ಲೈಫ್ ಸ್ಟೈಲ್
ಡಾಕ್ಟ್ರೇ… ಸೈಡ್ ಇಫೆಕ್ಟ್ ಇಲ್ಲದ ಔಷಧಿ ಬರ್ದು ಕೊಡಿ..!
- ಡಾ: ಎನ್.ಬಿ.ಶ್ರೀಧರ
“ಡಾಕ್ಟ್ರೇ… ದನಕ್ಕೆ ಸೈಡ್ ಎಫ಼ೆಕ್ಟ್ ಇರದ ಮೆಡಿಸಿನ್ ಬರ್ದು ಕೊಡಿ. ಅದಕ್ಕೆ ಹೀಟಾಗುತ್ತೆ… ಬೇಡವೇ ಬೇಡ” ಇದು ನಮ್ಮ ಗೋಪಾಲಕರೊಬ್ಬರ ವಿನಂತಿ.
“ನಮ್ಮನೇ ದನಕ್ಕೆ ಯಾವುದೂ ಇಂಗ್ಲಿಷ್ ಔಷಧೀನೇ ಕೊಡಿಸಲ್ಲ. ಎಲ್ಲಾನೂ ನೈಸರ್ಗಿಕ.. ಯಾವುದೇ ಸೈಡ್ ಇಫ಼ೆಕ್ಟ್ ಇಲ್ವಂತೆ.
ದನಾ ಕಟ್ಲೇ ಇಲ್ಲ. ಎಲ್ಲಾ ಔಷಧೀನೂ ಮಾಡಿಸ್ದೆ… ಏನೂ ಪ್ರಯೋಜನಾ ಆಗ್ಲೇ ಇಲ್ಲ. ಹಳ್ಳಿ ಔಷಧಿ ಮಾಡಿಸಿದೆ. ಈಗ ನೋಡಿ ಕಟ್ಬಿಟ್ಟಿದೆ.
“ಈ ಇಂಗ್ಲಿಷ್ ಮೆಡಿಸಿನ್ ಬಿಟ್ಬಿಟ್ಟೆ.. ಭಾರಿ ವಿಷ ಅಂತೆ ಕಣ್ರೀ.. ಈ ಹಳ್ಳಿ ಔಷಧೀನೆ ಸೈ.. ಒಂಚೂರು ಸೈಡ್ ಇಫ಼ೇಕ್ಟ್ ಇಲ್ಲವಂತೆ.. ಅದನ್ನೇ ದನಕ್ಕೆ ಹಾಕೋದು ಅಂತ ಅಂದ್ಕಂಡಿದ್ದೀನಿ”..ನೋಡ್ಬೇಕು” ಇದು ಮತ್ತೊಬ್ಬರ ಅಂಬೋಣ.
“ಅಯ್ಯೋ.. ಈ ಇಂಗ್ಲಿಷ್ ಆಸ್ಪತ್ರೆಗಳೇ ಇಷ್ಟು.. ಅದೂ ಇದೂ ಟೆಸ್ಟ್ ಅಂತ ದುಡ್ಡಿಗಾಗಿ ಮಾಡಿಸ್ತಾರೆ.. ಎಲ್ಲಾ ದುಡ್ಡು ಸುಲಿಯುವ ಕೇಂದ್ರಗಳು ಕಣ್ರೀ… ಇದು ಮತ್ತೊಬ್ಬರ ಹೇಳಿಕೆ.
“ನಾನೆಂತೂ ಇಂಗ್ಲಿಷ್ ಔಷಧಿ ತಗೊಳ್ಳೋದೇ ಇಲ್ಲ. ಹಳ್ಳಿ ಔಷಧೀನೇ ತಗಳ್ಳೋದು.. ಇಂಗ್ಲಿಷ್ ಔಷಧಿ ಒಂದು ದೊಡ್ಡ ದಂಧೆ.. ಡಾಕ್ಟರುಗಳೆಲ್ಲಾ ಮಾಡೋದು ಬ್ಯುಸಿನೆಸ್”…ಇದು ಇನ್ನೊಬ್ಬರ ಅನಿಸಿಕೆ.
“ದಿನಕ್ಕೆ 4-5 ಲೀಟರ್ ನೀರು ಕುಡಿದರೆ ಸಾಕು. ಯಾವ ಕಾಯಿಲೆನೂ ಬರಲ್ಲ. ಇಂಗ್ಲಿಷ್ ಮೆಡಿಸಿನ್ ತಗೊಳ್ಳೋದೇ ಬೇಡ” ಮತ್ತೋರ್ವರ ಅಭಿಪ್ರಾಯ.
ಇಂಗ್ಲಿಷ್ ಔಷಧಿ ಒಳ್ಳೇದಲ್ಲ. ಹೋದ ತಕ್ಷಣ ಆಂಟಿಬಯೋಟಿಕ್ ಬರ್ದು ಕೊಡ್ತಾರೆ.. ಇದ್ರಿಂದ ಹೀಟು..ಸಿಕ್ಕಾಪಟ್ಟೆ ಸೈಡ್ ಎಫೆಕ್ಟ್..ಅದಕ್ಕೆ ಹಳ್ಳಿ ಔಷಧ ತಗಳ್ತಿದ್ದೀನಿ..
ಹೀಗೆ ಔಷಧಗಳ ಬಗ್ಗೆ ವೈರುಧ್ಯಗಳ ಪಟ್ಟೀಯೇ ಬೆಳೆಯುತ್ತಾ ಹೋಗುತ್ತದೆ. ಒಂದರ್ಥದಲ್ಲಿ ಹೇಳಬೇಕೆಂದರೆ ಆಂಗ್ಲ ಅಥವಾ ಪಾಶ್ಚ್ಯಾತ್ಯ ಅಥವಾ ಆಧುನಿಕ ಔಷಧಿಗಳ ಬಗ್ಗೆ ಜನರಿಗೆ ಅಸಹನೆ ಬೆಳೆಯುತ್ತಲೇ ಇದೆ. ಇದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲೋಣವೇ?
ಒಂದು ಕಾಯಿಲೆಯ ಬಗ್ಗೆ ಔಷಧಿಯನ್ನು ಕಂಡು ಹಿಡಿಯಲು ಸಹಸ್ರಾರು ವಿಜ್ಞಾನಿಗಳ ಮಾನವ ಘಂಟೆಗಳ ಪರಿಶ್ರಮ ಇರಲೇ ಬೇಕು. ಕಾಯಿಲೆ ಅಂದ ಮೇಲೆ ಅದಕ್ಕೊಂದು ಕಾರಣ ಇರಬೇಕು.ಆ ಕಾರಣ ಕಂಡು ಹಿಡಿಯಲೂ ಸಹ ಪ್ರಯತ್ನ ಬೇಕು. ಅದಾದ ನಂತರ ಅದಕ್ಕೊಂದು ಸೂಕ್ತ ಔಷಧ ಕಂಡು ಹಿಡಿಯಬೇಕು. ಅದು ಸುಲಭವೇ? ಖಂಡಿತಾ ಅಲ್ಲ.
ಹೊಸದೊಂದು ಔಷಧಿ ಕಂಡು ಹಿಡಿಯಬೇಕಾದರೆ ಲಕ್ಷಗಟ್ಟಲೇ ರಾಸಾಯನಿಕಗಳ ವಿಶ್ಲೇಷಣೆ ನಡೆಸಬೇಕು. ಈ ಸಹಸ್ರ ಸಂಖ್ಯೆಯ ರಾಸಾಯನಿಕಗಳಲ್ಲಿ ಕೇವಲ 100-200 ಮಾತ್ರ ಪರಿಣಾಮಕಾರಿಯಾಗಿ ಹೊರಹೊಮ್ಮುತ್ತವೆ. ಈ ಪ್ರಕ್ರಿಯೆಗೆ ಸುಮಾರು 3-4 ವರ್ಷ ಬೇಕು. ಇದಕ್ಕೆ ಸಾಮಾನ್ಯವಾಗಿ 10-15 ಬಿಲಿಯ ಡಾಲರುಗಳ ವೆಚ್ಚವಾಗುತ್ತದೆ. ಔಷಧದ ಕಣ ಕಂಡು ಹಿಡಿಯಬೇಕಾದರೆ ಅದಕ್ಕೆ ಅತ್ಯುತ್ತಮ ಪರಿಣಾಮ ಮತ್ತು ಅತೀ ಕಡಿಮೆ ಅಡ್ಡ ಪರಿಣಾಮ ವಿರಬೇಕೆಂಬುದು ಒಂದು ಕಠಿಣ ನಿಯಮ.
ಅದಕ್ಕೆಂದೇ ಇವುಗಳನ್ನು ಮೊದಲು ಇಲಿಗಳ ಮೇಲೆ ಪ್ರಯೋಗಿಸಬೇಕಾಗುತ್ತದೆ. ಏಕೆಂದರೆ ಇವುಗಳನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಸಾಧ್ಯವಿಲ್ಲವಲ್ಲ!!. ಇಲಿಗಳನ್ನು ನಮಗಾಗಿ ಶೋಷಣೆ ಮಾಡಬಾರದೆಂಬ ಅರಿವು ಇದ್ದರೂ ಸಹ ಅವುಗಳ ಮೇಲೆ ಅಥವಾ ಇತರ ಪ್ರಯೋಗಶಾಲಾ ಪ್ರಾಣಿಗಳಾದ ಮೊಲ, ಗಿನಿ ಹಂದಿ, ಚಿಕ್ಕಿಲಿ, ಕೋತಿ ಅಥವಾ ನಾಯಿಗಳ ಮೇಲೆ ಪ್ರಯೋಗ ಮಾಡಿ ಅವುಗಳ ಪರಿಣಾಮ ಮತ್ತು ಅಡ್ಡ ಪರಿಣಾಮಗಳನ್ನು ಪತ್ತೆ ಮಾಡಬೇಕಾಗುತ್ತದೆ. ಇದಕ್ಕೆ ಕ್ಲಿನಿಕಲ್ ಪೂರ್ವ ಪ್ರಯೋಗವೆನ್ನುತ್ತಾರೆ. ಇದಕ್ಕೆ ಮನುಷ್ಯರನ್ನು ಉಪಯೋಗಿಸಬೇಕಾದ ಪ್ರಸಂಗ ಬಂದರೆ ಸಹಸ್ರಾರು ಮನುಜರೇ ಬೇಕಾಗಿದ್ದರೇನೋ??!!. ಇತ್ತೀಚೆಗೆ ಪ್ರಾಣಿಗಳನ್ನು ಬಹಳಷ್ಟು ಕಡಿಮೆ ಉಪಯೋಗಿಸಬೇಕೆಂಬ ಕಟ್ಟು ನಿಟ್ಟಾದ ನಿಯಮಗಳು, ಹೇಗೆ ಪ್ರಯೋಗ ಮಾಡಬೇಕೆಂಬ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ನಿಯಮಗಳು ಬಂದಿವೆ. ಈ ಹಂತದಲ್ಲೇ ಹಲವಾರು ಔಷಧಿಗಳು ಬಿದ್ದು ಹೋಗುತ್ತವೆ.
ಯಾವುದೇ ಒಂದು ಹಂತದಲ್ಲಿ ಔಷಧಿ ಕಣವು ಬ್ರೂಣಕ್ಕೆ ಧಕ್ಕೆ ಮಾಡುವಂತಿದ್ದರೆ, ಗರ್ಭಪಾತ ಮಾಡುವಂತಿದ್ದರೆ, ನರಮಂಡಳಕ್ಕೆ ತೊಂದರೆ ಉಂಟು ಮಾಡುತ್ತಿದ್ದರೆ ಅಥವಾ ಹೃದಯ, ಮೂತ್ರಜನಕಾಂಗ, ಪಿತ್ತಜನಕಾಂಗ, ಮೇದೋಜೀರಕಾಂಗ, ಉದರ, ಮೆದುಳು ಅಥವಾ ಯಾವುದೇ ಅಂಗಕ್ಕೆ ಸೂಕ್ಷ್ಮದರ್ಶಕದಲ್ಲಿ ಮಾತ್ರ ನೋಡಬಹುದಾದ ಸ್ವಲ್ಪ ತೊಂದರೆಯುಂಟುಮಾಡುತ್ತಿದ್ದರೂ ಸಹ ಈ ಔಷಧಿಯ ಕಣವನ್ನು ಮುಲಾಜಿಲ್ಲದೇ ಬದಿಗೊತ್ತಲಾಗುತ್ತದೆ. ಅಂದರೆ ಸುಮಾರು 3-5 ವರ್ಷಗಳ ಸತತ ಪ್ರಯತ್ನ ಮತ್ತು 10-20 ಬಿಲಿಯ ಡಾಲರುಗಳು ಹೋಮವಾದ ಹಾಗೇ!!.
ಇದೆಲ್ಲ ಪರೀಕ್ಷೆಗಳನ್ನು ಪಾಸು ಮಾಡಿ ಬಂದರೆ ಅದನ್ನು ಔಷಧಿಯೆಂದು ಪರಿಗಣಿಸಲಾಗುತ್ತದೆ. ಇದಾದ ನಂತರ ಮನುಷ್ಯರ ಮೇಲೆ ನಾಲ್ಕು ಹಂತದ ಪ್ರಯೋಗಗಳು ಅಥವಾ ಕ್ಲಿನಿಕಲ್ ಪರೀಕ್ಷೆಗಳನ್ನು ಅವರ ಒಪ್ಪಿಗೆ ಪಡೆದು ಮಾಡಲಾಗುತ್ತದೆ.
ಮೊದಲ ಹಂತ
ಇದರಲ್ಲಿ 10-15 ಅರೋಗ್ಯಕರ ಸ್ವಯಂ ಪ್ರೇರಣೆಯಿಂದ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಆರೋಗ್ಯವಂತ ಜನರ ಮೇಲೆ ಔಷಧಿಯನ್ನು ಪ್ರಯೋಗಿಸಲಾಗುತ್ತದೆ. ಈ ಹಂತದಲ್ಲಿ ಔಷಧಿಯು ಇಲಿಗಳ ಮೇಲೆ ಮಾಡಿದ ಪರಿಣಾಮ ಮನುಷ್ಯನಲ್ಲೂ ಪುನರಾವರ್ತನೆಯಾಗುತ್ತದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅದರಲ್ಲೂ ಔಷಧಿಯು ಎಷ್ಟು ಪ್ರಮಾಣದಲ್ಲಿ ದೇಹಕ್ಕೆ ಸೇರಿತು? ಎಷ್ಟು ಪ್ರಮಾಣದಲ್ಲಿ ರಕ್ತದಲ್ಲಿ ಪ್ರಸರಣವಾಯಿತು, ಎಷ್ಟು ನಿರ್ವಿಷಗೊಂಡಿತು? ಎಷ್ಟು ದೇಹದಿಂದ ವಿಸರ್ಜಿಸಲ್ಪಟ್ಟಿತು ಎಂಬುದನ್ನು ಪರಿಶೀಲಿಸಲಾಗುತ್ತದೆ. ಅಲ್ಲದೇ ಅವಶ್ಯಕ ಪರಿಣಾಮವನ್ನು ಅದು ಮನುಷ್ಯ ದೇಹದ ಮೇಲೆ ಅವಶ್ಯಕ ಪರಿಣಾಮ ಮಾಡಿತೇ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಾರೆ.ಅಲ್ಲದೇ ಬಾಯಿಯಿಂದ ನೀಡಬೇಕಾದ ಔಷಧವಾದರೆ ಅಹಾರದ ಪರಿಣಾಮವನ್ನು ಸಹ ಪರಿಶೀಲಿಸಿ ನೀಡಲಾಗುತ್ತದೆ. ಈ ಅಧ್ಯಯನಕ್ಕೆ 2-4 ವರ್ಷ ಬೇಕಾಗಿದ್ದು ಸುಮಾರು 10-20 ಬಿಲಿಯನ್ ಡಾಲರ್ ಖರ್ಚಾಗಬಹುದು.
ಎರಡನೇ ಹಂತ
ಈ ಹಂತದಲ್ಲಿ ಔಷಧಿಯನ್ನು ಮೇಲಿನ ಎಲ್ಲಾ ಸಂಶೋಧನೆಗಳನ್ನು ಜಾಸ್ತಿ ಜನ ಅಂದರೆ ಸುಮಾರು 100-1000 ಜನರ ಮೇಲೆ ಪ್ರಯೋಗಿಸಿ ಅದರ ಪರಿಣಾಮ ಮತ್ತು ಅಡ್ಡಪರಿಣಾಮ ಎರಡನ್ನೂ ಅಭ್ಯಾಸ ಮಾಡಲಾಗುತ್ತದೆ. ಇದಕ್ಕೆ 2-4 ವರ್ಷಗಳ ಪರಿಶ್ರಮದ ಅವಶ್ಯಕತೆ ಇದೆ.ಹಂತ 1 ಮತ್ತು 2 ರ ಅಧ್ಯಯನವನ್ನು ಆರೋಗ್ಯವಂತ ಮನುಷ್ಯರ ಮೇಲೆ ಮಾಡಲಾಗುತ್ತದೆ.
ಮೂರನೇ ಹಂತ
ಈ ಹಂತದಲ್ಲಿ ಅಧ್ಯಯನವನ್ನು 1000-3000 ರೋಗ ಪೀಡಿತ ಮನುಷ್ಯರ ಮೇಲೆ ಮಾಡಲಾಗುತ್ತದೆ. ಇಲ್ಲಿಯೂ ಸಹ ಹಂತ 1 ರಲ್ಲಿನ ಅಧ್ಯಯನವನ್ನೇ ಮುಂದುವರೆಸಲಾಗುತ್ತಿದ್ದು, ಔಷಧಿಯ ಸುರಕ್ಷತೆಯ ಬಗ್ಗೆ ಸಂಪೂರ್ಣ ಗಮನ ನೀಡಲಾಗುತ್ತದೆ.
ರೋಗ ಪೀಡಿತ ವ್ಯಕ್ತಿಯ ಮೇಲೆ ಅಡ್ಡ ಪರಿಣಾಮವಾಗುತ್ತಿದ್ದರೆ ಔಷಧಿಯ ಪ್ರಯೋಗವನ್ನು ನಿಲ್ಲಿಸಿ ಅದನ್ನು ಹಿಂಪಡೆಯಲಾಗುತ್ತದೆ. ಈ ಅಧ್ಯಯನಕ್ಕೂ ಸಹ 2-4 ವರ್ಷ ಅವಧಿ ಬೇಕಾಗಿದ್ದು 20-30 ಬಿಲಿಯನ್ ಡಾಲರ್ ಖರ್ಚು ಬರುತ್ತದೆ. ಇದಾದ ನಂತರ ವಿವಿಧ ದೇಶಗಳಲ್ಲಿ ಆಯಾ ದೇಶಗಳ ನಿಯಮಗಳಂತೆ ಅರ್ಜಿ ಸಲ್ಲಿಸಿ ರಹದಾರಿ ಪಡೆಯಲಾಗುತ್ತದೆ.
ಇಲ್ಲಿ ಪ್ಲಾಸೆಬೋ ಪರಿಣಾಮವನ್ನೂ ಸಹ ಗಮನಿಸಲಾಗುತ್ತದೆ. ಪ್ಲಾಸೆಬೋ ಅಂದರೆ “ಹುಸಿ ಔಷದಿ” ಅಥವಾ “ಸುಳ್ಳೌಷಧಿ” ಅನ್ನಬಹುದೇನೋ? ಈ ಹಂತದಲ್ಲಿ ಔಷಧಿಯ ಪರಿಣಾಮವನ್ನು ಗಮನಿಸಲು “ಹುಸಿ ಔಷಧಿ” ಯನ್ನು ಗುಳಿಗಳ ಒಳಗೆ ಹಾಕಿ ಅದನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿದ ರೋಗಿಗಳ ಮೇಲೆ ಪ್ರಯೋಗಿಸಲಾಗುತ್ತದೆ.
ಇದು ವೈದ್ಯರಿಗೆ ಅಥವಾ ಕಂಪನಿಗೆ ಅಥವಾ ರೋಗಿಗೆ ಗೊತ್ತಿರುವುದಿಲ್ಲ. ಮನುಷ್ಯನಲ್ಲಿ ಶೇ: 65-70 ರೋಗಗಳು ಮನಸ್ಸಿನ ಮೇಲಿನ ಪರಿಣಾಮದಿಂದ ಉದ್ಭವವಾಗುವುದರಿಂದ ನಂಬಿಕೆ ಅಥವಾ ಭರವಸೆ ಅಥವಾ ಗುಣವಾಗಿಯೇ ಆಗುತ್ತದೆ ಎಂಬ ನಿರೀಕ್ಷೆಯಿಂದ ಹಲವಾರು ರೋಗಗಳು ಗುಣವಾಗುತ್ತವೆ. ಆದರೆ ಈ ಪರಿಣಾಮ ಪ್ರಾಣಿಗಳಲ್ಲಿ ಇರದು.
ಇದಕ್ಕೊಂದು ಚಿಕ್ಕ ಉದಾಹರಣೆಯೆಂದರೆ ಒಂದು ಕಂಪನಿ ಜಿಮ್ ಮಾಡುವ ಜನಗಳಿಗಾಗಿ ಶಕ್ತಿ ಜಾಸ್ತಿ ಮಾಡುವ ಔಷಧಿಯನ್ನು ನೀಡುತ್ತಿದೆಯೆಂದರೆ ಅಲ್ಲಿ ಶೇ:75ರಷ್ಟು ಜನರಿಗೆ ಶಕ್ತಿ ಬರಬಹುದು. ಆದರೆ ನಿಜವಾಗಿ ಗುಳಿಗೆಯಿಂದ ಎಷ್ಟು ಜನರಿಗೆ ಶಕ್ತಿ ಬಂದಿದೆ ಎಂಬುದು ಎರಡು ಗುಂಪುಗಳಲ್ಲಿ ಒಂದು ಗುಂಪಿಗೆ ಹುಸಿ ಔಷಧಿ ಮತ್ತೊಂದು ಗುಂಪಿಗೆ ನಿಜವಾದ ಔಷಧಿಯನ್ನು ಹೊಂದಿದ ಗುಳಿಗೆಯನ್ನು ನೀಡುತ್ತಾರೆ.
ಹುಸಿ ಔಷಧಿ ನೀಡಿದ ಗುಂಪು ಮತ್ತು ನಿಜವಾದ ಔಷಧ ನೀಡಿದ ಗುಂಪಿನಲ್ಲಿ ಶಕ್ತಿ ಜಾಸ್ತಿ ಆದರೆ ಔಷಧಿಯ ಪರಿಣಾಮ ಇಲ್ಲ ಎನ್ನಬಹುದು. ಕೇವಲ ಎರಡನೇ ಗುಂಪಿನಲ್ಲಿ ಶಕ್ತಿ ಜಾಸ್ತಿಯಾಗಿದ್ದರೆ ಮಾತ್ರ ಔಷಧಿ ಪರಿಣಾಮಕಾರಿ ಎನ್ನಬಹುದು.
ಈ “ಪ್ಲಾಸೆಬೋ” ಪರಿಣಾಮ ಔಷಧಿಯ ನಿರೀಕ್ಷಿತ ಪರಿಣಾಮಕ್ಕಿಂತ ಜಾಸ್ತಿಯಾದರೆ ಔಷಧಿ ಮಾರುಕಟ್ಟೆಗೆ ಬರದು.
ನಾಲ್ಕನೇ ಹಂತ
ಈ ಹಂತವನ್ನು ಮಾರುಕಟ್ಟೆಯ ನಂತರದ ಸರ್ವೇಕ್ಷಣೆ ಅನ್ನಬಹುದು. ವಿವಿಧ ದೇಶಗಳಲ್ಲಿ ರಹದಾರಿ ದೊರೆತ ನಂತರ ಆಯಾ ದೇಶಗಳಲ್ಲಿ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ವೈದ್ಯರಿಗೆ ಈ ಬಗ್ಗೆ ಮಾಹಿತಿ ನೀಡಿ, ರೋಗಿಗಳಿಗೆ ಅವರು ಔಷಧಿಯನ್ನು ನೀಡಿದಾಗ ಏನಾದರೂ ಅಡ್ಡಪರಿಣಾಮಗಳು ಇರುವವೇ ಎಂಬುದನ್ನು ಪತ್ತೆ ಹಚ್ಚಲು ತಂಡವೊಂದು ಕಾರ್ಯ ನಿರ್ವಹಿಸುತ್ತದೆ. ಯಾವ ಹಂತದಲ್ಲಿಯಾದರೂ ಸಹ ಔಷಧಿಯನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಬೇಕಾಗಬಹುದು.
ಅಂದರೆ ಇಂಗ್ಲಿಷ್ ಔಷಧ ಕಂಡು ಹಿಡಿಯುವ ಪದ್ಧತಿ ಇಡೀ ಪ್ರಪಂಚದಲ್ಲಿ ಏಕರೂಪದಲ್ಲಿದೆ. ಏಕೆಂದರೆ ಒಂದು ಔಷಧಿಯನ್ನು ಕಂಡು ಹಿಡಿದರೆ ಅದು ಪ್ರಪಂಚದಲ್ಲಿರುವ ಕೋಟ್ಯಾನುಕೋಟಿ ಜನರ ಮೇಲೆ ಒಂದೇ ರೂಪದಲ್ಲಿರಬೇಕು. ಅದಕ್ಕೆಂದೇ ವಿಶ್ವ ಆರೋಗ್ಯ ಸಂಸ್ಥೆಯ ಆಧೀನದ ಆಹಾರ ಮತ್ತು ಔಷಧ ಆಡಳಿತ ಪ್ರಾಧಿಕಾರ (FDA-Food and Drug Administration) ವು ಕಾರ್ಯ ನಿರ್ವಹಿಸುತ್ತಿದ್ದು, ವಿಶ್ವದ ಯಾವುದೇ ಭಾಗದಲ್ಲಿ ಹೊಸ ಔಷಧ ಕಂಡು ಹಿಡಿದರೂ ಇದರ ಕಠಿಣ ನಿಯಮಗಳನ್ನು ಪಾಲಿಸಿ ಇದರ ತಜ್ಞರ ಹದ್ದಿನ ಕಣ್ಣಿನ ಅಡಿ ಲೈಸನ್ಸ್ ಪಡೆಯಬೇಕಾಗುತ್ತದೆ.
ಇದಕ್ಕೆ ಕೋಟ್ಯಾಂತರ ಡಾಲರ್ ವೆಚ್ಚ ಮತ್ತು ಸಹಸ್ರಾರು ಮಾನವ ಘಂಟೆಗಳ ಪರಿಶ್ರಮವಿರುತ್ತದೆ. ನಂತರ ಇದಕ್ಕೆ ಕಂಡು ಹಿಡಿದ ಕಂಪನಿಯವರು ಪೇಟಂಟ್ ಪಡೆಯುತ್ತಾರೆ. ಯಾವುದೇ ವ್ಯವಸ್ಥೆ ನೂರಕ್ಕೆ ನೂರರಷ್ಟು ಪರಿಪೂರ್ಣವಲ್ಲ. ಆದರೂ ಆ ದಿಶೆಯೆಡೆಗೆ ಎಷ್ಟು ಪ್ರಾಮಾಣಿಕ ಪ್ರಯತ್ನ ನಡೆದಿದೆ ಎನ್ನುವುದು ಮುಖ್ಯ.
ಆಧುನಿಕ ಅಥವಾ ಇಂಗ್ಲಿಷ್ ಅಥವಾ ಅಲೋಪತಿ ಔಷಧಿ ಕಂಡು ಹಿಡಿಯುವ ಪದ್ಧತಿಯಲ್ಲಿ ಇಷ್ಟೆಲ್ಲಾ ಕಟ್ಟು ನಿಟ್ಟು ಇದೆ. ಇದು ಯಾಕೆಂದರೆ ಮನುಷ್ಯರಲ್ಲಿ ಬಹಳ ಬೇಗ ಜಾಸ್ತಿ ಉತ್ತಮ ಪರಿಣಾಮವನ್ನು ಬೀರಿ , ಅತಿ ಕಡಿಮೆ “ಸೈಡ್ ಇಫೆಕ್ಟ್” ಇರಬೇಕು ಅಂತ. ಬಹುತೇಕ ಫಾರ್ಮಾಕಾಲಜಿ ಪುಸ್ತಕಗಳಲ್ಲಿ ಮತ್ತು ಜರ್ನಲ್ಲುಗಳಲ್ಲಿ ನಂತರ ಇದು ಪ್ರಕಟವಾಗುತ್ತದೆ.
ಪ್ರತಿ ಗುಳಿಗೆ, ಚುಚ್ಚುಮದ್ದು ಅಥವಾ ಮಾತ್ರೆಗಳ ಜೊತೆ ಒಂದು ಮಾಹಿತಿ ಚೀಟಿಯನ್ನೂ ಸಹ ಇಟ್ಟಿರುತ್ತಾರೆ. ಅದರಲ್ಲಿ ಔಷಧಿಯ ವಿವರ, ಅದರ ಜೊತೆ ಬೆರೆಸಿರುವ ಬಣ್ಣ, ಇತರ ದ್ರವಗಳು ಅಥವಾ ಘನಗಳು, ಕೊನೆ ದಿನಾಂಕ, ಕಂಪನಿಯ ಹೆಸರು, ವಿಳಾಸ, ರಹದಾರಿ ಸಂಖ್ಯೆ, ಉಪಯೋಗದ ವಿಧಾನ, ಅಡ್ಡ ಪರಿಣಾಮ ಇತ್ಯಾದಿಗಳನ್ನು ವಿವರವಾಗಿ ಆಂಗ್ಲ ಭಾಷೆಯಲ್ಲಿ ಹಾಕುತ್ತಾರೆ. ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಮಾಡುವಂತೆಯೂ ಇಲ್ಲ.
ಆದರೆ ಬಹುತೇಕ ಜನರು ಗೂಗಲ್ಲಿನಲ್ಲಿಯೋ ಅಥವಾ ಔಷಧಿಯ ಜೊತೆ ಇರುವ ಚೀಟಿಯನ್ನು ಓದಿಯೋ, ಕೇವಲ “ಸೈಡ್ ಇಫೆಕ್ಟ್” ಓದಿ ಎಲ್ಲಾ ಇಂಗ್ಲಿಷ್ ಔಷಧಿಗಳಿಗೆ “ಸೈಡ್ ಇಫೆಕ್ಟ್” ಮಾತ್ರ ಇದೆ ಎಂದು ಭಾವಿಸುತ್ತಾರೆ ಮತ್ತು ಅದನ್ನು ಅನುಭವಿಸುತ್ತಾರೆ ಕೂಡಾ. ಇದಕ್ಕೆ “ನೋಸೆಬೋ” ಪರಿಣಾಮ ಅನ್ನುತ್ತಾರೆ. ಈ ಪರಿಣಾಮವನ್ನು ಅನುಭವಿಸುವವರ ಬಹು ದೊಡ್ಡ ಗುಂಪೇ ಇದೆ.
ಈ ಪ್ಲಾಸೆಬೋ ಮತ್ತು ನೋಸೆಬೋ ಪರಿಣಾಮಗಳಿಗೆ ಮೆದುಳಿನಲ್ಲಿರುವ ಡೋಪಮಿನ್, ಎಂಡೋರ್ಫ್ಹಿನ್ ಮತ್ತು ಎನ್ಕೆಫಾಲಿನ್ ಎಂಬ ವಸ್ತುಗಳು ಮತ್ತು ಇನ್ನೂ ಅನೇಕ ಹಾರ್ಮೋನುಗಳು ಕಾರಣ ಎಂದು ವಿಜ್ಞಾನ ಹೇಳುತ್ತಿದೆ. ಯಾವ ಔಷಧಿಗೆ ಪರಿಣಾಮ ಇದೆಯೋ ಅದಕ್ಕೆ ಅಡ್ಡ ಪರಿಣಾಮ ಇದ್ದೇ ಇದೆ. ಅಡ್ಡ ಪರಿಣಾಮ ಇರದಿದ್ದರೆ ಅದಕ್ಕೆ ಪರಿಣಾಮವು ಇರುವುದಿಲ್ಲ. ಇದು ನೆನಪಿರಲಿ.
ಬೇರೆ ಪದ್ದತಿಯ ಔಷಧಗಳಿಗೆ ಅಡ್ಡ ಪರಿಣಾಮಗಳು ಇಲ್ಲ ಎಂದು ಮನಸ್ಸಿನಲ್ಲಿ ಆಳವಾಗಿ ಬೇರೂರಿರುವುದರಿಂದ ಇಂಗ್ಲಿಷ್ ಔಷಧಿಗಳಿಗೆ ಮಾತ್ರ ಅದು ಇದೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿ ಇದೆ. ಇತರೇ ಪದ್ದತಿಯ ಯಾವ ಔಷಧಗಳೂ ಸಹ ಈ ರೀತಿಯ ಕಠಿಣ ಪರೀಕ್ಷೆ ತಪಾಸಣೆಯ ಮೂಲಕ ಬಂದಿಲ್ಲ. ಪರಂಪರೆಯಿಂದ ಬಂದವುಗಳೆಲ್ಲಾ ಸುರಕ್ಷಿತ ಎನ್ನುವುದು ತಪ್ಪು ಕಲ್ಪನೆ. ಯಾಕೆಂದರೆ ಈಗ ಎಲ್ಲವೂ ವಾಣಿಜ್ಯಿಕರಣಗೊಂಡಿವೆ.
ಕೆಲವೊಮ್ಮೆ ಹೀಗೂ ಇರುವುದು ಸಹಜ. ಕೆಲವೊಮ್ಮೆ ವೈದ್ಯಕೀಯ ನೀತಿಶಾಸ್ತ್ರವನ್ನು ಉಲ್ಲಂಘಿಸಿ, ಈಗಾಗಲೇ ಕೆಲವೊಂದು ಪ್ರಯೋಗಶಾಲಾ ಪರೀಕ್ಷೆಗಳು ಮತ್ತೊಂದು ಆಸ್ಪತ್ರೆಗಳಲ್ಲಿ ಮಾಡಲ್ಪಟ್ಟಿದ್ದರೂ ಸಹ ಅವರಿಗೆ ಬೇಕಾದ ಮತ್ತೊಂದು ಪ್ರಯೋಗಶಾಲೆಯಲ್ಲಿ ಅಥವಾ ಅವರದೇ ಪ್ರಯೋಗಶಾಲೆಯಲ್ಲಿ ರೋಗಿಗಳ ಹತ್ತಿರ ಹಣ ಪೀಕಿಸಿ ಮಾಡಿಸುತ್ತಾರೆ ಎಂಬ ಅಪವಾದ ಇದೆ. ಅಲ್ಲದೇ ಅವಶ್ಯಕತೆ ಇಲ್ಲದಿದ್ದರೂ ಸಹ ಹಣ ಮಾಡಲೆಂದು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂಬ ಅಪವಾದವೂ ಇದೆ.
ಉತ್ತಮ ವಿಭಾಗಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯಲು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಮತ್ತು ದುಬಾರಿ ವೈದ್ಯಕೀಯ ಉಪಕರಣಗಳು ಸಹ ದುಬಾರಿ ವೈದ್ಯಕೀಯ ವೆಚ್ಚಕ್ಕೆ ಕಾರಣವಿರಬಹುದು. ಅಲ್ಲದೇ ಸಾರ್ವಜನಿಕ ವಲಯದಲ್ಲಿರುವ ವೈದ್ಯರುಗಳ ಕಾರ್ಯಕ್ಷಮತೆ ಅನೇಕ ಕಾರಣಗಳಿಂದ ಕಡಿಮೆಯಾಗಿರುವುದೂ ಸಹ ಜನರು ದುಬಾರಿಯಾದರೂ ಸಹ ಖಾಸಗಿಯೆಡೆಗೆ ಓಡುವಂತೆ ಮಾಡಿವೆ ಎನ್ನೆಬಹುದು.
ಒಬ್ಬ ಖ್ಯಾತ ವೈದ್ಯರು ಸಾರ್ವಜನಿಕವಾಗಿ ಹೇಳುವ ಹಾಗೇ ಔಷಧ ಕಂಪನಿಗಳು ಜನರನ್ನು ದರೋಡೆ ಮಾಡಲು ಹುಟ್ಟಿವೆ ಮತ್ತು ಚಿಕಿತ್ಸೆ ಮಾಡುವವರು ಹಣ ಪಿಪಾಸುಗಳಾಗಿದ್ದಾರೆ ಎನ್ನುವುದನ್ನು ಪರಾಮರ್ಷೆಗೆ ಒಳಪಡಿಸುವುದು ಸೂಕ್ತ. ಏಕೆಂದರೆ ಈ ರೀತಿಯಾಗಲು ಯಾರು ಕಾರಣ ಎನ್ನುವುದೂ ಒಂದು ವಿಮರ್ಷೆಗೊಳಪಡಬೇಕಲ್ಲವೇ?
ವೈದ್ಯಕೀಯ ಪದವಿ ಪಡೆಯಲು ಕಡಿಮೆ ವೆಚ್ಚ ಮತ್ತು ಔಷಧಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡುವ ವಾತಾವರಣ ಸೃಷ್ಟಿಯಾಗಬೇಕು. ಇದನ್ನು ಜವಾಬ್ಧಾರಿ ಜಾಗದಲ್ಲಿರುವವರು ಸಂಬಂಧಿಸಿದವರಿಗೆ ವಿವಿಧ ಮಾಧ್ಯಮಗಳ ಮೂಲಕ ಹೇಳಬೇಕು ಮತ್ತು ಆಧುನಿಕ ಔಷಧಿಗಳ ಬಗ್ಗೆ ಜನರ ತಪ್ಪು ನಂಬಿಕೆ ಹೋಗಲಾಡಿಸಬೇಕು.
ಪಶುವೈದ್ಯಕೀಯದಲ್ಲೂ ಹೊಸ ಔಷಧ ಪತ್ತೆ ಮತ್ತು ಸಂಶೋಧನೆ ಬಹುತೇಕ ಇದೇ ರೀತಿ ನಡೆಯುತ್ತದೆ. ಆದರೆ ಅವುಗಳಲ್ಲಿ “ಪ್ಲಾಸೆಬೋ” ಮತ್ತು “ನೋಸೆಬೋ” ಪರಿಣಾಮಗಳು ಇರದಿದ್ದರೂ ಅವುಗಳ ಮಾಲಕರಲ್ಲಿ ಇವೆಯಲ್ಲ?!!!
ಈ ಕುರಿತು “ಅಡ್ಡಪರಿಣಾಮ” ಗಳಿಲ್ಲದ ಆರೋಗ್ಯಕರ ಚರ್ಚೆಯಾಗಲಿ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್ನ ನಷ್ಟ ಅಪಾರ. ಲೆಬನಾನ್ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್ಎಚ್ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್ನ ಮಕ್ಕಳ ಸಾವುಗಳು, ಇಸ್ರೇಲ್ನ ಗಾಯಗೊಂಡ ಕುಟುಂಬಗಳು, ಗಲ್ಫ್ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್ಲೈನ್ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

ದಿನದ ಸುದ್ದಿ
ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್ಗಳನ್ನು ವಶಪಡಿಸಿಕೊಳ್ಳಲಾಗುವುದು.
ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ3 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ4 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ಅಂಕಣ2 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ4 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ3 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ2 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

