Connect with us

ದಿನದ ಸುದ್ದಿ

ಸಂವಿಧಾನ ಸೃಷ್ಟಿಯ ಕತೆ..!

Published

on

  • ರಘೋತ್ತಮ ಹೊ.ಬ

Constituent Assembly ಅಥವಾ ಸಂವಿಧಾನ ಸಭೆಯ ಉಗಮದ ಇತಿಹಾಸವನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ 1945 ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ ಪರಿಹಾರ ಸೂಚಿಸಲು ಬ್ರಿಟಿಷರು ಮೂವರು ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ಭಾರತಕ್ಕೆ ಕಳುಹಿಸಿದರು.

ಆ ಸಮಿತಿಯ ಹೆಸರು ‘ಕ್ಯಾಬಿನೆಟ್ ಮಿಷನ್ ಆಯೋಗ’. ಸದರಿ ಆಯೋಗವು 1946 ಮಾರ್ಚ್ 16 ರಂದು ‘ಭವಿಷ್ಯದ ಭಾರತದ ಸರ್ಕಾರಕ್ಕಾಗಿ ಒಂದು ಸಂವಿಧಾನ ರಚಿಸಲು ಸಂವಿಧಾನ ಸಭೆಯೊಂದನ್ನು ರಚಿಸುವ ಅಗತ್ಯವಿದೆ’ ಎಂದು ಘೋಷಿಸಿತು. ಅಂತೆಯೇ ಆ ಸಭೆ ಪ್ರಜಾಸತ್ತಾತ್ಮಕವಾಗಿರಬೇಕೆಂಬ ನಿಟ್ಟಿನಲ್ಲಿ ವಿವಿಧ ಪ್ರಾಂತ್ಯಗಳ ಅಸೆಂಬ್ಲಿಗಳ ಮೂಲಕ ಸದಸ್ಯರನ್ನು ಆರಿಸಲಾಯಿತು.

ಆ ಸಭೆಗೆ ಭಾರತದ ಪಶ್ಚಿಮದ ತುದಿ ಬಾಂಬೆ ಪ್ರಾಂತ್ಯದಿಂದ ಸ್ಪರ್ಧಿಸಿದ್ದ ಅಂಬೇಡ್ಕರರು ಅಂದಿನ ರಾಜಕೀಯ ಪಕ್ಷಗಳ ಅವಿಚ್ಛಿನ್ನ ವಿರೋಧದಿಂದ ಸೋಲಬೇಕಾಯಿತು. ಆದರೂ, ಎದೆಗುಂದದೆ ಪೂರ್ವದ ದೂರದ ಬಂಗಾಳದಿಂದ ಅಲ್ಲಿಯ ಪರಿಶಿಷ್ಟ ಜಾತಿಯ ನಾಯಕ ಜೋಗೇಂದ್ರನಾಥ ಮಂಡಲ್‍ರ ಬೆಂಬಲದ ಮೂಲಕ ಅವರು ಸಂವಿಧಾನ ಸಭೆಗೆ ಆರಿಸಿ ಬರುವಲ್ಲಿ ಸಫಲರಾರದು.

ಒಟ್ಟಾರೆ 296 ಸದಸ್ಯ ಬಲದ ಮೂಲಕ ಸಂವಿಧಾನ ಸಭೆ ತನ್ನ ಪ್ರಥಮ ಸಭೆಯನ್ನು 1946 ಡಿಸೆಂಬರ್ 6ರ ಬೆಳಿಗ್ಗೆ 11ಗಂಟೆಗೆ ನವದೆಹಲಿಯ ಕಾನ್‍ಸ್ಟಿಟ್ಯೂಶನ್ ಹಾಲ್‍ನಲ್ಲಿ ಆರಂಭಿಸಿತು.

ಸಭೆ ಆರಂಭವಾದಾಗ ಒಟ್ಟು 296 ಸದಸ್ಯರಲ್ಲಿ ಭಾಗವಹಿಸಿದ್ದು 207 ಮಂದಿಯಷ್ಟೆ. ಇನ್ನುಳಿದ ಮಂದಿ ಅಂದಿನ ಮುಸ್ಲಿಂಲೀಗ್‍ಗೆ ಸೇರಿದವರಾಗಿದ್ದು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ಅವರೆಲ್ಲ ಗೈರುಹಾಜರಾಗಿದ್ದರು. ಹೀಗಿದ್ದರೂ ಪಂಡಿತ್ ಜವಹರಲಾಲ್ ನೆಹರೂ “ಭಾರತ ಸಾರ್ವಭೌಮ ಸ್ವತಂತ್ರ ಗಣರಾಜ್ಯವಾಗಲು ತನ್ನ ಭವಿಷ್ಯದ ಸರ್ಕಾರಕ್ಕಾಗಿ ಅದು ತನ್ನದೇ ಆದಂತಹ ಸಂವಿಧಾನವೊಂದನ್ನು ಹೊಂದುವುದನ್ನು ಬಯಸುತ್ತದೆ” ಎಂದು ಗೊತ್ತುವಳಿಯೊಂದನ್ನು ಮಂಡಿಸಿದರು.

ಆದರೆ ಸದಸ್ಯರಾದ ಎಂ.ಆರ್.ಜಯಕರ್ “ಸಭೆಗೆ ಮುಸ್ಲಿಂ ಲೀಗ್ ಮತ್ತು ಇತರೆ ರಾಜ ಸಂಸ್ಥಾನಗಳ ಸದಸ್ಯರು ಗೈರುಹಾಜರಾಗಿರುವುದರಿಂದ ಅವರೆಲ್ಲ ಭಾಗವಹಿಸುವಂತಾಗಲು ಈ ಸಭೆಯನ್ನು ಮುಂದೂಡಬೇಕು” ಎಂದು ತಮ್ಮ ಆಕ್ಷೇಪವ್ಯಕ್ತಪಡಿಸಿದರು ಮತ್ತು ನೆಹರೂರವರು ಮಂಡಿಸಿದ್ದ ಆ ಗೊತ್ತುವಳಿಯ ಚರ್ಚೆಯನ್ನು ಮುಂದೂಡಲು ಸಭೆಯ ಕಲಾಪಕ್ಕೆ ತಿದ್ದುಪಡಿಯೊಂದನ್ನು ಮಂಡಿಸಿದರು.

ಗೌರವಾನ್ವಿತ ಸದಸ್ಯರ ಇಂತಹ ಆಕ್ಷೇಪ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಆಶ್ಚರ್ಯವೆಂದರೆ ಈ ಸಮಯದಲ್ಲಿ ಇಂತಹ ಅನಿರೀಕ್ಷಿತ ಕೋಲಾಹಲದ ನಡುವೆ ಮುಂದುವರಿದ ಸಭೆಯಲ್ಲಿ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದ್‍ರವರು ಡಿಸೆಂಬರ್ 17 ರಂದು ಡಾ.ಅಂಬೇಡ್ಕರರನ್ನು ಸಭೆಯನ್ನುದೇಶಿಸಿ ಮಾತನಾಡಲು ಆಹ್ವಾನಿಸಿದರು.

ಸತ್ಯ ಹೇಳಬೇಕೆಂದರೆ ಯಾವ ಸಂವಿಧಾನ ಸಭೆ ನಿಂತುಹೋಗಬೇಕಿತ್ತೋ, ಅನಿರ್ದಿಷ್ಟ ಅವಧಿಗೆ ಮುಂದೂಡಬೇಕಾಗಿತ್ತೋ ಅದು ಮುಂದುವರಿಯಿತು! ಹೋಲಿಕೆ ಮಾಡುವುದಾದರೆ ಭಾರತದ ಸಂವಿಧಾನದ ಚಕ್ರ ಅಂಬೇಡ್ಕರರ ಮೂಲಕ ಉರುಳಲಾರಂಭಿಸಿತು! ಯಾಕೆಂದರೆ ತಮ್ಮ ಭಾಷಣದಲ್ಲಿ ಅಂಬೇಡ್ಕರರು ನೆಹರೂರವರು ಮಂಡಿಸಿದ್ದ ಗೊತ್ತುವಳಿಯ 8 ಅಂಶಗಳನ್ನು ಪದ ಪದವಾಗಿ, ಪದರು ಪದರಾಗಿ ಬಿಡಿಸಿ ಸಂವಿಧಾನ ಎತ್ತ ಸಾಗಬೇಕು, ಹೇಗಿರಬೇಕು ಎಂದು ವಿವಿಧ ರಾಷ್ಟ್ರಗಳ ಸಂವಿಧಾನಗಳನ್ನು ಉಲ್ಲೇಖಿಸುತ್ತಾ ಮಾರ್ಗ ತೋರಿಸಲಾಂಭಿಸಿ ಸಭೆಯನ್ನು ಗಂಭೀರತೆಯೆಡೆಗೆ ತಂದರು.

ಮುಸ್ಲಿಂಲೀಗ್ ಸದಸ್ಯರು ಗೈರಾಗಿದ್ದಕ್ಕೆ ಮುಂದಿನ ಸಭೆಯಲ್ಲಿ ಅವರು ಭಾಗವಹಿಸುತ್ತಾರೆ ಎಂಬ ಏಕತೆಯ ಆಶಾಭಾವ ವ್ಯಕ್ತಪಡಿಸುತ್ತಾ ಅಂಬೇಡ್ಕರರು “ವಿವಿಧ ಜಾತಿ-ಜನಾಂಗಗಳಾಗಿದ್ದಾಗ್ಯೂ ನಾವೆಲ್ಲಾ ಸದಾ ಒಂದಾಗಿರುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ” ಎಂದರು.

ಹೀಗೆ ತನ್ನ ಆರಂಭಿಕ ದಿನಗಳನ್ನು ಪ್ರಾರಂಭಿಸಿದ ಸಂವಿಧಾನಸಭೆ ಸರ್ದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ 1947 ಜನವರಿ 24 ರಂದು ಅಂಬೇಡ್ಕರರನ್ನು ಒಳಗೊಂಡಂತೆ 50 ಜನ ಸದಸ್ಯರ ಸಲಹಾ ಸಮಿತಿಯೊಂದನ್ನು ನೇಮಿಸಿತು. ಆ ಸಮಿತಿ ಇತರೆ 4 ಪ್ರಮುಖ ಉಪಸಮಿತಿಗಳನ್ನು ನಿಯುಕ್ತಿಗೊಳಿಸಿತು. ಅವುಗಳಲ್ಲಿ ಬಹುಮುಖ್ಯದ್ದೆಂದರೆ ಮೂಲಭೂತ ಹಕ್ಕುಗಳ ಉಪಸಮಿತಿ ಮತ್ತು ಅಲ್ಪಸಂಖ್ಯಾತರ ಉಪಸಮಿತಿ.

ಅಂಬೇಡ್ಕರರು ಈ ಎರಡೂ ಪ್ರಮುಖ ಸಮಿತಿಗಳ ಸದಸ್ಯರಾದರು. ಮುಂದುವರಿದು ಸಭೆ ಇನ್ನೂ 3 ಕಾರ್ಯಾಚರಣಾ ಸಮಿತಿಗಳನ್ನು ರಚಿಸಿತು. ಅವುಗಳೆಂದರೆ ..

  1. ಕೇಂದ್ರ ಅಧಿಕಾರ ಸಮಿತಿ
  2. ಕೇಂದ್ರ ಸಂವಿಧಾನ ಸಮಿತಿ
  3. ಪ್ರಾಂತ್ಯಗಳ ಸಂವಿಧಾನ ಸಮಿತಿ

ಇಲ್ಲಿಯೂ ಅಷ್ಟೆ ಅಂಬೇಡ್ಕರ್ ಕೇಂದ್ರ ಸಂವಿಧಾನ ಸಮಿತಿಯ ಸದಸ್ಯರಾದರು. ಹೀಗೆ ಅವರು ಪ್ರಮುಖ ಸಮಿತಿಗಳ ಸದಸ್ಯರಾಗುವುದಕ್ಕೆ ಕಾರಣವೂ ಇತ್ತು.

ಯಾಕೆಂದರೆ ಮುಂದೆ ಸಂವಿಧಾನ ಅರ್ಪಿಸುವ ಸಮಯದಲ್ಲಿ ಅವರೇ ಹೇಳಿಕೊಂಡಿರುವಂತೆ “ಪರಿಶಿಷ್ಟ ಜಾತಿಗಳ ಹಿತ ಕಾಯುವ ಮಹದಾಸೆ ಹೊತ್ತಷ್ಟೆ ತಾನು ಸಂವಿಧಾನ ಸಭೆಗೆ ಬಂದೆ…”. ಹೌದು, ಡಾ.ಅಂಬೇಡ್ಕರರು ಪರಿಶಿಷ್ಟರ ಹಿತ ಕಾಯುವ ನೆಪ ಮಾತ್ರಕ್ಕೆ ಬಂದರೂ ತಮಗರಿವಿಲ್ಲದಂತೆ ಅವರು ಇಡೀ ದೇಶದ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು! ಯಾವ ಪರಿ ಎಂದರೆ ಇಡೀ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಸಕ್ರಿಯರಾಗುವ ಮಟ್ಟಿಗೆ. ಅದೂ ಅದೆಂತಹ ಸಕ್ರಿಯತೆಯೆಂದರೆ ಶತೃಗಳೂ ಮೆಚ್ಚಿ ಅಹುದಹುದು ಎನ್ನುವ ಮಟ್ಟಿಗೆ!

ಏಕೆಂದರೆ ಸಂವಿಧಾನ ರಚನೆಯ ಇಂತಹ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡು ಸ್ವಾತಂತ್ರ್ಯದ ಸಮಯದಲ್ಲಿ ದೇಶ ವಿಭಜನೆಯ ಸಂದರ್ಭ ಬಂದಾಗ ಅಂಬೇಡ್ಕರರು ಗೆದ್ದಿದ್ದ ಬಂಗಾಳದ ಕ್ಷೇತ್ರ ಕಾಂಗ್ರೆಸ್ಸಿಗರ ತಂತ್ರದಿಂದಾಗಿ ಪೂರ್ವ ಪಾಕಿಸ್ತಾನಕ್ಕೆ ಸೇರಲ್ಪಟ್ಟು ಅವರ ಸದಸ್ಯತ್ವ ರದ್ದಾಯಿತು. ಸೋಜಿಗವೆಂದರೆ ಈ ಸಮಯದಲ್ಲಿ ಅಂಬೇಡ್ಕರರ ಸಂವಿಧಾನ ರಚನಾ ಚಾಕಚಕ್ಯತೆ ಕೆಲಸ ಮಾಡಿತು.

ಹೇಗೆಂದರೆ ಸ್ವತಃ ಸಭೆಯ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದರು 1947 ಜೂನ್ 30 ರಂದು ಬಾಂಬೆ ಪ್ರಾಂತ್ಯದ ಅಂದಿನ ಪ್ರಧಾನಿ ಡಾ.ಬಿ.ಜಿ.ಖೇರ್ ರವರಿಗೆ ಪತ್ರ ಬರೆದು “ಬೇರೆ ವಿಷಯಗಳೇನೆ ಇರಲಿ, ಸಂವಿಧಾನ ಸಭೆ ಮತ್ತದರ ವಿವಿಧ ಉಪಸಮಿತಿಗಳಲ್ಲಿ ಅಂಬೇಡ್ಕರರ ಕಾರ್ಯ ಎಂತಹ ಮಟ್ಟದ್ದೆಂದರೆ, ಖಂಡಿತ ಅವರ ಸೇವೆಯನ್ನು ನಾವು ಕಳೆದುಕೊಳ್ಳಬಾರದು. ಅದಕ್ಕಾಗಿ ಜುಲೈ 14ರ ಮುಂದಿನ ಸಭೆಯೊಳಗೆ he should be relected”ಎಂದರು! (Dr.Ambedkar: The Principal Architect of The Constitution of India, Published by Government of India. Pp.26)

ಹೌದು, ಬಾಬಾಸಾಹೇಬರು ತಕ್ಷಣ ಮರು ಆಯ್ಕೆಯಾದರು. ಹಾಗೇ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಕೂಡ ಸಿಕ್ಕಿತು ಮತ್ತು ಅವರು ಸ್ವತಂತ್ರ ಭಾರತದಲ್ಲಿ ನೆಹರೂ ಸಂಪುಟದಲ್ಲಿ ಕಾನೂನು ಸಚಿವರಾಗಿ ಕೂಡ ನೇಮಕಗೊಂಡರು. ಅಂದಹಾಗೆ ಆಗಸ್ಟ್ 29ರಂದು ಮರುಸಮಾವೇಶಗೊಂಡ ಸಂವಿಧಾನಸಭೆ ಸಹಜವಾಗಿ ಕಾನೂನು ಸಚಿವರಾದ ಡಾ.ಅಂಬೇಡ್ಕರರನ್ನು “ಸಂವಿಧಾನ ಪ್ರತಿ ರಚಿಸುವ ಸಮಿತಿ (drafting committee)”ಯ ಅಧ್ಯಕ್ಷರನ್ನಾಗಿ ಆರಿಸಿತು‌. ಜೊತೆಗೆ ಆರು ಮಂದಿ ಸದಸ್ಯರ ತಂಡ. ಒಟ್ಟಾರೆ ಸಂವಿಧಾನ ಸಭೆಯ ಇಂತಹ ನಡಾವಳಿಗಳ ಮೂಲಕ ಭಾರತದ ಭವಿಷ್ಯ ಬರೆವ ಕೆಲಸ ಬಾಬಾಸಾಹೇಬರ ಮುಡಿಗೇರಿತು.

ಸಂವಿಧಾನ ರಚನೆಯ ಜವಾಬ್ದಾರಿಯೇನೋ ಅಂಬೇಡ್ಕರರ ಮುಡಿಗೇರಿತು. ಆದರೆ ಆ ಜವಾಬ್ದಾರಿಯನ್ನು ಅವರು ನಿರ್ವಹಿಸಿದ ಪರಿ? ಖಂಡಿತ, ಅಂಬೇಡ್ಕರರು ಮತ್ತವರ ಸಂವಿಧಾನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಅವರು ಮತ್ತು ಇತರರು ಸಂವಿಧಾನ ಸಭೆಗಳಲ್ಲಿ ಮಾಡಿದ ಭಾಷಣಗಳಲ್ಲಿ ನಮಗೆ ಉಲ್ಲೇಖ ಸಿಗುತ್ತದೆ.

1949 ನವೆಂಬರ್ 25 ರಂದು ಡಾ.ಅಂಬೇಡ್ಕರರು ಸಂವಿಧಾನ ಸಮರ್ಪಿಸುತ್ತಾ ಮಾಡಿದ ಅಂತಿಮ ಭಾಷಣವನ್ನು ಉಲ್ಲೇಖಿಸುವುದಾದರೆ “ಮಾನ್ಯರೆ, ಸಂವಿಧಾನ ಸಭೆಯ ಕಾರ್ಯಕಲಾಪದ ಬಗ್ಗೆ ಹಿನ್ನೋಟ ನೋಡುವುದಾದರೆ 1946 ಡಿಸೆಂಬರ್ 9ರಿಂದ ಇಲ್ಲಿಯವರೆಗೆ ಸಂವಿಧಾನ ಸಭೆ ಸಮಾವೇಶಗೊಂಡು 2 ವರ್ಷ, 11 ತಿಂಗಳು, 17ದಿನಗಳು ಕಳೆಯುತ್ತಿವೆ. ಇದುವರೆಗೆ ಸಭೆ 11 ಸಮಾವೇಶಗಳನ್ನು ನಡೆಸಿದೆ.

ಈ 11 ಸಮಾವೇಶಗಳು 165 ದಿನಗಳನ್ನು ಬಳಸಿಕೊಂಡಿದೆ. ಈ 165 ದಿನಗಳಲ್ಲಿ 114 ದಿನಗಳನ್ನು ಸಭೆ ಕರಡು ಸಂವಿಧಾನವನ್ನು ಪರಿಗಣಿಸಲು ತೆಗೆದುಕೊಂಡಿದೆ. ಇನ್ನು ಕರಡು ಸಮಿತಿ ಅಥವಾ ಸಂವಿಧಾನ ರಚನಾ ಸಮಿತಿಯ ಬಗ್ಗೆ ಹೇಳುವುದಾದರೆ 1947 ಆಗಸ್ಟ್ 29 ರಂದು ಅದನ್ನು ಆಯ್ಕೆಮಾಡಲಾಯಿತು ಮತ್ತು ಅದು ತನ್ನ ಪ್ರಥಮ ಸಭೆಯನ್ನು 30ನೇ ಆಗಸ್ಟ್ ರಂದು ನಡೆಸಿತು. ಆಗಸ್ಟ್ 30 (1947) ರಿಂದ ಇಲ್ಲಿಯವರೆಗೆ ಸಮಿತಿ 141 ದಿನಗಳು ಸಭೆ ನಡೆಸಿ ಒಟ್ಟು ಈ ಅವಧಿಯನ್ನು ಕರಡು ಸಂವಿಧಾನವನ್ನು ತಯಾರಿಸಲು ಬಳಸಿಕೊಂಡಿದೆ” ಹೀಗೆ ವಿವರಿಸುತ್ತಾ ಹೋಗುತ್ತಾರೆ.

ಅಂದಹಾಗೆ ಬಾಬಾಸಾಹೇಬರ ನೇತೃತ್ವದ ಸಮಿತಿ ಸಿದ್ಧಪಡಿಸಿದ ಈ ಸಂವಿಧಾನ 1948 ಫೆಬ್ರವರಿ 26ರಂದು ಭಾರತ ಸರ್ಕಾರದ ಗೆಜೆಟ್‍ನಲ್ಲಿ ಪ್ರಕಟಗೊಂಡಿತು ಮತ್ತು ಹಾಗೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನದ ಆ ಪ್ರತಿ ತನ್ನ ಆರಂಭದ ಪುಟದಲ್ಲಿ ರಚನಾ ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರರು ಸಭೆಯ ಅಧ್ಯಕ್ಷರಿಗೆ ಬರೆದ ಪತ್ರವೊಂದನ್ನೂ ಕೂಡ ಒಳಗೊಂಡಿತ್ತು.

ಆ ಪತ್ರದ ಪ್ರಾರಂಭದ ಒಕ್ಕಣೆಯನ್ನು ಉಲ್ಲೇಖಿಸುವುದಾದರೆ “Dear Sir, On behalf of the Drafting Committee… I submit herewith the Draft of the new Constitution of India… I have been authorized to sign the Draft… Yours truly, B.R.AMBEDKAR”.

ಖಂಡಿತ, ಹೀಗೆ ಪ್ರತಿ ಅಕ್ಷರವನ್ನೂ ಉಲ್ಲೇಖಿಸುವ ಅಗತ್ಯವಿಲ್ಲ. ಆದರೂ ಕೆಲವು ಕೋಮುವಾದಿ ಕಿತಾಪತಿಗಳಿಸ್ಕೋರ ಇದನ್ನು ಉಲ್ಲೆಖಿಸಬೇಕಿದೆ. ಅಲ್ಲದೆ ಮತ್ತೊಂದು ಅಂಶವನ್ನು ಇಲ್ಲಿ ದಾಖಲಿಸಬೇಕಿದೆ. ಅದೆಂದರೆ ಫೆಬ್ರವರಿ 26, 1948 ರಂದು ಗೆಜೆಟ್‍ನಲ್ಲಿ ಪ್ರಕಟಗೊಂಡ ಭಾರತ ಸಂವಿಧಾನದ ಕರಡು ಪ್ರತಿ ಅಂಬೇಡ್ಕರರು ವಯಕ್ತಿಕವಾಗಿ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಸಮಿತಿಗೆ ತಮ್ಮ ಪಕ್ಷ ‘ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಪರವಾಗಿ ಮಾರ್ಚ್ 15, 1947 ರಂದು ಸಲ್ಲಿಸಿದ ಮನವಿಯ ಡಿಟೋ ಕಾಪಿಯಂತೇ ಇದೆ ಎಂಬುದು!

ಈ ನಿಟ್ಟಿನಲ್ಲಿ ಆಸಕ್ತರು ಅಂಬೇಡ್ಕರರ ಆ ಮನವಿಯನ್ನು ಅವರ ಬರಹಗಳು ಭಾಷಣಗಳ ಸಂಪುಟ 1ರಲ್ಲಿ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿರುವುದನ್ನು ನಾವು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಹೇಳಬಹುದು “ಭಾರತದ ಸಂವಿಧಾನ ಅಂಬೇಡ್ಕರರ ಮೆದುಳಿನ ಕೂಸು” ಎಂದು.

ಪ್ರಶ್ನೆಯೇನೆಂದರೆ ಗೆಜೆಟ್‍ನಲ್ಲಿ ಪ್ರಕಟಗೊಂಡ ಸಂವಿಧಾನ ಫೆಬ್ರವರಿ 26, 1948 ರಂದೇ ಜಾರಿಯಾಯಿತೇ? ಖಂಡಿತ ಇಲ್ಲ. ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಈ ದಿಸೆಯಲ್ಲಿ ಪ್ರಜೆಗಳ ಪ್ರತಿನಿಧಿಗಳ ನಡುವೆ ಅದು ಅಂದರೆ ಸಂವಿಧಾನ ಚರ್ಚೆಗೆ ಬರುವುದು ಬೇಡವೆ? ಹೌದು, 15 ನವೆಂಬರ್ 1948ರಲ್ಲಿ ಅನುಚ್ಛೇದ 1ರಿಂದ ಪ್ರಾರಂಭಿಸಿ 17 ಅಕ್ಟೋಬರ್ 1949ರವರೆಗೆ ಕೊನೆಯ ಅನುಚ್ಛೇದ ಅಂದರೆ ಅನುಚ್ಛೇದ 395ರವರೆಗೆ ಸಂವಿಧಾನ ಸಭೆ ಇಡೀ ಕರಡು ಸಂವಿಧಾನದ ಬಗ್ಗೆ ಭರಪೂರ ಚರ್ಚೆ ನಡೆಸಿತು.

ಆಶ್ಚರ್ಯ ಬೇಡ, ಈ ಇಷ್ಟೂ ದಿನಗಳಲ್ಲಿ ಪ್ರತಿಯೊಂದೂ ಅನುಚ್ಛೇದದ ಚರ್ಚೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಅಂಬೇಡ್ಕರರು ಗೌರವಾನ್ವಿತ ಸದಸ್ಯರ ಪ್ರತಿಯೊಂದು ಸಲಹೆಗೂ ಕಿವಿಯಾದರು ಮತ್ತು ಸಂಬಂಧಪಟ್ಟ ಅನುಚ್ಛೇದದ ಪದಪದದ ವಿವರಣೆ ನೀಡಿ ಸದಸ್ಯರ ಸಲಹೆಗಳನ್ನು ಗೌರವಯುತವಾಗಿ ಸ್ವೀಕರಿಸಿ ಅಗತ್ಯ ತಿದ್ದುಪಡಿಗಳನ್ನು ಅಂಗೀಕರಿಸಿದರು. ಈ ಸಂಬಂಧ ಅಂಬೇಡ್ಕರರು ನೀಡಿರುವ ಮಾಹಿತಿಯನ್ನೇ ದಾಖಲಿಸುವುದಾದರೆ “ಕರಡು ಸಂವಿಧಾನಕ್ಕೆ ಸೂಚಿಸಲಾದ ಒಟ್ಟು ತಿದ್ದುಪಡಿಗಳು 7635.

ಅವುಗಳಲ್ಲಿ ಅಂಗೀಕಾರಗೊಂಡಂತಹವು 2473”. ಒಟ್ಟಾರೆ ಇಂತೆಲ್ಲ ತಿದ್ದುಪಡಿಗಳ ನಂತರ 1949 ನವೆಂಬರ್ 17ರಂದು ಅಂತಿಮವಾಗಿ ಸಮಾವೇಶಗೊಂಡ ಸಂವಿಧಾನ ಸಭೆಯಲ್ಲಿ ಡಾ.ಅಂಬೇಡ್ಕರರು “ಅಧ್ಯಕ್ಷ ಮಹೋದಯರೇ, ಈ ಸಭೆ ಸ್ಥಿರೀಕರಿಸಿರುವ ಈ ಸಂವಿಧಾನವನ್ನು ಅಂಗೀಕರಿಸಬೇಕೆಂಬ ನಿರ್ಣಯವನ್ನು ನಾನು ಮಂಡಿಸುತ್ತೇನೆ” ಎನ್ನುತ್ತಿದ್ದಂತೆ ಇಡೀ ಸಭೆ ಹರ್ಷದ ಹೊನಲು ಹರಿಸಿ ಕರತಾಡನದೊಂದಿಗೆ ತನ್ನ ಒಪ್ಪಿಗೆ ಸೂಚಿಸಿತು. ಹಾಗೆಯೇ ಅಂಬೇಡ್ಕರರಿಗೆ ಅಭಿನಂದನೆಯ ಸುರಿಮಳೆಗಳು.

ಅವುಗಳಲ್ಲಿ ಒಂದಷ್ಟನ್ನು ದಾಖಲಿಸುವುದಾದರೆ ಮದ್ರಾಸಿನ ಮುನಿಸ್ವಾಮಿ ಪಿಳ್ಳೈ ಎಂಬುವವರು “ಪರಿಶಿಷ್ಟ ಜಾತಿಯು ನಂದನಾರ್, ತಿರುಪಳನಾಳ್ವರ್, ತಿರುವಳ್ಳುವರ್ ಹೀಗೆ ಶ್ರೇಷ್ಠ ಸಂತರನ್ನು, ಜ್ಞಾನಿಗಳನ್ನು ನೀಡಿದೆ. ನಿಸ್ಸಂಶಯವಾಗಿ ಡಾ.ಅಂಬೇಡ್ಕರರು ಅಂತಹವರ ಸಾಲಿಗೆ ಸೇರ್ಪಡೆಯಾಗುತ್ತಾರೆ. ಯಾಕೆಂದರೆ ಅವಕಾಶ ಸಿಕ್ಕರೆ ಪರಿಶಿಷ್ಟರು ಎಷ್ಟು ಎತ್ತರಕ್ಕೆ ಏರಬಲ್ಲರು ಎಂಬುದನ್ನು ಅಂಬೇಡ್ಕರರು (ತಮ್ಮ ಈ ಸಾಧನೆಯ ಮೂಲಕ) ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ”. ಇನ್ನು ಸೇಠ್ ಗೋವಿಂದದಾಸ್ ಎನ್ನುವವರು “ಡಾ.ಅಂಬೇಡ್ಕರರನ್ನು ‘ವರ್ತಮಾನ ಕಾಲದ ಮನು’ ಎನ್ನಬಹುದು” ಎನ್ನುತ್ತಾರೆ!

ಎಂ.ಅನಂತಶಯನಂ ಅಯ್ಯಂಗಾರ್ ಎನ್ನುವವರಂತೂ “ಯಾವ ವ್ಯಕ್ತಿ ನಮ್ಮನ್ನು ಟೀಕಿಸುವ ಮತ್ತು ಅನುಮಾನದಿಂದ ನೋಡುವ ಉದ್ದೇಶದಿಂದ ಸಭೆಗೆ ಬಂದರೋ, ಕಡೆಗೆ ಅವರೇ ಸಂವಿಧಾನದ ಹೊಣೆಹೊತ್ತುಕೊಂಡರು ಮತ್ತು ಅದನ್ನು ರಚಿಸಿದರು” ಎಂದರು! ಹಾಗೆ ಪಂಡಿತ್ ಠಾಕೂರ್ ದಾಸ್ ಭಾರ್ಗವ ಎಂಬುವವರು ಮಾತನಾಡುತ್ತಾ “ಡಾ.ಅಂಬೇಡ್ಕರರು ನಮ್ಮ ಹೃದಯಗಳಲ್ಲಿ ಇಂದು ಉನ್ನತ ಸ್ಥಾನ ಅಲಂಕರಿಸಿದ್ದಾರೆ” ಎನ್ನುವ ಮೂಲಕ ತಮ್ಮ ಅಭೂತಪೂರ್ವ ಪ್ರೀತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದುವರಿದು ಮತ್ತೋರ್ವ ಸದಸ್ಯರಾದ ಟಿ.ಪ್ರಕಾಶಂ‘”ತಮ್ಮ ಈ ಕಾರ್ಯದ ಮೂಲಕ ಡಾ.ಅಂಬೇಡ್ಕರರು ತಾವು ಗ್ರೇಟ್ ಬ್ರಿಟನ್ನಿನ ರಾಜನ ಸಲಹೆಗಾರನಾಗಿ ಅಲ್ಲಿಯ ಆಸ್ಥಾನ ವೂಲ್‍ಸ್ಯಾಕ್‍ನಲ್ಲಿ ಕುಳಿತುಕೊಳ್ಳುವಷ್ಟು ಸಮರ್ಥರು” ಎಂದು ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ. ಕಡೆಯದಾಗಿ ಶ್ರೀ ಹೆಚ್.ಜೆ.ಖಾಂಡೇಕರ್ ಎಂಬುವವರ ಹೇಳಿಕೆಯನ್ನು ದಾಖಲಿಸುವುದಾದರೆ “ಮಾನ್ಯರೆ, ನಾವು ಅಂಬೇಡ್ಕರರಂತಹ ಪ್ರತಿಭಾಶಾಲಿಯಿಂದ ರೂಪಿತಗೊಂಡ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಇಂದು ಕಾರ್ಯಾಚರಣೆಗಿಳಿಸುತ್ತಿದ್ದೇವೆ.

ಹಾಗೆ ಈ ಕಾನೂನನ್ನು ನಾನು ಮಹಾರ್ ಕಾನೂನು ಎನ್ನಲಿಚ್ಚಿಸುತ್ತೇನೆ ಯಾಕೆಂದರೆ ಡಾ.ಅಂಬೇಡ್ಕರರು ಮಹಾರ್ ಸಮುದಾಯದವರು ಮತ್ತು ಮುಂದೆ 1950 ಜನವರಿ 26ರಂದು ಈ ಕಾನೂನು ಉದ್ಘಾಟನೆಗೊಂಡಾಗ ನಾವು ಮನುವಿನ ಕಾನೂನಿನ ಬದಲು ಮಹಾರರ ಕಾನೂನನ್ನು ಹೊಂದುತ್ತೇವೆ. ಮನುವಿನ ಕಾನೂನಿನ ಅಡಿಯಲ್ಲಿ ಈ ದೇಶದಲ್ಲಿ ಸುಖ ನೆಮ್ಮದಿಯೇ ಇರಲಿಲ್ಲ, ಆದರೆ ಮಹಾರರ ಕಾನೂನು, ಖಂಡಿತ ಈ ದೇಶವನ್ನು ಸ್ವರ್ಗವನ್ನಾಗಿ ಮಾಡುತ್ತದೆ… ನನಗೆ ಭರವಸೆ ಆ ಇದೆ”.

ಖಂಡಿತ, ಸಂವಿಧಾನ ದಿನಾಚರಣೆಯ ಈ ಶುಭ ದಿನದಂದು ಡಾ.ಖಾಂಡೇಕರರ ಭರವಸೆ ಎಲ್ಲರದ್ದಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮತ್ತೆ ಬಂದರೂ ಅದೇ ಕೊರೋನ, ನಾವು ಹೆದರದಿರೋಣ

Published

on

  • ಡಾ॥ ಶ್ರೀನಿವಾಸ ಕಕ್ಕಿಲ್ಲಾಯ,ಡಾ॥ ಬಾಲಸರಸ್ವತಿ,
    ಮಂಗಳೂರು

ನಮ್ಮ ರಾಜ್ಯದ ಕೆಲವು ಭಾಗಗಳೂ ಸೇರಿದಂತೆ ದೇಶದ ಹಲವೆಡೆ ಕೊರೋನ ಸೋಂಕು ಮತ್ತೆ ಹರಡುತ್ತಿದೆ. ಅದಕ್ಕೆ ಸಂಭಾವ್ಯ ಕಾರಣಗಳು, ಪರಿಹಾರಗಳು ಏನು ಎಂದು ತಿಳಿದುಕೊಂಡರೆ ಹೆದರಿಕೊಳ್ಳುವ ಅಗತ್ಯವೇ ಬರುವುದಿಲ್ಲ.

ಮತ್ತೆ ಕೊರೋನ ಹರಡುತ್ತಿರುವುದೇಕೆ?

ಒಮ್ಮೆ ಕೊರೋನ ಸೋಂಕು ತಗಲಿ, ರೋಗಲಕ್ಷಣಗಳನ್ನು ಹೊಂದಿದ್ದು, ರೋಗ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡವರಿಗೆ ಮತ್ತೊಮ್ಮೆ ಕೊರೋನ ಸೋಂಕು ತಗಲುವುದಿಲ್ಲ. ಆದ್ದರಿಂದ ಈ ಹಿಂದೆ ಯಾರಿಗೆ ಸೋಂಕು ತಗಲಿಲ್ಲವೋ, ಅಂಥವರು ಈಗ ಸೋಂಕಿತರಾಗುತ್ತಿದ್ದಾರೆ. ನಗರಗಳಲ್ಲೇ ಈ ಸೋಂಕುಗಳು ಹೆಚ್ಚು ಸಂಭವಿಸುತ್ತಿವೆಯಾದರೂ, ಹಳ್ಳಿಗಳಲ್ಲೂ ಕಂಡುಬರುತ್ತಿವೆ.

ಕಳೆದ ಒಂದು ವರ್ಷದಿಂದ ಮನೆಯೊಳಗೇ ಇದ್ದ ಅನೇಕ ಹಿರಿಯ ವಯಸ್ಕರು ಮತ್ತು ವಸತಿ ಸಮುಚ್ಚಯಗಳ ನಿವಾಸಿಗಳು ಈಗ ಹೊರಬರುತ್ತಿರುವುದರಿಂದ, ಲಾಕ್‌ಡೌನ್ ಕಾರಣಕ್ಕೆ ತಮ್ಮ ಹಳ್ಳಿಗಳಿಗೆ ತೆರಳಿದ್ದವರು ಈಗ ಮತ್ತೆ ನಗರಕ್ಕೆ ಮರಳುತ್ತಿರುವುದರಿಂದ, ಮತ್ತೆ ಆರಂಭವಾಗಿರುವ ಸಭೆ, ಸಮಾರಂಭಗಳಲ್ಲಿ ಜನರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗುತ್ತಿರುವುದರಿಂದ ಒಮ್ಮಿಂದೊಮ್ಮೆಗೇ ಸೋಂಕು ಹರಡುವುದಕ್ಕೆ ಕಾರಣವಾಗುತ್ತಿವೆ. ಮಾರ್ಚ್ ತಿಂಗಳಿಂದ ಲಸಿಕೆಗಳನ್ನು ಪಡೆಯುವುದಕ್ಕೆಂದು ಹೊರಬಂದವರಲ್ಲಿ ಕೆಲವರೂ ಸೋಂಕಿಗೀಡಾಗುತ್ತಿದ್ದಾರೆ.

ಕೊರೋನ ಹರಡುವಿಕೆ ಕಡಿಮೆಯಾಯಿತೆಂದು ವೈದ್ಯರೂ, ಆಸ್ಪತ್ರೆಗಳೂ ಕೊರೋನ ಸೋಂಕಿತರನ್ನು ಪ್ರತ್ಯೇಕವಾಗಿ ಪರೀಕ್ಷಿಸುವ ವ್ಯವಸ್ಥೆಯನ್ನು ಬಿಟ್ಟು ಮೊದಲಿನಂತೆಯೇ ಎಲ್ಲರನ್ನೂ ಜೊತೆಯಾಗಿ ಇರಲು ಅವಕಾಶ ಮಾಡಿಕೊಟ್ಟಿರುವ ಸಾಧ್ಯತೆಗಳೂ ಇವೆ. ಈ ಕೊರೋನ ವೈರಸ್ ಶಾಶ್ವತವಾಗಿ ಇಲ್ಲಿರಲಿದೆ, ಎಷ್ಟೇ ಲಾಕ್‌ ಡೌನ್ ಇತ್ಯಾದಿ ಮಾಡಿದರೂ ಅದು ಹರಡದಂತೆ ತಡೆಯುವುದು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ.

ಕೊರೋನ ಮತ್ತೆ ಹರಡುತ್ತಿರುವಾಗ ಹಲವರಲ್ಲಿ ರೂಪಾಂತರಿತ ಬಗೆಗಳು ಕಂಡುಬರುತ್ತಿವೆ ಎನ್ನುವುದು ನಿಜವಿದ್ದರೂ, ಕೊರೋನ ವೈರಸ್‌ನಲ್ಲಿ ರೂಪಾಂತರಗಳಾಗುವುದು ನಿತ್ಯದ ಕ್ರಿಯೆಯಾಗಿರುವುದರಿಂದ ಆ ಬಗ್ಗೆ ಅಚ್ಚರಿ ಪಡಬೇಕಾಗಿಲ್ಲ, ಮಾತ್ರವಲ್ಲ, ಇವುಗಳಿಂದ ಕೊರೋನ ಹೆಚ್ಚು ಅಪಾಯಕಾರಿಯಾಗಿದೆ ಎನ್ನುವುದಕ್ಕೂ ಆಧಾರಗಳಿಲ್ಲ. ಆದ್ದರಿಂದ ಇದಕ್ಕೆ ವಿಶೇಷವಾದ ಮಹತ್ವವನ್ನು ನೀಡುವ ಅಗತ್ಯವಿಲ್ಲ.

ಒಟ್ಟಿನಲ್ಲಿ, ಕಳೆದ ಬಾರಿ ಸೋಂಕಿತರಾಗದೆ ಇದ್ದವರಲ್ಲಿ ಹಲವರು ಈಗ ಒಮ್ಮೆಗೇ ಸೋಂಕಿತರಾಗುತ್ತಿದ್ದಾರೆ, ಅದರಿಂದಾಗಿ ಸಮಸ್ಯೆಗೀಡಾಗುವವರ ಸಂಖ್ಯೆಯೂ ಒಮ್ಮೆಗೇ ಏರುತ್ತಿದೆ, ಆಸ್ಪತ್ರೆಗಳಲ್ಲಿ ಸ್ಥಳವಿಲ್ಲದೆ ಚಿಕಿತ್ಸೆಗೆ ಸಮಸ್ಯೆಗಳಾಗುತ್ತಿವೆ. ಆದರೆ ಅಷ್ಟೇ ಬೇಗನೆ, ಒಂದೆರಡು ತಿಂಗಳೊಳಗೆ, ಈ ಅಲೆಯು ಇಳಿಯುವ ಎಲ್ಲಾ ಸಾಧ್ಯತೆಗಳೂ ಇವೆ; ಈಗಾಗಲೇ ಇಂಥ ಏರಿಕೆಯನ್ನು ಅನುಭವಿಸಿರುವ ದೇಶಗಳಲ್ಲೂ ಹಾಗೆಯೇ ಆಗಿದೆ. ಈಗ ಸೋಂಕು ಮೊದಲಿಗಿಂತ ಹೆಚ್ಚು ಮಾರಕವಾಗಿರುತ್ತದೆ ಎಂಬ ಭಯವೂ ಅಗತ್ಯವಿಲ್ಲ; ಈ ಒಂದು ವರ್ಷದಲ್ಲಿ ನಮ್ಮ ದೇಶದಲ್ಲಿ ಕೊರೋನ ಸೋಂಕು ಹೇಗೆ ವರ್ತಿಸಿತ್ತೋ, ಯಾವ ವರ್ಗದ ಜನರಲ್ಲಿ ಸಮಸ್ಯೆಗಳನ್ನುಂಟು ಮಾಡಿತ್ತೋ, ಈ ಬಾರಿಯೂ ಹಾಗೆಯೇ ಅದು ವರ್ತಿಸಲಿದೆ.

ಈಗ ಕೊರೋನ ಸೋಂಕನ್ನು ಎದುರಿಸುವುದು ಹೇಗೆ?

ಜನರ ಜವಾಬ್ದಾರಿ: ವೈಯಕ್ತಿಕ ಎಚ್ಚರಿಕೆಯಿಂದ ಸೋಂಕು ಹರಡದಂತೆ ತಡೆಯುವುದು, ಸೋಂಕು ಉಲ್ಬಣಿಸದಂತೆ ತಡೆಯುವುದು, ಉಲ್ಬಣಿಸಿದರೆ ತಡ ಮಾಡದೆ ಚಿಕಿತ್ಸೆಗೆ ತೆರಳುವುದು.

ಸರಕಾರದ ಜವಾಬ್ದಾರಿ: ಜನರಿಗೆ ಧೈರ್ಯ ತುಂಬುವುದು, ಗಂಭೀರ ಸಮಸ್ಯೆಗಳಾದವರ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು, ಕಷ್ಟದಲ್ಲಿರುವವರಿಗೆ ನೆರವಾಗುವುದು

ಮಾಧ್ಯಮಗಳ ಜವಾಬ್ದಾರಿ: ವಸ್ತುನಿಷ್ಠ ಮಾಹಿತಿಯೊದಗಿಸಿ ಜನರಿಗೆ ಧೈರ್ಯ ತುಂಬುವುದು, ನೆರವಾಗುವುದು ಆದರೆ ಇಂದು ಆಗುತ್ತಿರುವುದು ಇದಕ್ಕೆ ತೀರಾ ವ್ಯತಿರಿಕ್ತ.

ಜನರು ಸೋಂಕಿನ ಬಗ್ಗೆ, ಅದನ್ನು ನಿಭಾಯಿಸುವ ಬಗ್ಗೆ ಸ್ಪಷ್ಟ ಅರಿವಿಲ್ಲದೆ ಭೀತಿ, ಗೊಂದಲ, ಹತಾಶೆಯಲ್ಲಿದ್ದಾರೆ;

ಸರಕಾರವು ಕೊರೋನ ನಿಯಂತ್ರಿಸುವುದಕ್ಕೆಂದು ಜನರನ್ನು ನಿಯಂತ್ರಿಸಲು ನಿಯಮಗಳನ್ನು ಮಾಡುತ್ತಿದೆ;

ಮಾಧ್ಯಮಗಳು ಎಲ್ಲವನ್ನೂ ಅತಿರಂಜಿತಗೊಳಿಸಿ ಭೀತಿ, ಗೊಂದಲಗಳನ್ನು ಹೆಚ್ಚಿಸುತ್ತಿವೆ.

ಕಳೆದ ವರ್ಷದಲ್ಲಿ ರಾಜ್ಯದಲ್ಲೇ ಮೂರು-ನಾಲ್ಕು ಕೋಟಿ ಜನರಿಗೆ ಕೊರೋನ ತಗಲಿದ್ದಾಗ ದೊರೆತಿದ್ದ ಅನುಭವವನ್ನು ಜಾಣ್ಮೆಯಿಂದ ಬಳಸಿಕೊಳ್ಳುವ ಬದಲಿಗೆ ಆಗ ಮಾಡಿರುವ ಎಲ್ಲಾ ತಪ್ಪುಗಳನ್ನು ಮತ್ತೆ ಮಾಡಲು ಈಗಾಗಲೇ ಹೊರಟಾಗಿದೆ. ಆದರೆ ಇನ್ನಷ್ಟು ತಪ್ಪುಗಳನ್ನು ಮಾಡುವ ಮುನ್ನ ಈ ಕೆಳಗಿನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದೊಳ್ಳೆಯದು:

-ಕೊರೋನ ಇಲ್ಲಿ ಶಾಶ್ವತ, ಅದರ ಹರಡುವಿಕೆಯನ್ನು ತಡೆಯುವುದು ಅಸಾಧ್ಯ. ಕೊರೋನ ನೆಪದಲ್ಲಿ ನಿತ್ಯಜೀವನವನ್ನು ಶಾಶ್ವತವಾಗಿ ಸ್ತಬ್ಧಗೊಳಿಸಲು ಸಾಧ್ಯವಿಲ್ಲ.

-ಒಂದು ವರ್ಷ ಕಾಲ ಬಗೆಬಗೆಯ ನಿರ್ಬಂಧಗಳನ್ನೂ, ಅನಿಶ್ಚಿತತೆಯನ್ನೂ ಹೇರಿದ್ದರಿಂದಾಗಿ ಮತ್ತು ಜನರಿಗೆ ಯಾವ ರೀತಿಯಲ್ಲೂ ನೆರವು ನೀಡದ್ದರಿಂದಾಗಿ ಜನರು ಕೈಯಲ್ಲಿ ಹಣವಿಲ್ಲದೆ ಕಂಗಾಲಾಗಿದ್ದಾರೆ. ಆದ್ದರಿಂದ ಈ ಬಾರಿ ಕೊರೋನದಿಂದ ತೀವ್ರ ಸಮಸ್ಯೆಗೀಡಾಗುವವರು ಇನ್ನಷ್ಟು ಕಷ್ಟಕ್ಕೀಡಾಗಲಿದ್ದಾರೆ.

-ಒಂದು ವರ್ಷದ ಅನುಭವದಿಂದ ಕಲಿತು ಕೊರೋನ ಚಿಕಿತ್ಸೆಗೆಂದು ವಿಶೇಷ ಸೌಲಭ್ಯಗಳನ್ನು ಮಾಡಬೇಕಿತ್ತು, ಆದರೆ ಅದಾಗಲಿಲ್ಲ. ಕಳೆದ ಬಾರಿ ಕೊರೋನ ಆರೈಕೆ ಕೇಂದ್ರಗಳನ್ನು ಮಾಡಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ 50% ಹಾಸಿಗೆ ಕಾದಿರಿಸಿದ್ದು ಹೆಚ್ಚೇನೂ ನೆರವಾಗಲಿಲ್ಲ.

-ಕೊರೋನ ತೊಡಗಿ ಒಂದು ವರ್ಷವಾದರೂ ಅದರ ಚಿಕಿತ್ಸೆಗೆ ವೈಜ್ಞಾನಿಕವಾದ ಮಾರ್ಗಸೂಚಿಯನ್ನು ಇನ್ನೂ ಸಿದ್ಧಪಡಿಸಿಯೇ ಇಲ್ಲ.

ಆದ್ಯತೆಗಳೇನಿರಬೇಕು?

1. ಕೊರೋನ ಸೋಂಕನ್ನು ನಿಯಂತ್ರಿಸುವುದು ಕಷ್ಟ ಎನ್ನುವುದನ್ನು ಒಪ್ಪಿಕೊಳ್ಳಬೇಕು

2. ಕೊರೋನ ಸೋಂಕಿತರು ಎಲ್ಲಿ, ಎಷ್ಟು ಯಾರು ಇದ್ದಾರೆ ಎಂದು ಬೆಂಬತ್ತುವ ಬದಲು ಕೊರೋನದಿಂದ ತೀವ್ರ ಸಮಸ್ಯೆಗಳಾಗದಂತೆ ತಡೆಯಲು, ತೊಂದರೆಗಳಾದವರನ್ನು ಕೂಡಲೇ ಗುರುತಿಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು.

3. ಯಾರಲ್ಲೇ ಆದರೂ ಯಾವುದೇ ಕೊರೋನ ರೋಗಲಕ್ಷಣಗಳು (ತಲೆ ನೋವು, ಮೈಕೈ ನೋವು, ಗಂಟಲು-ಮೂಗು ಕೆರೆತ, ಕೆಮ್ಮು, ವಾಸನೆ ತಿಳಿಯದಾಗುವುದು, ಭೇದಿ) ತೊಡಗಿದರೆ ಅದನ್ನು ಕೊರೋನ ಸೋಂಕೆಂದೇ ಪರಿಗಣಿಸಬೇಕು; ಅಂಥವರಲ್ಲಿ ಮತ್ತವರ ಸಂಪರ್ಕಿತರೆಲ್ಲರಲ್ಲಿ ಕೊರೋನ ಆರ್‌ಟಿಪಿಸಿಆರ್ ಅಥವಾ ಆರ್‌ಎಟಿ ಮಾಡಿಸುವ ಅಗತ್ಯವಿಲ್ಲ; ಯಾರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೋ ಅವರಿಗಷ್ಟೇ ಈ ಪರೀಕ್ಷೆ ಮಾಡಿಸಿದರೆ ಸಾಕು.

4. ಶೇ.99ಕ್ಕೂ ಹೆಚ್ಚು ಸೋಂಕಿತರಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲವಾದ್ದರಿಂದ, ಮತ್ತು ಸಮಸ್ಯೆಗಳಾಗುವುದಿದ್ದರೂ 7-10 ದಿನಗಳಲ್ಲಾಗುವುದರಿಂದ, ಎಲ್ಲಾ ಸೋಂಕಿತರನ್ನು ಅವರವರ ಮನೆಗಳಲ್ಲೇ ಉಳಿದು ನಿಗಾ ವಹಿಸುವಂತೆ ಮಾಡಬೇಕು. ಯಾವುದೇ ಸಮಸ್ಯೆಗಳಿಲ್ಲದವರು ಆಸ್ಪತ್ರೆಗಳಿಗೆ ಪರೀಕ್ಷೆಗಾಗಿ ಹೋದರೆ, ಅಥವಾ ದಾಖಲಾದರೆ, ಯಾರಿಗೆ ಅಗತ್ಯವೋ ಅವರಿಗೆ ಆಸ್ಪತ್ರೆ ಸೌಲಭ್ಯಗಳು ದೊರೆಯದಂತಾಗುತ್ತದೆ.

5. ತೀವ್ರ ಸಮಸ್ಯೆಗಳಾಗುವ ಲಕ್ಷಣಗಳು ತೊಡಗಿದೊಡನೆ ತಡ ಮಾಡದೆ ಸೂಕ್ತ ಚಿಕಿತ್ಸೆ ಪಡೆಯುವಂತೆ ಹೇಳಬೇಕು.

ಜನರೇನು ಮಾಡಬೇಕು?

ಸೋಂಕಿನ ಲಕ್ಷಣಗಳಿದ್ದವರು ಮಾಡಬೇಕಾದದ್ದು:

1. ಹೆಚ್ಚಿನವರಲ್ಲಿ ಕೊರೋನ ಸೋಂಕು ಗಾಳಿಯ ಮೂಲಕ, ಪರಸ್ಪರ ಹತ್ತಿರ, ಎದುರುಬದುರಾಗಿ, ಮಾತಾಡುವುದರಿಂದಲೇ (ಅಥವಾ ಕೆಮ್ಮು, ಸೀನುಗಳಿಂದ) ಹರಡುತ್ತದೆ, ಯಾವುದೇ ವಸ್ತುಗಳಿಂದ ಹರಡುವುದಿಲ್ಲ.

2. ಕೊರೋನ ಹರಡುವುದನ್ನು ತಡೆಯುವ ಪ್ರಾಥಮಿಕ ಜವಾಬ್ದಾರಿ ಸೋಂಕಿತರದ್ದೇ ಆಗಿದೆ. ಸೋಂಕಿನ ಲಕ್ಷಣಗಳಿರುವವರು ಆ ಕೂಡಲೇ (ತಲೆ ನೋವು ಇತ್ಯಾದಿ ತೊಡಗಿದೊಡನೆ) ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬೇಕು; ಮಾತಾಡುವುದನ್ನು ಕಡಿಮೆ ಮಾಡಬೇಕು, ಮೆತ್ತಗೆ ಮಾತಾಡಬೇಕು, ಮಾತಾಡುವಾಗ ಕನಿಷ್ಠ ಆರಡಿ ದೂರದಲ್ಲಿರಬೇಕು, ಅದು ಸಾಧ್ಯವಿಲ್ಲದಿದ್ದರೆ ಮಾಸ್ಕ್ ಧರಿಸಬೇಕು; ಆದರೆ ಅಂತರವನ್ನು ಕಾಯದೆ ಮಾಸ್ಕ್ ಮಾತ್ರ ಧರಿಸುವುದರಿಂದ ಸೋಂಕು ಹರಡುವುದನ್ನು ತಡೆಯುವುದಕ್ಕೆ ಸಾಧ್ಯವಾಗದು. ಕೆಮ್ಮುವಾಗ, ಸೀನುವಾಗ ತಮ್ಮ ತೋಳಿನಿಂದ ಮುಖವನ್ನು ಮುಚ್ಚಬೇಕು.

3. ಸೋಂಕಿನ ಲಕ್ಷಣಗಳಿರುವವರು ಕನಿಷ್ಠ 6-7 ದಿನ ತಮ್ಮ ಮನೆಗಳಲ್ಲಿ ಅಥವಾ ಕೊಠಡಿಗಳಲ್ಲಿ ಉಳಿಯಬೇಕು; ಕೆಲಸಕ್ಕೆ, ವೈದ್ಯರಲ್ಲಿಗೆ, ಆಸ್ಪತ್ರೆಗೆ, ಲ್ಯಾಬ್‌ಗೆ, ಔಷಧದ ಅಂಗಡಿಗೆ ಹೋಗಬಾರದು. ಸಾರ್ವಜನಿಕ ಸ್ಥಳಗಳಿಗೆ, ಸಭೆ-ಸಮಾರಂಭಗಳಿಗೆ ಹೋಗಲೇಬಾರದು.

4. ಮನೆಯಲ್ಲಿ ಉಳಿದಾಗ ತಮ್ಮ ವೈದ್ಯರಿಗೆ ಅಥವಾ ಸರಕಾರದ ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು.
5. ಮನೆಯಲ್ಲಿ ಯಾ ಕೊಠಡಿಯಲ್ಲಿ ಇತರರಿಂದ ಆರಡಿ ದೂರವನ್ನು ಸದಾ ಪಾಲಿಸಬೇಕು, ಮೇಲೆ ಹೇಳಿದ ಕ್ರಮಗಳನ್ನು ಪಾಲಿಸಬೇಕು. ಮನೆಯಲ್ಲಿ ಹಿರಿಯ ವಯಸ್ಕರು ಅಥವಾ ಅನ್ಯ ರೋಗಗಳುಳ್ಳವರು ಇದ್ದರೆ ಅವರನ್ನು ಪ್ರತ್ಯೇಕಿಸಬೇಕು.

6. ಸೋಂಕಿತರು ತಮ್ಮ ದೇಹಸ್ಥಿತಿಯ ಮೇಲೆ ನಿಗಾವಹಿಸಬೇಕು. ಕೊರೋನ ರೋಗವು ನಿಧಾನವಾಗಿ ಏಳೆಂಟು ದಿನಗಳಲ್ಲಿ ಉಲ್ಬಣಿಸುತ್ತದೆ, 10-12 ದಿನಗಳಲ್ಲಿ ತೀವ್ರಗೊಳ್ಳುತ್ತದೆ. ರೋಗಲಕ್ಷಣಗಳು ಹೆಚ್ಚುತ್ತಿದ್ದರೆ, ಬಳಲಿಕೆ, ಕೆಮ್ಮು ಹೆಚ್ಚಿ, ಉಸಿರಾಟದ ಸಮಸ್ಯೆಗಳು ತೊಡಗಿದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಎಲ್ಲರೂ ಪಲ್ಸ್ ಆಕ್ಸಿಮೀಟರ್ ಬಳಸಿ 2 ವಾರಗಳ ವರೆಗೆ ತಮ್ಮ ರಕ್ತದ ಆಮ್ಲಜನಕದ ಮಟ್ಟವನ್ನು ನೋಡಿಕೊಳ್ಳುತ್ತಿರಬೇಕು, ಅದು 95%ಕ್ಕಿಂತ ಕೆಳಗಿಳಿದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಆಸ್ಪತ್ರೆಗೆ ದಾಖಲಾಗಲು ಸಿದ್ಧರಾಗಬೇಕು.

7. ಕೊರೋನ ಸೋಂಕು ಯಾವುದೇ ಚಿಕಿತ್ಸೆಯಿಲ್ಲದೆ ತಾನಾಗಿ ವಾಸಿಯಾಗುವುದರಿಂದ ರೋಗವು ಉಲ್ಬಣಗೊಂಡರಷ್ಟೇ ಆಸ್ಪತ್ರೆಗೆ ಹೋದರೆ ಸಾಕಾಗುತ್ತದೆ, ಸಮಸ್ಯೆಗಳಾಗದವರು ಮನೆಯಲ್ಲೇ ಇದ್ದು ಗುಣ ಹೊಂದಬಹುದು.

ಇತರರು ವಹಿಸಬೇಕಾದ ಎಚ್ಚರಿಕೆಗಳು

1. ಕೊರೋನ ಸೋಂಕಿತರ ಮನೆಯವರು ಅವರಿಂದ ಆರಡಿ ಅಂತರವನ್ನು ಕಾಯ್ದುಕೊಳ್ಳಬೇಕು, ಮಾತುಕತೆಯನ್ನು ಕನಿಷ್ಠಗೊಳಿಸಬೇಕು.

2. ಬೇರೆಯವರ ಜೊತೆ ಮಾತಾಡುವಾಗಲೂ ಆರಡಿ ಅಂತರವನ್ನು ಕಾಯ್ದುಕೊಳ್ಳುವುದು ಒಳ್ಳೆಯದು.

3. ಸಭೆ-ಸಮಾರಂಭಗಳಲ್ಲಿ ಭಾಗಿಯಾಗುವಾಗಲೂ ಬೇರೆಯವರೊಡನೆ ಮಾತಾಡುವಾಗ ಅಂತರವನ್ನು ಕಾಯ್ದುಕೊಳ್ಳಬೇಕು; ಅಲ್ಲಿಂದ ಮನೆಗೆ ಮರಳಿದ ಬಳಿಕ ಕನಿಷ್ಠ ಐದು ದಿನಗಳ ಕಾಲ ತಲೆ ನೋವು, ಮೈಕೈ ನೋವು ಇತ್ಯಾದಿಗಳ ಬಗ್ಗೆ ನಿಗಾ ವಹಿಸಬೇಕು, ಮತ್ತು ಮನೆಯಲ್ಲಿ ಹಿರಿಯರು ಅಥವಾ ಅನ್ಯ ರೋಗಗಳುಳ್ಳವರು ಇದ್ದರೆ ಅವರಿಂದ ಅಂತರವನ್ನು ಕಾಯ್ದುಕೊಳ್ಳಬೇಕು.

4. ಎಲ್ಲೇ ಆಗಲಿ, ಕೊರೋನ ಸೋಂಕಿತರ ಸಂಪರ್ಕಕ್ಕೆ ಬಂದರೆ ಆ ಬಳಿಕ ರೋಗಲಕ್ಷಣಗಳು ಆರಂಭವಾಗುವುದನ್ನು ಸೂಕ್ಷವಾಗಿ ಗಮನಿಸಬೇಕು, ಇತರರಿಗೆ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಎಚ್ಚರಿಕೆಗಳನ್ನು ಪಾಲಿಸಬೇಕು.

5. ಕಳೆದ ಬಾರಿ ಕೊರೋನ ಸೋಂಕಿತರಾದವರು ಈ ಬಾರಿ ಮತ್ತೆ ಸೋಂಕಿತರಾಗುವ ಸಾಧ್ಯತೆಗಳು ಅತ್ಯಂತ ಅಪರೂಪ ಅಥವಾ ಇಲ್ಲವೆಂದೇ ಹೇಳಬಹುದು. ಆದ್ದರಿಂದ ಅಂಥವರು ಈ ಮೊದಲೇ ಪಲ್ಸ್ ಆಕ್ಸಿಮೀಟರ್ ಖರೀದಿಸಿದ್ದರೆ ಅವನ್ನು ಇತರರಿಗೆ ನೀಡಿ ನೆರವಾಗಬಹುದು. ಹಾಗೆಯೇ, ಸೋಂಕಿತರಿಗೆ ಅನ್ಯ ಸಹಾಯವನ್ನು ನೀಡುವುದಕ್ಕೂ ಮುಂದೆ ಬರಬಹುದು.

ಕೊರೋನ ರೋಗವು ಉಲ್ಬಣಿಸುವುದಕ್ಕೆ ದೇಹದ ರೋಗರಕ್ಷಣಾ ವ್ಯವಸ್ಥೆಯ ಅಪನಿಯಂತ್ರಣವೇ ಕಾರಣವಾಗಿದ್ದು, ಇಂದಿನ ಆಧುನಿಕ ಆಹಾರ ಮತ್ತು ವ್ಯಾಯಾಮಗಳೇ ಇಲ್ಲದ ಜೀವನ ಶೈಲಿಗಳೇ ಅದಕ್ಕೆ ಮುಖ್ಯ ಕಾರಣಗಳಾಗಿವೆ. ಆದ್ದರಿಂದ ಈ ಬಗ್ಗೆ ಜನರಿಗೆ ಮಾಹಿತಿಯೊದಗಿಸುವುದು ಅತ್ಯಗತ್ಯವಾಗಿದೆ.

ಸಕ್ಕರೆ, ಎಲ್ಲಾ ಸಿಹಿತಿನಿಸುಗಳು, ಹಣ್ಣುಗಳು ಮತ್ತು ಹಣ್ಣಿನ ರಸಗಳು, ಮೈದಾ, ಬ್ರೆಡ್, ಬಿಸ್ಕತ್ತು, ನೂಡಲ್ಸ್ ಇತ್ಯಾದಿ ಸಂಸ್ಕರಿತ ಆಹಾರಗಳನ್ನು ಮತ್ತು ಮದ್ಯಪಾನ ಹಾಗೂ ಧೂಮಪಾನಗಳನ್ನು ವರ್ಜಿಸುವಂತೆ ಅಥವಾ ಬಹಳಷ್ಟು ಕಡಿತಗೊಳಿಸುವಂತೆ ಜನರಿಗೆ ಹೇಳಲೇಬೇಕಾದ ಅಗತ್ಯವಿದೆ. ಈ ಕ್ರಮಗಳನ್ನು ಪಾಲಿಸಿದರೆ ಕೆಲವೇ ದಿನಗಳಲ್ಲಿ ದೇಹದ ಉರಿಯೂತವು ಇಳಿದು, ರೋಗರಕ್ಷಣಾ ವ್ಯವಸ್ಥೆಯ ನಿಯಂತ್ರಣವು ಸುಲಲಿತವಾಗುತ್ತದೆ.

ಹಾಗೆಯೇ ನಿಯತವಾದ ವ್ಯಾಯಾಮವೂ ಅಗತ್ಯವಾಗಿದ್ದು, ಲಾಕ್ ಡೌನ್ ಮತ್ತಿತರ ಕ್ರಮಗಳಿಂದ ಜನರನ್ನು ಮನೆಗಳೊಳಗೇ ಬಂಧಿಸಿಡುವುದರಿಂದ, ಕ್ರೀಡಾಂಗಣಗಳು, ಈಜು ಕೊಳಗಳು, ಜಿಮ್ ಮುಂತಾದ ವ್ಯಾಯಾಮ ಸೌಲಭ್ಯಗಳನ್ನು ಮುಚ್ಚುವುದರಿಂದ ವ್ಯಾಯಾಮಕ್ಕೆ ಅವಕಾಶವೇ ಇಲ್ಲವಾಗಿ ಕೊರೋನ ಉಲ್ಬಣಗೊಳ್ಳುವಂತಾಗುತ್ತದೆ ಎಂದು ಇದೀಗ ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ (2021;0:1-8) ನಲ್ಲಿ ಪ್ರಕಟವಾದ ದೊಡ್ಡ ಅಧ್ಯಯನವೊಂದರ ವರದಿಯಲ್ಲಿ ಹೇಳಲಾಗಿದೆ. ಸಂತುಲಿತವಾದ, ಸಕ್ಕರೆ-ಸಿಹಿರಹಿತವಾದ ಪಾರಂಪರಿಕ ಆಹಾರ ಹಾಗೂ ನಿಯತವಾದ ವ್ಯಾಯಾಮಗಳು ಕೊರೋನ ಸಮಸ್ಯೆಗಳ ವಿರುದ್ಧ ಅತ್ಯುತ್ತಮ ಲಸಿಕೆಗಳಾಗಿವೆ!

ಸರಕಾರವೇನು ಮಾಡಬೇಕು?

1. ಸರಕಾರವು ತಾನೇ ಕೊರೋನ ನಿಯಂತ್ರಿಸುತ್ತೇನೆ, ಎಲ್ಲರೂ ತಾನು ಹೇಳಿದ್ದನ್ನು ಪಾಲಿಸಬೇಕು ಎಂಬ ಧೋರಣೆಯನ್ನು ಬಿಡಬೇಕು. ಕೊರೋನ ಸೋಂಕು ವ್ಯಕ್ತಿಗಳೊಳಗೆ, ಪರಸ್ಪರ ಮಾತಾಡುವಾಗ, ಹೆಚ್ಚಾಗಿ ಮನೆಯೊಳಗೆಯೇ ಹರಡುವ ಸೋಂಕಾಗಿದ್ದು, ಅದನ್ನು ಸರಕಾರವು ನಿಯಂತ್ರಿಸಲು ಸಾಧ್ಯವಿಲ್ಲ. ಕೊರೋನ ಸೋಂಕು ಈಗ ಮನೆಮನೆಗಳನ್ನೂ, ಕೇರಿಕೇರಿಗಳನ್ನೂ ತಲುಪಿಯಾಗಿದೆ, ಮನೆಗಳೊಳಗೆ, ನೆರೆಹೊರೆಗಳಲ್ಲಿ ಹೆಚ್ಚಾಗಿ ಹರಡುತ್ತಿದೆ. ಲಾಕ್‌ಡೌನ್, ಮಳಿಗೆ, ಶಾಲೆ-ಕಾಲೇಜುಗಳ ಮುಚ್ಚುವಿಕೆಯಿಂದ ಕೊರೋನ ತಡೆಯಲು ಸಾಧ್ಯವೇ ಇಲ್ಲ ಎನ್ನುವುದು ಕೂಡ ಎಲ್ಲೆಡೆಯೂ ಸಾಬೀತಾಗಿದೆ. ಆದ್ದರಿಂದ ಅಂಥ ಕ್ರಮಗಳನ್ನು ಹೇರಿ ಮತ್ತಷ್ಟು ಕಷ್ಟ-ನಷ್ಟಗಳಿಗೆ ಕಾರಣವಾಗಬಾರದು.

2. ತೆರೆದೆಡೆಗಳ ಗಾಳಿಯಲ್ಲಿ, ರಸ್ತೆಯಲ್ಲಿ, ಕಾರಿನೊಳಗೆ ಕೊರೋನ ಸೋಂಕು ಹರಡುವುದಿಲ್ಲ, ಪರಸ್ಪರ ಎದುರುಬದುರಾಗಿ ಮಾತಾಡುವಾಗಲಷ್ಟೇ ಹರಡುತ್ತದೆ. ಎಲ್ಲೆಡೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದರಿಂದ, ಇಲ್ಲದಿದ್ದರೆ ದಂಡ ವಿಧಿಸುವುದರಿಂದ ಕೊರೋನ ನಿಯಂತ್ರಿಸಲು ಸಾಧ್ಯವಿಲ್ಲ. ಇಂಥ ಕ್ರಮಗಳು ಜನರಲ್ಲಿ ಗೊಂದಲವನ್ನೇ ಮೂಡಿಸಬಹುದಲ್ಲದೆ ಸೋಂಕನ್ನು ತಡೆಯಲು ನಿಜಕ್ಕೂ ಮಾಡಬೇಕಾದದ್ದು ಏನು ಎನ್ನುವುದನ್ನು ಮುಚ್ಚಿ ಹಾಕುತ್ತವೆ. ಆದ್ದರಿಂದ ಜನರಿಗೆ ಈ ವಿಷಯವನ್ನು ಸ್ಪಷ್ಟವಾಗಿ ತಿಳಿಸಿ, ಅವರ ಸಹಕಾರದಿಂದ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಬಹುದೇ ಹೊರತು ಜನರನ್ನು 1897ರ ಕಾನೂನನ್ನು ತೋರಿಸಿ ಬೆದರಿಸುವುದರಿಂದಲ್ಲ.

3. ಕೊರೋನ ಸೋಂಕಿನ ಲಕ್ಷಣಗಳಿರುವ ಎಲ್ಲರಲ್ಲೂ, ಅವರ ಸಂಪರ್ಕಕ್ಕೆ ಬಂದ ಎಲ್ಲರಲ್ಲೂ, ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸುವ, ಸೋಂಕಿತರು ಮತ್ತು ಸಂಪರ್ಕಿತರ ಬೆನ್ನು ಹತ್ತುವ ಕೆಲಸಗಳಿಂದಲೂ (ಟೆಸ್ಟ್, ಟ್ರಾಕ್) ಈ ಹಂತದಲ್ಲಿ ಯಾವ ಉಪಯೋಗವೂ ಆಗದು. ಕೊರೋನ ಸೋಂಕಿಗೆ ಯಾವ ಚಿಕಿತ್ಸೆಯೂ ಲಭ್ಯವಿಲ್ಲ, ಅಗತ್ಯವೂ ಇಲ್ಲ; ಆದ್ದರಿಂದ ಟ್ರೀಟ್ ಎನ್ನುವುದೂ ಅರ್ಥಹೀನವೇ ಆಗುತ್ತದೆ. ಇವೆಲ್ಲ ಕಾರಣಗಳಿಂದ ಈ ಟೆಸ್ಟ್, ಟ್ರಾಕ್, ಟ್ರೀಟ್ ಎಂಬ ಕಾರ್ಯಯೋಜನೆಯನ್ನು ಈ ಕೂಡಲೇ ನಿಲ್ಲಿಸಬೇಕು.

4. ಕೊರೋನ ಸೋಂಕಿನ ನಿಭಾವಣೆಯಲ್ಲಿ ನಿಜಕ್ಕೂ ಮಾಡಬೇಕಾದ ಒಂದೇ ಒಂದು ಕೆಲಸವೆಂದರೆ ರೋಗವು ಉಲ್ಬಣಗೊಳ್ಳದಂತೆ ತಡೆಯುವುದು ಮತ್ತು ರೋಗವು ಉಲ್ಬಣಿಸಿದವರನ್ನು ಕೂಡಲೇ ಗುರುತಿಸಿ ತಕ್ಷಣವೇ ಸೂಕ್ತವಾದ ಚಿಕಿತ್ಸೆಗೆ ವ್ಯವಸ್ಥೆಯನ್ನು ಕಲ್ಪಿಸುವುದು. ಅಂದರೆ ಕೊರೋನ ಸೋಂಕಿತರನ್ನು ಹುಡುಕುವುದರ ಬದಲಾಗಿ, ಕೊರೋನದಿಂದ ಸಮಸ್ಯೆಗಳಾಗದಂತೆ, ಸಾವುಗಳಾಗದಂತೆ ರಕ್ಷಿಸುವುದಕ್ಕಷ್ಟೇ ಆದ್ಯತೆಯನ್ನು ನೀಡಬೇಕು. ಜೊತೆಗೆ, ಕೊರೋನೇತರ ಕಾಯಿಲೆಗಳಿಗೆ, ಮತ್ತು ಉಳಿದೆಲ್ಲಾ ಆರೋಗ್ಯ ರಕ್ಷಣಾ ಕಾರ್ಯಗಳಿಗೆ ಆರೋಗ್ಯ ಸೇವೆಗಳು ಅಬಾಧಿತವಾಗಿ ಲಭ್ಯವಿರುವಂತೆ ಖಾತರಿ ಪಡಿಸಲೇ ಬೇಕು.

i. ಮೇಲೆ ಹೇಳಿದಂತೆ ಸೋಂಕಿನ ಲಕ್ಷಣಗಳಿರುವವರೆಲ್ಲರೂ ಮನೆಯಲ್ಲೇ ಉಳಿದು ಸಹಾಯವಾಣಿಗೆ ಕರೆ ಮಾಡುವಂತೆ ಮತ್ತು ಮೇಲೆ ಹೇಳಿದ ಕ್ರಮಗಳನ್ನು ಪಾಲಿಸುವಂತೆ ಪ್ರಚಾರ ಮಾಡುವುದು.

ii. ಸೋಂಕು ಬಿಗಡಾಯಿಸುವ ಸಾಧ್ಯತೆಗಳುಳ್ಳವರು ತಮ್ಮ ದೇಹಸ್ಥಿತಿಯ ಮೇಲೆ ನಿಗಾ ವಹಿಸುವಂತೆ ಉತ್ತೇಜಿಸುವುದು, ಅಗತ್ಯವಿದ್ದವರಿಗೆ ಅದಕ್ಕಾಗಿ ಪಲ್ಸ್ ಆಕ್ಸಿಮೀಟರ್ ಒದಗಿಸುವುದು.

iii. ಸೋಂಕಿತರನ್ನು, ಅದರಲ್ಲೂ ರೋಗವು ಉಲ್ಬಣಿಸಬಲ್ಲವರನ್ನು, ಅವರವರ ಮನೆಗಳಲ್ಲೇ ಪರೀಕ್ಷಿಸಲು ಸಂಚಾರಿ ಘಟಕಗಳನ್ನು ಏರ್ಪಡಿಸುವುದು; ಅವುಗಳಲ್ಲಿ ಆರೋಗ್ಯ ಕಾರ್ಯಕರ್ತರಿದ್ದು, ಪಲ್ಸ್ ಆಕ್ಸಿಮೀಟರ್ ಮತ್ತು ರಕ್ತದೊತ್ತಡ ಅಳೆಯುವ ಉಪಕರಣಗಳ ನೆರವಿನಿಂದ ಸಮಸ್ಯೆಗಳುಳ್ಳವರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

iv. ರಕ್ತದಲ್ಲಿ ಆಮ್ಲಜನಕದ ಮಟ್ಟವು 95% ಕ್ಕಿಂತ ಕೆಳಗಿಳಿಯುವುದು, ವಿಪರೀತ ಬಳಲಿಕೆ, ಉಸಿರಾಟದ ಕಷ್ಟಗಳಿರುವವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಅಂಥವರಲ್ಲೂ ಹೆಚ್ಚಿನವರಿಗೆ ಕೇವಲ ಆಮ್ಲಜನಕದ ವ್ಯವಸ್ಥೆ ಮಾಡಿದರಷ್ಟೇ ಸಾಕಾಗುತ್ತದೆ. ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ಅಥವಾ ಯಾವುದಾದರೂ ಆಸ್ಪತ್ರೆಯಲ್ಲಿ ಈ ವ್ಯವಸ್ಥೆಯನ್ನು ಮಾಡಬಹುದು.

ಹೆಚ್ಚಿನವರಿಗೆ ಇದಷ್ಟೇ ಸಾಕಾಗುವುದರಿಂದ, ಹೀಗೆ ವ್ಯವಸ್ಥೆ ಮಾಡಿದರೆ ಉನ್ನತ ಆಸ್ಪತ್ರೆಗಳ ಮೇಲೆ ಹೊರೆಯಾಗದಂತೆ ತಡೆಯಬಹುದು. ಆದರೆ ಇಂಥ ಕೇಂದ್ರಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಕೆಯಾಗುವುದನ್ನು ಖಾತರಿಪಡಿಸಬೇಕು. ಈ ಸೌಲಭ್ಯಗಳಲ್ಲಿ ದಾಖಲಾದವರಲ್ಲಿ ರೋಗವು ಬಿಗಡಾಯಿಸಿದರೆ ಕೂಡಲೇ ಉನ್ನತ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ.

v. ಗಂಭೀರ ಸ್ಥಿತಿಯಲ್ಲಿರುವವರನ್ನು ತೀವ್ರ ನಿಗಾ ಘಟಕ ಹಾಗೂ ಕೃತಕ ಉಸಿರಾಟದ ಸೌಲಭ್ಯಗಳುಳ್ಳ ಉನ್ನತ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಈ ರೋಗಿಗಳನ್ನು ಇತರ ರೋಗಿಗಳ ಜೊತೆಗಿರಿಸಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲದಿರುವುದರಿಂದ ಪ್ರತ್ಯೇಕ ಐಸಿಯು ವ್ಯವಸ್ಥೆ ಮಾಡಬೇಕಾಗುತ್ತದೆ. ಇದಕ್ಕಾಗಿ ಜಿಲ್ಲಾ ಕೇಂದ್ರಗಳಲ್ಲಿ ಒಂದು ಅಥವಾ ಹೆಚ್ಚು ಆಸ್ಪತ್ರೆಗಳನ್ನು ವಿಶೇಷವಾಗಿ ಸಜ್ಜುಗೊಳಿಸಬೇಕು.

ಕೊರೋನ ರೋಗವುಳ್ಳವರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಒದಗಿಸಲು ಸಾಧ್ಯವಿರುವ ಖಾಸಗಿ ಆಸ್ಪತ್ರೆಗಳಲ್ಲಷ್ಟೇ ಅಂಥ ವ್ಯವಸ್ಥೆಯನ್ನು ಮಾಡಬೇಕಲ್ಲದೆ, ಎಲ್ಲಾ ಆಸ್ಪತ್ರೆಗಳಲ್ಲಿ 50% ಹಾಸಿಗೆಗಳನ್ನು ಒದಗಿಸುವುದರಿಂದ ಕೊರೋನ ರೋಗಿಗಳಿಗೆ ಪ್ರಯೋಜನವಾಗದು, ಇತರ ರೋಗಿಗಳಿಗೂ ಸಮಸ್ಯೆಯಾಗುತ್ತದೆ. ಕೊರೋನ ತೀವ್ರ ನಿಗಾ ಘಟಕಗಳ ಲಭ್ಯತೆಯ ಮಾಹಿತಿಯು ಕೇಂದ್ರೀಕೃತವಾಗಿ ದೊರೆತರೆ ಒಳ್ಳೆಯದು.

vi. ಸರಕಾರಿ ಆಸ್ಪತ್ರೆಗಳನ್ನು ಕೊರೋನ ಸೋಂಕಿತರಿಗಷ್ಟೇ ಮೀಸಲಿಟ್ಟರೆ ಇತರೆಲ್ಲಾ ಬಡ ರೋಗಿಗಳಿಗೆ ಬೇರಾವ ಸಮಸ್ಯೆಗೂ ಚಿಕಿತ್ಸೆ ದೊರೆಯದಂತಾಗಿ ಅನ್ಯಾಯವಾಗುತ್ತದೆ. ಆದ್ದರಿಂದ ಯಾವುದಾದರೂ ಖಾಸಗಿ ಆಸ್ಪತ್ರೆಯನ್ನು ಸರಕಾರವೇ ವಹಿಸಿಕೊಂಡು ಕೊರೋನ ಆರೈಕೆಗೆ ಒದಗಿಸಬೇಕು.

vii. ಕೊರೋನ ಸೋಂಕಿನ ಚಿಕಿತ್ಸಾ ಕ್ರಮಗಳ ಬಗ್ಗೆ ಕಳೆದ ಮೇ ತಿಂಗಳಲ್ಲಿ, ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ, ರಾಜ್ಯ ಸರಕಾರವು ಪ್ರಕಟಿಸಿರುವ ಮಾರ್ಗಸೂಚಿಯು ಸಂಪೂರ್ಣವಾಗಿ ದೋಷಯುಕ್ತವಾಗಿದ್ದು, ಎಲ್ಲಾ ಸೋಂಕಿತರಲ್ಲಿ ಅನಗತ್ಯವಾದ ಪರೀಕ್ಷೆ ಹಾಗೂ ಔಷಧಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಈಗ ಕೊರೋನ ಸೋಂಕಿಗೆ ಯಾವ ಔಷಧವೂ ಉಪಯುಕ್ತವಲ್ಲ ಎನ್ನುವುದು ಸಾಬೀತಾಗಿ, ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕದ ಹಾಗೂ ಬ್ರಿಟಿಷ್ ಆರೋಗ್ಯ ಸೇವೆಗಳು ಆ ಬಗ್ಗೆ ಸ್ಪಷ್ಟವಾದ ಹೇಳಿಕೆಗಳನ್ನು ಪ್ರಕಟಿಸಿದ್ದರೂ ನಮ್ಮಲ್ಲಿ ಅದೇ ಆಧಾರರಹಿತವಾದ ಚಿಕಿತ್ಸಾ ಕ್ರಮವನ್ನು ಈಗಲೂ ಸೂಚಿಸಲಾಗುತ್ತಿದೆ.

ಈ ದೋಷಯುಕ್ತ ಮಾರ್ಗಸೂಚಿಯನ್ನು ಈ ಕೂಡಲೇ ಹಿಂಪಡೆದು, ಬ್ರಿಟಿಷ್ ಹಾಗೂ ಅಮೆರಿಕದ ಆರೋಗ್ಯ ಸೇವೆಗಳ ಮಾರ್ಗಸೂಚಿಯನ್ನೇ ಇಲ್ಲೂ ಅಳವಡಿಸಿಕೊಳ್ಳಬೇಕು. ಅದರನುಸಾರ, ತೀವ್ರ ಸಮಸ್ಯೆಗಳಾದವರಿಗೆ ಕೃತಕ ಉಸಿರಾಟ ಮತ್ತು ಇತರ ನೆರವನ್ನು ನೀಡುವ ಚಿಕಿತ್ಸೆ ಬಿಟ್ಟರೆ ಬೇರಾವ ಆಧಾರಹಿತವಾದ, ಅಪ್ರಯೋಜಕವಾದ ಚಿಕಿತ್ಸೆಗೂ ಅವಕಾಶವಿರಕೂಡದು. ಕ್ಲೋರೋಕ್ವಿನ್, ಅಜಿಥ್ರೋಮೈಸಿನ್, ಡಾಕ್ಸಿಸೈಕ್ಲಿನ್, ಫಾವಿಪಿರಾವಿರ್, ಒಸೆಲ್ಟಾಮಿವಿರ್, ಜಿಂಕ್, ವಿಟಮಿನ್ ಸಿ, ಕೋಲ್ಚಿಸಿನ್, ಐವರ್‌ಮೆಕ್ಟಿನ್ ಮುಂತಾದ ಯಾವ ಔಷಧಗಳೂ ಕೊರೋನ ವಿರುದ್ಧ ನೆರವಾಗುವುದಿಲ್ಲ.

ಎಲ್ಲರಿಗೂ ರೆಂಡಿಸಿವಿರ್ ನೀಡುವ ಅಗತ್ಯವೇ ಇಲ್ಲ; ಅದರ ಬಳಕೆಯನ್ನು ವೈಜ್ಞಾನಿಕ ಮಾರ್ಗಸೂಚಿಗಳಿಗನುಗುಣವಾಗಿ ನಿಯಂತ್ರಿಸಬೇಕು. ತೀವ್ರವಾದ ಸಮಸ್ಯೆಗಳಿದ್ದವರನ್ನು ಬಿಟ್ಟರೆ ಬೇರೆ ಯಾರಲ್ಲೂ ಸ್ಟೀರಾಯ್ಡ್ ಬಳಸಬಾರದು. ಯಾವುದೇ ಕಾರಣಕ್ಕೂ ಆಯುರ್ವೇದ, ಯುನಾನಿ, ಹೋಮಿಯೋಪತಿ ಇತ್ಯಾದಿ ಬದಲಿ ಚಿಕಿತ್ಸೆಗಳನ್ನು ಮುಂದೊತ್ತಿ ಮೋಸ ಮಾಡುವುದಕ್ಕೆ ಅವಕಾಶ ನೀಡಬಾರದು.

viii. ಮೃತ ದೇಹಗಳಿಂದ ಕೊರೋನ ಹರಡುವುದಿಲ್ಲ, ಕುಟುಂಬದವರಿಗೆ ಮೃತ ದೇಹಗಳನ್ನು ನೀಡುವುದಕ್ಕೆ ಯಾವುದೇ ತೊಡಕುಗಳಿಲ್ಲ ಎನ್ನುವುದು ಈಗ ಸುಸ್ಪಷ್ಟವಾಗಿದ್ದರೂ, ಅನೇಕ ಗೊಂದಲಗಳನ್ನು ಸೃಷ್ಟಿಸಿ ಜನರನ್ನು ಕಷ್ಟಕ್ಕೀಡು ಮಾಡಲಾಗುತ್ತಿದೆ. ಮೃತಪಟ್ಟ ಸಂದರ್ಭಗಳಲ್ಲಿ ಕೊರೋನ ಪರೀಕ್ಷೆಯ ವರದಿಯು ಕೇವಲ ಸಾವಿನ ಕಾರಣವನ್ನು ದಾಖಲಿಸುವುದಕ್ಕಷ್ಟೇ ಅಗತ್ಯವೇ ಹೊರತು ಅಂತ್ಯಕ್ರಿಯೆಗಳ ವಿಧಿವಿಧಾನಗಳಲ್ಲಿ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ.

ಆದ್ದರಿಂದ, ಮೃತದೇಹಗಳ ಬಗ್ಗೆ ವಹಿಸಬೇಕಾದ ಸರಳ ಜಾಗರೂಕತೆಗಳನ್ನು ತಿಳಿಸಿಕೊಟ್ಟು, ವರದಿಗಾಗಿ ಕಾಯದೆ, ಅವನ್ನು ಮನೆಯವರಿಗೆ ನೀಡುವಂತಾಗಬೇಕು. ಎಲ್ಲಾ ಮೃತರ ಅಂತ್ಯಕ್ರಿಯೆಗಳನ್ನು ಮನೆಮಂದಿಯೇ ನಡೆಸಬಹುದಾಗಿದ್ದು, ಸರಕಾರವು ಆ ಕೆಲಸವನ್ನು ವಹಿಸಿಕೊಳ್ಳುವ ಅಗತ್ಯವೇ ಇಲ್ಲ. ಕೊರೋನದಿಂದ ಮೃತರಾದವರ ಅಂತ್ಯಕ್ರಿಯೆಗಳಿಗೆ 30-35 ಸಾವಿರ ವಿಧಿಸುತ್ತಿರುವ ಬಗ್ಗೆ ವರದಿಗಳಾಗಿದ್ದು, ಈ ದುರಿತ ಕಾಲದಲ್ಲಿ ಇಂಥ ಅನ್ಯಾಯಗಳಿಗೆ ಅವಕಾಶ ನೀಡಬಾರದು. ಬದಲಿಗೆ, ಎಲ್ಲಾ ಸ್ಮಶಾನಗಳಲ್ಲೂ, ಚಿತಾಗಾರಗಳಲ್ಲೂ ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನೂ, ನೆರವನ್ನೂ ಸರಕಾರವೇ ಒದಗಿಸಬೇಕು.

ಮಾಧ್ಯಮಗಳೇನು ಮಾಡಬೇಕು?

ಈ ಒಂದು ವರ್ಷದಲ್ಲಿ ಕೊರೋನ ಬಗ್ಗೆ ಇಲ್ಲಸಲ್ಲದ ಭಯವನ್ನು ಹುಟ್ಟಿಸಿ, ಸಾಮಾಜಿಕ ಚಟುವಟಿಕೆಗಳನ್ನೂ, ಶಾಲೆ-ಕಾಲೇಜುಗಳನ್ನೂ ಮುಚ್ಚುವಂತೆ ಬೊಬ್ಬಿಟ್ಟು, ಚಿಕಿತ್ಸೆಯ ಬಗ್ಗೆ ಗೊಂದಲಗಳನ್ನು ಹರಡಿದ ಮಾಧ್ಯಮಗಳು ಇನ್ನಾದರೂ ತಮ್ಮ ಹೊಣೆಯರಿತು ವರ್ತಿಸಬೇಕಾಗಿದೆ. ಕೊರೋನ ಬಗ್ಗೆ ಜನರಿಗೆ ವಸ್ತುನಿಷ್ಠ ಮಾಹಿತಿಯನ್ನು ನೀಡುವುದು, ಆಯಾ ಊರುಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆಯು ಲಭ್ಯವಾಗುವಂತೆ ನೆರವಾಗುವುದು, ಅಂತ್ಯಕ್ರಿಯೆಗಳನ್ನು ನಡೆಸುವುದಕ್ಕೆ ನೆರವಾಗುವುದು ಇವೇ ಮೊದಲಾದ ಜನಪರ ಕೆಲಸಗಳನ್ನು ಅವು ಮಾಡಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಡೀಲರ್ಶಿಪ್‍ಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಮಂಗಳೂರು ರೆಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ಭಾರತ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ರಿಟೇಲ್ ಔಟ್‍ಲೆಟ್‍ಗಳನ್ನು ತೆರೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿ ತಣಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಸ್‍ಹೆಚ್76 ರಸ್ತೆಯಲ್ಲಿ, ಜಗಳೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಚಳ್ಳಕೆರೆ ಗೇಟ್ ಬಸ್ ನಿಲ್ದಾಣದ 2 ಕಿ.ಮಿ ಒಳಗೆ ಜಗಳೂರು ದಾವಣಗೆರೆ ಮಾರ್ಗದ ಎಸ್‍ಹೆಚ್ 65 ರಸ್ತೆಯಲ್ಲಿ ಮತ್ತು ಜಗಳೂರು-ಕೊಟ್ಟೂರು ಮಾರ್ಗದಲ್ಲಿನ 02 ಕಿ.ಮಿ ಒಳಗೆ ನೆಹರು ರಸ್ತೆಯಲ್ಲಿ, ಚನ್ನಗಿರಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎನ್‍ಹೆಚ್ 369 ರಸ್ತೆಯಲ್ಲಿ.

ಇದನ್ನೂ ಓದಿ | ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಹಳೇಬಾತಿಯ ತುಂಗಭದ್ರ ಬಡಾವಣೆ ಹತ್ತಿರದಲ್ಲಿ, ಸವಳಂಗ ಪಂಚಾಯತ್ ವ್ಯಾಪ್ತಿಯ ಸವಳಂಗ-ನ್ಯಾಮತಿ ಎಸ್‍ಹೆಚ್ 52 ರಸ್ತೆಯಲ್ಲಿ, ಮುದಹದಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಮನೂರು-ಮಲೆಬೆನ್ನೂರು ರಸ್ತೆಯಲ್ಲಿ ರಿಟೇಲ್ ಔಟ್‍ಲೆಟ್‍ಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಏಪ್ರಿಲ್ 23 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.mrpl.co.in ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಿಲ್ಲಾ ಕಚೇರಿ ವತಿಯಿಂದ 2019-20ನೇ ಸಾಲಿನ ವಿಶೇಷ ಕೇಂದ್ರಿಯ ನೆರವಿನಡಿ (ಎಸ್‍ಸಿಎ ಯಿಂದ ಎಸ್‍ಸಿಎಸ್‍ಪಿ) ಜಿಲ್ಲೆಯ ಪರಿಶಿಷ್ಟ ಜಾತಿಯ ನಿರುದ್ಯೋಗ ವಿದ್ಯಾವಂತ ಯುವಕ-ಯುವತಿಯರಿಗೆ ಉಚಿತವಾಗಿ ತರಬೇತಿ ಕಾರ್ಯಕ್ರಮವನ್ನು ದಾವಣಗೆರೆಯ ಕಿಯೋನಿಕ್ಸ್ ಸಂಸ್ಥೆ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ಅಕೌಂಟಿಂಗ್ ಮತ್ತು ಟ್ಯಾಲಿ, ಕಂಪ್ಯೂಟರ್ ಪ್ರೋಗ್ರಾಮರ್ ತರಬೇತಿ, ಕಾಲ್‍ಸೆಂಟರ್ ತರಬೇತಿ 50 ಅಭ್ಯರ್ಥಿಗಳಿಗೆ. ಕಂಪ್ಯೂಟರೈಸ್ಡ್ ಫ್ಯಾಷನ್ ಡಿಸೈನಿಂಗ್ ಹಾಗೂ ಟೈಲರಿಂಗ್ ತರಬೇತಿ 44 ಅಭ್ಯರ್ಥಿಗಳಿಗೆ. ಡಿಜಿಟಲ್ ಮಾರ್ಕೆಟಿಂಗ್ 110 ಜನ, ಸೈಬರ್ ಸೆಕ್ಯೂರಿಟಿ-100, ಹಾಗೂ 250 ಅಭ್ಯರ್ಥಿಗಳಿಗೆ ಆಂಡ್ರಾಯಿಡ್ ಟ್ರೈನಿಂಗ್ (ಸ್ಮಾರ್ಟ್ ಮೊಬೈಲ್ ಫೋನ್) ತರಬೇತಿ ಉಚಿತವಾಗಿ ಆಯೋಜಿಸಲಾಗಿದೆ.

ಇದನ್ನೂ ಓದಿ | ಸಾಮಾಜಿಕ ಸಂವರ್ಧನೆಗೆ ಸಾಹಿತ್ಯಿಕ ಚರ್ಚೆ ಅವಶ್ಯ : ಹಿರಿಯ ಸಾಹಿತಿ ಡಾ. ಎಂ. ಜಿ. ಈಶ್ವರಪ್ಪ

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಏ.9 ರಂದು ಅಂಬೇಡ್ಕರ್ ನಿಗಮದ ಜಿಲ್ಲಾ ಕಚೇರಿಯಲ್ಲಿ ಉಚಿತವಾಗಿ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು ಏ.30 ರೊಳಗೆ ಅಗತ್ಯ ಶೈಕ್ಷಣಿಕ ಅಂಕ ಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್‍ನೊಂದಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ನಂ.337/16ಎ-16 ಗಣೇಶ್ ಲೇಔಟ್ 1ನೇ ಕ್ರಾಸ್, ಪಿ.ಬಿ.ರಸ್ತೆ, ದಾವಣಗೆರೆ. ದೂರವಾಣಿ ಸಂಖ್ಯೆ: 08192-258647 ಕ್ಕೆ ಸಂಪರ್ಕಿಸಬಹುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending