Connect with us

ಅಂತರಂಗ

ಅರಿಮೆಯ ಅರಿವಿರಲಿ-7 : ಕುಮಾರ ಕಾಮ

Published

on

ಚಿತ್ರಕಲೆ : ಹಜರತ್ ಅಲಿ
  • ಯೋಗೇಶ್ ಮಾಸ್ಟರ್

ಹಗ್ಗದ ಕೊನೆಗಳು

ಪ್ರೇಮ ಮತ್ತು ಕಾಮಗಳ ನಡುವೆ ಅದೆಷ್ಟೇ ಅಂತರವನ್ನು ಕಾಯ್ದುಕೊಂಡಿದ್ದರೂ, ಅಥವಾ ವ್ಯತ್ಯಾಸವನ್ನು ಕಂಡುಕೊಂಡಿದ್ದರೂ ಅವೆರಡೂ ಕೆಲವೊಮ್ಮೆ ಬೆರೆತುಕೊಂಡುಬಿಡುತ್ತವೆ. ಕಾರಣ ಈವೆರಡೂ ಒಂದೇ ಹಗ್ಗದ ಎರಡು ಕೊನೆಗಳೇ ಹೊರತು, ಎರಡು ಪ್ರತ್ಯೇಕ ಹಗ್ಗಗಳ ತುಂಡುಗಳಲ್ಲ. ಪ್ರೇಮಿಗಳಲ್ಲೂ ಗಮನಿಸಿ ಪವಿತ್ರ ಪ್ರೇಮದ ಬಗ್ಗೆ ಮಾತಾಡುತ್ತಲೇ, ವೈವಾಹಿಕ ಜೀವನದ ಬಗ್ಗೆ ಕನವರಿಸುತ್ತಲೇ ಹಗ್ಗ ಜಗ್ಗಾಟದಲ್ಲಿ ಯಾವಾಗಲೋ ಒಮ್ಮೆ ಮಧ್ಯದ ಗೆರೆಯನ್ನು ದಾಟುವಂತೆ ಯಾರೋ ಒಬ್ಬರು ಎಳೆದುಬಿಟ್ಟಿರುತ್ತಾರೆ. ಮತ್ತೊಬ್ಬರಲ್ಲೂ ಎಳೆಸಿಕೊಳ್ಳುವ ತವಕ ಗುಪ್ತವಾಗಿರುತ್ತದೆ. ಅದು ಪ್ರವೃತ್ತಿ. ಇದು ಇಲ್ಲವೇ, ಯಾವುದೇ ಕಾರಣದಿಂದ ಹಗ್ಗ ತುಂಡಾಗಿಬಿಟ್ಟಿರುತ್ತದೆ.

ಸರೀ, ಈ ಹಗ್ಗವ್ಯಾವುದು ಗೊತ್ತೇ? ಆನಂದ.
ಇರಲಿ, ಸಧ್ಯಕ್ಕೆ ಇಷ್ಟು ತಿಳಿದುಕೊಳ್ಳೋಣ. ಕಾಮ ಮತ್ತು ಪ್ರೇಮದ ಮೂಲದ್ರವ್ಯ ಆನಂದ. ಕಾಮವೂ ಆನಂದಕ್ಕಾಗಿಯೇ, ಪ್ರೇಮವೂ ಆನಂದಕ್ಕಾಗಿಯೇ. ಪ್ರೇಮಕ್ಕೂ ಮತ್ತು ಕಾಮಕ್ಕೂ ಸಧ್ಯಕ್ಕೆ ಕಣ್ಗಾವಲು ಎಂದರೆ ವ್ಯಕ್ತಿಯ ಪಾತ್ರ, ಹಾಗೂ ನೀತಿಸಂಹಿತೆಯನ್ನು ನೀಡುವುದೆಂದರೆ ಅದು ಹೊಣೆಗಾರಿಕೆ. ಅಂದರೆ ಪ್ರೇಮ ಮತ್ತು ಕಾಮದ ನಿರ್ವಹಣೆಯಲ್ಲಿ ಅಥವಾ ಅನುಭವದಲ್ಲಿ ಶಿಷ್ಟ ಅಥವಾ ಕ್ರಮಬದ್ದ ಸಮಾಜದಲ್ಲಿ ನಿರೀಕ್ಷಿಸಬೇಕಾಗಿರುವುದೇನೆಂದರೆ ಪಾತ್ರವರಿತ ಹೊಣೆಗಾರಿಕೆ ಅಥವಾ ಹೊಣೆಗಾರಿಕೆಯನ್ನರಿತ ಪಾತ್ರ. ಎರಡೂ ಒಂದೇ. ಅಳಿಯ ಅಲ್ಲ ಮಗಳ ಗಂಡ ಅಷ್ಟೇ. ಒಟ್ಟಾರೆ ಈ ಎಚ್ಚರಿಕೆ ಪ್ರೇಮ ಮತ್ತು ಕಾಮವು ದಿಕ್ಕು ದಾರಿ ಮತ್ತು ಗುರಿ ತಪ್ಪದಂತೆ ನೋಡಿಕೊಳ್ಳುತ್ತದೆ.

ಪಾತ್ರನಿರ್ವಹಣೆಯ ಹೊಣೆಗಾರಿಕೆ

ನಾನು ಮತ್ತು ಅವಳು ಇಬ್ಬರೂ ವ್ಯಕ್ತಿಗಳು. ಈ ಇಬ್ಬರ ವ್ಯಕ್ತಿಗಳು ಪರಸ್ಪರ ಯಾವ ಪಾತ್ರಗಳನ್ನು ನಿರ್ವಹಿಸುತ್ತಾ ಸಂಬಂಧಿಸಿಕೊಂಡಿದ್ದೇವೆ? ನಮ್ಮ ನಮ್ಮ ಪಾತ್ರಗಳು ವಿಧಿಸಿಕೊಂಡಿರುವ ಅಥವಾ ವಿಧಿಸಿರುವ ಹೊಣೆಗಾರಿಕೆಯನ್ನು ಸಮರ್ಥವಾಗಿ ಮತ್ತು ಗೊಂದಲ ಅಥವಾ ಸಂಘರ್ಷಗಳಿಲ್ಲದೇ ನಿಭಾಯಿಸಬೇಕೆಂದರೆ ಹಗ್ಗದ ಯಾವ ತುದಿಯನ್ನು ಹಿಡಿದುಕೊಳ್ಳಬೇಕು? ಆನಂದವು ಕ್ಷೋಭೆಗೊಳ್ಳದಿರಲು ಯಾವ ಕ್ರಮವನ್ನು ಪಾಲಿಸಬೇಕು? ಇದೇ ಪಾತ್ರಗಳು ತಮ್ಮ ಹೊಣೆಗಾರಿಕೆಯನುಸಾರವಾಗಿ ತೆಗೆದುಕೊಳ್ಳಬೇಕಾದ ತರಬೇತಿ. ಮಗುವೊಂದಕ್ಕೆ ಸಮಾಜವು ಈ ತರಬೇತಿಯನ್ನು ಭಾವನಾತ್ಮಕವಾಗಿಯೂ, ಮಾನಸಿಕವಾಗಿಯೂ ಹಾಗೂ ಭೌತಿಕವಾಗಿಯೂ ರೂಢಿಗೊಳ್ಳುವಂತೆ ನೀಡುತ್ತದೆ.

ಆದರೆ ಮನುಷ್ಯನು ಹುಟ್ಟುತ್ತಲೇ ತರಬೇತಿಯನ್ನು ಹೊಂದಿಲ್ಲದ ಕಾರಣ ಅವನು ಸ್ವಾಭಾವಿಕವಾಗಿ ನೈಸರ್ಗಿಕ ಪಶುವಿನಂತೆ ಪ್ರವೃತ್ತಿಗಳನ್ನು ಹೊಂದಿರುತ್ತಾನೆ. ಹಾಗಾಗಿಯೇ ತಾಯರಿಮೆ, ತಂದೆಯರಿಮೆ ಇತ್ಯಾದಿ ಅರಿಮೆಗಳು ಸಣ್ಣ ಮಗುವಿದ್ದಾಗ ಕಾಣುತ್ತವೆ, ನಂತರ ಶಿಷ್ಟ ಸಮಾಜದ ತರಬೇತಿಗೆ ಒಳಗಾಗುತ್ತಿದ್ದಂತೆ ಅವು ಮರೆಯಾಗುತ್ತವೆ.ವ್ಯಕ್ತಿಯಿಂದ ವ್ಯಕ್ತಿಗೆ ಕಲಿಕೆಯ ಸಾಮರ್ಥ್ಯದಲ್ಲಿ ವ್ಯತ್ಯಾಸವಿರುವಂತೆ, ಗ್ರಹಣಾಶಕ್ತಿಯಲ್ಲಿ ವ್ಯತ್ಯಾಸಗಳಿರುವಂತೆ, ಮನಸ್ಸೆಂಬ ವಿದ್ಯುತ್ಚಕ್ತಿಯ ಪ್ರವಹಿಸುವಿಕೆಯಲ್ಲಿ ವ್ಯತ್ಯಯವಾಗುವಂತೆ; ಮಾನಸಿಕ ಸ್ಥಿತಿಗಳೂ ಏಕಪ್ರಕಾರವಾಗಿ ನಿರಂತರ ಪ್ರವಹನೆಯಲ್ಲಿರುವುದಿಲ್ಲ. ಯಾವುದ್ಯಾವುದೋ ಪ್ರಭಾವಗಳು, ಪ್ರೇರಣೆಗಳು, ಸ್ಪಂದನೆಗಳು ಒಂದಿಷ್ಟು ಅಷ್ಟು ವ್ಯತ್ಯಾಸಗಳಾಗುವಂತೆ ಮಾಡುತ್ತವೆ. ಅದೇನೂ ಪ್ರಮಾದವಲ್ಲ. ಹಾಗಾಗುವುದು ಸ್ವಾಭಾವಿಕ.

ಆದರೆ, ಈ ವ್ಯತ್ಯಾಸದಲ್ಲೇ ಆನಂದವನ್ನು ಕಂಡುಕೊಂಡು ಅದನ್ನೇ ಗಟ್ಟಿಗೊಳಿಸಿಕೊಂಡುಬಿಟ್ಟರೆ ಕ್ರಮಗೊಳಿಸಿರುವ ಶಿಷ್ಟ ಸಮಾಜದ ವ್ಯವಸ್ಥೆಯು ಶಿಥಿಲಗೊಳ್ಳುವುದು ಮತ್ತು ಗೊಂದಲಗಳೂ ಹಾಗೂ ಸಂಘರ್ಷಗಳೂ ಆಗುವವು. ಹಲವು ಬಗೆಯ ವ್ಯಕ್ತಿಗಳೆಲ್ಲರೂ ಹಲವು ಬಗೆಯ ವ್ಯತ್ಯಾಸಗಳ ಮೇಲೆ ಹಕ್ಕು ಸ್ಥಾಪನೆ ಮಾಡಲು ಹೋದರೆ ಇಡೀ ಕ್ರಮವೇ ಪಲ್ಲಟಗೊಂಡು ಎಲ್ಲವೂ ಅಯೋಮಯವಾಗುವುದೆಂದು ನೈತಿಕ ಚೌಕಟ್ಟನ್ನು ವಿಧಿಸಿರುವುದು. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ; ಹೀಗೆ ಹಲವು ಪ್ರಕಾರಗಳಲ್ಲಿ ಮನಸ್ಸಿನ ವ್ಯತ್ಯಯಗಳನ್ನು ಅಂಕೆಯಲ್ಲಿಡಲು ಸಾಮಾಜಿಕ ವ್ಯವಸ್ಥೆಯು ಹೆಣಗಾಡುವುದು.

ಇರಲಿ, ಈಗ ನಾವು ಇಷ್ಟರಮಟ್ಟಿಗೆ ಈ ವ್ಯತ್ಯಾಸ ಅಥವಾ ವ್ಯತ್ಯಯಗಳನ್ನು ಕಂಡುಕೊಂಡು ಏನೋ ಒಂದು ಹೈಪೊಥೀಸಿಸ್ ಮಾಡುತ್ತಿದ್ದೇವೆ. ಆದರೆ ಈ ಕ್ರಮವರಿತ ತರಬೇತಿಗಳ ಅಗತ್ಯವನ್ನು ಕಂಡುಕೊಳ್ಳುವ ಮುನ್ನವೂ ನಮ್ಮ ಮಾನವನ ಬದುಕಿತ್ತಲ್ಲಾ! ಆಗಲೂ ಲೈಂಗಿಕ ಚಟುವಟಿಕೆಗಳು ನಡೆಯುತ್ತಿತ್ತಲ್ಲ! ಪ್ರೇಮವೋ, ಕಾಮವೋ ಎಂತದ್ದೋ ಆನಂದವನ್ನು ಪಡೆಯಲು ವ್ಯಕ್ತಿ ವ್ಯಕ್ತಿಗಳ ಸೆಳೆತವಿತ್ತಲ್ಲ! ಅವೆಲ್ಲವೂ ಇವತ್ತಿದ್ದಂತೆಯೇ ಇದ್ದಿರಲು ಸಾಧ್ಯವೇ ಇಲ್ಲ. ಈಗಿರುವುದನ್ನು ಮಾನವ ಸಮಾಜದ ವಯಸ್ಕ ಭಾಗ ಎನ್ನುವುದಾದರೆ ಈ ಮಾನವ ಸಮಾಜಕ್ಕೆ ಬಾಲ್ಯವೂ ಇದ್ದಿರಬೇಕಲ್ಲ?

ಪ್ರೌಢ ಸಮಾಜಕ್ಕೆ ಬಾಲ್ಯವಿಲ್ಲವೇ?

ಆ ಸಮಾಜದ ಬಾಲ್ಯದಲ್ಲಿ ಮನೋಲೈಂಗಿಕ ಸಂಘರ್ಷಗಳು ಇರಲಿಲ್ಲ. ಮನಸ್ಸಿಗೆ ಸಂಘರ್ಷವು ಪ್ರಾರಂಭವಾಗುವುದೇ ಕಟ್ಟುಪಾಡುಗಳಿಗೆ ಒಳಗಾದಾಗ. ಅದಕ್ಕೆ ಮುಕ್ತ ಅಭಿವ್ಯಕ್ತಿ ಸಾಧ್ಯವಾಗದಿದ್ದಾಗ, ಅದರ ಆಸೆ ಮತ್ತು ಅಗತ್ಯಗಳನ್ನು ಸ್ವತಂತ್ರವಾಗಿ ಹಾಗೂ ಸಮರ್ಥವಾಗಿ ಪೂರೈಸಿಕೊಳ್ಳಲು ನಿರ್ಬಂಧಗಳಿದ್ದಾಗ.

ಮಾನವನ ಪ್ರಾರಂಭಿಕ ಸಮುದಾಯದ ಬದುಕಿನಲ್ಲಿ ನಿರ್ಬಂಧಗಳಿರಲಿಲ್ಲ. ಸಂಬಂಧಗಳ ಕಟ್ಟುಪಾಡುಗಳಿರಲಿಲ್ಲ. ಅವನ ಜೀವಿತಕ್ಕೆ ಇದ್ದಂತಹ ಮಾದರಿಯೆಂದರೆ ಅವು ಪ್ರಾಣಿಗಳು. ಪ್ರಾಣಿಗಳ ಬದುಕೇ ನಮ್ಮ ಬದುಕೂ ಆಗಿತ್ತು. ಆ ಪ್ರಾಣಿಗಳಲ್ಲಿ ಅಮ್ಮ, ಅಪ್ಪ, ಅಜ್ಜ, ಅಜ್ಜಿ, ಸೋದರ ಮಾವ, ಅಳಿಯ, ಸೊಸೆ, ಗಂಡ ಹೆಂಡತಿ ಇವೆಲ್ಲವೂ ಇಲ್ಲ. ಈಗ ನಾವು ಗುರುತಿಸಿಕೊಂಡು ಕರೆದರೆ ಅವುಗಳ ಗಂಟೇನೂ ಹೋಗುವುದಿಲ್ಲ. ಅವುಗಳದೇನೂ ಅಭ್ಯಂತರವಿಲ್ಲ. ಆದರೆ ನೀನು ತಾಯಿ ನಾಯಿ, ಮಗನಾಗಿರುವ ನಾಯಿಯ ಜೊತೆ ಸಂಭೋಗ ಮಾಡಬೇಡ ಎಂದರೆ ಅವು ಕೇಳುವುದಿಲ್ಲ. ನೀವಿಬ್ಬರೂ ಸೋದರ ಸೋದರಿಯರು ನೀವಿಬ್ಬರು ಪ್ರೀತಿಸಬಹುದೇ ಹೊರತು ಲೈಂಗಿಕ ಕ್ರಿಯೆ ನಡೆಸಬಾರದು ಎಂಬ ಕಟ್ಟಳೆಯು ಪ್ರಾಣಿಗಳಲ್ಲಿ ಸಮ್ಮತವಿಲ್ಲ.ಅಷ್ಟೇಕೆ ನಮ್ಮ ಚಾರಿತ್ರಿಕ ನೆನಪುಗಳಲ್ಲಿ ಪುರಾತನ ಗ್ರೀಸಿನ ರಾಜಮನೆತನಗಳಲ್ಲಿ ಸೋದರ ಸೋದರಿಯರು ವಿವಾಹವಾಗುತ್ತಿದ್ದರು ಮತ್ತು ಮಕ್ಕಳನ್ನು ಪಡೆಯುತ್ತಿದ್ದರು.

ಜೊಕಾಸ್ಟ ಕಾಂಪ್ಲೆಕ್ಸ್

ತನ್ನ ಮಗುವಿನ ಕುರಿತಾದ ತಾಯಿಯ ಪ್ರೇಮವು ಕಾಮವಾಗಿ ಮಾರ್ಪಾಡಾಗುವುದನ್ನು ಮಗನರಿಮೆ ಅಥವಾ ಜೊಕಾಸ್ಟ ಕಾಂಪ್ಲೆಕ್ಸ್ ಎಂದು ಮನೋವಿಜ್ಞಾನದಲ್ಲಿ ಗುರುತಿಸುತ್ತಾರೆ. ಇದಕ್ಕೆ ಜೊಕಾಸ್ಟ ಕಾಂಪ್ಲೆಕ್ಸ್ ಎನ್ನುವ ಬದಲು ನಾವೂ ನಮ್ಮ ಕನ್ನಡದ ಐತಿಹ್ಯಗಳಲ್ಲಿ ಸಿಗುವಂತಹ ಕಥೆಗಳನ್ನು ಆಧರಿಸಿ ಹೆಸರಿಡಲು ಹೋದರೆ ಕುಮಾರ ಕಾಮ ಎನ್ನಬಹುದು. ಕುಮಾರ ರಾಮನ ಕಥೆಯಲ್ಲಿ ಅವನ ಮಲತಾಯಿಯು ಕುಮಾರ ರಾಮನನ್ನು ಕಾಮಿಸುತ್ತಾಳೆ. ಅದರಂತೆಯೇ ಅದರ ತದ್ರೂಪದ ಕತೆಯಂತಿರುವ ಸತ್ಯವಂತ ಸಾರಂಗಧರನದೂ ಇದೇ ಪ್ರಸಂಗವೇ.

ರಾಮನಗರದ ಕಡೆಗಿರುವ ಜಾನಪದ ಐತಿಹ್ಯ. ಕುಮಾರ ರಾಮನ ತಾಯಿಯಾಗಲಿ, ಅಥವಾ ಸಾರಂಗಧರನ ತಾಯಿಯಾಗಲಿ ಅವರವರ ಮಲತಾಯಿಯರು. ಮಲತಾಯಿಯಾದರೂ ಅವಳ ಪಾತ್ರ ತಾಯಿಯದು. ಹೆತ್ತ ತಾಯಿಯಷ್ಟು ನಿರ್ವಹಿಸಲು ಅಲ್ಲಿ ಅವಕಾಶವಿಲ್ಲವಾದರೂ, ಸಮಾಜದ ನಿರೀಕ್ಷೆ ಮತ್ತು ಅಪೇಕ್ಷೆ ತಾಯಿಯ ಪಾತ್ರವನ್ನು ನಿರ್ವಹಿಸುವುದು.

ಸಮಾಜದ ನಿರೀಕ್ಷೆ ಮತ್ತು ಅಪೇಕ್ಷೆಗಳನ್ನು ಪೂರೈಸಲು ಕೆಲವಷ್ಟು ಪಾತ್ರ ನಿರ್ವಹಣೆ ಮಾಡಲು ಸಾಧ್ಯವಿಲ್ಲದೇ ಹೋಗುವುದಕ್ಕೆ ಅವರದೇ ಆದಂತಹ ಕಾರಣಗಳಿರುತ್ತವೆ. ನಾವು ಬರಿಯ ಶಿಷ್ಟ ಚೌಕಟ್ಟಿನಲ್ಲಿ ಅಳೆದು ಬಸಿದು ಬಿಸಾಡಲಾಗದು. ಕುಮಾರ ರಾಮನ ಅಥವಾ ಸಾರಂಗಧರನ ಮಲತಾಯಿಯರಿಬ್ಬರೂ ವಯಸ್ಸಿನಲ್ಲಿ ಕಿರಿಯರೂ ಮತ್ತು ತಾವು ಮದುವೆಯಾದ ವ್ಯಕ್ತಿಯು ಒಂದು ಹಂತಕ್ಕೆ ವೃದ್ಧನೂ ಆಗಿದ್ದನು. ಜೊತೆಗೆ ಮನುಷ್ಯ ಸ್ವಾಭಾವಿಕವಾಗಿಯೇ ಹೆಚ್ಚೂ ಕಡಿಮೆ ತಮ್ಮದೇ ವಯಸ್ಸಿನ ಮಗನ ಜೊತೆಗೆ ಹಗ್ಗದ ಪ್ರೇಮದ ಕೊನೆಯಿಂದ ಕಾಮದ ಇನ್ನೊಂದು ಕೊನೆಗೆ ಬರುವುದು ವಿಚಿತ್ರವೋ ಅಥವಾ ಅಸಹಜವೋ ಅಲ್ಲ. ಆ ಅಂತರವನ್ನು ಕಾಪಾಡಿಕೊಳ್ಳುವುದು ಅವರ ತರಬೇತಿಯ ಅಥವಾ ರೂಢಿಯ ಸಾಮರ್ಥ್ಯವಷ್ಟೇ ಆಗಿರುತ್ತದೆ.

ಏನೇ ಆಗಲಿ, ಜೊಕಾಸ್ಟಾ ಕಾಂಪ್ಲೆಕ್ಸ್ ಅಥವಾ ಕುಮಾರ ಕಾಮವನ್ನು ಸಿಗ್ಮಂಡ್ ಫ್ರಾಯ್ಡ್ ನಾನಾ ರೀತಿಗಳಲ್ಲಿ ವಿವರಿಸಲು ಯತ್ನಿಸುತ್ತಾರೆ. ಮಗುವು ತಾಯಿಯ ಮೊಲೆ ಹಾಲು ಕುಡಿಯುವಾಗ ತಾಯಿಯು ಲೈಂಗಿಕಾನಂದವನ್ನು ಪಡೆಯುತ್ತಾಳೆ ಎಂದೂ ಹೇಳುತ್ತಾರೆ. ಆದರೆ ನಾನದನ್ನು ಬರಿಯ ಆನಂದಕ್ಕೆ ಸೀಮಿತಗೊಳಿಸಲು ಯತ್ನಿಸುತ್ತೇನೆ. ಫ್ರಾಯ್ಡ್‍ಅಂತೆ ಮೈಯನ್ನೆಲ್ಲಾ ಲಿಂಗಮಯಗೊಳಿಸಿಕೊಳ್ಳುವ ಬದಲು ಆನಂದಮಯಗೊಳಿಸಿಕೊಂಡರೆ ಸರಿ ಹೋಗುವುದು ಎಂಬುದು ನನ್ನ ಅಭಿಪ್ರಾಯ.

ಏಕೆಂದರೆ ಕಾಮ ಅಥವಾ ಆನಂದವೆನ್ನುವುದರ ಮೂಲ ಲಿಂಗ ಮಾತ್ರವಲ್ಲ. ಲಿಂಗವೂ ಕೂಡಾ ಕಾಮುಕತೆಯ ಏಕೈಕ ಮೂಲವಲ್ಲ. ಲಿಂಗದ ಹೊರತಾಗಿ ದೇಹದ ವಿವಿಧ ಭಾಗಗಳು ವಿವಿಧ ವ್ಯಕ್ತಿಗಳಿಗೆ ಲೈಂಗಿಕಾನಂದದ ಸರಕುಗಳೇ ಆಗಿರುತ್ತವೆ. ಅದು ಅವರವರ ಅಭಿರುಚಿ, ಆಸಕ್ತಿ, ಸಮಸ್ಯೆ, ಅರಿಮೆ; ಏನೋ ಒಂದು.
ಹಾಗೆಯೇ ಸಂಬಂಧಗಳಲ್ಲಿ ಬರಿಯ ಆನಂದದ ವಾಸನೆಯನ್ನು ಮಾತ್ರ ಬೆನ್ನತ್ತಿದರೆ ಆಗದು. ಬೇರೆ ಬೇರೆ ಆಯಾಮಗಳೂ ಕೂಡಾ ಸಂಬಂಧಗಳಲ್ಲಿ ಅನಾವರಣಗೊಳ್ಳುತ್ತಿರುತ್ತವೆ. ಕಾರಣಗಳು ಏನೇ ಇರಲಿ ಕಾಂಪ್ಲೆಕ್ಸುಗಳು ಮೂಲದಲ್ಲಿ ಕೆಲಸ ಮಾಡುತ್ತಿರುತ್ತವೆ.

ಬಹುಪತಿ ಪದ್ಧತಿ ಅಥವಾ ಪಾಲಿಯಂಡ್ರಿ

ಹಿಂದೆ ಮಾನವನ ಸಮುದಾಯದ ಬದುಕು ಬಾಲ್ಯಾವಸ್ಥೆಯಲ್ಲಿದ್ದಾಗ ಹೆಣ್ಣೇ ಗುಂಪಿನ ನಾಯಕಿ. ಆ ಹೆಣ್ಣನ್ನು ಇಂದಿನ ಪರಿಭಾಷೆಯಲ್ಲಿ ತಾಯಿ ಎನ್ನುತ್ತೇವೆ. ಅದನ್ನೇ ಉಪಯೋಗಿಸಿದರೆ ವಿಷಯ ಅರ್ಥ ಮಾಡಿಕೊಳ್ಳುವುದು ಸುಲಭ. ಆಗ ತಾಯಿಯು ತನ್ನ ಗುಂಪಿನಲ್ಲಿರುವ ಸಮರ್ಥನನ್ನು ತನ್ನೊಡನೆಯ ಸಂಭೋಗಕ್ಕೆ ಆಯ್ದುಕೊಳ್ಳುತ್ತಿದ್ದಳು. ಅದು ವಿವಾಹ ಪೂರ್ವ ಕಾಲದಲ್ಲಿ. ಸರಿ, ಮದುವೆಯ ವ್ಯವಸ್ಥೆಯು ತಲೆಯೆತ್ತಿದ ಮೇಲೂ ಒಂದು ಹೆಣ್ಣಿಗೆ ಹಲವು ಗಂಡುಗಳನ್ನು ಮದುವೆಯಾಗುವ ಅಧಿಕಾರವಿತ್ತು, ರೂಢಿಯೂ ಬಹಳ ಕಾಲ ಅಸ್ತಿತ್ವದಲ್ಲಿತ್ತು. ಅವಳು ವಿವಾಹಪೂರ್ವ ಕಾಲದಲ್ಲಿ ಗುಂಪಿನ ನಾಯಕಿಯಾಗಿದ್ದಂತೆ ಮದುವೆಯ ವ್ಯವಸ್ಥೆಯ ನಂತರವೂ ಮನೆಯ ಯಜಮಾನಿಯಾಗಿ ಮುಂದುವರಿದು ಸೂಕ್ತವಾದ ಶಿಷ್ಟ ಮಾರ್ಪಾಡುಗಳೊಡನೆ ಮಾತೃ ಪ್ರಧಾನ ಸಮಾಜವು ತಲೆ ಎತ್ತಿತ್ತು.

ಆದರೆ ಒಂದು ಹೆಣ್ಣು ವಿಧವೆಯಾದರೆ ತನ್ನ ಗಂಡನ ತಮ್ಮನನ್ನು ವೈದಿಕರೂ ಸೇರಿದಂತೆ ಹಲವಾರು ಬುಡಕಟ್ಟುಗಳಲ್ಲಿ ರೂಢಿಯಲ್ಲಿತ್ತು. ಇನ್ನೂ ಕೆಲವು ಬುಡಕಟ್ಟುಗಳಲ್ಲಿ ತನ್ನ ಹಿರಿಯ ಮಗನನ್ನು ಮದುವೆಯಾಗುವ ಪದ್ಧತಿಯೂ ನಮ್ಮ ಪ್ರಾಚೀನ ಭಾರತದಲ್ಲಿತ್ತು. ಅನೇಕ ಪುರುಷರನ್ನು ಒಬ್ಬಳು ಮದುವೆಯಾಗುವ ಪದ್ಧತಿಯಂತೂ ನಮ್ಮ ಪ್ರಾಚೀನ ಭಾರತಕ್ಕೆ ಏನೇನೂ ಪರಕೀಯವಾಗಿರಲಿಲ್ಲ. ದ್ರೌಪದಿಯು ಐವರು ಗಂಡಂದಿರ ಮದುವೆಯಾಗಿರುವುದು ಮಹಾಭಾರತದಲ್ಲಿರುವುದರಿಂದ ಅದು ಪ್ರಖ್ಯಾತ ದಾಖಲು. ದ್ರೌಪದಿ ಪಾತ್ರದ ಚಿತ್ರಣವೂ ಕೂಡಾ ಮಹಾಭಾರತದಲ್ಲಿ ಬಲವಾಗಿಯೇ ಇದೆ. ಐದೂ ಜನ ಗಂಡಂದಿರನ್ನು ಅವಳು ತನ್ನ ಅಂಕೆಯಲ್ಲಿಯೇ ಇಟ್ಟುಕೊಂಡಿದ್ದಳು.

ಗಟ್ಟಿತನದಿಂದಲೇ ಅವಳು ವ್ಯಕ್ತಿಗಳನ್ನೂ ಮತ್ತು ಸನ್ನಿವೇಶಗಳನ್ನು ನಿರ್ವಹಿಸುತ್ತಿದ್ದಳು. ಅವಳಲ್ಲಿ ಯಜಮಾನಿಕೆ ಇದೆ. ದ್ರೌಪದಿಯ ಊರು ಪಾಂಚಾಲ ಎಂದು ಹೆಸರಿಸುವುದು ಇಂದಿನ ಹಿಮಾಚಲ ಪ್ರದೇಶದ ಕಿನೌರ್ ಪ್ರಾಂತ್ಯದಲ್ಲಿ. ಉತ್ತರಖಂಡದ ಹಿಮಾಲಯದ ಕೆಳಗಣಿವೆಗಳ ಜೌನ್ಸರ್ ಬವರ್ ಪ್ರದೇಶದಲ್ಲಿ ಪಹಾರಿಗಳೆಂಬ ಜನಾಂಗವಿದೆ. ಅವರಲ್ಲಿಯೂ, ಹಾಗೆಯೇ ಅದರಂತೆಯೇ ದಕ್ಷಿಣ ಭಾರತಕ್ಕೆ ಬಂದರೆ ತೋಡಾ ಬುಡಕಟ್ಟಿನಲ್ಲಿಯೂ ಕೂಡಾ ಬಹುಪತಿ ಪದ್ಧತಿ ರೂಢಿಯಲ್ಲಿತ್ತು. ಹತ್ತೊಬತ್ತನೆಯ ಶತಮಾನದವರೆಗೂ ಕೇರಳದ ಹಲವಾರು ಜಾತಿಗಳಲ್ಲಿ ಇದು ರೂಢಿಯಲ್ಲಿತ್ತು.

1911ರ ಜನಗಣತಿಯಲ್ಲಿ ಇ ಎ ಗೈಟ್ ಟಿಬೇಟಿನಿಂದ ನಮ್ಮ ದಕ್ಷಿಣ ಭಾರತದ ಸಮುದ್ರದ ತುದಿಯವರೆಗೂ ಅನೇಕಾನೇಕ ಬುಡಕಟ್ಟುಗಳಲ್ಲಿ ಬಹುಪತಿ ಅಥವಾ ಪಾಲಿಯಂಡ್ರಿ ಪದ್ಧತಿಯನ್ನು ನಮೂದಿಸುತ್ತಾರೆ.
ಆಸ್ತಿಯ ಹಕ್ಕೂ ಕೂಡಾ ಅವಳಿಗೇ ಇತ್ತು. ಅದನ್ನು ಉಳಿಸಿಕೊಳ್ಳಲು ಮತ್ತು ಸಂಬಂಧವನ್ನೂ ಆಪ್ತಗೊಳಿಸಿಕೊಳ್ಳಲು ವಿವಾಹದ ಸಂಬಂಧಗಳನ್ನೂ ಬೆಳೆಸಿಕೊಳ್ಳುತ್ತಿದ್ದರು. ಹೆಣ್ಣು ತನ್ನ ತವರಿಗೇ ತನ್ನ ಮಗಳನ್ನು ಕೊಡುವುದು, ಅಂದರೆ ತನ್ನ ಸೋದರನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಕೊಂಡು ತವರಿನಾ ಬಾಂಧವ್ಯವನ್ನು ಉಳಿಸಿಕೊಳ್ಳುವ ಮೂಲದಲ್ಲಿ ಜೊಕಾಸ್ಟಾ ಕಾಂಪ್ಲೆಕ್ಸ್ ಹೊಗೆಯಾಡುತ್ತಿದೆ ಎಂದರೆ ಗಾಬರಿಯಾಗುವ ಅಗತ್ಯವೇನಿಲ್ಲ.
ವರಸೆ ಇದೆ.

ನನ್ನ ಗೆಳೆಯನೊಬ್ಬನಿಗೆ ಅವನ ಅಕ್ಕ ತನ್ನ ಮಗಳನ್ನು ಕೊಡಲು ಎಷ್ಟೋ ಪರಿಪಾಟಲು ಪಟ್ಟಳು. ಅವನು ಬಲವಾಗಿ ನಿರಾಕರಿಸುತ್ತಿದ್ದ. “ನನಗೆ ಅಕ್ಕನಾದ ನೀನೂ ಕೂಡಾ ತಾಯಂತೆ. ನಿನ್ನ ಮಗಳೂ ಅದೇ ರಕ್ತದವಳು. ಅವಳನ್ನು ನನಗೆ ಹೆಂಡತಿಯಾಗಿ ಒಪ್ಪಲು ಸಾಧ್ಯವೇ ಇಲ್ಲ. ಅವಳು ನನಗೆ ತಂಗಿಯ ಸಂಬಂಧದಂತೆಯೇ ತೋರುತ್ತಾಳೆ” ಎಂಬುದು ಅವನ ಭಾವ.
“ಹಾಗೆಲ್ಲ ಅಂದುಕೊಳ್ಳಬೇಡ. ನಿಮ್ಮಿಬ್ಬರಿಗೂ ವರಸೆ ಇದೆ” ಎಂದು ಅವನ ಅಕ್ಕ ಅವನಿಗೆ ಮನವೊಲಿಸಲು ಪ್ರಯತ್ನಿಸುತ್ತಿದ್ದಳು. ಅದಕ್ಕೆ ಅವನು ಕೊಟ್ಟ ಉತ್ತರ, “ನೀವು ಹೇಳುತ್ತಿರುವ ವರಸೆ ಕೂಡಾ ಅಂದುಕೊಳ್ಳುವುದು ತಾನೇ? ನಿಮಗೆ ಅನುಕೂಲವಾಗುವಂತೆ ನೀವು ಅಂದುಕೊಳ್ಳಿ. ನನ್ನ ಮನೋಭಾವಕ್ಕೆ ತೋರುವಂತೆ ನಾನು ಅಂದುಕೊಳ್ಳುತ್ತೇನೆ.

ಒಟ್ಟಿನಲ್ಲಿ ಸಂಬಂಧಗಳು ಅನ್ನೋದೇ ಅಂದುಕೊಳ್ಳೋದು. ಬಿಡಿ” ಎಂದ. ಅವನ ಅಕ್ಕನ ಮಗಳ ಜೊತೆ ಅವನ ಮದುವೆಯಾಗಲಿಲ್ಲ.ವೈದ್ಯಕೀಯವಾಗಿ ರಕ್ತಸಂಬಂಧದಲ್ಲಿ ಮದುವೆಯಾಗುವುದು ಅಷ್ಟೇನೂ ಒಳಿತಲ್ಲದ ಕಾರಣದಿಂದ ಅವನ ನಿರ್ಧಾರವೂ ಒಳ್ಳೆಯದೇ. ಏನೇ ಆಗಲಿ, ಸಂಬಂಧಗಳು ಅನ್ನೋದು ನಾವು ನಾವು ಅಂದುಕೊಳ್ಳೋದು ಅಷ್ಟೇ! ನೈಸರ್ಗಿಕವಾಗಿ ಏನಿದೆ? ನಿಸರ್ಗದ ಸ್ವಾಭಾವಿಕ ವಾಸನೆಗಳ ಪಳೆಯುಳಿಕೆಗಳೇ ಈ ಅರಿಮೆಗಳು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending