪಿತೃಕರ್ಮಗಳು, ದೇವಶಾಸ್ತ್ರ, ನೀತಿಶಾಸ್ತ್ರ ಇತ್ಯಾದಿಗಳೆಲ್ಲಾ ಗೊತ್ತೆಂದು ಹೇಳಿದಾಗ, ಸನತ್ಕುಮಾರ, “ಈಗ ನೀನು ಏನು ತಿಳಿದುಕೊಂಡಿರುವೆಯೋ ಅವೆಲ್ಲವೂ ಕೇವಲ ಹೆಸರುಗಳಷ್ಟೇ. ಋಗ್ವೇದ ಎಂಬುದು ಒಂದು ಹೆಸರು. ಅಂತೆಯೇ ಇತರ ವೇದಗಳು ಕೇವಲ ಹೆಸರುಗಳು” ಎಂದು ಹೇಳುತ್ತಾ ಅವುಗಳ ಔಚಿತ್ಯ ಮತ್ತು ಔನತ್ಯವನ್ನು ಕಡೆಗಣಿಸುತ್ತಾನೆ.

ಹೀಗೆ ಉಪನಿಷತ್ತುಗಳು ವೇದಗಳಿಗೆ, ಯಜ್ಞಗಳಿಗೆ ಸೆಡ್ಡು ಹೊಡೆದು ಸತ್ಯಾನ್ವೇಷಕರಾಗಿದ್ದವು.
ಈ ಬಗೆಯಲ್ಲಿ ಉಪನಿಷತ್ತು ಋಷಿಗಳು ಮತ್ತು ಗುರುಕುಲದ ಗುರುಗಳು ಗುಣಗ್ರಾಹಿಗಳಾಗಿದ್ದು ಯಾವುದೇ ಜನ್ಮದಿಂದ ಬಂದವನಾಗಿದ್ದರೂ ಅವನಿಗೆ ಅಕ್ಷರವನ್ನೂ, ವಿದ್ಯೆಯನ್ನೂ ಕೇವಲ ಆತನ ಆಸಕ್ತಿ ಮತ್ತು ಅರ್ಹತೆಗಳಿಗೆ ಅನುಸಾರವಾಗಿ ನೀಡುವಂತವರಾಗಿದ್ದರು.

ಗುರುಕುಲದ ವರ್ಣಾಧಿಕಾರ

ಪುರಾಣಗಳಲ್ಲಿ ವ್ಯಕ್ತವಾಗುವ ಸನಾತನ ಸಂಪ್ರದಾಯದಂತೆ ಮನು (ಮನುಸ್ಮೃತಿಯ ಮನುವಲ್ಲ) ಮತ್ತು ಸಪ್ತರ್ಷಿಗಳೆಂಬ ಸ್ವತಂತ್ರ ಅಧಿಕಾರದ ವರ್ಗದಿಂದ ವರ್ಣ ನಿಗದಿಯಾಗುತ್ತಿತ್ತು. ಆ ವರ್ಣವು ನಿರ್ದಿಷ್ಟ ಅವಧಿಗಾಗಿ ಇದ್ದು, ನಂತರ ಅದನ್ನು ಬದಲಾಯಿಸಲಾಗುತ್ತಿತ್ತು. ಒಬ್ಬ ವ್ಯಕ್ತಿಯ ವರ್ಣವನ್ನು ನಾಲ್ಕು ವರ್ಷ ಅಂದರೆ ಒಂದು ಯುಗ ಕಾಲಕ್ಕಾಗಿ ನಿಗದಿ ಮಾಡುತ್ತಿದ್ದರು. ಆ ನಾಲ್ಕು ವರ್ಷಗಳ ಕೊನೆಯಲ್ಲಿ ಮನ್ವಂತರ ಉಂಟಾಗುತ್ತಿತ್ತು. ಆ ಮೂಲಕ ಪ್ರತಿ ನಾಲ್ಕನೆಯ ವರ್ಷ ಪಟ್ಟಿ ಬದಲಾಯಿಸುತ್ತಿತ್ತು.

ಈ ಸುಧಾರಣೆಯಲ್ಲಿ ಕೆಲವರು ಹಳೆಯ ವರ್ಣವನ್ನು ಬದಲಿಸಿಕೊಳ್ಳುತ್ತಿದ್ದರು. ಕೆಲವರು ಉಳಿಸಿಕೊಳ್ಳುತ್ತಿದ್ದರು. ಕೆಲವರು ಕಳೆದುಕೊಳ್ಳುತ್ತಿದ್ದರು ಮತ್ತೂ ಕೆಲವರು ಗಳಿಸಿಕೊಳ್ಳುತ್ತಿದ್ದರು. ಗುರುಕುಲದಲ್ಲಿ ಶಿಕ್ಷಣದ ಅವಧಿ ಹನ್ನೆರಡುವರ್ಷ. ಶಿಕ್ಷಣದ ಅವಧಿ ಮುಗಿದ ಮೇಲೆ ಗುರುಕುಲದಲ್ಲೇ ಆಚಾರ್ಯರಿಂದ ಉಪನಯನ ಸಮಾರಂಭವಿರುತ್ತಿತ್ತು.

ಈ ಉಪನಯನ – ಅತ್ಯಂತ ಮುಖ್ಯ ಸಮಾರಂಭವಾಗಿದ್ದು ಇದರಲ್ಲಿ ಆಚಾರ್ಯರು ವಿದ್ಯಾರ್ಥಿಯ ವರ್ಣವನ್ನು ನಿರ್ಧರಿಸಿ, ಆ ವರ್ಣದ ಕರ್ತವ್ಯಗಳನ್ನು ನಿರ್ವಹಿಸಲು ಹೊರ ಜಗತ್ತಿಗೆ ಕಳುಹಿಸುವಂತಹ ಸಮಾರಂಭವಾಗಿತ್ತು. ವರ್ಣವೆಂಬುದು ಎಂದಿಗೂ ಅನುವಂಶೀಯವಾಗಿರಲಿಲ್ಲ.

ಈ ವ್ಯವಸ್ಥೆಯಿಂದ ಬ್ರಾಹ್ಮಣ ಧರ್ಮವು ತೃಪ್ತವಾಗಲಿಲ್ಲ. ಏಕೆಂದರೆ ಆಗ ಪ್ರಚಲಿತವಿದ್ದ ವ್ಯವಸ್ಥೆಯಲ್ಲಿ ಬ್ರಾಹ್ಮಣನೊಬ್ಬನ ಮಗನು ಶೂದ್ರನಾಗಲು ಮಾತ್ರ ಯೋಗ್ಯವೆಂದು ನಿರ್ಧರಿಸಿ ಗುರುಗಳು ಕಳುಹಿಸುವ ಸಾಧ್ಯತೆಗಳಿದ್ದವು. ತನ್ನ ಮಗನು ಅರ್ಹನಾಗಲಿ, ಅರ್ಹನಾಗಿರದಿರಲಿ ಬ್ರಾಹ್ಮಣನಾಗಿಯೇ ಉಳಿಯಬೇಕೆಂಬ ಪಕ್ಷಪಾತ, ವಾಂಛೆ ಮತ್ತು ಅಪರಿಮಿತ ದುರಾಸೆಯಿಂದ ಮುಂದೆ ಅತ್ಯಂತ ನಿರ್ಲಜ್ಜರೀತಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರು. ಬ್ರಾಹ್ಮಣಾಧಿಕ್ಯದ ಗೀಳಿನ ಮನುವು ಮುಂದೆ ಗುರುಕುಲದಲ್ಲಿ ಶಿಷ್ಯವೃತ್ತಿಯನ್ನು ಮಾಡಿದ ನಂತರ ಉಪನಯನದಂತಹ ಸಂಸ್ಕಾರದಲ್ಲಿ ಗುರುವನ್ನು ಒಳಮಾಡಿಕೊಳ್ಳುವುದಿಲ್ಲ.

ಮಗುವಿಗೆ ಉಪನಯನ ಮಾಡುವ ಅಧಿಕಾರವನ್ನು ತಂದೆಗೆ ವರ್ಗಾಯಿಸಲಾಯಿತು. ಇದರ ಪರಿಣಾಮವಾಗಿ ತನ್ನ ಮಗುವಿನ ಉಪನಯನ ಮಾಡುವ ತಂದೆಯು, ತನ್ನ ವರ್ಣವನ್ನೇ ತನ್ನ ಮಗನಿಗೆ ನೀಡುವ ಮೂಲಕ ಕಸುಬುಗಳು ಅಥವಾ ವರ್ಣಗಳು ಅನುವಂಶೀಯವಾಗುವಂತೆ ಮಾಡಿದರು.

ಜನ್ಮದಿಂದ ಜಾತಿ ಎಂಬ ಪದ್ಧತಿಗೆ ನಾಂದಿ ಹಾಡಿದರು, ಎಂದು ಹೇಳುತ್ತಾ ವರ್ಣ ನಿರ್ಧಾರದ ಜವಾಬ್ದಾರಿಯನ್ನು ಗುರುವಿನಿಂದ ಕಿತ್ತು ತಂದೆಗೆ ವಹಿಸಿದ ಈ ವಿಷಯವನ್ನು ಅಂಬೇಡ್ಕರ್ ಬಹಳ ಗಂಭೀರವಾಗಿ ವಿವೇಚಿಸುತ್ತಾರೆ.

ಏನೇ ಆಗಲಿ, ಬ್ರಾಹ್ಮಣ್ಯಾಧಿಕ್ಯದ ಗೀಳಿನ್ನು ಖಂಡಿಸುವ ಭರದಲ್ಲಿ ಬ್ರಾಹ್ಮಣರನ್ನು ದ್ವೇಷಿಸುವ, ಅವರನ್ನು ಅನುಮಾನಿಸುವ, ಅಪಮಾನಿಸುವ ಮತ್ತು ಅವರನ್ನು ಸದಾ ಅಪಹಾಸ್ಯ ಮಾಡುವವರು ತಮ್ಮ ನಡೆಗಳನ್ನು ನಿಷ್ಟುರವಾಗಿ ಪರಿಶೀಲಿಸಿಕೊಳ್ಳುವ ಅಗತ್ಯವಿದೆ.

ಬ್ರಾಹ್ಮಣ ಎಂಬ ಸಹಜೀವಿಯನ್ನು ಜಾತಿಯಾಧಾರದಲ್ಲಿ ಮಾತ್ರವೇ ನೋಡುವ ಮನಸ್ಥಿತಿಯೂ ಕೂಡಾ ಅಸ್ಪೃಷ್ಯತೆ ಆಚರಿಸುತ್ತಿದ್ದ ಸವರ್ಣೀಯ ಮನಸ್ಥಿತಿಗಳಿಗಿಂತ ಏನೂ ಮೇಲಲ್ಲ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂತರಂಗ

ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ

Published

on

~ ಡಾ. ಸುಜಾತಾ ಚಲವಾದಿ

ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.

ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.

ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.

ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.

ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.

ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.

ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.

ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.

1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.

ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.

ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.

26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.

ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು

Published

on

ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.

ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.

ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.

ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.

ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.

——————————————————————-

ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.

ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.

ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.

ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.

ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.

ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)

ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?

ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)

ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.

ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.

ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending