ಬಹಿರಂಗ
ಬೌದ್ಧ ಧರ್ಮ ಮತ್ತು ಅಂಬೇಡ್ಕರ್ ಯಾನ
ಬೌದ್ಧ ಧರ್ಮದಲ್ಲಿ ಎರಡು ಪಂಥಗಳಿವೆ. 1.ಹೀನಯಾನ 2.ಮಹಾಯಾನ. ಬಾಬಾಸಾಹೇಬ್ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕರಿಸಿದಾಗ ಅವರ ಪಂಥವನ್ನು ನವಯಾನ ಎಂದು ಕರೆದರು. ಹಾಗೆಯೇ ಮಹಾರಾಷ್ಟ್ರದ ಬೌದ್ಧರನ್ನು ನವಬೌದ್ಧರು ಅಥವಾ ಹೊಸಬೌದ್ಧರು ಎಂದು ಕರೆಯಲಾಗುತ್ತದೆ. ಆದರೆ ಶೋಷಿತರು ಹಳೆಯ ಬೌದ್ಧರು. ಯಾಕೆಂದರೆ ಅಂಬೇಡ್ಕರರೇ ಒಂದೆಡೆ ಹೇಳಿದ್ದಾರೆ “ಏಷ್ಯಾ ಖಂಡದ ಬಹುಭಾಗವನ್ನು ಆಳಿದ ಭವ್ಯ ನಾಗ ಜನಾಂಗಕ್ಕೆ ಸೇರಿದವರು ನಾವು” ಎಂದು. ಈ ದಿಸೆಯಲ್ಲಿ ಸದ್ಯ “ಯಾನ” ಎಂದರೇನು? ಎಂಬುದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿದೆ.
“ಯಾನ” ಎಂದರೆ ಪಯಣ ಎಂದರ್ಥ. ಅಂದರೆ ಬೌದ್ಧ ಪಯಣ ಎಂದರ್ಥ. Its way of life ಎನ್ನಬಹುದು. ಹಾಗಿದ್ದರೆ ಬಾಬಾಸಾಹೇಬ್ ಅಂಬೇಡ್ಕರ್ ರು ಬೌದ್ಧ ಧರ್ಮ ಸ್ವೀಕರಿಸಿದಾಗ ಆಗ ಅಸ್ತಿತ್ವದಲ್ಲಿದ್ದ ಬೌದ್ಧ ಧರ್ಮವನ್ನು ಯಥಾವತ್ ಸ್ವೀಕರಿಸಿದರೆ? ಊಹ್ಞೂಂ. ನಿಜ ಹೇಳಬೇಕೆಂದರೆ ಬುದ್ಧ ಅರಮನೆ ತೊರೆದು ಪರಿವ್ರಾಜಕನಾಗಲು ಸಂಬಂಧಿಸಿದ ಮೂಲ ಕತೆಯಾದ, ಪ್ರಸಿದ್ಧ ಕತೆಯಾದ ಆತ ರೋಗಿಯೊಬ್ಬನನ್ನು ನೋಡಿದ, ವೃದ್ಧನೊಬ್ಬನನ್ನು ನೋಡಿದ, ಸತ್ತ ಮನುಷ್ಯನೊಬ್ಬನನ್ನು ನೋಡಿದ ಎಂಬ ಆ very basic ಸಾಂಪ್ರದಾಯಿಕ ಕತೆಯನ್ನೇ ಅಂಬೇಡ್ಕರರು ನಿರಾಕರಿಸಿದರು. ಇದಕ್ಕೆ ಅವರು ಕೊಡುವ ಕಾರಣ “ಪರಿವ್ರಾಜಕ(ಸನ್ಯಾಸ)ವನ್ನು ಬುದ್ಧ ಸ್ವೀಕರಿಸಿದ್ದು ಆತನ 29ನೇ ವಯಸ್ಸಿನಲ್ಲಿ. ಆ ಮೂರು ದೃಶ್ಯಗಳನ್ನು(ರೋಗಿ, ವೃದ್ಧ, ಸತ್ತ ಮನುಷ್ಯ) ನೋಡಿ ಆತ ಸನ್ಯಾಸ ಸ್ವೀಕರಿಸಿದನೆನ್ನುವುದಾದರೆ ಅದಕ್ಕೂ ಮೊದಲು ಅಂದರೆ ಆತನ 29ನೇ ವಯಸ್ಸಿಗೂ ಮೊದಲು ಆ ಮೂರು ದೃಶ್ಯಗಳನ್ನು ಅತ ನೋಡಿಯೇ ಇರಲಿಲ್ಲ ಎನ್ನುವುದು ಅದು ಹೇಗೆ ಸಾಧ್ಯ?” ಎಂದು (Buddha and his Dhamma, by Ambedkar. Introduction page). ಮುಂದುವರೆದು ಅವರು “ಮುಪ್ಪು, ರೋಗ, ಸಾವು ಇವು ದಿನಾಲೂ ನೂರಾರು ಸಂಖ್ಯೆಯಲ್ಲಿ ಸಂಭವಿಸುವ ಘಟನೆಗಳಾಗಿದ್ದು ಬುದ್ಧ ಅವುಗಳನ್ನು ನೋಡಿಯೇ ನೋಡಿರುತ್ತಾನೆ.
ಆದ್ದರಿಂದ ಇವುಗಳನ್ನೆಲ್ಲ ಮೊದಲು ನೋಡಿ ಆತ ಪರಿವ್ರಾಜಕನಾದ ಎಂಬ ಸಾಂಪ್ರದಾಯಿಕ ವಿವರಣೆಯನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಈ ವಿವರಣೆ ತೋರಿಕೆಯದ್ದಾಗಿದ್ದು, ಯಾರಾದರೂ ಪ್ರಶ್ನಿಸಿದಾಗ ಅವರಿಗೆ ಈ ವಿವರಣೆ ಅಕ್ಷರಶಃ ಒಪ್ಪಿಗೆಯಾಗುವಂಥದ್ದಲ್ಲ. ಹೀಗಿರುವಾಗ ಬುದ್ಧ ಅರಮನೆ ತೊರೆದು ಸನ್ಯಾಸ ಸ್ವೀಕರಿಸಲು ಇದು ಉತ್ತರ ಅಲ್ಲವಾದರೆ ನಿಜವಾದ ಉತ್ತರವಾದರು ಏನು?” ಎಂದು ಪ್ರಶ್ನಿಸುತ್ತಾರೆ. ಹಾಗೆಯೇ ಉತ್ತರವನ್ನು ಕಂಡುಕೊಳ್ಳುತ್ತಾರೆ.
ಒಟ್ಟಾರೆ ಅರ್ಥವಾಗುವುದು ಬುದ್ಧ ರೋಗಿಯೊಬ್ಬನನ್ನು, ವೃದ್ಧನೊಬ್ಬನನ್ನು, ಸತ್ತ ವ್ಯಕ್ತಿಯೊಬ್ಬನನ್ನು ನೋಡಿ ಅರಮನೆ ತೊರೆದ ಎಂಬ ಮೂಲ ಕತೆಯನ್ನೇ ಅಂಬೇಡ್ಕರ್ ರು ಒಪ್ಪಲಿಲ್ಲ. ಅದನ್ನು ಸಕಾರಣದ ಮೂಲಕ ಪ್ರಶ್ನಿಸಿ ಬೇರೆ ವಿವರಣೆ ಇರಬಹುದಾ ಎಂದು ಹುಡುಕಿದರು ಎಂಬುದು. ಇದಕ್ಕಾಗಿ ಅಂಬೇಡ್ಕರರು ಕಂಡುಕೊಂಡ ಉತ್ತರ, ಆ ಕಾಲದಲ್ಲಿ “ಶಾಕ್ಯರು ಮತ್ತು ಕೋಲೀಯ ಎಂಬ ರಾಜ್ಯಗಳ ನಡುವೆ ರೋಹಿಣಿ ನದಿ ನೀರಿನ ಹಂಚಿಕೆ ವಿಚಾರವಾಗಿ ಸಂಘರ್ಷ ನಡೆಯುತ್ತದೆ. ಆ ಸಂಘರ್ಷದಲ್ಲಿ ಬುದ್ಧ ಪ್ರತಿನಿಧಿಸುವ ಶಾಕ್ಯನ್ನರ ಶಾಕ್ಯ ಸಂಘ ಕೋಲೀಯರ ಮೇಲೆ ಯುದ್ಧ ಸಾರುವ ಬಹುಮತದ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಸಂಘಧ ಸದಸ್ಯನಾದ ರಾಜಕುಮಾರ ಸಿದ್ಧಾರ್ಥ(ಬುದ್ಧ) ಹಿಂಸೆಯ ಅಂಶ ಮುದ್ದೊಡ್ಡಿ ಸಂಘ ಕೈಗೊಂಡ ಈ ಯುದ್ಧದ ತೀರ್ಮಾನವನ್ನು ವಿರೋಧಿಸುತ್ತಾನೆ. ಪರಿಣಾಮ ಸಂಘದ ನಿಯಮ ಉಲ್ಲಂಘಿಸಿದ ರಾಜಕುಮಾರ ಸಿದ್ಧಾರ್ಥ ಶಾಕ್ಯ ಸಂಘದ ನಿಯಮದಂತೆ ಸಂಘದಿಂದ ಶಿಕ್ಷೆಗೊಳಗಾಗುವ ಎಚ್ಚರಿಕೆ ಎದುರಿಸಬೇಕಾಗುತ್ತದೆ. ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಕೂಡ. ಇದರಂತೆ ಸಿದ್ಧಾರ್ಥನಿಗೆ ಮೂರು ಆಯ್ಕೆಗಳನ್ನು ನೀಡಲಾಗುತ್ತದೆ.
- ಶಾಕ್ಯ ಸಂಘದ ನಿಯಮವನ್ನು ಕಡೆ ಗಳಿಗೆಯಲ್ಲಾದರೂ ಒಪ್ಪಿ ಕೋಲೀಯರ ವಿರುದ್ಧದ ಯುದ್ಧದಲ್ಲಿ ಭಾಗವಹಿಸುವುದು.
- ಶಿಕ್ಷೆ ಅನುಭವಿಸಲು ಒಪ್ಪಿ ನೇಣು ಅಥವಾ ದೇಶಭ್ರಷ್ಟನಾಗಿ ಗಡಿಪಾರು ಶಿಕ್ಷೆ ಅನುಭವಿಸುವುದು.
- ಆತನ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲು ಮತ್ತು ಅವರ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಂಘಕ್ಕೆ ಅನುಮತಿ ನೀಡುವುದು.
ಅಂದಹಾಗೆ ಶಾಂತಿ ಧೂತ ಬುದ್ಧ ಮೊದಲನೆಯ ತೀರ್ಮಾನ ಅಂದರೆ ಖಡಾಖಂಡಿತವಾಗಿ ಕೋಲೀಯರ ವಿರುದ್ಧ ಯುದ್ಧದಲ್ಲಿ
ಭಾಗವಹಿಸಲು ನಿರಾಕರಿಸುತ್ತಾನೆ. ಮೂರನೆಯ ತೀರ್ಮಾನ ಅಂದರೆ ತನ್ನ ಕುಟುಂಬದ ಸದಸ್ಯರಿಗೆ ತನ್ನಿಂದ ತೊಂದರೆಯಾಗುವುದನ್ನು ಆತ ಒಪ್ಪುವುದಿಲ್ಲ. ಈ ನಿಟ್ಟಿನಲ್ಲಿ ತಪ್ಪು ತನ್ನದಾಗಿರುವುದರಿಂದ ಶಿಕ್ಷೆ ತನಗೆ ಮಾತ್ರ ಸಲ್ಲಬೇಕು ಎಂದು ನೇಣು ಶಿಕ್ಷೆಗೆ ಅಥವಾ ರಾಜ್ಯದಿಂದ ಗಡಿಪಾರು ಶಿಕ್ಷೆಗೆ ತನ್ನನ್ನು ಒಳಪಡಿಸಬಹುದು ಎಂದು ಆತ ಶಾಕ್ಯ ಸಂಘಕ್ಕೆ ಹೇಳುತ್ತಾನೆ. ಅದರಂತೆ ಶಾಕ್ಯಸಂಘ ರಾಜಕುಮಾರ ಸಿದ್ಧಾರ್ಥನಿಗೆ ಗಡಿಪಾರು ಶಿಕ್ಷೆ ವಿಧಿಸುತ್ತದೆ, ಸಿದ್ಧಾರ್ಥ ರಾಜ್ಯ ತೊರೆಯುತ್ತಾನೆ.
ಅಂಬೇಡ್ಕರ್ ರು ಕೊಡುವ ಈ ವಿವರಣೆಯಲ್ಲಿ ಖಂಡಿತ ಅವಾಸ್ತವಿಕವಾದ ಅಂಶ ಕಿಂಚಿತ್ತು ಇಲ್ಲ. ನಿಜ, ಇಲ್ಲಿ ರೋಚಕತೆ ಇಲ್ಲದಿರಬಹುದು ಆದರೆ ರಾಜ್ಯ ತೊರೆಯಲು ಪ್ರಮುಖ ಕಾರಣವಂತು ಇದೇ ಆಗುತ್ತದೆ ಮತ್ತು ಇದನ್ನು ಯಾರೂ ಕೂಡ ಪ್ರಶ್ನಿಸಲಾರರು. ಹಾಗಿದ್ದರೆ ಇದಕ್ಕೆ ಆಕರ ಗ್ರಂಥವಾಗಿ ಅಂಬೇಡ್ಕರ್ ರು ಯಾವ ಗ್ರಂಥ ಬಳಸುತ್ತಾರೆ? ಅದಕ್ಕೂ ಕೂಡ ಉತ್ತರ ಇದೆ. ಅದೆಂದರೆ ಅಂಬೇಡ್ಕರ್ ರವರು ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸು ಮಾಡಿದಾಗ ಸನ್ಮಾನ ಸಮಾರಂಭವೊಂದರಲ್ಲಿ ಅತಿಥಿಯೊಬ್ಬರು ತಾವೇ ಬರೆದ ಗೌತಮ ಬುದ್ಧರ ಜೀವನ ಚರಿತ್ರೆಯ ಪುಸ್ತಕವನ್ನು ಬಾಲಕ ಅಂಬೇಡ್ಕರ್ ಗೆ ಕೊಡುತ್ತಾರೆ ಎಂಬ ವಿಚಾರ ಎಲ್ಲರಿಗೂ ಗೊತ್ತು. ಮರಾಠಿಯಲ್ಲಿ ಬುದ್ಧನ ಆ ಜೀವನ ಚರಿತ್ರೆ ಬರೆದು(ಬರೆದ ವರ್ಷ 1898) ಬಾಲಕ ಅಂಬೇಡ್ಕರರಿಗೆ ಕೊಡುಗೆ ಇತ್ತವರು ಅಂದಿನ ಸಮಾಜ ಸುಧಾರಕರಾದ ಬಾಂಬೆಯ ವಿಲ್ಸನ್ ಹೈಸ್ಕೂಲ್ ನ ಮಾಜಿ ಪ್ರಾಂಶುಪಾಲರಾದ ಕೃಷ್ಣಾಜಿ ಅರ್ಜುನ್ ಕೆಲೂಸ್ಕರ್ ರವರು. ಈ ನಿಟ್ಟಿನಲ್ಲಿ ರೋಹಿಣಿ ನದಿಯ ನೀರಿನ ವಿಚಾರವಾಗಿ ಸಿದ್ಧಾರ್ಥನು ರಾಜ್ಯ ತೊರೆದ ಪ್ರಸಂಗವನ್ನು ಅಂಬೇಡ್ಕರರು ತಾವು ಪಡೆದದ್ದು ಕೆಲೂಸ್ಕರ್ ರ ಆ ಕೃತಿಯಲ್ಲೇ!
ನಾಲ್ಕು ಆರ್ಯ ಸತ್ಯಗಳನ್ನು ಒಪ್ಪದ ಅಂಬೇಡ್ಕರರು
ಬೌದ್ಧ ಧರ್ಮದಲ್ಲಿ ನಾಲ್ಕು ಆರ್ಯ ಸತ್ಯಗಳು ಎಂಬ ಪ್ರಮುಖ ಅಂಶ ಬರುತ್ತದೆ. ಸಾಮಾನ್ಯವಾಗಿ ಮಹಾಬೋಧಿ ಸೊಸೈಟಿ ಪ್ರಕಟಿಸುವ ಕೃತಿಗಳನ್ನು ಓದಿದ ಬೌದ್ಧರಿಗೆ ಅವು ಯಾವುವು ಎಂದು ತಿಳಿದಿರುತ್ತವೆ. ಅವುಗಳೆಂದರೆ 1.ದುಃಖ ಸತ್ಯ. 2.ದುಃಖಕ್ಕೆ ಮೂಲ ಇದೆ ಎಂಬ ಸತ್ಯ. 3.ದುಃಖವನ್ನು ಕೊನೆಗಾಣಿಸಬಹುದು ಎಂಬ ಸತ್ಯ. 4.ಆ ದುಃಖವನ್ನು ಕೊನೆಗಾಣಿಸುವ ಮಾರ್ಗ ಯಾವುದೆಂಬ ಸತ್ಯ.
ಆಶ್ಚರ್ಯವೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ರವರು ಈ ನಾಲ್ಕು ಆರ್ಯ ಸತ್ಯಗಳನ್ನು ಒಪ್ಪುವುದಿಲ್ಲ. ಅವರು ಹೇಳುವುದು “ಈ ಆರ್ಯ ಸತ್ಯಗಳ ಸೂತ್ರ ಬೌದ್ಧ ಧರ್ಮದ ಮೂಲ ಬೇರನ್ನೇ ಕತ್ತರಿಸುತ್ತದೆ” ಎಂದು. ಏಕೆಂದರೆ ಅವರು ಹೇಳುವುದು “ಆರ್ಯ ಸತ್ಯಗಳ ಪ್ರಕಾರ ಈ ಜೀವನ ದುಃಖ, ಸಾವು ಕೂಡ ದುಃಖ, ಪುನರ್ಜನ್ಮ ಕೂಡ ದುಃಖ, ಆದ್ದರಿಂದ ಪ್ರತಿಯೊಂದಕ್ಕೂ ಕೊನೆ ಎಂಬುದಿದೆ ಎಂದಾದರೆ ತತ್ವಜ್ಞಾನವಿರಲಿ ಅಥವಾ ಧರ್ಮವಿರಲಿ ಯಾವುದೂ ಕೂಡ ಈ ಪ್ರಪಂಚದಲ್ಲಿ ಮನುಷ್ಯ ಸಂತಸದಿಂದಿರಲು ಸಹಾಯ ಮಾಡುವುದಿಲ್ಲ. ಏಕೆಂದರೆ ದುಃಖದಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ ಎನ್ನುವುದಾದರೆ ಜೀವನದಲ್ಲಿ ಸಹಜವಾಗಿ ಅಂತರ್ಗತವಾಗಿರುವ ಆ ದುಃಖದಿಂದ ಮನುಷ್ಯನನ್ನು ತಪ್ಪಿಸಲು ಬುದ್ಧನಾದರೂ ಏನು ಮಾಡಲು ಸಾಧ್ಯ? ಧರ್ಮವಾದರೂ ಏನು ಮಾಡಲು ಸಾಧ್ಯ?
ಆದ್ದರಿಂದ ನಾಲ್ಕು ಆರ್ಯ ಸತ್ಯಗಳು ಮನುಷ್ಯನಿಗೆ ಭರವಸೆಯನ್ನು ನಿರಾಕರಿಸುತ್ತವೆ. ಈ ನಿಟ್ಟಿನಲ್ಲಿ ಆ ನಾಲ್ಕು ಆರ್ಯ ಸತ್ಯಗಳು ಬುದ್ಧನ ಬೋಧನೆಗಳನ್ನು ನಿರಾಶವಾದದ ಬೋಧನೆಗಳನ್ನಾಗಿ ಮಾಡುತ್ತವೆ” ಎನ್ನುತ್ತಾರೆ. ಅದರಲ್ಲೂ ಅವರು ಹೇಳುವುದು “ಬೌದ್ಧರಲ್ಲದವರಿಗೆ ಬೌದ್ಧ ಧರ್ಮದ ಬೋಧನೆಗಳನ್ನು ಒಪ್ಪಲು ಈ ನಾಲ್ಕು ಆರ್ಯಸತ್ಯಗಳು ಬಹುದೊಡ್ಡ ತಡೆಯಾಗಿವೆ” ಎಂದು. ಈ ಹಿನ್ನೆಲೆಯಲ್ಲಿ ಅವರು ಅನುಮಾನ ವ್ಯಕ್ತಪಡಿಸುವುದು ಇವು ಈ ನಾಲ್ಕು ಆರ್ಯ ಸತ್ಯಗಳು ಬುದ್ಧನ ಬೋಧನೆಯ ಮೂಲ ತಿರುಳಾಗಿತ್ತೇ ಅಥವಾ ಇವು ಭಿಕ್ಕುಗಳು ನಂತರ ಸೇರಿಸಿದ ಅಂಶಗಳಾಗಿರಬಹುದೇ ಎಂದು.
ಮುಂದುವರಿದು ಅಂಬೇಡ್ಕರರು “ಭಿಕ್ಕುಗಳನ್ನು ಬುದ್ಧ ಸೃಷ್ಟಿಸಿದ್ದೇತಕೆ?” ಎಂಬ ಪ್ರಶ್ನೆಯನ್ನೂ ಕೇಳುತ್ತಾರೆ. ಅದಕ್ಕೆ ಅವರು ಹೇಳುವುದು “ಬುದ್ಧ, ಭಿಕ್ಕು ಗಣವನ್ನು ಅವರು ಪರಿಪೂರ್ಣ ಮನುಷ್ಯರಾಗಲಿ ಎಂದು ಸೃಷ್ಟಿಸಿದನೇ ಅಥವಾ ಸಮಾಜ ಸೇವಕರಾಗಿ ಜನತೆಗೆ ಸ್ನೇಹಿತರಾಗಿ, ಮಾರ್ಗದರ್ಶಕರಾಗಿ, ತತ್ವಜ್ಞಾನಿಗಳಾಗಿ ಜನರಿಗಾಗಿ ತಮ್ಮ ಜೀವನ ಮುಡಿಪಿಡಲಿ ಎಂದು ಸೃಷ್ಟಿಸಿದನೇ? ಈ ದಿಸೆಯಲ್ಲಿ ಭಿಕ್ಕು ಪರಿಪೂರ್ಣ ಮನುಷ್ಯನಾದರೆ ಧಮ್ಮದ ಬೆಳವಣಿಗೆಯ ಹಿನ್ನೆಲೆಯಲ್ಲಿ ಆತ ಉಪಯೋಗಕ್ಕೆ ಬರುವುದಿಲ್ಲ. ಏಕೆಂದರೆ ಮನುಷ್ಯ ಪರಿಪೂರ್ಣನಾದರೂ ಆತ ಸ್ವಾರ್ಥಿಯಾಗಿರುತ್ತಾನೆ. ಆದರೆ ಭಿಕ್ಕು ಸಮಾಜ ಸೇವಕನಾದರೆ ಖಂಡಿತ ಬೌದ್ಧ ಧರ್ಮಕ್ಕೆ ಆತ ಬಹು ದೊಡ್ಡ ಭರವಸೆಯಾಗುತ್ತಾನೆ” ಎನ್ನುತ್ತಾರೆ.(ಆಧಾರ: Buddha and His Dhamma, Ambedkar writings and speeches, Vol.11, introduction part).
ಖಂಡಿತ, ಬುದ್ಧ ಪರಿವ್ರಾಜಕ(ಸನ್ಯಾಸ) ಸ್ವೀಕರಿಸಲು ಬಾಬಾಸಾಹೇಬ್ ಅಂಬೇಡ್ಕರ್ ರವರು ಹೇಳುವ ಈ ಕತೆ, ನಾಲ್ಕು ಆರ್ಯ ಸತ್ಯಗಳನ್ನು ಅವರು ಒಪ್ಪದಿರುವುದು, ಹಾಗೆ ಭಿಕ್ಕುಗಳನ್ನು ಸಮಾಜ ಸೇವಕರು ಎನ್ನುವ ಅವರ ವ್ಯಾಖ್ಯೆ ಅಕ್ಷರಶಃ ಬೌದ್ಧ ಧರ್ಮಕ್ಕೆ ಹೊಸ ರೂಪ ಕೊಡುತ್ತದೆ. ಈ ನಿಟ್ಟಿನಲ್ಲಿ ಆ ರೂಪವನ್ನು ನಾವು ನಿಸ್ಸಂಶಯವಾಗಿ ಅಂಬೇಡ್ಕರ್ ಹಾದಿ ಎನ್ನಬಹುದು, ಹೀನಯಾನ ಮತ್ತು ಮಹಾಯಾನದಂತೆ “ಅಂಬೇಡ್ಕರ್ ಯಾನ” ಎನ್ನಬಹುದು. ಬುದ್ಧನ ಹಾದಿಯಲ್ಲಿಂದು ಕೋಟ್ಯಂತರ ಜನರು ಸಾಗುತ್ತಿದ್ದಾರೆ. ಅದರಲ್ಲೂ ಶೋಷಿತ ಸಮುದಾಯಗಳ ಬಂಧುಗಳು ಬುದ್ಧನೆಡೆ ದಿಟ್ಟಹೆಜ್ಜೆ ಇಟ್ಟಿದ್ದಾರೆ. ಖಂಡಿತ, ಅಂತಹವರೆಲ್ಲರಿಗೆ ಅಂಬೇಡ್ಕರ್ ಯಾನ ಹೊಸ ಮಾರ್ಗ ಆಗಲಿದೆ ಹೊಸ ಬೆಳಕು ಆಗಲಿದೆ.
–ರಘೋತ್ತಮ ಹೊ.ಬ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

ದಿನದ ಸುದ್ದಿ
ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ
ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.
ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

-
ದಿನದ ಸುದ್ದಿ3 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ2 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ3 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ3 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ಅಂಕಣ1 day agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ1 day agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ


