ಭಾವ ಭೈರಾಗಿ
#Second Hand ಹುಡುಗ್ರು ಅಂದ್ರೆ ಅಷ್ಟೊಂದು ಸದರ ಆಗೋಯ್ತಾ..!

ಲೋ ನಾಯಿ, ಹಂದಿ, ಕಪ್ಪೆರಾಯ, ಕತ್ತೆ, ಕೋತಿ, ಹೋತಿಕ್ಯಾತ, ಹಲ್ಲಿ, ಲೋಫರ್, ಪಾಪರ್, ಸಿಗೋ ನನ್ ಕೈಗೆ. ಆಹಾ… ನನ್ ಬಂಗಾರ,,,, ಅದೆಷ್ಟು ಮುದ್ದಾಗ್ ಬಯ್ತಿಯೆ ನನ್ ಗಿಣಿ. ನನ್ನ ಬಯ್ಯೋದ್ರಲ್ಲಿ ಅದೇನ್ ಖುಷಿನೆ ನಿಂಗೆ. ನಂಗೊತ್ತು ಕಣೆ ನಿಂಗ್ ಇದ್ಕಿಂತ ಜಾಸ್ತಿ ಬಯ್ಯೊಕ್ ಬರಲ್ಲ ಅಂತ. ಇನ್ನೊಮ್ಮೆ ಸಿಕ್ಕಾಗ ಬಯ್ಗುಳದ ಬಗ್ಗೆ ಒಂದ್ ಕ್ಲಾಸ್ ಮಾಡ್ತಿನಿ ಕೇಳು ಸರೀನಾ…
ಕಾಲ್ ರಿಸೀವ್ ಮಾಡ್ಲಿಲ್ಲ ಅನ್ನೊ ಒಂದೇ ಕಾರಣಕ್ಕೆ ನೀನು ಶಿರಸಿ ಮಾರಿಕಾಂಬೆ ಅವತಾರ ತಗೊತಿಯಲ್ಲ ಇದು ಸರಿನಾ.. ಅಲ್ವೆ ಬಂಗಾರ ನಿನ್ ಬರ್ತಡೆಗೆ ಏನ್ ಗಿಫ್ಟ್ ಕೊಡೋದು ಅಂತ ರಾತ್ರಿಯಿಡೀ ಯೋಚಿಸಿ ಬೆಳೆಗ್ಗೆ ಎದ್ದು ಅನಾಥಾಶ್ರಮಕ್ಕೆ ಹೋಗಿ ನಿನ್ ಹೆಸರಲ್ಲಿ ಒಂದು ಮಗೂನ ದತ್ತು ತಗೊಂಡೆ. ಇಡೀ ಆಶ್ರಮವನ್ನೆ ತಗೊಳೊ ಮನಸು, but ಏನ್ ಮಾಡ್ಲಿ ನಿನ್ ಭಾವಿ ಗಂಡ ದುಡಿಯೋದು ಜೇಬಿನ ತುಂಬಾನೆ ಹೊರತು ಬ್ಯಾಗಿನ ತುಂಬಾ ಅಲ್ವಲ್ಲ. ಚಿಂತೆ ಮಾಡ್ಬೇಡ ಇನ್ ಹತ್ತು ವರ್ಷ ಕಾಯಿ ಅಮ್ಮನ ಹೆಸರಲ್ಲಿ ಒಂದು ಆಶ್ರಮ ಕಟ್ತೇನೆ ಅದರ ಎಲ್ಲ ಮಕ್ಕಳಿಗೂ ನೀನೆ ಅಮ್ಮ. ಅದ್ಬಿಡು ಈ ದತ್ತು ತಗೊಳೋಕ್ ಹೋದಾಗ ಅಲ್ಲಿ ನಿನ್ ಥರಾನೆ ನಗೊ ಒಬ್ಬ ಮುದ್ದು ಹುಡುಗಿ ಸಿಕ್ಳು ಅವಳ ಇಡೀ ವರ್ಷದ ಸ್ಕೂಲ್ ಫೀಸು, ಊಟದ ಖರ್ಚು, ಬಟ್ಟೆಬರೆ ಎಲ್ಲದಕ್ಕೂ ಸೇರಿ ಹಣ ಕೊಟ್ಟು , ಅವಳಿಗೆ ನಾನು ನಿನ್ ಅಪ್ಪ ಕಣೊ ಅಮ್ಮನ ಬರ್ತಡೇಗೆ ವಿಶ್ ಮಾಡು ಅಂತ ವಿಶ್ ಮಾಡಿಸಿ ಅದನ್ನ ವಿಶ್ ಮಾಡಿಸಿ ನಿನಗೆ ತೋರ್ಸೋಕೆ ವಿಡಿಯೋ ಮಾಡಿಕೊಳ್ತಿದ್ದೆ. ಆಗ ನಿನ್ನ ಮೂರು ಮಿಸ್ಡ್ ಕಾಲ್ಸ್ ಬಂದಿದೆ. ತಿರುಗಿ ಕಾಲ್ ಮಾಡಿದ್ರೆ ಅಮ್ಮಾವ್ರಿಗೆ ಕೋಪ. ಈಗ ಹೇಳು ನಾನ್ ಮಾಡಿದ್ದು ತಪ್ಪಾ..?
ನಂಗೊತ್ತುಕಣೆ ನಿನಗೆ ನನ್ನ ಬಿಟ್ಟಿರೋಕಾಗಲ್ಲ ಅದಕ್ಕೆ ನಾನು ಅರ್ಧಗಂಟೆ ಮಾತಡದೆ ಇದ್ರು ಒದ್ದಾಡ್ತಿಯ, ಮೂರು ಮಿಸ್ಡ್ ಕಾಲ್ ಇದೆ, ನೋಡಿದ್ರೆ ಆರುಬಾರಿ ಕಾಲ್ ಮಾಡಿದಿನಿ ಅಂತ ಸುಳ್ಳು ಹೇಳ್ತಿಯ. ಅದ್ಯಾಕೆ ನಿನಗೆ ನಾನ್ ಹಾಕಿಸೋ ಯಾವ ಕಾಲರ್ ಟ್ಯೂನ್ ಕೂಡ ಇಷ್ಟ ಆಗಲ್ಲ, ಯಾವ್ದನ್ನೆ ಹಾಕಿದ್ರು ಬಯ್ತಿಯ. ಹೀಗೆ ಆಡ್ತಿರು ಅದೇ ಹಳೇ ಟ್ರೀಣ್ ಟ್ರಿಣ್ ಕೇಳೋತರ ಮಾಡ್ತಿನಿ. ಏನೊ ನನ್ ಹುಡುಗಿಗೆ ಮ್ಯೂಸಿಕ್ ಇಷ್ಟ ಅಂತ ಹಾಗ್ ಹಾಕ್ಸಿದೆ ತಪ್ಪಾ,,?
ಏನಾದ್ರು ಒಂದ್ ಕ್ಯಾತೆ ತೆಗೆದು ನನ್ನ ಬಯ್ಲಿಲ್ಲ ಅಂದ್ರೆ ನಿನಗೆ ಊಟ ಸೇರಲ್ಲ ಅಂತ ಗೊತ್ತು, ಹೀಗೆ ಬಯ್ತಿರು ಪ್ರಾಣಿದಯಾ ಸಂಘಕ್ಕೆ ಕಂಪ್ಲೆಂಟ್ ಕೊಡ್ತಿನಿ. ವೆಜಿಟೇರಿಯನ್ ಆಗಿನೇ ಈ ಮಟ್ಟಕ್ಕೆ ನನ್ ತಲೆ ತಿನ್ನೊ ನೀನು ನಾನ್ ವೆಜಿಟೇರಿಯನ್ ಆಗಿದ್ರೆ ನನ್ನ ಹಂಗಂಗೆ ನುಂಗಿ ಬಿಡ್ತಿದ್ಯೇನೊ. ನೀನ್ ಯಾವ ಸೀಮೆ ವೆಜಿಟೇರಿಯನ್ ನಾನೂ ವೆಜಿಟೇರಿಯನ್ ಆಗಿರೋದಕ್ಕೆ ನಿನ್ ತಲೆ ತಿನ್ನದೆ ಸುಮ್ನಿರ್ತೀನಿ ನೋಡಿ ಕಲಿ ಹೀಗಿರ್ಬೇಕು ಸಸ್ಯಾಹಾರಿಗಳು. ನನ್ ಬೊಂಬೆ ಎಷ್ಟೇ ಕೋಪ ಮಾಡ್ಕೊಂಡ್ರು ನಾನ್ sorry ಕೇಳೋಕೆ ಮಧ್ಯರಾತ್ರಿನೆ ಕಾಲ್ ಮಾಡ್ತಿನಿ ಯಾಕೆ ಗೊತ್ತಾ ಅವಾಗಾದ್ರೆ ನೀನ್ ಮನೆಲಿರ್ತಿಯ ಬಯ್ಯಲ್ಲ ಅನ್ನೋ ಧೈರ್ಯ. ನೀನ್ ಮಾತಾಡದೆ ಇದ್ರೂ ನನ್ ಮಾತು ಕೇಳೋಕೆ ಕಾಲ್ ರಿಸೀವ್ ಮಾಡೇ ಮಾಡ್ತಿಯ ಅನ್ನೊ ನಂಬಿಕೆ ಕಣೊ.
ಮಾತಿಗೊಂದ್ಸಲ ನನ್ನ ಸೆಕೆಂಡ್ ಹ್ಯಾಂಡ್ ಹುಡುಗ ಅಂತ ಚುಡಾಯ್ಸೋದೆ ಆಯ್ತು. ನಿಂಗೊತ್ತ ಲವ್ ಫೇಲ್ವರ್ ಹುಡುಗ್ರು ಯಾವತ್ತು ಪ್ರೀತ್ಸಿದ್ ಹುಡುಗಿ ಮನಸಿಗೆ ನೋವು ಮಾಡಲ್ಲ ಕಣೊ. ಅಷ್ಟಕ್ಕೂ ಅವಳೆ ನನ್ ಹಿಂದೆ ಬಿದ್ದಿದ್ದು ನಾನಲ್ಲ. ಕೊನೆಗೆ ಎರಡು ವರ್ಷ ರಿಜೆಕ್ಟ್ ಮಾಡ್ತಾನೆ ಬಂದೆ. ಅದೊಂದಿನ ಅವಳ ಪ್ರೀತಿಗೆ ಮನಸು ಕರಗದೆ ಇರೋಕಾಗಲಿಲ್ಲ. ಒಪ್ಕೊಂಡೆ ಆದ್ರೆ ಅವತ್ತೆ ವಿಷಯ ಅವರಪ್ಪನಿಗೆ ಗೊತ್ತಾಗಿ ಅವಳನ್ನ ಮೂಡಬುದ್ರೆಯ ಆಳ್ವಾಸ್ ಗೆ ಸೇರಿಸಿದ್ರು. ಇನ್ಮೇಲೆ ಅವಳನ್ನ ಮೀಟ್ ಮಾಡೋ ಪ್ರಯತ್ನ ಮಾಡಿದ್ರೆ ಅವಳಮ್ಮನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ತೇನೆ ಅಂದ್ರು. ನನ್ ಪ್ರೀತಿಗಾಗಿ ನಾನ್ ಪ್ರೀತಿಸಿದ ಹುಡುಗಿ ಅಪ್ಪ ಅಮ್ಮ ಸಾಯ್ಬೇಕಾ… ಬೇಡ ಅನಿಸ್ತು ಕಣೊ ಅದಕ್ಕೆ ಅಲ್ಲಿಂದ ದೂರ ಬಂದೆ. ಅದಾದ ಒಂದೇ ವರ್ಷದಲ್ಲಿ ಗೊತ್ತಾಯ್ತು ಆಕ್ಸಿಡೆಂಟ್ ಒಂದರಲ್ಲಿ ಆ ದೇವರು ಅವಳನ್ನ ಕರ್ಕೊಂಡ್ ಬಿಟ್ಟ ಅಂತ. ಮೂರು ವರ್ಷದ ನಂತರ ನೀನ್ ಸಿಕ್ಕೆ. ಫಸ್ಟ್ ಟೈಮ್ ನನಗೆ ಹೊಟ್ಟೆಲಿ ಚಿಟ್ಟೆ ಬಿಟ್ಟ ಹಾಗಾಯ್ತು. ಅಮ್ಮನ ವಾರಸುದಾರಿಣಿ ನೀನೆ ಅನಿಸ್ತು. ನೀನ್ ಸಿಕ್ಕ ಮೇಲೆ ನನಗೆ ಜಗತ್ತು ಪ್ರತಿದಿನ ಹೊಸದಾಗಿ ಕಾಣ್ಸತ್ತೆ ಕಣೊ. ನಾನು ನಿನಗಿಂತ ನಿನ್ ಅಪ್ಪ ಅಮ್ಮನ್ನ ಜಾಸ್ತಿ ಪ್ರೀತಿ ಮಾಡ್ತಿನಿ. ಅವರಿಗೆ ನೋವಾದ್ರೆ ನಿನಗೂ ನೋವಾಗುತ್ತೆ ಅನ್ನೊ ಸತ್ಯ ಗೊತ್ತು. ಈಗ ಹೇಳು ಈ ಸೆಕೆಂಡ್ ಹ್ಯಾಂಡ್ ಹುಡುಗ ಬೆಸ್ಟ್ ಅಲ್ವಾ..
ನನ್ ಮೇಲೆ ಕೋಪ ಬಂದ್ರೆ ನಾನ್ ಕೊಡಿಸಿರೋ ಟೆಡ್ಡಿಬೇರ್ ಗೆ ನಾಲಕ್ ಏಟು ಹೆಚ್ಚಾಗೆ ಕೊಡ್ತಿಯ ಅಂತ ಗೊತ್ತು. ಹೊಡಿ ನನಗೇನು ಬೇಜಾರಿಲ್ಲ. ಅವನ ಮೇಲೆ ನನಗೂ ಹೊಟ್ಟೆಕಿಚ್ಚಿದೆ. ನನ್ ಹೊಟ್ಟೆ ಉರ್ಸೋಕೆ ಅಂತ ಅದೆಷ್ಟುದಿನ ನೀನ್ ಅವನನ್ನ ಹಿಡಿದು ಮುದ್ದಾಡಿಲ್ಲ, ಈಗ ಹೊಡಿ ಅವನಿಗೆ ಬುದ್ದಿ ಬರಲಿ.
ನಂಗೊತ್ತು ನೀನು ಇಷ್ಟರಲ್ಲಿ ಕೋಪ ತಣ್ಣಗಾಗಿ ನೂರಾ ಒಂದು ಬಾರಿ ನಿನ್ ಮೊಬೈಲ್ ನೋಡಿರ್ತಿಯ ಅಂತ. ಕಾಲ್ ಮಾಡೋಕೆ ಮೇಡಮ್ಮವರಿಗೆ ಸ್ವಾಭಿಮಾನ ಅಡ್ಡ ಬರುತ್ತೆ. ರಾತ್ರಿ ನಾನ್ ಕಾಲ್ ಮಾಡೇ ಮಾಡ್ತೇನೆ ಅಂತ ನಿಂಗೊತ್ತು. ಅದಕ್ಕೆ ಬೇಜಾನ್ ಬಿಲ್ಡಪ್ ಕೊಡ್ತಿದಿಯ. ಇರಲಿ ಬಿಡು ನಾನೆ ಸೋಲ್ತೇನೆ. ನಿನ್ ಮುಂದೆ ಸೋಲೋದ್ರಲ್ಲಿ ನನಗೊಂಥರಾ ಧನ್ಯತಾ ಭಾವ ಕಣೆ. ಅಂದಹಾಗೆ ಈ ಗ್ಯಾಪಲ್ಲಿ ಹೊಸದಾಗಿ ಎರಡು ಪದ್ಯ ಬರ್ದಿದಿನಿ. ನನ್ ಕವಿತೆ ಅಂದ್ರೆ ನಿನಗೆಷ್ಟು ಇಷ್ಟ ಅಂತ ಗೊತ್ತು ಸರಿರಾತ್ರಿ ಕಾಲ್ ಮಾಡಿದಾಗ ಒಂದನ್ನ ಫೋನಲ್ಲಿ ಓದಿ ಹೇಳ್ತೇನೆ. ಮತ್ತೊಂದನ್ನ ಫೋನಿಡುವ ಕೊನೆಯಲ್ಲಿ ಫೋನಿಗೆ ಕೊಡ್ತೇನೆ ಇಸ್ಕೊ.
ಒಂದ್ ವಿಷಯ ತಿಳ್ಕೊ ನೀನ್ ಹಿಂಗೆಲ್ಲ ಮುದ್ ಮದ್ದಾಗಿ ಪೆದ್ ಪದ್ದಾಗಿ ಆಡೋದಕ್ಕೆ ನೀನಂದ್ರೆ ನನಗೆ ಸಾಯೊವಷ್ಟ್ ಇಷ್ಟ ಕಣೆ.
Bye ಪುಟ್ಟಕ್ಕ
-ಇಂತಿ ಎಂದೆಂದಿಗೂ ನಿನ್ನವನು

ಅಂಕಣ
ಕವಿತೆ | ಇಷ್ಟಂತೂ ಹೇಳಬಲ್ಲೆ..!

- ರಂಗಮ್ಮ ಹೊದೇಕಲ್, ತುಮಕೂರು
ನಾವು
ಗುಡಿಸಲಿನಲ್ಲಿ ಹುಟ್ಟಿ
ಅವ್ವನೆದೆಯ ಹಾಲು ಕುಡಿದು
ಗೋಣಿತಾಟಿನ ಮೇಲೆ ಮಲಗಿ
ನಕ್ಷತ್ರ ಎಣಿಸಿದವರು!
ಚೀಕಲು ರಾಗಿಯ ಅಂಬಲಿ ಕುಡಿದು
ತಂಗಳು ಹಿಟ್ಟಿಗೆ ಉಪ್ಪು ಸವರಿ
ಹಸಿವ ನೀಗಿಸಿಕೊಂಡವರು
ದಾಹಕ್ಕೆ ಕಣ್ಣೀರನ್ನೇ ಕುಡಿದವರು!
ದಾಸಯ್ಯನಂತಹ ಅಪ್ಪ
ಭೂಮ್ತಾಯಿಯಂತಹ ಅವ್ವ
ಎದೆಗಿಳಿಸಿದ್ದು
ಅಕ್ಷರ ಮತ್ತು ಅಂತಃಕರಣ!
ಯಾರು ಯಾರೋ ಕೊಟ್ಟ
ಹರಿದ ಚೀಲ,ಮುರುಕು ಸ್ಲೇಟು
ತುಂಡು ಬಳಪ,ಬಳಸಿ ಎಸೆದ ಬಟ್ಟೆ
ನಮ್ಮ ಪ್ರಿಯವಾದ ಆಸ್ತಿಗಳು!
ಬುಡ್ಡಿದೀಪದ ಬೆಳಕಿನಲ್ಲಿ
ಅಕ್ಷರಗಳ ಜೊತೆ ಆಡಿದ ನಾವು
ಯಾರದೋ ಸಂಭ್ರಮದಲ್ಲಿ
ಉಳಿದ ಅನ್ನಕ್ಕೆ ಕಾದಿದ್ದು
ಇನ್ನೂ ಹಸಿಯಾಗಿದೆ!
ಯಾರದೋ ಜಮೀನಿಗೆ
ಬೆವರು ಬಸಿದ
ಅಪ್ಪ ಅವ್ವ
ಅರ್ಧ ಉಂಡು ಕಣ್ಣೀರಾದದ್ದೂ
ನೆನಪಿದೆ!
ಅಂದೂ ನಾವು
ಶಾಪವಾಗಲಿಲ್ಲ
ಕೇಡನ್ನೂ ಹಾಡಲಿಲ್ಲ!
ಉಪ್ಪಿಟ್ಟಿನಿಂದ ಅನ್ನಕ್ಕೆ ಬದಲಾದ
ಈ ಯುಗದಲ್ಲಿಯೂ
ನೀವು ನಿಮಗೆ ಪರಂಪರೆಯಿಂದ ಬಂದಿರುವ ಆಸ್ತಿ,ಅಂತಸ್ತು
ಸೇವಕರು…ಇತ್ಯಾದಿತ್ಯಾದಿಗಳನ್ನು
ಪ್ರದರ್ಶಿಸುತ್ತಲೇ ಇದ್ದೀರಿ!
ಸಹ್ಯವಾಗದ ಅಸ್ತ್ರಗಳನ್ನೇ
ನೀವು ಮಸೆಯುವಾಗ
ನಿಮ್ಮ ಅಜ್ಞಾನಕ್ಕೂ ನಮ್ಮ ಅನುಕಂಪವಿದೆ!
ನಾವು ಈ ನೆಲದ ಮಕ್ಕಳು
ಬೆಂಕಿಯೂ.ಬೆಳಕೂ ಆಗಬಲ್ಲ ಕಿಡಿಗಳು
ಭದ್ರ ಬೇರೂರಿ ಆಕಾಶಕ್ಕೆ ಚಿಮ್ಮಿ
ನಿಮ್ಮ ಕಣ್ಣಲ್ಲೂ ಮತಾಪು ಹೊತ್ತಿಸಬಲ್ಲವರು!! (ರಂಗಮ್ಮ ಹೊದೇಕಲ್, ತುಮಕೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಚಳಿಗಾಲದ ಎರಡು ಜೀವರಸಗಳು

- ಜಿ. ದೇವೂ ಮಾಕೊಂಡ
ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ
ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ
ಒಂದು ಕಡೆ ಕಾಫಿಯ ಸ್ವಾಗತ
ಮತ್ತೊಂದು ಕಡೆ ಮುತ್ತಿನ ಸೆಳೆತ.
ಯಾವುದು ಆರಿಸಿಕೊಳ್ಳಲಿ
ಈ ನಿಶಬ್ಧ ಚಳಿಯಲಿ?
ಕಾಫಿಯ ಇಚ್ಚೆಯನ್ನೊ?
ಮುತ್ತಿನ ಬಿಸಿಯನ್ನೊ?
ಇಷ್ಟೊಂದು ಚಡಪಡಿಕೆಯಿರಬಾರದು
ಇಚ್ಚೆಯ ಸಂಚಯನಗಳಲ್ಲಿ!
ನಮ್ಮ ಆರಂಭದ ಭೇಟಿಗೆ,
ಒಂದರ ನೆನಪಿಗೆ ಇನ್ನೊಂದು
ಸುಂಕವಾಗಲಿ
‘ಬೈ ವನ್ ಗೆಟ್ ವನ್ ಫ್ರಿ’
ಚಳಿಗಾಲದ ಜಾಹಿರಾತು ಆಫರ್.
ಕೊನೆಗೊಂದು ದಿನ ಕುರುಹುಗಳಂತೆ ನೆನಪಿಸಿಕೊಳ್ಳೊಣ
ಇದು ಆರಂಭವೊ ಅಥವ
ಅಂತ್ಯವಾಗುವುದೊ?
ಯಾರಿಗ್ಗೊತ್ತು?
ಈ ಕಾಫಿ
ಈ ಮುತ್ತು
ಯುದ್ದೋನ್ಮಾದದ ಸಂಕೇತಗಳಾ?
ಅಥವ
ಕೊನೆಯ ಯುದ್ದದ
ಕರಾರುಗಳಾ?
ನೆನಪಿಗೆ ಒಂದೊಂದು ಸೆಲ್ಫಿ ಇರಲಿ
ಜೊತೆಗೊಂದಿಷ್ಟು ಭಿನ್ನ ನಗುವಿರಲಿ.. (ಕವಿ: ಜಿ.ದೇವೂ ಮಾಕೊಂಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ನಟಿಸುತ್ತೇನೆ ಈ ಚಿತ್ರಶಾಲೆಯಲ್ಲಿ

- ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು
ದುಗುಡದ ದನಿಗಳೆಲ್ಲ
ಹುದುಗಿ ಹೋಗಲಿ
ನನ್ನೊಳಗೆ
ದುಃಖದ ನದಿಗಳೆಲ್ಲ
ಹಾದು ಹೋಗಲಿ..
ನಾನು ಕೂಡ ನಿನ್ನಂತೆ
ನಗೆಯ ನಟಿಸುತ್ತೇನೆ..
ನಿರಾಕಾರ ಕ್ಯಾನ್ವಾಸಿನ ಮೇಲೆ
ಬೇಕಾದ್ದನ್ನು ಗೀಚಿಕೊಳ್ಳುತ್ತೇನೆ
ಒಮ್ಮೊಮ್ಮೆ ಬೇಡದ್ದೂ..
ಯಾರ್ಯಾರದ್ದೊ ಇಷ್ಟಾನಿಷ್ಟದಂತೆ!
ಗತದ ಘೋರ ಪಾತಕವನ್ನು
ತರಚು ಗಾಯವೆಂದು ಕರೆದು,
ಹೋದಲ್ಲಿ, ಬಂದಲ್ಲಿ
ಅದನ್ನೇ ಜಪಿಸಿ ತಳವೂರುತ್ತೇನೆ…
ಹುಸಿ ನೆಮ್ಮದಿಯ ನಿಟ್ಟುಸಿರ
ಹೊರಸೂಸಿ..
ಅತ್ಯಾಸೆಯ ರೆಕ್ಕೆಗಳ
ಮುರಿದುಕೊಳ್ಳುತ್ತೇನೆ
ದಿಗಂತದೆಡೆಗೆ ಹಾರುವ
ಕನಸುಗಳ ಸುಟ್ಟು,
ಅದರ ಬೂದಿಯನ್ನೆ
ವಿಭೂತಿಯಾಗಿ ಬಳಿದು,
ವೈರಾಗ್ಯದ
ಮಾತುಗಳನುದುರಿಸುತ್ತಾ..
ಸುತ್ತಲಿನ ಸತ್ತ ಮೆದುಳುಗಳೊಳಗೆ ನಿರಾಕಾರವಾದವುಗಳೆನೇನೋ ಮೊಳೆತು,
ಬೇರು ಬಿಟ್ಟು, ಆಳಕ್ಕಿಳಿದು
ಕೈಕೊಡಲಿಗಳಾಗಿ
ಕತ್ತು ಕತ್ತರಿಸುವ ಫರ್ಮಾನು
ಹೊರಡಿಸುವಾಗಲೂ
ನಿಶ್ಚಿಂತೆಯ ನಟಿಸುತ್ತೇನೆ!
ಮಹನೀಯನ ಚಿತ್ರಗಳು
ಬೇಕಾದಂತೆ ಬರೆಯಲ್ಪಡುವ,
ಬಿಕರಿಯಾಗುವ, ಚಿತ್ರಶಾಲೆಯಲ್ಲಿ;
ಜೀ..ಹುಜೂರ್..ಉಸುರುತ್ತಾ,
ನಿಂತ ಮೂಢರ ಗುಂಪುಗಳೊಳಗೆ
ಕಾಲ ಸವೆಸುತ್ತೇನೆ. (ಕವಿ:ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಚೀಟಿ ವ್ಯವಹಾರದಲ್ಲಿ ಮೋಸ ; ಅತಿಆಸೆಗೆ ಬಲಿಯಾದ ಗಣಿನಾಡಿನ ಜನ
-
ದಿನದ ಸುದ್ದಿ6 days ago
ದೇಶಾದ್ಯಂತ ಇಂದು ಮಹಾವೀರ ಜಯಂತಿ ಆಚರಣೆ ; ಗಣ್ಯರ ಶುಭಾಶಯ
-
ದಿನದ ಸುದ್ದಿ5 days ago
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ | ಕೇಂದ್ರ ಕೊಡದಿದ್ದರೂ ರಾಜ್ಯ ಸರ್ಕಾರ ನೀಡಲಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್
-
ದಿನದ ಸುದ್ದಿ5 days ago
ದಾವಣಗೆರೆ | ಮಕ್ಕಳ ಬೇಸಿಗೆ ರಜೆಗೆ ಶುಭ ಕೋರಿದ ತಿಂಗಳ ಅಂಗಳ
-
ದಿನದ ಸುದ್ದಿ6 days ago
ಚನ್ನಗಿರಿ | ‘ಕುವೆಂಪು ಓದು : ಕಮ್ಮಟ’ ; ಚರ್ಚೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
-
ದಿನದ ಸುದ್ದಿ5 days ago
ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಶಂಕುಸ್ಥಾಪನೆ
-
ದಿನದ ಸುದ್ದಿ6 days ago
ರುದ್ರಪ್ಪ ಹನಗವಾಡಿ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ
-
ದಿನದ ಸುದ್ದಿ4 days ago
ದಾವಣಗೆರೆ | ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು : ನೀಲಾನಹಳ್ಳಿಯಲ್ಲಿ ಎನ್.ಎಸ್.ಎಸ್ ಶಿಬಿರ