Connect with us

ಅಂತರಂಗ

ಅರಿಮೆಯ ಅರಿವಿರಲಿ-15 : ಅಹಂ ಬ್ರಹ್ಮಾಸ್ಮಿ

Published

on

  • ಯೋಗೇಶ್ ಮಾಸ್ಟರ್

“ತನಗೇ ಎಲ್ಲಾ ಗೊತ್ತು. ನಾನು ಹೇಳುವುದೆಲ್ಲಾ ಸರಿಯೇ ಇರುತ್ತದೆ. ನನಗೆ ಯಾರ ನಿರ್ದೇಶನವೂ ಬೇಡ. ನನ್ನ ನಿರ್ದೇಶನದಲ್ಲಿ ಎಲ್ಲವೂ ಆಗಬೇಕು. ನಾನು ಹೇಳಿದಷ್ಟು ಮಾತ್ರ ಕೇಳಿ. ನನಗೇನೂ ಹೇಳಲು ಬರಬೇಡಿ” ಎಂದು ತಾನೊಬ್ಬ ಸರ್ವಶಕ್ತ ಭಗವಂತನಂತೆ ವರ್ತಿಸುವವರನ್ನು ನಿಮ್ಮ ಬದುಕಿನ ಎಲ್ಲಾ ರಂಗಗಳಲ್ಲೂ ಒಂದಲ್ಲಾ ಒಂದು ಕಡೆ ನೋಡಿ ಇರುತ್ತೀರಿ. ಇದೂ ಆತ್ಮರತಿಯದೇ ಅರಿಮೆ. ಆದರೆ ಅದಕ್ಕಿಂತ ಒಂದು ಕೈ ಮೇಲು. ಇದಕ್ಕೆ God Complex ಅಥವಾ ದೈವಿಕ ಅರಿಮೆ ಎಂದು ಗುರುತಿಸುತ್ತಾರೆ.

ಈ ಅರಿಮೆಯಲ್ಲಿ ವ್ಯಕ್ತಿ ತಾನೊಬ್ಬ ದೈವೀಪುರುಷನೆಂದು ಭಾವಿಸುವುದಷ್ಟೇ ಅಲ್ಲದೇ ದೇವರಿಗಿದ್ದಂತೆ ತನಗೆ ಶಕ್ತಿಸಾಮರ್ಥ್ಯಗಳೂ ಇವೆ ಎಂದು ಭ್ರಮಿಸುವುದು ಎಂದೇನೂ ಇಲ್ಲ. ತಾನು ಯಾರಿಗೂ ಉತ್ತರಿಸಬೇಕಾಗಿಲ್ಲ ಎಂಬ ಧೋರಣೆಯನ್ನು ಹೊಂದಿರುವನು. ಆದರೆ ನಮ್ಮ ದೇಶದಲ್ಲಿ ನಾನೇ ಭಗವಂತ ಎಂದು ನೇರವಾಗಿ ಸಾರಿಕೊಳ್ಳುವ ದೇವ ಮಾನವರನ್ನು ಕಂಡಿದ್ದೇವೆ.

ತಾವು ದೈವೀ ಪುರುಷರೆಂದು ಹೇಳಿಕೊಂಡು ಆಧ್ಯಾತ್ಮ ಪುರುಷರು ತೋರುವ ವರ್ತನೆಗಳಿಂದ ಆಸ್ತಿಕರಿಗೆ ಭಕ್ತಿ ಬರಬಹುದು, ಆದರೆ ನಾಸ್ತಿಕರಿಗೆ ನಗು ಬರುತ್ತದೆ. ಆದರೆ ಇವುಗಳನ್ನು ಮೀರಿ ಮನೋವೈದ್ಯರಿಗೆ ಇವರ ದೈವಿಕ ಅರಿಮೆ ಒಂದು ಅಧ್ಯಯನದ ವಿಷಯ. ಇದಿರುವವರು ಒಬ್ಬ ಮನೋರೋಗಿ ಅಷ್ಟೇ.

ದೇವರಾಗಲು ನೂರು ದಾರಿ

ಧಾರ್ಮಿಕ ಮತ್ತು ಅಧ್ಯಾತ್ಮಿಕ ವ್ಯಕ್ತಿಗಳು ಮಾತ್ರ ಈ ಬಗೆಯ ದೈವಿಕ ಅರಿಮೆಯನ್ನು ಹೊಂದಿರುತ್ತಾರೆಂದುಕೊಳ್ಳಬೇಡಿ. ಈ ಅರಿಮೆ ನಾನಾ ರೀತಿಗಳಿಂದ ಬೆಳೆಯುತ್ತಾ ಹೋಗುತ್ತದೆ.ಯಾವುದೋ ಒಂದು ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿರುವವರು ಬಹು ಬೇಗ ಇಂಥಾ ಭ್ರಮೆಗೆ ಒಳಗಾಗಿರುವುದರ ಉದಾಹರಣೆ ಸಾಕಷ್ಟು ನಮ್ಮ ಕಣ್ಣ ಮುಂದಿವೆ.

ಸಂಗೀತದಲ್ಲಾಗಿರಬಹುದು, ವೈದ್ಯಕೀಯ ಕ್ಷೇತ್ರದಲ್ಲಾಗಿರಬಹುದು, ರಾಜಕೀಯದಲ್ಲಾಗಿರಬಹುದು, ಸಾಹಿತ್ಯದಲ್ಲಾಗಿರಬಹುದು; ಅತ್ಯುನ್ನತ ಗೌರವಗಳನ್ನು ಪಡೆಯುತ್ತಿದ್ದು, ಅವರ ಕೀರ್ತಿ ಮತ್ತು ಸಾಮಾಜಿಕ ಸ್ಥಾನಮಾನದ ದೆಸೆಯಿಂದ ಅವರನ್ನು ಕಂಡವರಾರು ಸಹಜವಾಗಿ ಕಡೆಗಣಿಸುವುದಿಲ್ಲ. ಅವರು ಯಾರಿಗಾದರೂ ನಿರ್ದೇಶನಗಳನ್ನು ನೀಡಿದರೆ “ಇಂಥಾ ದೊಡ್ಡ ಮನುಷ್ಯರು ಕೇಳಿದ್ದಾರೆ” ಎಂದು ಗೌರವದಿಂದ ಅನುಸರಿಸುತ್ತಾರೆ.

ಆದರೆ ಮೇಲಿಂದ ಮೇಲೆ ಆಗುವ ಇಂತಹ ಅನುಭವಗಳಿಂದ ಅಥವಾ ತಾವೇ ತಮ್ಮ ಬಗ್ಗೆ ಹೊಂದುವ ಚಿತ್ರಣದಿಂದ ದೈವಿಕ ಅರಿಮೆಗೆ ಒಳಗಾಗುತ್ತಾರೆ. ಅವರಿಗಿಂತ ಮೇಲಾಗಿ ಯಾರಾದರೂ ವರ್ತಿಸಿದರೆ ಅವರಿಗೆ ಆಗುವುದಿಲ್ಲ. ಜೀಯಾ, ಸ್ವಾಮಿ ಎಂದು ಯಾರೇ ಅಂಗಲಾಚಿದರೂ ಅವರಿಗೆ ಅಭಯ ಹಸ್ತವನ್ನು ತೋರುತ್ತಾರೆ. ನಾನು ನಿನ್ನ ಕಾಪಾಡುತ್ತೇನೆ ಎಂಬ ವರದಾನದ ಭರವಸೆ ನೀಡುತ್ತಾರೆ.

ಎಷ್ಟರ ಮಟ್ಟಿಗೆ ಅವರನ್ನು ಅದು ಕಾಡುತ್ತದೆ ಎಂದರೆ ಎಷ್ಟೋ ಬಾರಿ ಅವರು ಪರಸ್ಪರ ಗೌರವ ಸೂಚಕ ನಮಸ್ಕಾರ ಕೂಡಾ ಅವರು ಮಾಡುವುದಿಲ್ಲ. ಇತರರ ನಮಸ್ಕಾರವನ್ನು ಮಾತ್ರ ಸ್ವೀಕರಿಸುತ್ತಾರೆ. ನಮ್ಮ ಭಾರತದಲ್ಲಿ ಇಂತಹ ದೈವಿಕ ಅರಿಮೆಯನ್ನು ಹೊಂದಿರುವಂತಹ ಹಲವಾರು ಗಣ್ಯರು ನಮಗೆ ಕಾಣಬರುತ್ತಾರೆ.

ನಾನೇ ಭಗವಂತ

ಈಗ್ಗೆ ಕೆಲವು ವರ್ಷಗಳ ಹಿಂದೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಧ್ಯಾನ, ಆಧ್ಯಾತ್ಮಿಕ ಸಾಧನೆ ಇತ್ಯಾದಿಗಳನ್ನು ಬಹಳ ಗಂಭೀರವಾಗಿ ಮಾಡುತ್ತಿದ್ದರು. ಅಹಂ ಬ್ರಹ್ಮಾಸ್ಮಿಯ ಅರಿಮೆಯು ಅದೆಷ್ಟರ ಮಟ್ಟಿಗೆ ಮನಸ್ಸಿನ ಆಳಕ್ಕಿಳಿದಿತೆಂದರೆ, ನೆಲದ ಜೊತೆಗೆ ಸಂಪರ್ಕ ನಿಲ್ಲಿಸಿದರು. ಅಂದರೆ ಬರಿಗಾಲಿನಲ್ಲಿ ನೆಲದ ಮೇಲೆ ನಡೆಯುತ್ತಿರಲಿಲ್ಲ. ಅವರು ಹೊರಗಿನ ಜನರನ್ನು ಸಂದರ್ಶಿಸುವುದನ್ನು ನಿಲ್ಲಿಸಿದರು. ಯಾರಿಗೂ ಕೈ ಕುಲುಕುತ್ತಿರಲಿಲ್ಲ. ತಮ್ಮ ಶಕ್ತಿಯ ಪತನವಾಗುತ್ತದೆ ಎಂದು ಭಾವಿಸಿ ಬಹುತೇಕ ಮಾನಸಿಕ ರೋಗಿಯಂತಾಗಿದ್ದರು. ನಂತರ ಅವರ ಆಪ್ತರ ಸಮಾಲೋಚನೆ ಮತ್ತು ಮುನ್ನೆಚ್ಚರಿಕೆಯಿಂದ ಅವರ ಅರಿವಿಗೂ ತಮ್ಮ ವಿಷಯ ನಿಲುಕಿತು ಮತ್ತು ಮುಂದೆ ಗುಣಮುಖರೂ ಆಗಿ ತಮ್ಮ ಸಂಗೀತ ಸಾಧನೆ ಮುಂದುವರಿಸಿದರು.

ಗಣ್ಯರಿರಲಿ, ಕೆಲವರು ಸಾಮಾಜಿಕ ಜೀವನದಲ್ಲಿ ಅದೆಷ್ಟೇ ನಗಣ್ಯರಾಗಿದ್ದರೂ, ಈ ಬಗೆಯ ಅರಿಮೆಯನ್ನು ಹೊಂದಿದ್ದು ಕಂಡವರ ಪಾಲಿಗೆ ನಗೆಪಾಟಲಾಗುತ್ತಾರೆ. ಜನಸಾಮಾನ್ಯರಿಗೆಂದು ಇರುವ ಸಾಮಾನ್ಯ ನಿಯಮಗಳು ಅಥವಾ ರೀತಿನೀತಿಗಳು ತಮಗೆ ಅನ್ವಯವಾಗುವುದಿಲ್ಲ ಎಂದು ಭಾವಿಸುತ್ತಾರೆ. “ಇದು ಒನ್ ವೇ. ಹೋಗುವುದು ಬೇಡ” ಎಂದರೆ, “ನನಗ್ಯಾವ ಒನ್ ವೇ?” ಎಂದು ಎದೆಯುಬ್ಬಿಸಿ ನಗುತ್ತಾರೆ. ಮೇಲರಿಮೆಯ ತುತ್ತತುದಿಯ ಭಾಗವಿದು. ಅವರು ತಮಗೊಂದು ವರ್ಚಸ್ಸಿದೆ ಎಂದು ಭಾವಿಸುತ್ತಾರೆ.

ಗಾಢ ಮತ್ತು ಆಳವಾದ ಪ್ರಭಾವವನ್ನು ಬೀರುವಂತಹ ಧ್ವನಿ ಇದೆ ಎಂದುಕೊಂಡು ಅದೇ ರೀತಿ ಘನ ಗಂಭೀರದಿಂದ ಮಾತಾಡುತ್ತಾರೆ. ತಮ್ಮಿಂದ ಆಗದೇ ಇರುವಂತಹ ಕೆಲಸವೇ ಇಲ್ಲ ಎಂಬಂತೆ ಆಶ್ವಾಸನೆಗಳನ್ನು ನೀಡುತ್ತಾರೆ. ತಮಗಿಂತ ವಯಸ್ಸಿನಲ್ಲಿ, ಸಾಧನೆಯಲ್ಲಿ ದೊಡ್ಡವರನ್ನು ಕಂಡರೂ ತಮಗಿರುವ ವಿಶೇಷ ದೈವಿಕ ಸಾಮರ್ಥ್ಯ ಮತ್ತು ಅಸ್ತಿತ್ವದ ಮುಂದೆ ಅದೆಲ್ಲವೂ ಕ್ಷುಲ್ಲಕವೆಂದೇ ಅವರ ಭಾವನೆಯಾಗಿರುತ್ತದೆ.

ಅವರನ್ನು ಇತರರು ಸರಿಪಡಿಸುವುದು ಬಹಳ ಕಷ್ಟ. ಅವರಿಗೇ ತಮಗೆ ಈ ಬಗೆಯ ಅರಿಮೆ ಇದೆ ಎಂದು ಅರ್ಥವಾಗಬೇಕು. ತಾನು ವರ್ತಿಸುವ ಸಮಯದಲ್ಲೆಲ್ಲಾ ಎಚ್ಚರಗೊಳ್ಳಬೇಕು. ಹಾಗೆ ವರ್ತಿಸದೇ ಸಹಜವಾಗಿ ವರ್ತಿಸುವಂತಹ ಅಭ್ಯಾಸವನ್ನು ಮಾಡಬೇಕು. ಸತತವಾದ ಅಭ್ಯಾಸ ಮಾಡುತ್ತಿದ್ದರೆ ದೈವಿಕ ಅರಿಮೆಯಿಂದ ಹೊರಬರಲು ಸಾಧ್ಯ.

ಸೃಷ್ಟಿಕರ್ತ

ಸಾಮಾನ್ಯವಾಗಿ ಈ ದೈವಿಕ ಅರಿಮೆಯು ಬದುಕಿನ ಎಲ್ಲಾ ರಂಗಗಳಲ್ಲಿದ್ದರೂ ಸೃಜನಶೀಲ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಾಣುತ್ತದೆ. ಇದಕ್ಕೆ ಬಹುಶಃ ದೇವರು ಎಂಬ ಸೃಷ್ಟಿಕರ್ತನ ಪರಿಕಲ್ಪನೆ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದು, ತಾವೂ ಕಲೆ, ಸಾಹಿತ್ಯ ಇತ್ಯಾದಿಗಳಲ್ಲಿ ಸೃಷ್ಟಿಸುವ ಕೆಲಸದಲ್ಲಿ ನಿರತರಾಗಿರುವುದರಿಂದ ಈ ಅರಿಮೆ ನಿಧಾನವಾಗಿ ತಲೆದೋರಬಹುದು.

ಮಗುವೊಂದು ಅದೂ ಇದೂ ಜೋಡಿಸಿಕೊಂಡು ಆಟವಾಡುವುದನ್ನು ಗಮನಿಸಿ. ಅದಕ್ಕೆ ಹೊರಗಿನ ಲೋಕದ ಪರಿವೆಯೇ ಇರುವುದಿಲ್ಲ. ಅದಕ್ಕೆ ನಿರ್ಧಿಷ್ಟವಾಗಿ ಏನು ರಚಿಸುತ್ತಿದ್ದೇನೆ ಎಂದು ಸರಿಯಾಗಿ ತಿಳಿಯದಿದ್ದರೂ ಏನನ್ನೋ ಸೃಷ್ಟಿಸುವ ಕ್ರಿಯೆಯಲ್ಲಿ ಮೈಮರೆತಿರುತ್ತದೆ. ಅದೇ ರೀತಿ ಸೃಜನಶೀಲ ವ್ಯಕ್ತಿಗಳೂ ಕೂಡಾ ಸೃಷ್ಟಿಯಕಾರ್ಯದಲ್ಲಿ ನಿರತರಾಗಿರುವಾಗ ಹೊರ ಜಗತ್ತಿನ ಪರಿವೆಯನ್ನು ಹೊಂದಿರುವುದಿಲ್ಲ. ಹಾಗಾಗಿ ಕೆಲವು ಕಲಾವಿದರ ವರ್ತನೆಯು ವಿಲಕ್ಷಣ ಎಂದೂ ಅನ್ನಿಸಬಹುದು. ಅವರಿಗೆ ಯಾರೂ ಸರಿಪಡಿಸಲು ಹೋಗಲಾಗದು.

ಏಕೆಂದರೆ ಅವರು ಕುಟುಂಬದ ಬಂಧವನ್ನು, ಸಂಬಂಧಗಳನ್ನೂ ಕೂಡಾ ಕಳೆದುಕೊಳ್ಳಲು ಸಿದ್ಧರಾಗಿರುವರು. ವಾಸ್ತವವಾಗಿ ಅವರಿಗೆ ಅವೆಲ್ಲವೂ ಅವರ ಸೃಷ್ಟಿಕಾರ್ಯದಲ್ಲಿ ಅಡಚಣೆಗಳೆಂದೇ ಅನ್ನಿಸುವುದು. ಅವರ ಸಂಬಂಧ ಮತ್ತು ಅದರ ಸುತ್ತಲಿನ ಚಟುವಟಿಕೆಗಳು ಕಲಾವಿದರಿಗೆ ಬಂಧನ ಎನ್ನಿಸುವುದು. ಬಹಳಷ್ಟು ಕಲಾವಿದರ ವೈವಾಹಿಕ ಸಂಬಂಧಗಳೂ ಕೂಡಾ ಮುರಿದುಬೀಳುವುದು ಏನೂ ಆಶ್ಚರ್ಯವಿಲ್ಲ. ದೈವಿಕದರಿಮೆಯ ವ್ಯಕ್ತಿಗಳಿಗೆ ದಾಂಪತ್ಯ ಜೀವನ ಕಷ್ಟಸಾಧ್ಯ.

ತಾವು ಇಂತಹುದ್ದೊಂದರ ಅರಿಮೆಯಲ್ಲಿ ಇದ್ದೇವೆ ಎಂದು ತಿಳಿದರೆ ಅವರು ಇದರಿಂದ ಹೊರಗೆ ಬರುವ ಪ್ರಯತ್ನ ಮಾಡಬಲ್ಲರು. ವಿಶ್ವದ ವಿರಾಟ್ ಸ್ವರೂಪದ ಮುಂದೆ ತಾವೊಂದು ಅಣುವಿನಲ್ಲಿ ಅಣುವೆಂಬ ಕುಬ್ಜತೆಯ ಅರಿವಾದರೆ ತನ್ನ ವಿರಾಟ್ ರೂಪವನ್ನು ಸಂಕುಚಿತಗೊಳಿಸಿಕೊಳ್ಳಬಹುದು.
ಎಂದರೋ ಮಹಾನುಭಾವುಲು ಆಗಿರು ಹೋಗಿರುವ ಚರಿತ್ರೆಯ ಪ್ರಜ್ಞೆ ಮತ್ತು ತಾವೆಷ್ಟು ಸಂಕುಚಿತ ವ್ಯಕ್ತಿ ಎಂಬ ಭಾವ ದೈವಿಕ ಅರಿಮೆಯನ್ನು ಕ್ರಮೇಣ ಇಲ್ಲವಾಗಿಸಬಹುದು.

ರೋಗ ಲಕ್ಷಣಗಳು

ದೈವಿಕ ಅರಿಮೆಯವರ ಇನ್ನೊಂದು ರೋಗಲಕ್ಷಣವೆಂದರೆ “ತನ್ನ ತೀರ್ಮಾನ ಮತ್ತು ಕಾರ್ಯವೈಖರಿಯೇ ಉಳಿದವರಿಗಿಂತ ಸರಿಯಾದದ್ದು ಮತ್ತು ಉತ್ತಮವಾದದ್ದು” ಎಂದು ಭಾವಿಸುವುದು. ಯಾವಾಗ ಇದೇ ಭಾವನೆಯು ಸತತವಾಗಿ ಬರುತ್ತಿದೆ ಎಂದೆನಿಸಿದಾಗ ಈ ಅರಿಮೆಯ ಲಕ್ಷಣಗಳು ನನ್ನಲ್ಲೂ ಇವೆ ಎಂಬ ಎಚ್ಚರಿಕೆ ಬರಬೇಕು. ಹಾಗೆಯೇ ಮುಕ್ತ ಮನಸ್ಸಿನಿಂದ, ತೆರೆದ ಹೃದಯದಿಂದ ಇತರರ ಸಲಹೆ, ಸೂಚನೆ ಮತ್ತು ನಿರ್ದೇಶನಗಳಿಗೆ ಕಿವಿಗೊಡಬೇಕು. ಉದ್ದೇಶಪೂರ್ವಕವಾಗಿ ತನ್ನದನ್ನು ಬದಿಗಿರಿಸಿ, ಇತರರದನ್ನು ಪರಿಗಣಿಸುವ ರೂಢಿಯನ್ನು ಮಾಡಿಕೊಂಡು ತನ್ನ ಅರಿಮೆಯ ಹುಟ್ಟಡಗಿಸಬೇಕು.

ಈ ದೈವಿಕ ಅರಿಮೆಯವರ ಮತ್ತೊಂದು ಢಾಳಾದ ಲಕ್ಷಣವೆಂದರೆ, “ನನ್ನ ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ” ಎಂದು ಗೊಣಗುತ್ತಿರುವುದು. ಸಮಸ್ಯೆ ಏನೆಂದರೆ ಇತರರನ್ನು ಅರ್ಥ ಮಾಡಿಕೊಳ್ಳುವ ಆಲೋಚನೆಯೇ ಇವರಿಗೆ ಹೊಳೆಯದಿರುವುದು. ಹೌದು, ನಾನು ಹೇಳುವುದು ಇವರಿಗೆ ಯಾಕೆ ಅರ್ಥವಾಗುತ್ತಿಲ್ಲ? ನಾನು ಸರಿಯಾಗಿ ಹೇಳುತ್ತಿಲ್ಲವೇ? ಎಂದು ತಮ್ಮನ್ನು ಪ್ರಶ್ನಿಸಿಕೊಳ್ಳುವುದಿಲ್ಲ. ಬದಲಾಗಿ ನಾನು ಹೇಳುವುದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇವರಲ್ಲಿ ಇಲ್ಲ ಅಥವಾ ಇವರು ನಾನು ಹೇಳುವುದನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ದಡ್ಡರು ಎಂದುಕೊಳ್ಳುತ್ತಾರೆ.

ಇವೆರಡೂ ಅನ್ನಿಸದಿದ್ದರೆ, ನಾನು ಹೇಳುವುದನ್ನು ಕೇಳದೇ ಇರುವಷ್ಟು ಉದ್ಧಟತನ ತೋರುತ್ತಿದ್ದಾರೆ ಇವರಿನ್ನು ಇಲ್ಲಿ ಇರಬಾರದು ಎಂಬ ತೀರ್ಮಾನಕ್ಕೆ ಬರುತ್ತಾರೆ. ಅವರ ಆಗಿನ ಮಾತೆಂದರೆ, “ಒಂದೋ ನೀನು ಇಲ್ಲಿರಬೇಕು ಅಥವಾ ನಾನಿಲ್ಲಿ ಇರಬೇಕು.” ಈ ಮಾತಿನ ಅರ್ಥ ನಾನು ಹೋಗುತ್ತೇನೆ ಎಂದಲ್ಲ. ಇದು ನನ್ನ ಸ್ಥಳ ನೀನು ಇಲ್ಲಿಂದ ಹೋಗಬೇಕು ಎಂದರ್ಥ. ಅಂದರೆ ಒಂದೋ ನೀನು ನನ್ನ ಆಜ್ಞಾನುವರ್ತಿಯಾಗಿ ಇರಬೇಕು. ಇಲ್ಲವೆಂದರೆ ಹೋಗುತ್ತಿರಬೇಕು. ಇದು ಅವರ ಅರಿಮೆಯ ಸ್ಪಷ್ಟತೆ.

ದೈವಿಕ ಅರಿಮೆಯವರು ಎಲ್ಲಾ ವಿಷಯಗಳಲ್ಲೂ ಮಾತಾಡಲು, ತಮ್ಮ ಅಭಿಪ್ರಾಯ ನೀಡಲು, ತಮಗೆ ಆ ವಿಷಯ ಗೊತ್ತಿದೆ ಎಂದು ತೋರ್ಪಡಿಸುತ್ತಿರುತ್ತಾರೆ. ದೇವರು ಸರ್ವಜ್ಞನಲ್ಲವೇ? ಅವರು ಸಾಮಾನ್ಯವಾಗಿ ಎಲ್ಲದರ ಬಗ್ಗೆ ತಿಳಿದುಕೊಳ್ಳಲೂ ಪ್ರಯತ್ನಿಸುತ್ತಿರುತ್ತಾರೆ. ಇದಕ್ಕಿರುವ ಪರಿಹಾರ ಒಂದೇ. ತನ್ನ ಸಾಮರ್ಥ್ಯ ಮತ್ತು ಮಿತಿಯನ್ನು ಅರಿತುಕೊಳ್ಳುವುದು. ತನಗೆ ಸಾಮರ್ಥ್ಯವಿರುವುದರಲ್ಲಿ ಆತ್ಮವಿಶ್ವಾಸದಿಂದ ಕೆಲಸ ಮಾಡುವುದು. ತನಗೆ ಮಿತಿಯಿರುವ ವಿಷಯದಲ್ಲಿ ವಿನಯವಾಗಿ ತಿಳಿಯುವ ಪ್ರಯತ್ನ ಮಾಡುವುದು. ಬಲ್ಲವರ ಬಳಿ ಅಹಂಕಾರ ತೋರದೇ, ಹುಸಿ ಜ್ಞಾನದ ಪ್ರದರ್ಶನ ಮಾಡದೇ ಗೊತ್ತಿಲ್ಲ, ನನಗೇನೂ ಗೊತ್ತಿಲ್ಲ ಎಂದು ಸ್ಪಷ್ಟಪಡಿಸುವ ರೂಢಿಯನ್ನು ಮಾಡಿಕೊಳ್ಳುವುದು.

ಯಾವಾಗಲೂ ಸ್ಪರ್ಧಾತ್ಮಕವಾಗಿಯೇ ಪ್ರತಿಯೊಂದು ವಿಷಯಗಳನ್ನೊ ತೆಗೆದುಕೊಳ್ಳುವುದು. ಸವಾಲುಗಳನ್ನು ಎಸೆಯುವುದು. ಇತರ ಸಾಧನೆಗಳನ್ನು ಸವಾಲುಗಳಂತೆ ಸ್ವೀಕರಿಸುವುದು. ನಾನು ಅತ್ಯುತ್ತಮವಾದ ಪ್ರದರ್ಶನವನ್ನು ಕೊಡಬೇಕು ಎಂದು ಆಲೋಚಿಸುವುದು ಆರೋಗ್ಯಕರ ಧೋರಣೆಯ ಲಕ್ಷಣ. ಆದರೆ, ನಾನೇ ಅತ್ಯುತ್ತಮವಾದ ಪ್ರದರ್ಶನವನ್ನು ನೀಡುವುದು. ಇನ್ನಾರೂ ಕೊಡುವುದಿಲ್ಲ ಅಥವಾ ಕೊಡಕೂಡದು ಎನ್ನುವುದು ಮನೋರೋಗದ ಲಕ್ಷಣ. ಇಂತಹ ಮನಸ್ಥಿತಿಯವರು ತಮ್ಮ ಎದುರಾಳಿಗಳನ್ನು ಬಗ್ಗುಬಡಿಯಲು ಏನೆಲ್ಲಾ ಮಾಡುತ್ತಾರೆ ಎಂಬ ಸಾಕಷ್ಟು ಉದಾಹರಣೆಗಳನ್ನು ನಮ್ಮ ಸಾಮಾನ್ಯ ಜೀವಿತಾವಧಿಯಲ್ಲೇ ಕಾಣುತ್ತಿರುತ್ತೇವೆ.

ಇತರರನ್ನು ಕಡೆಗಣಿಸುವುದು ಮತ್ತು ಅವರದೇನೂ ಅಂತಹ ಸತ್ವವಿಲ್ಲ ಎನ್ನುವುದು ಈ ಅರಿಮೆಯುಳ್ಳವರ ತೀರಾ ಸಾಮಾನ್ಯ ಲಕ್ಷಣ. ತಮ್ಮನ್ನು ಇತರರೊಂದಿಗೆ ಸದಾ ಹೋಲಿಸಿಕೊಳ್ಳುತ್ತಿರುತ್ತಾರೆ. ಅದನ್ನು ಹೊರಗೆ ತೋರ್ಪಡಿಸದಿದ್ದರೂ ತಮ್ಮೊಳಗೇ ಆ ಹೋಲಿಕೆಯ ಕೆಲಸ ಭರದಿಂದ ಸಾಗುತ್ತಲೇ ಇರುತ್ತದೆ. ತಾವು ಮಾಡಿದ ಕೆಲಸವನ್ನು ಯಾರೂ ವಿಮರ್ಶೆ ಮಾಡಬಾರದು ಮತ್ತು ಅದನ್ನು ಸರ್ವಶ್ರೇಷ್ಟವೆಂದು ಅವರು ಭಾವಿಸಿರುತ್ತಾರೆ. ಅವರು ಆ ವಿಷಯದಲ್ಲಿ ಎಡವಟ್ಟುಗಳನ್ನೇ ಮಾಡಿರಲಿ. ಅದನ್ನು ಅವರು ತೋರಿಸಿಕೊಳ್ಳುವುದಿಲ್ಲ.

ಇತರರ ಮಾತುಗಳನ್ನು ಕೇಳಿಸಿಕೊಳ್ಳುವುದಿಲ್ಲ.ಎದುರು ಇರುವವರ ಮಾತುಗಳನ್ನು ಕೇಳುವುದಕ್ಕಿಂತ ತಮ್ಮ ಮಾತುಗಳನ್ನು ಹೇಳುವ ಆತುರವೇ ಅವರಲ್ಲಿ ಹೆಚ್ಚಾಗಿದ್ದು, ಎಷ್ಟೋ ಬಾರಿ ಇತರರು ಹೇಳುವ ಮಾತುಗಳಲ್ಲಿ ವಾಕ್ಯವೊಂದು ಪೂರ್ಣವಾಗುವುದಕ್ಕೂ ಬಿಡದೇ ತಾವು ತಮ್ಮದನ್ನು ಹೇಳುತ್ತಿರುತ್ತಾರೆ. ತಾವು ತಮ್ಮ ಕತೆ, ಅನುಭವ, ವಿಚಾರ ಇತ್ಯಾದಿಗಳನ್ನೆಲ್ಲಾ ಇತರರಿಗೆ ಹೇಳುವಂತೆ ತಾವೂ ಇತರರದನ್ನು ಕೇಳುವ ಸಹನೆಯನ್ನೂ, ಔದಾರ್ಯವನ್ನೂ, ಹೋಗಲಿ ಕರುಣೆಯನ್ನೂ ತೋರುವುದಿಲ್ಲ.
ಇಂತಹ ಲಕ್ಷಣವು ಇದ್ದರೆ ಮೊದಲು ನಾವು ಅಭ್ಯಾಸ ಮಾಡಬೇಕಾಗಿರುವುದು ಮೌನ.

ನನ್ನ ಎದುರು ಇರುವವರು ಮಾತನಾಡಿದ ಮೇಲೆ ನಾನು ಮಾತಾಡುತ್ತೇನೆ ಎಂಬ ಸ್ಪಷ್ಟವಾದ ಸಂಕಲ್ಪದಿಂದ ಸಂವಹನಕ್ಕೆ ತೊಡಗಬೇಕು. ಒಂದು ವೇಳೆ ಎದುರಿಗೆ ಇರುವವರೂ ದೇವರೇ ಆಗಿದ್ದರೆ, ಸರಿ, ಹಾಳಾಗಿ ಹೋಗಲಿ ದೇವರು ದೇವರುಗಳ ನಡುವೆ ಯುದ್ಧವೇಕೆ ಎಂದು ಸುಮ್ಮನಾಗುವುದು ಅತ್ಯಂತ ಶ್ರೇಯಸ್ಕರ. ಎಂತೂ ಆ ದೇವರು ಈ ದೇವರ ಮಾತು ಕೇಳುವುದಿಲ್ಲ ಎಂಬ ಅರಿವಾಯಿತಲ್ಲಾ. ಈ ದೇವರು ಬಾಯಿಮುಚ್ಚಿಕೊಂಡು ತನ್ನ ಶಕ್ತಿವ್ಯಯ ಮಾಡದಿರುವಷ್ಟು ಜಾಣ ದೇವರಾಗಬೇಕು.

ಈ ದೇವರುಗಳಿಗೆ ಸಾಮಾನ್ಯವಾಗಿ ಒಳಗೊಳಗೆ ತಮ್ಮನ್ನು ಪ್ರಶಂಸಿಸುವುದಿಲ್ಲ, ತಮ್ಮನ್ನು ಪುರಸ್ಕರಿಸುವುದಿಲ್ಲ ಎಂಬ ಖೇದವು ಯಾವಾಗಲೂ ಕೊರೆಯುತ್ತಿರುವ ಕಾರಣದಿಂದ ಉಗ್ರವಾಗಿಯಾದರೂ ಪ್ರಶಂಸೆಯನ್ನು ಪಡೆಯಬೇಕೆಂದು ಎದುರಿರುವವರನ್ನು ಮಣಿಸುವ ಯತ್ನ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ತಮ್ಮಿಂದ ಯಾವುದೇ ಲೋಪದೋಷವಾದರೂ ಅದನ್ನು ತಾವೇ ಸಮರ್ಥಿಸಿಕೊಂಡು ಅಥವಾ ಸಮಜಾಯಿಷಿ ನೀಡಿಕೊಂಡು ಅದೇನೂ ಅಂತಹ ಘನವಾದ ಲೋಪವೇನಲ್ಲ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಸರಿ, ಈ ಅರಿಮೆ ಇದೆ ಎಂದು ಅರಿವಾಯಿತು. ಮುಂದೆ? ಅರಿಮೆ ಅಮಲೇರಿಸುವುದಾದರೆ ಅರಿವು ಅಮಲಿಳಿಸುವ ಸಾಧನವಷ್ಟೇ. ಅಮಲಿಲ್ಲದೇ ಅವಧಾನದಲ್ಲಿ ಅಡಿಗಳನ್ನಿಟ್ಟರಾಯಿತು.
ಇಂತೀ ದೈವಿಕ ಅರಿಮೆಯ ಪುರಾಣವು ಮುಕ್ತಾಯವಾದುದು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending