Connect with us

ಅಂತರಂಗ

ಅರಿಮೆಯ ಅರಿವಿರಲಿ-50 : ಮನಸ್ಸೆಂದರೆ ಏನದು..?

Published

on

  • ಯೋಗೇಶ್ ಮಾಸ್ಟರ್

ದೇವರು, ಧರ್ಮ, ಪ್ರೇಮ, ರಾಷ್ಟ್ರಭಕ್ತಿ, ಸಂಬಂಧ, ಶೀಲ, ಜೀವನ, ಆತ್ಮ, ಪರಮಾತ್ಮ, ಆಧ್ಯಾತ್ಮವೇ ಮೊದಲಾದ ಅನೇಕ ವಿಷಯಗಳು ಅತ್ಯಂತ ಅಪವ್ಯಾಖ್ಯಾನಕ್ಕೊಳಗಾಗಿವೆ. ಅದರಂತೆಯೇ ಮನಸ್ಸೂ ಕೂಡಾ. ವ್ಯಕ್ತಿಯು ತನ್ನ ಬದುಕಿನಲ್ಲಿ ಬಹು ಜನರು ಉಪಯೋಗಿಸುವ ಮತ್ತು ಬಹಳ ಗೌರವ ಕೊಡುವ ಕೆಲವು ಪರಿಕಲ್ಪನೆಗಳನ್ನು ತಾನೂ ಬಳಸಲು ಇಷ್ಟಪಡುತ್ತಾನೆ.

ಹಾಗೆ ಅವುಗಳನ್ನು ಬಳಸುವುದರಿಂದ ತನ್ನ ಗೌರವವು ಹೆಚ್ಚುತ್ತದೆ ಎಂದು ಭಾವಿಸುತ್ತಾನೆ. ಹಾಗಾಗಿ ಅದನ್ನು ತನಗೆ ತಿಳಿದ ಮಟ್ಟಿಗೆ ಬಳಸಲು, ವಿವರಿಸಲು ಪ್ರಾರಂಭಿಸುತ್ತಾನೆ. ಅವುಗಳೆಲ್ಲವೂ ಅಮೂರ್ತ (ಅಬ್ಸ್‍ಟ್ರಾಕ್ಟ್) ಆಗಿರುವುದರಿಂದ, ಭೌತಿಕವಾಗಿ ಸಿಕ್ಕು ಪ್ರಯೋಗಾಲಯದಲ್ಲಿ ಪ್ರಯೋಗಗಳ ಮೂಲಕ ಪರೀಕ್ಷಿಸಲು ಆಗದೇ ಇರುವುದಾಗಿರುವುದರಿಂದ ತಮ್ಮ ತಮ್ಮ ಮೂಗಿನ ನೇರಕ್ಕೆ, ತಮ್ಮ ತಮ್ಮ ಬಯಕೆಗಳಿಗೆ ವಿವರಿಸಿಕೊಂಡು ಆ ಅಮೂರ್ತ ಮತ್ತು ಮೌಲಿಕ ಪದಗಳು ತಮ್ಮವಾಗಿವೆ ಎಂದು ತೃಪ್ತಿಪಡಲು ಸಾಧ್ಯ.

ಸರಿ, ಇವು ಅಪವ್ಯಾಖ್ಯಾನಗಳು ಎಂದು ತಿಳಿವುದು ಹೇಗೆ? ವ್ಯಕ್ತಿಗಳು ಪ್ರಸ್ತುತಪಡಿಸುವ ವಿವರಣೆಗಳನ್ನು ಅಥವಾ ಅರ್ಥಗಳನ್ನು ಛೇದಿಸಿಕೊಂಡು ಹೋದಂತೆಲ್ಲಾ ಒಂದು ಕ್ರಮವರಿದ, ಹದವರಿತ ಅರಿವಿಗೆ ನಿಲುಕುತ್ತಾ ಹೋಗುತ್ತವೆ. ಉತ್ಪ್ರೇಕ್ಷೆಯಿಂದ, ಏಕಮುಖ ಅಭಿಪ್ರಾಯದಿಂದಲೋ, ಪೂರ್ವಾಗ್ರಹ ಪೀಡಿತವಾಗಿಯೋ ಇರುವಂತಹ ಜಾಳುಜಾಳಾದ ವಿವರಣೆಗಳ ಹೊಟ್ಟು ಹಾರಿಹೋಗುತ್ತವೆ. ಆಗ ಆ ಪರಿಕಲ್ಪನೆಗಳ ಅರ್ಥ ಒಂದು ಹಂತಕ್ಕೆ ಸರಿಯಾಗಿ ಆಗುತ್ತವೆ.

ಮನಸ್ಸಾಗಲಿ, ದೇವರಾಗಲಿ; ಅವು ಅಮೂರ್ತವಾದರೂ, ಅದೆಷ್ಟೇ ಗೊಂದಲಗಳ ಗೂಡಾದರೂ ಕ್ರಮವರಿತ ಮತ್ತು ನಿಖರವಾದ ಗ್ರಹಿಸುವಿಕೆಯಿಂದ ಅರ್ಥ ಮಾಡಿಕೊಳ್ಳುವುದು ಕಷ್ಟವೇನಿಲ್ಲ. ವಾಸ್ತವವಾಗಿ ಯಾವುದ್ಯಾವುದು ಅತ್ಯಂತ ಜಟಿಲವೆಂದು, ಸಂಕೀರ್ಣವೆಂದು ಮತ್ತು ಅರ್ಥಕ್ಕೆ ನಿಲುಕದೆಂದು ಹೇಳುತ್ತಾರೋ ಅವೆಲ್ಲವೂ ಸರಳವೇ ಆಗಿರುತ್ತದೆ. ಆದರೆ ಅವು ಅಷ್ಟೊಂದು ಸರಳವೂ ಮತ್ತು ನೇರವೂ ಆಗಿವೆ ಎಂದರೆ ಅದನ್ನು ಸ್ವೀಕರಿಸುವ ಮತ್ತು ಗೌರವಿಸುವವರು ಲಘುವಾಗಿ ಅಥವಾ ಹಗುರವಾಗಿ ಕಂಡುಬಿಡಬಹುದು.

ಅದರ ಮೌಲ್ಯವನ್ನು ಗುರುತಿಸದೇ ಹೋಗಿಬಿಡಬಹುದು ಎಂಬ ಆತಂಕದಿಂದ ಅವುಗಳನ್ನು ಕ್ಲಿಷ್ಟಗೊಳಿಸುತ್ತಾರೆ. ಸಂಕೀರ್ಣವೆಂಬಂತೆ ಪ್ರದರ್ಶಿಸುತ್ತಾರೆ. ಈ ಅಮೂರ್ತವಾದ ಪರಿಕಲ್ಪನೆಗಳನ್ನು ವಿವರಿಸುವವರು ಗೊಂದಲಗಳನ್ನು ಸೃಷ್ಟಿಸುತ್ತಾರೆಯೇ ಹೊರತು, ಅವುಗಳ ರಚನೆಯಲ್ಲಿ, ಸ್ವಭಾವದಲ್ಲಿ, ಅಸ್ತಿತ್ವದಲ್ಲಿ ಯಾವ ಗೊಂದಲಗಳೂ ಇಲ್ಲ.

ಮನಸ್ಸಿನ ವಿಜ್ಞಾನ

ಇನ್ನು ಮನಸ್ಸಂತೂ ಬರಿಯ ಅಮೂರ್ತವಾಗಿದ್ದರೂ ಪರಿಕಲ್ಪನೆಯಲ್ಲ. ಅದು ವಿಚಾರವೂ ಹೌದು, ವಿಜ್ಞಾನವೂ ಹೌದು. ಹೆಸರಿಸಿರುವಂತಹ ಚೈತನ್ಯ. ವಿದ್ಯುತ್ಚಕ್ತಿಯಂತೆ ಅದು ವಿಜ್ಞಾನದ ಶಾಖೆಯಾಗಿದ್ದು ಅನೇಕ ರೀತಿಯ ಪ್ರಯೋಗಗಳಿಗೆ ಒಳಗಾಗಿದೆ. ದೇವರ ರೀತಿಯಲ್ಲಿ ತಾತ್ವಿಕವಾಗಿ ಮಾತ್ರ ವಿವರಿಸುವ ಅಗತ್ಯವಿಲ್ಲ. ದೇವರಿಗೂ ಮತ್ತು ಮನಸ್ಸಿಗೂ ಏನೂ ಸಂಬಂಧವಿಲ್ಲ. ಮನಸ್ಸು ನೇರವಾಗಿ ಮನುಷ್ಯನ ಚಿಂತನಾ ಸಾಮರ್ಥ್ಯ ಮತ್ತು ಆಲೋಚನಾ ಕ್ರಮಕ್ಕೆ ಸಂಬಂಧಿಸಿದ್ದು.

ದೇವರ ವರ ಅಥವಾ ಶಾಪ ಕೂಡಾ ಮನಸ್ಸಿನ ಗ್ರಹಿಕೆಯ ಸಾಮರ್ಥ್ಯ ಅಥವಾ ದೌರ್ಬಲ್ಯಕ್ಕೆ ಸಂಬಂಧಿಸಿದ್ದೇ ಹೊರತು ಇದು ದೇವರ ಶಕ್ತಿಗೆ ಸಂಬಂಧಿಸಿದ ಪ್ರಾಯೋಗಿಕ ವಿಜ್ಞಾನದ ಶಾಖೆಯಲ್ಲ. ಇದು ಸರಳ ಎಂಬುದೇನೋ ನಿಜ. ಆದರೆ ಬಹಳ ಸೂಕ್ಷ್ಮವೂ ಮತ್ತು ಸಂವೇದನಾಶೀಲವೂ ಆಗಿರುವುದರಿಂದ ನಿಭಾಯಿಸುವುದರಲ್ಲಿ ಜಟಿಲತೆ ತೋರುತ್ತದೆ. ಆದರೆ, ಇದನ್ನು ಅರಿಯುವುದರಿಂದ ಮತ್ತು ನಿಭಾಯಿಸುವ ತಂತ್ರಗಳನ್ನು ಗಮನಪೂರ್ವಕವಾಗಿ ಬಳಸಿದ್ದಲ್ಲಿ ಸರಾಗವೇ ಇರುತ್ತದೆ.

“ಮನಸ್ಸು, ಆಲೋಚಿಸಲಾಗುವ ಜೀವಿಗಳಲ್ಲಿನ ಚೈತನ್ಯ ಅಥವಾ ಸಾಮರ್ಥ್ಯವಿದು. ಈ ಸಾಮರ್ಥ್ಯದ ಅಥವಾ ಚೈತನ್ಯದ ಪ್ರಧಾನ ಕೆಲಸಗಳೆಂದರೆ ಭಾವಿಸುತ್ತದೆ, ಆಲೋಚಿಸುತ್ತದೆ ಮತ್ತು ಸಂಕಲ್ಪಿಸುತ್ತದೆ.” ಇಷ್ಟೇ ಎಂದು ಹೇಳಿಬಿಟ್ಟರೆ ಬಹಳ ಸಣ್ಣ ವ್ಯಾಖ್ಯಾನವೇನೋ ನಿಜ. ಆದರೆ ಮನಸ್ಸಿನ ಅಸ್ತಿತ್ವ ಮತ್ತು ಅದರ ಚಟುವಟಿಕೆಗಳ ರೂಪುಗೊಳ್ಳುವುದು ಪ್ರಕ್ರಿಯೆಯ ಮೂಲಕ. ಅದನ್ನು ಆಧರಿಸಿಕೊಂಡು ಬೇಕಾದಂತೆ ಟಿಪ್ಪಣಿಗಳನ್ನು ಮಾಡಬಹುದು, ಪ್ರಮೇಯಗಳನ್ನು ಮಾಡಬಹುದು ಹಾಗೂ ವಿಚಾರ ಸರಣಿಗಳನ್ನು ವಿಸ್ತಾರಗೊಳಿಸುತ್ತಾ ಹೋಗಬಹುದು.

ಮನಸ್ಸೆಂಬ ಅದು

ಮನಸ್ಸನ್ನು ಸಿಕ್ಕಾಪಟ್ಟೆ ಶಾಸ್ತ್ರೀಯವಾಗಿ ನಾವು ಈಗ ಅಧ್ಯಯನ ಮಾಡಲು ಹೋಗುವುದು ಬೇಡ. ನಾವು ಮಹಾಪ್ರಭಂದವನ್ನು ರಚಿಸಬೇಕಿಲ್ಲ. ಮನಸ್ಸೆಂಬ ‘ಅದು’ ನಮ್ಮಲ್ಲಿ ಇರುವುದರಿಂದ ಅದರ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ತಿಳಿದರೆ ಎರಡು ಹೆಜ್ಜೆ ಮುಂದೆ ಇಡಬೇಕಾದ ಜಾಗದಲ್ಲಿ ಮುನ್ನಡೆಯಬಹುದು, ಹಿಂದಕ್ಕೆ ಸರಿಯಬೇಕಾದ ಕಡೆ ಸರಿಯಬಹುದು.

ಇಷ್ಟಕ್ಕಷ್ಟೇ ನಾವೀಗ ಗಮನ ಕೊಡಬೇಕಾಗಿರುವುದು. ಸಮಸ್ಯೆ ಏನೆಂದರೆ ಮುನ್ನಡೆಯ ಬೇಕಾದ ಕಡೆ ಹಿಂದೆ ಸರಿಯುವುದು, ಹಿಂದೆ ಸರಿಯಬೇಕಾದರೆ ಕಡೆ ಮುನ್ನುಗ್ಗುವುದು ಮಾನಸಿಕ ಸಮಸ್ಯೆಯ ಮಹಾಲಕ್ಷಣ.
ಮನಸ್ಸಿನ ಮತ್ತೊಂದು ಗುಣ ಲಕ್ಷಣವೆಂದರೆ ಅದರ ಚಟುವಟಿಕೆಯನ್ನು ಅದರಿಂದಲೇ ನಿಲ್ಲಿಸಬೇಕು. ಅದು ಮಂಕಾಗಿ ಮೂಲೆ ಹಿಡಿದಿದ್ದರೆ ಅದೇ ಪ್ರೇರೇಪಿಸಬೇಕು. ವಿಲಕ್ಷಣವಾದರೂ ನಿಜ. ಅಂದರೆ ಮನಸ್ಸಿನ ಚಟುವಟಿಕೆಗಳನ್ನು ಮನಸ್ಸೇ ನಿಯಂತ್ರಿಸಬೇಕು.

ಆಲೋಚನೆಗಳೇ ಅದರ ಚಟುವಟಿಕೆಗಳು. ಅದರ ಆ ಚಟುವಟಿಕೆಗಳೇ ಮನಸ್ಸು ಎಂಬ ಅಮೂರ್ತವನ್ನು ಮೂರ್ತೀಭವಿಸುವಂತೆ ಮಾಡುವುದು. ಅದೇ ಮನಸ್ಥಿತಿ ಎಂಬುದನ್ನು ಅಸ್ತಿತ್ವಕ್ಕೆ ತರುವುದು. ಅದೇ ಮನೋಭಾವ ಎಂಬುದನ್ನು ರೂಪಿಸುವುದು ಮತ್ತು ಅದೇ ಗೊಂದಲಗಳನ್ನು ಸೃಷ್ಟಿಸಿಕೊಂಡು ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುವುದು.

ಮನಸ್ಸೆಂಬುದೇ ಬಯಸುವುದು, ಆಲೋಚಿಸುವುದು, ಸಂಕಲ್ಪಿಸುವುದು, ಆಶಿಸುವುದು, ಭಾವಿಸುವುದು, ವಿಚಾರಿಸುವುದು; ಇವುಗಳಿಂದಲೇ ಆ ಮನಸ್ಸು ಎಂಬುದೂ ಕೂಡಾ ರೂಪುಗೊಳ್ಳುವುದು. ಅದೇ ಸಾಮರ್ಥ್ಯವೂ ಆಗುವುದು, ಅದೇ ದೌರ್ಬಲ್ಯವೂ ಆಗುವುದು.ಯಾವುದು ಆಲೋಚಿಸುವುದೋ ಅದರ ಬಗ್ಗೆ ಆಲೋಚಿಸಬೇಕು. ಇದೇ ಮಜ.

ಮನಸ್ಸು ಮಿತ್ರ ಮತ್ತು ಶತ್ರು

  • ಉದ್ಧರೇದಾತ್ಮನಾತ್ಮಾನಂ ನಾತ್ಮನಮವಸಾಧಯೇತ್
    ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ

ಭಗವತ್ಗೀತೆಯ 6:5 ಶ್ಲೋಕದಲ್ಲಿ ಆತ್ಮ ಎಂಬ ಪದವನ್ನು ಮನಶಕ್ತಿಯನ್ನಾಗಿಯೇ ಹೆಸರಿಸಿದ್ದಾರೆ. ಉದ್ಧಾರ ಅಂತ ಏನಾದರೂ ಆಗುವುದಿದ್ದರೆ ಅದು ನಿನ್ನ ಮನಸ್ಸಿನಿಂದಲೇ ಆಗುವುದು. ಅದರಿಂದಲೇ ಪತನಗೊಳ್ಳುವುದು ಬೇಡ. ಮನಸ್ಸೇ ಮನಸ್ಸಿಗೆ ಸ್ನೇಹಿತ. ಮನಸ್ಸೇ ಮನಸ್ಸಿಗೆ ಶತ್ರುವಾಗಬಹುದು. ಬಹಳ ಸ್ಪಷ್ಟವಾಗಿ ಮನಸ್ಸಿಂದಲೇ ಮನಸ್ಸು. ಮನಸ್ಸಿನ ಆಲೋಚನೆಗಳಿಂದಲೇ ಮನಸ್ಸಿನ ಚಟುವಟಿಕೆಗಳು.

ಆ ಆಲೋಚನೆಗಳು ರೂಪಿಸಿಕೊಂಡಿರುವ ತನ್ನತನಕ್ಕೆ ಪೂರಕವಾಗಿದ್ದರೆ ಮನಸ್ಸೆಂಬುದು ಗೆಳೆಯನಂತೆ. ಅದೇ ತನ್ನತನಕ್ಕೆ ಮಾರಕವಾಗಿದ್ದರೆ ಶತ್ರುವಿನಂತೆ. ತತ್ವಗಳು, ಸಿದ್ಧಾಂತಗಳು, ಆಧ್ಯಾತ್ಮದ ಚಿಂತನೆಗಳು ಮತ್ತು ಪ್ರಯೋಗಗಳು; ಎಲ್ಲವೂ ಈ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲೇ ಸಾವಿರಾರು ವರ್ಷಗಳಿಂದ ತಮ್ಮ ಸಮಯ, ಶ್ರಮ, ಸಂಪನ್ಮೂಲ, ಪ್ರತಿಭೆಗಳನ್ನೆಲ್ಲಾ ಬಳಸಿವೆ.

ಆದರೂ ನಾವು ಇನ್ನೂ ಸಶಕ್ತವಾದ ಮನಸ್ಸನ್ನು ಹೊಂದದೇ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಇದಕ್ಕೆ ಕಾರಣವೆಂದರೆ ಮನಸ್ಸೆಂಬ ಸೂಕ್ಷ್ಮ ಚೈತನ್ಯವನ್ನು ನಿಭಾಯಿಸುವ ಎಲ್ಲಾ ವಿಧಾನಗಳನ್ನು ಅಥವಾ ಮಾರ್ಗಗಳನ್ನು ಸಾಂಪ್ರದಾಯಿಕ ಆಚರಣೆಗಳನ್ನಾಗಿಸಿ ಮೇಲಿನ ಸ್ತರದಲ್ಲಿಯೇ ಉಳಿಸಿಬಿಟ್ಟಿದ್ದು. ಚಟುವಟಿಕೆಗಳ ಜೊತೆಜೊತೆಗೆ ಬಹಳ ಮುಖ್ಯವಾಗಿ ದೃಷ್ಟಿ ಮತ್ತು ಗಮನವೆರಡನ್ನೂ ಹೊಂದುವ ಬದಲು, ಬರಿದೇ ಗೊಡ್ಡು ಆಚರಣೆಗಳನ್ನಾಗಿಸಿದ್ದು. ಆಸೆ ಮತ್ತು ಭಯಗಳ ಮೂಲಧಾತುಗಳ ಮೇಲೆಯೇ ಆಧರಿಸಿರುವ ಲೌಕಿಕವಾದ ಹೊರದೃಷ್ಟಿಯನ್ನು ಒಳದೃಷ್ಟಿಯನ್ನಾಗಿಸಿಕೊಳ್ಳದೇ ಹೋದದ್ದು.

ಆಧ್ಯಾತ್ಮ, ಸಿದ್ಧಾಂತಗಳು, ಧಾರ್ಮಿಕ ಆಚರಣೆಗಳು, ದೈವಿಕ ಪರಿಕಲ್ಪನೆಗಳು; ಯಾವುದ್ಯಾವುದು ಮನುಷ್ಯನ ಉದ್ಧಾರಕ್ಕಾಗಿ ಮನಸ್ಸನ್ನು ತರಬೇತಿಗೊಳಿಸಲು ಬಂದವೋ ಅವೆಲ್ಲವೂ ಬಹುಪಾಲು ವಿಫಲಗೊಂಡವು. ಇಂದು ಇನ್ನೂ ಮಾನಸಿಕ ಸಮಸ್ಯೆಗಳು ಅಸ್ತಿತ್ವದಲ್ಲಿ ಬಹುದೊಡ್ಡ ಸ್ವರೂಪದಲ್ಲಿ ಇರಲು ಕಾರಣ ಅದನ್ನು ಅರಿಯುವ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಬೆಳೆಸಿಕೊಳ್ಳದೇ ಬರಿಯ ಆಚರಣೆಗಳ ಮಟ್ಟಕ್ಕೆ ನಿಂತದ್ದು.

ನಿಜಕ್ಕೂ ಇವುಗಳ ಯಶಸ್ಸಿಗೆ ಬೇಕಾಗಿದ್ದದ್ದು ಅರಿವು. ಸಂವೇದನಾಶೀಲ ಅರಿವು. ಸುಮ್ಮನೆ ಆಲೋಚಿಸಿ ನೋಡಿ. ನಮ್ಮ ಮನಸ್ಸೇ ಸಬ್ಜೆಕ್ಟ್. ಆ ಸಬ್ಜೆಕ್ಟಿಗೆ ತಾನೇ ಅಂದರೆ ಮನಸ್ಸೇ ಆಬ್ಜೆಕ್ಟ್. ಮಾಡುವುದು ಮತ್ತು ಮಾಡಿಸಿಕೊಳ್ಳುವುದು ಒಂದೇ ಆಗಿರುವುದು. ಸಾಲದಲ್ಲೆ ಮಾಡುವ ಕ್ರಿಯೆಯಾಗಿಯೂ ರೂಪಾಂತರ ಹೊಂದುತ್ತದೆ. ನಿಜಕ್ಕೂ ಮನಸ್ಸು ಬಹಳ ಕುತೂಹಲಕಾರಿಯಾದ, ಆಸಕ್ತಿಕರವಾಗಿ ಮತ್ತು ಸೃಜನಶೀಲ ಪ್ರಯೋಗಗಳಿಗೆ ಒಡ್ಡಿಕೊಳ್ಳಲಾಗುವಂತಹ ವಸ್ತು.

ಬೌದ್ಧರಲ್ಲಿಯೂ ಈ ಮನಸ್ಸಿನ ಸೂಕ್ಷ್ಮತೆಯ ಬಗ್ಗೆ ಬಹಳಷ್ಟು ಸಂವೇದನಾಶೀಲವಾದ ಮತ್ತು ಸೃಜನಶೀಲವಾದ ಪ್ರಯೋಗಗಳು ನಡೆದಿವೆ. ಅದರಲ್ಲೂ ಜೆನ್ ಮತ್ತು ಟಾವೋ ಹಾದಿಗಳು ಬಹಳ ಮುಕ್ತವಾಗಿಯೂ ಮತ್ತು ಆಳವಾಗಿಯೂ ಇವೆ.

ಗುರು ಲಾಟ್ಸೆ ಒಂದು ದಿನ ನಿದ್ರೆಯಿಂದ ಎದ್ದಾದ ಮೇಲೆ ಗಂಭೀರವಾಗಿ ಚಿಂತಿಸುತ್ತಿದ್ದನಂತೆ. ಶಿಷ್ಯರು ಕಾರಣ ಕೇಳಿದರೆ, “ನಾನು ನನ್ನ ಕನಸಿನಲ್ಲಿ ಚಿಟ್ಟೆಯಾಗಿ ಹಾರಾಡುತ್ತಿದ್ದೆ” ಎಂದನಂತೆ. ಸರಿ, ಈಗ ಅದಕ್ಕೇನೆಂದು ಕೇಳಿದರೆ, “ನಾನು ಚಿಟ್ಟೆಯಾಗಿ ಹಾರಾಡುವಂತೆ ಕನಸು ಕಂಡೆ. ಒಂದು ವೇಳೆ ಆ ಚಿಟ್ಟೆಯೇ ಲಾಟ್ಸೆಯಾಗಿರುವ ಕನಸನ್ನು ಕಾಣುತ್ತಿದೆಯೇ? ಯಾವುದು ನಿಜ?” ಎಂದನಂತೆ.

ಹೀಗೆ ಆಲೋಚಿಸುವಷ್ಟು ಸೂಕ್ಷ್ಮ ಸಂವೇದನೆಯ ದೃಷ್ಟಿಗಳು ಮನಸ್ಸನ್ನು ಅರಿಯುವಲ್ಲಿ, ಅದರ ಜಾಡನ್ನು ಅನುಸರಿಸುವಲ್ಲಿ, ಅದರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿಯುವಲ್ಲಿ ಆನಂದವನ್ನು ಪಡೆಯುತ್ತವೆ. ತನ್ನ ಮನಸ್ಸನ್ನು ತಾನು ಕಾಣುವುದೇ ಒಂದು ಮಜ.

ಮನ ಮೂಲ

ಮನಸ್ಸಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಕಾಣುವ ಮತ್ತು ಅಸ್ತಿತ್ವದಲ್ಲಿರುವ ಎಲ್ಲಾ ಕ್ಷೇತ್ರಗಳಿಂದಲೂ ಸಹಾಯ ಪಡೆದುಕೊಳ್ಳಬೇಕಾಗಿರುವ ಅಗತ್ಯತೆ ಇದೆ. ಸಾಹಿತ್ಯ, ವಿಜ್ಞಾನ, ಕಲೆ, ರಾಜಕೀಯ, ಕೈಗಾರಿಕೆ, ಧಾರ್ಮಿಕ, ಆಧ್ಯಾತ್ಮಿಕ, ದೈನಂದಿನ ಚಟುವಟಿಕೆಗಳು; ಹೀಗೆ ಮನುಷ್ಯರು ಭಾಗವಾಗಿರುವ ಅಥವಾ ಪಾಲುಗೊಳ್ಳುವ ಯಾವುದೇ ಕ್ಷೇತ್ರದ ಚಟುವಟಿಕೆಗಳು ಪೂರ್ಣಪ್ರಮಾಣದಲ್ಲಿ ಮನಸ್ಸಿನ ಚಟುವಟಿಕೆಗಳ ಮೇಲೆಯೇ ಆಧರಿಸಿರುತ್ತದೆ.

ಮನುಷ್ಯನೊಬ್ಬನ ವೈಯಕ್ತಿಕ ಸಾಧನೆ ಅಥವಾ ಸಾಮೂಹಿಕ ಸಾಧನೆಗಳೂ ಕೂಡ ಮನಸ್ಸಿನ ಸಂಕಲ್ಪ, ಸಾಮರ್ಥ್ಯ ಮತ್ತು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯದ ಮೇಲೆಯೇ ಅವಲಂಬಿತವಾಗಿರುತ್ತದೆ. ಹಾಗೆಯೇ ಯುದ್ಧ, ನಾಗರಿಕ ದಂಗೆ, ಸರ್ಕಾರದ ವೈಫಲ್ಯ, ವ್ಯವಸ್ಥೆಯ ವೈಫಲ್ಯ, ವ್ಯಕ್ತಿಗಳ ಮತ್ತು ಸಮೂಹಗಳ ಅಪರಾಧಗಳು, ಗುಂಪು ಘರ್ಷಣೆ; ಇತ್ಯಾದಿ ಅವಘಡಗಳಿಗೆಲ್ಲಾ ಅನಿಯಂತ್ರಿತ ಮತ್ತು ಅನುಚಿತ ಸ್ಥಿತಿಗಳ ಮನಸ್ಸಿನ ಚಟುವಟಿಕೆಗಳೇ ಕಾರಣವಾಗಿರುತ್ತವೆ. ಹೀಗಿರುವಾಗ ಮನಶಾಸ್ತ್ರ ಅಥವಾ ಮನೋವಿಜ್ಞಾನವನ್ನು ಗಂಭೀರವಾಗಿ ಪರಿಗಣಿಸದಿರುವುದು ಅತ್ಯಂತ ನಿರಾಶಾದಾಯಕ ಸ್ಥಿತಿ.

ಅದಕ್ಕೆ ತೀರಾ ಘನ ಪಾಂಡಿತ್ಯವಲ್ಲ ಬೇಕಾಗಿರುವುದು. ಸಾಮಾನ್ಯ ತಿಳುವಳಿಕೆ. ಸದಾ ಜಾಗೃತಿಯಲ್ಲಿರುವ ಸಾದಾ ಅರಿವು. ಅದೇ ನಮ್ಮೆಲ್ಲಾ ಒಳಗಿನ ಮತ್ತು ಹೊರಗಿನ ಸಮಸ್ಯೆಗಳನ್ನು ಗುಡಿಸಿ ಹಾಕುವುದು.
ಮನಮೂಲದಿಂದ ಸ್ಥಿತಿಗತಿಗಳು
ಮನವೇ ಅವುಗಳ ಮುಂದಾಳು
ನಡೆಯುವ ಎತ್ತಿನ ಹೆಜ್ಜೆಯ ಹಿಂದೆ
ಗಾಡಿಯು ನಡೆಯಲೇ ಬೇಕಹುದಂತೆ (ದಮ್ಮಪದ)

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

Published

on

~ ಯೋಗೇಶ್ ಮಾಸ್ಟರ್

ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.

ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.

ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.

ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?

ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.

ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.

ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.

ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

Continue Reading

ಅಂತರಂಗ

ಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ

Published

on

~ಯೋಗೇಶ್ ಮಾಸ್ಟರ್, ಚಿಂತಕರು

ಪ್ತ ಸಮಾಲೋಚಕ ಮತ್ತು ಮನೋವೈದ್ಯ
ಹಾಗಂತಿರುವ ನನ್ನ ಮನೆಯ ಮುಂದಿನ ನನ್ನ ಪರಿಚಯ. ಅದನ್ನೇ ನಾನೆಂದು ತಿಳಿದಿರುವ ಹೊರಗಿನವರಿಗೆಲ್ಲಾ ನನ್ನೊಳಗಿರುವ ಅಪರಿಚಿತನ ಹೇಗೂ ಕಾಣಲಾಗದು.

ಲೋಕ ಕಾಣುವ ಅಥವಾ ನಾನು ತೋರುವ ಮುಖದ ಮುಸುಕನ್ನು ಸರಿಸಿ ಇಣುಕುವಷ್ಟು ಯಾರಿಗಾದರೂ ಅದೆಷ್ಟು ಬಿಡುವಿರುವುದು! ಪರದೆಯ ಮೇಲಿನ ಡಾ. ಆತ್ಮಾರಾಮನ ನೆರಳಿನಾಟವನ್ನು ಮೆಚ್ಚುವರು, ಹೊಗಳುವರು, ತೆಗಳುವರು, ತಿರಸ್ಕರಿಸುವರು; ಅವರವರ ಕಣ್ಣುಗಳ ಅಭಿರುಚಿಗೆ ತಕ್ಕಂತೆ.
ಪರರ ರುಚಿಗೆ ಎಟಕುವುದು ಚಹರೆಗಳೇ ತಾನೇ! ಅವರ ಕಣ್ಣುಗಳಿಂದಲೇ ನನ್ನ ನಾನು ಕಂಡುಕೊಳ್ಳಲು ಅಥವಾ ಕಾಣಿಸಿಕೊಳ್ಳಲು ಸಾಕಾಗಿ ನನ್ನ ಕಣ್ಣುಗಳು ಮುಚ್ಚಿಕೊಂಡವು. ಅದೆಷ್ಟೋ ಹೊತ್ತು ಹಾಗಿದ್ದೆನೋ!

ಚಹರೆಗಳ ನೆರಳುಗಳನ್ನು ನುಂಗಿಕೊAಡ ಕಣ್ಣೊಳಗಿನ ಕತ್ತಲೆಯಲ್ಲಿ ಬೆತ್ತಲೆಯಾಗಿರುವುದು ಸುಖ. ಅದು ನಿರಾಳತೆಯ ಸುಖ. ತರಾವರಿ ತೊಡುಗೆಗಳ ತೂಕವನಿಳಿಸಿಕೊಂಡ ನಿರಾತಂಕದ ನೆಮ್ಮದಿ. ಕತ್ತಲು; ಅದೆಷ್ಟು ಆಳ! ಗೂಢತೆಗಳ ಮೇಳವದೆಷ್ಟಿದ್ದರೂ ತೋರ್ಪಡಿಸಿಕೊಳ್ಳುವ ಕಾತುರವಿಲ್ಲದ ನಿರಹಂಕಾರದ ನಿರಾಳತೆ!

ಬೆಳಕಿನದೇ ಸಮಸ್ಯೆ. ಅದರಲ್ಲದೆಷ್ಟು ಬಣ್ಣಗಳು, ಬಣ್ಣನೆಗಳು. ವ್ಯತ್ಯಾಸಗಳು, ವ್ಯತ್ಯಯಗಳು. ಸಮೀಕರಣಗಳು, ಅಸಮಾನತೆಗಳು. ಉಪಮೆಗಳು, ಉದಾಹರಣೆಗಳು. ಸಾಧಾರಣಗಳು, ಅಸಾಧರಣಗಳು. ಅಸೂಯೆಗಳು, ಆಯಾಸಗಳು. ಕತ್ತಲು ನೆಮ್ಮದಿ. ಮುಚ್ಚಿರುವ ಕಣ್ಣೊಳಗಿನ ಕತ್ತಲಿನಲ್ಲಿ ಕಾಣತೊಡಗಿದ ನನ್ನ ಬಿಂಬವನ್ನು ನೋಡುತ್ತಲೇ ಕುಳಿತುಬಿಟ್ಟೆ. ಹೌದಲ್ಲಾ, ಇಷ್ಟು ಕಾಲ ಮುಚ್ಚಿಟ್ಟಿದವರೇ ಈಗ ಬಿಚ್ಚಿಡುತ್ತಿದ್ದಾರೆ.

ಹೌದು, ಮನಸ್ಸೆಂಬುದೇ ಹಾಗೆ. ಅದು ತನಗೆ ತಾನೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತದೆ. ತಾನೇ ಗೋಗರೆಯುತ್ತದೆ. ತಾನೇ ಸಹಾಯವನ್ನು ನಿರಾಕರಿಸುತ್ತದೆ. ತಾನೇ ಗೋಳಿಡುತ್ತದೆ. ತಾನೇ ಸಂತೈಸುತ್ತದೆ.
ತಿಕ್ಕಲು, ತಾನೇ ಹಾಳು ಮಾಡುವುದು, ತಾನೇ ಗೋಳಿಡುವುದು, ತಾನೇ ಸರಿ ಮಾಡುವುದು. ಈಗ ಸರಿಮಾಡಿಕೊಳ್ಳುವ ಮಗ್ಗುಲಿಗೆ ತಿರುಗಿಕೊಂಡಿದೆ. ಸರಿ ಹೋಗಿಬಿಡಲಿ.
ಸರಿ ಹೋಗುವುದೋ ಬಿಡುವುದೋ, ಸರಿಯಿಲ್ಲ, ಸರಿ ಮಾಡಬೇಕಾಗಿದೆ ಅಂತ ಗೊತ್ತಾಯಿತಲ್ಲಾ ಅಷ್ಟೇ ಸಾಕು.
ರೋಗವಿದೆ ಎಂಬ ಅರಿವು ಬಹುದೊಡ್ಡ ಉಪಶಮನ. ರೋಗವನ್ನೇ ಆರೋಗ್ಯವೆಂದು ಭಾವಿಸಿದ್ದು, ಈಗ ರೋಗ ಎಂದು ತಿಳಿಯಿತಲ್ಲಾ, ಅದೇ ಗುಣಮುಖವಾಗುವ ಮುನ್ಸೂಚನೆ.

ಇಷ್ಟೂ ದಿನಗಳ ಕಾಲ ಕನ್ನಡಿಯೊಳಗೆ ಮುಖ ನೋಡಿಕೊಳ್ಳುತ್ತಿದ್ದದ್ದು, ಇತರರಿಗೆ ಹೇಗೆ ಕಾಣಿಸುತ್ತೇನೆ, ಹೇಗೆ ಕಾಣಿಸಬೇಕು ಎಂದು. ಆದರೆ ಇಂದು ಕತ್ತಲಿನ ಕನ್ನಡಿಯಲ್ಲಿ ಕಾಣುತ್ತಿರುವ ಮುಖದ ಒಳಗಿನ ಮೌನ ತನ್ನ ಗುರುತಿನ ಪರದೆಯನ್ನು ಹರಿಯುತ್ತಿದೆ. ಯಾವ ಅಡಿಗಿದ್ದ ಮೌನ ನನ್ನಾತ್ಮದ ಕವಚವಾಗಿತ್ತೋ ಅದು ಕಾರಾಗೃಹವೆನಿಸಿ ಉಸಿರುಕಟ್ಟಿಸಿದ್ದು ಒಳ್ಳೆಯದೇ ಆಯಿತು.
ಮೌನ ದನಿಯಾಗುತ್ತಿದೆ. ದನಿ ಬನಿಯಾಗುತ್ತಿದೆ.
ಹಾಗಾಗಿಯೇ ಬೆಳಕಿನಲ್ಲಿ ವಿವಿಧ ಬಣ್ಣಗಳನ್ನು ಹಚ್ಚಿ ಬಣ್ಣಿಸಿದ್ದ ಎಲ್ಲಾ ಸಂಬAಧಗಳು, ಸಂಗತಿಗಳು, ಸಂವಹನಗಳು, ಸಂಘರ್ಷಗಳು ಈಗ ನೆನಪಿನ ನೆರಳುಗಳಾಗಿ ಆಳವಾದ ಕತ್ತಲಲ್ಲಿ ಬಣ್ಣ, ಬಣ್ಣನೆಗಳನ್ನು ಕಳೆದುಕೊಂಡಿವೆ.
ಅವರಿವರ ಮನಸ್ಸುಗಳ ಮಸುಕು ಮಾಡುವ ಮುಸುಕುಗಳ ತೆಗೆಯಲು ಸಹಕರಿಸುತ್ತಿದ್ದವನಿಗೆ ಸ್ವಸಹಾಯ ಮಾಡಿಕೊಳ್ಳಲು ಅದೇ ಮನಸ್ಸು ಮನಸ್ಸು ಮಾಡಿದೆ. ಆಗಲಿ, ಅದೂ ಆಗಿ ಹೋಗಲಿ.

ಮನೋವೈದ್ಯ ತನ್ನೊಳಗಿನ ರೋಗವನ್ನು ಪತ್ತೆ ಮಾಡಿಕೊಳ್ಳಲಿ. ಆಪ್ತ ಸಮಾಲೋಚಕ ತನ್ನಿರುವಿಗೆ, ತನ್ನಾಳಕೆ ಒಂದಿಷ್ಟು ಕಾಲ ಆಪ್ತನಾಗಿರುವ ಅವಕಾಶವನ್ನು ದಕ್ಕಿಸಿಕೊಳ್ಳಲಿ. ಮೌನವನ್ನು ಓದುವ ಓರಗೆಯವರಿದ್ದಾರೆ. ಓದಲಿ.
ವೈದ್ಯನೊಬ್ಬ ತಾನು ರೋಗಿಯಾಗಿರಲಿಲ್ಲ, ಅಥವಾ ತನಗೆ ರೋಗ ಬರುವುದಿಲ್ಲ ಎನ್ನುವುದು ಆತ್ಮವಂಚನೆ. ತನಗೆ ತಾನು ವಂಚಿಸಿಕೊಳ್ಳುವವನು ಜಗತ್ತಿನ ಯಾರೊಂದಿಗೆ ವಿಶ್ವಾಸವನ್ನು ಸಂಚಯ ಮಾಡಿಯಾನು!

ಮತ್ತೆ ಸಿಕ್ಕಿದನವನು ಮೌನದಲಿ
ಕಳೆದಿದ್ದವನು ಗದ್ದಲದಲಿ
ಗಾಯಗಳು ಮರೆತಿವೆ
ನೋವಿಲ್ಲದ ಕಲೆಗಳ ಹಿಂದೆ
ಪ್ರತಿ ಉಸಿರು ಆಸೆಗಳ ಬಸಿರು
ಹೆರಲಾಗದೆ ಘನವಾದ ಕಣ್ಣೀರು
ಕರಗುವುದೊಮ್ಮೆ ಹೆಪುö್ಪಗಟ್ಟಿದ ಕಾರ್ಮೋಡ
ಸುರಿವುದಲ್ಲಿ ಒಳಗಣ್ಣಿಂದ ಮಳೆಯು ನೋಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಿಮಾಗಿ ನಕ್ಸಲ್-ನಗರ ನಕ್ಸಲ್

Published

on

~ರಹಮತ್ ತರೀಕೆರೆ, ಚಿಂತಕರು

ಕಾರ್ನಾಡರಲ್ಲಿ ನನಗೆ ಮೊದಲಿಂದಲೂ ವೈಯಕ್ತಿಕ ಸಂಪರ್ಕ ಇರಲಿಲ್ಲ. ಅನಂತಮೂರ್ತಿ ಅವರಂತೆ ಅವರು ಕಿರಿಯ ಲೇಖಕರ ಜತೆ ನಂಟಿರಿಸಿಕೊಂಡವರಲ್ಲ. ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದಿದ್ದವರು. ಮಹಾರಾಷ್ಟ್ರದಲ್ಲಿ ಹುಟ್ಟಿ, ಜೀವಿತದ ಬಹುಕಾಲ ಕರ್ನಾಟಕದ ಹೊರಗಿದ್ದ ಅವರು, ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಸಮಕಾಲೀನರಾದ ತೇಜಸ್ವಿ ಲಂಕೇಶ್ ಅನಂತಮೂರ್ತಿ ಅವರಂತೆ ಪಬ್ಲಿಕ್ ಇಂಟಲೆಕ್ಚುವಲ್ ಕೆಲಸವನ್ನು ಮೈಮೇಲೆ ಹಾಕಿಕೊಂಡು, ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸಿದವರಲ್ಲ.

ಹೀಗಿದ್ದ ಕಾರ್ನಾಡರು ಬಾಳಿನ ಕೊನೆಯ ವರ್ಷಗಳಲ್ಲಿ ಆಶ್ಚರ್ಯಕರವಾಗಿ ಬದಲಾದರು; ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ರೂಪಾಂತರಕ್ಕೆ ಕಾರಣ, ಪ್ರಭುತ್ವಗಳು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳಿರಬಹುದು; ಅನಂತಮೂರ್ತಿ ತೇಜಸ್ವಿ ಲಂಕೇಶ್ ತೀರಿಕೊಂಡ ಬಳಿಕ, ಉಂಟಾದ ರಿಕ್ತತೆ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬಹುದು. ಅವರು ತಮ್ಮ ಮಾತು, ಕೃತಿ, ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಮತೀಯತೆ ಕುರಿತು ವ್ಯಗ್ರರಾಗಿದ್ದರು.

ಅವರು ಮಾಡಿದ ಸಾರ್ವಜನಿಕ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ನೈಪಾಲರ ಬಲಪಂಥೀಯವಾದ ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು; ಟಿಪ್ಪು ಕುರಿತು ನಾಟಕ ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆ ಪರವಾಗಿ ನಿಂತಿದ್ದು; ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಉಪಟಳ ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಇಲ್ಲಿನ ಕೊನೆಯ ಕಾರ್ಯಕ್ರಮದಲ್ಲಿ ಅವರೊಟ್ಟಿಗೆ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಲೇಖಕರು ಇಂತಹದೊಂದು ಸಾರ್ವಜನಿಕ ಪ್ರತಿರೋಧದ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಅಪೂರ್ವ ಸಂಗತಿ.

ನನಗೆ ಅವರ ಜತೆ ಮೊದಲ ಮುಖಾಬಿಲೆ ಆಗಿದ್ದು ಬಾಬಾಬುಡನಗಿರಿಗೆ ಮಾಡಿದ ಪಯಣದಲ್ಲಿ. ಸೂಫಿಗಳ ಮೇಲೆ ತುಸು ಅಧ್ಯಯನ ಮಾಡಿದವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಅವರ ಗಂಭೀರ ಸ್ವಭಾವದ ಬಗ್ಗೆ ತಿಳಿದಿದ್ದ ನಾನು, ಅವರಾಗಿ ಏನಾದರೂ ಕೇಳಿದರೆ ಮಾತ್ರ ಹೇಳಬೇಕೆಂದು, ಸಹಪಯಣದ ಖುಶಿಯನ್ನು ಅನುಭವಿಸುತ್ತ ಜತೆಗೆ ಕೂತಿದ್ದೆ. ಗಿರಿಯನ್ನು ವಾಹನ ಹತ್ತುವಾಗ, ನೆತ್ತಿಮೇಲಣ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ ಕಾರ್ನಾಡರು `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ’’ ಎಂದು ಉದ್ಗರಿಸುತ್ತ ಮಗುವಿನಂತೆ ಪುಟಿಯುತ್ತಿದ್ದರು.

ಅವರೊಬ್ಬ ಸೆಲೆಬ್ರಿಟಿಯಾದರೂ ಸರಳವ್ಯಕ್ತಿ. ಅಭಿನಯ ಅವರ ವೃತ್ತಿಯಾದರೂ ವ್ಯಕ್ತಿಯಾಗಿ ತೋರಿಕೆಯೇ ಇಲ್ಲದ ನೇರಗುಣದವರು. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ತೋಟದ ಮನೆಯೊಂದರಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ `ಆಡಾಡ್ತಾ ಆಯುಷ್ಯ’ ಒಳಗೊಂಡಂತೆ (ಬೆರಗು ಹುಟ್ಟಿಸುವ ಭಾಷೆಯುಳ್ಳ ವಿಶಿಷ್ಟ ಗದ್ಯಶೈಲಿಯ ಕೃತಿಯಿದು) ಕನ್ನಡದ ಆತ್ಮಕತೆಗಳ ಬಗ್ಗೆ ಉಪನ್ಯಾಸ ಮಾಡಿದೆ. ಬಸಳೆಸೊಪ್ಪಿನ ಹೊರೆಯನ್ನು ಅವರ ಕೈಯಿಂದ ಉಡುಗೊರೆ ಕೊಡಿಸಲಾಯಿತು. ಉಪನ್ಯಾಸದ ಬಳಿಕ ಕಾರ್ನಾಡರು ಕೇಳಿದರು: “ಭಾರತದ ಮೊಟ್ಟಮೊದಲ ಆತ್ಮಕಥೆ `ಅರ್ಧಕಥಾನಕ’ ಓದಿದ್ದೀರಾ?” “ಇಲ್ಲ” “ನೀವು ಓದಲೇಬೇಕು. ಅಪರೂಪದ ಪುಸ್ತಕ. 16ನೇ ಶತಮಾನದ್ದು’’. ಬೆಂಗಳೂರಿಗೆ ಹೋದೊಡನೆ ನೆರಳಚ್ಚನ್ನು ಕಳಿಸಿಕೊಟ್ಟರು. ವ್ಯವಹಾರ ಪ್ರಜ್ಞೆಯಿಲ್ಲದವನೂ ಕಾವ್ಯಪ್ರೇಮಿಯೂ ಆದ ಜೈನ ವ್ಯಾಪಾರಿಯೊಬ್ಬನ ರೋಚಕ ಅನುಭವಗಳ ಕಥನವದು.

ಹೀಗೆ ಸಣ್ಣಗೆ ಆರಂಭವಾದ ಪರಿಚಯ `ಅಮೀರ‍ಬಾಯಿ ಕರ್ನಾಟಕಿ’ ಪುಸ್ತಕದ ಸನ್ನಿವೇಶದಲ್ಲಿ ಧಕ್ಕೆಗೊಳಗಾಯಿತು. ನಾನು ಅಮೀರಬಾಯಿ ಸಂಶೋಧನೆಗೆಂದು ಪುಣೆ ಮುಂಬೈ ತಿರುಗಾಡುವಾಗ, ಮಹಾರಾಷ್ಟ್ರದಲ್ಲಿ ಕಾರ್ನಾಡರಿಗೆ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವ ಮರ್ಯಾದೆಯನ್ನು ಗಮನಿಸಿದ್ದೆ. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾಡಿದ ದಿಟ್ಟ ಭಾಷಣವು-ಅದರಲ್ಲಿ ರಾಜಕೀಯ ಪಕ್ಷಗಳು ಸೈನೀಕರಣಗೊಳ್ಳುವುದರ ಬಗ್ಗೆ ಕಟುವಾದ ವಿಮರ್ಶೆಯಿದೆ- ಅಲ್ಲಿನ ಲೇಖಕರು ನೆನಪಿಟ್ಟಿದ್ದರು. ಕನ್ನಡ-ಮರಾಠಿ ಸಾಂಸ್ಕøತಿಕ ಬಾಂಧವ್ಯದ ಕೊಂಡಿಯಾಗಿದ್ದ ಅಮೀರಬಾಯಿ ಕುರಿತ ಹೊತ್ತಗೆಯನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನವೆನಿಸಿತು. ಹೇಗೂ `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ದಿನ ಮೊದಲೇ ಧಾರವಾಡಕ್ಕೆ ಬರುತ್ತಿದ್ದರು. ಹಿಂದಿನ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು.

ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಭಾಗವಹಿಸದೆ ಹೊರಗುಳಿದೆ. ಕಾರ್ನಾಡರು ಕರೆ ಮಾಡಿ “ನೀವು ಸಂಭ್ರಮಕ್ಕೆ ಬರಲು ನಿರಾಕರಿಸಿದರಂತೆ. ನಿಜವೇ?’’ ಎಂದು ಕೇಳಿದರು. ಹೌದೆಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆ ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕದ ಗೌರವಪ್ರತಿ ಕಳಿಸಿಕೊಟ್ಟೆ. ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನ ಸಲಹೆ ಪಡೆಯಲು ಹೇಳುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಬಂಗಾಳದ ನಟಿ ಹಂಪಿಯಲ್ಲಿ ಹಣ ಪಾಸ್‍ಪೋರ್ಟುಳ್ಳ ಪರ್ಸನ್ನು ಕಳೆದುಕೊಂಡರು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಸಹಾಯ ಮಾಡುವುದು ಸಾಧ್ಯವೇ ಎಂದು ಕೇಳಿದರು.

ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ಬಾಳಿನ ಕೊನೆಯ ದಿನಗಳಲ್ಲಿ ತಮ್ಮ ಲಾಗಾಯ್ತಿನ ಸ್ವಭಾವಕ್ಕೆ ಪ್ರತಿಯಾಗಿ, ಸಾಂಸ್ಕøತಿಕ ನಾಯಕತ್ವದ ದನಿ ಮೊಳಗಿಸಿದರು. ತಮಗೆ ತಪ್ಪೆಂದು ಕಂಡ ವಿಷಯಗಳಲ್ಲಿ ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ತಮ್ಮ ತಾತ್ವಿಕ ರಾಜಕೀಯ ನಿಲುವಿಗೆ ವಿರುದ್ಧವಿರುವ ದೊಡ್ಡ ಸಾಧಕರನ್ನೂ ಲೆಕ್ಕಿಸದೆ ಶಾಬ್ದಿಕ ಹಿಂಸೆಗೆ ಗುರಿಪಡಿಸುವ ಈಚಿನ ಪದ್ಧತಿಗೆ ಬಲಿಯೂ ಆದರು. ಗೌರಿಲಂಕೇಶ್ ಸ್ಮರಣ ಕಾರ್ಯಕ್ರಮಕ್ಕೆ `ನಾನೂ ನಗರ ನಕ್ಸಲ್’ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಸನ್ನಿವೇಶ ನೆನಪಾಗುತ್ತಿದೆ. ಅದು ತೀರಾ ನಾಟಕೀಯವಾಗಿತ್ತು. ಆದರೆ ಅವರ ಸ್ಪಷ್ಟತೆ ಧೈರ್ಯ ಸಿಟ್ಟು ಹತಾಶೆ ಆಕ್ಟಿವಿಸಂಗಳ ಆತ್ಯಂತಿಕ ರೂಪಕವಾಗಿತ್ತು. ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದಿದ್ದರು. ಅಪರಾಧಿಗಳ ಕೊರಳಿಗೆ ಫಲಕ ತೂಗುಹಾಕುವುದು ಕ್ರಮವಿದೆ. ಶಿಲುಬೆಗೇರಿದ ಕ್ರಿಸ್ತನ ಕೊರಳಿಗೂ `ನಜರೇತಿನ ಅರಸ’ ಎಂಬ ವ್ಯಂಗ್ಯದ ಫಲಕ ತೂಗಿಸಲಾಗಿತ್ತು. ಆದರೆ ಕಾರ್ನಾಡರು ಇದನ್ನು ಸ್ವತಃ ಧಾರಣಮಾಡಿದ್ದರು. `ವಿಚಾರ ಮಾಡುವುದು, ಪ್ರಭುತ್ವವನ್ನು ವಿಮರ್ಶಿಸುವುದು, ಮತಧರ್ಮದ ಹಿಂಸೆ ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂಬ ನಾಟಕೀಯ ತಪ್ಪೊಪ್ಪಿಗೆಯನ್ನು ಅದು ಒಳಗೊಂಡಿತ್ತು. ಜನಪದ ಮಿತ್ ಮತ್ತು ಪುರಾಣಗಳನ್ನು ನಾಟಕಗಳಿಗೆ ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪರವಾದ ಆಕ್ಸಫರ್ಡ್ ಪದವೀಧರರೇ. ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಅವರು ಸದಾ ಆಲೋಚಿಸುತ್ತಿದ್ದರು. ಫಲಕದಲ್ಲಿರುವ ಬರೆಹವು ಸ್ವಹಸ್ತಾಕ್ಷರದಲ್ಲಿತ್ತು. ದೇಶದ ಸುದ್ದಿಯಾಗಬೇಕೆಂದೇ ಇಂಗ್ಲೀಶಿನಲ್ಲಿತ್ತು. ಅದರಲ್ಲಿ ದೇಶೀಭಾಷೆಯ ಲೇಖಕ ಎಂಬುದನ್ನು ದಾಖಲಿಸುವಂತೆ `ನಾನು ಕೂಡ’ ಎಂಬ ಎರಡು ಪದಗಳು ಕನ್ನಡದಲ್ಲಿದ್ದವು. ಉಸಿರ್ಗಟ್ಟಿಸುವ ಸನ್ನಿವೇಶಕ್ಕೆ ತುಡಿಯುವಂತೆ ಕೈಯಲ್ಲಿ ಆಕ್ಸಿಜನ್ ಸಿಲಿಂಡರಿತ್ತು.

ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ; ಸಮಾಜದ ಹದುಳಕ್ಕಾಗಿ ತನ್ನ ಬೇನೆಯಲ್ಲೂ ಲೇಖಕ ರಿಸ್ಕ್ ತೆಗೆದುಕೊಳ್ಳುವ ಪ್ರತೀಕ. ಕಾರ್ನಾಡರಲ್ಲಿ ಲೆಕ್ಕಾಚಾರ ದ್ವಂದ್ವ ಇರಲಿಲ್ಲ. ಅಂತರಂಗಕ್ಕೆ ಸರಿಯೆನಿಸಿದ್ದನ್ನು ಹೇಳುವ-ಮಾಡುವ ಪ್ರಾಮಾಣಿಕತೆಯಿತ್ತು. ಇದು ಅವರ ಶವಸಂಸ್ಕಾರದಲ್ಲೂ ವ್ಯಕ್ತವಾಯಿತು. ಅವರು ಸತ್ತು ದೊಡ್ಡವರಾದವರು; ಅವರನ್ನು ಕೆಟ್ಟದಾಗಿ ನಡೆಸಿಕೊಂಡು ಬದುಕಿರುವ ನಾವು ಸಣ್ಣವರಾದೆವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending